Adi Parva: Chapter 105

ಆದಿ ಪರ್ವ: ಸಂಭವ ಪರ್ವ

೧೦೫

ಕುಂತಿ-ಪಾಂಡು-ಮಾದ್ರಿ

ಸ್ವಯಂವರದಲ್ಲಿ ಕುಂತಿಯು ಪಾಂಡುವನ್ನು ವರಿಸಿದುದು (೧-೩). ಭೀಷ್ಮನು ಮದ್ರದೇಶದಿಂದ ರಾಜಕುಮಾರಿ ಮಾದ್ರಿಯನ್ನು ಖರೀದಿಸಿ ತಂದು ಪಾಂಡುವಿಗೆ ವಿವಾಹಮಾಡಿಸಿದುದು (೩-೫). ಪಾಂಡುವಿನ ದಿಗ್ವಿಜಯ (೬-೨೭).

01105001 ವೈಶಂಪಾಯನ ಉವಾಚ|

01105001a ರೂಪಸತ್ತ್ವಗುಣೋಪೇತಾ ಧರ್ಮಾರಾಮಾ ಮಹಾವ್ರತಾ|

01105001c ದುಹಿತಾ ಕುಂತಿಭೋಜಸ್ಯ ಕೃತೇ ಪಿತ್ರಾ ಸ್ವಯಂವರೇ||

ವೈಶಂಪಾಯನನು ಹೇಳಿದನು: “ಕುಂತಿಭೋಜನ ಮಗಳು ರೂಪಸತ್ವಗುಣೋಪೇತಳಾಗಿದ್ದಳು. ಧರ್ಮನಿರತಳೂ ಮಹಾ ವ್ರತನಿರತಳೂ ಆಗಿದ್ದಳು. ಅವಳ ತಂದೆಯು ಅವಳ ಸ್ವಯಂವರವನ್ನು ಏರ್ಪಡಿಸಿದನು.

01105002a ಸಿಂಹದಂಷ್ಟ್ರಂ ಗಜಸ್ಕಂಧಂ ಋಷಭಾಕ್ಷಂ ಮಹಾಬಲಂ|

01105002c ಭೂಮಿಪಾಲಸಹಸ್ರಾಣಾಂ ಮಧ್ಯೇ ಪಾಂಡುಮವಿಂದತ||

ಸಹಸ್ರಾರು ಭೂಮಿಪಾಲರ ಮಧ್ಯೆ ಸಿಂಹದಂಷ್ಟ್ರ, ಗಜಸ್ಕಂಧ, ಋಷಭಾಕ್ಷ, ಮಹಾಬಲಶಾಲಿ ಪಾಂಡುವನ್ನು ನೋಡಿ ಮೆಚ್ಚಿದಳು.

01105003a ಸ ತಯಾ ಕುಂತಿಭೋಜಸ್ಯ ದುಹಿತ್ರಾ ಕುರುನಂದನಃ|

01105003c ಯುಯುಜೇಽಮಿತಸೌಭಾಗ್ಯಃ ಪೌಲೋಮ್ಯಾ ಮಘವಾನಿವ||

ಆ ಅಮಿತಸೌಭಾಗ್ಯಶಾಲಿ ಕುರುನಂದನನು ಕುಂತಿಭೋಜನ ಮಗಳನ್ನು ಇಂದ್ರನು ಪೌಲೋಮಿಯನ್ನು ಸೇರಿದಂತೆ ಸೇರಿದನು.

01105004a ಯಾತ್ವಾ ದೇವವ್ರತೇನಾಪಿ ಮದ್ರಾಣಾಂ ಪುಟಭೇದನಂ|

01105004c ವಿಶ್ರುತಾ ತ್ರಿಷು ಲೋಕೇಷು ಮಾದ್ರೀ ಮದ್ರಪತೇಃ ಸುತಾ||

01105005a ಸರ್ವರಾಜಸು ವಿಖ್ಯಾತಾ ರೂಪೇಣಾಸದೃಶೀ ಭುವಿ|

01105005c ಪಾಂಡೋರರ್ಥೇ ಪರಿಕ್ರೀತಾ ಧನೇನ ಮಹತಾ ತದಾ|

01105005e ವಿವಾಹಂ ಕಾರಯಾಮಾಸ ಭೀಷ್ಮಃ ಪಾಂಡೋರ್ಮಹಾತ್ಮನಃ||

ನಂತರ ದೇವವ್ರತ ಭೀಷ್ಮನು ಮದ್ರರ ರಾಜಧಾನಿಗೆ ಹೋಗಿ ಅಲ್ಲಿಂದ ಮೂರೂ ಲೋಕಗಳಲ್ಲಿ ವಿಶ್ರುತ, ರೂಪದಲ್ಲಿ ಭುವಿಯಲ್ಲಿಯೇ ಅಸದೃಶಳೆಂದು ಸರ್ವರಾಜರುಗಳಲ್ಲಿ ವಿಖ್ಯಾತ, ಮದ್ರಪತಿಯ ಮಗಳು ಮಾದ್ರಿಯನ್ನು ಪಾಂಡುವಿಗೋಸ್ಕರ ಬಹಳಷ್ಟು ಧನವನ್ನಿತ್ತು ಖರೀದಿಸಿ ತಂದು ಮಹಾತ್ಮ ಪಾಂಡುವಿನೊಡನೆ ಅವಳ ವಿವಾಹವನ್ನು ನೆರವೇರಿಸಿದನು.

01105006a ಸಿಂಹೋರಸ್ಕಂ ಗಜಸ್ಕಂಧಂ ಋಷಭಾಕ್ಷಂ ಮನಸ್ವಿನಂ|

01105006c ಪಾಂಡುಂ ದೃಷ್ಟ್ವಾ ನರವ್ಯಾಘ್ರಂ ವ್ಯಸ್ಮಯಂತ ನರಾ ಭುವಿ||

ಸಿಂಹೋರಸ್ಕ, ಗಜಸ್ಕಂಧ, ಋಷಭಾಕ್ಷ ಮನಸ್ವಿ ನರವ್ಯಾಘ್ರ ಪಾಂಡುವನ್ನು ನೋಡಿ ಭೂಮಿಯ ನರರೆಲ್ಲರೂ ವಿಸ್ಮಿತರಾಗಿದ್ದರು.

01105007a ಕೃತೋದ್ವಾಹಸ್ತತಃ ಪಾಂಡುರ್ಬಲೋತ್ಸಾಹಸಮನ್ವಿತಃ|

01105007c ಜಿಗೀಷಮಾಣೋ ವಸುಧಾಂ ಯಯೌ ಶತ್ರೂನನೇಕಶಃ||

ವಿವಾಹಿತ ಪಾಂಡುವು ಬಲೋತ್ಸಾಹ ಸಮನ್ವಿತನಾಗಿ ಇಡೀ ಭೂಮಿಯನ್ನೇ ಗೆಲ್ಲುವ ಉದ್ದೇಶದಿಂದ ಅನೇಕ ಶತ್ರುಗಳನ್ನು ಎದುರಿಸಿ ಹೋದನು.

01105008a ಪೂರ್ವಮಾಗಸ್ಕೃತೋ ಗತ್ವಾ ದಶಾರ್ಣಾಃ ಸಮರೇ ಜಿತಾಃ|

01105008c ಪಾಂಡುನಾ ನರಸಿಂಹೇನ ಕೌರವಾಣಾಂ ಯಶೋಭೃತಾ||

ಮೊದಲು ದಶಾರ್ಣರ ಬಳಿ ಹೋದ ಆ ಕೌರವರ ಯಶಸ್ಸನ್ನು ವೃದ್ಧಿಸುವ ನರಸಿಂಹ ಪಾಂಡುವು ಅವರನ್ನು ಸಮರದಲ್ಲಿ ಜಯಿಸಿದನು.

01105009a ತತಃ ಸೇನಾಮುಪಾದಾಯ ಪಾಂಡುರ್ನಾನಾವಿಧಧ್ವಜಾಂ|

01105009c ಪ್ರಭೂತಹಸ್ತ್ಯಶ್ವರಥಾಂ ಪದಾತಿಗಣಸಂಕುಲಾಂ||

ಅನಂತರ ಪಾಂಡುವು ನಾನಾ ವಿಧದ ಧ್ವಜಗಳನ್ನೂ, ಹಸ್ತಿ, ಅಶ್ವರಥಗಳನ್ನೂ, ಕಾಲಾಳುಗಳ ಗಣಸಂಕುಲಗಳನ್ನೂ ಕೂಡಿದ ಸೇನೆಯನ್ನು ತೆಗೆದುಕೊಂಡು ಹೊರಟನು.

01105010a ಆಗಸ್ಕೃತ್ಸರ್ವವೀರಾಣಾಂ ವೈರೀ ಸರ್ವಮಹೀಭೃತಾಂ|

01105010c ಗೋಪ್ತಾ ಮಗಧರಾಷ್ಟ್ರಸ್ಯ ದಾರ್ವೋ ರಾಜಗೃಹೇ ಹತಃ||

ಸರ್ವ ವೀರರ, ಸರ್ವ ರಾಜರ ವೈರಿ ಮಗಧರಾಷ್ಟ್ರದ ದುಷ್ಟ ರಾಜ ದಾರ್ವನನ್ನು ರಾಜಗೃಹದಲ್ಲಿ ಸಂಹರಿಸಿದನು.

01105011a ತತಃ ಕೋಶಂ ಸಮಾದಾಯ ವಾಹನಾನಿ ಬಲಾನಿ ಚ|

01105011c ಪಾಂಡುನಾ ಮಿಥಿಲಾಂ ಗತ್ವಾ ವಿದೇಹಾಃ ಸಮರೇ ಜಿತಾಃ||

ಅಲ್ಲಿಯ ಕೋಶ, ವಾಹನಗಳು, ಮತ್ತು ಸೇನೆಗಳನ್ನು ತೆಗೆದುಕೊಂಡು ಪಾಂಡುವು ಮಿಥಿಲೆಗೆ ಹೋಗಿ ಅಲ್ಲಿ ವಿದೇಹರನ್ನು ಸಮರದಲ್ಲಿ ಜಯಿಸಿದನು.

01105012a ತಥಾ ಕಾಶಿಷು ಸುಹ್ಮೇಷು ಪುಂಡ್ರೇಷು ಭರತರ್ಷಭ|

01105012c ಸ್ವಬಾಹುಬಲವೀರ್ಯೇಣ ಕುರೂಣಾಮಕರೋದ್ಯಶಃ||

ಈ ರೀತಿ ಕುರುಗಳ ಯಶಸ್ಸನ್ನು ತನ್ನ ಬಾಹುಬಲವೀರ್ಯದಿಂದ ಆ ಭರತರ್ಷಭ ಪಾಂಡುವು ಕಾಶಿ, ಸುಹ್ಮ ಮತ್ತು ಪುಂಡ್ರರಲ್ಲಿ ಪಸರಿಸಿದನು.

01105013a ತಂ ಶರೌಘಮಹಾಜ್ವಾಲಮಸ್ತ್ರಾರ್ಚಿಷಮರಿಂದಮಂ|

01105013c ಪಾಂಡುಪಾವಕಮಾಸಾದ್ಯ ವ್ಯದಹ್ಯಂತ ನರಾಧಿಪಾಃ||

ಆ ಪಾವಕ ಸದೃಶ ಅರಿಂದಮ ಪಾಂಡುವಿನ ಮಹಾಜ್ವಾಲೆಯಂತೆ ಉರಿಯುತ್ತಿರುವ ಶರ ಮತ್ತು ಅಸ್ತ್ರಗಳಿಗೆ ಸಿಲುಕಿದ ನರಾಧಿಪರೆಲ್ಲರೂ ಸುಟ್ಟು ಭಸ್ಮವಾದರು.

01105014a ತೇ ಸಸೇನಾಃ ಸಸೇನೇನ ವಿಧ್ವಂಸಿತಬಲಾ ನೃಪಾಃ|

01105014c ಪಾಂಡುನಾ ವಶಗಾಃ ಕೃತ್ವಾ ಕರಕರ್ಮಸು ಯೋಜಿತಾಃ||

ಆ ನೃಪರು ಪಾಂಡು ಮತ್ತು ಅವನ ಸೇನೆಯಿಂದ ವಿಧ್ವಂಸಗೊಂಡು ಅಬಲರಾಗಿ ವಶಪಡಿಸಲ್ಪಟ್ಟು ಕಪ್ಪ ಕಾಣಿಕೆಗಳನ್ನು ಕೊಡುವಂತಾದರು.

01105015a ತೇನ ತೇ ನಿರ್ಜಿತಾಃ ಸರ್ವೇ ಪೃಥಿವ್ಯಾಂ ಸರ್ವಪಾರ್ಥಿವಾಃ|

01105015c ತಮೇಕಂ ಮೇನಿರೇ ಶೂರಂ ದೇವೇಷ್ವಿವ ಪುರಂದರಂ||

ಅವನಿಂದ ಜಯಿಸಲ್ಪಟ್ಟ ಇಡೀ ಪೃಥ್ವಿಯ ಸರ್ವ ಪಾರ್ಥಿವರೂ ದೇವತೆಗಳಲ್ಲಿ ಪುರಂದರನು ಹೇಗೋ ಹಾಗೆ ಅವನೊಬ್ಬನೇ ಶೂರನೆಂದು ಮನ್ನಿಸಿದರು.

01105016a ತಂ ಕೃತಾಂಜಲಯಃ ಸರ್ವೇ ಪ್ರಣತಾ ವಸುಧಾಧಿಪಾಃ|

01105016c ಉಪಾಜಗ್ಮುರ್ಧನಂ ಗೃಹ್ಯ ರತ್ನಾನಿ ವಿವಿಧಾನಿ ಚ||

01105017a ಮಣಿಮುಕ್ತಾಪ್ರವಾಲಂ ಚ ಸುವರ್ಣಂ ರಜತಂ ತಥಾ|

01105017c ಗೋರತ್ನಾನ್ಯಶ್ವರತ್ನಾನಿ ರಥರತ್ನಾನಿ ಕುಂಜರಾನ್||

01105018a ಖರೋಷ್ಟ್ರಮಹಿಷಾಂಶ್ಚೈವ ಯಚ್ಚ ಕಿಂ ಚಿದಜಾವಿಕಂ|

01105018c ತತ್ಸರ್ವಂ ಪ್ರತಿಜಗ್ರಾಹ ರಾಜಾ ನಾಗಪುರಾಧಿಪಃ||

ಸರ್ವ ವಸುಧಾಧಿಪರೂ ಅಂಜಲೀ ಬದ್ಧರಾಗಿ ಅವನನ್ನು ನಮಸ್ಕರಿಸಲು ಧನ, ವಿವಿಧ ರತ್ನಗಳು, ಮಣಿ, ಮುಕ್ತಾ ಪ್ರವಾಲ, ಸುವರ್ಣ, ರಜತ, ಗೋರತ್ನ, ಅನ್ಯ ರತ್ನಗಳು, ರಥ ರತ್ನಗಳು, ಕುಂಜರಗಳು, ಕತ್ತೆಗಳು, ಎಮ್ಮೆಗಳು, ಕುದುರೆಗಳು, ಮತ್ತು ಇನ್ನೂ ಅನೇಕ ಪ್ರಾಣಿಗಳು ಇವೆಲ್ಲವನ್ನೂ ತೆಗೆದುಕೊಂಡು ನಾಗಪುರಾಧಿಪ ರಾಜನಲ್ಲಿಗೆ ಬಂದರು.

01105019a ತದಾದಾಯ ಯಯೌ ಪಾಂಡುಃ ಪುನರ್ಮುದಿತವಾಹನಃ|

01105019c ಹರ್ಷಯಿಷ್ಯನ್ಸ್ವರಾಷ್ಟ್ರಾಣಿ ಪುರಂ ಚ ಗಜಸಾಹ್ವಯಂ||

ಇವೆಲ್ಲವುಗಳನ್ನು ತೆಗೆದುಕೊಂಡು ತನ್ನ ಸೇನೆಯನ್ನೊಡಗೂಡಿ ತನ್ನ ರಾಷ್ಟ್ರಕ್ಕೆ ಹರ್ಷವನ್ನೀಯುತ್ತಾ ತನ್ನ ಪುರ ಗಜಸಾಹ್ವಯವನ್ನು ಪ್ರವೇಶಿಸಿದನು.

01105020a ಶಂತನೋ ರಾಜಸಿಂಹಸ್ಯ ಭರತಸ್ಯ ಚ ಧೀಮತಃ|

01105020c ಪ್ರನಷ್ಟಃ ಕೀರ್ತಿಜಃ ಶಬ್ಧಃ ಪಾಂಡುನಾ ಪುನರುದ್ಧೃತಃ||

ಕಳೆದುಹೋಗಿದ್ದ ರಾಜಸಿಂಹ ಶಂತನು ಮತ್ತು ಧೀಮಂತ ಭರತನ ವಿಜಯ ದುಂದುಭಿಯನ್ನು ಪಾಂಡುವು ಪುನಃ ಕೇಳಿಬರುವಂತೆ ಮಾಡಿದನು.

01105021a ಯೇ ಪುರಾ ಕುರುರಾಷ್ಟ್ರಾಣಿ ಜಹ್ರುಃ ಕುರುಧನಾನಿ ಚ|

01105021c ತೇ ನಾಗಪುರಸಿಂಹೇನ ಪಾಂಡುನಾ ಕರದಾಃ ಕೃತಾಃ||

ಹಿಂದೆ ಕುರು ರಾಷ್ಟ್ರಗಳನ್ನು ಮತ್ತು ಕುರು ಸಂಪತ್ತನ್ನು ತೆಗೆದುಕೊಂಡಿದ್ದವರೆಲ್ಲರನ್ನೂ ನಾಗಪುರಸಿಂಹ ಪಾಂಡುವು ಕರವನ್ನು ಕೊಡುವವರಂತೆ ಮಾಡಿದನು.

01105022a ಇತ್ಯಭಾಷಂತ ರಾಜಾನೋ ರಾಜಾಮಾತ್ಯಾಶ್ಚ ಸಂಗತಾಃ|

01105022c ಪ್ರತೀತಮನಸೋ ಹೃಷ್ಟಾಃ ಪೌರಜಾನಪದೈಃ ಸಹ||

ಅಲ್ಲಿ ಸೇರಿದ್ದ ರಾಜರು ಮತ್ತು ರಾಜ ಅಮಾತ್ಯರು, ಪ್ರತೀತಮನಸ ಹೃಷ್ಟ ನಗರ ಮತ್ತು ಗ್ರಾಮೀಣ ಜನರು ಎಲ್ಲರೂ ಸೇರಿ ಇದೇ ರೀತಿಯ ಮಾತುಗಳನ್ನಾಡುತ್ತಿದ್ದರು.

01105023a ಪ್ರತ್ಯುದ್ಯಯುಸ್ತಂ ಸಂಪ್ರಾಪ್ತಂ ಸರ್ವೇ ಭೀಷ್ಮಪುರೋಗಮಾಃ|

01105023c ತೇ ನದೂರಮಿವಾಧ್ವಾನಂ ಗತ್ವಾ ನಾಗಪುರಾಲಯಾಃ|

01105023e ಆವೃತಂ ದದೃಶುರ್ಲೋಕಂ ಹೃಷ್ಟಾ ಬಹುವಿಧೈರ್ಜನೈಃ||

01105024a ನಾನಾಯಾನಸಮಾನೀತೈ ರತ್ನೈರುಚ್ಚಾವಚೈಸ್ತಥಾ|

01105024c ಹಸ್ತ್ಯಶ್ವರಥರತ್ನೈಶ್ಚ ಗೋಭಿರುಷ್ಟ್ರೈರಥಾವಿಕೈಃ|

01105024e ನಾಂತಂ ದದೃಶುರಾಸಾದ್ಯ ಭೀಷ್ಮೇಣ ಸಹ ಕೌರವಾಃ||

ಅವನು ಹಿಂದಿರುಗಿದಾಗ ಭೀಷ್ಮನ ಮುಂದಾಳತ್ವದಲ್ಲಿ ಎಲ್ಲರೂ ಅವನನ್ನು ಭೆಟ್ಟಿಯಾಗಲು ಹೊರ ಬಂದರು. ನಾಗಪುರದ್ವಾರಗಳು ಇನ್ನೂ ಸ್ವಲ್ಪದೂರದಲ್ಲಿದೆ ಎನ್ನುತ್ತಿರುವಂತೆಯೇ ಅಲ್ಲಿ ಸೇರಿದ್ದ ಜನರು ಹರ್ಷಿತರಾಗಿ ಮಹಾ ಸಾಗರದಂತೆ ರತ್ನಗಳನ್ನು ನಾನಾ ವಾಹನಗಳಲ್ಲಿರಿಸಿಕೊಂಡು ಅತ್ಯುತ್ತಮ ಆನೆ, ಕುದುರೆಗಳು, ರಥರತ್ನಗಳು, ಹಸುಗಳು, ಒಂಟೆಗಳು, ಮತ್ತು ಕುರಿಗಳನ್ನೂ ಕರೆದುಕೊಂಡು ಬರುತ್ತಿರುವ ನಾನಾ ಪ್ರದೇಶಗಳ ಜನರನ್ನು ನೋಡಿ ಹರ್ಷಿತರಾದರು. ಭೀಷ್ಮನೊಂದಿಗೆ ಬಂದಿದ್ದ ಕೌರವರು ಅಂತ್ಯವೇ ಕಾಣದಂಥಹ ಈ ಅಸಾಧ್ಯ ಪಡೆಯನ್ನು ನೋಡಿದರು.

01105025a ಸೋಽಭಿವಾದ್ಯ ಪಿತುಃ ಪಾದೌ ಕೌಸಲ್ಯಾನಂದವರ್ಧನಃ|

01105025c ಯಥಾರ್ಹಂ ಮಾನಯಾಮಾಸ ಪೌರಜಾನಪದಾನಪಿ||

ಅವನು ತಂದೆಯ ಪಾದಗಳಿಗೆ ನಮಸ್ಕರಿಸಿ ಕೌಸಲ್ಯೆಯ ಸಂತೋಷವನ್ನು ಹೆಚ್ಚಿಸಿದನು. ಪೌರಜನರನ್ನೂ ಕೂಡ ಯಥಾರ್ಹವಾಗಿ ಮನ್ನಿಸಿದನು.

01105026a ಪ್ರಮೃದ್ಯ ಪರರಾಷ್ಟ್ರಾಣಿ ಕೃತಾರ್ಥಂ ಪುನರಾಗತಂ|

01105026c ಪುತ್ರಮಾಸಾದ್ಯ ಭೀಷ್ಮಸ್ತು ಹರ್ಷಾದಶ್ರೂಣ್ಯವರ್ತಯತ್||

ಪರರಾಷ್ಟ್ರಗಳನ್ನು ಸೋಲಿಸಿ ಕೃತಾರ್ಥನಾಗಿ ಹಿಂದಿರುಗಿದ ಪುತ್ರನನ್ನು ಪಡೆದ ಭೀಷ್ಮನಾದರೂ ಹರ್ಷದಿಂದ ಕಣ್ಣೀರು ಸುರಿಸಿದನು.

01105027a ಸ ತೂರ್ಯಶತಸಂಘಾನಾಂ ಭೇರೀಣಾಂ ಚ ಮಹಾಸ್ವನೈಃ|

01105027c ಹರ್ಷಯನ್ಸರ್ವಶಃ ಪೌರಾನ್ವಿವೇಶ ಗಜಸಾಹ್ವಯಂ||

ನೂರಾರು ತೂರ್ಯ ಭೇರಿಗಳ ಮಹಾನಾದದೊಂದಿಗೆ ಸರ್ವ ಪೌರರನ್ನೂ ಸಂತೋಷಗೊಳಿಸುತ್ತಾ ಅವನು ಗಜಸಾಹ್ವಯವನ್ನು ಪ್ರವೇಶಿಸಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಪಾಂಡುದಿಗ್ವಿಜಯೇ ಪಂಚಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಪಾಂಡುದಿಗ್ವಿಜಯ ಎನ್ನುವ ನೂರಾಐದನೆಯ ಅಧ್ಯಾಯವು.

Comments are closed.