Adi Parva: Chapter 178

ಆದಿ ಪರ್ವ: ಸ್ವಯಂವರ ಪರ್ವ

೧೭೮

ಸ್ಪರ್ಧಿಸಲು ರಾಜರು ಒಂದಾದುದು; ಆಕಾಶದಲ್ಲಿ ದೇವ-ಋಷಿ-ಗಂಧರ್ವ-ಅಪ್ಸರಗಣಗಳ ಬೀಡು (೧-೭). ಕೃಷ್ಣನು ಪಾಂಡವರನ್ನು ಸಭೆಯಲ್ಲಿ ದೂರದಿಂದಲೇ ನೋಡಿ ಗುರುತಿಸಿ ಬಲರಾಮನಿಗೆ ತೋರಿಸುವುದು (೮-೧೦). ಎಲ್ಲ ರಾಜರೂ ಸ್ಪರ್ದೆಯಲ್ಲಿ ಸೋಲಲು ಬ್ರಾಹ್ಮಣರ ಸಭೆಯಿಂದ ಅರ್ಜುನನು ಮೇಲೆದ್ದು ಬಂದುದು (೧೧-೧೮).

01178001 ವೈಶಂಪಾಯನ ಉವಾಚ|

01178001a ತೇಽಲಂಕೃತಾಃ ಕುಂಡಲಿನೋ ಯುವಾನಃ

        ಪರಸ್ಪರಂ ಸ್ಪರ್ಧಮಾನಾಃ ಸಮೇತಾಃ|

01178001c ಅಸ್ತ್ರಂ ಬಲಂ ಚಾತ್ಮನಿ ಮನ್ಯಮಾನಾಃ

        ಸರ್ವೇ ಸಮುತ್ಪೇತುರಹಂಕೃತೇನ||

ವೈಶಂಪಾಯನನು ಹೇಳಿದನು: “ತಾವೇ ಅಸ್ತ್ರಬಲರೆಂಬ ಜಂಬದಿಂದ ಕುಂಡಲ ಮತ್ತಿತರ ಆಭರಣಗಳಿಂದ ಅಲಂಕೃತರಾದ ಯುವಕರು ಪರಸ್ಪರ ಸ್ಪರ್ಧಿಸಲು ಒಂದಾದರು.

01178002a ರೂಪೇಣ ವೀರ್ಯೇಣ ಕುಲೇನ ಚೈವ

        ಧರ್ಮೇಣ ಚೈವಾಪಿ ಚ ಯೌವನೇನ|

01178002c ಸಮೃದ್ಧದರ್ಪಾ ಮದವೇಗಭಿನ್ನಾ

        ಮತ್ತಾ ಯಥಾ ಹೈಮವತಾ ಗಜೇಂದ್ರಾಃ||

ರೂಪ, ವೀರ್ಯ, ಕುಲ, ಧರ್ಮ ಮತ್ತು ಯೌವನ ದರ್ಪದಿಂದ ತುಂಬಿದ ಅವರೆಲ್ಲರೂ ಹಿಮಾಲಯದ ಮದೋನ್ಮತ್ತ ಗಜೇಂದ್ರಗಳಂತೆ ಮುನ್ನುಕ್ಕುತ್ತಿದ್ದರು.

01178003a ಪರಸ್ಪರಂ ಸ್ಪರ್ಧಯಾ ಪ್ರೇಕ್ಷಮಾಣಾಃ

        ಸಂಕಲ್ಪಜೇನಾಪಿ ಪರಿಪ್ಲುತಾಂಗಾಃ|

01178003c ಕೃಷ್ಣಾ ಮಮೈಷೇತ್ಯಭಿಭಾಷಮಾಣಾ

        ನೃಪಾಸನೇಭ್ಯಃ ಸಹಸೋಪತಸ್ಥುಃ||

ಪರಸ್ಪರರನ್ನು ಸ್ಪರ್ಧಾಭಾವದಿಂದ ನೋಡುತ್ತಾ, ಕಾಮದಲ್ಲಿ ಮುಳುಗೆದ್ದವರಂತೆ, “ಕೃಷ್ಣೆಯು ನನ್ನವಳಾಗುತ್ತಾಳೆ!” ಎಂದು ಘೋಷಿಸುತ್ತಾ ತಮ್ಮ ತಮ್ಮ ರಾಜ ಆಸನಗಳಿಂದ ಎದ್ದರು.

01178004a ತೇ ಕ್ಷತ್ರಿಯಾ ರಂಗಗತಾಃ ಸಮೇತಾ

        ಜಿಗೀಷಮಾಣಾ ದ್ರುಪದಾತ್ಮಜಾಂ ತಾಂ|

01178004c ಚಕಾಶಿರೇ ಪರ್ವತರಾಜಕನ್ಯಾಂ

        ಉಮಾಂ ಯಥಾ ದೇವಗಣಾಃ ಸಮೇತಾಃ||

ದೃಪದಾತ್ಮಜೆಯನ್ನು ಗೆಲ್ಲಲು ರಂಗದಲ್ಲಿ ಸೇರಿದ್ದ ಕ್ಷತ್ರಿಯರು, ಪರ್ವತರಾಜಕನ್ಯೆ ಉಮೆಗಾಗಿ ನೆರೆದಿದ್ದ ದೇವಗಣದಂತೆ ಕಂಗೊಳಿಸಿದರು.

01178005a ಕಂದರ್ಪಬಾಣಾಭಿನಿಪೀಡಿತಾಂಗಾಃ

        ಕೃಷ್ಣಾಗತೈಸ್ತೇ ಹೃದಯೈರ್ನರೇಂದ್ರಾಃ|

01178005c ರಂಗಾವತೀರ್ಣಾ ದ್ರುಪದಾತ್ಮಜಾರ್ಥಂ

        ದ್ವೇಷ್ಯಾನ್ ಹಿ ಚಕ್ರುಃ ಸುಹೃದೋಽಪಿ ತತ್ರ||

ಕಂದರ್ಪನ ಬಾಣಗಳಿಂದ ಪೀಡಿತಾಂಗರಾಗಿ, ಕೃಷ್ಣೆಗಾಗಿ ಹೃದಯಗಳನ್ನು ಕಳೆದುಕೊಂಡ ನರೇಂದ್ರರು ದೃಪದಾತ್ಮಜೆಗಾಗಿ ರಂಗಕ್ಕಿಳಿದು, ಅಲ್ಲಿ ಮಿತ್ರರನ್ನೂ ಸಹ ಶತ್ರುಗಳೆಂದು ಪರಿಗಣಿಸಿ ನೋಡತೊಡಗಿದರು.

01178006a ಅಥಾಯಯುರ್ದೇವಗಣಾ ವಿಮಾನೈಃ

        ರುದ್ರಾದಿತ್ಯಾ ವಸವೋಽಥಾಶ್ವಿನೌ ಚ|

01178006c ಸಾಧ್ಯಾಶ್ಚ ಸರ್ವೇ ಮರುತಸ್ತಥೈವ

        ಯಮಂ ಪುರಸ್ಕೃತ್ಯ ಧನೇಶ್ವರಂ ಚ||

01178007a ದೈತ್ಯಾಃ ಸುಪರ್ಣಾಶ್ಚ ಮಹೋರಗಾಶ್ಚ

        ದೇವರ್ಷಯೋ ಗುಹ್ಯಕಾಶ್ಚಾರಣಾಶ್ಚ|

01178007c ವಿಶ್ವಾವಸುರ್ನಾರದಪರ್ವತೌ ಚ

        ಗಂಧರ್ವಮುಖ್ಯಾಶ್ಚ ಸಹಾಪ್ಸರೋಭಿಃ||

ಯಮ ಮತ್ತು ಧನೇಶ್ವರನನ್ನು ಮುಂದಿಟ್ಟುಕೊಂಡು, ರುದ್ರ, ಆದಿತ್ಯ, ವಸು, ಅಶ್ವಿನಿ, ಸಾದ್ಯ, ಮರುತ್ ಮೊದಲಾದ ಎಲ್ಲ ದೇವಗಣಗಳೂ, ದೈತ್ಯರು, ಸುಪರ್ಣರು, ಮಹಾ‌ಉರಗಗಳು, ದೇವರ್ಷಿಗಳು, ಗುಹ್ಯಕರು, ಚರಣರು, ವಿಶ್ವಾವಸು, ನಾರದ, ಪರ್ವತ, ಗಂಧರ್ವ ಪ್ರಮುಖರು, ಮತ್ತು ಅಪ್ಸರೆಯರು ವಿಮಾನಗಳಲ್ಲಿ ಬಂದು ನೆರೆದರು.

01178008a ಹಲಾಯುಧಸ್ತತ್ರ ಚ ಕೇಶವಶ್ಚ

        ವೃಷ್ಣ್ಯಂಧಕಾಶ್ಚೈವ ಯಥಾ ಪ್ರಧಾನಾಃ|

01178008c ಪ್ರೇಕ್ಷಾಂ ಸ್ಮ ಚಕ್ರುರ್ಯದುಪುಂಗವಾಸ್ತೇ

        ಸ್ಥಿತಾಶ್ಚ ಕೃಷ್ಣಸ್ಯ ಮತೇ ಬಭೂವುಃ||

ಕೃಷ್ಣನ ಹೇಳಿಕೆಯಂತೆ ಯದುಪುಂಗವರೆಲ್ಲ ಒಂದೇ ಕಡೆ ಕುಳಿತಿದ್ದರು. ಅಲ್ಲಿಂದ ವೃಷ್ಣಿ ಮತ್ತು ಅಂಧಕರಲ್ಲಿ ಪ್ರಧಾನ ಹಲಾಯುಧ-ಕೇಶವರು ಸುತ್ತಲೂ ನೋಡಿದರು.

01178009a ದೃಷ್ಟ್ವಾ ಹಿ ತಾನ್ಮತ್ತಗಜೇಂದ್ರರೂಪಾನ್

        ಪಂಚಾಭಿಪದ್ಮಾನಿವ ವಾರಣೇಂದ್ರಾನ್|

01178009c ಭಸ್ಮಾವೃತಾಂಗಾನಿವ ಹವ್ಯವಾಹಾನ್

        ಪಾರ್ಥಾನ್ಪ್ರದಧ್ಯೌ ಸ ಯದುಪ್ರವೀರಃ||

ಮತ್ತಗಜೇಂದ್ರರೂಪಿ, ಭಸ್ಮಾವೃತಶರೀರಿ ಹವ್ಯವಾಹನಗಳಂತಿರುವ, ಸರೋವರದಲ್ಲಿರುವ ಪಂಚಪದ್ಮಗಳಂತಿರುವ ಪಾರ್ಥರನ್ನು ಯದುಪ್ರವೀರನು ಕಂಡನು.

01178010a ಶಶಂಸ ರಾಮಾಯ ಯುಧಿಷ್ಠಿರಂ ಚ

        ಭೀಮಂ ಚ ಜಿಷ್ಣುಂ ಚ ಯಮೌ ಚ ವೀರೌ|

01178010c ಶನೈಃ ಶನೈಸ್ತಾಂಶ್ಚ ನಿರೀಕ್ಷ್ಯ ರಾಮೋ

        ಜನಾರ್ದನಂ ಪ್ರೀತಮನಾ ದದರ್ಶ||

ರಾಮನಿಗೆ ಯುಧಿಷ್ಠಿರ, ಭೀಮ, ಜಿಷ್ಣು, ಮತ್ತು ವೀರ ಅವಳಿಗಳನ್ನು ಸೂಚಿಸಿದನು; ನಿಧಾನವಾಗಿ ಅವರೆಡೆಗೆ ನೋಡಿದ ರಾಮನು ಸಂತೋಷದಿಂದ ಜನಾರ್ದನನ ಕಡೆ ನೋಡಿದನು.

01178011a ಅನ್ಯೇ ತು ನಾನಾನೃಪಪುತ್ರಪೌತ್ರಾಃ

        ಕೃಷ್ಣಾಗತೈರ್ನೇತ್ರಮನಃಸ್ವಭಾವೈಃ|

01178011c ವ್ಯಾಯಚ್ಛಮಾನಾ ದದೃಶುರ್ಭ್ರಮಂತೀಂ

        ಸಂದಷ್ಟದಂತಚ್ಛದತಾಂರವಕ್ತ್ರಾಃ||

ತಮ್ಮ ನೇತ್ರ, ಮನಸ್ಸು ಮತ್ತು ಸ್ವಭಾವಗಳನ್ನು ಕೃಷ್ಣೆಗಾಗಿ ಕಳೆದುಕೊಂಡ ನಾನಾ ನೃಪಪುತ್ರರೂ ಪೌತ್ರರೂ ತಾಮ್ರದಂತೆ ಕೆಂಪಾದ ಮುಖವುಳ್ಳವರಾಗಿ, ತುಟಿಯನ್ನು ಕಚ್ಚುತ್ತಾ, ತಮ್ಮ ತೋಳಬಲವನ್ನು ತೋರಿಸುತ್ತಾ, ಮುಂದೆ ಸಾಗುತ್ತಿರುವ ದ್ರೌಪದಿಯನ್ನು ದುರುಗುಟ್ಟಿ ನೋಡುತ್ತಿದ್ದರು.

01178012a ತಥೈವ ಪಾರ್ಥಾಃ ಪೃಥುಬಾಹವಸ್ತೇ

        ವೀರೌ ಯಮೌ ಚೈವ ಮಹಾನುಭಾವೌ|

01178012c ತಾಂ ದ್ರೌಪದೀಂ ಪ್ರೇಕ್ಷ್ಯ ತದಾ ಸ್ಮ ಸರ್ವೇ

        ಕಂದರ್ಪಬಾಣಾಭಿಹತಾ ಬಭೂವುಃ||

ಮಹಾಬಾಹು, ಮಹಾನುಭಾವ ಪಾರ್ಥರು ಮತ್ತು ಇಬ್ಬರು ಅವಳಿಗಳು ದ್ರೌಪದಿಯನ್ನು ನೋಡುತ್ತಲೇ ಇದ್ದರು ಮತ್ತು ಅವರೆಲ್ಲರೂ ಕಂದರ್ಪಬಾಣಗಳಿಂದ ಗಾಯಗೊಂಡಿದ್ದರು.

01178013a ದೇವರ್ಷಿಗಂಧರ್ವಸಮಾಕುಲಂ ತತ್

        ಸುಪರ್ಣನಾಗಾಸುರಸಿದ್ಧಜುಷ್ಟಂ|

01178013c ದಿವ್ಯೇನ ಗಂಧೇನ ಸಮಾಕುಲಂ ಚ

        ದಿವ್ಯೈಶ್ಚ ಮಾಲ್ಯೈರವಕೀರ್ಯಮಾಣಂ||

ಆಕಾಶವು ದೇವ, ಋಷಿ, ಗಂಧರ್ವ, ಸುಪರ್ಣ, ನಾಗ, ಅಸುರ ಮತ್ತು ಸಿದ್ಧರಿಂದ ತುಂಬಿಕೊಂಡಿತ್ತು ಮತ್ತು ಅಲ್ಲಲ್ಲಿ ಬಿಸುಟ ದಿವ್ಯಮಾಲೆಗಳಿಂದ ಹೊಮ್ಮುತ್ತಿರುವ ದಿವ್ಯ ಸುಗಂಧದಿಂದ ತುಂಬಿಕೊಂಡಿತ್ತು.

01178014a ಮಹಾಸ್ವನೈರ್ದುಂದುಭಿನಾದಿತೈಶ್ಚ

        ಬಭೂವ ತತ್ಸಂಕುಲಮಂತರಿಕ್ಷಂ|

01178014c ವಿಮಾನಸಂಬಾಧಮಭೂತ್ಸಮಂತಾತ್

        ಸವೇಣುವೀಣಾಪಣವಾನುನಾದಂ||

ದುಂಧುಭಿಗಳ ಮಹಾನಾದ ಗರ್ಜನೆಯಿಂದ ಅಂತರಿಕ್ಷವು ಇನ್ನೂ ಇಕ್ಕಟ್ಟೆನಿಸುತ್ತಿತ್ತು ಮತ್ತು ಹಲವಾರು ವಿಮಾನಗಳಿಂದ ಅದರ ಮಾರ್ಗಗಳು ಕಟ್ಟಿಹೋಗಿದ್ದವು ಹಾಗೂ ವೇಣು ಮತ್ತು ವೀಣಾವಾದನಗಳಿಂದ ಪ್ರತಿಧ್ವನಿಸುತ್ತಿತ್ತು.

01178015a ತತಸ್ತು ತೇ ರಾಜಗಣಾಃ ಕ್ರಮೇಣ

        ಕೃಷ್ಣಾನಿಮಿತ್ತಂ ನೃಪ ವಿಕ್ರಮಂತಃ|

01178015c ತತ್ಕಾರ್ಮುಕಂ ಸಂಹನನೋಪಪನ್ನಂ

        ಸಜ್ಯಂ ನ ಶೇಕುಸ್ತರಸಾಪಿ ಕರ್ತುಂ||

ನಂತರ ಕ್ರಮೇಣವಾಗಿ ಕೃಷ್ಣೆಯ ಸಲುವಾಗಿ ರಾಜಗಣದಲ್ಲಿದ್ದ ಎಲ್ಲ ನೃಪರು ಹೊರಬಂದರು. ಆದರೆ ಆ ಬಿಲ್ಲು ಎಷ್ಟು ಗಡುಸಾಗಿತ್ತೆಂದರೆ ತಮ್ಮ ಎಲ್ಲ ಶಕ್ತಿಯನ್ನು ಬಳಸಿಯೂ ಅವರು ಆ ಬಿಲ್ಲಿಗೆ ದಾರವನ್ನು ಕಟ್ಟಲು ಅಸಮರ್ಥರಾದರು.

01178016a ತೇ ವಿಕ್ರಮಂತಃ ಸ್ಫುರತಾ ದೃಢೇನ

        ನಿಷ್ಕೃಷ್ಯಮಾಣಾ ಧನುಷಾ ನರೇಂದ್ರಾಃ|

01178016c ವಿಚೇಷ್ಟಮಾನಾ ಧರಣೀತಲಸ್ಥಾ

        ದೀನಾ ಅದೃಶ್ಯಂತ ವಿಭಗ್ನಚಿತ್ತಾಃ||

ಆ ಗಡುಸಾದ ಬಿಲ್ಲನ್ನು ಬಗ್ಗಿಸುವಾಗಲೇ, ಅದು ಜೋರಾಗಿ ಬಳುಕಿ ನರೇಂದ್ರರನ್ನೆಲ್ಲಾ ಕೆಳಗುರುಳಿಸುತ್ತಿತ್ತು, ಮತ್ತು ಧರಣೀತಲದಲ್ಲಿ ಪೇಚಲಾಡುತ್ತಿದ್ದ ಅವರು ದೀನರೂ ವಿಭಗ್ನಚಿತ್ತರಾಗಿಯೂ ಕಾಣುತ್ತಿದ್ದರು.

01178017a ಹಾಹಾಕೃತಂ ತದ್ಧನುಷಾ ದೃಢೇನ

        ನಿಷ್ಪಿಷ್ಟಭಗ್ನಾಂಗದಕುಂಡಲಂ ಚ|

01178017c ಕೃಷ್ಣಾನಿಮಿತ್ತಂ ವಿನಿವೃತ್ತಭಾವಂ

        ರಾಜ್ಞಾಂ ತದಾ ಮಂಡಲಮಾರ್ತಮಾಸೀತ್||

ದೃಢವಾದ ಆ ಬಿಲ್ಲು ಜೋರಾಗಿ ಶಬ್ಧಮಾಡುತ್ತಾ, ಅವರ ಅಂಗ ಮತ್ತು ಕುಂಡಲಗಳನ್ನು ಕಿತ್ತು ಚೆಲ್ಲಿತು; ಕೃಷ್ಣೆಗಾಗಿ ಇದ್ದ ಭಾವಗಳೆಲ್ಲವೂ ಇಲ್ಲದಂತಾಗಿ, ರಾಜರ ಆ ಮಂಡಲವು ಆರ್ತವಾಗಿ ಕಂಡಿತು.

01178018a ತಸ್ಮಿಂಸ್ತು ಸಂಭ್ರಾಂತಜನೇ ಸಮಾಜೇ

        ನಿಕ್ಷಿಪ್ತವಾದೇಷು ನರಾಧಿಪೇಷು|

01178018c ಕುಂತೀಸುತೋ ಜಿಷ್ಣುರಿಯೇಷ ಕರ್ತುಂ

        ಸಜ್ಯಂ ಧನುಸ್ತತ್ಸಶರಂ ಸ ವೀರಃ||

ಅಲ್ಲಿ ನೆರೆದಿರುವ ಭ್ರಾಂತಿಗೊಂಡ ಜನಸಮೂಹವು ನರಾಧಿಪರ ಕುರಿತು ನಿಕ್ಷಿಪ್ತ ಮಾತುಗಳನ್ನಾಡ ತೊಡಗಿರಲು, ಕುಂತೀಸುತ ವೀರ ಜಿಷ್ಣುವು ಧನುಸ್ಸನ್ನು ಸಜ್ಜಿಸಲು ಮತ್ತು ಅದಕ್ಕೆ ಶರವನ್ನೇರಿಸಲು ಎದ್ದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ರಾಜಪರಾಙ್ಮುಖೀಭವನೇ ಅಷ್ಟಸಪ್ತತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ರಾಜಪರಾಙ್ಮುಖದಲ್ಲಿ ನೂರಾಎಪ್ಪತ್ತೆಂಟನೆಯ ಅಧ್ಯಾಯವು.

Image result for indian birds images

Comments are closed.