Adi Parva: Chapter 100

ಆದಿ ಪರ್ವ: ಸಂಭವ ಪರ್ವ

೧೦೦

ಅಂಬಿಕೆಯಲ್ಲಿ ವ್ಯಾಸನಿಂದ ಕುರುಡ ಧೃತರಾಷ್ಟ್ರನ ಜನನ (೧-೧೩). ಅಂಬಾಲಿಕೆಯಲ್ಲಿ ಪಾಂಡುವಿನ ಜನನ (೧೪-೨೧). ಅಂಬಿಕೆಯ ದಾಸಿಯಲ್ಲಿ ವ್ಯಾಸಪುತ್ರ ವಿದುರನ ಜನನ (೨೨-೩೦).

01100001 ವೈಶಂಪಾಯನ ಉವಾಚ|

01100001a ತತಃ ಸತ್ಯವತೀ ಕಾಲೇ ವಧೂಂ ಸ್ನಾತಾಂ ಋತೌ ತದಾ|

01100001c ಸಂವೇಶಯಂತೀ ಶಯನೇ ಶನಕೈರ್ವಾಕ್ಯಮಬ್ರವೀತ್||

ವೈಶಂಪಾಯನನು ಹೇಳಿದನು: “ಸೊಸೆಯು ಋತುಮತಿಯಾಗಿ ಸ್ನಾನಮುಗಿಸಿದ ನಂತರ ಸತ್ಯವತಿಯು ಅವಳನ್ನು ಹಾಸಿಗೆಯಲ್ಲಿ ಮಲಗಿಸಿ ಮೆಲ್ಲನೆ ಈ ಮಾತುಗಳನ್ನಾಡಿದಳು:

01100002a ಕೌಸಲ್ಯೇ ದೇವರಸ್ತೇಽಸ್ತಿ ಸೋಽದ್ಯ ತ್ವಾನುಪ್ರವೇಕ್ಷ್ಯತಿ|

01100002c ಅಪ್ರಮತ್ತಾ ಪ್ರತೀಕ್ಷೈನಂ ನಿಶೀಥೇ ಆಗಮಿಷ್ಯತಿ||

“ಕೌಸಲ್ಯೆ! ನಿನಗೊಬ್ಬ ಬಾವನಿದ್ದಾನೆ. ಅವನು ಈ ರಾತ್ರಿ ನಿನ್ನಲ್ಲಿಗೆ ಬರುತ್ತಾನೆ. ಎಚ್ಚರವಿದ್ದು ಅವನಿಗೆ ಕಾಯಿ. ಅವನು ದಟ್ಟ ರಾತ್ರಿಯಲ್ಲಿ ಬರುತ್ತಾನೆ.”

01100003a ಶ್ವಶ್ರ್ವಾಸ್ತದ್ವಚನಂ ಶ್ರುತ್ವಾ ಶಯಾನಾ ಶಯನೇ ಶುಭೇ|

01100003c ಸಾಚಿಂತಯತ್ತದಾ ಭೀಷ್ಮಮನ್ಯಾಂಶ್ಚ ಕುರುಪುಂಗವಾನ್||

ಅತ್ತೆಯು ಹೇಳಿದ ಮಾತುಗಳನ್ನು ಕೇಳಿದ ಶುಭೆಯು ಹಾಸಿಗೆಯಲ್ಲಿ ಮಲಗಿಕೊಂಡು ಅವನು ಕುರುಪುಂಗವ ಭೀಷ್ಮನೇ ಇರಬೇಕೆಂದು ಯೋಚಿಸತೊಡಗಿದಳು.

01100004a ತತೋಽಂಬಿಕಾಯಾಂ ಪ್ರಥಮಂ ನಿಯುಕ್ತಃ ಸತ್ಯವಾಗೃಷಿಃ|

01100004c ದೀಪ್ಯಮಾನೇಷು ದೀಪೇಷು ಶಯನಂ ಪ್ರವಿವೇಶ ಹ||

ಮೊದಲು ಅಂಬಿಕೆಯ ಬಳಿ ಹೋಗಲು ಸತ್ಯವಾನ್ ಋಷಿಯು ದೀಪಗಳು ಇನ್ನೂ ಉರಿಯುತ್ತಿರುವಾಗಲೇ ಶಯನವನ್ನು ಪ್ರವೇಶಿಸಿದನು.

01100005a ತಸ್ಯ ಕೃಷ್ಣಸ್ಯ ಕಪಿಲಾ ಜಟಾ ದೀಪ್ತೇ ಚ ಲೋಚನೇ|

01100005c ಬಭ್ರೂಣಿ ಚೈವ ಶ್ಮಶ್ರೂಣಿ ದೃಷ್ಟ್ವಾ ದೇವೀ ನ್ಯಮೀಲಯತ್||

ಆ ಕೃಷ್ಣನ ಕಪಿಲ ಜಟೆ, ಪ್ರಜ್ವಲಿಸುತ್ತಿರುವ ಕಣ್ಣುಗಳು ಮತ್ತು ಕೆಂಪು ಗಡ್ಡವನ್ನು ನೋಡಿದ ಆ ದೇವಿಯು ಕಣ್ಣುಗಳನ್ನು ಮುಚ್ಚಿಬಿಟ್ಟಳು.

01100006a ಸಂಬಭೂವ ತಯಾ ರಾತ್ರೌ ಮಾತುಃ ಪ್ರಿಯಚಿಕೀರ್ಷಯಾ|

01100006c ಭಯಾತ್ಕಾಶಿಸುತಾ ತಂ ತು ನಾಶಕ್ನೋದಭಿವೀಕ್ಷಿತುಂ||

ತಾಯಿಯು ಬಯಸಿದ್ದುದನ್ನು ನೆರವೇರಿಸಲು ಬಂದಿದ್ದ ಅವನು ಅವಳೊಂದಿಗೆ ಇಡೀ ರಾತ್ರಿಯನ್ನು ಕಳೆದರೂ ಹೆದರಿಕೆಯಿಂದ ಅವಳು ಅವನ ಕಡೆ ನೋಡಲೇ ಇಲ್ಲ.

01100007a ತತೋ ನಿಷ್ಕ್ರಾಂತಮಾಸಾದ್ಯ ಮಾತಾ ಪುತ್ರಮಥಾಬ್ರವೀತ್|

01100007c ಅಪ್ಯಸ್ಯಾಂ ಗುಣವಾನ್ಪುತ್ರ ರಾಜಪುತ್ರೋ ಭವಿಷ್ಯತಿ||

ಅವನು ಹೊರಬಂದಾಗ ಭೆಟ್ಟಿಯಾದ ತಾಯಿಯು ಮಗನಲ್ಲಿ ಕೇಳಿದಳು: “ಮಗನೇ! ಅವಳಲ್ಲಿ ಗುಣವಂತ ರಾಜಪುತ್ರನಾಗುತ್ತಾನೆಯೇ?”

01100008a ನಿಶಮ್ಯ ತದ್ವಚೋ ಮಾತುರ್ವ್ಯಾಸಃ ಪರಮಬುದ್ಧಿಮಾನ್|

01100008c ಪ್ರೋವಾಚಾತೀಂದ್ರಿಯಜ್ಞಾನೋ ವಿಧಿನಾ ಸಂಪ್ರಚೋದಿತಃ||

ತಾಯಿಯ ಈ ಪ್ರಶ್ನೆಯನ್ನು ಕೇಳಿ ಪರಮಬುದ್ಧಿಶಾಲಿ ಅತೀಂದ್ರಿಯ ಜ್ಞಾನಿ ವ್ಯಾಸನು ಸ್ವಲ್ಪ ಯೋಚಿಸಿ ವಿಧಿ ಪ್ರಚೋದಿತನಾಗಿ ಹೇಳಿದನು:

01100009a ನಾಗಾಯುತಸಮಪ್ರಾಣೋ ವಿದ್ವಾನ್ರಾಜರ್ಷಿಸತ್ತಮಃ|

01100009c ಮಹಾಭಾಗೋ ಮಹಾವೀರ್ಯೋ ಮಹಾಬುದ್ಧಿರ್ಭವಿಷ್ಯತಿ||

01100010a ತಸ್ಯ ಚಾಪಿ ಶತಂ ಪುತ್ರಾ ಭವಿಷ್ಯಂತಿ ಮಹಾಬಲಾಃ|

01100010c ಕಿಂ ತು ಮಾತುಃ ಸ ವೈಗುಣ್ಯಾದಂಧ ಏವ ಭವಿಷ್ಯತಿ||

“ಸಾವಿರ ಆನೆಗಳಷ್ಟು ಶಕ್ತಿಯುತ, ವಿದ್ವಾಂಸ, ರಾಜರ್ಷಿಸತ್ತಮ, ಮಹಾಭಾಗ, ಮಹಾವೀರ್ಯವಂತ, ಮಹಾಬುದ್ಧಿಶಾಲಿಯು ಜನಿಸುತ್ತಾನೆ. ಅವನಿಗೆ ನೂರು ಮಹಾಬಲಶಾಲಿ ಪುತ್ರರು ಜನಿಸುತ್ತಾರೆ. ಆದರೆ ತನ್ನ ತಾಯಿಯ ಗುಣದೋಷದಿಂದ ಕುರುಡನಾಗಿ ಜನಿಸುತ್ತಾನೆ.”

01100011a ತಸ್ಯ ತದ್ವಚನಂ ಶ್ರುತ್ವಾ ಮಾತಾ ಪುತ್ರಮಥಾಬ್ರವೀತ್|

01100011c ನಾಂಧಃ ಕುರೂಣಾಂ ನೃಪತಿರನುರೂಪಸ್ತಪೋಧನ||

ಅವನ ಆ ಮಾತುಗಳನ್ನು ಕೇಳಿದ ಮಾತೆಯು ಪುತ್ರನಿಗೆ ಹೇಳಿದಳು: “ತಪೋಧನ! ಅಂಧ ನೃಪತಿಯು ಕುರುಗಳಿಗೆ ಅನುರೂಪನಲ್ಲ!

01100012a ಜ್ಞಾತಿವಂಶಸ್ಯ ಗೋಪ್ತಾರಂ ಪಿತೄಣಾಂ ವಂಶವರ್ಧನಂ|

01100012c ದ್ವಿತೀಯಂ ಕುರುವಂಶಸ್ಯ ರಾಜಾನಂ ದಾತುಮರ್ಹಸಿ||

ನಿನ್ನ ಜಾತಿವಂಶ ಗೋಪ್ತಾರನಾಗುವ, ಪಿತೃವಂಶವರ್ಧನ ಕುರುವಂಶದ ಎರಡನೆಯ ರಾಜನನ್ನು ಕೊಡಬೇಕು.”

01100013a ಸ ತಥೇತಿ ಪ್ರತಿಜ್ಞಾಯ ನಿಶ್ಚಕ್ರಾಮ ಮಹಾತಪಾಃ|

01100013c ಸಾಪಿ ಕಾಲೇನ ಕೌಸಲ್ಯಾ ಸುಷುವೇಽಮ್ಧಂ ತಮಾತ್ಮಜಂ||

“ಹಾಗೆಯೇ ಆಗಲಿ” ಎಂದು ಭರವಸೆಯನ್ನಿತ್ತ ಆ ಮಹಾತಪಸ್ವಿಯು ಹಿಂತೆರಳಿದನು. ಸಮಯ ಕಳೆದನಂತರ ಕೌಸಲ್ಯೆಯು ಕುರುಡು ಮಗನಿಗೆ ಜನ್ಮವಿತ್ತಳು.

01100014a ಪುನರೇವ ತು ಸಾ ದೇವೀ ಪರಿಭಾಷ್ಯ ಸ್ನುಷಾಂ ತತಃ|

01100014c ಋಷಿಮಾವಾಹಯತ್ಸತ್ಯಾ ಯಥಾಪೂರ್ವಮನಿಂದಿತಾ||

ದೇವಿ ಅನಿಂದಿತೆ ಸತ್ಯವತಿಯು ತನ್ನ ಇನ್ನೊಬ್ಬ ಸೊಸೆಯನ್ನು ಮನವೊಲಿಸಿ ಹಿಂದಿನಂತೆಯೇ ಋಷಿಯನ್ನು ಬರಮಾಡಿಕೊಂಡಳು.

01100015a ತತಸ್ತೇನೈವ ವಿಧಿನಾ ಮಹರ್ಷಿಸ್ತಾಮಪದ್ಯತ|

01100015c ಅಂಬಾಲಿಕಾಮಥಾಭ್ಯಾಗಾದೃಷಿಂ ದೃಷ್ಟ್ವಾ ಚ ಸಾಪಿ ತಂ|

01100015e ವಿಷಣ್ಣಾ ಪಾಂಡುಸಂಕಾಶಾ ಸಮಪದ್ಯತ ಭಾರತ||

ಭಾರತ! ಅದೇರೀತಿಯಲ್ಲಿ ಮಹರ್ಷಿಯು ಅವಳ ಬಳಿ ಹೋದನು. ಅಂಬಾಲಿಕೆಯೂ ಕೂಡ ಬಂದೊಡನೆ ಋಷಿಯನ್ನು ನೋಡಿ ವಿಷಣ್ಣಳಾಗಿ ಪಾಂಡುವರ್ಣವನ್ನು ತಾಳಿದಳು.

01100016a ತಾಂ ಭೀತಾಂ ಪಾಂಡುಸಂಕಾಶಾಂ ವಿಷಣ್ಣಾಂ ಪ್ರೇಕ್ಷ್ಯ ಪಾರ್ಥಿವ|

01100016c ವ್ಯಾಸಃ ಸತ್ಯವತೀಪುತ್ರ ಇದಂ ವಚನಮಬ್ರವೀತ್||

ಪಾರ್ಥಿವ! ಭೀತಳಾಗಿ ಪಾಂಡುವರ್ಣವನ್ನು ತಾಳಿ ವಿಷಣ್ಣಳಾದ ಅವಳನ್ನು ನೋಡಿದ ಸತ್ಯವತೀ ಪುತ್ರ ವ್ಯಾಸನು ಹೇಳಿದನು:

01100017a ಯಸ್ಮಾತ್ಪಾಂಡುತ್ವಮಾಪನ್ನಾ ವಿರೂಪಂ ಪ್ರೇಕ್ಷ್ಯ ಮಾಮಪಿ|

01100017c ತಸ್ಮಾದೇಷ ಸುತಸ್ತುಭ್ಯಂ ಪಾಂಡುರೇವ ಭವಿಷ್ಯತಿ||

01100018a ನಾಮ ಚಾಸ್ಯ ತದೇವೇಹ ಭವಿಷ್ಯತಿ ಶುಭಾನನೇ|

01100018c ಇತ್ಯುಕ್ತ್ವಾ ಸ ನಿರಾಕ್ರಾಮದ್ಭಗವಾನೃಷಿಸತ್ತಮಃ||

“ನನ್ನ ಈ ವಿರೂಪವನ್ನು ನೋಡಿ ಪಾಂಡುತ್ವವನ್ನು ಪಡೆದ ನಿನ್ನ ಈ ದೋಷದಿಂದ ನಿನ್ನ ಮಗನು ಪಾಂಡುವೇ ಆಗುತ್ತಾನೆ. ಶುಭಾನನೆ! ಅವನ ಹೆಸರೂ ಕೂಡ ಅದೇ ಆಗುತ್ತದೆ.” ಹೀಗೆ ಹೇಳಿ ಭಗವಾನ್ ಋಷಿಸತ್ತಮನು ಹೊರ ಬಂದನು.

01100019a ತತೋ ನಿಷ್ಕ್ರಾಂತಮಾಲೋಕ್ಯ ಸತ್ಯಾ ಪುತ್ರಮಭಾಷತ|

01100019c ಶಶಂಸ ಸ ಪುನರ್ಮಾತ್ರೇ ತಸ್ಯ ಬಾಲಸ್ಯ ಪಾಂಡುತಾಂ||

01100020a ತಂ ಮಾತಾ ಪುನರೇವಾನ್ಯಮೇಕಂ ಪುತ್ರಮಯಾಚತ|

01100020c ತಥೇತಿ ಚ ಮಹರ್ಷಿಸ್ತಾಂ ಮಾತರಂ ಪ್ರತ್ಯಭಾಷತ||

ಅವನು ಹೊರಬರುವುದನ್ನು ನೋಡಿದ ಸತ್ಯವತಿಯು ಪುತ್ರನಲ್ಲಿ ಕೇಳಿದಾಗ, ಅವನು ಬಾಲಕನ ಪಾಂಡುತ್ವದ ಕುರಿತು ಹೇಳಿದನು. ಅವನ ತಾಯಿಯು ಪುನಃ ಇನ್ನೊಬ್ಬ ಪುತ್ರನನ್ನು ಕೇಳಿದಾಗ ಮಹರ್ಷಿಯು ತನ್ನ ತಾಯಿಗೆ “ಹಾಗೆಯೇ ಆಗಲಿ!” ಎಂದು ಉತ್ತರಿಸಿದನು.

01100021a ತತಃ ಕುಮಾರಂ ಸಾ ದೇವೀ ಪ್ರಾಪ್ತಕಾಲಮಜೀಜನತ್|

01100021c ಪಾಂಡುಂ ಲಕ್ಷಣಸಂಪನ್ನಂ ದೀಪ್ಯಮಾನಮಿವ ಶ್ರಿಯಾ|

01100021e ತಸ್ಯ ಪುತ್ರಾ ಮಹೇಷ್ವಾಸಾ ಜಜ್ಞಿರೇ ಪಂಚ ಪಾಂಡವಾಃ||

ಕಾಲವು ಬಂದಾಗ ಆ ದೇವಿಯು ಪಾಂಡುವರ್ಣದ, ಶ್ರೀಯಂತೆ ಬೆಳಗುತ್ತಿರುವ ಲಕ್ಷಣಸಂಪನ್ನ ಕುಮಾರನಿಗೆ ಜನ್ಮವಿತ್ತಳು. ಅವನಿಗೆ ಮಹೇಷ್ವಾಸ ಪಂಚ ಪಾಂಡವರು ಪುತ್ರರಾಗಿ ಜನಿಸಿದರು.

01100022a ಋತುಕಾಲೇ ತತೋ ಜ್ಯೇಷ್ಠಾಂ ವಧೂಂ ತಸ್ಮೈ ನ್ಯಯೋಜಯತ್|

01100022c ಸಾ ತು ರೂಪಂ ಚ ಗಂಧಂ ಚ ಮಹರ್ಷೇಃ ಪ್ರವಿಚಿಂತ್ಯ ತಂ|

01100022e ನಾಕರೋದ್ವಚನಂ ದೇವ್ಯಾ ಭಯಾತ್ಸುರಸುತೋಪಮಾ||

ಹಿರಿಯ ಸೊಸೆಯು ಪುನಃ ಋತುಕಾಲವನ್ನು ಹೊಂದಿದಾಗ ಪುನಃ ಅವನನ್ನು ಸೇರುವಂತೆ ಹೇಳಿದಳು. ಸುರಸುತೆಯಂತಿದ್ದ ಅವಳಾದರೂ ಮಹರ್ಷಿಯ ರೂಪ ಮತ್ತು ವಾಸನೆಯನ್ನು ನೆನಪಿಸಿಕೊಂಡು ಭಯದಿಂದ ದೇವಿಯ ವಚನದಂತೆ ನಡೆದುಕೊಳ್ಳಲಿಲ್ಲ.

01100023a ತತಃ ಸ್ವೈರ್ಭೂಷಣೈರ್ದಾಸೀಂ ಭೂಷಯಿತ್ವಾಪ್ಸರೋಪಮಾಂ|

01100023c ಪ್ರೇಷಯಾಮಾಸ ಕೃಷ್ಣಾಯ ತತಃ ಕಾಶಿಪತೇಃ ಸುತಾ||

ಆ ಕಾಶಿಪತಿಯ ಮಗಳು ತನ್ನ ದಾಸಿಯೊಬ್ಬಳನ್ನು ಸರ್ವಭೂಷಣಗಳಿಂದ ಅಪ್ಸರೆಯಂತೆ ಸಿಂಗರಿಸಿ ಕೃಷ್ಣನಲ್ಲಿಗೆ ಕಳುಹಿಸಿದಳು.

01100024a ದಾಸೀ ಋಷಿಮನುಪ್ರಾಪ್ತಂ ಪ್ರತ್ಯುದ್ಗಮ್ಯಾಭಿವಾದ್ಯ ಚ|

01100024c ಸಂವಿವೇಶಾಭ್ಯನುಜ್ಞಾತಾ ಸತ್ಕೃತ್ಯೋಪಚಚಾರ ಹ||

ಋಷಿಯು ಬಂದಕೂಡಲೇ ಆ ದಾಸಿಯು ಮೇಲೆದ್ದು ಅಭಿನಂದಿಸಿ, ಅನುಜ್ಞೆಯಂತೆ ಅವನ ಸತ್ಕಾರ ಉಪಚಾರಗಳನ್ನು ಮಾಡಿದಳು.

01100025a ಕಾಮೋಪಭೋಗೇನ ತು ಸ ತಸ್ಯಾಂ ತುಷ್ಟಿಮಗಾದೃಷಿಃ|

01100025c ತಯಾ ಸಹೋಷಿತೋ ರಾತ್ರಿಂ ಮಹರ್ಷಿಃ ಪ್ರೀಯಮಾಣಯಾ||

ಕಾಮಭೋಗದಿಂದ ಅವಳಲ್ಲಿ ಋಷಿಯು ಸಂತುಷ್ಟನಾದನು. ಆ ಮಹರ್ಷಿಯು ಸಂತೋಷಗೊಂಡು ಅವಳೊಂದಿಗೆ ಪ್ರೀತಿಯಿಂದ ಇಡೀ ರಾತ್ರಿಯನ್ನು ಕಳೆದನು.

01100026a ಉತ್ತಿಷ್ಠನ್ನಬ್ರವೀದೇನಾಮಭುಜಿಷ್ಯಾ ಭವಿಷ್ಯಸಿ|

01100026c ಅಯಂ ಚ ತೇ ಶುಭೇ ಗರ್ಭಃ ಶ್ರೀಮಾನುದರಮಾಗತಃ|

01100026e ಧರ್ಮಾತ್ಮಾ ಭವಿತಾ ಲೋಕೇ ಸರ್ವಬುದ್ಧಿಮತಾಂ ವರಃ||

ಮೇಲೆದ್ದಾಗ ಅವನು ಅವಳಿಗೆ ಹೇಳಿದನು: “ನಿನ್ನ ದಾಸಿತ್ವವು ಇಂದಿಗೆ ಮುಗಿಯಿತು. ಶುಭೇ! ಇಂದು ಓರ್ವ ಶ್ರೀಮಂತನು ನಿನ್ನ ಉದರ ಗರ್ಭದಲ್ಲಿ ಬಂದಿದ್ದಾನೆ. ಅವನು ಲೋಕದಲ್ಲಿಯೇ ಶ್ರೇಷ್ಠನೂ ಧರ್ಮಾತ್ಮನೂ ಸರ್ವ ಬುದ್ಧಿವಂತನೂ ಆಗುತ್ತಾನೆ.”

01100027a ಸ ಜಜ್ಞೇ ವಿದುರೋ ನಾಮ ಕೃಷ್ಣದ್ವೈಪಾಯನಾತ್ಮಜಃ|

01100027c ಧೃತರಾಷ್ಟ್ರಸ್ಯ ಚ ಭ್ರಾತಾ ಪಾಂಡೋಶ್ಚಾಮಿತಬುದ್ಧಿಮಾನ್||

ಹೀಗೆ ಧೃತರಾಷ್ಟ್ರ ಮತ್ತು ಪಾಂಡುಗಳ ತಮ್ಮ ಅಮಿತ ಬುದ್ಧಿವಂತ ವಿದುರನೆಂಬ ಹೆಸರಿನ ಕೃಷ್ಣದ್ವೈಪಾಯನನ ಮಗನು ಜನಿಸಿದನು.

01100028a ಧರ್ಮೋ ವಿದುರರೂಪೇಣ ಶಾಪಾತ್ತಸ್ಯ ಮಹಾತ್ಮನಃ|

01100028c ಮಾಂಡವ್ಯಸ್ಯಾರ್ಥತತ್ತ್ವಜ್ಞಃ ಕಾಮಕ್ರೋಧವಿವರ್ಜಿತಃ||

ಮಹಾತ್ಮ ಮಾಂಡವ್ಯನ ಶಾಪದಿಂದಾಗಿ ಧರ್ಮನೇ ಕಾಮಕ್ರೋಧವಿವರ್ಜಿತ ಅರ್ಥತತ್ವಜ್ಞ ವಿದುರನ ರೂಪದಲ್ಲಿ ಜನಿಸಿದನು.

01100029a ಸ ಧರ್ಮಸ್ಯಾನೃಣೋ ಭೂತ್ವಾ ಪುನರ್ಮಾತ್ರಾ ಸಮೇತ್ಯ ಚ|

01100029c ತಸ್ಯೈ ಗರ್ಭಂ ಸಮಾವೇದ್ಯ ತತ್ರೈವಾಂತರಧೀಯತ||

ಈ ರೀತಿ ಧರ್ಮನ ಋಣವನ್ನು ತೀರಿಸಿದ ಅವನು ತನ್ನ ತಾಯಿಯನ್ನು ಭೇಟಿಯಾಗಿ “ಅವಳು ಗರ್ಭವತಿಯಾಗಿದ್ದಾಳೆ” ಎಂದು ಹೇಳಿ ಅಂತರ್ಧಾನನಾದನು.

01100030a ಏವಂ ವಿಚಿತ್ರವೀರ್ಯಸ್ಯ ಕ್ಷೇತ್ರೇ ದ್ವೈಪಾಯನಾದಪಿ|

01100030c ಜಜ್ಞಿರೇ ದೇವಗರ್ಭಾಭಾಃ ಕುರುವಂಶವಿವರ್ಧನಾಃ||

ಈ ರೀತಿ ವಿಚಿತ್ರವೀರ್ಯನ ಪತ್ನಿಯರಲ್ಲಿ ದ್ವೈಪಾಯನನಿಂದ ದೇವಗರ್ಭಗಳಂತೆ ಬೆಳಗುತ್ತಿರುವ ಕುರುವಂಶವಿವರ್ಧನರು ಜನಿಸಿದರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ವಿಚಿತ್ರವೀರ್ಯಸುತೋತ್ಪತ್ತೌ ಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ವಿಚಿತ್ರವೀರ್ಯಸುತೋತ್ಪತ್ತಿ ಎನ್ನುವ ನೂರನೆಯ ಅಧ್ಯಾಯವು.

Comments are closed.