Adi Parva: Chapter 183

ಆದಿ ಪರ್ವ: ಸ್ವಯಂವರ ಪರ್ವ

೧೮೩

ಕೃಷ್ಣ-ಬಲರಾಮರು ಪಾಂಡವರಿದ್ದ ಕುಂಬಾರನ ಮನೆಗೆ ಬಂದು ತಮ್ಮ ಪರಿಚಯವನ್ನು ಮಾಡಿಕೊಂಡಿದುದು (೧-೫). ಅವರು ಬೆಂಕಿಯಿಂದ ತಪ್ಪಿಸಿಕೊಂಡಿರುವುದು ಒಳ್ಳೆಯದಾಯಿತೆಂದು ಹೇಳಿ, ಇತರರು ಪಾಂಡವರನ್ನು ಗುರುತಿಸಬಾರದೆಂದು ಕೃಷ್ಣ-ಬಲರಾಮರು ಬೇಗನೇ ಅಲ್ಲಿಂದ ಹೊರಟುಹೋದದು (೬-೯).

01183001 ವೈಶಂಪಾಯನ ಉವಾಚ|

01183001a ಭ್ರಾತುರ್ವಚಸ್ತತ್ಪ್ರಸಮೀಕ್ಷ್ಯ ಸರ್ವೇ|

        ಜ್ಯೇಷ್ಠಸ್ಯ ಪಾಂಡೋಸ್ತನಯಾಸ್ತದಾನೀಂ|

01183001c ತಮೇವಾರ್ಥಂ ಧ್ಯಾಯಮಾನಾ ಮನೋಭಿರ್|

        ಆಸಾಂ ಚಕ್ರುರಥ ತತ್ರಾಮಿತೌಜಾಃ||

ವೈಶಂಪಾಯನನು ಹೇಳಿದನು: “ಜ್ಯೇಷ್ಠ ಪಾಂಡು ಅಣ್ಣನ ಈ ಮಾತುಗಳನ್ನು ಕೇಳಿ ಎಲ್ಲರೂ ಯೋಚಿಸತೊಡಗಿದರು. ಅದರ ಅರ್ಥವೇನೆಂದು ಮನಸ್ಸಿನಲ್ಲಿಯೇ ಚಿಂತಿಸುತ್ತಾ ಆ ಅಮಿತ ತೇಜಸರು ಅಲ್ಲಿಯೇ ಕುಳಿತುಕೊಂಡರು. 

01183002a ವೃಷ್ಣಿಪ್ರವೀರಸ್ತು ಕುರುಪ್ರವೀರಾನ್|

        ಆಶಂಕಮಾನಃ ಸಹರೌಹಿಣೇಯಃ|

01183002c ಜಗಾಮ ತಾಂ ಭಾರ್ಗವಕರ್ಮಶಾಲಾಂ|

        ಯತ್ರಾಸತೇ ತೇ ಪುರುಷಪ್ರವೀರಾಃ||

ಅಷ್ಟರಲ್ಲಿಯೇ ಅವರು ಕುರುಪ್ರವೀಣರೇ ಇರಬೇಕೆಂದು ಶಂಕಿಸಿದ ವೃಷ್ಣಿಪ್ರವೀರನು ರೌಹಿಣೇಯನ ಜೊತೆಗೊಂಡು ಪುರುಷಪ್ರವೀರರು ವಸತಿಮಾಡಿಕೊಂಡಿದ್ದ ಆ ಕುಂಬಾರನ ಮನೆಗೆ ಬಂದನು.

01183003a ತತ್ರೋಪವಿಷ್ಟಂ ಪೃಥುದೀರ್ಘಬಾಹುಂ|

        ದದರ್ಶ ಕೃಷ್ಣಃ ಸಹರೌಹಿಣೇಯಃ|

01183003c ಅಜಾತಶತ್ರುಂ ಪರಿವಾರ್ಯ ತಾಂಶ್ಚ|

        ಉಪೋಪವಿಷ್ಟಾಂಜ್ವಲನಪ್ರಕಾಶಾನ್||

ಅಲ್ಲಿ ಕುಳಿತಿದ್ದ ದೀರ್ಘಬಾಹು ಪೃಥೆ ಮತ್ತು ಆ ಅಜಾತಶತ್ರುವನ್ನು ಸುತ್ತುವರೆದು ಕುಳಿತುಕೊಂಡು ಅಗ್ನಿಯಂತೆ ಬೆಳಗುತ್ತಿದ್ದವರನ್ನು ರೌಹಿಣೇಯನನ್ನೂ ಕೂಡಿ ಕೃಷ್ಣನು ನೋಡಿದನು.

01183004a ತತೋಽಬ್ರವೀದ್ವಾಸುದೇವೋಽಭಿಗಮ್ಯ|

        ಕುಂತೀಸುತಂ ಧರ್ಮಭೃತಾಂ ವರಿಷ್ಠಂ|

01183004c ಕೃಷ್ಣೋಽಹಮಸ್ಮೀತಿ ನಿಪೀಡ್ಯ ಪಾದೌ|

        ಯುಧಿಷ್ಠಿರಸ್ಯಾಜಮೀಢಸ್ಯ ರಾಜ್ಞಃ||

ಅಲ್ಲಿಗೆ ಆಗಮಿಸಿದ ವಾಸುದೇವನು ಧರ್ಮಭೃತರಲ್ಲಿ ವರಿಷ್ಠ ಕುಂತೀಸುತನಿಗೆ “ನಾನು ಕೃಷ್ಣ!” ಎಂದು ಹೇಳಿ ಆ ಅಜಮೀಡ ರಾಜ ಯುಧಿಷ್ಠಿರನ ಪಾದಗಳನ್ನು ಮುಟ್ಟಿದನು.

01183005a ತಥೈವ ತಸ್ಯಾಪ್ಯನು ರೌಹಿಣೇಯಸ್|

        ತೌ ಚಾಪಿ ಹೃಷ್ಟಾಃ ಕುರವೋಽಭ್ಯನಂದನ್|

01183005c ಪಿತೃಷ್ವಸುಶ್ಚಾಪಿ ಯದುಪ್ರವೀರಾವ್|

        ಅಗೃಹ್ಣತಾಂ ಭಾರತಮುಖ್ಯ ಪಾದೌ||

ಕೃಷ್ಣನಂತೆ ರೌಹಿಣೀಯನೂ ಮಾಡಿದನು ಮತ್ತು ಕುರುಗಳು ಅವರನ್ನು ಸಂತೋಷದಿಂದ ಸ್ವಾಗತಿಸಿದರು. ಭಾರತ ಮುಖ್ಯ! ಅನಂತರ ಆ ಯದುಪ್ರವೀರರು ತಮ್ಮ ತಂದೆಯ ತಂಗಿಯ ಪಾದಗಳಿಗೆ ನಮಸ್ಕರಿಸಿದರು.

01183006a ಅಜಾತಶತ್ರುಶ್ಚ ಕುರುಪ್ರವೀರಃ|

        ಪಪ್ರಚ್ಛ ಕೃಷ್ಣಂ ಕುಶಲಂ ನಿವೇದ್ಯ|

01183006c ಕಥಂ ವಯಂ ವಾಸುದೇವ ತ್ವಯೇಹ|

        ಗೂಢಾ ವಸಂತೋ ವಿದಿತಾಃ ಸ್ಮ ಸರ್ವೇ||

ಕುಶಲ ಪ್ರಶ್ನೆಯನ್ನು ಕೇಳಿಯಾದ ನಂತರ ಕುರುಪ್ರವೀರ ಅಜಾತಶತ್ರುವು ಕೃಷ್ಣನಿಗೆ ಕೇಳಿದನು: “ವಾಸುದೇವ! ಗೌಪ್ಯವಾಗಿ ವಾಸಿಸುತ್ತಿರುವ ನಮ್ಮೆಲ್ಲರನ್ನೂ ನೀನು ಹೇಗೆ ಹುಡುಕಿ ಗುರುತಿಸಿದೆ?”

01183007a ತಮಬ್ರವೀದ್ವಾಸುದೇವಃ ಪ್ರಹಸ್ಯ|

        ಗೂಢೋಽಪ್ಯಗ್ನಿರ್ಜ್ಞಾಯತ ಏವ ರಾಜನ್|

01183007c ತಂ ವಿಕ್ರಮಂ ಪಾಂಡವೇಯಾನತೀತ್ಯ|

        ಕೋಽನ್ಯಃ ಕರ್ತಾ ವಿದ್ಯತೇ ಮಾನುಷೇಷು||

ಆಗ ವಾಸುದೇವನು ನಗುತ್ತಾ ಉತ್ತರಿಸಿದನು: “ರಾಜನ್! ಗೂಢವಾಗಿದ್ದರೂ ಅಗ್ನಿಯು ಹೊರಗೆ ಕಂಡೇ ಕಾಣಿಸಿಕೊಳ್ಳುತ್ತದೆ. ಪಾಂಡವನನ್ನು ಬಿಟ್ಟು ಮನುಷ್ಯರಲ್ಲೇ ಬೇರೆ ಯಾರು ತಾನೆ ಅಂತಹ ವಿಕ್ರಮವನ್ನು ಮಾಡಿ ತೋರಿಸಿಯಾರು?

01183008a ದಿಷ್ಟ್ಯಾ ತಸ್ಮಾತ್ಪಾವಕಾತ್ಸಂಪ್ರಮುಕ್ತಾ|

        ಯೂಯಂ ಸರ್ವೇ ಪಾಂಡವಾಃ ಶತ್ರುಸಾಹಾಃ|

01183008c ದಿಷ್ಟ್ಯಾ ಪಾಪೋ ಧೃತರಾಷ್ಟ್ರಸ್ಯ ಪುತ್ರಃ|

        ಸಹಾಮಾತ್ಯೋ ನ ಸಕಾಮೋಽಭವಿಷ್ಯತ್||

ಶತ್ರುಸಾಹರಾದ ನೀವೆಲ್ಲ ಪಾಂಡವರೂ ಆ ಬೆಂಕಿಯಿಂದ ತಪ್ಪಿಸಿಕೊಂಡರೆಂಬುದು ಒಂದು ಒಳ್ಳೆಯ ವಿಷಯವೇ ಆಗಿದೆ. ಪಾಪಿ ಧೃತರಾಷ್ಟ್ರನ ಮಗನ ಮತ್ತು ಅವನ ಅಮಾತ್ಯನ ಸಂಚು ಯಶಸ್ವಿಯಾಗಲಿಲ್ಲ ಎನ್ನುವುದೂ ಒಳ್ಳೆಯದಾಯಿತು.

01183009a ಭದ್ರಂ ವೋಽಸ್ತು ನಿಹಿತಂ ಯದ್ಗುಹಾಯಾಂ|

        ವಿವರ್ಧಧ್ವಂ ಜ್ವಲನ ಇವೇಧ್ಯಮಾನಃ|

01183009c ಮಾ ವೋ ವಿದ್ಯುಃ ಪಾರ್ಥಿವಾಃ ಕೇ ಚನೇಹ|

        ಯಾಸ್ಯಾವಹೇ ಶಿಬಿರಾಯೈವ ತಾವತ್||

01183009e ಸೋಽನುಜ್ಞಾತಃ ಪಾಂಡವೇನಾವ್ಯಯಶ್ರೀಃ|

        ಪ್ರಾಯಾಚ್ಛೀಘ್ರಂ ಬಲದೇವೇನ ಸಾರ್ಧಂ||

ನಿಮಗೆಲ್ಲ ಮಂಗಳವಾಗಲಿ! ಗುಹೆಯಲ್ಲಿ ಅಡಗಿದ್ದು ಕಿಚ್ಚೆತ್ತ ಬೆಂಕಿಯಂತೆ ವೃದ್ಧಿಯಾಗಿದ್ದೀರಿ. ಪಾರ್ಥಿವರಲ್ಲಿ ಯಾರಾದರೂ ನಿಮ್ಮನ್ನು ನೋಡಿ ಗುರುತಿಸಿಯಾರು. ಆದುದರಿಂದ ನಾವು ಇಲ್ಲಿಂದ ತೆರಳುತ್ತೇವೆ.” ಪಾಂಡವರಿಂದ ಬೀಳ್ಕೊಂಡ ಆ ಅವ್ಯಯಶ್ರೀಯು ಬಲದೇವನ ಸಹಿತ ಶೀಘ್ರವಾಗಿ ಅಲ್ಲಿಂದ ಹೊರಟನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ರಾಮಕೃಷ್ಣಾಗಮನೇ ತ್ರ್ಯಶೀತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ರಾಮಕೃಷ್ಣರ ಆಗಮನದಲ್ಲಿ ನೂರಾಎಂಭತ್ತ್ಮೂರನೆಯ ಅಧ್ಯಾಯವು.

Related image

Comments are closed.