Adi Parva: Chapter 187

ಆದಿ ಪರ್ವ: ವೈವಾಹಿಕ ಪರ್ವ

೧೮೭

ದ್ರುಪದನು ಯುಧಿಷ್ಠಿರನನ್ನುದ್ದೇಶಿಸಿ ಅವರನ್ನು ಯಾರೆಂದು ಸಂಬೋಧಿಸಬೇಕೆಂದು ಕೇಳಲು ಯುಧಿಷ್ಠಿರನು ತಮ್ಮ ಪರಿಚಯವನ್ನು ಮಾಡಿಕೊಳ್ಳುವುದು (೧-೧೧). ಹರ್ಷಿತನಾದ ದ್ರುಪದನು, ವಿಷಯವನ್ನು ತಿಳಿದು, ಧೃತರಾಷ್ಟ್ರನನ್ನು ನಿಂದಿಸಿ ಅವರಿಗೆ ರಾಜ್ಯವನ್ನು ದೊರಕಿಸುವುದಾಗಿ ಪ್ರತಿಜ್ಞೆ ಮಾಡಿದುದು (೧೨-೧೬). ಅರ್ಜುನನು ಕೃಷ್ಣೆಯ ಪಾಣಿಗ್ರಹಣ ಮಾಡಲು ಮುಹೂರ್ತವನ್ನು ನಿಶ್ಚಯಿಸಬೇಕೆಂದು ಕೇಳಲು ಯುಧಿಷ್ಠಿರನು ಕೃಷ್ಣೆಯು ಐವರ ಬಾರ್ಯೆಯಾಗುತ್ತಾಳೆಂದು ಹೇಳಲು ಅದರ ಕುರಿತು ದೃಪದ-ಯುಧಿಷ್ಠಿರರ ನಡುವೆ ಚರ್ಚೆಯಾಗುವಾಗ ವ್ಯಾಸನ ಆಗಮನ (೧೭-೩೨).

01187001 ವೈಶಂಪಾಯನ ಉವಾಚ|

01187001a ತತ ಆಹೂಯ ಪಾಂಚಾಲ್ಯೋ ರಾಜಪುತ್ರಂ ಯುಧಿಷ್ಠಿರಂ|

01187001c ಪರಿಗ್ರಹೇಣ ಬ್ರಾಹ್ಮೇಣ ಪರಿಗೃಹ್ಯ ಮಹಾದ್ಯುತಿಃ||

ವೈಶಂಪಾಯನನು ಹೇಳಿದನು: “ಆಗ ಆ ಮಹಾದ್ಯುತಿ ಪಾಂಚಾಲ್ಯನು ರಾಜಪುತ್ರ ಯುಧಿಷ್ಠಿರನನ್ನು ಕರೆದು ಬ್ರಾಹ್ಮಣರನ್ನು ಸಂಬೋಧಿಸುವಂತೆ ಮಾತನಾಡಿದನು.

01187002a ಪರ್ಯಪೃಚ್ಛದದೀನಾತ್ಮಾ ಕುಂತೀಪುತ್ರಂ ಸುವರ್ಚಸಂ|

01187002c ಕಥಂ ಜಾನೀಮ ಭವತಃ ಕ್ಷತ್ರಿಯಾನ್ಬ್ರಾಹ್ಮಣಾನುತ||

ಆ ದೀನಾತ್ಮನು ಸುವರ್ಚಸ ಕುಂತೀಪುತ್ರನಲ್ಲಿ ಕೇಳಿದನು: “ನಾವು ನಿಮ್ಮನ್ನು ಯಾರೆಂದು ತಿಳಿಯಬೇಕು? ಕ್ಷತ್ರಿಯರೆಂದೋ ಅಥವಾ ಬ್ರಾಹ್ಮಣರೆಂದೋ?

01187003a ವೈಶ್ಯಾನ್ವಾ ಗುಣಸಂಪನ್ನಾನುತ ವಾ ಶೂದ್ರಯೋನಿಜಾನ್|

01187003c ಮಾಯಾಮಾಸ್ಥಾಯ ವಾ ಸಿದ್ಧಾಂಶ್ಚರತಃ ಸರ್ವತೋದಿಶಂ||

01187004a ಕೃಷ್ಣಾಹೇತೋರನುಪ್ರಾಪ್ತಾನ್ದಿವಃ ಸಂದರ್ಶನಾರ್ಥಿನಃ|

01187004c ಬ್ರವೀತು ನೋ ಭವಾನ್ಸತ್ಯಂ ಸಂದೇಹೋ ಹ್ಯತ್ರ ನೋ ಮಹಾನ್||

ಅಥವಾ ಗುಣಸಂಪನ್ನಾನುತ ವೈಶ್ಯರೆಂದೋ ಅಥವಾ ಶೂದ್ರಯೋನಿಯಲ್ಲಿ ಜನಿಸಿದವರೆಂದೋ? ಅಥವಾ ಕೃಷ್ಣೆಯ ಸಂದರ್ಶನಾರ್ಥಿಗಳಾಗಿ ಸ್ವರ್ಗದಿಂದ ತಮ್ಮ ಮಾಯೆಯಿಂದ ಬಂದಿಳಿದ ಸರ್ವತೋದಿಶ ಸಂಚರಿಸುವ ಸಿದ್ಧರೆಂದೋ? ಇದರ ಕುರಿತು ಮಹಾ ಸಂದೇಹವನ್ನು ಹೊಂದಿದ ನಮಗೆ ಸತ್ಯವನ್ನು ತಿಳಿಸು.

01187005a ಅಪಿ ನಃ ಸಂಶಯಸ್ಯಾಂತೇ ಮನಸ್ತುಷ್ಟಿರಿಹಾವಿಶೇತ್|

01187005c ಅಪಿ ನೋ ಭಾಗಧೇಯಾನಿ ಶುಭಾನಿ ಸ್ಯುಃ ಪರಂತಪ||

ನಮ್ಮ ಈ ಸಂಶಯವು ದೂರವಾದ ಕೂಡಲೇ ನಮ್ಮ ಮನಸ್ಸಿಗೆ ಸಂತಸವಾಗುತ್ತದೆ. ಪರಂತಪ! ನಮ್ಮ ಭಾಗಧೇಯವು ಶುಭವೆಂದು ತೋರುವುದಿಲ್ಲವೇ?

01187006a ಕಾಮಯಾ ಬ್ರೂಹಿ ಸತ್ಯಂ ತ್ವಂ ಸತ್ಯಂ ರಾಜಸು ಶೋಭತೇ|

01187006c ಇಷ್ಟಾಪೂರ್ತೇನ ಚ ತಥಾ ವಕ್ತವ್ಯಮನೃತಂ ನ ತು||

ನೀನು ನಿನ್ನ ಬಯಕೆಯಂತೆ ಸತ್ಯವನ್ನೇ ಹೇಳು. ರಾಜರಲ್ಲಿ ಯಜ್ಞ ದಾನಗಳಿಗಿಂತಲೂ ಸತ್ಯವೇ ಶೋಭಿಸುತ್ತದೆ. ಆದುದರಿಂದ ಅನೃತವನ್ನು ಹೇಳಬೇಡ.

01187007a ಶ್ರುತ್ವಾ ಹ್ಯಮರಸಂಕಾಶ ತವ ವಾಕ್ಯಮರಿಂದಮ|

01187007c ಧ್ರುವಂ ವಿವಾಹಕರಣಮಾಸ್ಥಾಸ್ಯಾಮಿ ವಿಧಾನತಃ||

ಅಮರಸಂಕಾಶ! ಅರಿಂದಮ! ನಿನ್ನ ಮಾತುಗಳನ್ನು ಕೇಳಿದ ನಂತರವೇ ವಿವಾಹಕರ್ಮ ವಿಧಾನಗಳನ್ನು ನಿಶ್ಚಯಿಸುತ್ತೇನೆ.”

01187008 ಯುಧಿಷ್ಠಿರ ಉವಾಚ|

01187008a ಮಾ ರಾಜನ್ವಿಮನಾ ಭೂಸ್ತ್ವಂ ಪಾಂಚಾಲ್ಯ ಪ್ರೀತಿರಸ್ತು ತೇ|

01187008c ಈಪ್ಸಿತಸ್ತೇ ಧ್ರುವಃ ಕಾಮಃ ಸಂವೃತ್ತೋಽಯಮಸಂಶಯಂ||

ಯುಧಿಷ್ಠಿರನು ಹೇಳಿದನು: “ರಾಜನ್! ವಿಮನಸ್ಕನಾಗಬೇಡ. ಸಂತೋಷಗೊಳ್ಳು ಪಾಂಚಾಲ್ಯ! ನಿನ್ನ ಆಸೆಯು ನಿಸ್ಸಂಶಯವಾಗಿಯೂ ನಿಶ್ಚಿತವಾಗಿಯೂ ಸಿದ್ಧಿಯಾಗಿದೆ.

01187009a ವಯಂ ಹಿ ಕ್ಷತ್ರಿಯಾ ರಾಜನ್ಪಾಂಡೋಃ ಪುತ್ರಾ ಮಹಾತ್ಮನಃ|

01187009c ಜ್ಯೇಷ್ಠಂ ಮಾಂ ವಿದ್ಧಿ ಕೌಂತೇಯಂ ಭೀಮಸೇನಾರ್ಜುನಾವಿಮೌ|

01187009e ಯಾಭ್ಯಾಂ ತವ ಸುತಾ ರಾಜನ್ನಿರ್ಜಿತಾ ರಾಜಸಂಸದಿ||

ರಾಜನ್! ನಾವು ಕ್ಷತ್ರಿಯರೇ! ಮಹಾತ್ಮ ಪಾಂಡುವಿನ ಪುತ್ರರು. ನಾನು ಜ್ಯೇಷ್ಠ ಕೌಂತೇಯನೆಂದು ತಿಳಿ. ರಾಜನ್! ಇವರೀರ್ವರು ರಾಜಸನ್ನಿಧಿಯಲ್ಲಿ ನಿನ್ನ ಸುತೆಯನ್ನು ಗೆದ್ದ ಅರ್ಜುನ-ಭೀಮಸೇನರು.

01187010a ಯಮೌ ತು ತತ್ರ ರಾಜೇಂದ್ರ ಯತ್ರ ಕೃಷ್ಣಾ ಪ್ರತಿಷ್ಠಿತಾ|

01187010c ವ್ಯೇತು ತೇ ಮಾನಸಂ ದುಃಖಂ ಕ್ಷತ್ರಿಯಾಃ ಸ್ಮೋ ನರರ್ಷಭ|

01187010e ಪದ್ಮಿನೀವ ಸುತೇಯಂ ತೇ ಹ್ರದಾದನ್ಯಂ ಹ್ರದಂ ಗತಾ||

ರಾಜೇಂದ್ರ! ಅವಳಿಗಳು ಕೃಷ್ಣೆಯು ನಿಂತಿರುವಲ್ಲಿ ಇದ್ದಾರೆ. ನರರ್ಷಭ! ನಾವು ಕ್ಷತ್ರಿಯರು. ಆದುದರಿಂದ ನಿನ್ನ ಮನಸ್ಸಿನ ದುಃಖವನ್ನು ದೂರಮಾಡು. ನಿನ್ನ ಈ ಸುತೆಯು ಪದ್ಮದಂತೆ ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ಹೋಗಿದ್ದಾಳೆ.

01187011a ಇತಿ ತಥ್ಯಂ ಮಹಾರಾಜ ಸರ್ವಮೇತದ್ಬ್ರವೀಮಿ ತೇ|

01187011c ಭವಾನ್ ಹಿ ಗುರುರಸ್ಮಾಕಂ ಪರಮಂ ಚ ಪರಾಯಣಂ||

ಮಹಾರಾಜ! ನಾನು ಹೇಳಿದ ಇವೆಲ್ಲವೂ ಸತ್ಯ. ನೀನೇ ನಮ್ಮ ಪರಮ ಪರಾಯಣ ಗುರು.””

01187012 ವೈಶಂಪಾಯನ ಉವಾಚ|

01187012a ತತಃ ಸ ದ್ರುಪದೋ ರಾಜಾ ಹರ್ಷವ್ಯಾಕುಲಲೋಚನಃ|

01187012c ಪ್ರತಿವಕ್ತುಂ ತದಾ ಯುಕ್ತಂ ನಾಶಕತ್ತಂ ಯುಧಿಷ್ಠಿರಂ||

ವೈಶಂಪಾಯನನು ಹೇಳಿದನು: “ಆಗ ರಾಜ ದ್ರುಪದನು ಹರ್ಷವ್ಯಾಕುಲಲೋಚನನಾಗಿ ಮೊದಲಿಗೆ ಯುಧಿಷ್ಠಿರನಿಗೆ ಏನು ಹೇಳಲೂ ಶಕ್ಯನಾಗಲಿಲ್ಲ.

01187013a ಯತ್ನೇನ ತು ಸ ತಂ ಹರ್ಷಂ ಸನ್ನಿಗೃಹ್ಯ ಪರಂತಪಃ|

01187013c ಅನುರೂಪಂ ತತೋ ರಾಜಾ ಪ್ರತ್ಯುವಾಚ ಯುಧಿಷ್ಠಿರಂ||

ರಾಜ ಪರಂತಪನು ತನ್ನ ಆ ಸಂತಸವನ್ನು ನಿಗ್ರಹಿಸಲು ಪ್ರಯತ್ನಿಸುತ್ತಾ ಯುಧಿಷ್ಠಿರನಿಗೆ ಅನುರೂಪ ಪ್ರತ್ಯುತ್ತರವನ್ನಿತ್ತನು.

01187014a ಪಪ್ರಚ್ಛ ಚೈನಂ ಧರ್ಮಾತ್ಮಾ ಯಥಾ ತೇ ಪ್ರದ್ರುತಾಃ ಪುರಾ|

01187014c ಸ ತಸ್ಮೈ ಸರ್ವಮಾಚಖ್ಯಾವಾನುಪೂರ್ವ್ಯೇಣ ಪಾಂಡವಃ||

ಅವರು ಹಿಂದಿನ ಘಟನೆಯಿಂದ ಹೇಗೆ ತಪ್ಪಿಸಿಕೊಂಡರೆಂದು ಧರ್ಮಾತ್ಮನು ಕೇಳಲು, ಪಾಂಡವನು ಅವನಿಗೆ ಮೊದಲಿನಿಂದ ಎಲ್ಲವನ್ನೂ ಹೇಳಿದನು.

01187015a ತಚ್ಛೃತ್ವಾ ದ್ರುಪದೋ ರಾಜಾ ಕುಂತೀಪುತ್ರಸ್ಯ ಭಾಷಿತಂ|

01187015c ವಿಗರ್ಹಯಾಮಾಸ ತದಾ ಧೃತರಾಷ್ಟ್ರಂ ಜನೇಶ್ವರಂ||

ಕುಂತೀಪುತ್ರನ ಮಾತುಗಳನ್ನು ಕೇಳಿದ ರಾಜ ದ್ರುಪದನು ಜನೇಶ್ವರ ಧೃತರಾಷ್ಟ್ರನನ್ನು ನಿಂದಿಸಿದನು.

01187016a ಆಶ್ವಾಸಯಾಮಾಸ ಚ ತಂ ಕುಂತೀಪುತ್ರಂ ಯುಧಿಷ್ಠಿರಂ|

01187016c ಪ್ರತಿಜಜ್ಞೇ ಚ ರಾಜ್ಯಾಯ ದ್ರುಪದೋ ವದತಾಂ ವರಃ||

ಶ್ರೇಷ್ಠ ಮಾತುಗಾರ ದ್ರುಪದನು ರಾಜ್ಯವನ್ನು ದೊರಕಿಸುತ್ತೇನೆಂದು ಪ್ರತಿಜ್ಞೆಯನ್ನು ಮಾಡಿ ಕುಂತೀಪುತ್ರ ಯುಧಿಷ್ಠಿರನಿಗೆ ಆಶ್ವಾಸನೆಯನ್ನಿತ್ತನು.

01187017a ತತಃ ಕುಂತೀ ಚ ಕೃಷ್ಣಾ ಚ ಭೀಮಸೇನಾರ್ಜುನಾವಪಿ|

01187017c ಯಮೌ ಚ ರಾಜ್ಞಾ ಸಂದಿಷ್ಟೌ ವಿವಿಶುರ್ಭವನಂ ಮಹತ್||

01187018a ತತ್ರ ತೇ ನ್ಯವಸನ್ರಾಜನ್ಯಜ್ಞಸೇನೇನ ಪೂಜಿತಾಃ|

01187018c ಪ್ರತ್ಯಾಶ್ವಸ್ತಾಂಸ್ತತೋ ರಾಜಾ ಸಹ ಪುತ್ರೈರುವಾಚ ತಾನ್||

ರಾಜನ್! ನಂತರ ರಾಜನು ಕುಂತಿ, ಕೃಷ್ಣೆ, ಭೀಮಸೇನ, ಅರ್ಜುನ ಮತ್ತು ಯಮಳರನ್ನು ಮಹಾ ಭುವನಕ್ಕೆ ಕರೆಸಿಕೊಂಡನು. ಯಜ್ಞಸೇನನ ಸತ್ಕಾರದಲ್ಲಿ ಅವರು ಅಲ್ಲಿಯೇ ಉಳಿದುಕೊಂಡರು. ವಿಶ್ವಾಸವನ್ನು ಪಡೆದುಕೊಂಡ ಅವರಲ್ಲಿ ರಾಜನು ತನ್ನ ಪುತ್ರಸಮೇತನಾಗಿ ಹೇಳಿದನು:

01187019a ಗೃಹ್ಣಾತು ವಿಧಿವತ್ಪಾಣಿಮದ್ಯೈವ ಕುರುನಂದನಃ|

01187019c ಪುಣ್ಯೇಽಹನಿ ಮಹಾಬಾಹುರರ್ಜುನಃ ಕುರುತಾಂ ಕ್ಷಣಂ||

“ಇಂದಿನ ಈ ಪುಣ್ಯದಿನದಲ್ಲಿ ಕುರುನಂದನ ಮಹಾಬಾಹು ಅರ್ಜುನನು ವಿಧಿವತ್ತಾಗಿ ಪಾಣಿಗ್ರಹಣಗೊಂಡು ಮುಹೂರ್ತವನ್ನು ಮಾಡಬೇಕು.

01187020a ತತಸ್ತಮಬ್ರವೀದ್ರಾಜಾ ಧರ್ಮಪುತ್ರೋ ಯುಧಿಷ್ಠಿರಃ|

01187020c ಮಮಾಪಿ ದಾರಸಂಬಂಧಃ ಕಾರ್ಯಸ್ತಾವದ್ವಿಶಾಂ ಪತೇ||

ಆದಕ್ಕೆ ರಾಜ ಧರ್ಮಪುತ್ರ ಯುಧಿಷ್ಠಿರನು ಹೇಳಿದನು: “ವಿಶಾಂಪತೇ! ಹಾಗಿದ್ದರೆ ನಾನೂ ಕೂಡ ದಾರಸಂಬಂಧಕಾರ್ಯವನ್ನು ನೆರವೇರಿಸಿಕೊಳ್ಳಬೇಕು.”

01187021 ದ್ರುಪದ ಉವಾಚ|

01187021a ಭವಾನ್ವಾ ವಿಧಿವತ್ಪಾಣಿಂ ಗೃಹ್ಣಾತು ದುಹಿತುರ್ಮಮ|

01187021c ಯಸ್ಯ ವಾ ಮನ್ಯಸೇ ವೀರ ತಸ್ಯ ಕೃಷ್ಣಾಮುಪಾದಿಶ||

ದ್ರುಪದನು ಹೇಳಿದನು: “ಅಥವಾ ವಿಧಿವತ್ತಾಗಿ ನೀನು ನನ್ನ ಮಗಳ ಪಾಣಿಗ್ರಹಣ ಮಾಡಿಕೋ. ಅಥವಾ ವೀರ! ನಿನಗಿಷ್ಟವಿದ್ದವನಿಗೆ ಕೃಷ್ಣೆಯನ್ನು ನೀಡು.”

01187022 ಯುಧಿಷ್ಠಿರ ಉವಾಚ|

01187022a ಸರ್ವೇಷಾಂ ದ್ರೌಪದೀ ರಾಜನ್ಮಹಿಷೀ ನೋ ಭವಿಷ್ಯತಿ|

01187022c ಏವಂ ಹಿ ವ್ಯಾಹೃತಂ ಪೂರ್ವಂ ಮಮ ಮಾತ್ರಾ ವಿಶಾಂ ಪತೇ||

ಯುಧಿಷ್ಠಿರನು ಹೇಳಿದನು: “ರಾಜನ್! ದ್ರೌಪದಿಯು ನಮ್ಮೆಲ್ಲರ ರಾಣಿಯಾಗುತ್ತಾಳೆ. ವಿಶಾಂಪತೇ! ಹಿಂದೆ ನನ್ನ ತಾಯಿಯು ಹೀಗೆಯೇ ಅಪ್ಪಣೆಯಿತ್ತಿದ್ದಳು.

01187023a ಅಹಂ ಚಾಪ್ಯನಿವಿಷ್ಟೋ ವೈ ಭೀಮಸೇನಶ್ಚ ಪಾಂಡವಃ|

01187023c ಪಾರ್ಥೇನ ವಿಜಿತಾ ಚೈಷಾ ರತ್ನಭೂತಾ ಚ ತೇ ಸುತಾ||

ನಾನಿನ್ನೂ ಮದುವೆಯಾಗಿಲ್ಲ. ಹಾಗೆಯೇ ಪಾಂಡವ ಭೀಮಸೇನನೂ ವಿವಾಹವಾಗಿಲ್ಲ. ಪಾರ್ಥನಿಂದ ಜಯಿಸಲ್ಪಟ್ಟ ನಿನ್ನ ಈ ಮಗಳು ನಿಧಿಸಮಾನಳು.

01187024a ಏಷ ನಃ ಸಮಯೋ ರಾಜನ್ರತ್ನಸ್ಯ ಸಹಭೋಜನಂ|

01187024c ನ ಚ ತಂ ಹಾತುಮಿಚ್ಛಾಮಃ ಸಮಯಂ ರಾಜಸತ್ತಮ||

ರಾಜನ್! ಯಾವುದೇ ನಿಧಿಯನ್ನು ನಾವೆಲ್ಲರೂ ಜೊತೆಯಲ್ಲಿಯೇ ಅನುಭವಿಸುತ್ತೇವೆ ಎಂದು ನಮ್ಮ ಮಧ್ಯೆ ಒಪ್ಪಂದವಾಗಿದೆ. ರಾಜಸತ್ತಮ! ನಾವು ಈ ಒಪ್ಪಂದವನ್ನು ಮುರಿಯಲು ಬಯಸುವುದಿಲ್ಲ.

01187025a ಸರ್ವೇಷಾಂ ಧರ್ಮತಃ ಕೃಷ್ಣಾ ಮಹಿಷೀ ನೋ ಭವಿಷ್ಯತಿ|

01187025c ಆನುಪೂರ್ವ್ಯೇಣ ಸರ್ವೇಷಾಂ ಗೃಹ್ಣಾತು ಜ್ವಲನೇ ಕರಂ||

ಕೃಷ್ಣೆಯು ಧರ್ಮವತ್ತಾಗಿ ನಮ್ಮೆಲ್ಲರ ರಾಣಿಯಾಗುತ್ತಾಳೆ. ಅವಳು ಅಗ್ನಿ ಸಮ್ಮುಖದಲ್ಲಿ ಒಬ್ಬೊಬ್ಬರಾಗಿ ನಮ್ಮೆಲ್ಲರ ಕೈ ಹಿಡಿಯುತ್ತಾಳೆ.”

01187026 ದ್ರುಪದ ಉವಾಚ|

01187026a ಏಕಸ್ಯ ಬಹ್ವ್ಯೋ ವಿಹಿತಾ ಮಹಿಷ್ಯಃ ಕುರುನಂದನ|

01187026c ನೈಕಸ್ಯಾ ಬಹವಃ ಪುಂಸೋ ವಿಧೀಯಂತೇ ಕದಾ ಚನ||

ದ್ರುಪದನು ಹೇಳಿದನು: “ಕುರುನಂದನ! ಒಬ್ಬನಿಗೆ ಹಲವಾರು ರಾಣಿಯರಿರಬಹುದು ಎಂದು ಹೇಳಿದ್ದಾರೆ. ಆದರೆ ಒಬ್ಬಳಿಗೆ ಹಲವಾರು ಪತಿಯರಿರುವರೆಂದು ಎಂದೂ ಎಲ್ಲಿಯೂ ಹೇಳಿಲ್ಲ.

01187027a ಲೋಕವೇದವಿರುದ್ಧಂ ತ್ವಂ ನಾಧರ್ಮಂ ಧಾರ್ಮಿಕಃ ಶುಚಿಃ|

01187027c ಕರ್ತುಮರ್ಹಸಿ ಕೌಂತೇಯ ಕಸ್ಮಾತ್ತೇ ಬುದ್ಧಿರೀದೃಶೀ||

ಕೌಂತೇಯ! ಧಾರ್ಮಿಕನೂ ಶುಚಿಯೂ ಆದ ನೀನು ಲೋಕವೇದವಿರುದ್ಧ ಅಧರ್ಮವನ್ನು ಎಸೆಗಬಾರದು. ಈ ರೀತಿಯ ಯೋಚನೆಯಾದರೂ ನಿನಗೆ ಎಲ್ಲಿಂದ ಬಂದಿತು?”

01187028 ಯುಧಿಷ್ಠಿರ ಉವಾಚ|

01187028a ಸೂಕ್ಷ್ಮೋ ಧರ್ಮೋ ಮಹಾರಾಜ ನಾಸ್ಯ ವಿದ್ಮೋ ವಯಂ ಗತಿಂ|

01187028c ಪೂರ್ವೇಷಾಮಾನುಪೂರ್ವ್ಯೇಣ ಯಾತಂ ವರ್ತ್ಮಾನುಯಾಮಹೇ||

ಯುಧಿಷ್ಠಿರನು ಹೇಳಿದನು: “ಮಹಾರಾಜ! ಧರ್ಮವು ಸೂಕ್ಷ್ಮ ಮತ್ತು ಅದರ ಗತಿಯು ನಮಗೆ ತಿಳಿದಿದ್ದುದಲ್ಲ. ಹಿಂದಿನವರು ನಡೆದುಕೊಂಡು ಬಂದ ದಾರಿಯನ್ನೇ ನಾವು ಹಿಂಬಾಲಿಸಿಕೊಂಡು ಹೋಗುತ್ತೇವೆ.

01187029a ನ ಮೇ ವಾಗನೃತಂ ಪ್ರಾಹ ನಾಧರ್ಮೇ ಧೀಯತೇ ಮತಿಃ|

01187029c ಏವಂ ಚೈವ ವದತ್ಯಂಬಾ ಮಮ ಚೈವ ಮನೋಗತಂ||

ನನ್ನ ನಾಲಿಗೆಯು ಸುಳ್ಳನ್ನಾಡುವುದಿಲ್ಲ ಮತ್ತು ನನ್ನ ಬುದ್ಧಿಯು ಅಧರ್ಮವನ್ನು ಯೋಚಿಸುವುದಿಲ್ಲ. ನನ್ನ ತಾಯಿಯು ಇದನ್ನೇ ಹೇಳಿದ್ದಳು ಮತ್ತು ಅದರಂತೆ ನಡೆಯುವುದೇ ನನ್ನ ಮನೋಗತ.

01187030a ಏಷ ಧರ್ಮೋ ಧ್ರುವೋ ರಾಜಂಶ್ಚರೈನಮವಿಚಾರಯನ್|

01187030c ಮಾ ಚ ತೇಽತ್ರ ವಿಶಂಕಾ ಭೂತ್ಕಥಂ ಚಿದಪಿ ಪಾರ್ಥಿವ||

ರಾಜನ್! ನಿಶ್ಚಯವಾಗಿಯೂ ಇದು ಧರ್ಮ. ಏನನ್ನೂ ಯೋಚಿಸಿದೇ ಪರಿಪಾಲಿಸು. ಪಾರ್ಥಿವ! ಇದರಲ್ಲಿ ಯಾವುದೇ ರೀತಿಯ ಶಂಕೆಯು ಇಲ್ಲದಿರಲಿ.”

01187031 ದ್ರುಪದ ಉವಾಚ|

01187031a ತ್ವಂ ಚ ಕುಂತೀ ಚ ಕೌಂತೇಯ ಧೃಷ್ಟದ್ಯುಮ್ನಶ್ಚ ಮೇ ಸುತಃ|

01187031c ಕಥಯಂತ್ವಿತಿಕರ್ತವ್ಯಂ ಶ್ವಃ ಕಾಲೇ ಕರವಾಮಹೇ||

ದ್ರುಪದನು ಹೇಳಿದನು: “ಕೌಂತೇಯ! ನೀನು, ಕುಂತಿ ಮತ್ತು ನನ್ನ ಸುತ ಧೃಷ್ಟದ್ಯುಮ್ನ ಎಲ್ಲರೂ ಏನು ಮಾಡಬೇಕೆಂದು ಸಮಾಲೋಚನೆ ಮಾಡಿ. ನಾಳೆ ನಾವು ಅದನ್ನೇ ಕಾರ್ಯಗತಗೊಳಿಸೋಣ.””

01187032 ವೈಶಂಪಾಯನ ಉವಾಚ|

01187032a ತೇ ಸಮೇತ್ಯ ತತಃ ಸರ್ವೇ ಕಥಯಂತಿ ಸ್ಮ ಭಾರತ|

01187032c ಅಥ ದ್ವೈಪಾಯನೋ ರಾಜನ್ನಭ್ಯಾಗಚ್ಛದ್ಯದೃಚ್ಛಯಾ||

ವೈಶಂಪಾಯನನು ಹೇಳಿದನು: “ರಾಜನ್! ಭಾರತ!  ಈ ರೀತಿ ಅವರೆಲ್ಲರೂ ಅಲ್ಲಿ ಸೇರಿ ಚರ್ಚೆಮಾಡುತ್ತಿರಲು ಅದೇ ಸಮಯದಲ್ಲಿ ಅಲ್ಲಿಗೆ ದ್ವೈಪಾಯನನು ಬಂದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ದ್ವೈಪಾಯನಾಗಮನೇ ಸಪ್ತಶೀತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ದ್ವೈಪಾಯನಾಗಮನದಲ್ಲಿ ನೂರಾಎಂಭತ್ತೇಳನೆಯ ಅಧ್ಯಾಯವು.

Related image

Comments are closed.