ಬಕ ದಾಲ್ಭ್ಯನ ಚರಿತ್ರೆ
ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 40ರಲ್ಲಿ ಹೇಳುತ್ತಾನೆ.
ದಾಲ್ಭ್ಯ ಬಕನು ಘೋರರೂಪದ ತಪಸ್ಸಿನಿಂದ ತನ್ನ ದೇಹವನ್ನು ಕೃಶಗೊಳಿಸಿದ್ದನು. ಆದರೆ ಆ ಧರ್ಮಾತ್ಮ ಪ್ರತಾಪವಾನನು ಮಹಾಕ್ರೋಧಿಷ್ಟನಾಗಿದ್ದನು. ಹಿಂದೆ ನೈಮಿಷವಾಸಿಗಳ ಹನ್ನೆರಡು ವರ್ಷಗಳ ಸತ್ರವು ನಡೆಯುತ್ತಿರಲು ವಿಶ್ವಜಿತು ಯಾಗವು ಸಂಪೂರ್ಣಗೊಳ್ಳಲು ಋಷಿಗಳು ಪಾಂಚಾಲರಲ್ಲಿಗೆ ಹೋದರು. ಅಲ್ಲಿಗೆ ಹೋಗಿ ರಾಜನಿಂದ ದಕ್ಷಿಣೆಯನ್ನು ಕೇಳಿ ಆ ಮುನಿಗಳು ಬಲಾನ್ವಿತ, ರೋಗರಹಿತ ಇಪ್ಪತ್ತೊಂದು ಹೋರಿಕರುಗಳನ್ನು ಪಡೆದರು. ಆಗ ವೃದ್ಧ ಬಕನು ಅವರಿಗೆ “ಪಶುಗಳನ್ನು ನೀವೇ ಹಂಚಿಕೊಳ್ಳಿರಿ. ನನ್ನ ಪಾಲಿನ ಪಶುವನ್ನು ನಿಮಗೇ ಬಿಟ್ಟುಕೊಟ್ಟು ನಾನು ಇನ್ನೊಬ್ಬ ರಾಜಸತ್ತಮನಲ್ಲಿ ಭಿಕ್ಷೆಯಾಗಿ ಪಡೆಯುತ್ತೇನೆ!” ಹೀಗೆ ಆ ಋಷಿಗಳೆಲ್ಲರಿಗೆ ಹೇಳಿ ಆ ಪ್ರತಾಪವಾನ್ ಬ್ರಾಹ್ಮಣೋತ್ತಮನು ಧೃತರಾಷ್ಟ್ರನ ಭವನಕ್ಕೆ ಹೋದನು. ಜನೇಶ್ವರ ಧೃತರಾಷ್ಟ್ರನ ಸಮೀಪ ಹೋಗಿ ದಾಲ್ಭ್ಯನು ಪಶುಗಳನ್ನು ಯಾಚಿಸಿದನು. ಆಗ ರಾಜನು ರೋಷಗೊಂಡು ಅವನೊಂದಿಗೆ ಮಾತನಾಡಿದನು. ಆ ನೃಪಸತ್ತಮನು ದೈವೇಚ್ಛೆಯಿಂದ ಮೃತಗೊಂಡಿದ್ದ ಗೋವುಗಳನ್ನು ನೋಡಿ “ಬ್ರಹ್ಮಬಂಧುವೇ! ನಿನಗೆ ಇಷ್ಟವಾದರೆ ಈ ಪಶುಗಳನ್ನು ಬೇಗನೇ ಕೊಂಡೊಯ್ಯಿ!” ಎಂದನು. ಆ ಮಾತನ್ನು ಕೇಳಿ ಧರ್ಮವಿದು ಋಷಿಯು “ಅಯ್ಯೋ! ಸಂಸದಿಯಲ್ಲಿ ಇಂತಹ ಕಠೋರ ಮಾತುಗಳನ್ನು ಕೇಳಬೇಕಾಯಿತಲ್ಲ!” ಎಂದು ಚಿಂತಿಸಿದನು.
ಮುಹೂರ್ತಕಾಲ ಚಿಂತಿಸಿ ರೋಷಾವಿಷ್ಟನಾದ ಆ ದ್ವಿಜೋತ್ತಮನು ಭೂಪತಿ ಧೃತರಾಷ್ಟ್ರನ ವಿನಾಶದ ಕುರಿತು ನಿಶ್ಚಯಿಸಿದನು. ಆ ದ್ವಿಜಸತ್ತಮನು ಮೃತ ಪಶುಗಳನ್ನೆತ್ತಿಕೊಂಡು ಹೋಗಿ ನರಪತಿ ಧೃತರಾಷ್ಟ್ರನ ರಾಜ್ಯವನ್ನು ಹೋಮಮಾಡಿದನು. ಮಹಾತಪಸ್ವಿ ದಾಲ್ಭ್ಯ ಬಕನು ನಿಯಮಾಸ್ಥಿತನಾಗಿದ್ದುಕೊಂಡು ಸರಸ್ವತಿಯ ಅವಕೀರ್ಣ ತೀರ್ಥದಲ್ಲಿ ಯಜ್ಞೇಶ್ವರನನ್ನು ಪ್ರಜ್ವಲಿಸಿ ಅದರಲ್ಲಿಯೇ ಮಾಂಸಗಳಿಂದ ರಾಷ್ಟ್ರವನ್ನು ಆಹುತಿಯಾಗಿತ್ತನು. ಆ ಸುದಾರುಣ ಸತ್ರವು ವಿಧಿವತ್ತಾಗಿ ಮುಂದುವರೆಯುತ್ತಿದ್ದ ಹಾಗೇ ಧೃತರಾಷ್ಟ್ರನ ರಾಷ್ಟ್ರವು ಕ್ಷೀಣಿಸುತ್ತಾ ಬಂದಿತು. ಕೊಡಲಿಯಿಂದ ಕತ್ತರಿಸಲ್ಪಡುತ್ತಾ ಅರಣ್ಯವು ಕ್ಷೀಣಗೊಳ್ಳುವಂತೆ ಧೃತರಾಷ್ಟ್ರನ ರಾಷ್ಟ್ರವು ಕ್ಷೀಣಿಸುತ್ತಾ ಬಂದಿತು. ತನ್ನ ರಾಷ್ಟ್ರವು ಕ್ಷೀಣಿಸುತ್ತಿರುವುದನ್ನು ನೋಡಿದ ಪ್ರಭು ಮನುಜಾಧಿಪನು ಚಿಂತಿಸಿ ದುಃಖಿತನಾದನು. ಸಂಕಟ ವಿಮೋಚನೆಗಾಗಿ ಬ್ರಾಹ್ಮಣರೊಂದಿಗೆ ಪ್ರಯತ್ನಪಟ್ಟನು. ಆದರೂ ಪಾರ್ಥಿವ ಮತ್ತು ವಿಪ್ರರು ಖಿನ್ನರಾಗಿಯೇ ಇದ್ದರು. ರಾಷ್ಟ್ರವನ್ನು ಆ ಸಂಕಟದಿಂದ ಮುಕ್ತಗೊಳಿಸಲು ಸಾಧ್ಯವಿಲ್ಲದಾದಾಗ ಅವನು ವೈಪ್ರಾಶ್ನಿಕರನ್ನು[1] ಕೇಳಿದನು. ಆಗ ವೈಪ್ರಾಶ್ನಿಕರು ಹೇಳಿದರು: “ನೀನು ವಿಪ್ರನಿಗೆ ನೀಡಿದ ಪಶುಗಳ ಮಾಂಸಗಳಿಂದ ಮುನಿ ಬಕನು ನಿನ್ನ ರಾಷ್ಟ್ರವನ್ನು ಆಹುತಿಯನ್ನಾಗಿ ಕೊಟ್ಟು ಹೋಮಿಸುತ್ತಿದ್ದಾನೆ. ಅವನು ಹಾಗೆ ಹೋಮ ಮಾಡುತ್ತಿರುವುದರಿಂದ ನಿನ್ನ ಮಹಾ ರಾಷ್ಟ್ರವು ಕ್ಷಯವಾಗುತ್ತಿದೆ. ಆ ತಪಸ್ವಿಯ ಕರ್ಮದಿಂದಲೇ ನಿನಗೆ ಈ ಮಹಾ ನಷ್ಟವುಂಟಾಗುತ್ತಿದೆ. ಪಾರ್ಥಿವ! ಸರಸ್ವತೀ ನದಿಯ ತೀರದ ಕುಂಜಗಳಲ್ಲಿರುವ ಅವನನ್ನು ಪ್ರಸನ್ನಗೊಳಿಸು!” ಅನಂತರ ರಾಜನು ಸರಸ್ವತೀ ತೀರಕ್ಕೆ ಹೋಗಿ ಭೂಮಿಯ ಮೇಲೆ ಶಿರಸಾ ಬಿದ್ದು ಕೈಮುಗಿದು ಬಕನಿಗೆ ಹೇಳಿದನು: “ಭಗವನ್! ನೀನು ಪ್ರಸನ್ನನಾಗು. ಈ ದೀನ-ಲುಬ್ಧನು ಮೂರ್ಖತನದಿಂದಾಗಿ ಚೇತನವನ್ನೇ ಕಳೆದುಕೊಂಡು ಮಾಡಿದ್ದ ಅಪರಾಧವನ್ನು ಕ್ಷಮಿಸು. ನಾಥ! ನನಗೆ ನೀನೇ ಗತಿ! ನನ್ನ ಮೇಲೆ ಪ್ರಸನ್ನನಾಗಬೇಕು!” ಶೋಕೋಪಹತಚೇತಸನಾಗಿ ಹಾಗೆ ವಿಲಪಿಸುತ್ತಿರುವ ಅವನನ್ನು ನೋಡಿ ಬಕನಲ್ಲಿ ಕೃಪೆಯುಂಟಾಯಿತು. ಅವನ ರಾಷ್ಟ್ರವನ್ನು ಮುಕ್ತಗೊಳಿಸಿದನು. ಋಷಿಯು ಕೋಪವನ್ನು ತೊರೆದು ಪ್ರಸನ್ನನಾದನು. ಅವನ ರಾಜ್ಯದ ವಿಮೋಚನೆಗಾಗಿ ಪುನಃ ಆಹುತಿಯನ್ನು ಹೋಮಿಸಿದನು. ರಾಷ್ಟ್ರವನ್ನು ಮುಕ್ತಗೊಳಿಸಿ, ಅನೇಕ ಪಶುಗಳನ್ನು ಸ್ವೀಕರಿಸಿ, ಹೃಷ್ಟಾತ್ಮನಾಗಿ ಮುನಿಯು ಪುನಃ ನೈಮಿಷಾರಣ್ಯಕ್ಕೆ ತೆರಳಿದನು. ಧರ್ಮಾತ್ಮಾ ಮಹಾಮನಸ್ವಿ ರಾಜಾ ಧೃತರಾಷ್ಟ್ರನೂ ಕೂಡ ತನ್ನ ಸಮೃದ್ಧ ನಗರಕ್ಕೆ ಪ್ರಯಾಣಿಸಿದನು.
[1] ಜ್ಯೋತಿಃಶಾಸ್ತ್ರದಲ್ಲಿ ಪ್ರಶ್ನಭಾಗವನ್ನು ಬಲ್ಲ ವಿಪ್ರರು. ಕೇಳಿದ ಪ್ರಶ್ನೆಗೆ ಉತ್ತರವನ್ನೂ, ತೊಂದರೆಗಳಿಗೆ ಪರಿಹಾರವನ್ನೂ ಸೂಚಿಸುವವರು.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ