Adi Parva: Chapter 115

ಆದಿ ಪರ್ವ: ಸಂಭವ ಪರ್ವ

೧೧೫

ತನಗೆ ಮಕ್ಕಳಿಲ್ಲವೆಂದು ಮಾದ್ರಿಯು ದುಃಖಿಸಿ, ಈ ವಿಷಯದಲ್ಲಿ ಸಹಾಯುಮಾಡಲು ಕುಂತಿಗೆ ಹೇಳಿ ತಯಾರಿಸಬೇಕೆಂದು ಪಾಂಡುವಿನಲ್ಲಿ ಕೇಳಿಕೊಳ್ಳುವುದು (೧-೬). ಒಪ್ಪಿ ಪಾಂಡುವು ಮಾದ್ರಿಗೂ ಮಕ್ಕಳನ್ನು ನೀಡಬೇಕೆಂದು ಕುಂತಿಯಲ್ಲಿ ಕೇಳಿಕೊಳ್ಳುವುದು (೭-೧೪). ಕುಂತಿಯು ಯಾವುದಾದರೂ ದೇವತೆಯನ್ನು ಒಮ್ಮೆ ಮಾತ್ರ ಯೋಚಿಸೆಂದು ಹೇಳಿ ಮಂತ್ರವನ್ನು ನೀಡಲು ವಿಚಾರಮಾಡಿ ಮಾದ್ರಿಯು ಅಶ್ವಿನೀ ದೇವತೆಗಳಿಂದ ಅವಳಿ ಮಕ್ಕಳು ನಕುಲ ಸಹದೇವರನ್ನು ಪಡೆಯುವುದು (೧೫-೨೧). ಪಾಂಡುವು ಮಾದ್ರಿಯ ಪರವಾಗಿ ಪುನಃ ಕುಂತಿಯಲ್ಲಿ ಕೇಳಲು ಮಾದ್ರಿಯು ವಂಚಿಸಿ ತನ್ನನ್ನು ಹಿಂದೆಹಾಕಬಹುದೆಂಬ ಭಯದಿಂದ ಮಂತ್ರವನ್ನು ನಿರಾಕರಿಸಿದ್ದುದು (೨೨-೨೮).

01115001 ವೈಶಂಪಾಯನ ಉವಾಚ|

01115001a ಕುಂತೀಪುತ್ರೇಷು ಜಾತೇಷು ಧೃತರಾಷ್ಟ್ರಾತ್ಮಜೇಷು ಚ|

01115001c ಮದ್ರರಾಜಸುತಾ ಪಾಂಡುಂ ರಹೋ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ಕುಂತೀ ಪುತ್ರರು ಮತ್ತು ಧೃತರಾಷ್ಟ್ರಾತ್ಮಜರು ಹುಟ್ಟಿದ ನಂತರ ಮದ್ರರಾಜ ಸುತೆಯು ಏಕಾಂತದಲ್ಲಿ ಪಾಂಡುವಿಗೆ ಈ ಮಾತುಗಳನ್ನು ಹೇಳಿದಳು:

01115002a ನ ಮೇಽಸ್ತಿ ತ್ವಯಿ ಸಂತಾಪೋ ವಿಗುಣೇಽಪಿ ಪರಂತಪ|

01115002c ನಾವರತ್ವೇ ವರಾರ್ಹಾಯಾಃ ಸ್ಥಿತ್ವಾ ಚಾನಘ ನಿತ್ಯದಾ||

“ಪರಂತಪ! ಅನಘ! ನೀನು ನನ್ನೊಡನೆ ಒಳ್ಳೆಯದಾಗಿ ನಡೆದುಕೊಳ್ಳುತ್ತಿಲ್ಲ ಎಂದಾಗಲೀ ಅಥವಾ ನಾನು ನಿತ್ಯವೂ ನಿನ್ನ ಮೊದಲನೆಯ ಪತ್ನಿಯ ಕೆಳಸ್ಥಾನವನ್ನು ಹೊಂದಿದ್ದೇನೆ ಎಂದಾಗಲೀ ದುಃಖಿಸುತ್ತಿಲ್ಲ.

01115003a ಗಾಂಧಾರ್ಯಾಶ್ಚೈವ ನೃಪತೇ ಜಾತಂ ಪುತ್ರಶತಂ ತಥಾ|

01115003c ಶ್ರುತ್ವಾ ನ ಮೇ ತಥಾ ದುಃಖಮಭವತ್ಕುರುನಂದನ||

ನೃಪತಿ! ಕುರುನಂದನ! ಗಾಂಧಾರಿಯೂ ಕೂಡ ನೂರು ಪುತ್ರರನ್ನು ಪಡೆದಳೆಂದು ಕೇಳಿಯೂ ನನಗೆ ದುಃಖವಾಗುತ್ತಿಲ್ಲ.

01115004a ಇದಂ ತು ಮೇ ಮಹದ್ದುಃಖಂ ತುಲ್ಯತಾಯಾಮಪುತ್ರತಾ|

01115004c ದಿಷ್ಟ್ಯಾ ತ್ವಿದಾನೀಂ ಭರ್ತುರ್ಮೇ ಕುಂತ್ಯಾಮಪ್ಯಸ್ತಿ ಸಂತತಿಃ||

ಆದರೆ ನಾನು ಮತ್ತು ಕುಂತಿ ಇಬ್ಬರಿಗೂ ಮಕ್ಕಳಾಗದಂತಿದ್ದರೂ ನೀನು ಅವಳೊಬ್ಬಳಿಂದ ಮಾತ್ರ ಮಕ್ಕಳನ್ನು ಪಡೆಯುವ ಹಾಗೆ ಆಯಿತಲ್ಲ ಎಂದು ಬಹಳ ದುಃಖವಾಗುತ್ತಿದೆ.

01115005a ಯದಿ ತ್ವಪತ್ಯಸಂತಾನಂ ಕುಂತಿರಾಜಸುತಾ ಮಯಿ|

01115005c ಕುರ್ಯಾದನುಗ್ರಹೋ ಮೇ ಸ್ಯಾತ್ತವ ಚಾಪಿ ಹಿತಂ ಭವೇತ್||

ಕುಂತಿರಾಜಸುತೆಯು ನಾನು ಕೂಡ ಮಕ್ಕಳನ್ನು ಪಡೆಯುವಂತೆ ಮಾಡಿದರೆ ನನಗೆ ಅನುಗ್ರಹವಾದಂತಾಗುತ್ತದೆ ಮತ್ತು ನಿನಗೂ ಹಿತವಾಗುತ್ತದೆ.

01115006a ಸ್ತಂಭೋ ಹಿ ಮೇ ಸಪತ್ನೀತ್ವಾದ್ವಕ್ತುಂ ಕುಂತಿಸುತಾಂ ಪ್ರತಿ|

01115006c ಯದಿ ತು ತ್ವಂ ಪ್ರಸನ್ನೋ ಮೇ ಸ್ವಯಮೇನಾಂ ಪ್ರಚೋದಯ||

ಅವಳ ಸಪತ್ನಿಯಾದ ನನಗೆ ಕುಂತಿಸುತೆಯಲ್ಲಿ ಈ ಮಾತುಗಳನ್ನು ಹೇಳಲು ಕಷ್ಟವಾಗುತ್ತಿದೆ. ಆದರೆ ನೀನು ನನ್ನ ಮೇಲೆ ಪ್ರಸನ್ನನಾಗಿದ್ದೀಯಾದರೆ ನೀನೇ ಅವಳಿಗೆ ಹೇಳಿ ತಯಾರಿಸು.”

01115007 ಪಾಂಡುರುವಾಚ|

01115007a ಮಮಾಪ್ಯೇಷ ಸದಾ ಮಾದ್ರಿ ಹೃದ್ಯರ್ಥಃ ಪರಿವರ್ತತೇ|

01115007c ನ ತು ತ್ವಾಂ ಪ್ರಸಹೇ ವಕ್ತುಮಿಷ್ಟಾನಿಷ್ಟವಿವಕ್ಷಯಾ||

ಪಾಂಡುವು ಹೇಳಿದನು: “ಮಾದ್ರಿ! ನಾನೂ ಕೂಡ ಈ ವಿಷಯವನ್ನು ಸದಾ ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೆ. ನಿನಗೆ ಬೇಸರವಾಗಬಹುದೆಂದು ನಾನು ನಿನ್ನಲ್ಲಿ ಹೇಳಿಕೊಳ್ಳಲಾಗಲಿಲ್ಲ.

01115008a ತವ ತ್ವಿದಂ ಮತಂ ಜ್ಞಾತ್ವಾ ಪ್ರಯತಿಷ್ಯಾಮ್ಯತಃ ಪರಂ|

01115008c ಮನ್ಯೇ ಧ್ರುವಮ್ಮಯೋಕ್ತಾ ಸಾ ವಚೋ ಮೇ ಪ್ರತಿಪತ್ಸ್ಯತೇ||

ಈಗ ನಿನ್ನ ಮನಸ್ಸಿನಲ್ಲಿರುವುದು ನನಗೆ ತಿಳಿದಿದೆಯಾದುದರಿಂದ ಈಗಲೇ ನಾನು ಕಾರ್ಯಗತನಾಗುತ್ತೇನೆ. ನನ್ನ ಮಾತಿನಂತೆಯೇ ಅವಳು ನಡೆಯುತ್ತಾಳೆ ಎಂದು ನನಗೆ ವಿಶ್ವಾಸವಿದೆ.””

01115009 ವೈಶಂಪಾಯನ ಉವಾಚ|

01115009a ತತಃ ಕುಂತೀಂ ಪುನಃ ಪಾಂಡುರ್ವಿವಿಕ್ತ ಇದಮಬ್ರವೀತ್|

01115009c ಕುಲಸ್ಯ ಮಮ ಸಂತಾನಂ ಲೋಕಸ್ಯ ಚ ಕುರು ಪ್ರಿಯಂ||

ವೈಶಂಪಾಯನನು ಹೇಳಿದನು: “ನಂತರ ಪಾಂಡುವು ಏಕಾಂತದಲ್ಲಿದ್ದಾಗ ಕುಂತಿಯಲ್ಲಿ ಹೇಳಿದನು: “ನನ್ನ ಕುಲಕ್ಕೆ ಸಂತಾನವನ್ನೂ ಮತ್ತು ಲೋಕಕ್ಕೆ ಪ್ರಿಯವಾದುದನ್ನೂ ಮಾಡು.

01115010a ಮಮ ಚಾಪಿಂಡನಾಶಾಯ ಪೂರ್ವೇಷಾಮಪಿ ಚಾತ್ಮನಃ|

01115010c ಮತ್ಪ್ರಿಯಾರ್ಥಂ ಚ ಕಲ್ಯಾಣಿ ಕುರು ಕಲ್ಯಾಣಮುತ್ತಮಂ||

ಕಲ್ಯಾಣಿ! ನಾನು ಮತ್ತು ನನ್ನ ಪೂರ್ವಜರು ಅಪಿಂಡರಾಗಬಾರದೆಂದು, ನನ್ನ ಪ್ರೀತಿಗೋಸ್ಕರ ಈ ಉತ್ತಮ ಕಲ್ಯಾಣ ಕಾರ್ಯವನ್ನು ಮಾಡು.

01115011a ಯಶಸೋಽರ್ಥಾಯ ಚೈವ ತ್ವಂ ಕುರು ಕರ್ಮ ಸುದುಷ್ಕರಂ|

01115011c ಪ್ರಾಪ್ಯಾಧಿಪತ್ಯಮಿಂದ್ರೇಣ ಯಜ್ಞೈರಿಷ್ಟಂ ಯಶೋರ್ಥಿನಾ||

ನಿನ್ನ ಯಶಸ್ಸಿಗೋಸ್ಕರವೂ ಒಂದು ದುಷ್ಕರ ಕೆಲಸವನ್ನು ಮಾಡು. ಒಡೆತನವನ್ನು ಪಡೆದ ಇಂದ್ರನೂ ಕೂಡ ತನ್ನ ಯಶಸ್ಸಿಗೋಸ್ಕರ ಯಜ್ಞಗಳನ್ನು ಕೈಗೊಳ್ಳುತ್ತಾನೆ.

01115012a ತಥಾ ಮಂತ್ರವಿದೋ ವಿಪ್ರಾಸ್ತಪಸ್ತಪ್ತ್ವಾ ಸುದುಷ್ಕರಂ|

01115012c ಗುರೂನಭ್ಯುಪಗಚ್ಛಂತಿ ಯಶಸೋಽರ್ಥಾಯ ಭಾಮಿನಿ||

ಭಾಮಿನಿ! ಹೀಗೆ ಮಂತ್ರಗಳನ್ನು ತಿಳಿದ ದುಷ್ಕರ ತಪಸ್ಸುಗಳನ್ನು ಗೈದ ವಿಪ್ರರೂ ಕೂಡ ತಮ್ಮ ಯಶಸ್ಸಿಗೋಸ್ಕರ ಹೊಸ ಗುರುಗಳನ್ನು ಅರಸಿ ಹೋಗುತ್ತಾರೆ.

01115013a ತಥಾ ರಾಜರ್ಷಯಃ ಸರ್ವೇ ಬ್ರಾಹ್ಮಣಾಶ್ಚ ತಪೋಧನಾಃ|

01115013c ಚಕ್ರುರುಚ್ಚಾವಚಂ ಕರ್ಮ ಯಶಸೋಽರ್ಥಾಯ ದುಷ್ಕರಂ||

ಹಾಗೆಯೇ ಸರ್ವ ರಾಜರ್ಷಿಗಳೂ, ಬ್ರಾಹ್ಮಣರೂ, ತಪೋಧನರೂ ತಮ್ಮ ಯಶಸ್ಸಿಗೋಸ್ಕರ ಹೆಚ್ಚು ಹೆಚ್ಚು ಮೇಲ್ಮಟ್ಟದ ದುಷ್ಕರ ಕರ್ಮಗಳನ್ನು ಎಸಗುತ್ತಾರೆ.

01115014a ಸಾ ತ್ವಂ ಮಾದ್ರೀಂ ಪ್ಲವೇನೇವ ತಾರಯೇಮಾಮನಿಂದಿತೇ|

01115014c ಅಪತ್ಯಸಂವಿಭಾಗೇನ ಪರಾಂ ಕೀರ್ತಿಮವಾಪ್ನುಹಿ||

ಅನಿಂದಿತೇ! ನೀನು ಮಾದ್ರಿಯನ್ನು ನಮ್ಮ ಈ ಹಡಗಿನಿಂದ ಪಾರುಮಾಡಿಸಬೇಕು. ಅವಳಿಗೆ ಮಕ್ಕಳನ್ನು ನೀಡುವುದರಿಂದ ನೀನು ಅತ್ಯಂತ ಕೀರ್ತಿಯನ್ನು ಪಡೆಯುತ್ತೀಯೆ.”

01115015a ಏವಮುಕ್ತಾಬ್ರವೀನ್ಮಾದ್ರೀಂ ಸಕೃಚ್ಚಿಂತಯ ದೈವತಂ|

01115015c ತಸ್ಮಾತ್ತೇ ಭವಿತಾಪತ್ಯಮನುರೂಪಮಸಂಶಯಂ||

ತಕ್ಷಣವೇ ಅವಳು ಮಾದ್ರಿಯನ್ನು ಕರೆದು ಹೇಳಿದಳು: “ಮಾದ್ರಿ! ಯಾರಾದರೂ ದೇವತೆಯನ್ನು ಒಮ್ಮೆ ಮಾತ್ರ ಯೋಚಿಸು. ಅವನಿಂದ ಅನುರೂಪ ಪುತ್ರನನ್ನು ಪಡೆಯುತ್ತೀಯೆ. ಸಂಶಯವೇ ಇಲ್ಲ.”

01115016a ತತೋ ಮಾದ್ರೀ ವಿಚಾರ್ಯೈವ ಜಗಾಮ ಮನಸಾಶ್ವಿನೌ|

01115016c ತಾವಾಗಮ್ಯ ಸುತೌ ತಸ್ಯಾಂ ಜನಯಾಮಾಸತುರ್ಯಮೌ||

01115017a ನಕುಲಂ ಸಹದೇವಂ ಚ ರೂಪೇಣಾಪ್ರತಿಮೌ ಭುವಿ|

01115017c ತಥೈವ ತಾವಪಿ ಯಮೌ ವಾಗುವಾಚಾಶರೀರಿಣೀ||

ನಂತರ ಮಾದ್ರಿಯು ವಿಚಾರಮಾಡಿ ಮನಸಾ ಅಶ್ವಿನಿಯರಲ್ಲಿ ಹೋದಳು. ಅವರು ಬಂದು ಅವಳಲ್ಲಿ ರೂಪದಲ್ಲಿ ಭೂಮಿಯಲ್ಲಿಯೇ ಅಪ್ರತಿಮ ನಕುಲ ಸಹದೇವರೆಂಬ ಅವಳಿ ಮಕ್ಕಳನ್ನು ಹುಟ್ಟಿಸಿದರು. ಈ ಅವಳಿ ಮಕ್ಕಳು ಹುಟ್ಟಿದಾಗಲೂ ಅಶರೀರವಾಣಿಯೊಂದು ಹೇಳಿತು:

01115018a ರೂಪಸತ್ತ್ವಗುಣೋಪೇತಾವೇತಾವನ್ಯಾಂಜನಾನತಿ|

01115018c ಭಾಸತಸ್ತೇಜಸಾತ್ಯರ್ಥಂ ರೂಪದ್ರವಿಣಸಂಪದಾ||

“ಅನ್ಯ ಜನರಿಗಿಂತ ಅಧಿಕ ರೂಪ ಸತ್ವ ಗುಣೋಪೇತರಾದ ಇವರು ಅವರ ತೇಜಸ್ಸು, ರೂಪ ಮತ್ತು ದ್ರವಿಣ ಸಂಪತ್ತಿನಿಂದ ಬೆಳಗುತ್ತಾರೆ!”

01115019a ನಾಮಾನಿ ಚಕ್ರಿರೇ ತೇಷಾಂ ಶತಶೃಂಗನಿವಾಸಿನಃ|

01115019c ಭಕ್ತ್ಯಾ ಚ ಕರ್ಮಣಾ ಚೈವ ತಥಾಶೀರ್ಭಿರ್ವಿಶಾಂ ಪತೇ||

ವಿಶಾಂಪತೇ! ಶತಶೃಂಗವಾಸಿಗಳು ಅವರಿಗೆ ಹೆಸರುಗಳನ್ನಿತ್ತರು ಮತ್ತು ಭಕ್ತಿ ಕರ್ಮಗಳಿಂದ ಅಶೀರ್ವದಿಸಿದರು.

01115020a ಜ್ಯೇಷ್ಠಂ ಯುಧಿಷ್ಠಿರೇತ್ಯಾಹುರ್ಭೀಮಸೇನೇತಿ ಮಧ್ಯಮಂ|

01115020c ಅರ್ಜುನೇತಿ ತೃತೀಯಂ ಚ ಕುಂತೀಪುತ್ರಾನಕಲ್ಪಯನ್||

ಜ್ಯೇಷ್ಠನನ್ನು ಯುಧಿಷ್ಠಿರನೆಂದು ಕರೆದರು, ಮಧ್ಯಮನನ್ನು ಭೀಮಸೇನ ಎಂದು, ತೃತೀಯನನ್ನು ಅರ್ಜುನನೆಂದೂ ಹೀಗೆ ಕುಂತೀ ಪುತ್ರರಿಗೆ ಹೆಸರುಗಳನ್ನಿಟ್ಟರು.

01115021a ಪೂರ್ವಜಂ ನಕುಲೇತ್ಯೇವಂ ಸಹದೇವೇತಿ ಚಾಪರಂ|

01115021c ಮಾದ್ರೀಪುತ್ರಾವಕಥಯಂಸ್ತೇ ವಿಪ್ರಾಃ ಪ್ರೀತಮಾನಸಾಃ|

01115021e ಅನುಸಂವತ್ಸರಂ ಜಾತಾ ಅಪಿ ತೇ ಕುರುಸತ್ತಮಾಃ||

ಪ್ರೀತಮನಸ್ಕ ವಿಪ್ರರು ಮಾದ್ರೀಪುತ್ರರಿಗೂ ಹೆಸರುಗಳನ್ನಿಟ್ಟರು: ಹಿರಿಯವನನ್ನು ನಕುಲನೆಂದೂ ಮತ್ತು ಕಿರಿಯವನನ್ನು ಸಹದೇವನೆಂದೂ ಕರೆದರು. ಈ ಕುರುಸತ್ತಮರು ಒಂದೊಂದು ವರ್ಷದ ಅಂತರದಲ್ಲಿ ಹುಟ್ಟಿದ್ದರು.

01115022a ಕುಂತೀಮಥ ಪುನಃ ಪಾಂಡುರ್ಮಾದ್ರ್ಯರ್ಥೇ ಸಮಚೋದಯತ್|

01115022c ತಮುವಾಚ ಪೃಥಾ ರಾಜನ್ರಹಸ್ಯುಕ್ತಾ ಸತೀ ಸದಾ||

ಪಾಂಡುವು ಮಾದ್ರಿಯ ಪರವಾಗಿ ಏಕಾಂತದಲ್ಲಿ ರಹಸ್ಯದಲ್ಲಿ ಕುಂತಿಯಲ್ಲಿ ಪುನಃ ಕೇಳಿಕೊಂಡನು. ಆದರೆ ಪೃಥಾಳು ರಾಜನಿಗೆ ಈ ರೀತಿ ಉತ್ತರಿಸಿದಳು:

01115023a ಉಕ್ತಾ ಸಕೃದ್ದ್ವಂದ್ವಮೇಷಾ ಲೇಭೇ ತೇನಾಸ್ಮಿ ವಂಚಿತಾ|

01115023c ಬಿಭೇಮ್ಯಸ್ಯಾಃ ಪರಿಭವಾನ್ನಾರೀಣಾಂ ಗತಿರೀದೃಶೀ||

“ನಾನು ಅವಳಿಗೆ ಒಂದೇ ಬಾರಿ ಕೊಡುತ್ತೇನೆ ಎಂದರೂ ಅವಳು ಈರ್ವರನ್ನು ಪಡೆದು ನನಗೆ ವಂಚನೆ ಮಾಡಿದಳು. ನನ್ನನ್ನು ಹಿಂದೆಹಾಕುವಳು ಎಂಬ ಭಯವಿದೆ. ನಾರಿಯರ ಸ್ವಭಾವವೇ ಇದು.

01115024a ನಾಜ್ಞಾಸಿಷಮಹಂ ಮೂದಾ ದ್ವಂದ್ವಾಹ್ವಾನೇ ಫಲದ್ವಯಂ|

01115024c ತಸ್ಮಾನ್ನಾಹಂ ನಿಯೋಕ್ತವ್ಯಾ ತ್ವಯೈಷೋಽಸ್ತು ವರೋ ಮಮ||

ಎರಡು ದೇವತೆಗಳನ್ನು ಕರೆದು ಎರಡು ಮಕ್ಕಳನ್ನು ಪಡೆಯಬಹುದೆಂದು ಮೂಢಳಾದ ನಾನು ತಿಳಿದಿರಲಿಲ್ಲ. ಆದುದರಿಂದ ಇದರ ಕುರಿತು ನನಗೆ ಪುನಃ ಅಪ್ಪಣೆಮಾಡಬೇಡ. ಇದೇ ನಿನ್ನಿಂದ ನನಗೆ ಬೇಕಾದ ವರ.”

01115025a ಏವಂ ಪಾಂಡೋಃ ಸುತಾಃ ಪಂಚ ದೇವದತ್ತಾ ಮಹಾಬಲಾಃ|

01115025c ಸಂಭೂತಾಃ ಕೀರ್ತಿಮಂತಸ್ತೇ ಕುರುವಂಶವಿವರ್ಧನಾಃ||

ಈ ರೀತಿ ಮಹಾಬಲಶಾಲಿ, ಕುರುವಂಶವಿವರ್ಧನ, ಕೀರ್ತಿವಂತ, ದೇವದತ್ತ ಆ ಐವರು ಸುತರು ಪಾಂಡುವಿಗೆ ಜನಿಸಿದರು.

01115026a ಶುಭಲಕ್ಷಣಸಂಪನ್ನಾಃ ಸೋಮವತ್ಪ್ರಿಯದರ್ಶನಾಃ|

01115026c ಸಿಂಹದರ್ಪಾ ಮಹೇಷ್ವಾಸಾಃ ಸಿಂಹವಿಕ್ರಾಂತಗಾಮಿನಃ|

01115026e ಸಿಂಹಗ್ರೀವಾ ಮನುಷ್ಯೇಂದ್ರಾ ವವೃಧುರ್ದೇವವಿಕ್ರಮಾಃ||

ಆ ಶುಭಲಕ್ಷಣಸಂಪನ್ನ, ಚಂದ್ರನಂತೆ ಸುಂದರ, ಸಿಂಹದರ್ಪ, ಮಹೇಷ್ವಾಸ, ಸಿಂಗವಿಕ್ರಾಂತಗಾಮಿ, ಸಿಂಹಗ್ರೀವ ಮನುಷ್ಯೇಂದ್ರರು ದೇವ ವಿಕ್ರಮಿಗಳಾಗಿ ಬೆಳೆದರು.

01115027a ವಿವರ್ಧಮಾನಾಸ್ತೇ ತತ್ರ ಪುಣ್ಯೇ ಹೈಮವತೇ ಗಿರೌ|

01115027c ವಿಸ್ಮಯಂ ಜನಯಾಮಾಸುರ್ಮಹರ್ಷೀಣಾಂ ಸಮೇಯುಷಾಂ||

ಆ ಪುಣ್ಯಕರ ಹಿಮಾಲಯ ಪರ್ವತದಲ್ಲಿ ಬೆಳೆಯುತ್ತಿರುವ ಅವರು ಅಲ್ಲಿ ಸೇರಿದ್ದ ಮಹರ್ಷಿಗಳಿಗೆ ವಿಸ್ಮಯವನ್ನುಂಟುಮಾಡಿದರು.

01115028a ತೇ ಚ ಪಂಚ ಶತಂ ಚೈವ ಕುರುವಂಶವಿವರ್ಧನಾಃ|

01115028c ಸರ್ವೇ ವವೃಧುರಲ್ಪೇನ ಕಾಲೇನಾಪ್ಸ್ವಿವ ನೀರಜಾಃ||

ಈ ಐವರು ಮತ್ತು ಇತರ ನೂರು ಗುರುವಂಶವಿವರ್ಧನ ಸರ್ವರೂ ಸರೋವರದಲ್ಲಿದ್ದ ಕಮಲಗಳಂತೆ ಸ್ವಲ್ಪ ಕಾಲದಲ್ಲಿಯೇ ಬೆಳೆದು ದೊಡ್ಡವರಾದರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡವೋತ್ಪತ್ತೌ ಪಂಚದಶಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡವೋತ್ಪತ್ತಿ ಎನ್ನುವ ನೂರಾಹದಿನೈದನೆಯ ಅಧ್ಯಾಯವು.

Comments are closed.