Adi Parva: Chapter 125

ಆದಿ ಪರ್ವ: ಜತುಗೃಹ ಪರ್ವ

೧೨೫

ಅರ್ಜುನನ ಪ್ರತಿಭಾ ಪ್ರದರ್ಶನ (೧-೩೨).

01125001 ವೈಶಂಪಾಯನ ಉವಾಚ|

01125001a ಕುರುರಾಜೇ ಚ ರಂಗಸ್ಥೇ ಭೀಮೇ ಚ ಬಲಿನಾಂ ವರೇ|

01125001c ಪಕ್ಷಪಾತಕೃತಸ್ನೇಹಃ ಸ ದ್ವಿಧೇವಾಭವಜ್ಜನಃ||

ವೈಶಂಪಾಯನನು ಹೇಳಿದನು: “ರಂಗಸ್ಥ ಕುರುರಾಜ ಮತ್ತು ಬಲಿಗಳಲ್ಲಿಯೇ ಶ್ರೇಷ್ಠ ಭೀಮನನ್ನು ನೋಡಿದ ಜನರಲ್ಲಿ ತಮಗಿಷ್ಟವಿದ್ದವರ ಮೇಲೆ ಪಕ್ಷಪಾತ ಮಾಡುವ ಎರಡು ಪಂಗಡಗಳಾಯಿತು.

01125002a ಹಾ ವೀರ ಕುರುರಾಜೇತಿ ಹಾ ಭೀಮೇತಿ ಚ ನರ್ದತಾಂ|

01125002c ಪುರುಷಾಣಾಂ ಸುವಿಪುಲಾಃ ಪ್ರಣಾದಾಃ ಸಹಸೋತ್ಥಿತಾಃ||

“ಹಾ ವೀರ ಕುರುರಾಜ! ಹಾ ಭೀಮ!” ಎಂದು ಕೂಗುತ್ತಿರುವ ಜನರ ಕೂಗು ತಕ್ಷಣವೇ ಮೊಳಗಿಬಂದಿತು.

01125003a ತತಃ ಕ್ಷುಬ್ಧಾರ್ಣವನಿಭಂ ರಂಗಮಾಲೋಕ್ಯ ಬುದ್ಧಿಮಾನ್|

01125003c ಭಾರದ್ವಾಜಃ ಪ್ರಿಯಂ ಪುತ್ರಮಶ್ವತ್ಥಾಮಾನಮಬ್ರವೀತ್||

ಈ ರೀತಿ ಕ್ಷುಬ್ಧ ಸಾಗರದಂತೆ ತೋರುತ್ತಿದ್ದ ರಂಗವನ್ನು ನೋಡಿದ ಬುದ್ಧಿವಂತ ಭಾರದ್ವಾಜನು ತನ್ನ ಪ್ರಿಯ ಪುತ್ರ ಅಶ್ವತ್ಥಾಮನಿಗೆ ಹೇಳಿದನು:

01125004a ವಾರಯೈತೌ ಮಹಾವೀರ್ಯೌ ಕೃತಯೋಗ್ಯಾವುಭಾವಪಿ|

01125004c ಮಾ ಭೂದ್ರಂಗಪ್ರಕೋಪೋಽಯಂ ಭೀಮದುರ್ಯೋಧನೋದ್ಭವಃ||

“ಚೆನ್ನಾಗಿಯೇ ತರಬೇತಿಯನ್ನು ಹೊಂದಿದ ಈ ಮಹಾವೀರರಿಬ್ಬರನ್ನೂ ನಿಲ್ಲಿಸು. ಇಲ್ಲವಾದರೆ ಭೀಮ-ದುರ್ಯೋಧನರನ್ನು ಕುರಿತು ರಂಗದಲ್ಲಿ ದಂಗೆಯುಂಟಾಗಬಹುದು.”

01125005a ತತಸ್ತಾವುದ್ಯತಗದೌ ಗುರುಪುತ್ರೇಣ ವಾರಿತೌ|

01125005c ಯುಗಾಂತಾನಿಲಸಂಕ್ಷುಬ್ಧೌ ಮಹಾವೇಗಾವಿವಾರ್ಣವೌ||

ಆಗ ಯುಗಾಂತಕಾಲದ ಭಿರುಗಾಳಿಯಿಂದ ಮಹಾ ಕ್ಷೋಭಣೆಗೊಳಗಾದ ಎರಡು ಸಮುದ್ರಗಳಂತೆ ಪರಸ್ಪರರನ್ನು ಎದುರಿಸಿ ನಿಂತಿರುವ ಅವರೀರ್ವರನ್ನು ಗುರುಪುತ್ರನು ತಡೆದನು. 

01125006a ತತೋ ರಂಗಾಂಗಣಗತೋ ದ್ರೋಣೋ ವಚನಮಬ್ರವೀತ್|

01125006c ನಿವಾರ್ಯ ವಾದಿತ್ರಗಣಂ ಮಹಾಮೇಘನಿಭಸ್ವನಂ||

ರಂಗಾಂಗಣದಲ್ಲಿ ಇಳಿದು ದ್ರೋಣನು ಮಹಾಮೇಘನಿಭಸ್ವನವನ್ನುಂಟುಮಾಡುತ್ತಿದ್ದ ವಾದ್ಯವೃಂದವನ್ನು ನಿಲ್ಲಿಸಿ ಹೇಳಿದನು:

01125007a ಯೋ ಮೇ ಪುತ್ರಾತ್ಪ್ರಿಯತರಃ ಸರ್ವಾಸ್ತ್ರವಿದುಷಾಂ ವರಃ|

01125007c ಐಂದ್ರಿರಿಂದ್ರಾನುಜಸಮಃ ಸ ಪಾರ್ಥೋ ದೃಶ್ಯತಾಮಿತಿ||

“ಈಗ ಸರ್ವಾಸ್ತ್ರವಿದುಷರಲ್ಲಿಯೇ ಶ್ರೇಷ್ಠ ಇಂದ್ರಾನುಜಸಮ, ನನಗೆ ನನ್ನ ಪುತ್ರನಿಗಿಂತಲೂ ಪ್ರಿಯಕರನಾದ ಐಂದ್ರಿ ಪಾರ್ಥನನ್ನು ನೋಡಿ!”

01125008a ಆಚಾರ್ಯವಚನೇನಾಥ ಕೃತಸ್ವಸ್ತ್ಯಯನೋ ಯುವಾ|

01125008c ಬದ್ಧಗೋಧಾಂಗುಲಿತ್ರಾಣಃ ಪೂರ್ಣತೂಣಃ ಸಕಾರ್ಮುಕಃ||

01125009a ಕಾಂಚನಂ ಕವಚಂ ಬಿಭ್ರತ್ಪ್ರತ್ಯದೃಶ್ಯತ ಫಲ್ಗುನಃ|

01125009c ಸಾರ್ಕಃ ಸೇಂದ್ರಾಯುಧತಡಿತ್ಸಸಂಧ್ಯ ಇವ ತೋಯದಃ||

ಆಚಾರ್ಯನ ವಚನಗಳಿಂದ ಬರಮಾಡಿಕೊಂಡ ಆ ಯುವಕ ಫಲ್ಗುನನು ಗೋಧಾಂಗುಲಿತ್ರಾಣಗಳನ್ನು ಕಟ್ಟಿಕೊಂಡು, ಪೂರ್ಣ ತೂರ್ಣನಾಗಿ ಹೊಳೆಯುತ್ತಿರುವ ಕಾಂಚನದ ಕವಚವನ್ನು ಧರಿಸಿ, ಮಳೆಯನ್ನು ತರುವ ಮಿಂಚುಗಳಿಂದೊಡಗೂಡಿದ ಮೋಡದೊಂದಿಗೆ ಬೆಳಗುತ್ತಿರುವ ಬಂಗಾರದ ಬಣ್ಣದ ಸೂರ್ಯನಂತೆ ತೋರುತ್ತಾ ಪ್ರವೇಶಿಸಿದನು. 

01125010a ತತಃ ಸರ್ವಸ್ಯ ರಂಗಸ್ಯ ಸಮುತ್ಪಿಂಜೋಽಭವನ್ಮಹಾನ್|

01125010c ಪ್ರಾವಾದ್ಯಂತ ಚ ವಾದ್ಯಾನಿ ಸಶಂಖಾನಿ ಸಮಂತತಃ||

ಆಗ ರಂಗದಲ್ಲಿ ಎಲ್ಲೆಡೆಯಲ್ಲಿಯೂ ಮಹಾ ಗದ್ದಲವಾಯಿತು ಮತ್ತು ಶಂಖಗಳೊಂದಿಗೆ ವಾದ್ಯಗಳು ಎಲ್ಲೆಡೆಯೂ ಮೊಳಗತೊಡಗಿದವು.

01125011a ಏಷ ಕುಂತೀಸುತಃ ಶ್ರೀಮಾನೇಷ ಪಾಂಡವಮಧ್ಯಮಃ|

01125011c ಏಷ ಪುತ್ರೋ ಮಹೇಂದ್ರಸ್ಯ ಕುರೂಣಾಮೇಷ ರಕ್ಷಿತಾ||

“ಇವನೇ ಕುಂತೀಸುತ! ಇವನೇ ಶ್ರೀಮಾನ್ ಪಾಂಡುವಿನ ಮಧ್ಯಮ! ಇವನೇ ಕುರುಗಳನ್ನು ರಕ್ಷಿಸುವವವನು! ಮಹೇಂದ್ರನ ಪುತ್ರ!

01125012a ಏಷೋಽಸ್ತ್ರವಿದುಷಾಂ ಶ್ರೇಷ್ಠ ಏಷ ಧರ್ಮಭೃತಾಂ ವರಃ|

01125012c ಏಷ ಶೀಲವತಾಂ ಚಾಪಿ ಶೀಲಜ್ಞಾನನಿಧಿಃ ಪರಃ||

ಇವನೇ ಅಸ್ತ್ರವಿದುಷರಲ್ಲಿ ಶ್ರೇಷ್ಠನಾದವನು! ಇವನೇ ಧರ್ಮಭೃತರಲ್ಲಿ ಶ್ರೇಷ್ಠನಾದವನು! ಇವನು ಶೀಲವಂತನೂ, ಶೀಲಜ್ಞಾನನಿಧಿಯೂ, ಶ್ರೇಷ್ಠನೂ ಆಗಿದ್ದಾನೆ.”

01125013a ಇತ್ಯೇವಮತುಲಾ ವಾಚಃ ಶೃಣ್ವಂತ್ಯಾಃ ಪ್ರೇಕ್ಷಕೇರಿತಾಃ|

01125013c ಕುಂತ್ಯಾಃ ಪ್ರಸ್ನವಸಮ್ಮಿಶ್ರೈರಸ್ರೈಃ ಕ್ಲಿನ್ನಮುರೋಽಭವತ್||

ಪ್ರೇಕ್ಷಕರಿಂದ ಈ ರೀತಿ ಅತುಲ ಮಾತುಗಳು ಕೇಳಿಬರುತ್ತಿರುವಾಗ ಕುಂತಿಯ ಸ್ತನಗಳು ಕಣ್ಣೀರು ಮತ್ತು ಹಾಲು ಇವೆರಡರ ಮಿಶ್ರಣದಿಂದ ತೋಯ್ದವು.

01125014a ತೇನ ಶಬ್ಧೇನ ಮಹತಾ ಪೂರ್ಣಶ್ರುತಿರಥಾಬ್ರವೀತ್|

01125014c ಧೃತರಾಷ್ಟ್ರೋ ನರಶ್ರೇಷ್ಠೋ ವಿದುರಂ ಹೃಷ್ಟಮಾನಸಃ||

ಈ ಮಾತುಗಳು ಅವನ ಕಿವಿಗಳನ್ನು ತುಂಬಲಾಗಿ ಹೃಷ್ಟಮನಸ್ಕ ನರಶ್ರೇಷ್ಠ ಧೃತರಾಷ್ಟ್ರನು ವಿದುರನಲ್ಲಿ ಕೇಳಿದನು:

01125015a ಕ್ಷತ್ತಃ ಕ್ಷುಬ್ಧಾರ್ಣವನಿಭಃ ಕಿಮೇಷ ಸುಮಹಾಸ್ವನಃ|

01125015c ಸಹಸೈವೋತ್ಥಿತೋ ರಂಗೇ ಭಿಂದನ್ನಿವ ನಭಸ್ತಲಂ||

“ಕ್ಷತ್ತ! ಕ್ಷುಬ್ಧ ಸಾಗರದಂತೆ, ನಭಸ್ತಲವನ್ನೇ ಸೀಳುವಂತೆ ರಂಗದಿಂದ ಕೇಳಿಬರುತ್ತಿರುವ ಆ ಸುಮಹಾಸ್ವನವೇನು?”

01125016 ವಿದುರ ಉವಾಚ|

01125016a ಏಷ ಪಾರ್ಥೋ ಮಹಾರಾಜ ಫಲ್ಗುನಃ ಪಾಂಡುನಂದನಃ|

01125016c ಅವತೀರ್ಣಃ ಸಕವಚಸ್ತತ್ರೈಷ ಸುಮಹಾಸ್ವನಃ||

ವಿದುರನು ಹೇಳಿದನು: “ಮಹಾರಾಜ! ಪಾಂಡುನಂದನ ಪಲ್ಗುನ ಪಾರ್ಥನು ಕವಚವನ್ನು ಧರಿಸಿ ರಂಗಕ್ಕಿಳಿದಿದ್ದಾನೆ. ಅದರ ಕುರಿತಾಗಿ ಈ ಸುಮಹಾಸ್ವನವು ಕೇಳಿ ಬರುತ್ತಿದೆ.”

01125017 ಧೃತರಾಷ್ಟ್ರ ಉವಾಚ|

01125017a ಧನ್ಯೋಽಸ್ಮ್ಯನುಗೃಹೀತೋಽಸ್ಮಿ ರಕ್ಷಿತೋಽಸ್ಮಿ ಮಹಾಮತೇ|

01125017c ಪೃಥಾರಣಿಸಮುದ್ಭೂತೈಸ್ತ್ರಿಭಿಃ ಪಾಂಡವವಹ್ನಿಭಿಃ||

ಧೃತರಾಷ್ಟ್ರನು ಹೇಳಿದನು: “ಮಹಾಮತೇ! ಪೃಥಳಂಥಹ ಅರಣಿಯಿಂದ ಪಾಂಡವನಂಥಹ ವಹ್ನಿಯಲ್ಲಿ ಉದ್ಭವವಾದ ಈ ಮೂವರಿಂದ ನಾನು ಧನ್ಯನಾಗಿದ್ದೇನೆ! ನಾನು ಅನುಗೃಹೀತನಾಗಿದ್ದೇನೆ! ರಕ್ಷಿತನಾಗಿದ್ದೇನೆ!””

01125018 ವೈಶಂಪಾಯನ ಉವಾಚ|

01125018a ತಸ್ಮಿನ್ಸಮುದಿತೇ ರಂಗೇ ಕಥಂ ಚಿತ್ಪರ್ಯವಸ್ಥಿತೇ|

01125018c ದರ್ಶಯಾಮಾಸ ಬೀಭತ್ಸುರಾಚಾರ್ಯಾದಸ್ತ್ರಲಾಘವಂ||

ವೈಶಂಪಾಯನನು ಹೇಳಿದನು: “ಉಲ್ಭಣಗೊಂಡ ಆ ರಂಗವು ಹೇಗೋ ಶಾಂತವಾಗುತ್ತಿದ್ದಂತೆಯೇ ಬೀಭತ್ಸುವು ಆಚಾರ್ಯನಿಂದ ಕಲಿತ ತನ್ನ ಅಸ್ತ್ರ ಕುಶಲತೆಯನ್ನು ತೋರಿಸತೊಡಗಿದನು.

01125019a ಆಗ್ನೇಯೇನಾಸೃಜದ್ವಹ್ನಿಂ ವಾರುಣೇನಾಸೃಜತ್ಪಯಃ|

01125019c ವಾಯವ್ಯೇನಾಸೃಜದ್ವಾಯುಂ ಪಾರ್ಜನ್ಯೇನಾಸೃಜದ್ಘನಾನ್||

01125020a ಭೌಮೇನ ಪ್ರಾವಿಶದ್ಭೂಮಿಂ ಪಾರ್ವತೇನಾಸೃಜದ್ಗಿರೀನ್|

01125020c ಅಂತರ್ಧಾನೇನ ಚಾಸ್ತ್ರೇಣ ಪುನರಂತರ್ಹಿತೋಽಭವತ್||

ಅಗ್ನೇಯದಿಂದ ವಹ್ನಿಯನ್ನು ಸೃಷ್ಟಿದನು. ವಾರುಣದಿಂದ ನೀರನ್ನು ಸೃಷ್ಟಿಸಿದನು. ವಾಯುವ್ಯದಿಂದ ವಾಯುವನ್ನು ಸೃಷ್ಟಿಸಿದನು. ಪರ್ಜನ್ಯದಿಂದ ಮೋಡಗಳನ್ನು ಸೃಷ್ಟಿಸಿದನು. ಭೌಮದಿಂದ ಭೂಮಿಯನ್ನು ಪ್ರವೇಶಿಸಿದನು. ಪರ್ವತದಿಂದ ಗಿರಿಗಳನ್ನು ಸೃಷ್ಟಿಸಿದನು. ಅಂತರ್ಧಾನಾಸ್ತ್ರದಿಂದ ಅವೆಲ್ಲವನ್ನೂ ಅಂತರ್ಧಾನಗೊಳಿಸಿದನು.

01125021a ಕ್ಷಣಾತ್ಪ್ರಾಂಶುಃ ಕ್ಷಣಾದ್ಧ್ರಸ್ವಃ ಕ್ಷಣಾಚ್ಚ ರಥಧೂರ್ಗತಃ|

01125021c ಕ್ಷಣೇನ ರಥಮಧ್ಯಸ್ಥಃ ಕ್ಷಣೇನಾವಾಪತನ್ಮಹೀಂ||

ಒಂದು ಕ್ಷಣದಲ್ಲಿ ಎತ್ತರವಾಗಿ ನಿಂತನು. ಇನ್ನೊಂದು ಕ್ಷಣದಲ್ಲಿ ಸಣ್ಣವನಾಗಿ ಕಂಡನು. ಒಂದು ಕ್ಷಣ ರಥದ ಮುಂದೆ ಕಾಣಿಸಿಕೊಂಡರೆ ಮತ್ತೊಂದು ಕ್ಷಣದಲ್ಲಿ ರಥದ ಮಧ್ಯದಲ್ಲಿ ಕುಳಿತಿದ್ದನು ಮತ್ತು ಇನ್ನೊಂದು ಕ್ಷಣದಲ್ಲಿ ನೆಲದ ಮೇಲೆ ಹಾರಿ ನಿಂತಿದ್ದನು.

01125022a ಸುಕುಮಾರಂ ಚ ಸೂಕ್ಷ್ಮಂ ಚ ಗುರುಂ ಚಾಪಿ ಗುರುಪ್ರಿಯಃ|

01125022c ಸೌಷ್ಠವೇನಾಭಿಸಂಯುಕ್ತಃ ಸೋಽವಿಧ್ಯದ್ವಿವಿಧೈಃ ಶರೈಃ||

ಆ ಗುರುಪ್ರಿಯ ಸುಕುಮಾರನು ವಿವಿಧ ಶರಗಳಿಂದ ಸೂಕ್ಷ್ಮ ಮತ್ತು ದೊಡ್ಡ ಗುರಿಗಳನ್ನು ಅತ್ಯಂತ ಕೌಶಲ್ಯದಿಂದ ಹೊಡೆದನು.

01125023a ಭ್ರಮತಶ್ಚ ವರಾಹಸ್ಯ ಲೋಹಸ್ಯ ಪ್ರಮುಖೇ ಸಮಂ|

01125023c ಪಂಚ ಬಾಣಾನಸಂಸಕ್ತಾನ್ಸ ಮುಮೋಚೈಕಬಾಣವತ್||

ಲೋಹದ ಒಂದು ವರಾಹವನ್ನು ಎದುರಿಗೆ ತಂದಾಗ ಅದರ ಬಾಯಿಯಲ್ಲಿ ಐದು ಬಾಣಗಳನ್ನು ಒಂದೇ ಬಾಣವನ್ನೇ ಬಿಟ್ಟಿದ್ದಾನೋ ಎಂದು ಭ್ರಮಿಸುವ ಹಾಗೆ ಅತಿವೇಗದಲ್ಲಿ ಬಿಟ್ಟು ತುಂಬಿಸಿದನು.

01125024a ಗವ್ಯೇ ವಿಷಾಣಕೋಶೇ ಚ ಚಲೇ ರಜ್ಜ್ವವಲಂಬಿತೇ|

01125024c ನಿಚಖಾನ ಮಹಾವೀರ್ಯಃ ಸಾಯಕಾನೇಕವಿಂಶತಿಂ||

ಒಂದು ಹಗ್ಗದಿಂದ ನೇತಾಡುತ್ತಿರುವ ಗೋವಿನ ಕೊಂಬಿನೊಳಗೆ ಇಪ್ಪತ್ತೊಂದು ಬಾಣಗಳನ್ನು ತುಂಬಿಸಿದನು.

01125025a ಇತ್ಯೇವಮಾದಿ ಸುಮಹತ್ಖಡ್ಗೇ ಧನುಷಿ ಚಾಭವತ್|

01125025c ಗದಾಯಾಂ ಶಸ್ತ್ರಕುಶಲೋ ದರ್ಶನಾನಿ ವ್ಯದರ್ಶಯತ್||

ಇದೇ ರೀತಿ ಮತ್ತು ಇನ್ನೂ ಹಲವಾರು ರೀತಿಗಳಲ್ಲಿ ಅವನು ಬಿಲ್ಲುಬಾಣಗಳಲ್ಲಿ, ಖಡ್ಗದಲ್ಲಿ ಮತ್ತು ಗದೆಯಲ್ಲಿ ತನ್ನಲ್ಲಿದ್ದ ಕೌಶಲ್ಯತೆಯನ್ನು ಪ್ರದರ್ಶಿಸಿದನು.

01125026a ತತಃ ಸಮಾಪ್ತಭೂಯಿಷ್ಠೇ ತಸ್ಮಿನ್ಕರ್ಮಣಿ ಭಾರತ|

01125026c ಮಂದೀಭೂತೇ ಸಮಾಜೇ ಚ ವಾದಿತ್ರಸ್ಯ ಚ ನಿಸ್ವನೇ||

01125027a ದ್ವಾರದೇಶಾತ್ಸಮುದ್ಭೂತೋ ಮಾಹಾತ್ಮ್ಯ ಬಲಸೂಚಕಃ|

01125027c ವಜ್ರನಿಷ್ಪೇಷಸದೃಶಃ ಶುಶ್ರುವೇ ಭುಜನಿಸ್ವನಃ||

ಭಾರತ! ಆ ಪ್ರದರ್ಶನವು ಮುಗಿಯುತ್ತಾ ಬಂದಂತೆ ಮತ್ತು ಜನಸಂದಣಿಯು ಕಡಿಮೆಯಾಗುತ್ತಾ ಬಂದಂತೆ ದ್ವಾರದಲ್ಲಿ ವಜ್ರವೇ ಬಿದ್ದಹಾಗೆ, ಅದನ್ನುಂಟುಮಾಡಿದವನ ಮಹಾತ್ಮತೆ ಮತ್ತು ಬಲದ ಸೂಚಕವಾದ ಮಹಾ ಸ್ವರವೊಂದು ಕೇಳಿಬಂದಿತು.

01125028a ದೀರ್ಯಂತೇ ಕಿಂ ನು ಗಿರಯಃ ಕಿಂ ಸ್ವಿದ್ಭೂಮಿರ್ವಿದೀರ್ಯತೇ|

01125028c ಕಿಂ ಸ್ವಿದಾಪೂರ್ಯತೇ ವ್ಯೋಮ ಜಲಭಾರಘನೈರ್ಘನೈಃ||

ಗಿರಿಗಳು ಕೆಳಗುರುಳುತ್ತಿವೆಯೇ? ಭೂಮಿಯು ಬಿರಿಯುತ್ತಿದೆಯೇ? ಜಲಭಾರಗೊಂಡ ಮೋಡಗಳಿಂದ ಆಕಾಶವು ತುಂಬಿಕೊಂಡಿದೆಯೇ?

01125029a ರಂಗಸ್ಯೈವಂ ಮತಿರಭೂತ್ ಕ್ಷಣೇನ ವಸುಧಾಧಿಪ|

01125029c ದ್ವಾರಂ ಚಾಭಿಮುಖಾಃ ಸರ್ವೇ ಬಭೂವುಃ ಪ್ರೇಕ್ಷಕಾಸ್ತದಾ||

ವಸುಧಾಧಿಪ! ಈ ರೀತಿ ರಂಗದಲ್ಲಿರುವವರು ಒಂದು ಕ್ಷಣ ಯೋಚಿಸಿದರು. ಪ್ರೇಕ್ಷಕರೆಲ್ಲರೂ ದ್ವಾರದ ಕಡೆ ನೋಡತೊಡಗಿದರು.

01125030a ಪಂಚಭಿರ್ಭ್ರಾತೃಭಿಃ ಪಾರ್ಥೈರ್ದ್ರೋಣಃ ಪರಿವೃತೋ ಬಭೌ|

01125030c ಪಂಚತಾರೇಣ ಸಂಯುಕ್ತಃ ಸಾವಿತ್ರೇಣೇವ ಚಂದ್ರಮಾಃ||

ಐವರು ಪಾರ್ಥ ಭ್ರಾತೃಗಳಿಂದ ಪರಿವೃತ ದ್ರೋಣನು ಐದು ತಾರೆಗಳಿಂದ ಕೂಡಿದ ಸಾವಿತ್ರಿಯಲ್ಲಿದ್ದ ಚಂದ್ರಮನಂತೆ ಕಂಗೊಳಿಸಿದನು.

01125031a ಅಶ್ವತ್ಥಾಮ್ನಾ ಚ ಸಹಿತಂ ಭ್ರಾತೄಣಾಂ ಶತಮೂರ್ಜಿತಂ|

01125031c ದುರ್ಯೋಧನಮಮಿತ್ರಘ್ನಮುತ್ಥಿತಂ ಪರ್ಯವಾರಯತ್||

ಅಶ್ವತ್ಥಾಮನನ್ನೂ ಸೇರಿ ಒಂದು ನೂರು ಭ್ರಾತೃಗಳು ಎದ್ದು ನಿಂತ ಅಮಿತ್ರಘ್ನ ದುರ್ಯೋಧನನನ್ನು ಸುತ್ತುವರೆದಿದ್ದರು.

01125032a ಸ ತೈಸ್ತದಾ ಭ್ರಾತೃಭಿರುದ್ಯತಾಯುಧೈರ್

                        ವೃತೋ ಗದಾಪಾಣಿರವಸ್ಥಿತೈಃ ಸ್ಥಿತಃ|

01125032c ಬಭೌ ಯಥಾ ದಾನವಸಂಕ್ಷಯೇ ಪುರಾ

                        ಪುರಂದರೋ ದೇವಗಣೈಃ ಸಮಾವೃತಃ||

ಗದಾಪಾಣಿಯಾದ ಅವನು ಹಿಂದೆ ದಾನವರ ನಾಶಕಾಲದಲ್ಲಿ ಪುರಂದರನು ದೇವತೆಗಳಿಂದ ಹೇಗೋ ಹಾಗೆ ಆಯುಧಗಳನ್ನು ಹಿಡಿದು ಸಿದ್ಧರಾಗಿದ್ದ ಭ್ರಾತೃಗಳಿಂದ ಸುತ್ತುವರೆಯಲ್ಪಟ್ಟಿದ್ದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ಅಸ್ತ್ರದರ್ಶನೇ ಪಂಚವಿಂಶತ್ಯಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ಅಸ್ತ್ರದರ್ಶನ ಎನ್ನುವ ನೂರಾ ಇಪ್ಪತ್ತೈದನೆಯ ಅಧ್ಯಾಯವು.

Related image

Comments are closed.