ಆದಿ ಪರ್ವ: ಹಿಡಿಂಬವಧ ಪರ್ವ
೧೪೨
ಕುಂತಿಯು ಕೇಳಲು ಹಿಡಿಂಬಿಯು ತನ್ನ ಪರಿಚಯವನ್ನು ಹೇಳಿಕೊಂಡು, ತಾನು ಭೀಮನನ್ನು ಬಯಸಿದುದನ್ನೂ, ಅಣ್ಣ ಹಿಡಿಂಬನೊಂದಿಗೆ ಭೀಮನು ಹೋರಾಡುತ್ತಿರುವುದನ್ನೂ ಹೇಳಿದುದು (೧-೧೨). ಹಿಡಿಂಬನೊಂದಿಗೆ ಹೋರಾಡುತ್ತಿದ್ದ ಭೀಮನಿಗೆ ಅರ್ಜುನನು ಬೇಗ ಮುಗಿಸೆಂದು ಸೂಚಿಸುವುದು, ಭೀಮನು ಹಿಂಡಿಂಬನನ್ನು ಕೊಂದುದು (೧೩-೨೮). ಕಾಡನ್ನು ಬಿಟ್ಟು ಹೋಗುತ್ತಿದ್ದ ಪಾಂಡವರನ್ನು ಹಿಡಿಂಬಿಯು ಹಿಂಬಾಲಿಸಿ ಹೋದುದು (೨೯-೩೪).
01142001 ವೈಶಂಪಾಯನ ಉವಾಚ|
01142001a ಪ್ರಬುದ್ಧಾಸ್ತೇ ಹಿಡಿಂಬಾಯಾ ರೂಪಂ ದೃಷ್ಟ್ವಾತಿಮಾನುಷಂ|
01142001c ವಿಸ್ಮಿತಾಃ ಪುರುಷವ್ಯಾಘ್ರಾ ಬಭೂವುಃ ಪೃಥಯಾ ಸಹ||
ವೈಶಂಪಾಯನನು ಹೇಳಿದನು: “ಎಚ್ಚೆತ್ತ ಪೃಥೆಯ ಸಹಿತ ಆ ಪುರುಷವ್ಯಾಘ್ರರು ಅಮಾನುಷ ರೂಪಿಣಿ ಹಿಡಿಂಬೆಯನ್ನು ನೋಡಿ ವಿಸ್ಮಿತರಾದರು.
01142002a ತತಃ ಕುಂತೀ ಸಮೀಕ್ಷ್ಯೈನಾಂ ವಿಸ್ಮಿತಾ ರೂಪಸಂಪದಾ|
01142002c ಉವಾಚ ಮಧುರಂ ವಾಕ್ಯಂ ಸಾಂತ್ವಪೂರ್ವಮಿದಂ ಶನೈಃ||
ಆ ರೂಪಸಂಪದೆಯನ್ನು ನೋಡಿ ವಿಸ್ಮಿತಳಾದ ಕುಂತಿಯು, ನಿಧಾನವಾಗಿ ಸಾಂತ್ವನ ಪೂರ್ವಕ ಈ ಮಧುರ ವಾಖ್ಯಗಳನ್ನು ನುಡಿದಳು:
01142003a ಕಸ್ಯ ತ್ವಂ ಸುರಗರ್ಭಾಭೇ ಕಾ ಚಾಸಿ ವರವರ್ಣಿನಿ|
01142003c ಕೇನ ಕಾರ್ಯೇಣ ಸುಶ್ರೋಣಿ ಕುತಶ್ಚಾಗಮನಂ ತವ||
“ವರವರ್ಣಿನಿ! ಸುರರ ಮಗುವಂತಿರುವ ನೀನು ಯಾರು? ಯಾವ ಕೆಲಸವನ್ನಿಟ್ಟು-ಕೊಂಡು ನೀನು ಇಲ್ಲಿಗೆ ಬಂದಿರುವೆ? ಎಲ್ಲಿಂದ ಬಂದಿರುವೆ?
01142004a ಯದಿ ವಾಸ್ಯ ವನಸ್ಯಾಸಿ ದೇವತಾ ಯದಿ ವಾಪ್ಸರಾಃ|
01142004c ಆಚಕ್ಷ್ವ ಮಮ ತತ್ಸರ್ವಂ ಕಿಮರ್ಥಂ ಚೇಹ ತಿಷ್ಠಸಿ||
ನೀನು ಈ ವನದ ದೇವತೆಯಾಗಿದ್ದರೆ ಅಥವಾ ಅಪ್ಸರೆಯಾಗಿದ್ದರೆ ಎಲ್ಲವನ್ನೂ ನನಗೆ ಹೇಳು. ನೀನು ಏಕೆ ಇಲ್ಲಿ ನಿಂತಿದ್ದೀಯೆ ಹೇಳು.”
01142005 ಹಿಡಿಂಬೋವಾಚ|
01142005a ಯದೇತತ್ಪಶ್ಯಸಿ ವನಂ ನೀಲಮೇಘನಿಭಂ ಮಹತ್|
01142005c ನಿವಾಸೋ ರಾಕ್ಷಸಸ್ಯೈತದ್ ಹಿಡಿಂಬಸ್ಯ ಮಮೈವ ಚ||
ಹಿಡಿಂಬೆಯು ಹೇಳಿದಳು: “ನೀಲಮೇಘನಿಭದಂತೆ ದಟ್ಟ ಈ ಮಹಾವನವನ್ನು ನೀನೇನು ನೋಡುತ್ತಿದ್ದೀಯೋ ಅದು ನನ್ನ ಮತ್ತು ರಾಕ್ಷಸ ಹಿಡಿಂಬನ ವಾಸಸ್ಥಳ.
01142006a ತಸ್ಯ ಮಾಂ ರಾಕ್ಷಸೇಂದ್ರಸ್ಯ ಭಗಿನೀಂ ವಿದ್ಧಿ ಭಾಮಿನಿ|
01142006c ಭ್ರಾತ್ರಾ ಸಂಪ್ರೇಷಿತಾಮಾರ್ಯೇ ತ್ವಾಂ ಸಪುತ್ರಾಂ ಜಿಘಾಂಸತಾ||
ಭಾಮಿನಿ! ನಾನು ಆ ರಾಕ್ಷಸೇಂದ್ರನ ತಂಗಿಯೆಂದು ತಿಳಿ. ನಿನ್ನನ್ನು ಮತ್ತು ನಿನ್ನ ಪುತ್ರರನ್ನು ಭಕ್ಷಿಸ ಬಯಸಿದ ನನ್ನ ಅಣ್ಣನು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ.
01142007a ಕ್ರೂರಬುದ್ಧೇರಹಂ ತಸ್ಯ ವಚನಾದಾಗತಾ ಇಹ|
01142007c ಅದ್ರಾಕ್ಷಂ ಹೇಮವರ್ಣಾಭಂ ತವ ಪುತ್ರಂ ಮಹೌಜಸಂ||
ಆ ಕ್ರೂರ ರಾಕ್ಷಸನ ಅಪ್ಪಣೆಯಂತೆ ನಾನು ಇಲ್ಲಿಗೆ ಬಂದೆ. ಇಲ್ಲಿ ನಿನ್ನ ಹೇಮವರ್ಣದ ಮಹೌಜಸ ಪುತ್ರನನ್ನು ಕಂಡೆ.
01142008a ತತೋಽಹಂ ಸರ್ವಭೂತಾನಾಂ ಭಾವೇ ವಿಚರತಾ ಶುಭೇ|
01142008c ಚೋದಿತಾ ತವ ಪುತ್ರಸ್ಯ ಮನ್ಮಥೇನ ವಶಾನುಗಾ||
ಶುಭೇ! ಸರ್ವಭೂತಗಳಲ್ಲಿ ವಿಚರಿಸಿರುವ ಮನ್ಮಥನಿಂದ ತಳ್ಳಲ್ಪಟ್ಟು ನಾನು ನಿನ್ನ ಪುತ್ರನ ವಶದಲ್ಲಿ ಬಂದೆ.
01142009a ತತೋ ವೃತೋ ಮಯಾ ಭರ್ತಾ ತವ ಪುತ್ರೋ ಮಹಾಬಲಃ|
01142009c ಅಪನೇತುಂ ಚ ಯತಿತೋ ನ ಚೈವ ಶಕಿತೋ ಮಯಾ||
ನಿನ್ನ ಮಹಾಬಲಶಾಲಿ ಪುತ್ರನನ್ನು ನನ್ನ ಪತಿಯನ್ನಾಗಿ ವರಿಸಿದ್ದೇನೆ. ಅವನನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ.
01142010a ಚಿರಾಯಮಾಣಾಂ ಮಾಂ ಜ್ಞಾತ್ವಾ ತತಃ ಸ ಪುರುಷಾದಕಃ|
01142010c ಸ್ವಯಮೇವಾಗತೋ ಹಂತುಮಿಮಾನ್ಸರ್ವಾಂಸ್ತವಾತ್ಮಜಾನ್||
ನಾನು ಹಿಂದಿರುಗುವುದಕ್ಕೆ ತಡವಾದದ್ದನ್ನು ತಿಳಿದ ಆ ನರಭಕ್ಷಕನು ನಿನ್ನ ಪುತ್ರರನ್ನು ಕೊಲ್ಲಲು ಸ್ವಯಂ ತಾನೇ ಇಲ್ಲಿಗೆ ಬಂದನು.
01142011a ಸ ತೇನ ಮಮ ಕಾಂತೇನ ತವ ಪುತ್ರೇಣ ಧೀಮತಾ|
01142011c ಬಲಾದಿತೋ ವಿನಿಷ್ಪಿಷ್ಯ ವ್ಯಪಕೃಷ್ಟೋ ಮಹಾತ್ಮನಾ||
ನನ್ನ ಕಾಂತ ನಿನ್ನ ಧೀಮಂತ ಪುತ್ರ ಮಹಾತ್ಮನು ಅವನನ್ನು ನೆಲದ ಮೇಲೆ ಚಚ್ಚಿಹಾಕಿ ಇಲ್ಲಿಂದ ಬಲವಂತವಾಗಿ ಎಳೆದುಕೊಂಡು ಹೋದನು.
01142012a ವಿಕರ್ಷಂತೌ ಮಹಾವೇಗೌ ಗರ್ಜಮಾನೌ ಪರಸ್ಪರಂ|
01142012c ಪಶ್ಯಧ್ವಂ ಯುಧಿ ವಿಕ್ರಾಂತಾವೇತೌ ತೌ ನರರಾಕ್ಷಸೌ||
ಅಲ್ಲಿ ನೋಡು! ಮಹಾವೇಗದಲ್ಲಿ ಗರ್ಜಿಸುತ್ತಾ ಪರಸ್ಪರ ಹೋರಾಡುತ್ತಿರುವ ಆ ವಿಕ್ರಾಂತ ನರ ರಾಕ್ಷಸರನ್ನು ನೋಡು.””
01142013 ವೈಶಂಪಾಯನ ಉವಾಚ|
01142013a ತಸ್ಯಾಃ ಶ್ರುತ್ವೈವ ವಚನಮುತ್ಪಪಾತ ಯುಧಿಷ್ಠಿರಃ|
01142013c ಅರ್ಜುನೋ ನಕುಲಶ್ಚೈವ ಸಹದೇವಶ್ಚ ವೀರ್ಯವಾನ್||
01142014a ತೌ ತೇ ದದೃಶುರಾಸಕ್ತೌ ವಿಕರ್ಷಂತೌ ಪರಸ್ಪರಂ|
01142014c ಕಾಂಕ್ಷಮಾಣೌ ಜಯಂ ಚೈವ ಸಿಂಹಾವಿವ ರಣೋತ್ಕಟೌ||
ವೈಶಂಪಾಯನನು ಹೇಳಿದನು: “ಅವಳ ಮಾತುಗಳನ್ನು ಕೇಳುತ್ತಿದ್ದಂತೆಯೇ ವೀರ ಯುಧಿಷ್ಠಿರ, ಅರ್ಜುನ ಮತ್ತು ನಕುಲ ಸಹದೇವರು ಮೇಲೆದ್ದು ಜಯವನ್ನು ಬಯಸುತ್ತಾ ಪರಸ್ಪರರನ್ನು ಎಳೆದಾಡುತ್ತಿರುವ ರಣೋತ್ಕಟ ಎರಡು ಸಿಂಹಗಳಂತೆ ಹೊಡೆದಾಡುತ್ತಿರುವ ಅವರೀರ್ವರನ್ನು ಕಂಡರು.
01142015a ತಾವನ್ಯೋನ್ಯಂ ಸಮಾಶ್ಲಿಷ್ಯ ವಿಕರ್ಷಂತೌ ಪರಸ್ಪರಂ|
01142015c ದಾವಾಗ್ನಿಧೂಮಸದೃಶಂ ಚಕ್ರತುಃ ಪಾರ್ಥಿವಂ ರಜಃ||
ಅವರು ಅನ್ಯೋನ್ಯರನ್ನು ಹಿಡಿದು ಪರಸ್ಪರರನ್ನು ಎಳೆಯುತ್ತಾ ಕಾಡ್ಗಿಚ್ಚಿನ ಹೊಗೆಯಂತೆ ದಟ್ಟ ಧೂಳನ್ನೆಬ್ಬಿಸಿದರು.
01142016a ವಸುಧಾರೇಣುಸಂವೀತೌ ವಸುಧಾಧರಸಂನಿಭೌ|
01142016c ವಿಭ್ರಾಜೇತಾಂ ಯಥಾ ಶೈಲೌ ನೀಹಾರೇಣಾಭಿಸಂವೃತೌ||
ಅವರು ಧೂಳಿನಿಂದ ಮುಚ್ಚಿದ ಬೆಟ್ಟಗಳಂತೆ ಕಂಡರು, ಮತ್ತು ಮಂಜು ಮುಸುಕಿದ ಕಲ್ಲಿನ ಬೆಟ್ಟಗಳಂತೆ ಕಂಡರು.
01142017a ರಾಕ್ಷಸೇನ ತಥಾ ಭೀಮಂ ಕ್ಲಿಶ್ಯಮಾನಂ ನಿರೀಕ್ಷ್ಯ ತು|
01142017c ಉವಾಚೇದಂ ವಚಃ ಪಾರ್ಥಃ ಪ್ರಹಸಂಶನಕೈರಿವ||
ಭೀಮನು ಆ ರಾಕ್ಷಸನಿಂದ ಕಷ್ಟಕ್ಕೊಳಗಾದುದನ್ನು ನೋಡಿದ ಪಾರ್ಥನು ನಗುತ್ತಾ ಮೆಲ್ಲನೆ ಹೇಳಿದನು:
01142018a ಭೀಮ ಮಾ ಭೈರ್ಮಹಾಬಾಹೋ ನ ತ್ವಾಂ ಬುಧ್ಯಾಮಹೇ ವಯಂ|
01142018c ಸಮೇತಂ ಭೀಮರೂಪೇಣ ಪ್ರಸುಪ್ತಾಃ ಶ್ರಮಕರ್ಶಿತಾಃ||
“ಮಹಾಬಾಹು ಭೀಮ! ಹೆದರ ಬೇಡ. ಆಯಾಸಗೊಂಡ ನಾವೆಲ್ಲಾ ಮಲಗಿದ್ದೆವು. ನೀನು ಈ ಭೀಮರೂಪದವನೊಡನೆ ಹೊಡೆದಾಟಕ್ಕಿಳಿದಿದ್ದುದು ತಿಳಿಯಲಿಲ್ಲ.
01142019a ಸಾಹಾಯ್ಯೇಽಸ್ಮಿ ಸ್ಥಿತಃ ಪಾರ್ಥ ಯೋಧಯಿಷ್ಯಾಮಿ ರಾಕ್ಷಸಂ|
01142019c ನಕುಲಃ ಸಹದೇವಶ್ಚ ಮಾತರಂ ಗೋಪಯಿಷ್ಯತಃ||
ಪಾರ್ಥ! ರಾಕ್ಷಸನೊಡನೆ ನಿನ್ನ ಈ ಹೋರಾಟದಲ್ಲಿ ನಾನು ಸಯಾಯ ಮಾಡಲು ನಿಂತಿದ್ದೇನೆ. ನಕುಲ ಮತ್ತು ಸಹದೇವರು ತಾಯಿಯನ್ನು ಕಾಯುತ್ತಾರೆ.”
01142020 ಭೀಮ ಉವಾಚ|
01142020a ಉದಾಸೀನೋ ನಿರೀಕ್ಷಸ್ವ ನ ಕಾರ್ಯಃ ಸಂಭ್ರಮಸ್ತ್ವಯಾ|
01142020c ನ ಜಾತ್ವಯಂ ಪುನರ್ಜೀವೇನ್ಮದ್ಬಾಹ್ವಂತರಮಾಗತಃ||
ಭೀಮನು ಹೇಳಿದನು: “ಸುಮ್ಮನೆ ಕುಳಿತುಕೊಂಡು ನೋಡಿ! ವೃಥಾ ಉದ್ವೇಗಕ್ಕೊಳಗಾಗಬೇಡಿ! ನನ್ನ ಬಾಹುಗಳ ಮದ್ಯದಲ್ಲಿ ಸಿಲುಕಿದ ಇವನು ಇನ್ನು ಹೆಚ್ಚು ಕಾಲ ಬದುಕಲಾರ.”
01142021 ಅರ್ಜುನ ಉವಾಚ|
01142021a ಕಿಮನೇನ ಚಿರಂ ಭೀಮ ಜೀವತಾ ಪಾಪರಕ್ಷಸಾ|
01142021c ಗಂತವ್ಯಂ ನ ಚಿರಂ ಸ್ಥಾತುಮಿಹ ಶಕ್ಯಮರಿಂದಮ||
ಅರ್ಜುನನು ಹೇಳಿದನು: “ಆ ಪಾಪಿ ರಾಕ್ಷಸನನ್ನು ಕೊಲ್ಲಲು ಇಷ್ಟೊಂದು ಸಮಯವನ್ನೇಕೆ ತೆಗೆದುಕೊಳ್ಳುತ್ತಿದ್ದೀಯೆ ಭೀಮ? ಅರಿಂದಮ! ನಾವು ಇನ್ನು ಇಲ್ಲಿಂದ ಹೊರಡಬೇಕು. ಹೆಚ್ಚು ಹೊತ್ತು ಇಲ್ಲಿ ಇರಲು ಸಾಧ್ಯವಿಲ್ಲ.
01142022a ಪುರಾ ಸಂರಜ್ಯತೇ ಪ್ರಾಚೀ ಪುರಾ ಸಂಧ್ಯಾ ಪ್ರವರ್ತತೇ|
01142022c ರೌದ್ರೇ ಮುಹೂರ್ತೇ ರಕ್ಷಾಂಸಿ ಪ್ರಬಲಾನಿ ಭವಂತಿ ಚ||
ಪೂರ್ವ ದಿಕ್ಕು ಕೆಂಪಾಗುವುದರೊಳಗಿನ ಸಂಧ್ಯಾ ಸಮಯದ ರೌದ್ರ ಮುಹೂರ್ತದಲ್ಲಿ ರಾಕ್ಷಸರು ಪ್ರಬಲರಾಗುತ್ತಾರೆ.
01142023a ತ್ವರಸ್ವ ಭೀಮ ಮಾ ಕ್ರೀಡ ಜಹಿ ರಕ್ಷೋ ವಿಭೀಷಣಂ|
01142023c ಪುರಾ ವಿಕುರುತೇ ಮಾಯಾಂ ಭುಜಯೋಃ ಸಾರಮರ್ಪಯ||
ಬೇಗ ಮುಗಿಸು ಭೀಮ! ಅವನೊಂದಿಗೆ ಆಡಬೇಡ. ಆ ವಿಭೀಷಣ ರಾಕ್ಷಸನು ತನ್ನ ಮಾಯೆಯನ್ನು ಬಳಸುವುದರೊಳಗೆ ಅವನನ್ನು ಕೊಂದು ಹಾಕು. ನಿನ್ನ ಭುಜಗಳ ಶಕ್ತಿಯನ್ನು ಬಳಸು.””
01142024 ವೈಶಂಪಾಯನ ಉವಾಚ|
01142024a ಅರ್ಜುನೇನೈವಮುಕ್ತಸ್ತು ಭೀಮೋ ಭೀಮಸ್ಯ ರಕ್ಷಸಃ|
01142024c ಉತ್ಕ್ಷಿಪ್ಯಾಭ್ರಾಮಯದ್ದೇಹಂ ತೂರ್ಣಂ ಗುಣಶತಾಧಿಕಂ||
ವೈಶಂಪಾಯನನು ಹೇಳಿದನು: “ಅರ್ಜುನನ ಈ ಮಾತುಗಳನ್ನು ಕೇಳಿದ ಭೀಮನು ಆ ಭಯಂಕರ ರಾಕ್ಷಸನ ದೇಹವನ್ನು ಮೇಲೆತ್ತಿ ನೂರಕ್ಕೂ ಹೆಚ್ಚು ಬಾರಿ ತಿರುಗಿಸಿದನು.
01142025 ಭೀಮ ಉವಾಚ|
01142025a ವೃಥಾಮಾಂಸೈರ್ವೃಥಾ ಪುಷ್ಟೋ ವೃಥಾ ವೃದ್ಧೋ ವೃಥಾಮತಿಃ|
01142025c ವೃಥಾಮರಣಮರ್ಹಸ್ತ್ವಂ ವೃಥಾದ್ಯ ನ ಭವಿಷ್ಯಸಿ||
ಭೀಮನು ಹೇಳಿದನು: “ವೃಥಾ ಮಾಂಸವನ್ನು ತಿಂದು ವೃಥಾ ಕೊಬ್ಬಿದ್ದೀಯೆ! ಬುದ್ಧಿ ಬೆಳೆಯದೇ ವೃಥಾ ಬೆಳೆದಿದ್ದೀಯೆ! ವೃಥಾ ಜೀವಿಸುವ ನಿನಗೆ ವೃಥಾ ಮರಣವೇ ಸರಿಯಾದುದು!”
01142026 ಅರ್ಜುನ ಉವಾಚ|
01142026a ಅಥ ವಾ ಮನ್ಯಸೇ ಭಾರಂ ತ್ವಮಿಮಂ ರಾಕ್ಷಸಂ ಯುಧಿ|
01142026c ಕರೋಮಿ ತವ ಸಾಹಾಯ್ಯಂ ಶೀಘ್ರಮೇವ ನಿಹನ್ಯತಾಂ||
ಅರ್ಜುನನು ಹೇಳಿದನು: “ಈ ರಾಕ್ಷಸನು ನಿನಗೆ ಭಾರಿ ಎಂದು ಅನ್ನಿಸಿದರೆ, ನಾನು ನಿನಗೆ ಯುದ್ಧದಲ್ಲಿ ಸಹಾಯಮಾಡುತ್ತೇನೆ. ಇವನನ್ನು ಬೇಗನೆ ಕೊಂದು ಮುಗಿಸು!
01142027a ಅಥ ವಾಪ್ಯಹಮೇವೈನಂ ಹನಿಷ್ಯಾಮಿ ವೃಕೋದರ|
01142027c ಕೃತಕರ್ಮಾ ಪರಿಶ್ರಾಂತಃ ಸಾಧು ತಾವದುಪಾರಮ||
ಇಲ್ಲವಾದರೆ ನಾನು ಅವನನ್ನು ಕೊಂದು ಮುಗಿಸುತ್ತೇನೆ. ವೃಕೋದರ! ಹೋರಾಡಿ ಆಯಾಸಗೊಂಡಿದ್ದರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಸರಿ.””
01142028 ವೈಶಂಪಾಯನ ಉವಾಚ|
01142028a ತಸ್ಯ ತದ್ವಚನಂ ಶ್ರುತ್ವಾ ಭೀಮಸೇನೋಽತ್ಯಮರ್ಷಣಃ|
01142028c ನಿಷ್ಪಿಷ್ಯೈನಂ ಬಲಾದ್ ಭೂಮೌ ಪಶುಮಾರಮಮಾರಯತ್||
ವೈಶಂಪಾಯನನು ಹೇಳಿದನು: “ಅವನ ಈ ಮಾತುಗಳನ್ನು ಕೇಳಿದ ಭೀಮಸೇನನು ರೊಚ್ಚೆದ್ದು ಅವನನ್ನು ಜೋರಾಗಿ ಭೂಮಿಯ ಮೇಲೆ ಅಪ್ಪಳಿಸಿ ಪ್ರಾಣಿಯನ್ನು ಬಲಿಕೊಡುವಂತೆ ಕೊಂದು ಹಾಕಿದನು.
01142029a ಸ ಮಾರ್ಯಮಾಣೋ ಭೀಮೇನ ನನಾದ ವಿಪುಲಂ ಸ್ವನಂ|
01142029c ಪೂರಯಂಸ್ತದ್ವನಂ ಸರ್ವಂ ಜಲಾರ್ದ್ರ ಇವ ದುಂದುಭಿಃ||
ಭೀಮನ ಕೈಯಿಂದ ಸಾಯುವಾಗ ಅವನು ಜೋರಾಗಿ ಕಿರುಚಿ, ವನವೆಲ್ಲಾ ಆ ಆಕ್ರಂದನದಿಂದ ನೀರು ತುಂಬಿದ ದುಂದುಭಿಯಂತೆ ಮೊಳಗಿತು.
01142030a ಭುಜಾಭ್ಯಾಂ ಯೋಕ್ತ್ರಯಿತ್ವಾ ತಂ ಬಲವಾನ್ಪಾಂಡುನಂದನಃ|
01142030c ಮಧ್ಯೇ ಭಂಕ್ತ್ವಾ ಸ ಬಲವಾನ್ ಹರ್ಷಯಾಮಾಸ ಪಾಂಡವಾನ್||
ಬಲಶಾಲಿ ಪಾಂಡುನಂದನನು ಅವನನ್ನು ತನ್ನ ತೊಡೆಯ ಮೇಲಿರಿಸಿ ಅವನ ಬೆನ್ನು ಮುರಿಯುವವರೆಗೆ ಬಗ್ಗಿಸಿ ತುಂಡುಮಾಡಿ ಪಾಂಡವರಿಗೆ ಆನಂದವನ್ನಿತ್ತನು.
01142031a ಹಿಡಿಂಬಂ ನಿಹತಂ ದೃಷ್ಟ್ವಾ ಸಂಹೃಷ್ಟಾಸ್ತೇ ತರಸ್ವಿನಃ|
01142031c ಅಪೂಜಯನ್ನರವ್ಯಾಘ್ರಂ ಭೀಮಸೇನಮರಿಂದಮಂ||
ಹಿಡಿಂಬನ ಸಂಹಾರವನ್ನು ನೋಡಿದ ಅವರೆಲ್ಲರೂ ತುಂಬಾ ಸಂಹೃಷ್ಟರಾಗಿ ಅರಿಂದಮ, ನರವ್ಯಾಘ್ರ ಭೀಮಸೇನನನ್ನು ಅಭಿನಂದಿಸಿದರು.
01142032a ಅಭಿಪೂಜ್ಯ ಮಹಾತ್ಮಾನಂ ಭೀಮಂ ಭೀಮಪರಾಕ್ರಮಂ|
01142032c ಪುನರೇವಾರ್ಜುನೋ ವಾಕ್ಯಮುವಾಚೇದಂ ವೃಕೋದರಂ||
ಭೀಮ ಪರಾಕ್ರಮಿ ಮಹಾತ್ಮ ಭೀಮನನ್ನು ಅಭಿನಂದಿಸಿದ ನಂತರ ಅರ್ಜುನನು ವೃಕೋದರನಿಗೆ ಹೇಳಿದನು:
01142033a ನದೂರೇ ನಗರಂ ಮನ್ಯೇ ವನಾದಸ್ಮಾದಹಂ ಪ್ರಭೋ|
01142033c ಶೀಘ್ರಂ ಗಚ್ಛಾಮ ಭದ್ರಂ ತೇ ನ ನೋ ವಿದ್ಯಾತ್ಸುಯೋಧನಃ||
“ಪ್ರಭು! ಈ ವನದ ಹತ್ತಿರದಲ್ಲಿಯೇ ಒಂದು ನಗರವಿದೆ ಎಂದು ನನ್ನ ಅನಿಸಿಕೆ. ನಿನಗೆ ಮಂಗಳವಾಗಲಿ! ಶೀಘ್ರವಾಗಿ ಹೋಗೋಣ. ಸುಯೋಧನನಿಗೆ ನಾವಿರುವುದು ತಿಳಿಯಬಾರದು.”
01142034a ತತಃ ಸರ್ವೇ ತಥೇತ್ಯುಕ್ತ್ವಾ ಸಹ ಮಾತ್ರಾ ಪರಂತಪಾಃ|
01142034c ಪ್ರಯಯುಃ ಪುರುಷವ್ಯಾಘ್ರಾ ಹಿಡಿಂಬಾ ಚೈವ ರಾಕ್ಷಸೀ||
ತಾಯಿಯೊಂದಿಗೆ ಎಲ್ಲ ಪರಂತಪರೂ ಹಾಗೆಯೇ ಆಗಲೆಂದು ಹೇಳಿ ಹೊರಟರು. ರಾಕ್ಷಸಿ ಹಿಡಿಂಬಿಯೂ ಆ ಪುರುಷವ್ಯಾಘ್ರರನ್ನು ಹಿಂಬಾಲಿಸಿದಳು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹಿಡಿಂಬವಧಪರ್ವಣಿ ಹಿಡಿಂಬವಧೇ ದ್ವಿಚತ್ವಾರಿಂಶದಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹಿಡಿಂಬವಧಪರ್ವದಲ್ಲಿ ಹಿಡಿಂಬವಧೆ ಎನ್ನುವ ನೂರಾನಲ್ವತ್ತೆರಡನೆಯ ಅಧ್ಯಾಯವು.