ಬದರಿಪಾಚನ ತೀರ್ಥ
ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 47ರಲ್ಲಿ ಹೇಳುತ್ತಾನೆ.
ವಿಶಾಲಾಕ್ಷೀ ಅಪ್ಸರೆ ಘೃತಾಚಿಯು ಬರುತ್ತಿರುವುದನ್ನು ನೋಡಿದ ಮಹಾತ್ಮ ವಿಪ್ರರ್ಷಿ ಭಾರದ್ವಾಜನ ವೀರ್ಯ ಸ್ಖಲನವಾಯಿತು. ಜಪಿಗಳಲ್ಲಿ ಶ್ರೇಷ್ಠನು ಆ ರೇತಸ್ಸನ್ನು ತನ್ನ ಕರಗಳಲ್ಲಿ ಹಿಡಿದನು. ಆದರೆ ಅದು ಎಲೆಯ ದೊನ್ನೆಯಲ್ಲಿ ಬಿದ್ದಿತು. ಅಲ್ಲಿಯೇ ಓರ್ವ ಶುಭೆಯು ಹುಟ್ಟಿದಳು. ತಪೋಧನನು ಜಾತಕರ್ಮಾದಿ ಎಲ್ಲ ಕರ್ಮಗಳನ್ನೂ ಅವಳಿಗೆ ಮಾಡಿಸಿದನು. ಮಹಾಮುನಿ ಭಾರದ್ವಾಜನು ಅವಳಿಗೆ ಹೆಸರನ್ನೂ ಇಟ್ಟನು. ದೇವರ್ಷಗಣ ಸಂಸದಿಯಲ್ಲಿ ಆ ಧರ್ಮಾತ್ಮನು ಅವಳಿಗೆ ಸ್ರುಚಾವತೀ ಎಂಬ ಹೆಸರನ್ನಿಟ್ಟು, ಅವಳನ್ನು ಆ ಆಶ್ರಮದಲ್ಲಿಯೇ ಇರಿಸಿ ಹಿಮವದ್ವನಕ್ಕೆ ತೆರಳಿದನು. ಭುವಿಯಲ್ಲಿಯೇ ಅಪ್ರತಿಮ ರೂಪವತಿಯಾದ ಸ್ರುಚಾವತಿಯು ಬ್ರಹ್ಮಚಾರಿಣಿಯಾಗಿದ್ದಳು. ದೇವರಾಜನೇ ತನ್ನ ಪತಿಯೆಂದು ನಿಶ್ಚಯಿಸಿದ ಆ ಭಾಮಿನಿಯು ಅನೇಕ ನಿಯಮಯುಕ್ತ ಉಗ್ರ ತಪಸ್ಸನ್ನು ತಪಿಸಿದಳು. ಸ್ತ್ರೀಯರಿಗೆ ಅನುಷ್ಠಾನ ಮಾಡಲು ದುಷ್ಕರವಾದ ಅನೇಕ ನಿಯಮಗಳನ್ನು ಪಾಲಿಸುತ್ತಾ ಅವಳು ಅನೇಕ ವರ್ಷಗಳನ್ನು ಕಳೆದಳು. ಅವಳ ತಪಸ್ಸು, ನಡತೆ ಮತ್ತು ಪರಮ ಭಕ್ತಿಗಳಿಗೆ ಭಗವಾನ್ ಪಾಕಶಾಸನನು ಪ್ರೀತನಾದನು. ಪ್ರಭು ತ್ರಿದಶಾಧಿಪತಿಯು ಮಹಾತ್ಮ ವಿಪ್ರರ್ಷಿ ವಸಿಷ್ಠನ ರೂಪವನ್ನು ಧರಿಸಿ ಅವಳ ಆಶ್ರಮಕ್ಕೆ ಹೋದನು. ಆ ಉಗ್ರತಪಸ್ವಿ ತಪಸ್ವಿಗಳಲ್ಲಿ ಶ್ರೇಷ್ಠ ವಸಿಷ್ಠನನ್ನು ನೋಡಿ ಅವಳು ಮುನಿಗಳಿಗೆ ಉಚಿತವಾದ ವಿಧಿಗಳಿಂದ ಸತ್ಕರಿಸಿದಳು. ನಿಯಮಗಳನ್ನು ತಿಳಿದಿದ್ದ ಆ ಪ್ರಿಯಂವದೆ ಕಲ್ಯಾಣಿಯು “ಭಗವನ್! ಮುನಿಶಾರ್ದೂಲ! ಅಪ್ಪಣೆಯೇನು ಪ್ರಭೋ!” ಎಂದಳು. “ಸುವ್ರತ! ಇಂದು ನಿನಗೆ ಯಥಾಶಕ್ತಿಯಾಗಿ ಎಲ್ಲವನ್ನೂ ಕೊಡುತ್ತೇನೆ. ಶಕ್ರನ ಮೇಲಿನ ಭಕ್ತಿಯಿಂದ ನಿನಗೆ ನನ್ನ ಕೈಯನ್ನು ಮಾತ್ರ ಎಂದೂ ಕೊಡುವುದಿಲ್ಲ. ವ್ರತ-ನಿಯಮ-ತಪಸ್ಸುಗಳಿಂದ ಆ ತ್ರಿಭುವನೇಶ್ವರ ಶಕ್ರನನ್ನು ತೃಪ್ತಗೊಳಿಸಬೇಕಾಗಿದೆ.”
ಅವಳು ಹೀಗೆ ಹೇಳಲು ಭಗವಾನ್ ದೇವನು ನಸುನಗುತ್ತಾ ಅವಳನ್ನು ನೋಡಿ ನಿಯಮಜ್ಞೆಯಾದ ಅವಳನ್ನು ಸಂತವಿಸುವಂತೆ ಹೇಳಿದನು: “ಸುವ್ರತೇ! ನೀನು ಉಗ್ರ ತಪಸ್ಸನ್ನು ಮಾಡುತ್ತಿರುವೆಯೆಂದು ನನಗೆ ತಿಳಿದಿದೆ. ನೀನು ಅದನ್ನು ಯಾವ ಕಾರಣದಿಂದ ಆರಂಭಿಸಿರುವೆಯೆನ್ನುವುದೂ ನನಗೆ ಹೃದ್ಗತವಾಗಿದೆ. ಅವೆಲ್ಲವೂ ಹೇಗಾಗಬೇಕೋ ಹಾಗೆಯೇ ಆಗುತ್ತದೆ. ತಪಸ್ಸಿನಿಂದ ಎಲ್ಲವೂ ದೊರೆಯುತ್ತವೆ. ಎಲ್ಲವೂ ತಪಸ್ಸಿನ ಮೇಲೆಯೇ ನಿಂತಿವೆ. ದೇವತೆಗಳ ದಿವ್ಯ ಸ್ಥಾನಗಳೂ ಕೂಡ ತಪಸ್ಸಿನಿಂದಲೇ ಪ್ರಾಪ್ತವಾಗುತ್ತವೆ. ಮಹಾ ಸುಖಕ್ಕೆ ತಪಸ್ಸೇ ಮೂಲ. ಇಲ್ಲಿ ಘೋರ ತಪಸ್ಸನ್ನಾಚರಿಸಿ ದೇಹವನ್ನು ತೊರೆದು ಮಾನವರು ದೇವತ್ವವನ್ನು ಪಡೆಯುತ್ತಾರೆ. ನನ್ನ ಈ ಮಾತನ್ನು ಕೇಳು. ಇಗೋ ಈ ಐದು ಬದರೀ (ಎಲಚೀ) ಹಣ್ಣುಗಳನ್ನು ಬೇಯಿಸು!” ಹೀಗೆ ಹೇಳಿ ಭಗವಾನ್ ಬಲಸೂದನನು ಹೊರಟು ಹೋದನು.
ಹಾಗೆ ಆ ಕಲ್ಯಾಣಿಗೆ ಸಲಹೆಯನ್ನಿತ್ತು, ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ಶ್ರೇಷ್ಠ ತೀರ್ಥದಲ್ಲಿ ಮಿಂದು ಜಪವನ್ನು ಜಪಿಸಿದನು. ಆ ತೀರ್ಥವು ಮೂರು ಲೋಕಗಳಲ್ಲಿ ಇಂದ್ರತೀರ್ಥವೆಂದು ಪ್ರಖ್ಯಾತವಾಯಿತು. ಅವಳನ್ನು ಪರೀಕ್ಷಿಸಲೋಸುಗ ವಿಭುಧಾಧಿಪ ಭಗವಾನ್ ಪಾಕಶಾಸನನು ಆ ಎಲಚೀಹಣ್ಣುಗಳು ಬೇಯದಂತೆ ಮಾಡಿದನು. ಆಗ ಆ ಶುಚಿಸಂವೀತೆ-ಬಳಲಿಕೆಯಿಲ್ಲದ-ಮಹಾವ್ರತೆಯು ಮೌನವನ್ನು ಧರಿಸಿ ಬೆಂಕಿಯ ಮೇಲಿಟ್ಟು ಆ ಎಲಚೀಹಣ್ಣುಗಳನ್ನು ಬೇಯಿಸುವುದರಲ್ಲಿ ತತ್ಪರಳಾದಳು. ಅವುಗಳನ್ನು ಬೇಯಿಸುತ್ತಾ ಬಹಳ ಸಮಯ ಕಳೆಯಿತು. ಆದರೂ ಅವುಗಳು ಬೇಯಲಿಲ್ಲ. ಒಂದು ದಿನವೇ ಕಳೆದುಹೋಯಿತು. ಅವಳಲ್ಲಿದ್ದ ಕಟ್ಟಿಗೆಗಳೆಲ್ಲವೂ ಬೆಂಕಿಯಲ್ಲಿ ಸುಟ್ಟುಹೋದವು. ಕಟ್ಟಿಗೆಗಳಿಲ್ಲವೆನ್ನುವುದನ್ನು ನೋಡಿದ ಅವಳು ತನ್ನ ಶರೀರವನ್ನೇ ಸುಡಲು ತೊಡಗಿದಳು. ಆ ಚಾರುದರ್ಶನೆ ಅನಘೆಯು ತನ್ನ ಪಾದಗಳನ್ನೇ ಮುಂದೆಚಾಚಿ ಬೆಂಕಿಯಲ್ಲಿಟ್ಟು ಉರಿಸಿ ಹಣ್ಣುಗಳನ್ನು ಬೇಯಿಸತೊಡಗಿದಳು. ಕಾಲುಗಳು ಸುಟ್ಟುಹೋಗಲು, ಮೊಣಕಾಲುಗಳನ್ನು ಚಾಚಿದಳು. ಮಹರ್ಷಿ ವಸಿಷ್ಠನಿಗೆ ಪ್ರಿಯವನ್ನುಂಟುಮಾಡಲೋಸುಗ ಆ ಅನಿಂದಿತೆಯು ಚರಣಗಳು ಸುಟ್ಟುಹೋಗುವ ದುಃಖದ ಕುರಿತು ಸ್ವಲ್ಪವೂ ಚಿಂತಿಸಲಿಲ್ಲ. ಅವಳ ಆ ಕೃತ್ಯವನ್ನು ನೋಡಿ ಪ್ರೀತನಾದ ತ್ರಿಭುವನೇಶ್ವರನು ತನ್ನ ನಿಜಸ್ವರೂಪದಲ್ಲಿ ಆ ಕನ್ಯೆಗೆ ಸಂದರ್ಶನವನ್ನಿತ್ತನು. ಸುರಶ್ರೇಷ್ಠನು ಆ ದೃಢವ್ರತೆ ಕನ್ಯೆಗೆ ಹೇಳಿದನು: “ಶುಭೇ! ನಿನ್ನ ಭಕ್ತಿ-ತಪಸ್ಸು-ನಿಯಮಗಳಿಂದ ನಾನು ಪ್ರೀತನಾಗಿದ್ದೇನೆ. ಆದುದರಿಂದ ನೀನು ಬಯಸಿದುದೆಲ್ಲವೂ ಕೈಗೂಡುತ್ತವೆ. ದೇಹವನ್ನು ತೊರೆದು ನೀನು ತ್ರಿದಿವದಲ್ಲಿ ನನ್ನೊಡನೆ ವಾಸಿಸುತ್ತೀಯೆ. ಈ ಶ್ರೇಷ್ಠ ತೀರ್ಥವು ಸರ್ವಪಾಪಗಳನ್ನೂ ಕಳೆಯುವ ಬದರಪಾಚನವೆಂಬ ಹೆಸರಿನಿಂದ ಲೋಕದಲ್ಲಿ ಸ್ಥಿರವಾಗಿರುತ್ತದೆ. ಮೂರು ಲೋಕಗಳಲ್ಲಿಯೂ ವಿಖ್ಯಾತ ಈ ತೀರ್ಥದಲ್ಲಿ ಬ್ರಹ್ಮರ್ಷಿಗಳೂ ಸ್ನಾನಮಾಡಿದ್ದಾರೆ. ಹಿಂದೆ ಈ ಶುಭ ಶ್ರೇಷ್ಠ ತೀರ್ಥದಲ್ಲಿಯೇ ಸಪ್ತರ್ಷಿಗಳು ಅರುಂಧತಿಯನ್ನು ಬಿಟ್ಟು ಹಿಮಾಲಯಕ್ಕೆ ಹೋಗಿದ್ದರಲ್ಲವೇ? ಆ ಮಹಾಭಾಗ ಸಂಶಿತವ್ರತರು ಜೀವನವನ್ನು ನಡೆಸಲು ಫಲ-ಮೂಲಗಳನ್ನು ಒಟ್ಟುಗೂಡಿಸಿ ತರಲು ಅಲ್ಲಿಗೆ ಹೋಗಿದ್ದರು. ಅವರು ಜೀವನಾರ್ಥವಾಗಿ ಹಿಮವದ್ವನದಲ್ಲಿ ವಾಸಿಸುತ್ತಿರುವಾಗ ಹನ್ನೆರಡು ವರ್ಷಗಳ ಅನಾವೃಷ್ಟಿಯು ಉಂಟಾಯಿತು. ಆ ತಪಸ್ವಿಗಳು ಅಲ್ಲಿ ಆಶ್ರಮವನ್ನು ಮಾಡಿಕೊಂಡು ವಾಸಿಸುತ್ತಿರಲು ಇತ್ತ ಕಲ್ಯಾಣೀ ಅರುಂಧತಿಯು ನಿತ್ಯವೂ ತಪೋನಿರತಳಾದಳು. ತೀವ್ರ ನಿಯಮಸ್ಥಳಾಗಿದ್ದ ಅರುಂಧತಿಯನ್ನು ನೋಡಿ ತ್ರಿನಯನ ವರದನು ಸುಪ್ರೀತನಾಗಿ ಅಲ್ಲಿಗೆ ಬಂದನು. ಮಹಾಯಶಸ್ವಿ ದೇವ ಮಹಾದೇವನು ಬ್ರಾಹ್ಮಣನ ರೂಪಧರಿಸಿ ಅವಳ ಬಳಿಬಂದು “ಶುಭೇ! ಭಿಕ್ಷೆಯನ್ನು ಬಯಸುತ್ತೇನೆ!” ಎಂದನು. ಆ ಚಾರುದರ್ಶನೆಯು ಬ್ರಾಹ್ಮಣನಿಗೆ ಹೇಳಿದಳು: “ವಿಪ್ರ! ನಾನು ಕೂಡಿಟ್ಟಿದ್ದ ಅಕ್ಕಿಯೆಲ್ಲವೂ ಮುಗಿದುಹೋಗಿದೆ. ಇಗೋ! ಈ ಬದರೀ ಹಣ್ಣುಗಳನ್ನೇ ತಿನ್ನು!” ಆಗ ಮಹಾದೇವನು “ಸುವ್ರತೇ! ಇವುಗಳನ್ನು ಬೇಯಿಸಿ ಕೊಡು!” ಎಂದನು. ಇದನ್ನು ಕೇಳಿ ಬ್ರಾಹ್ಮಣನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ಆ ಯಶಸ್ವಿನಿಯು ಅಗ್ನಿಯನ್ನು ಪ್ರಜ್ವಲಿಸಿ ಅದರಲ್ಲಿ ಬದರೀ ಹಣ್ಣುಗಳನ್ನು ಬೇಯಿಸತೊಡಗಿದಳು. ಆಗ ಅವಳು ದಿವ್ಯ ಮನೋರಮ ಪುಣ್ಯ ಕಥೆಗಳನ್ನು ಕೇಳುತ್ತಿದ್ದಳು. ಹಾಗೆಯೇ ಆ ಹನ್ನೆರಡು ವರ್ಷಗಳ ಘೋರ ಅನಾವೃಷ್ಟಿಯೂ ಕಳೆದುಹೋಯಿತು. ಊಟಮಾಡದೇ ಶುಭ ಕಥೆಗಳನ್ನು ಕೇಳುತ್ತಾ ಹಣ್ಣುಗಳನ್ನು ಬೇಯಿಸುತ್ತಿದ್ದ ಅವಳಿಗೆ ಆ ಸುದಾರಣ ಸಮಯವು ಒಂದೇ ದಿನದಂತೆ ಕಳೆದುಹೋಯಿತು. ಆಗ ಪರ್ವತದಿಂದ ಫಲಗಳನ್ನು ತೆಗೆದುಕೊಂಡು ಮುನಿಗಳು ಹಿಂದಿರುಗಲು ಪ್ರೀತನಾದ ಭಗವಾನನು ಅರುಂಧತಿಗೆ ಹೇಳಿದನು: “ಧರ್ಮಜ್ಞೇ! ಹಿಂದಿನಂತೆಯೇ ಈ ಋಷಿಗಳನ್ನು ಸೇರು. ಧರ್ಮಜ್ಞೇ! ನಿನ್ನ ತಪಸ್ಸು-ನಿಯಮಗಳಿಂದ ಪ್ರೀತನಾಗಿದ್ದೇನೆ.” ಆಗ ಭಗವಾನ್ ಹರನು ತನ್ನ ಸ್ವರೂಪವನ್ನು ತೋರಿಸಿ ಅವಳ ಮಹಾ ನಡತೆಯ ಕುರಿತು ಋಷಿಗಳಿಗೆ ಹೇಳಿದನು: “ವಿಪ್ರರೇ! ಹಿಮವತ್ಪರ್ವತದಲ್ಲಿ ನೀವು ಏನು ತಪಸ್ಸನ್ನು ತಪಿಸಿದರೋ ಅದು ಇಲ್ಲಿ ಇವಳು ಮಾಡಿದ ತಪಸ್ಸಿಗೆ ಸಮನಲ್ಲ ಎಂದು ನನ್ನ ಅಭಿಪ್ರಾಯ. ಈ ತಪಸ್ವಿನಿಯು ಅತಿಕಷ್ಟಕರ ತಪಸ್ಸನ್ನು ತಪಿಸಿದ್ದಾಳೆ. ಆಹಾರವನ್ನು ಸೇವಿಸಿದೇ ಹಣ್ಣುಗಳನ್ನು ಬೇಯಿಸುತ್ತಾ ಹನ್ನೆರಡು ವರ್ಷಗಳನ್ನು ಕಳೆದಳು.” ಆಗ ಭಗವಾನನು ಪುನಃ ಅರುಂಧತಿಗೆ ಹೇಳಿದನು: “ಕಲ್ಯಾಣೀ! ನಿನ್ನ ಹೃದಯದಲ್ಲಿ ಬಯಸಿದ ವರವನ್ನು ಕೇಳು!” ಆ ವಿಶಾಲಾಕ್ಷೀ ಅರುಣನೇತ್ರೆಯು ಸಪ್ತರ್ಷಿಗಳ ಮಧ್ಯೆ ದೇವನಿಗೆ ಹೇಳಿದಳು: “ಭಗವಾನ್! ನನ್ನ ಮೇಲೆ ಪ್ರೀತನಾಗಿರುವೆಯಾದರೆ ಈ ಉತ್ತಮ ತೀರ್ಥವು ಬದರಪಾಚನವೆಂಬ ಹೆಸರಿನಿಂದ ಸಿದ್ಧದೇವರ್ಷಿಗಳಿಗೆ ಪ್ರಿಯವಾದ ಉತ್ತಮ ತೀರ್ಥವಾಗಲಿ. ದೇವದೇವೇಶ! ಹಾಗೆಯೇ ಇಲ್ಲಿ ಶುಚಿಯಾಗಿ ಉಪವಾಸಮಾಡಿಕೊಂಡು ಮೂರು ರಾತ್ರಿ ಕಳೆದವರಿಗೆ ಹನ್ನೆರಡು ವರ್ಷ ಹಾಗೆ ಮಾಡಿದುದರ ಫಲವು ದೊರೆಯಲಿ!” “ಅದು ಹಾಗೆಯೇ ಆಗುತ್ತದೆ!” ಎಂದು ಅವಳಿಗೆ ಹೇಳಿ ಹರನು ದಿವಕ್ಕೆ ತೆರಳಿದನು. ಹಸಿವು-ಬಾಯಾರಿಕೆಗಳಿದ್ದರೂ ಅರುಂಧತಿಯು ಬಳಲದೇ ಮುಖಕಾಂತಿಯನ್ನು ಕಳೆದುಕೊಳ್ಳದೇ ಇದ್ದುದನ್ನು ನೋಡಿ ಋಷಿಗಳು ವಿಸ್ಮಿತರಾದರು. ಮಹಾಭಾಗೇ! ನನಗಾಗಿ ನೀನು ಹೇಗೋ ಹಾಗೆ ಹಿಂದೆ ವಿಶುದ್ಧಾತ್ಮೆ ಅರುಂಧತಿಯು ಸಿದ್ಧಿಯನ್ನು ಪಡೆದಳು. ಈ ವ್ರತದಲ್ಲಿ ನಿನ್ನನ್ನೇ ನೀನು ಸಮರ್ಪಿಸಿರುವೆ! ನಿನ್ನ ನಿಯಮಗಳಿಂದ ಸಂತುಷ್ಟನಾದ ನಾನು ನಿನಗೆ ಇಂದು ಈ ವರವನ್ನು ನೀಡುತ್ತೇನೆ. ಮಹಾತ್ಮನು ಅರುಂಧತಿಗೆ ನೀಡಿದ ವರಕ್ಕಿಂತಲೂ ವಿಶೇಷ ವರವನ್ನು ಕೇಳು. ನಿನಗೆ ಕೊಡುತ್ತೇನೆ. ಯಥಾವಿಧಿಯಾಗಿ ಸಮಾಹಿತನಾಗಿ ಒಂದು ರಾತ್ರಿ ಈ ತೀರ್ಥದಲ್ಲಿದ್ದು ಸ್ನಾನಮಾಡಿದವನಿಗೆ ದೇಹತ್ಯಾಗದ ನಂತರ ದುರ್ಲಭ ಲೋಕಗಳು ದೊರೆಯುತ್ತವೆ.”
ಪುಣ್ಯೆ ಸ್ರುಚಾವತಿಗೆ ಹೀಗೆ ಹೇಳಿ ಭಗವಾನ್ ದೇವ ಪ್ರತಾಪವಾನ್ ಸಹಸ್ರಾಕ್ಷನು ಪುನಃ ತ್ರಿದಿವಕ್ಕೆ ತೆರಳಿದನು. ವಜ್ರಧರನು ಹೊರಟುಹೋಗಲು ಅಲ್ಲಿ ದಿವ್ಯಸುವಾಸನೆಯುಳ್ಳ ದಿವ್ಯ ಪುಷ್ಪಗಳ ಮಳೆಯು ಸುರಿಯಿತು. ಎಲ್ಲಕಡೆಗಳಲ್ಲಿ ಮಹಾಸ್ವನದ ದುಂಧುಭಿಗಳು ಮೊಳಗಿದವು. ಪುಣ್ಯಸುವಾಸನೆಯುಕ್ತ ಗಾಳಿಯೂ ಬೀಸಿತು. ಉಗ್ರ ತಪಸ್ಸಿನಿಂದ ಅವಳು ಆ ಶುಭದೇಹವನ್ನು ತ್ಯಜಿಸಿ ಇಂದ್ರನ ಭಾರ್ಯೆಯಾಗಿ ಅವನೊಂದಿಗೆ ರಮಿಸಿದಳು.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ