ಆದಿ ಪರ್ವ: ಸಂಭವ ಪರ್ವ
೧೨೨
ದ್ರೋಣನು ಸಖ ದೃಪದನಲ್ಲಿಗೆ ಹೋದಾಗ ಅಪಮಾನಿತನಾದುದು (೧-೯). ದ್ರೋಣನು ಪಾಂಚಾಲರ ವಿರುದ್ಧ ನಿಶ್ಚಯಿಸಿ ಹಸ್ತಿನಾಪುರಕ್ಕೆ ಹೋಗಿ ರಾಜಕುಮಾರರಿಗೆ ಕುಶಲತೆಯನ್ನು ತೋರಿಸಿ, ತನ್ನ ಕುರಿತು ಭೀಷ್ಮನಿಗೆ ವರದಿಮಾಡಲು ಹೇಳಿ ಕಳುಹಿಸುವುದು (೧೦-೨೦). ಭೀಷ್ಮನು ದ್ರೋಣನನ್ನು ಕರೆಯಿಸಿ ಕೇಳಲು ಅವನು ದ್ರುಪದನಿಂದಾದ ಅವಮಾನದ ಕುರಿತು ಹೇಳಿಕೊಳ್ಳುವುದು (೨೧-೩೮). ಭೀಷ್ಮ ಮತ್ತು ಪಾಂಡುಪುತ್ರರೂ ಸೇರಿ ಅವನನ್ನು ಗುರುವೆಂದು ಸ್ವೀಕರಿಸಿದುದು, ದ್ರೋಣನು ಗುರುದಕ್ಷಿಣೆಯ ಕುರಿತು ಹೇಳಿ, ಕೊಡುತ್ತೇವೆಂದು ಭರವಸೆಯನ್ನು ಶಿಷ್ಯರಿಂದ ಪಡೆದುದು (೩೯-೪೪). ದ್ರೋಣನು ಕೌರವ-ಪಾಂಡವರಿಗಲ್ಲದೇ ಇತರ ರಾಜಪುತ್ರರಿಗೂ ಗುರುವಾದುದು (೪೫-೪೭).
01122001 ವೈಶಂಪಾಯನ ಉವಾಚ|
01122001a ತತೋ ದ್ರುಪದಮಾಸಾದ್ಯ ಭಾರದ್ವಾಜಃ ಪ್ರತಾಪವಾನ್|
01122001c ಅಬ್ರವೀತ್ಪಾರ್ಷತಂ ರಾಜನ್ಸಖಾಯಂ ವಿದ್ಧಿ ಮಾಮಿತಿ||
ವೈಶಂಪಾಯನನು ಹೇಳಿದನು: “ರಾಜನ್! ಪ್ರತಾಪವಾನ್ ಭಾರದ್ವಾಜನು ದ್ರುಪದನಲ್ಲಿಗೆ ಬಂದು “ನನ್ನನ್ನು ನಿನ್ನ ಸಖನೆಂದು ತಿಳಿ!” ಎಂದು ಪಾರ್ಷತನಿಗೆ ಹೇಳಿದನು.
01122002 ದ್ರುಪದ ಉವಾಚ|
01122002a ಅಕೃತೇಯಂ ತವ ಪ್ರಜ್ಞಾ ಬ್ರಹ್ಮನ್ನಾತಿಸಮಂಜಸೀ|
01122002c ಯನ್ಮಾಂ ಬ್ರವೀಷಿ ಪ್ರಸಭಂ ಸಖಾ ತೇಽಹಮಿತಿ ದ್ವಿಜ||
ದ್ರುಪದನು ಹೇಳಿದನು: “ನಾನು ನಿನ್ನ ಸಖ ಎಂದು ನನಗೆ ತಕ್ಷಣವೇ ಹೇಳುತ್ತಿದ್ದೀಯಲ್ಲ! ದ್ವಿಜ! ಬ್ರಾಹ್ಮಣ! ನಿನ್ನ ಪ್ರಜ್ಞೆಯು ಸರಿಯಿಲ್ಲ ಅಥವಾ ನಿನಗೆ ಸಾಕಷ್ಟು ತಿಳುವಳಿಕೆಯಿಲ್ಲ!
01122003a ನ ಹಿ ರಾಜ್ಞಾಮುದೀರ್ಣಾನಾಮೇವಂ ಭೂತೈರ್ನರೈಃ ಕ್ವ ಚಿತ್|
01122003c ಸಖ್ಯಂ ಭವತಿ ಮಂದಾತ್ಮಂಶ್ರಿಯಾ ಹೀನೈರ್ಧನಚ್ಯುತೈಃ||
ಉದೀರ್ಣನಾಗಿರುವ ಯಾವ ರಾಜನೂ ನಿನ್ನಂತಹ ಮಂದಾತ್ಮ, ಅಶ್ರಿಯ ಮತ್ತು ಧನರಹಿತನೊಂದಿಗೆ ಸಖ್ಯವನ್ನು ಮಾಡುವುದಿಲ್ಲ.
01122004a ಸೌಹೃದಾನ್ಯಪಿ ಜೀರ್ಯಂತೇ ಕಾಲೇನ ಪರಿಜೀರ್ಯತಾಂ|
01122004c ಸೌಹೃದಂ ಮೇ ತ್ವಯಾ ಹ್ಯಾಸೀತ್ಪೂರ್ವಂ ಸಾಮರ್ಥ್ಯಬಂಧನಂ||
ಕಾಲವು ಹೇಗೆ ಮನುಷ್ಯನನ್ನು ಮುಪ್ಪಾಗಿಸುತ್ತದೆಯೋ ಹಾಗೆಯೇ ಸೌಹಾರ್ದತೆಯನ್ನೂ ಕುಂಠಿತಗೊಳಿಸುತ್ತದೆ. ಹಿಂದೆ ನಿನ್ನೊಡನೆ ನನಗೆ ಸೌಹಾರ್ದತೆಯಿತ್ತು. ಆದರೆ ಅದು ಸಾಮರ್ಥ್ಯ ಬಂಧನವಾಗಿತ್ತು.
01122005a ನ ಸಖ್ಯಮಜರಂ ಲೋಕೇ ಜಾತು ದೃಶ್ಯೇತ ಕರ್ಹಿ ಚಿತ್|
01122005c ಕಾಮೋ ವೈನಂ ವಿಹರತಿ ಕ್ರೋಧಶ್ಚೈನಂ ಪ್ರವೃಶ್ಚತಿ||
ಲೋಕದಲ್ಲಿ ಅಜರವಲ್ಲದ ಯಾವ ಸಖ್ಯವೂ ನೋಡಲು ದೊರೆಯುವುದಿಲ್ಲ. ಕಾಮವು ಇದನ್ನು ದೂರಮಾಡುತ್ತದೆ ಮತ್ತು ಕ್ರೋಧವು ಕುಂಠಿತಗೊಳಿಸುತ್ತದೆ.
01122006a ಮೈವಂ ಜೀರ್ಣಮುಪಾಸಿಷ್ಠಾಃ ಸಖ್ಯಂ ನವಮುಪಾಕುರು|
01122006c ಆಸೀತ್ಸಖ್ಯಂ ದ್ವಿಜಶ್ರೇಷ್ಠ ತ್ವಯಾ ಮೇಽರ್ಥನಿಬಂಧನಂ||
ಜೀರ್ಣವಾದ ಈ ಸಖ್ಯವನ್ನು ಉಪಾಸನೆಮಾಡಬೇಡ. ಹೊಸ ಸಖ್ಯವನ್ನು ಮಾಡು. ದ್ವಿಜಶ್ರೇಷ್ಠ! ನನಗೆ ನಿನ್ನಲ್ಲಿ ಸಖ್ಯವಿತ್ತು. ಯಾಕೆಂದರೆ ಅದು ನನ್ನ ಉದ್ದೇಶಗಳ ಸಾಧಕವಾಗಿತ್ತು.
01122007a ನ ದರಿದ್ರೋ ವಸುಮತೋ ನಾವಿದ್ವಾನ್ವಿದುಷಃ ಸಖಾ|
01122007c ಶೂರಸ್ಯ ನ ಸಖಾ ಕ್ಲೀಬಃ ಸಖಿಪೂರ್ವಂ ಕಿಮಿಷ್ಯತೇ||
ದರಿದ್ರನು ವಸುಮತಿಯ, ಅವಿದ್ಯಾವಂತನು ವಿದುಷಿಯ ಅಥವಾ ಹೇಡಿಯು ಶೂರನ ಸಖನಾಗಲಾರ. ಹಳೆಯ ಸಖ್ಯವು ಯಾರಿಗೆ ಬೇಕು?
01122008a ಯಯೋರೇವ ಸಮಂ ವಿತ್ತಂ ಯಯೋರೇವ ಸಮಂ ಕುಲಂ|
01122008c ತಯೋಃ ಸಖ್ಯಂ ವಿವಾಹಶ್ಚ ನ ತು ಪುಷ್ಟವಿಪುಷ್ಟಯೋಃ||
ಸರಿಸಮ ಸಂಪತ್ತನ್ನು ಹೊಂದಿದ ಮತ್ತು ಸರಿಸಮ ಕುಲದವರಾದ ಇಬ್ಬರ ನಡುವೆ ಸಖ್ಯ ಮತ್ತು ವಿವಾಹಗಳು ನಡೆಯುತ್ತವೆ. ಶ್ರೀಮಂತ ಮತ್ತು ಬಡವನ ಮಧ್ಯೆಯಲ್ಲ.
01122009a ನಾಶ್ರೋತ್ರಿಯಃ ಶ್ರೋತ್ರಿಯಸ್ಯ ನಾರಥೀ ರಥಿನಃ ಸಖಾ|
01122009c ನಾರಾಜ್ಞಾ ಸಂಗತಂ ರಾಜ್ಞಃ ಸಖಿಪೂರ್ವಂ ಕಿಮಿಷ್ಯತೇ||
ಅಶ್ರೋತ್ರಿಯು ಶ್ರೋತ್ರಿಯೊಡನೆ ಸಖ್ಯವನ್ನು ಮಾಡುವುದಿಲ್ಲ. ಹಾಗೆಯೇ ರಥಿಯು ಅರಥಿಯೊಡನೆ ಅಥವಾ ರಾಜನು ಅರಾಜನೊಂದಿಗೆ ಸಖ್ಯವನ್ನು ಮಾಡುವುದಿಲ್ಲ. ಹಳೆಯ ಸಖ್ಯವು ಯಾರಿಗೆ ಬೇಕು?””
01122010 ವೈಶಂಪಾಯನ ಉವಾಚ|
01122010a ದ್ರುಪದೇನೈವಮುಕ್ತಸ್ತು ಭಾರದ್ವಾಜಃ ಪ್ರತಾಪವಾನ್|
01122010c ಮುಹೂರ್ತಂ ಚಿಂತಯಾಮಾಸ ಮನ್ಯುನಾಭಿಪರಿಪ್ಲುತಃ||
ವೈಶಂಪಾಯನನು ಹೇಳಿದನು: “ದ್ರುಪದನ ಈ ಮಾತುಗಳಿಂದ ಪ್ರತಾಪವಾನ್ ಭಾರದ್ವಾಜನಿಗೆ ಸಿಟ್ಟು ಉಕ್ಕಿ ಬಂದು ಒಂದು ಕ್ಷಣ ಯೋಚನೆಗೊಳಗಾದನು.
01122011a ಸ ವಿನಿಶ್ಚಿತ್ಯ ಮನಸಾ ಪಾಂಚಾಲಂ ಪ್ರತಿ ಬುದ್ಧಿಮಾನ್|
01122011c ಜಗಾಮ ಕುರುಮುಖ್ಯಾನಾಂ ನಗರಂ ನಾಗಸಾಹ್ವಯಂ||
ಆ ಬುದ್ಧಿವಂತನು ಪಾಂಚಾಲರ ವಿರುದ್ಧ ಮನಸ್ಸಿನಲ್ಲಿಯೇ ನಿಶ್ಚಯವನ್ನು ಮಾಡಿ ಕುರುಮುಖ್ಯರ ನಗರಿ ನಾಗಸಾಹ್ವಯಕ್ಕೆ ಹೋದನು.
01122012a ಕುಮಾರಾಸ್ತ್ವಥ ನಿಷ್ಕ್ರಮ್ಯ ಸಮೇತಾ ಗಜಸಾಹ್ವಯಾತ್|
01122012c ಕ್ರೀಡಂತೋ ವೀಟಯಾ ತತ್ರ ವೀರಾಃ ಪರ್ಯಚರನ್ಮುದಾ||
ಅದೇ ಸಮಯದಲ್ಲಿ ವೀರ ಕುಮಾರರು ಎಲ್ಲರೂ ಕೂಡಿ ಗಜಸಾಹ್ವಯದ ಹೊರಗೆ ಸಂತೋಷದಿಂದ ಅಲೆದಾಡುತ್ತಾ ವೀಟೆಯೊಂದಿಗೆ ಆಡುತ್ತಿದ್ದರು.
01122013a ಪಪಾತ ಕೂಪೇ ಸಾ ವೀಟಾ ತೇಷಾಂ ವೈ ಕ್ರೀಡತಾಂ ತದಾ|
01122013c ನ ಚ ತೇ ಪ್ರತ್ಯಪದ್ಯಂತ ಕರ್ಮ ವೀಟೋಪಲಬ್ಧಯೇ||
ಅವರು ಆಡುತ್ತಿರುವಾಗ ವೀಟೆಯು ಒಂದು ಬಾವಿಯಲ್ಲಿ ಬಿದ್ದಿತು. ಆ ವೀಟೆಯನ್ನು ಹೇಗೆ ತೆಗೆಯಬೇಕೆಂದು ಅವರಿಗೆ ತೋಚದಾಯಿತು.
01122014a ಅಥ ದ್ರೋಣಃ ಕುಮಾರಾಂಸ್ತಾನ್ದೃಷ್ಟ್ವಾ ಕೃತ್ಯವತಸ್ತದಾ|
01122014c ಪ್ರಹಸ್ಯ ಮಂದಂ ಪೈಶಲ್ಯಾದಭ್ಯಭಾಷತ ವೀರ್ಯವಾನ್||
ವೀರ್ಯವಾನ್ ದ್ರೋಣನು ಕುಮಾರರನ್ನು ಮತ್ತು ಅವರ ಕಷ್ಟವನ್ನು ನೋಡಿ ನಕ್ಕು ಅವರೊಂದಿಗೆ ಮೆಲ್ಲನೆ ಮೃದುವಾಗಿ ಮಾತನಾಡಿದನು.
01122015a ಅಹೋ ನು ಧಿಗ್ಬಲಂ ಕ್ಷಾತ್ರಂ ಧಿಗೇತಾಂ ವಃ ಕೃತಾಸ್ತ್ರತಾಂ|
01122015c ಭರತಸ್ಯಾನ್ವಯೇ ಜಾತಾ ಯೇ ವೀಟಾಂ ನಾಧಿಗಚ್ಛತ||
“ಇದೇನಾಯಿತು? ಭರತ ಕುಲದಲ್ಲಿ ಜನಿಸಿದ ನಿಮಗೆ ಈ ವೀಟೆಯನ್ನು ತೆಗೆಯಲಿಕ್ಕಾಗುವುದಿಲ್ಲವೆಂದರೆ ಕ್ಷತ್ರಿಯಬಲಕ್ಕೇ ಧಿಕ್ಕಾರ. ಅವರಿಗೆ ಅಸ್ತ್ರಗಳ ಕುರಿತಿದ್ದ ಜ್ಞಾನಕ್ಕೆ ಧಿಕ್ಕಾರ.
01122016a ಏಷ ಮುಷ್ಟಿರಿಷೀಕಾಣಾಂ ಮಯಾಸ್ತ್ರೇಣಾಭಿಮಂತ್ರಿತಃ|
01122016c ಅಸ್ಯ ವೀರ್ಯಂ ನಿರೀಕ್ಷಧ್ವಂ ಯದನ್ಯಸ್ಯ ನ ವಿದ್ಯತೇ||
ಈ ಒಂದು ಮುಷ್ಠಿ ಹುಲ್ಲುಗಳನ್ನು ನಾನು ಅಸ್ತ್ರಗಳನ್ನಾಗಿ ಅಭಿಮಂತ್ರಿಸುತ್ತೇನೆ. ಸರಿಸಾಟಿಯಿಲ್ಲದ ಅದರ ಶಕ್ತಿಯನ್ನು ನಿರೀಕ್ಷಿಸಿ.
01122017a ವೇತ್ಸ್ಯಾಮೀಷೀಕಯಾ ವೀಟಾಂ ತಾಮಿಷೀಕಾಮಥಾನ್ಯಯಾ|
01122017c ತಾಮನ್ಯಯಾ ಸಮಾಯೋಗೋ ವೀಟಾಯಾ ಗ್ರಹಣೇ ಮಮ||
ನಾನು ವೀಟೆಯನ್ನು ಒಂದು ಹುಲ್ಲುಕಡ್ಡಿಯಿಂದ ಹೊಡೆಯುತ್ತೇನೆ, ಮತ್ತು ಆ ಕಡ್ಡಿಯನ್ನು ಇನ್ನೊಂದು ಕಡ್ಡಿಯಿಂದ ಹೊಡೆಯುತ್ತೇನೆ, ಅದಕ್ಕೆ ಮತ್ತೊಂದನ್ನು ಸೇರಿಸುತ್ತೇನೆ. ಈ ರೀತಿ ಒಂದಕ್ಕೆ ಇನ್ನೊಂದನ್ನು ಸೇರಿಸಿ ವೀಟೆಯನ್ನು ಮೇಲೆತ್ತುತ್ತೇನೆ.”
01122018a ತದಪಶ್ಯನ್ಕುಮಾರಾಸ್ತೇ ವಿಸ್ಮಯೋತ್ಫುಲ್ಲಲೋಚನಾಃ|
01122018c ಅವೇಷ್ಕ್ಯ ಚೋದ್ಧೃತಾಂ ವೀಟಾಂ ವೀಟಾವೇದ್ಧಾರಮಬ್ರುವನ್||
ವಿಸ್ಮಿತ ಕುಮಾರರು ತೆರೆದ ಕಣ್ಣುಗಳಿಂದ ಅವನು ವೀಟೆಯನ್ನು ಹೊರ ತೆಗೆದುದನ್ನು ನೋಡಿ, ವೀಟೆಯನ್ನು ಹೊರೆತೆಗೆದವನಿಗೆ ಹೇಳಿದರು:
01122019a ಅಭಿವಾದಯಾಮಹೇ ಬ್ರಹ್ಮನ್ನೈತದನ್ಯೇಷು ವಿದ್ಯತೇ|
01122019c ಕೋಽಸಿ ಕಂ ತ್ವಾಭಿಜಾನೀಮೋ ವಯಂ ಕಿಂ ಕರವಾಮಹೇ||
“ಬ್ರಾಹ್ಮಣ! ನಾವು ನಿನಗೆ ನಮಸ್ಕರಿಸುತ್ತೇವೆ. ಬೇರೆ ಯಾರಿಗೂ ಇದು ತಿಳಿಯದು. ನೀನು ಯಾರು? ನಿನ್ನನ್ನು ನಾವು ಯಾರೆಂದು ತಿಳಿಯಬೇಕು? ಮತ್ತು ನಾವು ನಿನಗೆ ಏನು ಮಾಡಬಹುದು?”
01122020 ದ್ರೋಣ ಉವಾಚ|
01122020a ಆಚಕ್ಷಧ್ವಂ ಚ ಭೀಷ್ಮಾಯ ರೂಪೇಣ ಚ ಗುಣೈಶ್ಚ ಮಾಂ|
01122020c ಸ ಏವ ಸುಮಹಾಬುದ್ಧಿಃ ಸಾಂಪ್ರತಂ ಪ್ರತಿಪತ್ಸ್ಯತೇ||
ದ್ರೋಣನು ಹೇಳಿದನು: “ಹಾಗಿದ್ದರೆ ನನ್ನ ರೂಪ-ಗುಣಗಳನ್ನು ಭೀಷ್ಮನಿಗೆ ಹೇಳಿ. ಆ ಮಹಾಬುದ್ಧಿವಂತನಿಗೆ ಏನು ಮಾಡಬೇಕೆಂದು ತಿಳಿಯುತ್ತದೆ.””
01122021 ವೈಶಂಪಾಯನ ಉವಾಚ|
01122021a ತಥೇತ್ಯುಕ್ತ್ವಾ ತು ತೇ ಸರ್ವೇ ಭೀಷ್ಮಮೂಚುಃ ಪಿತಾಮಹಂ|
01122021c ಬ್ರಾಹ್ಮಣಸ್ಯ ವಚಸ್ತಥ್ಯಂ ತಚ್ಚ ಕರ್ಮವಿಶೇಷವತ್||
ವೈಶಂಪಾಯನನು ಹೇಳಿದನು: “ಹಾಗೆಯೇ ಆಗಲಿ ಎಂದು ಅವರೆಲ್ಲರೂ ಪಿತಾಮಹ ಭೀಷ್ಮನಿಗೆ ಬ್ರಾಹ್ಮಣನ ಕರ್ಮವಿಶೇಷತೆಯನ್ನು ಯಥಾವತ್ತಾಗಿ ವರದಿ ಮಾಡಿದರು.
01122022a ಭೀಷ್ಮಃ ಶ್ರುತ್ವಾ ಕುಮಾರಾಣಾಂ ದ್ರೋಣಂ ತಂ ಪ್ರತ್ಯಜಾನತ|
01122022c ಯುಕ್ತರೂಪಃ ಸ ಹಿ ಗುರುರಿತ್ಯೇವಮನುಚಿಂತ್ಯ ಚ||
ಕುಮಾರರನ್ನು ಕೇಳಿದ ಭೀಷ್ಮನು ಅವನು ದ್ರೋಣನೆಂದು ಗುರುತಿಸಿದನು. ಅವನು ಗುರುವಿಗೆ ಯುಕ್ತರೂಪ ಎಂದು ಯೋಚಿಸಿದನು.
01122023a ಅಥೈನಮಾನೀಯ ತದಾ ಸ್ವಯಮೇವ ಸುಸತ್ಕೃತಂ|
01122023c ಪರಿಪಪ್ರಚ್ಛ ನಿಪುಣಂ ಭೀಷ್ಮಃ ಶಸ್ತ್ರಭೃತಾಂ ವರಃ|
01122023e ಹೇತುಮಾಗಮನೇ ತಸ್ಯ ದ್ರೋಣಃ ಸರ್ವಂ ನ್ಯವೇದಯತ್||
ಸ್ವಯಂ ತಾನೇ ಅವನನ್ನು ಬರಮಾಡಿಸಿಕೊಂಡು ಸತ್ಕರಿಸಿ ಶಸ್ತ್ರಭೃತರಲ್ಲಿ ಶ್ರೇಷ್ಠ ನಿಪುಣ ಭೀಷ್ಮನು ವಿವರವಾಗಿ ಪ್ರಶ್ನಿಸಿದನು. ದ್ರೋಣನು ಅವನು ಇಲ್ಲಿಗೆ ಬರುವುದರ ಕಾರಣ ಸರ್ವವನ್ನೂ ನಿವೇದಿಸಿದನು.
01122024a ಮಹರ್ಷೇರಗ್ನಿವೇಶ್ಯಸ್ಯ ಸಕಾಶಮಹಮಚ್ಯುತ|
01122024c ಅಸ್ತ್ರಾರ್ಥಮಗಮಂ ಪೂರ್ವಂ ಧನುರ್ವೇದಜಿಘೃಕ್ಷಯಾ||
“ಹಿಂದೆ ನಾನು ಅಸ್ತ್ರಾರ್ಥ ಆಗಮ ಮತ್ತು ಧನುರ್ವೇದವನ್ನು ಕಲಿಯಲು ಮಹರ್ಷಿ ಅಗ್ನಿವೇಶ್ಯನಲ್ಲಿಗೆ ಹೋಗುತ್ತಿದ್ದೆನು.
01122025a ಬ್ರಹ್ಮಚಾರೀ ವಿನೀತಾತ್ಮಾ ಜಟಿಲೋ ಬಹುಲಾಃ ಸಮಾಃ|
01122025c ಅವಸಂ ತತ್ರ ಸುಚಿರಂ ಧನುರ್ವೇದಚಿಕೀರ್ಷಯಾ||
ಧನುರ್ವೇದವನ್ನು ನನ್ನದಾಗಿಸಿಕೊಳ್ಳಲು ನಾನು ಅಲ್ಲಿ ಬ್ರಹ್ಮಚಾರಿಯಾಗಿ ವಿನೀತಾತ್ಮನಾಗಿ ಜಟೆಧರಿಸಿ ಬಹಳ ವರ್ಷಗಳು ವಾಸಿಸಿದೆ.
01122026a ಪಾಂಚಾಲರಾಜಪುತ್ರಸ್ತು ಯಜ್ಞಸೇನೋ ಮಹಾಬಲಃ|
01122026c ಮಯಾ ಸಹಾಕರೋದ್ವಿದ್ಯಾಂ ಗುರೋಃ ಶ್ರಾಮ್ಯನ್ಸಮಾಹಿತಃ||
ಪಾಂಚಾಲರಾಜಪುತ್ರ ಮಹಾಬಲಿ ಯಜ್ಞಸೇನನೂ ನನ್ನ ಜೊತೆಯಲ್ಲಿಯೇ ಅದೇ ಗುರುವಡಿಯಲ್ಲಿ ಬಹಳ ಶ್ರಮಪಟ್ಟು ವಿದ್ಯೆಯನ್ನು ಕಲಿಯುತ್ತಿದ್ದನು.
01122027a ಸ ಮೇ ತತ್ರ ಸಖಾ ಚಾಸೀದುಪಕಾರೀ ಪ್ರಿಯಶ್ಚ ಮೇ|
01122027c ತೇನಾಹಂ ಸಹ ಸಂಗಮ್ಯ ರತವಾನ್ಸುಚಿರಂ ಬತ|
01122027e ಬಾಲ್ಯಾತ್ಪ್ರಭೃತಿ ಕೌರವ್ಯ ಸಹಾಧ್ಯಯನಮೇವ ಚ||
ಅಲ್ಲಿ ಅವನು ನನ್ನ ಸಖನಾಗಿದ್ದನು. ನನ್ನ ಉಪಕಾರಿ ಮತ್ತು ಪ್ರಿಯನಾಗಿದ್ದನು. ನಾನು ಅವನ ಸಾಂಗತ್ಯವನ್ನು ಬಯಸುತ್ತಿದ್ದೆ. ಕೌರವ್ಯ! ಬಾಲ್ಯದಿಂದ ಬಹಳಷ್ಟು ಕಾಲ ನಾವು ಒಟ್ಟಿಗೇ ಅಧ್ಯಯನ ಮಾಡಿದೆವು.
01122028a ಸ ಸಮಾಸಾದ್ಯ ಮಾಂ ತತ್ರ ಪ್ರಿಯಕಾರೀ ಪ್ರಿಯಂವದಃ|
01122028c ಅಬ್ರವೀದಿತಿ ಮಾಂ ಭೀಷ್ಮ ವಚನಂ ಪ್ರೀತಿವರ್ಧನಂ||
01122029a ಅಹಂ ಪ್ರಿಯತಮಃ ಪುತ್ರಃ ಪಿತುರ್ದ್ರೋಣ ಮಹಾತ್ಮನಃ|
01122029c ಅಭಿಷೇಕ್ಷ್ಯತಿ ಮಾಂ ರಾಜ್ಯೇ ಸ ಪಾಂಚಾಲ್ಯೋ ಯದಾ ತದಾ||
01122030a ತ್ವದ್ಭೋಜ್ಯಂ ಭವಿತಾ ರಾಜ್ಯಂ ಸಖೇ ಸತ್ಯೇನ ತೇ ಶಪೇ|
01122030c ಮಮ ಭೋಗಾಶ್ಚ ವಿತ್ತಂ ಚ ತ್ವದಧೀನಂ ಸುಖಾನಿ ಚ||
ಅವನು ನನ್ನ ಬಳಿ ಬಂದು ನನಗೆ ಪ್ರಿಯವಾದುದನ್ನು ಮಾಡುತ್ತಿದ್ದನು ಮತ್ತು ನನಗೆ ಪ್ರಿಯವಾದುದನ್ನು ಹೇಳುತ್ತಿದ್ದನು. ಭೀಷ್ಮ! ನನಗೆ ಅವನಲ್ಲಿ ಪ್ರೀತಿಯನ್ನು ಬೆಳೆಸುವಂತಹ ಈ ಮಾತುಗಳನ್ನು ಆಡುತ್ತಿದ್ದನು: “ದ್ರೋಣ! ನಾನು ನನ್ನ ಮಹಾತ್ಮ ತಂದೆಯ ಪ್ರೀತಿಯ ಮಗ. ಯಾವಾಗ ಪಾಂಚಾಲನು ನನ್ನನ್ನು ರಾಜ್ಯದ ರಾಜನನ್ನಾಗಿ ಮಾಡುತ್ತಾನೋ ಆಗ ನನ್ನ ರಾಜ್ಯವು ಅನುಭವಿಸಲು ನಿನ್ನದಾಗುತ್ತದೆ. ಸಖ! ನಾನು ಸತ್ಯವನ್ನು ಹೇಳುತ್ತಿದ್ದೇನೆ. ನನ್ನ ಭೋಗ-ಸುಖ ಮತ್ತು ಸಂಪತ್ತು ಎಲ್ಲವೂ ನಿನ್ನ ಅಧೀನವಾಗುತ್ತವೆ.”
01122031a ಏವಮುಕ್ತಃ ಪ್ರವವ್ರಾಜ ಕೃತಾಸ್ತ್ರೋಽಹಂ ಧನೇಪ್ಸಯಾ|
01122031c ಅಭಿಷಿಕ್ತಂ ಚ ಶ್ರುತ್ವೈನಂ ಕೃತಾರ್ಥೋಽಸ್ಮೀತಿ ಚಿಂತಯನ್||
01122032a ಪ್ರಿಯಂ ಸಖಾಯಂ ಸುಪ್ರೀತೋ ರಾಜ್ಯಸ್ಥಂ ಪುನರಾವ್ರಜಂ|
01122032c ಸಂಸ್ಮರನ್ಸಂಗಮಂ ಚೈವ ವಚನಂ ಚೈವ ತಸ್ಯ ತತ್||
01122033a ತತೋ ದ್ರುಪದಮಾಗಮ್ಯ ಸಖಿಪೂರ್ವಮಹಂ ಪ್ರಭೋ|
01122033c ಅಬ್ರುವಂ ಪುರುಷವ್ಯಾಘ್ರ ಸಖಾಯಂ ವಿದ್ಧಿ ಮಾಮಿತಿ||
ಆಗ ಅವನು ನನಗೆ ಈ ರೀತಿ ಹೇಳಿದ್ದನು. ಕೃತಾಸ್ತ್ರನಾದ ಬಳಿಕ ಧನವನ್ನು ಅರಸುತ್ತಾ ನಾನು ಹೊರಟೆ. ಅವನು ಅಭಿಷಿಕ್ತನಾಗಿದ್ದಾನೆ ಎಂದು ಕೇಳಿ ಕೃತಾರ್ಥನಾದೆ ಎಂದು ಯೋಚಿಸಿದೆ. ನಮ್ಮ ಒಗ್ಗಟ್ಟು ಮತ್ತು ಅವನ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಸುಪ್ರೀತನಾಗಿ ಪ್ರಿಯ ಸಖನ ರಾಜ್ಯಕ್ಕೆ ಹೋದೆ. ಪ್ರಭು! ನನ್ನ ಹಳೆಯ ಸಖ ದ್ರುಪದನಲ್ಲಿಗೆ ಹೋಗಿ ಹೇಳಿದೆ: “ಪುರುಷವ್ಯಾಘ್ರ! ನನ್ನನ್ನು ನಿನ್ನ ಸಖನೆಂದು ತಿಳಿ.”
01122034a ಉಪಸ್ಥಿತಂ ತು ದ್ರುಪದಃ ಸಖಿವಚ್ಚಾಭಿಸಂಗತಂ|
01122034c ಸ ಮಾಂ ನಿರಾಕಾರಮಿವ ಪ್ರಹಸನ್ನಿದಮಬ್ರವೀತ್||
ಈ ರೀತಿ ನಾನು ಸಖನೆಂದು ಹೇಳಿ ಅವನ ಎದಿರು ಹೋದಾಗ ದ್ರುಪದನು ನನ್ನನ್ನು ನಿರಾಕರಿಸುವಂತೆ ನಗುತ್ತಾ ಹೇಳಿದನು:
01122035a ಅಕೃತೇಯಂ ತವ ಪ್ರಜ್ಞಾ ಬ್ರಹ್ಮನ್ನಾತಿಸಮಂಜಸೀ|
01122035c ಯದಾತ್ಥ ಮಾಂ ತ್ವಂ ಪ್ರಸಭಂ ಸಖಾ ತೇಽಹಮಿತಿ ದ್ವಿಜ||
“ತಕ್ಷಣವೇ ನಾನು ನಿನ್ನ ಸಖ ಎಂದು ನನಗೆ ಹೇಳುತ್ತಿದ್ದೀಯಲ್ಲ! ದ್ವಿಜ! ಬ್ರಾಹ್ಮಣ! ನಿನ್ನ ಪ್ರಜ್ಞೆಯು ಸರಿಯಿಲ್ಲ ಅಥವಾ ನಿನಗೆ ತಿಳುವಳಿಕೆಯು ಅಷ್ಟಿಲ್ಲ.
01122036a ನ ಹಿ ರಾಜ್ಞಾಮುದೀರ್ಣಾನಾಮೇವಂಭೂತೈರ್ನರೈಃ ಕ್ವ ಚಿತ್|
01122036c ಸಖ್ಯಂ ಭವತಿ ಮಂದಾತ್ಮಂಶ್ರಿಯಾ ಹೀನೈರ್ಧನಚ್ಯುತೈಃ||
ಯಾವ ಉದೀರ್ಣ ರಾಜನೂ ನಿನ್ನಂತಹ ಮಂದಾತ್ಮ, ಅಶ್ರಿಯ ಮತ್ತು ಧನರಹಿತನೊಡನೆ ಸಖ್ಯ ಮಾಡುವುದಿಲ್ಲ.
01122037a ನಾಶ್ರೋತ್ರಿಯಃ ಶ್ರೋತ್ರಿಯಸ್ಯ ನಾರಥೀ ರಥಿನಃ ಸಖಾ|
01122037c ನಾರಾಜಾ ಪಾರ್ಥಿವಸ್ಯಾಪಿ ಸಖಿಪೂರ್ವಂ ಕಿಮಿಷ್ಯತೇ||
ಅಶ್ರೋತ್ರಿಯು ಶ್ರೋತ್ರಿಯೊಡನೆ ಸಖ್ಯವನ್ನು ಮಾಡುವುದಿಲ್ಲ. ಹಾಗೆಯೇ ರಥಿಯು ಅರಥಿಯೊಡನೆ ಅಥವಾ ರಾಜನು ಅರಾಜನೊಂದಿಗೆ ಸಖ್ಯವನ್ನು ಮಾಡುವುದಿಲ್ಲ. ಹಳೆಯ ಸಖ್ಯವು ಯಾರಿಗೆ ಬೇಕು?”
01122038a ದ್ರುಪದೇನೈವಮುಕ್ತೋಽಹಂ ಮನ್ಯುನಾಭಿಪರಿಪ್ಲುತಃ|
01122038c ಅಭ್ಯಾಗಚ್ಛಂ ಕುರೂನ್ಭೀಷ್ಮ ಶಿಷ್ಯೈರರ್ಥೀ ಗುಣಾನ್ವಿತೈಃ||
ದ್ರುಪದನ ಈ ಮಾತುಗಳಿಂದ ನನಗೆ ಸಿಟ್ಟು ಉಕ್ಕಿ ಬಂದಿತು. ಭೀಷ್ಮ! ಗುಣಾನ್ವಿತ ಶಿಷ್ಯರನ್ನು ಹುಡುಕಿಕೊಂಡು ನಾನು ಕುರುಗಳಲ್ಲಿಗೆ ಬಂದೆ.”
01122039a ಪ್ರತಿಜಗ್ರಾಹ ತಂ ಭೀಷ್ಮೋ ಗುರುಂ ಪಾಂಡುಸುತೈಃ ಸಹ|
01122039c ಪೌತ್ರಾನಾದಾಯ ತಾನ್ಸರ್ವಾನ್ವಸೂನಿ ವಿವಿಧಾನಿ ಚ||
01122040a ಶಿಷ್ಯಾ ಇತಿ ದದೌ ರಾಜನ್ದ್ರೋಣಾಯ ವಿಧಿಪೂರ್ವಕಂ|
ಭೀಷ್ಮ ಮತ್ತು ಪಾಂಡುಪುತ್ರರೂ ಸೇರಿ ಅವನನ್ನು ಗುರುವೆಂದು ಸ್ವೀಕರಿಸಿದರು. ರಾಜನ್! ತನ್ನ ಸರ್ವ ಮೊಮ್ಮಕ್ಕಳನ್ನೂ ವಿವಿಧ ಸಂಪತ್ತುಗಳನ್ನೂ ಅವನಲ್ಲಿತ್ತು “ಇಕೋ ನಿನ್ನ ಶಿಷ್ಯರು!” ಎಂದು ದ್ರೋಣನಿಗೆ ವಿಧಿಪೂರ್ವಕ ಅರ್ಪಿಸಿದನು.
01122040c ಸ ಚ ಶಿಷ್ಯಾನ್ಮಹೇಷ್ವಾಸಃ ಪ್ರತಿಜಗ್ರಾಹ ಕೌರವಾನ್||
01122041a ಪ್ರತಿಗೃಹ್ಯ ಚ ತಾನ್ಸರ್ವಾನ್ದ್ರೋಣೋ ವಚನಮಬ್ರವೀತ್|
01122041c ರಹಸ್ಯೇಕಃ ಪ್ರತೀತಾತ್ಮಾ ಕೃತೋಪಸದನಾಂಸ್ತದಾ||
ಆ ಮಹೇಷ್ವಾಸನು ಕೌರವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದನು. ಅವರೆಲ್ಲರನ್ನೂ ಸ್ವೀಕರಿಸಿದ ದ್ರೋಣನು ಅವರೆಲ್ಲರೂ ಏಕಾಂತದಲ್ಲಿ ಅವನ ಪದತಳದಲ್ಲಿ ಕುಳಿತಿರುವಾಗ ರಹಸ್ಯದ ಈ ಮಾತುಗಳನ್ನಾಡಿದನು:
01122042a ಕಾರ್ಯಂ ಮೇ ಕಾಂಕ್ಷಿತಂ ಕಿಂ ಚಿದ್ಧೃದಿ ಸಂಪರಿವರ್ತತೇ|
01122042c ಕೃತಾಸ್ತ್ರೈಸ್ತತ್ಪ್ರದೇಯಂ ಮೇ ತದೃತಂ ವದತಾನಘಾಃ||
“ನನ್ನ ಯಾವುದೋ ಒಂದು ಕಾರ್ಯವು ಆಗಬೇಕೆಂಬ ಆಕಾಂಕ್ಷೆಯು ನನ್ನ ಹೃದಯದಲ್ಲಿ ಅಡಗಿದೆ. ಅನಘರೇ! ನೀವು ಕೃತಾಸ್ತ್ರರಾದಾಗ ಅದನ್ನು ನನಗೆ ಮಾಡಿಕೊಡುತ್ತೀರಿ ಎಂದು ವಚನವನ್ನು ಕೊಡಿ.”
01122043a ತಚ್ಛೃತ್ವಾ ಕೌರವೇಯಾಸ್ತೇ ತೂಷ್ಣೀಮಾಸನ್ವಿಶಾಂ ಪತೇ|
01122043c ಅರ್ಜುನಸ್ತು ತತಃ ಸರ್ವಂ ಪ್ರತಿಜಜ್ಞೇ ಪರಂತಪಃ||
ವಿಶಾಂಪತೇ! ಅದನ್ನು ಕೇಳಿದ ಕೌರವರು ಸುಮ್ಮನಿದ್ದರು. ಪರಂತಪ! ಆದರೆ ಅರ್ಜುನನು ಮಾತ್ರ ಅವನಿಗೆ ಪೂರ್ಣ ಭರವಸೆಯನ್ನಿತ್ತನು.
01122044a ತತೋಽರ್ಜುನಂ ಮೂರ್ಧ್ನಿ ತದಾ ಸಮಾಘ್ರಾಯ ಪುನಃ ಪುನಃ|
01122044c ಪ್ರೀತಿಪೂರ್ವಂ ಪರಿಷ್ವಜ್ಯ ಪ್ರರುರೋದ ಮುದಾ ತದಾ||
ಆಗ ಅವನು ಅರ್ಜುನನನ್ನು ಬಿಗಿದಪ್ಪಿ ಪುನಃ ಪುನಃ ಅವನ ನೆತ್ತಿಯನ್ನು ಆಘ್ರಾಣಿಸಿದನು ಮತ್ತು ಪ್ರೀತಿಪೂರ್ವಕ ಸಂತೋಷದ ಕಣ್ಣೀರನ್ನು ಸುರಿಸಿದನು.
01122045a ತತೋ ದ್ರೋಣಃ ಪಾಂಡುಪುತ್ರಾನಸ್ತ್ರಾಣಿ ವಿವಿಧಾನಿ ಚ|
01122045c ಗ್ರಾಹಯಾಮಾಸ ದಿವ್ಯಾನಿ ಮಾನುಷಾಣಿ ಚ ವೀರ್ಯವಾನ್||
ನಂತರ ವೀರ್ಯವಾನ್ ದ್ರೋಣನು ಪಾಂಡುಪುತ್ರರಿಗೆ ದೇವತೆಗಳ ಮತ್ತು ಮನುಷ್ಯರ ವಿವಿಧ ಅಸ್ತ್ರಗಳನ್ನು ನೀಡಿದನು.
01122046a ರಾಜಪುತ್ರಾಸ್ತಥೈವಾನ್ಯೇ ಸಮೇತ್ಯ ಭರತರ್ಷಭ|
01122046c ಅಭಿಜಗ್ಮುಸ್ತತೋ ದ್ರೋಣಮಸ್ತ್ರಾರ್ಥೇ ದ್ವಿಜಸತ್ತಮಂ||
01122046e ವೃಷ್ಣಯಶ್ಚಾಂಧಕಾಶ್ಚೈವ ನಾನಾದೇಶ್ಯಾಶ್ಚ ಪಾರ್ಥಿವಾಃ|
ಭರತರ್ಷಭ! ಅನ್ಯ ರಾಜಪುತ್ರರೂ ಅಲ್ಲಿ ಸೇರಿದ್ದರು. ವೃಷ್ಣಿಗಳು, ಅಂಧಕರು, ಮತ್ತು ನಾನಾ ದೇಶಗಳ ರಾಜರುಗಳು ಎಲ್ಲರೂ ದ್ವಿಜಸತ್ತಮ ದ್ರೋಣನಿಂದ ಅಸ್ತ್ರಗಳನ್ನು ಪಡೆಯಲು ಬಂದಿದ್ದರು.
01122047a ಸೂತಪುತ್ರಶ್ಚ ರಾಧೇಯೋ ಗುರುಂ ದ್ರೋಣಮಿಯಾತ್ತದಾ|
01122047c ಸ್ಪರ್ಧಮಾನಸ್ತು ಪಾರ್ಥೇನ ಸೂತಪುತ್ರೋಽತ್ಯಮರ್ಷಣಃ|
01122047e ದುರ್ಯೋಧನಮುಪಾಶ್ರಿತ್ಯ ಪಂಡವಾನತ್ಯಮನ್ಯತ||
ಸೂತಪುತ್ರ ರಾಧೇಯನೂ ಗುರು ದ್ರೋಣನಲ್ಲಿಗೆ ಬಂದನು. ಅಸೂಯಾಪರ ಸೂತಪುತ್ರನು ಪಾರ್ಥನೊಂದಿಗೆ ಸ್ಪರ್ಧಿಸುತ್ತಿದ್ದನು. ದುರ್ಯೋಧನನ ಬೆಂಬಲವನ್ನು ಪಡೆದು ಪಾಂಡವರನ್ನು ಕೀಳಾಗಿ ಕಾಣುತ್ತಿದ್ದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಭೀಷ್ಮದ್ರೋಣಸಮಾಗಮೇ ದ್ವಾವಿಂಶತ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಭೀಷ್ಮದ್ರೋಣ ಸಮಾಗಮ ಎನ್ನುವ ನೂರಾ ಇಪ್ಪತ್ತೆರಡನೆಯ ಅಧ್ಯಾಯವು.