ಕುಮಾರನ ಪ್ರಭಾವ-ಅಭಿಷೇಕ
ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 43-45ರಲ್ಲಿ ಹೇಳುತ್ತಾನೆ.
ಹಿಂದೆ ಮಹೇಶ್ವರನ ವೀರ್ಯವು ಸ್ಖಲನವಾಗಿ ಅಗ್ನಿಯಲ್ಲಿ ಬಿದ್ದಿತು. ಸರ್ವಭಕ್ಷಕನಾಗಿದ್ದರೂ ಭಗವಾನ್ ಅಗ್ನಿಯು ಆ ಅಕ್ಷಯ ತೇಜಸ್ಸನ್ನು ದಹಿಸಲು ಸಮರ್ಥನಾಗಲಿಲ್ಲ. ಅದರಿಂದಾಗಿ ಹವ್ಯವಾಹನನು ತೇಜಸ್ವಿಯೂ ದೀಪ್ತಮಾನನೂ ಆದನು. ಆದರೆ ಅವನಿಗೆ ಆ ತೇಜೋಮಯ ಗರ್ಭವನ್ನು ಧರಿಸಲಾಗಲಿಲ್ಲ. ಪ್ರಭು ಬ್ರಹ್ಮನ ನಿಯೋಗದಂತೆ ಆ ದಿವ್ಯ ಭಾಸ್ಕರತೇಜಸ್ಸುಳ್ಳ ಗರ್ಭವನ್ನು ಗಂಗಾನದಿಗೆ ಹೋಗಿ ಅಲ್ಲಿ ಹಾಕಿಬಿಟ್ಟನು. ಗಂಗೆಯೂ ಕೂಡ ಆ ಗರ್ಭವನ್ನು ಧರಿಸಿಕೊಂಡಿರಲು ಸಾಧ್ಯವಾಗಲಿಲ್ಲ. ಅವಳು ಅದನ್ನು ಅಮರರು ಪೂಜಿಸುವ ರಮ್ಯ ಹಿಮವತ್ ಗಿರಿಗಳಲ್ಲಿ ವಿಸರ್ಜಿಸಿದಳು. ಆ ಅಗ್ನಿಪುತ್ರನು ಲೋಕಗಳನ್ನೆಲ್ಲಾ ಆವರಿಸಿ ಬೆಳೆಯತೊಡಗಿದನು. ಜ್ವಲನಾಕಾರದ ಆ ಗರ್ಭವನ್ನು ಕೃತ್ತಿಕೆಯರು ನೋಡಿದರು. ಆ ಪುತ್ರಾರ್ಥಿಗಳೆಲ್ಲರೂ ಜೊಂಡುಹುಲ್ಲಿನ ಮಧ್ಯದಲ್ಲಿದ್ದ ಅನಲಾತ್ಮಜ ಈಶ್ವರ ಮಹಾತ್ಮನನ್ನು ನನ್ನವನು ನನ್ನವನು ಎಂದು ಕೂಗಿಕೊಂಡರು. ಅವರ ಮಾತೃಭಾವವನ್ನು ಅರಿತುಕೊಂಡ ಪ್ರಭು ಭಗವಾನನು ಅವರ ಸ್ತನಗಳಿಂದ ಸ್ರವಿಸುತ್ತಿದ್ದ ಹಾಲನ್ನು ತನ್ನ ಆರು ಮುಖಗಳಿಂದಲೂ ಕುಡಿದನು. ದಿವ್ಯರೂಪವನ್ನು ಧರಿಸಿದ್ದ ಕೃತ್ತಿಕಾ ದೇವಿಯರು ಆ ಬಾಲಕನ ಪ್ರಭಾವವನ್ನು ನೋಡಿ ಪರಮ ವಿಸ್ಮಿತರಾದರು. ಗಂಗೆಯು ಯಾವ ಗಿರಿಶಿಖರದ ಮೇಲೆ ಆ ಭಗವಾನನನ್ನು ಬಿಟ್ಟಿದ್ದಳೋ ಆ ಶೈಲವೆಲ್ಲವೂ ಕಾಂಚನಮಯವಾಯಿತು. ವರ್ಧಿಸುತ್ತಿರುವ ಆ ಗರ್ಭದಿಂದ ಪೃಥ್ವಿಯೂ ರಂಜಿತಳಾದಳು. ಸುತ್ತಲಿನ ಎಲ್ಲ ಗಿರಿಗಳೂ ಕಾಂಚನಮಯವಾದವು. ಆ ಮಹಾವೀರ್ಯ ಕುಮಾರನು ಕಾರ್ತಿಕೇಯನೆಂದು ವಿಶೃತನಾದನು. ಮಹಾಯೋಗಬಲಾನ್ವಿತನು ಮೊದಲು ಗಾಂಗೇಯನೆನಿಸಿಕೊಂಡಿದ್ದನು.
ಅತೀವ ತಪಸ್ಸು-ವೀರ್ಯಗಳಿಂದ ಸಮನ್ವಿತನಾಗಿದ್ದ ಆ ದೇವನು ಪ್ರಿಯದರ್ಶನ ಚಂದ್ರನಂತೆ ಬೆಳೆಯತೊಡಗಿದನು. ಅವನು ಆ ದಿವ್ಯ ಕಾಂಚನ ಜೊಂಡುಹುಲ್ಲಿನ ಮಧ್ಯೆ ಶ್ರೀಯಿಂದ ಸಮಾವೃತನಾಗಿ ಗಂಧರ್ವ-ಮುನಿಗಳಿಂದ ಸ್ತುತಿಸಲ್ಪಡುತ್ತಾ ಮಲಗಿದ್ದನು. ದಿವ್ಯ ವಾದ್ಯ-ನೃತ್ಯಗಳಲ್ಲಿ ಪರಿಣಿತ ಸಾವಿರಾರು ಸುಂದರ ದೇವಕನ್ಯೆಯರು ಅವನನ್ನು ಸ್ತುತಿಸಿ ಸಮೀಪದಲ್ಲಿ ನರ್ತಿಸುತ್ತಿದ್ದರು. ಸರಿತೆಯರಲ್ಲಿ ಶ್ರೇಷ್ಠೆ ನದೀ ಗಂಗೆಯು ಅವನ ಹತ್ತಿರ ಕುಳಿತುಕೊಂಡಿದ್ದಳು. ಪೃಥ್ವಿಯು ಉತ್ತಮ ರೂಪವನ್ನು ತಾಳಿ ಬೆಳಗುತ್ತಾ ಅವನನ್ನು ಎತ್ತಿಕೊಂಡಿದ್ದಳು. ಬೃಹಸ್ಪತಿಯು ಅವನ ಜಾತಕರ್ಮಾದಿ ಕ್ರಿಯೆಗಳನ್ನು ನಡೆಸಿದನು. ಚತರ್ಮೂರ್ತಿ ವೇದವೂ ಕೂಡ ಕೈಮುಗಿದು ಅವನ ಬಳಿ ಕುಳಿತು ಪೂಜಿಸಿತು. ನಾಲ್ಕು ಪಾದಗಳ ಧನುರ್ವೇದ, ಶಸ್ತ್ರಗ್ರಾಮ ಸಂಗ್ರಹವೂ, ಸಾಕ್ಷಾದ್ ವಾಣಿಯೂ ಅಲ್ಲಿ ಸೇರಿ ಅವನನ್ನು ಉಪಾಸಿಸುತ್ತಿದ್ದರು. ಅವನು ಭೂತ ಸಮೂಹಗಳಿಂದ ಸಮಾವೃತನಾಗಿ ಶೈಲಪುತ್ರಿಯ ಸಹಿತ ಕುಳಿತಿದ್ದ ಮಹಾವೀರ್ಯ ದೇವದೇವ ಉಮಾಪತಿಯನ್ನು ನೋಡಿದನು. ಆ ಭೂತಸಂಘಗಳ ಶರೀರಗಳು ಪರಮಾದ್ಭುತವಾಗಿ ತೋರುತ್ತಿದ್ದವು. ವಿಕೃತರು ಮತ್ತು ವಿಕೃತಾಕಾರದವರು ವಿಕೃತ ಆಭರಣ-ಧ್ವಜಗಳನ್ನು ಧರಿಸಿದ್ದರು. ಹುಲಿ-ಸಿಂಹ-ಕರಡಿಯ ಮುಖಗಳಿದ್ದವು. ಬೆಕ್ಕು-ಮೊಸಳೆಗಳ ಮುಖವನ್ನು ಹೊಂದಿದ್ದರು. ಅನ್ಯರಿಗೆ ಚೇಳಿನ ಮುಖವಿದ್ದರೆ ಅನ್ಯರಿಗೆ ಆನೆ-ಒಂಟೆಗಳ ಮುಖಗಳಿದ್ದವು. ಕೆಲವರ ಮುಖಗಳು ಗೂಬೆಗಳಂತಿದ್ದರೆ ಇನ್ನು ಇತರರ ಮುಖಗಳು ರಣಹದ್ದು-ಗುಳ್ಳೇನರಿಗಳಂತೆ ತೋರುತ್ತಿದ್ದವು. ಕ್ರೌಂಚ-ಪಾರಿವಾಳ-ಜಿಂಕೆ ಇವೇ ಮೊದಲಾದವುಗಳ ಮುಖಗಳನ್ನೂ ಹೊಂದಿದ್ದರು. ನಾಯಿ-ಮುಳ್ಳುಹಂದಿ-ನೀರುಡ-ಆಡು-ಕುರಿ-ಹಸು ಮೊದಲಾದ ಪ್ರಾಣಿಗಳ ಮುಖಗಳನ್ನೂ ಅಲ್ಲಿದ್ದ ಭೂತಗಣಗಳು ಧರಿಸಿದ್ದವು. ಕೆಲವರು ಮೇಘ-ಪರ್ವತಗಳಂತೆ ಕಾಣುತ್ತಿದ್ದರು. ಕೆಲವರು ಚಕ್ರ-ಗದೆ ಮೊದಲಾದ ಆಯುಧಗಳನ್ನು ಹಿಡಿದಿದ್ದರು. ಕೆಲವರು ಅಂಜನದ ರಾಶಿಯಂತೆ ಕಪ್ಪಾಗಿದ್ದರು. ಕೆಲವರು ಶ್ವೇತಪರ್ವತ ಪ್ರಭೆಯಿಂದ ಕೂಡಿದ್ದರು. ಸಪ್ತಮಾತೃಗಣಗಳು, ಸಾಧ್ಯರು, ಮರುತರು, ವಸವರು ಮತ್ತು ಪಿತೃಗಳು ಅಲ್ಲಿಗೆ ಬಂದು ಸೇರಿದರು. ಕುಮಾರವರ, ಅಚ್ಯುತನನ್ನು ನೋಡಲು ರುದ್ರರು, ಆದಿತ್ಯರು, ಸಿದ್ಧ-ನಾಗ-ದಾನವ-ಪಕ್ಷಿಗಳು, ವಿಷ್ಣು ಮತ್ತು ಮಕ್ಕಳೊಂದಿಗೆ ಭಗವಾನ್ ಸ್ವಯಂಭೂ ಬ್ರಹ್ಮ, ಶಕ್ರ, ನಾರದ ಪ್ರಮುಖರು, ದೇವ-ಗಂಧರ್ವಸತ್ತಮರು, ದೇವರ್ಷಿಗಳು, ಬೃಹಸ್ಪತಿಪ್ರಮುಖ ಸಿದ್ಧರು, ಯಾಮರು, ಧಾಮರು ಮತ್ತು ಎಲ್ಲರೂ ಅಲ್ಲಿಗೆ ಬಂದು ಸೇರಿದರು. ಮಹಾಯೋಗಬಲಾನ್ವಿತ ಭಗವಾನ್ ಬಾಲಕನಾದರೋ ದೇವೇಶ ಶೂಲಹಸ್ತ ಪಿನಾಕಿನಿಯ ಕಡೆ ಹೊರಟನು. ಅವನು ಬರುವುದನ್ನು ನೋಡಿ ಶಿವ, ಶೈಲಪುತ್ರಿ, ಗಂಗೆ ಮತ್ತು ಪಾವಕರು ಏಕಕಾಲದಲ್ಲಿ “ಈ ಬಾಲಕನು ಜನ್ಮಕೊಟ್ಟಿದುದಕ್ಕಾಗಿ ಗೌರವಿಸಲು ಯಾರಬಳಿಗೆ ಮೊದಲು ಬರುತ್ತಾನೆ?” ಎಂದು ಅಲೋಚಿಸಿದರು. “ಮೊದಲು ನನ್ನ ಬಳಿಗೆ ಬರುತ್ತಾನೆ!” ಎಂಬುದು ಅವರೆಲ್ಲರ ಮನೋಗತವಾಗಿತ್ತು. ಆ ನಾಲ್ವರ ಅಭಿಪ್ರಾಯಗಳನ್ನು ತಿಳಿದ ಕುಮಾರನು ಯೋಗಬಲದಿಂದ ಒಂದೇ ಬಾರಿಗೆ ವಿವಿಧ ಶರೀರಗಳನ್ನು ಸೃಷ್ಟಿಸಿದನು. ಕ್ಷಣದಲ್ಲಿಯೇ ಆ ಪ್ರಭು ಭಗವಾನನು ಚತುರ್ಮೂರ್ತಿಯಾದನು – ಶಾಖ, ವಿಶಾಖ, ನೈಗಮೇಷರು ಸ್ಕಂದನನ್ನು ಅನುಸರಿಸಿದರು. ಹೀಗೆ ಪ್ರಭು ಭಗವಾನನು ತನ್ನನ್ನು ತಾನೇ ನಾಲ್ಕು ಮೂರ್ತಿಗಳನ್ನಾಗಿ ವಿಭಾಗಿಸಿಕೊಂಡನು. ಅದೊಂದು ಅದ್ಭುತವಾಗಿತ್ತು. ಸ್ಕಂದನು ರುದ್ರನಿರುವಲ್ಲಿಗೆ ಹೋದನು. ವಿಶಾಖನು ದೇವೀ ಗಿರಿವರಾತ್ಮಜೆಯಿರುವಲ್ಲಿಗೆ ಹೋದನು. ಭಗವಾನ್ ಶಾಖನು ವಾಯುಮೂರ್ತಿ ವಿಭಾವಸುವಿರುವಲ್ಲಿಗೆ ಹೋದನು. ಪಾವಕಪ್ರಭ ಕುಮಾರ ನೈಗಮೇಷನು ಗಂಗೆಯ ಬಳಿ ಹೋದನು.
ಆ ಎಲ್ಲ ನಾಲ್ಕು ದೇಹಗಳೂ ಸಮರೂಪಿಯಾಗಿ ಹೊಳೆಯುತ್ತಿದ್ದವು ಮತ್ತು ಏಕಕಾಲದಲ್ಲಿ ಆ ನಾಲ್ವರ ಬಳಿ ಹೋದವು. ಅದೊಂದು ಅದ್ಭುತವಾಗಿತ್ತು. ಮಹದಾಶ್ಚರ್ಯವೂ ರೋಮಹರ್ಷಣವೂ ಆದ ಆ ಅದ್ಭುತವನ್ನು ನೋಡಿ ದೇವ-ದಾನವ-ರಾಕ್ಷಸರಲ್ಲಿ ಮಹಾ ಹಾಹಾಕಾರವುಂಟಾಯಿತು. ಆಗ ಗಂಗೆಯ ಸಹಿತ ರುದ್ರ, ದೇವೀ ಮತ್ತು ಪಾವಕರು ಎಲ್ಲರೂ ಜಗತ್ಪತಿ ಪಿತಾಮಹನಿಗೆ ನಮಸ್ಕರಿಸಿದರು. ವಿಧಿವತ್ತಾಗಿ ಅವನಿಗೆ ನಮಸ್ಕರಿಸಿ ಅವರು ಕಾರ್ತಿಕೇಯನಿಗೆ ಪ್ರೀತಿಯನ್ನುಂಟುಮಾಡಲು ಬಯಸಿ ಹೇಳಿದರು: “ದೇವೇಶ! ನಮ್ಮ ಪ್ರೀತ್ಯರ್ಥ್ಯವಾಗಿ ನಿನಗಿಷ್ಟವಾದ ಯಾವುದಾದರೂ ಅಧಿಕಾರವನ್ನು ಈ ಬಾಲಕನಿಗೆ ಕೊಡಬೇಕು!” ಆಗ ಆ ಭಗವಾನ್ ಧೀಮಾನ ಸರ್ವಲೋಕಪಿತಾಮಹನು ಇವನಿಗೆ ಏನನ್ನು ಕೊಡಲಿ ಎಂದು ಮನಸ್ಸಿನಲ್ಲಿಯೇ ಚಿಂತಿಸಿದನು. ಈ ಮೊದಲೇ ಸರ್ವ ಐಶ್ವರ್ಯಗಳಿಗೆ ದೇವ-ಗಂಧರ್ವ-ರಾಕ್ಷಸ-ಭೂತ-ಯಕ್ಷ-ಪಕ್ಷಿ-ಪನ್ನಗರೆಲ್ಲರ ಮಹಾತ್ಮರನ್ನೂ ಅಧಿಪತಿಯರನ್ನಾಗಿ ಅಧಿಕಾರ ಕೊಟ್ಟಾಗಿದೆ. ಇವನಾದರೋ ಆ ಎಲ್ಲ ಐಶ್ವರ್ಯಗಳ ಅಧಿಪತಿಯಾಗಲು ಸಮರ್ಥ ಎಂದು ಆ ಮಹಾಮತಿಯು ಅಭಿಪ್ರಾಯಪಟ್ಟನು. ಮುಹೂರ್ತಕಾಲ ಯೋಚಿಸಿ ದೇವತೆಗಳ ಶ್ರೇಯಸ್ಸನ್ನೇ ಬಯಸುತ್ತಿದ್ದ ಅವನು ಕುಮಾರನಿಗೆ ಸರ್ವಭೂತಗಳ ಸೇನಾಪತ್ಯವನ್ನು ಕೊಟ್ಟನು. ಸರ್ವದೇವತೆಗಳ ಸಮೂಹದಲ್ಲಿ ಯಾರೆಲ್ಲ ರಾಜರೆಂದು ಪ್ರಸಿದ್ಧರಾಗಿದ್ದರೋ ಅವರೆಲ್ಲರನ್ನು ಸರ್ವಭೂತಪಿತಾಮಹನು ಕುಮಾರನ ವಶಕ್ಕೊಪ್ಪಿಸಿದನು. ಆಗ ಬ್ರಹ್ಮನನ್ನು ಮುಂದಿರಿಸಿಕೊಂಡು ದೇವತೆಗಳು ಅಭಿಷೇಕಕ್ಕಾಗಿ ಕುಮಾರನನ್ನು ಕರೆದುಕೊಂಡು ಹಿಮವತ್ಪರ್ವತಕ್ಕೆ ತೆರಳಿದರು.
ಅಲ್ಲಿ ಸಮಂತಪಂಚಕದಲ್ಲಿ ಮೂರುಲೋಕಗಳಲ್ಲಿ ವಿಶ್ರುತಳಾಗಿದ್ದ ಹೈಮವತಿ ದೇವೀ ಸರಿತಶ್ರೇಷ್ಠೆ ಸರಸ್ವತಿಯು ಹರಿಯುತ್ತಿದ್ದಳು. ಆ ಸರ್ವಗುಣಾನ್ವಿತೆ ಪುಣ್ಯೇ ಸರಸ್ವತಿಯ ತೀರದಲ್ಲಿ ಸರ್ವ ದೇವ-ಗಂಧರ್ವರು ಸಂಪೂರ್ಣಮಾನಸರಾಗಿ ತಂಗಿದರು. ಅನಂತರ ಬೃಹಸ್ಪತಿಯು ಶಾಸ್ತ್ರಸಮ್ಮತವಾದ ಎಲ್ಲ ಅಭಿಷೇಕಸಾಮಾಗ್ರಿಗಳನ್ನೂ ಸಂಗ್ರಹಿಸಿ ಯಥಾವಿಧಿಯಾಗಿ ಅಗ್ನಿಯಲ್ಲಿ ಸಮಿತ್ತು-ತುಪ್ಪಗಳ ಆಹುತಿಗಳನ್ನಿತ್ತನು. ಆಗ ಹಿಮವತನು ನೀಡಿದ್ದ ಮಣಿಪ್ರವರಶೋಭಿತ ದಿವ್ಯರತ್ನಗಳಿಂದ ಅಲಂಕೃತ ದಿವ್ಯ ಪರಮಾಸನದಲ್ಲಿ ಕುಮಾರನನ್ನು ಕುಳ್ಳಿರಿಸಿ ದೇವಗಣಗಳು ವಿಧಿವತ್ತಾಗಿ ಮಂತ್ರಪೂರ್ವಕವಾಗಿ ಅಭಿಷೇಕಕ್ಕೆ ಬೇಕಾಗುವ ಸರ್ವ ಮಂಗಲದ್ರವ್ಯಗಳನ್ನೂ ಹಿಡಿದು ಬಂದರು. ಮಹಾವೀರ್ಯ ಇಂದ್ರ ಮತ್ತು ವಿಷ್ಣು, ಸೂರ್ಯ-ಚಂದ್ರರು, ಧಾತಾ-ವಿಧಾತರು, ಅನಿಲ-ಅನಲರು, ಪೂಷ್ಣಾ-ಭಗಾರ್ಯಮರು, ಅಂಶ-ವಿವಸ್ವತರು, ಧೀಮಾನ್ ರುದ್ರನೊಂದಿಗೆ ಮಿತ್ರ-ವರುಣರು, ರುದ್ರ-ವಸು-ಆದಿತ್ಯ-ಅಶ್ವಿನಿಯರಿಂದ ಸುತ್ತುವರೆಯಲ್ಪಟ್ಟ ಪ್ರಭು ರುದ್ರ, ವಿಶ್ವೇದೇವರು, ಮರುತರು, ಸಾಧ್ಯರು, ಪಿತೃಗಳು, ಗಂಧರ್ವರು, ಅಪ್ಸರೆಯರು, ಯಕ್ಷರು, ರಾಕ್ಷಸರು, ಪನ್ನಗಗಳು, ಅಸಂಖ್ಯ ದೇವರ್ಷಿಗಳು, ಬ್ರಹ್ಮರ್ಷಿ ಶ್ರೇಷ್ಠರು, ವೈಖಾನಸರು, ವಾಲಖಿಲ್ಯರು, ಯಾಯ್ವಾಹಾರರು, ಮರೀಚಿಪರು, ಭೃಗುಗಳು, ಆಂಗೀರಸರು, ಮಹಾತ್ಮ ಯತಿಗಳು, ಸರ್ವ ವಿದ್ಯಾಧರರು, ಪುಣ್ಯಯೋಗಸಿದ್ಧರು, ಮಹಾತಪಸ್ವಿ ಪುಲಸ್ತ್ಯ-ಪುಲಹ-ಅಂಗಿರಸ-ಕಶ್ಯಪ-ಅತ್ರಿ-ಮರೀಚಿ-ಭೃಗುಗಳಿಂದ ಆವೃತನಾದ ಪಿತಾಮಹ, ಕ್ರತು, ಹರ, ಪ್ರಚೇತಸರು, ಮನು, ದಕ್ಷ, ಋತುಗಳು, ಗ್ರಹಗಳು, ನಕ್ಷತ್ರಗಳು, ಮೂರ್ತಿಮತ್ತಾದ ನದಿಗಳು ಮತ್ತು ಸನಾತನ ವೇದಗಳು, ಸಮುದ್ರ-ಸರೋವರಗಳು, ವಿವಿಧ ತೀರ್ಥಗಳು, ಪೃಥ್ವಿ-ಆಕಾಶ-ದಿಕ್ಕು-ವೃಕ್ಷಗಳು, ದೇವಮಾತೆ ಅದಿತಿ, ಹ್ರೀ, ಶ್ರೀ, ಸ್ವಾಹಾ, ಸರಸ್ವತೀ, ಉಪಾ, ಶಚೀ, ಸಿನೀವಾಲೀ, ಅನುಮತಿ, ಕುಹೂ, ರಾಕಾ, ದಿಷಣಾ, ಮತ್ತು ಅನ್ಯ ದೇವಪತ್ನಿಯರು, ಹಿಮವಂತ, ವಿಂಧ್ಯ ಮತ್ತು ಅನೇಕ ಶಿಖರಗಳ ಮೇರು, ಅನುಚರರೊಂದಿಗೆ ಐರಾವತ, ಕಲಾ, ಕಾಷ್ಠ, ಮಾಸ, ಪಕ್ಷ, ಋತು, ರಾತ್ರಿ, ಹಗಲು, ಕುದುರೆಗಳಲ್ಲಿ ಶ್ರೇಷ್ಠ ಉಚ್ಛೈಶ್ರವಸ್, ನಾಗರಾಜ ವಾಸುಕಿ, ಅರುಣ, ಗರುಡ, ಔಷಧಿಯುಕ್ತ ವೃಕ್ಷಗಳು, ಭಗವಾನ್ ಧರ್ಮದೇವ, ಕಾಲ, ಯಮ, ಮೃತ್ಯು, ಯಮನ ಅನುಯಾಯಿಗಳು - ಇವರೆಲ್ಲರೂ ಕುಮಾರನ ಅಭಿಷೇಖಾರ್ಥವಾಗಿ ಅಲ್ಲಿ ನೆರೆದಿದ್ದರು. ಎಲ್ಲ ದಿವೌಕಸರೂ ಅಭಿಷೇಕಕ್ಕಾಗಿ ಮಂಗಲ ದ್ರವ್ಯಗಳ ಪಾತ್ರೆಗಳನ್ನು ಹಿಡಿದು ಎಲ್ಲೆಡೆ ನಿಂತಿದ್ದರು. ದಿವ್ಯಸಂಭಾರಸಂಯುಕ್ತ ಕಾಂಚನ ಕಲಶಗಳಲ್ಲಿ ಸರಸ್ವತಿಯೇ ಮೊದಲಾದ ಪುಣ್ಯ ತೀರ್ಥಗಳನ್ನು ತುಂಬಿಸಿ ಸಂಪ್ರಹೃಷ್ಟ ದಿವೌಕಸರು ಅಸುರರಿಗೆ ಭಯಂಕರನಾದ ಮಹಾತ್ಮ ಕುಮಾರನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದರು. ಹಿಂದೆ ಜಲೇಶ್ವರ ವರುಣನನ್ನು ಹೇಗೆ ಅಭಿಷೇಕಿಸಿದ್ದನೋ ಹಾಗೆ ಲೋಕಪಿತಾಮಹ ಭಗವಾನ್ ಬ್ರಹ್ಮ, ಮಹಾತೇಜಸ್ವಿ ಕಶ್ಯಪ ಮತ್ತು ಇಲ್ಲಿ ಹೆಸರಿಸದ ಅನ್ಯರು ಕುಮಾರನನ್ನು ಅಭಿಷೇಕಿಸಿದರು.
ಅವನ ಮೇಲೆ ಪ್ರೀತನಾದ ವಾತರಂಹಸ ಪ್ರಭುವು ಕುಮಾರನಿಗೆ ಬೇಕಾದ ವೀರ್ಯಸಂಪತ್ತನ್ನು ಪಡೆದುಕೊಳ್ಳಬಲ್ಲ ಬಲಶಾಲೀ ನಾಲ್ಕು ಸಿದ್ಧರನ್ನು ಮಹಾ ಪಾರಿತೋಷವಾಗಿ ಕೊಟ್ಟನು. ನಂದಿಷೇಣ, ಲೋಹಿತಾಕ್ಷ, ಘಂಟಕರ್ಣಾ ಮತ್ತು ಕುಮುದಮಾಲಿನಿ ಇವರೇ ಕುಮಾರನ ವಿಖ್ಯಾತ ನಾಲ್ವರು ಅನುಚರರು. ಆಗ ಸ್ಥಾಣುವು ಮಹಾವೇಗಯುಕ್ತ, ನೂರಾರು ಮಾಯೆಗಳನ್ನು ಅರಿತಿದ್ದ, ಬೇಕಾದ ವೀರ್ಯಬಲಗಳನ್ನು ಪಡೆಯಬಲ್ಲ, ಸುರಾರಿಗಳನ್ನು ಸಂಹರಿಸಬಲ್ಲ ಕಾಮನನ್ನು ಸ್ಕಂದನಿಗೆ ಮಹಾ ಪಾರಿತೋಷವಾಗಿ ನೀಡಿದನು. ಆ ಭೀಮಕರ್ಮಿಯೇ ದೇವಾಸುರ ಯುದ್ಧದಲ್ಲಿ ಸಂಕ್ರುದ್ಧನಾಗಿ ತನ್ನ ಎರಡು ಬಾಹುಗಳಿಂದಲೇ ಹದಿನಾಲ್ಕು ದಶಲಕ್ಷ ದೈತ್ಯರನ್ನು ಸಂಹರಿಸಿದನು. ಹಾಗೆಯೇ ದೇವತೆಗಳು ಅವನಿಗೆ ನೈರೃತ್ತರಿಂದ ಕೂಡಿದ್ದ ದೇವಶತ್ರುಗಳನ್ನು ನಾಶಪಡಿಸಬಲ್ಲ, ಅಜೇಯವಾದ ವಿಶ್ವರೂಪಿಣೀ ಸೇನೆಯನ್ನು ಒಪ್ಪಿಸಿದರು. ವಾಸವನೊಂದಿಗೆ ಸರ್ವ ದೇವತೆಗಳೂ, ಗಂಧರ್ವ-ಯಕ್ಷ-ರಾಕ್ಷಸರೂ, ಮುನಿ-ಪಿತೃಗಳೂ ಜಯಕಾರ ಮಾಡಿದರು. ಯಮನು ಸ್ಕಂದನಿಗೆ ಯಮ-ಕಾಲರಂತಿದ್ದ ಉನ್ಮಾಥ-ಪ್ರಮಾಥರೆಂಬ ಇಬ್ಬರು ಮಹಾವೀರ್ಯ ಮಹಾದ್ಯುತೀ ಅನುಚರರನ್ನು ಕೊಟ್ಟನು. ಪ್ರತಾಪವಾನ್ ಸೂರ್ಯನು ಪ್ರೀತಿಯಿಂದ ಕಾರ್ತಿಕೇಯನಿಗೆ ಸೂರ್ಯಾನುಯಾಯಿಗಳಾಗಿದ್ದ ಸುಭ್ರಾಜ-ಭಾಸ್ಕರರನ್ನು ಒಪ್ಪಿಸಿದನು. ಸೋಮನು ಕೈಲಾಸಶೃಂಗದಂತಿದ್ದ, ಶ್ವೇತಮಾಲೆ-ಲೇಪನಗಳನ್ನು ಧರಿಸಿದ್ದ ಮಣಿ-ಸುಮಣಿ ಎನ್ನುವ ಇಬ್ಬರು ಅನುಚರರನ್ನು ನೀಡಿದನು. ಹುತಾಶನನು ತನ್ನ ಮಗನಿಗೆ ಜ್ವಾಲಾಜಿಹ್ವ ಮತ್ತು ಜ್ಯೋತಿ ಎನ್ನುವ ಇಬ್ಬರು ಶೂರ ಪರಸೈನ್ಯ ಪ್ರಮಥಿಗಳನ್ನು ಅನುಚರರನ್ನಾಗಿ ಕೊಟ್ಟನು. ಅಂಶನೂ ಕೂಡ ಪರಿಘ, ವಟ, ಮಹಾಬಲ ಭೀಮ, ದಹತಿ, ಮತ್ತು ದಹನ ಎನ್ನುವ ಪ್ರಚಂಡ ವೀರಸಮನ್ವಿತ ಐವರನ್ನು ಅನುಚರರನ್ನಾಗಿ ಧೀಮತ ಸ್ಕಂದನಿಗೆ ನೀಡಿದನು.
ಪರವೀರಹ ವಾಸವನು ಉತ್ಕ್ರೋಶ ಮತ್ತು ಪಂಕಜ ಎನ್ನುವ ಇಬ್ಬರು ವಜ್ರ-ದಂಡಧಾರಿಗಳನ್ನು ಅನಲಪುತ್ರನಿಗೆ ನೀಡಿದನು. ಅವರಿಬ್ಬರೂ ಸಮರದಲ್ಲಿ ಅನೇಕ ಮಹೇಂದ್ರ ಶತ್ರುಗಳನ್ನು ಸಂಹರಿಸಿದರು. ಮಹಾಯಶಸ್ವಿ ವಿಷ್ಣುವು ಸ್ಕಂದನಿಗೆ ಚಕ್ರ, ವಿಕ್ರಮಕ ಮತ್ತು ಮಹಾಬಲ ಸಂಕ್ರಮ ಈ ಮೂವರು ಅನುಚರರನ್ನು ನೀಡಿದನು. ಅಶ್ವಿನಿಯರು ಪ್ರೀತಿಯಿಂದ ಸ್ಕಂದನಿಗೆ ಸರ್ವವಿದ್ಯಾವಿಶಾರದರಾದ ವರ್ಧನ ಮತ್ತು ನಂದನರನ್ನು ನೀಡಿದರು. ಆ ಮಹಾತ್ಮನಿಗೆ ಧಾತನು ಕುಂದನ, ಕುಸುಮ, ಕುಮುದ ಮತ್ತು ಮಹಾಯಶರಾದ ಡಂಬರ-ಆಡಂಬರರನ್ನು ನೀಡಿದನು. ತ್ವಷ್ಟನು ಸ್ಕಂದನ ಅನುಚರರನ್ನಾಗಿ ಶ್ರೇಷ್ಠ-ಬಲೋತ್ಕಟ-ಮೇಷದ ಮುಖವುಳ್ಳ-ಬಲಶಾಲೀ ವಕ್ರ-ಅನುವಕ್ರರನ್ನು ನೀಡಿದನು. ಪ್ರಭು ಮಿತ್ರನು ಮಹಾತ್ಮ ಕುಮಾರನಿಗೆ ಮಹಾತ್ಮರೂ, ತಪೋವಿದ್ಯಾಧರರೂ ಆದ ಸುವ್ರತ ಮತ್ತು ಸತ್ಯಸಂಧರನ್ನು ನೀಡಿದನು. ವಿಧಾತನು ಕಾರ್ತಿಕೇಯನಿಗೆ ಮೂರುಲೋಕಗಳಲ್ಲಿ ವಿಶ್ರುತರಾದ, ನೋಡಲು ಸುಂದರರಾಗಿದ್ದ, ಲೋಕವಿಶ್ರುತ ಸುಪ್ರಭ ಮತ್ತು ಮಹಾತ್ಮ ಶುಭಕರ್ಮರನ್ನು ನೀಡಿದನು. ಪೂಷನು ಕಾರ್ತಿಕೇಯನಿಗೆ ಪಾಲಿತಕ ಮತ್ತು ಕಾಲಿಕರೆಂಬ ಇಬ್ಬರು ಮಹಾ ಮಾಯಾವಿಗಳನ್ನು ಪಾರ್ಷದರನ್ನಾಗಿ ನೀಡಿದನು. ವಾಯುವು ಕಾರ್ತಿಕೇಯನಿಗೆ ಮಹಾಮುಖಗಳುಳ್ಳ ಮಹಾಬಲಶಾಲೀ ಬಲ ಮತ್ತು ಅತಿಬಲರನ್ನು ಕೊಟ್ಟನು. ಸತ್ಯಸಂಗರ ವರುಣನು ತಿಮಿಂಗಿಲಗಳ ಮುಖವುಳ್ಳ ಮಹಾಬಲಶಾಲೀ ಘಸ ಮತ್ತು ಅತಿಘಸರನ್ನು ಕೊಟ್ಟನು. ಹಿಮವಾನನು ಹುತಾಶನಸುತನಿಗೆ ಮಹಾತ್ಮ ಸುವರ್ಚಸ ಮತ್ತು ಹಾಗೆಯೇ ಅತಿವರ್ಚಸರನ್ನು ಕೊಟ್ಟನು. ಮೇರುವು ಅಗ್ನಿಪುತ್ರನಿಗೆ ಮಹಾತ್ಮ ಕಾಂಚನ ಮತ್ತು ಮೇಘಮಾಲಿನಿಯರನ್ನು ಅನುಚರರನ್ನಾಗಿ ಕೊಟ್ಟನು. ವರಲ್ಲದೇ ಮೇರುವು ಮಹಾತ್ಮ ಅಗ್ನಿಪುತ್ರನಿಗಾಗಿ ಮಹಾಬಲಪರಾಕ್ರಮಗಳುಳ್ಳ ಸ್ಥಿರ ಮತ್ತು ಅತಿಸ್ಥಿರರಿಬ್ಬರನ್ನೂ ಕೊಟ್ಟನು.
ವಿಂಧ್ಯನು ಅಗ್ನಿಪುತ್ರನಿಗೆ ದೊಡ್ಡ ಬಂಡೆಗಳಿಂದ ಯುದ್ಧಮಾಡಬಲ್ಲ ಉಚ್ಚಿತ್ರ ಮತ್ತು ಜಾತಿಶ್ರುಂಗರನ್ನು ಪಾರಿಶದರನ್ನಾಗಿ ಕೊಟ್ಟನು. ಸಮುದ್ರನೂ ಕೂಡ ಅಗ್ನಿಪುತ್ರನಿಗೆ ಗದಾಧರರಾದ ಸಂಗ್ರಹ ಮತ್ತು ವಿಗ್ರಹರನ್ನು ಮಹಾಪಾರ್ಷದ (ಸಭಸದ) ರಾಗಿ ಕೊಟ್ಟನು. ಶುಭದರ್ಶನೆ ಪಾರ್ವತಿಯು ಅಗ್ನಿಪುತ್ರನಿಗೆ ಉನ್ಮಾದ, ಪುಷ್ಪದಂತ ಮತ್ತು ಶಂಕುಕರ್ಣರನ್ನು ಕೊಟ್ಟಳು. ಪನ್ನಗೇಶ್ವರ ವಾಸುಕಿಯು ಜ್ವಲನಸೂನುವಿಗೆ ಜಯ ಮತ್ತು ಮಹಾಜಯರೆಂಬ ನಾಗರನ್ನು ಕೊಟ್ಟನು. ಹಾಗೆಯೇ ಸಾಧ್ಯರು, ರುದ್ರರು, ವಸುಗಳು, ಪಿತೃಗಳು, ಸಾಗರಗಳು, ನದಿಗಳು, ಮತ್ತು ಮಹಾಬಲ ಗಿರಿಗಳು ಸೇನಾಗಣಾಧ್ಯಕ್ಷನಿಗೆ ಶೂಲ-ಪಟ್ಟಿಶಗಳನ್ನು ಹಿಡಿದಿದ್ದ, ನಾನಾ ವೇಷವಿಭೂಷಿತ ದಿವ್ಯ ಪ್ರಹರಿಗಳನ್ನು ಕೊಟ್ಟರು. ವಿವಿಧ ಆಯುಧಸಂಪನ್ನರೂ ವಿಚಿತ್ರ ಆಭರಣ-ಕವಚಧಾರಿಗಳೂ ಆದ ಸ್ಕಂದನ ಅನ್ಯ ಸೈನಿಕರ ಹೆಸರುಗಳನ್ನು ಕೇಳು. ಶಂಕುಕರ್ಣ, ನಿಕುಂಭ, ಪದ್ಮ, ಕುಮುದ, ಅನಂತ, ದ್ವಾದಶಭುಜ, ಕೃಷ್ಣ, ಉಪಕೃಷ್ಣ, ದ್ರೋಣಶ್ರವ, ಕಪಿಸ್ಕಂಧ, ಕಾಂಚನಾಕ್ಷ, ಜಲಂಧಮ, ಅಕ್ಷ, ಸಂತರ್ಜನ, ಕುನದೀಕ, ತಮೋಭ್ರಕೃತ್, ಏಕಾಕ್ಷ, ದ್ವಾದಶಾಕ್ಷ, ಏಕಜಟ, ಪ್ರಭು, ಸಹಸ್ರಬಾಹು, ವಿಕಟ, ವ್ಯಾಘ್ರಾಕ್ಷ, ಕ್ಷಿತಿಕಂಪನ, ಪುಣ್ಯನಾಮ, ಸುನಾಮ, ಸುವಕ್ತ್ರ, ಪ್ರಿಯದರ್ಶನ, ಪರಿಶ್ರುತ, ಕೋಕನದ, ಪ್ರಿಯಮಾಲ್ಯಾನುಲೇಪನ, ಅಜೋದರ, ಗಜಶಿರ, ಸ್ಕಂಧಾಕ್ಷ, ಶತಲೋಚನ, ಜ್ವಾಲಜಿಹ್ವ, ಕರಾಲ, ಸಿತಕೇಶ, ಜಟೀ, ಹರಿ, ಚತುರ್ದಂಷ್ಟ್ರ, ಅಷ್ಟಜಿಹ್ವ, ಮೇಘನಾದ, ಪೃಥುಶ್ರವ, ವಿದ್ಯುದಕ್ಷ, ಧನುವ್ರಕ್ತ್ರ, ಜಠರ, ಮಾರುತಾಶನ, ಉದರಾಕ್ಷ, ಝುಷಾಕ್ಷ, ವಜ್ರನಾಭ, ವಸುಪ್ರಭ, ಸಮುದ್ರವೇಗ, ಶೈಲಕಂಪೀ, ಪುತ್ರಮೇಷ, ಪ್ರವಾಹ, ನಂದ, ಉಪನಂದಕ, ಧೂಮ್ರ, ಶ್ವೇತ, ಕಲಿಂಗ, ಸಿದ್ಧಾರ್ಥ, ವರದ, ಪ್ರಿಯಕ, ನಂದ, ಪ್ರತಾಪವಾನ್ ಗೋನಂದ, ಆನಂದ, ಪ್ರಮೋದ, ಸ್ವಸ್ತಿಕ, ಧ್ರುವಕ, ಕ್ಷೇಮವಾಪ, ಸುಜಾತ, ಸಿದ್ಧಯಾತ್ರ, ಗೋವ್ರಜ, ಕನಕಾಪೀಡ, ಮಹಾಪಾರಿದೇಶ್ವರ, ಗಾಯನ, ಹಸನ, ಬಾಣ, ವೀರ್ಯವಾನ್ ಖಡ್ಗ, ವೈತಾಲೀ, ಜಾತಿತಾಲೀ, ಕತಿಕ, ಅತಿಕ, ಹಂಸಜ, ಪಂಕದಿಗ್ಧಾಂಗ, ಸಮುದ್ರ, ಉನ್ಮಾದನ, ರಣೋತ್ಕಟ, ಪ್ರಹಾಸ, ಶ್ವೇತಶೀರ್ಷ, ನಂದಕ, ಕಾಲಕಂಠ, ಪ್ರಭಾಸ, ಕುಂಭಾಂಡಕ, ಅಪರ, ಕಾಲಕಾಕ್ಷ, ಸಿತ, ಭೂತಲೋನ್ಮಥ, ಯಜ್ಞವಾಹ, ಪ್ರವಾಹ, ದೇವಯಾಜೀ, ಸೋಮಪ, ಸಜಾಲ, ಮಹಾತೇಜ ಕ್ರಥ, ಅಕ್ರಥ, ತುಹನ, ತುಹಾನ, ವೀರ್ಯವಾನ್ ಚಿತ್ರದೇವ, ಮಧುರ, ಸುಪ್ರಸಾದ, ಕಿರೀಟೀ, ಮಹಾಬಲ, ಮಸನ, ಮಧುವರ್ಣ, ಕಲಶೋದರ, ಧಮಂತ, ಮನ್ಮಥಕರ, ವೀರ್ಯವಾನ್ ಸೂಚೀವಕ್ತ್ರ, ಶ್ವೇತವಕ್ತ್ರ, ಸುವಕ್ತ್ರ, ಚಾರುವಕ್ತ್ರ, ಪಾಂಡುರ, ದಂಡಬಾಹು, ಸುಬಾಹು, ರಜ, ಕೋಕಿಲ, ಅಚಲ, ಕನಕಾಕ್ಷ, ಬಾಲಾನಾಮಯಿಕ, ಪ್ರಭು, ಸಂಚಾರಕ, ಕೋಕನದ, ಗೃಧ್ರವಕ್ತ್ರ, ಜಂಬುಕ, ಲೋಹಾಶವಕ್ತ್ರ, ಜಠರ, ಕುಂಭವಕ್ತ್ರ, ಕುಂಡಕ, ಮದ್ಗುಗ್ರೀವ, ಕೃಷ್ಣೌಜ, ಹಂಸವಕ್ತ್ರ, ಚಂದ್ರಭ, ಪಾಣಿಕೂರ್ಮ, ಶಂಬೂಕ, ಪಂಚವಕ್ತ್ರ, ಶಿಕ್ಷಕ, ಚಾಷವಕ್ತ್ರ, ಜಂಬೂಕ, ಶಾಕವಕ್ತ್ರ, ಮತ್ತು ಕುಂಡಕ. ಆ ಎಲ್ಲ ಮಹಾತ್ಮರೂ ಯೋಗಯುಕ್ತರೂ ಸತತ ಬ್ರಾಹ್ಮಣಪ್ರಿಯರೂ ಆಗಿದ್ದರು. ಮಹಾತ್ಮ ಪಿತಾಮಹನು ನೀಡಿದ ಮಹಾ ಪಾರಿಷದರೂ ಬಾಲ-ಯುವಕ-ವೃದ್ಧ ಪಾರಿಷದರೂ ಸಹಸ್ರಾರು ಸಂಖ್ಯೆಗಳಲ್ಲಿ ಕುಮಾರನ ಸೇವೆಯಲ್ಲಿ ನಿರತರಾಗಿದ್ದರು. ನಾನಾವಿಧದ ಮುಖಗಳಿದ್ದ ಅವರ ಕುರಿತು ಹೇಳುತ್ತೇನೆ ಕೇಳು. ಆಮೆ-ಕೋಳಿಯ ಮುಖದವರು, ಮೊಲ-ಗೂಬೆಯ ಮುಖದವರು, ಕತ್ತೆ-ಒಂಟೆಯ ಮುಖದವರು, ಹಂದಿಯ ಮುಖದವರು, ಮನುಷ್ಯ-ಆಡಿನ ಮುಖದವರು, ಮೊಲದ ಮುಖದವರು, ಸೃಗಾಲದ ಮುಖವುಳ್ಳವರು, ಭಯಂಕರ ಮೊಸಳೆಯ ಮುಖವುಳ್ಳವರು, ಶಿಂಶುಮಾರದ ಮುಖವುಳ್ಳವರು, ಬೆಕ್ಕು-ಮೊಲಗಳ ಮುಖವುಳ್ಳವರು, ಉದ್ದನೆಯ ಮುಖವುಳ್ಳವರು, ಮುಂಗಸಿ-ಗೂಬೆಯ ಮುಖವುಳ್ಳವರು, ನಾಯಿಯ ಮುಖವುಳ್ಳವರು, ಕಾಗೆ-ಇಲಿಗಳ ಮುಖವುಳ್ಳವರು, ನವಿಲಿನ ಮುಖವುಳ್ಳವರು, ಮೀನು-ಆಡುಗಳ ಮುಖವುಳ್ಳವರು, ಕುರಿ-ಎಮ್ಮೆಗಳ ಮುಖವುಳ್ಳವರು, ಭಯಂಕರ ಆನೆಗಳ ಮುಖವುಳ್ಳವರು, ಗರುಡನ ಮುಖವುಳ್ಳವರು, ಖಡ್ಗದಂತಹ ಮುಖವುಳ್ಳವರು, ತೋಳ-ಕಾಗೆಗಳ ಮುಖವುಳ್ಳವರು, ಗೋವು-ಕತ್ತೆ-ಒಂಟೆಗಳ ಮುಖವುಳ್ಳವರು, ಕಾಡುಬೆಕ್ಕಿನ ಮುಖದವರೂ ಇದ್ದರು. ಕೆಲವರಿಗೆ ದೊಡ್ಡ ದೊಡ್ಡ ಹೊಟ್ಟೆ-ಕಾಲುಗಳಿದ್ದವು. ಕೆಲವರಿಗೆ ನಕ್ಷತ್ರಗಳಂತೆ ಹೊಳೆಯುವ ಕಣ್ಣುಗಳಿದ್ದವು. ಕೆಲವರ ಮುಖಗಳು ಪಾರಿವಾಳಗಳಂತಿದ್ದರೆ ಇನ್ನು ಕೆಲವರಿಗೆ ಎತ್ತಿನ ಮುಖಗಳಿದ್ದವು. ಅನ್ಯರು ಕೋಕಿಲವದನರೂ, ಗಿಡುಗ-ಅಗ್ನಿಪಕ್ಷಿಗಳ ಮುಖಗಳುಳ್ಳವರೂ, ಓತಿಕೇತದ ಮುಖವುಳ್ಳವರೂ ಆಗಿದ್ದು ಧೂಳಿಲ್ಲದ ಶುಭ್ರ ವಸ್ತ್ರಗಳನ್ನು ಧರಿಸಿದ್ದರು. ಹಾವಿನ ಮುಖದವರು, ಶೂಲಮುಖರು, ಚಂಡವಕ್ತ್ರರು, ಶತಾನನರು, ನಾಗರಹಾವಿನ ಮುಖದವರು ಮತ್ತು ಹಾಗೆಯೇ ಗೋವಿನ ಮೂಗನ್ನು ಹೊಂದಿದ್ದ ಅವರು ನಾರುಮಡಿಗಳನ್ನು ಧರಿಸಿದ್ದರು. ನಾನಾ ಸರ್ಪಗಳಿಂದ ವಿಭೂಷಿತರಾದ ಅವರು ದೊಡ್ಡ ಹೊಟ್ಟೆಯುಳ್ಳವರೂ, ಬಡಕಲು ದೇಹದವರೂ, ದಪ್ಪ ಅಂಗಾಂಗಗಳು ಮತ್ತು ಸಣ್ಣ ಹೊಟ್ಟೆಯವರು, ಗಿಡ್ಡ ಕತ್ತುಳ್ಳವರೂ, ಮಹಾಕಿವಿಯುಳ್ಳವರೂ ಆಗಿದ್ದರು.
ಗಜೇಂದ್ರ ಚರ್ಮ-ಕೃಷ್ಣಾಜಿನಗಳನ್ನು ಉಡುಪಾಗಿ ಉಟ್ಟಿದ್ದರು. ಕೆಲವರ ಮುಖಗಳು ಭುಜಗಳಲ್ಲಿದ್ದರೆ ಇನ್ನು ಕೆಲವರ ಮುಖಗಳು ಹೊಟ್ಟೆಯಲ್ಲಿದ್ದವು. ಅನೇಕರ ಮುಖಗಳು ದೇಹದ ನಾನಾಕಡೆಗಳಲ್ಲಿದ್ದವು: ಬೆನ್ನಿನಲ್ಲಿ ಮುಖಗಳಿದ್ದವು, ಬಾಯಿಯ ಪಕ್ಕದಲ್ಲಿ ಮುಖಗಳಿದ್ದವು, ಮೊಣಕಾಲಿನಲ್ಲಿ ಮುಖಗಳಿದ್ದವು. ಕೆಲವು ಗಣೇಶ್ವರ ಮುಖಗಳು ಕೀಟ-ಪತಂಗಗಳಂತೆ ಇದ್ದವು. ಅನ್ಯರ ಮುಖಗಳು ಹಾವುಗಳಂತಿದ್ದವು. ಅನೇಕ ಬಾಹು-ಶಿರ-ಹೊಟ್ಟೆಗಳಿದ್ದವು. ಕೆಲವರಿಗೆ ವೃಕ್ಷಗಳಂತೆ ನಾನಾಭುಜಗಳಿದ್ದವು. ಇನ್ನು ಕೆಲವರ ತಲೆಗಳು ಕಟೀಪ್ರದೇಶದಲ್ಲಿದ್ದವು. ನಾಗರ ಹಾವಿನ ಹೆಡೆಯ ಮುಖಗಳಿದ್ದವು. ನಾನಾ ಗುಲ್ಮಗಳಲ್ಲಿ ವಾಸಿಸುವರಾಗಿದ್ದರು. ನಾರುಮಡಿಗಳನ್ನು ದೇಹಕ್ಕೆ ಸುತ್ತಿಕೊಂಡಿದ್ದರು. ಹಾಗೆಯೇ ಕೆಲವರು ಚಿನ್ನದ ವಸ್ತ್ರಗಳನ್ನು ಧರಿಸಿದ್ದರು. ನಾನಾವೇಷಗಳನ್ನು ದರಿಸಿದ್ದ ಕೆಲವರು ಚರ್ಮಗಳನ್ನೇ ವಸ್ತ್ರವಾಗಿ ಉಟ್ಟಿದ್ದರು. ಕೆಲವರು ಮುಂಡಾಸುಗಳನ್ನು ಧರಿಸಿದ್ದರು. ಕೆಲವರು ಮುಕುಟಗಳನ್ನು ಧರಿಸಿದ್ದರು. ಕೆಲವರಿಗೆ ಸುಂದರ ಕಂಠಗಳಿದ್ದವು. ಸುಂದರ ಮುಖಗಳಿದ್ದವು. ಕಿರೀಟಗಳನ್ನು ಧರಿಸಿದ್ದರು. ಐದು ಜುಟ್ಟುಗಳಿದ್ದವು. ಚಿನ್ನದ ಕೂದಲಿನವರಿದ್ದರು. ಮೂರು ಜುಟ್ಟುಗಳು, ಎರಡು ಜುಟ್ಟುಗಳು ಮತ್ತು ಇತರರಿಗೆ ಏಳು ಜುಟ್ಟುಗಳು ಇದ್ದವು. ಕೆಲವರು ನವಿಲುಗರಿಯನ್ನು ಧರಿಸಿದ್ದರು. ಕೆಲವರು ಮುಕುಟಗಳನ್ನು ಧರಿಸಿದ್ದರು. ಕೆಲವರು ಬೋಳಾಗಿದ್ದರು. ಕೆಲವರು ಜಟೆಯನ್ನು ಧರಿಸಿದ್ದರು. ಬಣ್ಣಬಣ್ಣದ ಮಾಲೆಗಳನ್ನು ಕೆಲವರು ಧರಿಸಿದ್ದರೆ ಇನ್ನು ಕೆಲವರ ಮುಖದ ತುಂಬಾ ಕೂದಲುಗಳಿದ್ದವು. ದಿವ್ಯಮಾಲಾಂಬರಗಳನ್ನು ಧರಿಸಿದ್ದ ಕೆಲವರು ಸತತವೂ ಸುಂದರರಾಗಿ ಕಾಣುತ್ತಿದ್ದರು. ಕಪ್ಪಾಗಿದ್ದವರು, ಮಾಂಸವೇ ಇಲ್ಲದ ಮುಖವುಳ್ಳವರು, ಉದ್ದವಾದ ಕುಂಡೆಗಳುಳ್ಳ, ಉದ್ದವಾದ ದೇಹಗಳುಳ್ಳ, ದೊಡ್ಡ ಕುಂಡೆಗಳುಳ್ಳ, ಸಣ್ಣ ಕುಂಡೆಗಳುಳ್ಳ, ಉದ್ದವಾದ ಹೊಟ್ಟೆಗಳುಳ್ಳವರು ಅಲ್ಲಿದ್ದರು. ಮಹಾಭುಜಗಳುಳ್ಳವರು, ಸಣ್ಣ ಭುಜಗಳುಳ್ಳವರು, ಸಣ್ಣದೇಹದವರು, ವಾಮನರು, ಕುಬ್ಜರು, ದೀರ್ಘ ಮೊಣಕಾಲಿನವರು, ಆನೆಯ ಕಿವಿ-ಶಿರಗಳನ್ನು ಧರಿಸಿದವರು, ಆನೆಯ ಮೂಗಿರುವ, ಆಮೆಯ ಮೂಗಿರುವ, ತೋಳದ ಮೂಗಿರುವ, ಉದ್ದ ತುಟಿಗಳುಳ್ಳ, ಉದ್ದ ನಾಲಗೆಯ, ವಿಕಾರಮುಖವುಳ್ಳ, ಅಧೋಮುಖವುಳ್ಳ, ದೊಡ್ಡ ಹಲ್ಲುಗಳಿದ್ದ, ಸಣ್ಣ ಹಲ್ಲುಗಳಿದ್ದ, ನಾಲ್ಕು ಹಲ್ಲುಗಳಿದ್ದ, ಮತ್ತು ಆನೆಗಳಂತೆ ಭಯಂಕರರಾಗಿ ಕಾಣುತ್ತಿದ್ದ ಸಹಸ್ರಾರು ಪಾರ್ಷದರು ಅಲ್ಲಿದ್ದರು.
ಸರಿಯಾದ ಅಳತೆಯಲ್ಲಿದ್ದ ಶರೀರಿಗಳೂ, ಅಲಂಕಾರಗಳಿಂದ ಬೆಳಗುತ್ತಿದ್ದವರೂ, ಪಿಂಗಾಕ್ಷರೂ, ಶಂಖುಕರ್ಣರು, ವಕ್ರಮೂಗುಳ್ಳವರೂ, ದಪ್ಪ ಹಲ್ಲಿರುವವರು, ಮಹಾದಂಷ್ಟ್ರಗಳುಳ್ಳವರು, ದಪ್ಪ ತುಟಿಗಳಿದ್ದವರು, ಹಸಿರು ಕೂದಲಿದ್ದವರು, ನಾನಾ ಪಾದ-ತುಟಿ-ಹಲ್ಲುಗಳಿದ್ದವರು, ನಾನಾ ಹಸ್ತ-ಶಿರಗಳಿದ್ದವರು, ನಾನಾ ಕವಚಗಳನ್ನು ಧರಿಸಿದ್ದವರು, ನಾನಾಭಾಷೆಗಳುಳ್ಳವರು, ದೇಶ-ಭಾಷೆಗಳಲ್ಲಿ ಕುಶಲರಾದವರು, ಅನ್ಯೋನ್ಯರೊಂದಿಗೆ ಮಾತನಾಡಿಕೊಳ್ಳುತ್ತಿದ್ದವರು ಹೃಷ್ಟರಾಗಿ ಎಲ್ಲಕಡೆಗಳಲ್ಲಿ ಸಂಚರಿಸುತ್ತಿದ್ದವರು ಆ ಮಹಾಪರಿಷದದಲ್ಲಿದ್ದರು. ಉದ್ದ ಕಂಠಗಳುಳ್ಳವರು, ಉದ್ದ ಉಗುರುಗಳುಳ್ಳವರು, ಉದ್ದವಾದ ಪಾದ-ಶಿರ-ಭುಜಗಳುಳ್ಳವರು, ಪಿಂಗಾಕ್ಷರು, ನೀಲಕಂಠರು, ಲಂಬಕರ್ಣರು ಅಲ್ಲಿದ್ದರು. ತೋಳದ ಹೊಟ್ಟೆಯವರಿದ್ದರು. ಕೆಲವರು ಕಾಡಿಗೆಯಂತೆ ಕಪ್ಪಾಗಿದ್ದರು. ಕೆಲವರು ಬಿಳಿಯಾಗಿದ್ದರು. ಕೆಲವರ ಕತ್ತುಗಳು ಕೆಂಪಾಗಿದ್ದವು. ಇನ್ನು ಇತರರ ಕಣ್ಣುಗಳು ಪಿಂಗಳ ವರ್ಣದ್ದಾಗಿದ್ದವು. ಅನೇಕರು ಮಿಶ್ರವಾದ ವಿಚಿತ್ರ ಬಣ್ಣದವರಾಗಿದ್ದರು. ಕೆಲವರು ಚಾಮರಗಳಂತೆ ಶ್ವೇತವರ್ಣದವರಾಗಿದ್ದರು ಇನ್ನು ಕೆಲವರು ಬಿಳಿಪು-ಕೆಂಪುಬಣ್ಣದವರಾಗಿದ್ದರು. ಕೆಲವರು ನವಿಲುಗಳಂತೆ ನಾನಾವರ್ಣಗಳು ಮತ್ತು ಸುವರ್ಣದ ಬಣ್ಣವನ್ನು ಹೊಂದಿದ್ದರು. ಬಾಯಿಗಳನ್ನು ತೆರೆದಿದ್ದ ಕೆಲವರು ಕತ್ತೆಗಳ ಮುಖಗಳುಳ್ಳವರು, ಅಗಲ ಕಣ್ಣುಗಳುಳ್ಳವರು, ನೀಲಕಂಠರು ಮತ್ತು ಪರಿಘದಂತಹ ಬಾಹುಗಳುಳ್ಳವರು ಪಾಶಗಳನ್ನು ಎತ್ತಿಹಿಡಿದಿದ್ದರು. ಆ ಮಹಾಕಾಯ ಮಹಾಬಲರು ಶತಘ್ನೀ-ಚಕ್ರಗಳನ್ನು ಹಿಡಿದಿದ್ದರು. ಮುಸಲಗಳನ್ನು ಹಿಡಿದಿದ್ದರು. ಶೂಲ-ಖಡ್ಗಗಳನ್ನು ಹಿಡಿದಿದ್ದರು. ಗದೆ-ಭುಶುಂಡಿಗಳನ್ನು ಹಿಡಿದಿದ್ದರು. ತೋಮರಗಳನ್ನು ಹಿಡಿದಿದ್ದರು. ಖಡ್ಗ-ಮುದ್ಗರಗಳನ್ನು ಹಿಡಿದಿದ್ದರು. ಮತ್ತು ದಂಡಗಳನ್ನು ಹಿಡಿದಿದ್ದರು. ವಿವಿಧ ಘೋರ ಆಯುಧಗಳನ್ನು ಹಿಡಿದ ಮಹಾತ್ಮ, ಮಹಾವೇಗವುಳ್ಳ ಮಹಾಬಲ ಮಹಾವೇಗರು ಆ ಮಹಾಪಾರಿಷದರಲ್ಲಿದ್ದರು. ಕುಮಾರನ ಅಭಿಷೇಕವನ್ನು ನೋಡಿ ಹೃಷ್ಟರಾಗಿ ಆ ರಣಪ್ರಿಯ ಮಹೌಜಸರು ಘಂಟೆಗಳ ಬಲೆಯನ್ನು ಶರೀರಕ್ಕೆ ಸುತ್ತಿಕೊಂಡು ನೃತ್ಯಮಾಡುತ್ತಿದ್ದರು. ಇವರು ಮತ್ತು ಅನ್ಯ ಅನೇಕ ಮಹಾಪಾರಿಷದರು ಯಶಸ್ವಿ ಮಹಾತ್ಮ ಕಾರ್ತಿಕೇಯನ ಉಪಸ್ಥಿತಿಯಲ್ಲಿದ್ದರು.
ಸ್ವರ್ಗ-ಅಂತರಿಕ್ಷ-ಭೂಲೋಕಗಳ ವಾಯುಸದೃಶ ಪರಿಷದ್ವರ್ಗದವರು ದೇವತೆಗಳ ಆದೇಶದಂತೆ ಸ್ಕಂದನ ಅನುಚರರಾದರು. ಅಂತಹ ಸಹಸ್ರಾರು ಲಕ್ಷೋಪಲಕ್ಷ ಕೋಟ್ಯಾನುಕೋಟಿ ಮಹಾಪಾರ್ಷದರು ಅಭಿಷಿಕ್ತನಾದ ಆ ಮಹಾತ್ಮನನ್ನು ಸುತ್ತುವರೆದು ನಿಂತಿದ್ದರು.
ಯಾರಿಂದ ಈ ಚರಾಚರ ಲೋಕಗಳು ವ್ಯಾಪ್ತವಾಗಿಯೋ ಆ ಯಶಸ್ವಿನೀ-ಕಲ್ಯಾಣೀ ಮಾತೃಗಳ ಹೆಸರುಗಳು: ಪ್ರಭಾವತೀ, ವಿಶಾಲಾಕ್ಷೀ, ಪಾಲಿತಾ, ಗೋನಸೀ, ಶ್ರೀಮತೀ, ಬಹುಲಾ, ಬಹುಪುತ್ರಿಕಾ, ಅಪ್ಸುಜಾತಾ, ಗೋಪಾಲೀ, ಬೃಹದಂಬಾಲಿಕಾ, ಜಯಾವತೀ, ಮಾಲತಿಕಾ, ಧ್ರುವರತ್ನಾ, ಭಯಂಕರೀ, ವಸುದಾಮಾ, ಸುದಾಮಾ, ವಿಶೋಕಾ, ನಂದಿನೀ, ಏಕಚೂಡಾ, ಮಹಾಚೂಡಾ, ಚಕ್ರನೇಮಿ, ಉತ್ತೇಜನೀ, ಜಯತ್ಸೇನಾ, ಕಮಲಾಕ್ಷೀ, ಶೋಭನಾ, ಶತ್ರುಂಜಯಾ, ಕ್ರೋಧನಾ, ಶಲಭೀ, ಖರೀ, ಮಾಧವೀ, ಶುಭವಕ್ತ್ರಾ, ತೀರ್ಥನೇಮಿ, ಗೀತಪ್ರಿಯಾ, ಕಲ್ಯಾಣೀ, ಕದ್ರುಲಾ, ಅಮಿತಾಶನಾ, ಮೇಘಸ್ವನಾ, ಭೋಗವತೀ, ಸುಭ್ರೂ, ಕನಕಾವತೀ, ಅಲಾತಾಕ್ಷೀ, ವೀರ್ಯವತೀ, ವಿದ್ಯುಜ್ಜಿಹ್ವಾ, ಪದ್ಮಾವತೀ, ಸುನಕ್ಷತ್ರಾ, ಕಂದರಾ, ಬಹುಯೋಜನಾ, ಸಂತಾನಿಕಾ, ಕಮಲಾ, ಮಹಾಬಲಾ, ಸುದಾಮಾ, ಬಹುದಾಮಾ, ಸುಪ್ರಭಾ, ಯಶಸ್ವಿನೀ, ನೃತ್ಯಪ್ರಿಯಾ, ಶತೋಲೂಖಲಮೇಖಲ, ಶತಘಂಟಾ, ಶತಾನಂದಾ, ಭಗನಂದಾ, ಭಾಮಿನೀ, ವಪುಷ್ಮತೀ, ಚಂದ್ರಶೀತಾ, ಭದ್ರಕಾಲೀ, ಸಂಕಾರಿಕಾ, ನಿಷ್ಕುಟಿಕಾ, ಭ್ರಮಾ, ಚತ್ವರವಾಸಿನೀ, ಸುಮಂಗಲಾ, ಸ್ವಸ್ತಿಮತೀ, ವೃದ್ಧಿಕಾಮಾ, ಜಯಪ್ರಿಯಾ, ಧನದಾ, ಸುಪ್ರಸಾದಾ, ಭವದಾ, ಜಲೇಶ್ವರೀ, ಏಡೀ, ಭೇಡೀ, ಸಮೇಡೀ, ವೇತಾಲಜನನೀ, ಕಂಡೂತೀ, ಕಾಲಿಕಾ, ದೇವಮಿತ್ರಾ, ಲಂಬಸೀ, ಕೇತಕೀ, ಚಿತ್ರಸೇನಾ, ಬಲಾ, ಕುಕ್ಕುಟಿಕಾ, ಶಂಖನಿಕಾ, ಜರ್ಜರಿಕಾ, ಕುಂಡಾರಿಕಾ, ಕೋಕಲಿಕಾ, ಕಂಡರಾ, ಶತೋದರೀ, ಉತ್ಕ್ರಾಥಿನೀ, ಜರೇಣಾ, ಮಹಾವೇಗಾ, ಕಂಕಣಾ, ಮನೋಜವಾ, ಕಂಟಕಿನೀ, ಪ್ರಘಸಾ, ಪೂತನಾ, ಖಶಯಾ, ಚುರ್ವ್ಯುಟೀ, ವಾಮಾ, ಕ್ರೋಶನಾಥ, ತಡಿತ್ಪ್ರಭಾ, ಮಂಡೋದರೀ, ತುಂಡಾ, ಕೋಟರಾ, ಮೇಘವಾಸಿನೀ, ಸುಭಗಾ, ಲಂಬಿನೀ, ಲಂಬಾ, ವಸುಚೂಡಾ, ವಿಕತ್ಥನೀ, ಊರ್ಧ್ವವೇಣೀಧರಾ, ಪಿಂಗಾಕ್ಷೀ, ಲೋಹಮೇಖಲಾ, ಪೃಥುವಕ್ತ್ರಾ, ಮಧುರಿಕಾ, ಮಧುಕುಂಭಾ, ಪಕ್ಷಾಲಿಕಾ, ಮಂಥನಿಕಾ, ಧಮಧಮಾ, ಖಂಡಖಂಡಾ, ಪೂಷಣಾ, ಮಣಿಕುಂಡಲಾ, ಅಮೋಚಾ, ಲಂಬಪಯೋಧರಾ, ವೇಣುವೀಣಾಧರಾ, ಪಿಂಗಾಕ್ಷೀ, ಲೋಹಮೇಖಲಾ, ಶಶೋಲೂಕಮುಖೀ, ಕೃಷ್ಣಾ, ಖರಜಂಘಾ, ಮಹಾಜವಾ, ಶಿಶುಮಾರಮುಖೀ, ಶ್ವೇತಾ, ಲೋಹಿತಾಕ್ಷೀ, ವಿಭೀಷಣಾ, ಜಟಾಲಿಕಾ, ಕಾಮಚರೀ, ದೀರ್ಘಜಿಹ್ವಾ, ಬಲೋತ್ಕಟಾ, ಕಾಲೇಡಿಕಾ, ವಾಮನಿಕಾ, ಮುಕುಟಾ, ಲೋಹಿತಾಕ್ಷೀ, ಮಹಾಕಾಯಾ, ಹರಿಪಿಂಡೀ, ಏಕಾಕ್ಷರಾ, ಸುಕುಸುಮಾ, ಕೃಷ್ಣಕರ್ಣೀ, ಕ್ಷುರಕರ್ಣೀ, ಚತುಷ್ಕರ್ಣೀ, ಕರ್ಣಪ್ರಾವರಣಾ, ಚತುಷ್ಪಥನಿಕೇತಾ, ಗೋಕರ್ಣೀ, ಮಹಿಷಾನನಾ, ಖರಕರ್ಣೀ, ಮಹಾಕರ್ಣೀ, ಭೇರೀಸ್ವನಮಹಾಸ್ವನಾ, ಶಂಖಕುಂಭಸ್ವನಾ, ಭಂಗದಾ, ಮಹಾಬಲಾ, ಗಣಾ, ಸುಗಣಾ, ಕಾಮದಾ, ಚತುಷ್ಪಥರತಾ, ಭೂತಿತೀರ್ಥಾ, ಅನ್ಯಗೋಚರಾ, ಪಶುದಾ, ವಿತ್ತದಾ, ಸುಖದಾ, ಪಯೋದಾ, ಗೋಮಹಿಷದಾ, ಸುವಿಷಾಣಾ, ಪ್ರತಿಷ್ಠಾ, ಸುಪ್ರತಿಷ್ಠಾ, ರೋಚಮಾನಾ, ಸುರೋಚನಾ, ಗೋಕರ್ಣೀ, ಸುಕರ್ಣೀ, ಸಸಿರಾ, ಸ್ಥೇರಿಕಾ, ಏಕಚಕ್ರಾ, ಮೇಘರವಾ, ಮೇಘಮಾಲಾ, ವಿರೋಚನಾ. ಇವರು ಮತ್ತು ಇನ್ನೂ ಅನೇಕ ಸಹಸ್ರ ನಾನಾರೂಪೀ ಮಾತೃಗಳು ಕಾರ್ತಿಕೇಯನ ಅನುಯಾಯಿಗಳಾಗಿದ್ದರು.
ಅವರ ಉಗುರುಗಳು ದೀರ್ಘವಾಗಿದ್ದವು, ಹಲ್ಲುಗಳು ದೀರ್ಘವಾಗಿದ್ದವು, ಮುಖಗಳೂ ದೀರ್ಘವಾಗಿದ್ದವು. ಅವರು ಸುಂದರಿಯರೂ, ಮಧುರರೂ, ಯೌವನಸ್ಥರೂ, ಸ್ವಲಂಕೃತರೂ ಆಗಿದ್ದರು. ಮಹಾತ್ಮೆಗಳಿಂದ ಸಂಯುಕ್ತರಾಗಿದ್ದರು. ಬೇಕಾದ ರೂಪಗಳನ್ನು ಧರಿಸಬಲ್ಲವರಾಗಿದ್ದರು, ದೇಹಗಳಲ್ಲಿ ಮಾಂಸಗಳೇ ಇರಲಿಲ್ಲ. ಬಿಳುಪಾಗಿ ಬಂಗಾರದ ಕಾಂತಿಯನ್ನು ಹೊಂದಿದ್ದರು. ಕೆಲವರು ಕಪ್ಪುಮೋಡಗಳ ಕಾಂತಿಯುಕ್ತರಾಗಿದ್ದರೆ, ಇನ್ನು ಕೆಲವರು ಹೊಗೆ ಮತ್ತು ಕೆಂಪು ಬಣ್ಣಗಳನ್ನು ಹೊಂದಿದ್ದರು. ಆ ಮಹಾಭಾಗೆಯರ ಕೂದಲುಗಳು ಉದ್ದವಾಗಿದ್ದವು, ಮತ್ತು ಅವರು ಬಿಳಿಯ ವಸ್ತ್ರಗಳನ್ನು ಧರಿಸಿದ್ದರು. ಕೆಲವರು ತಲೆಗೂದಲನ್ನು ಮೇಲಕ್ಕೆ ಕಟ್ಟಿದ್ದರು. ಕಣ್ಣುಗಳು ಕಂದುಬಣ್ಣದ್ದಾಗಿದ್ದವು. ಉದ್ದವಾದ ಒಡ್ಯಾಣಗಳನ್ನು ಧರಿಸಿದ್ದರು. ಕೆಲವರಿಗೆ ನೀಳವಾದ ಹೊಟ್ಟೆ, ನೀಳವಾದ ಕಿವಿಗಳು ಮತ್ತು ನೀಳವಾದ ಮೊಲೆಗಳಿದ್ದವು. ರಕ್ತಾಕ್ಷಿಯರೂ, ರಕ್ತವರ್ಣದವರೂ ಆಗಿದ್ದರು. ಇನ್ನು ಕೆಲವರ ಕಣ್ಣುಗಳು ಹಸಿರುಬಣ್ಣದ್ದಾಗಿದ್ದವು. ವರಗಳನ್ನೀಯುವ ಅವರು ಬೇಕಾದಲ್ಲಿಗೆ ಹೋಗುವವರೂ ನಿತ್ಯ ಪ್ರಮೋದದಲ್ಲಿರುವವರೂ ಆಗಿದ್ದರು. ಆ ಮಹಾಬಲರು ಯಮ-ರುದ್ರ-ಸೋಮ-ಕುಬೇರ-ವರುಣ-ಮಹೇಂದ್ರ-ಅಗ್ನಿ-ವಾಯು-ಕುಮಾರ-ಬ್ರಹ್ಮರ ಶಕ್ತಿಗಳನ್ನು ಹೊಂದಿದ್ದರು. ರೂಪದಲ್ಲಿ ಅಪ್ಸರೆಯರಿಗೆ ಸಮನಾಗಿದ್ದರು ಮತ್ತು ವೇಗದಲ್ಲಿ ವಾಯುವಿಗೆ ಸಮನಾಗಿದ್ದರು. ಅವರು ಮಾತಿನಲ್ಲಿ ಕೋಗಿಲೆಗಳಂತೆ, ಸಂಪತ್ತಿನಲ್ಲಿ ಕುಬೇರನಂತೆ, ವೀರ್ಯದಲ್ಲಿ ಶಕ್ರನಂತೆ, ಕಾಂತಿಯಲ್ಲಿ ಅಗ್ನಿಯಂತೆ ಇದ್ದರು. ಅವರು ವೃಕ್ಷಗಳಲ್ಲಿಯೂ, ಮನೆಯ ಮುಂಬಾಗದ ಅಂಗಳಗಳಲ್ಲಿಯೂ, ನಾಲ್ಕು ದಾರಿಗಳು ಸೇರುವ ಚೌಕಗಳಲ್ಲಿಯೂ, ಗುಹೆಗಳಲ್ಲಿಯೂ, ಶ್ಮಶಾನಗಳಲ್ಲಿಯೂ, ಪರ್ವತಗಳಲ್ಲಿಯೂ, ಝರಿಗಳು ಹರಿಯುವಲ್ಲಿಯೂ ವಾಸಮಾಡುವರು. ನಾನಾಭರಣಗಳನ್ನು ಧರಿಸಿದ್ದರು. ಹಾಗೆಯೇ ನಾನಾ ಮಾಲೆ-ವಸ್ತ್ರಗಳನ್ನು ಧರಿಸಿದ್ದರು. ನಾನಾ ವಿಚಿತ್ರ ವೇಷಗಳನ್ನು ಧರಿಸಿದ್ದ ಅವರು ನಾನಾ ಭಾಷೆಗಳಲ್ಲಿ ಮಾತನಾಡುತ್ತಿದ್ದರು. ಇವರು ಮತ್ತು ಇನ್ನೂ ಅನೇಕ ಶತ್ರುಭಯಂಕರ ಗಣಗಳು ತ್ರಿದಶೇಂದ್ರನ ಸಮ್ಮತಿಯಂತೆ ಮಹಾತ್ಮ ಸ್ಕಂದನನ್ನು ಬಂದು ಸೇರಿದವು.
ಅನಂತರ ಸುರದ್ವೇಷಿಗಳ ವಿನಾಶಕ್ಕಾಗಿ ಭಗವಾನ್ ಪಾಕಶಾಸನನು ಗುಹನಿಗೆ ಶಕ್ತಿಯನ್ನೂ, ಬಿಳೀ ಪ್ರಭೆಯಿಂದ ಬೆಳಗುತ್ತಿದ್ದ ಮಹಾಧ್ವನಿಯ ಮಹಾಘಂಟವನ್ನೂ, ಉದಯಿಸುವ ಸೂರ್ಯನ ಬಣ್ಣದ ಪತಾಕೆಯನ್ನೂ ಕೊಟ್ಟನು. ಪಶುಪತಿಯೂ ಕೂಡ ಆ ಸರ್ವಭೂತಗಳ ಮಹಾಸೇನೆಗೆ ಉಗ್ರವೂ ತಪೋವೀರ್ಯಬಲಾನ್ವಿತವೂ ಆದ ನಾನಾ ಆಯುಧಗಳನ್ನಿತ್ತನು. ವಿಷ್ಣುವು ಬಲವನ್ನು ವರ್ಧಿಸುವ ವೈಜಯಂತೀ ಮಾಲೆಯನ್ನು ಕೊಟ್ಟನು. ಉಮೆಯು ಸೂರ್ಯಪ್ರಭೆಯುಳ್ಳ ನಿರ್ಮಲ ವಸ್ತ್ರಗಳನ್ನಿತ್ತಳು. ಗಂಗೆಯು ಅಮೃತವನ್ನು ನೀಡುವ ಉತ್ತಮ ಕಮಂಡಲುವನ್ನು, ಮತ್ತು ಬೃಹಸ್ಪತಿಯು ದಂಡವನ್ನು ಪ್ರೀತಿಯಿಂದ ಕುಮಾರನಿಗೆ ಕೊಟ್ಟರು. ಗರುಡನು ಪ್ರೀತಿಯ ಪುತ್ರ, ಬಣ್ಣಬಣ್ಣದ ಗರಿಗಳ ಮಯೂರನನ್ನು ಮತ್ತು ಅರುಣನು ಕೆಂಪು ಪುಚ್ಚದ, ಪಂಜುಗಳೇ ಆಯುಧವಾಗಿದ್ದ ಹುಂಜವನ್ನು ನೀಡಿದರು. ವರುಣನು ಬಲವೀರ್ಯಸಮಾನ್ವಿತ ಪಾಶವನ್ನೂ ಹಾಗೆಯೇ ಪ್ರಭು ಲೋಕಭಾವನ ಬ್ರಹ್ಮನು ಆ ಬ್ರಹ್ಮಣ್ಯನಿಗೆ ಕೃಷ್ಣಾಜಿನವನ್ನೂ ಸಮರದಲ್ಲಿ ಜಯವನ್ನೂ ನೀಡಿದನು. ದೇವಗಣದ ಸೇನಾಪತ್ಯವನ್ನು ಪಡೆದ ಸ್ಕಂದನು ಎರಡನೇ ಪಾವಕನೋ ಎನ್ನುವಂತೆ ತೇಜಸ್ಸಿನಿಂದ ಪ್ರಜ್ವಲಿಸಿ ಶೋಭಿಸಿದನು. ಆಗ ಪಾರಿಷದರು ಮತ್ತು ಮಾತೃಗಣಗಳಿಂದ ಸಮಾವೃತವಾದ ಆ ನೈಋತೀ ಸೇನೆಯು ಗಂಟೆಗಳು ಮತ್ತು ಹಾರಾಡುತ್ತಿದ್ದ ಧ್ವಜಗಳಿಂದ, ಭೇರೀ-ಶಂಖಗಳ ಧ್ವನಿಗಳಿಂದ ಕೂಡಿ ಭಯಂಕರವಾಗಿತ್ತು. ಆಯುಧ-ಪತಾಕೆಗಳಿಂದ ಕೂಡಿದ ಆ ಸೇನೆಯು ನಕ್ಷತ್ರಗಳಿಂದ ಕೂಡಿದ ಶರತ್ಕಾಲದ ಆಕಾಶದಂತೆ ಪ್ರಕಾಶಿಸುತ್ತಿತ್ತು. ಆಗ ದೇವಸೇನೆ ಮತ್ತು ಭೂತಸೇನಾಗಣಗಳು ಅವ್ಯಗ್ರ ಮಹಾಸ್ವನ ಭೇರೀ-ಶಂಖ-ಪಟಹ-ಝರ್ಝರ-ಕೃಕಚ-ಗೀವಿಷಾಣಿಕ-ಆಡಂಬರ-ಗೋಮುಖ-ಡಿಂಡಿಮಗಳನ್ನು ಬಾರಿಸಿದರು. ವಾಸವನೊಂದಿಗೆ ಸರ್ವದೇವತೆಗಳೂ ಕುಮಾರನನ್ನು ಸ್ತೋತ್ರಮಾಡಿದರು. ದೇವ-ಗಂಧರ್ವ-ಅಪ್ಸರಗಣಗಳು ನೃತ್ಯಮಾಡಿದವು. ಆಗ ಪ್ರೀತನಾದ ಮಹಾಸೇನನು ತ್ರಿದಶರಿಗೆ “ನಿಮ್ಮನ್ನು ವಧಿಸಲು ಬಯಸಿರುವ ರಿಪುಗಳನ್ನು ಸಮರದಲ್ಲಿ ಸಂಹರಿಸುತ್ತೇನೆ!” ಎಂದು ವರವನ್ನಿತ್ತನು.
ಆ ವಿಬುಧಸತ್ತಮನಿಂದ ವರವನ್ನು ಪಡೆದ ಮಹಾತ್ಮ ದೇವತೆಗಳು ಪ್ರೀತಾತ್ಮರಾಗಿ ರಿಪುಗಳು ಹತರಾದರೆಂದೇ ತಿಳಿದರು. ಮಹಾತ್ಮನು ಆ ವರವನ್ನು ನೀಡಲು ಸರ್ವ ಭೂತಸಂಘಗಳೂ ಹರ್ಷನಾದಗೈಯಲು ಅದು ಮೂರು ಲೋಕಗಳನ್ನೂ ತುಂಬಿತು. ಮಹಾಸೇನೆಯಿಂದ ಆವೃತನಾಗಿ ಮಹಾಸೇನನು ಯುದ್ಧದಲ್ಲಿ ದೈತ್ಯರನ್ನು ವಧಿಸಲು ಮತ್ತು ದಿವೌಕಸರನ್ನು ರಕ್ಷಿಸಲು ಹೊರಟನು. ವ್ಯವಸಾಯ, ಜಯ, ಧರ್ಮ, ಸಿದ್ಧಿ, ಲಕ್ಷ್ಮಿ, ಧೃತಿ, ಸ್ಮೃತಿಗಳು ಮಹಾಸೇನನ ಸೇನೆಯ ಮುಂದೆ ನಡೆದರು. ಶೂಲ-ಮುದ್ಗರ-ಗದೆ-ಮುಸಲ-ನಾರಾಚ-ಶಕ್ತಿ-ತೋಮರಗಳನ್ನು ಹಿಡಿದು ದೃಪ್ತರಾಗಿ ಸಿಂಹನಾದಗೈಯುತ್ತಾ ಗರ್ಜಿಸುತ್ತಾ ಆ ಭಯಂಕರ ಸೇನೆಯೊಂದಿಗೆ ದೇವ ಗುಹನು ಪ್ರಯಾಣಿಸಿದನು. ಅವನನ್ನು ನೋಡಿ ಸರ್ವ ದೈತ್ಯ-ರಾಕ್ಷಸ-ದಾನವರೂ ಭಯೋದ್ವಿಗ್ನರಾಗಿ ಸರ್ವ ದಿಕ್ಕುಗಳಲ್ಲಿಯೂ ಓಡತೊಡಗಿದರು. ದೇವತೆಗಳು ವಿವಿಧ ಆಯುಧಗಳನ್ನು ಹಿಡಿದು ಅವರನ್ನು ಬೆನ್ನಟ್ಟಿ ಹೋದರು. ಆಗ ಅವರನ್ನು ನೋಡಿ ಕ್ರುದ್ಧನಾಗಿ ತೇಜೋಬಲಾನ್ವಿತ ಭಗವಾನ್ ಸ್ಕಂದನು ಪುನಃ ಪುನಃ ಭಯಂಕರ ಶಕ್ತ್ಯಾಸ್ತ್ರವನ್ನು ಪ್ರಕಟಿಸಿ ಹವಿಸ್ಸನ್ನು ಪಡೆದ ಅಗ್ನಿಯು ಹೇಗೋ ಹಾಗೆ ಆತ್ಮತೇಜಸ್ಸನ್ನು ಪ್ರಕಟಿಸಿದನು. ಅಮಿತತೇಜಸ್ವಿ ಸ್ಕಂದನ ಆ ಶಕ್ತ್ಯಾಸ್ತ್ರವು ಉಲ್ಕೆಯಂತೆ ಉರಿಯುತ್ತಾ ವಸುಧಾತಲದಲ್ಲಿ ಬಿದ್ದಿತು. ಅಂತಕಾಲ ಸಮಯದಲ್ಲಿ ಮಹಾಶಬ್ಧದೊಂದಿಗೆ ಸಿಡಿಲು ಬೀಳುವಂತೆ ಆಗ ಭಯಂಕರ ಗರ್ಜನೆಯೊಂದಿಗೆ ಸಿಡಿಲುಗಳು ಭೂಮಿಯ ಮೇಲೆ ಬಿದ್ದವು. ಅಗ್ನಿಪುತ್ರನು ಒಂದೊಂದು ಬಾರಿ ಘೋರ ಶಕ್ತಿಯನ್ನು ಪ್ರಯೋಗಿಸಿದಾಗಲೂ ಅದರಿಂದ ಕೋಟಿ ಕೋಟಿ ಶಕ್ತಿಗಳು ಹೊರಬರುತ್ತಿದ್ದವು. ಭಗವಾನ್ ಪ್ರಭುವು ಸಂಗ್ರಾಮದಲ್ಲಿ ಶಕ್ತ್ಯಾಸ್ತ್ರದಿಂದ ಬಲಿಷ್ಠರಾದ ಒಂದು ಲಕ್ಷ ದೈತ್ಯರಿಂದ ಆವೃತನಾದ ತಾರಕನೆಂಬ ಹೆಸರಿನ ಮಹಾಬಲಪರಾಕ್ರಮಿ ದೈತ್ಯೇಂದ್ರನನ್ನು ಸಂಹರಿಸಿದನು. ಬಳಿಕ ಅವನು ಎಂಟು ಪದ್ಮ[1] ಸಂಖ್ಯಾತ ದೈತ್ಯರಿಂದ ಪರಿವೃತನಾಗಿದ್ದ ಮಹಿಷನನ್ನೂ ರಣದಲ್ಲಿ ವಧಿಸಿದನು. ಅನಂತರ ಹತ್ತು ಲಕ್ಷ ಅಸುರರಿಂದ ಆವೃತನಾಗಿದ್ದ ತ್ರಿಪಾದನನ್ನೂ ಸಂಹರಿಸಿದನು. ಈಶ್ವರನು ವಿವಿಧ ಆಯುಧಗಳನ್ನು ಹಿಡಿದಿದ್ದ ಹತ್ತು ನಿಖರ್ವ[2] ಅನುಚರರೊಂದಿಗೆ ಹ್ರದೋದರನನ್ನೂ ಸಂಹರಿಸಿದನು. ಶತ್ರುಗಳು ವಧಿಸಲ್ಪಡಲು ಕುಮಾರನ ಅನುಚರರು ಹತ್ತು ದಿಕ್ಕುಗಳನ್ನೂ ಮೊಳಗಿಸುವಂತೆ ವಿಪುಲ ಸಿಂಹನಾದಗೈದರು. ಸರ್ವತ್ರ ಪಸರಿಸುತ್ತಿದ್ದ ಶಕ್ತ್ಯಾಸ್ತ್ರದ ಮಹಾಜ್ವಾಲೆಯಿಂದ ಸಹಸ್ರಾರು ದೈತ್ಯರು ಭಸ್ಮೀಭೂತರಾದರು. ಇತರರು ಸ್ಕಂದನ ಸಿಂಹನಾದದಿಂದಲೇ ನಾಶಹೊಂದಿದರು. ಕೆಲವು ಸುರದ್ವಿಷರು ಪಾತಾಕೆಯ ಹಾರಾಡುವಿಕೆಗೆ ಸಿಲುಕಿ ಹತರಾದರು. ಕೆಲವರು ಘಂಟಾರವವನ್ನು ಕೇಳಿಯೇ ವಸುಧಾತಲದಲ್ಲಿ ಬಿದ್ದರು. ಇನ್ನು ಕೆಲವರು ಆಯುಧಪ್ರಹರಗಳಿಂದ ಛಿನ್ನರಾಗಿ ಪ್ರಾಣತೊರೆದು ಬಿದ್ದರು. ಹೀಗೆ ಮಹಾಬಲ ವೀರ ಕಾರ್ತಿಕೇಯನು ಸಮರದಲ್ಲಿ ಅನೇಕ ಬಲವಾನ್ ಸುರದ್ವೇಷೀ ಆತತಾಯಿಗಳನ್ನು ಸಂಹರಿಸಿದನು. ಆಗ ದೈತ್ಯ ಬಲಿಯ ಪುತ್ರ ಬಾಣನೆಂಬ ಮಹಾಬಲನು ಕ್ರೌಂಚಪರ್ವತವನ್ನೇರಿ ದೇವಸಂಘಗಳನ್ನು ಬಾಧಿಸಿದನು. ಉದಾರಧೀ ಮಹಾಸೇನನು ಆ ಸುರಶತ್ರುವನ್ನು ಹಿಂಬಾಲಿಸಿ ಹೋಗಲು ಕಾರ್ತಿಕೇಯನ ಭಯದಿಂದ ಅವನು ಕ್ರೌಂಚವನ್ನೇ ಮೊರೆಹೊಕ್ಕನು. ಆಗ ಮಹಾಕುಪಿತನಾದ ಭಗವಾನ್ ಕಾರ್ತಿಕೇಯನು ಅಗ್ನಿಯು ಕೊಟ್ಟಿದ್ದ ಶಕ್ತಿಯಿಂದ ಕ್ರೌಂಚಪಕ್ಷಿಗಳ ನಿನಾದಗಳಿಂದ ತುಂಬಿದ್ದ ಕ್ರೌಂಚಪರ್ವತವನ್ನೇ ಸೀಳಿದನು. ವಿಶಾಲವೃಕ್ಷಗಳಿಂದ ಹಚ್ಚಹಸಿರಾಗಿದ್ದ ಆ ಪರ್ವತದಲ್ಲಿ ವಾಸಿಸುತ್ತಿದ್ದ ವಾನರರು ಮತ್ತು ಆನೆಗಳು ನಡುಗಿದವು. ಭಯಗೊಂಡ ಪಕ್ಷಿಗಳು ಹಾರಿದವು. ಹಾವುಗಳು ಬಿದ್ದವು. ಲಕ್ಷಾನುಗಟ್ಟಲೆ ಗೋಲಾಂಗೂಲ ಕಪಿಗಳು ಮತ್ತು ಕರಡಿಗಳು ಚೀತ್ಕರಿಸಿ ಕೂಗುತ್ತಾ ಓಡಿಹೋಗುತ್ತಿದ್ದಾಗ ಅವುಗಳ ಚೀತ್ಕಾರವು ಪರ್ವತದಲ್ಲಿ ಪ್ರತಿಧ್ವನಿಸಿದವು. ಶೋಚನೀಯ ದಶೆಯನ್ನು ಹೊಂದಿದ್ದರೂ ಆ ಪರ್ವತವು ರಾರಾಜಿಸುತ್ತಿತ್ತು. ಅದರ ಶೃಂಗದಲ್ಲಿ ವಾಸಿಸುತ್ತಿದ್ದ ವಿದ್ಯಾಧರರು ಆಕಾಶಕ್ಕೆ ಹಾರಿದರು. ಶಕ್ತಿಯ ಪತನದಿಂದ ಉದ್ವಿಗ್ನರಾದ ಕಿನ್ನರರೂ ಮೇಲೆ ಹಾರಿದರು. ಆಗ ವಿಚಿತ್ರಾಭರಣ ಮಾಲೆಗಳನ್ನು ಧರಿಸಿದ್ದ ನೂರಾರು ಸಹಸ್ರಾರು ದೈತ್ಯರು ಉರಿಯುತ್ತಿದ್ದ ಆ ಶ್ರೇಷ್ಠ ಪರ್ವತದಿಂದ ಹೊರಬಿದ್ದರು. ಕುಮಾರನ ಅನುಚರರು ಅವರನ್ನು ಆಕ್ರಮಿಸಿ ಯುದ್ಧದಲ್ಲಿ ಸಂಹರಿಸಿದರು. ಪರವೀರಹ ಪಾವಕಿಯು ಶಕ್ತಿಯಿಂದ ಕ್ರೌಂಚವನ್ನು ತುಂಡುಮಾಡಿದನು. ತನ್ನನ್ನು ತಾನೇ ಒಬ್ಬನಾಗಿಯೂ ಅನೇಕನಾಗಿಯೂ ಮಾಡಿಕೊಂಡು ಮಹಾತ್ಮನು ರಣದಲ್ಲಿ ಶಕ್ತಿಯನ್ನು ಪ್ರಯೋಗಿಸುತ್ತಿರಲು ಪುನಃ ಪುನಃ ಬಂದು ಅದು ಅವನ ಕೈಸೇರುತ್ತಿತ್ತು. ಈ ರೀತಿ ಪ್ರಭಾವಶಾಲಿ ಭಗವಾನ್ ಪಾವಕಿಯು ಮತ್ತೊಮ್ಮೆ ಕ್ರೌಂಚವನ್ನು ಒಡೆಯಲು ನೂರಾರು ದೈತ್ಯರು ಹತರಾದರು. ಅನಂತರ ವಿಬುಧದ್ವೇಷಿಗಳನ್ನು ಸಂಹರಿಸಿ ಭಗವಾನ್ ದೇವನು ವಿಬುಧರಿಂದ ಸ್ತುತಿಸಲ್ಪಟ್ಟು ಪರಮ ಹರ್ಷಿತನಾದನು. ಆಗ ದುಂದುಭಿ-ಶಂಖಗಳು ಮೊಳಗಿದವು. ದೇವಸ್ತ್ರೀಯರು ಮೇಲಿಂದ ಅನುತ್ತಮ ಪುಷ್ಪವೃಷ್ಟಿಯನ್ನು ಸುರಿಸಿದರು. ಮಾರುತನು ಪುಣ್ಯ ದಿವ್ಯಗಂಧಗಳನ್ನು ಹೊತ್ತು ಬೀಸಿದನು. ಗಂಧರ್ವರು ಮತ್ತು ಯಜ್ಞಪರಾಯಣ ಮಹರ್ಷಿಗಳು ಅವನನ್ನು ಸ್ತುತಿಸಿದರು. ಕೆಲವರು ಆ ಪ್ರಭುವನ್ನು ಪಿತಾಮಹನ ಸುತನೆಂದೂ ಎಲ್ಲರಿಗೂ ಮೊದಲು ಬ್ರಹ್ಮಯೋನಿಯಲ್ಲಿ ಹುಟ್ಟಿದ ಸನತ್ಕುಮಾರನೆಂದೂ[3] ಹೇಳುತ್ತಿದ್ದರು.
ಕೆಲವರು ಅವನನ್ನು ಮಹೇಶ್ವರ ಸುತನೆಂದೂ ಕೆಲವರು ವಿಭಾವಸುವಿನ ಪುತ್ರನೆಂದು, ಉಮೆ, ಕೃತ್ತಿಕರು ಮತ್ತು ಗಂಗೆಯ ಪುತ್ರನೆಂದೂ ಹೇಳುತ್ತಿದ್ದರು. ಯೋಗಿಗಳ ಈಶ್ವರನಾದ ಆ ದೇವ ಮಹಾಬಲನನ್ನು ಒಬ್ಬನನ್ನಾಗಿಯೂ, ಇಬ್ಬರನ್ನಾಗಿಯೂ, ನಾಲ್ವರನ್ನಾಗಿಯೂ, ನೂರಾರು ಸಹಸ್ರಾರು ರೂಪಗಳಲ್ಲಿ ಕಾಣುತ್ತಿದ್ದರು. ಕುಮಾರನಿಂದ ಸುರಶತ್ರುಗಳು ಹತರಾಗಲು ಆ ಶ್ರೇಷ್ಠ ತೀರ್ಥವು ಇನ್ನೊಂದು ಸ್ವರ್ಗದಂತೆಯೇ ಆಯಿತು. ಅಲ್ಲಿದ್ದ ಪಾವಕಾತ್ಮಜ ಈಶನು ಐಶ್ವರ್ಯಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೈರೃತನೇ ಮೊದಲಾದ ಲೋಕಪಾಲಕರಿಗಿತ್ತನು. ಹೀಗೆ ಆ ತೀರ್ಥದಲ್ಲಿ ದೈತ್ಯಕುಲಾಂತಕ ಭಗವಾನನು ದೇವಸೇನಾಪತಿಯಾಗಿ ಸುರರಿಂದ ಅಭಿಷಿಕ್ತನಾಗಿದ್ದನು.
[1] ಒಂದರ ಮುಂದೆ ಹತ್ತೊಂಬತ್ತು ಸೊನ್ನೆಗಳನ್ನು ಬರೆದರೆ ಒಂದು ಪದ್ಮವಾಗುತ್ತದೆ.
[2] ಸಾವಿರ ಕೋಟಿ
[3] ಭಗವಾನ್ ಸನತ್ಕುಮಾರಸ್ತಗ್ಂ ಸ್ಕಂದಂ ಇತ್ಯಾಚಕ್ಷತೇ ಎಂದು ಛಾಂದೋಗ್ಯೋಪನಿಷತ್ತಿನಲ್ಲಿ ಸ್ಕಂದನನ್ನು ಸನತ್ಕುಮಾರನೆಂದು ಹೇಳಿದೆ.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ