Adi Parva: Chapter 152

ಆದಿ ಪರ್ವ: ಬಕವಧ ಪರ್ವ

೧೫೨

ಭೀಮನು ಬಕನ ಶವವನ್ನು ನಗರದ ಬಾಗಿಲಿಗೆ ಕಟ್ಟಿ ಯಾರಿಗೂ ತಿಳಿಯದಂತೆ ಹೊರಟು ಹೋದುದು (೧-೬). ಕಂಟಕವು ಕಳೆಯಿತೆಂದು ಪುರಜನರು ಹರ್ಷಿಸುವುದು (೭-೧೯).

01152001 ವೈಶಂಪಾಯನ ಉವಾಚ|

01152001a ತೇನ ಶಬ್ದೇನ ವಿತ್ರಸ್ತೋ ಜನಸ್ತಸ್ಯಾಥ ರಕ್ಷಸಃ|

01152001c ನಿಷ್ಪಪಾತ ಗೃಹಾದ್ರಾಜನ್ಸಹೈವ ಪರಿಚಾರಿಭಿಃ||

ವೈಶಂಪಾಯನನು ಹೇಳಿದನು: “ರಾಜನ್! ಆ ಶಬ್ಧದಿಂದ ಎಚ್ಚೆತ್ತ ರಾಕ್ಷಸ ಜನರೆಲ್ಲರೂ ಪರಿಚಾರಿಗಳ ಸಹಿತ ಮನೆಯಿಂದ ಹೊರಬಿದ್ದರು.

01152002a ತಾನ್ಭೀತಾನ್ವಿಗತಜ್ಞಾನಾನ್ಭೀಮಃ ಪ್ರಹರತಾಂ ವರಃ|

01152002c ಸಾಂತ್ವಯಾಮಾಸ ಬಲವಾನ್ಸಮಯೇ ಚ ನ್ಯವೇಶಯತ್||

ಮುಷ್ಠಿಯುದ್ಧದಲ್ಲಿ ಶ್ರೇಷ್ಠ ಬಲವಾನ್ ಭೀಮನು ಭೀತರಾಗಿ ಬುದ್ಧಿಕಳೆದುಕೊಂಡಿದ್ದ ಅವರನ್ನು ಸಮಾಧಾನಪಡಿಸಿ ಒಂದು ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಮಾಡಿದನು.

01152003a ನ ಹಿಂಸ್ಯಾ ಮಾನುಷಾ ಭೂಯೋ ಯುಷ್ಮಾಭಿರಿಹ ಕರ್ಹಿ ಚಿತ್|

01152003c ಹಿಂಸತಾಂ ಹಿ ವಧಃ ಶೀಘ್ರಮೇವಮೇವ ಭವೇದಿತಿ||

“ಇಲ್ಲಿರುವ ಯಾವ ಮನುಷ್ಯರಿಗೂ ಎಂದೂ ನೀವ್ಯಾರೂ ಹಿಂಸಿಸಬಾರದು. ಹಿಂಸಿಸುವವರು ಇದೇರೀತಿ ಶೀಘ್ರವಾಗಿ ಸಾಯುತ್ತಾರೆ” ಎಂದನು.

01152004a ತಸ್ಯ ತದ್ವಚನಂ ಶ್ರುತ್ವಾ ತಾನಿ ರಕ್ಷಾಂಸಿ ಭಾರತ|

01152004c ಏವಮಸ್ತ್ವಿತಿ ತಂ ಪ್ರಾಹುರ್ಜಗೃಹುಃ ಸಮಯಂ ಚ ತಂ||

ಭಾರತ! ಅವನ ಆ ಮಾತುಗಳನ್ನು ಕೇಳಿದ ಆ ರಾಕ್ಷಸರು “ಹಾಗೆಯೇ ಆಗಲಿ!”ಎಂದು ಒಪ್ಪಂದಮಾಡಿಕೊಂಡು ಹೊರಟುಹೋದರು.

01152005a ತತಃ ಪ್ರಭೃತಿ ರಕ್ಷಾಂಸಿ ತತ್ರ ಸೌಮ್ಯಾನಿ ಭಾರತ|

01152005c ನಗರೇ ಪ್ರತ್ಯದೃಶ್ಯಂತ ನರೈರ್ನಗರವಾಸಿಭಿಃ||

ಭಾರತ! ಅಂದಿನಿಂದ ಅಲ್ಲಿರುವ ರಾಕ್ಷಸರು ನಗರ ವಾಸಿಗಳನ್ನು ನಗರದ ಸುತ್ತಮುತ್ತ ನೋಡಿದರೂ ಸೌಮ್ಯರಾಗಿದ್ದರು.

01152006a ತತೋ ಭಿಮಸ್ತಮಾದಾಯ ಗತಾಸುಂ ಪುರುಷಾದಕಂ|

01152006c ದ್ವಾರದೇಶೇ ವಿನಿಕ್ಷಿಪ್ಯ ಜಗಾಮಾನುಪಲಕ್ಷಿತಃ||

ಭೀಮನು ಸತ್ತುಹೋಗಿದ್ದ ಆ ಪುರುಷಾದಕನನ್ನು ಎಳೆದು ದ್ವಾರದ ಕೆಳಗೆ ಬೀಳಿಸಿ, ಯಾರಿಗೂ ಕಾಣದ ಹಾಗೆ ಅಲ್ಲಿಂದ ಹೊರಟುಹೋದನು.

01152007a ತತಃ ಸ ಭೀಮಸ್ತಂ ಹತ್ವಾ ಗತ್ವಾ ಬ್ರಾಹ್ಮಣವೇಶ್ಮ ತತ್|

01152007c ಆಚಚಕ್ಷೇ ಯಥಾವೃತ್ತಂ ರಾಜ್ಞಃ ಸರ್ವಮಶೇಷತಃ||

ಅವನನ್ನು ಕೊಂದು ಭೀಮನು ಬ್ರಾಹ್ಮಣನ ಮನೆಗೆ ಹೋಗಿ ರಾಜ ಯುಧಿಷ್ಠಿರನಿಗೆ ಏನನ್ನೂ ಬಿಡದೆ ಎಲ್ಲವನ್ನೂ ಯಥಾವತ್ತಾಗಿ ವರದಿಮಾಡಿದನು.

01152008a ತತೋ ನರಾ ವಿನಿಷ್ಕ್ರಾಂತಾ ನಗರಾತ್ಕಾಲ್ಯಮೇವ ತು|

01152008c ದದೃಶುರ್ನಿಹತಂ ಭೂಮೌ ರಾಕ್ಷಸಂ ರುಧಿರೋಕ್ಷಿತಂ||

01152009a ತಮದ್ರಿಕೂಟಸದೃಶಂ ವಿನಿಕೀರ್ಣಂ ಭಯಾವಹಂ|

01152009c ಏಕಚಕ್ರಾಂ ತತೋ ಗತ್ವಾ ಪ್ರವೃತ್ತಿಂ ಪ್ರದದುಃ ಪರೇ||

ಮರುದಿನ ಬೆಳಿಗ್ಗೆ ನಗರದಿಂದ ಹೊರಬಂದ ಜನರು ನೆಲದ ಮೇಲೆ ರಕ್ತದಿಂದ ಒದ್ದೆಯಾಗಿದ್ದ, ಪರ್ವತ ಶಿಖರದಂತೆ ಪುಡಿಯಾಗಿ ಭಯಾವಹವಾಗಿ ಸತ್ತು ಬಿದ್ದಿದ್ದ ರಾಕ್ಷಸನನ್ನು ನೋಡಿ ಏಕಚಕ್ರಕ್ಕೆ ಹೋಗಿ ಈ ವೃತ್ತಾಂತವನ್ನು ಬೇರೆಯವರಿಗೆಲ್ಲ ಹರಡಿದರು.

01152010a ತತಃ ಸಹಸ್ರಶೋ ರಾಜನ್ನರಾ ನಗರವಾಸಿನಃ|

01152010c ತತ್ರಾಜಗ್ಮುರ್ಬಕಂ ದ್ರಷ್ಟುಂ ಸಸ್ತ್ರೀವೃದ್ಧಕುಮಾರಕಾಃ||

ರಾಜನ್! ಆಗ ನಗರವಾಸಿಗಳು ತಮ್ಮ ಪತ್ನಿ ಮಕ್ಕಳ ಸಹಿತ ಸಹಸ್ರಾರು ಸಂಖ್ಯೆಗಳಲ್ಲಿ ಬಕನನ್ನು ನೋಡಲು ಅಲ್ಲಿಗೆ ಬಂದರು. 

01152011a ತತಸ್ತೇ ವಿಸ್ಮಿತಾಃ ಸರ್ವೇ ಕರ್ಮ ದೃಷ್ಟ್ವಾತಿಮಾನುಷಂ|

01152011c ದೈವತಾನ್ಯರ್ಚಯಾಂ ಚಕ್ರುಃ ಸರ್ವ ಏವ ವಿಶಾಂ ಪತೇ||

ವಿಶಾಂಪತೇ! ಆ ಅತಿಮಾನುಷ ಕರ್ಮವನ್ನು ನೋಡಿ ವಿಸ್ಮಿತರಾದ ಎಲ್ಲರೂ ಎಲ್ಲ ದೇವತೆಗಳಿಗೂ ಅರ್ಚನೆಯನ್ನು ನೀಡಿದರು.

01152012a ತತಃ ಪ್ರಗಣಯಾಮಾಸುಃ ಕಸ್ಯ ವಾರೋಽದ್ಯ ಭೋಜನೇ|

01152012c ಜ್ಞಾತ್ವಾ ಚಾಗಮ್ಯ ತಂ ವಿಪ್ರಂ ಪಪ್ರಚ್ಛುಃ ಸರ್ವ ಏವ ತತ್||

ಆಗ ಅವರು ರಾಕ್ಷಸನಿಗೆ ಭೋಜನವನ್ನು ನೀಡುವ ಬಾರಿ ಯಾರಿದ್ದಿರಬಹುದು ಎಂದು ಲೆಖ್ಕ ಮಾಡಿ, ಆ ವಿಪ್ರನ ಬಾರಿಯಾಗಿತ್ತು ಎಂದು ತಿಳಿದು ಎಲ್ಲರೂ ಅವನನ್ನು ಪ್ರಶ್ನಿಸತೊಡಗಿದರು.

01152013a ಏವಂ ಪೃಷ್ಟಸ್ತು ಬಹುಶೋ ರಕ್ಷಮಾಣಶ್ಚ ಪಾಂಡವಾನ್|

01152013c ಉವಾಚ ನಾಗರಾನ್ಸರ್ವಾನಿದಂ ವಿಪ್ರರ್ಷಭಸ್ತದಾ||

ಈ ರೀತಿ ಬಹಳಷ್ಟು ಪ್ರಶ್ನೆಗಳನ್ನು ಎದುರಿಸಿದ ವಿಪ್ರರ್ಷಭನು ಪಾಂಡವರನ್ನು ರಕ್ಷಿಸುತ್ತಾ ನಾಗರೀಕರಿಗೆ ಹೇಳಿದನು:

01152014a ಆಜ್ಞಾಪಿತಂ ಮಾಮಶನೇ ರುದಂತಂ ಸಹ ಬಂಧುಭಿಃ|

01152014c ದದರ್ಶ ಬ್ರಾಹ್ಮಣಃ ಕಶ್ಚಿನ್ಮಂತ್ರಸಿದ್ಧೋ ಮಹಾಬಲಃ||

“ಆಹಾರವನ್ನೊದಗಿಸಲು ನನಗೆ ಆಜ್ಞಾಪನೆ ಬಂದಾಗ ಬಂಧುಗಳ ಸಹಿತ ರೋದಿಸುತ್ತಿರುವ ನಮ್ಮನ್ನು ಓರ್ವ ಮಂತ್ರಸಿದ್ಧ ಮಹಾಬಲಿ ಬ್ರಾಹ್ಮಣನು ನೋಡಿದನು.

01152015a ಪರಿಪೃಚ್ಛ್ಯ ಸ ಮಾಂ ಪೂರ್ವಂ ಪರಿಕ್ಲೇಶಂ ಪುರಸ್ಯ ಚ|

01152015c ಅಬ್ರವೀದ್ಬ್ರಾಹ್ಮಣಶ್ರೇಷ್ಠ ಆಶ್ವಾಸ್ಯ ಪ್ರಹಸನ್ನಿವ||

01152016a ಪ್ರಾಪಯಿಷ್ಯಾಮ್ಯಹಂ ತಸ್ಮೈ ಇದಮನ್ನಂ ದುರಾತ್ಮನೇ|

01152016c ಮನ್ನಿಮಿತ್ತಂ ಭಯಂ ಚಾಪಿ ನ ಕಾರ್ಯಮಿತಿ ವೀರ್ಯವಾನ್||

ಅವನು ನನ್ನಲ್ಲಿ ಹಿಂದಿನಿಂದ ಇರುವ ಪುರದ ಪರಿಕ್ಲೇಶದ ಕುರಿತು ಕೇಳಿದನು. ಮತ್ತು ಆ ವೀರ ಬ್ರಾಹ್ಮಣಶ್ರೇಷ್ಠನು ನಗುತ್ತಾ “ಆ ದುರಾತ್ಮನಿಗೆ ಆಹಾರವನ್ನು ನಾನು ಕೊಂಡೊಯ್ಯುತ್ತೇನೆ. ನನ್ನ ಕುರಿತು ಭಯಪಡಬೇಡ!” ಎಂದು ಆಶ್ವಾಸನೆಯನ್ನಿತ್ತನು.

01152017a ಸ ತದನ್ನಮುಪಾದಾಯ ಗತೋ ಬಕವನಂ ಪ್ರತಿ|

01152017c ತೇನ ನೂನಂ ಭವೇದೇತತ್ಕರ್ಮ ಲೋಕಹಿತಂ ಕೃತಂ||

ಅವನು ಆಹಾರವನ್ನು ತೆಗೆದುಕೊಂಡು ಬಕವನದ ಕಡೆ ಹೋದನು. ಈ ಲೋಕಹಿತ ಕಾರ್ಯವು ಅವನ ಕೃತ್ಯವೇ ಆಗಿರಬೇಕು!”

01152018a ತತಸ್ತೇ ಬ್ರಾಹ್ಮಣಾಃ ಸರ್ವೇ ಕ್ಷತ್ರಿಯಾಶ್ಚ ಸುವಿಸ್ಮಿತಾಃ|

01152018c ವೈಶ್ಯಾಃ ಶೂದ್ರಾಶ್ಚ ಮುದಿತಾಶ್ಚಕ್ರುರ್ಬ್ರಹ್ಮಮಹಂ ತದಾ||

ವಿಸ್ಮಿತರಾದ, ಮುದಿತ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಎಲ್ಲರೂ ಬ್ರಾಹ್ಮಣನಿಗೆ ಮಹಾ ಔತಣವನ್ನಿತ್ತರು.

01152019a ತತೋ ಜಾನಪದಾಃ ಸರ್ವೇ ಆಜಗ್ಮುರ್ನಗರಂ ಪ್ರತಿ|

01152019c ತದದ್ಭುತತಮಂ ದ್ರಷ್ಟುಂ ಪಾರ್ಥಾಸ್ತತ್ರೈವ ಚಾವಸನ್||

ಆಗ ಆ ಮಹಾ ಅದ್ಭುತವನ್ನು ನೋಡಲು ಜನಪದದಿಂದ ಎಲ್ಲರೂ ನಗರಕ್ಕೆ ಬಂದರು. ಪಾರ್ಥರು ತಮ್ಮ ವಾಸವನ್ನು ಅಲ್ಲಿಯೇ ಮುಂದುವರಿಸಿದರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ದೈಪಂಚಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾಐವತ್ತೆರಡನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೦/೧೮, ಉಪಪರ್ವಗಳು-೧೦/೧೦೦, ಅಧ್ಯಾಯಗಳು-೧೫೨/೧೯೯೫, ಶ್ಲೋಕಗಳು-೫೨೨೨/೭೩೭೮೪

Related image

Comments are closed.