ವಿದುಲೋಪಾಽಖ್ಯಾನ
ವಿದುಲೆ ಮತ್ತು ಅವಳ ಮಗನ ನಡುವೆ ನಡೆದ ಸಂವಾದದ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಭಗವದ್ಯಾನ ಪರ್ವ (ಅಧ್ಯಾಯ ೧೩೧-೧೩೪) ದಲ್ಲಿ ಬರುತ್ತದೆ. ಸಂಧಿ ಮುರಿದು ಯುದ್ಧವೇ ನಿಶ್ಚಯವಾದಾಗ ಕುಂತಿಯು ಈ ಕಥೆಯನ್ನು ತನ್ನ ಮಕ್ಕಳಿಗೆ ಶ್ರೀಕೃಷ್ಣನ ಮೂಲಕ ಹೇಳಿ ಕಳುಹಿಸಿದಳು.
ಯಶಸ್ವಿನೀ, ಕೋಪಿಷ್ಟ, ಸತ್ಕುಲದಲ್ಲಿ ಜನಿಸಿದ್ದ, ಮಾನಿಷ್ಠೆ, ಕ್ಷತ್ರಧರ್ಮನಿರತೆ, ಧನ್ಯೆ, ದೀರ್ಘದರ್ಶಿನಿ, ರಾಜಸಂಸದಿಗಳಲ್ಲಿ ವಿಶ್ರುತಳಾದ, ಉಪದೇಶಿತಳಾಗಿದ್ದ, ವಿಖ್ಯಾತಳಾಗಿದ್ದ ವಿದುರಾ ಎಂಬ ಹೆಸರಿನ ಸತಿಯು ಸಿಂಧುರಾಜನಿಂದ ಸೋತು ದೀನಚೇತಸನಾಗಿ ಮಲಗಿಕೊಂಡಿದ್ದ ಸಂತೋಷ ನೀಡದ, ಧರ್ಮವನ್ನು ತಿಳಿಯದಿದ್ದ, ವೈರಿಗಳ ಹರ್ಷವನ್ನು ವರ್ಧಿಸುವ ಹಿರಿಯ ಮಗನನ್ನು ನಿಂದಿಸಿದಳು: “ನೀನು ನನ್ನಲ್ಲಿ ಮತ್ತು ನಿನ್ನ ತಂದೆಯಲ್ಲಿ ಹುಟ್ಟಿದವನಲ್ಲ! ಎಲ್ಲಿಂದಲೋ ಬಂದಿರುವೆ! ನಿನಗೆ ಕೋಪವೆಂಬುವುದೇ ಇಲ್ಲವಾಗಿದೆ! ಹೆಸರಿಗೆ ಮಾತ್ರ ಪುರುಷನಾಗಿರುವೆ. ಸಾಧನೆಯಲ್ಲಿ ನಪುಂಸಕನಾಗಿರುವೆ. ಜೀವನದಲ್ಲಿ ನಿರಾಶೆಹೊಂದಿದವನಂತಿದ್ದೀಯೆ. ಕಲ್ಯಾಣಕಾಗಿ ಯುದ್ಧಕ್ಕೆ ಹೊರಡು! ನಿನ್ನಲ್ಲಿರುವ ಆತ್ಮನನ್ನು ಅಪಮಾನಿಸಬೇಡ! ನೀನು ಸಾಮಾನ್ಯನೆಂದು ಭಾವಿಸಬೇಡ! ಕಲ್ಯಾಣವನ್ನು ಮಾಡುವ ಮನಸ್ಸು ಮಾಡು. ಭಯಪಡಬೇಡ! ಭಯವನ್ನು ತೆಗೆದುಹಾಕು. ಹೇಡಿ! ಮೇಲೇಳು! ಸೋತುಬಂದು ಹೀಗೆ ಬಿದ್ದುಕೊಳ್ಳಬೇಡ! ಮಾನಗೆಟ್ಟು ಸರ್ವ ಶತ್ರುಗಳಿಗೆ ಆನಂದವನ್ನುಂಟುಮಾಡಿ ಬಂಧುಗಳಿಗೆ ಶೋಕವನ್ನು ತರಬೇಡ! ಸಣ್ಣ ನದಿಯು ಸ್ವಲ್ಪವೇ ಮಳೆಬಂದರೂ ತುಂಬಿ ಹರಿಯುತ್ತದೆ. ಇಲಿಯ ಬೊಗಸೆಯು ಸ್ವಲ್ಪವೇ ಅನ್ನದಿಂದ ತುಂಬಿಹೋಗುತ್ತದೆ. ಹೇಡಿಯಾದವನನ್ನು ಸಂತೋಷಗೊಳಿಸುವುದು ತುಂಬಾ ಸುಲಭ. ಸ್ವಲ್ಪದಿಂದಲೇ ತೃಪ್ತಿಗೊಳ್ಳುತ್ತಾನೆ. ಹಾವಿನ ಹಲ್ಲನ್ನಾದರೂ ಕೀಳಲು ಹೋಗಿ ಸಾವನ್ನಪ್ಪು, ಹಾಗೆಯೂ ಜೀವವುಳಿಯುತ್ತದೆಯೆಂದು ಸಂಶಯವಾದರೆ ಪರಾಕ್ರಮದಿಂದ ಹೋರಾಡು. ಗಿಡುಗವು ಮೇಲೆ ಹಾರಿ ತಿಳಿದುಕೊಳ್ಳುವಂತೆ ನೀನೂ ಕೂಡ ಶತ್ರುವಿಗೆ ಶಂಕೆಬಾರದಂತೆ ತಿಳಿದುಕೊಳ್ಳಬೇಕು. ಅನಂತರ ಗರ್ಜಿಸುತ್ತಾ ರಣರಂಗದಲ್ಲಿ ಯುದ್ಧಮಾಡಬೇಕು. ರಣಹೇಡಿ! ಸಿಡಿಲು ಬಡಿದು ಸತ್ತವನಂತೆ ಏಕೆ ಮಲಗಿರುವೆ? ಏಳು! ಸೋತು ಹೀಗೆ ಮಲಗಿಕೊಳ್ಳಬೇಡ! ಅಸ್ತನಾಗಿ ಹೋಗಬೇಡ! ಕೃಪಣನಾಗಿ ಸ್ವಕರ್ಮದಿಂದ ಪ್ರಸಿದ್ಧನಾಗು! ಮಧ್ಯಮನೆಂದೂ, ಜಘನ್ಯನೆಂದೂ, ಅಧಮನೆಂದೂ ತಿಳಿದುಕೊಳ್ಳಬೇಡ! ಎದ್ದು ಗೆಲ್ಲು! ಒಣಗಿದ ತುಂಬೇಗಿಡದಂತೆ ಒಂದು ಕ್ಷಣವಾದರೂ ಪ್ರಜ್ವಲಿಸು. ಜೀವಿಸಿರಬೇಕೆಂಬ ಒಂದೇ ಒಂದು ಆಸೆಯಿಂದ ಹೊಟ್ಟಿನ ಬೆಂಕಿಯಂತೆ ಉರಿಯಿಲ್ಲದೇ ಹೊಗೆ ಕರಿಗಳಿಂದ ಆವೃತನಾಗಿರಬೇಡ. ಬಹಳ ಕಾಲದವರೆಗೆ ಹೊಗೆಯಾಡುತ್ತಾ ಇರುವುದಕ್ಕಿಂತ ಕ್ಷಣಮಾತ್ರ ಹತ್ತಿ ಉರಿಯುವುದು ಒಳ್ಳೆಯದು. ಯಾವೊಬ್ಬ ರಾಜನ ಮನೆಯಲ್ಲಿಯೂ ನಿನ್ನಂತೆ ಮೃದುಸ್ವಭಾವದ ಹೇಡಿ ಕತ್ತೆಯು ಹುಟ್ಟದಿರಲಿ. ಮನುಷ್ಯ ಕರ್ಮವನ್ನು ಮಾಡಿ ಪೌರುಷವಿದ್ದಷ್ಟೂ ಉತ್ತಮವಾಗಿ ಕಾದಾಡಿದರೆ ಕ್ಷತ್ರಿಯ ಧರ್ಮದ ಋಣದಿಂದ ಮುಕ್ತನಾಗುತ್ತಾನೆ. ಅವನು ಆತ್ಮನಿಂದನೆಯನ್ನು ಮಾಡಿಕೊಳ್ಳುವುದಿಲ್ಲ. ಸಿಕ್ಕಿದರೂ ಸಿಕ್ಕದೇ ಇದ್ದರೂ ಪಂಡಿತರು ಶೋಕಿಸುವುದಿಲ್ಲ. ಕೊನೆಯವರೆಗೂ ಕಾರ್ಯಮಾಡುತ್ತಲೇ ಇರುತ್ತಾರೆ. ಪ್ರಾಣವನ್ನು ಧನವೆಂದು ತಿಳಿದು ಹೆದರಿ ಸುಮ್ಮನಿರುವುದಿಲ್ಲ. ಮಗನೇ! ಧರ್ಮವನ್ನು ಮುಂದಿರಿಸಿಕೊಂಡು ವೀರ್ಯವನ್ನು ಪ್ರದರ್ಶಿಸು ಅಥವಾ ನಿಶ್ಚಯವಾದ ಮೃತ್ಯುಗತಿಯಲ್ಲಿ ಹೋಗು! ಯಾವ ಕಾರಣಕ್ಕೆ ಜೀವಿಸಿರುವೆ? ನಪುಂಸಕ! ನಿನ್ನ ಧರ್ಮಕಾರ್ಯಗಳು ನಿಂತು ಹೋಗಿವೆ. ಕೀರ್ತಿಯೂ ಸಕಲವಾಗಿ ನಾಶವಾಗಿದೆ. ಭೋಗಮೂಲವಾದ ರಾಜ್ಯವೂ ಒಡೆದು ಹೋಗಿದೆ. ಇನ್ನು ಏಕೆ ಜೀವಿಸಿರುವೆ? ಶತ್ರುವಿನಿಂದ ಕೆಡವಲ್ಪಟ್ಟವನು ಅವನ ಮೊಣಕಾಲುಗಳನ್ನೂ ಎಳೆದು ಮೇಲೇಳಲು ಪ್ರಯತ್ನಿಸಬೇಕು. ಆಗ ಸಂಪೂರ್ಣವಾಗಿ ನಾಶಹೊಂದಿದರೂ ವಿಷಾದಿಸಬಾರದು. ಆಜಾನೇಯವೆಂಬ ಕುದುರೆಯನ್ನು ಸ್ಮರಿಸಿ ಧುರದಲ್ಲಿ ಮೇಲೇಳಲು ಸತತ ಪ್ರಯತ್ನವನ್ನು ಮಾಡುತ್ತಲೇ ಇರಬೇಕು. ನಿನ್ನಲ್ಲಿರುವ ಪರುಷವನ್ನು ತಿಳಿದುಕೊಂಡು ನಿನ್ನಲ್ಲಿ ವೀರ್ಯವನ್ನೂ ಅಭಿಮಾನವನ್ನೂ ಹಿಟ್ಟಿಸಿಕೋ! ನಿನ್ನಿಂದಾಗಿ ಮುಳುಗಿಹೋಗುತ್ತಿರುವ ವಂಶವನ್ನು ನೀನೇ ಮೇಲೆತ್ತು. ಯಾರ ಮಹಾ ಅದ್ಭುತ ಸಾಧನೆಗಳನ್ನು ಮನುಷ್ಯರು ಮಾತನಾಡಿಕೊಳ್ಳುವುದಿಲ್ಲವೋ ಅವನು ಜನಸಂಖ್ಯೆಯುನ್ನು ಹೆಚ್ಚಿಸಲು ಮಾತ್ರ ಅರ್ಹನಾಗಿರುತ್ತಾನೆ. ಅವನು ಸ್ತ್ರೀಯೂ ಆಗಿರುವುದಿಲ್ಲ. ಪುರುಷನೂ ಆಗಿರುವುದಿಲ್ಲ. ಯಾರು ದಾನದಲ್ಲಿ, ತಪಸ್ಸಿನಲ್ಲಿ, ಶೌರ್ಯದಲ್ಲಿ, ವಿದ್ಯೆಯಲ್ಲಿ ಅಥವಾ ಅರ್ಥಲಾಭದಲ್ಲಿ ಪ್ರಸಿದ್ಧನಾಗುವುದಿಲ್ಲವೋ ಅವನು ತಾಯಿಯ ವಲ-ಮೂತ್ರಗಳಿದ್ದಂತೆ. ಯಾರು ಪಾಂಡಿತ್ಯದಿಂದ ಅಥವಾ ತಪಸ್ಸಿನಿಂದ ಅಥವಾ ಸಂಪತ್ತಿನಿಂದ ಅಥವಾ ವಿಕ್ರಮದಿಂದ ಅಥವಾ ಬೇರೆ ಕರ್ಮಗಳಿಂದ ಅನ್ಯ ಜನರನ್ನು ಮೀರುತ್ತಾನೋ ಅವನೇ ಪುರುಷ. ಕಾಪುರುಷರಿಗೆ ಉಚಿತವಾದ ಕ್ರೂರ, ಅಯಶಸ್ಕರವಾದ, ದುಃಖಕರವಾದ, ನೀಚರ ಮತ್ತು ಭಿಕ್ಷಾವೃತ್ತಿಯಿಂದ ಜೀವಿಸುವವರ ವೃತ್ತಿಯನ್ನು ಮಾತ್ರ ನೀನು ಆಚರಿಸಬೇಡ. ಯಾರನ್ನು ನೋಡಿ ಶತ್ರುಗಳು ಆನಂದಿಸುತ್ತಾರೋ, ಯಾರ ಇರುವಿಕೆಯೇ ಲೋಕಕ್ಕೆ ತಿಳಿದಿರುವುದಿಲ್ಲವೋ, ಯಾರನ್ನು ನೋಡಿ ಲೋಕವು ಹಳಿಯುವುದೋ, ಯಾರ ಆಸನ-ವಸನಗಳು ಹೀನವಾಗಿರುವವೋ, ಅಲ್ಪ ಲಾಭಕ್ಕೆ ಯಾರು ಸಂತುಷ್ಟನಾಗಿ ಅಚ್ಚರಿಯನ್ನು ಪ್ರಕಟಿಸುತ್ತಾನೋ ಆ ದೀನ, ಅಲ್ಪಜೀವಿಕ, ಅಲ್ಪಕ ಬಂಧುವನ್ನು ಸೇರಿ ಬಾಂಧವರು ಸುಖವನ್ನು ಪಡೆಯುವುದಿಲ್ಲ. ನಮ್ಮ ರಾಷ್ಟ್ರದಿಂದ ಹೊರಗಟ್ಟಲ್ಪಟ್ಟು ಶತ್ರುಗಳು ವಶಪಡೆಸಿಕೊಂಡಿದ್ದಾರೆ. ನಾವು ಸರ್ವಕಾಮರಸಹೀನರಾಗಿ ಸ್ಥಾನಭ್ರಷ್ಟರಾಗಿ ಏನೂ ಇಲ್ಲದವರಾಗಿದ್ದೇವೆ. ಪುತ್ರ! ಸಂಜಯ! ಸತ್ಪುರುಷರ ಕುಲದಲ್ಲಿ ಪುತ್ರನೆಂದು ಕರೆದುಕೊಳ್ಳವ ಈ ಅಮಂಗಳಕಾರಿ, ವಂಶ ನಾಶಿನಿ, ಕಲಿಯಾದ ನಿನಗೆ ಜನ್ಮವಿತ್ತಿದ್ದೇನಲ್ಲ! ಕೋಪರಹಿತನಾದ, ನಿರುತ್ಸಾಹಿಯಾದ, ನಿರ್ವೀರ್ಯನಾದ, ಶತ್ರುಗಳನ್ನು ಸಂತೋಷಗೊಳಿಸುವ ಇಂತಹ ಪುತ್ರನನ್ನು ಯಾವ ಸೀಮಂತಿನಿಯೂ ಪ್ರಸವಿಸದಿರಲಿ. ಧೂಮಪ್ರಾಯನಾಗಬೇಡ! ಅಗ್ನಿಯಂತೆ ಪ್ರಜ್ಚಲಿಸು! ಶತ್ರುಗಳನ್ನು ಆಕ್ರಮಿಸಿ ನಾಶಪಡಿಸು. ಮುಹೂರ್ತವಾಗಲೀ ಕ್ಷಣವಾಗಲೀ ಅಮಿತ್ರರ ನೆತ್ತಿಯನ್ನು ಸುಡು. ಯಾರಲ್ಲಿ ಕೋಪವಿದೆಯೋ ಯಾರು ಅಕ್ಷಮಿಯೋ ಅವನೇ ಪುರುಷ. ಕ್ಷಮೆಯಿರುವವನು, ಸಿಟ್ಟಿಲ್ಲದಿರುವವನು ಸ್ತ್ರೀಯೂ ಅಲ್ಲ ಪುರುಷನೂ ಅಲ್ಲ. ಅಲ್ಪ ಸಂತುಷ್ಟಿ, ದಯೆ, ಉದ್ಯೋಗಶೂನ್ಯತೆ, ಮತ್ತು ಭಯ ಇವು ಸಂಪತ್ತನ್ನು ನಾಶಗೊಳಿಸುತ್ತವೆ. ನಿರಪೇಕ್ಷನು ಇಲ್ಲಿ ಮತ್ತು ನಂತರ ಎರಡರಲ್ಲೂ ಮಹಾ ಉಚ್ಛಸ್ಥಾನಗಳನ್ನು ಪಡೆಯಲಾರನು. ಈ ಪರಾಭವಗೊಳಿಸುವ ಪಾಪಗಳನ್ನು ನಿನ್ನಿಂದ ನೀನೇ ತೆಗೆದುಹಾಕು. ಹೃದಯವನ್ನು ಕಬ್ಬಿಣವನಾಗಿಸಿಕೊಂಡು ನಿನ್ನದನ್ನು ಪುನಃ ಸಂಪಾದಿಸು. ಪುರವನ್ನು ಎದುರಿಸಿ ನಿಲ್ಲುತ್ತಾನೆ ಎನ್ನುವುದರಿಂದಲೇ ಪುರುಷ ಎಂದು ಕರೆಯಲ್ಪಡುತ್ತಾನೆ. ಸ್ತ್ರೀಯಂತೆ ಜೀವಿಸುವವರಿಗೆ ಈ ಹೆಸರು ವ್ಯರ್ಥವೆಂದು ಹೇಳುತ್ತಾರೆ. ಸುಸ್ಥಿರ ವೀರಪರಾಕ್ರಮವುಳ್ಳ ಸಿಂಹವಿಗ್ರಂತಗಾಮಿ ಶೂರನು ಒಂದು ವೇಳೆ ಯುದ್ಧಮಾಡುತ್ತಾ ಪ್ರಾಣತೊರೆದರೂ ಅವನ ಪ್ರಜೆಗಳು ಸುಖವಾಗಿರುತ್ತಾರೆ. ಯಾರು ತನಗೆ ಪ್ರಿಯವಾದುದನ್ನು ಮತ್ತು ಸುಖವಾದುದನ್ನು ತೊರೆದು ಸಂಪತ್ತನ್ನು ಅರಸಿ ಪ್ರಯತ್ನಿಸುತ್ತಾನೋ ಅವನು ಶೀಘ್ರದಲ್ಲಿಯೇ ತನ್ನ ಅಮಾತ್ಯರಿಗೆ ಹರ್ಷವನ್ನುಂಟುಮಾಡುತ್ತಾನೆ.”
ಪುತ್ರನು ಹೇಳಿದನು: “ನಾನು ಸತ್ತು ಹೋದರೆ ಈ ಪೃಥ್ವಿ, ಎಲ್ಲವೂ ಏನಕ್ಕೆ ಬೇಕು? ಆಭರಣ, ಭೋಗ, ಜೀವಿತ, ಕೃತ್ಯಗಳೇಕೆ?”
ಮಾತೆಯು ಹೇಳಿದಳು: “ಇಂದೇ ಏಕೆ ಮಾಡುವುದು ಎನ್ನುವವರ ಲೋಕವನ್ನು ನಮ್ಮ ವೈರಿಗಳು ಪಡೆಯಲಿ. ಧೃತಾತ್ಮರ ಲೋಕಗಳನ್ನು ನಮ್ಮ ಸುಹೃದಯರು ಪಡೆಯಲಿ. ಸೇವಕರಿಲ್ಲದೇ ಜೀವಿಸುವವರ, ಪರಾನ್ನದಿಂದಲೇ ಉಪಜೀವಿಸುವವರ, ಕೃಪಣರ, ಅಸತ್ತ್ವರ ವೃತ್ತಿಯನ್ನು ಅನುಸರಿಸಬೇಡ. ಮಗೂ! ದೇವತೆಗಳು ಶತಕ್ರತುವನ್ನು ಮತ್ತು ಭೂತಗಳು ಮಳೆಯನ್ನು ಹೇಗೋ ಹಾಗೆ ಬ್ರಾಹ್ಮಣರು ಮತ್ತು ಸುಹೃದಯರು ನಿನ್ನನ್ನು ಅವಲಂಬಿಸಿ ಜೀವಿಸಲಿ. ಸಂಜಯ! ಪಕ್ವ ಹಣ್ಣುಗಳಿಂದ ಕೂಡಿದ ವೃಕ್ಷದಬಳಿ ಹೋಗುವಂತೆ ಯಾವ ಪುರುಷನ ಆಶ್ರಯದಲ್ಲಿ ಸರ್ವಭೂತಗಳೂ ಇರುವವೋ ಅಂತಹವನ ರಾಜ್ಯವು ಅರ್ಥವತ್ತಾಗಿರುತ್ತದೆ. ಶಕ್ರನ ವಿಕ್ರಾಂತವನ್ನು ಆಶ್ರಯಿಸಿ ತ್ರಿದಶರು ಹೇಗೋ ಹಾಗೆ ಯಾವ ಶೂರನ ವಿಕ್ರಾಂತವನ್ನಾಶ್ರಯಿಸಿ ಬಾಂಧವರು ಸುಖಿಗಳಾಗಿರುತ್ತಾರೋ ಅವನ ಜೀವನವೇ ಅರ್ಥವತ್ತಾಗಿರುತ್ತದೆ. ಸ್ವಬಲವನ್ನಾಶ್ರಯಿಸಿ ಯಾವ ಮಾನವನು ಇನ್ನೊಬ್ಬರಿಗೂ ಆಶ್ರಯವನ್ನು ನೀಡುತ್ತಾನೋ ಅವನು ಲೋಕದಲ್ಲಿ ಕೀರ್ತಿಯನ್ನೂ ಪರದಲ್ಲಿ ಶುಭಗತಿಯನ್ನೂ ಪಡೆಯುತ್ತಾರೆ.
“ಈಗ ಈ ಅವಸ್ಥೆಯಲ್ಲಿ ಪೌರುಷವನ್ನು ತ್ಯಜಿಸಲು ಇಚ್ಛಿಸಿದರೆ ಬೇಗನೇ ನೀನು ಹೀನಪುರುಷರ ಮಾರ್ಗದಲ್ಲಿ ಹೋಗುತ್ತೀಯೆ. ಯಾವ ಕ್ಷತ್ರಿಯನು ಜೀವಿಸಿರಬೇಕೆಂಬ ಒಂದೇ ಆಶಯದಿಂದ ಶಕ್ತಿ ಮೀರಿ ತನ್ನ ಪರಾಕ್ರಮವನ್ನು ಪ್ರದರ್ಶಿಸಿ ಹೋರಾಡುವುದಿಲ್ಲವೋ ಅವನನ್ನು ಕಣ್ಣನೆಂದೇ ತಿಳಿಯುತ್ತಾರೆ. ಸಾಯಲು ಸಿದ್ಧನಾಗಿರುವವನಿಗೆ ಔಷಧಗಳು ಹೇಗೆ ಪರಿಣಾಮವನ್ನುಂಟುಮಾಡುವುದಿಲ್ಲವೋ ಹಗೆ ನಾನು ಹೇಳುತ್ತಿರುವ ಈ ಯತಾರ್ಥವಾದ ಗುಣವಂತ ಮಾತುಗಳು ನಿನಗೆ ತಾಗುತ್ತಿಲ್ಲ. ಸಿಂಧುರಾಜನಲ್ಲಿ ಸಂತುಷ್ಟರಾಗಿರದ ಬಹಳ ಜನರಿದ್ದಾರೆ. ಆದರೆ ನಿನ್ನ ದೌರ್ಬಲ್ಯದಿಂದಾಗಿ ಏನೂ ಮಾಡಲು ತಿಳಿಯದೇ ನಿರೀಕ್ಷಿಸುತ್ತಿದ್ದಾರೆ. ನಿನ್ನ ಪೌರುಷವನ್ನು ನೋಡಿ ನಂತರ ಹಲವು ಕಡೆಗಳಿಂದ ನಿನಗೆ ಸಹಾಯವನ್ನು ನೀಡಿ ಅವನೊಂದಿಗೆ ಶತ್ರುತ್ವವನ್ನು ಕಟ್ಟಿಕೊಳ್ಳಬಹುದು. ಅವರೊಡನೆ ನೀನು ಸಂಧಿಯನ್ನು ಮಾಡಿಕೊಂಡು ಅವನಿಗೆ ವಿಪತ್ತು ಒದಗುವ ಕಾಲವನ್ನು ಕಾಯುತ್ತಾ ರಹಸ್ಯವಾಗಿ ಗಿರಿದುರ್ಗಾಲಯಗಳಲ್ಲಿ ಸಂಚರಿಸುತ್ತಿರಬೇಕು. “ಸಂಜಯ” ಎಂಬ ಹೆಸರನ್ನು ನಿನಗಿಟ್ಟಿದ್ದೀವೆ. ಆದರೆ ಅದನ್ನೇ ನಾನು ನಿನ್ನಲ್ಲಿ ಕಾಣದವಳಾಗಿದ್ದೇನೆ. ಮಗೂ! ನಿನ್ನ ಅನ್ವರ್ಥನಾಮನಾಗು. ವ್ಯರ್ಥನಾಮಕನಾಗಬೇಡ. ಹಿಂದೆ ನೀನಿನ್ನೂ ಬಾಲಕನಾಗಿದ್ದಾಗ ಶುಭಲೋಚನ ಮಹಾಪ್ರಾಜ್ಞ ಬ್ರಾಹ್ಮಣನೋರ್ವನು ನಿನ್ನನ್ನು ನೋಡಿ ಇವನು ಮುಂದೆ ಮಹಾ ಕಷ್ಟವನ್ನು ಅನುಭವಿಸಿ ನಂತರ ವೃದ್ಧಿಯನ್ನು ಪಡೆಯುತ್ತಾನೆ ಎಂದು ಹೇಳಿದ್ದನು. ಅವನ ಮಾತನ್ನು ಸ್ಮರಿಸಿಕೊಂಡು ನಿನ್ನ ವಿಜಯವನ್ನು ಆಶಿಸುತ್ತಿದ್ದೇನೆ. ಆದುದರಿಂದ ಮಗೂ! ನಿನಗೆ ಪುನಃ ಪುನಃ ಹೇಳುತ್ತಿದ್ದೇನೆ. ಯಾರ ಅರ್ಥಸಿದ್ಧಿಯಲ್ಲಿ ಇತರರೂ ಸಂತುಷ್ಟರಾಗುತ್ತಾರೆಯೋ ಮತ್ತೂ ತಾನೂ ಔನ್ನತ್ಯವನ್ನು ಹೊಂದುತ್ತಾನೋ ಅಂತಹ ನೀತಿಶಾಸ್ತ್ರಾನುಸಾರವಾದ ಅರ್ಥಸಿದ್ಧಿಗೆ ಪ್ರಯತ್ನಿಸುವವನ ಅಭೀಷ್ಟಗಳು ಸಿದ್ಧಿಯಾಗುತ್ತವೆ. ಸಂಜಯ! ನನಗೆ ಮತ್ತು ಪೂರ್ವಜರಿಗೆ ಸಮೃದ್ಧಿಯಾಗಲಿ ಅಥವಾ ಸಮೃದ್ಧಿಯಾಗಲೀ ಯುದ್ಧಮಾಡುವುದೇ ಧರ್ಮವೆಂದು ತಿಳಿದು ಯುದ್ಧಮಾಡು. ನಿಲ್ಲಿಸಬೇಡ! ಇಂದಿನ ಮತ್ತು ಬೆಳಗಿನ ಊಟವು ಕಾಣುವುದಿಲ್ಲವೆಂದರೆ ಅದಕ್ಕಿಂತಲೂ ಪಾಪಿ ಅವಸ್ಥೆಯು ಬೇರೊಂದಿಲ್ಲ ಎಂದು ಶಂಬರನು ಹೇಳಿದ್ದಾನೆ. ಪತಿ ಮತ್ತು ಪುತ್ರರ ವಧೆಗಿಂತಲೂ ಹೆಚ್ಚಿನ ದುಃಖವಿದೆಂದು ಹೇಳಲಾಗಿದೆ. ದಾರಿದ್ರ್ಯವೆಂದು ಯಾವುದಕ್ಕೆ ಹೇಳುತ್ತೇವೋ ಅದರ ಪರ್ಯಾಯವಾದುದೇ ಮರಣ. ನಾನು ಮಹಾಕುಲದಲ್ಲಿ ಹುಟ್ಟಿದವಳು - ಒಂದು ಸರೋವರದಿಂದ ಇನ್ನೊಂದಕ್ಕೆ ಹೋಗುವ ಕಮಲದಂತೆ ಸರ್ವಕಲ್ಯಾಣಯುಕ್ತವಾದ ಪರಮ ಪೂಜಿತ ಪತಿಯಲ್ಲಿ ಬಂದಿರುವವಳು. ಹಿಂದೆ ಮಹಾರ್ಹವಾದ ಮಾಲ್ಯಾಂಬರ ಆಭರಣಗಳನ್ನೂ, ಸುಮೃಷ್ಟವಾದ ಸುಂದರ ವಸ್ತ್ರಗಳನ್ನೂ ನೋಡಿ ನಾನು ಸುಹೃದ್ವರ್ಗಗಳಲ್ಲಿ ಕಷ್ಟಗಳನ್ನೇ ನೋಡಿರಲಿಲ್ಲ. ಸಂಜಯ! ಯಾವಾಗ ತುಂಬಾ ದುರ್ಬಲರಾಗಿರುವ ನನ್ನನ್ನು ಮತ್ತು ನಿನ್ನ ಭಾರ್ಯೆಯನ್ನು ನೋಡುವೆಯೋ ಆಗ ನಿನಗೆ ನನ್ನ ಬದುಕಿಗೆ ಅರ್ಥವಿಲ್ಲ ಎಂದಾಗುತ್ತದೆ. ದಾಸರು, ಕೆಲಸಗಾರರು, ಸೇವಕರು, ಆಚಾರ್ಯರು, ಋತ್ವಿಕರು, ಪುರೋಹಿತರು ನಮ್ಮನ್ನು ಬಿಟ್ಟು ಹೋಗುತ್ತಾರೆ. ಅದನ್ನು ನೋಡಿಯೂ ನೀನು ಜೀವಿಸಿದ್ದೇನು ಫಲ? ಹಿಂದಿನಂತೆಯೇ ಇಂದು ನೀನು ಶ್ಲಾಘನೀಯ ಯಶಸ್ಕರವಾದುದನ್ನು ಮಾಡುವುದನ್ನು ನಾನು ನೋಡದಿದ್ದರೆ ನನ್ನ ಹೃದಯಕ್ಕೆ ಶಾಂತಿಯೆಲ್ಲಿಂದ? ಇಲ್ಲ ಎಂದು ಬ್ರಾಹ್ಮಣನಿಗೆ ಹೇಳಲು ನನ್ನ ಹೃದಯವು ಸೀಳಿಹೋಗುತ್ತದೆ. ಬ್ರಾಹ್ಮಣರಿಗೆ ಇಲ್ಲವೆಂದು ನನ್ನ ಪತಿಯು ಎಂದೂ ಹೇಳಿರಲಿಲ್ಲ. ಆಶ್ರಯವನ್ನಿತ್ತಿದ್ದ ನಾವು ಈಗ ಪರರ ಆಶ್ರಯದಲ್ಲಿ ಇರುವವರಲ್ಲ. ಇನ್ನೊಬ್ಬರನ್ನು ಆಶ್ರಯಿಸಿ ಜೀವಿಸಬೇಕಾಗಿ ಬಂದರೆ ಜೀವವನ್ನು ಬಿಡುತ್ತೇನೆ. ಪಾರವೇ ಇಲ್ಲದವಳಿಗೆ ಪಾರವಾಗು. ನಕೆಯೇ ಇಲ್ಲದವಳಿಗೆ ನೌಕೆಯಾಗು. ಅಸ್ಥಾನಗೊಂಡಿರುವವರಿಗೆ ಸ್ಥಾನಮಾಡಿಕೊಡು. ಮೃತರಾಗುವವರಿಗೆ ಸಂಜೀವನಿಯಾಗು. ಜೀವಿಸಿರಲು ಇಚ್ಛಿಸದೇ ಹೋರಾಡಿದರೆ ನೀನು ಸರ್ವ ಶತ್ರುಗಳನ್ನೂ ಜಯಿಸಬಲ್ಲೆ. ಈ ರೀತಿಯಲ್ಲಿ ಹೇಡಿಯಂತೆ ನಡೆದುಕೊಳ್ಳುತ್ತೀಯಾದರೆ ಈಗಲೇ ಜೀವವನ್ನು ಬಿಟ್ಟುಬಿಡು. ನಿರ್ವಿಣ್ಣನಾಗಿ ಹತಮನಸ್ಕನಾಗಿದ್ದರೆ ಈ ಪಾಪಜೀವಕವನ್ನು ಬಿಟ್ಟುಬಿಡು. ಒಬ್ಬನೇ ಶತ್ರುವನ್ನು ಕೊಲ್ಲುವುದರಿಂದಲೂ ಶೂರನೆಂದು ಖ್ಯಾತಿ ಹೊಂದುತ್ತಾರೆ. ಇಂದ್ರನು ವೃತ್ರನೊಬ್ಬನ ವಧೆಯಿಂದಾಗಿ ಮಹೇಂದ್ರನೆಂದೆನಿಸಿಕೊಂಡನು. ಮಾಹೇಂದ್ರ ಗೃಹವನ್ನೂ ಪಡೆದನು ಮತ್ತು ಲೋಕಗಳ ಈಶ್ವರನೂ ಆದನು. ಶ್ರೇಷ್ಠ ಪುರುಷನು ಹೆಸರನ್ನು ಹೇಳಿ ಯುದ್ಧದಲ್ಲಿ ಶತ್ರುವನ್ನು ಕರೆದು ಕವಚ ಧರಿಸಿ ಸೇನಾಗ್ರದಲ್ಲಿರುವವರನ್ನು ಓಡಿಸಬೇಕು ಅಥವಾ ಕೊಲ್ಲಬೇಕು. ಉತ್ತಮ ಯುದ್ಧದಿಂದ ವೀರನು ಯಾವ ಮಹಾಯಶಸ್ಸನ್ನು ಪಡೆಯುತ್ತಾನೋ ಅದರಿಂದಲೇ ಶತ್ರುಗಳು ದುಃಖಿತರಾಗುತ್ತಾರೆ ಮತ್ತು ತಲೆತಗ್ಗಿಸುತ್ತಾರೆ. ಪ್ರಾಣದ ಹಂಗನ್ನು ತೊರೆದು ರಣದಲ್ಲಿ ದಕ್ಷನಾದ ಶೂರನನ್ನು ಕಾಪುರುಷ ಮುತ್ತು ಅವಶ ಜನರು ಸರ್ವಕಾಮ ಸಮೃದ್ಧಿಗಳಿಂದ ತೃಪ್ತಿಪಡಿಸುತ್ತಾರೆ. ರಾಜ್ಯವನ್ನು ಹಿಂದೆ ತೆಗೆದುಕೊಳ್ಳುವುದು ತುಂಬಾ ಕಷ್ಟವೆಂದೆನಿಸಬಹುದು. ಜೀವವುಳಿಯುವ ಸಂಶಯವೂ ಇರಬಹುದು. ಆದರೆ ತಿಳಿದವರು ಸಿಕ್ಕಿದ ಶತ್ರುವನ್ನು ನಿಃಶೇಷ ಮಾಡುತ್ತಾರೆ. ಯುದ್ಧವು ಸ್ವರ್ಗದ ದ್ವಾರದಂತೆ. ರಾಜ್ಯವನ್ನೂ ಕೊಡುವಂಥಹುದು. ಇದನ್ನು ತಿಳಿದುಕೊಂಡು ಉರಿಯುವ ಕೊಳ್ಳಿಯಂತೆ ಶತ್ರುಗಳ ಮೇಲೆ ಬೀಳು. ರಾಜನ್! ರಣದಲ್ಲಿ ಶತ್ರುಗಳನ್ನು ಕೊಂದು ಸ್ವಧರ್ಮವನ್ನು ಪಾಲಿಸು. ನೀನು ಕೃಪಣನಾಗಿ ಮಲಗಿರುವುದನ್ನು ಮತ್ತು ಶತ್ರುಗಳು ಶ್ರೀಮಂತರಾಗಿರುವುದನ್ನು ನಾನು ಎಂದೂ ನೋಡಲಾರೆನು. ನಾವು ಇಲ್ಲಿ ಶೋಕಿಸುತ್ತಿದ್ದರೆ ಅಲ್ಲಿ ವೈರಿಗಳು ಆವೃತರಾಗಿ ಆನಂದಿಸುತ್ತಿದ್ದಾರೆ. ದೀನನಗಿ ದೀನಾವಸ್ಥೆಯಲ್ಲಿರುವ ನಿನ್ನನ್ನು ನಾವು ನೋಡಲಾರೆವು. ಹಿಂದಿನಂತೆ ಸೌವೀರಕನ್ಯೆಯರ ಶ್ಲಾಘನೆಗೆ ಏಳು. ಸೈಂಧವಕನ್ಯೆಯರ ವಶನಾಗಬೇಡ. ಯೌವನ, ರೂಪ, ವಿದ್ಯೆ, ಮಿತ್ರರಿಂದ ಸಂಪನ್ನನಾಗಿದ್ದೀಯೆ. ಯಶಸ್ವಿ ಮತ್ತು ಲೋಕವಿಶ್ರುತನಾಗಿರುವ ನೀನು ಭಾರವನ್ನು ಹೊರಬೇಕದ ಸಮಯದಲ್ಲಿ ಎತ್ತು ನೊಗದಿಂದ ನುಣಚಿಕೊಳ್ಳುವಂತೆ ಏನೂ ಮಾಡದೇ ಕುಳಿತಿರುವೆಯಲ್ಲ! ಇದು ನಿನ್ನ ಮರಣವೆಂದೇ ತಿಳಿದುಕೊಳ್ಳುತ್ತೇನೆ. ನೀನು ಶತ್ರುಗಳ ಹೊಗಳುಭಟ್ಟನಾಗಿ, ಅವರ ಶುಶ್ರೂಷೆ ಮಾಡುವುದನ್ನೂ, ಹಿಂದೆ ಹೋಗುವುದನ್ನೂ ನೋಡಿದರೆ ನನ್ನ ಹೃದಯಕ್ಕೆ ಶಾಂತಿ ಎಲ್ಲಿಂದ? ಮಗೂ! ಇನ್ನೊಬ್ಬರ ಅನುಚರನಾಗಿ ಅವರ ಸೇವೆ ಮಾಡಿಕೊಂಡಿರುವವನು ನಮ್ಮ ಕುಲದಲ್ಲಿ ಎಂದೂ ಹುಟ್ಟಿಲ್ಲ. ಹೀಗಿರುವಾಗ ನೀನು ಪರರನ್ನು ಆಧರಿಸಿ ಜೀವಿಸಬಾರದು. ಪರಿಶಾಶ್ವತವಾಗಿರುವ, ಪೂರ್ವಜರು, ಅದಕ್ಕೂ ಪೂರ್ವಜರು, ಇತರರು, ಬೇರೆಯವರು ಹೇಳಿದ ಕ್ಷತ್ರಹೃದಯವನ್ನು ನಾನು ತಿಳಿದುಕೊಂಡಿದ್ದೇನೆ. ಇಲ್ಲಿ ಕ್ಷತ್ರಿಯನಾಗಿ ಜನಿಸಿದ, ಕ್ಷತ್ರಧರ್ಮವನ್ನು ತಿಳಿದುಕೊಂಡಿರುವ ಯಾರೂ ಎಂದೂ ಭಯದಿಂದ ಅಥವಾ ಜೀವವುಳಿಸಿಕೊಳ್ಳಲು ಬೇರೊಬ್ಬನ ಮುಂದೆ ತಲೆತಗ್ಗಿಸಬಾರದು. ವಿಜಯಕ್ಕೆ ಪ್ರಯತ್ನಿಸುತ್ತಲೇ ಇರಬೇಕು. ಎಂದೂ ಶರಣಾಗತನಾಗಬಾರದು. ಉದ್ಯಮವೇ ಪೌರುಷ. ಮಧ್ಯದಲ್ಲಿ ತುಂಟಾದರೂ ಸರಿ. ಎಂದೂ ಬಗ್ಗಬಾರದು. ಸಂಜಯ! ಮದಿಸಿದ ಆನೆಯಂತೆ ಸರ್ವತ್ರ ಭಯರಹಿತನಾಗಿ ಸುತ್ತಾಡುತ್ತಿರಬೇಕು. ಬ್ರಾಹ್ಮಣರಿಗೆ ಮತ್ತು ಧರ್ಮಕ್ಕೆ ಮಾತ್ರ ಸದಾ ಸಮಸ್ಕರಿಸಬೇಕು. ಇನ್ನೊಬ್ಬರ ಸಹಾಯವಿರಲೀ ಅಥವಾ ಇಲ್ಲದಿರಲಿ, ಎಲ್ಲಿಯವರೆಗೆ ಜೀವವಿದೆಯೋ ಅಲ್ಲಿಯವರೆಗೆ ವರ್ಣಧರ್ಮದಲ್ಲಿ ನಿರತರಾಗಿರುವಂತೆ ಸರ್ವ ದುಷ್ಕೃತರನ್ನೂ ನಿಗ್ರಹಿಸುತ್ತಾ ಇರಬೇಕು.”
ಮಗನು ಹೇಳಿದನು: “ಮಾತಾ! ನನ್ನೊಡನೆ ಈ ರೀತಿ ಕರುಣೆಯಿಲ್ಲದೇ ವೈರಬುದ್ಧಿಯಿಂದ ಕ್ರೂರವಾಗಿ ಮಾತನಾಡುತ್ತಿರುವೆ ಎಂದರೆ ನಿನ್ನ ಹೃದಯವು ಕಬ್ಬಿಣದ ಗುಂಡಿನಿಂದ ಮಾಡಿದ್ದಾಗಿರಬೇಕು. ಅಯ್ಯೋ! ನಾನೊಬ್ಬ ಬೇರೆಯವನೆಂಬಂತೆ ಈ ಕ್ಷತ್ರಸಮಾಚಾರಗಳನ್ನು, ಒಬ್ಬನೇ ಮಗನನ್ನು ಹೊಂದಿರುವ ನೀನು ಹೇಳುತ್ತಿದ್ದೀಯೆ! ನಾನೇ ಕಾಣದ ನಿನಗೆ ಈ ಸರ್ವ ಪೃಥ್ವಿಯಾದರೂ ಏಕೆ? ನಿನಗೆ ಆಭರಣಗಳು ಏಕೆ? ಭೋಗಜೀವನವಾದರೂ ಏಕೆ?”
ಮಾತೆಯು ಹೇಳಿದಳು: “ಸಂಜಯ! ಮಗೂ! ವಿದುಷರ ಸರ್ವ ಕಾರ್ಯಗಳೂ ಧರ್ಮಾರ್ಥಕಾರಣಗಳಿಂದಾಗಿ. ಈ ಸಮಯದಲ್ಲಿ ಅದನ್ನೇ ಪರಿಶೀಲಿಸಿ ನಾನು ನಿನ್ನನ್ನು ಪ್ರಚೋದಿಸುತ್ತಿದ್ದೇನೆ. ಸಮಯವು ಪ್ರಾಪ್ತವಾಗಿರುವಾಗಲೂ ನೀನು ಮುಖ್ಯವಾದ ಕೆಲಸವನ್ನು ಮಾಡದಿದ್ದರೆ, ಅಸ್ವಾಭಾವಿಕ ಬುದ್ಧಿಯನ್ನು ಹೊಂದಿ ಕುಳಿತಿರುವ ನೀನು ಶತ್ರುವಿನ ವಿಷಯದಲ್ಲಿ ಕ್ರೌರ್ಯದಿಂದ ವರ್ತಿಸದೇ ಇದ್ದರೆ ನಿನಗೆ ಸರ್ವತಃ ಅಪಯಶಸ್ಸು ಉಂಟಾಗುತ್ತದೆ. ಸಂಜಯ! ಇಂತಹ ಪರಿಸ್ಥಿತಿಯಲ್ಲಿ ನಾನೇನಾದರೂ ನಿನಗೆ ಸರಿಯಾದ ತಿಳುವಳಿಕೆಯನ್ನು ಕೊಡದಿದ್ದರೆ ನನಗೆ ನಿನ್ನಮೇಲಿರುವ ವಾತ್ಸಲ್ಯವನ್ನು ಗಾರ್ದಭಿ (ಹೆಣ್ಣುಕತ್ತೆ) ಯ ವಾತ್ಸಲ್ಯದಂತೆ ಸಾಮರ್ಥ್ಯರಹಿತವೂ ಅಕಾರಣವೂ ಎಂದು ಎನ್ನುತ್ತಾರೆ. ಮೂರ್ಖರಿಂದ ಸೇವಿಸಲ್ಪಡುವ ಮತ್ತು ಸತ್ಪುರುಷರಿಂದ ನಿಂದಿಸಲ್ಪಡುವ ಮಾರ್ಗವನ್ನು ಪರಿತ್ಯಜಿಸು. ಅವಿದ್ಯೆಯು ಮಹತ್ತರವಾದುದು. ಪ್ರಜೆಗಳು ಇದನ್ನೇ ಆಶ್ರಯಿಸಿರುತ್ತಾರೆ. ಸದ್ವಿದ್ಯವಿದೆಯೆಂದಾದರೆ, ಧರ್ಮಾರ್ಥಗುಣಗಳಿದ್ದರೆ, ದೈವ-ಮಾನುಷಯುಕ್ತನಾಗಿದ್ದರೆ, ಸತ್ಪುರುಷರ ಆಚರಣೆಯಲ್ಲಿದ್ದರೆ ಮಾತ್ರ ನೀನು ನನಗೆ ಪ್ರಿಯನಾಗುವೆ. ಅನ್ಯಥಾ ಇಲ್ಲ. ಯಾರು ಈ ರೀತಿ ಅವಿನೀತನಾಗಿರುವ ಮಗ ಅಥವ ಮೊಮ್ಮೊಗನೊಂದಿಗೆ ರಮಿಸುತ್ತಾನೋ ಅವನಿಗೆ ಪ್ರಜಾಫಲದ ಅನುತ್ಥ ಅವನತಗಳು ವ್ಯರ್ಥವಾಗುತ್ತವೆ. ಮಾಡಬೇಕಾದುದನ್ನು ಮಾಡದೇ ನಿಂದನೀಯವಾದವುಗಳನ್ನು ಮಾಡುವ ಪುರುಷಾಧಮರು ಇಲ್ಲಿಯೂ ಅಲ್ಲಿಯೂ ಸುಖವನ್ನು ಹೊಂದುವುದಿಲ್ಲ. ಸಂಜಯ! ಇಲ್ಲಿ ಕ್ಷತ್ರಿಯನು ಯುದ್ಧಕ್ಕಾಗಿ ಮತ್ತು ಜಯಕ್ಕಾಗಿ, ನಿತ್ಯವೂ ಕ್ರೂರ ಕರ್ಮಗಳನ್ನು ಮಾಡಿ ಪ್ರಜೆಗಳನ್ನು ಪರಿಪಾಲನೆ ಮಾಡಲೆಂದೇ ಸೃಷ್ಟಿಸಲ್ಪಟ್ಟಿದ್ದಾನೆ. ಜಯಗಳಿಸಿ ಅಥವಾ ವಧಿಸಲ್ಪಟ್ಟು ಅವನು ಇಂದ್ರಲೋಕವನ್ನು ಪಡೆಯುತ್ತಾನೆ. ಆದರೆ ಅಮಿತ್ರರನ್ನು ವಶಪಡಿಸಿಕೊಂಡು ಇಲ್ಲಿ ಕ್ಷತ್ರಿಯನು ಯಾವ ಸುಖವನ್ನು ಅನುಭವಿಸುತ್ತಾನೋ ಅದು ಪುಣ್ಯ ದಿವಿಯುಲ್ಲಿರುವ ಶಕ್ರಭವನದಲ್ಲಿಯೂ ದೊರೆಯುವುದಿಲ್ಲ. ಸಿಟ್ಟಿನಿಂದ ಉರಿಯುತ್ತಿರುವ ಮನಸ್ವಿ ಪುರುಷನು, ಬಹಳ ಬಾರಿ ಸೋಲಿಸಲ್ಪಟ್ಟಾಗ, ಶತ್ರುವನ್ನು ಪ್ರತಿಯಾಗಿ ಸೋಲಿಸಲು ಸಮಯ ಕಾಯಬೇಕು. ತನ್ನನ್ನೇ ಪರಿತ್ಯಜಿಸಿ ಅಥವಾ ಶತ್ರುವನ್ನು ಬೀಳಿಸದೇ ಇನ್ನು ಬೇರೆ ಯಾವ ರೀತಿಯಿಂದ ಶಾಂತಿ ದೊರೆಯಬಹುದು? ಪ್ರಾಜ್ಞ ಪುರುಷನು ಅಲ್ಪವಾದ ಏನನ್ನೂ ಇಷ್ಟಪಡುವುದಿಲ್ಲ. ಯಾರಿಗೆ ಲೋಕದಲ್ಲಿ ಸ್ವಲ್ಪವೇ ಪ್ರಿಯವಾಗುತ್ತದೆಯೋ ಆ ಸ್ವಲ್ಪವೇ ನಿಶ್ಚಿತವಾಗಿ ಅಪ್ರಿಯವೆನಿಸಿಕೊಳ್ಳುತ್ತದೆ. ಪ್ರಿಯವಾದುದರ ಅಭಾವದಿಂದ ಪುರುಷನು ಶೋಭಿಸುವುದಿಲ್ಲ. ಅಭಾವವಾದವುಗಳು ಬೇಕೆಂದು ಅವನು ನಿಶ್ಚಿತವಾಗಿ ಸಾಗರವನ್ನು ಹೊಗುವ ಗಂಗೆಯಂತೆ ಕಳೆದುಹೋಗುತ್ತಾನೆ.”
ಮಗನು ಹೇಳಿದನು: “ಅಮ್ಮಾ! ವಿಶೇಷವಾಗಿ ನಿನ್ನ ಮುಗನ ಎದಿರು ನಿನ್ನ ಮನಸ್ಸಿನಲ್ಲಿರುವ ಇದನ್ನು ಹೇಳಬಾರದು. ಜಡ ಮೂಕನಂತೆ ಇರುವವನನ್ನು ಕಾರುಣ್ಯದಿಂದ ನೋಡು.”
ಮಾತೆಯು ಹೇಳಿದಳು: “ಒಳ್ಳೆಯದು. ಇದನ್ನು ನೀನು ಹಾಗೆ ಕಾಣುತ್ತಿದ್ದೀಯೆ. ನನ್ನನ್ನು ಪ್ರಚೋದಿಸುತ್ತಿರುವ ನಿನ್ನನ್ನು ಇನ್ನೂ ಹೆಚ್ಚು ಪ್ರಚೋದಿಸುತ್ತೇನೆ. ಸರ್ವ ಸೈಂಧವರನ್ನು ಕೊಂದು ವಿಜಯಿಯಾದುದನ್ನು ನೋಡಿದ ನಂತರವೇ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ.”
ಮಗನು ಹೇಳಿದನು: “ಧನವಿಲ್ಲದೇ ಸಹಾಯವಿಲ್ಲದೇ ನನಗೆ ಜಯವು ಎಲ್ಲಿಂದ ಸಿಗಬೇಕು? ಕೆಟ್ಟ ಕೆಲಸವನ್ನು ಮಾಡಿದವನು ಸ್ವರ್ಗದಿಂದ ಹೇಗೆ ನಿವೃತ್ತನಾಗುತ್ತಾನೋ ಹಾಗೆ ನನ್ನ ಈ ದಾರುಣ ಅವಸ್ಥೆಯನ್ನು ನೋಡಿ ನಾನು ರಾಜ್ಯದ ಆಸೆಯಿಂದ ನಿವೃತ್ತನಾಗಿದ್ದೇನೆ. ಹೀಗಿರುವಾಗ ನೀನು ಯಾವ ಉಪಾಯವನ್ನು ಕಂಡಿರುವೆ? ಪ್ರರಿಣತಪ್ರಜ್ಞೇ! ಕೇಳುವ ನನಗೆ ಅದನ್ನು ಸಂಪೂರ್ಣವಾಗಿ ಹೇಳು. ನಿನ್ನ ಅನುಶಾಸನದಂತೆ ಅದೆಲ್ಲವನ್ನೂ ಮಾಡುತ್ತೇನೆ.”
ಮಾತೆಯು ಹೇಳಿದಳು: “ಮುಗೂ! ಸೋಲಿನ ಕುರಿತು ಮೊದಲೇ ಯೋಚಿಸಿ ನಿನ್ನನ್ನು ನೀನೇ ಅಪಮಾನಿಸಬೇಡ. ಇದರಿಂದ ಆಗಬಾರದು ಆಗುತ್ತದೆ. ಇದ್ದುದೂ ನಾಶವಾಗುತ್ತದೆ. ಉದ್ದೇಶಗಳನ್ನು ಕೋಪದಿಂದ ಅಥವಾ ಬಾಲಿಶರಾಗಿ ಪ್ರಯತ್ನಿಸಬಾರದು. ಮಗೂ! ಎಲ್ಲ ಕೆಲಸಗಳಲ್ಲಿ ಫಲಿತಾಂಶವು ಅನಿಶ್ಚಿತವಾದುದು. ಅನಿಶ್ಚಿತವೆಂದು ತಿಳಿದೂ ಜನರು ಕೆಲಸ ಮಾಡಿ ಕೆಲವೊಮ್ಮೆ ಯಶಸ್ವಿಯಾಗುತ್ತಾರೆ. ಕೆಲವೊಮ್ಮೆ ಯಶಸ್ವಿಯಾಗುವುದಿಲ್ಲ. ಆದರೆ ಏನೂ ಮಾಡದಿರುವವನಿಗೆ ಏನೂ ದೊರೆಯುವುದಿಲ್ಲ. ಇದೇ ಅದರ ಏಕೈಕ ಪರಿಣಾಮ. ಆದರೆ ತಾನು ಮಾಡಬೇಕಾದುದನ್ನು ಉತ್ಸಾಹದಿಂದ ಮಾಡಿ ಮುಗಿಸುವವನಿಗೆ ಎರಡು ಪರಿಣಾಮಗಳಾಗಬಹುದು: ಫಲವು ದೊರೆಯಬಹುದು ಅಥವಾ ದೊರೆಯದೇ ಇರಬಹುದು. ನೃಪಾತ್ಮಜ! ಯಾರಿಗೆ ಮೊದಲೇ ಫಲವು ಸರ್ವಥಾ ದೊರೆಯಲಾರದೆಂದು ತಿಳಿದಿರುತ್ತದೆಯೋ ಪ್ರತಿಕೂಲನ ಅಸಮೃದ್ಧಿಯನ್ನುಂಟುಮಾಡಲು ಪ್ರಯತ್ನಿಸಬೇಕು. ನಾನು ಪ್ರಾರಂಭಿಸುವ ಕಾರ್ಯವು ಸಿದ್ಧಿಯಾಗೇ ಆಗುತ್ತದೆ ಎಂಬ ದೃಢತೆಯಿಂದ ಶಂಕೆಗಳಿಲ್ಲದೆಯೇ ಉತ್ಸಾಹದಿಂದ ಏಳಬೇಕು, ಸಜ್ಜಾಗಬೇಕು ಮತ್ತು ಕೊನೆಯವರೆಗೆ ಕಾರ್ಯನಿರತನಾಗಿರಬೇಕು. ಪುತ್ರ! ದೇವ-ಬ್ರಾಹ್ಮಣರನ್ನು ಪೂಜಿಸಿ ಮಂಗಲಕಾರ್ಯಗಳನ್ನು ಪ್ರಾರಂಭಿಸುವ ಪ್ರಾಜ್ಞ ನೃಪತಿಗೆ ಶೀಘ್ರದಲ್ಲಿ ಉನ್ನತಿಯಾಗುತ್ತದೆ. ಪೂರ್ವದಿಕ್ಕಿನಲ್ಲಿರುವ ದಿವಾಕರನಂತೆ ಅವನ ಲಕ್ಷ್ಮಿಯು ವೃದ್ಧಿಯಾಗುತ್ತಾಳೆ. ನಿದರ್ಶನಗಳನ್ನು ನೀಡಿದ್ದೇನೆ. ಬಹಳ ಉಪಾಯಗಳನ್ನೂ ತೋರಿಸಿದ್ದೇನೆ. ಅನುದರ್ಶಿತ ರೂಪನಾಗಿರುವೆ. ಪೌರುಷವನ್ನು ಮಾಡಿ ತೋರಿಸು. ಪುರುಷಾರ್ಥವನ್ನು ಸಾಧಿಸಲು ನೀನು ಅರ್ಹನಾಗಿದ್ದೀಯೆ. ಶತ್ರುವಿನ ಕುರಿತು ಸಿಟ್ಟಾಗಿರುವ, ಅವರಿಂದಾಗಿ ಸರ್ವಸ್ವವನ್ನೂ ಕಳೆದುಕೊಂಡಿರುವ, ಗರ್ವಿತರಾಗಿರುವ, ಅವರಿಂದ ಅವಮಾನಿತರಾಗಿರುವ, ಅವರೊಂzದಿಗೆ ಸ್ಪರ್ಧಿಸುತ್ತಿರುವ ಯಾರೆಲ್ಲಾ ಇದ್ದಾರೋ ಅವರೆಲ್ಲರನ್ನೂ ಯುಕ್ತಿಯಿಂದ ಒಂದುಗೂಡಿಸು. ಈ ಪ್ರಕಾರದಲ್ಲಿ ನೀನು ಮಹಾ ಸೇನೆಯನ್ನು ಒಟ್ಟುಮಾಡಿದುದೇ ಆದರೆ ಮಹಾವೇಗದ ಭಿರುಗಾಳಿಯು ಮೋಡಗಳನ್ನು ಹೇಗೋ ಹಾಗೆ ಶತ್ರುಸೇನೆಗಳನ್ನು ಭೇದಿಸಬಲ್ಲೆ. ಮೊದ ಮೊದಲು ನೀನು ಅವರಿಗೆ ಅಗ್ರಸ್ಥಾನವನ್ನಿತ್ತು, ಎದ್ದೊಡನೆಯೇ ಅವರೊಂದಿಗೆ ಪ್ರಿಯ ಮಾತುಗಳನ್ನಾಡು. ಆಗ ಅವರು ನಿನಗೆ ಪ್ರಿಯವಾದುದನ್ನು ಮಾಡುವವರಲ್ಲದೇ ನಿನ್ನನ್ನು ನಾಯಕನನ್ನಾಗಿಯೂ ಸ್ವೀಕರಿಸುವುದು ನಿಶ್ಚಿತ. ಯಾವಾಗ ನಿನ್ನ ಶತ್ರುವು ಪ್ರಾಣವನ್ನೂ ತೊರೆಯಲು ಸಿದ್ಧನಾಗಿ ಇವನು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾನೆ ಎಂದು ತಿಳಿದುಕೊಳ್ಳುತ್ತಾನೆಯೋ ಆಗಲೇ ಅವನು ಮನೆಯಲ್ಲಿ ಸೇರಿಕೊಂಡಿರುವ ಸರ್ಪಕ್ಕೆ ಹೆದರುವಂತೆ ಉದ್ವಿಗ್ನನಾಗುತ್ತಾನೆ. ನಿನ್ನ ಪರಾಕ್ರಮವನ್ನು ತಿಳಿದು ಒಂದು ವೇಳೆ ನಿನ್ನನ್ನು ವಶಮಾಡಿಕೊಳ್ಳದೇ ಇದ್ದರೆ ನಿರ್ವಾದದಿಂದ ಅಥವಾ ನಿವೇದನೆಯಿಂದ ಕೊನೆಯಲ್ಲಿ ಅವನು ನಿನ್ನವನಾಗುತ್ತಾನೆ. ಸಂಧಿಯನ್ನು ಮಾಡಿಕೊಂಡರೆ ಧನವೃದ್ಧಿಯಾಗುತ್ತದೆ. ಧನವಂತನನ್ನು ಮಿತ್ರರು ಪ್ರೀತಿಸುತ್ತಾರೆ. ಆಶ್ರಯಿಸುತ್ತಾರೆ. ಮಗೂ! ಅರ್ಥವಿಹೀನನನ್ನು ಬಾಂಧವರು ತ್ಯಜಿಸುತ್ತಾರೆ. ಅವನನ್ನು ಯಾರೂ ಆಶ್ರಯಿಸುವುದಿಲ್ಲ. ಮತ್ತು ಅಂಥವನನ್ನು ಜುಗುಪ್ಸೆಯಿಂದ ಕಾಣುತ್ತಾರೆ. ಶತ್ರುವಿನ ಶತ್ರುವಿನೊಂದಿಗೆ ಸ್ನೇಹಬೆಳಸಿ ಅವನ ಸಹಾಯದಿಂದ ಕಳೆದುಕೊಂಡ ರಾಜ್ಯವನ್ನು ಪುನಃ ಪಡೆದುಕೊಳ್ಳಲು ಸಾಧ್ಯವಿದೆ.
“ರಾಜನಾದವನು ಎಂತಹುದೇ ಆಪತ್ತು ಬಂದರೂ ಎಂದೂ ಭಯಪಡಬಾರದು. ಒಂದುವೇಳೆ ಹೆದರಿದರೂ ಹೆದರಿದವನಂತೆ ನಡೆದುಕೊಳ್ಳಬಾರದು. ರಾಜನು ಹೆದರಿದುದನ್ನು ನೋಡಿ ಎಲ್ಲರೂ ಹೆದರುತ್ತಾರೆ. ರಾಷ್ಟ್ರ, ಸೇನೆ, ಮತ್ತು ಅಮಾತ್ಯರು ನಿನಗೆ ವಿರುದ್ಧವಾಗಿಯೇ ಮಾಡುತ್ತಾರೆ. ಕೆಲವರು ಶತ್ರುಗಳೊಡನೆ ಒಂದಾಗುತ್ತಾರೆ. ಇತರರು ರಾಜ್ಯವನ್ನು ತ್ಯಜಿಸುತ್ತಾರೆ. ಹಿಂದೆ ಅಪಮಾನಿತರಾದವರು ಅವನನ್ನು ಕೊಲ್ಲಲೂ ಪ್ರಯತ್ನಿಸುತ್ತಾರೆ. ಆದರೆ ಅತ್ಯಂತ ಆತ್ಮೀಯರಾದವರು ಮಾತ್ರ ಅವನ ಸೇವೆ ಮಾಡುತ್ತಿರುತ್ತಾರೆ. ಕಟ್ಟಿಹಾಕಿದ ಕರುವಿನೊಡನಿರುವ ಹಸುವಿನಂತೆ ಆ ಅಶಕ್ತರು ಒಳ್ಳೆಯದನ್ನೇ ಆಶಿಸುತ್ತಿರುತ್ತಾರೆ. ಶೋಕಿಸುವ ಬಾಂಧವರಂತೆ ಅವರೂ ಕೂಡ ಜೊತೆಗೆ ಶೋಕಿಸುತ್ತಾರೆ. ಅಂತಹ ಸುಹೃದಯರು, ಹಿಂದೆ ಗೌರವಿಸಲ್ಪಟ್ಟವರು, ನಿನಗೆ ಯಾರಾದರೂ ಇದ್ದಾರೆಯೇ? ಯಾರು ರಾಷ್ಟ್ರದ ಅಭಿಮಾನಿಗಳೋ, ಯಾರು ರಾಜನು ವ್ಯಸನದಲ್ಲಿರುವಾಗ ಸಹಾಯಮಾಡಲು ಬಯಸುತ್ತಾರೋ ಅಂಥಹ ಸುಹೃದಯುರನ್ನು ದೂರಮಾಡಬೇಡ. ಅವರೂ ನಿನ್ನನ್ನು ಅಗಲದಿರಲಿ. ನಿನ್ನ ಪ್ರಭಾವ, ಪೌರುಷ ಮತ್ತು ಬುದ್ಧಿಯನ್ನು ತಿಳಿದುಕೊಂಡೇ ದುರ್ಬಲನಂತಿರುವ ನಿನ್ನನ್ನು ಬಲವಂತನಾಗಿ ಎಬ್ಬಿಸಿ ಆಶ್ವಾಸನೆ ನೀಡುವುದಕ್ಕಾಗಿಯೇ ನಾನು ನಿನಗೆ ಈ ರೀತಿ ಮಾತನಾಡಿದೆ. ಸಂಜಯು! ನಾನು ಹೇಳಿದುದೆಲ್ಲವನ್ನೂ ಚೆನ್ನಾಗಿ ಅರ್ಥಮಾಡಿಕೊಂಡಿರುವೆಯಾದರೆ ನಿನ್ನ ಸೌಮ್ಯ ಸ್ವಭಾವವನ್ನು ಬದಲಾಯಿಸಿ ಜಯಕ್ಕಾಗಿ ಎದ್ದು ನಿಲ್ಲು! ನಮ್ಮಲ್ಲಿ ಇನ್ನೂ ಅಪಾರ ಧನವಿದೆ. ಅದು ನಿನಗೆ ತಿಳಿಯದು. ಬೇರೆಯಾರಿಗೂ ಅಲ್ಲದೇ ನನಗೊಬ್ಬಳಿಗೇ ತಿಳಿದಿರುವ ಅದನ್ನು ನಾನು ನಿನಗೆ ಕೊಡುತ್ತೇನೆ. ಸಂಜಯ! ವೀರ! ಒಬ್ಬರಲ್ಲ ನಿನ್ನ ನೂರಾರು ಸುಹೃದಯರು, ಸುಖ-ದುಃಖಗಳಲ್ಲಿ ಜೊತೆಗಿರುವ, ಯುದ್ಧದಿಂದ ಪಲಾಯನ ಮಾಡದಿರುವವರು ಇದ್ದಾರೆ. ಶತ್ರುಕರ್ಶನ! ನಿನ್ನ ಒಳಿತನ್ನೇ ಬಯಸುವ, ಯುದ್ಧಮಾಡಿಯಾದರೂ ನಿನ್ನ ಶತ್ರುವಿನಿಂದ ನಿನಗಿಷ್ಟವಾದುದನ್ನು ಕಿತ್ತು ತರಲು ಸಮುರ್ಥರಾದವರು ನಿನ್ನ ಸಚಿವರಾಗಬೇಕು.”
ಮಗನು ಹೇಳಿದನು: “ಸುಚಿತ್ರಾರ್ಥ ಪದಾಕ್ಷರಗಳಿಂದ ಕೂಡಿದ, ಕತ್ತಲೆಯನ್ನು ಕಳೆಯುವ ಈ ವಾಕ್ಯವನ್ನು ಕೇಳಿ ಯಾವ ಸ್ವಲ್ಪಚೇತಸನು ತಾನೇ ಮೇಲೇಳುವುದಿಲ್ಲ? ಶತ್ರುವೆಂಬ ನೀರಿನಲ್ಲಿ ಮುಳುಗಿ ಹೋಗಿರುವ ನನ್ನ ರಾಜ್ಯವನ್ನು ಉದ್ಧರಿಸಬೇಕು ಅಥವಾ ಯುದ್ಧರೂಪದ ಪ್ರಪಾತದಲ್ಲಿ ಬಿದ್ದು ಪ್ರಾಣವನ್ನು ನೀಗಬೇಕೆಂದು ಹೇಳಿ ನನಗೆ ಶಿಕ್ಷಕಿಯಾಗಿರುವೆ. ನಾನು ನಿನ್ನ ಮಾತನ್ನು ಅರ್ಥಮಾಡಿಕೊಂಡರೂ ಇನ್ನೂ ಹೆಚ್ಚು ಕೇಳುವ ಆಸೆಯಿಂದ ನೀನು ಹೇಳಿದುದಕ್ಕೆ ಮತ್ತೆ ಮತ್ತೆ ಏನಾದರೂ ವಿರೋಧವಾಗಿ ಮಾತನಾಡಿ ಸುಮ್ಮನಾಗುತ್ತಿದ್ದೆ. ಕಷ್ಟವನ್ನು ಅನುಭವಿಸಿದ್ದುದರಿಂದಲೇ ಅಮೃತೋಪಮವಾದ ಈ ಮಾತುಗಳನ್ನು ಕೇಳಲು ಅವಕಾಶವಾಯಿತು. ಕೇಳುತ್ತಿದ್ದರೂ ಇನ್ನಷ್ಟು ಕೇಳಬೇಕೆನ್ನಿಸುತ್ತದೆ. ಈಗ ನಾನು ಶತ್ರುಗಳ ದಮನಕ್ಕೂ ನಮ್ಮ ವಿಜಯಕ್ಕೂ ಬಾಂಧವರೊಡನೆ ಕಾರ್ಯಗತನಾಗುತ್ತೇನೆ.”
ಮಾತಿನ ಬಾಣಗಳಿಂದ ಚುಚ್ಚಲ್ಪಟ್ಟವನಾಗಿ ಚಾವಟಿಯಿಂದ ಹೊಡೆಯಲ್ಪಟ್ಟ ಉತ್ತಮ ಕುದುರೆಯಂತೆ ಅವನು ಅವಳು ಹೇಳಿದುದೆಲ್ಲವನ್ನೂ ಹಾಗೆಯೇ ಮಾಡಿದನು.
ಹೇಡಿಗಳಿಗೆ ಭಯಂಕರವೂ ಉತ್ತಮರಿಗೆ ತೇಜೋವರ್ಧನವೂ ಆದ ಇದನ್ನು ಶತ್ರುಪೀಡಿತನಾಗಿ ಹತಾಶನಾಗಿರುವ ರಾಜನಿಗೆ ಮಂತ್ರಿಗಳು ಹೇಳಬೇಕು. ಜಯ ಎಂಬ ಹೆಸರಿನ ಈ ಇತಿಹಾಸವನ್ನು ಜಯವನ್ನು ಬಯಸುವವರು ಕೇಳಬೇಕು. ಇದನ್ನು ಕೇಳಿ ಮಹಿಯನ್ನು ಜಯಿಸುತ್ತಾನೆ ಮತ್ತು ಬೇಗನೇ ಶತ್ರುಗಳನ್ನು ಮರ್ದಿಸುತ್ತಾನೆ. ಗರ್ಭಿಣಿಯರು ಇದನ್ನು ಕೇಳಿದರೆ ವೀರ ಗಂಡುಮಕ್ಕಳನ್ನು ಪಡೆಯುತ್ತಾರೆ. ಸಾಮಾನ್ಯರು ಕೇಳಿದರೂ ವೀರರಾಗುತ್ತಾರೆ ಎನ್ನುವುದು ನಿಶ್ಚಯ. ಗರ್ಭಿಣಿ ಕ್ಷತ್ರಿಣಿಯು ಇದನ್ನು ಕೇಳಿದರೆ ವಿದ್ಯಾಶೂರ, ತಪಃಶೂರ, ದಮಶೂರ, ತಪಸ್ವಿನಿ, ಬ್ರಾಹ್ಮ್ಯದಿಂದ ಶ್ರೀಯಿಂದ ಬೆಳಗುವ, ಸಾಧುವಾದದಿಂದ ಸಮ್ಮತನಾಗಿರುವ, ಪ್ರಕಾಶಮಾನನಾದ, ಬಲೋಪೇತನಾದ, ಮಹಾಭಾಗ, ಮಹಾರಥ, ಧೃಷ್ಟವಂತ, ಅನಾಧೃಷ್ಠ, ಜೇತಾರ, ಅಪರಾಜಿತ, ದುಷ್ಟರ ನಿಯಂತಾರ, ಧರ್ಮಚಾರಿಗಳ ಗೋಪ್ತಾರ, ವೀರ, ಸತ್ಯಪರಾಕ್ರಮಿಗೆ ಜನ್ಮ ನೀಡುತ್ತಾಳೆ.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ