ಆದಿ ಪರ್ವ: ಸಂಭವ ಪರ್ವ
೧೧೬
ಪಾಂಡುವಿನ ಮರಣ
ಮಾದ್ರಿಯನ್ನು ಕೂಡಲು ಹೊರಟ ಪಾಂಡುವಿನ ಮರಣ (೧-೧೨). ಕುಂತಿಯು ಮಾದ್ರಿಯನ್ನು ನಿಂದಿಸುವುದು (೧೩-೨೨). ಕುಂತಿಯು ತಾನೇ ಪಾಂಡುವನ್ನು ಹಿಂಬಾಲಿಸಿ ಹೋಗುವುದಾಗಿ ಹೇಳಲು ಮಾದ್ರಿಯು ತಾನೇ ಹೋಗುವಳೆಂದು ಹಠಹಿಡಿದು ಪಾಂಡುವಿನ ಚಿತವನ್ನೇರಿದುದು (೨೩-೩೧).
01116001 ವೈಶಂಪಾಯನ ಉವಾಚ|
01116001a ದರ್ಶನೀಯಾಂಸ್ತತಃ ಪುತ್ರಾನ್ಪಾಂಡುಃ ಪಂಚ ಮಹಾವನೇ|
01116001c ತಾನ್ಪಶ್ಯನ್ಪರ್ವತೇ ರೇಮೇ ಸ್ವಬಾಹುಬಲಪಾಲಿತಾನ್||
ವೈಶಂಪಾಯನನು ಹೇಳಿದನು: “ತನ್ನ ಐವರು ಸುಂದರ ಪುತ್ರರು ಆ ಪರ್ವತದ ಮಹಾವನದಲ್ಲಿ ಬಾಹುಬಲದಿಂದ ರಕ್ಷಿತರಾಗಿ ಬೆಳೆಯುತ್ತಿರುವುದನ್ನು ನೋಡಿದ ಪಾಂಡುವು ಅತ್ಯಂತ ಹರ್ಷಿತನಾದನು.
01116002a ಸುಪುಷ್ಪಿತವನೇ ಕಾಲೇ ಕದಾ ಚಿನ್ಮಧುಮಾಧವೇ|
01116002c ಭೂತಸಮ್ಮೋಹನೇ ರಾಜಾ ಸಭಾರ್ಯೋ ವ್ಯಚರದ್ವನಂ||
ಒಮ್ಮೆ ಎಲ್ಲ ಜೀವಿಗಳೂ ಸಮ್ಮೋಹನಗೊಂಡಿರುವ, ವನವೆಲ್ಲ ಪುಷ್ಪಭರಿತ ಕಾಲ ಮಧುಮಾಸದಲ್ಲಿ ರಾಜನು ತನ್ನ ಪತ್ನಿಯರೊಂದಿಗೆ ವನದಲ್ಲಿ ಸಂಚರಿಸುತ್ತಿದ್ದನು.
01116003a ಪಲಾಶೈಸ್ತಿಲಕೈಶ್ಚೂತೈಶ್ಚಂಪಕೈಃ ಪಾರಿಭದ್ರಕೈಃ|
01116003c ಅನ್ಯೈಶ್ಚ ಬಹುಭಿರ್ವೃಕ್ಷೈಃ ಫಲಪುಷ್ಪಸಮೃದ್ಧಿಭಿಃ||
01116004a ಜಲಸ್ಥಾನೈಶ್ಚ ವಿವಿಧೈಃ ಪದ್ಮಿನೀಭಿಶ್ಚ ಶೋಭಿತಂ|
01116004c ಪಾಂಡೋರ್ವನಂ ತು ಸಂಪ್ರೇಕ್ಷ್ಯ ಪ್ರಜಜ್ಞೇ ಹೃದಿ ಮನ್ಮಥಃ||
ಪಲಾಶ, ತಿಲಕ, ಚೂತ, ಚಂಪಕ, ಪಾರಿಭದ್ರಕ ಮತ್ತು ಇತರ ಬಹು ವೃಕ್ಷಗಳಿಂದ ಫಲಪುಷ್ಪಸಮೃದ್ಧವಾದ, ವಿವಿಧ ಜಲಸ್ಥಾನಗಳಿಂದೊಡಗೂಡಿದ, ಶೋಭನೀಯ ಪದ್ಮಿನಿಗಳಿಂದೊಡಗೂಡಿದ ಆ ವನವನ್ನು ಕಂಡ ಪಾಂಡುವಿನ ಹೃದಯದಲ್ಲಿ ಕಾಮವು ಬೆಳೆಯಿತು.
01116005a ಪ್ರಹೃಷ್ಟಮನಸಂ ತತ್ರ ವಿಹರಂತಂ ಯಥಾಮರಂ|
01116005c ತಂ ಮಾದ್ರ್ಯನುಜಗಾಮೈಕಾ ವಸನಂ ಬಿಭ್ರತೀ ಶುಭಂ||
ಅಮರನಂತೆ ಪ್ರಹೃಷ್ಟಮನಸ್ಕನಾಗಿ ಅಲ್ಲಿ ವಿಹರಿಸುತ್ತಿರುವ ಅವನನ್ನು ಒಂದೇ ಒಂದು ತುಂಡು ಬಟ್ಟೆಯನ್ನು ಉಟ್ಟ ಸುಂದರಿ ಮಾದ್ರಿಯು ಹಿಂಬಾಲಿಸಿದಳು.
01116006a ಸಮೀಕ್ಷಮಾಣಃ ಸ ತು ತಾಂ ವಯಃಸ್ಥಾಂ ತನುವಾಸಸಂ|
01116006c ತಸ್ಯ ಕಾಮಃ ಪ್ರವವೃಧೇ ಗಹನೇಽಗ್ನಿರಿವೋತ್ಥಿತಃ||
ತನ್ನ ಆ ಸುಂದರ ದೇಹವನ್ನು ಚಿಕ್ಕ ವಸ್ತ್ರದಿಂದ ಮುಚ್ಚಿಕೊಂಡಿದ್ದ ಅವಳನ್ನು ನೋಡಿ ಅವನಲ್ಲಿ ದಟ್ಟ ಅಗ್ನಿಯಂತೆ ಕಾಮವು ಭುಗಿಲೆದ್ದಿತು.
01116007a ರಹಸ್ಯಾತ್ಮಸಮಾಂ ದೃಷ್ಟ್ವಾ ರಾಜಾ ರಾಜೀವಲೋಚನಾಂ|
01116007c ನ ಶಶಾಕ ನಿಯಂತುಂ ತಂ ಕಾಮಂ ಕಾಮಬಲಾತ್ಕೃತಃ||
ತನ್ನಹಾಗಿನ ಯೋಚನೆಯಲ್ಲಿಯೇ ಇದ್ದ ಆ ರಾಜೀವಲೋಚನೆಯನ್ನು ನೋಡಿದ ರಾಜನು ತನ್ನ ಕಾಮವನ್ನು ನಿಯಂತ್ರಿಸಲು ಅಸಮರ್ಥನಾಗಲು ಕಾಮ ಬಲವು ಅವನನ್ನು ಆವರಿಸಿತು.
01116008a ತತ ಏನಾಂ ಬಲಾದ್ರಾಜಾ ನಿಜಗ್ರಾಹ ರಹೋಗತಾಂ|
01116008c ವಾರ್ಯಮಾಣಸ್ತಯಾ ದೇವ್ಯಾ ವಿಸ್ಫುರಂತ್ಯಾ ಯಥಾಬಲಂ||
ಆ ನಿರ್ಜನ ವನದಲ್ಲಿ ರಾಜನು ತನ್ನ ಪತ್ನಿಯನ್ನು ಬಲವಂತವಾಗಿ ಹಿಡಿದು, ಆ ದೇವಿಯು ತನ್ನ ಶಕ್ತಿಯನ್ನು ಬಳಸಿ ಬಿಡಿಸಿಕೊಂಡು ನುಣುಚಿ ಹೋಗಲು ಪ್ರಯತ್ನಿಸಿದರೂ, ಸೇರಿದನು.
01116009a ಸ ತು ಕಾಮಪರೀತಾತ್ಮಾ ತಂ ಶಾಪಂ ನಾನ್ವಬುಧ್ಯತ|
01116009c ಮಾದ್ರೀಂ ಮೈಥುನಧರ್ಮೇಣ ಗಚ್ಛಮಾನೋ ಬಲಾದಿವ||
ಆ ಕಾಮಪರೀತಾತ್ಮನು ತನ್ನ ಮೇಲಿದ್ದ ಶಾಪವನ್ನು ಮರೆತು ಬಲವಂತವಾಗಿ ಮಾದ್ರಿಯನ್ನು ಸೇರಲು ಹೋದನು.
01116010a ಜೀವಿತಾಂತಾಯ ಕೌರವ್ಯೋ ಮನ್ಮಥಸ್ಯ ವಶಂ ಗತಃ|
01116010c ಶಾಪಜಂ ಭಯಮುತ್ಸೃಜ್ಯ ಜಗಾಮೈವ ಬಲಾತ್ಪ್ರಿಯಾಂ||
01116011a ತಸ್ಯ ಕಾಮಾತ್ಮನೋ ಬುದ್ಧಿಃ ಸಾಕ್ಷಾತ್ಕಾಲೇನ ಮೋಹಿತಾ|
01116011c ಸಂಪ್ರಮಥ್ಯೇಂದ್ರಿಯಗ್ರಾಮಂ ಪ್ರನಷ್ಟಾ ಸಹ ಚೇತಸಾ||
ಶಾಪದಿಂದುಂಟಾದ ಭಯವನ್ನು ಕಿತ್ತು ಬಿಸುಟು, ಮನ್ಮಥನ ವಶನಾಗಿ ತನ್ನ ಜೀವನವನ್ನೇ ಅಂತ್ಯಗೊಳಿಸಿಕೊಳ್ಳುವ ಕೌರವ್ಯನು ತನ್ನ ಪ್ರೇಮಿಕೆಯಲ್ಲಿ ಬಲವಂತವಾಗಿ ಹೋದನು. ಆ ಕಾಮಾತ್ಮನ ಬುದ್ಧಿಯು ಸಾಕ್ಷಾತ್ ಕಾಲದಿಂದ ಮೋಹಿತವಾಗಿತ್ತು. ಇಂದ್ರಿಯಗಳಿಂದ ಕಡೆಯಲ್ಪಟ್ಟ ಅವನ ಚೇತನವು ಅಲ್ಲಿಯೇ ನಷ್ಟವಾಯಿತು.
01116012a ಸ ತಯಾ ಸಹ ಸಂಗಮ್ಯ ಭಾರ್ಯಯಾ ಕುರುನಂದನ|
01116012c ಪಾಂಡುಃ ಪರಮಧರ್ಮಾತ್ಮಾ ಯುಯುಜೇ ಕಾಲಧರ್ಮಣಾ||
ಪರಮ ಧರ್ಮಾತ್ಮ ಕುರುನಂದನ ಪಾಂಡುವು ತನ್ನ ಭಾರ್ಯೆಯನ್ನು ಕೂಡಿ ಕಾಲಧರ್ಮಕ್ಕೊಳಗಾದನು.
01116013a ತತೋ ಮಾದ್ರೀ ಸಮಾಲಿಂಗ್ಯ ರಾಜಾನಂ ಗತಚೇತಸಂ|
01116013c ಮುಮೋಚ ದುಃಖಜಂ ಶಬ್ಧಂ ಪುನಃ ಪುನರತೀವ ಹ||
ತೀರಿಕೊಂಡ ರಾಜನ ದೇಹವನ್ನು ಆಲಿಂಗಿಸಿ ಮಾದ್ರಿಯು ಪುನಃ ಪುನಃ ದುಃಖಪೂರ್ಣ ಕೂಗನ್ನು ಕೂಗಿದಳು.
01116014a ಸಹ ಪುತ್ರೈಸ್ತತಃ ಕುಂತೀ ಮಾದ್ರೀಪುತ್ರೌ ಚ ಪಾಂಡವೌ|
01116014c ಆಜಗ್ಮುಃ ಸಹಿತಾಸ್ತತ್ರ ಯತ್ರ ರಾಜಾ ತಥಾಗತಃ||
ತಕ್ಷಣವೇ ಕುಂತಿಯು ತನ್ನ ಪುತ್ರ ಪಾಂಡವರು ಮತ್ತು ಮಾದ್ರಿಯ ಎರಡು ಮಕ್ಕಳನ್ನೊಡಗೂಡಿ ರಾಜನು ತೀರಿಕೊಂಡಿದ್ದ ಸ್ಥಳಕ್ಕೆ ಧಾವಿಸಿದಳು.
01116015a ತತೋ ಮಾದ್ರ್ಯಬ್ರವೀದ್ರಾಜನ್ನಾರ್ತಾ ಕುಂತೀಮಿದಂ ವಚಃ|
01116015c ಏಕೈವ ತ್ವಮಿಹಾಗಚ್ಛ ತಿಷ್ಠಂತ್ವತ್ರೈವ ದಾರಕಾಃ||
ರಾಜನ್! ಆಗ ಆರ್ತ ಮಾದ್ರಿಯು ಕುಂತಿಗೆ ಕೂಗಿ ಹೇಳಿದಳು: “ಮಕ್ಕಳನ್ನು ಅಲ್ಲಿಯೇ ನಿಲ್ಲಿಸಿ ನೀನೊಬ್ಬಳೇ ಇಲ್ಲಿಗೆ ಬಾ!”
01116016a ತಚ್ಛೃತ್ವಾ ವಚನಂ ತಸ್ಯಾಸ್ತತ್ರೈವಾವಾರ್ಯ ದಾರಕಾನ್|
01116016c ಹತಾಹಮಿತಿ ವಿಕ್ರುಶ್ಯ ಸಹಸೋಪಜಗಾಮ ಹ||
ಈ ಮಾತುಗಳನ್ನು ಕೇಳಿದ ಅವಳು ಮಕ್ಕಳನ್ನು ಅಲ್ಲಿಯೇ ಬಿಟ್ಟು “ಹತಳಾದೆ!””ಎಂದು ತೀವ್ರವಾಗಿ ಕೂಗುತ್ತಾ ಹತ್ತಿರಕ್ಕೆ ಓಡಿ ಬಂದಳು.
01116017a ದೃಷ್ಟ್ವಾ ಪಾಂಡುಂ ಚ ಮಾದ್ರೀಂ ಚ ಶಯಾನೌ ಧರಣೀತಲೇ|
01116017c ಕುಂತೀ ಶೋಕಪರೀತಾಂಗೀ ವಿಲಲಾಪ ಸುದುಃಖಿತಾ||
ಧರಣೀತಲದಲ್ಲಿ ಮಲಗಿದ್ದ ಪಾಂಡು ಮತ್ತು ಮಾದ್ರಿಯನ್ನು ನೋಡಿದ ಕುಂತಿಯು ಶೋಕಪರೀತಾಂಗಿಯಾಗಿ ದುಃಖಿತಳಾಗಿ ವಿಲಪಿಸಿದಳು:
01116018a ರಕ್ಷ್ಯಮಾಣೋ ಮಯಾ ನಿತ್ಯಂ ವೀರಃ ಸತತಮಾತ್ಮವಾನ್|
01116018c ಕಥಂ ತ್ವಮಭ್ಯತಿಕ್ರಾಂತಃ ಶಾಪಂ ಜಾನನ್ವನೌಕಸಃ||
“ನಾನು ನಿತ್ಯವೂ ಈ ವೀರನನ್ನು ರಕ್ಷಿಸುತ್ತಿದ್ದೆ ಮತ್ತು ಅವನೂ ಕೂಡ ಸತತವೂ ತನ್ನನ್ನು ತಾನೇ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಿದ್ದ. ಹಾಗಿರುವಾಗ, ವನವಾಸಿಯ ಶಾಪವನ್ನು ತಿಳಿದೂ ಕೂಡ ನೀನು ಹೇಗೆ ಅವನನ್ನು ಅತಿಕ್ರಮಿಸಿದೆ?
01116019a ನನು ನಾಮ ತ್ವಯಾ ಮಾದ್ರಿ ರಕ್ಷಿತವ್ಯೋ ಜನಾಧಿಪಃ|
01116019c ಸಾ ಕಥಂ ಲೋಭಿತವತೀ ವಿಜನೇ ತ್ವಂ ನರಾಧಿಪಂ||
ಮಾದ್ರಿ! ಜನಾಧಿಪನನ್ನು ರಕ್ಷಿಸುವುದು ನಿನ್ನ ಕರ್ತವ್ಯವೂ ಆಗಿರಲಿಲ್ಲವೇ? ಹಾಗಿರುವಾಗ ನೀನು ಹೇಗೆ ಈ ನಿರ್ಜನವನದಲ್ಲಿ ನರಾಧಿಪನನ್ನು ಲೋಭಗೊಳಿಸಿದೆ?
01116020a ಕಥಂ ದೀನಸ್ಯ ಸತತಂ ತ್ವಾಮಾಸಾದ್ಯ ರಹೋಗತಾಂ|
01116020c ತಂ ವಿಚಿಂತಯತಃ ಶಾಪಂ ಪ್ರಹರ್ಷಃ ಸಮಜಾಯತ||
ಮಾದ್ರಿ! ಜನಾಧಿಪನನ್ನು ರಕ್ಷಿಸುವುದು ನಿನ್ನ ಕರ್ತವ್ಯವೂ ಆಗಿರಲಿಲ್ಲವೇ? ಹಾಗಿರುವಾಗ ನೀನು ಹೇಗೆ ಈ ನಿರ್ಜನವನದಲ್ಲಿ ನರಾಧಿಪನನ್ನು ಲೋಭಗೊಳಿಸಿದೆ?
01116021a ಧನ್ಯಾ ತ್ವಮಸಿ ಬಾಹ್ಲೀಕಿ ಮತ್ತೋ ಭಾಗ್ಯತರಾ ತಥಾ|
01116021c ದೃಷ್ಟವತ್ಯಸಿ ಯದ್ವಕ್ತ್ರಂ ಪ್ರಹೃಷ್ಟಸ್ಯ ಮಹೀಪತೇಃ||
ಬಾಹ್ಲೀಕಿ! ನೀನೇ ಧನ್ಯೆ ಮತ್ತು ನನಗಿಂತಲೂ ಭಾಗ್ಯವಂತೆ. ಮಹೀಪತಿಯ ಪ್ರಹೃಷ್ಟ ಮುಖವನ್ನು ನೋಡಿಯಾದರೂ ಸಂತಸಗೊಂಡೆ.”
01116022 ಮಾದ್ರ್ಯುವಾಚ|
01116022a ವಿಲೋಭ್ಯಮಾನೇನ ಮಯಾ ವಾರ್ಯಮಾಣೇನ ಚಾಸಕೃತ್|
01116022c ಆತ್ಮಾ ನ ವಾರಿತೋಽನೇನ ಸತ್ಯಂ ದಿಷ್ಟಂ ಚಿಕೀರ್ಷುಣಾ||
ಮಾದ್ರಿಯು ಹೇಳಿದಳು: “ಅವನೇ ನನ್ನನ್ನು ಪ್ರಚೋದಿಸಿದನು. ನಾನು ಅವನನ್ನು ತಡೆಯಲು ಪುನಃ ಪುನಃ ಪ್ರಯತ್ನಿಸಿದೆ. ಆದರೆ ನಾನು ಅವನಿಂದ ದೂರವಾಗಿರಲು ಸಾದ್ಯವಾಗಲಿಲ್ಲ. ಅವನು ತನಗಿರುವ ಗಂಡಾಂತರವನ್ನು ಸತ್ಯಮಾಡಿಸಲೇ ತೊಡಗಿದ್ದನಂತಿದ್ದನು.”
01116023 ಕುಂತ್ಯುವಾಚ|
01116023a ಅಹಂ ಜ್ಯೇಷ್ಠಾ ಧರ್ಮಪತ್ನೀ ಜ್ಯೇಷ್ಠಂ ಧರ್ಮಫಲಂ ಮಮ|
01116023c ಅವಶ್ಯಂ ಭಾವಿನೋ ಭಾವಾನ್ಮಾ ಮಾಂ ಮಾದ್ರಿ ನಿವರ್ತಯ||
ಕುಂತಿಯು ಹೇಳಿದಳು: “ನಾನು ಜ್ಯೇಷ್ಠ ಧರ್ಮಪತ್ನಿ ಮತ್ತು ನನಗೇ ಹೆಚ್ಚಿನ ದರ್ಮಫಲವು ದೊರೆಯಬೇಕು. ಅವಶ್ಯವಾಗಿ ಆಗಬೇಕಾದುದು ಆಗಲಿ. ಮಾದ್ರಿ! ನನ್ನನ್ನು ನೀನು ತಡೆಯಬೇಡ!
01116024a ಅನ್ವೇಷ್ಯಾಮೀಹ ಭರ್ತಾರಮಹಂ ಪ್ರೇತವಶಂ ಗತಂ|
01116024c ಉತ್ತಿಷ್ಠ ತ್ವಂ ವಿಸೃಜ್ಯೈನಮಿಮಾನ್ರಕ್ಷಸ್ವ ದಾರಕಾನ್||
ನನ್ನ ಪ್ರೇತವಶ ಪತಿಯನ್ನು ಇಲ್ಲಿಯೇ ಹಿಂಬಾಲಿಸುತ್ತೇನೆ. ಅವನನ್ನು ಬಿಟ್ಟು ಮೇಲೇಳು. ಈ ಮಕ್ಕಳನ್ನು ನೋಡಿಕೋ.”
01116025 ಮಾದ್ರ್ಯುವಾಚ|
01116025a ಅಹಮೇವಾನುಯಾಸ್ಯಾಮಿ ಭರ್ತಾರಮಪಲಾಯಿನಂ|
01116025c ನ ಹಿ ತೃಪ್ತಾಸ್ಮಿ ಕಾಮಾನಾಂ ತಜ್ಜ್ಯೇಷ್ಠಾ ಅನುಮನ್ಯತಾಂ||
ಮಾದ್ರಿಯು ಹೇಳಿದಳು: “ಇಲ್ಲ. ಅವನು ಹೋಗುವುದರೊಳಗಾಗಿ ನಾನೇ ನನ್ನ ಪತಿಯನ್ನು ಹಿಂಬಾಲಿಸುತ್ತೇನೆ. ಯಾಕೆಂದರೆ ನನ್ನ ಆಸೆಗಳು ಇನ್ನೂ ತೃಪ್ತವಾಗಿಲ್ಲ. ಹಿರಿಯವಳಾದ ನೀನು ನನಗೆ ಅನುಮತಿ ನೀಡಬೇಕು.
01116026a ಮಾಂ ಚಾಭಿಗಮ್ಯ ಕ್ಷೀಣೋಽಯಂ ಕಾಮಾದ್ಭರತಸತ್ತಮಃ|
01116026c ತಮುಚ್ಛಿಂದ್ಯಾಮಸ್ಯ ಕಾಮಂ ಕಥಂ ನು ಯಮಸಾದನೇ||
ನನ್ನೊಡನೆ ಮಲಗಿರುವಾಗ ಈ ಭರತಸತ್ತಮನ ಕಾಮಕ್ಷೀಣವಾಯಿತು. ಹಾಗಿರುವಾಗ ಯಮಸದನದಲ್ಲಿ ಅವನ ಕಾಮವನ್ನು ನಾನು ಹೇಗೆ ತಾನೆ ಪೂರೈಸದೇ ಇರಲಿ?
01116027a ನ ಚಾಪ್ಯಹಂ ವರ್ತಯಂತೀ ನಿರ್ವಿಶೇಷಂ ಸುತೇಷು ತೇ|
01116027c ವೃತ್ತಿಮಾರ್ಯೇ ಚರಿಷ್ಯಾಮಿ ಸ್ಪೃಶೇದೇನಸ್ತಥಾ ಹಿ ಮಾಂ||
ನಾನು ಜೀವಂತವಿದ್ದರೂ ನನ್ನ ಮತ್ತು ನಿನ್ನ ಮಕ್ಕಳನ್ನು ಒಂದೇ ಸಮನಾಗಿ ನೋಡಿಕೊಳ್ಳಲಾರೆ. ಅದರಿಂದಲೂ ನನಗೆ ಪಾಪವು ಬಾರದೇ ಇರುವುದಿಲ್ಲ.
01116028a ತಸ್ಮಾನ್ಮೇ ಸುತಯೋಃ ಕುಂತಿ ವರ್ತಿತವ್ಯಂ ಸ್ವಪುತ್ರವತ್|
01116028c ಮಾಂ ಹಿ ಕಾಮಯಮಾನೋಽಯಂ ರಾಜಾ ಪ್ರೇತವಶಂ ಗತಃ||
01116029a ರಾಜ್ಞಃ ಶರೀರೇಣ ಸಹ ಮಮಾಪೀದಂ ಕಲೇವರಂ|
01116029c ದಗ್ಧವ್ಯಂ ಸುಪ್ರತಿಚ್ಛನ್ನಮೇತದಾರ್ಯೇ ಪ್ರಿಯಂ ಕುರು||
ಆದುದರಿಂದ ಕುಂತಿ! ನನ್ನ ಪುತ್ರರನ್ನು ನಿನ್ನ ಮಕ್ಕಳಂತೆಯೇ ನೋಡಿಕೋ. ನನ್ನನ್ನು ಬಯಸುತ್ತಲೇ ರಾಜನು ಪ್ರೇತವಶನಾದನು. ಆರ್ಯೆ! ನನ್ನನ್ನು ಇಷ್ಟೊಂದು ಚೆನ್ನಾಗಿ ಆವರಿಸಿರುವ ರಾಜನ ಶರೀರದ ಜೊತೆ ನನ್ನ ಈ ಶರೀರವನ್ನು ಸುಟ್ಟುಹಾಕಿ ನನಗೊಂದು ಒಳ್ಳೆಯ ಕಾರ್ಯವನ್ನು ಮಾಡಿಕೊಡು.
01116030a ದಾರಕೇಷ್ವಪ್ರಮತ್ತಾ ಚ ಭವೇಥಾಶ್ಚ ಹಿತಾ ಮಮ|
01116030c ಅತೋಽನ್ಯನ್ನ ಪ್ರಪಶ್ಯಾಮಿ ಸಂದೇಷ್ಟವ್ಯಂ ಹಿ ಕಿಂ ಚನ||
ಮಕ್ಕಳನ್ನು ಸರಿಯಾಗಿ ನೋಡಿಕೋ. ನನ್ನ ಹಿತವನ್ನೇ ಚಿಂತಿಸು. ನಿನ್ನನ್ನು ನಿಂದಿಸುವ ಕಾರಣವೇನೂ ನನಗೆ ತೋರುತ್ತಿಲ್ಲ.””
01116031 ವೈಶಂಪಾಯನ ಉವಾಚ|
01116031a ಇತ್ಯುಕ್ತ್ವಾ ತಂ ಚಿತಾಗ್ನಿಸ್ಥಂ ಧರ್ಮಪತ್ನೀ ನರರ್ಷಭಂ|
01116031c ಮದ್ರರಾಜಾತ್ಮಜಾ ತೂರ್ಣಮನ್ವಾರೋಹದ್ಯಶಸ್ವಿನೀ||
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ನರರ್ಷಭನ ಆ ಧರ್ಮಪತ್ನಿ, ಮದ್ರರಾಜನ ಮಗಳು ಯಶಸ್ವಿನಿಯು ಕೂಡಲೇ ಅವನ ಚಿತಾಗ್ನಿಯನ್ನು ಏರಿದಳು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡೂಪರಮೇ ಶೋಡಷಾಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡೂಪರಮ ಎನ್ನುವ ನೂರಾಹದಿನಾರನೆಯ ಅಧ್ಯಾಯವು.