Adi Parva: Chapter 113

ಆದಿ ಪರ್ವ: ಸಂಭವ ಪರ್ವ

೧೧೩

ಶ್ವೇತಕೇತುವಿನ ಚರಿತ್ರೆಯನ್ನು ಉದಾಹರಿಸಿ ಪಾಂಡುವು ಕುಂತಿಯಲ್ಲಿ ಬೇರೆಯವರಿಂದ ತನಗೆ ಮಕ್ಕಳನ್ನು ಪಡೆಯುವಂತೆ ಕೇಳಿಕೊಳ್ಳುವುದು (೧-೩೧). ಕುಂತಿಯು ತನ್ನ ತಂದೆಯ ಮನೆಯಲ್ಲಿ ಮುನಿಯೋರ್ವನಿಂದ ದೊರಕಿದ್ದ ಮಂತ್ರಗುಚ್ಛಗಳ ಕುರಿತು ಹೇಳುವುದು (೩೨-೩೭). ಯಾವ ದೇವತೆಯನ್ನು ಆಹ್ವಾನಿಸಬೇಕೆಂದು ಕೇಳಲು ಪಾಂಡುವು ಕುಂತಿಗೆ ಧರ್ಮನನ್ನು ಕರೆಯುವಂತೆ ಸೂಚಿಸುವುದು (೨೮-೪೩).

01113001 ವೈಶಂಪಾಯನ ಉವಾಚ|

01113001a ಏವಮುಕ್ತಸ್ತಯಾ ರಾಜಾ ತಾಂ ದೇವೀಂ ಪುನರಬ್ರವೀತ್|

01113001c ಧರ್ಮವಿದ್ಧರ್ಮಸಂಯುಕ್ತಮಿದಂ ವಚನಮುತ್ತಮಂ||

ವೈಶಂಪಾಯನನು ಹೇಳಿದನು: “ಈ ಮಾತುಗಳನ್ನು ಕೇಳಿದ ರಾಜನು ಆ ದೇವಿಗೆ ಧರ್ಮವಿದ್ಧರ್ಮಸಂಯುಕ್ತ ಈ ಉತ್ತಮ ನುಡಿಗಳಿಂದ ಉತ್ತರಿಸಿದನು:

01113002a ಏವಮೇತತ್ಪುರಾ ಕುಂತಿ ವ್ಯುಷಿತಾಶ್ವಶ್ಚಕಾರ ಹ|

01113002c ಯಥಾ ತ್ವಯೋಕ್ತಂ ಕಲ್ಯಾಣಿ ಸ ಹ್ಯಾಸೀದಮರೋಪಮಃ||

“ಕುಂತಿ! ಕಲ್ಯಾಣೀ! ಹಿಂದೆ ವ್ಯುಷಿತಾಶ್ವನು ನೀನು ಹೇಳಿದ ಹಾಗೆಯೇ ಮಾಡಿದನು. ಅವನು ದೇವ ಸಮನಾಗಿದ್ದನು.

01113003a ಅಥ ತ್ವಿಮಂ ಪ್ರವಕ್ಷ್ಯಾಮಿ ಧರ್ಮಂ ತ್ವೇತಂ ನಿಬೋಧ ಮೇ|

01113003c ಪುರಾಣಂ ಋಷಿಭಿರ್ದೃಷ್ಟಂ ಧರ್ಮವಿದ್ಭಿರ್ಮಹಾತ್ಮಭಿಃ||

ಈಗ ನಾನು ನಿನಗೆ ಪುರಾಣಗಳಲ್ಲಿ ಋಷಿಗಳು ಕಂಡ, ಮಹಾತ್ಮರು ಧರ್ಮದ ಕುರಿತು ತಿಳಿದುಕೊಂಡಿದ್ದ ಧರ್ಮವನ್ನು ಹೇಳುತ್ತೇನೆ. ನಾನು ಹೇಳುವುದನ್ನು ಕೇಳು.

01113004a ಅನಾವೃತಾಃ ಕಿಲ ಪುರಾ ಸ್ತ್ರಿಯ ಆಸನ್ವರಾನನೇ|

01113004c ಕಾಮಚಾರವಿಹಾರಿಣ್ಯಃ ಸ್ವತಂತ್ರಾಶ್ಚಾರುಲೋಚನೇ||

ವರಾನನೇ! ಚಾರುಲೋಚನೇ! ಹಿಂದೆ ಸ್ತ್ರೀಯರು ಕಾಮಚಾರ ವಿಹಾರಗಳಲ್ಲಿ ಸ್ವತಂತ್ರರಾಗಿದ್ದು ಯಾವುದೇ ಕಟ್ಟುಪಾಡುಗಳಿಲ್ಲದೇ ಇರುತ್ತಿದ್ದರು.

01113005a ತಾಸಾಂ ವ್ಯುಚ್ಚರಮಾಣಾನಾಂ ಕೌಮಾರಾತ್ಸುಭಗೇ ಪತೀನ್|

01113005c ನಾಧರ್ಮೋಽಭೂದ್ವರಾರೋಹೇ ಸ ಹಿ ಧರ್ಮಃ ಪುರಾಭವತ್||

ವರಾರೋಹೆ! ಕೌಮಾರ್ಯದಿಂದಲೇ ಅವರು ತಮ್ಮ ಪತಿಗಳಿಗೆ ನಡೆದುಕೊಳ್ಳುತ್ತಿರಲಿಲ್ಲ ಮತ್ತು ಸಾಕಷ್ಟು ಅಧರ್ಮಿಗಳಾಗಿದ್ದರು. ಯಾಕೆಂದರೆ ಹಿಂದಿನ ಆ ಕಾಲದಲ್ಲಿ ಅದೇ ಧರ್ಮವಾಗಿತ್ತು.

01113006a ತಂ ಚೈವ ಧರ್ಮಂ ಪೌರಾಣಂ ತಿರ್ಯಗ್ಯೋನಿಗತಾಃ ಪ್ರಜಾಃ|

01113006c ಅದ್ಯಾಪ್ಯನುವಿಧೀಯಂತೇ ಕಾಮದ್ವೇಷವಿವರ್ಜಿತಾಃ|

01113006e ಪುರಾಣದೃಷ್ಟೋ ಧರ್ಮೋಽಯಂ ಪೂಜ್ಯತೇ ಚ ಮಹರ್ಷಿಭಿಃ||

01113007a ಉತ್ತರೇಷು ಚ ರಂಭೋರು ಕುರುಷ್ವದ್ಯಾಪಿ ವರ್ತತೇ|

01113007c ಸ್ತ್ರೀಣಾಮನುಗ್ರಹಕರಃ ಸ ಹಿ ಧರ್ಮಃ ಸನಾತನಃ||

ಈಗಲೂ ಕೂಡ ಹಳೆಯ ಈ ಧರ್ಮವನ್ನು ಕೀಳು ಯೋನಿಗಳಲ್ಲಿ ಹುಟ್ಟಿದವುಗಳು ಕಾಮ ದ್ವೇಷ ವಿವರ್ಜಿತರಾಗಿ ಪರಿಪಾಲಿಸುತ್ತಿವೆ. ಹಿಂದೆ ನೋಡಿದ್ದ ಈ ಧರ್ಮವನ್ನು ಮಹರ್ಷಿಗಳೂ ಗೌರವಿಸುತ್ತಾರೆ. ರಂಭೋರು! ಉತ್ತರ ಕುರುಗಳಲ್ಲಿ ಇದು ಇಂದೂ ನಡೆಯುತ್ತದೆ. ಸ್ತ್ರೀಯರಿಗೆ ಇದೇ ಅನುಗ್ರಹಕಾರಕ ಸನಾತನ ಧರ್ಮ.

01113008a ಅಸ್ಮಿಂಸ್ತು ಲೋಕೇ ನಚಿರಾನ್ಮರ್ಯಾದೇಯಂ ಶುಚಿಸ್ಮಿತೇ|

01113008c ಸ್ಥಾಪಿತಾ ಯೇನ ಯಸ್ಮಾಚ್ಚ ತನ್ಮೇ ವಿಸ್ತರತಃ ಶೃಣು||

ಆದರೆ ಸ್ವಲ್ಪವೇ ಸಮಯದಲ್ಲಿ ಈಗಿನ ಲೋಕದಲ್ಲಿರುವ ಈ ಕಟ್ಟುಪಾಡುಗಳನ್ನು ರಚಿಸಲಾಯಿತು. ಶುಚಿಸ್ಮಿತೇ! ಈ ಕಟ್ಟುಪಾಡುಗಳನ್ನು ಯಾರು ಸ್ಥಾಪಿಸಿದರು ಮತ್ತು ಏಕೆ ಎನ್ನುವುದನ್ನು ವಿಸ್ತಾರವಾಗಿ ಕೇಳು.

01113009a ಬಭೂವೋದ್ದಾಲಕೋ ನಾಮ ಮಹರ್ಷಿರಿತಿ ನಃ ಶ್ರುತಂ|

01113009c ಶ್ವೇತಕೇತುರಿತಿ ಖ್ಯಾತಃ ಪುತ್ರಸ್ತಸ್ಯಾಭವನ್ಮುನಿಃ||

ಉದ್ದಾಲಕ ಎಂಬ ಹೆಸರಿನ ಮಹರ್ಷಿಯಿದ್ದ ಎಂದು ಕೇಳಿದ್ದೇವೆ. ಆ ಮುನಿಗೆ ಶ್ವೇತಕೇತು ಎಂದು ವಿಖ್ಯಾತ ಮಗನಿದ್ದನು.

01113010a ಮರ್ಯಾದೇಯಂ ಕೃತಾ ತೇನ ಮಾನುಷೇಷ್ವಿತಿ ನಃ ಶ್ರುತಂ|

01113010c ಕೋಪಾತ್ಕಮಲಪತ್ರಾಕ್ಷಿ ಯದರ್ಥಂ ತನ್ನಿಬೋಧ ಮೇ||

ಕಮಲಪತ್ರಾಕ್ಷೀ! ಇವನೇ ಕೋಪದಲ್ಲಿ ಮನುಷ್ಯರಲ್ಲಿ ಈ ಕಟ್ಟುಪಾಡನ್ನು ಮಾಡಿದನು ಎಂದು ಕೇಳಿದ್ದೇವೆ. ಯಾಕೆ ಎನ್ನುವುದನ್ನು ಹೇಳುತ್ತೇನೆ ಕೇಳು.

01113011a ಶ್ವೇತಕೇತೋಃ ಕಿಲ ಪುರಾ ಸಮಕ್ಷಂ ಮಾತರಂ ಪಿತುಃ|

01113011c ಜಗ್ರಾಹ ಬ್ರಾಹ್ಮಣಃ ಪಾಣೌ ಗಚ್ಛಾವ ಇತಿ ಚಾಬ್ರವೀತ್||

ಒಮ್ಮೆ ಶ್ವೇತಕೇತು ಮತ್ತು ಅವನ ತಂದೆಯ ಎದಿರಿನಲ್ಲಿಯೇ ಓರ್ವ ಬ್ರಾಹ್ಮಣನು ಅವನ ತಾಯಿಯ ಕೈ ಹಿಡಿದು “ಹೋಗೋಣ!”ಎಂದು ಹೇಳಿದನು.

01113012a ಋಷಿಪುತ್ರಸ್ತತಃ ಕೋಪಂ ಚಕಾರಾಮರ್ಷಿತಸ್ತದಾ|

01113012c ಮಾತರಂ ತಾಂ ತಥಾ ದೃಷ್ಟ್ವಾ ನೀಯಮಾನಾಂ ಬಲಾದಿವ||

ಬಲವಂತವೋ ಎನ್ನುವಂತೆ ತನ್ನ ತಾಯಿಯನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿದ ಋಷಿಪುತ್ರನು ಉದ್ವಿಗ್ನನಾಗಿ ಕೋಪಗೊಂಡನು. 

01113013a ಕ್ರುದ್ಧಂ ತಂ ತು ಪಿತಾ ದೃಷ್ಟ್ವಾ ಶ್ವೇತಕೇತುಮುವಾಚ ಹ|

01113013c ಮಾ ತಾತ ಕೋಪಂ ಕಾರ್ಷೀಸ್ತ್ವಮೇಷ ಧರ್ಮಃ ಸನಾತನಃ||

ಕೃದ್ಧನಾದ ಅವನನ್ನು ನೋಡಿದ ಅವನ ತಂದೆಯು ಶ್ವೇತಕೇತುವಿಗೆ “ಮಗು! ಸಿಟ್ಟಾಗಬೇಡ. ಇದೇ ಸನಾತನ ಧರ್ಮ!”ಎಂದನು.

01113014a ಅನಾವೃತಾ ಹಿ ಸರ್ವೇಷಾಂ ವರ್ಣಾನಾಮಂಗನಾ ಭುವಿ|

01113014c ಯಥಾ ಗಾವಃ ಸ್ಥಿತಾಸ್ತಾತ ಸ್ವೇ ಸ್ವೇ ವರ್ಣೇ ತಥಾ ಪ್ರಜಾಃ||

“ಎಲ್ಲ ವರ್ಣದ ಅಂಗನೆಯರೂ ಈ ಭೂಮಿಯಲ್ಲಿ ಗೋವುಗಳಂತೆ ಅನಾವೃತರಾಗಿದ್ದಾರೆ. ಹೀಗೆ ಅವರವರ ವರ್ಣದ ಪ್ರಜೆಗಳು ನಡೆದುಕೊಳ್ಳುತ್ತಾರೆ.”

01113015a ಋಷಿಪುತ್ರೋಽಥ ತಂ ಧರ್ಮಂ ಶ್ವೇತಕೇತುರ್ನ ಚಕ್ಷಮೇ|

01113015c ಚಕಾರ ಚೈವ ಮರ್ಯಾದಾಮಿಮಾಂ ಸ್ತ್ರೀಪುಂಸಯೋರ್ಭುವಿ||

01113016a ಮಾನುಷೇಷು ಮಹಾಭಾಗೇ ನ ತ್ವೇವಾನ್ಯೇಷು ಜಂತುಷು|

01113016c ತದಾ ಪ್ರಭೃತಿ ಮರ್ಯಾದಾ ಸ್ಥಿತೇಯಮಿತಿ ನಃ ಶ್ರುತಂ||

ಋಷಿಪುತ್ರ ಶ್ವೇತಕೇತುವು ಆಗ ಇರುವ ಧರ್ಮವನ್ನು ನಿರ್ಲಕ್ಷಿಸಲಿಲ್ಲ. ಆದರೆ ಈ ಭುವಿಯ ಸ್ತ್ರೀ-ಪುರುಷರಿಗೆ ಮಾತ್ರ ಈ ಕಟ್ಟುನಿಟ್ಟನ್ನು ಮಾಡಿದನು. ಮಹಾಭಾಗೆ! ಇದು ಮನುಷ್ಯರಿಗೆ ಮಾತ್ರ. ಇತರ ಜಂತುಗಳಿಗೆ ಅನ್ವಯಿಸುವುದಿಲ್ಲ. ಅಂದಿನಿಂದ ಈ ಕಟ್ಟುನಿಟ್ಟು ಜಾರಿಯಲ್ಲಿದೆ ಎಂದು ಕೇಳುತ್ತೇವೆ.

01113017a ವ್ಯುಚ್ಚರಂತ್ಯಾಃ ಪತಿಂ ನಾರ್ಯಾ ಅದ್ಯ ಪ್ರಭೃತಿ ಪಾತಕಂ|

01113017c ಭ್ರೂಣಹತ್ಯಾಕೃತಂ ಪಾಪಂ ಭವಿಷ್ಯತ್ಯಸುಖಾವಹಂ||

“ಇಂದಿನಿಂದ ನಾರಿಯು ತನ್ನ ಪತಿಯನ್ನು ಬಿಟ್ಟು ಬೇರೆಯವರೊಡನೆ ಹೋಗುವುದು ಭ್ರೂಣಹತ್ಯೆಯನ್ನು ಮಾಡುವುದರಿಂದಾಗುವ ಪಾಪಕ್ಕೆ ಸಮನಾಗುತ್ತದೆ. ಇದು ಅತ್ಯಂತ ದುಃಖವನ್ನು ತರುತ್ತದೆ.

01113018a ಭಾರ್ಯಾಂ ತಥಾ ವ್ಯುಚ್ಚರತಃ ಕೌಮಾರೀಂ ಬ್ರಹ್ಮಚಾರಿಣೀಂ|

01113018c ಪತಿವ್ರತಾಮೇತದೇವ ಭವಿತಾ ಪಾತಕಂ ಭುವಿ||

ಕೌಮಾರಿ ಬ್ರಹ್ಮಚಾರಿಣಿ ಪತಿವ್ರತಾ ಪತ್ನಿಯನ್ನು ಬಯಸುವುದೂ ಕೂಡ ಈ ಭುವಿಯಲ್ಲಿ ಪಾತಕವೆನಿಸಿಕೊಳ್ಳುತ್ತದೆ.

01113019a ಪತ್ಯಾ ನಿಯುಕ್ತಾ ಯಾ ಚೈವ ಪತ್ನ್ಯಪತ್ಯಾರ್ಥಮೇವ ಚ|

01113019c ನ ಕರಿಷ್ಯತಿ ತಸ್ಯಾಶ್ಚ ಭವಿಷ್ಯತ್ಯೇತದೇವ ಹಿ||

ಮಕ್ಕಳನ್ನು ಪಡೆಯುವ ಉದ್ದೇಶದಿಂದ ಪತಿಯು ಕೂಡಲಿಚ್ಛಿಸಿದಾಗ ಪತ್ನಿಯು ನಿರಾಕರಿಸಿದರೂ ಇದೇ ರೀತಿಯ ಪಾಪವೆನಿಸಿಕೊಳ್ಳುತ್ತದೆ.”

01113020a ಇತಿ ತೇನ ಪುರಾ ಭೀರು ಮರ್ಯಾದಾ ಸ್ಥಾಪಿತಾ ಬಲಾತ್|

01113020c ಉದ್ದಾಲಕಸ್ಯ ಪುತ್ರೇಣ ಧರ್ಮ್ಯಾ ವೈ ಶ್ವೇತಕೇತುನಾ||

ಭೀರು! ಈ ರೀತಿ ಹಿಂದೆ ಉದ್ದಾಲಕ ಪುತ್ರ ಶ್ವೇತಕೇತುವು ಬಲವಂತವಾಗಿ ಧರ್ಮವನ್ನು ಹೊಂದಿಕೊಂಡೇ ಈ ಕಟ್ಟುನಿಟ್ಟನ್ನು ಸ್ಥಾಪಿಸಿದನು.

01113021a ಸೌದಾಸೇನ ಚ ರಂಭೋರು ನಿಯುಕ್ತಾಪತ್ಯಜನ್ಮನಿ|

01113021c ಮದಯಂತೀ ಜಗಾಮರ್ಷಿಂ ವಸಿಷ್ಠಮಿತಿ ನಃ ಶ್ರುತಂ||

01113022a ತಸ್ಮಾಲ್ಲೇಭೇ ಚ ಸಾ ಪುತ್ರಮಶ್ಮಕಂ ನಾಮ ಭಾಮಿನೀ|

01113022c ಭಾರ್ಯಾ ಕಲ್ಮಾಷಪಾದಸ್ಯ ಭರ್ತುಃ ಪ್ರಿಯಚಿಕೀರ್ಷಯಾ||

ರಂಭೋರು! ಸೌದಾಸನು ತನ್ನ ಪತ್ನಿ ಮದಯಂತಿಯನ್ನು ಸಂತಾನಕ್ಕಾಗಿ ನಿಯುಕ್ತಗೊಳಿಸಿದಾಗ, ಅವಳು ಮಹರ್ಷಿ ವಸಿಷ್ಠನ ಬಳಿ ಹೋದಳು ಎಂದು ಕೇಳಿಲ್ಲವೇ? ಅವನಿಂದ ಕಲ್ಮಾಷಪಾದನ ಭಾರ್ಯೆಯು ಅಶ್ಮಕ ಎಂಬ ಹೆಸರಿನ ಪುತ್ರನನ್ನು ಪಡೆದು ತನ್ನ ಪತಿಯನ್ನು ಸಂತೋಷಗೊಳಿಸಿದಳು.

01113023a ಅಸ್ಮಾಕಮಪಿ ತೇ ಜನ್ಮ ವಿದಿತಂ ಕಮಲೇಕ್ಷಣೇ|

01113023c ಕೃಷ್ಣದ್ವೈಪಾಯನಾದ್ಭೀರು ಕುರೂಣಾಂ ವಂಶವೃದ್ಧಯೇ||

ಕಮಲೇಕ್ಷಣೇ! ಭೀರು! ನಮ್ಮ ಜನ್ಮವೂ ಕೂಡ ಕುರು ವಂಶವೃದ್ಧಿಗೋಸ್ಕರ ಕೃಷ್ಣದ್ವೈಪಾಯನನಿಂದ ಆಯಿತೆಂದು ತಿಳಿದಿದೆ.

01113024a ಅತ ಏತಾನಿ ಸರ್ವಾಣಿ ಕಾರಣಾನಿ ಸಮೀಕ್ಷ್ಯ ವೈ|

01113024c ಮಮೈತದ್ವಚನಂ ಧರ್ಮ್ಯಂ ಕರ್ತುಮರ್ಹಸ್ಯನಿಂದಿತೇ||

ಅನಿಂದಿತೇ! ಈ ಎಲ್ಲ ಕಾರಣಗಳನ್ನು ಸಮೀಕ್ಷಿಸಿ ನೀನು ಕೂಡ ಧರ್ಮಕ್ಕೆ ಹೊಂದಿಕೊಂಡೇ ಇರುವ ನನ್ನ ಈ ಮಾತುಗಳಂತೆ ಮಾಡುವುದು ಸರಿ.

01113025a ಋತಾವೃತೌ ರಾಜಪುತ್ರಿ ಸ್ತ್ರಿಯಾ ಭರ್ತಾ ಯತವ್ರತೇ|

01113025c ನಾತಿವರ್ತವ್ಯ ಇತ್ಯೇವಂ ಧರ್ಮಂ ಧರ್ಮವಿದೋ ವಿದುಃ||

ಕಟ್ಟುನಿಟ್ಟು ವ್ರತಾದಿಗಳನ್ನು ಮಾಡುತ್ತಿರುವ ರಾಜಪುತ್ರಿ! ಧರ್ಮವನ್ನು ತಿಳಿದ ಪತಿವ್ರತೆಯರಾದ ಸ್ತ್ರೀಯರು ಪತಿಯ ಮಾತನ್ನು ಉಲ್ಲಂಘಿಸದೇ ಇರುವುದೇ ಧರ್ಮವೆಂದು ತಿಳಿಯುತ್ತಾರೆ.

01113026a ಶೇಷೇಷ್ವನ್ಯೇಷು ಕಾಲೇಷು ಸ್ವಾತಂತ್ರ್ಯಂ ಸ್ತ್ರೀ ಕಿಲಾರ್ಹತಿ|

01113026c ಧರ್ಮಮೇತಂ ಜನಾಃ ಸಂತಃ ಪುರಾಣಂ ಪರಿಚಕ್ಷತೇ||

ಬೇರೆ ಎಲ್ಲ ಕಾಲದಲ್ಲಿಯೂ ಸ್ತ್ರೀಯು ಸ್ವತಂತ್ರಳಾಗಿದ್ದಾಳೆ ಸರಿ. ಸಂತ ಜನರು ಮತ್ತು ಪುರಾಣಗಳು ಇದನ್ನೇ ಧರ್ಮವೆಂದು ಪರಿಗಣಿಸುತ್ತಾರೆ.

01113027a ಭರ್ತಾ ಭಾರ್ಯಾಂ ರಾಜಪುತ್ರಿ ಧರ್ಮ್ಯಂ ವಾಧರ್ಮ್ಯಮೇವ ವಾ|

01113027c ಯದ್ಬ್ರೂಯಾತ್ತತ್ತಥಾ ಕಾರ್ಯಮಿತಿ ಧರ್ಮವಿದೋ ವಿದುಃ||

01113028a ವಿಶೇಷತಃ ಪುತ್ರಗೃದ್ಧೀ ಹೀನಃ ಪ್ರಜನನಾತ್ಸ್ವಯಂ|

01113028c ಯಥಾಹಮನವದ್ಯಾಂಗಿ ಪುತ್ರದರ್ಶನಲಾಲಸಃ||

ರಾಜಪುತ್ರಿ! ಭಾರ್ಯೆಯು ತನ್ನ ಪತಿಯು ಏನು ಹೇಳುತ್ತಾನೋ - ಧರ್ಮವಾಗಿರಲಿ ಅಥವಾ ಅಧರ್ಮವಾಗಿರಲಿ - ಹಾಗೆಯೇ ನಡೆದುಕೊಳ್ಳಬೇಕು ಎಂದು ಧರ್ಮವಿದರು ತಿಳಿದಿದ್ದಾರೆ.

01113029a ತಥಾ ರಕ್ತಾಂಗುಲಿತಲಃ ಪದ್ಮಪತ್ರನಿಭಃ ಶುಭೇ|

01113029c ಪ್ರಸಾದಾರ್ಥಂ ಮಯಾ ತೇಽಯಂ ಶಿರಸ್ಯಭ್ಯುದ್ಯತೋಽಂಜಲಿಃ||

ಶುಭೇ! ಈ ರೀತಿ ನಾನು ರಕ್ತಾಂಗುಲಿಗಳಡಿಯಲ್ಲಿ ಪದ್ಮಪತ್ರವನ್ನು ಹಿಡಿದಿರುವಂತೆ ನನ್ನ ತಲೆಯ ಮೇಲೆ ಕೈಜೋಡಿಸಿ ನಿನ್ನಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ.

01113030a ಮನ್ನಿಯೋಗಾತ್ಸುಕೇಶಾಂತೇ ದ್ವಿಜಾತೇಸ್ತಪಸಾಧಿಕಾತ್|

01113030c ಪುತ್ರಾನ್ಗುಣಸಮಾಯುಕ್ತಾನುತ್ಪಾದಯಿತುಮರ್ಹಸಿ|

01113030e ತ್ವತ್ಕೃತೇಽಹಂ ಪೃಥುಶ್ರೋಣಿ ಗಚ್ಛೇಯಂ ಪುತ್ರಿಣಾಂ ಗತಿಂ||

ಸುಕೇಶಾಂತೇ! ನನ್ನ ನಿಯೋಗದಂತೆ ಅಧಿಕ ತಪಸ್ವಿ ದ್ವಿಜನಿಂದ ಗುಣಸಂಪನ್ನ ಯುಕ್ತ ಪುತ್ರರನ್ನು ಪಡೆಯಬೇಕು. ಪೃಥುಶ್ರೋಣಿ! ನಿನ್ನ ಈ ಸಹಾಯದಿಂದ ನಾನು ಮಕ್ಕಳಿರುವವರ ಗತಿಯನ್ನು ಸೇರಬಲ್ಲೆ.”

01113031a ಏವಮುಕ್ತಾ ತತಃ ಕುಂತೀ ಪಾಂಡುಂ ಪರಪುರಂಜಯಂ|

01113031c ಪ್ರತ್ಯುವಾಚ ವರಾರೋಹಾ ಭರ್ತುಃ ಪ್ರಿಯಹಿತೇ ರತಾ||

ಇದನ್ನು ಕೇಳಿದ ಪ್ರಿಯಹಿತರತೆ ವರಾರೋಹೆ ಕುಂತಿಯು ಪರಪುರಂಜಯ ಪಾಂಡುವಿಗೆ ಈ ರೀತಿ ಉತ್ತರಿಸಿದಳು:

01113032a ಪಿತೃವೇಶ್ಮನ್ಯಹಂ ಬಾಲಾ ನಿಯುಕ್ತಾತಿಥಿಪೂಜನೇ|

01113032c ಉಗ್ರಂ ಪರ್ಯಚರಂ ತತ್ರ ಬ್ರಾಹ್ಮಣಂ ಸಂಶಿತವ್ರತಂ||

01113033a ನಿಗೂಢನಿಶ್ಚಯಂ ಧರ್ಮೇ ಯಂ ತಂ ದುರ್ವಾಸಸಂ ವಿದುಃ|

01113033c ತಮಹಂ ಸಂಶಿತಾತ್ಮಾನಂ ಸರ್ವಯತ್ನೈರತೋಷಯಂ||

“ನನ್ನ ತಂದೆಯ ಮನೆಯಲ್ಲಿ ಬಾಲಕಿಯಾಗಿದ್ದಾಗ ಅತಿಥಿ ಪೂಜೆಯಲ್ಲಿ ನಿಯುಕ್ತಗೊಂಡಿದ್ದೆನು. ಆಗ ಅಲ್ಲಿಗೆ ಸಂಶಿತವ್ರತ, ಉಗ್ರ, ಪರ್ಯಚರ, ಧರ್ಮದ ವಿಷಯದಲ್ಲಿ ನಿಗೂಢ ನಿಶ್ಚಯಗಳನ್ನೀಡುವ, ವಿದ್ವಾಂಸ ಬ್ರಾಹ್ಮಣ ದುರ್ವಾಸನು ಬಂದನು. ನಾನು ಆ ಸಂಶಿತಾತ್ಮನನ್ನು ಸರ್ವ ಯತ್ನಗಳಿಂದ ತೃಪ್ತಿಗೊಳಿಸಿದೆನು.

01113034a ಸ ಮೇಽಭಿಚಾರಸಂಯುಕ್ತಮಾಚಷ್ಟ ಭಗವಾನ್ವರಂ|

01113034c ಮಂತ್ರಗ್ರಾಮಂ ಚ ಮೇ ಪ್ರಾದಾದಬ್ರವೀಚ್ಚೈವ ಮಾಮಿದಂ||

ಸುಲಭವಾಗಿ ತೃಪ್ತಿಗೊಳ್ಳದ ಆ ಶ್ರೇಷ್ಠ ಭಗವಾನನನ್ನು ನನ್ನ ಎಲ್ಲ ಪ್ರಯತ್ನಗಳಿಂದ ಸಂತುಷ್ಠಗೊಳಿಸಿದೆನು. ಅದಕ್ಕೆ ಅವನು ನನಗೆ ಒಂದು ಮಂತ್ರಗ್ರಾಮವನ್ನು ನೀಡಿ ಈ ಮಾತುಗಳನ್ನಾಡಿದನು.

01113035a ಯಂ ಯಂ ದೇವಂ ತ್ವಮೇತೇನ ಮಂತ್ರೇಣಾವಾಹಯಿಷ್ಯಸಿ|

01113035c ಅಕಾಮೋ ವಾ ಸಕಾಮೋ ವಾ ಸ ತೇ ವಶಮುಪೈಷ್ಯತಿ||

“ಈ ಮಂತ್ರಗಳಿಂದ ನೀನು ಯಾವ ಯಾವ ದೇವತೆಯನ್ನು ಅಹ್ವಾನಿಸುತ್ತೀಯೋ ಅವನು ಇಷ್ಟವಿರಲಿ ಅಥವಾ ಇಷ್ಟವಿಲ್ಲದಿರಲ್ಲಿ ನಿನ್ನ ವಶನಾಗುತ್ತಾನೆ.”

01113036a ಇತ್ಯುಕ್ತಾಹಂ ತದಾ ತೇನ ಪಿತೃವೇಶ್ಮನಿ ಭಾರತ|

01113036c ಬ್ರಾಹ್ಮಣೇನ ವಚಸ್ತಥ್ಯಂ ತಸ್ಯ ಕಾಲೋಽಯಮಾಗತಃ||

ಭಾರತ! ನನ್ನ ತಂದೆಯ ಮನೆಯಲ್ಲಿ ಅವನು ನನಗೆ ಈ ರೀತಿ ಹೇಳಿದನು. ಬ್ರಾಹ್ಮಣನು ನೀಡಿದ ವಚನವು ಸತ್ಯ ಮತ್ತು ಅದರ ಸಮಯವು ಈಗ ಬಂದೊದಗಿದೆ.

01113037a ಅನುಜ್ಞಾತಾ ತ್ವಯಾ ದೇವಮಾಹ್ವಯೇಯಮಹಂ ನೃಪ|

01113037c ತೇನ ಮಂತ್ರೇಣ ರಾಜರ್ಷೇ ಯಥಾ ಸ್ಯಾನ್ನೌ ಪ್ರಜಾ ವಿಭೋ||

ರಾಜರ್ಷಿ ನೃಪ! ನಿನ್ನ ಅನುಜ್ಞೆಯಂತೆ ಆ ಮಂತ್ರದಿಂದ ನಾನು ಓರ್ವ ದೇವತೆಯನ್ನು ಕರೆಯುತ್ತೇನೆ. ವಿಭೋ! ಇದರಿಂದ ನಮಗೆ ಮಕ್ಕಳಾಗಬಹುದು.

01113038a ಆವಾಹಯಾಮಿ ಕಂ ದೇವಂ ಬ್ರೂಹಿ ತತ್ತ್ವವಿದಾಂ ವರ|

01113038c ತ್ವತ್ತೋಽನುಜ್ಞಾಪ್ರತೀಕ್ಷಾಂ ಮಾಂ ವಿದ್ಧ್ಯಸ್ಮಿನ್ಕರ್ಮಣಿ ಸ್ಥಿತಾಂ||

ತತ್ವವಿದರಲ್ಲಿ ಶ್ರೇಷ್ಠ! ಯಾವ ದೇವತೆಯನ್ನು ಆವಾಹಿಸಲಿ ಹೇಳು. ನಿನ್ನ ಅನುಜ್ಞೆಯಿದೆಯೆಂದಾದರೆ ನಾನು ಇದಕ್ಕೆ ಸಿದ್ಧಳಿದ್ದೇನೆ.”

01113039 ಪಾಂಡುರುವಾಚ|

01113039a ಅದ್ಯೈವ ತ್ವಂ ವರಾರೋಹೇ ಪ್ರಯತಸ್ವ ಯಥಾವಿಧಿ|

01113039c ಧರ್ಮಮಾವಾಹಯ ಶುಭೇ ಸ ಹಿ ದೇವೇಷು ಪುಣ್ಯಭಾಕ್||

ಪಾಂಡುವು ಹೇಳಿದನು: “ವರಾರೋಹೆ! ಇಂದೇ ನೀನು ಯಥಾವಿಧಿಯಾಗಿ ಇದನ್ನು ಪ್ರಯತ್ನಿಸು. ಶುಭೇ! ದೇವತೆಗಳ ಪುಣ್ಯಭಾಗಿ ಧರ್ಮನನ್ನು ಆವಾಹಿಸು.

01113040a ಅಧರ್ಮೇಣ ನ ನೋ ಧರ್ಮಃ ಸಂಯುಜ್ಯೇತ ಕಥಂ ಚನ|

01113040c ಲೋಕಶ್ಚಾಯಂ ವರಾರೋಹೇ ಧರ್ಮೋಽಯಮಿತಿ ಮಂಸ್ಯತೇ||

ಇದು ಅಧರ್ಮವೆನಿಸಿದರೆ ಧರ್ಮನು ಎಂದೂ ಇದರಲ್ಲಿ ಪಾಲ್ಗೊಳ್ಳುವುದಿಲ್ಲ. ವರಾರೋಹೇ! ಜನರು ಇದನ್ನೇ ಧರ್ಮವೆಂದು ಮನ್ನಿಸುತ್ತಾರೆ.

01113041a ಧಾರ್ಮಿಕಶ್ಚ ಕುರೂಣಾಂ ಸ ಭವಿಷ್ಯತಿ ನ ಸಂಶಯಃ|

01113041c ದತ್ತಸ್ಯಾಪಿ ಚ ಧರ್ಮೇಣ ನಾಧರ್ಮೇ ರಂಸ್ಯತೇ ಮನಃ||

ಅವನು ನಿಸ್ಸಂಶಯವಾಗಿಯೂ ಕುರುಗಳಿಗೆ ಧರ್ಮದ ದಾರಿದೀಪನಾಗುತ್ತಾನೆ. ಧರ್ಮನಿಂದ ಕೊಡಲ್ಪಟ್ಟ ಅವನ ಮನಸ್ಸು ಅಧರ್ಮದ ಕಡೆ ಹೋಗಲು ಸಾಧ್ಯವೇ ಇಲ್ಲ.

01113042a ತಸ್ಮಾದ್ಧರ್ಮಂ ಪುರಸ್ಕೃತ್ಯ ನಿಯತಾ ತ್ವಂ ಶುಚಿಸ್ಮಿತೇ|

01113042c ಉಪಚಾರಾಭಿಚಾರಾಭ್ಯಾಂ ಧರ್ಮಮಾರಾಧಯಸ್ವ ವೈ||

ಆದುದರಿಂದ ಶುಚಿಸ್ಮಿತೇ! ಧರ್ಮನನ್ನು ಪುರಸ್ಕರಿಸು. ನಿಯತ್ತು ಮತ್ತು ಉಪಚಾರ ಅಭಿಚಾರಗಳಿಂದ ಧರ್ಮನನ್ನು ಆರಾಧಿಸು.””

01113043 ವೈಶಂಪಾಯನ ಉವಾಚ|

01113043a ಸಾ ತಥೋಕ್ತಾ ತಥೇತ್ಯುಕ್ತ್ವಾ ತೇನ ಭರ್ತ್ರಾ ವರಾಂಗನಾ|

01113043c ಅಭಿವಾದ್ಯಾಭ್ಯನುಜ್ಞಾತಾ ಪ್ರದಕ್ಷಿಣಮವರ್ತತ||

ವೈಶಂಪಾಯನನು ಹೇಳಿದನು: ““ಹಾಗೆಯೇ ಆಗಲಿ” ಎಂದು ತನ್ನ ಪತಿಗೆ ಹೇಳಿದ ಆ ವರಾಂಗನೆಯು ಅವನಿಗೆ ಪ್ರದಕ್ಷಿಣೆಮಾಡಿ ನಮಸ್ಕರಿಸಿ ಅಪ್ಪಣೆಯನ್ನು ಪಡೆದಳು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಕುಂತೀಪುತ್ರೋತ್ಪನ್ಯನುಜ್ಞಾನೇ ತ್ರಯೋದಶಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಕುಂತೀಪುತ್ರೋತ್ಪನ್ಯನುಜ್ಞಾನ ಎನ್ನುವ ನೂರಾಹದಿಮೂರನೆಯ ಅಧ್ಯಾಯವು.

Comments are closed.