Adi Parva: Chapter 175

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ: ಸ್ವಯಂವರ ಪರ್ವ

೧೭೫

ಬ್ರಾಹ್ಮಣರೊಂದಿಗೆ ದ್ರೌಪದೀ ಸ್ವಯಂವರದ ಕುರಿತು ಮಾತನಾಡಿಕೊಳ್ಳುತ್ತಾ ಬ್ರಾಹ್ಮಣ ವೇಶದಲ್ಲಿದ್ದ ಪಾಂಡವರು ಪಾಂಚಾಲ ನಗರಿಗೆ ಪ್ರಯಾಣಿಸಿದ್ದುದು (೧-೨೦).

01175001 ವೈಶಂಪಾಯನ ಉವಾಚ|

01175001a ತತಸ್ತೇ ನರಶಾರ್ದೂಲಾ ಭ್ರಾತರಃ ಪಂಚ ಪಾಂಡವಾಃ|

01175001c ಪ್ರಯಯುರ್ದ್ರೌಪದೀಂ ದ್ರಷ್ಟುಂ ತಂ ಚ ದೇವಮಹೋತ್ಸವಂ||

ವೈಶಂಪಾಯನನು ಹೇಳಿದನು: “ಆ ನರ ಶಾರ್ದೂಲ ಐವರು ಪಾಂಡವ ಸೋದರರೂ ದ್ರೌಪದಿಯನ್ನು ಮತ್ತು ಆ ದೇವಮಹೋತ್ಸವವನ್ನು ನೋಡಲು ಪ್ರಯಾಣಿಸಿದರು.

01175002a ತೇ ಪ್ರಯಾತಾ ನರವ್ಯಾಘ್ರಾ ಮಾತ್ರಾ ಸಹ ಪರಂತಪಾಃ|

01175002c ಬ್ರಾಹ್ಮಣಾನ್ದದೃಶುರ್ಮಾರ್ಗೇ ಗಚ್ಛತಃ ಸಗಣಾನ್ಬಹೂನ್||

ಪರಂತಪ ನರವ್ಯಾಘ್ರರು ತಮ್ಮ ತಾಯಿಯ ಜೊತೆಗೂಡಿ ಹೋಗುತ್ತಿರುವಾಗ ಅದೇ ದಾರಿಯಲ್ಲಿ ಗುಂಪು-ಗುಂಪಾಗಿ ಪ್ರಯಾಣಿಸುತ್ತಿರುವ ಹಲವಾರು ಬ್ರಾಹ್ಮಣರನ್ನು ಕಂಡರು.

01175003a ತಾನೂಚುರ್ಬ್ರಾಹ್ಮಣಾ ರಾಜನ್ಪಾಂಡವಾನ್ಬ್ರಹ್ಮಚಾರಿಣಃ|

01175003c ಕ್ವ ಭವಂತೋ ಗಮಿಷ್ಯಂತಿ ಕುತೋ ವಾಗಚ್ಛತೇತಿ ಹ||

ರಾಜ! ಬ್ರಹ್ಮಚಾರಿ ರೂಪದಲ್ಲಿ ಪ್ರಯಾಣಿಸುತ್ತಿರುವ ಪಾಂಡವರಿಗೆ ಆ ಬ್ರಾಹ್ಮಣರು ಕೇಳಿದರು: “ನೀವು ಎಲ್ಲಿಗೆ ಪ್ರಯಾಣ ಮಾಡುತ್ತಿರುವಿರಿ ಮತ್ತು ಎಲ್ಲಿಂದ ಬಂದಿರಿ?”

01175004 ಯುಧಿಷ್ಠಿರ ಉವಾಚ|

01175004a ಆಗತಾನೇಕಚಕ್ರಾಯಾಃ ಸೋದರ್ಯಾನ್ದೇವದರ್ಶಿನಃ|

01175004c ಭವಂತೋ ಹಿ ವಿಜಾನಂತು ಸಹಿತಾನ್ಮಾತೃಚಾರಿಣಃ||

ಯುಧಿಷ್ಠಿರನು ಹೇಳಿದನು: “ದೇವದರ್ಶಿಗಳೇ! ನಾವು ಸಹೋದರರೆಂದು ತಿಳಿಯಿರಿ. ನಾವು ಏಕಚಕ್ರದಿಂದ ಬರುತ್ತಿದ್ದೇವೆ ಮತ್ತು ನಮ್ಮ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದೇವೆ.”

01175005 ಬ್ರಾಹ್ಮಣಾ ಊಚುಃ|

01175005a ಗಚ್ಛತಾದ್ಯೈವ ಪಾಂಚಾಲಾನ್ದ್ರುಪದಸ್ಯ ನಿವೇಶನಂ|

01175005c ಸ್ವಯಂವರೋ ಮಹಾಂಸ್ತತ್ರ ಭವಿತಾ ಸುಮಹಾಧನಃ||

ಬ್ರಾಹ್ಮಣರು ಹೇಳಿದರು: “ಹಾಗಿದ್ದರೆ ನೀವು ಪಾಂಚಾಲ ದ್ರುಪದನ ನಗರಿಗೆ ಹೋಗಬೇಕು. ಅಲ್ಲಿ ಒಂದು ತುಂಬಾ ಧನಯುಕ್ತ ದೊಡ್ಡ ಸ್ವಯಂವರವು ಜರುಗಲಿದೆ.

01175006a ಏಕಸಾರ್ಥಂ ಪ್ರಯಾತಾಃ ಸ್ಮೋ ವಯಮಪ್ಯತ್ರ ಗಾಮಿನಃ|

01175006c ತತ್ರ ಹ್ಯದ್ಭುತಸಂಕಾಶೋ ಭವಿತಾ ಸುಮಹೋತ್ಸವಃ||

ನಾವೆಲ್ಲರೂ ಒಟ್ಟಿಗೆ ಒಂದೇ ದೊಡ್ಡ ಗುಂಪಿನಲ್ಲಿ ಅಲ್ಲಿಗೇ ಹೋಗುತ್ತಿರುವೆವು. ಅಲ್ಲಿ ಅದ್ಭುತ ಮತ್ತು ಸುಮನೋಹರ ಉತ್ಸವವು ನಡೆಯಲಿದೆ.

01175007a ಯಜ್ಞಸೇನಸ್ಯ ದುಹಿತಾ ದ್ರುಪದಸ್ಯ ಮಹಾತ್ಮನಃ|

01175007c ವೇದೀಮಧ್ಯಾತ್ಸಮುತ್ಪನ್ನಾ ಪದ್ಮಪತ್ರನಿಭೇಕ್ಷಣಾ||

ಮಹಾತ್ಮ ಯಜ್ಞಸೇನ ದ್ರುಪದನ ಮಗಳು ಪದ್ಮಪತ್ರಲೋಚನೆಯು ಯಜ್ಞಕುಂಡದ ಮಧ್ಯದಿಂದ ಜನಿಸಿದವಳು.

01175008a ದರ್ಶನೀಯಾನವದ್ಯಾಂಗೀ ಸುಕುಮಾರೀ ಮನಸ್ವಿನೀ|

01175008c ಧೃಷ್ಟದ್ಯುಮ್ನಸ್ಯ ಭಗಿನೀ ದ್ರೋಣಶತ್ರೋಃ ಪ್ರತಾಪಿನಃ||

01175009a ಯೋ ಜಾತಃ ಕವಚೀ ಖಡ್ಗೀ ಸಶರಃ ಸಶರಾಸನಃ|

01175009c ಸುಸಮಿದ್ಧೇ ಮಹಾಬಾಹುಃ ಪಾವಕೇ ಪಾವಕಪ್ರಭಃ||

ಅನವದ್ಯಾಂಗಿಯೂ, ದರ್ಶನೀಯಳೂ, ಸುಕುಮಾರಿಯೂ, ಮನಸ್ವಿನಿಯೂ ಆದ ಅವಳು ಖಡ್ಗ ಮತ್ತು ಧನುರ್ಬಾಣಗಳ ಸಹಿತ, ಕವಚಧರಿಸಿ ದ್ರೋಣಶತ್ರುವಾಗಿ ಅಗ್ನಿಯಲ್ಲಿ ಜನಿಸಿದ ಅಗ್ನಿಪ್ರಕಾಶಮಾನ, ಮಹಾಬಾಹು ಪ್ರತಾಪಿ ಧೃಷ್ಟದ್ಯುಮ್ನನ ತಂಗಿ.

01175010a ಸ್ವಸಾ ತಸ್ಯಾನವದ್ಯಾಂಗೀ ದ್ರೌಪದೀ ತನುಮಧ್ಯಮಾ|

01175010c ನೀಲೋತ್ಪಲಸಮೋ ಗಂಧೋ ಯಸ್ಯಾಃ ಕ್ರೋಶಾತ್ಪ್ರವಾಯತಿ||

01175011a ತಾಂ ಯಜ್ಞಸೇನಸ್ಯ ಸುತಾಂ ಸ್ವಯಂವರಕೃತಕ್ಷಣಾಂ|

01175011c ಗಚ್ಛಾಮಹೇ ವಯಂ ದ್ರಷ್ಟುಂ ತಂ ಚ ದೇವಮಹೋತ್ಸವಂ||

ಅವನ ತಂಗಿ ಅನವದ್ಯಾಂಗಿ, ಕೃಶಮದ್ಯಮೆ, ನೀಲಕಮಲದಂತೆ ತನ್ನ ಸುಗಂಧವನ್ನು ಕೋಶ ದೂರದವರೆಗೂ ಪ್ರಸರಿಸುವ, ಯಜ್ಞಸೇನನ ಮಗಳು ದ್ರೌಪದಿಯು ತನ್ನ ಸ್ವಯಂವರವನ್ನು ಇಟ್ಟುಕೊಂಡಿದ್ದಾಳೆ. ಅವಳನ್ನು ಮತ್ತು ಆ ದೇವಮಹೋತ್ಸವವನ್ನು ನೋಡಲು ನಾವೆಲ್ಲರೂ ಹೋಗುತ್ತಿದ್ದೇವೆ.

01175012a ರಾಜಾನೋ ರಾಜಪುತ್ರಾಶ್ಚ ಯಜ್ವಾನೋ ಭೂರಿದಕ್ಷಿಣಾಃ|

01175012c ಸ್ವಾಧ್ಯಾಯವಂತಃ ಶುಚಯೋ ಮಹಾತ್ಮಾನೋ ಯತವ್ರತಾಃ||

01175013a ತರುಣಾ ದರ್ಶನೀಯಾಶ್ಚ ನಾನಾದೇಶಸಮಾಗತಾಃ|

01175013c ಮಹಾರಥಾಃ ಕೃತಾಸ್ತ್ರಾಶ್ಚ ಸಮುಪೈಷ್ಯಂತಿ ಭೂಮಿಪಾಃ||

ತಮ್ಮ ಪುರೋಹಿತರಿಗೆ ಶ್ರೀಮಂತ ದಕ್ಷಿಣೆಗಳನ್ನು ಕೊಡುವ ಯಜ್ವಾನ, ಸ್ವಾಧ್ಯಾಯವಂತ, ಶುಚಿರ್ಭೂತ, ಮಹಾತ್ಮ, ವ್ರತನಿರತ, ತರುಣ ದರ್ಶನೀಯ, ನಾನಾ ದೇಶಗಳಿಂದ ಆಗಮಿಸುವ, ಅಸ್ತ್ರಕೋವಿದ, ಮಹಾರಥಿ ಭೂಮಿಪ ರಾಜರು ಮತ್ತು ರಾಜಪುತ್ರರೆಲ್ಲರೂ ಅಲ್ಲಿಗೆ ಆಗಮಿಸಲಿದ್ದಾರೆ.

01175014a ತೇ ತತ್ರ ವಿವಿಧಾನ್ದಾಯಾನ್ವಿಜಯಾರ್ಥಂ ನರೇಶ್ವರಾಃ|

01175014c ಪ್ರದಾಸ್ಯಂತಿ ಧನಂ ಗಾಶ್ಚ ಭಕ್ಷ್ಯಂ ಭೋಜ್ಯಂ ಚ ಸರ್ವಶಃ||

ಅಲ್ಲಿರುವ ಎಲ್ಲ ನರೇಶ್ವರರೂ ವಿಜಯಪಾಲನೆಗಾಗಿ ವಿವಿಧರೀತಿಯ ದಾನಗಳನ್ನು - ಧನ, ಗೋವು, ಭಕ್ಷ್ಯ ಭೋಜ್ಯ ಮುಂತಾದವುಗಳನ್ನು ನೀಡಲಿದ್ದಾರೆ.

01175015a ಪ್ರತಿಗೃಹ್ಯ ಚ ತತ್ಸರ್ವಂ ದೃಷ್ಟ್ವಾ ಚೈವ ಸ್ವಯಂವರಂ|

01175015c ಅನುಭೂಯೋತ್ಸವಂ ಚೈವ ಗಮಿಷ್ಯಾಮೋ ಯಥೇಪ್ಸಿತಂ||

ಅವೆಲ್ಲವನ್ನೂ ಸ್ವೀಕರಿಸಿ, ಸ್ವಯಂವರವನ್ನು ನೋಡಿ, ಉತ್ಸವವನ್ನು ಆನಂದಿಸಿ, ಮುಂದೆ ನಾವು ನಮಗೆ ಇಷ್ಟವಿದ್ದಲ್ಲಿಗೆ ಪ್ರಯಾಣ ಮಾಡುವೆವು.

01175016a ನಟಾ ವೈತಾಲಿಕಾಶ್ಚೈವ ನರ್ತಕಾಃ ಸೂತಮಾಗಧಾಃ|

01175016c ನಿಯೋಧಕಾಶ್ಚ ದೇಶೇಭ್ಯಃ ಸಮೇಷ್ಯಂತಿ ಮಹಾಬಲಾಃ||

ಬೇರೆ ಬೇರೆ ದೇಶಗಳಿಂದ ನಟರು, ವೈತಾಲಿಕರು (ವಾದ್ಯಗಾರರು), ನರ್ತಕರು, ಸೂತ-ಮಾಗಧರು, ಮಹಾಬಲ ಮಲ್ಲಯುದ್ಧ ಜಟ್ಟಿಗಳೂ ಬರಲಿದ್ದಾರೆ.

01175017a ಏವಂ ಕೌತೂಹಲಂ ಕೃತ್ವಾ ದೃಷ್ಟ್ವಾ ಚ ಪ್ರತಿಗೃಹ್ಯ ಚ|

01175017c ಸಹಾಸ್ಮಾಭಿರ್ಮಹಾತ್ಮಾನಃ ಪುನಃ ಪ್ರತಿನಿವರ್ತ್ಸ್ಯಥ||

ಇಂತಹ ಕೌತೂಹಲವನ್ನು ನೋಡಿ, ಪ್ರತಿಗ್ರಹಣ ಮಾಡಿ, ಪುನಹ ನಮ್ಮ ಜೊತೆಗೇ ಮಹಾತ್ಮರಾದ ನೀವು ಹಿಂದಿರುಗಬಹುದು.

01175018a ದರ್ಶನೀಯಾಂಶ್ಚ ವಃ ಸರ್ವಾನ್ದೇವರೂಪಾನವಸ್ಥಿತಾನ್|

01175018c ಸಮೀಕ್ಷ್ಯ ಕೃಷ್ಣಾ ವರಯೇತ್ಸಂಗತ್ಯಾನ್ಯತಮಂ ವರಂ||

ದೇವರೂಪಿ ನಿಮ್ಮ ನಿಲುವನ್ನು ನೋಡಿ ಕೃಷ್ಣೆಯು ನಿಮ್ಮಲ್ಲೇ ಒಬ್ಬನನ್ನು ವರನನ್ನಾಗಿ ಆರಿಸಲೂ ಬಹುದು!

01175019a ಅಯಂ ಭ್ರಾತಾ ತವ ಶ್ರೀಮಾನ್ದರ್ಶನೀಯೋ ಮಹಾಭುಜಃ|

01175019c ನಿಯುಧ್ಯಮಾನೋ ವಿಜಯೇತ್ಸಂಗತ್ಯಾ ದ್ರವಿಣಂ ಬಹು||

ದರ್ಶನೀಯ ಮಹಾಭುಜ ಈ ನಿನ್ನ ಶ್ರೀಮಾನ್ ತಮ್ಮನು ಮಲ್ಲಯುದ್ಧದ ಆಟದಲ್ಲಿ ಗೆದ್ದು ಬಹಳಷ್ಟು ಹಣವನ್ನೂ ಗಳಿಸಬಹುದು!”

01175020 ಯುಧಿಷ್ಠಿರ ಉವಾಚ|

01175020a ಪರಮಂ ಭೋ ಗಮಿಷ್ಯಾಮೋ ದ್ರಷ್ಟುಂ ದೇವಮಹೋತ್ಸವಂ|

01175020c ಭವದ್ಭಿಃ ಸಹಿತಾಃ ಸರ್ವೇ ಕನ್ಯಾಯಾಸ್ತಂ ಸ್ವಯಂವರಂ||

ಯುಧಿಷ್ಠಿರನು ಹೇಳಿದನು: “ಅತ್ಯುತ್ತಮ ದೇವಮಹೋತ್ಸವದಂತಿರುವ ಆ ಕನ್ಯೆಯ ಸ್ವಯಂವರವನ್ನು ನೋಡಲು ನಾವೆಲ್ಲರೂ ನಿಮ್ಮೊಡನೆ ಪ್ರಯಾಣಿಸುತ್ತೇವೆ.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ಪಾಂಡವಾಗಮನೇ ಪಂಚಸಪ್ತತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ಪಾಂಡವಾಗಮನದಲ್ಲಿ ನೂರಾಎಪ್ಪತ್ತೈದನೆಯ ಅಧ್ಯಾಯವು.

Image result for indian flowers

Comments are closed.