Adi Parva: Chapter 148

ಆದಿ ಪರ್ವ: ಬಕವಧ ಪರ್ವ

೧೪೮

ಕುಂತಿಯು ಕೇಳಲು ಬ್ರಾಹ್ಮಣನು ತನಗೆ ಒದಗಿಬಂದಿರುವ ಗಂಡಾಂತರದ ಕುರಿತು ವಿವರಿಸಿದುದು (೧-೧೬).

01148001 ಕುಂತ್ಯುವಾಚ|

01148001a ಕುತೋಮೂಲಮಿದಂ ದುಃಖಂ ಜ್ಞಾತುಮಿಚ್ಛಾಮಿ ತತ್ತ್ವತಃ|

01148001c ವಿದಿತ್ವಾ ಅಪಕರ್ಷೇಯಂ ಶಕ್ಯಂ ಚೇದಪಕರ್ಷಿತುಂ||

ಕುಂತಿಯು ಹೇಳಿದಳು: “ಈ ದುಃಖದ ಮೂಲ ಯಾವುದು ಎನ್ನುವುದನ್ನು ಸ್ಪಷ್ಟವಾಗಿ ತಿಳಿಯ ಬಯಸುತ್ತೇನೆ. ಅದನ್ನು ತಿಳಿದ ನಂತರ ಹೋಗಲಾಡಿಸಬಹುದಾದರೆ ಹೋಗಲಾಡಿಸುತ್ತೇನೆ.”

01148002 ಬ್ರಾಹ್ಮಣ ಉವಾಚ|

01148002a ಉಪಪನ್ನಂ ಸತಾಮೇತದ್ಯದ್ಬ್ರವೀಷಿ ತಪೋಧನೇ|

01148002c ನ ತು ದುಃಖಮಿದಂ ಶಕ್ಯಂ ಮಾನುಷೇಣ ವ್ಯಪೋಹಿತುಂ||

ಬ್ರಾಹ್ಮಣನು ಹೇಳಿದನು: “ತಪೋಧನೇ! ನೀನು ಒಳ್ಳೆಯ ಮಾತುಗಳನ್ನೇ ಆಡಿದ್ದೀಯೆ. ಆದರೆ ಈ ದುಃಖವನ್ನು ಹೋಗಲಾಡಿಸಲು ಯಾವ ಮನುಷ್ಯನಿಂದಲೂ ಸಾಧ್ಯವಿಲ್ಲ.

01148003a ಸಮೀಪೇ ನಗರಸ್ಯಾಸ್ಯ ಬಕೋ ವಸತಿ ರಾಕ್ಷಸಃ|

01148003c ಈಶೋ ಜನಪದಸ್ಯಾಸ್ಯ ಪುರಸ್ಯ ಚ ಮಹಾಬಲಃ||

ಈ ನಗರದ ಸಮೀಪದಲ್ಲಿ ಬಕ ಎನ್ನುವ ರಾಕ್ಷಸನು ವಾಸಿಸುತ್ತಾನೆ. ಆ ಮಹಾಬಲಿಯು ಈ ಜನಪದ ಮತ್ತು ನಗರಗಳನ್ನು ಆಳುತ್ತಿದ್ದಾನೆ.

01148004a ಪುಷ್ಟೋ ಮಾನುಷಮಾಂಸೇನ ದುರ್ಬುದ್ಧಿಃ ಪುರುಷಾದಕಃ|

01148004c ರಕ್ಷತ್ಯಸುರರಾಣ್ನಿತ್ಯಮಿಮಂ ಜನಪದಂ ಬಲೀ||

01148005a ನಗರಂ ಚೈವ ದೇಶಂ ಚ ರಕ್ಷೋಬಲಸಮನ್ವಿತಃ|

01148005c ತತ್ಕೃತೇ ಪರಚಕ್ರಾಚ್ಚ ಭೂತೇಭ್ಯಶ್ಚ ನ ನೋ ಭಯಂ||

ಈ ಪುರುಷಾದಕ ದುರ್ಬುದ್ಧಿಯು ಮಾನುಷ ಮಾಂಸವನ್ನು ತಿಂದು ಕೊಬ್ಬಿದ್ದಾನೆ. ಅಸುರರಾಜ, ರಾಕ್ಷಸಬಲಸಮನ್ವಿತ ಆ ಬಲಶಾಲಿಯು ಜನಪದ, ನಗರ ಮತ್ತು ದೇಶವನ್ನು ರಕ್ಷಿಸುತ್ತಿದ್ದಾನೆ. ಅವನಿಂದಾಗಿ ನಮಗೆ ಶತ್ರುಗಳಿಂದ ಅಥವಾ ಯಾರಿಂದಲೂ ಭಯವೇ ಇಲ್ಲದಂತಾಗಿದೆ.

01148006a ವೇತನಂ ತಸ್ಯ ವಿಹಿತಂ ಶಾಲಿವಾಹಸ್ಯ ಭೋಜನಂ|

01148006c ಮಹಿಷೌ ಪುರುಷಶ್ಚೈಕೋ ಯಸ್ತದಾದಾಯ ಗಚ್ಛತಿ||

ಅವನ ವಿಹಿತ ವೇತನವು ಒಂದು ಬಂಡಿ ಭೋಜನ, ಎರಡು ಎಮ್ಮೆಗಳು, ಮತ್ತು ಅವುಗಳನ್ನು ಅವನಲ್ಲಿಗೆ ತೆಗೆದುಕೊಂಡು ಹೋಗುವ ಓರ್ವ ಪುರುಷ.

01148007a ಏಕೈಕಶ್ಚೈವ ಪುರುಷಸ್ತತ್ಪ್ರಯಚ್ಛತಿ ಭೋಜನಂ|

01148007c ಸ ವಾರೋ ಬಹುಭಿರ್ವರ್ಷೈರ್ಭವತ್ಯಸುತರೋ ನರೈಃ||

ಒಬ್ಬೊಬ್ಬರಾಗಿ ಎಲ್ಲರೂ ಅವನಿಗೆ ಭೋಜನವನ್ನು ಕಳುಹಿಸುತ್ತಾರೆ. ಆದರೆ ಬಹಳ ವರ್ಷಗಳಿಗೊಮ್ಮೆ ಬರುವ ಬಾರಿಯು ಬಂದಾಗ ಮನುಷ್ಯನಿಗೆ ಅದರಿಂದ ತಪ್ಪಿಸಿಕೊಳ್ಳಲು ಕಷ್ಟವಾಗುತ್ತದೆ.

01148008a ತದ್ವಿಮೋಕ್ಷಾಯ ಯೇ ಚಾಪಿ ಯತಂತೇ ಪುರುಷಾಃ ಕ್ವ ಚಿತ್|

01148008c ಸಪುತ್ರದಾರಾಂಸ್ತಾನ್ ಹತ್ವಾ ತದ್ರಕ್ಷೋ ಭಕ್ಷಯತ್ಯುತ||

ಒಂದುವೇಳೆ ಯಾರಾದರೂ ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಅವನನ್ನು ಆ ರಾಕ್ಷಸನು ಪುತ್ರ ಮತ್ತು ಪತ್ನಿ ಸಹಿತ ಕೊಂದು ಭಕ್ಷಿಸುತ್ತಾನೆ.

01148009a ವೇತ್ರಕೀಯಗೃಹೇ ರಾಜಾ ನಾಯಂ ನಯಮಿಹಾಸ್ಥಿತಃ|

01148009c ಅನಾಮಯಂ ಜನಸ್ಯಾಸ್ಯ ಯೇನ ಸ್ಯಾದದ್ಯ ಶಾಶ್ವತಂ||

ವೈತ್ರಕೀಯ ಗೃಹದಲ್ಲಿರುವ ನಮ್ಮ ರಾಜನು ತನ್ನ ಜನರನ್ನು ಈ ಪೀಡೆಯಿಂದ ಶಾಶ್ವತವಾಗಿ ಮುಕ್ತಿಗೊಳಿಸಲು ಯಾವುದೇ ರೀತಿಯ ಯೋಜನೆಯನ್ನೂ ಹೊಂದಿಲ್ಲ.

01148010a ಏತದರ್ಹಾ ವಯಂ ನೂನಂ ವಸಾಮೋ ದುರ್ಬಲಸ್ಯ ಯೇ|

01148010c ವಿಷಯೇ ನಿತ್ಯಮುದ್ವಿಗ್ನಾಃ ಕುರಾಜಾನಮುಪಾಶ್ರಿತಾಃ||

ಕುರಾಜನ ಆಶ್ರಯದಲ್ಲಿ ಯಾವಾಗಲೂ ಉದ್ವಿಗ್ನರಾಗಿರುವ, ದುರ್ಬಲ ರಾಜನ ರಾಜ್ಯದಲ್ಲಿರುವ ನಾವು ಇದಕ್ಕೆ ಅರ್ಹರಾಗಿದ್ದೇವೆ.

01148011a ಬ್ರಾಹ್ಮಣಾಃ ಕಸ್ಯ ವಕ್ತವ್ಯಾಃ ಕಸ್ಯ ವಾ ಚಂದಚಾರಿಣಃ|

01148011c ಗುಣೈರೇತೇ ಹಿ ವಾಸ್ಯಂತೇ ಕಾಮಗಾಃ ಪಕ್ಷಿಣೋ ಯಥಾ||

ಬ್ರಾಹ್ಮಣರು ಯಾರ ಮಾತಿಗೂ ಒಳಪಡದೇ ಯಾರ ಇಚ್ಛೆಗೂ ಅಧೀನರಾಗಿ ನಡೆದುಕೊಳ್ಳದೇ ಇಚ್ಛೆಬಂದಂತೆ ಸಂಚರಿಸುವ ಪಕ್ಷಿಗಳೆಂದೂ ತಮ್ಮ ಗುಣಗಳಿಗೆ ಮಾತ್ರ ಅಧೀನರಾಗಿರುತ್ತಾರೆಂದು ಹೇಳುತ್ತಾರೆ.

01148012a ರಾಜಾನಂ ಪ್ರಥಮಂ ವಿಂದೇತ್ತತೋ ಭಾರ್ಯಾಂ ತತೋ ಧನಂ|

01148012c ತ್ರಯಸ್ಯ ಸಂಚಯೇ ಚಾಸ್ಯ ಜ್ಞಾತೀನ್ಪುತ್ರಾಂಶ್ಚ ಧಾರಯೇತ್||

ಮೊದಲು ರಾಜನನ್ನು ಹುಡುಕಿಕೊಳ್ಳಬೇಕು ನಂತರ ಭಾರ್ಯೆಯನ್ನು ಮತ್ತು ಧನವನ್ನು. ಈ ಮೂರನ್ನೂ ಪಡೆದವನು ತನ್ನ ಪುತ್ರರನ್ನು ಮತ್ತು ಬಾಂಧವರನ್ನು ಪಾಲಿಸಬಹುದು.

01148013a ವಿಪರೀತಂ ಮಯಾ ಚೇದಂ ತ್ರಯಂ ಸರ್ವಮುಪಾರ್ಜಿತಂ|

01148013c ತ ಇಮಾಮಾಪದಂ ಪ್ರಾಪ್ಯ ಭೃಶಂ ತಪ್ಸ್ಯಾಮಹೇ ವಯಂ||

ಆದರೆ ನಾನು ಈ ಮೂರನ್ನೂ ವಿಪರೀತವಾಗಿ ಪಡೆದೆ (ಮೊದಲು ಧನ, ನಂತರ ಪತ್ನಿ ಮತ್ತು ಅಂತ್ಯದಲ್ಲಿ ರಾಜ). ಈಗ ನಾವು ಈ ಆಪತ್ತಿನಲ್ಲಿ ಸಿಲುಕಿದ್ದೇವೆ ಮತ್ತು ನಾವೇ ಇದನ್ನು ಅನುಭವಿಸಬೇಕು.

01148014a ಸೋಽಯಮಸ್ಮಾನನುಪ್ರಾಪ್ತೋ ವಾರಃ ಕುಲವಿನಾಶನಃ|

01148014c ಭೋಜನಂ ಪುರುಷಶ್ಚೈಕಃ ಪ್ರದೇಯಂ ವೇತನಂ ಮಯಾ||

ಆ ಕುಲವಿನಾಶಕ ಬಾರಿಯು ಈಗ ನಮಗೆ ಬಂದಿದೆ. ಅವನಿಗೆ ನಾನು ಓರ್ವ ಪುರುಷನನ್ನು ಭೋಜನವಾಗಿ ಕಳುಹಿಸಬೇಕಾಗಿದೆ.

01148015a ನ ಚ ಮೇ ವಿದ್ಯತೇ ವಿತ್ತಂ ಸಂಕ್ರೇತುಂ ಪುರುಷಂ ಕ್ವ ಚಿತ್|

01148015c ಸುಹೃಜ್ಜನಂ ಪ್ರದಾತುಂ ಚ ನ ಶಕ್ಷ್ಯಾಮಿ ಕಥಂ ಚನ|

01148015e ಗತಿಂ ಚಾಪಿ ನ ಪಶ್ಯಾಮಿ ತಸ್ಮಾನ್ಮೋಕ್ಷಾಯ ರಕ್ಷಸಃ||

ಎಲ್ಲಿಂದಲಾದರೂ ವ್ಯಕ್ತಿಯೋರ್ವನನ್ನು ಖರೀದಿಸೋಣ ಎಂದರೂ ನನ್ನಲ್ಲಿ ಹಣವಿಲ್ಲ. ನನ್ನ ಕುಟುಂಬದ ಯಾರನ್ನು ಕೊಡಲೂ ಶಕ್ಯನಾಗಿಲ್ಲ. ಆ ರಾಕ್ಷಸನಿಂದ ಬಿಡುಗಡೆಹೊಂದುವ ಯಾವ ದಾರಿಯೂ ನನಗೆ ಕಾಣುತ್ತಿಲ್ಲ. 

01148016a ಸೋಽಹಂ ದುಃಖಾರ್ಣವೇ ಮಗ್ನೋ ಮಹತ್ಯಸುತರೇ ಭೃಶಂ|

01148016c ಸಹೈವೈತೈರ್ಗಮಿಷ್ಯಾಮಿ ಬಾಂಧವೈರದ್ಯ ರಾಕ್ಷಸಂ|

01148016e ತತೋ ನಃ ಸಹಿತನ್ ಕ್ಷುದ್ರಃ ಸರ್ವಾನೇವೋಪಭೋಕ್ಷ್ಯತಿ||

ಹೀಗೆ ನಾನು ದುಃಖಸಾಗರದಲ್ಲಿ ಮುಳುಗಿ ಯಾವುದೇ ರೀತಿಯ ಬಿಡುಗಡೆ ದೊರೆಯದಂತಾಗಿದ್ದೇನೆ. ಈಗ ನಾನು ನನ್ನ ಇಡೀ ಕುಟುಂಬ ಸಮೇತ ಆ ರಾಕ್ಷಸನಲ್ಲಿಗೆ ಹೋಗುತ್ತೇನೆ. ಆ ಕ್ಷುದ್ರ ರಾಕ್ಷಸನು ನಮ್ಮೆಲ್ಲರನ್ನೂ ತಿನ್ನಲಿ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ಚತುರಷ್ಟಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾನಲ್ವತ್ತೆಂಟನೆಯ ಅಧ್ಯಾಯವು.

Related image

Comments are closed.