ಆದಿ ಪರ್ವ: ಸಂಭವ ಪರ್ವ
೧೧೦
ಪಶ್ಚಾತ್ತಾಪಗೊಂಡ ಪಾಂಡುವು ಪರಿವ್ರಾಜಕನ ಜೀವನವನ್ನು ತನ್ನದಾಗಿಸಿಕೊಂಡಿದುದು (೧-೨೧). ತಾನು ವನವನ್ನು ಸೇರಿದೆನೆಂಬ ಸಂದೇಶವನ್ನು ಚೂಡಾಮಣಿ-ಅಂಗದಗಳೇ ಮೊದಲಾದ ರಾಜವಸ್ತುಗಳೊಡನೆ ಪಾಂಡುವು ಹಸ್ತಿನಾಪುರಿಗೆ ಕಳುಹಿಸುವುದು (೨೨-೪೧). ಪತ್ನಿಯರೊಂದಿಗೆ ಪಾಂಡುವು ಶತಶೃಂಗವನ್ನು ಸೇರಿ ತಪಸ್ಸನ್ನಾಚರಿಸಿದುದು (೪೨-೪೫).
01110001 ವೈಶಂಪಾಯನ ಉವಾಚ|
01110001a ತಂ ವ್ಯತೀತಮತಿಕ್ರಮ್ಯ ರಾಜಾ ಸ್ವಮಿವ ಬಾಂಧವಂ|
01110001c ಸಭಾರ್ಯಃ ಶೋಕದುಃಖಾರ್ತಃ ಪರ್ಯದೇವಯದಾತುರಃ||
ವೈಶಂಪಾಯನನು ಹೇಳಿದನು: “ತಮ್ಮ ಬಾಂಧವನ ಸಾವೋ ಎನ್ನುವಂಥ ಆ ಜಿಂಕೆಯ ಸಾವಿನಿಂದ ಶೋಕಾರ್ತ ರಾಜ ಮತ್ತು ಅವನ ಪತ್ನಿಯರು ರೋದಿಸಿದರು.
01110002 ಪಾಂಡುರುವಾಚ|
01110002a ಸತಾಮಪಿ ಕುಲೇ ಜಾತಾಃ ಕರ್ಮಣಾ ಬತ ದುರ್ಗತಿಂ|
01110002c ಪ್ರಾಪ್ನುವಂತ್ಯಕೃತಾತ್ಮಾನಃ ಕಾಮಜಾಲವಿಮೋಹಿತಾಃ||
ಪಾಂಡುವು ಹೇಳಿದನು: “ಸತ್ಯವಂತರ ಕುಲದಲ್ಲಿ ಹುಟ್ಟಿದವರೂ ಕೂಡ ಕಾಮಜಾಲವಿಮೋಹಿತರಾಗಿ ದುರ್ಗತಿಯನ್ನು ತರುವಂಥಹ ಕೃತ್ಯಗಳನ್ನು ಮಾಡಿ ತಮ್ಮ ಅಂತ್ಯವನ್ನು ತಾವೇ ತಂದುಕೊಳ್ಳುತ್ತಾರೆ.
01110003a ಶಶ್ವದ್ಧರ್ಮಾತ್ಮನಾ ಜಾತೋ ಬಾಲ ಏವ ಪಿತಾ ಮಮ|
01110003c ಜೀವಿತಾಂತಮನುಪ್ರಾಪ್ತಃ ಕಾಮಾತ್ಮೈವೇತಿ ನಃ ಶ್ರುತಂ||
ಹುಟ್ಟಿನಿಂದ ಸದಾ ಧರ್ಮಾತ್ಮನಾಗಿದ್ದ ನನ್ನ ತಂದೆಯು ಕಾಮಾತ್ಮನಾಗಿದ್ದುದರಿಂದಲೇ ಬಾಲ್ಯದಲ್ಲಿಯೇ ಜೀವಿತಾಂತವನ್ನು ಪಡೆದನು ಎಂದು ಕೇಳಿದ್ದೇನೆ.
01110004a ತಸ್ಯ ಕಾಮಾತ್ಮನಃ ಕ್ಷೇತ್ರೇ ರಾಜ್ಞಃ ಸಂಯತವಾಗೃಷಿಃ|
01110004c ಕೃಷ್ಣದ್ವೈಪಾಯನಃ ಸಾಕ್ಷಾದ್ಭಗವಾನ್ಮಾಮಜೀಜನತ್||
ಆ ಕಾಮಾತ್ಮ ರಾಜನ ಕ್ಷೇತ್ರದಲ್ಲಿಯೇ ಸತ್ಯವಾಗ್ಮಿ ಸಾಕ್ಷಾತ್ ಭಗವಾನ್ ಋಷಿ ಕೃಷ್ಣದ್ವೈಪಾಯನನು ನನ್ನನ್ನು ಹುಟ್ಟಿಸಿದನು.
01110005a ತಸ್ಯಾದ್ಯ ವ್ಯಸನೇ ಬುದ್ಧಿಃ ಸಂಜಾತೇಯಂ ಮಮಾಧಮಾ|
01110005c ತ್ಯಕ್ತಸ್ಯ ದೇವೈರನಯಾನ್ಮೃಗಯಾಯಾಂ ದುರಾತ್ಮನಃ||
ಅಂಥಹ ಜನ್ಮವನ್ನು ಪಡೆದವನಾಗಿದ್ದರೂ ನಾನು ಇಂದು ಬುದ್ಧಿವ್ಯಸನಗೊಂಡು ಅಧಮನಾಗಿ ದೇವತ್ವವನ್ನು ತ್ಯಜಿಸಿ ದುರಾತ್ಮನಾಗಿ ಬೇಟೆಯಲ್ಲಿ ತೊಡಗಿದ್ದೇನೆ.
01110006a ಮೋಕ್ಷಮೇವ ವ್ಯವಸ್ಯಾಮಿ ಬಂಧೋ ಹಿ ವ್ಯಸನಂ ಮಹತ್|
01110006c ಸುವೃತ್ತಿಮನುವರ್ತಿಷ್ಯೇ ತಾಮಹಂ ಪಿತುರವ್ಯಯಾಂ|
01110006e ಅತೀವ ತಪಸಾತ್ಮಾನಂ ಯೋಜಯಿಷ್ಯಾಮ್ಯಸಂಶಯಂ||
ನನ್ನ ಆ ಅವ್ಯಯ ತಂದೆಯಂತೆ ನಾನೂ ಕೂಡ ಬಂಧನವೇ ಮಹಾ ವ್ಯಸನವೆಂದು ತಿಳಿದು ಮೋಕ್ಷವನ್ನು ಅರಸುತ್ತೇನೆ. ಸುವೃತ್ತಿಯನ್ನೇ ಅನುಸರಿಸುತ್ತೇನೆ. ನನ್ನನ್ನು ನಾನು ಅತೀವ ತಪಸ್ಸಿನಲ್ಲಿ ಒಳಗೂಡಿಸಿಕೊಂಡು ನಿಸ್ಸಂಶಯವಾಗಿಯೂ ನನ್ನನ್ನು ತ್ಯಜಿಸುತ್ತೇನೆ.
01110007a ತಸ್ಮಾದೇಕೋಽಹಮೇಕಾಹಮೇಕೈಕಸ್ಮಿನ್ವನಸ್ಪತೌ|
01110007c ಚರನ್ಭೈಕ್ಷಂ ಮುನಿರ್ಮುಂಡಶ್ಚರಿಷ್ಯಾಮಿ ಮಹೀಮಿಮಾಂ||
01110008a ಪಾಂಸುನಾ ಸಮವಚ್ಛನ್ನಃ ಶೂನ್ಯಾಗಾರಪ್ರತಿಶ್ರಯಃ|
01110008c ವೃಕ್ಷಮೂಲನಿಕೇತೋ ವಾ ತ್ಯಕ್ತಸರ್ವಪ್ರಿಯಾಪ್ರಿಯಃ||
01110009a ನ ಶೋಚನ್ನ ಪ್ರಹೃಷ್ಯಂಶ್ಚ ತುಲ್ಯನಿಂದಾತ್ಮಸಂಸ್ತುತಿಃ|
01110009c ನಿರಾಶೀರ್ನಿರ್ನಮಸ್ಕಾರೋ ನಿರ್ದ್ವಂದ್ವೋ ನಿಷ್ಪರಿಗ್ರಹಃ||
01110010a ನ ಚಾಪ್ಯವಹಸನ್ಕಂ ಚಿನ್ನ ಕುರ್ವನ್ಭ್ರುಕುಟೀಂ ಕ್ವ ಚಿತ್|
01110010c ಪ್ರಸನ್ನವದನೋ ನಿತ್ಯಂ ಸರ್ವಭೂತಹಿತೇ ರತಃ||
01110011a ಜಂಗಮಾಜಂಗಮಂ ಸರ್ವಮವಿಹಿಂಸಂಶ್ಚತುರ್ವಿಧಂ|
01110011c ಸ್ವಾಸು ಪ್ರಜಾಸ್ವಿವ ಸದಾ ಸಮಃ ಪ್ರಾಣಭೃತಾಂ ಪ್ರತಿ||
ನಾನು ಈ ಭೂಮಿಯಲ್ಲಿ ಏಕಾಂಗಿಯಾಗಿ, ಒಂದೊಂದು ದಿನವೂ ಒಂದೊಂದು ಮರದಡಿಯಲ್ಲಿ, ಮುನಿಗಳಂತೆ ಮುಂಡನ ಮಾಡಿಕೊಂಡು, ಭಿಕ್ಷೆ ಬೇಡುತ್ತಾ ಅಲೆಯುತ್ತೇನೆ. ಧೂಳಿನಿಂದ ತುಂಬಿಕೊಂಡು, ಯಾರೂ ವಾಸಿಸದಿದ್ದ ಮನೆಗಳಲ್ಲಿ ಅಥವಾ ಮರದಡಿಯನ್ನೇ ಹಾಸಿಗೆಯನ್ನಾಗಿ ಮಾಡಿ ವಾಸಿಸುತ್ತೇನೆ. ಪ್ರಿಯ-ಅಪ್ರಿಯವಾದುದೆಲ್ಲವನ್ನೂ ತ್ಯಜಿಸುತ್ತೇನೆ. ಶೋಚಿಸುವುದೂ ಇಲ್ಲ, ಸಂತೋಷಪಡುವುದೂ ಇಲ್ಲ. ನಿಂದೆ ಮತ್ತು ಆತ್ಮಸಂಸ್ತುತಿಗಳೆರಡನ್ನೂ ಒಂದೇ ಸಮಾನವಾಗಿ ಕಾಣುತ್ತೇನೆ. ಯಾರಿಗೂ ಆಶೀರ್ವದಿಸುವುದಿಲ್ಲ, ಯಾರಿಗೂ ನಮಸ್ಕರಿಸುವುದಿಲ್ಲ. ನನಗೆ ಯಾವ ಆಯ್ಕೆಗಳನ್ನೂ ಇಟ್ಟುಕೊಳ್ಳುವುದಿಲ್ಲ, ನನ್ನದೆನ್ನುವುದು ಯಾವುದೂ ಇರುವುದಿಲ್ಲ. ನಾನು ಯಾರನ್ನೂ ಕೀಳುಭಾವದಿಂದ ನೋಡುವುದಿಲ್ಲ, ಮತ್ತು ಯಾರ ಮೇಲೂ ಸಿಟ್ಟಾಗುವುದಿಲ್ಲ. ಸರ್ವಭೂತ ಹಿತದಲ್ಲಿ ನಿರತನಾಗಿ ನಿತ್ಯವೂ ಪ್ರಸನ್ನವದನನಾಗಿರುತ್ತೇನೆ. ಚಲಿಸುವ ಮತ್ತು ಚಲಿಸದೇ ಇರುವ ನಾಲ್ಕೂ ಪ್ರಕಾರದ ಭೂತಗಳ್ಯಾವುವನ್ನೂ ಕಡೆಗಾಣಿಸದೇ, ಉಸಿರಾಡುವ ಎಲ್ಲ ಜೀವಿಗಳೂ ನನ್ನದೇ ಮಕ್ಕಳೆಂದು ತಿಳಿದು ಸಮನಾಗಿ ಕಾಣುತ್ತೇನೆ.
01110012a ಏಕಕಾಲಂ ಚರನ್ಭೈಕ್ಷಂ ಕುಲಾನಿ ದ್ವೇ ಚ ಪಂಚ ಚ|
01110012c ಅಸಂಭವೇ ವಾ ಭೈಕ್ಷಸ್ಯ ಚರನ್ನನಶನಾನ್ಯಪಿ||
01110013a ಅಲ್ಪಮಲ್ಪಂ ಯಥಾಭೋಜ್ಯಂ ಪೂರ್ವಲಾಭೇನ ಜಾತು ಚಿತ್|
01110013c ನಿತ್ಯಂ ನಾತಿಚರಽಲ್ಲಾಭೇ ಅಲಾಭೇ ಸಪ್ತ ಪೂರಯನ್||
ನಾನು ಒಮ್ಮೆ ಏಳೇ ಏಳು ಕುಟುಂಬಗಳಿಗೆ ಭಿಕ್ಷೆಗೆಂದು ಹೋಗುತ್ತೇನೆ. ಅಲ್ಲಿ ಭಿಕ್ಷೆ ದೊರಕದಿದ್ದರೂ, ಅಥವಾ ನನಗೆ ಹಸಿವೆಯಾಗಿದ್ದರೂ ಹೆಚ್ಚಿನ ಮನೆಗಳಿಗೆ ಹೋಗುವುದಿಲ್ಲ. ಸ್ವಲ್ಪವಾದರೂ ಸರಿ, ಮೊದಲ ಬಾರಿ ಅವರು ಎಷ್ಟು ಕೊಡುತ್ತಾರೋ ಅಷ್ಟನ್ನೇ ಸ್ವೀಕರಿಸುತ್ತೇನೆ. ಪ್ರತಿನಿತ್ಯವೂ ಭಿಕ್ಷೆ ಸಿಕ್ಕಿದರೂ ಸಿಕ್ಕದಿದ್ದರೂ ಏಳು ಮನೆಗಳಿಗಿಂಥ ಹೆಚ್ಚು ಮನೆಗಳಿಂದ ಭಿಕ್ಷೆ ಬೇಡುವುದಿಲ್ಲ.
01110014a ವಾಸ್ಯೈಕಂ ತಕ್ಷತೋ ಬಾಹುಂ ಚಂದನೇನೈಕಮುಕ್ಷತಃ|
01110014c ನಾಕಲ್ಯಾಣಂ ನ ಕಲ್ಯಾಣಂ ಪ್ರಧ್ಯಾಯನ್ನುಭಯೋಸ್ತಯೋಃ||
ಒಬ್ಬನು ನನ್ನ ಭುಜವನ್ನು ಖಡ್ಗದಿಂದ ಕತ್ತರಿಸಿದರೆ ಮತ್ತು ಇನ್ನೊಬ್ಬನು ನನ್ನ ಭುಜಕ್ಕೆ ಚಂದನವನ್ನು ಲೇಪಿಸಿದರೆ, ಅವರಿಬ್ಬರಲ್ಲಿ ಯಾರನ್ನೂ ನಾನು ಒಳ್ಳೆಯವನು ಅಥವಾ ಕೆಟ್ಟವನೆಂದು ಪರಿಗಣಿಸುವುದಿಲ್ಲ.
01110015a ನ ಜಿಜೀವಿಷುವತ್ಕಿಂ ಚಿನ್ನ ಮುಮೂರ್ಷುವದಾಚರನ್|
01110015c ಮರಣಂ ಜೀವಿತಂ ಚೈವ ನಾಭಿನಂದನ್ನ ಚ ದ್ವಿಷನ್||
ನಾನು ಜೀವಂತವಾಗಿರುವುದಕ್ಕಾಗಲೀ ಅಥವಾ ಸಾಯುವುದಕ್ಕಾಗಲೀ ಏನನ್ನೂ ಮಾಡುವುದಿಲ್ಲ. ಹಾಗೆಯೇ ಮರಣವಾಗಲೀ ಜೀವನವಾಗಲೀ ಯಾವುದನ್ನೂ ದೂರವಿಡುವುದಿಲ್ಲ ಅಥವಾ ಬರಮಾಡಿಕೊಳ್ಳುವುದಿಲ್ಲ.
01110016a ಯಾಃ ಕಾಶ್ಚಿಜ್ಜೀವತಾ ಶಕ್ಯಾಃ ಕರ್ತುಮಭ್ಯುದಯಕ್ರಿಯಾಃ|
01110016c ತಾಃ ಸರ್ವಾಃ ಸಮತಿಕ್ರಮ್ಯ ನಿಮೇಷಾದಿಷ್ವವಸ್ಥಿತಃ||
ಪ್ರತಿ ಕ್ಷಣಗಳಲ್ಲಿಯೂ ಜೀವಿಸಿರುವವರು ತಮ್ಮ ಅಭ್ಯುದಯಕ್ಕಾಗಿ ಮಾಡುವ ಎಲ್ಲ ಕರ್ಮಗಳನ್ನೂ ದಾಟಿ ನಿಲ್ಲುತ್ತೇನೆ.
01110017a ತಾಸು ಸರ್ವಾಸ್ವವಸ್ಥಾಸು ತ್ಯಕ್ತಸರ್ವೇಂದ್ರಿಯಕ್ರಿಯಃ|
01110017c ಸಂಪರಿತ್ಯಕ್ತಧರ್ಮಾತ್ಮಾ ಸುನಿರ್ಣಿಕ್ತಾತ್ಮಕಲ್ಮಷಃ||
ಆ ಎಲ್ಲ ಅವಸ್ಥೆಗಳಲ್ಲಿಯೂ ಸರ್ವ ಇಂದ್ರಿಯಕ್ರಿಯೆಗಳನ್ನು ಪರಿತ್ಯಜಿಸುತ್ತೇನೆ. ಎಲ್ಲವನ್ನು ಪರಿತ್ಯಜಿಸಿ ಧರ್ಮಾತ್ಮನಾಗಿ ಆತ್ಮ ಕಲ್ಮಶವನ್ನು ತೊಳೆದುಕೊಳ್ಳುತ್ತೇನೆ.
01110018a ನಿರ್ಮುಕ್ತಃ ಸರ್ವಪಾಪೇಭ್ಯೋ ವ್ಯತೀತಃ ಸರ್ವವಾಗುರಾಃ|
01110018c ನ ವಶೇ ಕಸ್ಯ ಚಿತ್ತಿಷ್ಠನ್ಸಧರ್ಮಾ ಮಾತರಿಶ್ವನಃ||
ಸರ್ವ ಪಾಪ ನಿರ್ಮುಕ್ತನಾಗಿ ಸರ್ವ ಅನುರಾಗ ವ್ಯತೀತನಾಗಿ, ಯಾವುದರ ವಶಕ್ಕೂ ಸಿಗದವನಾಗಿ, ಎಲ್ಲಿಯೂ ನಿಲ್ಲದವನಾಗಿ, ಗಾಳಿಯ ಧರ್ಮವನ್ನೇ ನನ್ನ ಧರ್ಮವನ್ನಾಗಿಸುತ್ತೇನೆ.
01110019a ಏತಯಾ ಸತತಂ ವೃತ್ತ್ಯಾ ಚರನ್ನೇವಂಪ್ರಕಾರಯಾ|
01110019c ದೇಹಂ ಸಂಧಾರಯಿಷ್ಯಾಮಿ ನಿರ್ಭಯಂ ಮಾರ್ಗಮಾಸ್ಥಿತಃ||
ಈ ರೀತಿ ಸತತವಾಗಿ ವರ್ತಿಸುತ್ತಾ ಇದೇ ಪ್ರಕಾರದಲ್ಲಿ ನಡೆದುಕೊಂಡು ನಿರ್ಭಯ ಮಾರ್ಗದಲ್ಲಿದ್ದು ದೇಹವನ್ನು ಧರಿಸಿಕೊಂಡಿರುತ್ತೇನೆ.
01110020a ನಾಹಂ ಶ್ವಾಚರಿತೇ ಮಾರ್ಗೇ ಅವೀರ್ಯಕೃಪಣೋಚಿತೇ|
01110020c ಸ್ವಧರ್ಮಾತ್ಸತತಾಪೇತೇ ರಮೇಯಂ ವೀರ್ಯವರ್ಜಿತಃ||
ವೀರ್ಯವನ್ನು ಕಳೆದುಕೊಂಡ ನಾನು ವೀರ್ಯವರ್ಜಿತನಾಗಿ, ಸ್ವಧರ್ಮದಿಂದ ಯಾವಾಗಲೂ ಕಾಡಲ್ಪಟ್ಟು ಕಾಮ ಸುಖವನ್ನು ಹೊಂದುವ ನಾಯಿಯ ಮಾರ್ಗದಲ್ಲಿ ಚಲಿಸುವುದಿಲ್ಲ.
01110021a ಸತ್ಕೃತೋಽಸಕ್ತೃತೋ ವಾಪಿ ಯೋಽನ್ಯಾಂ ಕೃಪಣಚಕ್ಷುಷಾ|
01110021c ಉಪೈತಿ ವೃತ್ತಿಂ ಕಾಮಾತ್ಮಾ ಸ ಶುನಾಂ ವರ್ತತೇ ಪಥಿ||
ಸತ್ಕೃತನಾಗಿರಲಿ ಅಥವಾ ಅಸತ್ಕೃತನಾಗಿರಲಿ, ಹಸಿವಿನ ಕಣ್ಣುಗಳಿಂದ ಬೇರೆ ದಾರಿಯನ್ನು ಯಾರು ಅನುಸರಿಸುತ್ತಾನೋ ಆ ಕಾಮಾತ್ಮನು ನಾಯಿಗಳು ನಡೆದುಹೋಗುವ ಮಾರ್ಗದಲ್ಲಿ ನಡೆದಂತಾಗುತ್ತದೆ.””
01110022 ವೈಶಂಪಾಯನ ಉವಾಚ|
01110022a ಏವಮುಕ್ತ್ವಾ ಸುದುಃಖಾರ್ತೋ ನಿಃಶ್ವಾಸಪರಮೋ ನೃಪಃ|
01110022c ಅವೇಕ್ಷಮಾಣಃ ಕುಂತೀಂ ಚ ಮಾದ್ರೀಂ ಚ ಸಮಭಾಷತ||
ವೈಶಂಪಾಯನನು ಹೇಳಿದನು: “ದುಃಖಾರ್ತನಾಗಿ ಹೀಗೆ ಹೇಳಿದ ನೃಪನು ನಿಟ್ಟುಸಿರು ಬಿಡುತ್ತಾ ಕುಂತಿ ಮತ್ತು ಮಾದ್ರಿಯರನ್ನು ನೋಡಿ ಹೇಳಿದನು:
01110023a ಕೌಸಲ್ಯಾ ವಿದುರಃ ಕ್ಷತ್ತಾ ರಾಜಾ ಚ ಸಹ ಬಂಧುಭಿಃ|
01110023c ಆರ್ಯಾ ಸತ್ಯವತೀ ಭೀಷ್ಮಸ್ತೇ ಚ ರಾಜಪುರೋಹಿತಾಃ||
01110024a ಬ್ರಾಹ್ಮಣಾಶ್ಚ ಮಹಾತ್ಮಾನಃ ಸೋಮಪಾಃ ಸಂಶಿತವ್ರತಾಃ|
01110024c ಪೌರವೃದ್ಧಾಶ್ಚ ಯೇ ತತ್ರ ನಿವಸಂತ್ಯಸ್ಮದಾಶ್ರಯಾಃ|
01110024e ಪ್ರಸಾದ್ಯ ಸರ್ವೇ ವಕ್ತವ್ಯಾಃ ಪಾಂಡುಃ ಪ್ರವ್ರಜಿತೋ ವನಂ||
“ಕೌಸಲ್ಯೆ, ಕ್ಷತ್ತ ವಿದುರ, ರಾಜ ಮತ್ತು ಎಲ್ಲ ಬಂಧುಗಳಿಗೂ, ಆರ್ಯಾ ಸತ್ಯವತೀ, ಭೀಷ್ಮ, ಮತ್ತು ರಾಜ ಪುರೋಹಿತರಿಗೂ, ಮಹಾತ್ಮ, ಸೋಮರಸ ಸೇವಿಸಿದ, ಸಂಶಿತವ್ರತ ಬ್ರಾಹ್ಮಣರಿಗೂ, ನಮ್ಮ ಆಶ್ರಯದಲ್ಲಿ ವಾಸಿಸುತ್ತಿರುವ ಪೌರವೃದ್ಧರಿಗೂ, ಎಲ್ಲರಿಗೂ ಪಾಂಡುವು ವನವನ್ನು ಸೇರಿದನು ಎಂದು ತಿಳಿಸಿ ಹೇಳಿ.”
01110025a ನಿಶಮ್ಯ ವಚನಂ ಭರ್ತುರ್ವನವಾಸೇ ಧೃತಾತ್ಮನಃ|
01110025c ತತ್ಸಮಂ ವಚನಂ ಕುಂತೀ ಮಾದ್ರೀ ಚ ಸಮಭಾಷತಾಂ||
ವನವಾಸದಲ್ಲಿ ಧೃಢಮನಸ್ಸನ್ನಿಟ್ಟಿದ್ದ ಪತಿಯ ಈ ಮಾತುಗಳನ್ನು ಕೇಳಿದ ಕುಂತಿ ಮತ್ತು ಮಾದ್ರಿ ಈರ್ವರೂ ಒಂದೇ ಉತ್ತರವನ್ನಿತ್ತರು:
01110026a ಅನ್ಯೇಽಪಿ ಹ್ಯಾಶ್ರಮಾಃ ಸಂತಿ ಯೇ ಶಕ್ಯಾ ಭರತರ್ಷಭ|
01110026c ಆವಾಭ್ಯಾಂ ಧರ್ಮಪತ್ನೀಭ್ಯಾಂ ಸಹ ತಪ್ತ್ವಾ ತಪೋ ಮಹತ್|
01110026e ತ್ವಮೇವ ಭವಿತಾ ಸಾರ್ಥಃ ಸ್ವರ್ಗಸ್ಯಾಪಿ ನ ಸಂಶಯಃ||
“ಭರತರ್ಷಭ! ನಿನ್ನ ಧರ್ಮಪತ್ನಿಯರಾದ ನಮ್ಮಿಬ್ಬರ ಜೊತೆಗೂಡಿ ಇದನ್ನು ಶಕ್ಯಮಾಡಿಸಿಕೊಡುವಂಥ ಇನ್ನೂ ಬೇರೆ ಆಶ್ರಮಗಳು ಇವೆ. ಇದರಿಂದಲೂ ನೀನು ಮಹಾ ತಪಸ್ಸನ್ನು ಮಾಡಿ ನಿಸ್ಸಂಶಯವಾಗಿಯೂ ಸ್ವರ್ಗವನ್ನು ಪಡೆಯಲು ಸಾರ್ಥಕನಾಗುತ್ತೀಯೆ.
01110027a ಪ್ರಣಿಧಾಯೇಂದ್ರಿಯಗ್ರಾಮಂ ಭರ್ತೃಲೋಕಪರಾಯಣೇ|
01110027c ತ್ಯಕ್ತಕಾಮಸುಖೇ ಹ್ಯಾವಾಂ ತಪ್ಸ್ಯಾವೋ ವಿಪುಲಂ ತಪಃ||
ನಮ್ಮ ಎಲ್ಲ ಇಂದ್ರಿಯಗಳನ್ನೂ ಹಿಡಿತದಲ್ಲಿಟ್ಟುಕೊಂಡು, ಪತಿಯ ಲೋಕದಲ್ಲಿಯೇ ಪರಾಯಣರಾಗಿರುತ್ತೇವೆ. ಕಾಮ ಸುಖವನ್ನು ತ್ಯಜಿಸಿ ನಾವೂ ಕೂಡ ಕಠಿಣ ತಪಸ್ಸನ್ನು ಕೈಗೊಳ್ಳುತ್ತೇವೆ.
01110028a ಯದಿ ಆವಾಂ ಮಹಾಪ್ರಾಜ್ಞ ತ್ಯಕ್ಷ್ಯಸಿ ತ್ವಂ ವಿಶಾಂ ಪತೇ|
01110028c ಅದ್ಯೈವಾವಾಂ ಪ್ರಹಾಸ್ಯಾವೋ ಜೀತಿವಂ ನಾತ್ರ ಸಂಶಯಃ||
ವಿಶಾಂಪತೇ! ಮಹಾಪ್ರಾಜ್ಞ! ನೀನು ನಮ್ಮನ್ನು ತ್ಯಜಿಸಿದರೆ ನಾವು ಇಂದೇ ನಮ್ಮ ಜೀವನವನ್ನು ಕೊನೆಗೊಳಿಸುತ್ತೇವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.”
01110029 ಪಾಂಡುರುವಾಚ|
01110029a ಯದಿ ವ್ಯವಸಿತಂ ಹ್ಯೇತದ್ಯುವಯೋರ್ಧರ್ಮಸಂಹಿತಂ|
01110029c ಸ್ವವೃತ್ತಿಮನುವರ್ತಿಷ್ಯೇ ತಾಮಹಂ ಪಿತುರವ್ಯಯಾಂ||
ಪಾಂಡುವು ಹೇಳಿದನು: “ಧರ್ಮಸಂಹಿತಗಳಲ್ಲಿ ಹೇಳಿದಂತೆ ನೀವು ಇದರಲ್ಲಿಯೇ ಹಠವನ್ನಿಟ್ಟಿದ್ದರೆ, ನನ್ನ ತಂದೆಯ ಅವ್ಯಯ ನಡತೆಯನ್ನೇ ನನ್ನದಾಗಿಸಿಕೊಂಡು ಅನುಸರಿಸುತ್ತೇನೆ.
01110030a ತ್ಯಕ್ತಗ್ರಾಮ್ಯಸುಖಾಚಾರಸ್ತಪ್ಯಮಾನೋ ಮಹತ್ತಪಃ|
01110030c ವಲ್ಕಲೀ ಫಲಮೂಲಾಶೀ ಚರಿಷ್ಯಾಮಿ ಮಹಾವನೇ||
ಗ್ರಾಮದ ಸುಖಾಚಾರಗಳನ್ನು ತ್ಯಜಿಸಿ, ಮಹಾ ತಪಸ್ಸನ್ನು ತಪಿಸುತ್ತೇನೆ; ವಲ್ಕಲವನ್ನು ಧರಿಸಿ, ಫಲಮೂಲಗಳನ್ನು ತಿಂದು ಮಹಾವನದಲ್ಲಿ ಸಂಚರಿಸುತ್ತೇನೆ.
01110031a ಅಗ್ನಿಂ ಜುಹ್ವನ್ನುಭೌ ಕಾಲಾವುಭೌ ಕಾಲಾವುಪಸ್ಪೃಶನ್|
01110031c ಕೃಶಃ ಪರಿಮಿತಾಹಾರಶ್ಚೀರಚರ್ಮಜಟಾಧರಃ||
ಬೆಳಿಗ್ಗೆ-ಸಾಯಂಕಾಲ ಎರಡೂ ಹೊತ್ತು ಅಗ್ನಿಯಲ್ಲಿ ಆಹುತಿ ನೀಡುತ್ತೇನೆ; ಕೃಶನಾಗಿದ್ದು, ಮಿತ ಆಹಾರವನ್ನು ಸೇವಿಸಿಕೊಂಡು, ಚರ್ಮವನ್ನು ಧರಿಸಿ, ಜಟಾಧರನಾಗಿ ಇರುತ್ತೇನೆ.
01110032a ಶೀತವಾತಾತಪಸಹಃ ಕ್ಷುತ್ಪಿಪಾಸಾಶ್ರಮಾನ್ವಿತಃ|
01110032c ತಪಸಾ ದುಶ್ಚರೇಣೇದಂ ಶರೀರಮುಪಶೋಷಯನ್||
01110033a ಏಕಾಂತಶೀಲೀ ವಿಮೃಶನ್ಪಕ್ವಾಪಕ್ವೇನ ವರ್ತಯನ್|
01110033c ಪಿತೄನ್ದೇವಾಂಶ್ಚ ವನ್ಯೇನ ವಾಗ್ಭಿರದ್ಭಿಶ್ಚ ತರ್ಪಯನ್||
ಛಳಿ, ಗಾಳಿ, ಬಿಸಿಗಳನ್ನು ಸಹಿಸಿಕೊಂಡು, ಹಸಿವು, ಬಾಯಾರಿಕೆ, ಮತ್ತು ಆಯಾಸಗಳನ್ನು ಪರಿಗಣಿಸದೇ, ದುಷ್ಕರ ತಪಸ್ಸನ್ನು ಮಾಡಿ ಈ ಶರೀರವನ್ನು ಶೋಷಿಸುತ್ತೇನೆ; ಏಕಾಂತಶೀಲನಾಗಿ, ಹಣ್ಣು ಮತ್ತು ಕಾಯಿಗಳನ್ನು ಸೇವಿಸುತ್ತಾ, ಪಿತೃಗಳಿಗೆ, ದೇವತೆಗಳಿಗೆ, ವನದಲ್ಲಿರುವವುಗಳಿಗೆ, ಶಬ್ಧಗಳಿಗೆ ಮತ್ತು ನೀರಿಗೆ ತರ್ಪಣೆಗಳನ್ನು ನೀಡುತ್ತೇನೆ.
01110034a ವಾನಪ್ರಸ್ಥಜನಸ್ಯಾಪಿ ದರ್ಶನಂ ಕುಲವಾಸಿನಾಂ|
01110034c ನಾಪ್ರಿಯಾಣ್ಯಾಚರಂಜಾತು ಕಿಂ ಪುನರ್ಗ್ರಾಮವಾಸಿನಾಂ||
ವಾನಪ್ರಸ್ಥ ಸ್ವೀಕರಿಸಿದ ಜನರ ದರ್ಶನವು ಕುಲವಾಸಿಗಳ್ಯಾರನ್ನೂ ದುಃಖಕ್ಕೊಳಮಾಡುವುದಿಲ್ಲ. ಇನ್ನು ಗ್ರಾಮವಾಸಿಗಳು ಹೇಗೆ ದುಃಖಕ್ಕೊಳಗಾಗುತ್ತಾರೆ?
01110035a ಏವಮಾರಣ್ಯಶಾಸ್ತ್ರಾಣಾಮುಗ್ರಮುಗ್ರತರಂ ವಿಧಿಂ|
01110035c ಕಾಂಕ್ಷಮಾಣೋಽಹಮಾಸಿಷ್ಯೇ ದೇಹಸ್ಯಾಸ್ಯ ಸಮಾಪನಾತ್||
ಈ ರೀತಿ ನಾನು ಅರಣ್ಯಶಾಸ್ತ್ರದಲ್ಲಿ ಹೇಳಿದಂಥ ಉಗ್ರಾನುಗ್ರತರ ವಿಧಿಗಳನ್ನು ಸ್ವೀಕರಿಸಿ, ಅವುಗಳಿಂದ ನನ್ನ ಈ ದೇಹವನ್ನು ಕೊನೆಗೊಳ್ಳಿಸುವುದನ್ನು ಆಕಾಂಕ್ಷಿಸುತ್ತಿದ್ದೇನೆ.””
01110036 ವೈಶಂಪಾಯನ ಉವಾಚ|
01110036a ಇತ್ಯೇವಮುಕ್ತ್ವಾ ಭಾರ್ಯೇ ತೇ ರಾಜಾ ಕೌರವವಂಶಜಃ|
01110036c ತತಶ್ಚೂಡಾಮಣಿಂ ನಿಷ್ಕಮಂಗದೇ ಕುಂಡಲಾನಿ ಚ|
01110036e ವಾಸಾಂಸಿ ಚ ಮಹಾರ್ಹಾಣಿ ಸ್ತ್ರೀಣಾಮಾಭರಣಾನಿ ಚ||
01110037a ಪ್ರದಾಯ ಸರ್ವಂ ವಿಪ್ರೇಭ್ಯಃ ಪಾಂಡುಃ ಪುನರಭಾಷತ|
01110037c ಗತ್ವಾ ನಾಗಪುರಂ ವಾಚ್ಯಂ ಪಾಂಡುಃ ಪ್ರವ್ರಜಿತೋ ವನಂ||
ವೈಶಂಪಾಯನನು ಹೇಳಿದನು: “ಈ ರೀತಿ ತನ್ನ ಬಾರ್ಯೆಯರಿಗೆ ಹೇಳಿದ ಆ ಕೌರವ ವಂಶಜ ರಾಜನು ತನ್ನ ಚೂಡಾಮಣಿ, ಅಂಗದ, ಕುಂಡಲ, ಬೆಲೆಬಾಳುವ ವಸ್ತ್ರ, ಮತ್ತು ಸ್ತ್ರೀಯರ ಆಭರಣಗಳನ್ನು ತೆಗೆದಿಟ್ಟನು. ಎಲ್ಲವನ್ನು ವಿಪ್ರರಿಗಿತ್ತು ಪಾಂಡುವು ಹೇಳಿದನು: “ನಾಗಪುರಕ್ಕೆ ಹೋಗಿ ಪಾಂಡುವು ವನವನ್ನು ಸೇರಿದನು ಎಂದು ಹೇಳಿ.
01110038a ಅರ್ಥಂ ಕಾಮಂ ಸುಖಂ ಚೈವ ರತಿಂ ಚ ಪರಮಾತ್ಮಿಕಾಂ|
01110038c ಪ್ರತಸ್ಥೇ ಸರ್ವಮುತ್ಸೃಜ್ಯ ಸಭಾರ್ಯಃ ಕುರುಪುಂಗವಃ||
ಅರ್ಥ, ಕಾಮ, ಮತ್ತು ರತಿಸುಖವನ್ನು ತ್ಯಜಿಸಿ ಎಲ್ಲವನ್ನೂ ಬಿಟ್ಟು ತನ್ನ ಪತ್ನಿಯರೊಂದಿಗೆ ಕುರುಪುಂಗವನು ವನವನ್ನು ಸೇರಿದನೆಂದು ಹೇಳಿ.”
01110039a ತತಸ್ತಸ್ಯಾನುಯಾತ್ರಾಣಿ ತೇ ಚೈವ ಪರಿಚಾರಕಾಃ|
01110039c ಶ್ರುತ್ವಾ ಭರತಸಿಂಹಸ್ಯ ವಿವಿಧಾಃ ಕರುಣಾ ಗಿರಃ|
01110039e ಭೀಮಮಾರ್ತಸ್ವರಂ ಕೃತ್ವಾ ಹಾಹೇತಿ ಪರಿಚುಕ್ರುಶುಃ||
ಆ ಭರತಸಿಂಹನ ಅನುಯಾತ್ರಿ ಮತ್ತು ಪರಿಚಾರಕರು ಈ ಮಾತುಗಳನ್ನು ಕೇಳಿ ಬೇರೆ ಬೇರೆ ಕರುಣಾಜನಕ ಮಾತುಗಳಿಂದ ಘೋರ ಆರ್ತಸ್ವರಗಳಲ್ಲಿ “ಹಾ! ಹಾ!” ಎಂದು ರೋದಿಸಿದರು.
01110040a ಉಷ್ಣಮಶ್ರು ವಿಮುಂಚಂತಸ್ತಂ ವಿಹಾಯ ಮಹೀಪತಿಂ|
01110040c ಯಯುರ್ನಾಗಪುರಂ ತೂರ್ಣಂ ಸರ್ವಮಾದಾಯ ತದ್ವಚಃ||
ಬಿಸಿ ಕಣ್ಣೀರು ಸುರಿಸುತ್ತಾ, ಆ ಮಹೀಪತಿಯನ್ನು ಬೀಳ್ಕೊಂಡು, ಆದಷ್ಟು ಬೇಗನೇ ನಾಗಪುರಕ್ಕೆ ಅವನ ಸಂದೇಶವನ್ನು ಕೊಂಡೊಯ್ದರು.
01110041a ಶ್ರುತ್ವಾ ಚ ತೇಭ್ಯಸ್ತತ್ಸರ್ವಂ ಯಥಾವೃತ್ತಂ ಮಹಾವನೇ|
01110041c ಧೃತರಾಷ್ಟ್ರೋ ನರಶ್ರೇಷ್ಠಃ ಪಾಂಡುಮೇವಾನ್ವಶೋಚತ||
ಮಹಾವನದಲ್ಲಿ ನಡೆದುದೆಲ್ಲವನ್ನೂ ಯಥಾವತ್ತಾಗಿ ಕೇಳಿದ ನರಶ್ರೇಷ್ಠ ಧೃತರಾಷ್ಟ್ರನು ಪಾಂಡುವಿನ ಕುರಿತು ಶೋಚಿಸಿದನು.
01110042a ರಾಜಪುತ್ರಸ್ತು ಕೌರವ್ಯಃ ಪಾಂಡುರ್ಮೂಲಫಲಾಶನಃ|
01110042c ಜಗಾಮ ಸಹ ಭಾರ್ಯಾಭ್ಯಾಂ ತತೋ ನಾಗಸಭಂ ಗಿರಿಂ||
ಕೌರವ ರಾಜಪುತ್ರ ಪಾಂಡುವಾದರೂ ಫಲಮೂಲಗಳನ್ನು ಸೇವಿಸುತ್ತಾ ತನ್ನ ಭಾರ್ಯೆಯರನ್ನೊಡಗೂಡಿ ನಾಗಸಭಗಿರಿಗೆ ಹೋದನು.
01110043a ಸ ಚೈತ್ರರಥಮಾಸಾದ್ಯ ವಾರಿಷೇಣಮತೀತ್ಯ ಚ|
01110043c ಹಿಮವಂತಮತಿಕ್ರಮ್ಯ ಪ್ರಯಯೌ ಗಂಧಮಾದನಂ||
ಅವನು ಚೈತ್ರರಥವನ್ನು ಸೇರಿ, ವಾರಿಶೇಣಿಯನ್ನು ದಾಟಿ, ಹಿಮಾಲಯವನ್ನೂ ದಾಟಿ, ಗಂಧಮಾದನವನ್ನು ಸೇರಿದನು.
01110044a ರಕ್ಷ್ಯಮಾಣೋ ಮಹಾಭೂತೈಃ ಸಿದ್ಧೈಶ್ಚ ಪರಮರ್ಷಿಭಿಃ|
01110044c ಉವಾಸ ಸ ತದಾ ರಾಜಾ ಸಮೇಷು ವಿಷಮೇಷು ಚ||
ಮಹಾ ಭೂತ ಸಿದ್ಧರು ಮತ್ತು ಪರಮ ಋಷಿಗಳಿಂದ ರಕ್ಷಿತ ಆ ಸಮ ವಿಷಮ ಪ್ರದೇಶದಲ್ಲಿ ರಾಜನು ವಾಸಿಸಿದನು.
01110045a ಇಂದ್ರದ್ಯುಮ್ನಸರಃ ಪ್ರಾಪ್ಯ ಹಂಸಕೂಟಮತೀತ್ಯ ಚ|
01110045c ಶತಶೃಂಗೇ ಮಹಾರಾಜ ತಾಪಸಃ ಸಮಪದ್ಯತ||
ಇಂದ್ರದ್ಯುಮ್ನ ಸರೋವರವನ್ನು ಸೇರಿ, ಹಂಸಕೂಟವನ್ನು ದಾಟಿ, ಶತಶೃಂಗದಲ್ಲಿ ಮಹಾರಾಜನು ತಪಸ್ಸಿನಲ್ಲಿ ತೊಡಗಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡುಚರಿತೇ ದಶಾಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡುಚರಿತ ಎನ್ನುವ ನೂರಾಹತ್ತನೆಯ ಅಧ್ಯಾಯವು.