Adi Parva: Chapter 118

ಆದಿ ಪರ್ವ: ಸಂಭವ ಪರ್ವ

೧೧೮

ಪಾಂಡು ಮತ್ತು ಮಾದ್ರಿಯರ ಪ್ರೇತಕಾರ್ಯ (೧-೨೨). ರಾಜಪರಿವಾರದ ಮತ್ತು ಪೌರಜನರ ಶೋಕ ಸಂತಾಪ (೨೩-೩೦).

01118001 ಧೃತರಾಷ್ಟ್ರ ಉವಾಚ|

01118001a ಪಾಂಡೋರ್ವಿದುರ ಸರ್ವಾಣಿ ಪ್ರೇತಕಾರ್ಯಾಣಿ ಕಾರಯ|

01118001c ರಾಜವದ್ರಾಜಸಿಂಹಸ್ಯ ಮಾದ್ರ್ಯಾಶ್ಚೈವ ವಿಶೇಷತಃ||

ಧೃತರಾಷ್ಟ್ರನು ಹೇಳಿದನು: “ವಿದುರ! ಪಾಂಡು ಮತ್ತು ಮಾದ್ರಿಯರಿಗೆ ರಾಜಸಿಂಹನಿಗೆ ತಕ್ಕುದಾದ ರಾಜರೀತಿಯ ಸರ್ವ ಪ್ರೇತಕಾರ್ಯಗಳನ್ನೂ ಮಾಡಿಸು.

01118002a ಪಶೂನ್ವಾಸಾಂಸಿ ರತ್ನಾನಿ ಧನಾನಿ ವಿವಿಧಾನಿ ಚ|

01118002c ಪಾಂಡೋಃ ಪ್ರಯಚ್ಛ ಮಾದ್ರ್ಯಾಶ್ಚ ಯೇಭ್ಯೋ ಯಾವಚ್ಚ ವಾಂಚಿತಂ||

ಪಾಂಡು ಮತ್ತು ಮಾದ್ರಿಯರ ಕಡೆಯಿಂದ ಯಾರ್ಯಾರು ಎಷ್ಟೆಷ್ಟು ಕೇಳುತ್ತಾರೋ ಅಷ್ಟು ವಿವಿಧ ಪಶು, ವಸ್ತ್ರ, ರತ್ನ ಮತ್ತು ಸಂಪತ್ತುಗಳನ್ನು ಕೊಡು.

01118003a ಯಥಾ ಚ ಕುಂತೀ ಸತ್ಕಾರಂ ಕುರ್ಯಾನ್ಮಾದ್ರ್ಯಾಸ್ತಥಾ ಕುರು|

01118003c ಯಥಾ ನ ವಾಯುರ್ನಾದಿತ್ಯಃ ಪಶ್ಯೇತಾಂ ತಾಂ ಸುಸಂವೃತಾಂ||

ಕುಂತಿಯು ಮಾದ್ರಿಗೆ ಹೇಗೆ ಸತ್ಕಾರ ಮಾಡುವವಳೋ ಹಾಗೆಯೇ ನಡೆಯಲಿ. ವಾಯುವಾಗಲೀ ಆದಿತ್ಯನಾಗಲೀ ನೋಡಲಾರದಂತೆ ಅವಳ ಅಲಂಕಾರವಾಗಲಿ.

01118004a ನ ಶೋಚ್ಯಃ ಪಾಂಡುರನಘಃ ಪ್ರಶಸ್ಯಃ ಸ ನರಾಧಿಪಃ|

01118004c ಯಸ್ಯ ಪಂಚ ಸುತಾ ವೀರಾ ಜಾತಾಃ ಸುರಸುತೋಪಮಾಃ||

ಅನಘ ಪಾಂಡುವಿಗಾಗಿ ಯಾರೂ ಶೋಕಿಸಬಾರದು. ಸುರಸುತೋಪಮ ವೀರ ಐವರು ಮಕ್ಕಳನ್ನು ಪಡೆದ ಆ ನರಾಧಿಪನಿಗೆ ಪ್ರಶಂಸೆಯೇ ಇರಲಿ.””

01118005 ವೈಶಂಪಾಯನ ಉವಾಚ|

01118005a ವಿದುರಸ್ತಂ ತಥೇತ್ಯುಕ್ತ್ವಾ ಭೀಷ್ಮೇಣ ಸಹ ಭಾರತ|

01118005c ಪಾಂಡುಂ ಸಂಸ್ಕಾರಯಾಮಾಸ ದೇಶೇ ಪರಮಸಂವೃತೇ||

ವೈಶಂಪಾಯನನು ಹೇಳಿದನು: “ಭಾರತ! ಹೇಳಿದುದೆಲ್ಲವನ್ನೂ ವಿದುರನು ಭೀಷ್ಮನ ಸಹಾಯದಿಂದ ನೆರವೇರಿಸಿದನು. ಎಲ್ಲಕಡೆಯಿಂದಲೂ ರಕ್ಷಿಸಲ್ಪಟ್ಟ ಪ್ರದೇಶದಲ್ಲಿ ಪಾಂಡುವಿಗೆ ಸಂಸ್ಕಾರ ಕಾರ್ಯಗಳನ್ನು ನೆರವೇರಿಸಿದನು.

01118006a ತತಸ್ತು ನಗರಾತ್ತೂರ್ಣಮಾಜ್ಯಹೋಮಪುರಸ್ಕೃತಾಃ|

01118006c ನಿರ್ಹೃತಾಃ ಪಾವಕಾ ದೀಪ್ತಾಃ ಪಾಂಡೋ ರಾಜಪುರೋಹಿತೈಃ||

ನಂತರ ರಾಜಪುರೋಹಿತರು ಪಾಂಡುವಿಗೆ ನಗರದಿಂದ ಆಜ್ಯಹೋಮಪುರಸ್ಕೃತ ಉರಿಯುತ್ತಿರುವ ಬೆಂಕಿಯನ್ನು ತಂದರು.

01118007a ಅಥೈನಮಾರ್ತವೈರ್ಗಂಧೈರ್ಮಾಲ್ಯೈಶ್ಚ ವಿವಿಧೈರ್ವರೈಃ|

01118007c ಶಿಬಿಕಾಂ ಸಮಲಂಚಕ್ರುರ್ವಾಸಸಾಚ್ಛಾದ್ಯ ಸರ್ವಶಃ||

ನಂತರ ಅವನನ್ನು ಕಟ್ಟಿಗೆ ರಾಶಿಯ ಮೇಲೆ ಮಲಗಿಸಿ ಎಲ್ಲ ಕಡೆಯಿಂದಲೂ ಬಟ್ಟೆಯನ್ನು ಸುತ್ತಿ, ವಿವಿಧ ಶ್ರೇಷ್ಠ ಗಂಧ-ಮಾಲೆಗಳಿಂದ ಸಿಂಗರಿಸಿದರು.

01118008a ತಾಂ ತಥಾ ಶೋಭಿತಾಂ ಮಾಲ್ಯೈರ್ವಾಸೋಭಿಶ್ಚ ಮಹಾಧನೈಃ|

01118008c ಅಮಾತ್ಯಾ ಜ್ಞಾತಯಶ್ಚೈವ ಸುಹೃದಶ್ಚೋಪತಸ್ಥಿರೇ||

01118009a ನೃಸಿಂಹಂ ನರಯುಕ್ತೇನ ಪರಮಾಲಂಕೃತೇನ ತಂ|

01118009c ಅವಹನ್ಯಾನಮುಖ್ಯೇನ ಸಹ ಮಾದ್ರ್ಯಾ ಸುಸಂವೃತಂ||

ಈ ರೀತಿ ಮಾಲೆಗಳಿಂದ ಮತ್ತು ಅಮೂಲ್ಯ ವಸ್ತ್ರಗಳಿಂದ ಸಿಂಗರಿಸಿದ ನಂತರ ಅಮಾತ್ಯರು, ನೆಂಟರಿಷ್ಟರು ಮತ್ತು ಸ್ನೇಹಿತರು ಮಾದ್ರಿಯ ಸಮೇತ ಆ ನರಸಿಂಹನನ್ನು ಸುಂದರವಾಗಿ ಅಲಂಕರಿಸಿದ, ನರರಿಂದ ಎಳೆಯಲ್ಪಟ್ಟ, ಎಲ್ಲಕಡೆಯಿಂದಲೂ ಸುರಕ್ಷಿತವಾದ ಯಾನದಲ್ಲಿರಿಸಿ ಹೊರಟರು.

01118010a ಪಾಂಡುರೇಣಾತಪತ್ರೇಣ ಚಾಮರವ್ಯಜನೇನ ಚ|

01118010c ಸರ್ವವಾದಿತ್ರನಾದೈಶ್ಚ ಸಮಲಂಚಕ್ರಿರೇ ತತಃ||

ಬಿಳಿ ಛತ್ರ ಮತ್ತು ಚಾಮರಗಳನ್ನು ಅದಕ್ಕೆ ಕಟ್ಟಿದ್ದರು. ಎಲ್ಲ ರೀತಿಯ ವಾದ್ಯಗಳ ನಾದದೊಂದಿಗೆ ಮೆರವಣಿಗೆಯಲ್ಲಿ ಹೊರಟರು.

01118011a ರತ್ನಾನಿ ಚಾಪ್ಯುಪಾದಾಯ ಬಹೂನಿ ಶತಶೋ ನರಾಃ|

01118011c ಪ್ರದದುಃ ಕಾಂಕ್ಷಮಾಣೇಭ್ಯಃ ಪಾಂಡೋಸ್ತತ್ರೌರ್ಧ್ವದೇಹಿಕಂ||

ಪಾಂಡುವಿನ ದೇಹವನ್ನು ತೆಗೆದು ಕೊಂಡೊಯ್ಯುತ್ತಿರುವಾಗ ಜನರು ನೂರಾರು ಸಂಖ್ಯೆಗಳಲ್ಲಿ ರತ್ನಗಳನ್ನು ಹಿಡಿದು ಬೇಡುವವರಿಗೆ ಕೊಟ್ಟರು.

01118012a ಅಥ ಚತ್ರಾಣಿ ಶುಭ್ರಾಣಿ ಪಾಂಡುರಾಣಿ ಬೃಹಂತಿ ಚ|

01118012c ಆಜಹ್ರುಃ ಕೌರವಸ್ಯಾರ್ಥೇ ವಾಸಾಂಸಿ ರುಚಿರಾಣಿ ಚ||

ಕೌರವನ ಪರವಾಗಿ ಶುಭ್ರ ಶ್ವೇತ ವರ್ಣದ ಛತ್ರಗಳನ್ನು ಮತ್ತು ಸುಂದರ ವಸ್ತ್ರಗಳನ್ನು ಹಂಚಿದರು.

01118013a ಯಾಜಕೈಃ ಶುಕ್ಲವಾಸೋಭಿರ್ಹೂಯಮಾನಾ ಹುತಾಶನಾಃ|

01118013c ಅಗಚ್ಛನ್ನಗ್ರತಸ್ತಸ್ಯ ದೀಪ್ಯಮಾನಾಃ ಸ್ವಲಂಕೃತಾಃ||

ಶ್ವೇತವರ್ಣದ ಬಟ್ಟೆಗಳನ್ನು ಧರಿಸಿದ್ದ ಯಾಜಕರು ಸ್ವಲಂಕೃತ ಶರೀರವನ್ನು ಹಾಕುವುದರ ಮೊದಲು ಉರಿಯುತ್ತಿರುವ ಹುತಾಶನನಲ್ಲಿ ಆಹುತಿಯನ್ನು ಹಾಕಿದರು.

01118014a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೈವ ಸಹಸ್ರಶಃ|

01118014c ರುದಂತಃ ಶೋಕಸಂತಪ್ತಾ ಅನುಜಗ್ಮುರ್ನರಾಧಿಪಂ||

ಶೋಕಸಂತಪ್ತರಾಗಿ ರೋದಿಸುತ್ತಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರು ಸಹಸ್ರಾರು ಸಂಖ್ಯೆಗಳಲ್ಲಿ ನರಾಧಿಪನನ್ನು ಹಿಂಬಾಲಿಸಿದರು.

01118015a ಅಯಮಸ್ಮಾನಪಾಹಾಯ ದುಃಖೇ ಚಾಧಾಯ ಶಾಶ್ವತೇ|

01118015c ಕೃತ್ವಾನಾಥಾನ್ಪರೋ ನಾಥಃ ಕ್ವ ಯಾಸ್ಯತಿ ನರಾಧಿಪಃ|

“ನಮ್ಮೆಲ್ಲರ ಪರೋನಾಥ ನರಾಧಿಪನು ನಮ್ಮೆಲ್ಲರನ್ನೂ ಬಿಟ್ಟು, ಈ ಶಾಶ್ವತ ದುಃಖದಲ್ಲಿ ಮುಳುಗಿಸಿ, ಅನಾಥರನ್ನಾಗಿ ಮಾಡಿ ಎಲ್ಲಿಗೆ ಹೋದನು?”

01118016a ಕ್ರೋಶಂತಃ ಪಾಂಡವಾಃ ಸರ್ವೇ ಭೀಷ್ಮೋ ವಿದುರ ಏವ ಚ|

01118016c ರಮಣೀಯೇ ವನೋದ್ದೇಶೇ ಗಂಗಾತೀರೇ ಸಮೇ ಶುಭೇ||

01118017a ನ್ಯಾಸಯಾಮಾಸುರಥ ತಾಂ ಶಿಬಿಕಾಂ ಸತ್ಯವಾದಿನಃ|

01118017c ಸಭಾರ್ಯಸ್ಯ ನೃಸಿಂಹಸ್ಯ ಪಾಂಡೋರಕ್ಲಿಷ್ಟಕರ್ಮಣಃ||

ಕ್ರೋಶಾಂತ ಪಾಂಡವರು, ಭೀಷ್ಮ, ವಿದುರ ಮೊದಲಾದ ಸರ್ವರೂ ಆ ಸತ್ಯವಾದಿ, ಅಕ್ಲಿಷ್ಟಕರ್ಮಿ, ನರಸಿಂಹನ ಮತ್ತು ಅವನ ಪತ್ನಿಯ ಶಿಬಿಕೆಗಳನ್ನು ಶುಭ ಗಂಗಾತೀರದ ರಮಣೀಯ ಸಮತಟ್ಟು ವನಪ್ರದೇಶದಲ್ಲಿ ತಂದಿರಿಸಿದರು.

01118018a ತತಸ್ತಸ್ಯ ಶರೀರಂ ತತ್ಸರ್ವಗಂಧನಿಷೇವಿತಂ|

01118018c ಶುಚಿಕಾಲೀಯಕಾದಿಗ್ಧಂ ಮುಖ್ಯಸ್ನಾನಾಧಿವಾಸಿತಂ|

01118018e ಪರ್ಯಷಿಂಚಜ್ಜಲೇನಾಶು ಶಾತಕುಂಭಮಯೈರ್ಘಟೈಃ||

ನಂತರ ಅವನ ಶರೀರವನ್ನು ಸರ್ವ ಸುಗಂಧಗಳಿಂದ ಬಳಿದು ಶುಚಿಯಾದ ಕಾಲೀಯಕವನ್ನು ಸವರಿ, ಶ್ರೇಷ್ಠ ತೈಲಗಳನ್ನು ಹಚ್ಚಿ, ಬಂಗಾರದ ಕೊಡಗಳಿಂದ ಶುದ್ಧ ನೀರನ್ನು ಸುರಿಸಿದರು.

01118019a ಚಂದನೇನ ಚ ಮುಖ್ಯೇನ ಶುಕ್ಲೇನ ಸಮಲೇಪಯನ್|

01118019c ಕಾಲಾಗುರುವಿಮಿಶ್ರೇಣ ತಥಾ ತುಂಗರಸೇನ ಚ||

ಶ್ರೇಷ್ಠ ಬಿಳಿ ಚಂದನ, ಕಾಲಾಗುರು ಮತ್ತು ತುಂಗರಸಗಳ ಮಿಶ್ರಣವನ್ನು ಲೇಪಿಸಿದರು.

01118020a ಅಥೈನಂ ದೇಶಜೈಃ ಶುಕ್ಲೈರ್ವಾಸೋಭಿಃ ಸಮಯೋಜಯನ್|

01118020c ಆಚ್ಛನ್ನಃ ಸ ತು ವಾಸೋಭಿರ್ಜೀವನ್ನಿವ ನರರ್ಷಭಃ|

01118020e ಶುಶುಭೇ ಪುರುಷವ್ಯಾಘ್ರೋ ಮಹಾರ್ಹಶಯನೋಚಿತಃ||

ನಂತರ ಅವನನ್ನು ಬಿಳಿ ಹತ್ತಿಯ ವಸ್ತ್ರದಿಂದ ಸುತ್ತಿದರು. ವಸ್ತ್ರದಿಂದ ಸುತ್ತಲ್ಪಟ್ಟ ಅ ನರರ್ಷಭ ಪುರುಷವ್ಯಾಘ್ರನು ಅಮೂಲ್ಯ ಶಯನಕ್ಕೆ ಅರ್ಹನಾಗಿ ಜೀವವಿದ್ದವನಂತೆ ಕಂಡನು.

01118021a ಯಾಜಕೈರಭ್ಯನುಜ್ಞಾತಂ ಪ್ರೇತಕರ್ಮಣಿ ನಿಷ್ಠಿತೈಃ|

01118021c ಘೃತಾವಸಿಕ್ತಂ ರಾಜಾನಂ ಸಹ ಮಾದ್ರ್ಯಾ ಸ್ವಲಂಕೃತಂ||

01118022a ತುಂಗಪದ್ಮಕಮಿಶ್ರೇಣ ಚಂದನೇನ ಸುಗಂಧಿನಾ|

01118022c ಅನ್ಯೈಶ್ಚ ವಿವಿಧೈರ್ಗಂಧೈರನಲ್ಪೈಃ ಸಮದಾಹಯನ್||

ಪ್ರೇತಕರ್ಮ ನಿರತ ಯಾಜಕರು ಅಪ್ಪಣೆಕೊಟ್ಟ ನಂತರ ತುಂಗ-ಪದ್ಮಕ ಮಿಶ್ರಣ, ಮತ್ತು ಸುಗಂಧಯುಕ್ತ ಚಂದನದಿಂದ ಮತ್ತು ಇತರ ವಿವಿಧ ಗಂಧಗಳಿಂದ ಸ್ವಲಂಕೃತರಾದ ಮಾದ್ರಿ ಸಹಿತ ರಾಜನ ಮೇಲೆ ತುಪ್ಪವನ್ನು ಸುರಿದು ಅಗ್ನಿಯನ್ನಿಟ್ಟರು.

01118023a ತತಸ್ತಯೋಃ ಶರೀರೇ ತೇ ದೃಷ್ಟ್ವಾ ಮೋಹವಶಂ ಗತಾ|

01118023c ಹಾಹಾ ಪುತ್ರೇತಿ ಕೌಸಲ್ಯಾ ಪಪಾತ ಸಹಸಾ ಭುವಿ||

ಅವರೀರ್ವರ ಶರೀರಗಳನ್ನು ನೋಡಿ ಕೌಸಲ್ಯೆಯು “ಹಾಹಾ ಪುತ್ರ!”ಎಂದು ಮೂರ್ಛಿತಳಾಗಿ ಕೆಳಗೆ ಬಿದ್ದಳು.

01118024a ತಾಂ ಪ್ರೇಕ್ಷ್ಯ ಪತಿತಾಮಾರ್ತಾಂ ಪೌರಜಾನಪದೋ ಜನಃ|

01118024c ರುರೋದ ಸಸ್ವನಂ ಸರ್ವೋ ರಾಜಭಕ್ತ್ಯಾ ಕೃಪಾನ್ವಿತಃ||

ಕೆಳಗೆ ಬಿದ್ದ ತಾಯಿಯನ್ನು ನೋಡಿದ ನಗರ ಗ್ರಾಮೀಣಪ್ರದೇಶದ ಜನರೆಲ್ಲರೂ ರಾಜಭಕ್ತಿಯಲ್ಲಿ ಕೃಪಾನ್ವಿತರಾಗಿ ಒಂದೇ ಸ್ವರದಲ್ಲಿ ರೋದಿಸಿದರು.

01118025a ಕ್ಲಾಂತಾನೀವಾರ್ತನಾದೇನ ಸರ್ವಾಣಿ ಚ ವಿಚುಕ್ರುಶುಃ|

01118025c ಮಾನುಷೈಃ ಸಹ ಭೂತಾನಿ ತಿರ್ಯಗ್ಯೋನಿಗತಾನ್ಯಪಿ||

ಮನುಷ್ಯರ ಈ ಆರ್ತನಾದದ ಜೊತೆಗೆ ವನ್ಯಮೃಗಗಳನ್ನೂ ಸೇರಿ ಸರ್ವ ಭೂತಗಳೂ ರೋದಿಸಿದವು.

01118026a ತಥಾ ಭೀಷ್ಮಃ ಶಾಂತನವೋ ವಿದುರಶ್ಚ ಮಹಾಮತಿಃ|

01118026c ಸರ್ವಶಃ ಕೌರವಾಶ್ಚೈವ ಪ್ರಾಣದನ್ಭೃಶದುಃಖಿತಾಃ||

ಹಾಗೆಯೇ ಶಾಂತನವ ಭೀಷ್ಮನೂ ಮಹಾಮತಿ ವಿದುರನೂ ಮತ್ತು ಸರ್ವ ಕೌರವರೂ ದುಃಖಿತರಾಗಿ ರೋದಿಸಿದರು.

01118027a ತತೋ ಭೀಷ್ಮೋಽಥ ವಿದುರೋ ರಾಜಾ ಚ ಸಹ ಬಂಧುಭಿಃ|

01118027c ಉದಕಂ ಚಕ್ರಿರೇ ತಸ್ಯ ಸರ್ವಾಶ್ಚ ಕುರುಯೋಷಿತಃ||

ನಂತರ ಭೀಷ್ಮ, ವಿದುರ ಮತ್ತು ರಾಜರು ಎಲ್ಲ ಕುರು ಸ್ತ್ರೀಯರು ಮತ್ತು ಇತರ ಬಂಧುಗಳನ್ನೊಡಗೂಡಿ ಉದಕವನ್ನಿತ್ತರು.

01118028a ಕೃತೋದಕಾಂಸ್ತಾನಾದಾಯ ಪಾಂಡವಾಂಶೋಕಕರ್ಶಿತಾನ್|

01118028c ಸರ್ವಾಃ ಪ್ರಕೃತಯೋ ರಾಜಂಶೋಚಂತ್ಯಃ ಪರ್ಯವಾರಯನ್||

ಪಾಂಡವನಿಗಾಗಿ ಶೋಕಕರ್ಶಿತರಾದ ಸರ್ವ ಪ್ರಜೆಗಳೂ ಶೋಚಿಸುತ್ತಾ ಉದಕ ಕೊಡುವವರನ್ನು ಆವರಿಸಿದರು.

01118029a ಯಥೈವ ಪಾಂಡವಾ ಭೂಮೌ ಸುಷುಪುಃ ಸಹ ಬಾಂಧವೈಃ|

01118029c ತಥೈವ ನಾಗರಾ ರಾಜಂಶಿಶ್ಯಿರೇ ಬ್ರಾಹ್ಮಣಾದಯಃ||

ರಾಜನ್! ಪಾಂಡವರು ತಮ್ಮ ಬಂಧುಗಳ ಸಮೇತ ನೆಲದ ಮೇಲೆಯೇ ಮಲಗಿದರು ಮತ್ತು ಅವರಂತೆ ಬ್ರಾಹ್ಮಣರೇ ಮೊದರಾದ ಇತರ ನಾಗರೀಕರೂ ಅಲ್ಲಿಯೇ ಮಲಗಿದರು.

01118030a ತದನಾನಂದಮಸ್ವಸ್ಥಮಾಕುಮಾರಮಹೃಷ್ಟವತ್|

01118030c ಬಭೂವ ಪಾಂಡವೈಃ ಸಾರ್ಧಂ ನಗರಂ ದ್ವಾದಶ ಕ್ಷಪಾಃ||

ಹನ್ನೆರಡು ರಾತ್ರಿಗಳ ವರೆಗೆ ನಗರದ ಸಣ್ಣ ಬಾಲಕನವರೆಗೆ ಎಲ್ಲರೂ ದುಃಖ ಸಂತಪ್ತರಾಗಿ ಅಸ್ವಸ್ತರಾಗಿದ್ದರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡುದಾಹೇ ಅಷ್ಟಾದಶಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡುದಾಹ ಎನ್ನುವ ನೂರಾಹದಿನೆಂಟನೆಯ ಅಧ್ಯಾಯವು.

Comments are closed.