Adi Parva: Chapter 119

ಆದಿ ಪರ್ವ: ಸಂಭವ ಪರ್ವ

೧೧೯

ವ್ಯಾಸನ ಸಲಹೆಯಂತೆ ಸತ್ಯವತಿಯು ಸೊಸೆಯರೊಂದಿಗೆ ವನವನ್ನು ಸೇರಿದುದು (೧-೧೩). ಕೌರವ-ಪಾಂಡವರ ಮಧ್ಯೆ ಸ್ಪರ್ಧಾ ಮತ್ತು ದ್ರೋಹಭಾವಗಳು ಬೆಳೆದುದು (೧೪-೨೫). ಪ್ರಮಾಣಕೋಟಿಯಲ್ಲಿ ದುರ್ಯೋಧನಾದಿಗಳು ಭೀಮನಿಗೆ ವಿಷವನ್ನು ಉಣ್ಣಿಸಿದುದು (೨೬-೪೩).

01119001 ವೈಶಂಪಾಯನ ಉವಾಚ|

01119001a ತತಃ ಕ್ಷತ್ತಾ ಚ ರಾಜಾ ಚ ಭೀಷ್ಮಶ್ಚ ಸಹ ಬಂಧುಭಿಃ|

01119001c ದದುಃ ಶ್ರಾದ್ಧಂ ತದಾ ಪಾಂಡೋಃ ಸ್ವಧಾಮೃತಮಯಂ ತದಾ||

ವೈಶಂಪಾಯನನು ಹೇಳಿದನು: “ಅನಂತರ ಕ್ಷತ್ತ, ರಾಜ ಮತ್ತು ಭೀಷ್ಮರು ತಮ್ಮ ಬಂಧು ಸಹಿತ ಪಾಂಡುವಿಗೆ ಸ್ವಾಧಾಮೃತಮಯ ಶ್ರಾದ್ಧವನ್ನು ನೀಡಿದರು.

01119002a ಕುರೂಂಶ್ಚ ವಿಪ್ರಮುಖ್ಯಾಂಶ್ಚ ಭೋಜಯಿತ್ವಾ ಸಹಸ್ರಶಃ|

01119002c ರತ್ನೌಘಾನ್ದ್ವಿಜಮುಖ್ಯೇಭ್ಯೋ ದತ್ತ್ವಾ ಗ್ರಾಮವರಾನಪಿ||

ಸಹಸ್ರಾರು ಕುರುಗಳಿಗೆ ಮತ್ತು ವಿಪ್ರಮುಖ್ಯರಿಗೆ ಭೋಜನಗಳನ್ನಿತ್ತರು. ಶ್ರೇಷ್ಠ ಗ್ರಾಮಗಳನ್ನು ರತ್ನದ ರಾಶಿಗಳನ್ನು ದ್ವಿಜಪ್ರಮುಖರಿಗೆ ದಾನವಿತ್ತರು.

01119003a ಕೃತಶೌಚಾಂಸ್ತತಸ್ತಾಂಸ್ತು ಪಾಂಡವಾನ್ಭರತರ್ಷಭಾನ್|

01119003c ಆದಾಯ ವಿವಿಶುಃ ಪೌರಾಃ ಪುರಂ ವಾರಣಸಾಹ್ವಯಂ||

ಪೌರಜನರು ಶುಚಿರ್ಭೂತ ಭರತರ್ಷಭ ಪಾಂಡವರನ್ನು ಕರೆದುಕೊಂಡು ವಾರಣಸಾಹ್ವಯ ಪುರವನ್ನು ಪ್ರವೇಶಿಸಿದರು. 

01119004a ಸತತಂ ಸ್ಮಾನ್ವತಪ್ಯಂತ ತಮೇವ ಭರತರ್ಷಭಂ|

01119004c ಪೌರಜಾನಪದಾಃ ಸರ್ವೇ ಮೃತಂ ಸ್ವಮಿವ ಬಾಂಧವಂ||

ನಗರ ಮತ್ತು ಗ್ರಾಮೀಣ ಪ್ರದೇಶದ ಜನರೆಲ್ಲರೂ ಆ ಭರತರ್ಷಭನಿಗಾಗಿ ಮೃತನಾದವನು ತಮ್ಮದೇ ಬಂಧುವೇನೋ ಎನ್ನುವಂತೆ ಸತತ ಶೋಕಿಸಿದರು.

01119005a ಶ್ರಾದ್ಧಾವಸಾನೇ ತು ತದಾ ದೃಷ್ಟ್ವಾ ತಂ ದುಃಖಿತಂ ಜನಂ|

01119005c ಸಮ್ಮೂಢಾಂ ದುಃಖಶೋಕಾರ್ತಾಂ ವ್ಯಾಸೋ ಮಾತರಮಬ್ರವೀತ್||

ಶ್ರಾದ್ಧ ಕರ್ಮಗಳು ಸಮಾಪ್ತಿಯಾದ ನಂತರ ದುಃಖಿತ ಜನರನ್ನು ನೋಡಿದ ವ್ಯಾಸನು ಸಮ್ಮೂಢಳಾಗಿದ್ದ ದುಃಖಶೋಕಾರ್ತ ತಾಯಿಗೆ ಹೇಳಿದನು:

01119006a ಅತಿಕ್ರಾಂತಸುಖಾಃ ಕಾಲಾಃ ಪ್ರತ್ಯುಪಸ್ಥಿತದಾರುಣಾಃ|

01119006c ಶ್ವಃ ಶ್ವಃ ಪಾಪೀಯದಿವಸಾಃ ಪೃಥಿವೀ ಗತಯೌವನಾ||

“ಸುಖದ ಕಾಲಗಳು ಕಳೆದುಹೋದವು. ದಾರುಣ ಕಾಲಗಳು ಮುಂದೆ ಬರಲಿವೆ. ಯೌವನವನ್ನು ಕಳೆದುಕೊಳ್ಳುತ್ತಿರುವ ಈ ಪೃಥ್ವಿಯಲ್ಲಿ ಮುಂದಿನ ಒಂದೊಂದು ದಿನವೂ ಹಿಂದಿನ ದಿನಕ್ಕಿಂಥ ಪಾಪಿಯಾಗಿರುತ್ತದೆ.

01119007a ಬಹುಮಾಯಾಸಮಾಕೀರ್ಣೋ ನಾನಾದೋಷಸಮಾಕುಲಃ|

01119007c ಲುಪ್ತಧರ್ಮಕ್ರಿಯಾಚಾರೋ ಘೋರಃ ಕಾಲೋ ಭವಿಷ್ಯತಿ||

ಬಹುಮಾಯೆಯಿಂದ ಸಮಾಕೀರ್ಣಗೊಂಡು ನಾನಾತರಹದ ದೋಷಗಳನ್ನೊಡಗೂಡಿ ಧರ್ಮಕ್ರಿಯಾಚಾರಗಳನ್ನು ಕಳೆದುಕೊಂಡ ಘೋರ ಕಾಲವು ಬರುತ್ತದೆ.

01119008a ಗಚ್ಛ ತ್ವಂ ತ್ಯಾಗಮಾಸ್ಥಾಯ ಯುಕ್ತಾ ವಸ ತಪೋವನೇ|

01119008c ಮಾ ದ್ರಕ್ಷ್ಯಸಿ ಕುಲಸ್ಯಾಸ್ಯ ಘೋರಂ ಸಂಕ್ಷಯಮಾತ್ಮನಃ|

ಇವೆಲ್ಲವನ್ನೂ ತ್ಯಜಿಸಿ ಹೊರಟುಹೋಗು. ತಪೋವನದಲ್ಲಿ ವಾಸಿಸು. ಈ ಕುಲದ ಘೋರ ಸಂಕ್ಷಯವನ್ನು ನೀನು ನೋಡುವುದು ಸರಿಯಲ್ಲ.”

01119009a ತಥೇತಿ ಸಮನುಜ್ಞಾಯ ಸಾ ಪ್ರವಿಶ್ಯಾಬ್ರವೀತ್ ಸ್ನುಷಾಂ|

01119009c ಅಂಬಿಕೇ ತವ ಪುತ್ರಸ್ಯ ದುರ್ನಯಾತ್ಕಿಲ ಭಾರತಾಃ|

01119009e ಸಾನುಬಂಧಾ ವಿನಂಕ್ಷ್ಯಂತಿ ಪೌತ್ರಾಶ್ಚೈವೇತಿ ನಃ ಶ್ರುತಂ||

“ಹಾಗೆಯೇ ಆಗಲಿ” ಎಂದು ಒಪ್ಪಿಕೊಂಡು ಅವಳು ಸೊಸೆಯ ಅಂತಃಪುರವನ್ನು ಪ್ರವೇಶಿಸಿ ಹೇಳಿದಳು: “ಅಂಬಿಕಾ! ನಿನ್ನ ಪುತ್ರನ ದುರ್ನೀತಿಯಿಂದ ಭಾರತರೆಲ್ಲರೂ ಅವರ ಮೊಮ್ಮಕ್ಕಳು ಮತ್ತು ಅನುಯಾಯಿಗಳ ಸಹಿತ ವಿನಾಶಹೊಂದುತ್ತಾರೆ ಎಂದು ಕೇಳಿದ್ದೇನೆ.

01119010a ತತ್ಕೌಸಲ್ಯಾಮಿಮಾಮಾರ್ತಾಂ ಪುತ್ರಶೋಕಾಭಿಪೀಡಿತಾಂ|

01119010c ವನಮಾದಾಯ ಭದ್ರಂ ತೇ ಗಚ್ಛಾವೋ ಯದಿ ಮನ್ಯಸೇ||

ಆದುದರಿಂದ, ನಿನ್ನ ಒಪ್ಪಿಗೆಯಿದ್ದರೆ, ನಾನು ಪುತ್ರಶೋಕ ಪೀಡಿತೆ ಕೌಸಲ್ಯೆಯನ್ನು ಕರೆದುಕೊಂಡು ವನವನ್ನು ಸೇರುತ್ತೇನೆ. ನಿನಗೆ ಮಂಗಳವಾಗಲಿ.”

01119011a ತಥೇತ್ಯುಕ್ತೇ ಅಂಬಿಕಯಾ ಭೀಷ್ಮಮಾಮಂತ್ರ್ಯ ಸುವ್ರತಾ|

01119011c ವನಂ ಯಯೌ ಸತ್ಯವತೀ ಸ್ನುಷಾಭ್ಯಾಂ ಸಹ ಭಾರತ||

ಭಾರತ! ಅಂಬಿಕೆಯು ಅನುಮೋದಿಸಲು ಭೀಷ್ಮನನ್ನು ಬೀಳ್ಕೊಂಡು ಆ ಸುವ್ರತೆ ಸತ್ಯವತಿಯು ತನ್ನ ಇಬ್ಬರೂ ಸೊಸೆಯರೊಂದಿಗೆ ವನವನ್ನು ಸೇರಿದಳು.

01119012a ತಾಃ ಸುಘೋರಂ ತಪಃ ಕೃತ್ವಾ ದೇವ್ಯೋ ಭರತಸತ್ತಮ|

01119012c ದೇಹಂ ತ್ಯಕ್ತ್ವಾ ಮಹಾರಾಜ ಗತಿಮಿಷ್ಟಾಂ ಯಯುಸ್ತದಾ||

ಭರತಸತ್ತಮ! ಮಹಾರಾಜ! ಆ ದೇವಿಯರು ಅತಿಘೋರ ತಪಸ್ಸು ಮಾಡಿ ದೇಹವನ್ನು ತ್ಯಜಿಸಿ ಮಹಾಯಾತ್ರೆಯನ್ನು ಕೈಗೊಂಡರು.

01119013a ಅವಾಪ್ನುವಂತ ವೇದೋಕ್ತಾನ್ಸಂಸ್ಕಾರಾನ್ಪಾಂಡವಾಸ್ತದಾ|

01119013c ಅವರ್ಧಂತ ಚ ಭೋಗಾಂಸ್ತೇ ಭುಂಜಾನಾಃ ಪಿತೃವೇಶ್ಮನಿ||

ಪಾಂಡವರು ವೇದೋಕ್ತ ಸಂಸ್ಕಾರಗಳನ್ನು ಪಡೆದು ತಂದೆಯ ಮನೆಯಲ್ಲಿ ಸುಖವನ್ನು ಅನುಭವಿಸುತ್ತಾ ಬೆಳೆದರು.

01119014a ಧಾರ್ತರಾಷ್ಟ್ರೈಶ್ಚ ಸಹಿತಾಃ ಕ್ರೀಡಂತಃ ಪಿತೃವೇಶ್ಮನಿ|

01119014c ಬಾಲಕ್ರೀಡಾಸು ಸರ್ವಾಸು ವಿಶಿಷ್ಟಾಃ ಪಾಂಡವಾಭವನ್||

ತಮ್ಮ ತಂದೆಯ ಮನೆಯಲ್ಲಿ ಒಟ್ಟಿಗೆ ಅಡುತ್ತಿರುವಾಗ ಎಲ್ಲ ಬಾಲಕ್ರೀಡೆಗಳಲ್ಲಿಯೂ ಪಾಂಡವರು ಧೃತರಾಷ್ಟ್ರನ ಮಕ್ಕಳಿಗಿಂತ ವಿಶಿಷ್ಟರಾಗಿದ್ದರು.

01119015a ಜವೇ ಲಕ್ಷ್ಯಾಭಿಹರಣೇ ಭೋಜ್ಯೇ ಪಾಂಸುವಿಕರ್ಷಣೇ|

01119015c ಧಾರ್ತರಾಷ್ಟ್ರಾನ್ಭೀಮಸೇನಃ ಸರ್ವಾನ್ಸ ಪರಿಮರ್ದತಿ||

ಓಡುವುದರಲ್ಲಿ, ಗುರಿಯನ್ನು ಹೊಡೆಯುವುದರಲ್ಲಿ, ಊಟಮಾಡುವುದರಲ್ಲಿ ಮತ್ತು ಎಳೆದಾಡುವುದರಲ್ಲಿ ಭೀಮಸೇನನು ಧೃತರಾಷ್ಟ್ರನ ಎಲ್ಲ ಮಕ್ಕಳನ್ನೂ ಮೀರಿಸಿದನು.

01119016a ಹರ್ಷಾದೇತಾನ್ ಕ್ರೀಡಮಾನಾನ್ ಗೃಹ್ಯ ಕಾಕನಿಲೀಯನೇ|

01119016c ಶಿರಃಸ್ಸು ಚ ನಿಗೃಃಶೈನಾನ್ಯೋಧಯಾಮಾಸ ಪಾಂಡವಃ||

ಪಾಂಡವನು ಆಡುತ್ತಿರುವಾಗ ಖುಶಿಯಲ್ಲಿ ಅವರ ಕೂದಲನ್ನು ಹಿಡಿದು ಮೇಲೆತ್ತಿ ಪರಸ್ಪರರ ತಲೆಗಳು ಹೊಡೆದಾಡುವಂತೆ ಮಾಡುತ್ತಿದ್ದನು.

01119017a ಶತಮೇಕೋತ್ತರಂ ತೇಷಾಂ ಕುಮಾರಾಣಾಂ ಮಹೌಜಸಾಂ|

01119017c ಏಕ ಏವ ವಿಮೃದ್ನಾತಿ ನಾತಿಕೃಚ್ಛ್ರಾದ್ವೃಕೋದರಃ||

ನೂರಾ ಒಂದು ಮಹೌಜಸ ಕುಮಾರರನ್ನೂ ವೃಕೋದರನು ಒಬ್ಬನೇ ಸ್ವಲ್ಪವೂ ಕಷ್ಟವಿಲ್ಲದೇ ಕಾಡುತ್ತಿದ್ದನು.

01119018a ಪಾದೇಷು ಚ ನಿಗೃಃಶೈನಾನ್ವಿನಿಹತ್ಯ ಬಲಾದ್ಬಲೀ|

01119018c ಚಕರ್ಷ ಕ್ರೋಶತೋ ಭೂಮೌ ಘೃಷ್ಟಜಾನುಶಿರೋಕ್ಷಿಕಾನ್||

ಅವರ ಕಾಲುಗಳನ್ನು ಹಿಡಿದು ಜೋರಾಗಿ ನೆಲದ ಧೂಳಿನಲ್ಲಿ ಬೀಳಿಸಿ ಅವರ ತಲೆ ತೊಡೆಗಳು ನೋವಾಗಿ ಕೂಗುವವರೆಗೆ ಆ ಬಲಿಯು ಅವರ ಮೇಲೆ ಬಿದ್ದು ಉರುಳುತ್ತಿದ್ದನು.

01119019a ದಶ ಬಾಲಾಂಜಲೇ ಕ್ರೀಡನ್ಭುಜಾಭ್ಯಾಂ ಪರಿಗೃಹ್ಯ ಸಃ|

01119019c ಆಸ್ತೇ ಸ್ಮ ಸಲಿಲೇ ಮಗ್ನಃ ಪ್ರಮೃತಾಂಶ್ಚ ವಿಮುಂಚತಿ||

ನೀರಿನಲ್ಲಿ ಆಡುತ್ತಿರುವಾಗ ತನ್ನ ಭುಜದಿಂದ ಹತ್ತು ಬಾಲಕರನ್ನು ಹಿಡಿದು ನೀರಿನಲ್ಲಿ ಮುಳುಗಿಸಿ ಅವರು ಇನ್ನೇನು ಮುಳುಗಿಹೋಗುತ್ತಾರೆ ಎನ್ನುವಾಗ ಮೇಲೆ ಎತ್ತುತ್ತಿದ್ದನು.

01119020a ಫಲಾನಿ ವೃಕ್ಷಮಾರುಹ್ಯ ಪ್ರಚಿನ್ವಂತಿ ಚ ತೇ ಯದಾ|

01119020c ತದಾ ಪಾದಪ್ರಹಾರೇಣ ಭೀಮಃ ಕಂಪಯತೇ ದ್ರುಮಂ||

01119021a ಪ್ರಹಾರವೇಗಾಭಿಹತಾದ್ದ್ರುಮಾದ್ವ್ಯಾಘೂರ್ಣಿತಾಸ್ತತಃ|

01119021c ಸಫಲಾಃ ಪ್ರಪತಂತಿ ಸ್ಮ ದ್ರುತಂ ಸ್ರಸ್ತಾಃ ಕುಮಾರಕಾಃ||

ಅವರು ಹಣ್ಣುಗಳನ್ನು ಕೀಳಲು ಮರ ಏರಿರುವಾಗ ಭೀಮನು ಕಾಲಿನಿಂದ ಮರವನ್ನು ಒದೆದು ಅಲುಗಾಡಿಸಿಸುತ್ತಿದ್ದನು. ಹೊಡೆತದ ಬಲಕ್ಕೆ ಅಲುಗಾಡಿದ ಮರದಿಂದ ಹಣ್ಣುಗಳ ಜೊತೆಗೆ ಕುಮಾರರೂ ಕೆಳಗೆ ಬೀಳುತ್ತಿದ್ದರು.

01119022a ನ ತೇ ನಿಯುದ್ಧೇ ನ ಜವೇ ನ ಯೋಗ್ಯಾಸು ಕದಾ ಚನ|

01119022c ಕುಮಾರಾ ಉತ್ತರಂ ಚಕ್ರುಃ ಸ್ಪರ್ಧಮಾನಾ ವೃಕೋದರಂ|

ಹೊಡೆದಾಟದಲ್ಲಿಯಾಗಲೀ ಓಟದಲ್ಲಿಯಾಗಲೀ ಅಥವಾ ಯೋಗದಲ್ಲಿಯಾಗಲೀ ಸ್ಪರ್ಧಿಸುತ್ತಿರುವ ಕುಮಾರರು ವೃಕೋದರನನ್ನು ಎಂದೂ ಮೀರಿಸಲಿಕ್ಕಾಗುತ್ತಿರಲಿಲ್ಲ.

01119023a ಏವಂ ಸ ಧಾರ್ತರಾಷ್ಟ್ರಾಣಾಂ ಸ್ಪರ್ಧಮಾನೋ ವೃಕೋದರಃ|

01119023c ಅಪ್ರಿಯೇಽತಿಷ್ಠದತ್ಯಂತಂ ಬಾಲ್ಯಾನ್ನ ದ್ರೋಹಚೇತಸಾ||

ಈ ರೀತಿ ಸ್ಪರ್ಧಿಸುತ್ತಿರುವ - ಬಾಲ್ಯತನದಿಂದ ದ್ರೋಹಭಾವದಿಂದಲ್ಲ - ವೃಕೋದರನು ಧಾರ್ತರಾಷ್ಟ್ರರಿಗೆ ಬಹಳ ಅಪ್ರಿಯನಾದನು.

01119024a ತತೋ ಬಲಮತಿಖ್ಯಾತಂ ಧಾರ್ತರಾಷ್ಟ್ರಃ ಪ್ರತಾಪವಾನ್|

01119024c ಭೀಮಸೇನಸ್ಯ ತಜ್ಜ್ಞಾತ್ವಾ ದುಷ್ಟಭಾವಮದರ್ಶಯತ್||

ಭೀಮಸೇನನ ಅತಿಖ್ಯಾತ ಬಲವನ್ನು ತಿಳಿದ ಪ್ರತಾಪಿ ಧಾರ್ತರಾಷ್ಟ್ರನು ತನ್ನ ದುಷ್ಟಭಾವವನ್ನು ತೋರಿಸತೊಡಗಿದನು.

01119025a ತಸ್ಯ ಧರ್ಮಾದಾಪೇತಸ್ಯ ಪಾಪಾನಿ ಪರಿಪಶ್ಯತಃ|

01119025c ಮೋಹಾದೈಶ್ವರ್ಯಲೋಭಾಚ್ಚ ಪಾಪಾ ಮತಿರಜಾಯತ||

ಧರ್ಮವನ್ನು ನಿರ್ಲಕ್ಷಿಸಿ ಪಾಪ ಮಾಡುವುದನ್ನೇ ನೋಡುತ್ತಿದ್ದ ಆ ಐಶ್ವರ್ಯ ಲೋಭ ಮೋಹಿತನ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಹುಟ್ಟಿದವು.

01119026a ಅಯಂ ಬಲವತಾಂ ಶ್ರೇಷ್ಠಃ ಕುಂತೀಪುತ್ರೋ ವೃಕೋದರಃ|

01119026c ಮಧ್ಯಮಃ ಪಾಂಡುಪುತ್ರಾಣಾಂ ನಿಕೃತ್ಯಾ ಸಂನಿಹನ್ಯತಾಂ||

“ಬಲವಂತರಲ್ಲಿ ಶ್ರೇಷ್ಠ, ಪಾಂಡುಪುತ್ರರ ಮಧ್ಯಮ ಈ  ಕುಂತಿಪುತ್ರ ವೃಕೋದರನ್ನು ಮೋಸದಿಂದ ಮಾತ್ರ ಕೊಲ್ಲಬಹುದು.

01119027a ಅಥ ತಸ್ಮಾದವರಜಂ ಜ್ಯೇಷ್ಠಂ ಚೈವ ಯುಧಿಷ್ಠಿರಂ|

01119027c ಪ್ರಸಹ್ಯ ಬಂಧನೇ ಬದ್ಧ್ವಾ ಪ್ರಶಾಸಿಷ್ಯೇ ವಸುಂಧರಾಂ||

ನಂತರ ಅವನ ತಮ್ಮಂದಿರನ್ನು ಮತ್ತು ಜ್ಯೇಷ್ಠ ಯುಧಿಷ್ಠಿರನನ್ನು ಬಂಧನದಲ್ಲಿ ಬಂಧಿಸಿ ಈ ವಸುಂಧರೆಯ ಪ್ರಶಾಸನ ಮಾಡುತ್ತೇನೆ.”

01119028a ಏವಂ ಸ ನಿಶ್ಚಯಂ ಪಾಪಃ ಕೃತ್ವಾ ದುರ್ಯೋಧನಸ್ತದಾ|

01119028c ನಿತ್ಯಮೇವಾಂತರಪ್ರೇಕ್ಷೀ ಭೀಮಸ್ಯಾಸೀನ್ ಮಹಾತ್ಮನಃ||

ಈ ರೀತಿ ಪಾಪ ನಿಶ್ಚಯ ಮಾಡಿದ ದುರ್ಯೋಧನನು ಮಹಾತ್ಮ ಭೀಮನನ್ನು ಪಡೆಯಲು ನಿತ್ಯವೂ ಕಾಯುತ್ತಿದ್ದನು.

01119029a ತತೋ ಜಲವಿಹಾರಾರ್ಥಂ ಕಾರಯಾಮಾಸ ಭಾರತ|

01119029c ಚೇಲಕಂಬಲವೇಶ್ಮಾನಿ ವಿಚಿತ್ರಾಣಿ ಮಹಾಂತಿ ಚ||

01119030a ಪ್ರಮಾಣಕೋಟ್ಯಾಮುದ್ದೇಶಂ ಸ್ಥಲಂ ಕಿಂ ಚಿದುಪೇತ್ಯ ಚ|

01119030c ಕ್ರೀಡಾವಸಾನೇ ಸರ್ವೇ ತೇ ಶುಚಿವಸ್ತ್ರಾಃ ಸ್ವಲಂಕೃತಾಃ|

01119030e ಸರ್ವಕಾಮಸಮೃದ್ಧಂ ತದನ್ನಂ ಬುಭುಜಿರೇ ಶನೈಃ||

ಭಾರತ! ಜಲವಿಹಾರಾರ್ಥವಾಗಿ ಪ್ರಮಾಣಕೋಟಿಯ ಬಳಿ ನೀರಿನ ಬಳಿಯಲ್ಲಿಯೇ ಬಣ್ಣ ಬಣ್ಣದ ಕಂಬಳಿಯ ಅತಿ ದೊಡ್ಡ ಡೇರೆಯನ್ನು ನಿರ್ಮಿಸಿದನು. ಆಟವಾಡಿ ಎಲ್ಲರೂ ಶುಭ್ರವಸ್ತ್ರಗಳನ್ನು ಧರಿಸಿ ಅಲಂಕೃತರಾಗಿ ಸರ್ವಕಾಮ ಸಮೃದ್ಧ ಭೋಜನವನ್ನು ಸವಿಯುತ್ತಿದ್ದರು.

01119031a ದಿವಸಾಂತೇ ಪರಿಶ್ರಾಂತಾ ವಿಹೃತ್ಯ ಚ ಕುರೂದ್ವಹಾಃ|

01119031c ವಿಹಾರಾವಸಥೇಷ್ವೇವ ವೀರಾ ವಾಸಮರೋಚಯನ್||

ರಾತ್ರಿಯಾಗುತ್ತಿದ್ದಂತೆ ಪರಿಶ್ರಾಂತ ವೀರ ಕುರುಕುಮಾರರು ಡೇರೆಯ ಹೊರಗೆ ಮಲಗಲು ಬಯಸಿದರು.

01119032a ಖಿನ್ನಸ್ತು ಬಲವಾನ್ಭೀಮೋ ವ್ಯಾಯಾಮಾಭ್ಯಧಿಕಸ್ತದಾ|

01119032c ವಾಹಯಿತ್ವಾ ಕುಮಾರಾಂಸ್ತಾಂಜಲಕ್ರೀಡಾಗತಾನ್ವಿಭುಃ|

01119032e ಪ್ರಮಾಣಕೋಟ್ಯಾಂ ವಾಸಾರ್ಥೀ ಸುಷ್ವಾಪಾರುಹ್ಯ ತತ್ ಸ್ಥಲಂ||

ಕುಮಾರರನ್ನು ನೀರಿನಲ್ಲಿ ಹೊತ್ತು ಆಡಿಸಿದುದರ ಅಧಿಕ ವ್ಯಾಯಾಮದಿಂದ ಬಳಲಿದ ಬಲವಾನ್ ಭೀಮನು ಪುಣ್ಯಕೋಟಿಯ ದಡವನ್ನು ಸೇರಿ, ಮಲಗಲು ಒಂದು ಸ್ಥಳವನ್ನು ಆರಿಸಿ ಅಲ್ಲಿಯೇ ನಿದ್ರಿಸಿದನು.

01119033a ಶೀತಂ ವಾಸಂ ಸಮಾಸಾದ್ಯ ಶ್ರಾಂತೋ ಮದವಿಮೋಹಿತಃ|

01119033c ನಿಶ್ಚೇಷ್ಟಃ ಪಾಂಡವೋ ರಾಜನ್ಸುಷ್ವಾಪ ಮೃತಕಲ್ಪವತ್||

ರಾಜನ್! ಬಿಳಿಯ ವಸ್ತ್ರವನ್ನು ಹೊದೆದು ಬಳಲಿದ್ದ ಆ ಪಾಂಡವನು ಸ್ವಲ್ಪವೂ ಅಲುಗಾಡದೇ ಮೃತಶರೀರದಂತೆ ಮಲಗಿದ್ದನು.

01119034a ತತೋ ಬದ್ಧ್ವಾ ಲತಾಪಾಶೈರ್ಭೀಮಂ ದುರ್ಯೋಧನಃ ಶನೈಃ|

01119034c ಗಂಭೀರಂ ಭೀಮವೇಗಂ ಚ ಸ್ಥಲಾಜ್ಜಲಮಪಾತಯತ್||

ಆಗ ದುರ್ಯೋಧನನು ಅವನನ್ನು ಬಳ್ಳಿಗಳಿಂದ ಮಾಡಿದ ಹಗ್ಗದಿಂದ ನಿಧಾನವಾಗಿ ಕಟ್ಟಿ ದಡದಿಂದ ವೇಗ ಮತ್ತು ಗಂಭೀರವಾಗಿ ಹರಿಯುತ್ತಿದ್ದ ನೀರಿಗೆ ಮೆಲ್ಲನೆ ಉರುಳಿಸಿದನು. 

01119035a ತತಃ ಪ್ರಬುದ್ಧಃ ಕೌಂತೇಯಃ ಸರ್ವಂ ಸಂಚಿದ್ಯ ಬಂಧನಂ|

01119035c ಉದತಿಷ್ತಜ್ಜಲಾದ್ಭೂಯೋ ಭೀಮಃ ಪ್ರಹರತಾಂ ವರಃ||

ಹೋರಾಟಗಾರರಲ್ಲೇ ಶ್ರೇಷ್ಠ ಕೌಂತೇಯ ಭೀಮನು ಎಲ್ಲ ಕಟ್ಟುಗಳನ್ನೂ ಹರಿದು ನೀರಿನಿಂದ ಮೇಲೆದ್ದು ಬಂದನು.

01119036a ಸುಪ್ತಂ ಚಾಪಿ ಪುನಃ ಸರ್ಪೈಸ್ತೀಕ್ಷ್ಣದಂಷ್ಟ್ರೈರ್ಮಹಾವಿಷೈಃ|

01119036c ಕುಪಿತೈರ್ದಂಶಯಾಮಾಸ ಸರ್ವೇಷ್ವೇವಾಂಗಮರ್ಮಸು||

ಇನ್ನೊಮ್ಮೆ ಮಲಗಿದ್ದಾಗ ಮಹಾ ವಿಷದ ತೀಕ್ಷ ಹಲ್ಲುಗಳ ಸರ್ಪಗಳಿಂದ ಅವನ ಮರ್ಮಾಂಗಗಳಲ್ಲಿ ಕಚ್ಚಿಸಿದನು. 

01119037a ದಂಷ್ಟ್ರಾಶ್ಚ ದಂಷ್ಟ್ರಿಣಾಂ ತೇಷಾಂ ಮರ್ಮಸ್ವಪಿ ನಿಪಾತಿತಾಃ|

01119037c ತ್ವಚಂ ನೈವಾಸ್ಯ ಬಿಭಿದುಃ ಸಾರತ್ವಾತ್ಪೃಥುವಕ್ಷಸಃ||

ಆದರೆ ಆ ಸರ್ಪಗಳ ತೀಕ್ಷ್ಣ ದಂಷ್ಟ್ರಗಳು ಅವನ ಮರ್ಮಸ್ಥಾನಗಳನ್ನು ಕಚ್ಚುತ್ತಿದ್ದರೂ ಆ ಪೃಥುವಕ್ಷಸನ ಚರ್ಮವನ್ನೂ ಹರಿದು ಒಳಗೆ ಹೋಗಲು ಆಗಲಿಲ್ಲ.

01119038a ಪ್ರತಿಬುದ್ಧಸ್ತು ಭೀಮಸ್ತಾನ್ಸರ್ವಾನ್ಸರ್ಪಾನಪೋಥಯತ್|

01119038c ಸಾರಥಿಂ ಚಾಸ್ಯ ದಯಿತಮಪಹಸ್ತೇನ ಜಘ್ನಿವಾನ್||

ಎಚ್ಚರವಾದಾಗ ಭೀಮನು ಸರ್ವ ಸರ್ಪಗಳನ್ನೂ ಅರೆದು ಕೊಂದನು ಮತ್ತು ತನ್ನ ಪ್ರಿಯ ಸಾರಥಿಯ ಬೆನ್ನಮೇಲೆ ತನ್ನ ಕೈಯಿಂದ ಹೊಡೆದನು.

01119039a ಭೋಜನೇ ಭೀಮಸೇನಸ್ಯ ಪುನಃ ಪ್ರಾಕ್ಷೇಪಯದ್ವಿಷಂ|

01119039c ಕಾಲಕೂಟಂ ನವಂ ತೀಕ್ಷ್ಣಂ ಸಂಭೃತಂ ಲೋಮಹರ್ಷಣ||

ಪುನಃ ಭೀಮಸೇನನ ಭೋಜನದಲ್ಲಿ ನವಿರೇಳಿಸುವ ತೀಕ್ಷ್ಣ ಕಾಲಕೂಟ ವಿಷವನ್ನು ಸೇರಿಸಿದ್ದನು.

01119040a ವೈಶ್ಯಾಪುತ್ರಸ್ತದಾಚಷ್ಟ ಪಾರ್ಥಾನಾಂ ಹಿತಕಾಮ್ಯಯಾ|

01119040c ತಚ್ಚಾಪಿ ಭುಕ್ತ್ವಾಜರಯದವಿಕಾರೋ ವೃಕೋದರಃ||

ಪಾರ್ಥರ ಹಿತಕಾಮಿ ವೈಶ್ಯಾಪುತ್ರನು ಅವರಿಗೆ ಹೇಳಿದನು. ಆದರೂ ವೃಕೋದರನು ಅದನ್ನು ತಿಂದು ಏನೂ ಕೆಟ್ಟಪರಿಣಾಮವಿಲ್ಲದೆ ಜೀರ್ಣಿಸಿಕೊಂಡನು.

01119041a ವಿಕಾರಂ ನ ಹ್ಯಜನಯತ್ಸುತೀಕ್ಷ್ಣಮಪಿ ತದ್ವಿಷಂ|

01119041c ಭೀಮಸಂಹನನೋ ಭೀಮಸ್ತದಪ್ಯಜರಯತ್ತತಃ||

ಆ ವಿಷವು ಭೀಮಸಂಹನ ಭೀಮನಲ್ಲಿ ಸ್ವಲ್ಪವೂ ವಿಕಾರಗಳನ್ನುಂಟುಮಾಡಲಿಲ್ಲ; ಅದನ್ನು ಸುಮ್ಮನೇ ಜೀರ್ಣಿಸಿಬಿಟ್ಟನು.

01119042a ಏವಂ ದುರ್ಯೋಧನಃ ಕರ್ಣಃ ಶಕುನಿಶ್ಚಾಪಿ ಸೌಬಲಃ|

01119042c ಅನೇಕೈರಭ್ಯುಪಾಯೈಸ್ತಾಂ ಜಿಘಾಂಸಂತಿ ಸ್ಮ ಪಾಂಡವಾನ್||

ಈ ರೀತಿ ದುರ್ಯೋಧನ, ಕರ್ಣ ಮತ್ತು ಸೌಬಲ ಶಕುನಿಯರು ಪಾಂಡವರನ್ನು ಕೊಲ್ಲಲು ಅನೇಕ ಪ್ರಯತ್ನಗಳನ್ನು ಮಾಡಿದರು.

01119043a ಪಾಂಡವಾಶ್ಚಾಪಿ ತತ್ಸರ್ವಂ ಪ್ರತ್ಯಜಾನನ್ನರಿಂದಮಾಃ|

01119043c ಉದ್ಭಾವನಮಕುರ್ವಂತೋ ವಿದುರಸ್ಯ ಮತೇ ಸ್ಥಿತಾಃ||

ಅರಿಂದಮ ಪಾಂಡವರಾದರೂ ಅವೆಲ್ಲವನ್ನೂ ತಿಳಿದಿದ್ದರೂ ವಿದುರನ ಅನುಮತಿಯಂತೆ ಅವುಗಳನ್ನು ಬಹಿರಂಗ ಪಡಿಸಲಿಲ್ಲ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಭೀಮಸೇನರಸಪಾನೇ ಏಕೋನವಿಂಶತ್ಯಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಭೀಮಸೇನರಸಪಾನ ಎನ್ನುವ ನೂರಾಹತ್ತೊಂಭತ್ತನೆಯ ಅಧ್ಯಾಯವು.

Image result for indian motifs

Comments are closed.