ಸುಂದೋಪಸುಂದೋಪಾಽಖ್ಯಾನ

ಸುಂದ-ಉಪಸುಂದರ ಈ ಕಥೆಯು ವ್ಯಾಸ ಮಹಾಭಾರತದ ಆದಿಪರ್ವದ ಅರ್ಜುನವನವಾಸ ಪರ್ವ (ಅಧ್ಯಾಯ ೨೦೧-೨೦೪) ದಲ್ಲಿ ಬರುತ್ತದೆ. ಈ ಕಥೆಯನ್ನು ಇಂದ್ರಪ್ರಸ್ಥದಲ್ಲಿ ನಾರದನು ಪಾಂಡವರಿಗೆ ಹೇಳಿದನು.

Related imageಹಿಂದೆ ಮಹಾಸುರ ಹಿರಣ್ಯಕಶಿಪುವಿನ ವಂಶದಲ್ಲಿ ನಿಕುಂಭ ಎಂಬ ಹೆಸರಿನ ತೇಜಸ್ವಿ ಬಲವಾನ ದೈತ್ಯೇಂದ್ರನಿದ್ದನು. ಅವನಿಗೆ ಮಹಾವೀರ ಭೀಮಪರಾಕ್ರಮಿ ಪುತ್ರರಿಬ್ಬರು ಜನಿಸಿದರು. ಅವರು ಒಟ್ಟಿಗೇ ಊಟಮಾಡುತ್ತಿದ್ದರು, ಒಬ್ಬರಿಲ್ಲದೆ ಇನ್ನೊಬ್ಬರು ಎಲ್ಲಿಗೂ ಹೋಗುತ್ತಿರಲಿಲ್ಲ, ಅನ್ಯೋನ್ಯರಿಗೆ ಪ್ರಿಯಕರವಾದುದನ್ನೇ ಮಾಡುತ್ತಿದ್ದರು, ಅನ್ಯೋನ್ಯರಿಗೆ ಪ್ರಿಯವಾದುದನ್ನೇ ಮಾತನಾಡುತ್ತಿದ್ದರು, ಮತ್ತು ಇಬ್ಬರೂ ಒಂದೇ ರೀತಿಯಲ್ಲಿ ವರ್ತಿಸುತ್ತಿದ್ದರು, ನಡೆದುಕೊಳ್ಳುತ್ತಿದ್ದರು. ಒಬ್ಬನೇ ಇಬ್ಬರಾದಂತೆ ವರ್ತಿಸುತ್ತಿದ್ದರು. ಎಲ್ಲ ವಿಷಯಗಳಲ್ಲಿಯೂ ಏಕನಿಶ್ಚಯರಾದ ಆ ಮಹಾವೀರರು ದೊಡ್ಡವರಾದ ಮೇಲೆ ತ್ರೈಲೋಕ್ಯವಿಜಯದ ಒಂದೇ ನಿರ್ಧಾರವನ್ನು ಕೈಗೊಂಡರು. ದೀಕ್ಷಾಬದ್ಧರಾಗಿ ಅವರು ವಿಂಧ್ಯಪರ್ವತಕ್ಕೆ ಹೋಗಿ ಅಲ್ಲಿ ಉಗ್ರ ತಪಸ್ಸನ್ನು ತಪಿಸಿದರು. ಅವರು ದೀರ್ಘಕಾಲ ತಪೋಯುಕ್ತರಾದರು. ಹಸಿವು ಬಾಯಾರಿಕೆಗಳಿಂದ ಬಳಲಿ, ಜಟಾವಲ್ಕಲಧಾರಿಗಳಾಗಿ, ಸರ್ವಾಂಗಗಳು ಮಲಿನದಿಂದ ತುಂಬಿಹೋಗಿ, ಕೇವಲ ಗಾಳಿಯನ್ನು ಸೇವಿಸುತ್ತಿದ್ದರು. ಅವರು ತಮ್ಮ ಮಾಂಸದ ತುಂಡುಗಳನ್ನು ಅಗ್ನಿಯಲ್ಲಿ ಆಹುತಿಗಳನ್ನಾಗಿತ್ತರು. ಅವರ ತೋಳುಗಳನ್ನು ಮೇಲೆತ್ತಿ, ಪಾದಾಂಗುಷ್ಠದ ಮೇಲೆ ನಿಂತು ದೀರ್ಘಕಾಲದವರೆಗೆ ಧೃತವ್ರತರಾಗಿದ್ದರು. ದೀರ್ಘಕಾಲದ ಅವರ ತಪಸ್ಸಿನ ಪ್ರತಾಪದ ಪ್ರಭಾವದಿಂದ ಅದ್ಭುತವೋ ಎಂಬಂತೆ ವಿಂಧ್ಯವು ಹೊಗೆಕಾರತೊಡಗಿತು. ಅವರ ಉಗ್ರ ತಪಸ್ಸನ್ನು ನೋಡಿ ದೇವತೆಗಳು ಭೀತರಾದರು. ದೇವತೆಗಳು ಅವರ ತಪಸ್ಸನ್ನು ಕೆಡಿಸಲೋಸುಗ ವಿಘ್ನಗಳನ್ನು ತಂದೊಟ್ಟಿದರು. ರತ್ನಗಳಿಂದ ಮತ್ತು ಸುಂದರ ಸ್ತ್ರೀಯರ ಮೂಲಕ ಪುನಃ ಪುನಃ ಪ್ರಲೋಭಿಸಿದರು. ಆದರೂ ಆ ಇಬ್ಬರು ಸುಮಹಾವ್ರತರ ವ್ರತಭಂಗಮಾಡಲು ಸಾಧ್ಯವಾಗಲಿಲ್ಲ. ಇದರ ನಂತರ ಪುನಃ ದೇವತೆಗಳು ನಡುಗುತ್ತಿರುವ, ವಸ್ತ್ರಾಭರಣಗಳು, ತಲೆಕೂದಲು ಕೆದರಿದ, ಬಟ್ಟೆಯು ಒಂದೆಡೆ ಕಳಚಿ ಹೋಗುತ್ತಿರುವ ಆ ಮಹಾತ್ಮರ ಸಹೋದರಿಯರು, ತಾಯಂದಿರು ಭಾರ್ಯೆಯರು ಮತ್ತು ಇತರ ಪರಿಜನರನ್ನು ರಾಕ್ಷಸರು ಶೂಲಹಸ್ತದಿಂದ ತಿವಿಯುತ್ತಿರಂತೆ ಮಾಯೆಯನ್ನು ಸೃಷ್ಟಿಸಿದರು. ಆ ಸರ್ವ ಸ್ತ್ರೀಯರು ಅವರ ಬಳಿ ಓಡಿಬಂದು “ತ್ರಾಹಿ! ತ್ರಾಹಿ!” ಎಂದು ಚೀರಿಕೊಂಡರು. ಆದರೂ ಆ ಸುಮಹಾವ್ರತರು ತಮ್ಮ ವ್ರತವನ್ನು ಮುರಿಯಲಿಲ್ಲ. ಅವರು ಯಾವುದೇ ರೀತಿಯ ಉದ್ವೇಗ ಮತ್ತು ದುಃಖಗಳನ್ನು ತೋರಿಸದೇ ಇದ್ದಾಗ ಸ್ತ್ರೀಯರೆಲ್ಲರೂ ಅಲ್ಲಿಯೇ ಅಂತರ್ಧಾನರಾದರು. ಆಗ ಸಾಕ್ಷಾತ್ ಸರ್ವಲೋಕಪಿತಾಮಹ ಪಿತಾಮಹನು ಆ ಮಹಾಸುರರಲ್ಲಿಗೆ ಬಂದು ವರಗಳನ್ನಿತ್ತನು. ಆಗ ದೃಢವಿಕ್ರಮಿ ಸುಂದೋಪಸುಂದ ಸಹೋದರರು ದೇವ ಪಿತಾಮಹನನ್ನು ಕಂಡು ಅಂಜಲೀಬದ್ಧರಾಗಿ ನಿಂತು ಇಬ್ಬರೂ ಒಟ್ಟಿಗೇ ಪ್ರಭು ದೇವನಲ್ಲಿ ಕೇಳಿಕೊಂಡರು: “ನಮ್ಮ ಈ ತಪಸ್ಸಿನಿಂದ ಪಿತಾಮಹನು ಪ್ರೀತನಾಗಿದ್ದರೆ ನಾವಿಬ್ಬರೂ ಮಯಾವಿದ, ಅಸ್ತ್ರವಿದ, ಬಲಶಾಲಿ, ಕಾಮರೂಪಿಗಳಾಗಲಿ. ಪ್ರಭುವು ಪ್ರಸನ್ನನಾಗಿದ್ದಾನೆಂದರೆ ನಾವಿಬ್ಬರೂ ಅಮರರಾಗಲಿ.”

ಪಿತಾಮಹನು ಹೇಳಿದನು: “ಅಮರತ್ವವೊಂದನ್ನು ಬಿಟ್ಟು ನೀವು ಹೇಳಿದ ಬೇರೆಲ್ಲವೂ ಆಗುತ್ತದೆ. ಅಮರರಿಗೆ ಸಮಾನ ಬೇರೆ ಯಾವುದಾದರು ಮೃತ್ಯುವಿನ ವಿಧಾನವನ್ನು ಕೇಳಿಕೊಳ್ಳಿ. ಯಾವುದೋ ಕಾರಣಕ್ಕಾಗಿ ನೀವು ಈ ಮಹಾ ತಪಸ್ಸನ್ನು ನೆರೆವೇರಿಸಿದುದರಿಂದ ನಿಮಗೆ ಅಮರತ್ವವು ದೊರೆಯಲಾರದು. ದೈತ್ಯೇಂದ್ರರೇ! ತ್ರೈಲೋಕ್ಯವಿಜಯಾರ್ಥವಾಗಿ ನೀವು ಇದನ್ನು ಕೈಗೊಂಡಿದ್ದೀರಿ. ಆದುದರಿಂದ ನಾನು ನಿಮ್ಮ ಇಚ್ಛೆಯನ್ನು ಪೂರೈಸಲಾರೆ.”

ಸುಂದೋಪಸುಂದರು ಹೇಳಿದರು: “ಪಿತಾಮಹ! ಈ ಮೂರೂ ಲೋಕದಲ್ಲಿ ನಮ್ಮೀರ್ವರ ಹೊರತಾಗಿ ಬೇರೆ ಯಾವುದೇ ಸ್ಥಾವರಜಂಗಮದಿಂದಲೂ ಮೃತ್ಯುಭಯ ಇಲ್ಲದಿರಲಿ.”

ಪಿತಾಮಹನು ಹೇಳಿದನು: “ನೀವು ಕೇಳಿದಂತೆ ಈ ಆಸೆಯನ್ನು ನಾನು ಪೂರೈಸಬಲ್ಲೆ. ನಿಮ್ಮ ಮೃತ್ಯುವಿಧಿಯು ನೀವು ಕೇಳಿಕೊಂಡಂತೆಯೇ ಆಗುತ್ತದೆ.”

ನಂತರ ಪಿತಾಮಹನು ಈ ವರಗಳನ್ನಿತ್ತು ಅವರೀರ್ವರನ್ನೂ ತಪಸ್ಸಿನಿಂದ ಹಿಂದಿರುಗಿಸಿ, ಬ್ರಹ್ಮಲೋಕಕ್ಕೆ ಹೋದನು. ಸರ್ವ ವರಗಳನ್ನೂ ಪಡೆದು ಸರ್ವಲೋಕಕ್ಕೆ ಅವಧ್ಯ ಆ ದೈತ್ಯೇಂದ್ರರು ತಮ್ಮ ಮನೆಗೆ ತೆರಳಿದರು. ವರಗಳನ್ನು ಗಳಿಸಿ ಆ ಕೃತಕಾಮಿ ಮಹಾಸುರರನ್ನು ನೋಡಿದ ಸರ್ವ ಸುಹೃಜ್ಜನರೂ ಪ್ರಮೋದಿತರಾದರು. ಅವರ ಜಟೆಗಳನ್ನು ಕತ್ತರಿಸಿ, ಮಾಲಿನ್ಯವನ್ನು ತೊಳೆದು, ಮಹಾ ಬೆಲೆಬಾಳುವ ಆಭರಣಗಳು ಮತ್ತು ವಸ್ತ್ರಗಳನ್ನು ಧರಿಸಿ ವಿರಾಜಿಸಿದರು. ಅದಕ್ಕೆ ಕಾಲವಲ್ಲದಿದ್ದರೂ ಅವರು ಸಾರ್ವಕಾಮಿಕಿ ಕೌಮುದಿಯನ್ನು ನೆರೆವೇರಿಸಿದರು. ಮತ್ತು ಆ ದೈತ್ಯೇಂದ್ರರೀರ್ವರು ತಮ್ಮ ಸುಹೃಜ್ಜನರೊಂದಿಗೆ ಪರಮಪ್ರೀತರಾದರು. ಮನೆಮನೆಗಳಲ್ಲಿ “ತಿನ್ನು! ಔತಣಮಾಡು! ರಮಿಸು! ಹಾಡು! ಕುಡಿ! ಮತ್ತು ಕೊಡು!”ಎನ್ನುವ ಮಾತುಗಳೇ ನಿತ್ಯವೂ ಕೇಳಿಬರುತ್ತಿದ್ದವು. ಅಲ್ಲಲ್ಲಿ ಮಹಾಪಾನಗಳಿಂದ, ಚಪ್ಪಾಳೆಯ ಶಬ್ಧಗಳಿಂದ ಆ ದೈತ್ಯರ ಪುರವಿಡೀ ಹರ್ಷದಿಂದ ತೇಲಾಡಿತು. ಈ ರೀತಿ ಆ ಕಾಮರೂಪಿ ದೈತ್ಯರು ಬಹಳ ಕ್ರೀಡೆಗಳಲ್ಲಿ ತೊಡಗಿರಲು ವರ್ಷಗಳು ಒಂದೇ ಒಂದು ದಿನದಂತೆ ಕಳೆದವು.

ಉತ್ಸವಗಳು ನಡೆಯುತ್ತಿರುವಾಗ ತ್ರೈಲೋಕ್ಯದ ಆಕಾಂಕ್ಷಿಗಳಾದ ಆ ಈರ್ವರು ಸಮಾಲೋಚನೆ ನಡೆಸಿ ತಮ್ಮ ಸೇನೆಗೆ ಆಜ್ಞೆಯಿತ್ತರು. ಅವರ ಸುಹೃದಯರು, ದೈತ್ಯ ವೃದ್ಧರು ಮತ್ತು ಮಂತ್ರಿಗಳು ಅವರಿಗೆ ಅನುಜ್ಞೆಯನ್ನು ನೀಡಲು ಪ್ರಾಸ್ಥಾನಿಕವನ್ನು ಪೂರೈಸಿ ಮಘಾನಕ್ಷತ್ರದ ರಾತ್ರಿಯಲ್ಲಿ ಹೊರಟರು. ಗದೆ, ಪಟ್ಟಿಶಗಳನ್ನು ಹಿಡಿದು ಶೂಲಮುದ್ಗರಗಳನ್ನೆತ್ತಿ ಸಹಧರ್ಮಿ ಮಹಾ ದೈತ್ಯಸೇನೆಯೊಂದಿಗೆ ನಡೆದರು. ಚಾರಣರು ಮಂಗಲಸ್ತುತಿಗಳನ್ನು, ವಿಜಯಪ್ರತಿಸಂಹಿತಗಳನ್ನು ಸ್ತುತಿಸುತ್ತಿರಲು ಈರ್ವರೂ ಪರಮ ಸಂತೋಷದಿಂದ ಹೊರಟರು. ಯುದ್ಧದ ಮದದಲ್ಲಿದ್ದ ಕಾಮಗಾಮಿ ಆ ಇಬ್ಬರು ದೈತ್ಯರು ಅಂತರಿಕ್ಷಕ್ಕೇರಿ ದೇವತೆಗಳ ಭವನಕ್ಕೆ ಧಾಳಿಯಿಟ್ಟರು. ಅವರ ಆಗಮನವನ್ನು ಮತ್ತು ಪ್ರಭುವು ಅವರಿಗಿತ್ತ ವರವನ್ನು ತಿಳಿದಿದ್ದ ಸುರರು ಸ್ವರ್ಗವನ್ನು ಬಿಟ್ಟು ಬ್ರಹ್ಮಲೋಕವನ್ನು ಸೇರಿದರು. ಆ ತೀವ್ರವಿಕ್ರಮಿಗಳು ಇಂದ್ರಲೋಕವನ್ನು ಜಯಿಸಿ ಯಕ್ಷ-ರಕ್ಷಗಣಗಳನ್ನೂ ಖೇಚರಗಣಗಳನ್ನು ಭೂತಗಳನ್ನು ಜಯಿಸಿದರು. ಅಂತರ್ಭೂಮಿಗೆ ಹೋಗಿ ನಾಗಗಳನ್ನು ಗೆದ್ದು ಆ ಮಹಾಸುರರು ಸರ್ವ ಸಮುದ್ರವಾಸಿಗಳನ್ನೂ ಮ್ಲೇಚ್ಛಜಾತಿಯವರನ್ನೂ ಗೆದ್ದರು. ಆ ಇಬ್ಬರು ಉಗ್ರಶಾಸಕರು ಸರ್ವ ಮಹಿಯನ್ನೂ ಗೆಲ್ಲಲು ತೊಡಗಿ ಸೈನಿಕರನ್ನು ಒಟ್ಟುಗೂಡಿಸಿ ಈ ಸುತೀಕ್ಷ್ಣ ಮಾತುಗಳನ್ನಾಡಿದರು: “ರಾಜರ್ಷಿಗಳು ಮತ್ತು ದ್ವಿಜರು ಮಹಾಯಜ್ಞ ಮತ್ತು ಹವ್ಯಕವ್ಯಗಳಿಂದ ದೇವತೆಗಳ ಬಲ ಮತ್ತು ಶ್ರಿಯನ್ನು ವೃದ್ಧಿಸುತ್ತಾರೆ. ಅಸುರರ ವೈರಿಗಳಾದ ದೇವತೆಗಳೆಲ್ಲರಿಗೆ ಇವರೇ ತೇಜೋಬಲವನ್ನು ಹೆಚ್ಚಿಸುತ್ತಿರುವುದರಿಂದ ಅವರೂ ನಮಗೆ ಶತ್ರುಗಳಾಗುತ್ತಾರೆ. ದೇವತೆಗಳ ತೇಜೋಬಲಗಳನ್ನು ನೀಡುವವರನ್ನು ತೀರಿಸಿಬಿಟ್ಟರೆ ದೇವತೆಗಳೂ ಶಕ್ತಿ ಹೀನರಾಗುವರು.”ಈ ರೀತಿ ಮಹೋದಧಿಯ ಪೂರ್ವತೀರದಲ್ಲಿ ಸರ್ವರಿಗೂ ಆದೇಶವನ್ನಿತ್ತು ಕ್ರೂರಮತಿಯನ್ನು ತಳೆದ ಅವರು ಸರ್ವತೋಮುಖವಾಗಿ ಹೊರಟರು. ಆ ಬಲಿಗಳಿಬ್ಬರೂ ಯಾರು ಯಾರು ಯಜ್ಞಗಳನ್ನು ಮಾಡುತ್ತಿದ್ದರೋ ಮತ್ತು ಯಾವ ಯಾವ ದ್ವಿಜರು ಯಜ್ಞಗಳನ್ನು ಮಾಡಿಸುತ್ತಿದ್ದರೋ ಆ ಎಲ್ಲರನ್ನೂ ಹುಡುಕಿ ಬಲಾತ್ಕಾರವಾಗಿ ಸಂಹರಿಸಿದರು. ಅವರ ನಿರ್ಭೀತ ಸೈನಿಕರು ಆಶ್ರಮಗಳಲ್ಲಿ ಭಾವಿತಾತ್ಮ ಋಷಿಗಳ ಅಗ್ನಿಹೋತ್ರಗಳನ್ನು ತೆಗೆದು ನೀರಿನಲ್ಲಿ ಎಸೆದರು. ಮಹಾತ್ಮ ತಪೋಧನರು ಕ್ರುದ್ಧರಾಗಿ ನೀಡಿದ ಶಾಪಗಳೂ ಕೂಡ ವರದಾನದಿಂದ ಮೆರೆಯುತ್ತಿದ್ದ ಅವರನ್ನು ಮುಟ್ಟಲಿಲ್ಲ. ಶಿಲೆಗಳ ಮೇಲೆ ಬಿಟ್ಟ ಬಾಣಗಳು ಹೇಗೋ ಹಾಗೆ ಶಾಪಗಳು ಅವರನ್ನು ಮುಟ್ಟದಿರಲು ದ್ವಿಜರು ತಮ್ಮ ತಮ್ಮ ವ್ರತ ನಿಯಮಗಳನ್ನು ಪರಿತ್ಯಜಿಸಿ ಓಡಿ ಹೋದರು. ವೈನತೇಯನ ಭಯದಿಂದ ಉರಗಗಳು ಓಡುವಂತೆ ಅವರಿಬ್ಬರ ಭಯದಿಂದ ಪೃಥ್ವಿಯ ಎಲ್ಲ ತಪಃಸಿದ್ಧರೂ, ಜಿತೇಂದ್ರಿಯರೂ, ಶಮಪರಾಯಣರೂ ಓಡಿಹೋದರು. ಹಾಳುಬಿದ್ದಿದ್ದ ಆಶ್ರಮಗಳು ಮತ್ತು ಅಲ್ಲಲ್ಲಿ ಹರಡಿ ಬಿದ್ದಿದ್ದ ಕಲಶ-ಸಟ್ಟುಗಗಳಿಂದ ಜಗತ್ತೆಲ್ಲವೂ ಕಾಲನಿಂದ ಹತವಾದವೋ ಎಂಬಂತೆ ಬರಿದಾಗಿ ತೋರುತ್ತಿತ್ತು. ರಾಜರ್ಷಿ ಮತ್ತು ಋಷಿಗಳು ಅದೃಶ್ಯರಾಗಲು ಅವರನ್ನು ವಧಿಸಲು ನಿಶ್ಚಯಿಸಿದ ಆ ಈರ್ವರು ಮಹಾಸುರರೂ ಬೇರೆ ಬೇರೆ ರೂಪಗಳನ್ನು ಧರಿಸಿದರು. ಮದಜಲ ಸೋರುತ್ತಿರುವ ಕುಂಭಸ್ಥಲದ ಮತ್ತಗಜಗಳ ರೂಪವನ್ನು ತಾಳಿ ದುರ್ಗಮ ಪದೇಶಗಳಲ್ಲಿ ಅಡಗಿಕೊಂಡಿದ್ದವರನ್ನು ಯಮಾಲಯಕ್ಕೆ ಕಳುಹಿಸಿದರು. ಸಿಂಹಗಳಾಗಿ, ಪುನಃ ವ್ಯಾಘ್ರಗಳಾಗಿ, ಪುನಃ ಅಂತರ್ಹಿತರಾಗಿ, ಹೀಗೆ ಅನೇಕ ಉಪಾಯಗಳಿಂದ ಆ ಕ್ರೂರರು ಋಷಿಗಳನ್ನು ಹುಡುಕಿ ಸಂಹರಿಸಿದರು. ಆಗ ವಸುಧೆಯಲ್ಲಿ ಯಜ್ಞ-ಸ್ವಾಧ್ಯಾಯಗಳು ನಿಂತುಹೋದವು. ನೃಪತಿದ್ವಿಜರು ನಷ್ಟರಾದರು. ಯಜ್ಞ-ಉತ್ಸವಗಳು ನಿಂತುಹೋದವು. ಭೂಮಿಯು ಭಯಪೀಡಿತವಾಗಿ ಹಾಹಾಕರಿಸಿತು. ಅಂಗಡಿ-ವ್ಯಾಪಾರಗಳು ನಿಂತುಹೋದವು. ದೇವತಾಕಾರ್ಯಗಳು ನಿಂತುಹೋದವು. ಪುಣ್ಯಕಾರ್ಯಗಳೂ ವಿವಾಹಗಳೂ ಇಲ್ಲವಾದವು. ಕೃಷಿ-ಗೋಪಾಲನೆಗಳು ನಿಂತುಹೋದವು. ನಗರ-ಆಶ್ರಮಗಳು ವಿಧ್ವಂಸವಾದವು. ಎಲುಬು ಮತ್ತು ಅಸ್ತಿಪಂಜರಗಳಿಂದ ತುಂಬಿಹೋದ ಭೂಮಿಯು ಭಯಂಕರವಾಗಿ ತೋರಿತು. ಪಿತೃಕಾರ್ಯಗಳು ನಿಂತುಹೋದವು. ಮಂಗಲ ವಷಟ್ಕಾರಗಳು ನಿಂತುಹೋದವು. ಜಗತ್ತು ನೋಡಲಿಕ್ಕಾಗದಷ್ಟು ಭಯಾಕಾರವಾಗಿ ತೋರುತ್ತಿತ್ತು. ಸುಂದೋಪಸುಂದರ ಈ ಕೃತ್ಯಗಳಿಂದ ಚಂದ್ರಾದಿತ್ಯರು, ಗ್ರಹತಾರೆಗಳು, ನಕ್ಷತ್ರಗಳು ಮತ್ತು ದಿವೌಕಸರು ವಿಷಾದಿತರಾದರು. ಈ ರೀತಿ ಕ್ರೂರಕರ್ಮಗಳಿಂದ ಸರ್ವದಿಶಗಳನ್ನು ಜಯಿಸಿ ಆ ದೈತ್ಯರು ಯಾವುದೇ ವಿರೋಧವಿಲ್ಲದೇ ಕುರುಕ್ಷೇತ್ರದಲ್ಲಿ ವಾಸಿಸತೊಡಗಿದರು.

ಆಗ ದೇವರ್ಷಿಗಳು, ಸರ್ವ ಸಿದ್ಧರೂ, ಮತ್ತು ಪರಮರ್ಷಿಗಳೆಲ್ಲರೂ ಆ ಮಹಾ ಕದನವನ್ನು ನೋಡಿ ಬಹುದುಃಖಿತರಾದರು. ಆ ಜಿತಕ್ರೋಧ, ಜಿತಾತ್ಮ, ಜಿತೇಂದ್ರಿಯರು ಜಗತ್ತಿನ ಮೇಲಿನ ಕೃಪೆಯಿಂದ ಭವನದ ಪಿತಾಮಹನಲ್ಲಿಗೆ ಹೋದರು. ಸಿದ್ಧ-ಬ್ರಹ್ಮರ್ಷಿಗಳಿಂದ ಪರಿವೃತರಾಗಿ ಅವರು ದೇವತೆಗಳೊಡನೆ ಕುಳಿತಿದ್ದ ಪಿತಾಮಹನನ್ನು ಕಂಡರು. ಅಲ್ಲಿ ದೇವ ಮಹಾದೇವ, ಅಗ್ನಿವಾಯುಗಳ ಸಹಿತ ಚಂದ್ರಾದಿತ್ಯರು, ಧರ್ಮ, ಪರಮೇಷ್ಠಿ, ಬುಧ, ವೈಖಾನಸರು, ವಾಲಖಿಲ್ಯರು, ವಾನಪ್ರಸ್ಥರು, ಮರೀಚಿಗಳು, ಅಜರು, ಅವಿಮೂಢರು, ತೇಜೋಗರ್ಭ ತಪಸ್ವಿಗಳೂ, ಸರ್ವ ಋಷಿಗಳೂ ಪಿತಾಮಹನನ್ನು ಉಪಾಸಿಸುತ್ತಿದ್ದರು. ಆಗ ಸರ್ವ ಮಹರ್ಷಿಗಳೂ ಒಟ್ಟಾಗಿ ಹೋಗಿ ಸುಂದೋಪಸುಂದರ ಸರ್ವ ಕರ್ಮಗಳನ್ನೂ ವರದಿಮಾಡಿದರು. ಯಾವ ಕ್ರಮದಲ್ಲಿ ಏನೆಲ್ಲ ಮಾಡಿದರೆನ್ನುವುದನ್ನು ಎಲ್ಲವನ್ನೂ ಪಿತಾಮಹನಿಗೆ ನಿವೇದಿಸಿದರು. ಆಗ ದೇವಗಣ-ಪರಮ ಋಷಿ ಸರ್ವರೂ ಆ ವಿಷಯವನ್ನೇ ಮುಂದಿಟ್ಟುಕೊಂಡು ಪಿತಾಮಹನನ್ನು ಪ್ರೇರಿಸಿದರು. ಅವರೆಲ್ಲರ ಆ ಮಾತುಗಳನ್ನು ಕೇಳಿದ ಪಿತಾಮಹನು ಒಂದು ಮುಹೂರ್ತ ಯೋಚಿಸಿ ಮುಂದಿನ ಕರ್ತವ್ಯದ ಕುರಿತು ನಿಶ್ಚಯಿಸಿದನು.

ಅವರಿಬ್ಬರ ವಧೆಯನ್ನು ಕಲ್ಪಿಸಿ, ವಿಶ್ವಕರ್ಮನನ್ನು ಕರೆಯಿಸಿದನು. ವಿಶ್ವಕರ್ಮನನ್ನು ಕಂಡ ಪಿತಾಮಹನು: “ಮಹಾತಪಸ್ವಿಗಳೂ ಬೇಡುವಂಥಹ ಸುಂದರಿಯನ್ನು ಸೃಷ್ಟಿಸು!” ಎಂದು ಆದೇಶವನ್ನಿತ್ತನು. ಪಿತಾಮಹನನ್ನು ನಮಸ್ಕರಿಸಿ, ಅವನ ವಾಖ್ಯವನ್ನು ಅಭಿನಂದಿಸಿ ವಿಶ್ವಕರ್ಮನು ಪ್ರಯತ್ನಿಸಿ ಯೋಚಿಸಿ ಓರ್ವ ದಿವ್ಯ ಸ್ತ್ರೀಯನ್ನು ಸೃಷ್ಟಿಸಿದನು. ಮೂರು ಲೋಕಗಳಲ್ಲಿನ ಸ್ಥಾವರಜಂಗಮಗಳಲ್ಲಿ ಯಾವುದೇ ಸೌಂದರ್ಯವಿದ್ದರೂ ಅದನ್ನು ಅಲ್ಲಲ್ಲಿಂದ ತೆಗೆದುಕೊಂಡು ಒಟ್ಟುಗೂಡಿಸಿದನು. ಕೋಟಿಗಟ್ಟಲೆ ರತ್ನಗಳನ್ನು ಅವಳ ದೇಹದಲ್ಲಿ ಅಳವಡಿಸಿದನು. ಹೀಗೆ ಆ ರತ್ನಸಂಘಾತಮಯಿ ದೇವರೂಪಿಣಿಯನ್ನು ಸೃಷ್ಟಿಸಿದನು. ವಿಶ್ವಕರ್ಮನ ಮಹಾ ಪ್ರಯತ್ನದಿಂದ ನಿರ್ಮಿತಳಾದ ಅವಳು ರೂಪದಲ್ಲಿ ಮೂರು ಲೋಕದ ನಾರಿಯರನ್ನು ಮೀರಿಸಿದ್ದಳು. ಅವಳ ದೇಹದಲ್ಲಿ ರೂಪಸಂಪದವಾಗಿರದಿದ್ದ ಅಥವಾ ನೋಡುವವರ ದೃಷ್ಟಿಯು ಅಲ್ಲಿಯೇ ನಿಲ್ಲುವಂತೆ ಮಾಡದಿರುವ ಯಾವುದೊಂದು ಸೂಕ್ಷ್ಮಭಾಗವೂ ಇರಲಿಲ್ಲ. ವಿಗ್ರಹದಂದಿರುವ ಆ ಕಾಂತರೂಪಿಣಿ, ಮಪುಷ್ಮತೀ ಶ್ರೀಯು ಸರ್ವಭೂತಗಳ ಕಣ್ಮನಗಳನ್ನು ಸೆಳೆಯುತ್ತಿದ್ದಳು. ಸಣ್ಣ ಸಣ್ಣ ರತ್ನಗಳನ್ನು ಒಟ್ಟುಗೂಡಿಸಿ ರತ್ನಗಳಿಂದಲೇ ನಿರ್ಮಿತ ಅವಳಿಗೆ ಪಿತಾಮಹನು ತಿಲೋತ್ತಮೆಯೆಂಬ ಹೆಸರನ್ನಿಟ್ಟನು.

ಪಿತಾಮಹನು ಹೇಳಿದನು: “ತಿಲೋತ್ತಮೇ! ಅಸುರ ಸುಂದೋಪಸುಂದರ ಬಳಿ ಹೋಗು. ಭದ್ರೇ! ನಿನ್ನ ಈ ಪ್ರಾರ್ಥನೀಯ ರೂಪದಿಂದ ಅವರನ್ನು ಪ್ರಲೋಭಿಸು. ರೂಪಸಂಪತ್ತಿನ ನಿನ್ನನ್ನು ನೋಡಿದ ಕೂಡಲೇ ಅವರಲ್ಲಿ ಅನ್ಯೋನ್ಯ ವಿರೋಧವುಂಟಾಗುವಂತೆ ಮಾಡು.”

ಹಾಗೆಯೇ ಆಗಲೆಂದು ಪ್ರತಿಜ್ಞಾಪಿಸಿ ಅವಳು ಪಿತಾಮಹನನ್ನು ಸಮಸ್ಕರಿಸಿ ಅಲ್ಲಿದ್ದ ವಿಭುಧ ಮಂಡಲಕ್ಕೆ ಪ್ರದಕ್ಷಿಣೆ ಮಾಡಿದಳು. ಭಗವಾನನು ಪೂರ್ವಾಭಿಮುಖನಾಗಿ ಕುಳಿತಿದ್ದನು. ದಕ್ಷಿಣದಲ್ಲಿ ಮಹೇಶ್ವರನಿದ್ದನು, ಉತ್ತರದಲ್ಲಿ ದೇವತೆಗಳು ಕುಳಿತಿದ್ದರು ಮತ್ತು ಋಷಿಗಳು ಸರ್ವತೋಮುಖ ಕುಳಿತಿದ್ದರು. ಅವಳು ಆ ಮಂಡಲವನ್ನು ಪ್ರದಕ್ಷಿಣೆ ಮಾಡುತ್ತಿರಲು ಇಂದ್ರ ಮತ್ತು ಭಗವಾನ್ ಸ್ಥಾಣುವು ಅಲುಗಾಡದೆ ಸ್ಥಿರವಾಗಿ ಕುಳಿತಿದ್ದರು. ಪಕ್ಕದಲ್ಲಿಯೇ ಹೋಗುತ್ತಿರುವ ಅವಳನ್ನು ನೋಡುವ ಆಸೆಯಿಂದ ಅವನ ದಕ್ಷಿಣಭಾಗದಲ್ಲಿ ಇನ್ನೊಂದು ಮುಖವು ಮೂಡಿತು. ಅವಳು ಹಿಂದೆ ಹಾಯುವಾಗ ಅವನ ಪಶ್ಚಿಮ ಭಾಗದಲ್ಲಿ ಇನ್ನೊಂದು ಮುಖವು ಹೊರಮೂಡಿತು. ಅವಳು ಉತ್ತರದ ಕಡೆ ಬರಲು ಅಲ್ಲಿಯೂ ಒಂದು ಮುಖವು ಮೂಡಿತು. ಮಹೇಂದ್ರನಿಗೆ ಕೂಡ ಪಕ್ಕದಲ್ಲಿ, ಹಿಂದೆ, ಮತ್ತು ಮುಂದೆ ಎಲ್ಲ ಕಡೆಯಲ್ಲಿ ಸಹಸ್ರಾರು ರಕ್ತಾಂತ ವಿಶಾಲ ಕಣ್ಣುಗಳು ಉದ್ಭವಿಸಿದವು. ಹೀಗೆ ಹಿಂದೆ ಮಹಾದೇವ ಸ್ಥಾಣುವು ಚತುರ್ಮುಖನಾದನು. ಹಾಗೆಯೇ ಬಲಸೂದನನು ಸಹಸ್ರನೇತ್ರನಾದನು. ಹಾಗೆ ತಿಲೋತ್ತಮೆಯು ಹೋದಕಡೆಗೆಲ್ಲಾ ದೇವ-ಋಷಿಗಳ ಮುಖಗಳು ತಿರುಗುತ್ತಿದ್ದವು. ಅವಳ ದೇಹದ ಮೇಲೆ ಬಿದ್ದಿದ್ದ - ದೇವ ಪಿತಾಮಹನನ್ನು ಬಿಟ್ಟು - ಉಳಿದ ಎಲ್ಲ ಮಹಾತ್ಮರ ದೃಷ್ಟಿಗಳು ಅಲ್ಲಿಯೇ ನೆಟ್ಟುಹೋದವು. ಅವಳು ಹೋಗುತ್ತಿರುವಾಗ ಅಲ್ಲಿರುವ ಸರ್ವ ದೇವತೆಗಳೂ ಪರಮ ಋಷಿಗಳೂ “ಅವಳ ರೂಪಸಂಪತ್ತಿನಿಂದ ನಡೆಯ ಬೇಕಾದ ಕಾರ್ಯವು ಆಗಿಯೇ ಆಗುತ್ತದೆ!” ಎಂದು ಭಾವಿಸಿದರು. ತಿಲೋತ್ತಮೆಯು ಹೊರಟು ಹೋದ ನಂತರ ಲೋಕ ಭಾವನನು ಸರ್ವ ದೇವ ಋಷಿಗಣಗಳನ್ನು ವಿಸರ್ಜಿಸಿದನು.

ಆ ದೈತ್ಯರೀರ್ವರು ಪೃಥ್ವಿಯನ್ನು ಜಯಿಸಿ, ಎದುರಾಳಿಗಳಿಲ್ಲದೇ, ನಿಶ್ಚಿಂತೆಯಾಗಿ, ಮೂರೂ ಲೋಕಗಳನ್ನೂ ತಮ್ಮದಾಗಿಸಿಕೊಂಡು ಕೃತಕೃತ್ಯರಾಗಿದ್ದರು. ದೇವ-ಗಂಧರ್ವ-ಯಕ್ಷ-ನಾಗ-ಪಾರ್ಥಿವ-ರಾಕ್ಷಸರ ಸರ್ವ ರತ್ನಗಳನ್ನೂ ಪಡೆದು ಪರಾತುಷ್ಟರಾಗಿದ್ದರು. ಪ್ರತಿಸ್ಪರ್ಧಿಗಳು ಯಾರೂ ಎಲ್ಲಿಯೂ ಉಳಿಯದೇ ಇಲ್ಲವಾದುದರಿಂದ ನಿರುದ್ಯೋಗಿಗಳಾದ ಅಮರರಂತೆ ಅವರು ಪುಷ್ಕಲ ಸ್ತ್ರೀಯರು, ಮಾಲೆಗಳು, ಗಂಧ, ಭಕ್ಷ-ಭೋಜ್ಯಗಳಿಂದ ವಿಹರಿಸತೊಡಗಿದರು. ಅಮರರಂತೆ ಅವರು ಅಂತಃಪುರದಲ್ಲಿ, ವನೋದ್ಯಾನಗಳಲ್ಲಿ, ಪರ್ವತ ಉಪವನಗಳಲ್ಲಿ ಮತ್ತು ಮನಬಂದ ಪ್ರದೇಶಗಳಲ್ಲಿ ವಿಹರಿಸಿದರು. ಒಮ್ಮೆ ಅವರು ವಿಂಧ್ಯದ ಹಿಂಬಾಗದಲ್ಲಿ ಸಮಶಿಲಾತಲದಲ್ಲಿ ಹೂಬಿಟ್ಟ ಎತ್ತರ ಶಾಲವೃಕ್ಷಗಳ ಮಧ್ಯೆ ವಿಹರಿಸುತ್ತಿದ್ದರು. ಸರ್ವಕಾಮಗಳನ್ನೂ ಪೂರೈಸಬಲ್ಲ ವಸ್ತುಗಳನ್ನು ಅಲ್ಲಿಗೆ ಕೊಂಡೊಯ್ದಿದ್ದರು. ಸ್ತ್ರೀಯರೊಂದಿಗೆ ಅವರೀರ್ವರು ಸಂಹೃಷ್ಟರಾಗಿ ಶ್ರೇಷ್ಠ ಆಸನಗಳಲ್ಲಿ ಒರಗಿ ಕುಳಿತುಕೊಂಡಿದ್ದರು. ಅಲ್ಲಿ ಅವರನ್ನು ಸಂತೋಷಗೊಳಿಸಲು ಸ್ತ್ರೀಯರು ವಾದ್ಯ ನುಡಿಸುತ್ತಾ, ನೃತ್ಯ ಮಾಡುತ್ತಾ, ಸ್ತುತಿಸಂಯುಕ್ತ ಗೀತೆಗಳನ್ನು ಹಾಡುತ್ತಾ ನಿಂತಿದ್ದರು. ಆಗ ಆ ವನದಲ್ಲಿ ತಿಲೋತ್ತಮೆಯು, ಕಾಮವನ್ನು ಹೆಚ್ಚಿಸುವ ಒಂದೇ ಒಂದು ಕೆಂಪು ವಸ್ತ್ರವನ್ನುಟ್ಟು, ಹೂಗಳನ್ನು ಕೊಯ್ಯುತ್ತಾ ಕಾಣಿಸಿಕೊಂಡಳು. ನದೀತೀರದಲ್ಲಿ ಹುಟ್ಟಿದ್ದ ಕರ್ಣಿಕೆಗಳನ್ನು ಕೊಯ್ಯುತ್ತಾ ಅವಳು ನಿಧಾನವಾಗಿ ಆ ಮಹಾಸುರರು ಇದ್ದ ಸ್ಥಳಕ್ಕೆ ಬಂದಳು. ಶ್ರೇಷ್ಠ ಮದಿರವನ್ನು ಕುಡಿದ ಮದೋನ್ಮತ್ತ ರಕ್ತಾಂತಲೋಚನರು ಆ ವರಾರೋಹೆಯನ್ನು ಕಂಡೊಡನೆಯೇ ವ್ಯಥಿತರಾದರು. ಕಾಮಸಮನ್ವಿತ ಅವರಿಬ್ಬರೂ ತಮ್ಮ ಆಸನಗಳಿಂದ ಜಿಗಿದೆದ್ದು ಅವಳಿದ್ದ ಕಡೆ ಹೋಗಿ ಅವಳನ್ನು ಯಾಚಿಸಿದರು. ಸುಂದನು ಆ ಸುಭ್ರುವಿನ ಎಡಗೈಯನ್ನು ಹಿಡಿದನು ಮತ್ತು ಉಪಸುಂದನು ತಿಲೋತ್ತಮೆಯ ಬಲ ಕೈಯನ್ನು ಹಿಡಿದನು. ವರಪ್ರದಾನಮತ್ತರಾದ, ದೇಹಬಲದಿಂದ ಹಿಗ್ಗಿದ್ದ, ಕೂಡಿಟ್ಟ ಧನರತ್ನಗಳಿಂದ, ಸುರಾಪಾನಮದದಿಂದ, ಹೀಗೆ ಎಲ್ಲ ರೀತಿಗಳಲ್ಲಿ ಹುಚ್ಚಾದ ಅವರು ಅನ್ಯೋನ್ಯರನ್ನು ದುರುಗುಟ್ಟಿ ನೋಡಿದರು. ಆ ಮದಕಾಮಸಮಾವಿಷ್ಟರು ಪರಸ್ಪರರಲ್ಲಿ ಕೂಗಾಡಿದರು. “ನನ್ನ ಹೆಂಡತಿ ನಿನಗೆ ಹಿರಿಯವಳು!” ಎಂದು ಸುಂದನು ಹೇಳಿದನು. “ನನ್ನ ಹೆಂಡತಿ ನಿನಗೆ ಸೊಸೆ!” ಎಂದು ಉಪಸುಂದನು ಹೇಳಿದನು.

ಸಿಟ್ಟಿನಿಂದ ಆವೇಶಗೊಂಡ ಅವರು “ನಿನ್ನವಳಲ್ಲ! ನನ್ನವಳು!” ಎಂದು ಅವಳ ಸಲುವಾಗಿ ಭಯಂಕರ ಗದೆಗಳನ್ನು ಎತ್ತಿಕೊಂಡರು. ಅವರವರ ಭಯಂಕರ ಗದೆಗಳನ್ನು ಹಿಡಿದು ಕಾಮಮೋಹಿತರಾದ ಅವರು ನಾನು ಮೊದಲು ತಾನು ಮೊದಲು ಎನ್ನುತ್ತಾ ಅನ್ಯೋನ್ಯರನ್ನು ಹೊಡೆದರು. ಗದೆಗಳಿಂದ ಹೊಡೆಯಲ್ಪಟ್ಟ ಆ ಭಯಂಕರರು ರಕ್ತಲಿಪ್ತಾಂಗರಾಗಿ ಎರಡು ಸೂರ್ಯಗಳು ನಭದಿಂದ ಬೀಳುವಂತೆ ಭೂಮಿಯ ಮೇಲೆ ಬಿದ್ದರು. ಆಗ ಅಲ್ಲಿದ್ದ ನಾರಿಯರು ಮತ್ತು ದೈತ್ಯಗಣ ಎಲ್ಲವೂ ವಿಷಾದಭಯಕಂಪಿತರಾಗಿ ಪಾತಾಲವನ್ನು ಸೇರಿದರು. ಆಗ ದೇವಮಹರ್ಷಿಗಳನ್ನೊಡಗೊಂಡು ವಿಶುದ್ಧಾತ್ಮ ಪಿತಾಮಹನು ಅಲ್ಲಿಗೆ ಬಂದು ತಿಲೋತ್ತಮೆಯನ್ನು ಸತ್ಕರಿಸಿದನು. ಬ್ರಹ್ಮನು ‘ವರವನ್ನು ಕೇಳು!’ ಎನ್ನಲು ಅವಳು ಬ್ರಹ್ಮನಿಂದ ಪ್ರೀತಿಯನ್ನೇ ವರವನ್ನಾಗಿ ಕೇಳಿದಳು. ಅವಳಿಂದ ಪ್ರೀತನಾದ ಪಿತಾಮಹನು ಹೇಳಿದನು: “ಭಾಮಿನಿ! ಆದಿತ್ಯರಿಂದೊಡಗೂಡಿ ಲೋಕಗಳನ್ನು ಸಂಚರಿಸುತ್ತೀಯೆ! ನಿನ್ನ ತೇಜಸ್ಸಿನಿಂದಾಗಿ ನಿನ್ನನ್ನು ಯಾರೂ ಎಂದೂ ತುಂಬಾ ಹೊತ್ತು ನೋಡಲು ಶಕ್ಯರಾಗುವುದಿಲ್ಲ!” ಅವಳಿಗೆ ಈ ರೀತಿ ವರವನ್ನಿತ್ತು ಸರ್ವಲೋಕಪಿತಮಹ ಪ್ರಭುವು ಇಂದ್ರನಿಗೆ ತ್ರೈಲೋಕ್ಯವನ್ನಿತ್ತು ಬ್ರಹ್ಮಲೋಕಕ್ಕೆ ಹೋದನು. ಈ ರೀತಿ ಎಲ್ಲ ವಿಷಯಗಳಲ್ಲಿಯೂ ಒಟ್ಟಿಗೇ ಒಂದೇ ನಿಶ್ಚಯಗಳನ್ನಿಟ್ಟುಕೊಂಡಿದ್ದ ಆ ದಾನವರು ತಿಲೋತ್ತಮೆಗಾಗಿ ಸಂಕೃದ್ದರಾಗಿ ಅನ್ಯೋನ್ಯರನ್ನು ಸಂಹರಿಸಿದರು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *