Adi Parva: Chapter 107

ಆದಿ ಪರ್ವ: ಸಂಭವ ಪರ್ವ

೧೦೭

ಕೌರವ-ಪಾಂಡವರ ಜನನ

ಕೌರವ-ಪಾಂಡವರ ಕುರಿತು ಜನಮೇಜಯನು ಪ್ರಶ್ನಿಸುವುದು (೧-೬). ವ್ಯಾಸನಿಂದ ಗಾಂಧಾರಿಗೆ ನೂರು ಪುತ್ರರ ವರದಾನ, ಧೃತರಾಷ್ಟ್ರನಿಂದ ಗರ್ಭವತಿಯಾದುದು (೭-೮). ಎರಡು ವರ್ಷ ಗರ್ಭವತಿಯಾಗಿದ್ದು, ಕುಂತಿಗೆ ಮಕ್ಕಳಾದವೆಂದು ಕೇಳಿ ತನ್ನ ಹೊಟ್ಟೆಯು ಇನ್ನೂ ಗಟ್ಟಿಯಾಗಿರುವುದನ್ನು ನೋಡಿ ಚಿಂತಿತಳಾಗಿ ಗಾಂಧಾರಿಯು ಗರ್ಭಪಾತ ಮಾಡಿಕೊಂಡು, ಹೊರಬಂದ ಮಾಂಸದ ಮುದ್ದೆಯನ್ನು ಬಿಸಾಡಲು ಹೊರಟಾಗ ವ್ಯಾಸನು ಬಂದು ತಡೆದುದು (೯-೧೬). ವ್ಯಾಸನ ಸಲಹೆಯಂತೆ ಪಿಂಡವನ್ನು ನೂರಾ‌ಒಂದು ಭಾಗಗಳನ್ನಾಗಿ ಮಾಡಿ ತುಪ್ಪದ ಕೊಡಗಳಲ್ಲಿ ಕಾದಿರಿಸಿದುದು (೧೭-೨೪). ದುರ್ಯೋಧನನ ಜನನ, ಧೃತರಾಷ್ಟ್ರನು ಯುಧಿಷ್ಠಿರನ ನಂತರ ಇವನೇ ರಾಜನಾಗುವನಲ್ಲವೇ ಎಂದು ಕೇಳುವುದು, ಘೋರ ಅಪಶಕುನಗಳು, ಕುಲದ ಅಂತ್ಯಕ್ಕೆ ಕಾರಣನಾಗುವ ಈ ಮಗುವನ್ನು ತ್ಯಜಿಸಲು ವಿದುರನ ಸಲಹೆ, ಧೃತರಾಷ್ಟ್ರನು ಪುತ್ರವಾತ್ಸಲ್ಯದಿಂದ ಮಗನನ್ನು ಇಟ್ಟುಕೊಂಡಿದುದು, ಗಾಂಧಾರಿಯ ಇತರ ಮಕ್ಕಳ ಜನನ (೨೫-೩೪). ಗಾಂಧಾರಿಯು ಗರ್ಭಿಣಿಯಾಗಿರುವಾಗ ವೈಶ್ಯ ಸೇವಕಿಯಲ್ಲಿ ಧೃತರಾಷ್ಟ್ರನ ಮಗ ಯುಯುತ್ಸುವಿನ ಜನನ (೩೫-೩೭).

Image result for mahabharata01107001 ವೈಶಂಪಾಯನ ಉವಾಚ|

01107001a ತತಃ ಪುತ್ರಶತಂ ಜಜ್ಞೇ ಗಾಂಧಾರ್ಯಾಂ ಜನಮೇಜಯ|

01107001c ಧೃತರಾಷ್ಟ್ರಸ್ಯ ವೈಶ್ಯಾಯಾಮೇಕಶ್ಚಾಪಿ ಶತಾತ್ಪರಃ||

ವೈಶಂಪಾಯನನು ಹೇಳಿದನು: “ಜನಮೇಜಯ! ನಂತರ ಗಾಂಧಾರಿಯಲ್ಲಿ ಧೃತರಾಷ್ಟ್ರನ ನೂರು ಪುತ್ರರು ಮತ್ತು ನೂರಾ ಒಂದನೆಯವನು ವೈಶ್ಯೆಯೊಬ್ಬಳಲ್ಲಿ ಜನಿಸಿದರು.

01107002a ಪಾಂಡೋಃ ಕುಂತ್ಯಾಂ ಚ ಮಾದ್ರ್ಯಾಂ ಚ ಪಂಚ ಪುತ್ರಾ ಮಹಾರಥಾಃ|

01107002c ದೇವೇಭ್ಯಃ ಸಮಪದ್ಯಂತ ಸಂತಾನಾಯ ಕುಲಸ್ಯ ವೈ||

ಪಾಂಡುವಿಗೆ ಕುಂತಿ ಮತ್ತು ಮಾದ್ರಿಯರಲ್ಲಿ ಕುಲಸಂತಾನಾರ್ಥವಾಗಿ ದೇವತೆಗಳಿಂದ ಐವರು ಮಹಾರಥಿ ಪುತ್ರರು ಜನಿಸಿದರು.”

01107003 ಜನಮೇಜಯ ಉವಾಚ|

01107003a ಕಥಂ ಪುತ್ರಶತಂ ಜಜ್ಞೇ ಗಾಂಧಾರ್ಯಾಂ ದ್ವಿಜಸತ್ತಮ|

01107003c ಕಿಯತಾ ಚೈವ ಕಾಲೇನ ತೇಷಾಮಾಯುಶ್ಚ ಕಿಂ ಪರಂ||

ಜನಮೇಜಯನು ಹೇಳಿದನು: “ದ್ವಿಜಸತ್ತಮ! ಗಾಂಧಾರಿಯಲ್ಲಿ ನೂರು ಪುತ್ರರು ಹೇಗೆ ಮತ್ತು ಎಷ್ಟು ಸಮಯದಲ್ಲಿ ಜನಿಸಿದರು? ಅವರ ಆಯುಷ್ಯವಾದರೂ ಎಷ್ಟಿತ್ತು?

01107004a ಕಥಂ ಚೈಕಃ ಸ ವೈಶ್ಯಾಯಾಂ ಧೃತರಾಷ್ಟ್ರಸುತೋಽಭವತ್|

01107004c ಕಥಂ ಚ ಸದೃಶೀಂ ಭಾರ್ಯಾಂ ಗಾಂಧಾರೀಂ ಧರ್ಮಚಾರಿಣೀಂ|

01107004e ಆನುಕೂಲ್ಯೇ ವರ್ತಮಾನಾಂ ಧೃತರಾಷ್ಟ್ರೋಽತ್ಯವರ್ತತ||

ಧೃತರಾಷ್ಟ್ರನಿಗೆ ವೈಶ್ಯೆಯಲ್ಲಿ ಹೇಗೆ ಓರ್ವ ಮಗನು ಜನಿಸಿದನು? ತನ್ನ ಅನುಕೂಲಕ್ಕೆ ತಕ್ಕಂತೆ ವರ್ತಿಸುತ್ತಿದ್ದ ಧರ್ಮಚಾರಿಣಿ ಭಾರ್ಯೆ ಗಾಂಧಾರಿಯನ್ನು ಬಿಟ್ಟು ಧೃತರಾಷ್ಟ್ರನು ಅವಳಲ್ಲಿ ಏಕೆ ಹೋದನು?

01107005a ಕಥಂ ಚ ಶಪ್ತಸ್ಯ ಸತಃ ಪಾಂಡೋಸ್ತೇನ ಮಹಾತ್ಮನಾ|

01107005c ಸಮುತ್ಪನ್ನಾ ದೈವತೇಭ್ಯಃ ಪಂಚ ಪುತ್ರಾ ಮಹಾರಥಾಃ||

ಶಪಿತ ಮಹಾತ್ಮ ಪಾಂಡುವು ತನ್ನ ಸತಿಯರಲ್ಲಿ ಹೇಗೆ ದೇವತೆಗಳಿಂದ ಮಹಾರಥಿ ಪಂಚ ಪುತ್ರರನ್ನು ಪಡೆದನು?

01107006a ಏತದ್ವಿದ್ವನ್ಯಥಾವೃತ್ತಂ ವಿಸ್ತರೇಣ ತಪೋಧನ|

01107006c ಕಥಯಸ್ವ ನ ಮೇ ತೃಪ್ತಿಃ ಕಥ್ಯಮಾನೇಷು ಬಂಧುಷು||

ತಪೋಧನ! ಇವೆಲ್ಲವನ್ನೂ ಯಥಾವತ್ತಾಗಿ ವಿಸ್ತಾರವಾಗಿ ತಿಳಿಸು. ನನ್ನ ಬಂಧುಗಳ ಕಥೆಯನ್ನು ಎಷ್ಟು ಕೇಳಿದರೂ ನನಗೆ ತೃಪ್ತಿಯಾಗುತ್ತಿಲ್ಲ.”

01107007 ವೈಶಂಪಾಯನ ಉವಾಚ|

01107007a ಕ್ಷುಚ್ಛ್ರಮಾಭಿಪರಿಗ್ಲಾನಂ ದ್ವೈಪಾಯನಮುಪಸ್ಥಿತಂ|

01107007c ತೋಷಯಾಮಾಸ ಗಾಂಧಾರೀ ವ್ಯಾಸಸ್ತಸ್ಯೈ ವರಂ ದದೌ||

ವೈಶಂಪಾಯನನು ಹೇಳಿದನು: “ಒಮ್ಮೆ ಹಸಿದು ಬಳಲಿ ಬಂದಿದ್ದ ದ್ವೈಪಾಯನನನ್ನು ಗಾಂಧಾರಿಯು ತೃಪ್ತಿಗೊಳಿಸಿದಳು. ವ್ಯಾಸನು ಅವಳಿಗೆ ವರವನ್ನಿತ್ತನು.

01107008a ಸಾ ವವ್ರೇ ಸದೃಶಂ ಭರ್ತುಃ ಪುತ್ರಾಣಾಂ ಶತಮಾತ್ಮನಃ|

01107008c ತತಃ ಕಾಲೇನ ಸಾ ಗರ್ಭಂ ಧೃತರಾಷ್ಟ್ರಾದಥಾಗ್ರಹೀತ್||

ಅವಳು ತನಗಾಗಿ ತನ್ನ ಪತಿ ಸಮಾನ ನೂರು ಪುತ್ರರನ್ನು ಕೇಳಿದಳು. ಸ್ವಲ್ಪ ಸಮಯದ ನಂತರ ಅವಳು ಧೃತರಾಷ್ಟ್ರನಿಂದ ಗರ್ಭವತಿಯಾದಳು.

01107009a ಸಂವತ್ಸರದ್ವಯಂ ತಂ ತು ಗಾಂಧಾರೀ ಗರ್ಭಮಾಹಿತಂ|

01107009c ಅಪ್ರಜಾ ಧಾರಯಾಮಾಸ ತತಸ್ತಾಂ ದುಃಖಮಾವಿಶತ್||

ಎರಡು ವರ್ಷಗಳ ಪರ್ಯಂತ ಮಕ್ಕಳನ್ನು ಹಡೆಯದೆ ಗಾಂಧಾರಿಯು ಗರ್ಭವತಿಯಾಗಿಯೇ ಇದ್ದಳು. ಇದರಿಂದ ಅವಳು ದುಃಖಿತಳಾದಳು.

01107010a ಶ್ರುತ್ವಾ ಕುಂತೀಸುತಂ ಜಾತಂ ಬಾಲಾರ್ಕಸಮತೇಜಸಂ|

01107010c ಉದರಸ್ಯಾತ್ಮನಃ ಸ್ಥೈರ್ಯಮುಪಲಭ್ಯಾನ್ವಚಿಂತಯತ್||

ಕುಂತಿಗೆ ಬಾಲಾರ್ಕಸಮತೇಜಸ್ವಿ ಸುತನು ಜನಿಸಿದನೆಂದು ಕೇಳಿದ ಅವಳು ತನ್ನ ಹೊಟ್ಟೆಯು ಇನ್ನೂ ಗಟ್ಟಿಯಾಗಿಯೇ ಇರುವುದನ್ನು ನೋಡಿ ಚಿಂತಿಸಿದಳು.

01107011a ಅಜ್ಞಾತಂ ಧೃತರಾಷ್ಟ್ರಸ್ಯ ಯತ್ನೇನ ಮಹತಾ ತತಃ|

01107011c ಸೋದರಂ ಪಾತಯಾಮಾಸ ಗಾಂಧಾರೀ ದುಃಖಮೂರ್ಚ್ಛಿತಾ||

ಧೃತರಾಷ್ಟ್ರನಿಗೆ ತಿಳಿಯದಂತೆ ಸಾಕಷ್ಟು ಪ್ರಯತ್ನಪಟ್ಟು ತನ್ನ ಗರ್ಭಪಾತ ಮಾಡಿಕೊಂಡು ದುಃಖದಿಂದ ಮೂರ್ಛಿತಳಾದಳು.

01107012a ತತೋ ಜಜ್ಞೇ ಮಾಂಸಪೇಶೀ ಲೋಹಾಷ್ಠೀಲೇವ ಸಂಹತಾ|

01107012c ದ್ವಿವರ್ಷಸಂಭೃತಾಂ ಕುಕ್ಷೌ ತಾಮುತ್ಸ್ರಷ್ಟುಂ ಪ್ರಚಕ್ರಮೇ||

ಹೆಪ್ಪುಗಟ್ಟಿದ ರಕ್ತದ ಹಾಗಿನ ಒಂದು ಮಾಂಸದ ಮುದ್ದೆಯು ಹೊರಬಂದಿತು. ಎರಡು ವರ್ಷಗಳು ತನ್ನ ಹೊಟ್ಟೆಯಲ್ಲಿ ಹೊತ್ತು ಬಂದಿದ್ದ ಅದನ್ನು ಬಿಸಾಡಲು ಮುಂದಾದಳು.

01107013a ಅಥ ದ್ವೈಪಾಯನೋ ಜ್ಞಾತ್ವಾ ತ್ವರಿತಃ ಸಮುಪಾಗಮತ್|

01107013c ತಾಂ ಸ ಮಾಂಸಮಯೀಂ ಪೇಶೀಂ ದದರ್ಶ ಜಪತಾಂ ವರಃ||

ಇದನ್ನು ತಿಳಿದ ಜಪಿಗಳಲ್ಲಿ ಶ್ರೇಷ್ಠ ದ್ವೈಪಾಯನನು ತಕ್ಷಣವೇ ಅಲ್ಲಿಗೆ ಬಂದು ಆ ಮಾಂಸದ ಮುದ್ದೆಯನ್ನು ನೋಡಿದನು.

01107014a ತತೋಽಬ್ರವೀತ್ಸೌಬಲೇಯೀಂ ಕಿಮಿದಂ ತೇ ಚಿಕೀರ್ಷಿತಂ|

01107014c ಸಾ ಚಾತ್ಮನೋ ಮತಂ ಸತ್ಯಂ ಶಶಂಸ ಪರಮರ್ಷಯೇ||

“ಏಕೆ ಹೀಗೆ ಮಾಡಿದೆ?” ಎಂದು ಅವನು ಸೌಬಲೇಯಿಯಲ್ಲಿ ಕೇಳಿದನು. ಅವಳು ತನ್ನ ಮನಸ್ಸಿನಲ್ಲಿದ್ದ ಸತ್ಯವನ್ನು ಆ ಪರಮ ಋಷಿಗೆ ತಿಳಿಸಿದಳು:

01107015a ಜ್ಯೇಷ್ಠಂ ಕುಂತೀಸುತಂ ಜಾತಂ ಶ್ರುತ್ವಾ ರವಿಸಮಪ್ರಭಂ|

01107015c ದುಃಖೇನ ಪರಮೇಣೇದಮುದರಂ ಪಾತಿತಂ ಮಯಾ||

“ರವಿಸಮಪ್ರಭ ಜ್ಯೇಷ್ಠ ಕುಂತೀಸುತನು ಜನಿಸಿದ್ದುದನ್ನು ಕೇಳಿ ಪರಮ ದುಃಖಗೊಂಡು ನನ್ನ ಗರ್ಭವನ್ನು ಕೆಳಗುರುಳಿಸಿದೆ.

01107016a ಶತಂ ಚ ಕಿಲ ಪುತ್ರಾಣಾಂ ವಿತೀರ್ಣಂ ಮೇ ತ್ವಯಾ ಪುರಾ|

01107016c ಇಯಂ ಚ ಮೇ ಮಾಂಸಪೇಶೀ ಜಾತಾ ಪುತ್ರಶತಾಯ ವೈ||

ಹಿಂದೆ ನೀನು ನನಗೆ ನೂರು ಪುತ್ರರನ್ನು ವರವಾಗಿ ಕೊಟ್ಟಿದ್ದೆ. ಆದರೆ ಆ ಪುತ್ರಶತರ ಬದಲಾಗಿ ಈ ಮಾಂಸದ ಪಿಂಡಿಯು ಹುಟ್ಟಿದೆ!”

01107017 ವ್ಯಾಸ ಉವಾಚ|

01107017a ಏವಮೇತತ್ಸೌಬಲೇಯಿ ನೈತಜ್ಜಾತ್ವನ್ಯಥಾ ಭವೇತ್|

01107017c ವಿತಥಂ ನೋಕ್ತಪೂರ್ವಂ ಮೇ ಸ್ವೈರೇಷ್ವಪಿ ಕುತೋಽನ್ಯಥಾ||

ವ್ಯಾಸನು ಹೇಳಿದನು: “ಸೌಬಲೇಯೀ! ಅದು ಹಾಗೆಯೇ ಆಗುತ್ತದೆ. ಬೇರೆ ಯಾವರೀತಿಯೂ ಆಗುವುದಿಲ್ಲ. ಈ ಹಿಂದೆ ತಮಾಷೆಯಾಗಿಯೂ ನಾನು ಸುಳ್ಳನ್ನು ಹೇಳಲಿಲ್ಲ. ಈಗ ತಾನೇ ಹೇಗೆ ಸುಳ್ಳನ್ನು ಹೇಳಲಿ?

01107018a ಘೃತಪೂರ್ಣಂ ಕುಂಡಶತಂ ಕ್ಷಿಪ್ರಮೇವ ವಿಧೀಯತಾಂ|

01107018c ಶೀತಾಭಿರದ್ಭಿರಷ್ಠೀಲಾಮಿಮಾಂ ಚ ಪರಿಷಿಂಚತ||

ತಕ್ಷಣವೇ ತುಪ್ಪದಿಂದ ತುಂಬಿದ ನೂರು ಕುಂಡಗಳನ್ನು ತರಿಸು. ಮತ್ತು ಈ ಪಿಂಡದ ಮೇಲೆ ತಣ್ಣೀರನ್ನು ಚುಮುಕಿಸು.””

01107019 ವೈಶಂಪಾಯನ ಉವಾಚ|

01107019a ಸಾ ಸಿಚ್ಯಮಾನಾ ಅಷ್ಠೀಲಾ ಅಭವಚ್ಶತಧಾ ತದಾ|

01107019c ಅಂಗುಷ್ಠಪರ್ವಮಾತ್ರಾಣಾಂ ಗರ್ಭಾಣಾಂ ಪೃಥಗೇವ ತು||

01107020a ಏಕಾಧಿಕಶತಂ ಪೂರ್ಣಂ ಯಥಾಯೋಗಂ ವಿಶಾಂ ಪತೇ|

01107020c ಮಾಂಸಪೇಶ್ಯಾಸ್ತದಾ ರಾಜನ್ಕ್ರಮಶಃ ಕಾಲಪರ್ಯಯಾತ್||

ವೈಶಂಪಾಯನನು ಹೇಳಿದನು: “ಈ ರೀತಿ ನೀರಿನಿಂದ ತೋಯಿಸಿದಾಗ ಆ ಪಿಂಡವು ಒಂದೊಂದೂ ಒಂದು ಬೆರಳಿನ ಗಾತ್ರದ ಒಂದು ನೂರಾ ಒಂದು ಭ್ರೂಣಗಳಾಗಿ ಒಡೆಯಿತು. ವಿಶಾಂಪತೇ! ರಾಜನ್! ಹೀಗೆ ಒಂದರ ನಂತರ ಇನ್ನೊಂದರಂತೆ ಒಂದುನೂರಾ ಒಂದು ಪೂರ್ಣ ಗರ್ಭಗಳಾದವು.

01107021a ತತಸ್ತಾಂಸ್ತೇಷು ಕುಂಡೇಷು ಗರ್ಭಾನವದಧೇ ತದಾ|

01107021c ಸ್ವನುಗುಪ್ತೇಷು ದೇಶೇಷು ರಕ್ಷಾಂ ಚ ವ್ಯದಧಾತ್ತತಃ||

ಅವನು ಆ ಗರ್ಭಪಿಂಡಗಳನ್ನು ಪ್ರತ್ಯೇಕ ಕುಂಡಗಳಲ್ಲಿರಿಸಿ ಅವುಗಳನ್ನು ಗುಪ್ತ ಸ್ಥಳಗಳಲ್ಲಿ ಇಟ್ಟು ಕಾವಲಿರಿಸಿದನು.

01107022a ಶಶಾಸ ಚೈವ ಭಗವಾನ್ಕಾಲೇನೈತಾವತಾ ಪುನಃ|

01107022c ವಿಘಟ್ಟನೀಯಾನ್ಯೇತಾನಿ ಕುಂಡಾನೀತಿ ಸ್ಮ ಸೌಬಲೀಂ||

ಆ ಭಗವಾನನು ಸೌಬಲಿಗೆ ಎಷ್ಟು ಸಮಯದ ನಂತರ ಪುನಃ ಆ ಕುಂಡಗಳನ್ನು ಒಡೆಯ ಬೇಕು ಎನ್ನುವುದನ್ನು ಹೇಳಿ ಕೊಟ್ಟನು.

01107023a ಇತ್ಯುಕ್ತ್ವಾ ಭಗವಾನ್ವ್ಯಾಸಸ್ತಥಾ ಪ್ರತಿವಿಧಾಯ ಚ|

01107023c ಜಗಾಮ ತಪಸೇ ಧೀಮಾನ್ ಹಿಮವಂತಂ ಶಿಲೋಚ್ಛಯಂ||

ಈ ರೀತಿ ಸೂಚನೆಗಳನ್ನಿತ್ತು ಧೀಮಾನ್ ಭಗವಾನ್ ವ್ಯಾಸನು ಶಿಲೋಚ್ಛಯ ಹಿಮಾಲಯಕ್ಕೆ ತಪಸ್ಸಿಗೆಂದು ಹೋದನು.

01107024a ಜಜ್ಞೇ ಕ್ರಮೇಣ ಚೈತೇನ ತೇಷಾಂ ದುರ್ಯೋಧನೋ ನೃಪಃ|

01107024c ಜನ್ಮತಸ್ತು ಪ್ರಮಾಣೇನ ಜ್ಯೇಷ್ಠೋ ರಾಜಾ ಯುಧಿಷ್ಠಿರಃ||

ಕ್ರಮೇಣ ಅವುಗಳಿಂದ ನೃಪ ದುರ್ಯೋಧನನು ಜನಿಸಿದನು. ಆದರೆ ಮೊದಲೇ ಹುಟ್ಟಿದ್ದ ಜ್ಯೇಷ್ಠ ಯುಧಿಷ್ಠಿರನು ರಾಜನಾದನು.

01107025a ಜಾತಮಾತ್ರೇ ಸುತೇ ತಸ್ಮಿನ್ಧೃತರಾಷ್ಟ್ರೋಽಬ್ರವೀದಿದಂ|

01107025c ಸಮಾನೀಯ ಬಹೂನ್ವಿಪ್ರಾನ್ಭೀಷ್ಮಂ ವಿದುರಮೇವ ಚ||

ಆ ಪುತ್ರನು ಜನಿಸಿದಾಕ್ಷಣ ಧೃತರಾಷ್ಟ್ರನು ಬಹಳ ವಿಪ್ರರು ಮತ್ತು ಭೀಷ್ಮ-ವಿದುರರನ್ನು ಕರೆಯಿಸಿ ಹೇಳಿದನು:

01107026a ಯುಧಿಷ್ಠಿರೋ ರಾಜಪುತ್ರೋ ಜ್ಯೇಷ್ಠೋ ನಃ ಕುಲವರ್ಧನಃ|

01107026c ಪ್ರಾಪ್ತಃ ಸ್ವಗುಣತೋ ರಾಜ್ಯಂ ನ ತಸ್ಮಿನ್ವಾಚ್ಯಮಸ್ತಿ ನಃ||

“ಕುಲವರ್ಧನ ಯುಧಿಷ್ಠಿರನು ಜ್ಯೇಷ್ಠ ರಾಜಪುತ್ರನು. ತನ್ನ ಗುಣಗಳಿಂದಾಗಿ ಅವನು ರಾಜ್ಯವನ್ನು ಪಡೆದರೆ ಅದರಲ್ಲಿ ನಾವು ಏನನ್ನೂ ಹೇಳುವಂತಿಲ್ಲ.

01107027a ಅಯಂ ತ್ವನಂತರಸ್ತಸ್ಮಾದಪಿ ರಾಜಾ ಭವಿಷ್ಯತಿ|

01107027c ಏತದ್ಧಿ ಬ್ರೂತ ಮೇ ಸತ್ಯಂ ಯದತ್ರ ಭವಿತಾ ಧ್ರುವಂ||

ಆದರೆ ಅವನ ನಂತರ ಇವನು ರಾಜನಾಗುತ್ತಾನಲ್ಲವೇ? ಈ ವಿಷಯದಲ್ಲಿ ನಿಮ್ಮ ಸತ್ಯ ನಿರ್ಧಾರವೇನೆಂಬುದನ್ನು ಹೇಳಿ.”

01107028a ವಾಕ್ಯಸ್ಯೈತಸ್ಯ ನಿಧನೇ ದಿಕ್ಷು ಸರ್ವಾಸು ಭಾರತ|

01107028c ಕ್ರವ್ಯಾದಾಃ ಪ್ರಾಣದನ್ಘೋರಾಃ ಶಿವಾಶ್ಚಾಶಿವಶಂಸಿನಃ||

ಭಾರತ! ಈ ಮಾತುಗಳನ್ನಾಡಿ ನಿಲ್ಲಿಸುತ್ತಿದ್ದಂತೆಯೇ ಎಲ್ಲ ದಿಕ್ಕುಗಳಲ್ಲಿಯೂ ಹದ್ದು ತೋಳಗಳ ಅಶುಭ ಘೋರ ಆಕ್ರಂದನಗಳು ಕೇಳಿಬಂದವು.

01107029a ಲಕ್ಷಯಿತ್ವಾ ನಿಮಿತ್ತಾನಿ ತಾನಿ ಘೋರಾಣಿ ಸರ್ವಶಃ|

01107029c ತೇಽಬ್ರುವನ್ಬ್ರಾಹ್ಮಣಾ ರಾಜನ್ವಿದುರಶ್ಚ ಮಹಾಮತಿಃ||

ರಾಜನ್! ಎಲ್ಲೆಡೆಯೂ ಕಂಡು ಬರುತ್ತಿರುವ ಆ ಘೋರ ನಿಮಿತ್ತಗಳನ್ನು ವೀಕ್ಷಿಸಿದ ಬ್ರಾಹ್ಮಣರು ಮತ್ತು ಮಹಾಮತಿ ವಿದುರನು ಹೇಳಿದರು:

01107030a ವ್ಯಕ್ತಂ ಕುಲಾಂತಕರಣೋ ಭವಿತೈಷ ಸುತಸ್ತವ|

01107030c ತಸ್ಯ ಶಾಂತಿಃ ಪರಿತ್ಯಾಗೇ ಪುಷ್ಟ್ಯಾ ತ್ವಪನಯೋ ಮಹಾನ್||

“ನಿನ್ನ ಈ ಮಗನು ಕುಲದ ಅಂತ್ಯಕ್ಕೆ ಕಾರಣವಾಗುತ್ತಾನೆ ಎಂದು ವ್ಯಕ್ತವಾಗುತ್ತಿದೆ. ಅವನನ್ನು ಪರಿತ್ಯಜಿಸುವುದರಲ್ಲಿ ಶಾಂತಿ ಮತ್ತು ಪಾಲಿಸುವುದರಲ್ಲಿ ಮಹಾ ಆಪತ್ತು ಕಂಡುಬರುತ್ತಿದೆ.

01107031a ಶತಮೇಕೋನಮಪ್ಯಸ್ತು ಪುತ್ರಾಣಾಂ ತೇ ಮಹೀಪತೇ|

01107031c ಏಕೇನ ಕುರು ವೈ ಕ್ಷೇಮಂ ಲೋಕಸ್ಯ ಚ ಕುಲಸ್ಯ ಚ||

ಮಹೀಪತೇ! ತೊಂಬತ್ತೊಂಭತ್ತು ಪುತ್ರರನ್ನು ನಿನ್ನ ಹತ್ತಿರವೇ ಇಟ್ಟುಕೊಂಡು ಕುರು ಕುಲ ಮತ್ತು ಲೋಕಗಳ ಕ್ಷೇಮಾರ್ಥಕ್ಕಾಗಿ ಇದೊಂದು ಕೆಲಸವನ್ನು ಮಾಡು.

01107032a ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್|

01107032c ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್||

ಕುಲಕ್ಕಾಗಿ ಒಂದು ಪುತ್ರನನ್ನು ತ್ಯಜಿಸು. ಗ್ರಾಮಕ್ಕಾಗಿ ಒಂದು ಕುಲವನ್ನು ತ್ಯಜಿಸು. ಜನಪದಕ್ಕಾಗಿ ಒಂದು ಗ್ರಾಮವನ್ನು ತ್ಯಜಿಸು. ಮತ್ತು ಆತ್ಮದ ಸಲುವಾಗಿ ಪೃಥ್ವಿಯನ್ನೇ ತ್ಯಜಿಸು.”

01107033a ಸ ತಥಾ ವಿದುರೇಣೋಕ್ತಸ್ತೈಶ್ಚ ಸರ್ವೈರ್ದ್ವಿಜೋತ್ತಮೈಃ|

01107033c ನ ಚಕಾರ ತಥಾ ರಾಜಾ ಪುತ್ರಸ್ನೇಹಸಮನ್ವಿತಃ||

ಈ ರೀತಿ ವಿದುರ ಮತ್ತು ಸರ್ವ ದ್ವಿಜೋತ್ತಮರೂ ಹೇಳಿದರು. ಆದರೆ ಪುತ್ರಸ್ನೇಹಸಮನ್ವಿತ ರಾಜನು ಏನನ್ನೂ ಮಾಡಲಿಲ್ಲ.

01107034a ತತಃ ಪುತ್ರಶತಂ ಸರ್ವಂ ಧೃತರಾಷ್ಟ್ರಸ್ಯ ಪಾರ್ಥಿವ|

01107034c ಮಾಸಮಾತ್ರೇಣ ಸಂಜಜ್ಞೇ ಕನ್ಯಾ ಚೈಕಾ ಶತಾಧಿಕಾ||

ಪಾರ್ಥಿವ! ಒಂದು ತಿಂಗಳಿನಲ್ಲಿಯೇ ಧೃತರಾಷ್ಟ್ರನ ಎಲ್ಲ ನೂರು ಪುತ್ರರೂ ಮತ್ತು ನೂರಾ ಒಂದನೆಯ ಕನ್ಯೆಯೂ ಜನಿಸಿದರು.

01107035a ಗಾಂಧಾರ್ಯಾಂ ಕ್ಲಿಶ್ಯಮಾನಾಯಾಮುದರೇಣ ವಿವರ್ಧತಾ|

01107035c ಧೃತರಾಷ್ಟ್ರಂ ಮಹಾಬಾಹುಂ ವೈಶ್ಯಾ ಪರ್ಯಚರತ್ಕಿಲ||

ಗಾಂಧಾರಿಯ ಹೊಟ್ಟೆಯು ಬೆಳೆಯುತ್ತಿದ್ದು ಕಷ್ಟದಲ್ಲಿದ್ದಾಗ ವೈಶ್ಯೆಯೋರ್ವಳು ಮಹಾಬಾಹು ಧೃತರಾಷ್ಟ್ರನ ಸೇವೆಗೈಯುತ್ತಿದ್ದಳು ಎಂದು ಹೇಳುತ್ತಾರೆ.

01107036a ತಸ್ಮಿನ್ಸಂವತ್ಸರೇ ರಾಜನ್ಧೃತರಾಷ್ಟ್ರಾನ್ಮಹಾಯಶಾಃ|

01107036c ಜಜ್ಞೇ ಧೀಮಾಂಸ್ತತಸ್ತಸ್ಯಾಂ ಯುಯುತ್ಸುಃ ಕರಣೋ ನೃಪ||

ರಾಜನ್! ಅದೇ ವರ್ಷದಲ್ಲಿ ಮಹಾಯಶಸ್ವಿ ನೃಪ ಧೃತರಾಷ್ಟ್ರನಿಗೆ ಆ ಕರಣಿಯಲ್ಲಿ ಧೀಮಂತ ಯುಯುತ್ಸುವು ಜನಿಸಿದನು.

01107037a ಏವಂ ಪುತ್ರಶತಂ ಜಜ್ಞೇ ಧೃತರಾಷ್ಟ್ರಸ್ಯ ಧೀಮತಃ|

01107037c ಮಹಾರಥಾನಾಂ ವೀರಾಣಾಂ ಕನ್ಯಾ ಚೈಕಾಥ ದುಃಶಲಾ||

ಈ ಪ್ರಕಾರ ಧೀಮಂತ ಧೃತರಾಷ್ಟ್ರನಿಗೆ ನೂರು ಮಹಾರಥಿ ವೀರ ಪುತ್ರರು ಮತ್ತು ಓರ್ವ ಕನ್ಯೆ ದುಃಶಲಾ ಜನಿಸಿದರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಗಾಂಧಾರೀಪುತ್ರೌತ್ಪತ್ತೌ ಸಪ್ತಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಗಾಂಧಾರೀಪುತ್ರೋತ್ಪತ್ತಿ ಎನ್ನುವ ನೂರಾಏಳನೆಯ ಅಧ್ಯಾಯವು.

Comments are closed.