Adi Parva: Chapter 112

ಆದಿ ಪರ್ವ: ಸಂಭವ ಪರ್ವ

೧೧೨

ಪಾಂಡುವೇ ತನ್ನಲ್ಲಿ ಮಕ್ಕಳನ್ನು ಹುಟ್ಟಿಸಬೇಕೆಂದು ಕುಂತಿಯು ಕೇಳಿಕೊಳ್ಳುವುದು (೧-೫). ರಾಜಾ ವ್ಯುಷಿತಾಶ್ವನ ಚರಿತೆಯನ್ನು ಹೇಳಿ ಕುಂತಿಯು ಪಾಂಡುವೂ ಕೂಡ ತನ್ನ ಯೋಗಬಲದಿಂದ ಮಕ್ಕಳ ತಂದೆಯಾಗಬಹುದೆಂದು ಹೇಳುವುದು (೬-೩೪).

01112001 ವೈಶಂಪಾಯನ ಉವಾಚ|

01112001a ಏವಮುಕ್ತಾ ಮಹಾರಾಜ ಕುಂತೀ ಪಾಂಡುಮಭಾಷತ|

01112001c ಕುರೂಣಾಂ ಋಷಭಂ ವೀರಂ ತದಾ ಭೂಮಿಪತಿಂ ಪತಿಂ||

ವೈಶಂಪಾಯನನು ಹೇಳಿದನು: “ಮಹಾರಾಜ! ಇದನ್ನು ಕೇಳಿದ ಕುಂತಿಯು ಕುರು ಋಷಭ ವೀರ ಭೂಮಿಪತಿ ತನ್ನ ಪತಿ ಪಾಂಡುವಿಗೆ ಹೇಳಿದಳು:

01112002a ನ ಮಾಮರ್ಹಸಿ ಧರ್ಮಜ್ಞ ವಕ್ತುಮೇವಂ ಕಥಂ ಚನ|

01112002c ಧರ್ಮಪತ್ನೀಮಭಿರತಾಂ ತ್ವಯಿ ರಾಜೀವಲೋಚನ||

“ಧರ್ಮಜ್ಞ! ನೀನು ನನ್ನಲ್ಲಿ ಈ ರೀತಿ ಮಾತನಾಡುವುದು ಯಾವಕಾರಣಕ್ಕೂ ಸರಿಯಲ್ಲ. ರಾಜೀವಲೋಚನ! ನಿನ್ನಲ್ಲಿಯೇ ಅಭಿರತ ಧರ್ಮಪತ್ನಿ ನಾನು.

01112003a ತ್ವಮೇವ ತು ಮಹಾಬಾಹೋ ಮಯ್ಯಪತ್ಯಾನಿ ಭಾರತ|

01112003c ವೀರ ವೀರ್ಯೋಪಪನ್ನಾನಿ ಧರ್ಮತೋ ಜನಯಿಷ್ಯಸಿ||

ವೀರ ಮಹಾಬಾಹು ಭಾರತ! ಧಾರ್ಮಿಕವಾಗಿ ನೀನೇ ನನ್ನಲ್ಲಿ ವೀರ ಪುತ್ರರನ್ನು ಪಡೆಯುತ್ತೀಯೆ.

01112004a ಸ್ವರ್ಗಂ ಮನುಜಶಾರ್ದೂಲ ಗಚ್ಛೇಯಂ ಸಹಿತಾ ತ್ವಯಾ|

01112004c ಅಪತ್ಯಾಯ ಚ ಮಾಂ ಗಚ್ಛ ತ್ವಮೇವ ಕುರುನಂದನ||

ಮನುಜಶಾರ್ದೂಲ! ನಾನು ನಿನ್ನೊಡನೆಯೇ ಸ್ವರ್ಗವನ್ನು ಸೇರುತ್ತೇನೆ. ಕುರುನಂದನ! ಮಕ್ಕಳಿಗೋಸ್ಕರ ನೀನೇ ನನ್ನಲ್ಲಿ ಬರಬೇಕು.

01112005a ನ ಹ್ಯಹಂ ಮನಸಾಪ್ಯನ್ಯಂ ಗಚ್ಛೇಯಂ ತ್ವದೃತೇ ನರ|

01112005c ತ್ವತ್ತಃ ಪ್ರತಿವಿಶಿಷ್ಟಶ್ಚ ಕೋಽನ್ಯೋಽಸ್ತಿ ಭುವಿ ಮಾನವಃ||

ನಿನ್ನನ್ನು ಬಿಟ್ಟು ಬೇರೆಯವರೊಂದಿಗೆ ನಾನು ನನ್ನ ಯೋಚನೆಯಲ್ಲಿಯೂ ಹೋಗಲಾರೆ. ಈ ಭೂಮಿಯಲ್ಲಿ ನಿನಗಿಂಥ ಶ್ರೇಷ್ಠ ಬೇರೆ ಯಾವ ಮಾನವನಿದ್ದಾನೆ?

01112006a ಇಮಾಂ ಚ ತಾವದ್ಧರ್ಮ್ಯಾಂ ತ್ವಂ ಪೌರಾಣೀಂ ಶೃಣು ಮೇ ಕಥಾಂ|

01112006c ಪರಿಶ್ರುತಾಂ ವಿಶಾಲಾಕ್ಷ ಕೀರ್ತಯಿಷ್ಯಾಮಿ ಯಾಮಹಂ||

ವಿಶಾಲಾಕ್ಷ! ಪುರಾಣಗಳಲ್ಲಿ ಕೇಳಿದ ಈ ಧಾರ್ಮಿಕ ಕಥೆಯನ್ನು ಹೇಳುತ್ತೇನೆ ಕೇಳು.

01112007a ವ್ಯುಷಿತಾಶ್ವ ಇತಿ ಖ್ಯಾತೋ ಬಭೂವ ಕಿಲ ಪಾರ್ಥಿವಃ|

01112007c ಪುರಾ ಪರಮಧರ್ಮಿಷ್ಠಃ ಪೂರೋರ್ವಂಶವಿವರ್ಧನಃ||

ಹಿಂದೆ ಪುರುವಂಶವಿವರ್ಧನ ಪರಮ ಧರ್ಮಿಷ್ಠ ವ್ಯುಷಿತಾಶ್ವ ಎಂಬ ವಿಖ್ಯಾತ ರಾಜನಿದ್ದನೆಂದು ಹೇಳುತ್ತಾರೆ.

01112008a ತಸ್ಮಿಂಶ್ಚ ಯಜಮಾನೇ ವೈ ಧರ್ಮಾತ್ಮನಿ ಮಹಾತ್ಮನಿ|

01112008c ಉಪಾಗಮಂಸ್ತತೋ ದೇವಾಃ ಸೇಂದ್ರಾಃ ಸಹ ಮಹರ್ಷಿಭಿಃ||

ಆ ಧರ್ಮಾತ್ಮ ಮಹಾತ್ಮನು ಯಜ್ಞವನ್ನು ನಡೆಸಿದಾಗ ಇಂದ್ರನೊಡಗೂಡಿ ದೇವತೆಗಳೂ ಮಹರ್ಷಿಗಳೂ ಅಲ್ಲಿಗೆ ಆಗಮಿಸಿದ್ದರು.

01112009a ಅಮಾದ್ಯದಿಂದ್ರಃ ಸೋಮೇನ ದಕ್ಷಿಣಾಭಿರ್ದ್ವಿಜಾತಯಃ|

01112009c ವ್ಯುಷಿತಾಶ್ವಸ್ಯ ರಾಜರ್ಷೇಸ್ತತೋ ಯಜ್ಞೇ ಮಹಾತ್ಮನಃ||

ರಾಜರ್ಷಿ ಮಹಾತ್ಮ ವ್ಯುಷಿತಾಶ್ವನ ಆ ಯಜ್ಞದಲ್ಲಿ ಇಂದ್ರನು ಸೋಮವನ್ನು ಕುಡಿದು ಮತ್ತು ದ್ವಿಜರು ದಕ್ಷಿಣೆಗಳಿಂದ ಸಂತೃಪ್ತರಾದರು.

01112010a ವ್ಯುಷಿತಾಶ್ವಸ್ತತೋ ರಾಜನ್ನತಿ ಮರ್ತ್ಯಾನ್ವ್ಯರೋಚತ|

01112010c ಸರ್ವಭೂತಾನ್ಯತಿ ಯಥಾ ತಪನಃ ಶಿಶಿರಾತ್ಯಯೇ||

ಛಳಿಗಾಲ ಕಳೆದ ನಂತರ ಸೂರ್ಯನು ಹೇಗೆ ಸರ್ವಭೂತಗಳನ್ನೂ ಬೆಳಗುತ್ತಾನೋ ಹಾಗೆ ರಾಜ ವ್ಯುಷಿತಾಶ್ವನು ಮಾನವರಲ್ಲಿ ಬೆಳಗತೊಡಗಿದನು.

01112011a ಸ ವಿಜಿತ್ಯ ಗೃಹೀತ್ವಾ ಚ ನೃಪತೀನ್ರಾಜಸತ್ತಮಃ|

01112011c ಪ್ರಾಚ್ಯಾನುದೀಚ್ಯಾನ್ಮಧ್ಯಾಂಶ್ಚ ದಕ್ಷಿಣಾತ್ಯಾನಕಾಲಯತ್||

ಆ ರಾಜಸತ್ತಮನು ಪೂರ್ವ, ಉತ್ತರ, ಮಧ್ಯ ಮತ್ತು ದಕ್ಷಿಣ ದಿಕ್ಕುಗಳ ನೃಪತಿಗಳನ್ನು ಜಯಿಸಿ, ಸೆರೆಹಿಡಿದು, ತನ್ನ ಮುಂದೆ ಮೆರವಣಿಗೆ ಮಾಡಿಸಿದನು.

01112012a ಅಶ್ವಮೇಧೇ ಮಹಾಯಜ್ಞೇ ವ್ಯುಷಿತಾಶ್ವಃ ಪ್ರತಾಪವಾನ್|

01112012c ಬಭೂವ ಸ ಹಿ ರಾಜೇಂದ್ರೋ ದಶನಾಗಬಲಾನ್ವಿತಃ||

ಪ್ರತಾಪಿ ದಶನಾಗಬಲಾನ್ವಿತ ವ್ಯುಷಿತಾಶ್ವನು ಮಹಾಯಜ್ಞ ಅಶ್ವಮೇಧದ ನಂತರ ರಾಜೇಂದ್ರನೆನಿಸಿಕೊಂಡನು.

01112013a ಅಪ್ಯತ್ರ ಗಾಥಾಂ ಗಾಯಂತಿ ಯೇ ಪುರಾಣವಿದೋ ಜನಾಃ|

01112013c ವ್ಯುಷಿತಾಶ್ವಃ ಸಮುದ್ರಾಂತಾಂ ವಿಜಿತ್ಯೇಮಾಂ ವಸುಂಧರಾಂ|

01112013e ಅಪಾಲಯತ್ಸರ್ವವರ್ಣಾನ್ಪಿತಾ ಪುತ್ರಾನಿವೌರಸಾನ್||

ಪುರಾಣಗಳನ್ನು ತಿಳಿದ ಜನರು ಈಗಲೂ ಅವನ ಬಗ್ಗೆ ಗಾಥೆಯನ್ನು ಹಾಡುತ್ತಾರೆ. ವ್ಯುಷಿತಾಶ್ವನು ಸಮುದ್ರದ ತುದಿಯವರೆಗೂ ವಸುಂಧರೆಯನ್ನು ಗೆದ್ದನು, ಮತ್ತು ತಂದೆಯು ತನ್ನ ಮಕ್ಕಳನ್ನು ಹೇಗೋ ಹಾಗೆ ಎಲ್ಲ ವರ್ಣದವರನ್ನೂ ಪರಿಪಾಲಿಸಿದನು. 

01112014a ಯಜಮಾನೋ ಮಹಾಯಜ್ಞೈರ್ಬ್ರಾಹ್ಮಣೇಭ್ಯೋ ದದೌ ಧನಂ|

01112014c ಅನಂತರತ್ನಾನ್ಯಾದಾಯ ಆಜಹಾರ ಮಹಾಕ್ರತೂನ್|

01112014e ಸುಷಾವ ಚ ಬಹೂನ್ಸೋಮಾನ್ಸೋಮಸಂಸ್ಥಾಸ್ತತಾನ ಚ||

ಮಹಾಯಜ್ಞದ ಯಜಮಾನನಾಗಿ ಬ್ರಾಹ್ಮಣರಿಗೆ ಅನಂತ ರತ್ನ-ಧನಗಳನ್ನಿತ್ತು ಆ ಮಹಾಕ್ರತುವನ್ನು ನೆರವೇರಿಸಿದನು. ಬಹಳ ಸಮಯ ಅವನು ಸೋಮರಸವನ್ನು ಹಿಂಡಿ ಸೋಮ ಯಜ್ಞಗಳನ್ನು ನೆರವೇರಿಸಿದನು.

01112015a ಆಸೀತ್ಕಾಕ್ಷೀವತೀ ಚಾಸ್ಯ ಭಾರ್ಯಾ ಪರಮಸಮ್ಮತಾ|

01112015c ಭದ್ರಾ ನಾಮ ಮನುಷ್ಯೇಂದ್ರ ರೂಪೇಣಾಸದೃಶೀ ಭುವಿ||

ಮನುಷ್ಯೇಂದ್ರ! ಅವನಿಗೆ ಪರಮಸಮ್ಮತ, ರೂಪದಲ್ಲಿ ಭುವಿಯಲ್ಲಿಯೇ ಆಸದೃಷಿ ಭದ್ರಾ ಕಾಕ್ಷಿವತೀ ಎಂಬ ಹೆಸರಿನ ಪತ್ನಿಯಿದ್ದಳು.

01112016a ಕಾಮಯಾಮಾಸತುಸ್ತೌ ತು ಪರಸ್ಪರಮಿತಿ ಶ್ರುತಿಃ|

01112016c ಸ ತಸ್ಯಾಂ ಕಾಮಸಮ್ಮತ್ತೋ ಯಕ್ಷ್ಮಾಣಂ ಸಮಪದ್ಯತ||

ಅವರು ಪರಸ್ಪರರನ್ನು ಕಾಮಿಸಿದರು ಎಂದು ಕೇಳುತ್ತೇವೆ. ಅವನು ಅವಳಲ್ಲಿ ಕಾಮಸಮ್ಮತ್ತನಾಗಿ ಯಕ್ಷ್ಮರೋಗವನ್ನು ಹೊಂದಿದನು.

01112017a ತೇನಾಚಿರೇಣ ಕಾಲೇನ ಜಗಾಮಾಸ್ತಮಿವಾಂಶುಮಾನ್|

01112017c ತಸ್ಮಿನ್ಪ್ರೇತೇ ಮನುಷ್ಯೇಂದ್ರೇ ಭಾರ್ಯಾಸ್ಯ ಭೃಶದುಃಖಿತಾ||

ಸ್ವಲ್ಪವೇ ಕಾಲದಲ್ಲಿ ಮುಳುಗುವ ಸೂರ್ಯನಂತೆ ಅವನು ಹೊರಟುಹೋದನು. ಆ ಮನುಷ್ಯೇಂದ್ರನು ತೀರಿಕೊಂಡನಂತರ ಅವನ ಪತ್ನಿಯು ಶೋಕಸಂತಪ್ತಳಾದಳು.

01112018a ಅಪುತ್ರಾ ಪುರುಷವ್ಯಾಘ್ರ ವಿಲಲಾಪೇತಿ ನಃ ಶ್ರುತಂ|

01112018c ಭದ್ರಾ ಪರಮದುಃಖಾರ್ತಾ ತನ್ನಿಬೋಧ ನರಾಧಿಪ||

ಪುರಷವ್ಯಾಘ್ರ! ಮಕ್ಕಳಿಲ್ಲದ ಆ ಭದ್ರೆಯು ಪರಮ ದುಃಖಾರ್ತಳಾಗಿ ವಿಲಪಿಸಿದಳೆಂದು ಹೇಳುತ್ತಾರೆ. ನರಾಧಿಪ! ಅದನ್ನು ಹೇಳುತ್ತೇನೆ ಕೇಳು.

01112019a ನಾರೀ ಪರಮಧರ್ಮಜ್ಞ ಸರ್ವಾ ಪುತ್ರವಿನಾಕೃತಾ|

01112019c ಪತಿಂ ವಿನಾ ಜೀವತಿ ಯಾ ನ ಸಾ ಜೀವತಿ ದುಃಖಿತಾ||

“ಪರಮಧರ್ಮಜ್ಞ! ಯಾವುದೇ ನಾರಿಯು ಪುತ್ರಳಿಲ್ಲದವಳಂತೆ ಮಾಡಿದ ಪತಿಯನ್ನು ಬಿಟ್ಟು ಜೀವಿಸಲಾರಳು; ಅವಳು ಜೀವಿಸಿದರೂ ದುಃಖಿತಳಾಗಿಯೇ ಇರುತ್ತಾಳೆ.

01112020a ಪತಿಂ ವಿನಾ ಮೃತಂ ಶ್ರೇಯೋ ನಾರ್ಯಾಃ ಕ್ಷತ್ರಿಯಪುಂಗವ|

01112020c ತ್ವದ್ಗತಿಂ ಗಂತುಮಿಚ್ಛಾಮಿ ಪ್ರಸೀದಸ್ವ ನಯಸ್ವ ಮಾಂ||

ಕ್ಷತ್ರಿಯ ಪುಂಗವ! ಪತಿಯಿಲ್ಲದ ನಾರಿಯ ಶ್ರೇಯಸ್ಸು ಕೂಡ ಮೃತಗೊಂಡಂತೆ. ನೀನು ಹೋದಲ್ಲಿಗೆ ಬರಲು ಇಚ್ಛಿಸುತ್ತೇನೆ. ನನ್ನನ್ನೂ ನಿನ್ನ ಜೊತೆ ಕರೆದುಕೊಂಡು ಹೋಗುವ ಕೃಪೆ ಮಾಡು.

01112021a ತ್ವಯಾ ಹೀನಾ ಕ್ಷಣಮಪಿ ನಾಹಂ ಜೀವಿತುಮುತ್ಸಹೇ|

01112021c ಪ್ರಸಾದಂ ಕುರು ಮೇ ರಾಜನ್ನಿತಸ್ತೂರ್ಣಂ ನಯಸ್ವ ಮಾಂ||

ನನಗೆ ನಿನ್ನನ್ನು ಬಿಟ್ಟು ಒಂದು ಕ್ಷಣವೂ ಜೀವಿಸುವ ಉತ್ಸಾಹವಿಲ್ಲ. ರಾಜನ್! ಇಲ್ಲಿಂದ ನನ್ನನ್ನು ಬೇಗನೆ ಕರೆದುಕೊಂಡು ಹೋಗುವ ಕೃಪೆ ಮಾಡು.

01112022a ಪೃಷ್ಠತೋಽನುಗಮಿಷ್ಯಾಮಿ ಸಮೇಷು ವಿಷಮೇಷು ಚ|

01112022c ತ್ವಾಮಹಂ ನರಶಾರ್ದೂಲ ಗಚ್ಛಂತಮನಿವರ್ತಿನಂ||

ಸಮ ವಿಷಮ ಪರಿಸ್ಥಿತಿಗಳೆರಡರಲ್ಲೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ. ನರಶಾರ್ದೂಲ! ನಿನ್ನನ್ನು ಹಿಂಬಾಲಿಸಿದ ನಾನು ಪುನಃ ಹಿಂತಿರುಗಿಯೂ ನೋಡಲಾರೆ.

01112023a ಚಾಯೇವಾನಪಗಾ ರಾಜನ್ಸತತಂ ವಶವರ್ತಿನೀ|

01112023c ಭವಿಷ್ಯಾಮಿ ನರವ್ಯಾಘ್ರ ನಿತ್ಯಂ ಪ್ರಿಯಹಿತೇ ರತಾ||

ರಾಜನ್! ನೆರಳಿನಂತೆ ನಿನ್ನನ್ನು ಹಿಂಬಾಲಿಸುವೆ, ಸತತ ನಿನ್ನ ವಶದಲ್ಲಿಯೇ ಇರುವೆ. ನರವ್ಯಾಘ್ರ! ನಿತ್ಯವೂ ನಿನ್ನ ಪ್ರಿಯಹಿತ ನಿರತಳಾಗಿರುವೆ.

01112024a ಅದ್ಯ ಪ್ರಭೃತಿ ಮಾಂ ರಾಜನ್ಕಷ್ಟಾ ಹೃದಯಶೋಷಣಾಃ|

01112024c ಆಧಯೋಽಭಿಭವಿಷ್ಯಂತಿ ತ್ವದೃತೇ ಪುಷ್ಕರೇಕ್ಷಣ||

ರಾಜನ್! ಪುಷ್ಕರೇಕ್ಷಣ! ನಿನ್ನನ್ನು ಕಳೆದುಕೊಂಡಾಗಿನಿಂದ ನನ್ನನ್ನು ಹೃದಯ ಬತ್ತಿಸುವ ಕಷ್ಟವು ಆವರಿಸಿದೆ.

01112025a ಅಭಾಗ್ಯಯಾ ಮಯಾ ನೂನಂ ವಿಯುಕ್ತಾಃ ಸಹಚಾರಿಣಃ|

01112025c ಸಂಯೋಗಾ ವಿಪ್ರಯುಕ್ತಾ ವಾ ಪೂರ್ವದೇಹೇಷು ಪಾರ್ಥಿವ||

ಪಾರ್ಥಿವ! ಅಭಾಗ್ಯೆ ನಾನು ನನ್ನ ಹಿಂದಿನ ಜನ್ಮಗಳಲ್ಲಿ ಸಹಚಾರಿಣಿಗಳನ್ನು ಅಲಗಿಸಿರಬಹುದು ಅಥವಾ ಕೂಡಿದವರನ್ನು ಬೇರೆ ಮಾಡಿರಬಹುದು.

01112026a ತದಿದಂ ಕರ್ಮಭಿಃ ಪಾಪೈಃ ಪೂರ್ವದೇಹೇಷು ಸಂಚಿತಂ|

01112026c ದುಃಖಂ ಮಾಮನುಸಂಪ್ರಾಪ್ತಂ ರಾಜಂಸ್ತ್ವದ್ವಿಪ್ರಯೋಗಜಂ||

ರಾಜನ್! ಪೂರ್ವ ಜನ್ಮಗಳಿಂದ ಸಂಚಿತಗೊಂಡ ಈ ಪಾಪ ಕರ್ಮಗಳಿಂದಲೇ ನಾನು ನಿನ್ನಿಂದ ಅಲಗಿ ಈ ದುಃಖವನ್ನು ಪಡೆದುಕೊಂಡಿದ್ದೇನೆ.

01112027a ಅದ್ಯ ಪ್ರಭೃತ್ಯಹಂ ರಾಜನ್ಕುಶಪ್ರಸ್ತರಶಾಯಿನೀ|

01112027c ಭವಿಷ್ಯಾಮ್ಯಸುಖಾವಿಷ್ಟಾ ತ್ವದ್ದರ್ಶನಪರಾಯಣಾ||

ರಾಜನ್! ಇಂದಿನಿಂದ ನಾನು ನಿನ್ನ ದರ್ಶನವನ್ನೇ ಕಾಯುತ್ತಾ ದುಃಖಾವಿಷ್ಟಳಾಗಿ ದರ್ಭಾಸನದ ಮೇಲೆ ಮಲಗುತ್ತೇನೆ.

01112028a ದರ್ಶಯಸ್ವ ನರವ್ಯಾಘ್ರ ಸಾಧು ಮಾಮಸುಖಾನ್ವಿತಾಂ|

01112028c ದೀನಾಮನಾಥಾಂ ಕೃಪಣಾಂ ವಿಲಪಂತೀಂ ನರೇಶ್ವರ||

ನರವ್ಯಾಘ್ರ! ನನಗೆ ಕಾಣುವಂತವನಾಗು. ನರೇಶ್ವರ! ಈ ದುಃಖಾನ್ವಿತ ದೀನ, ಅನಾಥ, ಕೃಪಣ, ವಿಲಪಿಸುತ್ತಿರುವ ನನ್ನನ್ನು ಸಂತವಿಸು.”

01112029a ಏವಂ ಬಹುವಿಧಂ ತಸ್ಯಾಂ ವಿಲಪಂತ್ಯಾಂ ಪುನಃ ಪುನಃ|

01112029c ತಂ ಶವಂ ಸಂಪರಿಷ್ವಜ್ಯ ವಾಕ್ಕಿಲಾಂತರ್ಹಿತಾಬ್ರವೀತ್||

ಈ ರೀತಿ ಬಹುವಿಧವಾಗಿ ಅವಳು ಪುನಃ ಪುನಃ ಆ ಶವವನ್ನು ಅಪ್ಪಿಕೊಳ್ಳುತ್ತಾ ವಿಲಪಿಸುತ್ತಿರುವಾಗ ಒಂದು ಅಂತರಿಕ್ಷವಾಣಿಯು ನುಡಿಯಿತು:

01112030a ಉತ್ತಿಷ್ಠ ಭದ್ರೇ ಗಚ್ಛ ತ್ವಂ ದದಾನೀಹ ವರಂ ತವ|

01112030c ಜನಯಿಷ್ಯಾಮ್ಯಪತ್ಯಾನಿ ತ್ವಯ್ಯಹಂ ಚಾರುಹಾಸಿನಿ||

“ಭದ್ರೇ! ಮೇಲೇಳು! ನಿನಗೊಂದು ವರವನ್ನು ಕೊಡುತ್ತೇನೆ. ಹೋಗು. ಚಾರುಹಾಸಿನಿ! ನಿನ್ನಲ್ಲಿ ನಾನು ಮಕ್ಕಳನ್ನು ಹುಟ್ಟಿಸುತ್ತೇನೆ.

01112031a ಆತ್ಮೀಯೇ ಚ ವರಾರೋಹೇ ಶಯನೀಯೇ ಚತುರ್ದಶೀಂ|

01112031c ಅಷ್ಟಮೀಂ ವಾ ಋತುಸ್ನಾತಾ ಸಂವಿಶೇಥಾ ಮಯಾ ಸಹ||

ವರಾರೋಹೆ! ಶುಕ್ಲಪಕ್ಷದ ಎಂಟನೆಯ ಅಥವಾ ಹದಿನಾಲ್ಕನೆಯ ದಿನ ಋತುಸ್ನಾತಳಾಗಿ ನೀನು ನಿನ್ನ ಹಾಸಿಗೆಯ ಮೇಲೆ ನನ್ನೊಡನೆ ಮಲಗಿಕೋ.”

01112032a ಏವಮುಕ್ತಾ ತು ಸಾ ದೇವೀ ತಥಾ ಚಕ್ರೇ ಪತಿವ್ರತಾ|

01112032c ಯಥೋಕ್ತಮೇವ ತದ್ವಾಕ್ಯಂ ಭದ್ರಾ ಪುತ್ರಾರ್ಥಿನೀ ತದಾ||

ಆ ಪುತ್ರಾರ್ಥಿನಿ ದೇವಿ ಪತಿವ್ರತೆಯು ಇದನ್ನು ಕೇಳಿ ಆ ವಾಕ್ಯದಲ್ಲಿ ಹೇಳಿದ ಹಾಗೆಯೇ ನಡೆದುಕೊಂಡಳು.

01112033a ಸಾ ತೇನ ಸುಷುವೇ ದೇವೀ ಶವೇನ ಮನುಜಾಧಿಪ|

01112033c ತ್ರೀಂಶಾಲ್ವಾಂಶ್ಚತುರೋ ಮದ್ರಾನ್ಸುತಾನ್ಭರತಸತ್ತಮ||

ಮನುಜಾಧಿಪ! ಭರತಸತ್ತಮ! ಆ ಶವದಿಂದ ದೇವಿಯು ಮೂವರು ಶಾಲ್ವರನ್ನು ಮತ್ತು ನಾಲ್ವರು ಮದ್ರರನ್ನು ಮಕ್ಕಳಾಗಿ ಪಡೆದಳು.

01112034a ತಥಾ ತ್ವಮಪಿ ಮಯ್ಯೇವ ಮನಸಾ ಭರತರ್ಷಭ|

01112034c ಶಕ್ತೋ ಜನಯಿತುಂ ಪುತ್ರಾಂಸ್ತಪೋಯೋಗಬಲಾನ್ವಯಾತ್||

ಭರತರ್ಷಭ! ನೀನೂ ಕೂಡ ಹೀಗೆ ನಿನ್ನ ತಪಸ್ಸು ಮತ್ತು ಯೋಗಬಲದಿಂದ ನನ್ನಲ್ಲಿ ನಿನ್ನ ಮನಸ್ಸಿನಿಂದಲೇ ಮಕ್ಕಳನ್ನು ಹುಟ್ಟಿಸಲು ಶಕ್ತನಾಗಿದ್ದೀಯೆ.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ವ್ಯುಷಿತಾಶ್ವೋಪಾಖ್ಯಾನೇ ದ್ವಾದಶಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ವ್ಯುಷಿತಾಶ್ವೋಪಾಖ್ಯಾನ ಎನ್ನುವ ನೂರಹನ್ನೆರಡನೆಯ ಅಧ್ಯಾಯವು.

Comments are closed.