ಆದಿ ಪರ್ವ: ಜತುಗೃಹ ಪರ್ವ
೧೨೭
ಕರ್ಣನ ತಂದೆ ವೃದ್ಧ ಸೂತ ಅಧಿರಥನು ರಂಗವನ್ನು ಪ್ರವೇಶಿಸಲು ಭೀಮನು ಸೂತಪುತ್ರನೆಂದು ಕರ್ಣನನ್ನು ಅವಹೇಳನ ಮಾಡುವುದು (೧-೭). ಅದಕ್ಕೆ ದುರ್ಯೋಧನನು ಕರ್ಣನ ಪರವಾಗಿ ಮಾತನಾಡಿ ಭೀಮನನ್ನು ನಿಂದಿಸಿದುದು (೮-೧೭). ಸೂರ್ಯನು ಮುಳುಗಲು, ಪ್ರದರ್ಶನವು ಮುಕ್ತಾಯಗೊಂಡಿದುದು (೧೮-೨೪).
01127001 ವೈಶಂಪಾಯನ ಉವಾಚ|
01127001a ತತಃ ಸ್ರಸ್ತೋತ್ತರಪಟಃ ಸಪ್ರಸ್ವೇದಃ ಸವೇಪಥುಃ|
01127001c ವಿವೇಶಾಧಿರಥೋ ರಂಗಂ ಯಷ್ಟಿಪ್ರಾಣೋ ಹ್ವಯನ್ನಿವ||
ವೈಶಂಪಾಯನನು ಹೇಳಿದನು: “ಆಗ ಉತ್ತರಪಟವನ್ನು ಕೆಳಗೆ ಬೀಳಿಸುತ್ತಾ ಬೆವರಿ ನಡಗುತ್ತಾ ಕೋಲನ್ನು ಹಿಡಿದು ದುರ್ಬಲ ಕಾಲುಗಳನ್ನೆಳೆಯುತ್ತಾ ಅಧಿರಥನು ರಂಗವನ್ನು ಪ್ರವೇಶಿಸಿದನು.
01127002a ತಮಾಲೋಕ್ಯ ಧನುಸ್ತ್ಯಕ್ತ್ವಾ ಪಿತೃಗೌರವಯಂತ್ರಿತಃ|
01127002c ಕರ್ಣೋಽಭಿಷೇಕಾರ್ದ್ರಶಿರಾಃ ಶಿರಸಾ ಸಮವಂದತ||
ಅವನನ್ನು ನೋಡಿ, ಧನುಸ್ಸನ್ನು ಕೆಳಗಿಟ್ಟು, ಪಿತೃಗೌರವಾನ್ವಿತ ಕರ್ಣನು ಅಭಿಷೇಕದಿಂದ ಇನ್ನೂ ಒದ್ದೆಯಾಗಿಯೇ ಇದ್ದ ಶಿರದಿಂದ ಅವನನ್ನು ವಂದಿಸಿದನು.
01127003a ತತಃ ಪಾದಾವವಚ್ಛಾದ್ಯ ಪಟಾಂತೇನ ಸಸಂಭ್ರಮಃ|
01127003c ಪುತ್ರೇತಿ ಪರಿಪೂರ್ಣಾರ್ಥಮಬ್ರವೀದ್ರಥಸಾರಥಿಃ||
ವಿಭ್ರಾಂತಿಗೊಂಡ ಆ ರಥಸಾರಥಿಯು ತನ್ನ ಪಂಚೆಯ ಅಂಚಿನಿಂದ ಕಾಲುಗಳನ್ನು ಮುಚ್ಚಿಕೊಳ್ಳುತ್ತಾ ಪರಿಪೂರ್ಣಾರ್ಥನಾದವನಿಗೆ “ಹಾ ಪುತ್ರ!” ಎಂದನು.
01127004a ಪರಿಷ್ವಜ್ಯ ಚ ತಸ್ಯಾಥ ಮೂರ್ಧಾನಂ ಸ್ನೇಹವಿಕ್ಲವಃ|
01127004c ಅಂಗರಾಜ್ಯಾಭಿಷೇಕಾರ್ದ್ರಮಶ್ರುಭಿಃ ಸಿಷಿಚೇ ಪುನಃ||
ಸ್ನೇಹಭಾವದಿಂದ ಕಂಪಿತನಾಗಿ ಅವನನ್ನು ಬಿಗಿದಪ್ಪಿ ನೆತ್ತಿಗೆ ಮುತ್ತನ್ನಿಟ್ಟನು, ಮತ್ತು ಅಂಗರಾಜ್ಯಾಭಿಷೇಕದಿಂದ ಇನ್ನೂ ಒದ್ದೆಯಾಗಿದ್ದ ಅವನ ತಲೆಗೆ ತನ್ನ ಕಣ್ಣೀರಿನಿಂದ ಪುನಃ ಸಿಂಚಿಸಿದನು.
01127005a ತಂ ದೃಷ್ಟ್ವಾ ಸೂತಪುತ್ರೋಽಯಮಿತಿ ನಿಶ್ಚಿತ್ಯ ಪಾಂಡವಃ|
01127005c ಭೀಮಸೇನಸ್ತದಾ ವಾಕ್ಯಮಬ್ರವೀತ್ಪ್ರಹಸನ್ನಿವ||
ಅವನನ್ನು ನೋಡಿದ ಪಾಂಡವ ಭೀಮನು ಇವನು ಸೂತಪುತ್ರನೆಂದು ನಿಶ್ಚಯಿಸಿ ನಗುತ್ತಾ ಹೇಳಿದನು:
01127006a ನ ತ್ವಮರ್ಹಸಿ ಪಾರ್ಥೇನ ಸೂತಪುತ್ರ ರಣೇ ವಧಂ|
01127006c ಕುಲಸ್ಯ ಸದೃಶಸ್ತೂರ್ಣಂ ಪ್ರತೋದೋ ಗೃಹ್ಯತಾಂ ತ್ವಯಾ||
“ಸೂತಪುತ್ರ! ರಣದಲ್ಲಿ ನೀನು ಪಾರ್ಥನಿಂದ ವಧಿಸಲ್ಪಡಲು ಅರ್ಹನಲ್ಲ. ನಿನ್ನ ಕುಲಕ್ಕೆ ಸದೃಶವಾದ ಬಾರಿಕೋಲನ್ನೇ ಹಿಡಿಯುವುದು ಸರಿ!
01127007a ಅಂಗರಾಜ್ಯಂ ಚ ನಾರ್ಹಸ್ತ್ವಮುಪಭೋಕ್ತುಂ ನರಾಧಮ|
01127007c ಶ್ವಾ ಹುತಾಶಸಮೀಪಸ್ಥಂ ಪುರೋಡಾಶಮಿವಾಧ್ವರೇ||
ನರಾಧಮ! ಹೇಗೆ ನಾಯಿಗೆ ಅಧ್ವರದಲ್ಲಿ ಹುತಾಶನನ ಸಮೀಪದ ಹವಿಸ್ಸಿನ ಅರ್ಹತೆ ಇಲ್ಲವೋ ಹಾಗೆ ಅಂಗರಾಜ್ಯವನ್ನು ಉಪಭೋಗಿಸುವ ಅರ್ಹತೆ ನಿನಗಿಲ್ಲ.”
01127008a ಏವಮುಕ್ತಸ್ತತಃ ಕರ್ಣಃ ಕಿಂ ಚಿತ್ಪ್ರಸ್ಫುರಿತಾಧರಃ|
01127008c ಗಗನಸ್ಥಂ ವಿನಿಃಶ್ವಸ್ಯ ದಿವಾಕರಮುದೈಕ್ಷತ||
ಇದನ್ನು ಕೇಳಿದ ಕರ್ಣನ ಕೆಳತುಟಿಯು ನಡುಗತೊಡಗಿತು. ನಿಟ್ಟುಸಿರು ಬಿಡುತ್ತಾ ಆಕಾಶದಲ್ಲಿರುವ ಸೂರ್ಯನನ್ನು ತಲೆಯೆತ್ತಿ ನೋಡಿದನು.
01127009a ತತೋ ದುರ್ಯೋಧನಃ ಕೋಪಾದುತ್ಪಪಾತ ಮಹಾಬಲಃ|
01127009c ಭ್ರಾತೃಪದ್ಮವನಾತ್ತಸ್ಮಾನ್ಮದೋತ್ಕಟ ಇವ ದ್ವಿಪಃ||
01127010a ಸೋಽಬ್ರವೀದ್ಭೀಮಕರ್ಮಾಣಂ ಭೀಮಸೇನಮವಸ್ಥಿತಂ|
01127010c ವೃಕೋದರ ನ ಯುಕ್ತಂ ತೇ ವಚನಂ ವಕ್ತುಮೀದೃಶಂ||
ಆಗ ಮಹಾಬಲಿ ದುರ್ಯೋಧನನು ಕೋಪಗೊಂಡು ಕಮಲದ ಸರೋವರದಿಂದ ಮತ್ತಗಜವೊಂದು ಮೇಲೇಳುವಂತೆ ತನ್ನ ಸಹೋದರರ ಮಧ್ಯದಿಂದ ಮೇಲೆದ್ದು ಭೀಮಕರ್ಮಣಿ ಭೀಮಸೇನನಿಗೆ ಹೇಳಿದನು: “ವೃಕೋದರ! ಈ ರೀತಿ ಮಾತನಾಡುವುದು ನಿನಗೆ ಯುಕ್ತವಲ್ಲ.
01127011a ಕ್ಷತ್ರಿಯಾಣಾಂ ಬಲಂ ಜ್ಯೇಷ್ಠಂ ಯೋದ್ಧವ್ಯಂ ಕ್ಷತ್ರಬಂಧುನಾ|
01127011c ಶೂರಾಣಾಂ ಚ ನದೀನಾಂ ಚ ಪ್ರಭವಾ ದುರ್ವಿದಾಃ ಕಿಲ||
ಕ್ಷತ್ರಿಯರಿಗೆ ಬಲವೇ ದೊಡ್ಡದು. ಕ್ಷತ್ರಬಂಧುವಿನೊಂದಿಗೆ ಯುದ್ಧ ಮಾಡಲೇ ಬೇಕು. ಶೂರರ ಮತ್ತು ನದಿಗಳ ಹುಟ್ಟು ನಿಜವಾಗಿಯೂ ತಿಳಿಯದಂಥಾದ್ದು.
01127012a ಸಲಿಲಾದುತ್ಥಿತೋ ವಹ್ನಿರ್ಯೇನ ವ್ಯಾಪ್ತಂ ಚರಾಚರಂ|
01127012c ದಧೀಚಸ್ಯಾಸ್ಥಿತೋ ವಜ್ರಂ ಕೃತಂ ದಾನವಸೂದನಂ||
ಚರಾಚರಗಳನ್ನು ವ್ಯಾಪಿಸಿರುವ ವಹ್ನಿಯು ನೀರಿನಿಂದ ಹುಟ್ಟಿದ್ದುದು. ದಾನವರನ್ನು ಸಂಹರಿಸುವ ವಜ್ರವು ದಧೀಚಿಯ ಅಸ್ತಿಗಳಿಂದ ಮಾಡಲ್ಪಟ್ಟಿದೆ.
01127013a ಆಗ್ನೇಯಃ ಕೃತ್ತಿಕಾಪುತ್ರೋ ರೌದ್ರೋ ಗಾಂಗೇಯ ಇತ್ಯಪಿ|
01127013c ಶ್ರೂಯತೇ ಭಗವಾನ್ದೇವಃ ಸರ್ವಗುಹ್ಯಮಯೋ ಗುಹಃ||
ಭಗವಾನ್ ದೇವ ಗುಹನು ಸಂಪೂರ್ಣವಾಗಿ ಗುಹ್ಯ ಎಂದು ಕೇಳಿದ್ದೇವೆ; ಅವನು ಆಗ್ನೇಯನಿರಬಹುದು, ಕೃತ್ತಿಕಾ ಪುತ್ರನಿರಬಹುದು, ರುದ್ರನ ಮಗನಿರಬಹುದು ಅಥವಾ ಗಂಗೆಯ ಮಗನಿರಬಹುದು.
01127014a ಕ್ಷತ್ರಿಯಾಭ್ಯಶ್ಚ ಯೇ ಜಾತಾ ಬ್ರಾಹ್ಮಣಾಸ್ತೇ ಚ ವಿಶ್ರುತಾಃ|
01127014c ಆಚಾರ್ಯಃ ಕಲಶಾಜ್ಜಾತಃ ಶರಸ್ತಂಬಾದ್ಗುರುಃ ಕೃಪಃ|
01127014e ಭವತಾಂ ಚ ಯಥಾ ಜನ್ಮ ತದಪ್ಯಾಗಮಿತಂ ನೃಪೈಃ||
ಕ್ಷತ್ರಿಯರಲ್ಲಿ ಹುಟ್ಟಿದವರು ಬ್ರಾಹ್ಮಣರಾದರೆಂದೂ ಕೇಳಿದ್ದೇವೆ. ಆಚಾರ್ಯನು ಕಲಶದಲ್ಲಿ ಮತ್ತು ಗುರು ಕೃಪನು ಶರಸ್ತಂಭದಲ್ಲಿ ಜನಿಸಿದರು. ನಿಮ್ಮೆಲ್ಲರ ಜನ್ಮವೂ ಹೇಗಾಯಿತೆಂದು ಎಲ್ಲ ನೃಪರಿಗೂ ತಿಳಿದಿದ್ದುದೇ.
01127015a ಸಕುಂಡಲಂ ಸಕವಚಂ ದಿವ್ಯಲಕ್ಷಣಲಕ್ಷಿತಂ|
01127015c ಕಥಮಾದಿತ್ಯಸಂಕಾಶಂ ಮೃಗೀ ವ್ಯಾಘ್ರಂ ಜನಿಷ್ಯತಿ||
ಕುಂಡಲ-ಕವಚಗಳೊಂದಿಗೇ ಹುಟ್ಟಿರುವ ದಿವ್ಯ ಲಕ್ಷಣ ಲಕ್ಷಿತ, ಆದಿತ್ಯ ಸಂಕಾಶ ಈ ಹುಲಿಗೆ ಹೇಗೆ ತಾನೆ ಒಂದು ಜಿಂಕೆಯು ಜನ್ಮ ನೀಡಬಲ್ಲದು?
01127016a ಪೃಥಿವೀರಾಜ್ಯಮರ್ಹೋಽಯಂ ನಾಂಗರಾಜ್ಯಂ ನರೇಶ್ವರಃ|
01127016c ಅನೇನ ಬಾಹುವೀರ್ಯೇಣ ಮಯಾ ಚಾಜ್ಞಾನುವರ್ತಿನಾ||
ತನ್ನ ಈ ಬಾಹುವೀರ್ಯದಿಂದ ಮತ್ತು ಅವನ ಅನುಜ್ಞೆಯಂತೆ ನಡೆದುಕೊಳ್ಳುವ ನನ್ನಿಂದ ಈ ನರೇಶ್ವರನು ಕೇವಲ ಅಂಗರಾಜ್ಯ ಮಾತ್ರವಲ್ಲ ಇಡೀ ಪೃಥ್ವಿಯನ್ನೇ ಆಳುವ ಅರ್ಹತೆಯನ್ನು ಹೊಂದಿದ್ದಾನೆ.
01127017a ಯಸ್ಯ ವಾ ಮನುಜಸ್ಯೇದಂ ನ ಕ್ಷಾಂತಂ ಮದ್ವಿಚೇಷ್ಟಿತಂ|
01127017c ರಥಮಾರಹ್ಯ ಪದ್ಭ್ಯಾಂ ವಾ ವಿನಾಮಯತು ಕಾರ್ಮುಕಂ||
ನಾನು ಮಾಡಿದುದು ಯಾರಿಗೆ ಒಪ್ಪಿಗೆಯಿಲ್ಲವೋ ಆ ಮನುಷ್ಯನು ರಥವನ್ನೇರಿಯಾಗಲೀ ಅಥವಾ ಪದಾತಿಯಾಗಲೀ ಇದನ್ನು ಪ್ರತಿಭಟಿಸಬೇಕು.”
01127018a ತತಃ ಸರ್ವಸ್ಯ ರಂಗಸ್ಯ ಹಾಹಾಕಾರೋ ಮಹಾನಭೂತ್|
01127018c ಸಾಧುವಾದಾನುಸಂಬದ್ಧಃ ಸೂರ್ಯಶ್ಚಾಸ್ತಮುಪಾಗಮತ್||
ರಂಗದ ಎಲ್ಲೆಡೆಯಲ್ಲಿಯೂ ಜೋರಾಗಿ “ಸಾಧು! ಸಾಧು!” ಎಂಬ ಹಾಹಾಕಾರವೆದ್ದಿತು. ಅಷ್ಟರಲ್ಲಿ ಸೂರ್ಯನು ಮುಳುಗಿದನು.
01127019a ತತೋ ದುರ್ಯೋಧನಃ ಕರ್ಣಮಾಲಂಬ್ಯಾಥ ಕರೇ ನೃಪ|
01127019c ದೀಪಿಕಾಗ್ನಿಕೃತಾಲೋಕಸ್ತಸ್ಮಾದ್ರಂಗಾದ್ವಿನಿರ್ಯಯೌ||
ಆಗ ದುರ್ಯೋಧನನು ನೃಪ ಕರ್ಣನ ಕೈಯನ್ನು ಹಿಡಿದುಕೊಂಡು ದೀವಟಿಕೆಗಳ ಬೆಂಕಿಯ ಬೆಳಕಿನಲ್ಲಿ ಆ ರಂಗದಿಂದ ನಿರ್ಗಮಿಸಿದನು.
01127020a ಪಾಂಡವಾಶ್ಚ ಸಹದ್ರೋಣಾಃ ಸಕೃಪಾಶ್ಚ ವಿಶಾಂ ಪತೇ|
01127020c ಭೀಷ್ಮೇಣ ಸಹಿತಾಃ ಸರ್ವೇ ಯಯುಃ ಸ್ವಂ ಸ್ವಂ ನಿವೇಶನಂ||
ವಿಶಾಂಪತೇ! ಪಾಂಡವರು ದ್ರೋಣ, ಕೃಪ ಮತ್ತು ಭೀಷ್ಮರೊಂದಿಗೆ ಮತ್ತು ಎಲ್ಲರೂ ತಮ್ಮ ತಮ್ಮ ನಿವೇಶನಗಳಿಗೆ ತೆರಳಿದರು.
01127021a ಅರ್ಜುನೇತಿ ಜನಃ ಕಶ್ಚಿತ್ಕಶ್ಚಿತ್ಕರ್ಣೇತಿ ಭಾರತ|
01127021c ಕಶ್ಚಿದ್ದುರ್ಯೋಧನೇತ್ಯೇವಂ ಬ್ರುವಂತಃ ಪ್ರಸ್ಥಿತಾಸ್ತದಾ||
ದಾರಿಯಲ್ಲಿ ಕೆಲವು ಜನರು “ಅರ್ಜುನ!”ಎಂದೂ ಕೆಲವರು “ಕರ್ಣ!” ಎಂದೂ ಇನ್ನು ಕೆಲವರು “ದುರ್ಯೋಧನ!” ಎಂದೂ ಘೋಷಿಸುತ್ತಿದ್ದರು.
01127022a ಕುಂತ್ಯಾಶ್ಚ ಪ್ರತ್ಯಭಿಜ್ಞಾಯ ದಿವ್ಯಲಕ್ಷಣಸೂಚಿತಂ|
01127022c ಪುತ್ರಮಂಗೇಶ್ವರಂ ಸ್ನೇಹಾಚ್ಶನ್ನಾ ಪ್ರೀತಿರವರ್ಧತ||
ಕುಂತಿಯು ಅಂಗೇಶ್ವರನ ದಿವ್ಯಲಕ್ಷಣಗಳನ್ನು ನೋಡಿ ಅವನು ತನ್ನ ಪುತ್ರನೆಂದು ಗುರುತಿಸಿದಳು ಮತ್ತು ಅವನ ಕುರಿತು ಅಡಗಿಸಿಟ್ಟಿದ್ದ ಸ್ನೇಹ ಪ್ರೀತಿ ಭಾವಗಳು ಅವಳಲ್ಲಿ ಹೆಚ್ಚಾದವು.
01127023a ದುರ್ಯೋಧನಸ್ಯಾಪಿ ತದಾ ಕರ್ಣಮಾಸಾದ್ಯ ಪಾರ್ಥಿವ|
01127023c ಭಯಮರ್ಜುನಸಾಂಜಾತಂ ಕ್ಷಿಪ್ರಮಂತರಧೀಯತ||
ಪಾರ್ಥಿವ! ಕರ್ಣನನ್ನು ಪಡೆದ ದುರ್ಯೋಧನನು ಅರ್ಜುನನಿಂದ ತನ್ನಲ್ಲುಂಟಾಗಿದ್ದ ಭಯವನ್ನು ಕಳೆದುಕೊಂಡನು.
01127024a ಸ ಚಾಪಿ ವೀರಃ ಕೃತಶಸ್ತ್ರನಿಶ್ರಮಃ
ಪರೇಣ ಸಾಂನಾಭ್ಯವದತ್ಸುಯೋಧನಂ|
01127024c ಯುಧಿಷ್ಠಿರಸ್ಯಾಪ್ಯಭವತ್ತದಾ ಮತಿರ್
ನ ಕರ್ಣತುಲ್ಯೋಽಸ್ತಿ ಧನುರ್ಧರಃ ಕ್ಷಿತೌ||
ತನ್ನ ಶ್ರಮದಿಂದ ಅಸ್ತ್ರಗಳನ್ನು ತನ್ನದಾಗಿಸಿಕೊಂಡ ಆ ವೀರನಾದರೋ ಸುಯೋಧನನನ್ನು ಅತ್ಯಂತ ಒಳ್ಳೆಯ ಮಾತುಗಳಿಂದ ಹೊಗಳಿದನು. ಆ ವೇಳೆಯಲ್ಲಿ ಯುಧಿಷ್ಠಿರನೂ ಕೂಡ “ಕರ್ಣನಿಗೆ ಸಮಾನ ಧನುರ್ಧರನು ಭೂಮಿಯಲ್ಲೇ ಯಾರೂ ಇಲ್ಲ!” ಎಂದು ಯೋಚಿಸಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ಅಸ್ತ್ರದರ್ಶನೇ ಸಪ್ತವಿಂಶತ್ಯಾಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ಅಸ್ತ್ರದರ್ಶನದಲ್ಲಿ ನೂರಾ ಇಪ್ಪತ್ತೇಳನೆಯ ಅಧ್ಯಾಯವು.