Adi Parva: Chapter 126

ಆದಿ ಪರ್ವ: ಜತುಗೃಹ ಪರ್ವ

೧೨೬

ರಂಗಮಂಡಲಕ್ಕೆ ಕರ್ಣನು ಪ್ರವೇಶಿಸಿ, ಅರ್ಜುನನು ಮಾಡಿದುದೆಲ್ಲವನ್ನೂ ಮಾಡಿ ತೋರಿಸಿದುದು (೧-೧೨). ದುರ್ಯೋಧನನು ತನ್ನ ಸಖ್ಯವನ್ನು ಕರ್ಣನಿಗಿತ್ತುದು, ಕರ್ಣನಿಂದ ಅದರ ಸ್ವೀಕಾರ (೧೩-೧೬). ಅರ್ಜುನ-ಕರ್ಣರ ನಡುವೆ ದ್ವಂದ್ವಯುದ್ಧವು ನಡೆಯುತ್ತದೆ ಎನ್ನುವಾಗ ಪ್ರೇಕ್ಷಕವೃಂದದಲ್ಲಿದ್ದ ಕುಂತಿಯು ಮಗನನ್ನು ಗುರುತಿಸಿ ಮೂರ್ಛಿತಳಾದುದು (೧೭-೨೯). ಅರ್ಜುನನ ಪರಿಚಯ ಮಾಡಿ ಕರ್ಣನ ಕುಲ ಮತ್ತು ತಂದೆತಾಯಿಯರ ಕುರಿತು ಕೃಪನು ಕೇಳಲು ಕರ್ಣನ ಮುಖಬಾಡಿದುದು; ದುರ್ಯೋಧನನ್ನು ಅಲ್ಲಿಯೇ ಅವಸರದಲ್ಲಿ ಕರ್ಣನನ್ನು ಅಂಗರಾಜನನ್ನಾಗಿ ಅಭಿಷೇಕಿಸಿದುದು (೩೦-೩೯).

01126001 ವೈಶಂಪಾಯನ ಉವಾಚ|

01126001a ದತ್ತೇಽವಕಾಶೇ ಪುರುಷೈರ್ವಿಸ್ಮಯೋತ್ಫುಲ್ಲಲೋಚನೈಃ|

01126001c ವಿವೇಶ ರಂಗಂ ವಿಸ್ತೀರ್ಣಂ ಕರ್ಣಃ ಪರಪುರಂಜಯಃ||

01126002a ಸಹಜಂ ಕವಚಂ ಬಿಭ್ರತ್ಕುಂಡಲೋದ್ದ್ಯೋತಿತಾನನಃ|

01126002c ಸಧನುರ್ಬದ್ಧನಿಸ್ತ್ರಿಂಶಃ ಪಾದಚಾರೀವ ಪರ್ವತಃ||

01126003a ಕನ್ಯಾಗರ್ಭಃ ಪೃಥುಯಶಾಃ ಪೃಥಾಯಾಃ ಪೃಥುಲೋಚನಃ|

01126003c ತೀಕ್ಷ್ಣಾಂಶೋರ್ಭಾಸ್ಕರಸ್ಯಾಂಶಃ ಕರ್ಣೋಽರಿಗಣಸೂದನಃ||

ವೈಶಂಪಾಯನನು ಹೇಳಿದನು: “ವಿಸ್ಮಿತರಾಗಿ ತೆರೆದ ಕಣ್ಣುಗಳಿಂದ ಪ್ರೇಕ್ಷಕರು ದಾರಿ ಮಾಡಿ ಕೊಡುತ್ತಿದ್ದಂತೆ ಆ ವಿಸ್ತೀರ್ಣ ರಂಗಭೂಮಿಯನ್ನು ಹೊಳೆಯುತ್ತಿರುವ ಸಹಜ ಕವಚ ಮತ್ತು ಕುಂಡಲಗಳಿಂದ ಪ್ರಕಾಶಿತಗೊಂಡ ಮುಖವುಳ್ಳ, ಮಹಾ ಕೀರ್ತಿವಂತ, ವಿಶಾಲ ಕಣ್ಣುಗಳನ್ನು ಹೊಂದಿದ್ದ, ಪೃಥಾಳಿಗೆ ಕನ್ಯೆಯಾಗಿದ್ದಾಗಲೇ ಹುಟ್ಟಿದ್ದ, ಸೂರ್ಯನ ಅಂಶದಿಂದ ಹುಟ್ಟಿದ್ದ, ಸೂರ್ಯನಂತೆಯೇ ತೀಕ್ಷ್ಣ ಶೋಭೆಯನ್ನು ಹೊಂದಿದ್ದ, ಅರಿಗಣ ಸೂದನ, ಪರಪುರಂಜಯ ಕರ್ಣನು ಧನಸ್ಸು ಮತ್ತು ಕಟ್ಟಿಕೊಂಡ ಖಡ್ಗದೊಂದಿಗೆ ಪರ್ವತವೇ ನಡೆದು ಬರುತ್ತಿದೆಯೋ ಎನ್ನುವಂತೆ ಪ್ರವೇಶಿಸಿದನು.

01126004a ಸಿಂಹರ್ಷಭಗಜೇಂದ್ರಾಣಾಂ ತುಲ್ಯವೀರ್ಯಪರಾಕ್ರಮಃ|

01126004c ದೀಪ್ತಿಕಾಂತಿದ್ಯುತಿಗುಣೈಃ ಸೂರ್ಯೇಂದುಜ್ವಲನೋಪಮಃ||

ವೀರ್ಯ ಮತ್ತು ಪರಾಕ್ರಮದಲ್ಲಿ ಅವನು ಸಿಂಹ, ವೃಷಭ, ಮತ್ತು ಗಜೇಂದ್ರರ ಸಮಾನನಾಗಿದ್ದನು. ಪ್ರಕಾಶ, ಕಾಂತಿ ಮತ್ತು ಹೊಳಪಿನಲ್ಲಿ ಸೂರ್ಯ, ಚಂದ್ರಮ ಮತ್ತು ಅಗ್ನಿಯಂತಿದ್ದನು.

01126005a ಪ್ರಾಂಶುಃ ಕನಕತಾಲಾಭಃ ಸಿಂಹಸಂಹನನೋ ಯುವಾ|

01126005c ಅಸಂಖ್ಯೇಯಗುಣಃ ಶ್ರೀಮಾನ್ಭಾಸ್ಕರಸ್ಯಾತ್ಮಸಂಭವಃ||

ಸಿಂಹದಂತೆ ಗಟ್ಟಿ ದೇಹದ ಆ ಯುವಕನು ಬಂಗಾರದ ತಾಳವೃಕ್ಷದಂತೆ ಎತ್ತರನಾಗಿದ್ದನು. ಭಾಸ್ಕರನ ಆತ್ಮಸಂಜಾತನಾದ ಅವನು ಅಸಂಖ್ಯ ಗುಣಗಳಿಂದ ಶ್ರೀಮಂತನಾಗಿದ್ದನು. 

01126006a ಸ ನಿರೀಕ್ಷ್ಯ ಮಹಾಬಾಹುಃ ಸರ್ವತೋ ರಂಗಮಂಡಲಂ|

01126006c ಪ್ರಣಾಮಂ ದ್ರೋಣಕೃಪಯೋರ್ನಾತ್ಯಾದೃತಮಿವಾಕರೋತ್||

ಆ ಮಹಾಬಾಹುವು ಸುತ್ತಲೂ ರಂಗಮಂಡಲವನ್ನು ನಿರೀಕ್ಷಿಸಿ, ಹೌದೋ ಅಲ್ಲವೋ ಎಂಬಂತೆ ದ್ರೋಣ ಕೃಪರಿಗೆ ಪ್ರಣಾಮ ಮಾಡಿದನು.

01126007a ಸ ಸಾಮಾಜಜನಃ ಸರ್ವೋ ನಿಶ್ಚಲಃ ಸ್ಥಿರಲೋಚನಃ|

01126007c ಕೋಽಯಮಿತ್ಯಾಗತಕ್ಷೋಭಃ ಕೌತೂಹಲಪರೋಽಭವತ್||

ಸಮಾಜದ ಜನರೆಲ್ಲರೂ ಅವನನ್ನೇ ನೋಡುತ್ತಾ ನಿಶ್ಚಲರಾದರು ಮತ್ತು “ಇಲ್ಲಿಗೆ ಆಗಮಿಸಿದ ಈ ಭಿರುಗಾಳಿ ಯಾರು?” ಎಂದು ಕುತೂಹಲಪರರಾದರು.

01126008a ಸೋಽಬ್ರವೀನ್ಮೇಘಧೀರೇಣ ಸ್ವರೇಣ ವದತಾಂ ವರಃ|

01126008c ಭ್ರಾತಾ ಭ್ರಾತರಮಜ್ಞಾತಂ ಸಾವಿತ್ರಃ ಪಾಕಶಾಸನಿಂ||

ಮಾತಿನಲ್ಲಿ ಶ್ರೇಷ್ಠ ಭ್ರಾತ ಸಾವಿತ್ರನು ಭ್ರಾತನೆಂದು ತಿಳಿಯದೇ ಇದ್ದ ಪಾಕಶಾಸನಿಯನ್ನುದ್ದೇಶಿಸಿ ಗುಡುಗಿನ ಸ್ವರದಲ್ಲಿ ಹೇಳಿದನು:

01126009a ಪಾರ್ಥ ಯತ್ತೇ ಕೃತಂ ಕರ್ಮ ವಿಶೇಷವದಹಂ ತತಃ|

01126009c ಕರಿಷ್ಯೇ ಪಶ್ಯತಾಂ ನೄಣಾಂ ಮಾತ್ಮನಾ ವಿಸ್ಮಯಂ ಗಮಃ||

“ಪಾರ್ಥ! ನೀನು ಮಾಡಿದುದೆಲ್ಲಕ್ಕಿಂತಲೂ ವಿಶೇಷವಾದವುಗಳನ್ನು ಈ ಜನರು ನೋಡುತ್ತಿದ್ದಂತೆಯೇ ಮಾಡುತ್ತೇನೆ. ನಿನ್ನ ಮೇಲೆ ನೀನೇ ವಿಸ್ಮಿತನಾಗಬೇಡ!”

01126010a ಅಸಮಾಪ್ತೇ ತತಸ್ತಸ್ಯ ವಚನೇ ವದತಾಂ ವರ|

01126010c ಯಂತ್ರೋತ್ಕ್ಷಿಪ್ತ ಇವ ಕ್ಷಿಪ್ರಮುತ್ತಸ್ಥೌ ಸರ್ವತೋ ಜನಃ||

ಆ ಮಾತಿನಲ್ಲಿ ಶ್ರೇಷ್ಠನು ತನ್ನ ಮಾತುಗಳನ್ನು ಮುಗಿಸುವುದರೊಳಗೇ ಅಲ್ಲಿದ್ದ ಸರ್ವ ಜನರೂ ಬಾವಿಯಿಂದ ನೀರಿನ ಯಂತ್ರವು ಮೇಲೇಳುವಂತೆ ಒಂದೇ ವೇಳೆಯಲ್ಲಿ ಎದ್ದು ನಿಂತರು.

01126011a ಪ್ರೀತಿಶ್ಚ ಪುರುಷವ್ಯಾಘ್ರ ದುರ್ಯೋಧನಮಥಾಸ್ಪೃಶತ್|

01126011c ಹ್ರೀಶ್ಚ ಕ್ರೋಧಶ್ಚ ಬೀಭತ್ಸುಂ ಕ್ಷಣೇನಾನ್ವವಿಶಚ್ಚ ಹ||

ಪುರುಷವ್ಯಾಘ್ರ ದುರ್ಯೋಧನನಿಗೆ ಪ್ರೀತಿ ಉಕ್ಕಿ ಬಂದಿತು. ಆದರೆ ಬೀಭತ್ಸುವಿಗೆ ತಕ್ಷಣವೇ ಹೇಸಿಗೆ ಮತ್ತು ಸಿಟ್ಟು ಎರಡೂ ಉಕ್ಕಿ ಬಂದವು.

01126012a ತತೋ ದ್ರೋಣಾಭ್ಯನುಜ್ಞಾತಃ ಕರ್ಣಃ ಪ್ರಿಯರಣಃ ಸದಾ|

01126012c ಯತ್ಕೃತಂ ತತ್ರ ಪಾರ್ಥೇನ ತಚ್ಚಕಾರ ಮಹಾಬಲಃ||

ದ್ರೋಣನು ಅಪ್ಪಣೆಯನ್ನು ನೀಡಲಾಗಿ ಸದಾ ರಣಪ್ರಿಯ ಬಹಾಬಲಿ ಕರ್ಣನು ಪಾರ್ಥನು ಮಾಡಿ ತೋರಿಸಿದ ಎಲ್ಲವನ್ನೂ ಹಾಗೆಯೇ ಮಾಡಿ ತೋರಿಸಿದನು.

01126013a ಅಥ ದುರ್ಯೋಧನಸ್ತತ್ರ ಭ್ರಾತೃಭಿಃ ಸಹ ಭಾರತ|

01126013c ಕರ್ಣಂ ಪರಿಷ್ವಜ್ಯ ಮುದಾ ತತೋ ವಚನಮಬ್ರವೀತ್||

ಭಾರತ! ಆಗ ದುರ್ಯೋಧನನು ತನ್ನ ಸಹೋದರರೊಡಗೂಡಿ ಕರ್ಣನನ್ನು ಬಿಗಿದಪ್ಪಿ ಸಂತೋಷದಿಂದ ಹೇಳಿದನು:

01126014a ಸ್ವಾಗತಂ ತೇ ಮಹಾಬಾಹೋ ದಿಷ್ಟ್ಯಾ ಪ್ರಾಪ್ತೋಽಸಿ ಮಾನದ|

01126014c ಅಹಂ ಚ ಕುರುರಾಜ್ಯಂ ಚ ಯಥೇಷ್ಟಮುಪಭುಜ್ಯತಾಂ||

“ಮಹಾಬಾಹು! ನಿನಗೆ ಸ್ವಾಗತ! ಮಾನದ! ಸೌಭಾಗ್ಯವೇ ನಿನ್ನನ್ನು ಇಲ್ಲಿ ಕರೆ ತಂದಿದೆ. ನನ್ನನ್ನೂ ಈ ಕುರುರಾಜ್ಯವನ್ನೂ ಯಥೇಷ್ಟವಾಗಿ ಭೋಗಿಸು.”

01126015 ಕರ್ಣ ಉವಾಚ|

01126015a ಕೃತಂ ಸರ್ವೇಣ ಮೇಽನ್ಯೇನ ಸಖಿತ್ವಂ ಚ ತ್ವಯಾ ವೃಣೇ|

01126015c ದ್ವಂದ್ವಯುದ್ಧಂ ಚ ಪಾರ್ಥೇನ ಕರ್ತುಮಿಚ್ಛಾಮಿ ಭಾರತ||

ಕರ್ಣನು ಹೇಳಿದನು: “ನಿನ್ನ ಸ್ನೇಹವೊಂದಿದ್ದರೆ ಬೇರೆ ಎಲ್ಲವೂ ಬಂದಹಾಗೆಯೇ. ಅದನ್ನೇ ಬಯಸುತ್ತೇನೆ. ಭಾರತ! ಪಾರ್ಥನೊಡನೆ ದ್ವಂದ್ವಯುದ್ಧ ಮಾಡಲು ಬಯಸುತ್ತೇನೆ.”

01126016 ದುರ್ಯೋಧನ ಉವಾಚ|

01126016a ಭುಂಕ್ಷ್ವ ಭೋಗಾನ್ಮಯಾ ಸಾರ್ಧಂ ಬಂಧೂನಾಂ ಪ್ರಿಯಕೃದ್ಭವ|

01126016c ದುರ್ಹೃದಾಂ ಕುರು ಸರ್ವೇಷಾಂ ಮೂರ್ಧ್ನಿ ಪಾದಮರಿಂದಮ||

ದುರ್ಯೋಧನನು ಹೇಳಿದನು: “ನನ್ನೊಡನೆ ಎಲ್ಲ ಭೋಗಗಳನ್ನೂ ಭೋಗಿಸು. ನಿನ್ನ ಬಂಧುಗಳ ಪ್ರಿಯಕರನಾಗು. ಅರಿಂದಮ! ನಿನಗೆ ಕೆಟ್ಟದನ್ನು ಬಯಸುವ ಎಲ್ಲರ ನೆತ್ತಿಯನ್ನು ತುಳಿ!””

01126017 ವೈಶಂಪಾಯನ ಉವಾಚ|

01126017a ತತಃ ಕ್ಷಿಪ್ತಮಿವಾತ್ಮಾನಂ ಮತ್ವಾ ಪಾರ್ಥೋಽಭ್ಯಭಾಷತ|

01126017c ಕರ್ಣಂ ಭ್ರಾತೃಸಮೂಹಸ್ಯ ಮಧ್ಯೇಽಚಲಮಿವ ಸ್ಥಿತಂ||

ವೈಶಂಪಾಯನನು ಹೇಳಿದನು: “ಆಗ ತನಗೆ ಅವಹೇಳನವಾಗುತ್ತಿದೆಯೆಂದು ತಿಳಿದ ಪಾರ್ಥನು ಭ್ರಾತೃಗಳ ಸಮೂಹದಲ್ಲಿ ಪರ್ವತದಂತೆ ನಿಂತಿದ್ದ ಕರ್ಣನಿಗೆ ಹೇಳಿದನು:

01126018a ಅನಾಹೂತೋಪಸೃಪ್ತಾನಾಮನಾಹೂತೋಪಜಲ್ಪಿನಾಂ|

01126018c ಯೇ ಲೋಕಾಸ್ತಾನ್ ಹತಃ ಕರ್ಣ ಮಯಾ ತ್ವಂ ಪ್ರತಿಪತ್ಸ್ಯಸೇ||

“ಕರ್ಣ! ನಾನು ನಿನ್ನನ್ನು ಕೊಂದು ಮುಗಿಸಿದೆನೆಂದರೆ ನೀನು ಅಹ್ವಾಸಿಸದೇ ಬಂದವರಿಗೆ ಮತ್ತು ಅಹ್ವಾಸಿಸದೇ ಮಾತನಾಡುವವರಿಗೆ ಮೀಸಲಾಗಿಟ್ಟಿರುವ ಲೋಕವನ್ನು ಹೊಂದುತ್ತೀಯೆ!”

01126019 ಕರ್ಣ ಉವಾಚ|

01126019a ರಂಗೋಽಯಂ ಸರ್ವಸಾಮಾನ್ಯಃ ಕಿಮತ್ರ ತವ ಫಲ್ಗುನ|

01126019c ವೀರ್ಯಶ್ರೇಷ್ಠಾಶ್ಚ ರಾಜನ್ಯಾ ಬಲಂ ಧರ್ಮೋಽನುವರ್ತತೇ||

ಕರ್ಣನು ಹೇಳಿದನು: “ಫಲ್ಗುನ! ಸರ್ವೇ ಸಾಮಾನ್ಯವಾದ ಈ ರಂಗವು ನಿನ್ನದೇನು? ಬಲಶಾಲಿ ಮತ್ತು ವೀರ್ಯಶ್ರೇಷ್ಠ ರಾಜರನ್ನು ಧರ್ಮವು ಅನುಸರಿಸುತ್ತದೆ.

01126020a ಕಿಂ ಕ್ಷೇಪೈರ್ದುರ್ಬಲಾಶ್ವಾಸೈಃ ಶರೈಃ ಕಥಯ ಭಾರತ|

01126020c ಗುರೋಃ ಸಮಕ್ಷಂ ಯಾವತ್ತೇ ಹರಾನ್ಯದ್ಯ ಶಿರಃ ಶರೈಃ||

ಭಾರತ! ದುರ್ಬಲರ ಶ್ವಾಸವೆನ್ನಿಸಿಕೊಂಡ ಅವಹೇಳನೆ ಏಕೆ? ಗುರುವಿನ ಸಮಕ್ಷಮದಲ್ಲಿಯೇ ಶರಗಳಿಂದ ನಿನ್ನ ಶಿರವನ್ನು ಅಪಹರಿಸುತ್ತೇನೆ.””

01126021 ವೈಶಂಪಾಯನ ಉವಾಚ|

01126021a ತತೋ ದ್ರೋಣಾಭ್ಯನುಜ್ಞಾತಃ ಪಾರ್ಥಃ ಪರಪುರಂಜಯಃ|

01126021c ಭ್ರಾತೃಭಿಸ್ತ್ವರಯಾಶ್ಲಿಷ್ಟೋ ರಣಾಯೋಪಜಗಾಮ ತಂ||

ವೈಶಂಪಾಯನನು ಹೇಳಿದನು: “ಆಗ ದ್ರೋಣನು ಅನುಜ್ಞೆಯನ್ನು ನೀಡಲಾಗಿ ಪರಪುರಂಜಯ ಪಾರ್ಥನು ಭ್ರಾತೃಗಳನ್ನು ಆಲಂಗಿಸಿ ರಣದಲ್ಲಿ ನುಗ್ಗಿದನು.

01126022a ತತೋ ದುರ್ಯೋಧನೇನಾಪಿ ಸಭ್ರಾತ್ರಾ ಸಮರೋದ್ಯತಃ|

01126022c ಪರಿಷ್ವಕ್ತಃ ಸ್ಥಿತಃ ಕರ್ಣಃ ಪ್ರಗೃಹ್ಯ ಸಶರಂ ಧನುಃ||

ಭ್ರಾತೃಗಳೊಡನಿದ್ದ ದುರ್ಯೋಧನನಿಂದ ತಬ್ಬಿಕೊಳ್ಳಲ್ಪಟ್ಟ ಕರ್ಣನು ಧನುರ್ಬಾಣಗಳನ್ನು ಹಿಡಿದು ಸಮರ ಸಿದ್ಧನಾದನು.

01126023a ತತಃ ಸವಿದ್ಯುತ್ಸ್ತನಿತೈಃ ಸೇಂದ್ರಾಯುಧಪುರೋಜವೈಃ|

01126023c ಆವೃತಂ ಗಗನಂ ಮೇಘೈರ್ಬಲಾಕಾಪಂಕ್ತಿಹಾಸಿಭಿಃ||

ಆಗ ಗಗನವು ಗುಡುಗು ಮಿಂಚುಗಳಿಂದೊಡಗೂಡಿದ ಬಲಾಕ ಮತ್ತು ಹಂಸ ಪಕ್ಷಿಗಳ ಸಾಲಿನಿಂದೊಡಗೂಡಿದ ಮೇಘಗಳಿಂದ ಆವೃತಗೊಂಡಿತು.

01126024a ತತಃ ಸ್ನೇಹಾದ್ಧರಿಹಯಂ ದೃಷ್ಟ್ವಾ ರಂಗಾವಲೋಕಿನಂ|

01126024c ಭಾಸ್ಕರೋಽಪ್ಯನಯನ್ನಾಶಂ ಸಮೀಪೋಪಗತಾನ್ಘನಾನ್||

ಸ್ನೇಹಭಾವದಿಂದ ರಂಗವನ್ನು ಅವಲೋಕಿಸುತ್ತಿರುವ ಹರಿಹಯನನ್ನು ನೋಡಿದ ಭಾಸ್ಕರನು ಸಮೀಪದಲ್ಲಿ ಬರುತ್ತಿರುವ ಮೋಡಗಳನ್ನು ನಾಶಪಡಿಸಿದನು.

01126025a ಮೇಘಚ್ಛಾಯೋಪಗೂದಸ್ತು ತತೋಽದೃಶ್ಯತ ಪಾಂಡವಃ|

01126025c ಸೂರ್ಯಾತಪಪರಿಕ್ಷಿಪ್ತಃ ಕರ್ಣೋಽಪಿ ಸಮದೃಶ್ಯತ||

ಪಾಂಡವನು ಮೇಘಗಳಿಂದ ಮುಸುಕಲ್ಪಟ್ಟಿದ್ದಾನೋ ಎಂದು ಕಂಡನು. ಕರ್ಣನು ಸೂರ್ಯನ ಕಡುಬೆಳಕಿನಿಂದ ಆವರಿಸಿಕೊಂಡಿದ್ದಾನೋ ಎಂದು ತೋರಿದನು.

01126026a ಧಾರ್ತರಾಷ್ಟ್ರಾ ಯತಃ ಕರ್ಣಸ್ತಸ್ಮಿನ್ದೇಶೇ ವ್ಯವಸ್ಥಿತಾಃ|

01126026c ಭಾರದ್ವಾಜಃ ಕೃಪೋ ಭೀಷ್ಮೋ ಯತಃ ಪಾರ್ಥಸ್ತತೋಽಭವನ್||

ಕರ್ಣನಿದ್ದ ಸ್ಥಳದಲ್ಲಿ ಧಾರ್ತರಾಷ್ಟ್ರರು ನಿಂತಿದ್ದರು. ಭಾರದ್ವಾಜ, ಕೃಪ ಮತ್ತು ಭೀಷ್ಮರು ಪಾರ್ಥನಿದ್ದಲ್ಲಿ ನಿಂತಿದ್ದರು.

01126027a ದ್ವಿಧಾ ರಂಗಃ ಸಮಭವತ್ಸ್ತ್ರೀಣಾಂ ದ್ವೈಧಮಜಾಯತ|

01126027c ಕುಂತಿಭೋಜಸುತಾ ಮೋಹಂ ವಿಜ್ಞಾತಾರ್ಥಾ ಜಗಾಮ ಹ||

ರಂಗವು ಎರಡು ಭಾಗವಾಯಿತು; ಸ್ತ್ರೀಯರಲ್ಲಿ ಎರಡು ಪಂಗಡಗಳಾದವು. ಇದರ ಅರ್ಥವನ್ನು ಸರಿಯಾಗಿ ತಿಳಿದುಕೊಂಡಿದ್ದ ಕುಂತಿಭೋಜಸುತೆಯು ಮೂರ್ಛಿತಳಾದಳು.

01126028a ತಾಂ ತಥಾ ಮೋಹಸಂಪನ್ನಾಂ ವಿದುರಃ ಸರ್ವಧರ್ಮವಿತ್|

01126028c ಕುಂತೀಮಾಶ್ವಾಸಯಾಮಾಸ ಪ್ರೋಕ್ಷ್ಯಾದ್ಭಿಶ್ಚಂದನೋಕ್ಷಿತೈಃ||

ಸರ್ವಧರ್ಮವಿದ ವಿದುರನು ಚಂದನಮಿಶ್ರಿತ ನೀರನ್ನು ಚುಮುಕಿಸಿ ಮೋಹಸಂಪನ್ನ ಕುಂತಿಯನ್ನು ಎಚ್ಚರಿಸಿದನು.

01126029a ತತಃ ಪ್ರತ್ಯಾಗತಪ್ರಾಣಾ ತಾವುಭಾವಪಿ ದಂಶಿತೌ|

01126029c ಪುತ್ರೌ ದೃಷ್ಟ್ವಾ ಸುಸಂತಪ್ತಾ ನಾನ್ವಪದ್ಯತ ಕಿಂ ಚನ||

ಎಚ್ಚೆತ್ತ ಅವಳು ವೈರಿಗಳಾಗಿ ನಿಂತಿದ್ದ ತನ್ನ ಎರಡು ಪುತ್ರರನ್ನೇ ದಿಟ್ಟಾಗಿ ನೋಡುತ್ತಿದ್ದಳೇ ಹೊರತು ಎಷ್ಟೇ ದುಃಖವಾದರೂ ಅವರನ್ನು ತಡೆಯಲೋಸುಗ ಏನನ್ನೂ ಮಾಡಲಿಲ್ಲ.

01126030a ತಾವುದ್ಯತಮಹಾಚಾಪೌ ಕೃಪಃ ಶಾರದ್ವತೋಽಬ್ರವೀತ್|

01126030c ದ್ವಂದ್ವಯುದ್ಧಸಮಾಚಾರೇ ಕುಶಲಃ ಸರ್ವಧರ್ಮವಿತ್||

ಅವರೀರ್ವರೂ ಮಹಾ ಧನುಸ್ಸುಗಳನ್ನು ಮೇಲೆತ್ತುತ್ತಿರುವಾಗ ದ್ವಂದ್ವಯುದ್ಧ ಕುಶಲ ಸರ್ವಧರ್ಮವಿದ ಶಾರದ್ವತ ಕೃಪನು ಹೇಳಿದನು:

01126031a ಅಯಂ ಪೃಥಾಯಾಸ್ತನಯಃ ಕನೀಯಾನ್ಪಾಂಡುನಂದನಃ|

01126031c ಕೌರವೋ ಭವತಾ ಸಾರ್ಧಂ ದ್ವಂದ್ವಯುದ್ಧಂ ಕರಿಷ್ಯತಿ||

“ನಿನ್ನೊಡನೆ ದ್ವಂದ್ವಯುದ್ಧವನ್ನು ಮಾಡುವ ಇವನು ಪೃಥೆಯ ತನಯ, ಕಿರಿಯ ಪಾಂಡುನಂದನ ಕೌರವ.

01126032a ತ್ವಮಪ್ಯೇವಂ ಮಹಾಬಾಹೋ ಮಾತರಂ ಪಿತರಂ ಕುಲಂ|

01126032c ಕಥಯಸ್ವ ನರೇಂದ್ರಾಣಾಂ ಯೇಷಾಂ ತ್ವಂ ಕುಲವರ್ಧನಃ|

01126032e ತತೋ ವಿದಿತ್ವಾ ಪಾರ್ಥಸ್ತ್ವಾಂ ಪ್ರತಿಯೋತ್ಸ್ಯತಿ ವಾ ನ ವಾ||

ಮಹಾಬಾಹೋ! ಈಗ ನೀನು ಕೂಡ ನಿನ್ನ ತಾಯಿ, ತಂದೆ, ಕುಲ, ಮತ್ತು ನೀನು ಯಾವ ನರೇಂದ್ರಕುಲದ ವರ್ಧನ ಎನ್ನುವುದನ್ನು ಹೇಳಬೇಕು. ಅದನ್ನು ತಿಳಿದ ಪಾರ್ಥನು ನಿನ್ನೊಡನೆ ಯುದ್ಧಮಾಡಬಹುದು ಅಥವಾ ಮಾಡದಿರಬಹುದು.”

01126033a ಏವಮುಕ್ತಸ್ಯ ಕರ್ಣಸ್ಯ ವ್ರೀಡಾವನತಮಾನನಂ|

01126033c ಬಭೌ ವರ್ಷಾಂಬುಭಿಃ ಕ್ಲಿನ್ನಂ ಪದ್ಮಮಾಗಲಿತಂ ಯಥಾ||

ಹೀಗೆ ಕೇಳಿದ ಕರ್ಣನು ನಾಚಿಕೊಂಡು ತನ್ನ ತಲೆ ತಗ್ಗಿಸಿದನು ಮತ್ತು ಅವನ ಮುಖವು ಮಳೆನೀರಿನಿಂದ ತೋಯ್ದ ಕಮಲದಂತೆ ಬಾಡಿತು.

01126034 ದುರ್ಯೋಧನ ಉವಾಚ|

01126034a ಆಚಾರ್ಯ ತ್ರಿವಿಧಾ ಯೋನೀ ರಾಜ್ಞಾಂ ಶಾಸ್ತ್ರವಿನಿಶ್ಚಯೇ|

01126034c ತತ್ಕುಲೀನಶ್ಚ ಶೂರಶ್ಚ ಸೇನಾಂ ಯಶ್ಚ ಪ್ರಕರ್ಷತಿ||

ದುರ್ಯೋಧನನು ಹೇಳಿದನು: “ಆಚಾರ್ಯ! ಮೂರು ರೀತಿಯಲ್ಲಿ ರಾಜನಾಗಬಹುದು ಎಂದು ಶಾಸ್ತ್ರವಿನಿಶ್ಚಯವಿದೆ: ರಾಜನಾಗಿ ಹುಟ್ಟುವುದರಿಂದ, ಶೂರನಾಗಿರುವುದರಿಂದ ಮತ್ತು ಸೇನೆಯನ್ನು ನಡೆಸುವುದರಿಂದ.

01126035a ಯದ್ಯಯಂ ಫಲ್ಗುನೋ ಯುದ್ಧೇ ನಾರಾಜ್ಞಾ ಯೋದ್ಧುಮಿಚ್ಛತಿ|

01126035c ತಸ್ಮಾದೇಷೋಽಂಗವಿಷಯೇ ಮಯಾ ರಾಜ್ಯೇಽಭಿಷಿಚ್ಯತೇ||

ಫಲ್ಗುಣನು ರಾಜನಲ್ಲದವನೊಡನೆ ಯುದ್ಧಮಾಡಲು ಬಯಸದಿದ್ದರೆ ನಾನು ಇವನನ್ನು ಅಂಗದೇಶದ ರಾಜನನ್ನಾಗಿ ರಾಜ್ಯಾಭಿಷೇಕವನ್ನು ಮಾಡುತ್ತೇನೆ.””

01126036 ವೈಶಂಪಾಯನ ಉವಾಚ|

01126036a ತತಸ್ತಸ್ಮಿನ್ ಕ್ಷಣೇ ಕರ್ಣಃ ಸಲಾಜಕುಸುಮೈರ್ಘಟೈಃ|

01126036c ಕಾಂಚನೈಃ ಕಾಂಚನೇ ಪೀತೇ ಮಂತ್ರವಿದ್ಭಿರ್ಮಹಾರಥಃ|

01126036e ಅಭಿಷಿಕ್ತೋಽಂಗರಾಜ್ಯೇ ಸ ಶ್ರಿಯಾ ಯುಕ್ತೋ ಮಹಾಬಲಃ||

ವೈಶಂಪಾಯನನು ಹೇಳಿದನು: “ಅದೇ ಕ್ಷಣದಲ್ಲಿ ಲಾಜಕುಸುಮ ಘಟ ಮತ್ತು ಕಾಂಚನಗಳಿಂದ ಕಾಂಚನ ಪೀಠದಲ್ಲಿ ಮಂತ್ರವಿತ್ತಾಗಿ ಮಹಾಬಲಿ, ಮಹಾರಥಿ ಕರ್ಣನು ಅಂಗರಾಜನೆಂದು ಅಭಿಷಿಕ್ತನಾದನು ಮತ್ತು ಸಂಪತ್ತನ್ನು ಪಡೆದನು.

01126037a ಸಚ್ಛತ್ರವಾಲವ್ಯಜನೋ ಜಯಶಬ್ಧಾಂತರೇಣ ಚ|

01126037c ಉವಾಚ ಕೌರವಂ ರಾಜಾ ರಾಜಾನಂ ತಂ ವೃಷಸ್ತದಾ||

ಛತ್ರ ಚಾಮರಗಳನ್ನು ಪಡೆದ ಆ ರಾಜ ವೃಷನು ವಿಜಯ ಶಬ್ಧಘೋಷಗಳು ನಿಲ್ಲುತ್ತಿದ್ದಂತೆಯೇ ರಾಜರ್ಷಭ ಕೌರವನಿಗೆ ಹೇಳಿದನು:

01126038a ಅಸ್ಯ ರಾಜ್ಯಪ್ರದಾನಸ್ಯ ಸದೃಶಂ ಕಿಂ ದದಾನಿ ತೇ|

01126038c ಪ್ರಬ್ರೂಹಿ ರಾಜಶಾರ್ದೂಲ ಕರ್ತಾ ಹ್ಯಸ್ಮಿ ತಥಾ ನೃಪ|

01126038e ಅತ್ಯಂತಂ ಸಖ್ಯಮಿಚ್ಛಾಮೀತ್ಯಾಹ ತಂ ಸ ಸುಯೋಧನಃ||

“ರಾಜಶಾರ್ದೂಲ! ಈ ರಾಜ್ಯದ ಉಡುಗೊರೆಯ ಸದೃಶವಾದ ಎನನ್ನು ನಿನಗೆ ಕೊಡಲಿ ಹೇಳು! ನೃಪ! ಅದನ್ನು ನಾನು ಮಾಡಿಕೊಡುತ್ತೇನೆ.” ಅದಕ್ಕೆ ಸುಯೋಧನನು “ಅತ್ಯಂತ ಸಖ್ಯವನ್ನು ಬಯಸುತ್ತೇನೆ” ಎಂದು ಉತ್ತರಿಸಿದನು.

01126039a ಏವಮುಕ್ತಸ್ತತಃ ಕರ್ಣಸ್ತಥೇತಿ ಪ್ರತ್ಯಭಾಷತ|

01126039c ಹರ್ಷಾಚ್ಶೋಭೌ ಸಮಾಶ್ಲಿಷ್ಯ ಪರಾಂ ಮುದಮವಾಪತುಃ||

ಅವನ ಈ ಮಾತುಗಳಿಗೆ ಕರ್ಣನು “ಹಾಗೆಯೇ ಆಗಲಿ” ಎಂದು ಉತ್ತರಿಸಿದನು. ಹರ್ಷದಿಂದ ಇಬ್ಬರೂ ಅಪ್ಪಿಕೊಂಡು ಅತ್ಯಂತ ಆನಂದಿತರಾದರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ಕರ್ಣಾಭಿಷೇಕೇ ಷಡ್ವಿಂಶತ್ಯಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ಕರ್ಣಾಭಿಷೇಕ ಎನ್ನುವ ನೂರಾ ಇಪ್ಪತ್ತಾರನೆಯ ಅಧ್ಯಾಯವು.

Related image

Comments are closed.