ನೃಗೋಪಾಽಖ್ಯಾನ

ನೃಗ ಮಹಾರಾಜನ ಈ ಕಥೆಯು ವ್ಯಾಸ ಮಹಾಭಾರತದ ಅನುಶಾಸನ ಪರ್ವ (ಅಧ್ಯಾಯ ೬೯) ದಲ್ಲಿ ಬರುತ್ತದೆ. ಈ ಕಥೆಯನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳುತ್ತಾನೆ. ಈ ಕಥೆಯು ಬ್ರಾಹ್ಮಣನ ಧನವನ್ನು ಅಪಹರಿಸುವುದರಿಂದ ಉಂಟಾಗುವ ಹಾನಿಯ ವಿಷಯದ ದೃಷ್ಟಾಂತ ರೂಪಕ.

Small Pink Flowers On A White Background Stock Photo, Picture And ...ಹಿಂದೆ ದ್ವಾರಾವತಿಯ ನಿರ್ಮಾಣಕಾರ್ಯವು ನಡೆಯುತ್ತಿದ್ದಾಗ ಹುಲ್ಲು-ಬಳ್ಳಿಗಳಿಂದ ಮುಚ್ಚಿದ್ದ ಒಂದು ಮಹಾ ಬಾವಿಯು ಕಾಣಿಸಿತೆಂದು ಕೇಳಿದ್ದೇವೆ. ಜಲಾರ್ಥಿಗಳು ಮಹಾ ಶ್ರಮದಿಂದ ಆ ಬಾವಿಯನ್ನು ಮುಚ್ಚಿದ್ದ ಕಸವನ್ನು ತೆಗೆಯತೊಡಗಿದರು. ಆಗ ಅವರು ಅದರೊಳಗಿದ್ದ ಒಂದು ಮಹಾಕಾಯದ ಮೊಸಳೆಯನ್ನು ಕಂಡರು. ಅದನ್ನು ಮೇಲಕ್ಕೆತ್ತಲು ಸಹಸ್ರಾರು ಜನರು ಪ್ರಯತ್ಮಮಾಡಿದರು. ಪರ್ವತದಂತಿದ್ದ ಅದನ್ನು ಹಗ್ಗ ಮತ್ತು ಚರ್ಮದ ಪಟ್ಟಿಗಳಿಂದ ಕಟ್ಟಿ ಮೇಲೆ ಎಳೆಯಲು ಪ್ರಯತ್ನಿಸಿದರು. ಆದರೂ ಅದನ್ನು ಮೇಲೆ ಎತ್ತಲು ಸಾಧ್ಯವಾಗದಾಗ ಅವರು ಜನಾರ್ದನನಲ್ಲಿಗೆ ಹೋದರು.

“ಬಾವಿಯ ತುಂಬಾ ಅವರಿಸಿಕೊಂಡಿರುವ ಒಂದು ಮಹಾ ಮೊಸಳೆಯನ್ನು ಮೇಲೆತ್ತಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ”

ಎಂದು ಕೃಷ್ಣನಿಗೆ ನಿವೇದಿಸಿದರು. ಇದನ್ನು ಕೇಳಿ ವಾಸುದೇವನು ಆ ಬಾವಿಯ ಬಳಿ ಹೋದನು. ಅವನು ಆ ಮೊಸಳೆಯನ್ನು ಮೇಲಕ್ಕೆತ್ತಿದನು ಮತ್ತು ತನ್ನ ಪಾವನ ಕರಗಳ ಸ್ಪರ್ಷದಿಂದ ರಾಜಾ ನೃಗನನ್ನು ಉದ್ಧರಿಸಿದನು. ಆಗ ನೃಗನು ಕೃಷ್ಣನಿಗೆ ಹಿಂದಿನ ಕಾಲದಲ್ಲಿ ಸಹಸ್ರ ಯಜ್ಞಗಳನ್ನು ಮಾಡಿದವನು ತಾನು ಎಂದು ತನ್ನ ಪರಿಚಯವನ್ನು ಮಾಡಿಕೊಂಡನು. ಅವನ ಆ ಮಾತನ್ನು ಕೇಳಿ ಮಾಧವನು ಅವನಿಗೆ ಹೇಳಿದನು:

“ನೀನು ಶುಭಕರ್ಮಗಳನ್ನೇ ಮಾಡಿದ್ದೀಯೆ. ಪಾಪಕರ್ಮಗಳನ್ನು ಮಾಡಿಲ್ಲ. ಅದರೂ ನೀನು ಹೇಗೆ ಈ ತರಹದ ದುರ್ಗತಿಯನ್ನು ಪಡೆದುಕೊಂಡೆ? ನರೇಂದ್ರ! ಇಂತಹ ಕಷ್ಟವು ನಿನಗೆ ಏಕೆ ದೊರೆಯಿತು ಎನ್ನುವುದನ್ನು ಹೇಳು.  ನೃಪ! ಹಿಂದೆ ನೀನು ಮೊದಲು ಒಂದು ಲಕ್ಷ ಗೋವುಗಳನ್ನೂ ಪುನಃ ನೂರು ಗೋವುಗಳನ್ನೂ, ಪುನಃ ನೂರು ಗೋವುಗಳನ್ನು ಮತ್ತು ಪುನಃ ಎಂಭತ್ತು ಲಕ್ಷ ಗೋವುಗಳನ್ನೂ[1] ದ್ವಿಜರಿಗೆ ದಾನವಾಗಿತ್ತೆ ಎಂದು ನಾವು ಕೇಳಿದ್ದೇವೆ. ನಿನ್ನ ಆ ಎಲ್ಲ ದಾನಗಳ ಪುಣ್ಯಫಲವು ಎಲ್ಲಿಗೆ ಹೋಯಿತು?”

ಆಗ ನೃಗನು ಕೃಷ್ಣನಿಗೆ ಹೇಳಿದನು:

“ಪರದೇಶಕ್ಕೆ ಹೋಗಿದ್ದ ಓರ್ವ ಅಗ್ನಿಹೋತ್ರಿ ಬ್ರಾಹ್ಮಣನ ಒಂದು ಗೋವು ಯಾವಾಗಲೋ ಓಡಿಬಂದು ನನ್ನ ಗೋವುಗಳ ಗುಂಪಿನಲ್ಲಿ ಸೇರಿಕೊಂಡು ಬಿಟ್ಟಿತ್ತು. ನನ್ನ ಪಶುಪಾಲಕರು ಒಂದು ಸಾವಿರ ಗೋವುಗಳನ್ನು ಎಣಿಸುವಾಗ ಅದನ್ನೂ ಸೇರಿಸಿಬಿಟ್ಟಿದ್ದರು. ಮರಣಾನಂತರ ಸ್ವರ್ಗಪ್ರಾಪ್ತಿಯ ಆಕಾಂಕ್ಷೆಯಿಂದ ನಾನು ಅವುಗಳನ್ನು ಓರ್ವ ಬ್ರಾಹ್ಮಣನಿಗೆ ದಾನವಾಗಿ ಕೊಟ್ಟುಬಿಟ್ಟೆನು. ಕೆಲವು ದಿನಗಳ ನಂತರ ಪರದೇಶದಿಂದ ಹಿಂದಿರುಗಿದ ಆ ಬ್ರಾಹ್ಮಣನು ತನ್ನ ಗೋವನ್ನು ಹುಡುಕತೊಡಗಿದನು. ಹುಡುಕುತ್ತಾ ಅವನು ತನ್ನ ಗೋವನ್ನು ಇನ್ನೊಬ್ಬನ ಮನೆಯಲ್ಲಿರುವುದನ್ನು ಕಂಡು “ಈ ಹಸುವು ನನ್ನದು” ಎಂದನು. ಆಗ ಅವರಿಬ್ಬರೂ ಜಗಳವಾಡತೊಡಗಿದರು. ಮತ್ತು ಅತ್ಯಂತ ಕ್ರೋಧಿತರಾಗಿ ನನ್ನ ಬಳಿ ಬಂದರು. ಅವರಲ್ಲಿ ಒಬ್ಬನು ಹೇಳಿದನು: “ಈ ಗೋವನ್ನು ನೀನೇ ನನಗೆ ದಾನದಲ್ಲಿ ಕೊಟ್ಟಿದ್ದೆ” ಇನ್ನೊಬ್ಬನು: “ವಾಸ್ತವದಲ್ಲಿ ಈ ಗೋವು ನನ್ನದು. ನೀನು ಇದನ್ನು ಕದ್ದಿದ್ದೆ!” ಎಂದನು. ಆಗ ನಾನು “ಈ ಗೋವಿನ ಬದಲಿಗೆ ನಿನಗೆ ಹತ್ತು ಸಾವಿರ ಗೋವುಗಳನ್ನು ಕೊಡುತ್ತೇನೆ” ಎಂದು ದಾನವನ್ನು ಪಡೆದುಕೊಂಡಿದ್ದ ಬ್ರಾಹ್ಮಣನಿಗೆ ಹೇಳಿದೆನು. ಆದರೆ ಅವನು “ದೇಶಕಾಲಕ್ಕೆ ಅನುರೂಪವಾಗಿರುವ, ಹೆಚ್ಚಿನ ಹಾಲನ್ನು ಕೊಡುವ, ಸರಳವೂ ಅತಿ ವತ್ಸಲೆಯೂ ಆಗಿರುವ, ಸಿಹಿ ಹಾಲನ್ನು ಕೊಡುವ ಈ ಹಸುವು ನನ್ನ ಮನೆಯಲ್ಲಿ ಸದಾ ಇರುವಂತಾದರೆ ನಾನು ಧನ್ಯನಾಗುತ್ತೇನೆ” ಎಂದನು. “ಕೃಶನಾಗಿರುವ ನನ್ನ ಮಗನನ್ನು ಈ ಗೋವು ಪೋಷಿಸುತ್ತಿದೆ. ಆದ್ದರಿಂದ ಇದನ್ನು ತೊರೆಯಲು ನಾನು ಶಕ್ಯನಿಲ್ಲ” ಎಂದು ಹೇಳಿ ಅವನು ಹೊರಟೇ ಹೋದನು. ಆಗ ನಾನು ಇನ್ನೊಬ್ಬ ವಿಪ್ರನಲ್ಲಿ “ಆ ಗೋವಿನ ಬದಲಾಗಿ ನಾನು ನಿನಗೆ ಒಂದು ಲಕ್ಷ ಗೋವುಗಳನ್ನು ನೀಡುತ್ತೇನೆ. ಸ್ವೀಕರಿಸಬೇಕು” ಎಂದೆನು. ಮಧುಸೂದನ! ಆಗ ಬ್ರಾಹ್ಮಣನು ಹೇಳಿದನು: “ನಾನು ರಾಜರ ದಾನವನ್ನು ಸ್ವೀಕರಿಸುವುದಿಲ್ಲ. ನಾನು ಧನಸಂಪಾದಿಸಲು ಶಕ್ಯನಾಗಿದ್ದೇನೆ. ನನಗೆ ನನ್ನ ಅದೇ ಗೋವನ್ನು ಶೀಘ್ರವಾಗಿ ತಂದುಕೊಡಬೇಕು.” ನಾನು ಅವನಿಗೆ ಚಿನ್ನ, ಬೆಳ್ಳಿ, ರಥ ಮತ್ತು ಕುದುರೆ – ಎಲ್ಲವನ್ನೂ ಕೊಡಲು ಬಯಸಿದೆ. ಆದರೆ ಆ ಬ್ರಾಹ್ಮಣರ್ಷಭನು ನನ್ನಿಂದ ಏನನ್ನೂ ಸ್ವೀಕರಿಸದೇ ಸುಮ್ಮನೇ ಹೊರಟು ಹೋದನು. ಈ ಕಾಲದ ನಂತರ ಕಾಲಧರ್ಮಕ್ಕೆ ಸಿಲುಕಿದ ನಾನು ಪಿತೃಲೋಕವನ್ನು ಸೇರಿ ಧರ್ಮರಾಜನ ಬಳಿ ಹೋದೆನು. ಯಮನಾದರೋ ನನ್ನನ್ನು ಪೂಜಿಸಿ ಈ ಮಾತನ್ನಾಡಿದನು: “ರಾಜನ್! ನಿನ್ನ ಪುಣ್ಯ ಕರ್ಮಗಳನ್ನು ಎಣಿಸಲೂ ಸಾಧ್ಯವಿಲ್ಲ. ಆದರೆ ನಿನಗೆ ತಿಳಿಯದೆಯೇ ಒಂದು ಪಾಪವೂ ನಿನ್ನಿಂದ ನಡೆದುಹೋಗಿದೆ. ನೀನು ಬಯಸಿದಂತೆ ಇದನ್ನು ಮೊದಲು ಭೋಗಿಸಬಹುದು ಅಥವಾ ನಂತರ ಭೋಗಿಸಬಹುದು. ರಕ್ಷಣೆಮಾಡುತ್ತೇನೆ ಎಂದು ಹೇಳಿದ್ದ ಆ ನಿನ್ನ ಪ್ರತಿಜ್ಞೆಯು, ಬ್ರಾಹ್ಮಣನು ತನ್ನ ಗೋವನ್ನು ಕಳೆದುಕೊಂಡಿದುದರಿಂದ ಸುಳ್ಳಾಗಿ ಹೋಯಿತು. ಮತ್ತು ಆ ಬ್ರಾಹ್ಮಣನ ಗೋವನ್ನು ತಿಳಿಯದೇ ನೀನು ಅಪಹರಿಸಿಬಿಟ್ಟಿದ್ದೆ. ಈ ರೀತಿ ಮೂರು ವಿಧದಲ್ಲಿ ನೀನು ಪಾಪವನ್ನೆಸಗಿದ್ದೀಯೆ.” “ಪ್ರಭೋ! ಮೊದಲು ನಾನು ಪಾಪವನ್ನು ಭೋಗಿಸಿ ನಂತರ ಪುಣ್ಯವನ್ನು ಬೋಗಿಸುತ್ತೇನೆ” ಎಂದು ಧರ್ಮರಾಜನಿಗೆ ಹೇಳುತ್ತಿರುವಾಗಲೇ ನಾನು ಭೂಮಿಯ ಮೇಲೆ ಬಿದ್ದೆನು. ಬೀಳುತ್ತಿರುವಾಗ ಯಮನು ಉಚ್ಛಸ್ವರದಲ್ಲಿ ನನಗೆ ಹೇಳಿದ ಈ ಮಾತು ನನ್ನ ಕಿವಿಗಳ ಮೇಲೆ ಬಿದ್ದಿತು: “ಒಂದು ಸಹಸ್ರ ದಿವ್ಯ ವರ್ಷಗಳು ಪೂರ್ಣವಾದ ನಂತರ ನಿನ್ನ ಪಾಪಕರ್ಮದ ಭೋಗವು ಸಮಾಪ್ತವಾಗುತ್ತದೆ. ಆಗ ವಾಸುದೇವ ಜನಾರ್ದನನು ನಿನ್ನನ್ನು ಉದ್ಧರಿಸುತ್ತಾನೆ ಮತ್ತು ನಿನ್ನ ಪುಣ್ಯಕರ್ಮಗಳ ಪ್ರಭಾವದಿಂದ ಪ್ರಾಪ್ತವಾದ ಸನಾತನ ಲೋಕಗಳಿಗೆ ಹೋಗುತ್ತೀಯೆ.” ಬಾವಿಯಲ್ಲಿ ಬಿದ್ದಾಗ ನನಗೆ ತಿರ್ಯಗ್ಯೋನಿಯು ದೊರಕಿದೆ ಮತ್ತು ನನ್ನ ಶಿರವು ಕೆಳಗಾಗಿದೆ ಎಂದು ಕಂಡುಕೊಂಡೆನು. ಈ ಯೋನಿಯಲ್ಲಿಯೂ ಕೂಡ ನನ್ನ ಪೂರ್ವಜನ್ಮದ ಸ್ಮರಣಶಕ್ತಿಯು ನನ್ನೊಡನಿತ್ತು. ಕೃಷ್ಣ! ಇಂದು ನೀನು ನನ್ನನ್ನು ಉದ್ಧರಿಸಿದೆ. ತಪೋಬಲವಲ್ಲದೇ ಇದಕ್ಕೆ ಬೇರೆ ಯಾವ ಕಾರಣವಿದೆ? ಅನುಮತಿ ನೀಡು. ನಾನು ಸ್ವರ್ಗಕ್ಕೆ ತೆರಳುತ್ತೇನೆ.”

ಕೃಷ್ನನಿಂದ ಅನುಜ್ಞಾತನಾಗಿ ಜನಾರ್ದನನಿಗೆ ನಮಸ್ಕರಿಸಿ ಅವನು ದಿವ್ಯ ವಿಮಾನದಲ್ಲಿ ಕುಳಿತು ದಿವಕ್ಕೆ ಹೋದನು. ನೃಗನು ದಿವಕ್ಕೆ ಹೊರಟುಹೋದ ನಂತರ ವಾಸುದೇವನು ಈ ಶ್ಲೋಕವನ್ನು ಹಾಡಿದನು:

“ತಿಳಿದ ಪುರುಷನು ಬ್ರಾಹ್ಮಣನ ಸ್ವತ್ತನ್ನು ಅಪಹರಿಸಬಾರದು. ಬ್ರಾಹ್ಮಣನ ಗೋವು ನೃಗನನ್ನು ಹೇಗೋ ಹಾಗೆ ಬ್ರಾಹ್ಮಣನಿಂದ ಅಪಹರಿಸಿದುದು ಅಪಹರಿಸಿದವನನ್ನು ನಾಶಗೊಳಿಸುತ್ತದೆ.”

ಸಜ್ಜನರ ಸಂಗವು ಸತ್ಪುರುಷನಿಗೆ ವ್ಯರ್ಥವಾಗುವುದಿಲ್ಲ. ಸಾಧುಪುರುಷನ ಸಮಾಗಮದಿಂದ ನೃಗನು ನರಕದಿಂದ ವಿಮುಕ್ತನಾದನು. ಗೋದಾನಮಾಡುವುದರಿಂದ ಯಾವ ಫಲವು ದೊರೆಯುತ್ತದೆಯೋ ಹಾಗೆಯೇ ಗೋವಿಗೆ ದ್ರೋಹಮಾಡುವುದರಿಂದ ಅಷ್ಟೇ ದೊಡ್ಡ ಕುಫಲವನ್ನು ಭೋಗಿಸಬೇಕಾಗುತ್ತದೆ. ಆದುದರಿಂದ ಗೋವಿಗೆ ಎಂದೂ ಕಷ್ಟಕೊಡಬಾರದು.

[1] ಒಟ್ಟು ಎಂಭತ್ತೊಂದು ಲಕ್ಷದ ಎರಡು ನೂರು ಗೋವುಗಳು.

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಯಯಾತಿ
  7. ಸಂವರಣ-ತಪತಿ
  8. ವಸಿಷ್ಠೋಪಾಽಖ್ಯಾನ
  9. ಔರ್ವೋಪಾಽಖ್ಯಾನ
  10. ಸುಂದೋಪಸುಂದೋಪಾಽಖ್ಯಾನ
  11. ಸಾರಂಗಗಳು
  12. ಸೌಭವಧೋಪಾಽಖ್ಯಾನ
  13. ನಲೋಪಾಽಖ್ಯಾನ
  14. ಅಗಸ್ತ್ಯೋಪಾಽಖ್ಯಾನ
  15. ಭಗೀರಥ
  16. ಋಷ್ಯಶೃಂಗ
  17. ಪರಶುರಾಮ
  18. ಚ್ಯವನ
  19. ಮಾಂಧಾತ
  20. ಸೋಮಕ-ಜಂತು
  21. ಗಿಡುಗ-ಪಾರಿವಾಳ
  22. ಅಷ್ಟಾವಕ್ರ
  23. ರೈಭ್ಯ-ಯವಕ್ರೀತ
  24. ತಾರ್ಕ್ಷ್ಯ ಅರಿಷ್ಠನೇಮಿ
  25. ಅತ್ರಿ
  26. ವೈವಸ್ವತ ಮನು
  27. ಮಂಡೂಕ-ವಾಮದೇವ
  28. ಧುಂಧುಮಾರ
  29. ಮಧು-ಕೈಟಭ ವಧೆ
  30. ಕಾರ್ತಿಕೇಯನ ಜನ್ಮ
  31. ಮುದ್ಗಲ
  32. ರಾಮೋಪಾಽಖ್ಯಾನ: ರಾಮಕಥೆ
  33. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  34. ಇಂದ್ರವಿಜಯೋಪಾಽಖ್ಯಾನ
  35. ದಂಬೋದ್ಭವ
  36. ಮಾತಲಿವರಾನ್ವೇಷಣೆ
  37. ಗಾಲವ ಚರಿತೆ
  38. ವಿದುಲೋಪಾಽಖ್ಯಾನ
  39. ತ್ರಿಪುರವಧೋಪಾಽಖ್ಯಾನ
  40. ಪರಶುರಾಮನು ಅಸ್ತ್ರಗಳನ್ನು ಪಡೆದುದು
  41. ಪ್ರಭಾಸಕ್ಷೇತ್ರ ಮಹಾತ್ಮೆ
  42. ತ್ರಿತಾಖ್ಯಾನ
  43. ಸಾರಸ್ವತೋಪಾಽಖ್ಯಾನ
  44. ವಿಶ್ವಾಮಿತ್ರ
  45. ವಸಿಷ್ಠಾಪವಾಹ ಚರಿತ್ರೆ
  46. ಬಕ ದಾಲ್ಭ್ಯನ ಚರಿತ್ರೆ
  47. ಕಪಾಲಮೋಚನತೀರ್ಥ ಮಹಾತ್ಮೆ
  48. ಮಂಕಣಕ
  49. ವೃದ್ಧಕನ್ಯೆ
  50. ಬದರಿಪಾಚನ ತೀರ್ಥ
  51. ಕುಮಾರನ ಪ್ರಭಾವ-ಅಭಿಷೇಕ
  52. ಅಸಿತದೇವಲ-ಜೇಗೀಷವ್ಯರ ಕಥೆ
  53. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  54. ಕುರುಕ್ಷೇತ್ರ ಮಹಾತ್ಮೆ
  55. ಶಂಖಲಿಖಿತೋಪಾಽಖ್ಯಾನ
  56. ಜಾಮದಗ್ನೇಯೋಪಾಽಖ್ಯಾನ
  57. ಷೋಡಶರಾಜಕೀಯೋಪಾಽಖ್ಯಾನ
  58. ನೃಗೋಽಪಾಖ್ಯಾನ 

Leave a Reply

Your email address will not be published. Required fields are marked *