ಆದಿ ಪರ್ವ: ಬಕವಧ ಪರ್ವ
೧೫೧
ಆಹಾರವನ್ನು ತೆಗೆದುಕೊಂಡು ಭೀಮನು ರಾಕ್ಷಸ ಬಕನಲ್ಲಿಗೆ ಹೋಗಿ ಆಹಾರವನ್ನು ತಿಂದು ಮುಗಿಸುವುದು (೧-೧೦). ಕೋಪಗೊಂಡ ಬಕನು ಭೀಮನೊಂದಿಗೆ ಯುದ್ಧಕ್ಕೆ ಬರುವುದು; ಬಕನ ಸಾವು (೧೧-೨೪).
01151001 ವೈಶಂಪಾಯನ ಉವಾಚ|
01151001a ತತೋ ರಾತ್ರ್ಯಾಂ ವ್ಯತೀತಾಯಾಮನ್ನಮಾದಾಯ ಪಾಂಡವಃ|
01151001c ಭೀಮಸೇನೋ ಯಯೌ ತತ್ರ ಯತ್ರಾಸೌ ಪುರುಷಾದಕಃ||
ವೈಶಂಪಾಯನನು ಹೇಳಿದನು: “ರಾತ್ರಿ ಕಳೆದ ನಂತರ ಪಾಂಡವ ಭೀಮಸೇನನು ಆಹಾರವನ್ನು ತೆಗೆದುಕೊಂಡು ಆ ಪುರುಷಾದಕನು ವಾಸಿಸುತ್ತಿರುವಲ್ಲಿಗೆ ಹೋದನು.
01151002a ಆಸಾದ್ಯ ತು ವನಂ ತಸ್ಯ ರಕ್ಷಸಃ ಪಾಂಡವೋ ಬಲೀ|
01151002c ಆಜುಹಾವ ತತೋ ನಾಮ್ನಾ ತದನ್ನಮುಪಯೋಜಯನ್||
ರಾಕ್ಷಸನ ಆ ವನವನ್ನು ತಲುಪಿದ ಬಲಶಾಲಿ ಪಾಂಡವನು ಅವನನ್ನು ಅವನ ಹೆಸರಿನಿಂದ ಕೂಗಿ ಕರೆದು ಆಹಾರವನ್ನು ತಿನ್ನ ತೊಡಗಿದನು.
01151003a ತತಃ ಸ ರಾಕ್ಷಸಃ ಶ್ರುತ್ವಾ ಭೀಮಸೇನಸ್ಯ ತದ್ವಚಃ|
01151003c ಆಜಗಾಮ ಸುಸಂಕ್ರುದ್ಧೋ ಯತ್ರ ಭೀಮೋ ವ್ಯವಸ್ಥಿತಃ||
ಭೀಮಸೇನನ ಆ ಕೂಗನ್ನು ಕೇಳಿದ ಆ ರಾಕ್ಷಸನು ಸಂಕೃದ್ಧನಾಗಿ ಭೀಮನು ನಿಂತಿರುವಲ್ಲಿಗೆ ಬಂದನು.
01151004a ಮಹಾಕಾಯೋ ಮಹಾವೇಗೋ ದಾರಯನ್ನಿವ ಮೇದಿನೀಂ|
01151004c ತ್ರಿಶಿಖಾಂ ಭೃಕುಟಿಂ ಕೃತ್ವಾ ಸಂದಶ್ಯ ದಶನಚ್ಛದಂ||
ಮೂರು ಹುಬ್ಬುಗಳನ್ನು ಶಿಖಗಳನ್ನಾಗಿ ಕಟ್ಟಿ ಹಲ್ಲುಗಳ ಮೊಸಡೆಗಳನ್ನು ಕಡಿಯುತ್ತಾ ಆ ಮಹಾಕಾಯನು ಮೇದಿನಿಯನ್ನು ಪುಡಿಮಾಡುತ್ತಾನೋ ಎನ್ನುವಂತೆ ಮಹಾವೇಗದಲ್ಲಿ ಬಂದನು.
01151005a ಭುಂಜಾನಮನ್ನಂ ತಂ ದೃಷ್ಟ್ವಾ ಭೀಮಸೇನಂ ಸ ರಾಕ್ಷಸಃ|
01151005c ವಿವೃತ್ಯ ನಯನೇ ಕ್ರುದ್ಧ ಇದಂ ವಚನಮಬ್ರವೀತ್||
ಅನ್ನವನ್ನು ತಿನ್ನುತ್ತಿರುವ ಭೀಮಸೇನನನ್ನು ನೋಡಿದ ಆ ರಾಕ್ಷಸನು ಸಿಟ್ಟಿನಿಂದ ಕಣ್ಣುಗಳನ್ನು ಅಗಲಿಸಿ ಈ ಮಾತುಗಳನ್ನಾಡಿದನು:
01151006a ಕೋಽಯಮನ್ನಮಿದಂ ಭುಂಕ್ತೇ ಮದರ್ಥಮುಪಕಲ್ಪಿತಂ|
01151006c ಪಶ್ಯತೋ ಮಮ ದುರ್ಬುದ್ಧಿರ್ಯಿಯಾಸುರ್ಯಮಸಾದನಂ||
“ನನಗಾಗಿ ಕಳುಹಿಸಿದ ಈ ಅಹಾರವನ್ನು, ನಾನು ನೋಡುತ್ತಿರುವ ಹಾಗೆಯೇ ತಿನ್ನುತ್ತಿರುವ ದುರ್ಬುದ್ಧಿ ನೀನು ಯಾರು? ಯಮಸಾದನಕ್ಕೆ ಹೋಗಲು ಬಯಸುತ್ತಿದ್ದೀಯಾ?”
01151007a ಭೀಮಸೇನಸ್ತು ತಚ್ಛೃತ್ವಾ ಪ್ರಹಸನ್ನಿವ ಭಾರತ|
01151007c ರಾಕ್ಷಸಂ ತಮನಾದೃತ್ಯ ಭುಂಕ್ತ ಏವ ಪರಾಙ್ಮುಖಃ||
ಭಾರತ! ಅವನನ್ನು ಕೇಳಿದ ಭೀಮಸೇನನು ನಗುತ್ತಾ ಆ ರಾಕ್ಷಸನನ್ನು ತಿರಸ್ಕರಿಸಿ ಬೇರೆ ಕಡೆ ಮುಖ ತಿರುಗಿಸಿ ತಿನ್ನುವುದನ್ನು ಮುಂದುವರಿಸಿದನು.
01151008a ತತಃ ಸ ಭೈರವಂ ಕೃತ್ವಾ ಸಮುದ್ಯಮ್ಯ ಕರಾವುಭೌ|
01151008c ಅಭ್ಯದ್ರವದ್ಭೀಮಸೇನಂ ಜಿಘಾಂಸುಃ ಪುರುಷಾದಕಃ||
ಆಗ ಆ ಪುರುಷಾಧಕನು ಒಂದು ಭೈರವ ಕೂಗನ್ನು ಕೂಗಿ, ಎರಡೂ ತೋಳುಗಳನ್ನೂ ಮೇಲಕ್ಕೆತ್ತಿ ಭೀಮಸೇನನನ್ನು ಕೊಲ್ಲಲು ಅವನೆಡೆಗೆ ಮುನ್ನುಗ್ಗಿದ್ದನು.
01151009a ತಥಾಪಿ ಪರಿಭೂಯೈನಂ ನೇಕ್ಷಮಾಣೋ ವೃಕೋದರಃ|
01151009c ರಾಕ್ಷಸಂ ಭುಂಕ್ತ ಏವಾನ್ನಂ ಪಾಂಡವಃ ಪರವೀರಹಾ||
ಆದರೂ ಪರವೀರ ಪಾಂಡವ ವೃಕೋದರನು ಆ ರಾಕ್ಷಸನಿಗೆ ಗಮನಕೊಡದೇ ಆಹಾರವನ್ನು ತಿನ್ನುವುದನ್ನು ಮುಂದುವರಿಸಿದನು.
01151010a ಅಮರ್ಷೇಣ ತು ಸಂಪೂರ್ಣಃ ಕುಂತೀಪುತ್ರಸ್ಯ ರಾಕ್ಷಸಃ|
01151010c ಜಘಾನ ಪೃಷ್ಠಂ ಪಾಣಿಭ್ಯಾಮುಭಾಭ್ಯಾಂ ಪೃಷ್ಠತಃ ಸ್ಥಿತಃ||
ರೋಷಗೊಂಡ ರಾಕ್ಷಸನು ಕುಂತೀಪುತ್ರನ ಹಿಂದೆ ನಿಂತು ತನ್ನ ಎರಡೂ ಕೈಗಳಿಂದ ಅವನ ಬೆನ್ನಿನ ಮೇಲೆ ಗುದ್ದತೊಡಗಿದನು.
01151011a ತಥಾ ಬಲವತಾ ಭೀಮಃ ಪಾಣಿಭ್ಯಾಂ ಭೃಶಮಾಹತಃ|
01151011c ನೈವಾವಲೋಕಯಾಮಾಸ ರಾಕ್ಷಸಂ ಭುಂಕ್ತ ಏವ ಸಃ||
ರಾಕ್ಷಸನ ಕೈಗಳಿಂದ ನೋವಿನ ಪೆಟ್ಟುಗಳು ಬೀಳುತ್ತಿದ್ದರೂ ಬಲವಂತ ಭೀಮನು ಅವನನ್ನು ಅವಲೋಕಿಸದೇ ತಿನ್ನುತ್ತಲೇ ಇದ್ದನು.
01151012a ತತಃ ಸ ಭೂಯಃ ಸಂಕ್ರುದ್ಧೋ ವೃಕ್ಷಮಾದಾಯ ರಾಕ್ಷಸಃ|
01151012c ತಾಡಯಿಷ್ಯಂಸ್ತದಾ ಭೀಮಂ ಪುನರಭ್ಯದ್ರವದ್ಬಲೀ||
ಇನ್ನೂ ಸಂಕೃದ್ಧನಾದ ರಾಕ್ಷಸನು ಒಂದು ಮರವನ್ನು ಕಿತ್ತೆತ್ತಿ ಬಲಿ ಭೀಮನನ್ನು ಹೊಡೆಯಲೋಸುಗ ಪುನಃ ಓಡಿ ಬಂದನು.
01151013a ತತೋ ಭೀಮಃ ಶನೈರ್ಭುಕ್ತ್ವಾ ತದನ್ನಂ ಪುರುಷರ್ಷಭಃ|
01151013c ವಾರ್ಯುಪಸ್ಪೃಶ್ಯ ಸಂಹೃಷ್ಟಸ್ತಸ್ಥೌ ಯುಧಿ ಮಹಾಬಲಃ||
ಅಷ್ಟರಲ್ಲಿಯೇ ಪುರುಷರ್ಷಭ ಭೀಮನು ತನ್ನ ಊಟವನ್ನು ಮುಗಿಸಿದ್ದನು. ಬಾಯಿ ಕೈಗಳನ್ನು ತೊಳೆದ ಆ ಮಹಾಬಲಿಯು ಸಂತೋಷದಿಂದ ಯುದ್ಧಕ್ಕೆ ಎದುರಾದನು.
01151014a ಕ್ಷಿಪ್ತಂ ಕ್ರುದ್ಧೇನ ತಂ ವೃಕ್ಷಂ ಪ್ರತಿಜಗ್ರಾಹ ವೀರ್ಯವಾನ್|
01151014c ಸವ್ಯೇನ ಪಾಣಿನಾ ಭೀಮಃ ಪ್ರಹಸನ್ನಿವ ಭಾರತ||
ಭಾರತ! ಸಿಟ್ಟಿಗೆದ್ದ ರಾಕ್ಷಸನು ಎಸೆದ ವೃಕ್ಷವನ್ನು ಎಡಗೈಯಿಂದ ಬೇಗನೆ ಹಿಡಿದು ಭೀಮನು ಜೋರಾಗಿ ನಗತೊಡಗಿದನು.
01151015a ತತಃ ಸ ಪುನರುದ್ಯಮ್ಯ ವೃಕ್ಷಾನ್ಬಹುವಿಧಾನ್ಬಲೀ|
01151015c ಪ್ರಾಹಿಣೋದ್ಭೀಮಸೇನಾಯ ತಸ್ಮೈ ಭೀಮಶ್ಚ ಪಾಂಡವಃ||
ಪುನಃ ಆ ಬಲಿಯು ಬಹುವಿಧ ವೃಕ್ಷಗಳನ್ನು ಕಿತ್ತು ಪಾಂಡವ ಭೀಮಸೇನನ ಮೇಲೆ ಎಸೆಯತೊಡಗಿದನು. ಭೀಮನೂ ಕೂಡ ಅವನ ಮೇಲೆ ಎಸೆಯತೊಡಗಿದನು.
01151016a ತದ್ವೃಕ್ಷಯುದ್ಧಮಭವನ್ಮಹೀರುಹವಿನಾಶನಂ|
01151016c ಘೋರರೂಪಂ ಮಹಾರಾಜ ಬಕಪಾಂಡವಯೋರ್ಮಹತ್||
ಮಹಾರಾಜ! ಈ ರೀತಿ ಬಕ ಮತ್ತು ಪಾಂಡವನ ಮಧ್ಯೆ ಕಾಡನ್ನೇ ನಾಶಪಡಿಸಿದ ಘೋರರೂಪಿ ವೃಕ್ಷಯುದ್ಧವು ನಡೆಯಿತು.
01151017a ನಾಮ ವಿಶ್ರಾವ್ಯ ತು ಬಕಃ ಸಮಭಿದ್ರುತ್ಯ ಪಾಂಡವಂ|
01151017c ಭುಜಾಭ್ಯಾಂ ಪರಿಜಗ್ರಾಹ ಭೀಮಸೇನಂ ಮಹಾಬಲಂ||
ಹೆಸರನ್ನು ಕೂಗುತ್ತಾ ಬಕನು ಪಾಂಡವನ ಕಡೆ ಓಡಿಬಂದು ಮಹಾಬಲಗಳನ್ನುಳ್ಳ ತನ್ನ ಎರಡೂ ಭುಜಗಳಿಂದ ಭೀಮಸೇನನನ್ನು ಹಿಡಿದುಕೊಂಡನು.
01151018a ಭೀಮಸೇನೋಽಪಿ ತದ್ರಕ್ಷಃ ಪರಿರಭ್ಯ ಮಹಾಭುಜಃ|
01151018c ವಿಸ್ಫುರಂತಂ ಮಹಾವೇಗಂ ವಿಚಕರ್ಷ ಬಲಾದ್ಬಲೀ||
ಭೀಮಸೇನನೂ ಕೂಡ ತನ್ನ ಮಹಾಭುಜಗಳಿಂದ ಆ ರಾಕ್ಷಸನನ್ನು ಹಿಡಿದು ಭುಸುಗುಟ್ಟುತ್ತಿದ್ದ ಆ ಬಲಶಾಲಿಯನ್ನು ಬಲಾತ್ಕಾರವಾಗಿ ಮಹಾವೇಗದಲ್ಲಿ ಎಳೆದಾಡಿದನು.
01151019a ಸ ಕೃಷ್ಯಮಾಣೋ ಭೀಮೇನ ಕರ್ಷಮಾಣಶ್ಚ ಪಾಂಡವಂ|
01151019c ಸಮಯುಜ್ಯತ ತೀವ್ರೇಣ ಶ್ರಮೇಣ ಪುರುಷಾದಕಃ||
ಭೀಮನಿಂದ ಎಳೆಯಲ್ಪಟ್ಟ, ಪಾಂಡವನನ್ನೂ ಎಳೆಯುತ್ತಿದ್ದ ಆ ಪುರುಷಾದಕನು ಬೇಗನೇ ತೀವ್ರ ಆಯಾಸವನ್ನು ಹೊಂದಿದನು.
01151020a ತಯೋರ್ವೇಗೇನ ಮಹತಾ ಪೃಥಿವೀ ಸಮಕಂಪತ|
01151020c ಪಾದಪಾಂಶ್ಚ ಮಹಾಕಾಯಾಂಶ್ಚೂರ್ಣಯಾಮಾಸತುಸ್ತದಾ||
ಅವರು ಮಹಾಕಾಯದ ಮರಗಳನ್ನು ಪುಡಿಪುಡಿ ಮಾಡುತ್ತಿದ್ದ ಮಹಾವೇಗದಿಂದ ಪೃಥ್ವಿಯೇ ನಡುಗಿತು.
01151021a ಹೀಯಮಾನಂ ತು ತದ್ರಕ್ಷಃ ಸಮೀಕ್ಷ್ಯ ಭರತರ್ಷಭ|
01151021c ನಿಷ್ಪಿಷ್ಯ ಭೂಮೌ ಪಾಣಿಭ್ಯಾಂ ಸಮಾಜಘ್ನೇ ವೃಕೋದರಃ||
ಭರತರ್ಷಭ! ಆ ರಾಕ್ಷಸನು ಕ್ಷೀಣಗೊಳ್ಳುತ್ತಿದ್ದಾನೆ ಎಂದು ನೋಡಿದ ವೃಕೋದರನು ಅವನನ್ನು ನೆಲದ ಮೇಲೆ ಬೀಳಿಸಿ ಮುಷ್ಠಿಗಳಿಂದ ಹೊಡೆಯತೊಡಗಿದನು.
01151022a ತತೋಽಸ್ಯ ಜಾನುನಾ ಪೃಷ್ಠಮವಪೀಡ್ಯ ಬಲಾದಿವ|
01151022c ಬಾಹುನಾ ಪರಿಜಗ್ರಾಹ ದಕ್ಷಿಣೇನ ಶಿರೋಧರಾಂ||
01151023a ಸವ್ಯೇನ ಚ ಕಟೀದೇಶೇ ಗೃಹ್ಯ ವಾಸಸಿ ಪಾಂಡವಃ|
01151023c ತದ್ರಕ್ಷೋ ದ್ವಿಗುಣಂ ಚಕ್ರೇ ನದಂತಂ ಭೈರವಾನ್ರವಾನ್||
ನಂತರ ಅವನ ಬೆನ್ನನ್ನು ತನ್ನ ತೊಡೆಯಿಂದ ಬಿಗಿಯಾಗಿ ಕೆಳಕ್ಕೆ ಒತ್ತಿಹಿಡಿದು ಬಲಗೈಯಿಂದ ಅವನ ಶಿರವನ್ನು ಹಿಡಿದು ಎಡಗೈಯಿಂದ ಅವನ ಸೊಂಟದ ಪಟ್ಟಿಯನ್ನು ಹಿಡಿದು ಪಾಂಡವನು ಭೈರವವಾಗಿ ಕೂಗಿಕೊಳ್ಳುತ್ತಿದ್ದ ಆ ರಾಕ್ಷಸನನ್ನು ಎರಡು ತುಂಡುಮಾಡಿದನು.
01151024a ತತೋಽಸ್ಯ ರುಧಿರಂ ವಕ್ತ್ರಾತ್ಪ್ರಾದುರಾಸೀದ್ವಿಶಾಂ ಪತೇ|
01151024c ಭಜ್ಯಮಾನಸ್ಯ ಭೀಮೇನ ತಸ್ಯ ಘೋರಸ್ಯ ರಕ್ಷಸಃ||
ವಿಶಾಂಪತೇ! ಭೀಮನು ಆ ಘೋರ ರಾಕ್ಷಸನನ್ನು ತುಂಡರಿಸುತ್ತಿದ್ದಂತೆ ಅವನ ಬಾಯಿಯಿಂದ ರಕ್ತವು ಹೊರಚೆಲ್ಲಿತು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ಪಂಚಾಏಕರಿಂಶದಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾಐವತ್ತೊಂದನೆಯ ಅಧ್ಯಾಯವು.