Adi Parva: Chapter 179

ಆದಿ ಪರ್ವ: ಸ್ವಯಂವರ ಪರ್ವ

೧೭೯

ಬ್ರಾಹ್ಮಣರು ಅರ್ಜುನನನ್ನು ನೋಡಿ ಬಹುವಿಧವಾಗಿ ಮಾತನಾಡಿಕೊಳ್ಳುವುದು (೧-೧೪). ಅರ್ಜುನನು ಮತ್ಸ್ಯವನ್ನು ಭೇದಿಸಲು ಹರ್ಷೋದ್ಗಾರ, ಯುಧಿಷ್ಠಿರನು ಅವಳಿಗಳ ಜೊತೆ ಅವಾಸದೆಡೆಗೆ ಹೊರಟು ಹೋದುದು, ದ್ರೌಪದಿಯು ವರಮಾಲೆಯನ್ನು ಹಾಕಿ ಅರ್ಜುನನನ್ನು ಹಿಂಬಾಲಿಸಿದುದು (೧೫-೨೩).

01179001 ವೈಶಂಪಾಯನ ಉವಾಚ|

01179001a ಯದಾ ನಿವೃತ್ತಾ ರಾಜಾನೋ ಧನುಷಃ ಸಜ್ಯಕರ್ಮಣಿ|

01179001c ಅಥೋದತಿಷ್ಠದ್ವಿಪ್ರಾಣಾಂ ಮಧ್ಯಾಜ್ಜಿಷ್ಣುರುದಾರಧೀಃ||

ವೈಶಂಪಾಯನನು ಹೇಳಿದನು: “ರಾಜರೆಲ್ಲರೂ ಧನುಸ್ಸನ್ನು ಸಜ್ಜಿಸುವ ಕಾರ್ಯದಿಂದ ಹಿಂದೆ ಸರಿದುಕೊಂಡ ನಂತರ ಬ್ರಾಹ್ಮಣರ ಮಧ್ಯದಿಂದ ಉದಾರಮನಸ್ಸಿನ ಜಿಷ್ಣುವು ಎದ್ದು ನಿಂತನು.

01179002a ಉದಕ್ರೋಶನ್ವಿಪ್ರಮುಖ್ಯಾ ವಿಧುನ್ವಂತೋಽಜಿನಾನಿ ಚ|

01179002c ದೃಷ್ಟ್ವಾ ಸಂಪ್ರಸ್ಥಿತಂ ಪಾರ್ಥಮಿಂದ್ರಕೇತುಸಮಪ್ರಭಂ||

ಇಂದ್ರಧನುಸ್ಸಿನ ಕಾಂತಿಯುಕ್ತ ಪಾರ್ಥನು ಎದ್ದುದನ್ನು ನೋಡಿ ವಿಪ್ರಪ್ರಮುಖರೆಲ್ಲರೂ ತಮ್ಮ ಜಿನವಸ್ತ್ರಗಳನ್ನು ಹಾರಿಸಿ ಉದ್ಗರಿಸಿದರು.

01179003a ಕೇ ಚಿದಾಸನ್ವಿಮನಸಃ ಕೇ ಚಿದಾಸನ್ಮುದಾ ಯುತಾಃ|

01179003c ಆಹುಃ ಪರಸ್ಪರಂ ಕೇ ಚಿನ್ನಿಪುಣಾ ಬುದ್ಧಿಜೀವಿನಃ||

ಕೆಲವರು ವಿಮನಸಗೊಂಡಿದ್ದರೆ ಮತ್ತೆ ಕೆಲವರು ಮುದಿತರಾಗಿದ್ದರು; ಮತ್ತೆ ಕೆಲವು ನಿಪುಣ ಬುದ್ಧಿಜೀವಿಗಳು ಪರಸ್ಪರರಲ್ಲಿ ಮಾತನಾಡಿಕೊಂಡರು:

01179004a ಯತ್ಕರ್ಣಶಲ್ಯಪ್ರಮುಖೈಃ ಪಾರ್ಥಿವೈರ್ಲೋಕವಿಶ್ರುತೈಃ|

01179004c ನಾನತಂ ಬಲವದ್ಭಿರ್ಹಿ ಧನುರ್ವೇದಪರಾಯಣೈಃ||

01179005a ತತ್ಕಥಂ ತ್ವಕೃತಾಸ್ತ್ರೇಣ ಪ್ರಾಣತೋ ದುರ್ಬಲೀಯಸಾ|

01179005c ಬಟುಮಾತ್ರೇಣ ಶಕ್ಯಂ ಹಿ ಸಜ್ಯಂ ಕರ್ತುಂ ಧನುರ್ದ್ವಿಜಾಃ||

“ಕರ್ಣ ಮತ್ತು ಶಲ್ಯರಂತಹ ಲೋಕವಿಶ್ರುತ, ಬಲಶಾಲಿ, ಧನುರ್ವೇದಪರಾಯಣ ಪಾರ್ಥಿವರಿಂದಲೇ ಈ ಧನಸ್ಸನ್ನು ಬಗ್ಗಿಸಲು ಅಸಾಧ್ಯವಾದಾಗ, ಅಸ್ತ್ರ-ಶಸ್ತ್ರಗಳಲ್ಲಿ ಪರಿಣತಿಯಿಲ್ಲದ, ದುರ್ಬಲನಾಗಿ ಕಾಣುತ್ತಿರುವ ಈ ವಟುಮಾತ್ರನಿಂದ ಧನಸ್ಸನ್ನು ಸಜ್ಜಿಸಲು ಹೇಗೆ ಶಕ್ಯ, ಬ್ರಾಹ್ಮಣರೇ!

01179006a ಅವಹಾಸ್ಯಾ ಭವಿಷ್ಯಂತಿ ಬ್ರಾಹ್ಮಣಾಃ ಸರ್ವರಾಜಸು|

01179006c ಕರ್ಮಣ್ಯಸ್ಮಿನ್ನಸಂಸಿದ್ಧೇ ಚಾಪಲಾದಪರೀಕ್ಷಿತೇ||

ಚಪಲತೆಯಿಂದ, ಸರಿಯಾಗಿ ಆಲೋಚನೆ ಮಾಡದೇ ತೆಗೆದುಕೊಂಡ ಈ ಕಾರ್ಯದಲ್ಲಿ ಅವನು ಯಶಸ್ವಿಯಾಗದಿದ್ದರೆ, ಈ ಎಲ್ಲ ರಾಜರ ಮುಂದೆ ನಾವು ಬ್ರಾಹ್ಮಣರು ಅಪಹಾಸ್ಯಗೊಳಗಾಗಲಿದ್ದೇವೆ.

01179007a ಯದ್ಯೇಷ ದರ್ಪಾದ್ಧರ್ಷಾದ್ವಾ ಯದಿ ವಾ ಬ್ರಹ್ಮಚಾಪಲಾತ್|

01179007c ಪ್ರಸ್ಥಿತೋ ಧನುರಾಯಂತುಂ ವಾರ್ಯತಾಂ ಸಾಧು ಮಾ ಗಮತ್||

01179008a ನಾವಹಾಸ್ಯಾ ಭವಿಷ್ಯಾಮೋ ನ ಚ ಲಾಘವಮಾಸ್ಥಿತಾಃ|

01179008c ನ ಚ ವಿದ್ವಿಷ್ಟತಾಂ ಲೋಕೇ ಗಮಿಷ್ಯಾಮೋ ಮಹೀಕ್ಷಿತಾಂ||

ಒಂದುವೇಳೆ ಅವನು ದರ್ಪ ಅಥವಾ ಉತ್ಸಾಹ ಅಥವಾ ಬ್ರಾಹ್ಮಣರಮೇಲಿರುವ ಕೀಳರಿಮೆಯಿಂದ ಆ ಧನುಸ್ಸನ್ನು ಕಟ್ಟಲು ಹೋಗುತ್ತಿದ್ದಾನೆಂದಾದರೆ, ನಾವು ಅಪಹಾಸ್ಯಕ್ಕೆ ಒಳಗಾಗದಿರಲು, ಹಗುರವೆನಿಸಿಕೊಳ್ಳದಿರಲು ಮತ್ತು ಲೋಕದ ಎಲ್ಲ ಮಹೀಪತಿಗಳ ದ್ವೇಷಕ್ಕೊಳಗಾಗದೇ ಇರಲು ಅವನನ್ನು ತಡೆಹಿಡಿಯುವುದು ಒಳ್ಳೆಯದು.”

01179009a ಕೇ ಚಿದಾಹುರ್ಯುವಾ ಶ್ರೀಮಾನ್ನಾಗರಾಜಕರೋಪಮಃ|

01179009c ಪೀನಸ್ಕಂಧೋರುಬಾಹುಶ್ಚ ಧೈರ್ಯೇಣ ಹಿಮವಾನಿವ||

ಇತರರು ಹೇಳಿದರು: “ಯುವಕನು ಉತ್ತಮನಾಗಿದ್ದಾನೆ. ಗಜರಾಜನ ಸೊಂಡಿಲಿನಂತೆ ತೋರುತ್ತಿದ್ದಾನೆ. ಅವನ ಬಾಹು, ತೊಡೆ ಮತ್ತು ತೋಳುಗಳು ಮಾಂಸಖಂಡಗಳಿಂದ ತುಂಬಿಕೊಂಡು ಗಟ್ಟಿಯಾಗಿ ಕಾಣಿಸುತ್ತಿವೆ ಮತ್ತು ಹಿಮಾಲಯದಂತೆ ಅವನ ನಿಲುವಿನಲ್ಲಿ ಧೈರ್ಯವಿದೆ.

01179010a ಸಂಭಾವ್ಯಮಸ್ಮಿನ್ಕರ್ಮೇದಮುತ್ಸಾಹಾಚ್ಚಾನುಮೀಯತೇ|

01179010c ಶಕ್ತಿರಸ್ಯ ಮಹೋತ್ಸಾಹಾ ನ ಹ್ಯಶಕ್ತಃ ಸ್ವಯಂ ವ್ರಜೇತ್||

ಅವನು ಕಾರ್ಯದಲ್ಲಿ ಗೆಲ್ಲುತ್ತಾನೆ ಎನ್ನುವುದನ್ನು ಅವನಲ್ಲಿರುವ ಉತ್ಸಾಹವೇ ತೋರಿಸುತ್ತಿದೆ. ಅವನ ಶಕ್ತಿಯಲ್ಲಿ ಉತ್ಸಾಹವಿದೆ. ಇಂತಹ ಸಮರ್ಥ ವ್ಯಕ್ತಿಯು ತಾನಾಗಿಯೇ ಬಿಟ್ಟುಹೋಗುವುದಿಲ್ಲ.

01179011a ನ ಚ ತದ್ವಿದ್ಯತೇ ಕಿಂ ಚಿತ್ಕರ್ಮ ಲೋಕೇಷು ಯದ್ಭವೇತ್|

01179011c ಬ್ರಾಹ್ಮಣಾನಾಮಸಾಧ್ಯಂ ಚ ತ್ರಿಷು ಸಂಸ್ಥಾನಚಾರಿಷು||

ಇದಲ್ಲದೇ, ಮೂರು ಸಂಸ್ಥಾನಚಾರಿಗಳಲ್ಲಿ ಬ್ರಾಹ್ಮಣರಿಗೆ ಅಸಾಧ್ಯವಾದ ಯಾವ ಕಾರ್ಯವೂ ಯಾವುದೇ ಲೋಕದಲ್ಲಿಯೂ ಕಂಡುಬರುವುದಿಲ್ಲ.

01179012a ಅಬ್ಭಕ್ಷಾ ವಾಯುಭಕ್ಷಾಶ್ಚ ಫಲಾಹಾರಾ ದೃಢವ್ರತಾಃ|

01179012c ದುರ್ಬಲಾ ಹಿ ಬಲೀಯಾಂಸೋ ವಿಪ್ರಾ ಹಿ ಬ್ರಹ್ಮತೇಜಸಾ||

ಕೇವಲ ನೀರು, ವಾಯು ಅಥವಾ ಫಲಾಹಾರ ಸೇವನೆಯಿಂದ ದೃಢವ್ರತ ವಿಪ್ರರು ದುರ್ಬಲರೆನಿಸಿದರೂ, ಅವರ ಬ್ರಹ್ಮತೇಜಸ್ಸಿನಿಂದ ಬಹಳ ಬಲಶಾಲಿಗಳಾಗಿರುತ್ತಾರೆ.

01179013a ಬ್ರಾಹ್ಮಣೋ ನಾವಮಂತವ್ಯಃ ಸದ್ವಾಸದ್ವಾ ಸಮಾಚರನ್|

01179013c ಸುಖಂ ದುಃಖಂ ಮಹದ್ಧ್ರಸ್ವಂ ಕರ್ಮ ಯತ್ಸಮುಪಾಗತಂ||

ಅವನು ಒಳ್ಳೆಯದನ್ನು ಅಥವಾ ಕೆಟ್ಟದ್ದನ್ನು ಮಾಡಲಿ, ಅವನು ತೊಡಗಿರುವ ಕಾರ್ಯವು ಸುಖಕರವಾಗಿರಲಿ ದುಃಖಕರವಾಗಿರಲಿ ಅಥವಾ ದೊಡ್ಡಕಾರ್ಯವೇ ಆಗಿರಲಿ ಅಥವಾ ಸಣ್ಣಕಾರ್ಯವೇ ಆಗಿರಲಿ, ಬ್ರಾಹ್ಮಣನನ್ನು ಅವಹೇಳನೆ ಮಾಡಬಾರದು.”

01179014a ಏವಂ ತೇಷಾಂ ವಿಲಪತಾಂ ವಿಪ್ರಾಣಾಂ ವಿವಿಧಾ ಗಿರಃ|

01179014c ಅರ್ಜುನೋ ಧನುಷೋಽಭ್ಯಾಶೇ ತಸ್ಥೌ ಗಿರಿರಿವಾಚಲಃ||

ಈ ರೀತಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿರುವಾಗ, ಅರ್ಜುನನು ಧನುಸ್ಸಿನ ಬಳಿ ಹೋಗಿ ಅಚಲ ಪರ್ವತದಂತೆ ನಿಂತನು.

01179015a ಸ ತದ್ಧನುಃ ಪರಿಕ್ರಮ್ಯ ಪ್ರದಕ್ಷಿಣಮಥಾಕರೋತ್|

01179015c ಪ್ರಣಮ್ಯ ಶಿರಸಾ ಹೃಷ್ಟೋ ಜಗೃಹೇ ಚ ಪರಂತಪಃ||

ಆ ಪರಂತಪನು ಧನುಸ್ಸನ್ನು ಸುತ್ತುವರಿದು ಪ್ರದಕ್ಷಿಣೆ ಮಾಡಿ, ತಲೆ ಬಗ್ಗಿಸಿ ಪ್ರಣಾಮಮಾಡಿದನು ಮತ್ತು ಸಂತೋಷದಿಂದ ಅದನ್ನು ಕೈಯಲ್ಲಿ ತೆಗೆದುಕೊಂಡನು.

01179016a ಸಜ್ಯಂ ಚ ಚಕ್ರೇ ನಿಮಿಷಾಂತರೇಣ

        ಶರಾಂಶ್ಚ ಜಗ್ರಾಹ ದಶಾರ್ಧಸಂಖ್ಯಾನ್|

01179016c ವಿವ್ಯಾಧ ಲಕ್ಷ್ಯಂ ನಿಪಪಾತ ತಚ್ಚ

        ಚಿದ್ರೇಣ ಭೂಮೌ ಸಹಸಾತಿವಿದ್ಧಂ||

ಕಣ್ಣು ಮುಚ್ಚಿ ಬಿಡುವುದರಲ್ಲಿ ಅವನು ಧನುಸ್ಸನ್ನು ಕಟ್ಟಿ, ಐದು ಬಾಣಗಳನ್ನು ತೆಗೆದುಕೊಂಡು, ರಂಧ್ರದ ಮೂಲಕ ಲಕ್ಷ್ಯವನ್ನು ಭೇದಿಸಿ ಕೆಳಗೆ ಭೂಮಿಯಮೇಲೆ ರಭಸದಿಂದ ಬೀಳಿಸಿದನು.

01179017a ತತೋಽಂತರಿಕ್ಷೇ ಚ ಬಭೂವ ನಾದಃ

        ಸಮಾಜಮಧ್ಯೇ ಚ ಮಹಾನ್ನಿನಾದಃ|

01179017c ಪುಷ್ಪಾಣಿ ದಿವ್ಯಾನಿ ವವರ್ಷ ದೇವಃ

        ಪಾರ್ಥಸ್ಯ ಮೂರ್ಧ್ನಿ ದ್ವಿಷತಾಂ ನಿಹಂತುಃ||

ಅಂತರಿಕ್ಷದಲ್ಲಿ ಹರ್ಷೋದ್ಗಾರವಾಯಿತು, ಜನರ ಗುಂಪಿನಲ್ಲಿ ಮಹಾನಿನಾದವು ಕೇಳಿಬಂದಿತು. ಶತ್ರುನಾಶಿನಿ ಪಾರ್ಥನ ನೆತ್ತಿಯಮೇಲೆ ದೇವತೆಗಳು ದಿವ್ಯ ಪುಷ್ಪಗಳ ಮಳೆ ಸುರಿಸಿದರು.

01179018a ಚೇಲಾವೇಧಾಂಸ್ತತಶ್ಚಕ್ರುರ್ಹಾಹಾಕಾರಾಂಶ್ಚ ಸರ್ವಶಃ|

01179018c ನ್ಯಪತಂಶ್ಚಾತ್ರ ನಭಸಃ ಸಮಂತಾತ್ಪುಷ್ಪವೃಷ್ಟಯಃ||

ಉತ್ತರೀಯಗಳನ್ನು ಪಟದಂತೆ ಹಾರಿಸುತ್ತಾ ನೆರೆದಿದ್ದ ಎಲ್ಲ ಪ್ರೇಕ್ಷಕರೂ ಹಾಹಾಕಾರಗೈದರು ಮತ್ತು ನಭದಿಂದ ಪುಷ್ಪವೃಷ್ಟಿಯಾಯಿತು.

01179019a ಶತಾಂಗಾನಿ ಚ ತೂರ್ಯಾಣಿ ವಾದಕಾಶ್ಚಾಪ್ಯವಾದಯನ್|

01179019c ಸೂತಮಾಗಧಸಂಘಾಶ್ಚ ಅಸ್ತುವಂಸ್ತತ್ರ ಸುಸ್ವನಾಃ||

ವಾದ್ಯಗಾರರು ನೂರಾರು ವಾದ್ಯ ತೂರ್ಯಗಳನ್ನು ಮೊಳಗಿಸಿದರು ಮತ್ತು ಸೂತ ಮಾಗಧರು ಎತ್ತರ ಸ್ವರಗಳಲ್ಲಿ ಪ್ರಶಂಸನೆಗಳನ್ನು ಹಾಡಿದರು.

01179020a ತಂ ದೃಷ್ಟ್ವಾ ದ್ರುಪದಃ ಪ್ರೀತೋ ಬಭೂವಾರಿನಿಷೂದನಃ|

01179020c ಸಹಸೈನ್ಯಶ್ಚ ಪಾರ್ಥಸ್ಯ ಸಾಹಾಯ್ಯಾರ್ಥಮಿಯೇಷ ಸಃ||

ಅರಿನಿಷೂದನ ದ್ರುಪದನು ಅವನನ್ನು ನೋಡಿ ಸಂತೋಷಗೊಂಡು, ಪಾರ್ಥನ ರಕ್ಷಣೆಗೆಂದು ಸೈನ್ಯಸಮೇತ ನಿಂತನು.

01179021a ತಸ್ಮಿಂಸ್ತು ಶಬ್ದೇ ಮಹತಿ ಪ್ರವೃತ್ತೇ

        ಯುಧಿಷ್ಠಿರೋ ಧರ್ಮಭೃತಾಂ ವರಿಷ್ಠಃ|

01179021c ಆವಾಸಮೇವೋಪಜಗಾಮ ಶೀಘ್ರಂ

        ಸಾರ್ಧಂ ಯಮಾಭ್ಯಾಂ ಪುರುಷೋತ್ತಮಾಭ್ಯಾಂ||

ಈ ಗಲಾಟೆಯು ಹೆಚ್ಚಾಗುತ್ತಿದ್ದಂತೆ, ಧರ್ಮಭೃತರಲ್ಲಿ ವರಿಷ್ಠ ಯುಧಿಷ್ಠಿರನು, ಪುರುಷೋತ್ತಮ ಅವಳಿಗಳ ಜೊತೆಗೂಡಿ ಶೀಘ್ರವಾಗಿ ಅವಾಸದೆಡೆಗೆ ಹೊರಟುಹೋದನು.

01179022a ವಿದ್ಧಂ ತು ಲಕ್ಷ್ಯಂ ಪ್ರಸಮೀಕ್ಷ್ಯ ಕೃಷ್ಣಾ

        ಪಾರ್ಥಂ ಚ ಶಕ್ರಪ್ರತಿಮಂ ನಿರೀಕ್ಷ್ಯ|

01179022c ಆದಾಯ ಶುಕ್ಲಂ ವರಮಾಲ್ಯದಾಮ

        ಜಗಾಮ ಕುಂತೀಸುತಮುತ್ಸ್ಮಯಂತೀ||

ಲಕ್ಷ್ಯವನ್ನು ಹೊಡೆದಿದ್ದನ್ನು ನೋಡಿ, ಶಕ್ರಪ್ರತಿಮ ಪಾರ್ಥನನ್ನು ನೋಡಿ, ಕೃಷ್ಣೆಯು ಬಿಳಿ ವರಮಾಲೆಯನ್ನು ಹಿಡಿದು, ಮುಗುಳ್ನಗುತ್ತಾ ಕುಂತೀಸುತನೆಡೆಗೆ ಬಂದಳು.

01179023a ಸ ತಾಮುಪಾದಾಯ ವಿಜಿತ್ಯ ರಂಗೇ

        ದ್ವಿಜಾತಿಭಿಸ್ತೈರಭಿಪೂಜ್ಯಮಾನಃ|

01179023c ರಂಗಾನ್ನಿರಕ್ರಾಮದಚಿಂತ್ಯಕರ್ಮಾ

        ಪತ್ನ್ಯಾ ತಯಾ ಚಾಪ್ಯನುಗಮ್ಯಮಾನಃ||

ಸ್ಪರ್ಧೆಯಲ್ಲಿ ಜಯವನ್ನು ಗಳಿಸಿ ಬ್ರಾಹ್ಮಣರಿಂದ ಅಭಿಪೂಜ್ಯಮಾನ, ಅಚಿಂತ್ಯಕರ್ಮನು ತನ್ನ ಪತ್ನಿಯು ಅನುಸರಿಸುತ್ತಿದ್ದ ಹಾಗೆ ರಂಗದಿಂದ ಹೊರಬಂದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ಲಕ್ಷ್ಯಛೇದನೇ ಏಕೋನಶೀತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ಲಕ್ಷ್ಯಛೇದನದಲ್ಲಿ ನೂರಾಎಪ್ಪತ್ತೊಂಭತ್ತನೆಯ ಅಧ್ಯಾಯವು.

Related image

Comments are closed.