ಕಾರ್ತಿಕೇಯನ ಜನ್ಮ

ಕಾರ್ತಿಕೇಯನ ಜನ್ಮದ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೨೧೩-೨೨೧) ದಲ್ಲಿ ಬರುತ್ತದೆ. ಕಾಮ್ಯಕ ವನದಲ್ಲಿ ಋಷಿ ಮಾರ್ಕಂಡೇಯನು ಈ ಕಥೆಯನ್ನು ಯುಧಿಷ್ಠಿರನಿಗೆ ಹೇಳಿದನು.

ಸ್ಕಂದನ ಈ ಜನ್ಮವನ್ನು ಸುಸಮಾಹಿತನಾಗಿ ಯಾರು ಓದುತ್ತಾರೋ ಅವರಿಗೆ ಇಲ್ಲಿ ಸಮೃದ್ಧಿಯೂ ಮತ್ತು ಇಲ್ಲಿಯ ನಂತರ ಸ್ಕಂದಲೋಕವೂ ದೊರೆಯುತ್ತದೆ.

ಹಿಂದೆ ದೇವತೆಗಳು ಮತ್ತು ಅಸುರರು ಪರಸ್ಪರರನ್ನು ಕೊಲ್ಲುವುದರಲ್ಲಿ ನಿರತರಾಗಿದ್ದರು. ಮತ್ತು ಘೋರರೂಪೀ ದಾನವರು ಯಾವಾಗಲೂ ದೇವತೆಗಳನ್ನು ಜಯಿಸುತ್ತಿದ್ದರು. ಬಹುಶಸ್ತ್ರಗಳಿಂದ ವಧಿಸಲ್ಪಡುತ್ತಿದ್ದ ತನ್ನ ಸೇನೆಯನ್ನು ನೋಡಿ ಪುರಂದರನು ತನ್ನ ಸೇನೆಯ ನಾಯಕನಿಗಾಗಿ ಬಹಳಷ್ಟು ಚಿಂತಿಸಿದನು: “ದಾನವರಿಂದ ಭಗ್ನವಾಗುತ್ತಿರುವ ದೇವಸೇನೆಯನ್ನು ನೋಡಿ ವೀರತನದಿಂದ ಅದನ್ನು ಪಾಲಿಸುವ ಮಹಾಬಲಿ ಪುರುಷನನ್ನು ನಾನು ಹುಡುಕಬೇಕು.” ಆಗ ಅವನು ಮಾನಸ ಪರ್ವತಕ್ಕೆ ಹೋಗಿ ತುಂಬಾ ಆಳವಾದ ಧ್ಯಾನದಲ್ಲಿರಲು ಅಲ್ಲಿ ಘೋರವೂ ಆರ್ತವೂ ಆದ ಸ್ವರದಲ್ಲಿ ಸ್ತ್ರೀಯೋರ್ವಳ ಕೂಗನ್ನು ಕೇಳಿದನು: “ಯಾರಾದರೂ ಬೇಗ ಬಂದು ನನ್ನನ್ನು ರಕ್ಷಿಸಿ. ಅವನು ನನ್ನ ಪತಿಯಾಗಲಿ ಅಥವಾ ನನಗೆ ಓರ್ವ ಪತಿಯನ್ನು ಹುಡುಕಿಕೊಡಲಿ!” “ಹೆದರಬೇಡ! ನಿನಗೇನೂ ಭಯವಿಲ್ಲ!” ಎಂದು ಅವಳಿಗೆ ಪುರಂದರನು ಹೇಳಿದನು. ಹೀಗೆ ಹೇಳುತ್ತಿದ್ದಂತೆಯೇ ಮುಂದೆ ನಿಂತಿರುವ ಕೇಶಿನಿಯನ್ನು ನೋಡಿದನು. ಕಿರೀಟವನ್ನು ಧರಿಸಿ, ಗದೆಯನ್ನು ಹಿಡಿದು, ಕೈಯಲ್ಲಿ ಆ ಕನ್ಯೆಯನ್ನು ಹಿಡಿದು, ಖನಿಜಗಳ ಪರ್ವತದಂತೆ ನಿಂತಿದ್ದ ಅವನಿಗೆ ವಾಸವನು ಹೇಳಿದನು: “ಈ ಕನ್ಯೆಯಮೇಲೆ ಅನಾರ್ಯಕರ್ಮವನ್ನು ಎಸೆಗಲು ಏಕೆ ತೊಡಗಿದ್ದೀಯೆ. ನನ್ನನ್ನು ವಜ್ರಿಯೆಂದು ತಿಳಿ. ಇವಳಿಗೆ ಏನೂ ಅಪಾಯಮಾಡದಂತೆ ನಿನ್ನನ್ನು ತಡೆಯುತ್ತೇನೆ.” ಕೇಶಿಯು ಹೇಳಿದನು: “ಶಕ್ರ! ಇವಳನ್ನು ನೀನು ಬಿಟ್ಟುಬಿಡು. ಇವಳನ್ನು ನಾನು ಬಯಸಿದ್ದೇನೆ. ಜೀವಂತವಾಗಿ ನೀನು ನಿನ್ನ ಪುರಕ್ಕೆ ಹೋಗಬಲ್ಲೆ.”

ಹೀಗೆ ಹೇಳಿ ಕೇಶಿಯು ಇಂದ್ರನನ್ನು ವಧಿಸಲು ಗದೆಯನ್ನು ಎಸೆದನು. ಮೇಲೆ ಬೀಳುತ್ತಿರುವ ಅದನ್ನು ಮಧ್ಯದಲ್ಲಿಯೇ ವಾಸವನು ವಜ್ರದಿಂದ ತುಂಡರಿಸಿದನು. ಆಗ ಕೃದ್ಧನಾದ ಕೇಶಿಯು ಕಲ್ಲುಗಳ ಶಿಖರವನ್ನು ಅವನ ಮೇಲೆ ಎಸೆದನು. ಬೀಳುತ್ತಿದ್ದ ಆ ಶೈಲಶೃಂಗವನ್ನು ನೋಡಿ ಶತಕ್ರತುವು ವಜ್ರದಿಂದ ತುಂಡರಿಸಲು ಅದು ಭೂಮಿಯ ಮೇಲೆ ಬಿದ್ದಿತು. ಬೀಳುತ್ತಿರುವ ಆ ಶೃಂಗದಿಂದ ಪೆಟ್ಟುತಿಂದು ತುಂಬಾ ಪೀಡಿತನಾದ ಕೇಶಿಯು ಆ ಮಹಾಭಾಗೆ ಕನ್ಯೆಯನ್ನು ಅಲ್ಲಿಯೇ ಬಿಟ್ಟು ಓಡಿಹೋದನು. ಆ ಅಸುರನು ಹೊರಟುಹೋಗಲು ವಾಸವನು ಕನ್ಯೆಯನ್ನು ಕೇಳಿದನು: “ಶುಭಾನನೇ! ನೀನು ಯಾರು ಮತ್ತು ಯಾರವಳು? ಮತ್ತು ಇಲ್ಲಿ ನೀನು ಏನು ಮಾಡುತ್ತಿರುವೆ?”

ಕನ್ಯೆಯು ಹೇಳಿದಳು: “ನಾನು ದೇವಸೇನಾ ಎಂದು ವಿಶ್ರುತಳಾದ ಪ್ರಜಾಪತಿಯ ಮಗಳು. ನನ್ನ ತಂಗಿ ದೈತ್ಯಸೇನಳನ್ನು ಮೊದಲೇ ಕೇಶಿಯು ಅಪಹರಿಸಿಕೊಂಡು ಹೋಗಿದ್ದಾನೆ. ಪ್ರಜಾಪತಿಯ ಅಪ್ಪಣೆಯನ್ನು ಪಡೆದು ನಾವಿಬ್ಬರು ಸಹೋದರಿಯರೂ ಸಖಿಗಳ ಸಹಿತ ಈ ಮಾನಸ ಪರ್ವತಕ್ಕೆ ಸಂತೋಷಪಡಲು ಬರುತ್ತಿದ್ದೆವು. ಪಾಕಶಾಸನ! ನಿತ್ಯವೂ ಮಹಾಸುರ ಕೇಶಿಯು ನಮ್ಮನ್ನು ಬಯಸಿ ಕಾಡುತ್ತಿದ್ದನು. ದೈತ್ಯಸೇನೆಯು ಅವನನ್ನು ಕೇಳಿದಳು. ಆದರೆ ನಾನು ಕೇಳಲಿಲ್ಲ. ಅವಳನ್ನು ಅವನು ಅಪಹರಿಸಿಕೊಂಡು ಹೋದನು. ಆದರೆ ನಿನ್ನ ಬಲದಿಂದ ನಾನು ಬಿಡುಗಡೆಹೊಂದಿದೆನು. ಈಗ ನೀನು ನನಗೆ ದುರ್ಜಯನಾದ ಪತಿಯನ್ನು ನಿರ್ಧರಿಸಿಕೊಡಬೇಕೆಂದು ಬಯಸುತ್ತೇನೆ.”

ಇಂದ್ರನು ಹೇಳಿದನು: “ನೀನು ನನ್ನ ಮಾತೆ ದಾಕ್ಷಾಯಣಿಯ ತಂಗಿಯ ಮಗಳು. ಈಗ ನಿನ್ನ ಬಲದ ಕುರಿತು ನೀನೇ ಹೇಳಬೇಕೆಂದು ನಾನು ಬಯಸುತ್ತೇನೆ.”

ಕನ್ಯೆಯು ಹೇಳಿದಳು: “ಮಹಾಬಾಹೋ! ನಾನು ಅಬಲೆ; ಆದರೆ ನನ್ನ ಪತಿಯು ಬಲವಂತ. ತಂದೆಯ ವರದಾನದಂತೆ ಅವನನ್ನು ಸುರಾಸರರಿಂದಲೂ ನಮಸ್ಕರಿಸಲ್ಪಡುವವನಾಗುತ್ತಾನೆ.”

ಇಂದ್ರನು ಹೇಳಿದನು: “ದೇವಿ! ನಿನ್ನ ಪತಿಯು ಯಾವರೀತಿಯ ಬಲವನ್ನು ಹೊಂದಿರುತ್ತಾನೆ? ಇದರ ಕುರಿತಾದ ನಿನ್ನ ಮಾತನ್ನು ಕೇಳಲು ಬಯಸುತ್ತೇನೆ.”

ಕನ್ಯೆಯು ಹೇಳಿದಳು: “ದೇವ-ದಾನವ-ಯಕ್ಷ-ಕಿನ್ನರ-ಉರಗ- ರಾಕ್ಷಸರನ್ನು ಗೆಲ್ಲುವ, ನಿನ್ನೊಡನೆ ಎಲ್ಲ ಭೂತಗಳನ್ನೂ ಜಯಿಸಬಲ್ಲ, ದುಷ್ಟರನ್ನು ನಿಯಂತ್ರಿಸುವ, ಮಹಾವೀರ್ಯ, ಮಹಾಬಲ, ಕೀರ್ತಿವರ್ಧನ, ಬ್ರಹ್ಮಣ್ಯನೇ ನನ್ನ ಪತಿಯಾಗುತ್ತಾನೆ.”

ಅವಳ ಮಾತುಗಳನ್ನು ಕೇಳಿ ಇಂದ್ರನು ತುಂಬಾ ದುಃಖಿತನಾಗಿ ಆಲೋಚಿಸಿದನು: “ಈ ದೇವಿಯು ಹೇಳುವಂತಹ ಪತಿಯು ಇವಳಿಗೆ ಇಲ್ಲವಲ್ಲ!”

ಆಗ ಆ ಭಾಸ್ಕರದ್ಯುತಿಯು ಉದಯಿಸುತ್ತಿರುವ ಭಾಸ್ಕರನನ್ನೂ ಮತ್ತು ದಿವಾಕರನನ್ನು ಪ್ರವೇಶಿಸುತ್ತಿರುವ ಮಹಾಭಾಗ ಸೋಮನನ್ನು ನೋಡಿದನು. ಆ ಅಮವಾಸ್ಯೆಯ ರೌದ್ರ ಮುಹೂರ್ತದಲ್ಲಿ ಅವನು ಉದಯಗಿರಿಯಲ್ಲಿ ದೇವಾಸುರರ ಸಂಗ್ರಾಮವನ್ನು ನೋಡಿದನು. ಶತಕ್ರತುವು ಆ ಪೂರ್ವ ಸಂಧ್ಯೆಯು ಕೆಂಪು ಮೋಡಗಳಿಂದ ಕವಿದಿರುವುದನ್ನೂ, ಭಗವಾನ್ ಸಮುದ್ರವು ಕೆಂಪಾಗಿರುವುದನ್ನು ನೋಡಿದನು. ಅಗ್ನಿಯು ಭೃಗು ಮತ್ತು ಅಂಗಿರಸರು ಮಂತ್ರಗಳಿಂದ ಹಾಕಿದ ವಿವಿಧ ಹವಿಸ್ಸುಗಳನ್ನು ಎತ್ತಿಕೊಂಡು ದಿವಾಕರನನ್ನು ಪ್ರವೇಶಿಸುತ್ತಿರುವುದನ್ನೂ ನೋಡಿದನು. ಆಗ ಹದಿನಾಲ್ಕು ಪರ್ವಗಳೂ ಸೂರ್ಯನ ಉಪಸ್ಥಿತಿಯಲ್ಲಿರುವುದನ್ನು ಮತ್ತು ಹಾಗೆಯೇ ರೌದ್ರನಾದ ಸೋಮನು ಸೂರ್ಯನಲ್ಲಿಗೆ ಹೋಗುವುದನ್ನು ನೋಡಿದನು. ಈ ರೀತಿಯ ಶಶಿ ಮತ್ತು ಭಾಸ್ಕರರು ಒಂದಾಗುವ ಆ ರೌದ್ರಸಮಯವನ್ನು ನೋಡಿ ಶಕ್ರನು ಯೋಚಿಸಿದನು: “ಈ ಸೋಮ ಮತ್ತು ಸೂರ್ಯರ ಅದ್ಭುತ ಸಮಾಗಮದ ವಹ್ನಿಯು ರೌದ್ರ ಮತ್ತು ತೇಜಸ್ವಿಯಾಗಿದ್ದು ಮಹಾ ಯುದ್ಧವನ್ನು ಸೂಚಿಸುತ್ತದೆ. ಇಂದು ಸೋಮನಲ್ಲಿ ಜನಿಸುವ ಮಗನು ಈ ದೇವಿಯ ಪತಿಯಾಗುತ್ತಾನೆ. ಅಗ್ನಿಯೂ ಕೂಡ ಈ ಗುಣಗಳಿಂದ ಕೂಡಿದ್ದು ಅಗ್ನಿಯೂ ಎಲ್ಲರ ದೇವತೆಯಾಗಿದ್ದಾನೆ. ಇವನ ಗರ್ಭದಿಂದಲೂ ಜನಿಸುವವನು ಈ ದೇವಿಯ ಪತಿಯಾಗುತ್ತಾನೆ.”

ಹೀಗೆ ಯೋಚಿಸಿ ಆ ಭಗವಾನನು ದೇವಸೇನೆಯನ್ನು ಕರೆದುಕೊಂಡು ಬ್ರಹ್ಮಲೋಕಕ್ಕೆ ಹೋದನು. ಪಿತಾಮಹನಿಗೆ ವಂದಿಸಿ “ಈ ದೇವಿಗೆ ನೀನು ಓರ್ವ ಸಾಧು ಶೂರನನ್ನು ಪತಿಯನ್ನಾಗಿ ನಿರ್ಧರಿಸು” ಎಂದನು. ಬ್ರಹ್ಮನು ಹೇಳಿದನು: “ದಾನವಸೂದನ! ನೀನು ಏನನ್ನು ಯೋಚಿಸಿದ್ದೀಯೋ ಹಾಗೆಯೇ ಆಗುತ್ತದೆ. ಆ ಗರ್ಭವು ಬಲವಾನನೂ ವಿಕ್ರಮಿಯೂ ಆಗುತ್ತಾನೆ. ನಿನ್ನೊಡನೆ ಅವನು ಸೇನಾನಿಯಾಗುತ್ತಾನೆ. ಆ ವೀರ್ಯವಾನನು ಈ ದೇವಿಯ ಪತಿಯೂ ಆಗುತ್ತಾನೆ.” ಇದನ್ನು ಕೇಳಿ ಅವನಿಗೆ ನಮಸ್ಕರಿಸಿ ದೇವೇಂದ್ರನು ಆ ಕನ್ಯೆಯೊಡನೆ ವಸಿಷ್ಠ ಪ್ರಮುಖರಾದ ಮುಖ್ಯ ಸುಮಹಾವ್ರತ ವಿಪ್ರೇಂದ್ರ ದೇವರ್ಷಿಗಳಿರುವಲ್ಲಿಗೆ ಹೋದನು. ಸೋಮದ ಭಾಗಾರ್ಥಿಗಳಾಗಿ ಆ ತಪಸ್ವಿಗಳ ಅಧ್ವರಕ್ಕೆ  ಶತಕ್ರತುವನ್ನು ಮುಂದಿರಿಸಿಕೊಂಡು ದೇವತೆಗಳು ಹೋದರು. ಯಥಾನ್ಯಾಯವಾಗಿ ಚೆನ್ನಾಗಿ ಉರಿಯುತ್ತಿದ್ದ ಅಗ್ನಿಯಲ್ಲಿ ಇಷ್ಟಿಯನ್ನು ಮಾಡಿ ಆ ಮಹಾತ್ಮರು ಎಲ್ಲ ದಿವೌಕಸರಿಗೆ ಹವಿಸ್ಸನ್ನು ನೀಡಿದರು. ಸೂರ್ಯಮಂಡಲದಿಂದ ಅಗ್ನಿ ಅದ್ಭುತನನ್ನು ಮಂತ್ರಗಳ ಮೂಲಕ ಕರೆಯಲಾಯಿತು. ಆ ಪ್ರಭು ಅಗ್ನಿಯು ವಿಧಿವತ್ತಾಗಿ ಅಲ್ಲಿಂದ ಹೊರಟು ದ್ವಿಜರು ಮಂತ್ರಪೂರ್ವಕವಾಗಿ ನೀಡುತ್ತಿದ್ದ ಆಹುತಿಯನ್ನು ಕೊಂಡೊಯ್ಯಲು ಆಗಮಿಸಿದನು. ಅಲ್ಲಿ ಋಷಿಗಳು ನೀಡಿದ ವಿವಿಧ ಹವ್ಯಗಳನ್ನು ತೆಡೆದುಕೊಂಡು ಆ ಅಗ್ನಿಯು ದಿವೌಕಸರಿಗೆ ನೀಡಿದನು.

ಹಿಂದಿರುಗಿ ಬರುವಾಗ ಅವನು ಮಹಾತ್ಮ ಋಷಿಗಳ ಪತ್ನಿಯರು ಯಥಾಸುಖವಾಗಿ ಹಾಸಿಗೆಗಳ ಮೇಲೆ ಮಲಗಿಕೊಂಡಿರುವುದನ್ನು ನೋಡಿದನು. ಅವರೆಲ್ಲರೂ ಬಂಗಾರದ ವೇದಿಗಳಂತೆ ಹೊಳೆಯುತ್ತಿದ್ದರು; ಚಂದ್ರಲೇಖದಂತೆ ಶುಭ್ರರಾಗಿದ್ದರು; ಉರಿಯುತ್ತಿರುವ ಅಗ್ನಿಯಂತಿದ್ದರು ಮತ್ತು ನಕ್ಷತ್ರಗಳಂತೆ ಅದ್ಭುತರಾಗಿದ್ದರು. ಆ ದ್ವಿಜೇಂದ್ರರ ಪತ್ನಿಯರನ್ನು ನೋಡಿ ಅಗ್ನಿಯ ಮನಸ್ಸು ಕ್ಷೋಭೆಗೊಂಡಿತು, ಮತ್ತು ಇಂದ್ರಿಯವು ಕಾಮವಶವಾಯಿತು. ಅವನು ಮತ್ತೆ ಮತ್ತೆ ಯೋಚಿಸಿದನು: “ನಾನು ಹೀಗೆ ಕ್ಷೋಭೆಗೊಳಗಾಗುವುದು ಸರಿಯಲ್ಲ. ದ್ವಿಜೇಂದ್ರರ ಈ ಪತ್ನಿಯರು ಸಾಧ್ವಿಯರು. ಬಯಸಬಾರದವರನ್ನು ನಾನು ಬಯಸುತ್ತಿದ್ದೇನೆ. ನಾನು ಇವರ ಮೇಲೆ ನನ್ನ ದೃಷ್ಟಿಯನ್ನು ಹಾಯಿಸಲೂ ಶಕ್ಯನಿಲ್ಲ. ಅವರಾಗಿ ಬಯಸದೇ ನಾನು ಅವರನ್ನು ಸ್ಪರ್ಷಿಸಲೂ ಸಾಧ್ಯವಿಲ್ಲ. ಆದುದರಿಂದ ನಾನು ಗಾರ್ಹಪತ್ಯನಾಗಿದ್ದುಕೊಂಡು ಅವರನ್ನು ನಿತ್ಯವೂ ನೋಡುತ್ತಾ ತೃಪ್ತಿಪಡೆಯುತ್ತೇನೆ.”

ಅವನು ಗಾರ್ಹಪತ್ಯನಾಗಿ ಆ ಎಲ್ಲ ಕಾಂಚನಪ್ರಭೆಗಳುಳ್ಳವರನ್ನೂ ತನ್ನ ಜ್ವಾಲೆಗಳಿಂದ ಸ್ಪರ್ಷಿಸುತ್ತಾ ನೋಡುತ್ತಾ ಮುದದಿಂದಿದ್ದನು. ಆ ವರಾಂಗನೆಯರನ್ನು ಕಾಮಿಸುತ್ತಾ ಮನಸ್ಸನ್ನು ಅವರ ವಶದಲ್ಲಿಟ್ಟು ಅಗ್ನಿಯು ಅಲ್ಲಿ ಬಹಳ ಕಾಲ ವಾಸಿಸಿದನು. ಬ್ರಾಹ್ಮಣಸ್ತ್ರೀಯರು ದೊರಕದೇ ಇದ್ದಾಗ ಕಾಮಸಂತಪ್ತಹೃದಯನಾಗಿ ಅಗ್ನಿಯು ದೇಹತ್ಯಾಗಮಾಡಲು ನಿರ್ಧರಿಸಿ ವನಕ್ಕೆ ಬಂದನು.

ಇದಕ್ಕೆ ಮೊದಲೇ ದಕ್ಷನ ಮಗಳು ಸ್ವಾಹಾಳು ಅವನನ್ನು ಬಯಸಿದ್ದಳು. ಅವಳು ತುಂಬಾ ಸಮಯದಿಂದ ಅವನಲ್ಲಿಯ ದುರ್ಬಲತೆಯನ್ನು ಕಾಣಲು ಕಾದುಕೊಂಡಿದ್ದಳು. ಆದರೆ ಆ ಭಾಮಿನಿ ಅನಿಂದಿತೆಯು ಅಲ್ಲಿಯವರೆಗೆ ಆ ದೇವನಲ್ಲಿ ಅಪ್ರಮತ್ತತೆಯನ್ನು ಕಂಡಿರಲಿಲ್ಲ. ಕಾಮಸಂತಪ್ತನಾಗಿ ಅಗ್ನಿಯು ವನಕ್ಕೆ ಬಂದಿರುವುದನ್ನು ತಿಳಿದ ಆ ಭಾಮಿನಿಯು ಆಲೋಚಿಸಿದಳು: “ನಾನು ಸಪ್ತರ್ಷಿಗಳ ಪತ್ನಿಯರ ರೂಪವನ್ನು ತಾಳಿ ಅವರ ರೂಪಗಳಿಂದ ಮೋಹಿತನಾಗಿ ಕಾಮಾರ್ತನಾಗಿರುವ ಪಾವಕನನ್ನು ಕಾಮಿಸುತ್ತೇನೆ. ಹೀಗೆ ಮಾಡುವುದರಿಂದ ಅವನೂ ಸಂತೋಷಗೊಳ್ಳುತ್ತಾನೆ ಮತ್ತು ನನ್ನ ಆಸೆಯೂ ಪೂರೈಸುತ್ತದೆ.” ಆ ವರಾಂಗನೆ ದೇವಿಯು ಪ್ರಥಮವಾಗಿ ಅಂಗಿರಸನ ಭಾರ್ಯೆ ಶೀಲರೂಪಗುಣಾನ್ವಿತೆ ಶಿವೆಯ ರೂಪವನ್ನು ಧರಿಸಿ ಪಾವಕನ ಬಳಿ ಹೋಗಿ ಹೇಳಿದಳು: “ಅಗ್ನಿ! ಕಾಮಸಂತಪ್ತಳಾಗಿರುವ ನನ್ನನ್ನು ನೀನು ಕಾಮಿಸಬೇಕು. ಇದನ್ನು ನೀನು ಮಾಡದೇ ಇದ್ದರೆ ನಾನು ಸಾಯುತ್ತೇನೆ. ನಾನು ಶಿವಾ ಎಂಬ ಹೆಸರಿನ ಅಂಗಿರಸನ ಪತ್ನಿ. ಸಖಿಗಳ ಸಹಿತ ಮಂತ್ರಾಲೋಚನೆ ಮಾಡಿ ನಿರ್ಧರಿಸಿ ಬಂದಿದ್ದೇನೆ.”

ಅಗ್ನಿಯು ಹೇಳಿದನು: “ನಾನು ಕಾಮಾರ್ತನಾಗಿದ್ದೇನೆಂದು ನಿನಗೆ ಹೇಗೆ ತಿಳಿಯಿತು? ಮತ್ತು ಇದರ ಕುರಿತು ನೀನು ಹೇಳಿದ ಎಲ್ಲ ಸಪ್ತರ್ಷಿಗಳ ಪ್ರಿಯ ಸ್ತ್ರೀಯರಿಗೆ ಹೇಗೆ ತಿಳಿಯಿತು?”

ಶಿವೆಯು ಹೇಳಿದಳು: “ನಿತ್ಯವೂ ನೀನು ನಮಗೆ ಪ್ರಿಯನಾದವನು. ಆದರೆ ನಾವು ನಿನಗೆ ಹೆದರುತ್ತಿದ್ದೆವು. ಈಗ ನಿನ್ನ ಚಿತ್ತದ ಇಂಗಿತವನ್ನು ತಿಳಿದು ಅವರು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ. ನನ್ನೊಡನೆ ಬೇಗನೇ ಮೈಥುನಗೈದು ಕಾಮವನ್ನು ಹೋಗಲಾಡಿಸಿಕೋ. ನನ್ನ ಅತ್ತಿಗೆಯಂದಿರು ಕಾಯುತ್ತಿದ್ದಾರೆ. ನನಗೆ ಹೋಗಬೇಕು.”

ಆಗ ಅಗ್ನಿಯು ಪ್ರೀತಿ ಸಂತೋಷಗಳಿಂದ ಆ ಶಿವೆಯನ್ನು ಕೂಡಿದನು. ದೇವಿಯು ಪ್ರೀತಿಯಿಂದ ಅವನ ವೀರ್ಯವನ್ನು ತನ್ನ ಕರಗಳಲ್ಲಿ ಹಿಡಿದುಕೊಂಡಳು. “ಕಾನನದಲ್ಲಿ ನನ್ನನ್ನು ಈ ರೂಪದಲ್ಲಿ ನೋಡಿದರೆ ಆ ಬ್ರಾಹ್ಮಣಿಯರಿಗೆ ಅಗ್ನಿಯ ಸಂಬಂಧವಾಗಿ ಸುಳ್ಳು ದೋಷಬರುತ್ತದೆ. ಆದುದರಿಂದ ಇದನ್ನು ತಪ್ಪಿಸಲು ನಾನು ಗರುಡಳಾಗುತ್ತೇನೆ. ಹೀಗೆ ನಾನು ಸುಖವಾಗಿ ವನದಿಂದ ಹೊರಹೋಗಬಲ್ಲೆ” ಎಂದು ಅವಳು ಯೋಚಿಸಿದಳು. ಆಗ ಅವಳು ಸುಪರ್ಣಿಯಾಗಿ ಆ ಮಹಾವನದಿಂದ ನಿರ್ಗಮಿಸಿದಳು. ಅವಳು ಶರಸ್ತಂಭಗಳಿಂದ ಸುಸಂವೃತವಾಗಿದ್ದ, ದೃಷ್ಟಿಯಿಂದಲೇ ವಿಷವನ್ನು ಕಾರುವ ಅದ್ಭುತ ಏಳು ಹೆಡೆಯ ಸರ್ಪಗಳಿಂದ ರಕ್ಷಿತವಾದ, ರಾಕ್ಷಸರು, ಪಿಶಾಚಿಗಳು, ರೌದ್ರ ಭೂತಗಣಗಳಿಂದ, ರಾಕ್ಷಸಿಯರಿಂದ, ಮತ್ತು ಅನೇಕ ಮೃಗಪಕ್ಷಿಗಳಿಂದ ತುಂಬಿದ್ದ ಶ್ವೇತ ಪರ್ವತವನ್ನು ನೋಡಿದಳು. ಅಲ್ಲಿ ಆ ಸತಿಯು ಬೇಗನೇ ಸುದುರ್ಗಮವಾದ ಶೈಲಶಿಖರದ ಮೇಲಿರುವ ಕಾಂಚನ ಸರೋವರದಲ್ಲಿ ಆ ವೀರ್ಯವನ್ನು ಹಾಕಿದಳು. ಹೀಗೆ ಕ್ರಮವಾಗಿ ಮಹಾತ್ಮ ಸಪ್ತರ್ಷಿಗಳ ಪತ್ನಿಯರ ರೂಪಗಳನ್ನು ಧರಿಸಿಕೊಂಡು ಆ ದೇವಿಯು ಪಾವಕನನ್ನು ಕಾಮಿಸಿದಳು. ಆದರೆ ಅರುಂಧತಿಯ ತಪಸ್ಸಿನ ಮತ್ತು ಪತಿಸೇವೆಯ ಪ್ರಭಾವದಿಂದ ಅವಳ ದಿವ್ಯರೂಪವನ್ನು ಧರಿಸಲು ಅವಳಿಗೆ ಶಕ್ಯವಾಗಲಿಲ್ಲ. ಪ್ರತಿಪದಿಯ ದಿನದಂದು ಕಾಮಿನೀ ಸ್ವಾಹಳು ಆ ಕುಂಡದಲ್ಲಿ ಅಗ್ನಿಯ ರೇತಸ್ಸನ್ನು ಆರುಬಾರು ಹಾಕಿದಳು.

ಅಲ್ಲಿ ಎಸೆಯಲ್ಪಟ್ಟ ತೇಜಸ್ಸಿನಿಂದ ಮಗನೊಬ್ಬನು ಜನಿಸಿದನು. ಋಷಿಗಳು ಪೂಜಿಸದೇ ಬಿಟ್ಟಿದುದರಿಂದ ಅವನಿಗೆ ಸ್ಕಂದ ಎಂಬ ಹೆಸರಿನಿಂದ ಕರೆದರು. ಆ ಕುಮಾರನಿಗೆ ಆರು ಶಿರಗಳಿದ್ದವು, ಎರಡು ಪಟ್ಟು ಕಿವಿಗಳಿದ್ದವು, ಹನ್ನೆರಡು ಕಣ್ಣುಗಳು, ಕೈಗಳು ಮತ್ತು ಕಾಲುಗಳಿದ್ದವು. ಒಂದೇ ಕುತ್ತಿಗೆಯಿತ್ತು ಮತ್ತು ಒಂದೇ ದೇಹವಿತ್ತು. ಬಿದಿಗೆಯಂದು ಅವನು ಆವಿರ್ಭವಿಸಿದನು, ತದಿಗೆಯಂದು ಶಿಶುವಾದನು, ಮತ್ತು ಆ ಗುಹನ ಅಂಗಪ್ರತ್ಯಾಂಗಗಳು ಚತುರ್ಥಿಯಂದು ಬೆಳೆದವು. ಮಿಂಚಿನಿಂದ ಕೂಡಿದ ಕೆಂಪು ಮೋಡಗಳಿಂದ ಸುತ್ತುವರೆಯಲ್ಪಟ್ಟ ಅವನು ಕೆಂಪುಮೋಡಗಳ ಮಧ್ಯದಿಂದ ಉದಯಿಸುತ್ತಿರುವ ಸೂರ್ಯನಂತೆ ಕಂಡನು. ಸುರಾರಿ ತ್ರಿಪುರನನ್ನು ಸಂಹರಿಸಿದ ಮೈನವಿರೇಳಿಸುವ ಮಹಾ ಧನುಸ್ಸನ್ನು ಹಿಡಿದು ಮೇಲೆದ್ದನು. ಆ ಶ್ರೇಷ್ಠ ಧನುಸ್ಸನ್ನು ಹಿಡಿದು ಸಚರಾಚರಗಳ ಮೂರು ಲೋಕಗಳನ್ನೂ ತಲ್ಲಣಿಸುವಂತೆ ಜೋರಾಗಿ ನಿನಾದಿಸಿದನು. ಅವನ ಆ ಮಹಾಮೇಘನಿಸ್ವನದ ನಿನಾದವನ್ನು ಕೇಳಿ ವಿಚಿತ್ರವಾದ ಆ ಮಹಾನಾಗಗಳೆರಡೂ ಐರಾವತವೂ ಭಯದಿಂದ ನಡುಗಿದವು. ಅವುಗಳು ನಡುಗುತ್ತಿದ್ದುದನ್ನು ನೋಡಿ ಆ ಬಾಲಾರ್ಕಸಮದ್ಯುತಿಯು ಅವುಗಳೆರಡನ್ನೂ ತನ್ನ ಕೈಗಳಿಂದ ಹಿಡಿದನು. ಇತರ ಕೈಯಲ್ಲಿ ಶಕ್ತಿಯನ್ನೂ, ಇನ್ನೊಂದರಲ್ಲಿ ಮಹಾಕಾಯದ ಕೆಂಪುಬಣ್ಣದ ಕುಕ್ಕುಟವನ್ನೂ ಹಿಡಿದು ಆ ಅಗ್ನಿಯ ಮಗ ತಾಮ್ರಚೂಡ ಮಹಾ ಭುಜ, ಬಲಿಗಳಲ್ಲಿ ಶ್ರೇಷ್ಠ ಮಹಾಬಲನು ಜೋರಾಗಿ ಕೂಗಿ ಆಡಿದನು. ಎರಡೂ ಭುಜಗಳಲ್ಲಿ ಉತ್ತಮ ಶಂಖವನ್ನು ಹಿಡಿದು ಆ ಬಲಿಯು ಜೋರಾಗಿ ಊದಿ ಭೂತಗಳನ್ನು ನಡುಗಿಸಿದನು. ಎರಡೂ ಭುಜಗಳನ್ನೂ ಭೂಮಿ ಮತ್ತು ಆಕಾಶಗಳಿಗೆ ಬಹಳಷ್ಟು ಬಾರಿ ಹೊಡೆದು ಆಡುತ್ತಿದ್ದ ಆ ಮಹಾಸೇನನು ತನ್ನ ಬಾಯಿಗಳಿಂದ ಲೋಕಗಳನ್ನು ನುಂಗಿಬಿಡುವಂತೆ, ಮತ್ತು ಆ ಪರ್ವತಾಗ್ರದಲ್ಲಿ ಅಪ್ರಮೇಯ ಸೂರ್ಯನು ಉದಯಿಸುತ್ತಿದ್ದಂತೆ ತೋರುತ್ತಿದ್ದನು. ಆ ಪರ್ವತಾಗ್ರದಲಿದ್ದ ಆ ಅದ್ಭುತ ವಿಕ್ರಮಿ, ಅಮೇಯಾತ್ಮನು ತನ್ನ ಅನೇಕ ಮುಖಗಳಿಂದ ನಾನಾವಿಧದ ದಿಕ್ಕುಗಳನ್ನು ನೋಡಿ ವಿವಿಧ ಭಾವಗಳಲ್ಲಿ ಪುನಃ ಜೋರಾಗಿ ನಿನಾದಿಸಿದನು.

ಅವನ ಆ ನಿನಾದವನ್ನು ಕೇಳಿ ಬಹಳ ಜನರು ಉರುಳಿ ಬಿದ್ದರು ಮತ್ತು ಭೀತಿ ಮತ್ತು ಉದ್ವಿಗ್ನಮನಸ್ಕರಾಗಿ ಅವನನ್ನೇ ಶರಣು ಹೊಕ್ಕರು. ಆಗ ಆ ದೇವನ ಶರಣುಹೋದ ನಾನಾ ವರ್ಣದ ಜನರನ್ನು ಸುಮಹಾಬಲಶಾಲಿಗಳಾದ ಪಾರಿಷದ ಬ್ರಾಹ್ಮಣರೆಂದು ಕರೆಯುತ್ತಾರೆ. ಆಗ ಆ ಮಹಾಬಾಹುವು ಮೇಲೆದ್ದು ಜನರನ್ನು ಸಂತವಿಸಿ, ಧನುವನ್ನು ಎಳೆದು ಬಾಣಗಳನ್ನು ಶ್ವೇತಮಹಾಗಿರಿಯ ಮೇಲಿಂದ ಪ್ರಯೋಗಿಸಿದನು. ಆ ಶರಗಳಿಂದ ಅವನು ಹಿಮವತನ ಮಗ ಕ್ರೌಂಚ ಶೈಲವನ್ನು ತುಂಡರಿಸಿದನು. ಇದರಿಂದಾಗಿ ಹಂಸ ಮತ್ತು ಹದ್ದುಗಳು ಮೇರು ಪರ್ವತಕ್ಕೆ ಹೋಗುತ್ತವೆ. ಚೆನ್ನಾಗಿ ಪೆಟ್ಟುತಿಂದ ಆ ಶೈಲವು ಆರ್ತಸ್ವರದಲ್ಲಿ ರೋದಿಸುತ್ತಾ ಅಲ್ಲಿಯೇ ಬಿದ್ದನು. ಅವನು ಬಿದ್ದಿದನ್ನು ನೋಡಿ ಅನ್ಯ ಪರ್ವತಗಳು ಕೂಡ ಭಯದಿಂದ ಕೂಗಿದವು. ಅವರ ಭಯದ ಕೂಗುಗಳನ್ನು ಕೇಳಿಯೂ ಕೂಡ ಆ ಬಲಿಗಳಲ್ಲಿ ಶ್ರೇಷ್ಠನು ಅವರಮೇಲೆ ಕರಗಲಿಲ್ಲ. ಆ ಅಮೇಯಾತ್ಮನು ಶಕ್ತಿಯನ್ನು ಮೇಲೆತ್ತಿ ಕೂಗಿದನು. ಆಗ ಆ ಮಹಾತ್ಮನು ವಿಪುಲ ಘೋರ ಶಕ್ತಿಯನ್ನು ಎಸೆದು ತಕ್ಷಣವೇ ಶ್ವೇತಗಿರಿಯ ಶಿಖರವನ್ನು ಕತ್ತರಿಸಿದನು. ಅವನಿಂದ ಪೆಟ್ಟುತಿಂದು ದೀನನಾದ ಶ್ವೇತಗಿರಿಯು ಇತರ ಪರ್ವತಗಳೊಂದಿಗೆ, ಆ ಮಹಾತ್ಮನಿಗೆ ಹೆದರಿ, ಭೂಮಿಯಿಂದ ಬೇರ್ಪಟ್ಟು, ಮೇಲೆ ಹಾರಿದವು. ಆಗ ತನ್ನ ಸುತ್ತಲಿದ್ದ ಆಭರಣಗಳನ್ನು ಕಳೆದುಕೊಂಡು ವ್ಯಥಿತಳಾದ ಭೂಮಿಯು ಆರ್ತಳಾಗಿ ಸ್ಕಂದನನ್ನು ಮೊರೆಹೊಕ್ಕು ಪುನಃ ಬಲವತಿಯಾದಳು. ಪರ್ವತಗಳು ಕೂಡ ಅವನನ್ನು ನಮಸ್ಕರಿಸಿ ಪೃಥ್ವಿಗೆ ಅಂಟಿಕೊಂಡವು. ಶುಕ್ಲಪಕ್ಷದ ಪಂಚಮಿಯಂದು ಲೋಕವು ಸ್ಕಂದನನ್ನು ಭಜಿಸಿತು.ಮಹಾಘೋರವಾದ ಉತ್ಪಾತಗಳನ್ನು ನೋಡಿದ ಲೋಕಭಾವನ ಋಷಿಗಳು ಉದ್ವಿಗ್ನ ಲೋಕಗಳ ಶಾಂತಿಗಾಗಿ ಕಾರ್ಯಕೈಗೊಂಡರು. ಚೈತ್ರರಥ ವನದಲ್ಲಿ ವಾಸಿಸುತ್ತಿದ್ದ ಜನರು ಹೇಳಿಕೊಂಡರು: “ಈ ಮಹಾನ್ ಅನರ್ಥವು ಪಾವಕನು ಸಪ್ತರ್ಷಿಗಳ ಆರು ಪತ್ನಿಯರೊಂದಿಗೆ ಗುಟ್ಟಾಗಿ ಕೂಡಿದ್ದುದರಿಂದ ಆಗಿದೆ.” ಆ ದೇವಿಯು ಗರುಡಿಯ ರೂಪವನ್ನು ಧರಿಸಿ ಹೋಗುತ್ತಿದ್ದುದನ್ನು ನೋಡಿದ ಇತರರು ಇದು ಸ್ವಾಹಾಳ ಕೆಲಸ ಎಂದು ತಿಳಿಯದೇ “ಈ ಅನರ್ಥವನ್ನು ಪಕ್ಷಿಯೊಂದು ತಂದೊಡ್ಡಿದೆ” ಎಂದೂ ಹೇಳಿದರು. ಈ ಮಾತುಗಳನ್ನು ಕೇಳಿದ ಸುಪರ್ಣಿಯು ಇವನು ನನ್ನ ಮಗನೆಂದು ನಿಧಾನವಾಗಿ ಸ್ಕಂದನ ಬಳಿಬಂದು “ನಾನು ನಿನ್ನ ತಾಯಿ” ಎಂದು ಹೇಳಿದಳು. ಆಗ ಮಹೌಜಸ ಪುತ್ರನು ಹುಟ್ಟಿದ್ದಾನೆಂದು ಕೇಳಿ ಸಪ್ತರ್ಷಿಗಳು ದೇವೀ ಅರುಂಧತಿಯನ್ನು ಬಿಟ್ಟು ಉಳಿದ ಆರು ಪತ್ನಿಯರನ್ನು ತ್ಯಜಿಸಿದರು. ಏಕೆಂದರೆ ವನವಾಸಿಗಳು “ಈ ಆರರಿಂದಲೇ ಅವನು ಹುಟ್ಟಿದ್ದಾನೆ” ಎಂದು ಹೇಳಿದರು. ಸ್ವಾಹಳೂ ಕೂಡ ಇವನು ನನ್ನ ಮಗನೆಂದೂ, ನಿಮ್ಮ ಪತ್ನಿಯರು ಇವನ ತಾಯಿಯರಲ್ಲವೆಂದೂ ಪುನಃ ಪುನಃ ಸಪ್ತರ್ಷಿಗಳಿಗೆ ಹೇಳಿದಳು.

ಮಹಾಮುನಿ ವಿಶ್ವಾಮಿತ್ರನು ಸಪ್ತರ್ಷಿಗಳ ಆ ಇಷ್ಟಿಯನ್ನು ಪೂರೈಸಿ ಕಾಮಸಂತಪ್ತನಾದ ಪಾವಕನನ್ನು ಹಿಂಬಾಲಿಸಿ ಹೋಗಿ ನೋಡಿದ್ದನು. ಆದುದರಿಂದ ಅವನಿಗೆ ನಡೆದುದೆಲ್ಲವೂ ಸರಿಯಾಗಿ ತಿಳಿದಿತ್ತು. ಪ್ರಥಮವಾಗಿ ವಿಶ್ವಾಮಿತ್ರನು ಕುಮಾರನಿಗೆ ಶರಣು ಹೋದನು. ಮಹಾಸೇನನನ್ನು ದಿವ್ಯ ಸ್ತವದಿಂದ ಸ್ತುತಿಸಿದನು ಕೂಡ. ಜಾತಕರ್ಮಾದಿ ಎಲ್ಲ ಹದಿಮೂರು ಮಂಗಲ ಕಾರ್ಯಗಳನ್ನು ಆ ಮಹಾಮುನಿಯು ಕುಮಾರನಿಗೆ ನೆರವೇರಿಸಿದನು. ಲೋಕಹಿತಾರ್ಥವಾಗಿ ವಿಶ್ವಾಮಿತ್ರನು ಆ ಷಡ್ವಕ್ತ್ರನ ಮಹಾತ್ಮೆಯನ್ನೂ, ಕುಕ್ಕುಟದ ಸಾಧನೆಯನ್ನೂ, ದೇವಿ ಶಕ್ತಿಯ ಸಾಧನೆಯನ್ನೂ ಮತ್ತು ಅವನಿಗೆ ಸೇವೆಸಲ್ಲಿಸಿದ ಜನರನ್ನೂ ಸ್ತುತಿಸಿದನು. ಆದುದರಿಂದ ಋಷಿ ವಿಶ್ವಾಮಿತ್ರನು ಕುಮಾರನ ಪ್ರಿಯಕರನಾದನು. ಆಗ ಆ ಮಹಾಮುನಿಯು ಸ್ವಾಹಾಳು ಯಾರಿಗೂ ತಿಳಿಯದೇ ರೂಪವನ್ನು ಬದಲಾಯಿಸಿಕೊಂಡಿದ್ದುದನ್ನು ಮುನಿಗಳಿಗೆ ಹೇಳಿ ಅವರ ಸ್ತ್ರೀಯರದ್ದು ಏನೂ ಅಪರಾಧವಿಲ್ಲವೆಂದೂ ಹೇಳಿದನು. ಅದನ್ನು ಕೇಳಿಯೂ ಅವರು ಅವರ ಪತ್ನಿಯರನ್ನು ಸರ್ವಥಾ ತ್ಯಜಿಸಿದರು. ಸ್ಕಂದನ ಕುರಿತು ಕೇಳಿದ ದೇವತೆಗಳು ಒಟ್ಟಿಗೇ ವಾಸವನಿಗೆ ಹೇಳಿದರು: “ಶಕ್ರ! ಈ ಬಲಶಾಲಿಯಾದ ಸ್ಕಂದನನ್ನು ಬೇಗನೇ ಸಂಹರಿಸು! ಒಂದುವೇಳೆ ನೀನು ಇವನನ್ನು ಕೊಲ್ಲದಿದ್ದರೆ ಈ ಮಹಾಬಲನು ನಮ್ಮೊಂದಿಗೆ ಮೂರು ಲೋಕಗಳನ್ನೂ ಗೆದ್ದು ಇವನೇ ಇಂದ್ರನಾಗುತ್ತಾನೆ!”

ಅವನು ಅವರಿಗೆ ವ್ಯಥಿತನಾಗಿ ಹೇಳಿದನು: “ಈ ಬಾಲಕನು ತುಂಬಾ ಬಲಶಾಲಿಯು. ಲೋಕಗಳ ಸೃಷ್ಟಾರನನ್ನು ಕೂಡ ಯುದ್ಧದಲ್ಲಿ ವಿಕ್ರಮದಿಂದ ನಾಶಪಡಿಸಬಲ್ಲನು. ಲೋಕಮಾತೆಯರು ಎಲ್ಲರೂ ಸ್ಕಂದನಲ್ಲಿಗೆ ಇಂದು ಹೋಗಿ ಅವನ ವೀರ್ಯವನ್ನು ಗೆಲ್ಲಲಿ.” ಹಾಗೆಯೇ ಆಗಲೆಂದು ಅವರು ಹೋದರು. ಆ ಅಪ್ರತಿಮಬಲಶಾಲಿಯನ್ನು ಕಂಡು ವಿಷಣ್ಣವದನರಾಗಿ ಅವರು ಇವನನ್ನು ಗೆಲ್ಲಲು ನಾವು ಅಶಕ್ಯರು ಎಂದು ಚಿಂತಿಸಿ ಅವನಿಗೇ ಶರಣು ಹೊಕ್ಕರು. ಅವನಿಗೆ ಹೇಳಿದರು: “ನೀನು ನಮ್ಮ ಮಗ. ನಾವು ಜಗತ್ತನ್ನೇ ಪಾಲಿಸುವವರು. ಸ್ನೇಹದಿಂದ ಚಿಮ್ಮುತ್ತಿರುವ ನಮ್ಮ ಮೊಲೆಹಾಲನ್ನು ಉಣ್ಣು.” ಅವರನ್ನು ಪೂಜಿಸಿ ಮಹಾಸೇನನು ಅವರ ಆಸೆಯನ್ನು ಈಡೇರಿಸಿದನು. ಇದನ್ನು ನೋಡಿ ಬಲಿಗಳಲ್ಲಿ ಬಲಿಯಾದ ತಂದೆ ಅಗ್ನಿಯು ಅಲ್ಲಿಗೆ ಆಗಮಿಸಿದನು. ಮಾತೃಗಣಗಳೊಂದಿಗೆ ಅವನಿಂದಲೂ ಗೌರವಿಸಲ್ಪಟ್ಟ ಅವನು ಮಹಾಸೇನನನ್ನು ಸುತ್ತುವರೆದು ಅವನನ್ನು ರಕ್ಷಿಸಲು ಸ್ಥಿರವಾಗಿ ನಿಂತನು. ಆ ಎಲ್ಲ ಮಾತೆಯರಲ್ಲಿ ಕ್ರೋಧದಿಂದ ಹುಟ್ಟಿದ ನಾರಿಯು ಕೈಯಲ್ಲಿ ಶೂಲವನ್ನು ಹಿಡಿದು ತನ್ನದೇ ಮಗನನ್ನು ಕಾಯುವಂತೆ ಅವನನ್ನು ರಕ್ಷಿಸಿ ಕಾದಳು. ಕೆಂಪುಬಣ್ಣದ ಸಮುದ್ರದ ಮಗಳು, ರಕ್ತವನ್ನು ಕುಡಿಯುವ ಕ್ರೂರಳು ಮಹಾಸೇನನನ್ನು ಪುತ್ರನಂತೆ ಬಿಗಿದಪ್ಪಿ ರಕ್ಷಿಸಿದಳು. ಅಗ್ನಿಯು ಆಡಿನ ಮುಖವನ್ನು ಧರಿಸಿ, ಬಹಳ ಮಕ್ಕಳೊಂದಿಗೆ ಆ ಗಿರಿಯ ಮೇಲಿದ್ದ ಬಾಲಕನೊಂದಿಗೆ ಆಟವಾಡುತ್ತಾ ರಂಜಿಸಿದನು.

ಗ್ರಹಗಳು, ಉಪಗ್ರಹಗಳು, ಋಷಿಗಳು, ಮಾತೃಗಳು, ಹುತಾಶನನೇ ಮೊದಲಾದ ಉರಿಯುವವು, ಪಾರಿಷದ ಗಣಗಳು ಮತ್ತು ಇನ್ನೂ ಅನ್ಯ ಬಹುಸಂಖ್ಯೆಯ ಘೋರ ತ್ರಿದಿವವಾಸಿಗಳು ಮಾತೃಗಣಗಳೊಂದಿಗೆ ಮಹಾಸೇನನನ್ನು ಸುತ್ತುವರೆದು ನಿಂತರು. ವಿಜಯವು ಸಂದಿಗ್ಧವೆಂದು ನೋಡಿ ವಿಜಯವನ್ನು ಬಯಸಿದ ಸುರೇಶ್ವರನು ಐರಾವತವನ್ನೇರಿ ದೇವತೆಗಳ ಸಹಿತ ಸ್ಕಂಧನಲ್ಲಿಗೆ ಮುಂದುವರೆದನು. ಮಹಾಸೇನನನ್ನು ಕೊಲ್ಲಲು ಇಂದ್ರನ ಉತ್ತಮ ಸೇನೆಯು ಉಗ್ರವಾಗಿ ಕೂಗುತ್ತಾ ಮಹಾವೇಗದಿಂದ ಮಹಾಪ್ರಭೆಯುಳ್ಳ, ವಿಚಿತ್ರ ಧ್ವಜಗಳಿಂದ ಸನ್ನಿದ್ಧವಾದ, ನಾನಾ ವಾಹನ-ಕಾರ್ಮುಕಗಳಿಂದ ಕೂಡಿದ ದೇವತೆಗಳ ಸೇನೆಯು ಹೊರಟಿತು. ಶ್ರೇಷ್ಠವಾದ ಬಟ್ಟೆಗಳನ್ನು ಧರಿಸಿದ್ದ, ಆಭರಣಗಳಿಂದ ಸುಂದರವಾಗಿ ಅಲಂಕೃತನಾಗಿ ಕೊಲ್ಲಲು ಅಲ್ಲಿಗೆ ಬರುತ್ತಿದ್ದ ಶಕ್ರನನ್ನು ಕುಮಾರನು ಎದುರಿಸಿದನು. ದಾರಿಯಲ್ಲಿ ಶಕ್ರನು ಮಹಾಬಲವನ್ನುಪಯೋಗಿಸಿ ಜೋರಾಗಿ ಕೂಗಲು ಪಾವಕಾತ್ಮಜನನ್ನು ಕೊಲ್ಲಲು ಬರುತ್ತಿದ್ದ ದೇವಸೇನೆಯು ಹರ್ಷಗೊಂಡಿತು. ತ್ರಿದಶಸ್ತರಿಂದ ಮತ್ತು ಪರಮಋಷಿಗಳಿಂದ ಸಂಪೂಜ್ಯನಾಗಿ ವಾಸವನು ಕಾರ್ತಿಕೇಯನ ಸಮೀಪಕ್ಕೆ ಬಂದನು. ಆಗ ಸುರರೊಂದಿಗೆ ದೇವೇಶನು ಸಿಂಹನಾದವನ್ನು ಗೈದನು. ಅದನ್ನು ಕೇಳಿ ಗುಹನೂ ಕೂಡ ಸಾಗರದಂತೆ ಜೋರಾಗಿ ಕೂಗಿದನು. ಅವನ ಆ ಮಹಾ ಶಬ್ಧದಿಂದ ದೇವಸೇನೆಯು ಸಮುದ್ರದಂತೆ ಕ್ಷೋಭೆಗೊಂಡಿತ್ತು ಮತ್ತು ಎಲ್ಲಿದ್ದರೂ ಅಲ್ಲಲ್ಲಿಯೇ ಅಚೇತನರಾಗಿ ನಿಂತರು. ತನ್ನನ್ನು ಕೊಲ್ಲಲು ಬಂದ ದೇವತೆಗಳನ್ನು ನೋಡಿ ಆ ಪಾವಕಿಯು ಕೃದ್ಧನಾಗಿ ಬಾಯಿಯಿಂದ ಜೋರಾಗಿ ಉರಿಯುತ್ತಿರುವ ಅಗ್ನಿಯ ಜ್ವಾಲೆಗಳನ್ನು ಹೊರಹಾಕಿದನು. ಅದು ದೇವಸೇನೆಯನ್ನು ಸುಟ್ಟು ನೆಲದಮೇಲೆ ಬೀಳಿಸಿತು. ಅವರ ಶಿರಗಳು, ದೇಹಗಳು, ಆಯುಧ, ವಾಹನಗಳು ಆ ಬೆಂಕಿಯಲ್ಲಿ ಹತ್ತಿ ಉರಿಯತೊಡಗಿದವು. ಕ್ಷಣದಲ್ಲಿಯೇ ಅವರು ಮಂಡಲಗಳಿಂದ ಕಿತ್ತುಬಿದ್ದ ನಕ್ಷತ್ರಗಳ ಗುಂಪುಗಳಂತೆ ತೋರಿದರು. ಉರಿಯುತ್ತಿದ್ದ ದೇವತೆಗಳು ವಜ್ರಧರನನ್ನು ತ್ಯಜಿಸಿ ಪಾವಕಾತ್ಮನನ್ನು ಶರಣು ಹೊಕ್ಕನು. ಹಾಗೆ ಅಲ್ಲಿ ಶಾಂತಿಯುಂಟಾಯಿತು.

ದೇವತೆಗಳಿಂದ ತ್ಯಜಿಸಲ್ಪಟ್ಟ ಶಕ್ರನು ವಜ್ರವನ್ನು ಸ್ಕಂದನ ಮೇಲೆ ಎಸೆದನು. ಅದು ಸ್ಕಂದನ ಬಲಪಾರ್ಶ್ವವನ್ನು ಹೊಕ್ಕು ಆ ಮಹಾತ್ಮನ ಪಾರ್ಶ್ವವನ್ನು ಕತ್ತರಿಸಿತು. ವಜ್ರಪ್ರಹಾರದಿಂದ ಸ್ಕಂದನಲ್ಲಿ ಇನ್ನೊಬ್ಬ ಪುರುಷನು ಹುಟ್ಟಿದನು. ಆ ಯುವಕನು ಕಾಂಚನದ ಪ್ರಭೆಯನ್ನು ಹೊಂದಿದ್ದು, ಶಕ್ತಿಯನ್ನು ಹಿಡಿದಿದ್ದನು ಮತ್ತು ದಿವ್ಯಕುಂಡಲಗಳನ್ನು ಧರಿಸಿದ್ದನು. ವಜ್ರದ ಹೊಡೆತಕ್ಕೆ ಸಿಕ್ಕು ಹುಟ್ಟಿದುದರಿಂದ ಅವನು ವಿಶಾಖ ಎಂದಾದನು. ಕಾಲಾನಲಸಮದ್ಯುತಿಯಾಗಿದ್ದ ಇನ್ನೊಬ್ಬನು ಹುಟ್ಟಿದ್ದುದನ್ನು ನೋಡಿ ಇಂದ್ರನು ಭಯದಿಂದ ಕೈಮುಗಿದು ಸ್ತುತಿಸಿ ಸ್ಕಂದನ ಶರಣು ಹೋದನು. ಆಗ ಸತ್ತಮ ಸ್ಕಂದನು ಸೈನ್ಯದೊಂದಿಗೆ ಅವನಿಗೆ ಅಭಯವನ್ನಿತ್ತನು. ತ್ರಿದಶರು ಪ್ರಹೃಷ್ಠರಾಗಿ ಕೈಗಳನ್ನು ಮೇಲೆತ್ತಿ ನಮಸ್ಕರಿಸಿದರು.

ಸ್ಕಂದನ ವಜ್ರಪ್ರಹಾರದಿಂದಾಗಿ ಹುಟ್ಟಿದ ಮತ್ತು ಗರ್ಭದಲ್ಲಿಯೂ ಇರುವ ಶಿಶುಗಳನ್ನು ಅಪಹರಿಸುವ ದಾರುಣ ಕುಮಾರಕರು ಹುಟ್ಟಿದರು. ವಜ್ರಪ್ರಹಾರದಿಂದ ಮಹಾಬಲಶಾಲಿಗಳಾದ ಕನ್ಯೆಯರೂ ಹುಟ್ಟಿದರು. ಕುಮಾರರು ವಿಶಾಖನನ್ನು ತಮ್ಮ ತಂದೆಯೆಂದು ತಿಳಿದರು. ಆ ಭಗವಾನನು ರಣದಲ್ಲಿ ಆಡಿನ ಮುಖವನ್ನು ಧರಿಸಿ, ತಾನೇ ಹೊರತಂದ ಪುತ್ರರು ಮತ್ತು ಕನ್ಯಾಗಣಗಳೆಲ್ಲರಿಂದ ಆವೃತನಾಗಿ ಮಾತೃಗಳ ಸಮಕ್ಷಮದಲ್ಲಿ ಕೌಶಲದಿಂದ ಭದ್ರಶಾಖನಾಗಿ ನಿಂತನು. ಆದುದರಿಂದ ಸ್ಕಂದನನ್ನು ಭುವಿಯಲ್ಲಿ ಕುಮಾರಪಿತನೆಂದು ಜನರು ಕರೆಯುತ್ತಾರೆ. ಪುತ್ರರನ್ನು ಮತ್ತು ಪುತ್ರಿಯರನ್ನು ಬಯಸುವ ಜನರು ಸದಾ ಅವರ ಪ್ರದೇಶದಲ್ಲಿ ರುದ್ರನನ್ನು ಮಹಾಬಲ ಅಗ್ನಿಯನ್ನಾಗಿಯೂ ಉಮೆಯನ್ನು ಸ್ವಾಹಾ ಎಂದೂ ಯಾಜಿಸುತ್ತಾರೆ. ತಪ ಎಂಬ ಹೆಸರಿನ ಅಗ್ನಿಯಿಂದ ಜನಿಸಿದ ಕನ್ಯೆಯರು ಸ್ಕಂದನ ಬಳಿಸಾರಲು ಅವರಿಗೆ ಏನು ಮಾಡಲಿ ಎಂದು ಸ್ಕಂದನು ಕೇಳಿದನು.

ಮಾತರರು ಹೇಳಿದರು: “ನಿನ್ನ ಪ್ರಸಾದದಂತೆ ನಾವು ಸರ್ವಲೋಕದ ಪೂಜ್ಯ ಉತ್ತಮ ಮಾತರರೆಂದಾಗಲಿ. ನಮಗೆ ಈ ಪ್ರಿಯವಾದುದನ್ನು ಮಾಡು!” “ಹಾಗೆಯೇ ಆಗಲಿ! ನೀವು ಅಶಿವ ಶಿವರೆಂದು ಎರಡು ಭಾಗಗಳಾಗುತ್ತೀರಿ!” ಎಂದು ಆ ಉದಾರಧಿಯು ಪುನಃ ಪುನಃ ಹೇಳಿದನು. ಸ್ಕಂದನ ಪುತ್ರತ್ವವನ್ನು ಪಡೆದು ಮಾತೃಗಣವು ಹೊರಟಿತು. ಕಾಕೀ, ಹಲಿಮಾ, ರುದ್ರಾ, ಬೃಹಲೀ, ಆರ್ಯಾ, ಪಲಾಲಾ, ಮತ್ತು ಮಿತ್ರಾ ಇವರು ಆ ಏಳು ಶಿಶುಮಾತರರು. ಅವರು ವೀರ್ಯಸಂಪನ್ನ ಅತಿದಾರುಣ ಲೋಹಿತಾಕ್ಷ ಭಯಂಕರ ಸ್ಕಂದನ ಪ್ರಸಾದದಿಂದ ಹುಟ್ಟಿದ ಶಿಶು ಎಂಬ ಹೆಸರಿನ ಮಗನನ್ನು ಪಡೆದರು. ಈ ವೀರನು ಸ್ಕಂದ-ಮಾತೃಗಣಕ್ಕೆ ಜನಿಸಿದ ಎಂಟನೆಯ ಪುತ್ರನೆಂದು ಹೇಳುತ್ತಾರೆ. ಆದರೆ ಆ ಆಡಿನ ಮುಖದವನನ್ನು ಸೇರಿಸಿ, ಇವನನ್ನು ಒಂಭತ್ತನೆಯವನೆಂದು ಹೇಳುತ್ತಾರೆ. ಸ್ಕಂದನ ಆರನೆಯ ಮುಖವು ಆಡಿನದು. ಮಧ್ಯದಲ್ಲಿರುವ ಈ ಆರನೆಯ ಮುಖವನ್ನು ಮಾತೃಗಣವು ಸದಾ ಪೂಜಿಸುತ್ತದೆ. ಆರನೆಯ ಆ ಶೀರ್ಷವು ಅತ್ಯಂತ ಪ್ರಮುಖವಾದುದೆಂದು ಕೇಳಿಬರುತ್ತದೆ. ಏಕೆಂದರೆ ಇದರಿಂದಲೇ ಭದ್ರಶಾಖನು ಶಕ್ತಿಯನ್ನು ಸೃಷ್ಟಿಸಿದನೆಂದು ಹೇಳುತ್ತಾರೆ. ಈ ವಿವಿಧ ಘಟನೆಗಳು ಶುಕ್ಲಪಕ್ಷದ ಪಂಚಮಿಯೆಂದು ನಡೆದವು. ಷಷ್ಠಿಯಂದು ಅಲ್ಲಿ ಮಹಾಘೋರ ಯುದ್ಧವು ನಡೆಯಿತು.

ಆಗ ಹಿರಣ್ಯಾಕ್ಷ, ಮಹಾಪ್ರಭ, ಕೆಂಪುವಸ್ತ್ರವನ್ನುಟ್ಟಿದ್ದ, ತೀಕ್ಷ್ಣದಂಷ್ಟ್ರ, ಮನೋರಮ, ಸರ್ವಲಕ್ಷಣಸಂಪನ್ನ, ತ್ರೈಲೋಕ್ಯಗಳಿಗೂ ಪ್ರಿಯನಾದ ಸ್ಕಂದನು ಬಂಗಾರದ ಕವಚವನ್ನು ಧರಿಸಿ, ಬಂಗಾರದ ಮುಕುಟವನ್ನು ಧರಿಸಿ ಕುಳಿತುಕೊಂಡನು. ಆಗ ಆ ವರದ, ಶೂರ, ಯುವಕ, ಮೃಷ್ಟಕುಂಡಲನನ್ನು ಪದ್ಮರೂಪಿ ಶ್ರೀಯು ಸ್ವಯಂ ಶರೀರವನ್ನು ತಳೆದು ಪ್ರೀತಿಸಿದಳು. ಶ್ರೀಯಿಂದ ಆರಿಸಲ್ಪಟ್ಟ ಆ ಯಶಸ್ವಿ ಕೋಮಲ ಕುಮಾರವರನು ಪೂರ್ಣಿಮೆಯ ಶಶಿಯಂತೆ ಭೂತಗಳಿಗೆ ಕಾಣಿಸಿದನು. ಮಹಾತ್ಮ ಬ್ರಾಹ್ಮಣರು ಆ ಮಹಾಬಲನನ್ನು ಪೂಜಿಸಿದರು. ಅಲ್ಲಿದ್ದ ಮಹರ್ಷಿಗಳೂ ಕೂಡ ಸ್ಕಂದನನ್ನು ಈ ರೀತಿಯಲ್ಲಿ ಕರೆದರು: “ಹಿರಣ್ಯವರ್ಣ! ನಿನಗೆ ಮಂಗಳವಾಗಲಿ! ಲೋಕಗಳ ಶಂಕರನಾಗು. ಆರೇ ರಾತ್ರಿಗಳ ಹಿಂದೆ ಹುಟ್ಟಿದ್ದರೂ ಸರ್ವ ಲೋಕಗಳೂ ನಿನ್ನ ವಶವಾಗಿವೆ. ಆದುದರಿಂದ ನೀನು ಇಂದ್ರನಾಗಿ ಮೂರುಲೋಕಗಳಿಗೂ ಅಭಯವನ್ನು ನೀಡು. ಸುರೋತ್ತಮ! ಪುನಃ ಅಭಯವನ್ನಿತ್ತು ನಮ್ಮನ್ನು ಉಳಿಸು.”

ಸ್ಕಂದನು ಹೇಳಿದನು: “ತಪೋಧನರೇ! ಇಂದ್ರನು ಸರ್ವಲೋಕಗಳಿಂದ ಏನು ಮಾಡುತ್ತಾನೆ? ಸುರೇಶ್ವರನು ದೇವಗಣಗಳನ್ನು ಹೇಗೆ ನಿತ್ಯವೂ ಪಾಲಿಸುತ್ತಾನೆ?”

ಋಷಿಗಳು ಹೇಳಿದರು: “ಇಂದ್ರನು ಭೂತಗಳಿಗೆ ಬಲ, ತೇಜಸ್ಸು, ಮಕ್ಕಳು ಮತ್ತು ಸುಖವನ್ನು ನೀಡುತ್ತಾನೆ. ತೃಪ್ತಿಪಡಿಸಿದರೆ ಸುರೇಶ್ವರನು ಎಲ್ಲ ವರಗಳನ್ನೂ ನೀಡುತ್ತಾನೆ. ಕೆಟ್ಟಾಗಿ ನಡೆದುಕೊಳ್ಳುವವರನ್ನು ಸಂಹರಿಸುತ್ತಾನೆ; ಉತ್ತಮ ನಡತೆಯುಳ್ಳವರನ್ನು ಪಾಲಿಸುತ್ತಾನೆ. ಬಲಸೂದನನು ಇರುವವುಗಳಿಗೆ ಕಾರ್ಯವೇನೆಂದು ಅನುಶಾಸನ ಮಾಡುತ್ತಾನೆ. ಸೂರ್ಯನಿಲ್ಲದಿರುವಾಗ ಸೂರ್ಯನಾಗುತ್ತಾನೆ; ಹಾಗೆಯೇ ಚಂದ್ರನಿಲ್ಲದಿರುವಾಗ ಚಂದ್ರನಾಗುತ್ತಾನೆ. ಅವನು ಅಗ್ನಿ, ವಾಯು, ಪೃಥ್ವಿ ಮತ್ತು ನೀರಿನ ಕಾರಣ. ಇವು ಇಂದ್ರನ ಕರ್ತವ್ಯಗಳು. ಇಂದ್ರನು ವಿಪುಲ ಬಲಶಾಲಿ. ನೀನೂ ಕೂಡ ವೀರ, ಬಲಶ್ರೇಷ್ಠನಾಗಿದ್ದೀಯೆ. ಆದುದರಿಂದ ನೀನೇ ಇಂದ್ರನಾಗು.”

ಶಕ್ರನು ಹೇಳಿದನು: “ಮಹಾಬಾಹೋ! ಇಂದ್ರನಾಗಿ ಎಲ್ಲರಿಗೂ ಸುಖವನ್ನು ನೀಡು. ಪ್ರಾಪ್ತರೂಪನಾಗಿದ್ದೀಯೆ! ಇಂದೇ ನಿನ್ನನ್ನು ಅಭಿಷೇಕಿಸುತ್ತೇವೆ.”

ಸ್ಕಂದನು ಹೇಳಿದನು: “ಅವ್ಯಗ್ರನಾಗಿ ವಿಜಯರತನಾಗಿ ನೀನೇ ತ್ರೈಲೋಕ್ಯವನ್ನು ಶಾಸನಮಾಡು. ಶಕ್ರ! ನಾನು ನಿನ್ನ ಕಿಂಕರ. ನಿನ್ನ ಇಂದ್ರತ್ವವನ್ನು ನಾನು ಬಯಸುವುದಿಲ್ಲ.”

ಶಕ್ರನು ಹೇಳಿದನು: “ವೀರ! ನಿನ್ನ ಬಲವು ಅದ್ಭುತವಾದುದು. ನೀನು ದೇವತೆಗಳ ಶತ್ರುಗಳನ್ನು ಗೆಲ್ಲು. ನಿನ್ನ ವೀರ್ಯದಿಂದ ವಿಸ್ಮಿತರಾಗಿ ಲೋಕಗಳು ತಿಳಿಯದಂತಾಗಿವೆ. ನಾನು ಇಂದ್ರತ್ವವನ್ನು ಉಳಿಸಿಕೊಂಡಿದ್ದರೂ ಬಲಹೀನನಾಗಿ ಸೋತಿದ್ದೇನೆ. ನನ್ನನ್ನು ಕೀಳಾಗಿ ಕಾಣುತ್ತಾರೆ ಮತ್ತು ನಮ್ಮೀರ್ವರಲ್ಲಿ ಭೇದಗಳನ್ನು ತರುತ್ತಾರೆ. ನಮ್ಮನ್ನು ಬೇರ್ಪಡಿಸಿ ಲೋಕವು ಎರಡು ಪಂಗಡಗಳಾಗುತ್ತವೆ. ಲೋಕಗಳು ಎರಡಾದಾಗ ಸ್ವಾಭಾವಿಕವಾಗಿಯೇ ಅವುಗಳ ಮಧ್ಯೆ ಮೊದಲಿನಂತೆ ಯುದ್ಧವು ನಿಶ್ಚಯವಾಗಿಯೂ ನಡೆಯುತ್ತದೆ. ಆಗ ಅಲ್ಲಿ ರಣದಲ್ಲಿ ನೀನು ನನ್ನನ್ನು ಯಥಾಶ್ರದ್ಧೆಯಿಂದ ಗೆಲ್ಲುತ್ತೀಯೆ ಮತ್ತು ನೀನೇ ಇಂದ್ರನಾಗುತ್ತೀಯೇ. ಆದುದರಿಂದ ವಿಚಾರಮಾಡದೇ ಇಂದೇ ನೀನು ಇಂದ್ರನಾಗು.”

ಸ್ಕಂದನು ಹೇಳಿದನು: “ನೀನೇ ರಾಜ – ನನ್ನ ಮತ್ತು ತ್ರೈಲೋಕ್ಯದ! ನಿನಗೆ ಮಂಗಳವಾಗಲಿ! ಶಕ್ರ! ನಿನ್ನ ಶಾಸನದಂತೆ ನಾನೇನು ಮಾಡಬೇಕೆಂದು ನನಗೆ ಹೇಳು.”

ಶಕ್ರನು ಹೇಳಿದನು: “ಒಂದುವೇಳೆ ನೀನು ನಿಶ್ಚಯದಿಂದ ಹೇಳಿದ ಈ ಮಾತುಗಳು ಸತ್ಯವಾದುದೇ ಆದರೆ ಮತ್ತು ನನ್ನ ಆಜ್ಞೆಯಂತೆ ಮಾಡಬಯಸಿದರೆ ನನ್ನನ್ನು ಕೇಳು. ದೇವತೆಗಳ ಸೇನಾಪತಿಯಾಗಿ ಅಭಿಷಿಕ್ತನಾಗು! ನಿನ್ನ ಮಾತಿನಂತೆ ನಾನೇ ಇಂದ್ರನಾಗಿರುತ್ತೇನೆ.”

ಸ್ಕಂದನು ಹೇಳಿದನು: “ದಾನವರ ವಿನಾಶಕ್ಕಾಗಿ, ದೇವತೆಗಳ ಕಾರ್ಯಸಿದ್ಧಿಗಾಗಿ, ಮತ್ತು ಗೋ-ಬ್ರಾಹ್ಮಣರ ರಕ್ಷಣೆಗಾಗಿ ನನ್ನನ್ನು ಸೇನಾಪತಿಯಾಗಿ ಅಭಿಷೇಕಿಸು.”

ಅವನು ಸರ್ವದೇವಗಣಗಳೊಂದಿಗೆ ಮಘವತ ಮತ್ತು ಮಹರ್ಷಿಗಳಿಂದ ಪೂಜಿತನಾಗಿ ಅಭಿಷಿಕ್ತನಾಗಿ ಶೋಭಿಸಿದನು. ಅವನಿಗೆ ಹಿಡಿದಿದ್ದ ಕಾಂಚನ ಛತ್ರವು ಚೆನ್ನಾಗಿ ಉರಿಯುತ್ತಿರುವ ಅಗ್ನಿಯ ಆತ್ಮ ಮಂಡಲದಂತೆ ಪ್ರಜ್ವಲಿಸುತ್ತಿತ್ತು. ಸ್ವಯಂ ಯಶಸ್ವೀ ತ್ರಿಪುರಘ್ನನು ವಿಶ್ವಕರ್ಮನು ರಚಿಸಿದ್ದ ಹಿರಣ್ಮಯ ದಿವ್ಯ ಮಾಲೆಯನ್ನು ಅವನಿಗೆ ಕಟ್ಟಿದನು. ದೇವಿಯೊಂದಿಗೆ ಆ ಪರಂತಪ ಭಗವಾನ್ ಗೋವೃಷಧ್ವಜನು ಅಲ್ಲಿಗೆ ಬಂದು ಅವನನ್ನು ಸಂತೋಷದಿಂದ ಪೂಜಿಸಿದನು.

ಅಗ್ನಿಯನ್ನು ರುದ್ರನೆಂದು ಮತ್ತು ಅದರಂತೆ ಸ್ಕಂದನನ್ನು ರುದ್ರಸೂನುವೆಂದು ದ್ವಿಜರು ಕರೆಯುತ್ತಾರೆ. ರುದ್ರನ ಶುಕ್ರವು ಬಿದ್ದು ಆ ಶ್ವೇತಪರ್ವತವಾಯಿತು. ಅದೇ ಶ್ವೇತಪರ್ವತದಲ್ಲಿ ಪಾವಕನ ಇಂದ್ರಿಯವು ಕೃತ್ತಿಕೆಯರೊಂದಿಗೆ ಸೇರಿತು. ರುದ್ರನಿಂದ ಪೂಜಿಸಲ್ಪಟ್ಟಿದ್ದುದನ್ನು ನೋಡಿ ಎಲ್ಲ ದಿವೌಕಸರೂ ಆ ಗುಣವಂತರಲ್ಲಿ ಶ್ರೇಷ್ಠ ಗುಹನನ್ನು ರುದ್ರಸೂನುವೆಂದು ಕರೆದರು. ರುದ್ರನು ವಹ್ನಿಯನ್ನು ಅನುಪ್ರವೇಶಿಸಿ ಈ ಶಿಶುವು ಹುಟ್ಟಿದ್ದುದರಿಂದ ಅಲ್ಲಿ ಹುಟ್ಟಿದ ಸ್ಕಂದನು ರುದ್ರಸೂನುವಾದನು. ರುದ್ರನ ವಹ್ನಿಯಲ್ಲಿ ಸ್ವಾಹಾಳಿಂದ ಆರು ಸ್ತ್ರೀಯರ ತೇಜಸ್ಸಿನಿಂದ ಹುಟ್ಟಿದ ಸ್ಕಂದ ಸುರಶ್ರೇಷ್ಠನು ರುದ್ರಸೂನುವಾದನು. ಕೆಂಪುಬಣ್ಣದ ಶುಭ್ರವಸ್ತಗಳಲ್ಲಿದ್ದ ಪಾವಕಾತ್ಮಜನು ಕೆಂಪು ಮೋಡಗಳ ಮಧ್ಯದಿಂದ ಇಣುಕುತ್ತಿರುವ ಶ್ರೀಮಾನ್ ಸೂರ್ಯನು ಬೆಳಗುತ್ತಿರುವಂತೆ ಕಂಡನು. ಅಗ್ನಿಯು ಕೊಟ್ಟಿದ್ದ ಕುಕ್ಕುಟವು ಧ್ವಜವನ್ನು ಅಲಂಕರಿಸಿ ರಥದ ಮೇಲೆ ಹಾರಿ ಕುಳಿತುಕೊಂಡು ಕಾಲಾಗ್ನಿಯಂತೆ ಕೆಂಪಾಗಿ ಹೊಳೆಯುತ್ತಿತ್ತು. ಅವನ ಶರೀರದೊಂದಿಗೇ ಹುಟ್ಟಿದ್ದ ಕವಚವನ್ನು ದೇವನಿಗೆ ಯುದ್ಧದಲ್ಲಿ ಸದಾ ಜಯವನ್ನು ತರುವ ಶಕ್ತಿಯು ಪ್ರವೇಶಿಸಿತು. ಶಕ್ತಿ, ವರ್ಮ, ಬಲ, ತೇಜಸ್ಸು, ಕಾಂತತ್ವ, ಸತ್ಯ, ಅಕ್ಷತಿ, ಬ್ರಹ್ಮಣ್ಯತ್ಯ, ಅಸಮ್ಮೋಹ, ಭಕ್ತರ ಪರಿರಕ್ಷಣೆ, ಶತ್ರುಗಳ ನಾಶ ಮತ್ತು ಲೋಕಗಳ ರಕ್ಷಣೆ ಇವು ಎಲ್ಲವೂ ಸ್ಕಂದನ ಜೊತೆಗೇ ಹುಟ್ಟಿದವು. ಹೀಗೆ ಎಲ್ಲ ದೇವಗಣಗಳಿಂದ ಅವನು ಅಭಿಷಿಕ್ತನಾಗಿ, ಸ್ವಲಂಕೃತನಾಗಿ, ಸುಮನಸ್ಕನೂ ಪ್ರತೀತನೂ ಆಗಿ ಪರಿಪೂರ್ಣ ಚಂದ್ರನಂತೆ ತೋರಿದನು. ಇಷ್ಟಿಗಳಿಂದ, ಸ್ವಾಧ್ಯಾಯಘೋಷಗಳಿಂದ, ದೇವತೂರ್ಯರವಗಳಿಂದ, ದೇವಗಂಧರ್ವಗೀತಗಳಿಂದ, ಎಲ್ಲ ಅಪ್ಸರ ಗಣಗಳಿಂದ, ಇವರು ಮತ್ತು ಇನ್ನೂ ಇತರ ವಿವಿಧ ಹೃಷ್ಟ-ತುಷ್ಟರಾದ, ಅಲಂಕೃತರಾದ, ಆಡುತ್ತಿದ್ದಾರೋ ಎಂದು ತೋರುತ್ತಿದ್ದ ದೇವತೆಗಳಿಂದ ಪಾವಕಿಯು ಅಭಿಷಿಕ್ತನಾದನು.

ಅಭಿಷಿಕ್ತನಾದ ಮಹಾಸೇನನು ದಿವೌಕಸರಿಗೆ ಕತ್ತಲೆಯನ್ನು ಕೊಂದು ಉದಯಿಸುವ ಸೂರ್ಯನಂತೆ ತೋರಿದನು. ಆಗ ಸರ್ವ ದೇವಸೇನೆಯೂ ನೀನು ನಮ್ಮ ಒಡೆಯನೆಂದು ಹೇಳುತ್ತಾ ಸಹಸ್ರಾರು ಸಂಖ್ಯೆಗಳಲ್ಲಿ ಅವನನ್ನು ಸುತ್ತುವರೆದು ನಿಂತರು. ಭಗವಾನನು ಸುತ್ತುವರೆದು ಅರ್ಚಿಸುತ್ತಿದ್ದ, ಸ್ತುತಿಸುತ್ತಿದ್ದ ಸರ್ವಭೂತಗಣಗಳ ಬಳಿಸಾರಿ ಅವರನ್ನು ಸಂತವಿಸತೊಡಗಿದನು. ಸ್ಕಂದನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದ ಶತಕ್ರತುವು ತನ್ನಿದ ಬಿಡುಗಡೆಗೊಳಿಸಲ್ಪಟ್ಟಿದ್ದ  ದೇವಸೇನೆಯನ್ನು ನೆನಪಿಸಿಕೊಂಡನು. ಇವನೇ ಸ್ವಯಂ ಬ್ರಹ್ಮನು ಅವಳಿಗೆ ವಿಹಿಸಿದ ಪತಿಯೆಂದು ಆಲೋಚಿಸಿ ಸ್ವಲಂಕೃತಳಾದ ದೇವಸೇನೆಯನ್ನು ಕರೆಯಿಸಿದನು. ಆಗ ಬಲಭಿದಿಯು ಸ್ಕಂದನಿಗೆ ಹೇಳಿದನು: “ಸುರೋತ್ತಮ! ಈ ಕನ್ಯೆಯನ್ನು ನೀನು ಹುಟ್ಟುವ ಮೊದಲೇ ನಿನ್ನ ಪತ್ನಿಯೆಂದು ಸ್ವಯಂಭುವು ನಿರ್ಧಿಷ್ಟಗೊಳಿಸಿದ್ದನು. ಆದುದರಿಂದ ಪದ್ಮವರ್ಚಸಳಾದ ಈ ದೇವಿಯ ಕೈಯನ್ನು ಮಂತ್ರಪುರಸ್ಕೃತವಾಗಿ ವಿಧಿವತ್ತಾಗಿ ನಿನ್ನ ಬಲಕೈಯಿಂದ ಹಿಡಿ.” ಹೀಗೆ ಹೇಳಲು ಅವನು ಯಥಾವಿಧಿಯಾಗಿ ಅವಳ ಪಾಣಿಗ್ರಹಣಮಾಡಿಕೊಂಡನು. ಮಂತ್ರಗಳನ್ನು ತಿಳಿದಿದ್ದ ಬೃಹಸ್ಪತಿಯು ಮಂತ್ರಗಳನ್ನು ಉಚ್ಚರಿಸಿ ಯಾಜಿಸಿದನು. ಹೀಗೆ ದೇವಸೇನೆಯೆಂದು ಬುಧರಿಗೆ ತಿಳಿದವಳು, ಷಷ್ಠಿಯೆಂದು ಬ್ರಾಹ್ಮಣರು ಕರೆಯುವ, ಲಕ್ಷ್ಮೀ, ಆಶಾ, ಸುಖಪ್ರದಾ, ಸಿನೀವಾಲೀ, ಕುಹೂ, ಸದ್ವತ್ತಿ, ಅಪರಾಜಿತಳು ಸ್ಕಂದನ ರಾಣಿಯಾದಳು. ಸ್ಕಂದನನ್ನು ಶಾಶ್ವತ ಪತಿಯನ್ನಾಗಿ ಪಡೆದ ದೇವಸೇನೆ, ದೇವೀ ಲಕ್ಷ್ಮಿಯು ಸ್ವಯಂ ಶರೀರಿಣಿಯಾಗಿ ಅವನನ್ನು ಆಶ್ರಯಿಸಿದಳು. ಪಂಚಮಿಯಂದು ಸ್ಕಂದನು ಶ್ರೀಮಂತನಾದುದರಿಂದ ಅದು ಶ್ರೀಪಂಚಮಿಯೆಂದು ನೆನಪಿನಲ್ಲಿದೆ. ಮತ್ತು ಷಷ್ಠಿಯಂದು ಅವನು ಕೃತಾರ್ಥನಾದುದರಿಂದ ಷಷ್ಠಿಯನ್ನು ಮಹಾತಿಥಿಯೆಂದು ಪರಿಗಣಿಸುತ್ತಾರೆ.

ಮಹಾಸೇನನನ್ನು ಶ್ರೀಯು ಆರಿಸಿದ ಮತ್ತು ಅವನು ದೇವಸೇನಾಪತಿಯಾದ ನಂತರ ಸಪ್ತರ್ಷಿಗಳ ಆರು ದೇವಿ ಪತ್ನಿಯರು ಅವನ ಬಳಿ ಆಗಮಿಸಿದರು. ಆ ಧರ್ಮಯುಕ್ತ ಮಹಾವ್ರತರು ಋಷಿಗಳಿಂದ ಪರಿತ್ಯಕ್ತರಾಗಿದ್ದರು. ಅವರು ಬೇಗನೇ ಪ್ರಭು ದೇವಸೇನಾಪತಿಯ ಬಳಿಬಂದು ಅವನಿಗೆ ಹೇಳಿದರು: “ಪುತ್ರ! ಅಕಾರಣವಾಗಿ ನಾವು ದೇವಸಮ್ಮತರಾದ ನಮ್ಮ ಪತಿಗಳಿಂದ ಪರಿತ್ಯಕ್ತರಾಗಿದ್ದೇವೆ. ರೋಷಗೊಂಡು ನಮ್ಮನ್ನು ಪುಣ್ಯಸ್ಥಾನದಿಂದ ತಳ್ಳಿದ್ದಾರೆ. ಕೆಲವರು ನಾವೇ ನಿನ್ನನ್ನು ಹುಟ್ಟಿಸಿದೆವು ಎಂದು ಅಪವಾದವನ್ನು ಹಬ್ಬಿಸಿದರು. ಅವರು ಆ ಅಸತ್ಯವನ್ನು ಕೇಳಿ ನಡೆದುಕೊಂಡರು. ಆದುದರಿಂದ ನೀನು ನಮ್ಮನ್ನು ಪಾರುಮಾಡಬೇಕು. ಪ್ರಭೋ! ನಾವು ನಿನ್ನನ್ನು ಪುತ್ರನನ್ನಾಗಿ ಮಾಡಿಕೊಳ್ಳಲು ಬಯಸುತ್ತೇವೆ. ನಿನ್ನ ಈ ಪ್ರಸಾದದಿಂದ ನಮಗೆ ಅಕ್ಷಯ ಸ್ವರ್ಗಸ್ತ್ವವು ದೊರೆಯುತ್ತದೆ. ಇದನ್ನು ಮಾಡಿ ನೀನು ಅನೃಣನಾಗು.”

ಸ್ಕಂದನು ಹೇಳಿದನು: “ತಾಯಂದಿರೇ! ನಾನು ನಿಮ್ಮ ಮಗನಾಗುತ್ತೇನೆ. ನೀವು ಬಯಸಿದುದೆಲ್ಲವೂ ಹಾಗೆಯೇ ಆಗುತ್ತದೆ.”

ಹೀಗೆ ಹೇಳಿದ ನಂತರ ಅವನು ಶಕ್ರನಿಗೆ ಈಗ ಏನು ಮಾಡೋಣವೆಂದು ಕೇಳಿದನು. ಸ್ಕಂದನ ಮಾತಿಗೆ ಅವನು ವಿಶ್ವಾಸದಿಂದ ಹೇಳಿದನು: “ದೇವಿ ಕನ್ಯೆ ಅಭಿಜಿತಳು ಅಕ್ಕ ರೋಹಿಣಿಯೊಡನೆ ಸ್ಪರ್ಧಿಸುತ್ತಾ ಹಿರಿಯತನವನ್ನು ಬಯಸಿ ತಪಸ್ಸನ್ನು ಮಾಡಲು ವನಕ್ಕೆ ತೆರಳಿದ್ದಾಳೆ. ಗಗನದಿಂದ ಕೆಳಗುರುಳಿದ ಈ ನಕ್ಷತ್ರದ ಕುರಿತಾಗಿ ನನಗೇನೂ ತೋಚದಾಗಿದೆ. ನಿನಗೆ ಮಂಗಳವಾಗಲಿ. ಸ್ಕಂದ! ಬ್ರಹ್ಮನೊಂದಿಗೆ ಸಮಾಲೋಚಿಸಲು ಇದು ಉತ್ತಮ ಕಾಲವಾಗಿದೆ. ಧನಿಷ್ಠಾದಿ ನಕ್ಷತ್ರಗಳನ್ನು ಕಾಲಾಂತರದಲ್ಲಿ ಬ್ರಹ್ಮನು ನಿರ್ಮಿಸಿದ್ದನು. ಹಿಂದೆಯೇ ರೋಹಿಣಿಯು ಈ ಗುಂಪಿನಲ್ಲಿ ಸೇರಿಕೊಂಡಿದ್ದಳು.”

ಶಕ್ರನು ಹೀಗೆ ಹೇಳಲು ಕೃತ್ತಿಕೆಯರು ತ್ರಿದಿವಕ್ಕೆ ಹೋಗಿ ಶಕಟಾಕಾರದ ನಕ್ಷತ್ರವಾಗಿ ಮಿಂಚಿದರು. ಅಗ್ನಿಯು ಅವರ ದೇವತೆಯಾದನು. ವಿನತೆಯೂ ಕೂಡ ಸ್ಕಂದನಿಗೆ ಹೇಳಿದಳು: “ನೀನು ನನಗೆ ಪಿಂಡವನ್ನು ನೀಡುವ ಮಗನಾಗು. ಪುತ್ರ! ನಾನು ಸದಾ ನಿನ್ನ ಜೊತೆ ವಾಸಿಸಲು ಬಯಸುತ್ತೇನೆ.”

ಸ್ಕಂದನು ಹೇಳಿದನು: “ನಿನಗೆ ನಮಸ್ಕಾರ! ಹಾಗೆಯೇ ಆಗಲಿ! ಪುತ್ರಸ್ನೇಹದಿಂದ ನನಗೆ ಮಾರ್ಗದರ್ಶನ ನೀಡು. ದೇವೀ! ಸೊಸೆಯಿಂದ ಪೂಜಿಸಿಕೊಂಡು ಸದಾ ನೀನು ನನ್ನೊಂದಿಗೆ ವಾಸಿಸುತ್ತೀಯೆ.”

ಆಗ ಮಾತೃಗಣಗಳೆಲ್ಲವೂ ಸ್ಕಂದನಿಗೆ ಹೇಳಿದರು: “ನಾವು ಸರ್ವಲೋಕಗಳ ಮಾತರರೆಂದು ಕವಿಗಳು ಸ್ತುತಿಸುತ್ತಾರೆ. ನಾವು ನಿನ್ನ ಮಾತರರೆಂದೂ ಪೂಜಿಸಿಕೊಳ್ಳಲು ಬಯಸುತ್ತೇವೆ.”

ಸ್ಕಂದನು ಹೇಳಿದನು: “ನೀವು ನನ್ನ ಮಾತರರಾಗುವಿರಿ. ನಾನು ನಿಮ್ಮ ಮಗನಾಗುತ್ತೇನೆ. ನಿಮಗಿಷ್ಟವಾದ ಏನನ್ನು ನಾನು ಮಾಡಲಿ ಹೇಳಿ!”

ಮಾತರರು ಹೇಳಿದರು: “ಹಿಂದೆ ಯಾರನ್ನು ಈ ಲೋಕಗಳ ಮಾತರರೆಂದು ಪರಿಕಲ್ಪಿಸಲಾಗಿತ್ತೋ ಅವರ ಆ ಸ್ಥಾನವು ನಮಗೆ ದೊರಕುವಂತಾಗಲಿ. ಅವರಿಗೆ ಅದು ಇಲ್ಲದಂತಾಗಲಿ. ಅವರಿಂದ ನಾವು ಲೋಕಗಳಲ್ಲಿ ಪೂಜಿತರಾಗಲಿ. ನಿನ್ನಿಂದಾಗಿ ತೀರಿಕೊಂಡ ನಮ್ಮ ಮಕ್ಕಳನ್ನು ಹಿಂದಿರುಗಿಸು.”

ಸ್ಕಂದನು ಹೇಳಿದನು: “ನೀವು ಹಿಂದೆ ಕಳೆದುಕೊಂಡ ಮಕ್ಕಳನ್ನು ಹಿಂದೆ ಪಡೆಯಲು ಶಕ್ಯವಿಲ್ಲ. ನೀವು ಬಯಸುವ ಅನ್ಯಮಕ್ಕಳನ್ನು ನೀಡುತ್ತೇನೆ.”

ಮಾತರರು ಹೇಳಿದರು: “ನಿನ್ನ ಜೊತೆಯಿದ್ದು ಬೇಕಾದ ರೂಪಗಳನ್ನು ತಳೆದು ಆ ಮಾತರರ ಮಕ್ಕಳನ್ನು ತಿನ್ನಲು ಬಯಸುತ್ತೇವೆ. ಅದನ್ನು ನೀಡು.”

ಸ್ಕಂದನು ಹೇಳಿದನು: “ಮಕ್ಕಳನ್ನು ಕೊಡುತ್ತೇನೆ. ಆದರೆ ನೀವು ಹೇಳಿದುದನ್ನು ಕೊಡುವುದು ಕಷ್ಟ. ನಿಮಗೆ ಮಂಗಳವಾಗಲಿ. ಮಕ್ಕಳಿಗೆ ನೀವು ನಮಸ್ಕೃತರಾಗಿ ಚೆನ್ನಾಗಿ ಪರಿರಕ್ಷಸಿ.”

ಮಾತರರು ಹೇಳಿದರು: “ಸ್ಕಂದ! ನಿನಗೆ ಮಂಗಳವಾಗಲಿ! ನೀನು ಬಯಸಿದಂತೆ ಮಕ್ಕಳನ್ನು ರಕ್ಷಿಸುತ್ತೇವೆ. ನಾವು ಸದಾ ನಿನ್ನೊಡನೆ ವಾಸಿಸಲು ಬಯಸುತ್ತೇವೆ.”

ಸ್ಕಂದನು ಹೇಳಿದನು: “ಮಕ್ಕಳು ಹದಿನಾರು ವರ್ಷದ ತರುಣರಾಗುವವರೆಗೆ ವಿವಿಧ ರೂಪಗಳಿಂದ ನೀವು ಮನುಷ್ಯರನ್ನು ಪ್ರಬಾಧಿಸಿ. ನಾನು ಕೂಡ ನಿಮಗೆ ಅವ್ಯಯವಾದ ರೌದ್ರ ಆತ್ಮವನ್ನು ದಯಪಾಲಿಸುತ್ತೇನೆ. ಮಕ್ಕಳ ಸಹಿತ ಪೂಜಿತರಾಗಿ ಪರಮ ಸುಖವನ್ನು ಪಡೆಯುತ್ತೀರಿ.”

ಆಗ ಸ್ಕಂದನ ಶರೀರದಿಂದ ಮನುಷ್ಯರ ಮಕ್ಕಳನ್ನು ತಿನ್ನುವ ಕಾಂಚನಪ್ರಭೆಯ ಮಹಾಬಲಶಾಲಿ ಪುರುಷನು ಹೊರಬಿದ್ದನು. ಅವನು ಹಸಿವೆಯಿಂದ ಮೂರ್ಛಿತನಾಗಿ ನೆಲದಮೇಲೆ ಬಿದ್ದನು. ಸ್ಕಂದನ ಆಜ್ಞೆಯಂತೆ ಅವನು ರೌದ್ರರೂಪದ ಗ್ರಹವಾದನು. ದ್ವಿಜಸತ್ತಮರು ಈ ಗ್ರಹವನ್ನು ಸ್ಕಂದಾಪಸ್ಮಾರವೆಂದು ಕರೆಯುತ್ತಾರೆ. ವಿನತೆಯನ್ನು ಮಹಾರೌದ್ರ ಶಕುನಿಗ್ರಹವೆಂದು ಹೇಳುತ್ತಾರೆ. ತಿಳಿದವರು ಪೂತನಿ ರಾಕ್ಷಸಿಯನ್ನು ಪೂತನಾಗ್ರಹವೆಂದು ಹೇಳುತ್ತಾರೆ. ದಾರುಣರೂಪೀ, ಘೋರರೂಪೀ, ನಿಶಾಚರೀ, ಪಿಶಾಚೀ, ದಾರಣಾಕಾರಿಣೀ ಶೀತಪೂತನಾ ಘೋರದರ್ಶನಳು ಮನುಷ್ಯರ ಗರ್ಭಗಳನ್ನು ಅಪಹರಿಸುತ್ತಾಳೆ. ರೇವತಿಯೆಂದೂ ಕರೆಯಲ್ಪಡುವ ಅದಿತಿಯ ಗ್ರಹವನ್ನು ರೈವತವೆಂದು ಕರೆಯುತ್ತಾರೆ. ಈ ಘೋರ ಮಹಾಗ್ರಹವೂ ಕೂಡ ಬಾಲ ಶಿಶುಗಳನ್ನು ಬಾಧಿಸುತ್ತದೆ. ದೈತ್ಯರ ಮಾತೆ ದಿತಿಯನ್ನು ಮುಖಮಂಡಿಕಾ ಎಂದು ಕರೆಯುತ್ತಾರೆ. ಈ ದುರಾಸದಳು ಶಿಶುಮಾಂಸದಿಂದ ಸಂತುಷ್ಟಳಾಗುತ್ತಾಳೆ. ಸ್ಕಂದನಿಂದ ಹುಟ್ಟಿದ ಕುಮಾರ ಕುಮಾರಿಯರು ಎಲ್ಲರೂ ಮಹಾಗ್ರಹಗಳಾಗಿ ಗರ್ಭವನ್ನು ತಿನ್ನುವವು ಎಂದು ಹೇಳುತ್ತಾರೆ. ಅವರೇ ಆ ಕುಮಾರಿಯರ ಪತಿಗಳೆಂದು ಹೇಳುತ್ತಾರೆ. ಆ ರೌದ್ರಕರ್ಮಿಗಳು ತಿಳಿಯದಂತೆ ಬಾಲಕರನ್ನು ಹಿಡಿಯುತ್ತಾರೆ. ಗೋವುಗಳ ಮಾತೆಯೆಂದು ಪ್ರಾಜ್ಞರಿಂದ ಕರೆಯಲ್ಪಡುವ ಸುರಭಿಯು ಶಕುನಿಯನ್ನೇರಿ ಅವಳೊಡನೆ ಭೂಮಿಯಲ್ಲಿ ಶಿಶುಗಳನ್ನು ಭಕ್ಷಿಸುತ್ತಾಳೆ. ನಾಯಿಗಳ ಮಾತೆ ಸರಮಾ ಎಂಬ ಹೆಸರಿನ ದೇವಿಯೂ ಕೂಡ ಸದಾ ಮನುಷ್ಯರ ಗರ್ಭಗಳನ್ನು ಕೊಲ್ಲುತ್ತಾಳೆ. ವೃಕ್ಷಗಳ ಮಾತಾ ಕರಂಜನಿಲಯಾ. ಆ ಕರಂಜೆಗೆ ಪುತ್ರಾರ್ಥಿಗಳಾದ ನರರು ನಮಸ್ಕರಿಸುತ್ತಾರೆ. ಮಾಂಸ ಮತ್ತು ಮದಿರಗಳ ಪ್ರಿಯರಾದ ಈ ಹದಿನೆಂಟು ಗ್ರಹಗಳು ಮತ್ತು ಇತರರು ಸೂತಿಕಾಗೃಹದಲ್ಲಿ ಸತತವಾಗಿ ಹತ್ತುರಾತ್ರಿಗಳು ನಿಂತಿರುತ್ತಾರೆ. ಕದ್ರುವು ಸೂಕ್ಷರೂಪವನ್ನು ತಳೆದು ಗರ್ಭಿಣಿಯನ್ನು ಪ್ರವೇಶಿಸಿ ಅಲ್ಲಿ ಅವಳು ಗರ್ಭವನ್ನು ನಾಶಪಡಿಸಿ ನಾಗವನ್ನು ಹುಟ್ಟಿಸುತ್ತಾಳೆ. ಗಂಧರ್ವರ ಮಾತೆಯು ಗರ್ಭವನ್ನು ಅಪಹರಿಸಿಕೊಂಡು ಹೋಗುತ್ತಾಳೆ. ಆಗ ಅದು ಭೂಮಿಯಲ್ಲಿ ಮನುಷ್ಯರ ಗರ್ಭಪಾತವಾಗಿ ಕಾಣುತ್ತದೆ. ಅಪ್ಸರರ ತಾಯಿಯು ಗರ್ಭವನ್ನು ತೆಗೆಯುತ್ತಾಳೆ. ತಿಳಿದವರು ಅದನ್ನು ಕುಳಿತ ಗರ್ಭವೆಂದು ಕರೆಯುತ್ತಾರೆ. ಕೆಂಪುಸಮುದ್ರನ ಮಗಳು ಸ್ಕಂದನ ಧಾತ್ರಿಯೆಂದು ಹೇಳುತ್ತಾರೆ. ಅವಳನ್ನು ಲೋಹಿತಾಯನಿಯೆಂದು ಕದಂಬದಲ್ಲಿ ಪೂಜಿಸುತ್ತಾರೆ. ಪುರುಷರಲ್ಲಿ ರುದ್ರನು ಹೇಗೋ ಹಾಗೆ ಆರ್ಯೆಯು ಸ್ತ್ರೀಯರಲ್ಲಿ ಕಾರ್ಯನಡೆಸುತ್ತಾಳೆ. ಆರ್ಯಳು ಎಲ್ಲಾ ಕುಮಾರರ ಮಾತೆ ಮತ್ತು ಅವರ ರಕ್ಷಣೆಗಾಗಿ ಪೂಜಿತಳಾಗಿದ್ದಾಳೆ. ನಾನು ಹೇಳಿದ ಈ ಮಹಾಗ್ರಹಗಳು ಕುಮಾರರನ್ನು ಹದಿನಾರು ವರ್ಷಗಳವರೆಗೆ ಕಾಡುತ್ತವೆ ಮತ್ತು ಅದರ ನಂತರ ಅವರ ಮಂಗಳಕ್ಕಾಗಿ ಕೆಲಸಮಾಡುತ್ತಾರೆ. ನಾನು ಹೇಳಿದ ಮಾತೃಗಣಗಳಲ್ಲಿ ಪುರುಷರೂ ಸೇರಿದ್ದಾರೆ. ಈ ಎಲ್ಲ ಗ್ರಹಗಳೂ ಸ್ಕಂದಗ್ರಹಗಳೆಂದು ಕರೆಯಲ್ಪಟ್ಟು ನಿತ್ಯವೂ ಶರೀರಗಳಲ್ಲಿರುತ್ತಾರೆ. ಅವರ ಪ್ರಶಮನಕಾರ್ಯವನ್ನು ಸ್ನಾನ, ಧೂಪ, ದೀಪ, ಬಲಿಕರ್ಮೋಪಹಾರಗಳಿಂದ ಮತ್ತು ವಿಶೇಷವಾಗಿ ಸ್ಕಂದನ ಪೂಜೆಯಿಂದ ಮಾಡಬಹುದು. ಈ ರೀತಿ ಅವರನ್ನು ಪೂಜಿಸುವುದರಿಂದ ಎಲ್ಲರೂ ನರರಿಗೆ ಶುಭ, ಆಯಸ್ಸು, ವೀರ್ಯ, ಉತ್ತಮ ಗೌರವ ಪದವಿಗಳನ್ನು ನೀಡುತ್ತಾರೆ.

ಯಾವ ನರನು ಜಾಗ್ರತನಾಗಿರುವಾಗ ಮತ್ತು ಮಲಗಿರುವಾಗ ಕೂಡ ದೇವನನ್ನು ಕಾಣುತ್ತಾನೋ ಅವನು ಉನ್ಮಾದದಲ್ಲಿರುತ್ತಾನೆ. ಆಗ ಅದು ದೇವಗ್ರಹವೆಂದು ತಿಳಿಯಬೇಕು. ಕುಳಿತಿರುವಾಗ ಮತ್ತು ಮಲಗಿರುವಾಗ ಯಾವ ನರನು ಪಿತೃಗಳನ್ನು ಕಾಣುತ್ತಾನೋ ಅವನ ಪಿತೃಗ್ರಹದ ಉನ್ಮಾದದಲ್ಲಿದ್ದಾನೆ ಎಂದು ಬೇಗನೆ ತಿಳಿಯಬೇಕು. ಯಾರು ಸಿದ್ಧರನ್ನು ಅವಮಾನಿಸಿ ಅವರ ಸಿಟ್ಟಿನಿಂದ ಶಾಪವನ್ನು ಪಡೆದು ಉನ್ಮಾದಹೊಂದುತ್ತಾರೋ ಅವರನ್ನು ಸಿದ್ಧಗ್ರಹವು ಪೀಡಿಸುತ್ತಿದ್ದೆ ಎಂದು ತಿಳಿಯಬೇಕು. ಯಾರು ವಿವಿಧರೀತಿಯ ವಾಸನೆಗಳನ್ನು ಮತ್ತು ರುಚಿಗಳನ್ನು ಪದೇ ಪದೇ ಅನುಭವಿಸಿ ಉನ್ಮಾದದಲ್ಲಿತ್ತಾರೋ ಅದು ರಾಕ್ಷಸಗ್ರಹವೆಂದು ತಿಳಿಯಬೇಕು. ದಿವ್ಯ ಗಂಧರ್ವರೂ ಕೂಡ ಭೂಮಿಯಲ್ಲಿರುವ ನರರನ್ನು ಮುಟ್ಟಿ ಉನ್ಮಾದಗೊಳಿದರೆ ಅದು ಗಾಂಧರ್ವಗ್ರಹವೇ ಸರಿ. ಕಾಲಪರ್ಯಯದಲ್ಲಿ ಯಕ್ಷರು ಯಾವ ಪುರುಷರನ್ನು ಆವೇಶಗೊಂಡು ಉನ್ಮಾದಿಸುತ್ತಾರೋ ಅದನ್ನು ಯಕ್ಷಗ್ರಹವೆಂದು ತಿಳಿದುಕೊಳ್ಳಬೇಕು. ಪಿಶಾಚಿಗಳು ನಿತ್ಯವೂ ಯಾರಾದರೂ ಪುರುಷರನ್ನು ಏರಿ ಉನ್ಮಾದಗೊಳಿಸುತ್ತಾರೆ. ಆಗ ಅದನ್ನು ಪೈಶಾಚ ಗ್ರಹವೆಂದು ತಿಳಿಯಬೇಕು. ದೋಷಗಳ ಪ್ರಕೋಪದಿಂದ ಚಿತ್ತವನ್ನು ಕಳೆದುಕೊಂಡು ಉನ್ಮಾದದಲ್ಲಿರುವವನಿಗೆ ಕ್ಷಿಪ್ರವಾಗಿ ಶಾಸ್ತ್ರಗಳಲ್ಲಿರುವಂತೆ ಸಾಧನಗಳನ್ನು ಮಾಡಬೇಕು. ಘೋರರೂಪಿಗಳನ್ನು ನೋಡಿ ಭಯದಿಂದ ಹುಚ್ಚಾಗಿ ಓಡಿಕೊಂಡು ಉನ್ಮಾದದಲ್ಲಿರುವವರನ್ನು ಬೇಗನೇ ಸತ್ವವನ್ನು ನೀಡುವ ಸಾಧನವನ್ನು ಮಾಡಬೇಕು. ಕೆಲವು ಆಟವಾಡುವ ಆಸೆಯನ್ನಿಟ್ಟುಕೊಂಡಿರುತ್ತವೆ, ಇನ್ನು ಕೆಲವು ಭೋಗಿಸಲು ಬಯಸುತ್ತವೆ ಮತ್ತು ಅನ್ಯರು ಅಭಿಕಾಮಿಸುತ್ತವೆ. ಈ ರೀತಿ ಮೂರು ವಿಧದ ಗ್ರಹಗಳಿವೆ. ಮನುಷ್ಯನಿಗೆ ಎಪ್ಪತ್ತುವರ್ಷಗಳಾಗುವವರೆಗೆ ಈ ಗ್ರಹಗಳು ಇರುತ್ತವೆ. ಅದರ ನಂತರ ದೇಹಿಗಳಿಗೆ ಜ್ವರವೇ ಗ್ರಹಗಳ ಸಮಾನವಾಗಿರುತ್ತದೆ. ಇಂದ್ರಿಯಗಳನ್ನು ಹರಡದೇ ಇಟ್ಟುಕೊಳ್ಳುವುದರಿಂದ, ತಾಳ್ಮೆಯಿಂದಿರುವುದರಿಂದ, ಶುಚಿಯಾಗಿರುವುದರಿಂದ, ನಿತ್ಯವೂ ಆಸ್ತಿಕರನ್ನು, ಶದ್ಧೆ, ದಾನಗಳನ್ನು ಮಾಡುವವರನ್ನು ಸದಾ ಗ್ರಹಗಳು ತೊರೆಯುತ್ತವೆ. ಮನುಷ್ಯರ ಬಳಿಬರುವ ಈ ಗ್ರಹಗಳ ಕುರಿತು ನಾನು ಹೇಳಿದ್ದೇನೆ. ದೇವ ಮಹೇಶ್ವರನ ಭಕ್ತ ನರರನ್ನು ಗ್ರಹಗಳು ಮುಟ್ಟುವುದಿಲ್ಲ.

ಸ್ಕಂದನು ಈ ರೀತಿ ಮಾತೃಗಳಿಗೆ ಪ್ರಿಯವಾದುದನ್ನು ಮಾಡಲು ಸ್ವಾಹಾಳು ಅವನಿಗೆ ಹೇಳಿದಳು: “ನೀನು ನನ್ನ ಔರಸ ಪುತ್ರ. ನೀನು ನನ್ನ ಪ್ರೀತಿಯ ಪರಮ ದುರ್ಲಭವಾದುದನ್ನು ಕೊಡಬೇಕೆಂದು ಬಯಸುತ್ತೇನೆ.” ಅದಕ್ಕೆ ಸ್ಕಂದನು ಅವಳಿಗೆ ಕೇಳಿದನು: “ನಿನಗೆ ಪ್ರೀತಿಯಾದ ಏನನ್ನು ಬಯಸುತ್ತೀಯೆ?”

ಸ್ವಾಹಾಳು ಹೇಳಿದಳು: “ಮಹಾಭುಜ! ನಾನು ದಕ್ಷನ ಪ್ರಿಯ ಕನ್ಯೆ. ಹೆಸರು ಸ್ವಾಹಾ. ಬಾಲ್ಯದಿಂದಲೂ ನಾನು ಸದಾ ಹುತಾಶನನನ್ನು ಕಾಮಿಸಿದ್ದೆ. ಆದರೆ ಪಾವಕನು ಈ ಕಾಮಿನಿಯನ್ನು ಅರ್ಥಮಾಡಿಕೊಂಡಿಲ್ಲ. ನಾನು ಅಗ್ನಿಯೊಂದಿಗೆ ಶಾಶ್ವತವಾಗಿ ವಾಸಿಸಲು ಇಚ್ಛಿಸುತ್ತೇನೆ.”

ಸ್ಕಂದನು ಹೇಳಿದನು: “ದೇವಿ! ಇಂದಿನಿಂದ ಒಳ್ಳೆಯ ನಡತೆಯ ಸತ್ಯದ ಮಾರ್ಗದಲ್ಲಿ ನೆಲೆಸಿರುವ ದ್ವಿಜರು ಮಂತ್ರಪುರಸ್ಕೃತವಾದ ಏನು ಹವ್ಯಕವ್ಯಗಳನ್ನು ಮಾಡಿ ಅಗ್ನಿಯಲ್ಲಿ ಹವಿಸ್ಸನ್ನು ಹೋಮಿಸುತ್ತಾರೋ ಆಗ ಸದಾ ಸ್ವಾಹಾ ಎಂದು ಹೇಳಿಯೇ ಹಾಕಲಿ. ಹೀಗೆ ನೀನು ಸದಾ ಅಗ್ನಿಯ ಜೊತೆಯಲ್ಲಿ ವಾಸಿಸಿರುವೆ.”

ಹೀಗೆ ಸ್ಕಂದನಿಂದ ಪೂಜಿತಳಾಗಿ ತೃಪ್ತಳಾದ ಸ್ವಾಹಾಳು ಪತಿ ಪಾವಕನನ್ನು ಸೇರಿ ಸ್ಕಂದನನ್ನು ಗೌರವಿಸಿದಳು. ಆಗ ಪ್ರಜಾಪತಿ ಬ್ರಹ್ಮನು ಮಹಾಸೇನನಿಗೆ ಹೇಳಿದನು: “ನಿನ್ನ ತಂದೆ ತ್ರಿಪುರಾರ್ದನ ಮಹಾದೇವನಲ್ಲಿಗೆ ಹೋಗು! ರುದ್ರನು ಅಗ್ನಿಯನ್ನು ಸಮಾವೇಶಗೊಂಡು ಮತ್ತು ಉಮೆಯು ಸ್ವಾಹಾಗಳನ್ನು ಆವೇಶಗೊಂಡು ಸರ್ವಲೋಕಗಳ ಹಿತಕ್ಕಾಗಿ ಅಪರಾಜಿತನಾದ ನಿನ್ನನ್ನು ಹುಟ್ಟಿಸಿದ್ದಾರೆ. ಮಹಾತ್ಮ ರುದ್ರನ ಶುಕ್ರವು ಉಮೆಯ ಯೋನಿಯನ್ನು ಸೇರಿದಾಗ ಅದು ಇಲ್ಲಿ ಬಿದ್ದು ಮಿಂಜಿಕ ಮತ್ತು ಅಮಿಂಜಿಕಗಳೆಂಬ ಎರಡು ಗಿರಿಗಳಾದವು. ಆ ಶುಕ್ರದ ಒಂದು ಭಾಗವು ಕೆಂಪುಸಮುದ್ರದಲ್ಲಿ ಬಿದ್ದಿತು, ಇನ್ನೊಂದು ಭಾಗವು ಸೂರ್ಯನ ರಶ್ಮಿಗಳಲ್ಲಿ ಮತ್ತು ಇನ್ನೂ ಒಂದು ಭಾಗವು ಭೂಮಿಯ ಮೇಲೆ ಹೀಗೆ ಅದು ಐದು ಭಾಗಗಳಾಡಿ ಹರಡಿ ಚೆಲ್ಲಲ್ಪಟ್ಟಿತು. ಮಾಂಸಗಳನ್ನು ತಿನ್ನುವ ವಿವಿಧಾಕಾರಗಳ ಘೋರ ಪಾರಿಷಾದಾ ಎನ್ನುವ ನಿನ್ನ ಗಣವು ಇವುಗಳಿಂದಲೇ ಹುಟ್ಟಿದವೆಂದು ವಿದ್ವಾಂಸರು ತಿಳಿದಿರುತ್ತಾರೆ.”

ಹಾಗೆಯೇ ಆಗಲೆಂದು ಮಹಾಸೇನನು ಮಹೇಶ್ವರ, ಅಮೇಯಾತ್ಮ, ತಂದೆ, ಪಿತೃವತ್ಸಲನನ್ನು ಪೂಜಿಸಿದನು. ಧನಾರ್ಥಿಗಳು ಈ ಐದು ಗಣಗಳನ್ನು ಅರ್ಕಪುಷ್ಪಗಳಿಂದ ಪೂಜಿಸಬೇಕು. ವ್ಯಾಧಿಪ್ರಶಮನಕ್ಕಾಗಿಯೂ ಇವರ ಪೂಜೆಯನ್ನು ಆಚರಿಸಬೇಕು. ಚಿಕ್ಕ ಬಾಲಕರ ಹಿತವನ್ನು ಬಯಸುವವರು ರುದ್ರಸಂಭವರಾದ ಮಿಂಜಿಕ-ಅಮಿಂಜಿಕರನ್ನು ಸದಾ ನಮಸ್ಕರಿಸಬೇಕು. ಮಕ್ಕಳನ್ನು ಬಯಸುವವರು ಮನುಷ್ಯರ ಮಾಂಸವನ್ನು ತಿನ್ನುವ ವೃಕ್ಷಗಳಲ್ಲಿ ಹುಟ್ಟುವ ವೃದ್ಧಿಕಾ ಎಂಬ ಹೆಸರಿನ ಹೆಣ್ಣು ದೇವತೆಯನ್ನು ಸಮಸ್ಕರಿಸಬೇಕು. ಹೀಗೆ ಪಿಶಾಚಿಗಳು ಅಸಂಖ್ಯ ಗುಂಪುಗಳಲ್ಲಿ ವಿಂಗಡಣೆಗೊಂದಿದ್ದಾರೆಂದು ಕೇಳುತ್ತೇವೆ.

ಐರಾವತಕ್ಕೆ ವೈಜಂತ ಎನ್ನುವ ಎರಡು ಘಂಟೆಗಳಿವೆಯೆಂದು ಕೇಳಿದ್ದೇವೆ. ಸ್ವಯಂ ಧೀಮಂತ ಶಕ್ರನೇ ಅವುಗಳನ್ನು ತಂದು  ಗುಹನಿಗೆ ಕೊಟ್ಟನು. ಅದರಲ್ಲಿ ಒಂದು ವಿಶಾಖನಿಗೆ ಮತ್ತು ಇನ್ನೊಂದು ಸ್ಕಂದನಿಗಾಯಿತು. ಕಾರ್ತಿಕೇಯ ಮತ್ತು ವಿಶಾಖನ ಪತಾಕೆಗಳು ಕೆಂಪು ಬಣ್ಣದವು. ದೇವತೆಗಳು ಕೊಟ್ಟ ಆಟದ ಸಾಮಾನುಗಳಿಂದ ಮಹಾಬಲ ಮಹಾಸೇನ ದೇವನು ಸಂತೋಷಪಟ್ಟನು. ಪಿಶಾಚಿಗಳ ಗಣ ಮತ್ತು ದೇವಗಣಗಳಿಂದ ಸುತ್ತುವರೆಯಲ್ಪಟ್ಟ ಮತ್ತು ಶ್ರೀಯಿಂದ ಆವೃತನಾದ ಅವನು ಆ ಕಾಂಚನಗಿರಿಯಲ್ಲಿ ಬೆಳಗುತ್ತಾ ಶೋಭಾಯಮಾನನಾಗಿ ಕಂಡನು. ಕಂದರಗಳಿಂದ ಕೂಡಿದ, ಶುಭಕಾನನಗಳ ಆ ಮಂದರ ಶೈಲವು ಅಂಶುಮತ ಆದಿತ್ಯನಿಂದ ಹೇಗೋ ಹಾಗೆ ವೀರನಿಂದ ಶೋಭಿಸಿತು. ಹೂಬಿಟ್ಟ ಸಂತಾನಕ ವನಗಳಿಂದ, ಕರವೀರ ವನಗಳಿಂದ, ಪಾರಿಜಾತ ವನಗಳಿಂದ, ಜಪ ಮತ್ತು ಅಶೋಕವನಗಳಿಂದ, ಕದಂಬ ಮರಗಿಡಗಳಿಂದ, ದಿವ್ಯ ಮೃಗಗಣಗಳಿಂದ, ದಿವ್ಯ ಪಕ್ಷಿಗಣಗಳಿಂದ ಶ್ವೇತಪರ್ವತವು ಶೋಭಿಸುತ್ತಿತ್ತು. ಅಲ್ಲಿ ಎಲ್ಲ ದೇವಗಣಗಳೂ ಎಲ್ಲ ಮಹರ್ಷಿಗಳೂ ಇದ್ದರು. ಕ್ಷೋಭೆಗೆ ಸಿಲುಕಿದ ಸಮುದ್ರದ ಭೋರ್ಗರೆಯಂತೆ ಮೋಡಗಳ ಶಬ್ದವು ಕೇಳಿಬರುತ್ತಿತ್ತು. ಅಲ್ಲಿ ದಿವ್ಯ ಗಂಧರ್ವರು ಅಪ್ಸರೆಯರು ನೃತ್ಯಮಾಡುತ್ತಿದ್ದರು. ಅಲ್ಲಿದ್ದ ಭೂತಗಳ ಸಂತೋಷದಿಂದ ಮಹಾ ನಿನಾದವು ಕೇಳಿಬರುತ್ತಿತ್ತು. ಹೀಗೆ ಇಂದ್ರನೊಂದಿಗೆ ಸರ್ವ ಜಗತ್ತೂ ಶ್ವೇತಪರ್ವದ ಮೇಲಿತ್ತು. ಸ್ಕಂದನನ್ನು ನೋಡುತ್ತಾ ಸಂತೋಷಪಟ್ಟರು ಮತ್ತು ಅವನನ್ನು ನೋಡಿ ಆಯಾಸಪಡಲಿಲ್ಲ.

ಸ್ಕಂದನಿಂದ ಮಹಿಷಾಸುರನ ವಧೆ

ಭಗವಾನ್ ಪಾವಕಿಯು ಸೇನಾಧಿಪತಿಯಾಗಿ ಅಭಿಷಿಕ್ತನಾಗಲು ಸಂತೋಷಗೊಂಡ ಶ್ರೀಮಾನ್ ಪ್ರಭು ಹರನು ಪಾರ್ವತಿಯ ಸಹಿತ ಆದಿತ್ಯವರ್ಣದ ರಥದಲ್ಲಿ ಭದ್ರವಟದ ಕಡೆ ಪ್ರಯಾಣಿಸಿದನು. ಅವನ ಆ ಉತ್ತಮ ರಥಕ್ಕೆ ಸಾವಿರ ಸಿಂಹಗಳನ್ನು ಕಟ್ಟಲಾಗಿತ್ತು. ಕಾಲದಿಂದ ಪ್ರಚೋದಿತವಾಗಿ ಶುಭ್ರದಿವದಲ್ಲಿ ಉತ್ಪಪಾತಗಳು ಕಾಣಿಸಿದವು. ನಭದಲ್ಲಿ ಹೋಗುತ್ತಿದ್ದ, ಸುಂದರ ಕೇಸರಗಳನ್ನು ಹೊಂದಿದ್ದ ಸಿಂಹಗಳು ಗರ್ಜಿಸುತ್ತಿರಲು ಅವು ಆಕಾಶವನ್ನು ಕುಡಿಯುತ್ತಿರುವವೋ ಎನ್ನುವಂತೆ ಚರಾಚರಗಳನ್ನು ಹೆದರಿಸುತ್ತಾ ಹೋಗುತ್ತಿದ್ದವು. ಆ ರಥದಲ್ಲಿ ಉಮೆಯ ಸಹಿತ ನಿಂತಿದ್ದ ಪಶುಪತಿಯು ಕಾಮನ ಬಿಲ್ಲಿನ ಮೋಡಗಳ ಮಧ್ಯೆ ವಿದ್ಯುತ್ತಿನ ಸಹಿತ ಕುಳಿತಿದ್ದ ಸೂರ್ಯನಂತೆ ತೋರಿದನು. ಅವನ ಮುಂದೆ ಭಗವಾನ್ ನರವಾಹನ ಧನೇಶನು ಗುಹ್ಯಕರೊಂದಿಗೆ ಸುಂದರ ಪುಷ್ಪಕದಲ್ಲಿ ಕುಳಿತು ಹೊರಟನು. ಐರಾವತವನ್ನೇರಿ ಶಕ್ರನೂ ಕೂಡ ಸುರರೊಂದಿಗೆ ವರದ ವೃಷಭಧ್ವಜನ ಹಿಂದೆ ಅನುಸರಿಸಿ ಹೊರಟನು. ಮಹಾಯಕ್ಷ ಅಮೋಘನು ಮಾಲೆಗಳಿಂದ ಸಮಲಂಕೃತರಾದ ಜಂಭಕ, ಯಕ್ಷ ಮತ್ತು ರಾಕ್ಷಸರೊಡಗೂಡಿ ಬಲಬದಿಯಲ್ಲಿ ನಿಂತನು. ಅವನ ಬಲಗಡೆಯಲ್ಲಿ ಚಿತ್ರಯೋಧರಾದ ದೇವತೆಗಳು, ಮರುತರು, ವಸುಗಳು ಮತ್ತು ರುದ್ರರು ಒಂದುಗೂಡಿ ಸಾಗುತ್ತಿದ್ದರು. ಮೃತ್ಯುವಿನ ಸಹಿತ, ಘೋರರೂಪೀ, ಘೋರಮುಖದ ನೂರಾರು ಘೋರವ್ಯಾಧಿಗಳಿಂದ ಎಲ್ಲ ಕಡೆಯಿಂದಲೂ ಸುತ್ತುವರೆಯಲ್ಪಟ್ಟು ಯಮನು ಹೊರಟನು. ಯಮನ ಹಿಂದೆಯೇ ಘೋರವಾಗಿದ್ದ ಮೂರು ಮೊನಚಾದ ತುದಿಗಳನ್ನುಳ್ಳ ವಿಜಯ ಎಂಬ ಹೆಸರಿನ ರುದ್ರನ ಶೂಲವನ್ನು ಅಲಂಕರಿಸಿ ಕೊಂಡೊಯ್ದರು. ಆಗ ಉಗ್ರಪಾಶವನ್ನು ಹಿಡಿದು ಸಲಿಲೇಶ್ವರ ಭಗವಾನ್ ವರುಣನು ವಿವಿಧ ನೀರಿನ ಪ್ರಾಣಿಗಳಿಂದ ಸುತ್ತುವರೆಯಲ್ಪಟ್ಟು ಮೆಲ್ಲನೆ ಮುಂದುವರೆದನು. ವಿಜಯದ ಹಿಂದೆ ರುದ್ರನ ಪಟ್ಟಿಷವು, ಗದೆ, ಮುಸಲ, ಶಕ್ತಿ ಮೊದಲಾದ ಉತ್ತಮ ಆಯುಧಗಳಿಂದ ಸುತ್ತವರೆಯಲ್ಪಟ್ಟು ಹಿಂಬಾಲಿತು. ಆ ಪಟ್ಟಿಶದ ಮೇಲೆ ರುದ್ರನ ಮಹಾಪ್ರಭೆಯ ಬಿಳಿ ಕೊಡೆಯನ್ನು ಹಿಡಿಯಲಾಗಿತ್ತು. ಮಹರ್ಷಿಗಣಗಳಿಂದ ಸುತ್ತುವರೆಯಲ್ಪಟ್ಟು ಕಮಂಡಲುವೂ ಅದನ್ನು ಹಿಂಬಾಲಿಸಿತು. ಅದರ ಬಲಗಡೆಯಲ್ಲಿ ಶ್ರೀಯಿಂದ ಆವೃತಗೊಂಡು ಹೊಳೆಯುತ್ತಿರುವ ದಂಡವು, ದೇವತೆಗಳಿಂದ ಪೂಜಿಸಲ್ಪಟ್ಟು ಭೃಗು ಅಂಗಿರಸರೊಡನೆ ಹೋಗುತ್ತಿತ್ತು. ಇವೆಲ್ಲವುಗಳ ಹಿಂದೆ ರುದ್ರನು ಬಿಳಿಯ ರಥದಲ್ಲಿ ನಿಂತು ತನ್ನ ತೇಜಸ್ಸಿನಿಂದ ಎಲ್ಲ ತ್ರಿದಿವೌಕಸರನ್ನೂ ಹರ್ಷಗೊಳಿಸತ್ತಾ ಮುಂದುವರೆದನು. ರುದ್ರನ ಹಿಂದೆ ಋಷಿಗಳೂ, ದೇವತೆಗಳೂ, ಗಂಧರ್ವರೂ, ಭುಜಗರೂ, ನದಿಗಳೂ, ಸರೋವರಗಳೂ, ವೃಕ್ಷಗಳೂ, ಅಪ್ಸರ ಗಣಗಳೂ, ನಕ್ಷತ್ರಗಳೂ, ಗ್ರಹಗಳೂ, ದೇವತೆಗಳ ಮಕ್ಕಳೂ, ಮತ್ತು ವಿವಿಧಾಕಾರದ ಸ್ತ್ರೀಯರೂ ಹೊರಟರು. ಈ ಸುಂದರರೂಪಿನ ವರಾಂಗನೆಯರು ಹೂಗಳನ್ನು ದಾರಿಯಲ್ಲಿ ಬೀರುತ್ತಾ ಮತ್ತು ಮೋಡಗಳು ಪಿನಾಕಿನಿಯನ್ನು ನಮಸ್ಕರಿಸಿ ಹೂವಿನ ಮಳೆಯನ್ನು ಸುರಿಸುತ್ತಾ ಹೊರಟವು. ಸೋಮನು ಅವನ ನೆತ್ತಿಯಮೇಲೆ ಬಿಳಿಗೊಡೆಯನ್ನು ಹಿಡಿದನು. ವಾಯು ಮತ್ತು ಅಗ್ನಿಯರು ಅವನಿಗೆ ಚಾಮರಗಳನ್ನು ಬೀಸಿದರು. ಅವನ ಹಿಂದೆ ಶ್ರೀಯಿಂದ ಆವೃತನಾಗಿ ಶಕ್ರನು ಎಲ್ಲ ರಾಜರ್ಷಿಗಳೊಂದಿಗೆ ವೃಷಕೇತನನ್ನು ಸ್ತುತಿಸುತ್ತಾ ಹೊರಟನು. ಪಾರ್ವತಿಯನ್ನು ಅನುಸರಿಸಿ ಗೌರಿ, ವಿದ್ಯಾ, ಗಾಂಧಾರೀ, ಕೇಶಿನೀ, ಮಿತ್ರಸಾಹ್ವ ಎಲ್ಲರೂ, ಕವಿಗಳು ಯಾರೆಲ್ಲ ವಿದ್ಯಾಗಣಗಳನ್ನು ಮಾಡಿದ್ದರೋ ಅವರೆಲ್ಲರೂ ಸಾವಿತ್ರಿಯೊಡನೆ ಹೋದರು. ಇಂದ್ರನ ವಚನದಂತೆ ಮಾಡುವ ರಾಕ್ಷಸರು ಪತಾಕೆಗಳನ್ನು ಹಿಡಿದು ದೇವತೆಗಳ ಸೇನೆಯ ಮುಂದೆ ಹೊರಟರು. ಶ್ಮಶಾನದಲ್ಲಿ ನಿತ್ಯವೂ ತಿರುಗಾಡುವ ರುದ್ರನ ಸಖನಾದ ಪಿಂಗಲ ಎಂಬ ಹೆಸರಿನ ಲೋಕಗಳ ಆನಂದ ದಾಯಕ ಯಕ್ಷೇಂದ್ರನು ಕೂಡ ದೇವತೆಗಳ ಸಹಿತ ಅಲ್ಲಿ ಯಥಾಸುಖನಾಗಿ ಹೊರಟನು. ಒಮ್ಮೆ ಮುಂದೆ ಹೋಗುತ್ತಿದ್ದರೆ ಇನ್ನೊಮ್ಮೆ ಹಿಂದೆ ಬೀಳುತ್ತಿದ್ದ ಅವನ ಗತಿಯು ನಿರ್ಧಿಷ್ಠವಾಗಿರಲಿಲ್ಲ. ಮನುಷ್ಯರು ಸತ್ಕರ್ಮಗಳಿಂದ ಪೂಜಿಸುವ ದೈವತನು ರುದ್ರ. ಅವನನ್ನು ಶಿವನೆಂದೂ, ಈಶನೆಂದೂ, ರುದ್ರನೆಂದೂ, ಪಿನಾಕಿಯೆಂದು ಕರೆಯುತ್ತಾರೆ. ವಿವಿಧಾಕಾರದ ಭಾವಗಳಿಂದ ಮಹೇಶ್ವರನನ್ನು ಪೂಜಿಸುತ್ತಾರೆ. ಆಗ ದೇವಸೇನಾಪತಿ, ಬ್ರಹ್ಮಣ್ಯ, ಕೃತ್ತಿಕಾಸುತನೂ ಕೂಡ ದೇವಸೇನೆಯಿಂದ ಸುತ್ತುವರೆಯಲ್ಪಟ್ಟು ದೇವೇಶನನ್ನು ಅನುಸರಿಸಿ ಹೋದನು. ಆಗ ಮಹಾದೇವನು ಮಹಾಸೇನನಿಗೆ ಈ ಮಹತ್ತರ ಮಾತನ್ನಾಡಿದನು: “ಜಾಗರೂಕತೆಯಿಂದ ನಿತ್ಯವೂ ಏಳನೆಯ ಮಾರುತಗಣವನ್ನು ರಕ್ಷಿಸು.”

ಸ್ಕಂದನು ಹೇಳಿದನು: “ಪ್ರಭೋ! ಏಳನೆಯ ಮಾರುತಗಣವನ್ನು ನಾನು ಪಾಲಿಸುತ್ತಿದ್ದೇನೆ. ಇನ್ನೂ ಏನನ್ನಾದರೂ ಮಾಡಬೇಕಾಗಿದ್ದರೆ ಅದನ್ನೂ ಬೇಗನೆ ಹೇಳು.”

ರುದ್ರನು ಹೇಳಿದನು: “ಪುತ್ರ! ಸದಾ ನನ್ನನ್ನು ಕಾರ್ಯಗಳಲ್ಲಿ ತೊಡಗಿರುವುದನ್ನು ನೋಡುವೆ. ನನ್ನ ಮೇಲಿನ ಭಕ್ತಿ ಮತ್ತು ದರ್ಶನಗಳಿಂದ ಪರಮ ಶ್ರೇಯಸ್ಸನ್ನು ಹೊಂದುತ್ತೀಯೆ.”

ಹೀಗೆ ಹೇಳಿ ಮಹೇಶ್ವರನು ಅವನನ್ನು ಬಿಗಿದಪ್ಪಿ ಬಿಟ್ಟನು. ಸ್ಕಂದನು ಹೀಗೆ ಬಿಡಲ್ಪಟ್ಟ ನಂತರ ಒಮ್ಮಿಂದೊಮ್ಮೆಲೇ ಅಲ್ಲಿ ಸರ್ವ ದೇವತೆಗಳನ್ನೂ ತಲ್ಲಣಿಸುವ ಮಹಾ ಉತ್ಪಾತಗಳು ನಡೆದವು. ನಕ್ಷತ್ರಗಳೊಂದಿಗಿನ ಆಕಾಶವು ಭುಗಿಲೆದ್ದು ಉರಿಯತೊಡಗಿತು; ಇಡೀ ಭುವನವೇ ತುಂಬಾ ಗೊಂದಲಕ್ಕೊಳಗಾಯಿತು. ಭೂಮಿಯು ಗುಡುಗಿ ನಡುಗಿತು ಮತ್ತು ಪ್ರಭೋ! ಜಗತ್ತು ಕತ್ತಲೆಯಿಂದ ತುಂಬಿತು. ಆಗ ಆ ದಾರುಣವನ್ನು ನೋಡಿ ಶಂಕರ, ಮಹಾಭಾಗೆ ಉಮೆ ಮತ್ತು ಮಹರ್ಷಿಗಳೊಂದಿಗೆ ದೇವತೆಗಳು ಕೂಡ ಗೊಂದಲಕ್ಕೀಡಾದರು. ಹೀಗೆ ಅವರು ಪ್ರಮೂಢರಾಗಲು ಅಲ್ಲಿ ಮೋಡಗಳ ಪರ್ವತದಂತೆ ತೋರುವ, ಘೋರರಾದ, ನಾನಾ ಪ್ರಹರಣಗಳನ್ನು ಮಾಡುತ್ತಿರುವ ಮಹಾ ಸೇನೆಯು ಕಾಣಿಸಿಕೊಂಡಿತು. ಆ ಘೋರ ಅಸಂಖ್ಯ ಸೇನೆಯು ವಿವಿಧ ಭಾಷೆಗಳಲ್ಲಿ ಗರ್ಜಿಸುತ್ತಾ ದೇವತೆಗಳು ಮತ್ತು ಭಗವಾನ್ ಶಂಕರನ ರಣದೆಡೆಗೆ ಓಡಿ ಬಂದಿತು. ಅವರು ದೇವಸೇನೆಯ ಮೇಲೆ ಎಲ್ಲ ದಿಕ್ಕುಗಳಿಂದಲೂ ಅನೇಕ ಬಾಣಜಾಲಗಳನ್ನು, ಪರ್ವತಗಳನ್ನು, ಶತಘ್ನಗಳನ್ನೂ, ಪ್ರಾಸಗಳನ್ನೂ, ಪರಿಘಗಳನ್ನೂ ಗದೆಗಳನ್ನೂ ಎಸೆದರು. ಆ ಘೋರ ಮಹಾಯುಧಗಳು ಬೀಳಲು ದೇವಸೇನೆಯು ಕ್ಷಣದಲ್ಲಿ ತಲ್ಲಣಿಸಿ ಎಲ್ಲರೂ ವಿಮುಖರಾಗುತ್ತಿರುವುದು ಕಂಡುಬಂದಿತು. ದಾನವರು ದೇವತೆಗಳ ಸೇನೆಯ ಯೋಧರನ್ನು, ಆನೆಗಳನ್ನು, ಅಶ್ವಗಳನ್ನು ಮತ್ತು ಮಹಾರಥಗಳನ್ನು ಆಯುಧಗಳಿಂದ ತುಂಡರಿಸಿ ಪೀಡೆಗೊಳಗಾಗಲು ಅವರು ವಿಮುಖರಾದರು. ಕಾಡ್ಗಿಚ್ಚಿಗೆ ಸಿಲುಕಿ ಸುಟ್ಟು ಉರುಳುವ ಮರಗಳಂತೆ ದಿವೌಕಸರು ಶಿರ ದೇಹಗಳು ವಿಭಿನ್ನವಾಗಿ, ಮಹಾರಣದಲ್ಲಿ ನಾಥರಿಲ್ಲದಂತೆ ವಧಿಸಲ್ಪಟ್ಟು ಬಿದ್ದರು. ಆಗ ತಲ್ಲಣಿಸಿದ ಸೇನೆಯನ್ನು ನೋಡಿ ದೇವ ಪುರಂದರ ಬಲವತನು ದಾನವರಿಂದ ಆರ್ದಿತರಾದವರಿಗೆ ಆಶ್ವಾಸನೆಯನ್ನು ನೀಡುತ್ತಾ ಈ ಮಾತನ್ನಾಡಿದನು: “ಶೂರರೇ! ಭಯವನ್ನು ತೊರೆಯಿರಿ! ನಿಮಗೆ ಮಂಗಳವಾಗಲಿ! ನೀವೆಲ್ಲರೂ ಶಸ್ತ್ರಗಳನ್ನು ಹಿಡಿದು ವಿಕ್ರಮದಿಂದ ಹೋರಾಡಬೇಕು. ಇದರಿಂದ ಎಂದೂ ದುಃಖಿಗಳಾಗುವುದಿಲ್ಲ. ಈ ಕೆಟ್ಟ ನಡತೆಯ, ಘೋರದರ್ಶನ ಮಹಾಸುರ ದಾನವರನ್ನು ನನ್ನೊಡಗೂಡಿ ಸೋಲಿಸಿ. ನಿಮಗೆ ಮಂಗಳವಾಗಲಿ!”

ಶಕ್ರನ ಮಾತುಗಳನ್ನು ಕೇಳಿ ದಿವೌಕಸರು ಆಶ್ವಾಸನೆ ಪಡೆದು ಶಕ್ರನ ನೇತೃತ್ವದಲ್ಲಿ ದಾನವರ ವಿರುದ್ಧ ಹೋರಾಡಿದರು. ಆಗ ತ್ರಿದಶರೆಲ್ಲರೂ ಮಹಾಬಲ ಮರುತರೂ ಮಹಾವೇಗ ಸಾಧ್ಯರೂ ವಸುಗಳೊಂದಿಗೆ ಪ್ರತಿಯುದ್ಧವನ್ನು ಮಾಡಿದರು. ಕ್ರುದ್ಧರಾಗಿ ಅವರು ಪ್ರಯೋಗಿಸಿದ ಶಸ್ತ್ರಗಳು ಮತ್ತು ಬಿಲ್ಲುಗಳಿಂದ ಬಿಡಲ್ಪಟ್ಟ ಬಾಣಗಳು ದೈತ್ಯರ ದೇಹಗಳನ್ನು ಹೊಕ್ಕು ಅವರ ರಕ್ತವನ್ನು ಕುಡಿದವು. ಅವರ ದೇಹಗಳನ್ನು ಭೇದಿಸಿ ಹೊರಬೀಳುವ ಹರಿತ ಶರಗಳು ಪರ್ವತದಿಂದ ಬೀಳುತ್ತಿರುವ ಸರ್ಪಗಳಂತೆ ತೋರಿದವು. ಬಾಣಗಳಿಂದ ತುಂಡರಿಸಿ ದೈತ್ಯರ ಶರೀರಗಳು ಚದುರಿದ ಮೋಡಗಳ ತುಂಡುಗಳಂತೆ ಎಲ್ಲೆಡೆಯಲ್ಲಿಯೂ ಭೂಮಿಯಮೇಲೆ ಬಿದ್ದವು. ಆಗ ಯುದ್ಧದಲ್ಲಿ ಆ ದಾನವ ಸೇನೆಯನ್ನು ಎಲ್ಲ ದೇವಗಣಗಳೂ ವಿವಿಧ ಬಾಣಗಳಿಂದ ಪೀಡಿಸಿ ಅವರನ್ನೂ ಪರಾಙ್ಮುಖರಾಗುವಂತೆ ಮಾಡಿದರು. ಆಗ ಎಲ್ಲ ದೇವತೆಗಳೂ ಹರ್ಷದಿಂದ ಜೋರಾಗಿ ಕೂಗಿ ಹೊಡೆಯಲು ಸಿದ್ಧವಾಗಿದ್ದ ಆಯುಧಗಳನ್ನು ಹಿಡಿದು, ಎಲ್ಲರೂ ಅನೇಕ ತೂರ್ಯಗಳಿಂದ ಸಂಹರಿಸತೊಡಗಿದರು.

ಹೀಗೆ ಅನ್ಯೋನ್ಯರನ್ನು ಹೊಡೆದು, ದೇವತೆಗಳ ಮತ್ತು ದಾನವರ ಮಾಂಸ ರಕ್ತ ದೇಹಗಳು ಅಲ್ಲಲ್ಲಿ ಚದುರಿ ಬಿದ್ದಿದ್ದ ಅತಿ ದಾರುಣ ಯುದ್ಧವು ನಡೆಯಿತು. ಆದರೆ ಒಮ್ಮಿಂದೊಮ್ಮೆಗೇ ದೇವಲೋಕದವರು ಸೋಲನ್ನು ಕಂಡರು. ಓರ್ವ ಘೋರ ದಾನವನು ದಿವೌಕಸರನ್ನು ಸಂಹರಿಸುತ್ತಿದ್ದನು. ಆಗ ತೂರ್ಯ ಪ್ರಣಾದ ಭೇರಿಗಳ ಮಹಾಸ್ವನವು ಮತ್ತು ದಾನವೇಂದ್ರರ ದಾರುಣ ಸಿಂಹನಾದವು ಕೇಳಿಬಂದಿತು. ಆಗ ದೈತ್ಯ ಸೇನೆಯಿಂದ ಘೋರನಾದ ಮಹಬಲಿ ಮಹಿಷ ಎಂಬ ಹೆಸರಿನ ದಾನವನು ದೊಡ್ಡದಾದ ಗಿರಿಯನ್ನು ಕೈಯಲ್ಲಿ ಹಿಡಿದು ಹೊರಬಿದ್ದನು. ಅವನು ಘನ ಮೋಡಗಳ ಹಿಂದಿನಿಂದ ಇಣುಕುವ ಆದಿತ್ಯನಂತೆ ಕಂಡನು. ಅವನು ಗಿರಿಯನ್ನು ಎತ್ತಿಹಿಡಿದು ದಿವೌಕಸರೆಡೆಗೆ ಓಡಿಬಂದು ಎಸೆದನು. ಮಹಿಷನು ಆ ಗಿರಿಯನ್ನು ತಮ್ಮ ಮೇಲೆ ಎಸೆಯುವವನಿದ್ದಾನೆ ಎಂದು ತಿಳಿದ ದೇವರು ಎಲ್ಲೆಡೆ ಚದುರಿ ಓಡಿದರು. ಆ ಭೀಮರೂಪದ ಗಿರಿಯು ಬೀಳುವುದರಿಂದ ದೇವಸೇನೆಯ ಹತ್ತು ಸಾವಿರ ಜನರು ಭೂಮಿಯ ಮೇಲೆ ಉರುಳಿಬಿದ್ದರು. ಆ ದಾನವ ಮಹಿಷನು ಸುರರನ್ನು ಈ ರೀತಿ ಸದೆಬಡಿದು ಒಂದು ಜಿಂಕೆಗಳ ಹಿಂಡಿನ ಮೇಲೆ ಎರಗುವ ಸಿಂಹದಂತೆ ರಣದ ಮೇಲೆ ಎರಗಿದನು. ತಮ್ಮ ಮೇಲೆ ಬೀಳುತ್ತಿದ್ದ ಮಹಿಷನನ್ನು ನೋಡಿ ಇಂದ್ರನೊಡನೆ ದಿವೌಕಸರು ತಮ್ಮ ಆಯುಧ ಧ್ವಜಗಳನ್ನು ರಣದಲ್ಲಿಯೇ ಬಿಟ್ಟು ಭೀತರಾಗಿ ಓಡಿಹೋದರು. ಆಗ ಆ ಮಹಿಷನು ಕೃದ್ಧನಾಗಿ ರುದ್ರನ ರಥದ ಬಳಿಗೆ ಓಡಿ ಬಂದು ರುದ್ರನ ರಥಕಂಬವನ್ನು ಹಿಡಿದನು. ಕೃದ್ಧನಾದ ಮಹಿಷನು ರುದ್ರನ ರಥದ ಮೇಲೆ ಒಮ್ಮಿಂದೊಮ್ಮಲೇ ಬೀಳಲು ಭೂಮಿಯು ನರಳಿತು ಮತ್ತು ಮಹರ್ಷಿಗಳು ಗಾಢ ಮೂರ್ಛಿತರಾದರು. ಮೋಡದಂತೆ ಮಹಾಕಾಯನಾಗಿದ್ದ ಆ ದೈತ್ಯನು ಅವರಿಗೆ ಜಯವು ನಿಶ್ಚಿತವಾದುದೆಂದು ಆನಂದಿಸಿದನು. ಆಗ ತಾನೇ ಮಹಿಷನನ್ನು ರಣದಲ್ಲಿ ಕೊಲ್ಲಬಹುದಾಗಿದ್ದರೂ ಆ ದುರಾತ್ಮನ ಮೃತ್ಯುವು ಸ್ಕಂದನಿಂದ ಆಗಬೇಕೆಂದು ಭಗವಾನನು ನೆನಪಿಸಿಕೊಂಡನು. ಮಹಿಷನೂ ಕೂಡ ರುದ್ರನ ರಥವನ್ನು ನೋಡಿ ರೌದ್ರವಾಗಿ ಕೂಗಿ, ದೇವತೆಗಳಲ್ಲಿ ಭಯವನ್ನೂ ದೈತ್ಯರಲ್ಲಿ ಸಂತೋಷವನ್ನೂ ಉಂಟುಮಾಡಿದನು. ದೇವತೆಗಳು ಆ ಘೋರವಾದ ಭಯದಲ್ಲಿರಲು ಮಹಾಸೇನನು ಕ್ರೋಧದಿಂದ ಉರಿಯುವ ಜ್ವಾಲೆಗಳ ರಾಶಿಯೋ ಎಂಬಂತೆ ಆಗಮಿಸಿದನು. ಕೆಂಪುಬಟ್ಟೆಯನ್ನು ಧರಿಸಿದ್ದ, ಕೆಂಪುಹಾರಗಳಿಂದ ಅಲಂಕೃತನಾಗಿದ್ದ, ಲೋಹಿತಾಸ್ಕನಾಗಿದ್ದ ಆ ಪ್ರಭು ಮಹಾಬಾಹುವು ಹಿರಣ್ಯಕವಚವನ್ನು ಧರಿಸಿ ಕನಕಪ್ರಭೆಯ ಆದಿತ್ಯಸಂಕಾಶ ರಥದಲ್ಲಿ ಕುಳಿತಿದ್ದುದನ್ನು ನೋಡಿ ತಕ್ಷಣವೇ ದೈತ್ಯಸೇನೆಯು ರಣದಲ್ಲಿ ಉತ್ಸಾಹವನ್ನು ಕಳೆದುಕೊಂಡಿತು. ರಾಜೇಂದ್ರ! ಮಹಾಬಲ ಮಹಾಸೇನನು ಮಹಿಷನನ್ನು ಕೊಲ್ಲಲು ಪ್ರಜ್ವಲಿಸುತ್ತಿರುವ ಶಕ್ತಿಯನ್ನು ಪ್ರಯೋಗಿಸಿದನು. ಅವನಿಂದ ಬಿಡಲ್ಪಟ್ಟ ಶಕ್ತಿಯು ಮಹಿಷನ ಮಹಾಶಿರವನ್ನು ಕತ್ತರಿಸಿತು ಮತ್ತು ಶಿರದಿಂದ ಭಿನ್ನನಾಗಿ ಜೀವಕಳೆದುಕೊಂಡ ಮಹಿಷನು ಕೆಳಗೆ ಬಿದ್ದನು. ಸ್ಕಂದನು ಆ ಶಕ್ತಿಯನ್ನು ಮತ್ತೆ ಮತ್ತೆ ಎಸೆದಾಗಲೆಲ್ಲಾ ಅದು ಸಹಸ್ರಾರು ಶತ್ರುಗಳನ್ನು ಕೊಂದು ಅವನ ಕೈಸೇರುತ್ತಿದ್ದುದ್ದನ್ನು ದೇವದಾನವರಿಬ್ಬರೂ ನೋಡಿದರು. ಧೀಮತ ಮಹಾಸೇನನ ಬಾಣಗಳಿಂದ ಪೆಟ್ಟುತಿಂದು ಉಳಿದ ದುರಾಸದ ದೈತ್ಯಗಣಗಳು ಘೋರವಾದ ಭೀತಿಗೊಳಗಾಗಿ ಪೀಡಿತರಾಗಿರಲು ಸ್ಕಂದನ ಪಾರ್ಷದರು ನೂರಾರು ಹಿಂಡುಗಳಲ್ಲಿ ಅವರನ್ನು ಕೊಂದು ಭಕ್ಷಿಸಿದರು. ದಾನವರನ್ನು ಭಕ್ಷಿಸಿ ಮತ್ತು ಅವರ ರಕ್ತವನ್ನು ಕುಡಿದು ಕ್ಷಣಾರ್ಧದಲ್ಲಿ ದಾನವರಿಲ್ಲದಂತೆ ಮಾಡಿ ಎಲ್ಲರೂ ಹರ್ಷಿತರಾದರು. ಸೂರ್ಯನು ಕತ್ತಲೆಯನ್ನು ಹೇಗೋ ಹಾಗೆ, ಅಗ್ನಿಯು ಮರಗಳನ್ನು ಹೇಗೋ ಹಾಗೆ ಮತ್ತು ವಾಯುವು ಮೋಡಗಳನ್ನು ಹೇಗೋ ಹಾಗೆ ಕೀರ್ತಿಮಾನ್ ಸ್ಕಂದನು ತನ್ನ ವೀರ್ಯದಿಂದ ಶತ್ರುಗಳನ್ನು ಜಯಿಸಿದನು. ತ್ರಿದಶರಿಂದ ಸತ್ಕೃತನಾದ ಅವನು ಮಹೇಶ್ವರನನ್ನು ಅಭಿವಂದಿಸಿದನು. ಕೃತ್ತಿಕಾಪುತ್ರನು ಸೂರ್ಯನಂತೆ ಕಿರಣಗಳನ್ನು ಪ್ರಸರಿಸುತ್ತಾ ಶೋಭಾಯಮಾನನಾಗಿ ಕಂಡನು. ಶತ್ರುಗಳ ನಷ್ಟವಾದ ನಂತರ ಮತ್ತು ಮಹೇಶ್ವರನು ಹೊರಟುಹೋದ ನಂತರ ಪುರಂದರನು ಮಹಾಸೇನ ಸ್ಕಂದನನ್ನು ಆಲಂಗಿಸಿ ಹೀಗೆ ಹೇಳಿದನು: “ಸ್ಕಂದ! ಬ್ರಹ್ಮನಿಂದ ವರವನ್ನು ಪಡೆದಿದ್ದ ಈ ಮಹಿಷನು ನಿನ್ನಿಂದ ಹತನಾದನು. ದೇವತೆಗಳು ಅವನಿಗೆ ತೃಣಸಮಾನರಾಗಿದ್ದರು. ಆ ದೇವಕಂಟಕನನ್ನು ನೀನು ಇಂದು ನಾಶಗೊಳಿಸಿದ್ದೀಯೆ. ಈ ಮೊದಲು ನಮ್ಮನ್ನು ಕಾಡಿಸುತ್ತಿದ್ದ ಮಹಿಷನ ಸರಿಸಮರಾದ ನೂರಾರು ದೇವಶತ್ರು ದಾನವರನ್ನು ನೀನು ರಣದಲ್ಲಿ ಸಂಹರಿಸಿದ್ದೀಯೆ. ಮತ್ತು ನಿನ್ನ ಕಿಂಕರರು ಇನ್ನೂ ನೂರಾರು ದಾನವರನ್ನು ಭಕ್ಷಿಸಿದ್ದಾರೆ. ಪ್ರಭು ಉಮಾಪತಿಯಂತೆ ನೀನು ರಣದಲ್ಲಿ ಅರಿಗಳಿಗೆ ಅಜೇಯನಾಗಿದ್ದೀಯೆ. ದೇವ! ಇದು ನಿನ್ನ ಮೊದಲನೆಯ ಖ್ಯಾತ ಕರ್ಮವೆಂದಾಗುತ್ತದೆ. ಮೂರು ಲೋಕಗಳಲ್ಲಿ ನಿನ್ನ ಕೀರ್ತಿಯು ಅಕ್ಷಯವಾಗುತ್ತದೆ. ಸುರರು ನಿನ್ನ ವಶಗರಾಗಿರುತ್ತಾರೆ.”

ಮಹಾಸೇನನಿಗೆ ಹೀಗೆ ಹೇಳಿ ಶಚೀಪತಿಯು ಭಗವಾನ್ ತ್ರ್ಯಂಬಕನಿಂದ ಅನುಜ್ಞೆಯನ್ನು ಪಡೆದು ದೇವತೆಗಳೊಂದಿಗೆ ಹಿಂದಿರುಗಿದನು. ರುದ್ರನು ಭದ್ರವಟಕ್ಕೆ ಹೋದನು. ರುದ್ರನು ದೇವತೆಗಳಿಗೆ ಸ್ಕಂದನನ್ನು ನನ್ನಂತೆಯೇ ನೋಡಿಕೊಳ್ಳಿ ಎಂದು ಹೇಳಲು, ದಿವೌಕಸರು ಹಿಂದಿರುಗಿದರು. ಹೀಗೆ ಆ ವಹ್ನಿನಂದನನು ಒಂದೇ ದಿನದಲ್ಲಿ ದಾನವಗಣಗಳನ್ನು ಕೊಂದು ತ್ರೈಲೋಕ್ಯವೆಲ್ಲವನ್ನೂ ಗೆದ್ದು ಮಹರ್ಷಿಗಳಿಂದ ಪೂಜಿತನಾದನು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

2 Comments

  1. Dear Sir,
    After reading this i am really happy and enjoyed.

    There are few spelling mistakes otherwise, your effort is really appreciable and never ending fame.

Leave a Reply

Your email address will not be published. Required fields are marked *