ತಾರ್ಕ್ಷ್ಯ ಅರಿಷ್ಟನೇಮಿ
ತಾರ್ಕ್ಷ್ಯ ಅರಿಷ್ಟನೇಮಿಯ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೧೮೨) ದಲ್ಲಿ ಬರುತ್ತದೆ. ಬ್ರಾಹ್ಮಣರ ಮಹತ್ವವೇನೆಂದು ಯುಧಿಷ್ಠಿರನು ಕೇಳಿದಾಗ ಋಷಿ ಮಾರ್ಕಂಡೇಯನು ಈ ಕಥೆಯನ್ನು ಅವನಿಗೆ ಕಾಮ್ಯಕ ವನದಲ್ಲಿ ಹೇಳಿದನು.
ಹೈಹಯರ ಕುಲಕರ ಪರಪುರಂಜಯ ಕುಮಾರ ರೂಪಸಂಪನ್ನ ರಾಜನೊಬ್ಬನಿದ್ದನು. ಒಮ್ಮೆ ಅವನು ಬೇಟೆಗೆ ಹೋದನು. ಎತ್ತರಕ್ಕೆ ಬೆಳೆದಿದ್ದ ಹುಲ್ಲು ಮತ್ತು ಪೊದೆಗಳಿಂದ ಕೂಡಿದ್ದ ಆ ಅರಣ್ಯದಲ್ಲಿ ತಿರುಗುತ್ತಿರುವಾಗ ಹತ್ತಿರದಲ್ಲಿ ಕೃಷ್ಣಾಜಿನವನ್ನು ಮೇಲುಹೊದಿಗೆಯಾಗಿ ಹೊದೆದಿದ್ದ ಮುನಿಯೋರ್ವನನ್ನು ನೋಡಿ, ಅವನು ಜಿಂಕೆಯೆಂದು ತಿಳಿದು ಆ ಅರಣ್ಯದಲ್ಲಿಯೇ ಅವನನ್ನು ಕೊಂದನು. ಆ ಕೆಲಸವನ್ನು ಮಾಡಿ ವ್ಯಥಿತನಾಗಿ ಶೋಕದಿಂದ ಚೇತನವನ್ನು ಕಳೆದುಕೊಂಡ ಅವನು ಪ್ರಥಿತಾತ್ಮ ಹೈಹಯರ ಬಳಿ ಹೋದನು. ಆ ರಾಜನು ಅವರಿಗೆ ನಡೆದ ಹಾಗೆ ಎಲ್ಲವನ್ನೂ ವರದಿಮಾಡಿದನು. ಫಲಮೂಲಗಳನ್ನು ಸೇವಿಸುತ್ತಿದ್ದ ಆ ಮುನಿಯು ಹಿಂಸೆಗೊಳಗಾಗಿದ್ದುದನ್ನು ಕೇಳಿ ಮತ್ತು ಅಲ್ಲಿ ನೋಡಿ ದುಃಖಪರರಾದರು. ಇವನು ಯಾರ ಮಗನೆಂದು ದಾರಿಯಲ್ಲಿ ಎಲ್ಲರೊಡನೆ ವಿಚಾರಿಸುತ್ತಾ ಅವರು ತಾರ್ಕ್ಷ್ಯ ಅರಿಷ್ಟನೇಮಿಯ ಆಶ್ರಮಕ್ಕೆ ಬಂದರು. ಅವರು ಆ ಸಂಶಿತವ್ರತ ಮುನಿಗೆ ನಮಸ್ಕರಿಸಿದರು. ಆ ಮುನಿಯು ಅವರಿಗೆ ಪೂಜೆಯನ್ನು ತಿರುಗಿ ನೀಡುತ್ತಿರಲು ಅವರೆಲ್ಲರೂ ಅಲ್ಲಿಯೇ ನಿಂತುಕೊಂಡರು. ಅನಂತರ ಅವರು ಆ ಮಹಾತ್ಮ ಮುನಿಗೆ ಹೇಳಿದರು: “ಮುನೇ! ನಿನ್ನ ಈ ಸತ್ಕ್ರಿಯೆಗೆ ನಾವು ಅರ್ಹರಲ್ಲ. ಕರ್ಮದೋಷದಿಂದ ನಾವು ಬ್ರಾಹ್ಮಣನನ್ನು ಹಿಂಸಿಸಲಿಲ್ಲವೇ?”
ಆಗ ವಿಪ್ರರ್ಷಿಯು ಅವರಿಗೆ ಹೇಳಿದನು: “ನೀವು ಹೇಗೆ ಬ್ರಾಹ್ಮಣನನ್ನು ಕೊಂದಿರಿ? ನೀವೆಲ್ಲರೂ ಹೇಳಿರಿ ಅವನೆಲ್ಲಿ? ನನ್ನ ತಪೋಬಲವನ್ನು ನೋಡಿರಿ.”
ಅವರು ಅವನಿಗೆ ನಡೆದುದೆಲ್ಲವನ್ನೂ ಹೇಳಿದರು. ಆದರೆ ಅವರೆಲ್ಲರೂ ಒಟ್ಟೆಗೆ ಅಲ್ಲಿಗೆ ಹೋದಾಗ ತೀರಿಕೊಂಡಿದ್ದ ಋಷಿಯು, ಎಷ್ಟೇ ಹುಡುಕಿದರೂ ಅವರಿಗೆ ಕಾಣಲಿಲ್ಲ. ಇದರಿಂದ ಅವರೆಲ್ಲರೂ ತಾವು ಸ್ವಪ್ನವನ್ನು ಕಾಣುತ್ತಿದ್ದೇವೋ ಎಂದು ನಾಚಿಕೊಂಡರು. ಆಗ ಪರಪುರಂಜಯ ಮುನಿ ತಾರ್ಕ್ಷ್ಯನು ಅವರಿಗೆ ಹೇಳಿದನು: “ಇವನೇ ನೀವು ಕೊಂದಿರುವ ಬ್ರಾಹ್ಮಣನಿರಬಹುದೇ? ನೃಪರೇ! ಇವನು ನನ್ನ ಮಗ. ತಪೋಬಲಸಮನ್ವಿತ.”
ಅವರು ಆ ಋಷಿಯನ್ನು ನೋಡಿ ಪರಮ ವಿಸ್ಮಿತರಾದರು. ಮಹೀಪತೇ! “ಮಹಾ ಆಶ್ಚರ್ಯವಿದು” ಎಂದು ಹೇಳಿದರು. “ಅವನು ತೀರಿಕೊಂಡಿದ್ದುದನ್ನು ನಾವು ನೋಡಿದ್ದೇವೆ. ಅವನು ಹೇಗೆ ಪುನಃ ಜೀವಂತನಾಗಿ ಬಂದಿದ್ದಾನೆ? ಅವನು ಪುನಃ ಜೀವಿತನಾಗಲು ತಪಸ್ಸಿನ ವೀರ್ಯವು ಕಾರಣವೇ? ವಿಪ್ರರ್ಷೇ! ನಿನಗೆ ಇದನ್ನು ತಿಳಿಸಬೇಕೆಂದಿದ್ದರೆ ನಾವು ಕೇಳಬಯಸುತ್ತೇವೆ.”
ಆಗ ಅವನು ಹೇಳಿದನು: “ನೃಪರೇ! ಮೃತ್ಯುವು ನಮ್ಮ ಮೇಲೆ ಪ್ರಭಾವಬೀರುವುದಿಲ್ಲ. ಇದರ ಕುರಿತು ಸಂಕ್ಷಿಪ್ತವಾಗಿ ಕಾರಣವನ್ನು ಹೇಳುತ್ತೇನೆ. ನಾವು ಸತ್ಯವನ್ನು ಮಾತ್ರ ಗುರುತಿಸುತ್ತೇವೆ. ನಾವು ಸುಳ್ಳನ್ನು ಮನಸ್ಸಿನಲ್ಲಿಯೂ ಯೋಚಿಸುವುದಿಲ್ಲ. ನಾವು ಸ್ವಧರ್ಮದಲ್ಲಿಯೇ ನಿರತರಾಗಿದ್ದೇವೆ. ಆದುದರಿಂದ ನಮಗೆ ಮೃತ್ಯುಭಯವಿಲ್ಲ. ಯಾವುದು ಬ್ರಾಹ್ಮಣರಿಗೆ ಕುಶಲವೋ ಅದನ್ನೇ ನಾವು ಮಾತನಾಡುತ್ತೇವೆ. ಅವರ ದುಶ್ಚರಿತಗಳ ಕುರಿತು ಮಾತನಾಡುವುದಿಲ್ಲ. ಆದುದರಿಂದ ನಮಗೆ ಮೃತ್ಯುಭಯವಿಲ್ಲ. ಅನ್ನಪಾನೀಯಗಳಿಂದ ಅತಿಥಿಗಳನ್ನು ಸತ್ಕರಿಸುತ್ತೇವೆ. ಭೃತ್ಯರಿಗೆ ಅತಿಯಾಗಿ ಉಣಿಸುತ್ತೇವೆ. ತೇಜಸ್ವಿಗಳ ದೇಶದಲ್ಲಿ ವಾಸಿಸುತ್ತೇವೆ. ಆದುದರಿಂದ ನಮಗೆ ಮೃತ್ಯುಭಯವಿಲ್ಲ. ಇದನ್ನು ಸ್ವಲ್ಪವಾಗಿಯೇ ನಿಮಗೆ ಹೇಳಿದ್ದೇನೆ. ಈಗ ಮತ್ಸರವಿಲ್ಲದೇ ಎಲ್ಲರೂ ಒಟ್ಟಿಗೇ ಹಿಂದಿರುಗಿ. ಪಾಪದ ಭಯವಿಲ್ಲದಿರಲಿ.” “ಹಾಗೆಯೇ ಆಗಲಿ” ಎಂದು ಹೇಳಿ ಅವರು ಎಲ್ಲ ರಾಜರೂ ಆ ಮಹಾಮುನಿಯನ್ನು ಪೂಜಿಸಿ ಸಂತೋಷದಿಂದ ಸ್ವರಾಜ್ಯಕ್ಕೆ ಮರಳಿದರು.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ