ಸಂವರಣ-ತಪತಿ

ಸಂವರಣ-ತಪತಿಯರ ಈ ಕಥೆಯು ವ್ಯಾಸ ಮಹಾಭಾರತದ ಆದಿಪರ್ವದ ಚೈತ್ರರಥ ಪರ್ವ (ಅಧ್ಯಾಯ ೧೬೦-೧೬೩) ದಲ್ಲಿ ಬರುತ್ತದೆ. ಈ ಕಥೆಯನ್ನು ಗಂಧರ್ವ ಅಂಗಾರಪರ್ಣನು ಅರ್ಜುನನಿಗೆ ಪಾಂಡವರು ದ್ರೌಪದಿಯ ಸ್ವಯಂವರಕ್ಕೆ ಪ್ರಯಾಣಿಸುತ್ತಿರುವಾಗ ಮಾರ್ಗದಲ್ಲಿ ಹೇಳಿದನು.

Related imageದಿವಿಯಲ್ಲಿದ್ದುಕೊಂಡು ನಾಕದವರೆಗೂ ತನ್ನ ತೇಜಸ್ಸಿನಿಂದ ಬೆಳಗಿಸುವ ಸೂರ್ಯನಿಗೆ ತಪತೀ ಎಂಬ ಹೆಸರಿನ ಅಸದೃಶಿ ಮಗಳಿದ್ದಳು. ಸಾವಿತ್ರಿಯಿಂದ ವಿವಸ್ವತನಲ್ಲಿ ಹುಟ್ಟಿದ ಈ ತಪತಿಯು ಮೂರೂ ಲೋಕಗಳಲ್ಲಿ ತಪಸ್ಸಿನಿಂದ ಯುಕ್ತಳಾಗಿ ವಿಶ್ರುತಳಾಗಿದ್ದಳು. ಯಾರೇ ದೇವಿಯಾಗಲೀ, ಅಸುರಿಯಾಗಲೀ, ಯಕ್ಷಿಯಾಗಲೀ, ರಾಕ್ಷಸಿಯಾಗಲೀ, ಅಪ್ಸರೆಯಾಗಲೀ, ಗಂಧರ್ವಿಯಾಗಲೀ ಅವಳಷ್ಟು ರೂಪವಂತಳಾಗಿರಲಿಲ್ಲ. ಆ ಭಾಮಿನಿಯು ಸುವಿಭಕ್ತಳಾಗಿದ್ದಳು. ಅನವದ್ಯಾಂಗಿಯಾಗಿದ್ದಳು, ಕಪ್ಪಾದ ಅಗಲ ಕಣ್ಣುಗಳುಳ್ಳವಳಾಗಿದ್ದಳು, ಒಳ್ಳೆಯ ನಡತೆಯುಳ್ಳವಳಾಗಿದ್ದಳು, ಸಾಧ್ವಿಯಾಗಿದ್ದಳು ಮತ್ತು ಸುಂದರ ವೇಷ ಭೂಷಣಗಳನ್ನು ಧರಿಸುತ್ತಿದ್ದಳು. ಸವಿತುವು ರೂಪ, ಶೀಲ, ಕುಲ ಮತ್ತು ಕಲಿಕೆ ಇವ್ಯಾವುದರಲ್ಲಿಯೂ ಅವಳ ಸದೃಶರಾದವ ಈ ಮೂರೂ ಲೋಕಗಳಲ್ಲಿ ಯಾರೂ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದನು. ಅವಳು ಯೌವನವನ್ನು ಹೊಂದಲು ಮಗಳನ್ನು ಕೊಡಬೇಕು ಎನ್ನುವುದನ್ನು ನೋಡಿದ ಅವನು ಅವಳ ಮದುವೆಯ ಕುರಿತು ಯೋಚಿಸುತ್ತಾ ಚಿಂತೆಗೊಳಗಾದನು.

ಆಗ ಅರ್ಕ್ಷಪುತ್ರ ಕುರುಋಷಭ ಬಲಶಾಲಿ ರಾಜ ಸಂವರಣನು ಸದಾ ಅರ್ಘ್ಯ ಮಾಲೆ ಉಪಹಾರಗಳಿಂದ, ಉಪವಾಸ ವ್ರತಗಳಿಂದ ಮತ್ತು ವಿವಿಧ ತಪಸ್ಸುಗಳಿಂದ ನಿಯಮಬದ್ಧನಾಗಿ ಸೂರ್ಯಾರಾಧನೆಯಲ್ಲಿ ತೊಡಗಿದ್ದನು. ಆ ಪೌರವನಂದನನು ವಿನಯದಿಂದ, ಅಹಂಕಾರವಿಲ್ಲದೆ ಶುಚಿರ್ಭೂತನಾಗಿ ಭಕ್ತಿಯಿಂದ ಆ ಅಂಶುಮಂತನನ್ನು ಪೂಜಿಸುತ್ತಿದ್ದನು. ಆಗ ಕೃತಜ್ಞನೂ, ಧರ್ಮಜ್ಞನೂ, ಭುಮಿಯಲ್ಲಿಯೇ ರೂಪದಲ್ಲಿ ಅಸದೃಶನೂ ಆದ ಸಂವರಣನು ತಪತಿಗೆ ಸದೃಶ ಪತಿಯೆಂದು ಸೂರ್ಯನು ಅಭಿಪ್ರಾಯಪಟ್ಟನು. ಆಗ ಅವನು ತನ್ನ ಕನ್ಯೆಯನ್ನು ವಿಶ್ರುತ ಅಭಿಜನ ನೃಪೋತ್ತಮ ಸಂವರಣನಿಗೆ ಕೊಡಲು ಇಚ್ಛಿಸಿದನು.

ದಿವಿಯಲ್ಲಿ ದೀಪ್ತಾಂಶುವು ತನ್ನ ತೇಜಸ್ಸಿನಿಂದ ಹೇಗೆ ಬೆಳಗುತ್ತಾನೋ ಹಾಗೆ ಭುವಿಯಲ್ಲಿ ಮಹೀಪಾಲ ಸಂವರಣನು ಬೆಳಗುತ್ತಿದ್ದನು. ಬ್ರಹ್ಮವಾದಿಗಳು ಹೇಗೆ ಉದಯಿಸುತ್ತಿರುವ ಆದಿತ್ಯನನ್ನು ಅರ್ಚಿಸುತ್ತಾರೋ ಹಾಗೆ ಬ್ರಾಹ್ಮಣರೇ ಮೊದಲಾದ ಪ್ರಜೆಗಳು ಸಂವರಣನನ್ನು ಪೂಜಿಸುತ್ತಿದ್ದರು. ಆ ಶ್ರೀಮಾನ್ ನೃಪತಿಯು ತನ್ನ ಸುಹೃದಯರಿಗೆ ತೋರಿಸುವ ಕಾಂತಿಯಲ್ಲಿ ಸೋಮನಂತಿದ್ದನು ಮತ್ತು ದುಹೃದಯರಿಗೆ ತೋರಿಸಿದ ತೇಜಸ್ಸಿನಲ್ಲಿ ಆದಿತ್ಯನಂತಿದ್ದನು. ಈ ರೀತಿಯ ಗುಣ ಚಾರಿತ್ರ್ಯವುಳ್ಳ ನೃಪತಿಗೆ ಸ್ವಯಂ ತಪನನೇ ತಪತಿಯನ್ನು ಕೊಡಲು ನಿಶ್ಚಯಿಸಿದನು.

ಹೀಗಿರಲು ಭೂವಿಯಲ್ಲಿಯೇ ಅತ್ಯಂತ ಪ್ರಸಿದ್ಧ ಆ ಶ್ರೀಮಾನ್ ರಾಜನು ಒಮ್ಮೆ ಬೇಟೆಯಾಡಲು ಪರ್ವತದ ಉಪವನವೊಂದಕ್ಕೆ ಹೋದನು. ಬೇಟೆಯಾಡುತ್ತಿರುವಾಗ ಆ ರಾಜನ ಅಪ್ರತಿಮ ಕುದುರೆಯು ಹಸಿವು, ಬಾಯಾರಿಕೆ ಮತ್ತು ಆಯಾಸಗಳಿಂದ ಬಳಲಿ ಅಲ್ಲಿಯೇ ಬಿದ್ದು ಸತ್ತುಹೋಯಿತು. ಕುದುರೆಯು ಸಾಯಲು ನೃಪನು ನಡೆದುಕೊಂಡೇ ಆ ಗಿರಿಯಮೇಲೆ ಹೋದನು. ಅಲ್ಲಿ ಅವನು ಲೋಕದಲ್ಲಿಯೇ ಅಸದೃಷಿ ಆಯತಲೋಚನೆ ಕನ್ಯೆಯೋರ್ವಳನ್ನು ನೋಡಿದನು. ಅಲ್ಲಿ ಅವನು ಒಬ್ಬನೇ ಇದ್ದನು. ಅವಳೂ ಒಬ್ಬಳೇ ಇದ್ದಳು. ಆ ಅರಿಮರ್ದನ ನೃಪತಿಶಾರ್ದೂಲನು ಕನ್ಯೆಯನ್ನು ಅವಿಚಲೇಕ್ಷಣನಾಗಿ ನೋಡತೊಡಗಿದನು. ಅವಳ ರೂಪದಿಂದ ಅವಳು ಶ್ರೀಯಿರಬಹುದೆಂದು ನೃಪತಿಯು ತರ್ಕಿಸಿದನು. ಪುನಃ ಅವಳು ಭೂಮಿಯ ಮೇಲೆ ಬಿದ್ದಿರುವ ರವಿಯ ಪ್ರಭೆಯೇ ಇರಬಹುದು ಎಂದು ಯೋಚಿಸಿದನು. ಆ ಅಸಿತಲೋಚನೆಯು ನಿಂತಿದ್ದ ಆ ಗಿರಿಪ್ರದೇಶ, ಅಲ್ಲಿರುವ ವೃಕ್ಷ ಕ್ಷುಪ ಲತೆಗಳ ಜೊತೆಗೆ ಹಿರಣ್ಮಯದಂತೆ ತೋರುತ್ತಿದ್ದವು. ಅವಳನ್ನು ನೋಡಿದ ಅವನು ಸರ್ವ ಪ್ರಾಣಿಗಳ ಸೌಂದರ್ಯವನ್ನು ಅವಹೇಳನ ಮಾಡಿದನು ಮತ್ತು ಆ ರಾಜನು ತನ್ನ ಕಣ್ಣುಗಳು ತಮ್ಮ ಉದ್ದೇಶಗಳ ಫಲವನ್ನು ಹೊಂದಿದವು ಎಂದು ತಿಳಿದನು. ಜನ್ಮಪ್ರಭೃತಿಯಾಗಿ ಏನೆಲ್ಲ ನೋಡಿದ್ದನೋ ರೂಪದಲ್ಲಿ ಅವಳ ಸದೃಶವಾದ ಬೇರೆ ಏನನ್ನೂ ನೋಡಲಿಲ್ಲ ಎಂದು ಆ ಮಹೀಪತಿಯು ತರ್ಕಿಸಿದನು. ಅವಳ ಗುಣಪಾಶಗಳಿಂದ ಅವನ ಬುದ್ಧಿ, ಮನಸ್ಸು ಮತ್ತು ಕಣ್ಣುಗಳು ಬಂಧಿತವಾಗಿ ಅವನು ಆ ಸ್ಥಳದಿಂದ ಚಂಚಲಿಸಲಿಲ್ಲ ಮತ್ತು ಅಲ್ಲಿರುವ ಯಾವುದರ ಪರಿಜ್ಞಾನವೂ ಅವನಿಗಿರಲಿಲ್ಲ. ದೇವಾಸುರಮಾನುಷರ ಲೋಕವನ್ನೆಲ್ಲಾ ಮಥಿಸಿ ಧಾತ್ರಿಯು ಈ ವಿಶಾಲಾಕ್ಷಿಯ ರೂಪವನ್ನು ಆವಿಷ್ಕೃತಗೊಳಿಸಿರಬೇಕು. ಈ ರೀತಿ ರೂಪದ್ರವಿಣಸಂಪನ್ನೆ ಲೋಕದಲ್ಲಿಯೇ ಅಸದೃಶಿ ಕನ್ಯೆಯ ಕುರಿತು ನೃಪ ಸಂವರಣನು ಯೋಚಿಸಿದನು. ಕಲ್ಯಾಣಾಭಿಜನ ನೃಪನು ಆ ಕಲ್ಯಾಣಿಯನ್ನು ನೋಡುತ್ತಲೇ ಅವನ ಮನಸ್ಸು ಕಾಮಮಾರ್ಗಪೀಡಿತವಾಗಿ ಚಿಂತೆಗೊಳಗಾದನು. ಮನ್ಮಥಾಗ್ನಿಯಿಂದ ತೀವ್ರವಾಗಿ ದಹಿಸುತ್ತಿದ್ದ ಆ ನೃಪತಿಯು ಅಪ್ರಗಲ್ಭರಲ್ಲಿ ಪ್ರಗಲ್ಭಳಾದ ಯಶಸ್ವಿನಿಯನ್ನು ಕುರಿತು ಹೇಳಿದನು: “ನೀನು ಯಾರು? ನೀನು ಯಾರವಳು? ರಂಭೋರು! ಇಲ್ಲಿ ಯಾವ ಕಾರಣಕ್ಕಾಗಿ ನಿಂತಿರುವೆ? ನಿರ್ಜನ ಅರಣ್ಯದಲ್ಲಿ ಒಬ್ಬಂಟಿಯಾಗಿ ಏಕೆ ತಿರುಗುತ್ತಿರುವೆ? ಸರ್ವಾಭರಣ ಭೂಷಿತೆಯಾದ ನಿನ್ನ ವಿಭೂಷಣಗಳೆಲ್ಲವೂ ನಿನ್ನನ್ನೇ ಭೂಷಣವನ್ನಾಗಿ ಬಯಸುತ್ತಿರುವಂತಿದೆ. ನೀನು ದೇವಿ ಅಥವಾ ಅಸುರಿ ಅಥವಾ ಯಕ್ಷೀ ಅಥವಾ ರಾಕ್ಷಸೀ ಅಥವಾ ಭೋಗವತೀ ಅಥವಾ ಗಂಧರ್ವಿ ಅಥವಾ ಮಾನುಷಿಯೆಂದು ನನಗೆ ಅನ್ನಿಸುವುದಿಲ್ಲ. ಮತ್ತಕಾಶಿನೀ! ಇದೂವರೆಗೆ ನಾನು ಯಾವ ವರಾಂಗನೆಯರನ್ನು ನೋಡಿದ್ದೆನೋ ಅಥವಾ ಅವರ ಕುರಿತು ಕೇಳಿದ್ದೆನೋ ಅವರಲ್ಲಿ ಯಾರೂ ನಿನ್ನ ಸದೃಶರೆಂದು ನಾನು ತಿಳಿಯುವುದಿಲ್ಲ.”

ಈ ರೀತಿ ಆ ಮಹೀಪಾಲನು ಅವಳಲ್ಲಿ ಮಾತನಾಡಿದನು. ಆದರೆ ಆ ನಿರ್ಜನ ಅರಣ್ಯದಲ್ಲಿ ಅವಳು ಕಾಮಾರ್ತನಿಗೆ ಏನನ್ನೂ ಪ್ರತ್ಯುತ್ತರಿಸಲಿಲ್ಲ. ಆ ಪಾರ್ಥಿವನು ಈ ರೀತಿ ಲಾಲಪಿಸುತ್ತಿರಲು ಆ ಆಯತೇಕ್ಷಣೆಯು ಮೋಡಗಳಲ್ಲಿ ಮಿಂಚಿನಂತೆ ಅಲ್ಲಿಯೇ ಅಂತರ್ಧಾನಳಾದಳು. ಭ್ರಮೆಗೊಳಗಾದವನಂತೆ ಆ ನೃಪತಿಯು ಆ ವನಜಪತ್ರಾಕ್ಷಿಯನ್ನು ವನದಲ್ಲೆಲ್ಲಾ ಹುಡುಕಾಡತೊಡಗಿದನು. ಅವಳನ್ನು ಅಲ್ಲಿ ಕಾಣದಿರಲು ಆ ಕೌರವಶ್ರೇಷ್ಠನು ವಿಲಪಿಸುತ್ತಾ ಸ್ವಲ್ಪ ಹೊತ್ತು ಅಲ್ಲಿಯೇ ನಿಂತುಬಿಟ್ಟನು. ಅವಳು ಅದೃಶ್ಯಳಾದ ನಂತರ ಶತ್ರುಸಂಘಗಳನ್ನು ಕೆಳಗುರುಳಿಸಬಲ್ಲ ನೃಪತಿಯು ಕಾಮಮೋಹಿತನಾಗಿ ಧರಣೀತಲದಲ್ಲಿ ಬಿದ್ದನು.

ಅವನು ಆ ರೀತಿ ಭೂಮಿಯ ಮೇಲೆ ಬೀಳಲು ಆ ಚಾರುಹಾಸಿನೀ ಪೀನಾಯತಶ್ರೋಣಿಯು ಪುನಃ ನೃಪತಿಗೆ ಕಾಣಿಸಿಕೊಂಡಳು. ಆ ಕಲ್ಯಾಣಿಯು ತನ್ನ ಮಧುರ ಮಾತುಗಳಿಂದ ಕಾಮಾಭಿಹತಚೇತನ ಆ ಕುರುಕುಲಕರ ನೃಪತಿಯನ್ನುದ್ದೇಶಿಸಿ ಹೇಳಿದಳು: “ಎದ್ದೇಳು! ಅರಿಂದಮ! ನಿನಗೆ ಮಂಗಳವಾಗಲಿ! ಮೋಹ ಆವಿಷ್ಕೃತನಾಗಿ ಈ ರೀತಿ ಭೂಮಿಯ ಮೇಲೆ ಬೀಳುವುದು ನಿನಗೆ ಅರ್ಹವಾದುದಲ್ಲ.” ಈ ಮಧುರ ಮಾತುಗಳನ್ನು ಕೇಳಿದ ನೃಪತಿಯು ಮೇಲೆ ನೋಡಲು ತನ್ನ ಎದುರೇ ನಿಂತಿದ್ದ ಆ ವಿಪುಲಶ್ರೋಣಿಯನ್ನು ಕಂಡನು. ಆಗ ಮನ್ಮಥಾಗ್ನಿ ಪರೀತಾತ್ಮ ಆ ನರಾಧಿಪನು ತಾಮಸಿತಾ ಅಪಾಂಗಿಗೆ ಸಂದಿಗ್ಧಾಕ್ಷರಗಳನ್ನೊಡಗೂಡಿದ ಮಾತಿನಿಂದ ಉತ್ತರಿಸಿದನು: “ಮತ್ತಕಾಶಿನೀ! ಕಾಮಾರ್ತನಾದ ನನ್ನನ್ನು ಪ್ರೀತಿಸು. ಬಯಸುತ್ತಿರುವ ನನ್ನನ್ನು ಬಯಸು. ನನ್ನ ಪ್ರಾಣವೇ ನನ್ನನ್ನು ತೊರೆಯುತ್ತಿದೆ. ಕಾಮದ ಈ ನಿಶಿತ ಶರಗಳು ನಿನ್ನಿಂದಾಗಿ ನನ್ನನ್ನು ಚುಚ್ಚುವುದನ್ನು ನಿಲ್ಲಿಸುತ್ತಲೇ ಇಲ್ಲ. ಕಾಮದ ವಿಷದಿಂದ ಗ್ರಸ್ತನಾಗಿದ್ದೇನೆ. ಶುಭಾನನೇ! ನನ್ನನ್ನು ತೃಪ್ತಿಗೊಳಿಸು. ನನ್ನ ಈ ಪ್ರಾಣವು ಕಿನ್ನರರ ಗೀತಭಾಷಿಣಿ ನಿನ್ನ ಅಧೀನವಾಗಿದೆ. ನಿನ್ನ ಹೊರತಾಗಿ ನಾನು ನಾನೇ ಜೀವಿತವಿರಲು ಶಕ್ಯನಿಲ್ಲ. ಆದುದರಿಂದ ನನ್ನ ಮೇಲೆ ಅನುಕ್ರೋಶವನ್ನು ತೋರು. ಭಕ್ತನಾದ ನನ್ನನ್ನು ತ್ಯಜಿಸಬೇಡ. ಭಾಮಿನೀ! ನೀನೇ ನನ್ನನ್ನು ಪ್ರೀತಿಯೋಗದಿಂದ ಉದ್ಧಾರ ಮಾಡಬಹುದು. ಸುಂದರಿ! ಗಾಂಧರ್ವ ವಿವಾಹದಿಂದಲೇ ನನ್ನವಳಾಗು. ವಿವಾಹಗಳಲ್ಲಿಯೇ ಗಂಧರ್ವ ವಿವಾಹವು ಶ್ರೇಷ್ಠವೆಂದು ಹೇಳುತ್ತಾರೆ.”

ತಪತಿಯು ಹೇಳಿದಳು: “ರಾಜನ್! ನನ್ನ ಒಡತಿ ನಾನಲ್ಲ. ನನ್ನ ತಂದೆಯು ಇದ್ದಾನೆ. ನನ್ನಲ್ಲಿ ನಿನ್ನ ಪ್ರೀತಿಯಿದ್ದರೆ ನನ್ನ ತಂದೆಯಲ್ಲಿ ಕೇಳಿಕೋ. ನಿನ್ನ ಪ್ರಾಣವು ಹೇಗೆ ನನ್ನಿಂದ ಬಂಧಿಸಲ್ಪಟ್ಟಿದೆಯೋ ಅದೇರೀತಿ ನಿನ್ನನ್ನು ನೋಡಿದ ಕ್ಷಣದಿಂದ ನನ್ನ ಪ್ರಾಣವನ್ನೂ ನೀನು ಅಪಹರಿಸಿದ್ದೀಯೆ. ನಾನು ನನ್ನ ಈ ದೇಹದ ಒಡತಿಯಲ್ಲ. ಆದುದರಿಂದ ನಿನ್ನ ಸಮೀಪ ಬರಲಾರೆನು. ಕನ್ಯೆಯು ಸ್ವತಂತ್ರಳಲ್ಲ. ಆದರೆ ಯಾವ ಕನ್ಯೆಯು ತಾನೆ ಸರ್ವ ಲೋಕಗಳಲ್ಲಿಯೂ ವಿಶ್ರುತ ಕುಲದಲ್ಲಿ ಜನಿಸಿದ ನೃಪನನ್ನು ತನ್ನ ನಾಥ, ಭಕ್ತವತ್ಸಲ ಭರ್ತಾರನನ್ನಾಗಿ ಅಭಿಲಾಷಿಸುವುದಿಲ್ಲ? ಆದುದರಿಂದ ಈಗ ಸಮಯ ಬಂದಿರುವುದರಿಂದ ನನ್ನ ತಂದೆ ಆದಿತ್ಯನಲ್ಲಿ ಪ್ರಣಿಪಾತ, ತಪಸ್ಸು ಮತ್ತು ನಿಯಮಗಳಿಂದ ಬೇಡಿಕೋ. ಒಂದು ವೇಳೆ ಅವನು ನನ್ನನ್ನು ನಿನಗೆ ಕೊಡಲು ಬಯಸಿದರೆ ಸತತವಾಗಿಯೂ ನಿನ್ನ ವಶವರ್ತಿನಿಯಾಗಿರುತ್ತೇನೆ. ನಾನು ಈ ಲೋಕಪ್ರದೀಪ ಸವಿತುವಿನ ಮಗಳು, ಸಾವಿತ್ರಿಯ ತಂಗಿ. ನನ್ನ ಹೆಸರು ತಪತೀ.”

ಹೀಗೆ ಹೇಳಿದ ತಕ್ಷಣವೇ ಆ ಅನಿಂದಿತೆಯು ಮೇಲೆ ಹೋದಳು ಮತ್ತು ರಾಜನು ಪುನಃ ಅಲ್ಲಿಯೇ ಭೂಮಿಯ ಮೇಲೆ ಬಿದ್ದನು. ಅವನ ಅಮಾತ್ಯ ಮತ್ತು ಅನುಯಾಯಿಗಳು ಆ ಮಹಾವನದಲ್ಲಿ ಕಾಲದಲ್ಲಿ ಶಕ್ರಧ್ವಜವು ಬಿದ್ದಂತೆ ಭೂಮಿಯ ಮೇಲೆ ಮೂರ್ಛಿತನಾಗಿ ಬಿದ್ದಿದ್ದ ಅವನನ್ನು ಕಂಡರು. ಬೆಳಗುತ್ತಿರುವ ಅಗ್ನಿಯಂತೆ ನಿರಶ್ವನಾಗಿ ಕ್ಷಿತಿಯಲ್ಲಿ ಬಿದ್ದಿರುವ ಮಹೇಷ್ವಾಸನನ್ನು ನೋಡಿದ ಅವನನ್ನು ಅವನ ಸಚಿವನು ನೋಡಿದನು. ತ್ವರೆಮಾಡಿ ಅವನ ಬಳಿ ಹೋಗಿ ಸ್ನೇಹಭಾವದಿಂದ ಸಂಭ್ರಮಗೊಂಡು ಪ್ರಜ್ಞೆ, ವಯಸ್ಸು, ಕೀರ್ತಿ ಮತ್ತು ದಮದಲ್ಲಿ ವೃದ್ಧನಾಗಿದ್ದ ಅವನು ಕಾಮಮೋಹಿತ ನೃಪತಿಯನ್ನು ಭೂಮಿಯ ಮೇಲೆ ಬಿದ್ದಿರುವ ಸುತನನ್ನು ತಂದೆಯು ಹೇಗೋ ಹಾಗೆ ಭೂಮಿಯಿಂದ ಮೇಲಕ್ಕೆ ಎತ್ತಿದನು. ಅವನನ್ನು ಮೇಲಕ್ಕೆತ್ತಿದ ಅಮಾತ್ಯನು ಉದ್ವೇಗವು ಹೊರಟುಹೋಗಿ ಎದ್ದುನಿಂತಿರುವ ಕಲ್ಯಾಣಕರನಿಗೆ ಈ ರೀತಿಯ ಮಧುರ ಮಾತುಗಳನ್ನಾಡಿದನು: “ಮನುಜಶಾರ್ದೂಲ! ಭಯಪಡಬೇಡ! ಎಲ್ಲವೂ ಮಂಗಳಕರವಾಗುತ್ತದೆ.” ಹಲವಾರು ಶತ್ರುಗಳನ್ನು ರಣರಂಗದಲ್ಲಿ ಬೀಳಿಸುವ ನೃಪನು ಹಸಿವು ಬಾಯಾರಿಕೆಗಳಿಂದ ಬಳಲಿ ಮಹೀತಲದಲ್ಲಿ ಬಿದ್ದಿದ್ದಾನೆ ಎಂದು ಅವನು ಯೋಚಿಸಿದನು. ರಾಜನ ಮುಕುಟವನ್ನು ಮುಟ್ಟದೆಯೇ ಅವನು ಪುಂಡರೀಕಸುಗಂಧಿತ ತಣ್ಣನೆಯ ನೀರನ್ನು ಅವನ ತಲೆಯ ಮೇಲೆ ಸಿಂಚಿಸಿದನು. ಪುನಃ ಚೇತರಿಸಿಕೊಂಡ ಬಲವಾನ್ ನೃಪನು ತನ್ನ ಸಚಿವ ಮಾತ್ರನನ್ನು ಬಿಟ್ಟು ಉಳಿದ ಎಲ್ಲ ಬಲವನ್ನೂ ವಿಸರ್ಜಿಸಿದನು. ರಾಜನ ಆಜ್ಞೆಯಂತೆ ಆ ಮಹಾಬಲವು ಹೊರಟುಹೋದ ನಂತರ ರಾಜನು ಪುನಃ ಗಿರಿಪ್ರಸ್ಥದಲ್ಲಿ ಕುಳಿತುಕೊಂಡನು. ಆಗ ಆ ಗಿರಿವರದಲ್ಲಿ ಅವನು ಶುಚಿರ್ಭೂತನಾಗಿ ಅಂಜಲೀಬದ್ಧನಾಗಿ ಭುಜಗಳನ್ನು ಮೇಲಕ್ಕೆತ್ತಿ ಸೂರ್ಯನನ್ನು ಆರಾಧಿಸುತ್ತಾ ನಿಂತುಕೊಂಡನು.

ಆ ಅಮಿತ್ರಘ್ನ ನೃಪ ಸಂವರಣನು ತನ್ನ ಪುರೋಹಿತ ಋಷಿಸತ್ತಮ ವಸಿಷ್ಠನನ್ನು ಮನಸ್ಸಿನಲ್ಲಿಯೇ ನೆನೆಸಿಕೊಂಡನು. ಹನ್ನೆರಡು ದಿನಗಳ ಪರ್ಯಂತ ಆ ಜನಾಧಿಪನು ಅದೇ ಸ್ಥಳದಲ್ಲಿ ನಿಂತುಕೊಂಡಿದ್ದನು. ಹನ್ನೆರಡನೆಯ ದಿನ ಆ ವಿಪ್ರರ್ಷಿಯು ಅಲ್ಲಿಗೆ ಬಂದನು. ನೃಪತಿಯು ತಪತಿಯಲ್ಲಿ ಮನಸ್ಸನ್ನು ಕಳೆದುಕೊಂಡಿದ್ದಾನೆ ಎಂದು ದಿವ್ಯ ವಿಧಿಯಿಂದ ಆ ಭಾವಿತಾತ್ಮ ಮಹಾನೃಷಿಯು ತಿಳಿದುಕೊಂಡನು. ಆಗ ಅವನಿಗೆ ಒಳ್ಳೆಯದನ್ನೇ ಮಾಡಬೇಕೆಂದು ಬಯಸಿದ ಆ ಧರ್ಮಾತ್ಮನು ನಿಯತಾತ್ಮ ನೃಪತಿಸತ್ತಮನಲ್ಲಿ ಮಾತನಾಡಿದನು. ಆ ಮನುಜೇಂದ್ರನು ನೋಡುತ್ತಿದ್ದಂತೆಯೇ ಭಗವಾನೃಷಿಯು ಭಾಸ್ಕರದ್ಯುತಿ ಭಾಸ್ಕರನನ್ನು ನೋಡಲು ಮೇಲೆ ಹೋದನು. ಆಗ ಸಹಸ್ರಾಂಶುವಲ್ಲಿ ಕೃತಾಂಜಲಿಯಾಗಿ ನಿಂತು ವಿಪ್ರನು “ನಾನು ವಸಿಷ್ಠ!” ಎಂದು ತನ್ನನ್ನು ತಾನೇ ನಿವೇದಿಸಿದನು. ಆಗ ಮಹಾತೇಜಸ್ವಿ ವಿವಸ್ವತನು ಆ ಮುನಿಸತ್ತಮನಿಗೆ “ಮಹರ್ಷೇ! ನಿನಗೆ ಸ್ವಾಗತವು! ಏನನ್ನು ಇಚ್ಛಿಸಿ ಬಂದೆ ಹೇಳು” ಎಂದನು.

ವಸಿಷ್ಠನು ಹೇಳಿದನು: “ವಿಭಾವಸೋ! ಸಂವರಣನಿಗಾಗಿ ತಪತೀ ಎಂಬ ಹೆಸರಿನ ನಿನ್ನ ಮಗಳು ಮತ್ತು ಸಾವಿತ್ರಿಯ ತಂಗಿಯನ್ನು ಕೇಳಿಕೊಂಡು ಬಂದಿದ್ದೇನೆ. ಉದಾರ ಮನಸ್ಕನಾದ, ಬೃಹತ್ಕೀರ್ತಿ, ಧರ್ಮ, ಮತ್ತು ಅರ್ಥವನ್ನು ಹೊಂದಿರುವ ರಾಜ ಸಂವರಣನು ನಿನ್ನ ಮಗಳಿಗೆ ಯೋಗ್ಯ ವರನಾಗುತ್ತಾನೆ.”

ಅವಳನ್ನು ಅವನಿಗೇ ಕೊಡಬೇಕೆಂದು ಮೊದಲೇ ನಿಶ್ಚಯಿಸಿದ್ದ ಸವಿತು ದಿವಾಕರನು ಆ ವಿಪ್ರನನ್ನು ನಮಸ್ಕರಿಸಿ ಉತ್ತರಿಸಿದನು: “ನೀನು ಋಷಿಗಳಲ್ಲಿ ಶ್ರೇಷ್ಠನು ಹೇಗೋ ಹಾಗೆ ರಾಜರಲ್ಲಿ ಸಂವರಣನು ಶ್ರೇಷ್ಠ ಮತ್ತು ಕನ್ಯೆಯರಲ್ಲಿ ತಪತಿಯು ಶ್ರೇಷ್ಠೆ. ಹೀಗಿರುವಾಗ ಅವಳನ್ನು ಬೇರೆ ಎಲ್ಲಿ ಯಾಕೆ ಕೊಡಬೇಕು?” ಆಗ ಸ್ವಯಂ ತಪನನು ಸರ್ವಾನವದ್ಯಾಂಗಿ ತಪತಿಯನ್ನು ಸಂವರಣನಿಗಾಗಿ ಮಹಾತ್ಮ ವಸಿಷ್ಠನಿಗೆ ಕೊಟ್ಟನು. ಮಹರ್ಷಿಯು ಕನ್ಯೆ ತಪತಿಯನ್ನು ಸ್ವೀಕರಿಸಿದನು. ಅವನಿಂದ ಬೀಳ್ಕೊಂಡ ವಸಿಷ್ಠನು ಪುನಃ ವಿಖ್ಯಾತಕೀರ್ತಿ ಕುರುಗಳ ವೃಷಭನಿದ್ದಲ್ಲಿಗೆ ಬಂದನು. ಮನ್ಮಥಾವಿಷ್ಟನಾಗಿ ಅಂತರಾತ್ಮವನ್ನೇ ಅವಳೊಡನೆ ಕಳುಹಿಸಿಕೊಟ್ಟಿದ್ದ ರಾಜನು ವಸಿಷ್ಠನೊಡನೆ ಬಂದಿದ್ದ ಚಾರುಹಾಸಿನಿ ದೇವಕನ್ಯೆ ತಪತಿಯನ್ನು ನೋಡಿ ಅತ್ಯಧಿಕ ಹರ್ಷಗೊಂಡನು. ರಾಜನು ದ್ವಾದಶ ರಾತ್ರಿಗಳ ಕೃಚ್ಛ್ರವನ್ನು ಪೂರೈಸುತ್ತಿದ್ದಂತೆಯೇ ವಿಶುದ್ಧಾತ್ಮ ಭಗವಾನೃಷಿ ವಸಿಷ್ಠನು ಬಂದನು. ವರದ, ದೇವ, ಗೋಪತಿ, ಈಶ್ವರನನ್ನು ತಪಸ್ಸಿನಿಂದ ಆರಾಧಿಸಿ ವಸಿಷ್ಠನ ತೇಜಸ್ಸಿನಿಂದ ಸಂವರಣನು ಭಾರ್ಯೆಯನ್ನು ಪಡೆದನು. ದೇವಗಂಧರ್ವಸೇವಿತ ಆ ಶ್ರೇಷ್ಠ ಗಿರಿಯಲ್ಲಿಯೇ ಆ ನರರ್ಷಭನು ವಿಧಿವತ್ತಾಗಿ ತಪತಿಯ ಪಾಣಿಗ್ರಹಣ ಮಾಡಿದನು. ವಸಿಷ್ಠನ ಅನುಜ್ಞೆಯನ್ನು ಪಡೆದು ಆ ರಾಜರ್ಷಿಯು ತನ್ನ ಭಾರ್ಯೆಯೊಂದಿಗೆ ಅದೇ ಧರಾಧರದಲ್ಲಿ ಕಾಮಿಸಿದನು. ಮಹೀಪಾಲನು ಅದೇ ಸಚಿವನನ್ನು ಪುರ, ರಾಷ್ಟ್ರ, ವಾಹನ ಮತ್ತು ಸೇನೆಗಳ ಮೇಲ್ವಿಚಾರಣೆಗೆ ನೇಮಿಸಿದನು. ನೃಪತಿಯಿಂದ ಬೀಳ್ಕೊಂಡ ವಸಿಷ್ಠನು ಹಿಂದಿರುಗಿದನು.

ರಾಜನಾದರೂ ಆ ಗಿರಿಯಲ್ಲಿ ಅಮರನಂತೆ ವಿಹರಿಸಿದನು. ರಾಜನು ತನ್ನ ಪತ್ನಿಯೊಡನೆ ಹನ್ನೆರಡು ವರ್ಷಗಳು ಆ ಗಿರಿಯ ಕಾನನಗಳಲ್ಲಿ ಮತ್ತು ಜಲದಲ್ಲಿ ರಮಿಸಿದನು. ಆ ರಾಜನ ಪುರ ಮತ್ತು ರಾಷ್ಟ್ರದ ಎಲ್ಲೆಡೆಯಲ್ಲಿಯೂ ಹನ್ನೆರಡು ವರ್ಷಗಳ ಪರ್ಯಂತ ಸಹಸ್ರಾಕ್ಷನು ಮಳೆಯನ್ನು ಸುರಿಸಲಿಲ್ಲ. ಬರಗಾಲ ಪೀಡಿತರಾಗಿ ಸುಖವನ್ನೇ ಕಾಣದ ನರರು ಶವಗಳಾಗಿ ಪ್ರೇತರಾಜನ ಪುರವನ್ನು ಮುತ್ತುವಂತೆ ಮುತ್ತಿಗೆ ಹಾಕಿದರು. ಆ ದೃಶ್ಯವನ್ನು ನೋಡಿದ ಧರ್ಮಾತ್ಮ ಭಗವಾನೃಷಿ ವಸಿಷ್ಠನು ರಾಜಶರ್ದೂಲನಿದ್ದಲ್ಲಿಗೆ ಹೋಗಿ ಹನ್ನೆರಡು ವರ್ಷಗಳು ರಾಜ್ಯದಿಂದ ಹೊರಗೆ ವಾಸಿಸುತ್ತಿದ್ದ ಆ ಪಾರ್ಥಿವ ಶಾರ್ದೂಲನನ್ನು ತಪತಿಯ ಸಹಿತ ಪುರಕ್ಕೆ ಮರಳಿ ಕರೆತಂದನು. ಆ ನೃಪತಿಶಾರ್ದೂಲನು ಪುನಃ ನಗರವನ್ನು ಪ್ರವೇಶಿಸಿದ ನಂತರ ಸುರಾರಿಹನು ಅಲ್ಲಿ ಮೊದಲಿನಂತೆಯೇ ಮಳೆಯನ್ನು ಸುರಿಸಿದನು. ಭಾವಿತಾತ್ಮ ಪಾರ್ಥಿವ ಮುಖ್ಯನ ಮೂಲಕ ಅವರ ರಾಷ್ಟ್ರ ಮತ್ತು ಪುರವು ಪರಮ ಸಂತಸವನ್ನು ಹೊಂದಿತು. ಪತ್ನಿ ತಪತಿಯ ಸಹಿತ ನರಾಧಿಪನು ಇನ್ನೂ ಹನ್ನೆರಡು ವರ್ಷಗಳು ಮರುತ್ಪತಿ ಶಕ್ರನ ಹಾಗೆ ಯಜ್ಞಗಳನ್ನು ನೆರವೇರಿಸಿದನು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ವಸಿಷ್ಠೋಪಾಽಖ್ಯಾನ
  9. ಔರ್ವೋಪಾಽಖ್ಯಾನ
  10. ಸುಂದೋಪಸುಂದೋಪಾಽಖ್ಯಾನ
  11. ಸಾರಂಗಗಳು
  12. ಸೌಭವಧೋಪಾಽಖ್ಯಾನ
  13. ನಲೋಪಾಽಖ್ಯಾನ
  14. ಅಗಸ್ತ್ಯೋಪಾಽಖ್ಯಾನ
  15. ಭಗೀರಥ
  16. ಋಷ್ಯಶೃಂಗ
  17. ಪರಶುರಾಮ
  18. ಚ್ಯವನ
  19. ಮಾಂಧಾತ
  20. ಸೋಮಕ-ಜಂತು
  21. ಗಿಡುಗ-ಪಾರಿವಾಳ
  22. ಅಷ್ಟಾವಕ್ರ
  23. ರೈಭ್ಯ-ಯವಕ್ರೀತ
  24. ತಾರ್ಕ್ಷ್ಯ ಅರಿಷ್ಠನೇಮಿ
  25. ಅತ್ರಿ
  26. ವೈವಸ್ವತ ಮನು
  27. ಮಂಡೂಕ-ವಾಮದೇವ
  28. ಧುಂಧುಮಾರ
  29. ಮಧು-ಕೈಟಭ ವಧೆ
  30. ಕಾರ್ತಿಕೇಯನ ಜನ್ಮ
  31. ಮುದ್ಗಲ
  32. ರಾಮೋಪಾಽಖ್ಯಾನ: ರಾಮಕಥೆ
  33. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  34. ಇಂದ್ರವಿಜಯೋಪಾಽಖ್ಯಾನ
  35. ದಂಬೋದ್ಭವ
  36. ಮಾತಲಿವರಾನ್ವೇಷಣೆ
  37. ಗಾಲವ ಚರಿತೆ
  38. ವಿದುಲೋಪಾಽಖ್ಯಾನ
  39. ತ್ರಿಪುರವಧೋಪಾಽಖ್ಯಾನ
  40. ಪರಶುರಾಮನು ಅಸ್ತ್ರಗಳನ್ನು ಪಡೆದುದು
  41. ಪ್ರಭಾಸಕ್ಷೇತ್ರ ಮಹಾತ್ಮೆ
  42. ತ್ರಿತಾಖ್ಯಾನ
  43. ಸಾರಸ್ವತೋಪಾಽಖ್ಯಾನ
  44. ವಿಶ್ವಾಮಿತ್ರ
  45. ವಸಿಷ್ಠಾಪವಾಹ ಚರಿತ್ರೆ
  46. ಬಕ ದಾಲ್ಭ್ಯನ ಚರಿತ್ರೆ
  47. ಕಪಾಲಮೋಚನತೀರ್ಥ ಮಹಾತ್ಮೆ
  48. ಮಂಕಣಕ
  49. ವೃದ್ಧಕನ್ಯೆ
  50. ಬದರಿಪಾಚನ ತೀರ್ಥ
  51. ಕುಮಾರನ ಪ್ರಭಾವ-ಅಭಿಷೇಕ
  52. ಅಸಿತದೇವಲ-ಜೇಗೀಷವ್ಯರ ಕಥೆ
  53. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  54. ಕುರುಕ್ಷೇತ್ರ ಮಹಾತ್ಮೆ
  55. ಶಂಖಲಿಖಿತೋಪಾಽಖ್ಯಾನ
  56. ಜಾಮದಗ್ನೇಯೋಪಾಽಖ್ಯಾನ
  57. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *