Adi Parva: Chapter 121

ಆದಿ ಪರ್ವ: ಸಂಭವ ಪರ್ವ

೧೨೧

ದ್ರೋಣ

ಅಪ್ಸರೆ ಘೃತಾಚಿಯನ್ನು ನೋಡಿ ಋಷಿ ಭರದ್ವಾಜನ ರೇತಸ್ಖಲನವಾದು, ಸ್ಖಲಿತ ರೇತವನ್ನು ದ್ರೋಣದಲ್ಲಿರಿಸಲು ಅದರಿಂದ ದ್ರೋಣನ ಜನನ (೧-೮). ಭರದ್ವಾಜನ ಸಖ ಪೃಷತನ ಮಗ ದ್ರುಪದನು ದ್ರೋಣನೊಂದಿಗೆ ಆಟ-ಪಾಠಗಳನ್ನಾಡಿದುದು (೯-೧೦). ದ್ರುಪದನು ರಾಜನಾದುದು, ದ್ರೋಣನು ಕೃಪಿಯನ್ನು ವಿವಾಹವಾದುದು (೧೧-೧೨). ದ್ರೋಣ-ಕೃಪಿಯರಲ್ಲಿ ಅಶ್ವತ್ಥಾಮನ ಜನನ (೧೩-೧೫). ಭಾರ್ಗವ ಪರಶುರಾಮನಿಂದ ದ್ರೋಣನು ದಿವ್ಯಾಸ್ತ್ರಗಳನ್ನು ಪಡೆದುದು (೧೬-೨೩).

01121001 ವೈಶಂಪಾಯನ ಉವಾಚ|

01121001a ವಿಶೇಷಾರ್ಥೀ ತತೋ ಭೀಷ್ಮಃ ಪೌತ್ರಾಣಾಂ ವಿನಯೇಪ್ಸಯಾ|

01121001c ಇಷ್ವಸ್ತ್ರಜ್ಞಾನ್ಪರ್ಯಪೃಚ್ಛದಾಚಾರ್ಯಾನ್ವೀರ್ಯಸಮ್ಮತಾನ್||

01121002a ನಾಲ್ಪಧೀರ್ನಾಮಹಾಭಾಗಸ್ತಥಾನಾನಾಸ್ತ್ರಕೋವಿದಃ|

01121002c ನಾದೇವಸತ್ತ್ವೋ ವಿನಯೇತ್ಕುರೂನಸ್ತ್ರೇ ಮಹಾಬಲಾನ್||

ವೈಶಂಪಾಯನನು ಹೇಳಿದನು: “ಮೊಮ್ಮಕ್ಕಳಲ್ಲಿ ವಿಶೇಷತೆ ಮತ್ತು ವಿನಯತೆಯನ್ನು ಬಯಸಿದ ಭೀಷ್ಮನು ವೀರ್ಯವಂತ ಪ್ರಸಿದ್ಧ ಅಸ್ತ್ರಜ್ಞರ ಕುರಿತು ವಿಚಾರಿಸಿದನು. ಯಾಕೆಂದರೆ ಅಲ್ಪ ಜ್ಞಾನ, ಹಿರಿತನ ಮತ್ತು ಅಸ್ತ್ರಕೋವಿದರಿಂದ ಅಥವಾ ಅಲ್ಪ ದೇವಸತ್ವವುಳ್ಳವರಿಂದ ಮಹಾಬಲಶಾಲಿ ಕುರುಗಳನ್ನು ವಿಧೇಯರನ್ನಾಗಿ ಮಾಡಲಾಗುತ್ತಿರಲಿಲ್ಲ.

01121003a ಮಹರ್ಷಿಸ್ತು ಭರದ್ವಾಜೋ ಹವಿರ್ಧಾನೇ ಚರನ್ಪುರಾ|

01121003c ದದರ್ಶಾಪ್ಸರಸಂ ಸಾಕ್ಷಾದ್ಘೃತಾಚೀಮಾಪ್ಲುತಾಂ ಋಷಿಃ||

ಹಿಂದೆ ಹವಿರ್ಧಾನದಲ್ಲಿ ಸ್ನಾನ ಮಾಡುತ್ತಿದ್ದ ಮಹರ್ಷಿ ಋಷಿ ಭರದ್ವಾಜನು ಸಾಕ್ಷಾತ್ ಅಪ್ಸರೆ ಘೃತಾಚಿಯನ್ನು ಕಂಡನು.

01121004a ತಸ್ಯಾ ವಾಯುಃ ಸಮುದ್ಧೂತೋ ವಸನಂ ವ್ಯಪಕರ್ಷತ|

01121004c ತತೋಽಸ್ಯ ರೇತಶ್ಚಸ್ಕಂದ ತದೃಷಿರ್ದ್ರೋಣ ಆದಧೇ||

ಒಮ್ಮೆಲೇ ಗಾಳಿಯು ಅವಳ ವಸ್ತ್ರವನ್ನು ಹಾರಿಸಿಕೊಂಡು ಹೋಯಿತು. ಅದನ್ನು ನೋಡಿದ ಋಷಿಯ ರೇತಸ್ಖಲನವಾಯಿತು ಮತ್ತು ಅವನು ಅದನ್ನು ಒಂದು ದ್ರೋಣದಲ್ಲಿ ಇರಿಸಿದನು.

01121005a ತಸ್ಮಿನ್ಸಮಭವದ್ದ್ರೋಣಃ ಕಲಶೇ ತಸ್ಯ ಧೀಮತಃ|

01121005c ಅಧ್ಯಗೀಷ್ಟ ಸ ವೇದಾಂಶ್ಚ ವೇದಾಂಗಾನಿ ಚ ಸರ್ವಶಃ||

ಆ ಕಲಶದಲ್ಲಿಯೇ ಅವನಿಗೆ ದ್ರೋಣ ಎಂಬ ಧೀಮಂತ ಮಗನು ಜನಿಸಿದನು ಮತ್ತು ಅವನು ಎಲ್ಲ ವೇದ ವೇದಾಂಗಗಳನ್ನೂ ಕಲಿತುಕೊಂಡನು.

01121006a ಅಗ್ನಿವೇಶ್ಯಂ ಮಹಾಭಾಗಂ ಭರದ್ವಾಜಃ ಪ್ರತಾಪವಾನ್|

01121006c ಪ್ರತ್ಯಪಾದಯದಾಗ್ನೇಯಮಸ್ತ್ರಂ ಧರ್ಮಭೃತಾಂ ವರಃ||

ಧರ್ಮಭೃತರಲ್ಲಿ ಶ್ರೇಷ್ಠ ಪ್ರತಾಪಿ ಭರದ್ವಾಜನು ಮಹಾಭಾಗ ಅಗ್ನಿವೇಶ್ಯನಿಗೆ ಆಗ್ನೇಯಾಸ್ತ್ರವನ್ನು ನೀಡಿದನು.

01121007a ಅಗ್ನಿಷ್ಟುಜ್ಜಾತಃ ಸ ಮುನಿಸ್ತತೋ ಭರತಸತ್ತಮ|

01121007c ಭಾರದ್ವಾಜಂ ತದಾಗ್ನೇಯಂ ಮಹಾಸ್ತ್ರಂ ಪ್ರತ್ಯಪಾದಯತ್||

ಭರತಸತ್ತಮ! ಅಗ್ನಿಷ್ಟುಜ್ಜಾತ ಆ ಮುನಿಯು ಮಹಾಸ್ತ್ರ ಆಗ್ನೇಯವನ್ನು ಭರದ್ವಾಜನ ಮಗನಿಗೆ ನೀಡಿದನು.

01121008a ಭರದ್ವಾಜಸಖಾ ಚಾಸೀತ್ಪೃಷತೋ ನಾಮ ಪಾರ್ಥಿವಃ|

01121008c ತಸ್ಯಾಪಿ ದ್ರುಪದೋ ನಾಮ ತದಾ ಸಮಭವತ್ಸುತಃ||

ಭರದ್ವಾಜನಿಗೆ ಪೃಷತ ಎಂಬ ಹೆಸರಿನ ರಾಜನು ಸಖನಾಗಿದ್ದನು. ಅವನಿಗೆ ದ್ರುಪದ ಎಂಬ ಹೆಸರಿನ ಮಗನಿದ್ದನು.

01121009a ಸ ನಿತ್ಯಮಾಶ್ರಮಂ ಗತ್ವಾ ದ್ರೋಣೇನ ಸಹ ಪಾರ್ಷತಃ|

01121009c ಚಿಕ್ರೀಡಾಧ್ಯಯನಂ ಚೈವ ಚಕಾರ ಕ್ಷತ್ರಿಯರ್ಷಭಃ||

ಆ ಕ್ಷತ್ರಿಯರ್ಷಭ ಪಾರ್ಷತನು ನಿತ್ಯವೂ ಅವನ ಆಶ್ರಮಕ್ಕೆ ಹೋಗಿ ದ್ರೋಣನೊಂದಿಗೆ ಆಟ-ಅಧ್ಯಯನಗಳನ್ನು ಮಾಡುತ್ತಿದ್ದನು.

01121010a ತತೋ ವ್ಯತೀತೇ ಪೃಷತೇ ಸ ರಾಜಾ ದ್ರುಪದೋಽಭವತ್|

01121010c ಪಾಂಚಾಲೇಷು ಮಹಾಬಾಹುರುತ್ತರೇಷು ನರೇಶ್ವರಃ||

ಪೃಷತನ ಅವಸಾನದ ನಂತರ ನರೇಶ್ವರ ಮಹಾಬಾಹು ದ್ರುಪದನು ಉತ್ತರ ಪಾಂಚಾಲದ ರಾಜನಾದನು.

01121011a ಭರದ್ವಾಜೋಽಪಿ ಭಗವಾನಾರುರೋಹ ದಿವಂ ತದಾ|

01121011c ತತಃ ಪಿತೃನಿಯುಕ್ತಾತ್ಮಾ ಪುತ್ರಲೋಭಾನ್ಮಹಾಯಶಾಃ|

01121011e ಶಾರದ್ವತೀಂ ತತೋ ದ್ರೋಣಃ ಕೃಪೀಂ ಭಾರ್ಯಾಮವಿಂದತ||

ಭಗವಾನ್ ಭರದ್ವಾಜನೂ ಸ್ವರ್ಗವಾಸಿಯಾದನು. ತನ್ನ ತಂದೆಯ ಹೇಳಿಕೆಯಂತೆ ಮತ್ತು ಮಹಾಯಶಸ್ವೀ ಪುತ್ರನನ್ನು ಪಡೆಯಲೋಸುಗ ದ್ರೋಣನು ಶಾರದ್ವತೀ ಕೃಪಿಯನ್ನು ಪತ್ನಿಯನ್ನಾಗಿ ಸ್ವೀಕರಿಸಿದನು.

01121012a ಅಗ್ನಿಹೋತ್ರೇ ಚ ಧರ್ಮೇ ಚ ದಮೇ ಚ ಸತತಂ ರತಾ|

01121012c ಅಲಭದ್ಗೌತಮೀ ಪುತ್ರಮಶ್ವತ್ಥಾಮಾನಮೇವ ಚ||

ಸತತವೂ ಧರ್ಮ ಮತ್ತು ದಮದಲ್ಲಿ ನಿರತಳಾಗಿದ್ದ ಅಗ್ನಿಹೋತ್ರಿ ಗೌತಮಿಯು ಅಶ್ವತ್ಥಾಮ ಎಂಬ ಹೆಸರಿನ ಪುತ್ರನನ್ನು ಪಡೆದಳು.

01121013a ಸ ಜಾತಮಾತ್ರೋ ವ್ಯನದದ್ಯಥೈವೋಚ್ಚೈಃಶ್ರವಾ ಹಯಃ|

01121013c ತಚ್ಛೃತ್ವಾಂತರ್ಹಿತಂ ಭೂತಮಂತರಿಕ್ಷಸ್ಥಮಬ್ರವೀತ್||

ಅವನು ಹುಟ್ಟಿದಾಕ್ಷಣವೇ ಉಚ್ಛೈಶ್ರವ ಕುದುರೆಯಂತೆ ರೋದಿಸಿದನು. ಇದನ್ನು ಕೇಳಿದ ಅಂತರಿಕ್ಷದಿಂದ ಅಂತರ್ಹಿತ ಭೂತವೊಂದು ಹೇಳಿತು:

01121014a ಅಶ್ವಸ್ಯೇವಾಸ್ಯ ಯತ್ ಸ್ಥಾಮ ನದತಃ ಪ್ರದಿಶೋ ಗತಂ|

01121014c ಅಶ್ವತ್ಥಾಮೈವ ಬಾಲೋಽಯಂ ತಸ್ಮಾನ್ನಾಮ್ನಾ ಭವಿಷ್ಯತಿ||

“ಇವನ ಅಳುವಿನ ನಾದವು ಅಶ್ವದ ನಾದದಂತೆ ಎಲ್ಲಕಡೆಯೂ ಪಸರಿಸಿದ್ದುದರಿಂದ ಈ ಬಾಲಕನ ಹೆಸರು ಅಶ್ವತ್ಥಾಮ ಎಂದೇ ಆಗಲಿ!”

01121015a ಸುತೇನ ತೇನ ಸುಪ್ರೀತೋ ಭಾರದ್ವಾಜಸ್ತತೋಽಭವತ್|

01121015c ತತ್ರೈವ ಚ ವಸನ್ಧೀಮಾನ್ಧನುರ್ವೇದಪರೋಽಭವತ್||

ಧೀಮಂತ ಭಾರದ್ವಾಜನು ತನ್ನ ಮಗನಿಂದ ಸುಪ್ರೀತನಾದನು ಮತ್ತು ಅಲ್ಲಿಯೇ ಇದ್ದುಕೊಂಡು ಧನುರ್ವೇದಪಾರಂಗತನಾದನು.

01121016a ಸ ಶುಶ್ರಾವ ಮಹಾತ್ಮಾನಂ ಜಾಮದಗ್ನ್ಯಂ ಪರಂತಪಂ|

01121016c ಬ್ರಾಹ್ಮಣೇಭ್ಯಸ್ತದಾ ರಾಜನ್ದಿತ್ಸಂತಂ ವಸು ಸರ್ವಶಃ||

ರಾಜನ್! ಮಹಾತ್ಮ ಪರಂತಪಸ್ವಿ ಜಾಮದಗ್ನ್ಯನು ತನ್ನ ಎಲ್ಲ ಸಂಪತ್ತನ್ನೂ ಬ್ರಾಹ್ಮಣರಿಗೆ ಕೊಡುತ್ತಿದ್ದಾನೆ ಎಂದು ಅವನು ಕೇಳಿದನು.

01121017a ವನಂ ತು ಪ್ರಸ್ಥಿತಂ ರಾಮಂ ಭಾರದ್ವಾಜಸ್ತದಾಬ್ರವೀತ್|

01121017c ಆಗತಂ ವಿತ್ತಕಾಮಂ ಮಾಂ ವಿದ್ಧಿ ದ್ರೋಣಂ ದ್ವಿಜರ್ಷಭಂ||

ವನಕ್ಕೆ ಹೊರಟಿದ್ದ ರಾಮನಿಗೆ ಭಾರದ್ವಾಜನು ಹೇಳಿದನು: “ದ್ವಿಜರ್ಷಭ! ನಾನು ದ್ರೋಣ. ಸಂಪತ್ತನ್ನು ಬಯಸಿ ನಿನ್ನಲ್ಲಿಗೆ ಬಂದಿದ್ದೇನೆ.”

01121018 ರಾಮ ಉವಾಚ|

01121018a ಹಿರಣ್ಯಂ ಮಮ ಯಚ್ಚಾನ್ಯದ್ವಸು ಕಿಂ ಚನ ವಿದ್ಯತೇ|

01121018c ಬ್ರಾಹ್ಮಣೇಭ್ಯೋ ಮಯಾ ದತ್ತಂ ಸರ್ವಮೇವ ತಪೋಧನ||

ರಾಮನು ಹೇಳಿದನು: “ತಪೋಧನ! ನನ್ನಲ್ಲಿರುವ ಹಿರಣ್ಯ ಮತ್ತು ಇತರ ಸಂಪತ್ತು ಎಲ್ಲವನ್ನೂ ಬ್ರಾಹ್ಮಣರಿಗೆ ಕೊಟ್ಟುಬಿಟ್ಟಿದ್ದೇನೆ.

01121019a ತಥೈವೇಯಂ ಧರಾ ದೇವೀ ಸಾಗರಾಂತಾ ಸಪತ್ತನಾ|

01121019c ಕಶ್ಯಪಾಯ ಮಯಾ ದತ್ತಾ ಕೃತ್ಸ್ನಾ ನಗರಮಾಲಿನೀ||

ಇದೇ ರೀತಿ ಸಾಗರಗಳಿಂದ ಸುತ್ತುವರೆಯಲ್ಪಟ್ಟ ಈ ನಗರಮಾಲಿನೀ ದೇವಿ ಧರಿತ್ರಿ ಸರ್ವವನ್ನೂ ಕಶ್ಯಪನಿಗೆ ಕೊಟ್ಟುಬಿಟ್ಟಿದ್ದೇನೆ.

01121020a ಶರೀರಮಾತ್ರಮೇವಾದ್ಯ ಮಯೇದಮವಶೇಷಿತಂ|

01121020c ಅಸ್ತ್ರಾಣಿ ಚ ಮಹಾರ್ಹಾಣಿ ಶಸ್ತ್ರಾಣಿ ವಿವಿಧಾನಿ ಚ|

01121020e ವೃಣೀಷ್ವ ಕಿಂ ಪ್ರಯಚ್ಛಾಮಿ ತುಭ್ಯಂ ದ್ರೋಣ ವದಾಶು ತತ್||

ಈಗ ನನ್ನಲ್ಲಿ ಈ ಶರೀರ, ಮಹಾ ಅಸ್ತ್ರಗಳು, ವಿವಿಧ ಶಸ್ತ್ರಗಳು ಮಾತ್ರ ನನ್ನದಾಗಿ ಉಳಿದುಕೊಂಡಿವೆ. ದ್ರೋಣ! ಇವುಗಳಲ್ಲಿ ಯಾವುದನ್ನು ನೀನು ಕೇಳುತ್ತೀಯೆ, ತಕ್ಷಣ ಕೇಳು.”

01121021 ದ್ರೋಣ ಉವಾಚ|

01121021a ಅಸ್ತ್ರಾಣಿ ಮೇ ಸಮಗ್ರಾಣಿ ಸಸಂಹಾರಾಣಿ ಭಾರ್ಗವ|

01121021c ಸಪ್ರಯೋಗರಹಸ್ಯಾನಿ ದಾತುಮರ್ಹಸ್ಯಶೇಷತಃ||

ದ್ರೋಣನು ಹೇಳಿದನು: “ಭಾರ್ಗವ! ನಿನ್ನಲ್ಲಿರುವ ಎಲ್ಲ ಅಸ್ತ್ರ ಶಸ್ತ್ರಗಳನ್ನೂ ಅವುಗಳನ್ನು ಬಳಸುವ ರಹಸ್ಯಗಳ ಜೊತೆ ಒಂದನ್ನೂ ಬಿಡದ ಹಾಗೆ ನನಗೆ ಕೊಡು.””

01121022 ವೈಶಂಪಾಯನ ಉವಾಚ|

01121022a ತಥೇತ್ಯುಕ್ತ್ವಾ ತತಸ್ತಸ್ಮೈ ಪ್ರಾದಾದಸ್ತ್ರಾಣಿ ಭಾರ್ಗವಃ|

01121022c ಸರಹಸ್ಯವ್ರತಂ ಚೈವ ಧನುರ್ವೇದಮಶೇಷತಃ||

ವೈಶಂಪಾಯನನು ಹೇಳಿದನು: “ಹಾಗೆಯೇ ಆಗಲೆಂದು ಭಾರ್ಗವನು ಅವನಿಗೆ ಅವುಗಳನ್ನು ಬಳಸುವ ರಹಸ್ಯಗಳ ಜೊತೆಗೆ ಅಸ್ತ್ರಗಳನ್ನು ಮತ್ತು ಸಂಪೂರ್ಣ ಧನುರ್ವೇದವನ್ನು ಇತ್ತನು.

01121023a ಪ್ರತಿಗೃಹ್ಯ ತು ತತ್ಸರ್ವಂ ಕೃತಾಸ್ತ್ರೋ ದ್ವಿಜಸತ್ತಮಃ|

01121023c ಪ್ರಿಯಂ ಸಖಾಯಂ ಸುಪ್ರೀತೋ ಜಗಾಮ ದ್ರುಪದಂ ಪ್ರತಿ||

ಅವೆಲ್ಲವನ್ನೂ ಸ್ವೀಕರಿಸಿ ಕೃತಾಸ್ತ್ರನಾದ ದ್ವಿಜಸತ್ತಮನು ಸುಪ್ರೀತನಾಗಿ ತನ್ನ ಪ್ರಿಯ ಸಖ ದ್ರುಪದನಲ್ಲಿಗೆ ಹೋದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ದ್ರೋಣಸ್ಯ ಭಾರ್ಗವಾದಸ್ತ್ರಪ್ರಾಪ್ತೌ ಏಕವಿಂಶತ್ಯಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವಪರ್ವದಲ್ಲಿ ದ್ರೋಣನಿಗೆ ಭಾರ್ಗವನಿಂದ ಅಸ್ತ್ರಪ್ರಾಪ್ತಿ ಎನ್ನುವ ನೂರಾಇಪ್ಪತ್ತೊಂದನೆಯ ಅಧ್ಯಾಯವು.

Related image

Comments are closed.