Adi Parva: Chapter 137

ಆದಿ ಪರ್ವ: ಜತುಗೃಹ ಪರ್ವ

೧೩೭

ಮರುದಿನ ಪೌರಜನರು ಪಾಂಡವರನ್ನು ಹುಡುಕಲು, ಸುಟ್ಟುಹೋಗಿದ್ದ ನೈಷಾದಿ ಮತ್ತು ಅವಳ ಮಕ್ಕಳೇ ಕುಂತಿ ಪಾಂಡವರೆಂದು ತಿಳಿದು ಶೋಕಿಸಿದುದು; ಖನಿಕನು ಬಂದು ಬಿಲವನ್ನು ಮುಚ್ಚಿ ಕುರುಹುಗಳಿಲ್ಲದಂತೆ ಮಾಡಿದುದು (೧-೯). ಪಾಂಡುಪುತ್ರರ ವಿನಾಶವನ್ನು ಕೇಳಿ ಧೃತರಾಷ್ಟ್ರನು ಶೋಕಿಸಿ, ಅವರಿಗೆ ತರ್ಪಣಗಳನ್ನಿತ್ತುದುದು (೧೦-೧೬). ಭೀಮನು ತಾಯಿ ಮತ್ತು ಸಹೋದರರನ್ನು ಎತ್ತಿಕೊಂಡು ಪಲಾಯನಗೈದುದು (೧೭-೨೩).

01137001 ವೈಶಂಪಾಯನ ಉವಾಚ|

01137001a ಅಥ ರಾತ್ರ್ಯಾಂ ವ್ಯತೀತಾಯಾಮಶೇಷೋ ನಾಗರೋ ಜನಃ|

01137001c ತತ್ರಾಜಗಾಮ ತ್ವರಿತೋ ದಿದೃಕ್ಷುಃ ಪಾಂಡುನಂದನಾನ್||

ವೈಶಂಪಾಯನನು ಹೇಳಿದನು: “ರಾತ್ರಿಯು ಕಳೆದ ನಂತರ ನಗರದ ಎಲ್ಲ ಜನರೂ ಬೇಗನೆ ಅಲ್ಲಿಗೆ ಬಂದು ಪಾಂಡುನಂದನರನ್ನು ಹುಡುಕ ತೊಡಗಿದರು.

01137002a ನಿರ್ವಾಪಯಂತೋ ಜ್ವಲನಂ ತೇ ಜನಾ ದದೃಶುಸ್ತತಃ|

01137002c ಜಾತುಷಂ ತದ್ಗೃಹಂ ದಗ್ಧಮಮಾತ್ಯಂ ಚ ಪುರೋಚನಂ||

ಬೆಂಕಿಯ ಉರಿಯನ್ನು ಆರಿಸಿದ ನಂತರ ಆ ಜನರು ಅದೊಂದು ಜಾತುಗೃಹವಾಗಿತ್ತು ಮತ್ತು ಅದರಲ್ಲಿ ಅಮಾತ್ಯ ಪುರೋಚನನೂ ಸುಟ್ಟು ಹೋಗಿದ್ದಾನೆ ಎನ್ನುವುದನ್ನು ಕಂಡರು.

01137003a ನೂನಂ ದುರ್ಯೋಧನೇನೇದಂ ವಿಹಿತಂ ಪಾಪಕರ್ಮಣಾ|

01137003c ಪಾಂಡವಾನಾಂ ವಿನಾಶಾಯ ಇತ್ಯೇವಂ ಚುಕ್ರುಷುರ್ಜನಾಃ||

“ಇದು ಪಾಂಡವರ ವಿನಾಶಕ್ಕಾಗಿ ದುರ್ಯೊಧನನು ನಡೆಸಿದ ಪಾಪ ಕರ್ಮ!” ಎಂದು ಕೂಗಾಡಿದರು.

01137004a ವಿದಿತೇ ಧೃತರಾಷ್ಟ್ರಸ್ಯ ಧಾರ್ತರಾಷ್ಟ್ರೋ ನ ಸಂಶಯಃ|

01137004c ದಗ್ಧವಾನ್ಪಾಂಡುದಾಯಾದಾನ್ನ ಹ್ಯೇನಂ ಪ್ರತಿಷಿದ್ಧವಾನ್||

“ಈ ರೀತಿ ದಾಯಾದಿ ಪಾಂಡುಪುತ್ರರನ್ನು ಸುಟ್ಟುಹಾಕಿದ ಧಾರ್ತರಾಷ್ಟ್ರನ ಈ ಕೃತ್ಯವು ಧೃತರಾಷ್ಟ್ರನಿಗೆ ನಿಸ್ಸಂಶಯವಾಗಿಯೂ ತಿಳಿದಿತ್ತು. ಆದರೂ ಅವನು ಇದನ್ನು ನಿಲ್ಲಿಸಲಿಲ್ಲ.

01137005a ನೂನಂ ಶಾಂತನವೋ ಭೀಷ್ಮೋ ನ ಧರ್ಮಮನುವರ್ತತೇ|

01137005c ದ್ರೋಣಶ್ಚ ವಿದುರಶ್ಚೈವ ಕೃಪಶ್ಚಾನ್ಯೇ ಚ ಕೌರವಾಃ||

ನಿಜವಾಗಿ ಶಾಂತನವ ಭೀಷ್ಮನಾಗಲೀ, ದ್ರೋಣ, ವಿದುರ, ಕೃಪ ಮತ್ತು ಅನ್ಯ ಕೌರವರಾಗಲೀ ಯಾರೂ ಧರ್ಮವನ್ನು ಅನುಸರಿಸುತ್ತಿಲ್ಲ.

01137006a ತೇ ವಯಂ ಧೃತರಾಷ್ಟ್ರಸ್ಯ ಪ್ರೇಷಯಾಮೋ ದುರಾತ್ಮನಃ|

01137006c ಸಂವೃತ್ತಸ್ತೇ ಪರಃ ಕಾಮಃ ಪಾಂಡವಾನ್ದಗ್ಧವಾನಸಿ||

ಪಾಂಡವರನ್ನು ಸುಟ್ಟುಹಾಕುವ ನಿನ್ನ ಈ ಸಂಚು ಸಫಲವಾಯಿತು ಎಂದು ಆ ದುರಾತ್ಮ ಧೃತರಾಷ್ಟ್ರನಿಗೆ ಸಂದೇಶವನ್ನು ಕಳಿಸೋಣ.”

01137007a ತತೋ ವ್ಯಪೋಹಮಾನಾಸ್ತೇ ಪಾಂಡವಾರ್ಥೇ ಹುತಾಶನಂ|

01137007c ನಿಷಾದೀಂ ದದೃಶುರ್ದಗ್ಧಾಂ ಪಂಚಪುತ್ರಾಮನಾಗಸಂ||

ಬೆಂಕಿಯಲ್ಲಿ ಪಾಂಡವರನ್ನು ಹುಡುಕುತ್ತಿದ್ದಾಗ ಮುಗ್ಧ ನಿಷಾದಿ ಮತ್ತು ಅವಳ ಐವರು ಪುತ್ರರು ಸುಟ್ಟುಹೋಗಿದ್ದುದನ್ನು ಕಂಡರು.

01137008a ಖನಕೇನ ತು ತೇನೈವ ವೇಶ್ಮ ಶೋಧಯತಾ ಬಿಲಂ|

01137008c ಪಾಂಸುಭಿಃ ಪ್ರತ್ಯಪಿಹಿತಂ ಪುರುಷೈಸ್ತೈರಲಕ್ಷಿತಂ||

ಮನೆಯನ್ನು ಹುಡುಕುವಾಗ ಅದೇ ಖನಕನು ಆ ಬಿಲವನ್ನು ಸಂಪೂರ್ಣವಾಗಿ ಕಸದಿಂದ ಮುಚ್ಚಿ, ಇತರ ಜನರಿಗೆ ಕಾಣದಹಾಗೆ ಮಾಡಿದನು.

01137009a ತತಸ್ತೇ ಪ್ರೇಷಯಾಮಾಸುರ್ಧೃತರಾಷ್ಟ್ರಸ್ಯ ನಾಗರಾಃ|

01137009c ಪಾಂಡವಾನಗ್ನಿನಾ ದಗ್ಧಾನಮಾತ್ಯಂ ಚ ಪುರೋಚನಂ||

ನಂತರ ನಾಗರೀಕರು ಪಾಂಡವರು ಮತ್ತು ಅಮಾತ್ಯ ಪುರೋಚನ ಅಗ್ನಿಯಲ್ಲಿ ಸುಟ್ಟುಹೋದರು ಎನ್ನುವ ವಿಷಯವನ್ನು ಧೃತರಾಷ್ಟ್ರನಿಗೆ ಕಳುಹಿಸಿದರು.

01137010a ಶ್ರುತ್ವಾ ತು ಧೃತರಾಷ್ಟ್ರಸ್ತದ್ರಾಜಾ ಸುಮಹದಪ್ರಿಯಂ|

01137010c ವಿನಾಶಂ ಪಾಂಡುಪುತ್ರಾಣಾಂ ವಿಲಲಾಪ ಸುದುಃಖಿತಃ||

ರಾಜ ಧೃತರಾಷ್ಟ್ರನು ಪಾಂಡುಪುತ್ರರ ಮಹಾ ಅಪ್ರಿಯ ವಿನಾಶವನ್ನು ಕೇಳಿ ಬಹು ದುಃಖಿತನಾಗಿ ವಿಲಪಿಸಿದನು.

01137011a ಅದ್ಯ ಪಾಂಡುರ್ಮೃತೋ ರಾಜಾ ಭ್ರಾತಾ ಮಮ ಸುದುರ್ಲಭಃ|

01137011c ತೇಷು ವೀರೇಷು ದಗ್ಧೇಷು ಮಾತ್ರಾ ಸಹ ವಿಶೇಷತಃ||

“ವಿಶೇಷವಾಗಿ ಅವನ ವೀರರು ಮಾತೆಯ ಸಹಿತ ಸುಟ್ಟುಹೋದ ನಂತರ ಈಗ ನನ್ನ ಸುದುರ್ಲಭ ತಮ್ಮ ರಾಜ ಪಾಂಡುವು ಮೃತನಾದ.

01137012a ಗಚ್ಛಂತು ಪುರುಷಾಃ ಶೀಘ್ರಂ ನಗರಂ ವಾರಣಾವತಂ|

01137012c ಸತ್ಕಾರಯಂತು ತಾನ್ವೀರಾನ್ಕುಂತಿರಾಜಸುತಾಂ ಚ ತಾಂ||

ಜನರು ಶೀಘ್ರವೇ ವಾರಣಾವತ ನಗರಕ್ಕೆ ಹೋಗಿ ಆ ವೀರರಿಗೆ ಮತ್ತು ಕುಂತಿರಾಜಸುತೆಗೆ ಸಂಸ್ಕಾರಕ್ರಿಯೆಗಳನ್ನು ಮಾಡಲಿ.

01137013a ಕಾರಯಂತು ಚ ಕುಲ್ಯಾನಿ ಶುಭ್ರಾಣಿ ಚ ಮಹಾಂತಿ ಚ|

01137013c ಯೇ ಚ ತತ್ರ ಮೃತಾಸ್ತೇಷಾಂ ಸುಹೃದೋಽರ್ಚಂತು ತಾನಪಿ||

ಅವರ ಅಸ್ತಿಗಳಿಗೆ ಶುಭ್ರ ದೊಡ್ಡ ಕುಂಡಗಳನ್ನು ತಯಾರಿಸಿ ಅಲ್ಲಿ ಮೃತರಾದವರ ಸುಹೃದಯರು ಅವರನ್ನು ಸತ್ಕರಿಸಲಿ.

01137014a ಏವಂಗತೇ ಮಯಾ ಶಕ್ಯಂ ಯದ್ಯತ್ಕಾರಯಿತುಂ ಹಿತಂ|

01137014c ಪಾಂಡವಾನಾಂ ಚ ಕುಂತ್ಯಾಶ್ಚ ತತ್ಸರ್ವಂ ಕ್ರಿಯತಾಂ ಧನೈಃ||

ಈ ಗತಿಯನ್ನು ಹೊಂದಿದ ಪಾಂಡವರು ಮತ್ತು ಕುಂತಿಗೆ ನನ್ನಿಂದ ಏನೆಲ್ಲ ಮಾಡುವುದೋ ಹಿತವೋ ಮತ್ತು ಧನಗಳಿಂದ ಶಖ್ಯವೋ ಅವೆಲ್ಲವನ್ನು ಮಾಡಬೇಕು.”

01137015a ಏವಮುಕ್ತ್ವಾ ತತಶ್ಚಕ್ರೇ ಜ್ಞಾತಿಭಿಃ ಪರಿವಾರಿತಃ|

01137015c ಉದಕಂ ಪಾಂಡುಪುತ್ರಾಣಾಂ ಧೃತರಾಷ್ಟ್ರೋಽಂಬಿಕಾಸುತಃ||

ಹೀಗೆಂದ ಅಂಬಿಕಾ ಸುತ ಧೃತರಾಷ್ಟ್ರನು ತನ್ನ ಕುಲದವರಿಂದ ಸುತ್ತುವರೆಯಲ್ಪಟ್ಟು ಪಾಂಡುಪುತ್ರರಿಗೆ ತರ್ಪಣವನ್ನಿತ್ತನು.

01137016a ಚುಕ್ರುಶುಃ ಕೌರವಾಃ ಸರ್ವೇ ಭೃಶಂ ಶೋಕಪರಾಯಣಾಃ|

01137016c ವಿದುರಸ್ತ್ವಲ್ಪಶಶ್ಚಕ್ರೇ ಶೋಕಂ ವೇದ ಪರಂ ಹಿ ಸಃ||

ಶೋಕಪರಾಯಣ ಸರ್ವ ಕೌರವರೂ ದುಃಖಿತರಾಗಿ ರೋದಿಸಿದರು. ಆದರೆ ಅವರಿಗಿಂಥ ಹೆಚ್ಚು ತಿಳಿದಿದ್ದ ವಿದುರನು ಸ್ವಲ್ಪವೇ ಶೋಕವನ್ನು ವ್ಯಕ್ತಪಡಿಸಿದನು.

01137017a ಪಾಂಡವಾಶ್ಚಾಪಿ ನಿರ್ಗತ್ಯ ನಗರಾದ್ವಾರಣಾವತಾತ್|

01137017c ಜವೇನ ಪ್ರಯಯೂ ರಾಜನ್ದಕ್ಷಿಣಾಂ ದಿಶಮಾಶ್ರಿತಾಃ||

ರಾಜನ್! ಪಾಂಡವರಾದರೂ ವಾರಣಾವತ ನಗರವನ್ನು ಬಿಟ್ಟು ವೇಗದಲ್ಲಿ ದಕ್ಷಿಣ ದಿಕ್ಕಿನ ಮುಖವಾಗಿ ಪ್ರಯಾಣಮಾಡಿದರು.

01137018a ವಿಜ್ಞಾಯ ನಿಶಿ ಪಂಥಾನಂ ನಕ್ಷತ್ರೈರ್ದಕ್ಷಿಣಾಮುಖಾಃ|

01137018c ಯತಮಾನಾ ವನಂ ರಾಜನ್ಗಹನಂ ಪ್ರತಿಪೇದಿರೇ||

ರಾಜನ್! ನಕ್ಷತ್ರಗಳ ಚಿಹ್ನೆಗಳಿಂದ ದಾರಿಯನ್ನು ತಿಳಿಯುತ್ತಾ ಅತಿ ಕಷ್ಟದಿಂದ ದಕ್ಷಿಣಾಭಿಮುಖವಾಗಿ ಹೋಗುತ್ತಾ ಗಹನ ವನವೊಂದನ್ನು ಸಮೀಪಿಸಿದರು. 

01137019a ತತಃ ಶ್ರಾಂತಾಃ ಪಿಪಾಸಾರ್ತಾ ನಿದ್ರಾಂಧಾಃ ಪಾಂಡುನಂದನಾಃ|

01137019c ಪುನರೂಚುರ್ಮಹಾವೀರ್ಯಂ ಭೀಮಸೇನಮಿದಂ ವಚಃ||

ಪಾಂಡುನಂದನರು ಆಯಾಸಗೊಂಡಿದ್ದರು, ಬಾಯಾರಿಕೆಯಿಂದ ಬಳಲಿದ್ದರು ಮತ್ತು ನಿದ್ದೆಯಿಂದ ಕುರುಡರಾಗಿದ್ದರು. ಪುನಃ ಅವರು ಮಹಾವೀರ ಭೀಮಸೇನನಿಗೆ ಹೇಳಿದರು:

01137020a ಇತಃ ಕಷ್ಟತರಂ ಕಿಂ ನು ಯದ್ವಯಂ ಗಹನೇ ವನೇ|

01137020c ದಿಶಶ್ಚ ನ ಪ್ರಜಾನೀಮೋ ಗಂತುಂ ಚೈವ ನ ಶಕ್ನುಮಃ||

“ಈ ಗಹನ ವನದಲ್ಲಿ ಇರುವುದಕ್ಕಿಂದ ಕಷ್ಟತರವಾದುದ್ದಾದರೂ ಏನಿದೆ? ಯಾವ ದಿಕ್ಕೂ ನಮಗೆ ತಿಳಿಯುತ್ತಿಲ್ಲ ಮತ್ತು ಮುಂದುವರೆಯಲು ಶಕ್ತಿಯೂ ಇಲ್ಲವಾಗಿದೆ.

01137021a ತಂ ಚ ಪಾಪಂ ನ ಜಾನೀಮೋ ಯದಿ ದಗ್ಧಃ ಪುರೋಚನಃ|

01137021c ಕಥಂ ನು ವಿಪ್ರಮುಚ್ಯೇಮ ಭಯಾದಸ್ಮಾದಲಕ್ಷಿತಾಃ||

ಆ ಪಾಪಿ ಪುರೋಚನನು ಸುಟ್ಟು ಸತ್ತನೋ ಇಲ್ಲವೋ ಎಂದೂ ನಮಗೆ ತಿಳಿಯದು. ಹೇಗೆತಾನೆ ನಾವು ಈ ಭಯದಿಂದ ಯಾರಿಗೂ ಕಾಣದ ರೀತಿಯಲ್ಲಿ ತಪ್ಪಿಸಿಕೊಳ್ಳಬಹುದು?

01137022a ಪುನರಸ್ಮಾನುಪಾದಾಯ ತಥೈವ ವ್ರಜ ಭಾರತ|

01137022c ತ್ವಂ ಹಿ ನೋ ಬಲವಾನೇಕೋ ಯಥಾ ಸತತಗಸ್ತಥಾ||

ಭಾರತ! ಮೊದಲು ಮಾಡಿದಂತೆ ನಮ್ಮನ್ನು ಪುನಃ ಎತ್ತಿಕೋ. ನಮ್ಮೆಲ್ಲರಲ್ಲಿ ನೀನೊಬ್ಬನೇ ವಾಯುವಿನಷ್ಟು ಬಲವಂತನಾಗಿದ್ದೀಯೆ.”

01137023a ಇತ್ಯುಕ್ತೋ ಧರ್ಮರಾಜೇನ ಭೀಮಸೇನೋ ಮಹಾಬಲಃ|

01137023c ಆದಾಯ ಕುಂತೀಂ ಭ್ರಾತೄಂಶ್ಚ ಜಗಾಮಾಶು ಮಹಾಬಲಃ||

ಧರ್ಮರಾಜನು ಹೀಗೆ ಹೇಳಲು ಮಹಾಬಲಿ ಭೀಮಸೇನನು ಕುಂತಿ ಮತ್ತು ಭ್ರಾತೃಗಳನ್ನು ಎತ್ತಿಕೊಂಡು ಹೊರಟನು.”

Image result for angaraparna

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ಪಾಂಡವವನಪ್ರವೇಶೇ ಸಪ್ತತ್ರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ಪಾಂಡವವನಪ್ರವೇಶ ಎನ್ನುವ ನೂರಾಮೂವತ್ತೇಳನೆಯ ಅಧ್ಯಾಯವು.

Related image

Comments are closed.