Adi Parva: Chapter 140

ಆದಿ ಪರ್ವ: ಹಿಡಿಂಬವಧ ಪರ್ವ

೧೪೦

ತಂಗಿಯು ಹೋಗಿ ತುಂಬಾ ಹೊತ್ತಾಯಿತೆಂದು ಹಿಡಿಂಬನು ಪಾಂಡವರಿದ್ದಲ್ಲಿಗೆ ಬರುವುದು, ಹಿಡಿಂಬೆಯು ಭೀಮನನ್ನು ಎಚ್ಚರಿಸುವುದು (೧-೧೧).

01140001 ವೈಶಂಪಾಯನ ಉವಾಚ|

01140001a ತಾಂ ವಿದಿತ್ವಾ ಚಿರಗತಾಂ ಹಿಡಿಂಬೋ ರಾಕ್ಷಸೇಶ್ವರಃ|

01140001c ಅವತೀರ್ಯ ದ್ರುಮಾತ್ತಸ್ಮಾದಾಜಗಾಮಾಥ ಪಾಂಡವಾನ್||

01140002a ಲೋಹಿತಾಕ್ಷೋ ಮಹಾಬಾಹುರೂರ್ಧ್ವಕೇಶೋ ಮಹಾಬಲಃ|

01140002c ಮೇಘಸಂಘಾತವರ್ಷ್ಮಾ ಚ ತೀಕ್ಷ್ಣದಂಷ್ಟ್ರೋಜ್ಜ್ವಲಾನನಃ||

ವೈಶಂಪಾಯನನು ಹೇಳಿದನು: “ತನ್ನ ತಂಗಿಯು ಹೋಗಿ ತುಂಬಾ ಹೊತ್ತಾಯಿತೆಂದು ತಿಳಿದ ರಾಕ್ಷಸೇಶ್ವರ ಹಿಡಿಂಬನು ಮರದಿಂದ ಕೆಳಗಿಳಿದು ಪಾಂಡವನಿದ್ದಲ್ಲಿಗೆ ಬಂದನು. ಆ ಮಹಾಬಲನ ಕಣ್ಣುಗಳು ಕೆಂಪಾಗಿದ್ದವು, ಬಾಹುಗಳು ಬಲವಾಗಿದ್ದವು, ಕೂದಲು ಎದ್ದು ನಿಂತಿದ್ದವು, ಮಳೆಯ ಮೋಡದಂತೆ ದಟ್ಟನಾಗಿದ್ದನು, ಹಲ್ಲುಗಳು ಮೊನಚಾಗಿದ್ದವು ಮತ್ತು ಮುಖವು ಪ್ರಜ್ಚಲಿಸುತ್ತಿತ್ತು.

01140003a ತಮಾಪತಂತಂ ದೃಷ್ಟ್ವೈವ ತಥಾ ವಿಕೃತದರ್ಶನಂ|

01140003c ಹಿಡಿಂಬೋವಾಚ ವಿತ್ರಸ್ತಾ ಭೀಮಸೇನಮಿದಂ ವಚಃ||

ಮೇಲೆರಗುತ್ತಾನೋ ಎನ್ನುವಂತಿರುವ ಆ ವಿಕೃತದರ್ಶನನನ್ನು ನೋಡಿ ಹಿಡಿಂಬಿಯು ನಡುಗುತ್ತಾ ಭೀಮಸೇನನಿಗೆ ಹೇಳಿದಳು:

01140004a ಆಪತತ್ಯೇಷ ದುಷ್ಟಾತ್ಮಾ ಸಂಕ್ರುದ್ಧಃ ಪುರುಷಾದಕಃ|

01140004c ತ್ವಾಮಹಂ ಭ್ರಾತೃಭಿಃ ಸಾರ್ಧಂ ಯದ್ಬ್ರವೀಮಿ ತಥಾ ಕುರು||

“ಇಗೋ ದುಷ್ಟಾತ್ಮ ನರಭಕ್ಷಕನು ಕೋಪಗೊಂಡು ಬರುತ್ತಿದ್ದಾನೆ. ನೀನು ಮತ್ತು ನಿನ್ನ ಸಹೋದರರು ನಾನು ಹೇಳಿದ ಹಾಗೆ ಮಾಡಿ.

01140005a ಅಹಂ ಕಾಮಗಮಾ ವೀರ ರಕ್ಷೋಬಲಸಮನ್ವಿತಾ|

01140005c ಆರುಹೇಮಾಂ ಮಮ ಶ್ರೋಣೀಂ ನೇಷ್ಯಾಮಿ ತ್ವಾಂ ವಿಹಾಯಸಾ||

ವೀರ! ರಾಕ್ಷಸರ ಬಲಸಮನ್ವಿತೆ ನಾನು ಬೇಕಾದಲ್ಲಿ ಹೋಗಬಲ್ಲೆ. ನನ್ನ ಸೊಂಟದ ಮೇಲೇರು. ನಿನ್ನನ್ನು ಆಕಾಶ ಮಾರ್ಗದಲ್ಲಿ ಕರೆದೊಯ್ಯುತ್ತೇನೆ.

01140006a ಪ್ರಬೋಧಯೈನಾನ್ಸಂಸುಪ್ತಾನ್ಮಾತರಂ ಚ ಪರಂತಪ|

01140006c ಸರ್ವಾನೇವ ಗಮಿಷ್ಯಾಮಿ ಗೃಹೀತ್ವಾ ವೋ ವಿಹಾಯಸಾ||

ಪರಂತಪ! ಮಲಗಿಕೊಂಡಿರುವ ನಿನ್ನ ಈ ತಾಯಿ ಮತ್ತು ಸಹೋದರರನ್ನು ಎಚ್ಚರಿಸು. ನಿಮ್ಮೆಲ್ಲರನ್ನೂ ನಾನು ಆಕಾಶ ಮಾರ್ಗವಾಗಿ ಕರೆದೊಯ್ಯುತ್ತೇನೆ.”

01140007 ಭೀಮ ಉವಾಚ|

01140007a ಮಾ ಭೈಸ್ತ್ವಂ ವಿಪುಲಶ್ರೋಣಿ ನೈಷ ಕಶ್ಚಿನ್ಮಯಿ ಸ್ಥಿತೇ|

01140007c ಅಹಮೇನಂ ಹನಿಷ್ಯಾಮಿ ಪ್ರೇಕ್ಷಂತ್ಯಾಸ್ತೇ ಸುಮಧ್ಯಮೇ||

ಭೀಮನು ಹೇಳಿದನು: “ವಿಪುಲಶ್ರೋಣಿ! ಹೆದರದಿರು. ನಾನಿಲ್ಲಿ ನಿಂತಿರುವಾಗ ಯಾರೂ ಯಾವುದೇರೀತಿಯ ಹಾನಿಯನ್ನುಂಟುಮಾಡುವುದಿಲ್ಲ. ಸುಮದ್ಯಮೇ! ನಿನ್ನ ಕಣ್ಣುಗಳೆದುರೇ ಅವನನ್ನು ಕೊಂದು ಹಾಕುತ್ತೇನೆ.

01140008a ನಾಯಂ ಪ್ರತಿಬಲೋ ಭೀರು ರಾಕ್ಷಸಾಪಸದೋ ಮಮ|

01140008c ಸೋಢುಂ ಯುಧಿ ಪರಿಸ್ಪಂದಮಥವಾ ಸರ್ವರಾಕ್ಷಸಾಃ||

ಭೀರು! ಈ ರಾಕ್ಷಸಾಧಮನು ಬಲದಲ್ಲಿ ನನ್ನ ಸರಿಸಾಟಿಯೇನಲ್ಲ. ರಾಕ್ಷಸರೆಲ್ಲ ಒಂದು ಸೇರಿದರೂ ಯುದ್ಧದಲ್ಲಿ ನನ್ನನ್ನು ಎದುರಿಸಲು ಸಾಧ್ಯವಿಲ್ಲ.

01140009a ಪಶ್ಯ ಬಾಹೂ ಸುವೃತ್ತೌ ಮೇ ಹಸ್ತಿಹಸ್ತನಿಭಾವಿಮೌ|

01140009c ಊರೂ ಪರಿಘಸಂಕಾಶೌ ಸಂಹತಂ ಚಾಪ್ಯುರೋ ಮಮ||

ಆನೆಯ ಸೊಂಡಿಲಿನಂತೆ ಗೋಲಾಕಾರವಾಗಿರುವ ಈ ನನ್ನ ಬಾಹುಗಳನ್ನು ನೋಡು. ಪರಿಘಗಳಂತಿರುವ ನನ್ನ ಈ ತೊಡೆಗಳನ್ನು ನೋಡು ಮತ್ತು ಗಟ್ಟಿಯಾದ ನನ್ನ ಈ ಎದೆಯನ್ನು ನೋಡು.

01140010a ವಿಕ್ರಮಂ ಮೇ ಯಥೇಂದ್ರಸ್ಯ ಸಾದ್ಯ ದ್ರಕ್ಷ್ಯಸಿ ಶೋಭನೇ|

01140010c ಮಾವಮಂಸ್ಥಾಃ ಪೃಥುಶ್ರೋಣಿ ಮತ್ವಾ ಮಾಮಿಹ ಮಾನುಷಂ||

ಇಂದ್ರನಂತಿರುವ ನನ್ನ ವಿಕ್ರಮವನ್ನು ಇಂದು ನೀನು ನೋಡುವೆ ಶೋಭನೇ! ಪೃಥುಶ್ರೋಣಿ! ನಾನೋರ್ವ ಕೇವಲ ಮನುಷ್ಯನೆಂದು ತಿಳಿದು ಕಡೆಗಾಣಿಸಬೇಡ.”

01140011 ಹಿಡಿಂಬೋವಾಚ|

01140011a ನಾವಮನ್ಯೇ ನರವ್ಯಾಘ್ರ ತ್ವಾಮಹಂ ದೇವರೂಪಿಣಂ|

01140011c ದೃಷ್ಟಾಪದಾನಸ್ತು ಮಯಾ ಮಾನುಷೇಷ್ವೇವ ರಾಕ್ಷಸಃ||

ಹಿಡಿಂಬೆಯು ಹೇಳಿದಳು: “ನರವ್ಯಾಘ್ರ! ದೇವರೂಪಿಣಿ ನಿನ್ನನ್ನು ನಾನು ಕಡೆಗಣಿಸುತ್ತಿಲ್ಲ. ಈ ರಾಕ್ಷಸನು ಮನುಷ್ಯರ ಮೇಲೆ ಯಾವರೀತಿ ಧಾಳಿ ಮಾಡುತ್ತಾನೆ ಎನ್ನುವುದನ್ನು ನಾನು ಮೊದಲೇ ನೋಡಿದ್ದೇನೆ.””

01140012 ವೈಶಂಪಾಯನ ಉವಾಚ|

01140012a ತಥಾ ಸಂಜಲ್ಪತಸ್ತಸ್ಯ ಭೀಮಸೇನಸ್ಯ ಭಾರತ|

01140012c ವಾಚಃ ಶುಶ್ರಾವ ತಾಃ ಕ್ರುದ್ಧೋ ರಾಕ್ಷಸಃ ಪುರುಷಾದಕಃ||

ವೈಶಂಪಾಯನನು ಹೇಳಿದನು: “ಭಾರತ! ಅವಳು ಈ ರೀತಿ ಭೀಮಸೇನನೊಡನೆ ಮಾತನಾಡುತ್ತಿರುವಾಗ ಆ ನರಭಕ್ಷಕ ರಾಕ್ಷಸನು ಕೇಳಿ ಕೃದ್ಧನಾದನು.

01140013a ಅವೇಕ್ಷಮಾಣಸ್ತಸ್ಯಾಶ್ಚ ಹಿಡಿಂಬೋ ಮಾನುಷಂ ವಪುಃ|

01140013c ಸ್ರಗ್ದಾಮಪೂರಿತಶಿಖಂ ಸಮಗ್ರೇಂದುನಿಭಾನನಂ||

01140014a ಸುಭ್ರೂನಾಸಾಕ್ಷಿಕೇಶಾಂತಂ ಸುಕುಮಾರನಖತ್ವಚಂ|

01140014c ಸರ್ವಾಭರಣಸಮ್ಯುಕ್ತಂ ಸುಸೂಕ್ಷ್ಮಾಂಬರವಾಸಸಂ||

ಹಿಡಿಂಬನು ಅವಳು ಮಾನುಷ ರೂಪವನ್ನು ಧರಿಸಿದ್ದುದನ್ನು ನೋಡಿದನು: ತಲೆಗೆ ಹೂಗಳನ್ನು ಮುಡಿದಿದ್ದಳು, ಅವಳ ಮುಖವು ಚಂದ್ರನ ಕಾಂತಿಯನ್ನು ಹೊಂದಿತ್ತು, ಸುಂದರ ಕಣ್ಣುಗಳನ್ನು, ಹುಬ್ಬುಗಳನ್ನು, ಮೂಗು ಮತ್ತು ಕೂದಲು, ಸುಕುಮಾರ ಉಗುರುಗಳು ಮತ್ತು ಚರ್ಮ, ಸರ್ವಾಭರಣ ಸಂಯುಕ್ತಳಾಗಿ, ಸೂಕ್ಷ್ಮ ವಸ್ತ್ರವನ್ನು ಧರಿಸಿದ್ದಳು.

01140015a ತಾಂ ತಥಾ ಮಾನುಷಂ ರೂಪಂ ಬಿಭ್ರತೀಂ ಸುಮನೋಹರಂ|

01140015c ಪುಂಸ್ಕಾಮಾಂ ಶಂಕಮಾನಶ್ಚ ಚುಕ್ರೋಧ ಪುರುಷಾದಕಃ||

ವಿಭ್ರಾಂತಿಗೊಳಿಸುವ ಸುಮನೋಹರ ಮಾನುಷಿಯ ರೂಪದಲ್ಲಿದ್ದ ಅವಳು ಆ ಪುರುಷನನ್ನು ಕಾಮಿಸುತ್ತಿದ್ದಾಳೆ ಎಂದು ಶಂಕಿಸಿ ಆ ನರಭಕ್ಷಕನು ಕೋಪಗೊಂಡನು.

01140016a ಸಂಕ್ರುದ್ಧೋ ರಾಕ್ಷಸಸ್ತಸ್ಯಾ ಭಗಿನ್ಯಾಃ ಕುರುಸತ್ತಮ|

01140016c ಉತ್ಫಾಲ್ಯ ವಿಪುಲೇ ನೇತ್ರೇ ತತಸ್ತಾಮಿದಮಬ್ರವೀತ್||

ಕುರುಸತ್ತಮ! ರಾಕ್ಷಸನು ತನ್ನ ತಂಗಿಯ ಮೇಲೆ ಸಂಕೃದ್ಧನಾಗಿ ಅವನ ದೊಡ್ಡ ಕಣ್ಣುಗಳನ್ನು ತೆರೆದು ಅವಳಿಗೆ ಹೇಳಿದನು:

01140017a ಕೋ ಹಿ ಮೇ ಭೋಕ್ತುಕಾಮಸ್ಯ ವಿಘ್ನಂ ಚರತಿ ದುರ್ಮತಿಃ|

01140017c ನ ಬಿಭೇಷಿ ಹಿಡಿಂಬೇ ಕಿಂ ಮತ್ಕೋಪಾದ್ವಿಪ್ರಮೋಹಿತಾ||

“ನಾನು ಹಸಿದಿರುವಾಗ ಯಾವ ದುರ್ಮತಿಯು ವಿಘ್ನವನ್ನು ತರುತ್ತಿದ್ದಾಳೆ! ಹಿಂಡಿಂಬೇ! ನನ್ನ ಕೋಪದ ಸ್ವಲ್ಪವೂ ಭಯವಿಲ್ಲವೇ ನಿನಗೆ? ನಿನ್ನ ಬುದ್ಧಿಯನ್ನು ಕಳೆದುಕೊಂಡುಬಿಟ್ಟಿದ್ದೀಯಾ?

01140018a ಧಿಕ್ತ್ವಾಮಸತಿ ಪುಂಸ್ಕಾಮೇ ಮಮ ವಿಪ್ರಿಯಕಾರಿಣಿ|

01140018c ಪೂರ್ವೇಷಾಂ ರಾಕ್ಷಸೇಂದ್ರಾಣಾಂ ಸರ್ವೇಷಾಮಯಶಸ್ಕರಿ||

ಪುರುಷನ ಹಿಂದೆ ಬಿದ್ದು ನನಗಿಷ್ಟವಾಗಿಲ್ಲದ್ದನ್ನು ಮಾಡುತ್ತಿರುವ ನಿನಗೆ ಧಿಕ್ಕಾರ! ಹಿಂದಿನ ಎಲ್ಲ ರಾಕ್ಷಸೇಂದ್ರರಿಗೆ ನೀನೊಬ್ಬಳು ಕಳಂಕಿ!

01140019a ಯಾನಿಮಾನಾಶ್ರಿತಾಕಾರ್ಷೀರಪ್ರಿಯಂ ಸುಮಹನ್ಮಮ|

01140019c ಏಷ ತಾನದ್ಯ ವೈ ಸರ್ವಾನ್ ಹನಿಷ್ಯಾಮಿ ತ್ವಯಾ ಸಹ||

ಯಾರಿಗೋಸ್ಕರ ನೀನು ನನ್ನ ವಿರುದ್ಧವಾಗಿ ನಡೆದುಕೊಳ್ಳುತ್ತಿರುವೆಯೋ ಅವರೆಲ್ಲರನ್ನೂ ಮತ್ತು ನಿನ್ನನ್ನೂ ಈ ಕ್ಷಣವೇ ಕೊಂದುಹಾಕುತ್ತೇನೆ.”

01140020a ಏವಮುಕ್ತ್ವಾ ಹಿಡಿಂಬಾಂ ಸ ಹಿಡಿಂಬೋ ಲೋಹಿತೇಕ್ಷಣಃ|

01140020c ವಧಾಯಾಭಿಪಪಾತೈನಾಂ ದಂತೈರ್ದಂತಾನುಪಸ್ಪೃಶನ್||

ಹೀಗೆ ಹೇಳಿ ಲೋಹಿತಾಕ್ಷ ಹಿಡಿಂಬನು ಹಲ್ಲುಗಳನ್ನು ಕಡಿಯುತ್ತಾ ಹಿಡಿಂಬಿಯನ್ನು ವಧಿಸಲು ಅವಳ ಮೇಲೆರಗಿದನು.

01140021a ತಮಾಪತಂತಂ ಸಂಪ್ರೇಕ್ಷ್ಯ ಭೀಮಃ ಪ್ರಹರತಾಂ ವರಃ|

01140021c ಭರ್ತ್ಸಯಾಮಾಸ ತೇಜಸ್ವೀ ತಿಷ್ಠ ತಿಷ್ಠೇತಿ ಚಾಬ್ರವೀತ್||

ತನ್ನ ತಂಗಿಯ ಮೇಲೆ ಬೀಳುತ್ತಿರುವ ಅವನನ್ನು ನೋಡಿ ಪ್ರಹರಿಗಳಲ್ಲಿ ಶ್ರೇಷ್ಠ ತೇಜಸ್ವಿ ಭೀಮನು ಅವನನ್ನು ಅವಹೇಳಿಸುತ್ತಾ “ನಿಲ್ಲು! ನಿಲ್ಲು!” ಎಂದು ಕೂಗಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹಿಡಿಂಬವಧಪರ್ವಣಿ ಹಿಡಿಂಬಯುದ್ಧೇ ಚತ್ವಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹಿಡಿಂಬವಧಪರ್ವದಲ್ಲಿ ಹಿಡಿಂಬಯುದ್ಧ ಎನ್ನುವ ನೂರಾನಲ್ವತ್ತನೆಯ ಅಧ್ಯಾಯವು.

Related image

Comments are closed.