Adi Parva: Chapter 146

ಆದಿ ಪರ್ವ: ಬಕವಧ ಪರ್ವ

೧೪೬

ಬ್ರಾಹ್ಮಣಿಯು ತಾನೇ ಸಾಯುವುದು ಲೇಸೆಂದು ಹೇಳುವುದು (೧-೩೬).

01146001 ಬ್ರಾಹ್ಮಣ್ಯುವಾಚ|

01146001a ನ ಸಂತಾಪಸ್ತ್ವಯಾ ಕಾರ್ಯಃ ಪ್ರಾಕೃತೇನೇವ ಕರ್ಹಿ ಚಿತ್|

01146001c ನ ಹಿ ಸಂತಾಪಕಾಲೋಽಯಂ ವೈದ್ಯಸ್ಯ ತವ ವಿದ್ಯತೇ||

ಬ್ರಾಹ್ಮಣಿಯು ಹೇಳಿದಳು: “ಒಬ್ಬ ಸಾಮಾನ್ಯನಂತೆ ಸಂತಾಪಿಸುವುದು ನಿನಗೆ ಸರಿಯಲ್ಲ. ನಿನ್ನಂಥಹ ವಿದ್ವಾಂಸನಿಗೆ ಸಂತಾಪ ಮಾಡುವ ಕಾಲವು ಇದಲ್ಲ.

01146002a ಅವಶ್ಯಂ ನಿಧನಂ ಸರ್ವೈರ್ಗಂತವ್ಯಮಿಹ ಮಾನವೈಃ|

01146002c ಅವಶ್ಯಭಾವಿನ್ಯರ್ಥೇ ವೈ ಸಂತಾಪೋ ನೇಹ ವಿದ್ಯತೇ||

ಮಾನವರೆಲ್ಲರೂ ಅವಶ್ಯವಾಗಿ ನಿಧನ ಹೊಂದಲೇ ಬೇಕು. ಅವಶ್ಯವಾಗಿರುವುದಕ್ಕೆ ಸಂತಾಪಪಡುವುದು ಸರಿಯಲ್ಲ.

01146003a ಭಾರ್ಯಾ ಪುತ್ರೋಽಥ ದುಹಿತಾ ಸರ್ವಮಾತ್ಮಾರ್ಥಮಿಷ್ಯತೇ|

01146003c ವ್ಯಥಾಂ ಜಹಿ ಸುಬುದ್ಧ್ಯಾ ತ್ವಂ ಸ್ವಯಂ ಯಾಸ್ಯಾಮಿ ತತ್ರ ವೈ||

ಭಾರ್ಯೆ, ಪುತ್ರ ಮತ್ತು ಪುತ್ರಿ ಎಲ್ಲರನ್ನೂ ಮನುಷ್ಯನು ತನಗಾಗಿಯೇ ಬಯಸುತ್ತಾನೆ. ಸುಬುದ್ಧಿಯಿಂದ ವ್ಯಥೆಪಡುವುದನ್ನು ಬಿಡು. ಅಲ್ಲಿಗೆ ಸ್ವಯಂ ನಾನೇ ಹೋಗುತ್ತೇನೆ.

01146004a ಏತದ್ಧಿ ಪರಮಂ ನಾರ್ಯಾಃ ಕಾರ್ಯಂ ಲೋಕೇ ಸನಾತನಂ|

01146004c ಪ್ರಾಣಾನಪಿ ಪರಿತ್ಯಜ್ಯ ಯದ್ಭರ್ತೃಹಿತಮಾಚರೇತ್||

ತನ್ನ ಪ್ರಾಣವನ್ನಾದರೂ ಪರಿತ್ಯಜಿಸಿ ಭರ್ತೃವಿಗೆ ಹಿತವನ್ನು ಮಾಡುವುದು ಈ ಲೋಕದ ನಾರಿಯರ ಸನಾತನ ಪರಮ ಕರ್ತವ್ಯ.

01146005a ತಚ್ಚ ತತ್ರ ಕೃತಂ ಕರ್ಮ ತವಾಪೀಹ ಸುಖಾವಹಂ|

01146005c ಭವತ್ಯಮುತ್ರ ಚಾಕ್ಷಯ್ಯಂ ಲೋಕೇಽಸ್ಮಿಂಶ್ಚ ಯಶಸ್ಕರಂ||

ನಾನು ಹೀಗೆ ಮಾಡುವುದು ನಿನಗೆ ಇಲ್ಲಿ ಸುಖವನ್ನು ತರುತ್ತದೆ ಮತ್ತು ನನಗೆ ಇಲ್ಲಿ ಮತ್ತು ಅಲ್ಲಿ ಎರಡೂ ಕಡೆ ಅಕ್ಷಯ ಯಶಸ್ಸನ್ನು ತರುತ್ತದೆ.

01146006a ಏಷ ಚೈವ ಗುರುರ್ಧರ್ಮೋ ಯಂ ಪ್ರವಕ್ಷಾಮ್ಯಹಂ ತವ|

01146006c ಅರ್ಥಶ್ಚ ತವ ಧರ್ಮಶ್ಚ ಭೂಯಾನತ್ರ ಪ್ರದೃಶ್ಯತೇ||

ನಾನು ನಿನಗೆ ಹೇಳಿದ್ದುದೇ ಶ್ರೇಷ್ಠ ಧರ್ಮ. ಇದರಿಂದ ನಿನ್ನ ಅರ್ಥ ಮತ್ತು ಧರ್ಮ ಇವೆರಡೂ ವೃದ್ಧಿಯಾಗುತ್ತವೆ.

01146007a ಯದರ್ಥಮಿಷ್ಯತೇ ಭಾರ್ಯಾ ಪ್ರಾಪ್ತಃ ಸೋಽರ್ಥಸ್ತ್ವಯಾ ಮಯಿ|

01146007c ಕನ್ಯಾ ಚೈವ ಕುಮಾರಶ್ಚ ಕೃತಾಹಮನೃಣಾ ತ್ವಯಾ||

ಯಾವುದು ಬೇಕೆಂದು ಭಾರ್ಯೆಯನ್ನು ಬಯಸುತ್ತಾರೋ ಅದು ನಿನಗೆ ಈಗಾಗಲೇ ನನ್ನಿಂದ ದೊರಕಿದೆ. ಕನ್ಯೆ ಮತ್ತು ಕುಮಾರರನ್ನಿತ್ತು ನೀನು ನನ್ನನ್ನು ಋಣಮುಕ್ತಳನ್ನಾಗಿ ಮಾಡಿದ್ದೀಯೆ.

01146008a ಸಮರ್ಥಃ ಪೋಷಣೇ ಚಾಸಿ ಸುತಯೋ ರಕ್ಷಣೇ ತಥಾ|

01146008c ನ ತ್ವಹಂ ಸುತಯೋಃ ಶಕ್ತಾ ತಥಾ ರಕ್ಷಣಪೋಷಣೇ||

ನೀನು ಈ ಇಬ್ಬರು ಮಕ್ಕಳನ್ನೂ ಪೋಷಿಸಿ ರಕ್ಷಿಸಲು ಸಮರ್ಥನಾಗಿರುವೆ. ಆದರೆ ನಿನ್ನಹಾಗೆ ನಾನು ಇವರ ಪೋಷಣೆ-ರಕ್ಷಣೆಗೆ ಸಮರ್ಥಳಿಲ್ಲ.

01146009a ಮಮ ಹಿ ತ್ವದ್ವಿಹೀನಾಯಾಃ ಸರ್ವಕಾಮಾ ನ ಆಪದಃ|

01146009c ಕಥಂ ಸ್ಯಾತಾಂ ಸುತೌ ಬಾಲೌ ಭವೇಯಂ ಚ ಕಥಂ ತ್ವಹಂ||

ನಿನ್ನನ್ನು ಕಳೆದುಕೊಂಡ ನನಗೆ ಎಲ್ಲ ಅವಶ್ಯಕತೆಗಳೂ ಆಪತ್ತುಗಳಾಗುವವು. ನೀನಿಲ್ಲದೇ ಇನ್ನೂ ಬಾಲ್ಯದಲ್ಲಿರುವ ಈ ಮಕ್ಕಳಿಬ್ಬರು ಮತ್ತು ನಾನು ಹೇಗೆ ಇರಬಲ್ಲೆವು?

01146010a ಕಥಂ ಹಿ ವಿಧವಾನಾಥಾ ಬಾಲಪುತ್ರಾ ವಿನಾ ತ್ವಯಾ|

01146010c ಮಿಥುನಂ ಜೀವಯಿಷ್ಯಾಮಿ ಸ್ಥಿತಾ ಸಾಧುಗತೇ ಪಥಿ||

ನೀನಿಲ್ಲದೇ ಅನಾಥಳಾಗಿ ವಿಧವೆಯಾದ ನಾನು ಈ ಇಬ್ಬರು ಸಣ್ಣ ಮಕ್ಕಳನ್ನು ಸನ್ಮಾರ್ಗದಲ್ಲಿದ್ದುಕೊಂಡು ಹೇಗೆ ತಾನೇ ಸಾಕಬಲ್ಲೆ?

01146011a ಅಹಂಕೃತಾವಲಿಪ್ತೈಶ್ಚ ಪ್ರಾರ್ಥ್ಯಮಾನಾಮಿಮಾಂ ಸುತಾಂ|

01146011c ಅಯುಕ್ತೈಸ್ತವ ಸಂಬಂಧೇ ಕಥಂ ಶಕ್ಷ್ಯಾಮಿ ರಕ್ಷಿತುಂ||

ನಿನ್ನೊಡನೆ ಸಂಬಂಧವನ್ನು ಬೆಳೆಸಲು ಅಯೋಗ್ಯರಾಗಿ, ಅಹಂಕಾರದಿಂದ ಸೊಕ್ಕಿರುವವರಿಂದ ಈ ಮಗಳನ್ನು ಹೇಗೆ ತಾನೆ ರಕ್ಷಿಸಬಲ್ಲೆ?

01146012a ಉತ್ಸೃಷ್ಟಮಾಮಿಷಂ ಭೂಮೌ ಪ್ರಾರ್ಥಯಂತಿ ಯಥಾ ಖಗಾಃ|

01146012c ಪ್ರಾರ್ಥಯಂತಿ ಜನಾಃ ಸರ್ವೇ ವೀರಹೀನಾಂ ತಥಾ ಸ್ತ್ರಿಯಂ||

ನೆಲದ ಮೇಲೆ ಎಸೆದ ಮಾಂಸದ ತುಂಡನ್ನು ಪಕ್ಷಿಗಳೆಲ್ಲವೂ ಹೇಗೆ ಅಪೇಕ್ಷಿಸುತ್ತವೆಯೋ ಹಾಗೆ ವೀರ ಪತಿಯಿಲ್ಲದ ಸ್ತ್ರೀಯನ್ನು ಎಲ್ಲರೂ ಬಯಸುತ್ತಾರೆ.

01146013a ಸಾಹಂ ವಿಚಾಲ್ಯಮಾನಾ ವೈ ಪ್ರಾರ್ಥ್ಯಮಾನಾ ದುರಾತ್ಮಭಿಃ|

01146013c ಸ್ಥಾತುಂ ಪಥಿ ನ ಶಕ್ಷ್ಯಾಮಿ ಸಜ್ಜನೇಷ್ಟೇ ದ್ವಿಜೋತ್ತಮ||

ದ್ವಿಜೋತ್ತಮ! ದುರಾತ್ಮರು ನನ್ನನ್ನು ವಿಚಲಿತಳನ್ನಾಗಿ ಮಾಡಿ ಕೋರುತ್ತಿರುವಾಗ ಸಜ್ಜನರ ಮಾರ್ಗದಲ್ಲಿಯೇ ಇರಲು ಶಕ್ತಳಾಗುವುದಿಲ್ಲ.

01146014a ಕಥಂ ತವ ಕುಲಸ್ಯೈಕಾಮಿಮಾಂ ಬಾಲಾಮಸಂಸ್ಕೃತಾಂ|

01146014c ಪಿತೃಪೈತಾಮಹೇ ಮಾರ್ಗೇ ನಿಯೋಕ್ತುಮಹಮುತ್ಸಹೇ||

ನಿನ್ನ ಕುಲದ ಈ ಏಕೈಕ ಅವಿವಾಹಿತ ಬಾಲೆಯನ್ನು ಪಿತೃಪಿತಾಮಹರ ಮಾರ್ಗದಲ್ಲಿ ನಡೆಯುವಂತೆ ಹೇಗೆ ನಿರ್ವಹಿಸಬಲ್ಲೆ?

01146015a ಕಥಂ ಶಕ್ಷ್ಯಾಮಿ ಬಾಲೇಽಸ್ಮಿನ್ಗುಣಾನಾಧಾತುಮೀಪ್ಷಿತಾನ್|

01146015c ಅನಾಥೇ ಸರ್ವತೋ ಲುಪ್ತೇ ಯಥಾ ತ್ವಂ ಧರ್ಮದರ್ಶಿವಾನ್||

ಧರ್ಮದರ್ಶಿ ನೀನಿಲ್ಲದೇ ಸರ್ವದಿಂದಲೂ ವಂಚಿತನಾಗುವ ಈ ಅನಾಥ ಬಾಲಕನಲ್ಲಿ ಅಪೇಕ್ಷಿತ ಗುಣಗಳನ್ನು ಬೆಳೆಸಲು ನನಗೆ ಹೇಗೆ ತಾನೆ ಸಾಧ್ಯ?

01146016a ಇಮಾಮಪಿ ಚ ತೇ ಬಾಲಾಮನಾಥಾಂ ಪರಿಭೂಯ ಮಾಂ|

01146016c ಅನರ್ಹಾಃ ಪ್ರಾರ್ಥಯಿಷ್ಯಂತಿ ಶೂದ್ರಾ ವೇದಶ್ರುತಿಂ ಯಥಾ||

ಶೂದ್ರರು ವೇದಶೃತಿಗಾಗಿ ಹೇಗೋ ಹಾಗೆ ಅನರ್ಹರು ನಿನ್ನ ಈ ಅನಾಥ ಬಾಲೆಯನ್ನು ಕೇಳುತ್ತಾ ನನ್ನನ್ನು ಪೀಡಿಸುತ್ತಾರೆ.

01146017a ತಾಂ ಚೇದಹಂ ನ ದಿತ್ಸೇಯಂ ತ್ವದ್ಗುಣೈರುಪಬೃಂಹಿತಾಂ|

01146017c ಪ್ರಮಥ್ಯೈನಾಂ ಹರೇಯುಸ್ತೇ ಹವಿರ್ಧ್ವಾಂಕ್ಷಾ ಇವಾಧ್ವರಾತ್|

ನಿನ್ನ ಸದ್ಗುಣಗಳಿಂದ ಸಂವರ್ಧಿತಳಾದ ಅವಳನ್ನು ನಾನು ಕೊಡಲು ಇಷ್ಟಪಡದಿದ್ದರೆ ಅವರು ಕಾಗೆಗಳು ಯಜ್ಞದಿಂದ ಹವಿಸ್ಸನ್ನು ಅಪಹರಿಸುವಂತೆ ಇವಳನ್ನು ಬಲಾತ್ಕಾರವಾಗಿ ಅಪಹರಿಸಿಕೊಂಡು ಹೋಗಬಹುದು.

01146018a ಸಂಪ್ರೇಕ್ಷಮಾಣಾ ಪುತ್ರಂ ತೇ ನಾನುರೂಪಮಿವಾತ್ಮನಃ|

01146018c ಅನರ್ಹವಶಮಾಪನ್ನಾಮಿಮಾಂ ಚಾಪಿ ಸುತಾಂ ತವ||

ನಿನಗೆ ಅನುರೂಪನಾಗಿ ಬೆಳೆಯದಿದ್ದ ನಿನ್ನ ಈ ಮಗನನ್ನು ಮತ್ತು ಅನರ್ಹರ ವಶಳಾಗುವ ನಿನ್ನ ಈ ಮಗಳನ್ನು ನೋಡಿದ ಜನರು ನನ್ನನ್ನು ದೂರುತ್ತಾರೆ.

01146019a ಅವಜ್ಞಾತಾ ಚ ಲೋಕಸ್ಯ ತಥಾತ್ಮಾನಮಜಾನತೀ|

01146019c ಅವಲಿಪ್ತೈರ್ನರೈರ್ಬ್ರಹ್ಮನ್ಮರಿಷ್ಯಾಮಿ ನ ಸಂಶಯಃ||

ಅವಲಿಪ್ತ ಜನರ ಮಧ್ಯೆ ಈ ಲೋಕದಲ್ಲಿ ನನ್ನನ್ನು ನಾನೇ ಗುರುತಿಸಲಾರದಂತಾಗಿ ನಿಸ್ಸಂಶಯವಾಗಿಯೂ ಸಾಯುತ್ತೇನೆ.

01146020a ತೌ ವಿಹೀನೌ ಮಯಾ ಬಾಲೌ ತ್ವಯಾ ಚೈವ ಮಮಾತ್ಮಜೌ|

01146020c ವಿನಶ್ಯೇತಾಂ ನ ಸಂದೇಹೋ ಮತ್ಸ್ಯಾವಿವ ಜಲಕ್ಷಯೇ||

ನಿನ್ನ ಮತ್ತು ನನ್ನಿಂದ ವಿಹೀನರಾದ, ನಿನ್ನಿಂದ ನನ್ನಲ್ಲಿ ಹುಟ್ಟಿದ ಈ ಇಬ್ಬರು ಮಕ್ಕಳೂ ನೀರು ಬತ್ತಿಹೋದಾಗ ಸಾಯುವ ಮೀನುಗಳಂತೆ ವಿನಾಶರಾಗುತ್ತಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

01146021a ತ್ರಿತಯಂ ಸರ್ವಥಾಪ್ಯೇವಂ ವಿನಶಿಷ್ಯತ್ಯಸಂಶಯಂ|

01146021c ತ್ವಯಾ ವಿಹೀನಂ ತಸ್ಮಾತ್ತ್ವಂ ಮಾಂ ಪರಿತ್ಯಕ್ತುಮರ್ಹಸಿ||

ಈ ರೀತಿ ನಿನ್ನಿಂದ ವಿಹೀನರಾದ ನಾವು ಮೂವರೂ ಸರ್ವಥಾ ವಿನಾಶಹೊಂದುತ್ತೇವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದುದರಿಂದ ನೀನು ನನ್ನನ್ನು ಪರಿತ್ಯಜಿಸುವುದು ಒಳ್ಳೆಯದು.

01146022a ವ್ಯುಷ್ಟಿರೇಷಾ ಪರಾ ಸ್ತ್ರೀಣಾಂ ಪೂರ್ವಂ ಭರ್ತುಃ ಪರಾ ಗತಿಃ|

01146022c ನ ತು ಬ್ರಾಹ್ಮಣ ಪುತ್ರಾಣಾಂ ವಿಷಯೇ ಪರಿವರ್ತಿತುಂ||

ಬ್ರಾಹ್ಮಣ! ಭರ್ತುವಿನ ಮೊದಲೇ ಪರಾಗತಿಯನ್ನು ಹೊಂದುವುದು ಸ್ತ್ರೀಯರಿಗೆ ಅತ್ಯಂತ ಶ್ರೇಷ್ಠ. ಪುತ್ರರ ಆಶ್ರಯದಲ್ಲಿ ಜೀವಿಸುವುದು ಸರಿಯಲ್ಲ.

01146023a ಪರಿತ್ಯಕ್ತಃ ಸುತಶ್ಚಾಯಂ ದುಹಿತೇಯಂ ತಥಾ ಮಯಾ|

01146023c ಬಾಂಧವಾಶ್ಚ ಪರಿತ್ಯಕ್ತಾಸ್ತ್ವದರ್ಥಂ ಜೀವಿತಂ ಚ ಮೇ||

ನಿನಗಾಗಿ ನಾನು ನನ್ನ ಮಗ, ಮಗಳು, ಬಾಂಧವರು ಮತ್ತು ನನ್ನ ಈ ಜೀವವನ್ನೂ ಪರಿತ್ಯಜಿಸಲು ಸಿದ್ಧಳಿದ್ದೇನೆ.

01146024a ಯಜ್ಞೈಸ್ತಪೋಭಿರ್ನಿಯಮೈರ್ದಾನೈಶ್ಚ ವಿವಿಧೈಸ್ತಥಾ|

01146024c ವಿಶಿಷ್ಯತೇ ಸ್ತ್ರಿಯಾ ಭರ್ತುರ್ನಿತ್ಯಂ ಪ್ರಿಯಹಿತೇ ಸ್ಥಿತಿಃ||

ಯಜ್ಞ, ತಪಸ್ಸು, ನಿಯಮ, ಮತ್ತು ದಾನ ಈ ಎಲ್ಲವುದಕ್ಕಿಂತಲೂ ನಿತ್ಯವೂ ಭರ್ತೃವಿನ ಪ್ರಿಯಹಿತ ನಿರತಳಾಗಿರುವುದು ಸ್ತ್ರೀಯ ವಿಶೇಷತೆ.

01146025a ತದಿದಂ ಯಚ್ಚಿಕೀರ್ಷಾಮಿ ಧರ್ಮ್ಯಂ ಪರಮಸಮ್ಮತಂ|

01146025c ಇಷ್ಟಂ ಚೈವ ಹಿತಂ ಚೈವ ತವ ಚೈವ ಕುಲಸ್ಯ ಚ||

ಆದುದರಿಂದ ನಾನು ನಿನಗೆ ಹೇಳುತ್ತಿರುವುದು ನಿನ್ನ ಇಷ್ಟ, ಹಿತ ಮತ್ತು ಕುಲಕ್ಕೆ ಪರಮ ಸಮ್ಮತ ಧರ್ಮ.

01146026a ಇಷ್ಟಾನಿ ಚಾಪ್ಯಪತ್ಯಾನಿ ದ್ರವ್ಯಾಣಿ ಸುಹೃದಃ ಪ್ರಿಯಾಃ|

01146026c ಆಪದ್ಧರ್ಮವಿಮೋಕ್ಷಾಯ ಭಾರ್ಯಾ ಚಾಪಿ ಸತಾಂ ಮತಂ||

ಆಪದ್ಧರ್ಮದಿಂದ ಮೋಕ್ಷವನ್ನು ಪಡೆಯಲು ಮಕ್ಕಳು, ಹಣ, ಸುಹೃದಯ ಪ್ರಿಯರು ಮತ್ತು ಭಾರ್ಯೆ ಬೇಕೆಂದು ತಿಳಿದಿರುವವರು ಅಭಿಪ್ರಾಯ ಪಡುತ್ತಾರೆ.

01146027a ಏಕತೋ ವಾ ಕುಲಂ ಕೃತ್ಸ್ನಮಾತ್ಮಾ ವಾ ಕುಲವರ್ಧನ|

01146027c ನ ಸಮಂ ಸರ್ವಮೇವೇತಿ ಬುಧಾನಾಮೇಷ ನಿಶ್ಚಯಃ||

ಕುಲವರ್ಧನ! ಒಂದು ಕಡೆ ಸಂಪೂರ್ಣ ಕುಲವನ್ನು ಮತ್ತು ಇನ್ನೊಂದು ಕಡೆ ತನ್ನನ್ನು ಇರಿಸಿ ತುಲನೆ ಮಾಡಿದರೆ ಅವೆಲ್ಲವೂ ಸೇರಿ ಅವನನ್ನು ಹೋಲುವುದಿಲ್ಲ ಎಂದು ತಿಳಿದವರು ಹೇಳುತ್ತಾರೆ.

01146028a ಸ ಕುರುಷ್ವ ಮಯಾ ಕಾರ್ಯಂ ತಾರಯಾತ್ಮಾನಮಾತ್ಮನಾ|

01146028c ಅನುಜಾನೀಹಿ ಮಾಮಾರ್ಯ ಸುತೌ ಮೇ ಪರಿರಕ್ಷ ಚ||

ಈ ಕೆಲಸವು ನನ್ನಿಂದಲೇ ನಡೆಯಲಿ. ನೀನು ನಿನ್ನನ್ನು ಉಳಿಸಿಕೋ. ನನಗೆ ಹೋಗಲಿಕ್ಕೆ ಅನುಮತಿಯನ್ನು ನೀಡು. ಆರ್ಯ! ನನ್ನ ಈ ಮಕ್ಕಳನ್ನು ಪರಿರಕ್ಷಿಸು.

01146029a ಅವಧ್ಯಾಃ ಸ್ತ್ರಿಯೈತ್ಯಾಹುರ್ಧರ್ಮಜ್ಞಾ ಧರ್ಮನಿಶ್ಚಯೇ|

01146029c ಧರ್ಮಜ್ಞಾನ್ರಾಕ್ಷಸಾನಾಹುರ್ನ ಹನ್ಯಾತ್ಸ ಚ ಮಾಮಪಿ||

ಸ್ತ್ರೀಯನ್ನು ವಧಿಸಬಾರದೆಂದು ಧರ್ಮಜ್ಞರು ಧರ್ಮನಿಶ್ಚಯಗಳಲ್ಲಿ ಹೇಳುತ್ತಾರೆ. ರಾಕ್ಷಸರೂ ಧರ್ಮಜ್ಞರಿರುತ್ತಾರೆ. ಹಾಗಾಗಿ ಅವನು ನನ್ನನ್ನು ಕೊಲ್ಲದೆಯೂ ಇರಬಹುದು.

01146030a ನಿಃಸಂಶಯೋ ವಧಃ ಪುಂಸಾಂ ಸ್ತ್ರೀಣಾಂ ಸಂಶಯಿತೋ ವಧಃ|

01146030c ಅತೋ ಮಾಮೇವ ಧರ್ಮಜ್ಞ ಪ್ರಸ್ಥಾಪಯಿತುಮರ್ಹಸಿ||

ಪುರುಷನನ್ನು ಕೊಲ್ಲುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಸ್ತ್ರೀಯನ್ನು ಕೊಲ್ಲುತ್ತಾನೆ ಎನ್ನುವುದರಲ್ಲಿ ಅನುಮಾನವಿದೆ. ಆದುದರಿಂದ ಧರ್ಮಜ್ಞನಾದ ನೀನು ನನಗೆ ಹೊರಡಲು ಅನುಮತಿಯನ್ನು ನೀಡು.

01146031a ಭುಕ್ತಂ ಪ್ರಿಯಾಣ್ಯವಾಪ್ತಾನಿ ಧರ್ಮಶ್ಚ ಚರಿತೋ ಮಯಾ|

01146031c ತ್ವತ್ಪ್ರಸೂತಿಃ ಪ್ರಿಯಾ ಪ್ರಾಪ್ತಾ ನ ಮಾಂ ತಪ್ಸ್ಯತ್ಯಜೀವಿತಂ||

ನಾನು ಸಾಕಷ್ಟು ಭೋಗಿಸಿದ್ದೇನೆ. ಸಂತೋಷಪಟ್ಟಿದ್ದೇನೆ. ಧರ್ಮದಲ್ಲಿ ನಡೆದುಕೊಂಡಿದ್ದೇನೆ. ಮತ್ತು ನಿನ್ನಿಂದ ಈ ಮುದ್ದು ಮಕ್ಕಳನ್ನು ಪಡೆದಿದ್ದೇನೆ. ಸಾಯಲು ನನಗೆ ದುಃಖವೇನೂ ಆಗುತ್ತಿಲ್ಲ.

01146032a ಜಾತಪುತ್ರಾ ಚ ವೃದ್ಧಾ ಚ ಪ್ರಿಯಕಾಮಾ ಚ ತೇ ಸದಾ|

01146032c ಸಮೀಕ್ಷ್ಯೈತದಹಂ ಸರ್ವಂ ವ್ಯವಸಾಯಂ ಕರೋಮ್ಯತಃ||

ಮಕ್ಕಳ ತಾಯಿಯಾಗಿದ್ದೇನೆ. ಮುದಿಯಾಗುತ್ತಿದ್ದೇನೆ. ನಿನಗೆ ಪ್ರಿಯವಾದುದನ್ನು ಮಾಡಬೇಕೆಂದು ಸದಾ ಯೋಚಿಸುತ್ತಿದ್ದೆ. ಹೀಗಾಗಿ ಇವೆಲ್ಲವನ್ನು ನೋಡಿಯೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ.

01146033a ಉತ್ಸೃಜ್ಯಾಪಿ ಚ ಮಾಮಾರ್ಯ ವೇತ್ಸ್ಯಸ್ಯನ್ಯಾಮಪಿ ಸ್ತ್ರಿಯಂ|

01146033c ತತಃ ಪ್ರತಿಷ್ಠಿತೋ ಧರ್ಮೋ ಭವಿಷ್ಯತಿ ಪುನಸ್ತವ||

ಆರ್ಯ! ನನ್ನನ್ನು ಕಳೆದುಕೊಂಡರೂ ಕೂಡ ನಿನಗೆ ಅನ್ಯ ಸ್ತ್ರೀಯರು ದೊರಕುತ್ತಾರೆ. ನಿನ್ನ ಧರ್ಮವು ಪುನಃ ಚ್ಯುತಿಯಾಗುವುದಿಲ್ಲ.

01146034a ನ ಚಾಪ್ಯಧರ್ಮಃ ಕಲ್ಯಾಣ ಬಹುಪತ್ನೀಕತಾ ನೃಣಾಂ|

01146034c ಸ್ತ್ರೀಣಾಮಧರ್ಮಃ ಸುಮಹಾನ್ಭರ್ತುಃ ಪೂರ್ವಸ್ಯ ಲಂಘನೇ||

ಬಹುಪತ್ನಿಯರನ್ನು ವಿವಾಹವಾಗುವುದು ಪುರುಷರಿಗೆ ಅಧರ್ಮವೆಂದೆನಿಸಿಕೊಳ್ಳುವುದಿಲ್ಲ. ಆದರೆ ಮೊದಲ ಗಂಡನನ್ನು ಬಿಟ್ಟು ಮದುವೆಯಾಗುವುದು ಸ್ತ್ರಿಯರಿಗೆ ಮಹಾ ಅಧರ್ಮವೆನಿಸುತ್ತದೆ.

01146035a ಏತತ್ಸರ್ವಂ ಸಮೀಕ್ಷ್ಯ ತ್ವಮಾತ್ಮತ್ಯಾಗಂ ಚ ಗರ್ಹಿತಂ|

01146035c ಆತ್ಮಾನಂ ತಾರಯ ಮಯಾ ಕುಲಂ ಚೇಮೌ ಚ ದಾರಕೌ||

ಇವೆಲ್ಲವನ್ನೂ ನೋಡಿ ಮತ್ತು ನಿನಗೆ ಆತ್ಮತ್ಯಾಗವು ಸರಿಯಲ್ಲ ಎಂದು ತಿಳಿದು ನೀನು ನಿನ್ನನ್ನು, ಕುಲವನ್ನು ಮತ್ತು ಮಕ್ಕಳನ್ನು ನನ್ನ ಮೂಲಕವೇ ಉಳಿಸಿಕೊಳ್ಳಬೇಕು.””

01146036 ವೈಶಂಪಾಯನ ಉವಾಚ|

01146036a ಏವಮುಕ್ತಸ್ತಯಾ ಭರ್ತಾ ತಾಂ ಸಮಾಲಿಂಗ್ಯ ಭಾರತ|

01146036c ಮುಮೋಚ ಬಾಷ್ಪಂ ಶನಕೈಃ ಸಭಾರ್ಯೋ ಭೃಶದುಃಖಿತಃ||

ವೈಶಂಪಾಯನನು ಹೇಳಿದನು: “ಭಾರತ! ಹೀಗೆ ಹೇಳಿದ ಅವಳನ್ನು ಪತಿಯು ಆಲಿಂಗಿಸಿದನು. ಪತ್ನಿಯೂ ಸೇರಿ ಇಬ್ಬರೂ ದುಃಖ ಪೀಡಿತರಾಗಿ ಒಂದೇ ಸಮನೆ ಕಣ್ಣೀರಿಟ್ಟರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ಚತುಶಡ್ವಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾನಲ್ವತ್ತಾರನೆಯ ಅಧ್ಯಾಯವು.

Related image

Comments are closed.