Adi Parva: Chapter 104

ಆದಿ ಪರ್ವ: ಸಂಭವ ಪರ್ವ

೧೦೪

ಕುಂತಿ-ಕರ್ಣ

ಯಾದವರ ಅರಸ ಶೂರನು ತನ್ನ ಮಗಳು, ವಸುದೇವನ ತಂಗಿ, ಪೃಥಾಳನ್ನು ತಂಗಿಯ ಮಗ ಕುಂತೀಭೋಜನಿಗೆ ಕೊಟ್ಟಿದ್ದುದು (೧-೩). ಕುಂತೀಭೋಜನ ಮನೆಯಲ್ಲಿ ದುರ್ವಾಸನ ಆತಿಥ್ಯವನ್ನು ಮಾಡಿ, ಅವನಿಂದ ಮಂತ್ರಗಳನ್ನು ಕುಂತಿಯು ಪಡೆದುದು (೪-೭). ಕುತೂಹಲದಿಂದ ಸೂರ್ಯನನ್ನು ಆಹ್ವಾನಿಸಲು ಅವನಿಂದ ಮಗ ಕರ್ಣನನ್ನು ಪಡೆದುದು (೮-೧೨). ನೀರಿನಲ್ಲಿ ಬಿಡಲ್ಪಟ್ಟ ಕರ್ಣನು ಸೂತನಂದನನೆಂದೂ, ವಸುಷೇಣನೆಂದೂ, ವೈಕರ್ತನನೆಂದೂ ಕರೆಯಿಸಿಕೊಂಡಿದುದು (೧೩-೨೧).

01104001 ವೈಶಂಪಾಯನ ಉವಾಚ|

01104001a ಶೂರೋ ನಾಮ ಯದುಶ್ರೇಷ್ಠೋ ವಸುದೇವಪಿತಾಭವತ್|

01104001c ತಸ್ಯ ಕನ್ಯಾ ಪೃಥಾ ನಾಮ ರೂಪೇಣಾಸದೃಶೀ ಭುವಿ||

ವೈಶಂಪಾಯನನು ಹೇಳಿದನು: “ವಸುದೇವನ ತಂದೆ ಶೂರ ಎಂಬ ಹೆಸರಿನ ಯದುಶ್ರೇಷ್ಠನಿದ್ದನು. ಅವನಿಗೆ ಭುವಿಯಲ್ಲಿಯೆ ರೂಪದಲ್ಲಿ ಅಸದೃಶ ಪೃಥಾ ಎಂಬ ಹೆಸರಿನ ಮಗಳಿದ್ದಳು.

01104002a ಪೈತೃಷ್ವಸೇಯಾಯ ಸ ತಾಮನಪತ್ಯಾಯ ವೀರ್ಯವಾನ್|

01104002c ಅಗ್ರ್ಯಮಗ್ರೇ ಪ್ರತಿಜ್ಞಾಯ ಸ್ವಸ್ಯಾಪತ್ಯಸ್ಯ ವೀರ್ಯವಾನ್||

ಆ ವೀರ್ಯವಂತನು ಮಕ್ಕಳನ್ನು ಹೊಂದಿರದಿದ್ದ ತಂದೆಯ ತಂಗಿಯ ಮಗನಿಗೆ ತನ್ನ ಮೊದಲ ಮಗುವನ್ನು ಕೊಡುತ್ತೇನೆಂದು ಪ್ರತಿಜ್ಞೆ ಮಾಡಿಕೊಂಡಿದ್ದನು.

01104003a ಅಗ್ರಜಾತೇತಿ ತಾಂ ಕನ್ಯಾಮಗ್ರ್ಯಾನುಗ್ರಹಕಾಂಕ್ಷಿಣೇ|

01104003c ಪ್ರದದೌ ಕುಂತಿಭೋಜಾಯ ಸಖಾ ಸಖ್ಯೇ ಮಹಾತ್ಮನೇ||

ಆ ಹಿರಿಯ ಮಗಳನ್ನು ಪಡೆಯಲು ಬಯಸಿದ ಸಖ ಮಹಾತ್ಮ ಕುಂತಿಭೋಜನಿಗೆ ಕೊಟ್ಟನು.

01104004a ಸಾ ನಿಯುಕ್ತಾ ಪಿತುರ್ಗೇಹೇ ದೇವತಾತಿಥಿಪೂಜನೇ|

01104004c ಉಗ್ರಂ ಪರ್ಯಚರದ್ಘೋರಂ ಬ್ರಾಹ್ಮಣಂ ಸಂಶಿತವ್ರತಂ||

01104005a ನಿಗೂಡನಿಶ್ಚಯಂ ಧರ್ಮೇ ಯಂ ತಂ ದುರ್ವಾಸಸಂ ವಿದುಃ|

01104005c ತಮುಗ್ರಂ ಸಂಶಿತಾತ್ಮಾನಂ ಸರ್ವಯತ್ನೈರತೋಷಯತ್||

01104006a ತಸ್ಯೈ ಸ ಪ್ರದದೌ ಮಂತ್ರಮಾಪದ್ಧರ್ಮಾನ್ವವೇಕ್ಷಯಾ|

01104006c ಅಭಿಚಾರಾಭಿಸಂಯುಕ್ತಮಬ್ರವೀಚ್ಚೈವ ತಾಂ ಮುನಿಃ||

ಹೊಸ ತಂದೆಯ ಮನೆಯಲ್ಲಿ ಅವಳು ದೇವತೆ ಮತ್ತು ಅತಿಥಿಪೂಜನೆಯಲ್ಲಿ ನಿರತಳಾಗಿದ್ದಳು. ಹೀಗಿರುವಾಗ ಒಮ್ಮೆ ಅವಳು ಪರ್ಯಟಿಸುತ್ತಾ ಬಂದ ಸಂಶಿತವ್ರತ, ನಿಗೂಢ ಧರ್ಮನಿಶ್ಚಯಿ, ಉಗ್ರ, ಘೋರ ಬ್ರಾಹ್ಮಣ ದುರ್ವಾಸನನ್ನು ಸತ್ಕರಿಸುವ ಅವಕಾಶವನ್ನು ಪಡೆದುಕೊಂಡಳು. ಆ ಉಗ್ರ ಸಂಶಿತಾತ್ಮನನ್ನು ಸರ್ವಯತ್ನಗಳಿಂದ ತೃಪ್ತಿಗೊಳಿಸಿದಳು. ಮುಂದೆ ಬರಬಹುದಾದ ಆಪತ್ತನ್ನು ಕಂಡ ಆ ಮುನಿಯು ಅವಳಿಗೆ ಅಭಿಚಾರ ಸಂಯುಕ್ತ ಮಂತ್ರಗಳನ್ನಿತ್ತು ಹೇಳಿದನು:

01104007a ಯಂ ಯಂ ದೇವಂ ತ್ವಮೇತೇನ ಮಂತ್ರೇಣಾವಾಹಯಿಷ್ಯಸಿ|

01104007c ತಸ್ಯ ತಸ್ಯ ಪ್ರಸಾದೇನ ಪುತ್ರಸ್ತವ ಭವಿಷ್ಯತಿ||

“ಈ ಮಂತ್ರಗಳಿಂದ ನೀನು ಯಾವ ಯಾವ ದೇವತೆಯನ್ನು ಆಹ್ವಾನಿಸುತ್ತೀಯೋ ಆಯಾ ದೇವತೆಗಳ ಪ್ರಸಾದದಿಂದ ನಿನಗೆ ಪುತ್ರರಾಗುತ್ತಾರೆ.”

01104008a ತಥೋಕ್ತಾ ಸಾ ತು ವಿಪ್ರೇಣ ತೇನ ಕೌತೂಹಲಾತ್ತದಾ|

01104008c ಕನ್ಯಾ ಸತೀ ದೇವಮರ್ಕಮಾಜುಹಾವ ಯಶಸ್ವಿನೀ||

ವಿಪ್ರನ ಈ ಮಾತುಗಳನ್ನು ಕೇಳಿ ಕುತೂಹಲಗೊಂಡ ಆ ಯಶಸ್ವಿನೀ ಸತಿ ಕನ್ಯೆಯು ಅರ್ಕದೇವನನ್ನು ಅಹ್ವಾನಿಸಿದಳು.

01104009a ಸಾ ದದರ್ಶ ತಮಾಯಾಂತಂ ಭಾಸ್ಕರಂ ಲೋಕಭಾವನಂ|

01104009c ವಿಸ್ಮಿತಾ ಚಾನವದ್ಯಾಂಗೀ ದೃಷ್ಟ್ವಾ ತನ್ಮಹದದ್ಭುತಂ||

ಆಗ ಅಲ್ಲಿ ಅವಳು ಲೋಕಭಾವನ ಭಾಸ್ಕರನು ಬರುತ್ತಿರುವುದನ್ನು ನೋಡಿದಳು. ಆ ಮಹದದ್ಭುತವನ್ನು ನೋಡಿದ ಆ ಅನವದ್ಯಾಂಗಿಯು ವಿಸ್ಮಿತಳಾದಳು.

01104010a ಪ್ರಕಾಶಕರ್ಮಾ ತಪನಸ್ತಸ್ಯಾಂ ಗರ್ಭಂ ದಧೌ ತತಃ|

01104010c ಅಜೀಜನತ್ತತೋ ವೀರಂ ಸರ್ವಶಸ್ತ್ರಭೃತಾಂ ವರಂ|

01104010e ಆಮುಕ್ತಕವಚಃ ಶ್ರೀಮಾನ್ದೇವಗರ್ಭಃ ಶ್ರಿಯಾವೃತಃ||

ಆ ಪ್ರಕಾಶಕರ್ಮಿ ತಪನನು ಅವಳಿಗೆ ಗರ್ಭವನ್ನಿತ್ತನು. ಅವನಿಂದ ಸರ್ವಶಸ್ತ್ರಿಗಳಲ್ಲಿ ಶ್ರೇಷ್ಠ, ಕವಚಧಾರಿ, ಶ್ರಿಯಾವೃತ, ಶ್ರೀಮಾನ್ ದೇವಗರ್ಭ ವೀರನನ್ನು ಪಡೆದಳು.

01104011a ಸಹಜಂ ಕವಚಂ ಬಿಭ್ರತ್ಕುಂಡಲೋದ್ದ್ಯೋತಿತಾನನಃ|

01104011c ಅಜಾಯತ ಸುತಃ ಕರ್ಣಃ ಸರ್ವಲೋಕೇಷು ವಿಶ್ರುತಃ||

ಸರ್ವ ಲೋಕಗಳಲ್ಲಿ ಕರ್ಣನೆಂದು ವಿಶ್ರುತ ಈ ಮಗನು ಸಹಜ ಕವಚ ಮತ್ತು ಮುಖವನ್ನು ಬೆಳಗಿಸುತ್ತಿದ್ದ ಹೊಳೆಯುವ ಕುಂಡಲಗಳನ್ನು ಧರಿಸಿಯೇ ಹುಟ್ಟಿದನು.

01104012a ಪ್ರಾದಾಚ್ಚ ತಸ್ಯಾಃ ಕನ್ಯಾತ್ವಂ ಪುನಃ ಸ ಪರಮದ್ಯುತಿಃ|

01104012c ದತ್ತ್ವಾ ಚ ದದತಾಂ ಶ್ರೇಷ್ಠೋ ದಿವಮಾಚಕ್ರಮೇ ತತಃ||

ಆ ಪರಮದ್ಯುತಿಯು ಕೊಡುವುದರಲ್ಲೆಲ್ಲಾ ಶ್ರೇಷ್ಠ ಕೊಡುಗೆಯನ್ನಿತ್ತು ಅವಳ ಕನ್ಯತ್ವವನ್ನು ಪುನಃ ಹಿಂದಿರುಗಿಸಿ ಆಕಾಶವನ್ನು ಸೇರಿದನು.

01104013a ಗೂಹಮಾನಾಪಚಾರಂ ತಂ ಬಂಧುಪಕ್ಷಭಯಾತ್ತದಾ|

01104013c ಉತ್ಸಸರ್ಜ ಜಲೇ ಕುಂತೀ ತಂ ಕುಮಾರಂ ಸಲಕ್ಷಣಂ||

ಬಂಧುಪಕ್ಷಗಳ ಭಯದಿಂದ ಮತ್ತು ಅಪಚಾರವನ್ನು ಮುಚ್ಚಿಡುವುದಕ್ಕಾಗಿ ಕುಂತಿಯು ಆ ಸಲಕ್ಷಣ ಕುಮಾರನನ್ನು ನೀರಿನಲ್ಲಿ ಬಿಟ್ಟಳು.

01104014a ತಮುತ್ಸೃಷ್ಟಂ ತದಾ ಗರ್ಭಂ ರಾಧಾಭರ್ತಾ ಮಹಾಯಶಾಃ|

01104014c ಪುತ್ರತ್ವೇ ಕಲ್ಪಯಾಮಾಸ ಸಭಾರ್ಯಃ ಸೂತನಂದನಃ||

ಬಿಸುಟಲ್ಪಟ್ಟ ಆ ಮಗುವನ್ನು ಮಹಾಯಶಸ್ವಿ ರಾಧೆಯ ಪತಿಯು ತನ್ನ ಪತ್ನಿಯೊಂದಿಗೆ ತಮ್ಮದೇ ಮಗನೆಂದು ಸ್ವೀಕರಿಸಿದನು. ಹೀಗೆ ಅವನು ಸೂತನಂದನನೆಂದು ತಿಳಿಯಲ್ಪಟ್ಟನು.

01104015a ನಾಮಧೇಯಂ ಚ ಚಕ್ರಾತೇ ತಸ್ಯ ಬಾಲಸ್ಯ ತಾವುಭೌ|

01104015c ವಸುನಾ ಸಹ ಜಾತೋಽಯಂ ವಸುಷೇಣೋ ಭವತ್ವಿತಿ||

ವಸುವಿನ ಸಹಿತ ಹುಟ್ಟಿದ ಇವನು ವಸುಷೇಣನೆಂದಾಗಲಿ ಎಂದು ಅವರು ಆ ಬಾಲಕನಿಗೆ ಹೆಸರನ್ನಿಟ್ಟರು.

01104016a ಸ ವರ್ಧಮಾನೋ ಬಲವಾನ್ಸರ್ವಾಸ್ತ್ರೇಷೂದ್ಯತೋಽಭವತ್|

01104016c ಆ ಪೃಷ್ಠತಾಪಾದಾದಿತ್ಯಮುಪತಸ್ಥೇ ಸ ವೀರ್ಯವಾನ್||

01104017a ಯಸ್ಮಿನ್ಕಾಲೇ ಜಪನ್ನಾಸ್ತೇ ಸ ವೀರಃ ಸತ್ಯಸಂಗರಃ|

01104017c ನಾದೇಯಂ ಬ್ರಾಹ್ಮಣೇಷ್ವಾಸೀತ್ತಸ್ಮಿನ್ಕಾಲೇ ಮಹಾತ್ಮನಃ||

ದೊಡ್ಡವನಾಗುತ್ತಿದ್ದಂತೆ ಅವನು ಸರ್ವಶಸ್ತ್ರಗಳಿಂದಲೂ ಹೋರಾಡುವ ಬಲಶಾಲಿಯಾದನು. ಆ ವೀರ್ಯವಂತನು ತನ್ನ ಬೆನ್ನು ಸುಡುವವರೆಗೂ ಆದಿತ್ಯನನ್ನು ಉಪಾಸಿಸುತ್ತಿದ್ದನು. ಜಪವನ್ನಾಚರಿಸುತ್ತಿದ್ದ ಸಮಯದಲ್ಲಿ ಆ ಸತ್ಯಸಂಗರ ಮಹಾತ್ಮ ವೀರನು ಬ್ರಾಹ್ಮಣರಿಗೆ ಏನನ್ನೂ ನಿರಾಕರಿಸುತ್ತಿರಲಿಲ್ಲ.

01104018a ತಮಿಂದ್ರೋ ಬ್ರಾಹ್ಮಣೋ ಭೂತ್ವಾ ಭಿಕ್ಷಾರ್ಥಂ ಭೂತಭಾವನಃ|

01104018c ಕುಂಡಲೇ ಪ್ರಾರ್ಥಯಾಮಾಸ ಕವಚಂ ಚ ಮಹಾದ್ಯುತಿಃ||

ಒಮ್ಮೆ ಭೂತಭಾವನ ಇಂದ್ರನು ಬ್ರಾಹ್ಮಣನಾಗಿ ಬಂದು ಭಿಕ್ಷೆಯಾಗಿ ಆ ಮಹಾದ್ಯುತಿಯ ಕವಚ ಕುಂಡಲಗಳನ್ನು ಪ್ರಾರ್ಥಿಸಿದನು.

01104019a ಉತ್ಕೃತ್ಯ ವಿಮನಾಃ ಸ್ವಾಂಗಾತ್ಕವಚಂ ರುಧಿರಸ್ರವಂ|

01104019c ಕರ್ಣಸ್ತು ಕುಂಡಲೇ ಚಿತ್ತ್ವಾ ಪ್ರಾಯಚ್ಛತ್ಸ ಕೃತಾಂಜಲಿಃ||

ಏನನ್ನೂ ಯೋಚಿಸದೇ ಖಡ್ಗದಿಂದ ರಕ್ತಸುರಿಯುತ್ತಿರುವ ಕವಚವನ್ನು ಕಡಿದು, ಕರ್ಣಗಳಿಂದ ಕುಂಡಲಗಳನ್ನು ಕಿತ್ತು ಅವನಿಗೆ ಅಂಜಲೀ ಬದ್ಧನಾಗಿ ಕೊಟ್ಟನು.

01104020a ಶಕ್ತಿಂ ತಸ್ಮೈ ದದೌ ಶಕ್ರಃ ವಿಸ್ಮಿತೋ ವಾಕ್ಯಮಬ್ರವೀತ್|

01104020c ದೇವಾಸುರಮನುಷ್ಯಾಣಾಂ ಗಂಧರ್ವೋರಗರಕ್ಷಸಾಂ|

01104020e ಯಸ್ಮೈ ಕ್ಷೇಪ್ಸ್ಯಸಿ ರುಷ್ಟಃ ಸನ್ಸೋಽನಯಾ ನ ಭವಿಷ್ಯತಿ||

ವಿಸ್ಮಿತ ಶಕ್ರನು ಅವನಿಗೆ ಶಕ್ತಿಯನ್ನಿತ್ತು ಹೇಳಿದನು: “ದೇವ, ಅಸುರ, ಮನುಷ್ಯ ಅಥವಾ ಗಂಧರ್ವ-ಉರಗ-ರಾಕ್ಷಸರು ಯಾರ ಮೇಲೆ ನೀನು ಇದನ್ನು ಎಸೆಯುತ್ತೀಯೋ ಅವರು ಗಾಯಗೊಂಡು ಸಾಯುತ್ತಾರೆ.”

01104021a ಪುರಾ ನಾಮ ತು ತಸ್ಯಾಸೀದ್ವಸುಷೇಣ ಇತಿ ಶ್ರುತಂ|

01104021c ತತೋ ವೈಕರ್ತನಃ ಕರ್ಣಃ ಕರ್ಮಣಾ ತೇನ ಸೋಽಭವತ್||

ಅವನ ಮೊದಲನೆಯ ಹೆಸರು ವಸುಷೇಣ ಎಂದು ಇತ್ತು. ಆದರೆ ಅವನ ಕರ್ಮದಿಂದ ಅವನು ವೈಕರ್ತನ ಕರ್ಣನಾದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಕರ್ಣಸಂಭವೇ ಚತುರಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಕರ್ಣಸಂಭವ ಎನ್ನುವ ನೂರಾನಾಲ್ಕನೆಯ ಅಧ್ಯಾಯವು.

Comments are closed.