Adi Parva: Chapter 141

ಆದಿ ಪರ್ವ: ಹಿಡಿಂಬವಧ ಪರ್ವ

೧೪೧

ಭೀಮನು ಹಿಂಡಿಂಬನನ್ನು ಕೊಲ್ಲುವುದಾಗಿ ಹೇಳುವುದು (೧-೧೨). ಕೋಪದಿಂದ ಮುನ್ನುಗ್ಗಿ ಬಂದ ಹಿಡಿಂಬನೊಂದಿಗೆ ಭೀಮನ ಭಯಂಕರ ಯುದ್ಧನಡೆಯುವಾಗ ಎಚ್ಚೆತ್ತ ಪಾಂಡವರು ಅಲ್ಲಿ ನಿಂತಿದ್ದ ಹಿಡಿಂಬಿಯನ್ನು ನೋಡಿದುದು (೧೩-೨೪).

01141001 ವೈಶಂಪಾಯನ ಉವಾಚ|

01141001a ಭೀಮಸೇನಸ್ತು ತಂ ದೃಷ್ಟ್ವಾ ರಾಕ್ಷಸಂ ಪ್ರಹಸನ್ನಿವ|

01141001c ಭಗಿನೀಂ ಪ್ರತಿ ಸಂಕ್ರುದ್ಧಮಿದಂ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ತಂಗಿಯ ಮೇಲೆ ಸಿಟ್ಟಿಗೆದ್ದ ಆ ರಾಕ್ಷಸನನ್ನು ನೋಡಿ ಭೀಮಸೇನನು ನಗುತ್ತಾ ಹೇಳಿದನು:

01141002a ಕಿಂ ತೇ ಹಿಡಿಂಬ ಏತೈರ್ವಾ ಸುಖಸುಪ್ತೈಃ ಪ್ರಬೋಧಿತೈಃ|

01141002c ಮಾಮಾಸಾದಯ ದುರ್ಬುದ್ಧೇ ತರಸಾ ತ್ವಂ ನರಾಶನ||

“ಹಿಡಿಂಬ! ಸುಖವಾಗಿ ಮಲಗಿರುವ ಇವರನ್ನು ಏಕೆ ಎಬ್ಬಿಸುತ್ತಿರುವೆ? ನರಾಶನ! ದುರ್ಬುದ್ಧಿ! ಕೂಡಲೇ ನನ್ನನ್ನು ಎದುರಿಸು.

01141003a ಮಯ್ಯೇವ ಪ್ರಹರೈಹಿ ತ್ವಂ ನ ಸ್ತ್ರಿಯಂ ಹಂತುಮರ್ಹಸಿ|

01141003c ವಿಶೇಷತೋಽನಪಕೃತೇ ಪರೇಣಾಪಕೃತೇ ಸತಿ||

ನನ್ನ ಮೇಲೆ ನಿನ್ನ ಪ್ರಹಾರಗಳನ್ನು ಪ್ರಯತ್ನಿಸು. ತಾನೇನೂ ತಪ್ಪು ಮಾಡಿರದ, ವಿಶೇಷವಾಗಿ ಇನ್ನೊಬ್ಬರಿಂದ ಅಪಕೃತಳಾದ ಈ ಸ್ತ್ರೀಯನ್ನು ಹೊಡೆಯಬೇಡ.

01141004a ನ ಹೀಯಂ ಸ್ವವಶಾ ಬಾಲಾ ಕಾಮಯತ್ಯದ್ಯ ಮಾಮಿಹ|

01141004c ಚೋದಿತೈಷಾ ಹ್ಯನಂಗೇನ ಶರೀರಾಂತರಚಾರಿಣಾ|

01141004e ಭಗಿನೀ ತವ ದುರ್ಬುದ್ಧೇ ರಾಕ್ಷಸಾನಾಂ ಯಶೋಹರ||

ಈ ಬಾಲೆಯು ನನ್ನನ್ನು ಬಯಸುತ್ತಿರುವುದು ಅವಳ ವಶದಲ್ಲಿಲ್ಲ ಮತ್ತು ಪಾಪವೂ ಅಲ್ಲ. ಶರೀರಾಂತರದಲ್ಲಿ ಚಲಿಸುವ ಅನಂಗನಿಂದ ಅವಳು ಚೋದಿತಳಾಗಿದ್ದಾಳೆ. ರಾಕ್ಷಸರ ಯಶೋಹರ ದುರ್ಬುದ್ಧಿಯೇ! ಇವಳು ನಿನ್ನ ತಂಗಿ!

01141005a ತ್ವನ್ನಿಯೋಗೇನ ಚೈವೇಯಂ ರೂಪಂ ಮಮ ಸಮೀಕ್ಷ್ಯ ಚ|

01141005c ಕಾಮಯತ್ಯದ್ಯ ಮಾಂ ಭೀರುರ್ನೈಷಾ ದೂಷಯತೇ ಕುಲಂ||

ನೀನೇ ಅವಳನ್ನು ಇಲ್ಲಿಗೆ ಕಳುಹಿಸಿದೆ. ನನ್ನ ರೂಪವನ್ನು ನೋಡಿ ಕಾಮಪೀಡಿತಳಾದ ಈ ಭೀರುವು ನಿನ್ನ ಕುಲವನ್ನೇನೂ ದೂಷಿತ ಮಾಡಿಲ್ಲ.

01141006a ಅನಂಗೇನ ಕೃತೇ ದೋಷೇ ನೇಮಾಂ ತ್ವಮಿಹ ರಾಕ್ಷಸ|

01141006c ಮಯಿ ತಿಷ್ಠತಿ ದುಷ್ಟಾತ್ಮನ್ನ ಸ್ತ್ರಿಯಂ ಹಂತುಮರ್ಹಸಿ||

ಅನಂಗನಿಂದ ಆದ ದೋಷಕ್ಕಾಗಿ ಈ ಸ್ತ್ರೀಯನ್ನು ನಾನು ಇಲ್ಲಿ ನಿಂತಿರುವಾಗ ರಾಕ್ಷಸ ದುಷ್ಟಾತ್ಮ ನೀನು ಕೊಲ್ಲಲಿಕ್ಕಾಗುವುದಿಲ್ಲ.

01141007a ಸಮಾಗಚ್ಛ ಮಯಾ ಸಾರ್ಧಮೇಕೇನೈಕೋ ನರಾಶನ|

01141007c ಅಹಮೇವ ನಯಿಷ್ಯಾಮಿ ತ್ವಾಮದ್ಯ ಯಮಸಾದನಂ||

ನರಾಶನ! ನನ್ನೊಡನೆ, ಒಬ್ಬನಿಗೆ ಒಬ್ಬನಾಗಿ ಹೋರಾಡು. ಇಂದು ನಾನೊಬ್ಬನೇ ನಿನ್ನನ್ನು ಯಮಸಾದನಕ್ಕೆ ಕಳುಹಿಸುತ್ತೇನೆ.

01141008a ಅದ್ಯ ತೇ ತಲನಿಷ್ಪಿಷ್ಟಂ ಶಿರೋ ರಾಕ್ಷಸ ದೀರ್ಯತಾಂ|

01141008c ಕುಂಜರಸ್ಯೇವ ಪಾದೇನ ವಿನಿಷ್ಪಿಷ್ಟಂ ಬಲೀಯಸಃ||

ರಾಕ್ಷಸ! ಇಂದು ನಿನ್ನ ತಲೆಯನ್ನು, ಆನೆಯೊಂದು ತನ್ನ ಕಾಲಿನಿಂದ ಜೋರಾಗಿ ತುಳಿದಿದೆಯೋ ಅನ್ನುವ ಹಾಗೆ ಅದು ಒಡೆದುಹೋಗುವ ತನಕ ನೆಲಕ್ಕೆ ಹಾಕಿ ಅಚ್ಚುತ್ತೇನೆ.

01141009a ಅದ್ಯ ಗಾತ್ರಾಣಿ ಕ್ರವ್ಯಾದಾಃ ಶ್ಯೇನಾ ಗೋಮಾಯವಶ್ಚ ತೇ|

01141009c ಕರ್ಷಂತು ಭುವಿ ಸಂಹೃಷ್ಟಾ ನಿಹತಸ್ಯ ಮಯಾ ಮೃಧೇ||

ಇಂದು ಹೋರಾಟದಲ್ಲಿ ನಿನ್ನನ್ನು ಕೊಂದಾಗ ಹದ್ದುಗಳು ಮತ್ತು ನರಿಗಳು ಸಂತೋಷದಿಂದ ನಿನ್ನ ಅಂಗ-ಅಂಗವನ್ನು ಹರಿದು ತಿನ್ನುತ್ತವೆ.

01141010a ಕ್ಷಣೇನಾದ್ಯ ಕರಿಷ್ಯೇಽಹಮಿದಂ ವನಮಕಂಟಕಂ|

01141010c ಪುರಸ್ತಾದ್ದೂಷಿತಂ ನಿತ್ಯಂ ತ್ವಯಾ ಭಕ್ಷಯತಾ ನರಾನ್||

ಒಂದೇ ಒಂದು ಕ್ಷಣದಲ್ಲಿ ಈ ವನವನ್ನು ಅದರ ಕಂಟಕನಿಂದ ಬಿಡುಗಡೆ ಮಾಡುತ್ತೇನೆ. ಮನುಷ್ಯರನ್ನು ಭಕ್ಷಿಸುತ್ತಾ ನೀನು ಬಹಳ ಕಾಲದವರೆಗೆ ಇದನ್ನು ದೂಷಿಸುತ್ತಿದ್ದೀಯೆ.

01141011a ಅದ್ಯ ತ್ವಾಂ ಭಗಿನೀ ಪಾಪ ಕೃಷ್ಯಮಾಣಂ ಮಯಾ ಭುವಿ|

01141011c ದ್ರಕ್ಷತ್ಯದ್ರಿಪ್ರತೀಕಾಶಂ ಸಿಂಹೇನೇವ ಮಹಾದ್ವಿಪಂ||

ಇಂದು ಪರ್ವತಾಕಾರದ ಆನೆಯನ್ನು ಒಂದು ಹುಲಿಯು ಎಳೆದಾಡುವಂತೆ ನಿನ್ನನ್ನು ನಾನು ನೆಲದ ಮೇಲೆ ಎಳೆದಾಡಿ ಅಪ್ಪಳಿಸುವುದನ್ನು ನಿನ್ನ ತಂಗಿಯು ನೋಡುವಳು.

01141012a ನಿರಾಬಾಧಾಸ್ತ್ವಯಿ ಹತೇ ಮಯಾ ರಾಕ್ಷಸಪಾಂಸನ|

01141012c ವನಮೇತಚ್ಚರಿಷ್ಯಂತಿ ಪುರುಷಾ ವನಚಾರಿಣಃ||

ಪಾಪಿ ರಾಕ್ಷಸನೇ! ನಿನ್ನನ್ನು ಕೊಂದ ನಂತರ ಈ ವನದಲ್ಲಿ ಸಂಚರಿಸುವ ಪುರುಷರು ನಿನ್ನ ಭಯವಿಲ್ಲದೇ ಸಂಚರಿಸಬಹುದು.”

01141013 ಹಿಡಿಂಬ ಉವಾಚ|

01141013a ಗರ್ಜಿತೇನ ವೃಥಾ ಕಿಂ ತೇ ಕತ್ಥಿತೇನ ಚ ಮಾನುಷ|

01141013c ಕೃತ್ವೈತತ್ಕರ್ಮಣಾ ಸರ್ವಂ ಕತ್ಥೇಥಾ ಮಾ ಚಿರಂ ಕೃಥಾಃ||

ಹಿಡಿಂಬನು ಹೇಳಿದನು: “ಮನುಷ್ಯ! ವೃಥಾ ಏಕೆ ಗರ್ಜಿಸುತ್ತಿರುವೆ? ಮೊದಲು ಕೃತ್ಯವನ್ನು ಮಾಡಿ ತೋರಿಸು. ಆಮೇಲೆ ಅದರ ಕುರಿತು ಜಂಬ ಕೊಚ್ಚಿಕೊಳ್ಳುವಿಯಂತೆ! ವಿಳಂಬ ಮಾಡಬೇಡ.

01141014a ಬಲಿನಂ ಮನ್ಯಸೇ ಯಚ್ಚ ಆತ್ಮಾನಮಪರಾಕ್ರಮಂ|

01141014c ಜ್ಞಾಸ್ಯಸ್ಯದ್ಯ ಸಮಾಗಮ್ಯ ಮಯಾತ್ಮಾನಂ ಬಲಾಧಿಕಂ||

ನನ್ನ ಬಲಕ್ಕಿಂಥ ನಿನ್ನನ್ನು ನೀನೇ ಪರಾಕ್ರಮಿಯೆಂದು ತಿಳಿದುಕೊಂಡಿದ್ದರೆ ನನ್ನೊಡನೆ ಹೋರಾಡು. ನಿನಗಿಂಥ ನನ್ನ ಬಲವೇ ಅಧಿಕ ಎನ್ನುವುದನ್ನು ತಿಳಿಯುತ್ತೀಯೆ.

01141015a ನ ತಾವದೇತಾನ್ ಹಿಂಸಿಷ್ಯೇ ಸ್ವಪಂತ್ವೇತೇ ಯಥಾಸುಖಂ|

01141015c ಏಷ ತ್ವಾಮೇವ ದುರ್ಬುದ್ಧೇ ನಿಹನ್ಮ್ಯದ್ಯಾಪ್ರಿಯಂವದಂ||

ಇವರನ್ನು ನಾನು ಈಗಲೇ ಹಿಂಸಿಸುವುದಿಲ್ಲ. ಸುಖವಾಗಿ ಮಲಗಿಕೊಂಡಿದ್ದಾರೆ. ಮಲಗಿರಲಿ. ಅಪ್ರಿಯ ಮಾತನಾಡುತ್ತಿರುವ ದುರ್ಬುದ್ದಿ ನಿನ್ನನ್ನು ಮೊದಲು ಕೊಲ್ಲುತ್ತೇನೆ.

01141016a ಪೀತ್ವಾ ತವಾಸೃಗ್ಗಾತ್ರೇಭ್ಯಸ್ತತಃ ಪಶ್ಚಾದಿಮಾನಪಿ|

01141016c ಹನಿಷ್ಯಾಮಿ ತತಃ ಪಶ್ಚಾದಿಮಾಂ ವಿಪ್ರಿಯಕಾರಿಣೀಂ||

ನಿನ್ನ ದೇಹದ ರಕ್ತವನ್ನು ಕುಡಿದ ನಂತರ ಅವರನ್ನೂ ಮತ್ತು ನಂತರ ಈ ವಿಪ್ರಿಯಕಾರಿಣಿಯನ್ನೂ ಕೊಲ್ಲುತ್ತೇನೆ.””

01141017 ವೈಶಂಪಾಯನ ಉವಾಚ|

01141017a ಏವಮುಕ್ತ್ವಾ ತತೋ ಬಾಹುಂ ಪ್ರಗೃಹ್ಯ ಪುರುಷಾದಕಃ|

01141017c ಅಭ್ಯಧಾವತ ಸಂಕ್ರುದ್ಧೋ ಭೀಮಸೇನಮರಿಂದಮಂ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿದ ಆ ಸಂಕೃದ್ಧ ಪುರುಷಾದಕನು ತನ್ನ ಬಾಹುಗಳನ್ನು ಚಾಚಿ ಅರಿಂದಮ ಭೀಮಸೇನನ ಕಡೆ ಮುನ್ನುಗ್ಗಿದನು.

01141018a ತಸ್ಯಾಭಿಪತತಸ್ತೂರ್ಣಂ ಭೀಮೋ ಭೀಮಪರಾಕ್ರಮಃ|

01141018c ವೇಗೇನ ಪ್ರಹೃತಂ ಬಾಹುಂ ನಿಜಗ್ರಾಹ ಹಸನ್ನಿವ||

ಆದರೆ ಅವನು ವೇಗದಿಂದ ಬರುತ್ತಿದ್ದ ಹಾಗೆಯೇ ಭೀಮಪರಾಕ್ರಮಿ ಭೀಮನು ನಗುತ್ತಾ ಅವನ ಬಾಹುಗಳಿಗೆ ಹೊಡೆದು ಕೆಳಗುರುಳಿಸಿದನು.

01141019a ನಿಗೃಹ್ಯ ತಂ ಬಲಾದ್ಭೀಮೋ ವಿಸ್ಫುರಂತಂ ಚಕರ್ಷ ಹ|

01141019c ತಸ್ಮಾದ್ದೇಶಾದ್ಧನೂಂಷ್ಯಷ್ಟೌ ಸಿಂಹಃ ಕ್ಷುದ್ರಮೃಗಂ ಯಥಾ||

ಅವನನ್ನು ಕೆಳಗುರುಳಿಸಿದ ಭೀಮನು ಸಿಂಹವು ಒಂದು ಸಣ್ಣ ಪ್ರಾಣಿಯನ್ನು ಎಳೆದುಕೊಂಡು ಹೋಗುವಂತೆ ಅಲ್ಲಿಂದ ಎಂಟು ಧನುಸ್ಸುಗಳ ದೂರಕ್ಕೆ ಜೋರಾಗಿ ಎಳೆದುಕೊಂಡು ಹೋದನು.

01141020a ತತಃ ಸ ರಾಕ್ಷಸಃ ಕ್ರುದ್ಧಃ ಪಾಂಡವೇನ ಬಲಾದ್ಧೃತಃ|

01141020c ಭೀಮಸೇನಂ ಸಮಾಲಿಂಗ್ಯ ವ್ಯನದದ್ಭೈರವಂ ರವಂ||

ಪಾಂಡವನಿಂದ ಬಲವಂತವಾಗಿ ಎಳೆದುಕೊಂಡು ಹೋಗಲ್ಪಟ್ಟ ರಾಕ್ಷಸನು ಕೃದ್ಧನಾಗಿ ಭೀಮಸೇನನನ್ನು ಬಿಗಿದಪ್ಪಿ ಭೈರವ ಸ್ವರದಲ್ಲಿ ಕೂಗಿದನು.

01141021a ಪುನರ್ಭೀಮೋ ಬಲಾದೇನಂ ವಿಚಕರ್ಷ ಮಹಾಬಲಃ|

01141021c ಮಾ ಶಬ್ಧಃ ಸುಖಸುಪ್ತಾನಾಂ ಭ್ರಾತೄಣಾಂ ಮೇ ಭವೇದಿತಿ||

ಪುನಃ ಮಹಾಬಲಿ ಭೀಮನು ಸುಖವಾಗಿ ಮಲಗಿದ್ದ ಭ್ರಾತೃಗಳು ಆ ಶಬ್ಧದಿಂದ ಎಚ್ಚೆತ್ತುಕೊಳ್ಳಬಾರದೆಂದು ಅವನನ್ನು ಬಲವಂತವಾಗಿ ಎಳೆದುಕೊಂಡು ಇನ್ನೂ ಸ್ವಲ್ಪ ದೂರ ಹೋದನು.

01141022a ಅನ್ಯೋನ್ಯಂ ತೌ ಸಮಾಸಾದ್ಯ ವಿಚಕರ್ಷತುರೋಜಸಾ|

01141022c ರಾಕ್ಷಸೋ ಭೀಮಸೇನಶ್ಚ ವಿಕ್ರಮಂ ಚಕ್ರತುಃ ಪರಂ||

ತಮ್ಮ ಎಲ್ಲ ಬಲವನ್ನೂ ಬಳಸಿ ಅವರಿಬ್ಬರೂ ಅನ್ಯೋನ್ಯರ ಮೇಲೆ ಕುಳಿತುಕೊಂಡು ಎಳೆದಾಡಿದರು: ರಾಕ್ಷಸ ಮತ್ತು ಭೀಮ ಇಬ್ಬರೂ ತಮ್ಮ ಪರಮ ವಿಕ್ರಮವನ್ನು ಪ್ರದರ್ಶಿಸಿದರು.

01141023a ಬಭಂಜತುರ್ಮಹಾವೃಕ್ಷಾಽಲ್ಲತಾಶ್ಚಾಕರ್ಷತುಸ್ತತಃ|

01141023c ಮತ್ತಾವಿವ ಸುಸಂರಬ್ಧೌ ವಾರಣೌ ಷಷ್ಟಿಹಾಯನೌ||

ಮತ್ತಿನಲ್ಲಿರುವ ಅರವತ್ತು ವರ್ಷಗಳ ಆನೆಗಳಂತೆ ಇಬ್ಬರೂ ಮರಗಳನ್ನು ಮತ್ತು ಬಳ್ಳಿಗಳನ್ನು ಕಿತ್ತು ನಾಶಮಾಡಿದರು.

01141024a ತಯೋಃ ಶಬ್ಧೇನ ಮಹತಾ ವಿಬುದ್ಧಾಸ್ತೇ ನರರ್ಷಭಾಃ|

01141024c ಸಹ ಮಾತ್ರಾ ತು ದದೃಶುರ್ಹಿಡಿಂಬಾಮಗ್ರತಃ ಸ್ಥಿತಾಂ||

ಈ ಮಹಾ ಶಬ್ಧವನ್ನು ಕೇಳಿದ ನರರ್ಷಭರು ಎಚ್ಚೆತ್ತರು ಮತ್ತು ತಾಯಿಯೊಂದಿಗೆ ಅವರು ಎದುರಿಗೆ ನಿಂತಿದ್ದ ಹಿಡಿಂಬೆಯನ್ನು ನೋಡಿದರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹಿಡಿಂಬವಧಪರ್ವಣಿ ಹಿಡಿಂಬಯುದ್ಧೇ ಏಕಚತ್ವಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹಿಡಿಂಬವಧಪರ್ವದಲ್ಲಿ ಹಿಡಿಂಬಯುದ್ಧ ಎನ್ನುವ ನೂರಾನಲ್ವತ್ತೊಂದನೆಯ ಅಧ್ಯಾಯವು.

Related image

Comments are closed.