Adi Parva: Chapter 145

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ: ಬಕವಧ ಪರ್ವ

೧೪೫

ಏಕಚಕ್ರನಗರದಲ್ಲಿ ಭಿಕ್ಷೆಬೇಡಿಕೊಂಡು ಪಾಂಡವರು ತಾಪಸರಂತೆ ಬ್ರಾಹ್ಮಣನ ಮನೆಯಲ್ಲಿ ವಾಸಿಸಿದುದು (೧-೮). ಒಂದು ದಿನ ಬ್ರಾಹ್ಮಣನ ಮನೆಯಲ್ಲಿ ರೋದನವನ್ನು ಕೇಳಿ ಕುಂತಿಯು ಹೋಗಿ ವಿಚಾರಿಸಿದುದು (೯-೧೯). ಬ್ರಾಹ್ಮಣನು ತಾನೇ ಸಾಯುವುದು ಒಳ್ಳೆಯದೆಂದು ತನ್ನ ಹೆಂಡತಿ-ಮಗಳಿಗೆ ಹೇಳುವುದು (೨೦-೪೦).

01145001 ಜನಮೇಜಯ ಉವಾಚ|

01145001a ಏಕಚಕ್ರಾಂ ಗತಾಸ್ತೇ ತು ಕುಂತೀಪುತ್ರಾ ಮಹಾರಥಾಃ|

01145001c ಅತಃ ಪರಂ ದ್ವಿಜಶ್ರೇಷ್ಠ ಕಿಮಕುರ್ವತ ಪಾಂಡವಾಃ||

ಜನಮೇಜಯನು ಹೇಳಿದನು: “ದ್ವಿಜಶ್ರೇಷ್ಠ! ಮಹಾರಥಿ ಪಾಂಡವ ಕುಂತೀಪುತ್ರರು ಏಕಚಕ್ರಕ್ಕೆ ಹೋಗಿ ಏನು ಮಾಡಿದರು?”

01145002 ವೈಶಂಪಾಯನ ಉವಾಚ|

01145002a ಏಕಚಕ್ರಾಂ ಗತಾಸ್ತೇ ತು ಕುಂತೀಪುತ್ರಾ ಮಹಾರಥಾಃ|

01145002c ಊಷುರ್ನಾತಿಚಿರಂ ಕಾಲಂ ಬ್ರಾಹ್ಮಣಸ್ಯ ನಿವೇಶನೇ||

ವೈಶಂಪಾಯನನು ಹೇಳಿದನು: “ಮಹಾರಥಿ ಕುಂತೀಪುತ್ರರು ಏಕಚಕ್ರಕ್ಕೆ ಹೋಗಿ ಬ್ರಾಹ್ಮಣನ ಮನೆಯಲ್ಲಿ ಸ್ವಲ್ಪ ಸಮಯ ಉಳಿದರು.

01145003a ರಮಣೀಯಾನಿ ಪಶ್ಯಂತೋ ವನಾನಿ ವಿವಿಧಾನಿ ಚ|

01145003c ಪಾರ್ಥಿವಾನಪಿ ಚೋದ್ದೇಶಾನ್ಸರಿತಶ್ಚ ಸರಾಂಸಿ ಚ||

01145004a ಚೇರುರ್ಭೈಕ್ಷಂ ತದಾ ತೇ ತು ಸರ್ವ ಏವ ವಿಶಾಂ ಪತೇ|

01145004c ಬಭೂವುರ್ನಾಗರಾಣಾಂ ಚ ಸ್ವೈರ್ಗುಣೈಃ ಪ್ರಿಯದರ್ಶನಾಃ||

ವಿಶಾಂಪತೇ! ಅವರೆಲ್ಲರೂ ಭಿಕ್ಷೆಬೇಡಲು ಹೋಗುತ್ತಿದ್ದಾಗ ರಮಣೀಯ ವಿವಿಧ ವನ, ರಾಜರ ದೇಶ ಮತ್ತು ನದೀ ಸರೋವರಗಳನ್ನು ಕಂಡರು. ತಮ್ಮ ಸುಗುಣಗಳಿಂದಾಗಿ ನಗರವಾಸಿಗಳಿಗೆ ಪ್ರಿಯದರ್ಶನರಾದರು.

01145005a ನಿವೇದಯಂತಿ ಸ್ಮ ಚ ತೇ ಭೈಕ್ಷಂ ಕುಂತ್ಯಾಃ ಸದಾ ನಿಶಿ|

01145005c ತಯಾ ವಿಭಕ್ತಾನ್ಭಾಗಾಂಸ್ತೇ ಭುಂಜತೇ ಸ್ಮ ಪೃಥಕ್ ಪೃಥಕ್||

01145006a ಅರ್ಧಂ ತೇ ಭುಂಜತೇ ವೀರಾಃ ಸಹ ಮಾತ್ರಾ ಪರಂತಪಾಃ|

01145006c ಅರ್ಧಂ ಭೈಕ್ಷಸ್ಯ ಸರ್ವಸ್ಯ ಭೀಮೋ ಭುಂಕ್ತೇ ಮಹಾಬಲಃ||

ಪ್ರತಿ ರಾತ್ರಿಯೂ ಅವರು ಭಿಕ್ಷವನ್ನು ಕುಂತಿಗೆ ತಂದು ಒಪ್ಪಿಸುತ್ತಿದ್ದರು. ಅದನ್ನು ಅವಳು ವಿಂಗಡಿಸಿದ ನಂತರ ಅವರವರ ಪಾಲುಗಳನ್ನು ಸೇವಿಸುತ್ತಿದ್ದರು: ಅರ್ಧವನ್ನು ತಾಯಿಯೂ ಸೇರಿ ಪರಂತಪ ವೀರರು ತಿನ್ನುತ್ತಿದ್ದರು. ಇನ್ನೊಂದು ಅರ್ಧ ಭಾಗವನ್ನೆಲ್ಲಾ ಮಹಾಬಲಿ ಭೀಮನು ತಿನ್ನುತ್ತಿದ್ದನು.

01145007a ತಥಾ ತು ತೇಷಾಂ ವಸತಾಂ ತತ್ರ ರಾಜನ್ಮಹಾತ್ಮನಾಂ|

01145007c ಅತಿಚಕ್ರಾಮ ಸುಮಹಾನ್ಕಾಲೋಽಥ ಭರತರ್ಷಭ||

ಭರತರ್ಷಭ! ರಾಜನ್! ಈ ರೀತಿ ಆ ಮಹಾತ್ಮರು ಅಲ್ಲಿ ವಾಸಿಸುತ್ತಾ ಬಹಳಷ್ಟು ಸಮಯ ಕಳೆಯಿತು.

01145008a ತತಃ ಕದಾ ಚಿದ್ಭೈಕ್ಷಾಯ ಗತಾಸ್ತೇ ಭರತರ್ಷಭಾಃ|

01145008c ಸಂಗತ್ಯಾ ಭೀಮಸೇನಸ್ತು ತತ್ರಾಸ್ತೇ ಪೃಥಯಾ ಸಹ||

ಒಮ್ಮೆ ಭರತರ್ಷಭರು ಭಿಕ್ಷಕ್ಕೆಂದು ಹೋಗಿದ್ದಾಗ, ಪೃಥಳಿಗೆ ಸಂಗಾತಿಯಾಗಿ ಭೀಮನು ಮನೆಯಲ್ಲಿಯೇ ಉಳಿದುಕೊಂಡನು.

01145009a ಅಥಾರ್ತಿಜಂ ಮಹಾಶಬ್ಧಂ ಬ್ರಾಹ್ಮಣಸ್ಯ ನಿವೇಶನೇ|

01145009c ಭೃಶಮುತ್ಪತಿತಂ ಘೋರಂ ಕುಂತೀ ಶುಶ್ರಾವ ಭಾರತ||

ಭಾರತ! ಆಗ ಇದ್ದಕ್ಕಿದ್ದಹಾಗೆ ಕುಂತಿಯು ಬ್ರಾಹ್ಮಣನ ಮನೆಯಿಂದ ದುಃಖಭರಿತ, ಘೋರ ಮಹಾಶಬ್ಧವನ್ನು ಕೇಳಿದಳು.

01145010a ರೋರೂಯಮಾಣಾಂಸ್ತಾನ್ಸರ್ವಾನ್ಪರಿದೇವಯತಶ್ಚ ಸಾ|

01145010c ಕಾರುಣ್ಯಾತ್ಸಾಧುಭಾವಾಚ್ಚ ದೇವೀ ರಾಜನ್ನ ಚಕ್ಷಮೇ||

ರಾಜನ್! ಪರಿವೇದನೆಯಲ್ಲಿ ಅಳುತ್ತಿರುವ ಎಲ್ಲರನ್ನೂ ಕೇಳಿ, ಸಾಧುಸ್ವಭಾವದ ಆ ದೇವಿಗೆ ಸಹಿಸಲು ಸಾಧ್ಯವಾಗಲಿಲ್ಲ.

01145011a ಮಥ್ಯಮಾನೇವ ದುಃಖೇನ ಹೃದಯೇನ ಪೃಥಾ ತತಃ|

01145011c ಉವಾಚ ಭೀಮಂ ಕಲ್ಯಾಣೀ ಕೃಪಾನ್ವಿತಮಿದಂ ವಚಃ||

ದುಃಖದಿಂದ ಅವಳ ಹೃದಯವು ತುಮುಲದಲ್ಲಿರಲು ಕಲ್ಯಾಣಿ ಪೃಥೆಯು ಭೀಮನಿಗೆ ಈ ಕೃಪಾನ್ವಿತ ಮಾತುಗಳನ್ನು ಹೇಳಿದಳು:

01145012a ವಸಾಮಃ ಸುಸುಖಂ ಪುತ್ರ ಬ್ರಾಹ್ಮಣಸ್ಯ ನಿವೇಶನೇ|

01145012c ಅಜ್ಞಾತಾ ಧಾರ್ತರಾಷ್ಟ್ರಾಣಾಂ ಸತ್ಕೃತಾ ವೀತಮನ್ಯವಃ||

“ಪುತ್ರ! ಧಾರ್ತರಾಷ್ಟ್ರರಿಗೆ ತಿಳಿಯದಂತೆ ಈ ಬ್ರಾಹ್ಮಣನ ಮನೆಯಲ್ಲಿ ನಾವು ಸುಖದಿಂದ ವಾಸಿಸುತ್ತಿದ್ದೇವೆ. ಮತ್ತು ನಾವು ಇಲ್ಲಿ ಸತ್ಕೃತರಾಗಿದ್ದೇವೆ.

01145013a ಸಾ ಚಿಂತಯೇ ಸದಾ ಪುತ್ರ ಬ್ರಾಹ್ಮಣಸ್ಯಾಸ್ಯ ಕಿಂ ನ್ವಹಂ|

01145013c ಪ್ರಿಯಂ ಕುರ್ಯಾಮಿತಿ ಗೃಹೇ ಯತ್ಕುರ್ಯುತಿರುಷಿತಾಃ ಸುಖಂ||

ಪುತ್ರ! ಬೇರೆಯವರ ಮನೆಯಲ್ಲಿ ಸುಖವಾಗಿ ವಾಸಿಸುತ್ತಿರುವವರು ಬಯಸುವಂತೆ ನಾನೂ ಕೂಡ ಈ ಬ್ರಾಹ್ಮಣನಿಗೆ ಏನನ್ನಾದರೂ ಒಳ್ಳೆಯದನ್ನು ಮಾಡಬೇಕೆಂದು ಸದಾ ಯೋಚಿಸುತ್ತಿದ್ದೆ.

01145014a ಏತಾವಾನ್ಪುರುಷಸ್ತಾತ ಕೃತಂ ಯಸ್ಮಿನ್ನ ನಶ್ಯತಿ|

01145014c ಯಾವಚ್ಚ ಕುರ್ಯಾದನ್ಯೋಽಸ್ಯ ಕುರ್ಯಾದಭ್ಯಧಿಕಂ ತತಃ||

ಪುರುಷನು ಮಾಡಿದ ಇಂಥಹದು ಎಂದೂ ನಷ್ಟವಾಗುವುದಿಲ್ಲ. ಬೇರೆಯವರಿಗೆ ಯಾರು ಸಹಾಯಮಾಡುತ್ತಾನೋ ಅವನಿಗೆ ಅದಕ್ಕಿಂತಲೂ ಹೆಚ್ಚಿನ ಸಹಾಯವನ್ನು ಮಾಡಬೇಕು.

01145015a ತದಿದಂ ಬ್ರಾಹ್ಮಣಸ್ಯಾಸ್ಯ ದುಃಖಮಾಪತಿತಂ ಧ್ರುವಂ|

01145015c ತತ್ರಾಸ್ಯ ಯದಿ ಸಾಹಾಯ್ಯಂ ಕುರ್ಯಾಮ ಸುಕೃತಂ ಭವೇತ್||

ಈ ಬ್ರಾಹ್ಮಣನಿಗೆ ಯಾವುದೋ ಒಂದು ದುಃಖವು ಬಂದೊದಗಿದೆಯೆಂದು ತೋರುತ್ತಿದೆ. ಈಗ ಅವನಿಗೆ ಸಹಾಯ ಮಾಡಿದರೆ ಒಳ್ಳೆಯದಾಗುತ್ತದೆ.”

01145016 ಭೀಮ ಉವಾಚ|

01145016a ಜ್ಞಾಯತಾಮಸ್ಯ ಯದ್ದುಃಖಂ ಯತಶ್ಚೈವ ಸಮುತ್ಥಿತಂ|

01145016c ವಿದಿತೇ ವ್ಯವಸಿಷ್ಯಾಮಿ ಯದ್ಯಪಿ ಸ್ಯಾತ್ಸುದುಷ್ಕರಂ||

ಭೀಮನು ಹೇಳಿದನು: “ಅವನಿಗೆ ಬಂದ ದುಃಖ ಏನು ಮತ್ತು ಎಲ್ಲಿಂದ ಎಂದು ತಿಳಿದುಕೊಳ್ಳೋಣ. ಅದನ್ನು ತಿಳಿದ ನಂತರ ಎಷ್ಟೇ ದುಷ್ಕರವಾಗಿರಲಿ ಏನು ಮಾಡಬೇಕೆಂದು ನಿರ್ಧರಿಸೋಣ.””

01145017 ವೈಶಂಪಾಯನ ಉವಾಚ|

01145017a ತಥಾ ಹಿ ಕಥಯಂತೌ ತೌ ಭೂಯಃ ಶುಶ್ರುವತುಃ ಸ್ವನಂ|

01145017c ಆರ್ತಿಜಂ ತಸ್ಯ ವಿಪ್ರಸ್ಯ ಸಭಾರ್ಯಸ್ಯ ವಿಶಾಂ ಪತೇ||

ವೈಶಂಪಾಯನನು ಹೇಳಿದನು: “ವಿಶಾಂಪತೇ! ಹೀಗೆ ಅವರೀರ್ವರೂ ಮಾತನಾಡಿಕೊಳ್ಳುತ್ತಿರುವಾಗ ಆ ಬ್ರಾಹ್ಮಣ ಮತ್ತು ಅವನ ಪತ್ನಿಯ ಆರ್ತಸ್ವರವು ಮತ್ತೊಮ್ಮೆ ಕೇಳಿಬಂದಿತು.

01145018a ಅಂತಃಪುರಂ ತತಸ್ತಸ್ಯ ಬ್ರಾಹ್ಮಣಸ್ಯ ಮಹಾತ್ಮನಃ|

01145018c ವಿವೇಶ ಕುಂತೀ ತ್ವರಿತಾ ಬದ್ಧವತ್ಸೇವ ಸೌರಭೀ||

ಕುಂತಿಯು ತಕ್ಷಣ ತ್ವರೆಮಾಡಿ ಕಟ್ಟಿದ ಕರುವನ್ನು ನೋಡಲು ಬರುವ ಗೋವಿನಂತೆ ಆ ಮಹಾತ್ಮ ಬ್ರಾಹ್ಮಣನ ಅಂತಃಪುರವನ್ನು ಪ್ರವೇಶಿಸಿದಳು.

01145019a ತತಸ್ತಂ ಬ್ರಾಹ್ಮಣಂ ತತ್ರ ಭಾರ್ಯಯಾ ಚ ಸುತೇನ ಚ|

01145019c ದುಹಿತ್ರಾ ಚೈವ ಸಹಿತಂ ದದರ್ಶ ವಿಕೃತಾನನಂ||

ಅಲ್ಲಿ ಅವಳು ದುಃಖದಿಂದ ವಿಕೃತಾನನ ಬ್ರಾಹ್ಮಣನನ್ನು ಅವನ ಭಾರ್ಯೆ, ಮಗ ಮತ್ತು ಮಗಳೊಡನೆ ಕಂಡಳು.

01145020 ಬ್ರಾಹ್ಮಣ ಉವಾಚ|

01145020a ಧಿಗಿದಂ ಜೀವಿತಂ ಲೋಕೇಽನಲಸಾರಮನರ್ಥಕಂ|

01145020c ದುಃಖಮೂಲಂ ಪರಾಧೀನಂ ಭೃಶಮಪ್ರಿಯಭಾಗಿ ಚ||

ಬ್ರಾಹ್ಮಣನು ಹೇಳಿದನು: “ಬೆಂಕಿಯಂತೆ ಕೇವಲ ದುಃಖವನ್ನೇ ಕೊಡುವ ಈ ಅನರ್ಥಕ, ದುಃಖಮೂಲ, ಪರಾಧೀನ ಲೋಕ ಜೀವನಕ್ಕೇ ಧಿಕ್ಕಾರ!

01145021a ಜೀವಿತೇ ಪರಮಂ ದುಃಖಂ ಜೀವಿತೇ ಪರಮೋ ಜ್ವರಃ|

01145021c ಜೀವಿತೇ ವರ್ತಮಾನಸ್ಯ ದ್ವಂದ್ವಾನಾಮಾಗಮೋ ಧ್ರುವಃ||

ಜೀವನವೇ ಪರಮ ದುಃಖ; ಜೀವನವೇ ಪರಮ ಜ್ವರ; ಮತ್ತು ಬದುಕು ಕೇವಲ ದುಃಖಗಳ ಆಯ್ಕೆಯನ್ನು ನೀಡುತ್ತದೆ.

01145022a ಏಕಾತ್ಮಾಪಿ ಹಿ ಧರ್ಮಾರ್ಥೌ ಕಾಮಂ ಚ ನ ನಿಷೇವತೇ|

01145022c ಏತೈಶ್ಚ ವಿಪ್ರಯೋಗೋಽಪಿ ದುಃಖಂ ಪರಮಕಂ ಮತಂ||

ಧರ್ಮ, ಅರ್ಥ, ಕಾಮ ಎಲ್ಲವೂ ಒಬ್ಬನಿಗೇ ದೊರೆಯುವುದಿಲ್ಲ. ಇದೇ ಜನರ ಪರಮ ದುಃಖ.

01145023a ಆಹುಃ ಕೇ ಚಿತ್ಪರಂ ಮೋಕ್ಷಂ ಸ ಚ ನಾಸ್ತಿ ಕಥಂ ಚನ|

01145023c ಅರ್ಥಪ್ರಾಪ್ತೌ ಚ ನರಕಃ ಕೃತ್ಸ್ನ ಏವೋಪಪದ್ಯತೇ||

01145024a ಅರ್ಥೇಪ್ಸುತಾ ಪರಂ ದುಃಖಮರ್ಥಪ್ರಾಪ್ತೌ ತತೋಽಧಿಕಂ|

01145024c ಜಾತಸ್ನೇಹಸ್ಯ ಚಾರ್ಥೇಷು ವಿಪ್ರಯೋಗೇ ಮಹತ್ತರಂ||

ಕೆಲವರು ಮೋಕ್ಷವೇ ಪರವೆಂದು ಹೇಳುತ್ತಾರೆ. ಆದರೆ ಅದೇ ಎಲ್ಲಿಯೂ ಇಲ್ಲ. ಹಣಸಂಪಾದನೆಯು ಕೇವಲ ನರಕವನ್ನೇ ಕೊಡುತ್ತದೆ. ಹಣದ ಹಿಂದೆ ಹೋಗುವುದು ಬಹಳ ದುಃಖವನ್ನು ತಂದೊಡ್ಡುತ್ತದೆ. ಹೆಚ್ಚು ಹಣವನ್ನು ಹೊಂದಿದವನಿಗೆ ದುಃಖವೂ ಹೆಚ್ಚಾಗಿರುತ್ತದೆ.

01145025a ನ ಹಿ ಯೋಗಂ ಪ್ರಪಶ್ಯಾಮಿ ಯೇನ ಮುಚ್ಯೇಯಮಾಪದಃ|

01145025c ಪುತ್ರದಾರೇಣ ವಾ ಸಾರ್ಧಂ ಪ್ರಾದ್ರವೇಯಾಮನಾಮಯಂ||

ನನ್ನ ಮಕ್ಕಳು ಮತ್ತು ಪತ್ನಿಯ ಸಹಿತ ಸುರಕ್ಷಿತವಾದಲ್ಲಿಗೆ ಹೋಗುವುದರ ಹೊರತಾಗಿ ಈ ಆಪತ್ತಿನಿಂದ ತಪ್ಪಿಸಿಕೊಳ್ಳಲು ನನಗೆ ಬೇರೆ ಯಾವ ಮಾರ್ಗವೂ ತೋರುತ್ತಿಲ್ಲ.

01145026a ಯತಿತಂ ವೈ ಮಯಾ ಪೂರ್ವಂ ಯಥಾ ತ್ವಂ ವೇತ್ಥ ಬ್ರಾಹ್ಮಣಿ|

01145026c ಯತಃ ಕ್ಷೇಮಂ ತತೋ ಗಂತುಂ ತ್ವಯಾ ತು ಮಮ ನ ಶ್ರುತಂ||

ಬ್ರಾಹ್ಮಣಿ! ಹಿಂದೆಯೇ ನಾನು ಕ್ಷೇಮಕರ ಬೇರೆ ಎಲ್ಲಿಯಾದರೂ ಹೋಗೋಣ ಎಂದು ಹೇಳಿದ್ದೆ. ಆದರೆ ನೀನು ನನ್ನ ಮಾತುಗಳನ್ನು ಕೇಳಲಿಲ್ಲ.

01145027a ಇಹ ಜಾತಾ ವಿವೃದ್ಧಾಸ್ಮಿ ಪಿತಾ ಚೇಹ ಮಮೇತಿ ಚ|

01145027c ಉಕ್ತವತ್ಯಸಿ ದುರ್ಮೇಧೇ ಯಾಚ್ಯಮಾನಾ ಮಯಾಸಕೃತ್||

“ಇಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ನನ್ನ ತಂದೆಯೂ ಇಲ್ಲಿಯೇ ಇರುತ್ತಾನೆ” ಎನ್ನುವ ದಡ್ಡ ಮಾತುಗಳಿಂದ ನನ್ನ ಎಲ್ಲ ಒತ್ತಾಯಗಳನ್ನೂ ದೂರಮಾಡಿದೆ.

01145028a ಸ್ವರ್ಗತೋ ಹಿ ಪಿತಾ ವೃದ್ಧಸ್ತಥಾ ಮಾತಾ ಚಿರಂ ತವ|

01145028c ಬಾಂಧವಾ ಭೂತಪೂರ್ವಾಶ್ಚ ತತ್ರ ವಾಸೇ ತು ಕಾ ರತಿಃ||

ಈಗ ನಿನ್ನ ತಂದೆ ತಾಯಿಯರು ಸ್ವರ್ಗವಾಸಿಗಳಾಗಿದ್ದಾರೆ, ಬಂಧುಗಳು ಕೂಡ ತೀರಿಕೊಂಡಿದ್ದಾರೆ. ಇಲ್ಲಿಯೇ ವಾಸಿಸುವುದರಿಂದ ಸಂತೋಷವಾದರೂ ಏನು ದೊರೆಯುತ್ತಿದೆ?

01145029a ಸೋಽಯಂ ತೇ ಬಂಧುಕಾಮಾಯಾ ಅಶೃಣ್ವಂತ್ಯಾ ವಚೋ ಮಮ|

01145029c ಬಂಧುಪ್ರಣಾಶಃ ಸಂಪ್ರಾಪ್ತೋ ಭೃಶಂ ದುಃಖಕರೋ ಮಮ||

ಅಂದು ನೀನು ಬಂಧುಗಳ ಸಲುವಾಗಿ ನನ್ನ ಮಾತುಗಳನ್ನು ಕೇಳದೇ ಇದ್ದುದರಿಂದ ಈಗ ನಮ್ಮ ಕುಟುಂಬವನ್ನು ಕಳೆದುಕೊಳ್ಳುವ ಕಾಲ ಬಂದೊದಗಿತಲ್ಲ ಎಂದು ನನಗೆ ಅತ್ಯಂತ ದುಃಖವಾಗುತ್ತಿದೆ.

01145030a ಅಥವಾ ಮದ್ವಿನಾಶೋಽಯಂ ನ ಹಿ ಶಕ್ಷ್ಯಾಮಿ ಕಂ ಚನ|

01145030c ಪರಿತ್ಯಕ್ತುಮಹಂ ಬಂಧುಂ ಸ್ವಯಂ ಜೀವನ್ನೃಶಂಸವತ್||

ಅಥವಾ ಇದು ನನ್ನ ವಿನಾಶವನ್ನೇ ತರುತ್ತದೆ. ಏಕೆಂದರೆ, ಕರುಣೆಯಿಲ್ಲದವನಂತೆ ಬಂಧು ಯಾರನ್ನೂ ಬಲಿಕೊಟ್ಟು ಸ್ವಯಂ ನಾನು ಜೀವಿಸಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ!

01145031a ಸಹಧರ್ಮಚರೀಂ ದಾಂತಾಂ ನಿತ್ಯಂ ಮಾತೃಸಮಾಂ ಮಮ|

01145031c ಸಖಾಯಂ ವಿಹಿತಾಂ ದೇವೈರ್ನಿತ್ಯಂ ಪರಮಿಕಾಂ ಗತಿಂ||

ನಿತ್ಯವೂ ನನ್ನ ತಾಯಿಯ ಸಮನಾಗಿರುವ ಸಹಧರ್ಮಚಾರಿಣಿ ನಿನ್ನನ್ನು ದೇವರಿಂದಲೇ ನನ್ನ ಸಖಿಯಾಗಿ ಪಡೆದಿದ್ದೇನೆ. ನೀನೇ ನನ್ನ ಪರಮ ಗತಿ.

01145032a ಮಾತ್ರಾ ಪಿತ್ರಾ ಚ ವಿಹಿತಾಂ ಸದಾ ಗಾರ್ಹಸ್ಥ್ಯಭಾಗಿನೀಂ|

01145032c ವರಯಿತ್ವಾ ಯಥಾನ್ಯಾಯಂ ಮಂತ್ರವತ್ಪರಿಣೀಯ ಚ||

01145033a ಕುಲೀನಾಂ ಶೀಲಸಂಪನ್ನಾಮಪತ್ಯಜನನೀಂ ಮಮ|

01145033c ತ್ವಾಮಹಂ ಜೀವಿತಸ್ಯಾರ್ಥೇ ಸಾಧ್ವೀಮನಪಕಾರಿಣೀಂ|

01145033e ಪರಿತ್ಯಕ್ತುಂ ನ ಶಕ್ಷ್ಯಾಮಿ ಭಾರ್ಯಾಂ ನಿತ್ಯಮನುವ್ರತಾಂ||

ಸದಾ ನನ್ನ ಗಾರ್ಹಸ್ಥ್ಯಭಾಗಿಯಾಗಿರೆಂದು ನಿನ್ನ ತಂದೆ ತಾಯಿಗಳು ನಿನ್ನನು ನನಗೆ ಮದುವೆ ಮಾಡಿಕೊಟ್ಟರು. ನಾನೂ ಕೂಡ ನ್ಯಾಯದಂತೆ ನಿನ್ನನ್ನು ಮೆಚ್ಚಿ ಮಂತ್ರಪೂರ್ವಕವಾಗಿ ಮದುವೆಯಾದೆ. ಈಗ ನನ್ನ ಜೀವನವನ್ನು ಉಳಿಸಿಕೊಳ್ಳಲೋಸುಗ ಕುಲೀನೆ, ಶೀಲಸಂಪನ್ನೆ, ಸಾಧ್ವಿ, ಅನಪಕಾರಿಣೀ, ನಿತ್ಯವೂ ಅನುವ್ರತಳಾದ, ನನ್ನ ಮಕ್ಕಳ ತಾಯಿಯಾದ ನಿನ್ನನ್ನು ಪರಿತ್ಯಜಿಸಲು ಶಕ್ತನಿಲ್ಲ.

01145034a ಕುತ ಏವ ಪರಿತ್ಯಕ್ತುಂ ಸುತಾಂ ಶಕ್ಷ್ಯಾಮ್ಯಹಂ ಸ್ವಯಂ|

01145034c ಬಾಲಾಮಪ್ರಾಪ್ತವಯಸಂ ಅಜಾತವ್ಯಂಜನಾಕೃತಿಂ||

ಯೌವನದ ಚಿಹ್ನೆಗಳಿನ್ನೂ ಕಂಡುಬಂದಿರದ ಈ ಬಾಲಕಿ ಅಪ್ರಾಪ್ತವಯಸ್ಕ ನನ್ನ ಈ ಮಗಳನ್ನು ನಾನಾಗಿಯೇ ಹೇಗೆ ಪರಿತ್ಯಾಗಮಾಡಬಲ್ಲೆ?

01145035a ಭರ್ತುರರ್ಥಾಯ ನಿಕ್ಷಿಪ್ತಾಂ ನ್ಯಾಸಂ ಧಾತ್ರಾ ಮಹಾತ್ಮನಾ|

01145035c ಯಸ್ಯಾಂ ದೌಹಿತ್ರಜಾಽಲ್ಲೋಕಾನಾಶಂಸೇ ಪಿತೃಭಿಃ ಸಹ|

01145035e ಸ್ವಯಮುತ್ಪಾದ್ಯ ತಾಂ ಬಾಲಾಂ ಕಥಮುತ್ಸ್ರಷ್ಟುಮುತ್ಸಹೇ||

ಮಹಾತ್ಮ ಧಾತ್ರುವು ಭರ್ತುವೋರ್ವನಿಗಾಗಿ ಅವಳನ್ನು ನನ್ನಲ್ಲಿ ಒತ್ತೆ ಇಟ್ಟಿದ್ದಾನೆ. ಮಗಳ ಮಗನಿಂದ ತೆರೆಯಲ್ಪಡುವ ಲೋಕಗಳಿಗೆ ನನ್ನ ಪಿತೃಗಳ ಸಹಿತ ನಾನೂ ಭಾಗಧಾರಿಯಾಗಿದ್ದೇನೆ. ಆದುದರಿಂದ ನಾನೇ ಜನ್ಮವಿತ್ತಿರುವ ಈ ಬಾಲಕಿಯನ್ನು ಹೇಗೆ ತಾನೆ ಪರಿತ್ಯಾಗ ಮಾಡಬಲ್ಲೆ?

01145036a ಮನ್ಯಂತೇ ಕೇ ಚಿದಧಿಕಂ ಸ್ನೇಹಂ ಪುತ್ರೇ ಪಿತುರ್ನರಾಃ|

01145036c ಕನ್ಯಾಯಾಂ ನೈವ ತು ಪುನರ್ಮಮ ತುಲ್ಯಾವುಭೌ ಮತೌ||

01145037a ಯಸ್ಮಿಽಲ್ಲೋಕಾಃ ಪ್ರಸೂತಿಶ್ಚ ಸ್ಥಿತಾ ನಿತ್ಯಮಥೋ ಸುಖಂ|

01145037c ಅಪಾಪಾಂ ತಾಮಹಂ ಬಾಲಾಂ ಕಥಮುತ್ಸ್ರಷ್ಟುಮುತ್ಸಹೇ||

ತಂದೆಯಾದವನಿಗೆ ಮಗನಲ್ಲಿ ಹೆಚ್ಚು ಪ್ರೀತಿಯಿರುತ್ತದೆ ಮತ್ತು ಪುತ್ರಿಯರಲ್ಲಿ ಪ್ರೀತಿ ಅಷ್ಟು ಇರುವುದಿಲ್ಲ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ನನಗೆ ಇಬ್ಬರೂ ಒಂದೇ. ಉತ್ತಮ ಲೋಕಗಳ, ಸಂತಾನದ ಮತ್ತು ಶಾಶ್ವತ ಸುಖದ ನೆಲೆಯಾಗಿರುವ ಪಾಪರಹಿತ ಈ ಬಾಲೆಯನ್ನು ನಾನು ಹೇಗೆ ತಾನೆ ಪರಿತ್ಯಾಗ ಮಾಡಲು ಪ್ರಯತ್ನಿಸುವೆ?

01145038a ಆತ್ಮಾನಮಪಿ ಚೋತ್ಸೃಜ್ಯ ತಪ್ಸ್ಯೇ ಪ್ರೇತವಶಂ ಗತಃ|

01145038c ತ್ಯಕ್ತಾ ಹ್ಯೇತೇ ಮಯಾ ವ್ಯಕ್ತಂ ನೇಹ ಶಕ್ಷ್ಯಂತಿ ಜೀವಿತುಂ||

ನನ್ನನ್ನು ನಾನೇ ಬಲಿಕೊಟ್ಟು ಪ್ರೇತವಶನಾದರೂ ಪರಿತಪಿಸುತ್ತೇನೆ. ಏಕೆಂದರೆ ನನ್ನಿಂದ ವಿಮುಕ್ತರಾದ ಇವರು ಈ ಲೋಕದಲ್ಲಿ ಜೀವಿಸಲಾರರು ಎನ್ನುವುದು ಸ್ಪಷ್ವ.

01145039a ಏಷಾಂ ಚಾನ್ಯತಮತ್ಯಾಗೋ ನೃಶಂಸೋ ಗರ್ಹಿತೋ ಬುಧೈಃ|

01145039c ಆತ್ಮತ್ಯಾಗೇ ಕೃತೇ ಚೇಮೇ ಮರಿಷ್ಯಂತಿ ಮಯಾ ವಿನಾ||

ಇವರಲ್ಲಿ ಯಾರನ್ನು ಪರಿತ್ಯಾಗಮಾಡಿದರೂ ತಿಳಿದವರು ಗರ್ಹಿತನೆಂದು ನಿಂದಿಸುತ್ತಾರೆ. ಆದರೆ ಅತ್ಮಪರಿತ್ಯಾಗ ಮಾಡಿದರೂ ಇವರೆಲ್ಲರೂ ನನ್ನ ವಿನಹ ನಾಶಗೊಳ್ಳುತ್ತಾರೆ.

01145040a ಸ ಕೃಚ್ಛ್ರಾಮಹಮಾಪನ್ನೋ ನ ಶಕ್ತಸ್ತರ್ತುಮಾಪದಂ|

01145040c ಅಹೋ ಧಿಕ್ಕಾಂ ಗತಿಂ ತ್ವದ್ಯ ಗಮಿಷ್ಯಾಮಿ ಸಬಾಂಧವಃ|

01145040e ಸರ್ವೈಃ ಸಹ ಮೃತಂ ಶ್ರೇಯೋ ನ ತು ಮೇ ಜೀವಿತಂ ಕ್ಷಮಂ||

ಈ ಕಷ್ಟಕರ ಮಹಾ ಆಪತ್ತಿನಲ್ಲಿ ಸಿಲುಕಿರುವ ನನಗೆ ಪಾರಾಗಲು ಶಕ್ಯವಾಗುತ್ತಿಲ್ಲ. ಸಬಾಂಧವನಾದ ನನಗೆ ಹೋಗಲಿಕ್ಕೆ ದಾರಿಯಾದರು ಏನಿದೆ? ಎಲ್ಲರೂ ಕೂಡಿ ಸಾಯುವುದೇ ಶ್ರೇಯಸ್ಸು. ನಾನು ಬದುಕಿರುವುದಂತೂ ಸಾಧ್ಯವಿಲ್ಲ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಬಕವಧಪರ್ವಣಿ ಚತುಶ್ಪಂಚಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಬಕವಧಪರ್ವದಲ್ಲಿ ನೂರಾನಲ್ವತ್ತೈದನೆಯ ಅಧ್ಯಾಯವು.

Related image

Comments are closed.