Adi Parva: Chapter 149

ಆದಿ ಪರ್ವ: ಬಕವಧ ಪರ್ವ

೧೪೯

ಕುಂತಿಯು ತನ್ನ ಮಗನು ರಾಕ್ಷಸನಿಗೆ ಭೋಜನವನ್ನು ತೆಗೆದುಕೊಂಡು ಹೋಗುತ್ತಾನೆ ಎಂದು ಹೇಳಲು, ಬ್ರಾಹ್ಮಣನು ನಿರಾಕರಿಸುವುದು (೧-೧೨). ತನ್ನ ಮಗನು ರಾಕ್ಷಸನಿಂದ ಸುರಕ್ಷಿತವಾಗಿ ಹಿಂದಿರುಗಿ ಬರುತ್ತಾನೆ ಎಂದು ವಿಶ್ವಾಸದಿಂದ ಕುಂತಿಯು ಹೇಳಲು ಬ್ರಾಹ್ಮಣನು ಒಪ್ಪಿಕೊಳ್ಳುವುದು (೧೩-೨೦).

01149001 ಕುಂತ್ಯುವಾಚ|

01149001a ನ ವಿಷಾದಸ್ತ್ವಯಾ ಕಾರ್ಯೋ ಭಯಾದಸ್ಮಾತ್ಕಥಂ ಚನ|

01149001c ಉಪಾಯಃ ಪರಿದೃಷ್ಟೋಽತ್ರ ತಸ್ಮಾನ್ಮೋಕ್ಷಾಯ ರಕ್ಷಸಃ||

ಕುಂತಿಯು ಹೇಳಿದಳು: “ನಿನ್ನ ಈ ಪರಿಸ್ಥಿತಿಯ ಕುರಿತು ಸ್ವಲ್ಪವೂ ವಿಷಾದಿಸಬೇಡ. ಆ ರಾಕ್ಷಸನಿಂದ ಬಿಡುಗಡೆ ಹೊಂದಲು ನನಗೆ ಒಂದು ಉಪಾಯವು ತೋಚುತ್ತಿದೆ.

01149002a ಏಕಸ್ತವ ಸುತೋ ಬಾಲಃ ಕನ್ಯಾ ಚೈಕಾ ತಪಸ್ವಿನೀ|

01149002c ನ ತೇ ತಯೋಸ್ತಥಾ ಪತ್ನ್ಯಾ ಗಮನಂ ತತ್ರ ರೋಚಯೇ||

ನಿನಗೆ ಒಬ್ಬನೇ ಒಬ್ಬ ಮಗನಿದ್ದಾನೆ ಮತ್ತು ಅವನೂ ಬಾಲಕನಿದ್ದಾನೆ. ಹಾಗೂ ಓರ್ವ ತಪಸ್ವಿನೀ ಕನ್ಯೆಯಿದ್ದಾಳೆ. ನೀನಾಗಲೀ ಅಥವಾ ನಿನ್ನ ಪತ್ನಿಯಾಗಲೀ ಅಲ್ಲಿಗೆ ಹೋಗುವುದು ನನಗೆ ಸರಿಯೆನಿಸುವುದಿಲ್ಲ.

01149003a ಮಮ ಪಂಚ ಸುತಾ ಬ್ರಹ್ಮಂಸ್ತೇಷಾಮೇಕೋ ಗಮಿಷ್ಯತಿ|

01149003c ತ್ವದರ್ಥಂ ಬಲಿಮಾದಾಯ ತಸ್ಯ ಪಾಪಸ್ಯ ರಕ್ಷಸಃ||

ಬ್ರಾಹ್ಮಣ! ನನಗೆ ಐವರು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬನು ಹೋಗುತ್ತಾನೆ ಮತ್ತು ನಿನ್ನ ಪರವಾಗಿ ಆ ಪಾಪಿ ರಾಕ್ಷಸನಿಗೆ ಬಲಿಯನ್ನು ತೆಗೆದುಕೊಂಡು ಹೋಗುತ್ತಾನೆ.”

01149004 ಬ್ರಾಹ್ಮಣ ಉವಾಚ|

01149004a ನಾಹಮೇತತ್ಕರಿಷ್ಯಾಮಿ ಜೀವಿತಾರ್ಥೀ ಕಥಂ ಚನ|

01149004c ಬ್ರಾಹ್ಮಣಸ್ಯಾತಿಥೇಶ್ಚೈವ ಸ್ವಾರ್ಥೇ ಪ್ರಾಣೈರ್ವಿಯೋಜನಂ||

ಬ್ರಾಹ್ಮಣನು ಹೇಳಿದನು: “ನನ್ನ ಜೀವನವನ್ನು ಹಿಡಿದುಕೊಂಡು ಬ್ರಾಹ್ಮಣ ಅತಿಥಿಯೊಬ್ಬನು ನನಗಾಗಿ ತನ್ನ ಪ್ರಾಣವನ್ನು ಬಿಡುವಂಥಹ ಕಾರ್ಯವನ್ನು ಎಂದೂ ಮಾಡುವುದಿಲ್ಲ. 

01149005a ನ ತ್ವೇತದಕುಲೀನಾಸು ನಾಧರ್ಮಿಷ್ಠಾಸು ವಿದ್ಯತೇ|

01149005c ಯದ್ಬ್ರಾಹ್ಮಣಾರ್ಥೇ ವಿಸೃಜೇದಾತ್ಮಾನಮಪಿ ಚಾತ್ಮಜಂ||

ಒಬ್ಬ ಬ್ರಾಹ್ಮಣನಿಗಾಗಿ ತನ್ನನ್ನಾಗಲೀ ಅಥವಾ ತನ್ನ ಮಗನನ್ನಾಗಲೀ ತ್ಯಜಿಸುವುದು ಅಧರ್ಮಿಷ್ಠರಲ್ಲಿ ಅಥವಾ ಅಕುಲೀನರಲ್ಲಿಯೂ ನಡೆಯುವುದಿಲ್ಲ.

01149006a ಆತ್ಮನಸ್ತು ಮಯಾ ಶ್ರೇಯೋ ಬೋದ್ಧವ್ಯಮಿತಿ ರೋಚಯೇ|

01149006c ಬ್ರಹ್ಮವಧ್ಯಾತ್ಮವಧ್ಯಾ ವಾ ಶ್ರೇಯ ಆತ್ಮವಧೋ ಮಮ||

ನನಗೆ ಯಾವುದು ಶ್ರೇಯಸ್ಸನ್ನು ತಂದು ಕೊಡುತ್ತದೆ ಎನ್ನುವುದನ್ನು ನಾನೇ ಅರ್ಥಮಾಡಿಕೊಳ್ಳಬೇಕು ಎಂದು ನನಗನ್ನಿಸುತ್ತದೆ. ಬ್ರಾಹ್ಮಣನನ್ನು ಕೊಲ್ಲುವುದು ಮತ್ತು ತಾನೇ ಸಾಯುವುದು ಇವೆರಡರಲ್ಲಿ ಆತ್ಮವಧೆಯೇ ಶ್ರೇಯಸ್ಸು ಎಂದು ನನಗನ್ನಿಸುತ್ತಿದೆ.

01149007a ಬ್ರಹ್ಮವಧ್ಯಾ ಪರಂ ಪಾಪಂ ನಿಷ್ಕೃತಿರ್ನಾತ್ರ ವಿದ್ಯತೇ|

01149007c ಅಬುದ್ಧಿಪೂರ್ವಂ ಕೃತ್ವಾಪಿ ಶ್ರೇಯ ಆತ್ಮವಧೋ ಮಮ||

ಬ್ರಹ್ಮವಧೆಯು ಪರಮ ಪಾಪ ಮತ್ತು ಅದಕ್ಕೆ ಯಾವುದೇ ರೀತಿಯ ನಿಷ್ಕೃತಿಯೂ ಇಲ್ಲ. ಅಬುದ್ಧಿಪೂರ್ವಕವಾಗಿ ಮಾಡಿದರೂ ಆತ್ಮವಧೆಯೇ ನನಗೆ ಶ್ರೇಯಸ್ಸು.

01149008a ನ ತ್ವಹಂ ವಧಮಾಕಾಂಕ್ಷೇ ಸ್ವಯಮೇವಾತ್ಮನಃ ಶುಭೇ|

01149008c ಪರೈಃ ಕೃತೇ ವಧೇ ಪಾಪಂ ನ ಕಿಂ ಚಿನ್ಮಯಿ ವಿದ್ಯತೇ||

ಶುಭೇ! ಆದರೂ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವುದಿಲ್ಲ. ಆದರೆ ಇನ್ನೊಬ್ಬರು ನನ್ನನ್ನು ವಧಿಸುವುದರಿಂದ ನನಗೆ ಆ ಪಾಪ ಸ್ವಲ್ಪವೂ ಬರುವುದಿಲ್ಲ ಎಂದು ತಿಳಿದಿದ್ದೇನೆ.

01149009a ಅಭಿಸಂಧಿಕೃತೇ ತಸ್ಮಿನ್ಬ್ರಾಹ್ಮಣಸ್ಯ ವಧೇ ಮಯಾ|

01149009c ನಿಷ್ಕೃತಿಂ ನ ಪ್ರಪಶ್ಯಾಮಿ ನೃಶಂಸಂ ಕ್ಷುದ್ರಮೇವ ಚ||

ಆದರೆ ತಿಳಿದೂ ತಿಳಿದೂ ಬ್ರಾಹ್ಮಣನ ವಧೆಯಲ್ಲಿ ನಾನು ಭಾಗವಹಿಸಿದರೆ ಆ ಹೀನ ಕ್ರೂರ ಕೃತ್ಯಕ್ಕೆ ಯಾವುದೇರೀತಿಯ ನಿಷ್ಕೃತಿಯೂ ನನಗೆ ತೋಚುವುದಿಲ್ಲ.

01149010a ಆಗತಸ್ಯ ಗೃಹೇ ತ್ಯಾಗಸ್ತಥೈವ ಶರಣಾರ್ಥಿನಃ|

01149010c ಯಾಚಮಾನಸ್ಯ ಚ ವಧೋ ನೃಶಂಸಂ ಪರಮಂ ಮತಂ||

ಮನೆಗೆ ಬಂದವನನ್ನು ತ್ಯಾಗಮಾಡುವುದು, ಅಥವಾ ಶರಣಾರ್ಥಿಯನ್ನು ಹಾಗೂ ಬೇಡುವವನನ್ನು ವಧಿಸುವುದು ಅತ್ಯಂತ ಹೀನ ಕೃತ್ಯ ಎಂದು ನನಗನ್ನಿಸುತ್ತದೆ. 

01149011a ಕುರ್ಯಾನ್ನ ನಿಂದಿತಂ ಕರ್ಮ ನ ನೃಶಂಸಂ ಕದಾ ಚನ|

01149011c ಇತಿ ಪೂರ್ವೇ ಮಹಾತ್ಮಾನ ಆಪದ್ಧರ್ಮವಿದೋ ವಿದುಃ||

ಎಂದೂ ನಿಂದಿತ ಹೀನ ಕೃತ್ಯವನ್ನು ಮಾಡಬಾರದು ಎಂದು ಹಿಂದಿನ ಮಹಾತ್ಮರು ಮತ್ತು ಆಪದ್ಧರ್ಮವನ್ನು ಅರಿತವರು ತಿಳಿಸಿದ್ದಾರೆ.

01149012a ಶ್ರೇಯಾಂಸ್ತು ಸಹದಾರಸ್ಯ ವಿನಾಶೋಽದ್ಯ ಮಮ ಸ್ವಯಂ|

01149012c ಬ್ರಾಹ್ಮಣಸ್ಯ ವಧಂ ನಾಹಮನುಮಂಸ್ಯೇ ಕಥಂ ಚನ||

ಪತ್ನಿಯ ಸಹಿತ ನಾನೇ ಸಾಯುವುದು ನನಗೆ ಶ್ರೇಯಸ್ಸು. ಎಂದೂ ನಾನು ಬ್ರಾಹ್ಮಣನ ವಧೆಯನ್ನು ಒಪ್ಪುವುದಿಲ್ಲ.”

01149013 ಕುಂತ್ಯುವಾಚ|

01149013a ಮಮಾಪ್ಯೇಷಾ ಮತಿರ್ಬ್ರಹ್ಮನ್ವಿಪ್ರಾ ರಕ್ಷ್ಯಾ ಇತಿ ಸ್ಥಿರಾ|

01149013c ನ ಚಾಪ್ಯನಿಷ್ಟಃ ಪುತ್ರೋ ಮೇ ಯದಿ ಪುತ್ರಶತಂ ಭವೇತ್||

ಕುಂತಿಯು ಹೇಳಿದಳು: “ಬ್ರಾಹ್ಮಣ! ವಿಪ್ರರ ರಕ್ಷಣೆ ಮಾಡಬೇಕೆನ್ನುವುದು ನನ್ನ ದೃಢ ಅಭಿಪ್ರಾಯ. ನನಗೆ ಒಂದು ನೂರು ಪುತ್ರರಿದ್ದರೂ ನಾನು ಯಾರೊಬ್ಬನನ್ನೂ ಕಡಿಮೆ ಪ್ರೀತಿಸುತ್ತಿರಲಿಲ್ಲ.

01149014a ನ ಚಾಸೌ ರಾಕ್ಷಸಃ ಶಕ್ತೋ ಮಮ ಪುತ್ರವಿನಾಶನೇ|

01149014c ವೀರ್ಯವಾನ್ಮಂತ್ರಸಿದ್ಧಶ್ಚ ತೇಜಸ್ವೀ ಚ ಸುತೋ ಮಮ||

ಆದರೆ ರಾಕ್ಷಸನು ನನ್ನ ಈ ಪುತ್ರನನ್ನು ಕೊಲ್ಲಲು ಶಕ್ತನಿಲ್ಲ. ನನ್ನ ಈ ವೀರ ತೇಜಸ್ವಿ ಮಗನು ಮಂತ್ರಸಿದ್ಧಿಯನ್ನು ಹೊಂದಿದ್ದಾನೆ.

01149015a ರಾಕ್ಷಸಾಯ ಚ ತತ್ಸರ್ವಂ ಪ್ರಾಪಯಿಷ್ಯತಿ ಭೋಜನಂ|

01149015c ಮೋಕ್ಷಯಿಷ್ಯತಿ ಚಾತ್ಮಾನಮಿತಿ ಮೇ ನಿಶ್ಚಿತಾ ಮತಿಃ||

ನನ್ನ ಮಗನು ರಾಕ್ಷಸನಿಗೆ ಆ ಭೋಜನವೆಲ್ಲವನ್ನೂ ತೆಗೆದುಕೊಂಡು ಹೋಗಿ ಒಪ್ಪಿಸಿ ಅವನಿಂದ ನಿಶ್ಚಿತವಾಗಿಯೂ ತನ್ನನ್ನು ತಾನು ಬಿಡುಗಡೆ ಮಾಡಿಸಿಕೊಳ್ಳುತ್ತಾನೆ ಎಂದು ನನಗೆ ವಿಶ್ವಾಸವಿದೆ.

01149016a ಸಮಾಗತಾಶ್ಚ ವೀರೇಣ ದೃಷ್ಟಪೂರ್ವಾಶ್ಚ ರಾಕ್ಷಸಾಃ|

01149016c ಬಲವಂತೋ ಮಹಾಕಾಯಾ ನಿಹತಾಶ್ಚಾಪ್ಯನೇಕಶಃ||

ಇದಕ್ಕೂ ಮೊದಲೇ ಹಲವು ಬಲಶಾಲಿ ಮಹಾಕಾಯ ರಾಕ್ಷಸರು ಈ ವೀರನನ್ನು ಎದುರಿಸಿ ಅವನಿಂದ ವಧಿಸಲ್ಪಟ್ಟಿದ್ದಾರೆ.

01149017a ನ ತ್ವಿದಂ ಕೇಷು ಚಿದ್ಬ್ರಹ್ಮನ್ವ್ಯಾಹರ್ತವ್ಯಂ ಕಥಂ ಚನ|

01149017c ವಿದ್ಯಾರ್ಥಿನೋ ಹಿ ಮೇ ಪುತ್ರಾನ್ವಿಪ್ರಕುರ್ಯುಃ ಕುತೂಹಲಾತ್||

ಬ್ರಾಹ್ಮಣ! ಆದರೆ ನೀನು ಇದರ ಕುರಿತು ಯಾರಿಗೂ ಯಾವ ಕಾರಣಕ್ಕೂ ಸ್ವಲ್ಪವೂ ತಿಳಿಸಬಾರದು. ಯಾಕೆಂದರೆ ಜನರು ಕುತೂಹಲದಿಂದ ಗುಟ್ಟನ್ನು ತಿಳಿಯಲು ಕಷ್ಟಕೊಡಬಹುದು.

01149018a ಗುರುಣಾ ಚಾನನುಜ್ಞಾತೋ ಗ್ರಾಹಯೇದ್ಯಂ ಸುತೋ ಮಮ|

01149018c ನ ಸ ಕುರ್ಯಾತ್ತಯಾ ಕಾರ್ಯಂ ವಿದ್ಯಯೇತಿ ಸತಾಂ ಮತಂ||

ನನ್ನ ಮಗನು ಇದನ್ನು ಗುರುವಿನ ಅನುಜ್ಞೆಯಿಲ್ಲದೇ ಇನ್ನೊಬ್ಬರಿಗೆ ತಿಳಿಸಿದರೆ ಅದು ಕಾರ್ಯವನ್ನು ಎಸಗದೇ ಇರಬಹುದು ಎಂದು ತಿಳಿದವರು ಅಭಿಪ್ರಾಯ ಪಡುತ್ತಾರೆ.””

01149019 ವೈಶಂಪಾಯನ ಉವಾಚ|

01149019a ಏವಮುಕ್ತಸ್ತು ಪೃಥಯಾ ಸ ವಿಪ್ರೋ ಭಾರ್ಯಯಾ ಸಹ|

01149019c ಹೃಷ್ಟಃ ಸಂಪೂಜಯಾಮಾಸ ತದ್ವಾಕ್ಯಮಮೃತೋಪಮಂ||

ವೈಶಂಪಾಯನನು ಹೇಳಿದನು: “ಪೃಥೆಯು ಹೀಗೆ ಹೇಳಲು ಪತ್ನಿಸಮೇತ ಆ ವಿಪ್ರನು ಸಂತೋಷಗೊಂಡು ಆ ಅಮೃತೋಪಮ ಮಾತುಗಳನ್ನು ಆದರಿಸಿದನು.

01149020a ತತಃ ಕುಂತೀ ಚ ವಿಪ್ರಶ್ಚ ಸಹಿತಾವನಿಲಾತ್ಮಜಂ|

01149020c ತಮಬ್ರೂತಾಂ ಕುರುಷ್ವೇತಿ ಸ ತಥೇತ್ಯಬ್ರವೀಚ್ಚ ತೌ||

ಆಗ ಕುಂತಿ ಮತ್ತು ವಿಪ್ರ ಇಬ್ಬರೂ ಸೇರಿ ಅನಿಲಾತ್ಮಜನಿಗೆ ಏನೇನು ಮಾಡಬೇಕೆಂದು ಹೇಳಿದರು. ಅವನು ಅವರಿಬ್ಬರಿಗೂ “ಹಾಗೆಯೇ ಆಗಲಿ!” ಎಂದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ಏಕೋಪಂಚಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾನಲ್ವತ್ತೊಂಭತ್ತನೆಯ ಅಧ್ಯಾಯವು.

Related image

Comments are closed.