Adi Parva: Chapter 150

ಆದಿ ಪರ್ವ: ಬಕವಧ ಪರ್ವ

೧೫೦

ಕುಂತಿಯ ಯೋಜನೆಯನ್ನು ಕೇಳಿ ಯುಧಿಷ್ಠಿರನು ತನ್ನ ಅಸಂತೋಷವನ್ನು ವ್ಯಕ್ತಪಡಿಸುವುದು (೧-೧೧). ಕುಂತಿಯು ತಾನು ಮಾಡಲಿಚ್ಛಿಸಿರುವುದರ ಕಾರಣವನ್ನು ತಿಳಿಸಿದಾಗ ಯುಧಿಷ್ಠಿರನು ಒಪ್ಪಿಕೊಳ್ಳುವುದು (೧೨-೨೭).

01150001 ವೈಶಂಪಾಯನ ಉವಾಚ|

01150001a ಕರಿಷ್ಯ ಇತಿ ಭೀಮೇನ ಪ್ರತಿಜ್ಞಾತೇ ತು ಭಾರತ|

01150001c ಆಜಗ್ಮುಸ್ತೇ ತತಃ ಸರ್ವೇ ಭೈಕ್ಷಮಾದಾಯ ಪಾಂಡವಾಃ||

ವೈಶಂಪಾಯನನು ಹೇಳಿದನು: “ಭಾರತ! ಮಾಡುತ್ತೇನೆ ಎಂದು ಭೀಮನು ಪ್ರತಿಜ್ಞೆಯನ್ನಿತ್ತ ನಂತರ ಭಿಕ್ಷೆಯನ್ನು ತೆಗೆದುಕೊಂಡು ಎಲ್ಲ ಪಾಂಡವರೂ ಮರಳಿದರು.

01150002a ಆಕಾರೇಣೈವ ತಂ ಜ್ಞಾತ್ವಾ ಪಾಂಡುಪುತ್ರೋ ಯುಧಿಷ್ಠಿರಃ|

01150002c ರಹಃ ಸಮುಪವಿಶ್ಯೈಕಸ್ತತಃ ಪಪ್ರಚ್ಛ ಮಾತರಂ||

ಪಾಂಡುಪುತ್ರ ಯುಧಿಷ್ಠಿರನು ಭೀಮನ ತೋರಿಕೆಯಿಂದಲೇ ಏನೋ ರಹಸ್ಯವಿದೆಯೆಂದು ತಿಳಿದುಕೊಂಡು ತನ್ನ ತಾಯಿ ಒಬ್ಬಳನ್ನೇ ಕೂರಿಸಿಕೊಂಡು ಪ್ರಶ್ನಿಸಿದನು.

01150003a ಕಿಂ ಚಿಕೀರ್ಷತ್ಯಯಂ ಕರ್ಮ ಭೀಮೋ ಭೀಮಪರಾಕ್ರಮಃ|

01150003c ಭವತ್ಯನುಮತೇ ಕಚ್ಚಿದಯಂ ಕರ್ತುಮಿಹೇಚ್ಛತಿ||

“ಭೀಮಪರಾಕ್ರಮಿ ಭೀಮನು ಏನನ್ನು ಮಾಡಲು ಉತ್ಸುಕನಾಗಿದ್ದಾನೆ? ಅವನು ಏನನ್ನೋ ಮಾಡಲು ಬಯಸುತ್ತಿದ್ದಾನೆ ಮತ್ತು ಅದಕ್ಕೆ ನಿನ್ನ ಅನುಮತಿಯಿದ್ದಂತಿದೆ.”

01150004 ಕುಂತ್ಯುವಾಚ|

01150004a ಮಮೈವ ವಚನಾದೇಷ ಕರಿಷ್ಯತಿ ಪರಂತಪಃ|

01150004c ಬ್ರಾಹ್ಮಣಾರ್ಥೇ ಮಹತ್ಕೃತ್ಯಂ ಮೋಷ್ಕಾಯ ನಗರಸ್ಯ ಚ||

ಕುಂತಿಯು ಹೇಳಿದಳು: “ನನ್ನ ಹೇಳಿಕೆಯಂತೆ ಈ ಪರಂತಪನು ಬ್ರಾಹ್ಮಣನಿಗಾಗಿ ಒಂದು ಮಹಾಕಾರ್ಯವನ್ನು ಮಾಡಿ ಈ ನಗರವನ್ನು ಬಿಡುಗಡೆಮಾಡಲಿದ್ದಾನೆ.”

01150005 ಯುಧಿಷ್ಠಿರ ಉವಾಚ|

01150005a ಕಿಮಿದಂ ಸಾಹಸಂ ತೀಕ್ಷ್ಣಂ ಭವತ್ಯಾ ದುಷ್ಕೃತಂ ಕೃತಂ|

01150005c ಪರಿತ್ಯಾಗಂ ಹಿ ಪುತ್ರಸ್ಯ ನ ಪ್ರಶಂಸಂತಿ ಸಾಧವಃ||

ಯುಧಿಷ್ಠಿರನು ಹೇಳಿದನು: “ಇದೆಂತಹ ತೀಕ್ಷ್ಣ ದುಷ್ಕರ ಸಾಹಸ ಕಾರ್ಯವನ್ನೆಸಗಿದೆ! ಸಾಧುಗಳು ಪುತ್ರ ಪರಿತ್ಯಾಗವನ್ನು ಪ್ರಶಂಸಿಸುವುದಿಲ್ಲ.

01150006a ಕಥಂ ಪರಸುತಸ್ಯಾರ್ಥೇ ಸ್ವಸುತಂ ತ್ಯಕ್ತುಮಿಚ್ಛಸಿ|

01150006c ಲೋಕವೃತ್ತಿವಿರುದ್ಧಂ ವೈ ಪುತ್ರತ್ಯಾಗಾತ್ಕೃತಂ ತ್ವಯಾ||

ಪರಸುತನ ಸಲುವಾಗಿ ಸ್ವಸುತನನ್ನು ತ್ಯಜಿಸಲು ಹೇಗೆ ಇಚ್ಛಿಸುವೆ? ನಿನ್ನ ಪುತ್ರನ ತ್ಯಾಗಗೈದು ನೀನು ಲೋಕಾವೃತ್ತಿಯ ವಿರುದ್ಧ ನಡೆಯುತ್ತಿದ್ದೀಯೆ.

01150007a ಯಸ್ಯ ಬಾಹೂ ಸಮಾಶ್ರಿತ್ಯ ಸುಖಂ ಸರ್ವೇ ಸ್ವಪಾಮಹೇ|

01150007c ರಾಜ್ಯಂ ಚಾಪಹೃತಂ ಕ್ಷುದ್ರೈರಾಜಿಹೀರ್ಷಾಮಹೇ ಪುನಃ||

ಅವನ ಬಾಹುಗಳ ಆಶ್ರಯವನ್ನೇ ಹೊಂದಿ ನಾವೆಲ್ಲರೂ ಸುಖ ನಿದ್ದೆಯನ್ನು ಮಾಡಬಲ್ಲೆವು ಮತ್ತು ಕೆಟ್ಟಜನರಿಂದ ಅಪಹೃತ ರಾಜ್ಯವನ್ನು ಪುನಃ ಹಿಂದೆ ತೆಗೆದುಕೊಳ್ಳುವುದಕ್ಕೂ ಇವನೇ ಸಹಾಯಮಾಡುವವನು.

01150008a ಯಸ್ಯ ದುರ್ಯೋಧನೋ ವೀರ್ಯಂ ಚಿಂತಯನ್ನಮಿತೌಜಸಃ|

01150008c ನ ಶೇತೇ ವಸತೀಃ ಸರ್ವಾ ದುಃಖಾಚ್ಛಕುನಿನಾ ಸಹ||

ಆ ಅಮಿತೌಜಸನ ವೀರ್ಯದಿಂದಾಗಿ ದುರ್ಯೋಧನನೂ ಚಿಂತೆಗೊಳಗಾಗುತ್ತಾನೆ ಮತ್ತು ಅವನಿಂದಾಗಿ ಶಕುನಿಯೂ ಸೇರಿ ಎಲ್ಲರೂ ದುಃಖದಿಂದ ನಿದ್ದೆ ಮಾಡುವುದಿಲ್ಲ.

01150009a ಯಸ್ಯ ವೀರಸ್ಯ ವೀರ್ಯೇಣ ಮುಕ್ತಾ ಜತುಗೃಹಾದ್ವಯಂ|

01150009c ಅನ್ಯೇಭ್ಯಶ್ಚೈವ ಪಾಪೇಭ್ಯೋ ನಿಹತಶ್ಚ ಪುರೋಚನಃ||

ಆ ವೀರನ ಧೈರ್ಯದಿಂದಲೇ ನಾವು ಜತುಗೃಹ ಮತ್ತು ಇತರ ಆಪತ್ತುಗಳಿಂದ ತಪ್ಪಿಸಿಕೊಂಡೆವು ಮತ್ತು ಪುರೋಚನನು ಸತ್ತುಹೋದ.

01150010a ಯಸ್ಯ ವೀರ್ಯಂ ಸಮಾಶ್ರಿತ್ಯ ವಸುಪೂರ್ಣಾಂ ವಸುಂಧರಾಂ|

01150010c ಇಮಾಂ ಮನ್ಯಾಮಹೇ ಪ್ರಾಪ್ತಾಂ ನಿಹತ್ಯ ಧೃತರಾಷ್ಟ್ರಜಾನ್||

ಅವನ ಧೈರ್ಯದ ಆಸರೆಯಲ್ಲಿಯೇ ನಾವು ಧೃತರಾಷ್ಟ್ರಜರನ್ನು ಕೊಂದು ಈ ವಸುಪೂರ್ಣೆ ವಸುಂಧರೆಯನ್ನು ಪಡೆಯುತ್ತೇವೆ ಎಂದು ಅಂದುಕೊಂಡಿದ್ದೇವೆ.

01150011a ತಸ್ಯ ವ್ಯವಸಿತಸ್ತ್ಯಾಗೋ ಬುದ್ಧಿಮಾಸ್ಥಾಯ ಕಾಂ ತ್ವಯಾ|

01150011c ಕಚ್ಚಿನ್ನ ದುಃಖೈರ್ಬುದ್ಧಿಸ್ತೇ ವಿಪ್ಲುತಾ ಗತಚೇತಸಃ||

ಇಂಥ ಅವನನ್ನು ಪರಿತ್ಯಾಗಮಾಡಬೇಕೆಂಬುದು ನಿನ್ನ ಬುದ್ಧಿಗೆ ಹೇಗಾದರೂ ಬಂದಿತು? ದುಃಖದಿಂದ ನಿನ್ನ ಬುದ್ಧಿಯು ತೊಳೆದು ಹೋಗಿ ಬುದ್ಧಿಯಿಲ್ಲದವಳಂತೆ ಆಗಿಲ್ಲ ತಾನೆ?”

01150012 ಕುಂತ್ಯುವಾಚ|

01150012a ಯುಧಿಷ್ಠಿರ ನ ಸಂತಾಪಃ ಕಾರ್ಯಃ ಪ್ರತಿ ವೃಕೋದರಂ|

01150012c ನ ಚಾಯಂ ಬುದ್ಧಿದೌರ್ಬಲ್ಯಾದ್ವ್ಯ್ಯವಸಾಯಃ ಕೃತೋ ಮಯಾ||

ಕುಂತಿಯು ಹೇಳಿದಳು: “ಯುಧಿಷ್ಠಿರ! ವೃಕೋದರನ ವಿಷಯದಲ್ಲಿ ಸಂತಾಪಪಡಬೇಡ. ನಾನು ಬುದ್ಧಿ ದೌರ್ಬಲ್ಯದಿಂದ ಈ ನಿಶ್ಚಯವನ್ನು ತೆಗೆದುಕೊಂಡಿಲ್ಲ.

01150013a ಇಹ ವಿಪ್ರಸ್ಯ ಭವನೇ ವಯಂ ಪುತ್ರ ಸುಖೋಷಿತಾಃ|

01150013c ತಸ್ಯ ಪ್ರತಿಕ್ರಿಯಾ ತಾತ ಮಯೇಯಂ ಪ್ರಸಮೀಕ್ಷಿತಾ|

01150013e ಏತಾವಾನೇವ ಪುರುಷಃ ಕೃತಂ ಯಸ್ಮಿನ್ನ ನಶ್ಯತಿ||

ಪುತ್ರ! ಈ ವಿಪ್ರನ ಮನೆಯಲ್ಲಿ ನಾವು ಸುಖವಾಗಿ ವಾಸಿಸುತ್ತಿದ್ದೇವೆ. ಮಗೂ! ಅದಕ್ಕೆ ಪ್ರತಿಕ್ರಿಯೆಯಾಗಿ ನಾನು ಇದನ್ನು ಪರಿಗಣಿಸುತ್ತಿದ್ದೇನೆ. ಇಂಥಹ ಪುರುಷನಿಗೆ ಎಷ್ಟು ಮಾಡಿದರೂ ಸಾಕಾಗುವುದಿಲ್ಲ.

01150014a ದೃಷ್ಟ್ವಾ ಭೀಷ್ಮಸ್ಯ ವಿಕ್ರಾಂತಂ ತದಾ ಜತುಗೃಹೇ ಮಹತ್|

01150014c ಹಿಡಿಂಬಸ್ಯ ವಧಾಚ್ಚೈವ ವಿಶ್ವಾಸೋ ಮೇ ವೃಕೋದರೇ||

ಜತುಗೃಹದಲ್ಲಿ ಭೀಮನ ಮಹಾ ವಿಕ್ರಾಂತ ಮತ್ತು ಹಿಡಿಂಬನ ವಧೆಯನ್ನು ನೋಡಿ ನನಗೆ ವೃಕೋದರನಲ್ಲಿ ವಿಶ್ವಾಸವಾಗಿದೆ.

01150015a ಬಾಹ್ವೋರ್ಬಲಂ ಹಿ ಭೀಮಸ್ಯ ನಾಗಾಯುತಸಮಂ ಮಹತ್|

01150015c ಯೇನ ಯೂಯಂ ಗಜಪ್ರಖ್ಯಾ ನಿರ್ವ್ಯೂಢಾ ವಾರಣಾವತಾತ್||

ಭೀಮನ ಬಾಹುಗಳ ಬಲವು ಆನೆಗಳ ಒಂದು ದೊಡ್ಡ ಗುಂಪಿಗೆ ಸಮನಾಗಿದೆ. ಅದೇ ಬಾಹುಗಳಿಂದ ಆನೆಗಳಂತಿರುವ ಪ್ರತಿಯೊಬ್ಬ ನಿಮ್ಮೆಲ್ಲರನ್ನೂ ವಾರಣಾವತದಿಂದ ಹೊತ್ತು ತಂದನು. 

01150016a ವೃಕೋದರಬಲೋ ನಾನ್ಯೋ ನ ಭೂತೋ ನ ಭವಿಷ್ಯತಿ|

01150016c ಯೋಽಭ್ಯುದೀಯಾದ್ಯುಧಿ ಶ್ರೇಷ್ಠಮಪಿ ವಜ್ರಧರಂ ಸ್ವಯಂ||

ವೃಕೋದರನಷ್ಟು ಬಲಶಾಲಿಯಾದವನು ಬೇರೆ ಯಾರೂ ಇದಕ್ಕೆ ಮೊದಲೂ ಇರಲಿಲ್ಲ ಇನ್ನುಮುಂದೆಯೂ ಇರುವುದಿಲ್ಲ. ಅವನು ಯುದ್ಧದಲ್ಲಿ ಶ್ರೇಷ್ಠ ಯಾರನ್ನೂ, ಸ್ವಯಂ ವಜ್ರಧರನನ್ನೂ ಎದುರಿಸಬಲ್ಲ.

01150017a ಜಾತಮಾತ್ರಃ ಪುರಾ ಚೈಷ ಮಮಾಂಕಾತ್ಪತಿತೋ ಗಿರೌ|

01150017c ಶರೀರಗೌರವಾತ್ತಸ್ಯ ಶಿಲಾ ಗಾತ್ರೈರ್ವಿಚೂರ್ಣಿತಾ||

ಅವನ ದೇಹವು ಎಷ್ಟು ಗಟ್ಟಿಯಿದೆಯೆಂದರೆ - ಹಿಂದೆ ಹುಟ್ಟಿದ ಕೆಲವೇ ಸಮಯದಲ್ಲಿ ಅವನು ನನ್ನ ತೊಡೆಯಿಂದ ಪರ್ವತದ ಕೆಳಗೆ ಬಿದ್ದಾಗ ಅವನು ತನ್ನ ದೇಹದಿಂದ ಶಿಲೆಯನ್ನು ಒಡೆದು ಪುಡಿಮಾಡಿದ್ದನು.

01150018a ತದಹಂ ಪ್ರಜ್ಞಯಾ ಸ್ಮೃತ್ವಾ ಬಲಂ ಭೀಮಸ್ಯ ಪಾಂಡವ|

01150018c ಪ್ರತೀಕಾರಂ ಚ ವಿಪ್ರಸ್ಯ ತತಃ ಕೃತವತೀ ಮತಿಂ||

ಪಾಂಡವ! ಭೀಮನ ಬಲವನ್ನು ನೆನಪಿಸಿಕೊಂಡ ನಾನು ಸಂಪೂರ್ಣ ಪ್ರಜ್ಞೆಯಲ್ಲಿದ್ದೆ. ಆದುದರಿಂದಲೇ ನಾನು ಈ ಬ್ರಾಹ್ಮಣನಿಗೆ ಪ್ರತೀಕಾರವನ್ನು ಮಾಡಲು ಮನಸ್ಸುಮಾಡಿದೆ.

01150019a ನೇದಂ ಲೋಭಾನ್ನ ಚಾಜ್ಞಾನಾನ್ನ ಚ ಮೋಹಾದ್ವಿನಿಶ್ಚಿತಂ|

01150019c ಬುದ್ಧಿಪೂರ್ವಂ ತು ಧರ್ಮಸ್ಯ ವ್ಯವಸಾಯಃ ಕೃತೋ ಮಯಾ||

ಇದನ್ನು ನಾನು ಲೋಭ ಅಥವಾ ಅಜ್ಞಾನ ಅಥವಾ ಮೋಹದಿಂದ ನಿರ್ಧರಿಸಲಿಲ್ಲ. ಬುದ್ದಿಪೂರ್ವಕವಾಗಿ ಧರ್ಮ ಪೂರಕವಾಗಿಯೇ ನಾನು ಇದನ್ನು ನಿಶ್ಚಯಿಸಿದೆ.

01150020a ಅರ್ಥೌ ದ್ವಾವಪಿ ನಿಷ್ಪನ್ನೌ ಯುಧಿಷ್ಠಿರ ಭವಿಷ್ಯತಃ|

01150020c ಪ್ರತೀಕಾರಶ್ಚ ವಾಸಸ್ಯ ಧರ್ಮಶ್ಚ ಚರಿತೋ ಮಹಾನ್||

ಯುಧಿಷ್ಠಿರ! ಈ ರೀತಿಯಲ್ಲಿ ಎರಡು ಉದ್ದೇಶಗಳನ್ನು ಪೂರೈಸಬಹುದು: ನಮ್ಮ ವಸತಿಗೆ ಪ್ರತೀಕಾರ ಮತ್ತು ಅತಿ ದೊಡ್ಡ ಧರ್ಮವನ್ನು ಪಾಲಿಸುವುದು.

01150021a ಯೋ ಬ್ರಾಹ್ಮಣಸ್ಯ ಸಾಹಾಯ್ಯಂ ಕುರ್ಯಾದರ್ಥೇಷು ಕರ್ಹಿ ಚಿತ್|

01150021c ಕ್ಷತ್ರಿಯಃ ಸ ಶುಭಾಽಲ್ಲೋಕಾನ್ಪ್ರಾಪ್ನುಯಾದಿತಿ ಮೇ ಶ್ರುತಂ||

ಬ್ರಾಹ್ಮಣನಿಗೆ ಯಾವುದೇ ವಿಷಯದಲ್ಲಿ ಯಾವುದೇ ರೀತಿಯಲ್ಲಿ ಸಹಾಯವನ್ನು ಮಾಡುವ ಕ್ಷತ್ರಿಯನಿಗೆ ಶುಭ ಲೋಕಗಳು ಪ್ರಾಪ್ತವಾಗುತ್ತವೆ ಎಂದು ಕೇಳಿದ್ದೇನೆ.

01150022a ಕ್ಷತ್ರಿಯಃ ಕ್ಷತ್ರಿಯಸ್ಯೈವ ಕುರ್ವಾಣೋ ವಧಮೋಕ್ಷಣಂ|

01150022c ವಿಪುಲಾಂ ಕೀರ್ತಿಮಾಪ್ನೋತಿ ಲೋಕೇಽಸ್ಮಿಂಶ್ಚ ಪರತ್ರ ಚ||

ಇನ್ನೊಬ್ಬ ಕ್ಷತ್ರಿಯನನ್ನು ಸಾವಿನಿಂದ ಬಿಡುಗಡೆಮಾಡಿದ ಕ್ಷತ್ರಿಯನಿಗೆ ವಿಪುಲ ಕೀರ್ತಿ ಮತ್ತು ಲೋಕಗಳು ಇಲ್ಲಿ ಮತ್ತು ಪರದಲ್ಲಿ ದೊರೆಯುತ್ತವೆ.

01150023a ವೈಶ್ಯಸ್ಯೈವ ತು ಸಾಹಾಯ್ಯಂ ಕುರ್ವಾಣಃ ಕ್ಷತ್ರಿಯೋ ಯುಧಿ|

01150023c ಸ ಸರ್ವೇಷ್ವಪಿ ಲೋಕೇಷು ಪ್ರಜಾ ರಂಜಯತೇ ಧ್ರುವಂ||

ಯುದ್ಧದಲ್ಲಿ ವೈಶ್ಯನಿಗೆ ಸಹಾಯಮಾಡುವ ಕ್ಷತ್ರಿಯನು ಕೂಡ ಸರ್ವ ಲೋಕಗಳಲ್ಲಿ ಪ್ರಜೆಗಳ ಪ್ರೀತಿಯನ್ನು ಅನುಭವಿಸುತ್ತಾನೆ ಎನ್ನುವುದು ಸತ್ಯ.

01150024a ಶೂದ್ರಂ ತು ಮೋಕ್ಷಯನ್ರಾಜಾ ಶರಣಾರ್ಥಿನಮಾಗತಂ|

01150024c ಪ್ರಾಪ್ನೋತೀಹ ಕುಲೇ ಜನ್ಮ ಸದ್ರವ್ಯೇ ರಾಜಸತ್ಕೃತೇ||

ಶರಣಾರ್ಥಿಯಾಗಿ ಬಂದ ಶೂದ್ರನನ್ನು ಬಿಡುಗಡೆ ಮಾಡಿದ ರಾಜನು ರಾಜಸತ್ಕೃತನಾಗಿ ಶ್ರೀಮಂತ ಕುಲದಲ್ಲಿ ಜನ್ಮವನ್ನು ತಾಳುತ್ತಾನೆ.

01150025a ಏವಂ ಸ ಭಗವಾನ್ವ್ಯಾಸಃ ಪುರಾ ಕೌರವನಂದನ|

01150025c ಪ್ರೋವಾಚ ಸುತರಾಂ ಪ್ರಾಜ್ಞಸ್ತಸ್ಮಾದೇತಚ್ಚಿಕೀರ್ಷಿತಂ||

ಕೌರವನಂದನ! ಈ ರೀತಿ ಆ ಭಗವಾನ್ ವ್ಯಾಸನು ಹಿಂದೆ ಹೇಳುತ್ತಿದ್ದನು. ಇದು ನಿಜವಾಗಿಯೂ ವಿವೇಕದ ಮಾತುಗಳು. ಆದುದರಿಂದ ನಾನು ಇದನ್ನು ಮಾಡಲು ಬಯಸುತ್ತೇನೆ.”

01150026 ಯುಧಿಷ್ಠಿರ ಉವಾಚ|

01150026a ಉಪಪನ್ನಮಿದಂ ಮಾತಸ್ತ್ವಯಾ ಯದ್ಬುದ್ಧಿಪೂರ್ವಕಂ|

01150026c ಆರ್ತಸ್ಯ ಬ್ರಾಹ್ಮಣಸ್ಯೈವಮನುಕ್ರೋಶಾದಿದಂ ಕೃತಂ|

01150026E ಧ್ರುವಮೇಷ್ಯತಿ ಭೀಮೋಽಯಂ ನಿಹತ್ಯ ಪುರುಷಾದಕಂ||

ಯುಧಿಷ್ಠಿರನು ಹೇಳಿದನು: “ಮಾತೆ! ಬುದ್ಧಿಪೂರ್ವಕವಾಗಿ ನೀನು ಮಾಡಲು ತೊಡಗಿರುವುದು ಸರಿಯಾಗಿಯೇ ಇದೆ. ಆರ್ತ ಬ್ರಾಹ್ಮಣನ ಮೇಲಿನ ದಯೆಯಿಂದ ಇದನ್ನು ಮಾಡುತ್ತಿದ್ದೀಯೆ.

01150027a ಯಥಾ ತ್ವಿದಂ ನ ವಿಂದೇಯುರ್ನರಾ ನಗರವಾಸಿನಃ|

01150027c ತಥಾಯಂ ಬ್ರಾಹ್ಮಣೋ ವಾಚ್ಯಃ ಪರಿಗ್ರಾಹ್ಯಶ್ಚ ಯತ್ನತಃ||

ಆದರೆ ಬ್ರಾಹ್ಮಣನು ಈ ವಿಷಯವನ್ನು ಬೇರೆ ಯಾರಲ್ಲಿಯೂ ಹೇಳದಂತೆ ಎಚ್ಚರ ವಹಿಸಬೇಕು. ನಗರವಾಸಿಗಳಿಗೆ ಇದರ ಕುರಿತು ಏನೂ ತಿಳಿಯಬಾರದು.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ಪಂಚಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾಐವತ್ತನೆಯ ಅಧ್ಯಾಯವು.

Related image

Comments are closed.