ಆದಿ ಪರ್ವ: ಸ್ವಯಂವರ ಪರ್ವ
೧೮೦
ದ್ರೌಪದಿಯನ್ನು ಬ್ರಾಹ್ಮಣನಿಗೆ ಕೊಡುವುದನ್ನು ನೆರೆದ ಕ್ಷತ್ರಿಯರು ಪ್ರತಿಭಟಿಸುವುದು (೧-೧೩). ಭೀಮಾರ್ಜುನರು ದ್ರುಪದನನ್ನು ಆಕ್ರಮಣ ಮಾಡಲು ಮುನ್ನುಗ್ಗುತ್ತಿರುವ ರಾಜರನ್ನು ಎದುರಿಸಿ ತಡೆದುದು (೧೪-೧೬). ಕೃಷ್ಣನು ಪಾಂಡವರನ್ನು ಗುರುತಿಸಿ, ಪುನಃ ಬಲರಾಮನಿಗೆ ಹೇಳುವುದು (೧೭-೨೨).
01180001 ವೈಶಂಪಾಯನ ಉವಾಚ|
01180001a ತಸ್ಮೈ ದಿತ್ಸತಿ ಕನ್ಯಾಂ ತು ಬ್ರಾಹ್ಮಣಾಯ ಮಹಾತ್ಮನೇ|
01180001c ಕೋಪ ಆಸೀನ್ಮಹೀಪಾನಾಮಾಲೋಕ್ಯಾನ್ಯೋನ್ಯಮಂತಿಕಾತ್||
ವೈಶಂಪಾಯನನು ಹೇಳಿದನು: “ರಾಜನು ಕನ್ಯೆಯನ್ನು ಆ ಮಹಾತ್ಮ ಬ್ರಾಹ್ಮಣನಿಗೆ ಕೊಡಬೇಕೆಂದಿರುವಾಗ, ನೆರೆದಿದ್ದ ಮಹೀಪತಿಗಳೆಲ್ಲಾ ಕೋಪಗೊಂಡು ಪರಸ್ಪರರನ್ನು ನೋಡತೊಡಗಿದರು.
01180002a ಅಸ್ಮಾನಯಮತಿಕ್ರಮ್ಯ ತೃಣೀಕೃತ್ಯ ಚ ಸಂಗತಾನ್|
01180002c ದಾತುಮಿಚ್ಛತಿ ವಿಪ್ರಾಯ ದ್ರೌಪದೀಂ ಯೋಷಿತಾಂ ವರಾಂ||
“ಇಲ್ಲಿ ನೆರೆದಿರುವ ನಮ್ಮೆಲ್ಲರನ್ನೂ ತೃಣೀಕರಿಸಿ ಅತಿಕ್ರಮಿಸಿ, ಸ್ತ್ರೀಯರಲ್ಲೇ ಶ್ರೇಷ್ಠ ದ್ರೌಪದಿಯನ್ನು ಒಬ್ಬ ಬ್ರಾಹ್ಮಣನಿಗೆ ಕೊಡಲು ತೊಡಗಿದ್ದಾನೆ.
01180003a ನಿಹನ್ಮೈನಂ ದುರಾತ್ಮಾನಂ ಯೋಽಯಮಸ್ಮಾನ್ನ ಮನ್ಯತೇ|
01180003c ನ ಹ್ಯರ್ಹತ್ಯೇಷ ಸತ್ಕಾರಂ ನಾಪಿ ವೃದ್ಧಕ್ರಮಂ ಗುಣೈಃ||
ನಮಗೆ ಅಗೌರವವನ್ನು ತೋರಿಸುವ ಈ ದುರಾತ್ಮನನ್ನು ಕೊಲ್ಲೋಣ. ವೃದ್ಧರಿಗೆ ಅಥವಾ ಗುಣವಂತರಿಗೆ ತಗಲುವ ಸತ್ಕಾರಕ್ಕೆ ಇವನು ಅರ್ಹನಲ್ಲ.
01180004a ಹನ್ಮೈನಂ ಸಹ ಪುತ್ರೇಣ ದುರಾಚಾರಂ ನೃಪದ್ವಿಷಂ|
01180004c ಅಯಂ ಹಿ ಸರ್ವಾನಾಹೂಯ ಸತ್ಕೃತ್ಯ ಚ ನರಾಧಿಪಾನ್|
01180004e ಗುಣವದ್ಭೋಜಯಿತ್ವಾ ಚ ತತಃ ಪಶ್ಚಾದ್ವಿನಿಂದತಿ||
ಈ ನೃಪದ್ವೇಷಿ, ದುರಾಚಾರಿಯನ್ನು ಪುತ್ರರ ಸಮೇತ ಕೊಲ್ಲೋಣ. ಮೊದಲು ಎಲ್ಲ ನರಾಧಿಪರನ್ನೂ ಅಹ್ವಾನಿಸಿ, ಸತ್ಕರಿಸಿ, ಸರಿಯಾಗಿ ಭೋಜನಗಳನ್ನೆಲ್ಲ ಇತ್ತು ನಂತರ ಅವರನ್ನೇ ನಿಂದನೆಮಾಡುತ್ತಿದ್ದಾನೆ.
01180005a ಅಸ್ಮಿನ್ರಾಜಸಮಾವಾಯೇ ದೇವಾನಾಮಿವ ಸಂನಯೇ|
01180005c ಕಿಮಯಂ ಸದೃಶಂ ಕಂ ಚಿನ್ನೃಪತಿಂ ನೈವ ದೃಷ್ಟವಾನ್||
ದೇವಗಣಕ್ಕೆ ಸಮಾನ ಈ ರಾಜಸಮಾವೇಷದಲ್ಲಿ, ತನಗೆ ಸರಿಸಾಟಿಯಾದ ಯಾರೊಬ್ಬ ನೃಪನೂ ಕಾಣದೇ ಇರಲು ಹೇಗೆ ಸಾದ್ಯ?
01180006a ನ ಚ ವಿಪ್ರೇಷ್ವಧೀಕಾರೋ ವಿದ್ಯತೇ ವರಣಂ ಪ್ರತಿ|
01180006c ಸ್ವಯಂವರಃ ಕ್ಷತ್ರಿಯಾಣಾಮಿತೀಯಂ ಪ್ರಥಿತಾ ಶ್ರುತಿಃ||
ಬ್ರಾಹ್ಮಣರಿಗೆ ಸ್ವಯಂವರದಲ್ಲಿ ಭಾಗವಹಿಸುವ ಅಧಿಕಾರವಿಲ್ಲ. ಶ್ರುತಿಗಳಪ್ರಕಾರ ಸ್ವಯಂವರವು ಕ್ಷತ್ರಿಯರಿಗೆ ಮಾತ್ರ.
01180007a ಅಥ ವಾ ಯದಿ ಕನ್ಯೇಯಂ ನೇಹ ಕಂ ಚಿದ್ಬುಭೂಷತಿ|
01180007c ಅಗ್ನಾವೇನಾಂ ಪರಿಕ್ಷಿಪ್ಯ ಯಾಮ ರಾಷ್ಟ್ರಾಣಿ ಪಾರ್ಥಿವಾಃ||
ಅಥವಾ ಒಂದುವೇಳೆ ಈ ಕನ್ಯೆಗೆ ನಮ್ಮಲ್ಲಿ ಯಾರೂ ಬೇಡವಂತಿದ್ದರೆ, ಇವಳನ್ನು ಅಗ್ನಿಯಲ್ಲಿ ಹಾಕಿ ನಾವೆಲ್ಲರೂ ನಮ್ಮ ನಮ್ಮ ರಾಷ್ಟ್ರಗಳಿಗೆ ಮರಳೋಣ.
01180008a ಬ್ರಾಹ್ಮಣೋ ಯದಿ ವಾ ಬಾಲ್ಯಾಲ್ಲೋಭಾದ್ವಾ ಕೃತವಾನಿದಂ|
01180008c ವಿಪ್ರಿಯಂ ಪಾರ್ಥಿವೇಂದ್ರಾಣಾಂ ನೈಷ ವಧ್ಯಃ ಕಥಂ ಚನ||
ತಿಳುವಳಿಕೆ ಇಲ್ಲದೆಯೊ ಅಥವಾ ಲೋಭದಿಂದಲೋ ಪಾರ್ಥಿವೇಂದ್ರರೆಲ್ಲರಿಗೂ ಅಪ್ರಿಯವಾದದ್ದನ್ನು ಮಾಡಿದ್ದರೂ ಈ ಬ್ರಾಹ್ಮಣನನ್ನು ಕೊಲ್ಲುವುದಾದರೂ ಹೇಗೆ?
01180009a ಬ್ರಾಹ್ಮಣಾರ್ಥಂ ಹಿ ನೋ ರಾಜ್ಯಂ ಜೀವಿತಂ ಚ ವಸೂನಿ ಚ|
01180009c ಪುತ್ರಪೌತ್ರಂ ಚ ಯಚ್ಚಾನ್ಯದಸ್ಮಾಕಂ ವಿದ್ಯತೇ ಧನಂ||
ನಮ್ಮ ರಾಜ್ಯ, ಜೀವನ, ಸಂಪತ್ತು, ಪುತ್ರರು, ಪೌತ್ರರು, ಮತ್ತು ಸಮ್ಮಲ್ಲಿರುವ ಸರ್ವಸ್ವ ಧನವೂ ಬ್ರಾಹ್ಮಣಾರ್ಥವೇ ಅಲ್ಲವೆ?
01180010a ಅವಮಾನಭಯಾದೇತತ್ಸ್ವಧರ್ಮಸ್ಯ ಚ ರಕ್ಷಣಾತ್|
01180010c ಸ್ವಯಂವರಾಣಾಂ ಚಾನ್ಯೇಷಾಂ ಮಾ ಭೂದೇವಂವಿಧಾ ಗತಿಃ||
ಆದರೂ ನಮ್ಮ ಧರ್ಮವನ್ನು ಅಪಮಾನದಿಂದ ರಕ್ಷಿಸಬೇಕು ಮತ್ತು ಇತರ ಸ್ವಯಂವರಗಳು ಇದರಂತೆ ನಡೆಯದೇ ಇರುವಹಾಗೆ ನೋಡಿಕೊಳ್ಳಬೇಕು.”
01180011a ಇತ್ಯುಕ್ತ್ವಾ ರಾಜಶಾರ್ದೂಲಾ ಹೃಷ್ಟಾಃ ಪರಿಘಬಾಹವಃ|
01180011c ದ್ರುಪದಂ ಸಂಜಿಘೃಕ್ಷಂತಃ ಸಾಯುಧಾಃ ಸಮುಪಾದ್ರವನ್||
ಈ ಪ್ರಕಾರ ಮಾತನಾಡಿಕೊಳ್ಳುತ್ತಾ ರಾಜಶಾರ್ದೂಲರೆಲ್ಲರೂ ಉದ್ವೇಗಗೊಂಡು ಆಯುಧಗಳೆನ್ನಿತ್ತಿಕೊಂಡು ದೃಪದನನ್ನು ಮುಗಿಸಿ ಬಿಡುವ ಉದ್ದೇಶದಿಂದ ಆಯುಧಗಳನ್ನು ಬೀಸುತ್ತಾ ಮುನ್ನುಗ್ಗಿದರು.
01180012a ತಾನ್ಗೃಹೀತಶರಾವಾಪಾನ್ಕ್ರುದ್ಧಾನಾಪತತೋ ನೃಪಾನ್|
01180012c ದ್ರುಪದೋ ವೀಕ್ಷ್ಯ ಸಂತ್ರಾಸಾದ್ಬ್ರಾಹ್ಮಣಾಂಶರಣಂ ಗತಃ||
ತಮ್ಮ ತಮ್ಮ ಬಿಲ್ಲು ಬಾಣಗಳನ್ನು ಹಿಡಿದು ಕೋಪದಿಂದ ಮೇಲೆ ಬೀಳುತ್ತಿರುವ ನೃಪರನ್ನು ಕಂಡ ದ್ರುಪದನು ಭಯಗೊಂಡು ಬ್ರಾಹ್ಮಣರ ಶರಣುಹೊಕ್ಕನು.
01180013a ವೇಗೇನಾಪತತಸ್ತಾಂಸ್ತು ಪ್ರಭಿನ್ನಾನಿವ ವಾರಣಾನ್|
01180013c ಪಾಂಡುಪುತ್ರೌ ಮಹಾವೀರ್ಯೌ ಪ್ರತೀಯತುರರಿಂದಮೌ||
ಆಗ ಆ ಅರಿಂದಮ ವೀರ ಪಾಂಡುಪುತ್ರರು ಮದಿಸಿದ ಆನೆಗಳಂತೆ ಶೀಘ್ರವಾಗಿ ರಾಜರನ್ನು ಎದುರಿಸಿ ಮುಂದೆಬಂದರು.
01180014a ತತಃ ಸಮುತ್ಪೇತುರುದಾಯುಧಾಸ್ತೇ
ಮಹೀಕ್ಷಿತೋ ಬದ್ಧತಲಾಂಗುಲಿತ್ರಾಃ|
01180014c ಜಿಘಾಂಸಮಾನಾಃ ಕುರುರಾಜಪುತ್ರಾವ್
ಅಮರ್ಷಯಂತೋಽರ್ಜುನಭೀಮಸೇನೌ||
ತಮ್ಮ ಆಯುಧಗಳನ್ನು ಮೇಲೆತ್ತಿ ಅಂಗುಲೀ ಬದ್ಧರಾದ ಮಹೀಕ್ಷಿತರು ಕುರುರಾಜಪುತ್ರರನ್ನು ಕೊಲ್ಲಲು ಅರ್ಜುನ-ಭೀಮಸೇನರ ಮೇಲೆ ಎರಗಿದರು.
01180015a ತತಸ್ತು ಭೀಮೋಽದ್ಭುತವೀರ್ಯಕರ್ಮಾ
ಮಹಾಬಲೋ ವಜ್ರಸಮಾನವೀರ್ಯಃ|
01180015c ಉತ್ಪಾಟ್ಯ ದೋರ್ಭ್ಯಾಂ ದ್ರುಮಮೇಕವೀರೋ
ನಿಷ್ಪತ್ರಯಾಮಾಸ ಯಥಾ ಗಜೇಂದ್ರಃ||
ಅದ್ಭುತ ವೀರ್ಯಕರ್ಮಿ, ಮಹಾಬಲಿ, ವಜ್ರಸಮಾನ ವೀರ್ಯವಂತ ಭೀಮನು ಏಕವೀರನಾಗಿ ಒಂದು ವೃಕ್ಷವನ್ನು ಕಿತ್ತು ಕೈಯಲ್ಲಿ ಹಿಡಿದು ಗಜೇಂದ್ರನಂತೆ ಅದರಲ್ಲಿರುವ ಎಲೆಗಳನ್ನೆಲ್ಲ ಉದುರಿಸಿದನು.
01180016a ತಂ ವೃಕ್ಷಮಾದಾಯ ರಿಪುಪ್ರಮಾಥೀ
ದಂಡೀವ ದಂಡಂ ಪಿತೃರಾಜ ಉಗ್ರಂ|
01180016c ತಸ್ಥೌ ಸಮೀಪೇ ಪುರುಷರ್ಷಭಸ್ಯ
ಪಾರ್ಥಸ್ಯ ಪಾರ್ಥಃ ಪೃಥುದೀರ್ಘಬಾಹುಃ||
ರಿಪುಪ್ರಮಥಿ ದೀರ್ಘಬಾಹು ಪಾರ್ಥನು ಪಿತೃರಾಜನು ತನ್ನ ಉಗ್ರ ದಂಡವನ್ನು ಹಿಡಿಯುವಂತೆ ಆ ಮರವನ್ನು ಹಿಡಿದು ಪುರುಷರ್ಷಭ ಪಾರ್ಥ ಅರ್ಜುನನ ಪಕ್ಕದಲ್ಲಿ ನಿಂತನು.
01180017a ತತ್ಪ್ರೇಕ್ಷ್ಯ ಕರ್ಮಾತಿಮನುಷ್ಯಬುದ್ಧೇರ್
ಜಿಷ್ಣೋಃ ಸಹಭ್ರಾತುರಚಿಂತ್ಯಕರ್ಮಾ|
01180017c ದಾಮೋದರೋ ಭ್ರಾತರಮುಗ್ರವೀರ್ಯಂ
ಹಲಾಯುಧಂ ವಾಕ್ಯಮಿದಂ ಬಭಾಷೇ||
ಅಚಿಂತ್ಯಕರ್ಮಿ ಜಿಷ್ಣು ಮತ್ತು ಅವನ ಸಹೋದರರ ಮನುಷ್ಯರಿಗೆ ಮೀರಿದ ಕೃತ್ಯವನ್ನು ಕಂಡ ದಾಮೋದರನು ತನ್ನ ಅಣ್ಣ ಉಗ್ರವೀರ್ಯ ಹಲಾಯುಧನಿಗೆ ಹೇಳಿದನು:
01180018a ಯ ಏಷ ಮತ್ತರ್ಷಭತುಲ್ಯಗಾಮೀ
ಮಹದ್ಧನುಃ ಕರ್ಷತಿ ತಾಲಮಾತ್ರಂ|
01180018c ಏಷೋಽರ್ಜುನೋ ನಾತ್ರ ವಿಚಾರ್ಯಮಸ್ತಿ
ಯದ್ಯಸ್ಮಿ ಸಂಕರ್ಷಣ ವಾಸುದೇವಃ||
“ಸಂಕರ್ಷಣ! ನಾನು ವಾಸುದೇವನೆನ್ನುವುದರಲ್ಲಿ ಹೇಗೆ ಸಂದೇಹವೇ ಇಲ್ಲವೋ ಹಾಗೆ ಮದಿಸಿದ ವೃಷಭನಂತಿರುವ ಮಹಾಧನಸ್ಸನ್ನು ಬಗ್ಗಿಸಿದ ಅವನು ಅರ್ಜುನನೆನ್ನುವುದರಲ್ಲಿ ಸಂದೇಹವೇ ಇಲ್ಲ.
01180019a ಯ ಏಷ ವೃಕ್ಷಂ ತರಸಾವರುಜ್ಯ
ರಾಜ್ಞಾಂ ವಿಕಾರೇ ಸಹಸಾ ನಿವೃತ್ತಃ|
01180019c ವೃಕೋದರೋ ನಾನ್ಯ ಇಹೈತದದ್ಯ
ಕರ್ತುಂ ಸಮರ್ಥೋ ಭುವಿ ಮರ್ತ್ಯಧರ್ಮಾ||
ತನ್ನ ಬಲದಿಂದ ವೃಕ್ಷವನ್ನು ಕಿತ್ತು ಈಗ ರಾಜರುಗಳನ್ನು ಎದುರಿಸುತ್ತಿರುವವನು ವೃಕೋದರ. ಯಾಕೆಂದರೆ ಇಂಥಹ ಕೃತ್ಯವನ್ನು ಮಾಡುವ ಬೇರೆ ಯಾವ ಮರ್ತ್ಯನೂ ಈ ಭೂಮಿಯಲ್ಲಿಲ್ಲ.
01180020a ಯೋಽಸೌ ಪುರಸ್ತಾತ್ಕಮಲಾಯತಾಕ್ಷಸ್
ತನುರ್ಮಹಾಸಿಂಹಗತಿರ್ವಿನೀತಃ|
01180020c ಗೌರಃ ಪ್ರಲಂಬೋಜ್ಜ್ವಲಚಾರುಘೋಣೋ
ವಿನಿಃಸೃತಃ ಸೋಽಚ್ಯುತ ಧರ್ಮರಾಜಃ|
ಈಗಾಗಲೇ ಹೊರಟುಹೋದ ಕಮಲಪತ್ರಾಕ್ಷ, ತೆಳುದೇಹಿ, ಸಿಂಹನಡುಗೆಯ, ವಿನೀತ, ಗೌರವರ್ಣದ ಹೊಳೆಯುತ್ತಿರುವ ಉದ್ದನೆಯ ಸುಂದರ ಮೂಗಿನ ಮಹಾತ್ಮನು ಧರ್ಮರಾಜನೇ ಇದ್ದಿರಬೇಕು.
01180021a ಯೌ ತೌ ಕುಮಾರಾವಿವ ಕಾರ್ತ್ತಿಕೇಯೌ
ದ್ವಾವಶ್ವಿನೇಯಾವಿತಿ ಮೇ ಪ್ರತರ್ಕಃ|
01180021c ಮುಕ್ತಾ ಹಿ ತಸ್ಮಾಜ್ಜತುವೇಶ್ಮದಾಹಾನ್
ಮಯಾ ಶ್ರುತಾಃ ಪಾಂಡುಸುತಾಃ ಪೃಥಾ ಚ||
ಕಾರ್ತಿಕೇಯರಂತೆ ತೋರುತ್ತಿದ್ದ ಆ ಇಬ್ಬರು ಕುಮಾರರು ಅಶ್ವಿನೀ ದೇವತೆಗಳ ಪುತ್ರರಿರಬೇಕೆಂದೇ ನನ್ನ ಅಭಿಪ್ರಾಯ. ಯಾಕೆಂದರೆ ಪಾಂಡುಪುತ್ರರು ಮತ್ತು ಕುಂತಿಯು ಜತುಗೃಹದ ಬೆಂಕಿಯಿಂದ ತಪ್ಪಿಸಿಕೊಂಡರು ಎಂದು ಕೇಳಿದ್ದೇನೆ.”
01180022a ತಮಬ್ರವೀನ್ನಿರ್ಮಲತೋಯದಾಭೋ
ಹಲಾಯುಧೋಽನಂತರಜಂ ಪ್ರತೀತಃ|
01180022c ಪ್ರೀತೋಽಸ್ಮಿ ದಿಷ್ಟ್ಯಾ ಹಿ ಪಿತೃಷ್ವಸಾ ನಃ
ಪೃಥಾ ವಿಮುಕ್ತಾ ಸಹ ಕೌರವಾಗ್ರ್ಯೈಃ||
ನಿರ್ಮಲ ಹಲಾಯುಧನು “ನಮ್ಮ ತಂದೆಯ ಸಹೋದರಿ ಪೃಥಾಳಿಗೆ ಕೌರವಾಗ್ರರ ಸಹಿತ ಬಿಡುಗಡೆ ದೊರಕಿದುದನ್ನು ಕೇಳಿ ನನಗೆ ಬಹಳ ಸಂತೋಷವಾಗಿದೆ” ಎಂದು ತನ್ನ ಸಹೋದರನಿಗೆ ಹೇಳಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ಕೃಷ್ಣವಾಕ್ಯೇ ಅಶೀತ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ನೂರಾಎಂಭತ್ತನೆಯ ಅಧ್ಯಾಯವು.