Adi Parva: Chapter 167

ಆದಿ ಪರ್ವ: ಚೈತ್ರರಥ ಪರ್ವ

೧೬೭

ಪುತ್ರಶೋಕದಿಂದ ಕ್ಷಮಾವಂತ ವಸಿಷ್ಠನು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿ ಅಸಫಲನಾಗುವುದು (೧-೧೧). ಸೊಸೆ ಅದೃಶ್ಯವಂತಿಯು ಶಕ್ತಿಯಿಂದ ಗರ್ಭಿಣಿಯಾಗಿದ್ದಾಳೆಂದು ತಿಳಿದ ವಸಿಷ್ಠನು ಆತ್ಮಹತ್ಯೆಯಿಂದ ವಿಮುಖನಾದುದು (೧೨-೧೫). ಗರ್ಭಿಣಿ ಸೊಸೆಯೊಂದಿಗೆ ಬರುತ್ತಿರುವಾಗ ಮಾರ್ಗದಲ್ಲಿ ರಾಕ್ಷಸನಿಂದ ಆವೇಶಗೊಂಡಿದ್ದ, ನರಭಕ್ಷಕನಾಗಿದ್ದ ಕಲ್ಮಾಷಪಾದನು ಎದುರಾಗಲು ಅದೃಶ್ಯವಂತಿಯು ಹೆದರಿದುದು (೧೬-೨೧).

01167001 ಗಂಧರ್ವ ಉವಾಚ|

01167001a ತತೋ ದೃಷ್ಟ್ವಾಶ್ರಮಪದಂ ರಹಿತಂ ತೈಃ ಸುತೈರ್ಮುನಿಃ|

01167001c ನಿರ್ಜಗಾಮ ಸುದುಃಖಾರ್ತಃ ಪುನರೇವಾಶ್ರಮಾತ್ತತಃ||

ಗಂಧರ್ವನು ಹೇಳಿದನು: “ಮಕ್ಕಳಿಲ್ಲದ ಆಶ್ರಮಪದವನ್ನು ನೋಡಿದ ಮುನಿಯು ಅತೀವ ದುಃಖಾರ್ತನಾಗಿ ಪುನಃ ಆಶ್ರಮದಿಂದ ಹೊರ ಹೊರಟನು.

01167002a ಸೋಽಪಶ್ಯತ್ಸರಿತಂ ಪೂರ್ಣಾಂ ಪ್ರಾವೃತ್ಕಾಲೇ ನವಾಂಭಸಾ|

01167002c ವೃಕ್ಷಾನ್ಬಹುವಿಧಾನ್ಪಾರ್ಥ ವಹಂತೀಂ ತೀರಜಾನ್ಬಹೂನ್||

ಪಾರ್ಥ! ಮಳೆಗಾಲದ ಹೊಸನೀರಿನಿಂದ ಹರಿಯುತ್ತಿರುವ ನದಿಯೊಂದನ್ನು ಕಂಡನು. ದಡದಲ್ಲಿ ಹುಟ್ಟಿದ ಬಹುವಿಧ ವೃಕ್ಷಗಳು ಅದರಲ್ಲಿ ತೇಲುತ್ತಿದ್ದವು.

01167003a ಅಥ ಚಿಂತಾಂ ಸಮಾಪೇದೇ ಪುನಃ ಪೌರವನಂದನ|

01167003c ಅಂಭಸ್ಯಸ್ಯಾ ನಿಮಜ್ಜೇಯಮಿತಿ ದುಃಖಸಮನ್ವಿತಃ|

ಪೌರವನಂದನ! ಆಗ ಆ ದುಃಖಸಮನ್ವಿತನು ಮತ್ತೊಮ್ಮೆ ಈ ನೀರಿನಲ್ಲಿ ಬಿದ್ದು ಮುಳುಗಿಹೋಗುತ್ತೇನೆ ಎಂದು ಯೋಚಿಸಿದನು.

01167004a ತತಃ ಪಾಶೈಸ್ತದಾತ್ಮಾನಂ ಗಾಢಂ ಬದ್ಧ್ವಾ ಮಹಾಮುನಿಃ|

01167004c ತಸ್ಯಾ ಜಲೇ ಮಹಾನದ್ಯಾ ನಿಮಮಜ್ಜ ಸುದುಃಖಿತಃ||

ಸುದುಃಖಿತನಾದ ಮಹಾಮುನಿಯು ಹಗ್ಗಗಳಿಂದ ತನ್ನನ್ನು ತಾನೇ ಬಿಗಿಯಾಗಿ ಕಟ್ಟಿಕೊಂಡು ಮಹಾನದಿಯ ನೀರಿನಲ್ಲಿ ಧುಮುಕಿದನು.

01167005a ಅಥ ಚಿತ್ತ್ವಾ ನದೀ ಪಾಶಾಂಸ್ತಸ್ಯಾರಿಬಲಮರ್ದನ|

01167005c ಸಮಸ್ಥಂ ತಮೃಷಿಂ ಕೃತ್ವಾ ವಿಪಾಶಂ ಸಮವಾಸೃಜತ್||

ಅರಿಬಲಮರ್ದನ! ಆದರೆ ನದಿಯು ಅವನ ಪಾಶಗಳನ್ನು ಕತ್ತರಿಸಿ, ಅವನನ್ನು ವಿಪಾಶನನ್ನಾಗಿ ಮಾಡಿ ಸಮಸ್ಥ ಋಷಿಯನ್ನು ತನ್ನ ತೀರಕ್ಕೆ ತಂದು ಬಿಟ್ಟಿತು.

01167006a ಉತ್ತತಾರ ತತಃ ಪಾಶೈರ್ವಿಮುಕ್ತಃ ಸ ಮಹಾನೃಷಿಃ|

01167006c ವಿಪಾಶೇತಿ ಚ ನಾಮಾಸ್ಯಾ ನದ್ಯಾಶ್ಚಕ್ರೇ ಮಹಾನೃಷಿಃ||

ಪಾಶಗಳಿಂದ ವಿಮುಕ್ತನಾದ ಮಹಾನೃಷಿಯು ನದಿಯಿಂದ ಮೇಲಕ್ಕೆದ್ದನು. ಮಹಾನೃಷಿಯು ಆ ನದಿಗೆ ವಿಪಾಶ ಎಂಬ ಹೆಸರನ್ನಿತ್ತನು.

01167007a ಶೋಕೇ ಬುದ್ಧಿಂ ತತಶ್ಚಕ್ರೇ ನ ಚೈಕತ್ರ ವ್ಯತಿಷ್ಠತ|

01167007c ಸೋಽಗಚ್ಛತ್ಪರ್ವತಾಂಶ್ಚೈವ ಸರಿತಶ್ಚ ಸರಾಂಸಿ ಚ||

ತನ್ನ ಬುದ್ಧಿಯನ್ನು ಶೋಕದಲ್ಲಿಯೇ ನಿರತವಾಗಿರಿಸಿ ಒಂದೇ ಸ್ಥಳದಲ್ಲಿ ನಿಲ್ಲದೇ ಪರ್ವತ, ಸರಿತ ಮತ್ತು ಸಾರಸಗಳ ಕಡೆ ಹೋದನು.

01167008a ತತಃ ಸ ಪುನರೇವರ್ಷಿರ್ನದೀಂ ಹೈಮವತೀಂ ತದಾ|

01167008c ಚಂಡಗ್ರಾಹವತೀಂ ದೃಷ್ಟ್ವಾ ತಸ್ಯಾಃ ಸ್ರೋತಸ್ಯವಾಪತತ್||

ಕ್ರೂರ ಮೊಸಳೆಗಳಿಂದ ತುಂಬಿದ ಹಿಮಾಲಯದಿಂದ ಹರಿದು ಬರುತ್ತಿರುವ ನದಿಯೊಂದನ್ನು ನೋಡಿದ ಋಷಿಯು ಪುನಃ ಅದರಲ್ಲಿ ಧುಮುಕಿದನು.

01167009a ಸಾ ತಮಗ್ನಿಸಮಂ ವಿಪ್ರಮನುಚಿಂತ್ಯ ಸರಿದ್ವರಾ|

01167009c ಶತಧಾ ವಿದ್ರುತಾ ಯಸ್ಮಾಚ್ಶತದ್ರುರಿತಿ ವಿಶ್ರುತಾ||

ಆದರೆ ಆ ಸರಿದ್ವರೆಯು ಅವನು ಅಗ್ನಿಸಮ ವಿಪ್ರನೆಂದು ಭಾವಿಸಿ ನೂರಾರು ದಿಕ್ಕುಗಳಲ್ಲಿ ಹರಿಯ ತೊಡಗಿತು. ಆದುದರಿಂದಲೇ ಅದು ಶತಾದ್ರು ಎಂದು ವಿಶ್ರುತವಾಗಿದೆ.

01167010a ತತಃ ಸ್ಥಲಗತಂ ದೃಷ್ಟ್ವಾ ತತ್ರಾಪ್ಯಾತ್ಮಾನಮಾತ್ಮನಾ|

01167010c ಮರ್ತುಂ ನ ಶಕ್ಯಮಿತ್ಯುಕ್ತ್ವಾ ಪುನರೇವಾಶ್ರಮಂ ಯಯೌ||

ತಾನು ದಡದ ಮೇಲೆಯೇ ಇದ್ದುದನ್ನು ಕಂಡ ಅವನು ನನಗೆ ಸಾಯಲು ಶಕ್ಯವಿಲ್ಲ ಎಂದು ಪುನಃ ತನ್ನ ಆಶ್ರಮಕ್ಕೆ ಬಂದನು.

01167011a ವಧ್ವಾದೃಶ್ಯಂತ್ಯಾನುಗತ ಆಶ್ರಮಾಭಿಮುಖೋ ವ್ರಜನ್|

01167011c ಅಥ ಶುಶ್ರಾವ ಸಂಗತ್ಯಾ ವೇದಾಧ್ಯಯನನಿಃಸ್ವನಂ|

01167011e ಪೃಷ್ಠತಃ ಪರಿಪೂರ್ಣಾರ್ಥೈಃ ಷಡ್ಭಿರಂಗೈರಲಂಕೃತಂ||

ಆಶ್ರಮಾಭಿಮುಖನಾಗಿ ಬರುತ್ತಿರುವಾಗ ಅವನ ಸೊಸೆ ಅದೃಶ್ಯಂತಿಯು ಹಿಂಬಾಲಿಸುತ್ತಿದ್ದಳು. ಆಗ ಹತ್ತಿರದಲ್ಲಿಯೇ ಷಡಂಗಗಳಿಂದ ಅಲಂಕೃತ ಪರಿಪೂರ್ಣಾರ್ಥಗಳಿಂದ ಕೂಡಿದ ವೇದಾಧ್ಯಯನದ ಸ್ವರವನ್ನು ಕೇಳಿದನು.

01167012a ಅನುವ್ರಜತಿ ಕೋ ನ್ವೇಷ ಮಾಮಿತ್ಯೇವ ಚ ಸೋಽಬ್ರವೀತ್|

01167012c ಅಹಂ ತ್ವದೃಶ್ಯತೀ ನಾಮ್ನಾ ತಂ ಸ್ನುಷಾ ಪ್ರತ್ಯಭಾಷತ|

01167012e ಶಕ್ತೇರ್ಭಾರ್ಯಾ ಮಹಾಭಾಗ ತಪೋಯುಕ್ತಾ ತಪಸ್ವಿನೀ||

“ನನ್ನನ್ನು ಈ ರೀತಿ ಅನುಸರಿಸುತ್ತಿರುವವರು ಯಾರು?” ಎಂದು ಅವನು ಕೇಳಿದನು. ಅವಳು “ನಾನು ಅದೃಶ್ಯತೀ ಎಂಬ ಹೆಸರಿನ ನಿನ್ನ ಸೊಸೆ. ಮಹಾಭಾಗ! ಶಕ್ತಿಯ ಪತ್ನಿ, ತಪೋನಿರತೆ ತಪಸ್ವಿನೀ!” ಎಂದಳು.

01167013 ವಸಿಷ್ಠ ಉವಾಚ|

01167013a ಪುತ್ರಿ ಕಸ್ಯೈಷ ಸಾಂಗಸ್ಯ ವೇದಸ್ಯಾಧ್ಯಯನಸ್ವನಃ|

01167013c ಪುರಾ ಸಾಂಗಸ್ಯ ವೇದಸ್ಯ ಶಕ್ತೇರಿವ ಮಯಾ ಶ್ರುತಃ||

ವಸಿಷ್ಠನು ಹೇಳಿದನು: “ಪುತ್ರಿ! ಹಿಂದೆ ಶಕ್ತಿಯಿಂದ ನನಗೆ ಕೇಳಿಬರುತ್ತಿದ್ದಂತೆ ಈಗಲೂ ಹತ್ತಿರದಿಂದ ಕೇಳಿಬರುತ್ತಿರುವ ಈ ವೇದಾಧ್ಯಯನದ ಸ್ವರವು ಯಾರಿಂದ ಕೇಳಿಬರುತ್ತಿದೆ?”

01167014 ಅದೃಶ್ಯಂತ್ಯುವಾಚ|

01167014a ಅಯಂ ಕುಕ್ಷೌ ಸಮುತ್ಪನ್ನಃ ಶಕ್ತೇರ್ಗರ್ಭಃ ಸುತಸ್ಯ ತೇ|

01167014c ಸಮಾ ದ್ವಾದಶ ತಸ್ಯೇಹ ವೇದಾನಭ್ಯಸತೋ ಮುನೇ||

ಅದೃಶ್ಯಂತಿಯು ಹೇಳಿದಳು: “ಕಳೆದ ಹನ್ನೆರಡು ವರ್ಷಗಳಿಂದ ನಿನ್ನ ಸುತ ಶಕ್ತಿಯ ಗರ್ಭವು ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ಮುನಿ! ಇದು ವೇದಾಭ್ಯಾಸ ಮಾಡುತ್ತಿರುವ ಅವನ ಸ್ವರ.””

01167015 ಗಂಧರ್ವ ಉವಾಚ|

01167015a ಏವಮುಕ್ತಸ್ತತೋ ಹೃಷ್ಟೋ ವಸಿಷ್ಠಃ ಶ್ರೇಷ್ಠಭಾಗೃಷಿಃ|

01167015c ಅಸ್ತಿ ಸಂತಾನಮಿತ್ಯುಕ್ತ್ವಾ ಮೃತ್ಯೋಃ ಪಾರ್ಥ ನ್ಯವರ್ತತ||

ಗಂಧರ್ವನು ಹೇಳಿದನು: “ಪಾರ್ಥ! ಇದನ್ನು ಕೇಳಿದ ಶ್ರೇಷ್ಠಭಾಗ ಋಷಿ ವಸಿಷ್ಠನು ಹೃಷ್ಟನಾಗಿ “ಸಂತಾನವಿದೆ!” ಎಂದು ಹೇಳಿ ಮೃತ್ಯುವಿನ ದಾರಿಯಿಂದ ಹಿಂದುರಿಗಿದನು.

01167016a ತತಃ ಪ್ರತಿನಿವೃತ್ತಃ ಸ ತಯಾ ವಧ್ವಾ ಸಹಾನಘ|

01167016c ಕಲ್ಮಾಷಪಾದಮಾಸೀನಂ ದದರ್ಶ ವಿಜನೇ ವನೇ||

ಅನಘ! ತನ್ನ ಸೊಸೆಯೊಂದಿಗೆ ಹಿಂದಿರುಗಿ ಬರುತ್ತಿರುವಾಗ ನಿರ್ಜನ ವನದಲ್ಲಿ ಕುಳಿತಿದ್ದ ಕಲ್ಪಾಷಪಾದನನ್ನು ಕಂಡನು.

01167017a ಸ ತು ದೃಷ್ಟ್ವೈವ ತಂ ರಾಜಾ ಕ್ರುದ್ಧ ಉತ್ಥಾಯ ಭಾರತ|

01167017c ಆವಿಷ್ಟೋ ರಕ್ಷಸೋಗ್ರೇಣ ಇಯೇಷಾತ್ತುಂ ತತಃ ಸ್ಮ ತಂ||

ಭಾರತ! ಅವನನ್ನು ನೋಡಿದ ಕೂಡಲೇ ಉಗ್ರ ರಾಕ್ಷಸನಿಂದ ಆವಿಷ್ಟಗೊಂಡಿದ್ದ ಆ ರಾಜನು ಕೃದ್ಧನಾಗಿ ಮೇಲೆದ್ದು ಅವನನ್ನೇ ಕಬಳಿಸಲು ಮುಂದಾದನು.

01167018a ಅದೃಶ್ಯಂತೀ ತು ತಂ ದೃಷ್ಟ್ವಾ ಕ್ರೂರಕರ್ಮಾಣಮಗ್ರತಃ|

01167018c ಭಯಸಂವಿಗ್ನಯಾ ವಾಚಾ ವಸಿಷ್ಠಮಿದಮಬ್ರವೀತ್||

ಅದೃಶ್ಯಂತಿಯು ಕ್ರೂರಕರ್ಮಕ್ಕೆ ಮುಂದಾಗುತ್ತಿದ್ದ ಅವನನ್ನು ನೋಡಿ ಭಯಸಂವಿಗ್ನಳಾಗಿ ವಸಿಷ್ಠನಲ್ಲಿ ಹೇಳಿದಳು:

01167019a ಅಸೌ ಮೃತ್ಯುರಿವೋಗ್ರೇಣ ದಂಡೇನ ಭಗವನ್ನಿತಃ|

01167019c ಪ್ರಗೃಹೀತೇನ ಕಾಷ್ಠೇನ ರಾಕ್ಷಸೋಽಭ್ಯೇತಿ ಭೀಷಣಃ||

“ಇದೋ! ಉಗ್ರ ದಂಡವನ್ನು ಹಿಡಿದ ಮೃತ್ಯುವಿನಂತೆ ಕಾಷ್ಠವನ್ನು ಹಿಡಿದು ಭೀಷಣ ರಾಕ್ಷಸನು ಬರುತ್ತಿದ್ದಾನೆ.

01167020a ತಂ ನಿವಾರಯಿತುಂ ಶಕ್ತೋ ನಾನ್ಯೋಽಸ್ತಿ ಭುವಿ ಕಶ್ಚನ|

01167020c ತ್ವದೃತೇಽದ್ಯ ಮಹಾಭಾಗ ಸರ್ವವೇದವಿದಾಂ ವರ||

ಮಹಾಭಾಗ! ಸರ್ವ ವೇದವಿದರಲ್ಲಿ ಶ್ರೇಷ್ಠ! ನಿನ್ನನ್ನು ಬಿಟ್ಟು ಭೂಮಿಯಲ್ಲಿ ಯಾರಿಗೂ ಅವನನ್ನು ತಡೆಯಲು ಸಾಧ್ಯವಿಲ್ಲ.

01167021a ತ್ರಾಹಿ ಮಾಂ ಭಗವನ್ಪಾಪಾದಸ್ಮಾದ್ದಾರುಣದರ್ಶನಾತ್|

01167021c ರಕ್ಷೋ ಅತ್ತುಮಿಹ ಹ್ಯಾವಾಂ ನೂನಮೇತಚ್ಚಿಕೀರ್ಷತಿ||

ಭಗವನ್! ಇಂಥಹ ದಾರುಣದೃಶ್ಯದ ಪಾಪದಿಂದ ನನ್ನನ್ನು ರಕ್ಷಿಸು. ನಿಜವಾಗಿಯೂ ಅವನು ನಮ್ಮನ್ನು ತಿನ್ನಲು ಬರುತ್ತಿದ್ದಾನೆ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ವಸಿಷ್ಠಶೋಕೇ ಸಪ್ತಷಷ್ಟ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರರಥಪರ್ವದಲ್ಲಿ ವಸಿಷ್ಠಶೋಕದಲ್ಲಿ ನೂರಾಅರವತ್ತೇಳನೆಯ ಅಧ್ಯಾಯವು.

Related image

Comments are closed.