ಶಂಖ-ಲಿಖಿತೋಽಪಖ್ಯಾನ
ಸಂಯತವ್ರತರಾಗಿದ್ದ ಶಂಖ ಮತ್ತು ಲಿಖಿತ ಎನ್ನುವ ಸಹೋದರರಿದ್ದರು. ಅವರಿಗೆ ಬಾಹುದಾನದಿಯ ತೀರದಲ್ಲಿ ನಿತ್ಯಪುಷ್ಪ-ಫಲಗಳ ವೃಕ್ಷಗಳಿಂದ ತುಂಬಿದ್ದ ರಮಣೀಯವಾದ ಪ್ರತ್ಯೇಕ ಆಶ್ರಮಗಳಿದ್ದವು. ಹೀಗಿರಲು ಒಮ್ಮೆ ಲಿಖಿತನು ಶಂಖನ ಆಶ್ರಮಕ್ಕೆ ಬಂದನು. ಅಕಸ್ಮಾತ್ತಾಗಿ ಅದೇ ಸಮದಲ್ಲಿ ಶಂಖನು ಆಶ್ರಮದ ಹೊರಗೆ ಹೋಗಿದ್ದನು. ಅಣ್ಣ ಶಂಖನ ಆಶ್ರಮಕ್ಕೆ ಬಂದು ಲಿಖಿತನು ಅಲ್ಲಿ ಚೆನ್ನಾಗಿ ಹಣ್ಣಾಗಿದ್ದ ಫಲಗಳನ್ನು ವೃಕ್ಷದಿಂದ ಕೆಳಕ್ಕೆ ಬೀಳಿಸಿದನು. ಅವುಗಳನ್ನು ಒಟ್ಟುಹಾಕಿ ಒಂದೆಡೆಯಲ್ಲಿ ಕುಳಿದು ಆ ದ್ವಿಜನು ನಿಶ್ಚಿಂತೆಯಿಂದ ತಿನ್ನುತ್ತಿದ್ದನು. ಅವುಗಳನ್ನು ತಿನ್ನುತ್ತಿರುವಾಗಲೇ ಶಂಖನು ಆಶ್ರಮಕ್ಕೆ ಹಿಂದಿರುಗಿದನು. ಹಣ್ಣುಗಳನ್ನು ತಿನ್ನುತ್ತಿರುವ ಅವನನ್ನು ನೋಡಿ ಶಂಖನು “ಈ ಹಣ್ಣುಗಳು ಎಲ್ಲಿ ದೊರಕಿದವು? ಏಕೆ ಇವುಗಳನ್ನು ತಿನ್ನುತ್ತಿರುವೆ?” ಎಂದು ತಮ್ಮನನ್ನು ಕೇಳಿದನು. ಅವನು ಅಣ್ಣನ ಬಳಿಹೋಗಿ, ಪಾದಗಳನ್ನು ಮುಟ್ಟಿ ನಮಸ್ಕರಿಸಿ, ನಗುತ್ತಾ “ಇವುಗಳನ್ನು ನಾನು ಇಲ್ಲಿಂದಲೇ ತೆಗೆದುಕೊಂಡೆ!” ಎಂದನು. ಇದನ್ನು ಕೇಳಿ ಶಂಖನು ತೀವ್ರ ಶೋಕಸಮನ್ವಿತನಾಗಿ ತಮ್ಮನಿಗೆ ಹೇಳಿದನು: “ಸ್ವಯಂ ನೀನೇ ಈ ಹಣ್ಣುಗಳನ್ನು ತೆಗೆದುಕೊಂಡಿದುರಿಂದ ನೀನು ಕಳ್ಳತನ ಮಾಡಿರುವೆ. ಹೋಗು! ರಾಜನಲ್ಲಿಗೆ ಹೋಗಿ ನೀನು ಮಾಡಿದ ಕೆಲಸವನ್ನು ಹೇಳಿಕೋ! “ಪಾರ್ಥಿವಸತ್ತಮ! ದಾನವಾಗಿ ಕೊಟ್ಟಿರದ, ಯಾರನ್ನೂ ಕೇಳದೇ ಮತ್ತು ಯಾರಿಗೂ ಹೇಳದೇ ನಾನು ಫಲವನ್ನು ತಿಂದುಬಿಟ್ಟೆನು. ನನ್ನನ್ನು ನೀನು ಕಳ್ಳನೆಂದು ತಿಳಿದು ಸ್ವಧರ್ಮವನ್ನು ಅನುಸರಿಸು. ಕಳ್ಳನಿಗೆ ದೊರಕುವ ಶಿಕ್ಷೆಯನ್ನು ನನಗೂ ಶೀಘ್ರವಾಗಿ ನೀಡು!””
ಅವನ ಮಾತಿನಂತೆ ಸಂಶಿತವ್ರತ ಲಿಖಿತನು ವಸುಧಾಧಿಪ ಸುದ್ಯುಮ್ನನಲ್ಲಿಗೆ ಹೋದನು. ಲಿಖಿತನ ಬರುವಿಕೆಯನ್ನು ದ್ವಾರಪಾಲರಿಂದ ಕೇಳಿದ ನರೇಶ್ವರ ಸುದ್ಯುಮ್ನನು ಅಮಾತ್ಯರೊಂದಿಗೆ ಕಾಲ್ನಡುಗೆಯಲ್ಲಿಯೇ ಬಂದನು. ಆ ಬ್ರಹ್ಮವಿತ್ತಮನನ್ನು ಸ್ವಾಗತಿಸಿ ರಾಜನು “ಭಗವನ್! ನೀವು ಯಾವ ಕಾರಣದಿಂದ ಇಲ್ಲಿಗೆ ಆಗಮಿಸಿದಿರೋ ಆ ಕಾರ್ಯವು ಆದಂತೆಯೇ ತಿಳಿಯಿರಿ” ಎಂದನು. ಹೀಗೆ ಹೇಳಲು ಆ ವಿಪ್ರರ್ಷಿಯು ಸುದ್ಯುಮ್ನನಿಗೆ ಹೇಳಿದನು: “ಮಾಡುತ್ತೇನೆ ಎಂದು ಮಾತುಕೊಟ್ಟಮೇಲೆ, ನಾನು ಹೇಳುವುದನ್ನು ಕೇಳಿ ಅದರಂತೆಯೇ ಮಾಡಬೇಕಾಗುತ್ತದೆ! ರಾಜನ್! ಅವನು ಕೊಡದೆಯೇ ಮತ್ತು ಅವನನ್ನು ಕೇಳದೆಯೇ ಅಣ್ಣನ ಫಲಗಳನ್ನು ತಿಂದಿದ್ದೇನೆ. ಆ ಅಪರಾಧಕ್ಕೆ ಕೂಡಲೇ ನನ್ನನ್ನು ಶಿಕ್ಷಿಸು!”
ಸುದ್ಯುಮ್ನನು ಹೇಳಿದನು: “ಬ್ರಾಹ್ಮಣರ್ಷಭ! ನಿನ್ನನ್ನು ಶಿಕ್ಷಿಸಲು ರಾಜನು ಮಾತ್ರ ಅರ್ಹನೆಂದು ಇರುವುದಾದರೆ ನಿನ್ನನ್ನು ಕ್ಷಮಿಸಿ ಕಳುಹಿಸಿಕೊಡಲೂ ಅವನು ಅರ್ಹನಲ್ಲವೇ? ನಿನ್ನನ್ನು ನಾನು ಕ್ಷಮಿಸಿದ್ದೇನೆ ಮತ್ತು ಹಿಂದಿರುಗಲು ಅನುಮತಿಯಿತ್ತಿದ್ದೇನೆ. ಮತ್ತೇನಾದರೂ ಅಭಿಲಾಷೆಗಳಿದ್ದರೆ ಅದನ್ನೂ ಹೇಳು. ನಿನ್ನ ಆ ಮಾತನ್ನೂ ನಡೆಸಿಕೊಡುತ್ತೇನೆ.”
ಮಹಾತ್ಮ ಪಾರ್ಥಿವನು ಸಮಾಧಾನ ಪಡೆಸುತ್ತಿದ್ದರೂ ಬ್ರಹ್ಮರ್ಷಿಯು “ಶಿಕ್ಷೆಯ ವರವನ್ನಲ್ಲದೇ ಬೇರೆ ಯಾವ ವರವನ್ನೂ ನಿನ್ನಿಂದ ನಾನು ಸ್ವೀಕರಿಸುವುದಿಲ್ಲ” ಎಂದು ಹಠಹಿಡಿದನು. ಆಗ ಆ ಪೃಥಿವೀಪಾಲನು ಮಹಾತ್ಮ ಲಿಖಿತನ ಎರಡೂ ಕೈಗಳನ್ನೂ ಕತ್ತರಿಸುವಂತೆ ಮಾಡಿದನು. ಶಿಕ್ಷೆಯನ್ನು ಪಡೆದ ಅವನು ಹೊರಟುಹೋದನು. ಅವನು ಅಣ್ಣ ಶಂಖನ ಬಳಿ ಹೋಗಿ ಆರ್ತರೂಪನಾಗಿ “ಭಗವನ್! ಶಿಕ್ಷೆಯನ್ನು ಪಡೆದ ಈ ದುರ್ಬುದ್ಧಿಯನ್ನು ಕ್ಷಮಿಸಬೇಕು” ಎಂದು ಕೇಳಿಕೊಂಡನು.
ಶಂಖನು ಹೇಳಿದನು: “ಧರ್ಮಜ್ಞ! ನಿನ್ನಮೇಲೆ ಕೋಪವಿಲ್ಲ. ನಿನ್ನನ್ನು ದೂಷಿಸುವುದೂ ಇಲ್ಲ. ಧರ್ಮವನ್ನು ಅತಿಕ್ರಮಿಸಿದುದರಿಂದ ನಿನಗೆ ಈ ಪ್ರಾಯಶ್ಚಿತ್ತವಾಯಿತು. ಶೀಘ್ರದಲ್ಲಿಯೇ ನೀನು ಬಹುದಾನದಿಗೆ ಹೋಗಿ ಯಥಾವಿಧಿಯಾಗಿ ದೇವತೆಗಳಿಗೂ, ಪಿತೃಗಳಿಗೂ, ಋಷಿಗಳಿಗೂ ತರ್ಪಣಗಳನ್ನು ನೀಡು. ನಿನ್ನ ಮನಸ್ಸನ್ನು ಅಧರ್ಮದಲ್ಲಿ ತೊಡಗಿಸಬೇಡ!”
ಶಂಖನ ಆ ಮಾತನ್ನು ಕೇಳಿದ ಲಿಖಿತನು ಪುಣ್ಯ ನದಿಯಲ್ಲಿ ಮಿಂದು ತರ್ಪಣಗಳನ್ನು ಕೊಡಲು ಪ್ರಾರಂಭಿಸಿದನು. ಕೂಡಲೇ ಅವನಿಗೆ ಕಮಲದಂತಹ ಕೈಗಳು ಹುಟ್ಟಿಕೊಂಡವು. ವಿಸ್ಮಿತನಾದ ಅವನು ತನ್ನ ಆ ಎರಡೂ ಕೈಗಳನ್ನೂ ಅಣ್ಣನಿಗೆ ತೋರಿಸಿದನು. ಆಗ ಶಂಖನು “ನನ್ನ ತಪಸ್ಸಿನಿಂದಾಗಿ ನಾನೇ ಇದನ್ನು ಹೀಗೆ ಮಾಡಿದೆನು. ಇದರಲ್ಲಿ ಶಂಕೆತಾಳದಿರು. ದೈವವೇ ಎಲ್ಲವನ್ನೂ ಮಾಡಿಸುತ್ತದೆ!” ಎಂದು ಹೇಳಿದನು.
ಲಿಖಿತನು ಹೇಳಿದನು: “ಮಹಾದ್ಯುತೇ! ನಿನ್ನ ತಪಸ್ಸಿನ ವೀರ್ಯವು ಈ ತರಹನಾಗಿದ್ದಿತೆಂದರೆ ಮೊದಲೇ ನೀನು ನನ್ನನ್ನು ಪವಿತ್ರನನ್ನಾಗಿ ಮಾಡಬಹುದಿತ್ತಲ್ಲವೇ?”
ಶಂಖನು ಹೇಳಿದನು: “ಹೀಗೆ ಮಾಡುವುದೇ ನನ್ನ ಕರ್ತವ್ಯವಾಗಿತ್ತು. ನಿನಗೆ ಶಿಕ್ಷೆಯನ್ನು ವಿಧಿಸುವವನು ನಾನಲ್ಲ! ನಿನಗೆ ದಂಡವನ್ನಿತ್ತು ಆ ನರಪತಿಯೂ, ಪಿತೃಗಳೊಂದಿಗೆ ನೀನೂ ಪವಿತ್ರರಾದಿರಿ!””
ದಂಡಧಾರಣೆಯ ಆ ಶ್ರೇಷ್ಠ ಕರ್ಮದಿಂದಾಗಿ ರಾಜಾ ಸುದ್ಯುಮ್ನನು ದಕ್ಷ ಪ್ರಾಚೇತಸನಂತೆ ಪರಮ ಸಿದ್ಧಿಯನ್ನು ಪಡೆದನು.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ