ಆದಿ ಪರ್ವ: ಜತುಗೃಹ ಪರ್ವ
೧೩೨
ದುರ್ಯೋಧನನು ಪುರೋಚನನನ್ನು ಕರೆಯಿಸಿ ಗೌಪ್ಯವಾಗಿ ಅರಗಿನ ಮನೆಯನ್ನು ನಿರ್ಮಿಸಿ ಪಾಂಡವರನ್ನು ಅದರೊಡನೆ ಸುಡಲು ಆದೇಶವನ್ನು ನೀಡುವುದು (೧-೧೭), ಅರಗಿನ ಮನೆಯ ನಿರ್ಮಾಣ (೧೮-೧೯).
01132001 ವೈಶಂಪಾಯನ ಉವಾಚ|
01132001a ಏವಮುಕ್ತೇಷು ರಾಜ್ಞಾ ತು ಪಾಂಡವೇಷು ಮಹಾತ್ಮಸು|
01132001c ದುರ್ಯೋಧನಃ ಪರಂ ಹರ್ಷಮಾಜಗಾಮ ದುರಾತ್ಮವಾನ್||
ವೈಶಂಪಾಯನನು ಹೇಳಿದನು: “ರಾಜನು ಮಹಾತ್ಮ ಪಾಂಡವನಿಗೆ ಈ ರೀತಿ ಹೇಳಿದ್ದುದರಿಂದ ದುರಾತ್ಮ ದುರ್ಯೋಧನನು ಬಹಳ ಹರ್ಷಗೊಂಡನು.
01132002a ಸ ಪುರೋಚನಮೇಕಾಂತಮಾನೀಯ ಭರತರ್ಷಭ|
01132002c ಗೃಹೀತ್ವಾ ದಕ್ಷಿಣೇ ಪಾಣೌ ಸಚಿವಂ ವಾಕ್ಯಮಬ್ರವೀತ್||
ಭರತರ್ಷಭ! ಅವನು ತನ್ನ ಸಚಿವ ಪುರೋಚನನನ್ನು ಏಕಾಂತದಲ್ಲಿ ಕರೆದು ಅವನ ಬಲಗೈಯನ್ನು ಹಿಡಿದು ಈ ಮಾತುಗಳನ್ನಾಡಿದನು:
01132003a ಮಮೇಯಂ ವಸುಸಂಪೂರ್ಣಾ ಪುರೋಚನ ವಸುಂಧರಾ|
01132003c ಯಥೇಯಂ ಮಮ ತದ್ವತ್ತೇ ಸ ತಾಂ ರಕ್ಷಿತುಮರ್ಹಸಿ|
“ಪುರೋಚನ! ವಸುಸಂಪೂರ್ಣ ಈ ವಸುಂಧರೆಯು ನನ್ನವಳಾದಹಾಗೆ! ನನ್ನವಳಾದ ಅವಳನ್ನು ನಿನಗೂ ಕೊಟ್ಟಿದ್ದೇನೆ. ಅವಳನ್ನು ರಕ್ಷಿಸಬೇಕು.
01132004a ನ ಹಿ ಮೇ ಕಶ್ಚಿದನ್ಯೋಽಸ್ತಿ ವೈಶ್ವಾಸಿಕತರಸ್ತ್ವಯಾ|
01132004c ಸಹಾಯೋ ಯೇನ ಸಂಧಾಯ ಮಂತ್ರಯೇಯಂ ಯಥಾ ತ್ವಯಾ||
ನಿನ್ನಲ್ಲಿದ್ದಷ್ಟು ವಿಶ್ವಾಸವು ನನಗೆ ಬೇರೆ ಯಾರಲ್ಲಿಯೂ ಇಲ್ಲ. ನನಗೆ ಈ ಸಹಾಯವನ್ನು ಮಾಡಿದೆಯೆಂದರೆ ನಿನಗೆ ಮಂತ್ರಿತ್ವವನ್ನು ನೀಡುವ ಭರವಸೆ ಕೊಡುತ್ತೇನೆ.
01132005a ಸಂರಕ್ಷ ತಾತ ಮಂತ್ರಂ ಚ ಸಪತ್ನಾಂಶ್ಚ ಮಮೋದ್ಧರ|
01132005c ನಿಪುಣೇನಾಭ್ಯುಪಾಯೇನ ಯದ್ಬ್ರವೀಮಿ ತಥಾ ಕುರು||
ಗೆಳೆಯ! ಈ ಸಮಾಲೋಚನೆಯನ್ನು ಗೌಪ್ಯವಾಗಿಡು. ನಿನ್ನ ನಿಪುಣ ಉಪಾಯಗಳಿಂದ ನನ್ನ ಪ್ರತಿದ್ವಂದಿಗಳನ್ನು ನಾಶಗೊಳಿಸು. ನಾನು ಹೇಳಿದ ಹಾಗೆ ಮಾಡು.
01132006a ಪಾಂಡವಾ ಧೃತರಾಷ್ಟ್ರೇಣ ಪ್ರೇಷಿತಾ ವಾರಣಾವತಂ|
01132006c ಉತ್ಸವೇ ವಿಹರಿಷ್ಯಂತಿ ಧೃತರಾಷ್ಟ್ರಸ್ಯ ಶಾಸನಾತ್||
ಧೃತರಾಷ್ಟ್ರನು ಪಾಂಡವರನ್ನು ವಾರಣಾವತಕ್ಕೆ ಕಳುಹಿಸುತ್ತಿದ್ದಾನೆ. ಧೃತರಾಷ್ಟ್ರನ ಆದೇಶದಂತೆ ಅವರು ಅಲ್ಲಿ ಉತ್ಸವದಲ್ಲಿ ವಿಹರಿಸುತ್ತಾರೆ.
01132007a ಸ ತ್ವಂ ರಾಸಭಯುಕ್ತೇನ ಸ್ಯಂದನೇನಾಶುಗಾಮಿನಾ|
01132007c ವಾರಣಾವತಮದ್ಯೈವ ಯಥಾ ಯಾಸಿ ತಥಾ ಕುರು||
ನೀನು ಇಂದೇ ವೇಗವಾಗಿ ಓಡುವ ರಾಸಭಗಳ ಗಾಡಿಯಲ್ಲಿ ವಾರಣಾವತವನ್ನು ಸೇರಿ ನಾನು ಹೇಳಿದ ಹಾಗೆ ಮಾಡು.
01132008a ತತ್ರ ಗತ್ವಾ ಚತುಃಶಾಲಂ ಗೃಹಂ ಪರಮಸಂವೃತಂ|
01132008c ಆಯುಧಾಗಾರಮಾಶ್ರಿತ್ಯ ಕಾರಯೇಥಾ ಮಹಾಧನಂ||
ಅಲ್ಲಿ ಹೋಗಿ ಆಯುಧಾಗಾರದ ಬಳಿಯಲ್ಲಿಯೇ ಪರಮಸಂವೃತ ನಾಲ್ಕು ಕೋಣೆಗಳನ್ನುಳ್ಳ ಬೆಲೆಬಾಳುವ ಗೃಹವೊಂದನ್ನು ನಿರ್ಮಿಸು.
01132009a ಶಣಸರ್ಜರಸಾದೀನಿ ಯಾನಿ ದ್ರವ್ಯಾಣಿ ಕಾನಿ ಚಿತ್|
01132009c ಆಗ್ನೇಯಾನ್ಯುತ ಸಂತೀಹ ತಾನಿ ಸರ್ವಾಣಿ ದಾಪಯ||
ಶಣ-ಸರ್ಜರ ಮೊದಲಾದ ಮತ್ತು ಅಗ್ನಿಯಲ್ಲಿ ಸುಟ್ಟುಹೋಗಬಲ್ಲಂತಹ ಎಲ್ಲ ವಸ್ತುಗಳನ್ನೂ ಬಳಸು.
01132010a ಸರ್ಪಿಷಾ ಚ ಸತೈಲೇನ ಲಾಕ್ಷಯಾ ಚಾಪ್ಯನಲ್ಪಯಾ|
01132010c ಮೃತ್ತಿಕಾಂ ಮಿಶ್ರಯಿತ್ವಾ ತ್ವಂ ಲೇಪಂ ಕುಡ್ಯೇಷು ದಾಪಯೇಃ||
ಅವುಗಳನ್ನು ತೈಲ, ಅರಗು ಮತ್ತು ತುಪ್ಪಗಳಿಂದ ಮಣ್ಣಿನಲ್ಲಿ ಸೇರಿಸಿ ಗೋಡೆಗಳಿಗೆ ಲೇಪಿಸು.
01132011a ಶಣಾನ್ವಂಶಂ ಘೃತಂ ದಾರು ಯಂತ್ರಾಣಿ ವಿವಿಧಾನಿ ಚ|
01132011c ತಸ್ಮಿನ್ವೇಶ್ಮನಿ ಸರ್ವಾಣಿ ನಿಕ್ಷಿಪೇಥಾಃ ಸಮಂತತಃ||
01132012a ಯಥಾ ಚ ತ್ವಾಂ ನ ಶಂಕೇರನ್ಪರೀಕ್ಷಂತೋಽಪಿ ಪಾಂಡವಾಃ|
01132012c ಆಗ್ನೇಯಮಿತಿ ತತ್ಕಾರ್ಯಮಿತಿ ಚಾನ್ಯೇ ಚ ಮಾನವಾಃ||
ಹೆಚ್ಚಿನ ಪ್ರಮಾಣದಲ್ಲಿ ಸೆಣಬು, ಬಿದಿರು, ತುಪ್ಪ, ಮರ, ಮತ್ತು ಮರದ ಪುಡಿಯನ್ನು ಸೇರಿಸಬೇಕು. ಆದರೆ ಪಾಂಡವರು ಪರೀಕ್ಷಿಸಿದರೂ ಅವರಿಗೆ ಶಂಕೆಯುಂಟಾಗಬಾರದ ಹಾಗಿರಬೇಕು. ಅಥವಾ ಬೇರೆ ಯಾರಿಗೂ ಇದೊಂದು ಅಗ್ನಿಯ ಶಲ್ಯಂತ್ರವೆಂದು ತಿಳಿಯಬಾರದು.
01132013a ವೇಶ್ಮನ್ಯೇವಂ ಕೃತೇ ತತ್ರ ಕೃತ್ವಾ ತಾನ್ಪರಮಾರ್ಚಿತಾನ್|
01132013c ವಾಸಯೇಃ ಪಾಂಡವೇಯಾಂಶ್ಚ ಕುಂತೀಂ ಚ ಸಸುಹೃಜ್ಜನಾಂ||
ಈ ರೀತಿ ಮನೆಯನ್ನು ನಿರ್ಮಿಸಿ, ಅವರನ್ನು ಸತ್ಕರಿಸಿ ಪಾಂಡವರು ಸಖೀಮೇಳದೊಂದಿಗೆ ಅಲ್ಲಿ ವಾಸಿಸಲು ಕುಂತಿಯನ್ನು ಆಗ್ರಹಿಸಬೇಕು.
01132014a ತತ್ರಾಸನಾನಿ ಮುಖ್ಯಾನಿ ಯಾನಾನಿ ಶಯನಾನಿ ಚ|
01132014c ವಿಧಾತವ್ಯಾನಿ ಪಾಂಡೂನಾಂ ಯಥಾ ತುಷ್ಯೇತ ಮೇ ಪಿತಾ||
ನನ್ನ ತಂದೆಗೆ ತೃಪ್ತಿಕೊಡುವಷ್ಟು ಅಲ್ಲಿ ಪಾಂಡವರಿಗಾಗಿ ಆಸನಗಳ, ಹಾಸಿಗೆಗಳ, ಮಂಚಗಳ, ಮತ್ತು ವಾಹನಗಳ ವ್ಯವಸ್ಥೆಯಾಗಬೇಕು.
01132015a ಯಥಾ ರಮೇರನ್ವಿಶ್ರಬ್ಧಾ ನಗರೇ ವಾರಣಾವತೇ|
01132015c ತಥಾ ಸರ್ವಂ ವಿಧಾತವ್ಯಂ ಯಾವತ್ಕಾಲಸ್ಯ ಪರ್ಯಯಃ||
ವಾರಣಾವತ ನಗರಿಯಲ್ಲಿ ಅವರು, ನಮ್ಮ ಸಮಯವು ಬರುವವರೆಗೆ, ಯಾವುದೇ ರೀತಿಯ ಸಂಶಯವನ್ನೂ ಹೊಂದದೇ ವಿಶ್ರಾಂತಿಪಡೆಯುತ್ತಿರಬೇಕು.
01132016a ಜ್ಞಾತ್ವಾ ತು ತಾನ್ಸುವಿಶ್ವಸ್ತಾಂಶಯಾನಾನಕುತೋಭಯಾನ್|
01132016c ಅಗ್ನಿಸ್ತತಸ್ತ್ವಯಾ ದೇಯೋ ದ್ವಾರತಸ್ತಸ್ಯ ವೇಶ್ಮನಃ||
ಅವರಿಗೆ ಬರುವ ಅಪಾಯದ ಯಾವ ಶಂಕೆಯೂ ಇಲ್ಲ ಎಂದು ನಿಶ್ಚಯಮಾಡಿಕೊಂಡ ನಂತರ ಅವರು ನಿರ್ಭಯರಾಗಿ ಮಲಗಿಕೊಂಡಿದ್ದಾಗ ದ್ವಾರದಲ್ಲಿಯೇ ಬೆಂಕಿಯನ್ನು ಹಾಕಿ ಹೊತ್ತಿಸಬೇಕು.
01132017a ದಗ್ಧಾನೇವಂ ಸ್ವಕೇ ಗೇಹೇ ದಗ್ಧಾ ಇತಿ ತತೋ ಜನಾಃ|
01132017c ಜ್ಞಾತಯೋ ವಾ ವದಿಷ್ಯಂತಿ ಪಾಂಡವಾರ್ಥಾಯ ಕರ್ಹಿ ಚಿತ್||
ಈ ರೀತಿ ಬೆಂಕಿಯಲ್ಲಿ ಸುಟ್ಟು ತೀರಿಕೊಂಡಾಗ ಪಾಂಡವರು ಅವರ ಮನೆಯಲ್ಲಿಯೇ ಜೀವಂತ ಸುಟ್ಟುಹೋದರು ಎಂದು ಅವರ ಜನರೆಲ್ಲರೂ ತಿಳಿದುಕೊಳ್ಳುತ್ತಾರೆ.”
01132018a ತತ್ತಥೇತಿ ಪ್ರತಿಜ್ಞಾಯ ಕೌರವಾಯ ಪುರೋಚನಃ|
01132018c ಪ್ರಾಯಾದ್ರಾಸಭಯುಕ್ತೇನ ನಗರಂ ವಾರಣಾವತಂ||
ಪುರೋಚನನು ಕೌರವನಿಗೆ ಹಾಗೆಯೇ ಮಾಡುತ್ತೇನೆಂದು ಪ್ರತಿಜ್ಞೆಯನ್ನಿತ್ತು ಕತ್ತೆಯ ಬಂಡಿಯನ್ನೇರಿ ವಾರಣಾವತ ನಗರಿಗೆ ಹೊರಟನು.
01132019a ಸ ಗತ್ವಾ ತ್ವರಿತೋ ರಾಜನ್ದುರ್ಯೋಧನಮತೇ ಸ್ಥಿತಃ|
01132019c ಯಥೋಕ್ತಂ ರಾಜಪುತ್ರೇಣ ಸರ್ವಂ ಚಕ್ರೇ ಪುರೋಚನಃ||
ರಾಜನ್! ದುರ್ಯೋಧನನಿಗೆ ವಿನೀತನಾಗಿದ್ದ ಪುರೋಚನನು ಬೇಗನೆ ಹೋಗಿ ರಾಜಪುತ್ರನು ಹೇಳಿದ ಹಾಗೆಯೇ ಎಲ್ಲವನ್ನೂ ಮಾಡಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ಪುರೋಚನೋಪದೇಶೇ ದ್ವಾತ್ರಿಂಶದಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ಪುರೋಚನೋಪದೇಶ ಎನ್ನುವ ನೂರಾಮೂವತ್ತೆರಡನೆಯ ಅಧ್ಯಾಯವು.