Adi Parva: Chapter 176

ಆದಿ ಪರ್ವ: ಸ್ವಯಂವರ ಪರ್ವ

೧೭೬

ಪಾಂಚಾಲನಗರಿಯಲ್ಲಿ ಕುಂಬಾರನೋರ್ವನ ಮನೆಯಲ್ಲಿ ವಾಸಿಸಿ, ಯಾರಿಗೂ ಗುರುತು ಸಿಗದಂತೆ ಬ್ರಾಹ್ಮಣ ವೃತ್ತಿಗೆ ಸಮಾನ ಭಿಕ್ಷೆಬೇಡಲು ಪ್ರಾರಂಭಿಸಿದುದು (೧-೭). ಕೃಷ್ಣೆಯನ್ನು ಪಾಂಡವ ಕಿರೀಟಿಗೇ ಕೊಡಬೇಕೆಂದು ಸದಾ ಬಯಸಿದ್ದ ದ್ರುಪದನು ಅದನ್ನು ಯಾರಿಗೂ ಬಹಿರಂಗಪಡಿಸದೇ, ಪಾಂಡವರನ್ನು ಅನ್ವೇಷಿಸುವ ಉದ್ದೇಶದಿಂದ ಅಸಾಧ್ಯ ಬಿಲ್ಲನ್ನು ಮಾಡಿಸಿ, ಅಸಾಧ್ಯ ಸ್ಪರ್ಧೆಯನ್ನಿರಿಸಿದುದು (೮-೧೨). ಸ್ವಯಂವರದಲ್ಲಿ ಭಾಗವಹಿಸಲು ಮತ್ತು ಅದನ್ನು ವೀಕ್ಷಿಸಲು ಎಲ್ಲರ ಆಗಮನ, ಸಿದ್ಧತೆ (೧೩-೨೮). ಧೃಷ್ಟದ್ಯುಮ್ನನು ಸ್ವಯಂವರದ ನಿಯಮದ ಕುರಿತು ವಿವರಿಸಿದುದು (೨೯-೨೬).

01176001 ವೈಶಂಪಾಯನ ಉವಾಚ|

01176001a ಏವಮುಕ್ತಾಃ ಪ್ರಯಾತಾಸ್ತೇ ಪಾಂಡವಾ ಜನಮೇಜಯ|

01176001c ರಾಜ್ಞಾ ದಕ್ಷಿಣಪಾಂಚಾಲಾನ್ದ್ರುಪದೇನಾಭಿರಕ್ಷಿತಾನ್||

ವೈಶಂಪಾಯನನು ಹೇಳಿದನು: “ಜನಮೇಜಯ! ಬ್ರಾಹ್ಮಣರ ಈ ಮಾತಿನಂತೆ ಪಾಂಡವರು ರಾಜ ದ್ರುಪದನಿಂದ ಆಳಲ್ಪಟ್ಟ ದಕ್ಷಿಣ ಪಾಂಚಾಲಕ್ಕೆ ಪ್ರಯಾಣ ಮಾಡಿದರು.

01176002a ತತಸ್ತೇ ತಂ ಮಹಾತ್ಮಾನಂ ಶುದ್ಧಾತ್ಮಾನಮಕಲ್ಮಷಂ|

01176002c ದದೃಶುಃ ಪಾಂಡವಾ ರಾಜನ್ಪಥಿ ದ್ವೈಪಾಯನಂ ತದಾ||

01176003a ತಸ್ಮೈ ಯಥಾವತ್ಸತ್ಕಾರಂ ಕೃತ್ವಾ ತೇನ ಚ ಸಾಂತ್ವಿತಾಃ|

01176003c ಕಥಾಂತೇ ಚಾಭ್ಯನುಜ್ಞಾತಾಃ ಪ್ರಯಯುರ್ದ್ರುಪದಕ್ಷಯಂ||

ರಾಜ! ಅನಂತರ ಪಾಂಡವರು ದಾರಿಯಲ್ಲಿ ಮಹಾತ್ಮ, ಶುದ್ಧಾತ್ಮ, ಅಕಲ್ಮಶ ದ್ವೈಪಾಯನನನ್ನು ಕಂಡರು. ಅವನನ್ನು ಯಥಾವತ್ ಸತ್ಕರಿಸಿ, ಅವನಿಂದ ಸಾಂತ್ವನ ಮತ್ತು ತದನಂತರ ಅಪ್ಪಣೆಯನ್ನು ಪಡೆದು ಅವರು ದ್ರುಪದ ನಗರಿಗೆ ಮುಂದುವರೆದರು.

01176004a ಪಶ್ಯಂತೋ ರಮಣೀಯಾನಿ ವನಾನಿ ಚ ಸರಾಂಸಿ ಚ|

01176004c ತತ್ರ ತತ್ರ ವಸಂತಶ್ಚ ಶನೈರ್ಜಗ್ಮುರ್ಮಹಾರಥಾಃ||

ಆ ಮಹಾರಥಿಗಳು ಅಲ್ಲಲ್ಲಿ ರಮಣೀಯ ವನ-ಸರೋವರಗಳ ಬಳಿ ತಂಗುತ್ತಾ, ನಿಧಾನವಾಗಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು.

01176005a ಸ್ವಾಧ್ಯಾಯವಂತಃ ಶುಚಯೋ ಮಧುರಾಃ ಪ್ರಿಯವಾದಿನಃ|

01176005c ಆನುಪೂರ್ವ್ಯೇಣ ಸಂಪ್ರಾಪ್ತಾಃ ಪಾಂಚಾಲಾನ್ಕುರುನಂದನಾಃ||

ನಂತರ ಪ್ರಯಾಣದ ಅಂತ್ಯದಲ್ಲಿ ಸ್ವಾಧ್ಯಾಯವಂತ, ಶುಚಿರ್ಭೂತ, ಮಧುರ ಪ್ರಿಯವಾದಿ ಕುರುನಂದನರು ಪಾಂಚಾಲನಗರಿಯನ್ನು ತಲುಪಿದರು.

01176006a ತೇ ತು ದೃಷ್ಟ್ವಾ ಪುರಂ ತಚ್ಚ ಸ್ಕಂಧಾವಾರಂ ಚ ಪಾಂಡವಾಃ|

01176006c ಕುಂಭಕಾರಸ್ಯ ಶಾಲಾಯಾಂ ನಿವೇಶಂ ಚಕ್ರಿರೇ ತದಾ||

ಪುರವನ್ನು ಮತ್ತು ಅದರ ಕೋಟೆಗಳನ್ನು ನೋಡಿದ ನಂತರ ಪಾಂಡವರು ಒಬ್ಬ ಕುಂಬಾರನ ಮನೆಯಲ್ಲಿ ವಸತಿ ಮಾಡಿದರು.

01176007a ತತ್ರ ಭೈಕ್ಷಂ ಸಮಾಜಹ್ರುರ್ಬ್ರಾಹ್ಮೀಂ ವೃತ್ತಿಂ ಸಮಾಶ್ರಿತಾಃ|

01176007c ತಾಂಶ್ಚ ಪ್ರಾಪ್ತಾಂಸ್ತದಾ ವೀರಾಂಜಜ್ಞಿರೇ ನ ನರಾಃ ಕ್ವ ಚಿತ್||

ಬ್ರಾಹ್ಮಣವೃತ್ತಿಗೆ ಸಮಾನ ಭಿಕ್ಷೆಬೇಡಲು ಪ್ರಾರಂಭಿಸಿದರು; ಮತ್ತು ಈ ವೀರರ ಆಗಮನವನ್ನು ಯಾರಿಗೂ ಎಲ್ಲಿಯೂ ಗುರುತಿಸಲು ಆಗಲಿಲ್ಲ.

01176008a ಯಜ್ಞಸೇನಸ್ಯ ಕಾಮಸ್ತು ಪಾಂಡವಾಯ ಕಿರೀಟಿನೇ|

01176008c ಕೃಷ್ಣಾಂ ದದ್ಯಾಮಿತಿ ಸದಾ ನ ಚೈತದ್ವಿವೃಣೋತಿ ಸಃ||

ಕೃಷ್ಣೆಯನ್ನು ಪಾಂಡವ ಕಿರೀಟಿಗೇ ಕೊಡಬೇಕೆಂದು ಯಜ್ಞಸೇನನು ಸದಾ ಬಯಸಿದ್ದರೂ, ಅದನ್ನು ಯಾರಿಗೂ ಬಹಿರಂಗಪಡಿಸಿರಲಿಲ್ಲ.

01176009a ಸೋಽನ್ವೇಷಮಾಣಃ ಕೌಂತೇಯಾನ್ಪಾಂಚಾಲ್ಯೋ ಜನಮೇಜಯ|

01176009c ದೃಢಂ ಧನುರನಾಯಮ್ಯಂ ಕಾರಯಾಮಾಸ ಭಾರತ||

ಭಾರತ ಜನಮೇಜಯ! ಕೌಂತೇಯರ ಅನ್ವೇಷಣೆಯ ಸಲುವಾಗಿ ಪಾಂಚಾಲ್ಯನು ಬಗ್ಗಿಸಲು ಅಸಾಧ್ಯವಾದ ಒಂದು ದೃಢ ಬಿಲ್ಲನ್ನು ಮಾಡಿಸಿದ್ದನು.

01176010a ಯಂತ್ರಂ ವೈಹಾಯಸಂ ಚಾಪಿ ಕಾರಯಾಮಾಸ ಕೃತ್ರಿಮಂ|

01176010c ತೇನ ಯಂತ್ರೇಣ ಸಹಿತಂ ರಾಜಾ ಲಕ್ಷ್ಯಂ ಚ ಕಾಂಚನಂ||

ರಾಜ! ಅಂತರಿಕ್ಷದಲ್ಲಿ ಒಂದು ಕೃತ್ರಿಮ ಯಂತ್ರವನ್ನು ರಚಿಸಿ, ಆ ಯಂತ್ರಕ್ಕೆ ಚಿನ್ನದ ಒಂದು ಲಕ್ಷ್ಯವನ್ನು ಇರಿಸಿದ್ದನು.

01176011 ದ್ರುಪದ ಉವಾಚ|

01176011a ಇದಂ ಸಜ್ಯಂ ಧನುಃ ಕೃತ್ವಾ ಸಜ್ಯೇನಾನೇನ ಸಾಯಕೈಃ|

01176011c ಅತೀತ್ಯ ಲಕ್ಷ್ಯಂ ಯೋ ವೇದ್ಧಾ ಸ ಲಬ್ಧಾ ಮತ್ಸುತಾಮಿತಿ||

ದ್ರುಪದನು ಹೇಳಿದನು: “ಈ ಧನುಸ್ಸನ್ನು ಕಟ್ಟಿ, ಕಟ್ಟಿಯಾದ ನಂತರ ಈ ಯಂತ್ರದ ಮೂಲಕ ಆ ಲಕ್ಷ್ಯಕ್ಕೆ ಯಾರು ಬಾಣವನ್ನು ಹೊಡೆಯುವವನೋ ಅವನಿಗೇ ನನ್ನ ಮಗಳು ದೊರೆಯುವಳು!””

01176012 ವೈಶಂಪಾಯನ ಉವಾಚ|

01176012a ಇತಿ ಸ ದ್ರುಪದೋ ರಾಜಾ ಸರ್ವತಃ ಸಮಘೋಷಯತ್|

01176012c ತಚ್ಛೃತ್ವಾ ಪಾರ್ಥಿವಾಃ ಸರ್ವೇ ಸಮೀಯುಸ್ತತ್ರ ಭಾರತ||

ವೈಶಂಪಾಯನನು ಹೇಳಿದನು: “ಈ ರೀತಿ ರಾಜ ದ್ರುಪದನು ಎಲ್ಲ ಕಡೆಯಲ್ಲಿ ಘೋಷಣೆ ಮಾಡಿಸಿದನು. ಭಾರತ! ಅದನ್ನು ಕೇಳಿ ಎಲ್ಲಾ ರಾಜರು ಅಲ್ಲಿ ಒಂದುಗೂಡಿದರು.

01176013a ಋಷಯಶ್ಚ ಮಹಾತ್ಮಾನಃ ಸ್ವಯಂವರದಿದೃಕ್ಷಯಾ|

01176013c ದುರ್ಯೋಧನಪುರೋಗಾಶ್ಚ ಸಕರ್ಣಾಃ ಕುರವೋ ನೃಪ||

ನೃಪನೇ! ಸ್ವಯಂವರವನ್ನು ವೀಕ್ಷಿಸಲು ಮಹಾತ್ಮ ಋಷಿಗಳು ಹಾಗೂ ಕರ್ಣನನ್ನೊಡಗೂಡಿ ದುರ್ಯೋಧನನ ಮುಂದಾಳತ್ವದಲ್ಲಿ ಕೌರವರೂ ಆಗಮಿಸಿದರು.

01176014a ಬ್ರಾಹ್ಮಣಾಶ್ಚ ಮಹಾಭಾಗಾ ದೇಶೇಭ್ಯಃ ಸಮುಪಾಗಮನ್|

01176014c ತೇಽಭ್ಯರ್ಚಿತಾ ರಾಜಗಣಾ ದ್ರುಪದೇನ ಮಹಾತ್ಮನಾ||

ಸುತ್ತಲ ದೇಶಗಳಿಂದ ಮಹಾಭಾಗ ಬ್ರಾಹ್ಮಣರು ಆಗಮಿಸಿದರು ಮತ್ತು ರಾಜಗಣಗಳೆಲ್ಲವೂ ಮಹಾತ್ಮ ದ್ರುಪದನಿಂದ ಸ್ವಾಗತಿಸಲ್ಪಟ್ಟವು.

01176015a ತತಃ ಪೌರಜನಾಃ ಸರ್ವೇ ಸಾಗರೋದ್ಧೂತನಿಃಸ್ವನಾಃ|

01176015c ಶಿಶುಮಾರಪುರಂ ಪ್ರಾಪ್ಯ ನ್ಯವಿಶಂಸ್ತೇ ಚ ಪಾರ್ಥಿವಾಃ||

ಭಿರುಗಾಳಿಗೆ ಸಿಲುಕಿದ ಸಮುದ್ರದಂತೆ ಭೋರ್ಗರೆಯುತ್ತಿರುವ ಪುರಜನ ಸಮೂಹವು ಆ ಶಿಶುಮಾರಪುರದಲ್ಲಿ ಒಂದುಗೂಡಿತು, ಪಾರ್ಥಿವರೆಲ್ಲರೂ ಅಲ್ಲಿ ತಂಗಿದರು.

01176016a ಪ್ರಾಗುತ್ತರೇಣ ನಗರಾದ್ಭೂಮಿಭಾಗೇ ಸಮೇ ಶುಭೇ|

01176016c ಸಮಾಜವಾಟಃ ಶುಶುಭೇ ಭವನೈಃ ಸರ್ವತೋ ವೃತಃ|

ನಗರದ ಪೂರ್ವೋತ್ತರ ದಿಶೆಯಲ್ಲಿ ಸಮ ಭೂಮಿಪ್ರದೇಶದಲ್ಲಿ ಸುತ್ತಲೂ ಸುಂದರ ಭವನಗಳಿಂದ ಆವೃತ ಶೋಭಾಯಮಾನ ಸಮಾಜವಾಟಿಕೆಯನ್ನು ನಿರ್ಮಿಸಲಾಗಿತ್ತು.

01176017a ಪ್ರಾಕಾರಪರಿಖೋಪೇತೋ ದ್ವಾರತೋರಣಮಂಡಿತಃ|

01176017c ವಿತಾನೇನ ವಿಚಿತ್ರೇಣ ಸರ್ವತಃ ಸಮವಸ್ತೃತಃ||

ಅದು ಸುತ್ತಲೂ ಪ್ರಾಕಾರ, ತೋರಣಗಳಿಂದ ಅಲಂಕೃತ ದ್ವಾರಗಳು ಮತ್ತು ಬಣ್ಣ ಬಣ್ಣದ ಬಾವುಟಗಳಿಂದ ಆವೃತವಾಗಿತ್ತು.

01176018a ತೂರ್ಯೌಘಶತಸಂಕೀರ್ಣಃ ಪರಾರ್ಧ್ಯಾಗುರುಧೂಪಿತಃ|

01176018c ಚಂದನೋದಕಸಿಕ್ತಶ್ಚ ಮಾಲ್ಯದಾಮೈಶ್ಚ ಶೋಭಿತಃ||

ನೂರಾರು ವಾದ್ಯಗಳ ಧ್ವನಿಯಿಂದ ಅದು ತುಂಬಿಕೊಂಡಿತ್ತು. ಅತ್ತ್ಯುತ್ತಮ ಧೂಪದಿಂದ ಸುಗಂಧಿತಗೊಂಡು, ಚಂದನೋದಕದಿಂದ ಸಿಂಚಿತಗೊಂಡು, ಹೂಮಾಲೆಗಳಿಂದ ಅಲಂಕೃತಗೊಂಡಿತ್ತು.

01176019a ಕೈಲಾಸಶಿಖರಪ್ರಖ್ಯೈರ್ನಭಸ್ತಲವಿಲೇಖಿಭಿಃ|

01176019c ಸರ್ವತಃ ಸಂವೃತೈರ್ನದ್ಧಃ ಪ್ರಾಸಾದೈಃ ಸುಕೃತೋಚ್ಛ್ರಿತೈಃ||

01176020a ಸುವರ್ಣಜಾಲಸಂವೀತೈರ್ಮಣಿಕುಟ್ಟಿಮಭೂಷಿತೈಃ|

01176020c ಸುಖಾರೋಹಣಸೋಪಾನೈರ್ಮಹಾಸನಪರಿಚ್ಛದೈಃ||

ಅದು ಆಕಾಶವನ್ನೇ ಸೀಳಿಬಿಡುವಂತಿರುವ ಕೈಲಾಸಶಿಖರದಷ್ಟು ಎತ್ತರವಾಗಿ, ಬಹಳ ನೈಪುಣ್ಯತೆಯಿಂದ ಕಟ್ಟಲ್ಪಟ್ಟ, ಬಂಗಾರದ ಜಾಲಿಗಳು ಮತ್ತು ಮಣಿ ಕುಟ್ಠಿಮಗಳಿಂದ ಭೂಷಿತ, ಸುಖಾರೋಹಣಕ್ಕೆ ಅನುಕೂಲಕರ ಮೆಟ್ಟಿಲುಗಳು ಮತ್ತು ನೆರಳಿಗಾಗಿ ಕೊಡೆಗಳನ್ನು ಹೊತ್ತ ಮಹಾಸನಗಳನ್ನೊಳಗೊಂಡ, ಪ್ರಾಕಾರದಿಂದ ಸುತ್ತಲೂ ಆವೃತಗೊಂಡಿತ್ತು.

01176021a ಅಗ್ರಾಮ್ಯಸಮವಚ್ಛನ್ನೈರಗುರೂತ್ತಮವಾಸಿತೈಃ|

01176021c ಹಂಸಾಚ್ಛವರ್ಣೈರ್ಬಹುಭಿರಾಯೋಜನಸುಗಂಧಿಭಿಃ||

ಆ ಪ್ರಾಕಾರದಲ್ಲಿ ಅಸಾಮಾನ್ಯ ಅತಿ ಶ್ರೇಷ್ಠ ರತ್ನಗಂಬಳಿಯನ್ನು ಹಾಸಲಾಗಿತ್ತು, ಮತ್ತು ಅಲ್ಲಿಯ ಧೂಪದ ಸುಗಂಧವು ಶ್ವೇತಹಂಸದಂತೆ ಒಂದು ಯೋಜನ ದೂರದವರೆಗೂ ಪಸರಿಸಿತ್ತು.

01176022a ಅಸಂಬಾಧಶತದ್ವಾರೈಃ ಶಯನಾಸನಶೋಭಿತೈಃ|

01176022c ಬಹುಧಾತುಪಿನದ್ಧಾಂಗೈರ್ಹಿಮವಚ್ಛಿಖರೈರಿವ||

ಹಿಮವಾಚ್ಛಾದಿತ ಶಿಖರದಂತೆ ವಿವಿಧ ಲೋಹಗಳಿಂದ ತಯಾರಿಸಿದ ಶಯನಾಸನಗಳಿಂದ ಶೋಭಾಯಮಾನವಾಗಿದ್ದ ಆ ಸ್ಥಳಕ್ಕೆ ಒಂದು ನೂರು ದ್ವಾರಗಳಿದ್ದವು.

01176023a ತತ್ರ ನಾನಾಪ್ರಕಾರೇಷು ವಿಮಾನೇಷು ಸ್ವಲಂಕೃತಾಃ|

01176023c ಸ್ಪರ್ಧಮಾನಾಸ್ತದಾನ್ಯೋನ್ಯಂ ನಿಷೇದುಃ ಸರ್ವಪಾರ್ಥಿವಾಃ||

ಒಬ್ಬರಿಗೊಬ್ಬರು ಸ್ಪರ್ಧಿಸುತ್ತಿರುವಂತೆ ನಾನಾ ರೀತಿಯಲ್ಲಿ ಅಲಂಕೃತರಾದ ಎಲ್ಲ ಪಾರ್ಥಿವರೂ ಅಲ್ಲಿ ವಿವಿಧ ಅಂತಸ್ತುಗಳಲ್ಲಿ ಆಸೀನರಾಗಿದ್ದರು.

01176024a ತತ್ರೋಪವಿಷ್ಟಾನ್ದದೃಶುರ್ಮಹಾಸತ್ತ್ವಪರಾಕ್ರಮಾನ್|

01176024c ರಾಜಸಿಂಹಾನ್ಮಹಾಭಾಗಾನ್ಕೃಷ್ಣಾಗುರುವಿಭೂಷಿತಾನ್||

01176025a ಮಹಾಪ್ರಸಾದಾನ್ಬ್ರಹ್ಮಣ್ಯಾನ್ಸ್ವರಾಷ್ಟ್ರಪರಿರಕ್ಷಿಣಃ|

01176025c ಪ್ರಿಯಾನ್ಸರ್ವಸ್ಯ ಲೋಕಸ್ಯ ಸುಕೃತೈಃ ಕರ್ಮಭಿಃ ಶುಭೈಃ||

01176026a ಮಂಚೇಷು ಚ ಪರಾರ್ಧ್ಯೇಷು ಪೌರಜಾನಪದಾ ಜನಾಃ|

01176026c ಕೃಷ್ಣಾದರ್ಶನತುಷ್ಟ್ಯರ್ಥಂ ಸರ್ವತಃ ಸಮುಪಾವಿಶನ್||

ಕೃಷ್ಣೆಯ ಸೌಂದರ್ಯವನ್ನು ಮಾತ್ರ ನೋಡಿ ಸಂತುಷ್ಟಗೊಳ್ಳಲು ನೆರೆದಿದ್ದ ಪುರಜನ ಮತ್ತು ಗ್ರಾಮಪ್ರದೇಶದವರು ಅವರಿಗಷ್ಟೇ ಸೀಮಿತ ಮಂಚಗಳಲ್ಲಿ ಕುಳಿತು ಅಲ್ಲಿ ಕುಳಿತಿರುವ ಮಹಾಸತ್ವಪರಾಕ್ರಮಿಗಳೂ, ಮಹಾಭಾಗರೂ, ಕಪ್ಪು ಕಸ್ತೂರಿಗಳಿಂದ ವಿಭೂಷಿತರೂ, ಮಹಾಪ್ರಸಾದರೂ, ಬ್ರಾಹ್ಮಣರೂಪಿಗಳೂ, ಸ್ವರಾಷ್ಟ್ರಪರಿರಕ್ಷಕರೂ, ಸುಕೃತಕರ್ಮಗಳಿಗಾಗಿ ಸರ್ವಲೋಕಪ್ರಿಯರೂ, ಶೋಭಾಯಮಾನರೂ ಆದ ಸಿಂಹಗಳಂತಿರುವ ರಾಜರುಗಳನ್ನು ನೋಡುತ್ತಿದ್ದರು. 

01176027a ಬ್ರಾಹ್ಮಣೈಸ್ತೇ ಚ ಸಹಿತಾಃ ಪಾಂಡವಾಃ ಸಮುಪಾವಿಶನ್|

01176027c ಋದ್ಧಿಂ ಪಾಂಚಾಲರಾಜಸ್ಯ ಪಶ್ಯಂತಸ್ತಾಮನುತ್ತಮಾಂ||

ಬ್ರಾಹ್ಮಣರ ಮಧ್ಯದಲ್ಲಿ ಕುಳಿತಿದ್ದ ಪಾಂಡವರು, ಪಾಂಚಾಲ ರಾಜನ ಸರಿಸಾಟಿಯಿಲ್ಲದಂಥ ಸಂಪತ್ತನ್ನೇ ನೋಡುತ್ತಿದ್ದರು.

01176028a ತತಃ ಸಮಾಜೋ ವವೃಧೇ ಸ ರಾಜನ್ದಿವಸಾನ್ಬಹೂನ್|

01176028c ರತ್ನಪ್ರದಾನಬಹುಲಃ ಶೋಭಿತೋ ನಟನರ್ತಕೈಃ||

ಬಹುದಿನಗಳವರೆಗೆ ನೆರೆದಿದ್ದ ಗುಂಪು ಹೆಚ್ಚಾಗುತ್ತಲೇ ಇತ್ತು. ರತ್ನಗಳ ರಾಶಿಗಳಿಂದ ತುಂಬಿಕೊಂಡಿತ್ತು ಮತ್ತು ನಟನರ್ತಕರಿಂದ ಶೋಭಾಯಮಾನವಾಗಿತ್ತು.

01176029a ವರ್ತಮಾನೇ ಸಮಾಜೇ ತು ರಮಣೀಯೇಽಹ್ನಿ ಷೋಡಶೇ|

01176029c ಆಪ್ಲುತಾಂಗೀ ಸುವಸನಾ ಸರ್ವಾಭರಣಭೂಷಿತಾ||

ರಮಣೀಯ ಹದಿನಾರನೆಯ ದಿನ, ವರ್ತಮಾನ ಸಮಾಜದ ಮಧ್ಯೆ, ಮಿಂದು, ಹೊಸವಸ್ತ್ರ ಮತ್ತು ಸರ್ವಾಭರಣಭೂಷಿತಳಾಗಿ ದ್ರೌಪದಿಯು ಕಾಣಿಸಿಕೊಂಡಳು.

01176030a ವೀರಕಾಂಸ್ಯಮುಪಾದಾಯ ಕಾಂಚನಂ ಸಮಲಂಕೃತಂ|

01176030c ಅವತೀರ್ಣಾ ತತೋ ರಂಗಂ ದ್ರೌಪದೀ ಭರತರ್ಷಭ||

ಭರತರ್ಷಭ! ಕಾಂಚನದಿಂದ ಅಲಂಕೃತಗೊಂಡ ವೀರಮಾಲೆಯನ್ನು ಹಿಡಿದು, ದ್ರೌಪದಿಯು ರಂಗದ ಮಧ್ಯೆ ಇಳಿದಳು.

01176031a ಪುರೋಹಿತಃ ಸೋಮಕಾನಾಂ ಮಂತ್ರವಿದ್ಬ್ರಾಹ್ಮಣಃ ಶುಚಿಃ|

01176031c ಪರಿಸ್ತೀರ್ಯ ಜುಹಾವಾಗ್ನಿಮಾಜ್ಯೇನ ವಿಧಿನಾ ತದಾ||

ಮಂತ್ರವಿದ್ವಾನ, ಶುಚಿರ್ಭೂತ ಸೋಮಕರ ಪುರೋಹಿತ ಬ್ರಾಹ್ಮಣನು ಸುತ್ತಲೂ ದರ್ಭೆಯನ್ನು ಹರಡಿ, ಅಗ್ನಿಯಲ್ಲಿ ವಿಧಿವತ್ತಾಗಿ ಆಜ್ಯದ ಆಹುತಿಯನ್ನು ನೀಡಿದನು.

01176032a ಸ ತರ್ಪಯಿತ್ವಾ ಜ್ವಲನಂ ಬ್ರಾಹ್ಮಣಾನ್ಸ್ವಸ್ತಿ ವಾಚ್ಯ ಚ|

01176032c ವಾರಯಾಮಾಸ ಸರ್ವಾಣಿ ವಾದಿತ್ರಾಣಿ ಸಮಂತತಃ||

ಅಗ್ನಿಯನ್ನೂ ಮತ್ತು ಬ್ರಾಹ್ಮಣರನ್ನೂ ತೃಪ್ತಿಪಡಿಸಿದ ನಂತರ, ಸ್ವಸ್ತಿ ವಾಚನ ಮಾಡಿ, ಎಲ್ಲಾ ಕಡೆಯಲ್ಲಿಯೂ ವಾದ್ಯಸಂಗೀತಗಳನ್ನು ನಿಲ್ಲಿಸಲು ಸೂಚಿಸಿದನು.

01176033a ನಿಃಶಬ್ಧೇ ತು ಕೃತೇ ತಸ್ಮಿನ್ಧೃಷ್ಟದ್ಯುಮ್ನೋ ವಿಶಾಂ ಪತೇ|

01176033c ರಂಗಮಧ್ಯಗತಸ್ತತ್ರ ಮೇಘಗಂಭೀರಯಾ ಗಿರಾ|

01176033e ವಾಕ್ಯಮುಚ್ಚೈರ್ಜಗಾದೇದಂ ಶ್ಲಕ್ಷ್ಣಮರ್ಥವದುತ್ತಮಂ||

ಮಹಾರಾಜ! ನಿಃಶಬ್ಧವಾದ ಕೂಡಲೇ ಧೃಷ್ಟದ್ಯುಮ್ನನು ರಂಗಮಧ್ಯಕ್ಕೆ ಹೋಗಿ, ಮೇಘಗಂಭೀರ ಧ್ವನಿಯಲ್ಲಿ ಈ ಸುಲಕ್ಷಣ ಅರ್ಥಗರ್ಭಿತ ಮಾತುಗಳನ್ನು ಆಡಿದನು:

01176034a ಇದಂ ಧನುರ್ಲಕ್ಷ್ಯಮಿಮೇ ಚ ಬಾಣಾಃ

                        ಶೃಣ್ವಂತು ಮೇ ಪಾರ್ಥಿವಾಃ ಸರ್ವ ಏವ|

01176034c ಯಂತ್ರಚ್ಛಿದ್ರೇಣಾಭ್ಯತಿಕ್ರಮ್ಯ ಲಕ್ಷ್ಯಂ

                        ಸಮರ್ಪಯಧ್ವಂ ಖಗಮೈರ್ದಶಾರ್ಧೈಃ||

“ಇಲ್ಲಿ ನೆರೆದಿರುವ ರಾಜರುಗಳೆಲ್ಲ ಕೇಳಿರಿ! ಈ ಬಿಲ್ಲು, ಲಕ್ಷ್ಯ ಮತ್ತು ಬಾಣಗಳನ್ನು ಸರಿಯಾಗಿ ನೋಡಿಕೊಳ್ಳಿ. ನೀವು ಚಕ್ರದಲ್ಲಿರುವ ಛಿದ್ರದ ಮೂಲಕ ಈ ಐದು ಬಾಣಗಳನ್ನು ಬಿಟ್ಟು ಆ ಲಕ್ಷ್ಯವನ್ನು ಹೊಡೆಯಬೇಕು.

01176035a ಏತತ್ಕರ್ತಾ ಕರ್ಮ ಸುದುಷ್ಕರಂ ಯಃ

                        ಕುಲೇನ ರೂಪೇಣ ಬಲೇನ ಯುಕ್ತಃ|

01176035c ತಸ್ಯಾದ್ಯ ಭಾರ್ಯಾ ಭಗಿನೀ ಮಮೇಯಂ

                        ಕೃಷ್ಣಾ ಭವಿತ್ರೀ ನ ಮೃಷಾ ಬ್ರವೀಮಿ||

ಕುಲ, ರೂಪ ಮತ್ತು ಬಲವಂತ ಯಾರು ಈ ದುಷ್ಕರ ಕಾರ್ಯವನ್ನು ಮಾಡುತ್ತಾನೆಯೋ ಅವನಿಗೇ ನನ್ನ ತಂಗಿ ಕೃಷ್ಣೆಯು ಪತ್ನಿಯಾಗಿ ಹೋಗುತ್ತಾಳೆ ಎಂಬ ಭವಿಷ್ಯವಾಣಿಯನ್ನು ನುಡಿಯುತ್ತೇನೆ.”

01176036a ತಾನೇವಮುಕ್ತ್ವಾ ದ್ರುಪದಸ್ಯ ಪುತ್ರಃ

                        ಪಶ್ಚಾದಿದಂ ದ್ರೌಪದೀಮಭ್ಯುವಾಚ|

01176036c ನಾಮ್ನಾ ಚ ಗೋತ್ರೇಣ ಚ ಕರ್ಮಣಾ ಚ

                        ಸಂಕೀರ್ತಯಂಸ್ತಾನ್ನೃಪಪತೀನ್ಸಮೇತಾನ್||

ಈ ರೀತಿ ಹೇಳಿದ ನಂತರ ದ್ರುಪದ ಪುತ್ರನು, ದ್ರೌಪದಿಗೆ ಅಲ್ಲಿ ನೆರೆದಿರುವ ಎಲ್ಲಾ ನೃಪತಿಗಳ ಹೆಸರು, ಗೋತ್ರ, ಮತ್ತು ಕಾರ್ಯಗಳನ್ನು ಹೊಗಳ ತೊಡಗಿದನು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ಧೃಷ್ಟಧ್ಯುಮ್ನವಾಕ್ಯೇ ಷಟ್‌ಸಪ್ತತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ಧೃಷ್ಟಧ್ಯುಮ್ನವಾಕ್ಯದಲ್ಲಿ ನೂರಾಎಪ್ಪತ್ತಾರನೆಯ ಅಧ್ಯಾಯವು.

Image result for indian birds images

Comments are closed.