|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ: ಜತುಗೃಹ ಪರ್ವ
೧೨೪
ಪ್ರತಿಭಾ ಪ್ರದರ್ಶನ
ವಿದ್ಯಾಭ್ಯಾಸವನ್ನು ಪೂರೈಸಿದ ರಾಜಪುತ್ರರ ಪ್ರತಿಭಾ ಪ್ರದರ್ಶನಕ್ಕೆ ಸಿದ್ಧತೆ (೧-೨೦). ರಾಜಪುತ್ರರ ಪ್ರತಿಭಾ ಪ್ರದರ್ಶನ (೨೧-೩೩).
01124001 ವೈಶಂಪಾಯನ ಉವಾಚ|
01124001a ಕೃತಾಸ್ತ್ರಾನ್ಧಾರ್ತರಾಷ್ಟ್ರಾಂಶ್ಚ ಪಾಂಡುಪುತ್ರಾಂಶ್ಚ ಭಾರತ|
01124001c ದೃಷ್ಟ್ವಾ ದ್ರೋಣೋಽಬ್ರವೀದ್ರಾಜನ್ಧೃತರಾಷ್ಟ್ರಂ ಜನೇಶ್ವರಂ||
01124002a ಕೃಪಸ್ಯ ಸೋಮದತ್ತಸ್ಯ ಬಾಹ್ಲೀಕಸ್ಯ ಚ ಧೀಮತಃ|
01124002c ಗಾಂಗೇಯಸ್ಯ ಚ ಸಾನ್ನಿಧ್ಯೇ ವ್ಯಾಸಸ್ಯ ವಿದುರಸ್ಯ ಚ||
ವೈಶಂಪಾಯನನು ಹೇಳಿದನು: “ಭಾರತ! ಧಾರ್ತರಾಷ್ಟ್ರರೂ ಪಾಂಡುಪುತ್ರರೂ ಕೃತಾಸ್ತ್ರರಾದುದನ್ನು ಕಂಡ ದ್ರೋಣನು ಜನೇಶ್ವರ ರಾಜ ಧೃತರಾಷ್ಟ್ರನಿಗೆ, ಕೃಪ, ಸೋಮದತ್ತ, ಬಾಹ್ಲೀಕ, ಧೀಮಂತ ಗಾಂಗೇಯ, ವ್ಯಾಸ ಮತ್ತು ವಿದುರನ ಸನ್ನಿಧಿಯಲ್ಲಿ ಹೇಳಿದನು:
01124003a ರಾಜನ್ಸಂಪ್ರಾಪ್ತವಿದ್ಯಾಸ್ತೇ ಕುಮರಾಃ ಕುರುಸತ್ತಮ|
01124003c ತೇ ದರ್ಶಯೇಯುಃ ಸ್ವಾಂ ಶಿಕ್ಷಾಂ ರಾಜನ್ನನುಮತೇ ತವ||
“ಕುರುಸತ್ತಮ ರಾಜನ್! ನಿನ್ನ ಕುಮಾರರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ರಾಜನ್! ನಿನ್ನ ಅನುಮತಿಯಿದ್ದರೆ ಅವರು ತಾವು ಪಡೆದಿರುವ ಶಿಕ್ಷಣವನ್ನು ಪ್ರದರ್ಶಿಸಬಹುದು.”
01124004a ತತೋಽಬ್ರವೀನ್ಮಹಾರಾಜಃ ಪ್ರಹೃಷ್ಟೇನಾಂತರಾತ್ಮನಾ|
01124004c ಭಾರದ್ವಾಜ ಮಹತ್ಕರ್ಮ ಕೃತಂ ತೇ ದ್ವಿಜಸತ್ತಮ||
ಆಗ ಪ್ರಹೃಷ್ಟ ಮನಸ್ಕ ಮಹಾರಾಜನು ಹೇಳಿದನು: “ದ್ವಿಜಸತ್ತಮ ಭಾರದ್ವಾಜ! ನೀನು ಒಂದು ಮಹತ್ತರ ಕಾರ್ಯವನ್ನೇ ಮುಗಿಸಿದ್ದೀಯೆ.
01124005a ಯದಾ ತು ಮನ್ಯಸೇ ಕಾಲಂ ಯಸ್ಮಿನ್ದೇಶೇ ಯಥಾ ಯಥಾ|
01124005c ತಥಾ ತಥಾ ವಿಧಾನಾಯ ಸ್ವಯಮಾಜ್ಞಾಪಯಸ್ವ ಮಾಂ||
ನೀನೇ ನಮಗೆ ಯಾವಾಗ, ಎಲ್ಲಿ, ಮತ್ತು ಯಾವ ರೀತಿಯಲ್ಲಿ ಇದನ್ನು ನಡೆಸಬೇಕೆಂದು ಅಪ್ಪಣೆ ಕೊಡಬೇಕು.
01124006a ಸ್ಪೃಹಯಾಮ್ಯದ್ಯ ನಿರ್ವೇದಾತ್ಪುರುಷಾಣಾಂ ಸಚಕ್ಷುಷಾಂ|
01124006c ಅಸ್ತ್ರಹೇತೋಃ ಪರಾಕ್ರಾಂತಾನ್ಯೇ ಮೇ ದ್ರಕ್ಷ್ಯಂತಿ ಪುತ್ರಕಾನ್||
ಇಂಥಹ ದಿನದಲ್ಲಿ ನಾನು ನನ್ನ ಈ ಪುತ್ರರ ಅಸ್ತ್ರಜ್ಞಾನ ಮತ್ತು ಪರಾಕ್ರಮವನ್ನು ನೋಡಬಲ್ಲಂಥಹ ದೃಷ್ಟಿಯನ್ನು ಪಡೆದಿರುವ ಇತರ ಪುರುಷರ ಕುರಿತು ವೇದನೆಯಿಂದ ಅಸೂಯೆಪಡುತ್ತೇನೆ.
01124007a ಕ್ಷತ್ತರ್ಯದ್ಗುರುರಾಚಾರ್ಯೋ ಬ್ರವೀತಿ ಕುರು ತತ್ತಥಾ|
01124007c ನ ಹೀದೃಶಂ ಪ್ರಿಯಂ ಮನ್ಯೇ ಭವಿತಾ ಧರ್ಮವತ್ಸಲ||
ಕ್ಷತ್ತ! ಗುರು ಆಚಾರ್ಯನು ಹೇಳಿದಂತೆಯೇ ಮಾಡು. ಧರ್ಮವತ್ಸಲ! ಇದಕ್ಕಿಂತಲೂ ಸಂತೋಷವನ್ನು ತರುವಂಥಹುದು ಬೇರೆಯಾವುದೂ ಇಲ್ಲ ಎಂದು ನನ್ನ ಭಾವನೆ.”
01124008a ತತೋ ರಾಜಾನಮಾಮಂತ್ರ್ಯ ವಿದುರಾನುಗತೋ ಬಹಿಃ|
01124008c ಭಾರದ್ವಾಜೋ ಮಹಾಪ್ರಾಜ್ಞೋ ಮಾಪಯಾಮಾಸ ಮೇದಿನೀಂ|
01124008e ಸಮಾಮವೃಕ್ಷಾಂ ನಿರ್ಗುಲ್ಮಾಮುದಕ್ಪ್ರವಣಸಂಸ್ಥಿತಾಂ||
ನಂತರ ರಾಜನ ಅನುಮತಿಯನ್ನು ಪಡೆದು ದ್ರೋಣನೂ ಮತ್ತು ಅವನ ಹಿಂದೆ ವಿದುರನೂ ಹೋದರು. ಮಹಾಪ್ರಾಜ್ಞ ಭಾರದ್ವಾಜನು ಮರಗಳಿಲ್ಲದ, ಗಿಡಗಂಟಿಗಳಿಲ್ಲದ, ನದಿಯ ಪಕ್ಕದಲ್ಲಿಯ ಸಮಪ್ರದೇಶದ ಭೂಮಿಯನ್ನು ಅಳೆಸಿದನು.
01124009a ತಸ್ಯಾಂ ಭೂಮೌ ಬಲಿಂ ಚಕ್ರೇ ತಿಥೌ ನಕ್ಷತ್ರಪೂಜಿತೇ|
01124009c ಅವಘುಷ್ಟಂ ಪುರೇ ಚಾಪಿ ತದರ್ಥಂ ವದತಾಂ ವರ||
ಪೂಜನೀಯ ನಕ್ಷತ್ರ ತಿಥಿಗಳಲ್ಲಿ ಆ ಭೂಮಿಗೆ ಬಲಿಯನ್ನು ಹಾಕಿಸಿದನು. ಮಾತುಗಾರರಲ್ಲಿ ಶ್ರೇಷ್ಠ! ಆ ಜಾಗವು ಯಾವ ಉದ್ದೇಶಕ್ಕಿದೆಯೆಂದು ಪುರದಲ್ಲೆಲ್ಲಾ ಘೋಷಿಸಲಾಯಿತು.
01124010a ರಂಗಭೂಮೌ ಸುವಿಪುಲಂ ಶಾಸ್ತ್ರದೃಷ್ಟಂ ಯಥಾವಿಧಿ|
01124010c ಪ್ರೇಕ್ಷಾಗಾರಂ ಸುವಿಹಿತಂ ಚಕ್ರುಸ್ತತ್ರ ಚ ಶಿಲ್ಪಿನಃ|
01124010e ರಾಜ್ಞಃ ಸರ್ವಾಯುಧೋಪೇತಂ ಸ್ತ್ರೀಣಾಂ ಚೈವ ನರರ್ಷಭ||
ನರರ್ಷಭ! ಈ ರಂಗಭೂಮಿಯಲ್ಲಿ ಶಿಲ್ಪಿಗಳು ಸುವಿಪುಲ ಶಾಸ್ತ್ರಗಳಲ್ಲಿ ಹೇಳಿದಂತೆ ಯಥಾವಿಧಿ ಸುವಿಹಿತ ಸರ್ವಾಯುಧೋಪೇತ ಪ್ರೇಕ್ಷಾಗಾರವನ್ನು ರಾಜನಿಗೆ ಮತ್ತು ಸ್ತ್ರೀಯರಿಗೆ ನಿರ್ಮಿಸಿದರು.
01124011a ಮಂಚಾಂಶ್ಚ ಕಾರಯಾಮಾಸುಸ್ತತ್ರ ಜಾನಪದಾ ಜನಾಃ|
01124011c ವಿಪುಲಾನುಚ್ಛ್ರಯೋಪೇತಾಂ ಶಿಬಿಕಾಶ್ಚ ಮಹಾಧನಾಃ||
ಜಾನಪದ ಜನರಿಗೆ ಅಗಲ-ಎತ್ತರ ವಿಪುಲ ನೆರಳನ್ನು ನೀಡುವಂತೆ ಹೊದಿಕೆಗಳನ್ನು ಹೊಂದಿದ್ದ ಮಂಚಗಳನ್ನೂ ರಚಿಸಲಾಯಿತು.
01124012a ತಸ್ಮಿಂಸ್ತತೋಽಹನಿ ಪ್ರಾಪ್ತೇ ರಾಜಾ ಸಸಚಿವಸ್ತದಾ|
01124012c ಭೀಷ್ಮಂ ಪ್ರಮುಖತಃ ಕೃತ್ವಾ ಕೃಪಂ ಚಾಚಾರ್ಯಸತ್ತಮಂ||
01124013a ಮುಕ್ತಾಜಾಲಪರಿಕ್ಷಿಪ್ತಂ ವೈಡೂರ್ಯಮಣಿಭೂಷಿತಂ|
01124013c ಶಾತಕುಂಭಮಯಂ ದಿವ್ಯಂ ಪ್ರೇಕ್ಷಾಗಾರಮುಪಾಗಮತ್||
ಆ ದಿನವು ಬಂದಾಗ ರಾಜನು ತನ್ನ ಸಚಿವರೊಡಗೂಡಿ, ಭೀಷ್ಮ, ಕೃಪ ಮತ್ತು ಆಚಾರ್ಯರನ್ನು ಮುಂದೆ ಮಾಡಿಕೊಂಡು, ತೆಳು ಪರದೆಯಿಂದ ಆವೃತ, ವೈಡೂರ್ಯಮಣಿಭೂಷಿತ ಶಾತಕುಂಭಗಳನ್ನು ಹೊಂದಿದ್ದ ದಿವ್ಯ ಪ್ರೇಕ್ಷಾಗಾರಕ್ಕೆ ಆಗಮಿಸಿದನು.
01124014a ಗಾಂಧಾರೀ ಚ ಮಹಾಭಾಗಾ ಕುಂತೀ ಚ ಜಯತಾಂ ವರ|
01124014c ಸ್ತ್ರಿಯಶ್ಚ ಸರ್ವಾ ಯಾ ರಾಜ್ಞಃ ಸಪ್ರೇಷ್ಯಾಃ ಸಪರಿಚ್ಛದಾಃ|
01124014e ಹರ್ಷಾದಾರುರುಹುರ್ಮಂಚಾನ್ಮೇರುಂ ದೇವಸ್ತ್ರಿಯೋ ಯಥಾ||
ವಿಜಯಿಗಳಲ್ಲಿ ಶ್ರೇಷ್ಠ! ಆಗ ಮಹಾಭಾಗೆ ಗಾಂಧಾರಿ, ಕುಂತಿ ಮೊದಲಾದ ರಾಜನ ಸರ್ವ ಸ್ತ್ರೀಯರೂ ತಮ್ಮ ತಮ್ಮ ಪರಿಚಾರಿಕೆಯರೊಂದಿಗೆ ದೇವಸ್ತ್ರೀಯರು ಮೇರುಪರ್ವತವನ್ನು ಹೇಗೋ ಹಾಗೆ ಹರ್ಷದಿಂದ ಮಂಚಗಳನ್ನು ಏರಿದರು.
01124015a ಬ್ರಾಹ್ಮಣಕ್ಷತ್ರಿಯಾದ್ಯಂ ಚ ಚಾತುರ್ವರ್ಣ್ಯಂ ಪುರಾದ್ದ್ರುತಂ|
01124015c ದರ್ಶನೇಪ್ಸು ಸಮಭ್ಯಾಗಾತ್ಕುಮಾರಾಣಾಂ ಕೃತಾಸ್ತ್ರತಾಂ||
ಪುರದಿಂದ ಬ್ರಾಹ್ಮಣ ಕ್ಷತ್ರಿಯರೇ ಮೊದಲಾದ ನಾಲ್ಕು ವರ್ಣದವರೂ ಕೃತಾಸ್ತ್ರ ಕುಮಾರರನ್ನು ನೋಡಲು ಬಂದು ಸೇರಿದರು.
01124016a ಪ್ರವಾದಿತೈಶ್ಚ ವಾದಿತ್ರೈರ್ಜನಕೌತೂಹಲೇನ ಚ|
01124016c ಮಹಾರ್ಣವ ಇವ ಕ್ಷುಬ್ಧಃ ಸಮಾಜಃ ಸೋಽಭವತ್ತದಾ||
ವಾದ್ಯಘೋಷಗಳ ಅಲೆಯಲ್ಲಿ ತೇಲುತ್ತಿದ್ದ ಆ ಕುತೂಹಲ ಜನಸಂದಣಿಯು ಒಂದು ಕ್ಷುಬ್ಧ ಮಹಾಸಾಗರದಂತೆ ತೋರುತ್ತಿತ್ತು.
01124017a ತತಃ ಶುಕ್ಲಾಂಬರಧರಃ ಶುಕ್ಲಯಜ್ಞೋಪವೀತವಾನ್|
01124017c ಶುಕ್ಲಕೇಶಃ ಸಿತಶ್ಮಶ್ರುಃ ಶುಕ್ಲಮಾಲ್ಯಾನುಲೇಪನಃ||
01124018a ರಂಗಮಧ್ಯಂ ತದಾಚಾರ್ಯಃ ಸಪುತ್ರಃ ಪ್ರವಿವೇಶ ಹ|
01124018c ನಭೋ ಜಲಧರೈರ್ಹೀನಂ ಸಾಂಗಾರಕ ಇವಾಂಶುಮಾನ್||
ಆಗ ಶುಕ್ಲಾಂಬರಧಾರಿ, ಶುಕ್ಲಯಜ್ಞೋಪವೀತ ಧಾರಿಣಿ, ಬಿಳಿಕೂದಲಿನ ಬಿಳಿಗಡ್ಡದ ಶುಕ್ಲಮಾಲ್ಯಾನುಲೇಪಿತ ಆಚಾರ್ಯನು ತನ್ನ ಪುತ್ರನನ್ನೊಡಗೂಡಿ ಮಳೆ-ಮೇಘಗಳಿಲ್ಲದ ನಭದಲ್ಲಿ ಅಂಗಾರಕನೊಂದಿಗೆ ಚಂದ್ರನು ಹೇಗೋ ಹಾಗೆ ರಂಗಮಧ್ಯವನ್ನು ಪ್ರವೇಶಿಸಿದನು.
01124019a ಸ ಯಥಾಸಮಯಂ ಚಕ್ರೇ ಬಲಿಂ ಬಲವತಾಂ ವರಃ|
01124019c ಬ್ರಾಹ್ಮಣಾಂಶ್ಚಾತ್ರ ಮಂತ್ರಜ್ಞಾನ್ವಾಚಯಾಮಾಸ ಮಂಗಲಂ||
ಆ ಬಲವಂತರಲ್ಲಿ ಶ್ರೇಷ್ಠ ಮಂತ್ರಜ್ಞ ಬಲಿ ಬ್ರಾಹ್ಮಣನು ಆ ಸಮಯಕ್ಕೆ ತಕ್ಕುದಾದ ಮಂಗಲಾಚರಣೆಯನ್ನು ಹೇಳಿದನು.
01124020a ಅಥ ಪುಣ್ಯಾಹಘೋಷಸ್ಯ ಪುಣ್ಯಸ್ಯ ತದನಂತರಂ|
01124020c ವಿವಿಶುರ್ವಿವಿಧಂ ಗೃಹ್ಯ ಶಸ್ತ್ರೋಪಕರಣಂ ನರಾಃ||
ಪುಣ್ಯಾಹ ಘೋಷ ಪುಣ್ಯದ ನಂತರ ವಿವಿಧ ಶಸ್ತ್ರೋಪಕರಣಗಳನ್ನು ಹಿಡಿದು ಜನರು ಪ್ರವೇಶಿಸಿದರು.
01124021a ತತೋ ಬದ್ಧತನುತ್ರಾಣಾ ಬದ್ಧಕಕ್ಷ್ಯಾ ಮಹಾಬಲಾಃ|
01124021c ಬದ್ಧತೂಣಾಃ ಸಧನುಷೋ ವಿವಿಶುರ್ಭರತರ್ಷಭಾಃ||
ಆಗ ಸೊಂಟಕ್ಕೆ ಬಿಗಿಯಾಗಿ ಬಿಗಿದ, ಕವಚಗಳನ್ನು ಧರಿಸಿದ ಮಹಾಬಲ ಭರತರ್ಷಭರು ಧನುಸ್ಸುಗಳನ್ನು ಹಿಡಿದು ಪ್ರವೇಶಿಸಿದರು.
01124022a ಅನುಜ್ಯೇಷ್ಠಂ ಚ ತೇ ತತ್ರ ಯುಧಿಷ್ಠಿರಪುರೋಗಮಾಃ|
01124022c ಚಕ್ರುರಸ್ತ್ರಂ ಮಹಾವೀರ್ಯಾಃ ಕುಮಾರಾಃ ಪರಮಾದ್ಭುತಂ||
ಯುಧಿಷ್ಠಿರನ ಮುಂದಾಳತ್ವದಲ್ಲಿ ಹಿರಿಯವನನ್ನು ಕ್ರಮವಾಗಿ ಹಿಂಬಾಲಿಸಿ ಪ್ರತಿಯೊಬ್ಬ ಮಹಾವೀರ ಕುಮಾರನೂ ತನ್ನ ತನ್ನ ಪರಮಾದ್ಭುತ ಅಸ್ತ್ರಗಳನ್ನು ಪ್ರದರ್ಶಿಸಿದರು.
01124023a ಕೇ ಚಿಚ್ಛರಾಕ್ಷೇಪಭಯಾಚ್ಶಿರಾಂಸ್ಯವನನಾಮಿರೇ|
01124023c ಮನುಜಾ ಧೃಷ್ಟಮಪರೇ ವೀಕ್ಷಾಂ ಚಕ್ರುಃ ಸವಿಸ್ಮಯಾಃ||
ದರ್ಶಕರಲ್ಲಿ ಕೆಲವರು ಬಾಣಗಳು ತಮ್ಮ ಮೇಲೆ ಬಂದು ಬೀಳುತ್ತಿವೆಯೋ ಎಂಬ ಭಯದಿಂದ ತಲೆಗಳನ್ನು ತಗ್ಗಿಸುತ್ತಿದ್ದರೆ ಇನ್ನು ಕೆಲವು ಜನರು ವಿಸ್ಮಿತರಾಗಿ ನೋಡುತ್ತಲೇ ಇದ್ದರು.
01124024a ತೇ ಸ್ಮ ಲಕ್ಷ್ಯಾಣಿ ವಿವಿಧುರ್ಬಾಣೈರ್ನಾಮಾಂಕಶೋಭಿತೈಃ|
01124024c ವಿವಿಧೈರ್ಲಾಘವೋತ್ಸೃಷ್ಟೈರುಹ್ಯಂತೋ ವಾಜಿಭಿರ್ದ್ರುತಂ||
ವೇಗವಾಗಿ ಕುದುರೆಗಳ ಮೇಲೆ ಹೋಗುತ್ತಿದ್ದ ಅವರು ಬಾಣಗಳಿಂದ ಗುರಿಗಳಿಗೆ ಸರಿಯಾಗಿ ಹೊಡೆದು ತಮ್ಮ ತಮ್ಮ ವಿವಿಧ ಕೌಶಲ್ಯತೆಗಳನ್ನು ತೋರಿಸಿಕೊಟ್ಟರು.
01124025a ತತ್ಕುಮಾರಬಲಂ ತತ್ರ ಗೃಹೀತಶರಕಾರ್ಮುಕಂ|
01124025c ಗಂಧರ್ವನಗರಾಕಾರಂ ಪ್ರೇಕ್ಷ್ಯ ತೇ ವಿಸ್ಮಿತಾಭವನ್||
ಬಿಲ್ಲು ಬಾಣಗಳನ್ನು ಹಿಡಿಯುವುದರಲ್ಲಿ ಆ ಕುಮಾರರ ಗುಂಪಿಗಿದ್ದ ಕೌಶಲತೆಯನ್ನು ನೋಡಿದ ಜನರು ಗಂಧರ್ವನಗರವನ್ನು ನೋಡಿದವರಂತೆ ವಿಸ್ಮಿತರಾದರು.
01124026a ಸಹಸಾ ಚುಕ್ರುಶುಸ್ತತ್ರ ನರಾಃ ಶತಸಹಸ್ರಶಃ|
01124026c ವಿಸ್ಮಯೋತ್ಫುಲ್ಲನಯನಾಃ ಸಾಧು ಸಾಧ್ವಿತಿ ಭಾರತ||
ಭಾರತ! ಅಲ್ಲಿ ಕಣ್ಣುಬಿಟ್ಟು ವಿಸ್ಮಿತರಾಗಿ ನೋಡುತ್ತಿದ್ದ ನೂರಾರು ಸಹಸ್ರಾರು ಜನರು “ಸಾಧು! ಸಾಧು!” ಎಂದು ಕೂಗುತ್ತಿದ್ದರು.
01124027a ಕೃತ್ವಾ ಧನುಷಿ ತೇ ಮಾರ್ಗಾನ್ರಥಚರ್ಯಾಸು ಚಾಸಕೃತ್|
01124027c ಗಜಪೃಷ್ಠೇಽಶ್ವಪೃಷ್ಠೇ ಚ ನಿಯುದ್ಧೇ ಚ ಮಹಾಬಲಾಃ||
ಆ ಮಹಾಬಲಶಾಲಿಗಳು ಒಮ್ಮೆ ರಥದಮೇಲೆ, ನಂತರ ಆನೆಯ ಮೇಲೆ, ಕುದುರೆಯ ಮೇಲೆ ಮತ್ತು ಒಮ್ಮೆ ದ್ವಂದ್ವ ಯುದ್ಧದಲ್ಲಿ ಧನುಸ್ಸನ್ನು ಹಿಡಿದು ಪ್ರದರ್ಶಿಸಿದರು.
01124028a ಗೃಹೀತಖಡ್ಗಚರ್ಮಾಣಸ್ತತೋ ಭೂಯಃ ಪ್ರಹಾರಿಣಃ|
01124028c ತ್ಸರುಮಾರ್ಗಾನ್ಯಥೋದ್ದಿಷ್ಟಾಂಶ್ಚೇರುಃ ಸರ್ವಾಸು ಭೂಮಿಷು||
ಖಡ್ಗ ಮತ್ತು ಗುರಾಣಿಗಳನ್ನು ಹಿಡಿದು ಬಾಹುಗಳಿಂದ ಬೀಸುತ್ತಾ ಆ ಮೈದಾನದಲ್ಲೆಲ್ಲಾ ಓಡಾಡಿ ಖಡ್ಗಯುದ್ಧದಲ್ಲಿ ತಮಗಿದ್ದ ಕೌಶಲ್ಯತೆಯನ್ನು ತೋರಿಸಿದರು.
01124029a ಲಾಘವಂ ಸೌಷ್ಠವಂ ಶೋಭಾಂ ಸ್ಥಿರತ್ವಂ ದೃಢಮುಷ್ಟಿತಾಂ|
01124029c ದದೃಶುಸ್ತತ್ರ ಸರ್ವೇಷಾಂ ಪ್ರಯೋಗೇ ಖಡ್ಗಚರ್ಮಣಾಂ||
ಖಡ್ಗ-ಗುರಾಣಿಗಳ ಪ್ರಯೋಗದಲ್ಲಿ ಅವರಿಗಿದ್ದ ಲಾಘವ, ಸೌಷ್ಠವ, ಶೋಭೆ, ಸ್ಥಿರತ್ವ ಮತ್ತು ದೃಢಮುಷ್ಠಿಯನ್ನು ಅಲ್ಲಿ ಸರ್ವರೂ ನೋಡಿದರು.
01124030a ಅಥ ತೌ ನಿತ್ಯಸಂಹೃಷ್ಟೌ ಸುಯೋಧನವೃಕೋದರೌ|
01124030c ಅವತೀರ್ಣೌ ಗದಾಹಸ್ತಾವೇಕಶೃಂಗಾವಿವಾಚಲೌ||
ಆಗ ನಿತ್ಯಸಹೃಷ್ಠ ಸುಯೋಧನ-ವೃಕೋದರರು ಕೈಯಲ್ಲಿ ಗದೆಯನ್ನು ಹಿಡಿದು ಒಂದೇ ಶಿಖರಗಳನ್ನು ಹೊಂದಿದ ಪರ್ವತಗಳಂತೆ ಅಲ್ಲಿ ಇಳಿದರು.
01124031a ಬದ್ಧಕಕ್ಷ್ಯೌ ಮಹಾಬಾಹೂ ಪೌರುಷೇ ಪರ್ಯವಸ್ಥಿತೌ|
01124031c ಬೃಂಹಂತೌ ವಾಶಿತಾಹೇತೋಃ ಸಮದಾವಿವ ಕುಂಜರೌ||
ಸೊಂಟವನ್ನು ಬಿಗಿದು ಪೌರುಷವನ್ನು ತೋರಿಸುತ್ತಾ ಅಲ್ಲಿ ನಿಂತಿದ್ದ ಮಹಾಬಾಹುಗಳು ಒಂದೇ ಹೆಣ್ಣು ಆನೆಗಾಗಿ ಹೊಡೆದಾಡಲು ನಿಂತಿದ್ದ ಮದಿಸಿದ ಗಂಡಾನೆಗಳಂತೆ ತೋರುತ್ತಿದ್ದರು.
01124032a ತೌ ಪ್ರದಕ್ಷಿಣಸವ್ಯಾನಿ ಮಂಡಲಾನಿ ಮಹಾಬಲೌ|
01124032c ಚೇರತುರ್ನಿರ್ಮಲಗದೌ ಸಮದಾವಿವ ಗೋವೃಷೌ||
ಆ ಮಹಾಬಲಿಗಳು ಹೊಳೆಯುತ್ತಿರುವ ಗದೆಗಳನ್ನು ಹಿಡಿದು ಸೂರ್ಯನಂತೆ ಮಂಡಲಗಳಲ್ಲಿ ಕಾವಿಗೆ ಬಂದ ಹೋರಿಗಳಂತೆ ಪ್ರದಕ್ಷಿಣೆಮಾಡುತ್ತಿದ್ದರು.
01124033a ವಿದುರೋ ಧೃತರಾಷ್ಟ್ರಾಯ ಗಾಂಧಾರ್ಯೈ ಪಾಂಡವಾರಣಿಃ|
01124033c ನ್ಯವೇದಯೇತಾಂ ತತ್ಸರ್ವಂ ಕುಮಾರಾಣಾಂ ವಿಚೇಷ್ಟಿತಂ||
ಕುಮಾರರ ಈ ಎಲ್ಲ ವಿಚೇಷ್ಟಿತೆಗಳನ್ನೂ ವಿದುರನು ಧೃತರಾಷ್ಟ್ರನಿಗೆ ಮತ್ತು ಪಾಂಡವಾರಣಿ ಕುಂತಿಯು ಗಾಂಧಾರಿಗೆ ವರದಿಮಾಡುತ್ತಿದ್ದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ಅಸ್ತ್ರದರ್ಶನೇ ಚತುರ್ವಿಂಶತ್ಯಾಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ಅಸ್ತ್ರದರ್ಶನ ಎನ್ನುವ ನೂರಾ ಇಪ್ಪತ್ನಾಲ್ಕನೆಯ ಅಧ್ಯಾಯವು.