ಔರ್ವೋಪಾಽಖ್ಯಾನ

ಔರ್ವನ ಈ ಕಥೆಯು ವ್ಯಾಸ ಮಹಾಭಾರತದ ಆದಿಪರ್ವದ ಚೈತ್ರರಥ ಪರ್ವ (ಅಧ್ಯಾಯ ೧೬೯-೧೭೧) ದಲ್ಲಿ ಬರುತ್ತದೆ. ಈ ಕಥೆಯನ್ನು ವಸಿಷ್ಠನು ರಾಕ್ಷಸರ ಮೇಲೆ ಕುಪಿತಗೊಂಡ ಮೊಮ್ಮಗ ಪರಾಶರನಿಗೆ ಹೇಳಿದನು.

Related imageಭೂಮಿಯಲ್ಲಿ ಹಿಂದೆ ಕೃತವೀರ್ಯ ಎಂದು ಖ್ಯಾತಗೊಂಡ ಪಾರ್ಥಿವರ್ಷಭ ನೃಪತಿಯು ಇದ್ದನು. ಅವನು ಲೋಕದಲ್ಲಿ ವೇದವಿದರಾದ ಭೃಗುಗಳನ್ನು ಯಾಜಕರನಾಗಿರಿಸಿದ್ದನು. ಸೋಮಯಾಗದ ಅಂತ್ಯದಲ್ಲಿ ವಿಶಾಂಪತಿಯು ಆ ಅಗ್ರಭುಜರಿಗೆ ವಿಪುಲ ಧನ ಧಾನ್ಯಗಳನ್ನಿತ್ತು ತೃಪ್ತಿಪಡಿಸಿದನು. ಈ ನೃಪತಿಶಾರ್ದೂಲನು ಸ್ವರ್ಗವಾಸಿಯಾದ ನಂತರ ಅವನ ಕುಲದವರಿಗೆ ದ್ರವ್ಯದ ಅವಶ್ಯಕತೆಯುಂಟಾಯಿತು. ಭೃಗುಗಳಲ್ಲಿರುವ ಸಂಪತ್ತನ್ನು ತಿಳಿದ ಆ ಎಲ್ಲ ರಾಜರುಗಳೂ ಭಾರ್ಗವಸತ್ತಮರಲ್ಲಿ ಸಂಪತ್ತನ್ನು ಕೇಳಿಕೊಂಡರು. ಕ್ಷತ್ರಿಯರ ಭಯದಿಂದ ಭೃಗುಗಳಲ್ಲಿ ಕೆಲವರು ಸಂಪತ್ತನ್ನು ಭೂಮಿಯಲ್ಲಿ ಹುಗಿದಿಟ್ಟರು. ಕೆಲವರು ಬ್ರಾಹ್ಮಣರಿಗೆ ದಾನವನ್ನಿತ್ತರು. ಭೃಗುಗಳಲ್ಲಿಯೂ ಕೆಲವರು, ಅದರ ಲಾಭವನ್ನು ಯೋಚಿಸಿ, ಕ್ಷತ್ರಿಯರಿಗೆ ಅವರು ಇಷ್ಟಪಟ್ಟಷ್ಟು ವಿತ್ತವನ್ನು ನೀಡಿದರು. ಒಮ್ಮೆ ಕ್ಷತ್ರಿಯರು ಮಹೀತಲವನ್ನು ಅಗೆಯುತ್ತಿದ್ದಾಗ ಎಲ್ಲಿಯೋ ಒಂದು ಕಡೆ ಭೃಗುವಿನ ಮನೆಯಲ್ಲಿ ವಿತ್ತವು ದೊರೆಯಿತು. ಕ್ಷತ್ರಿಯರ್ಷಭರೆಲ್ಲರೂ ಸೇರಿ ಆ ವಿತ್ತವನ್ನು ನೋಡಿದರು. ಅನಂತರ ಕೋಪ ಮತ್ತು ಅಪಮಾನದಿಂದ ಭೃಗುಗಳನ್ನೆಲ್ಲರನ್ನೂ, ಅವರು ಶರಣು ಬಂದರೂ, ತೀಕ್ಷ್ಣ ಶರಗಳಿಂದ ಹೊಡೆದು ಕೊಂದರು. ಅವರು ಭೂಮಿಯನ್ನೆಲ್ಲಾ ತಿರುಗಾಡಿ ಗರ್ಭದಲ್ಲಿರುವ ಮಕ್ಕಳನ್ನೂ ಬಿಡದೇ ಎಲ್ಲ ಭೃಗುಗಳನ್ನೂ ಕೊಂದರು. ಈ ರೀತಿ ಭೃಗುಗಳ ಕೊಲೆಯಾಗುತ್ತಿರಲು ಭೃಗು ಪತ್ನಿಯರು ಭಯದಿಂದ ಹಿಮವತ್ ಗಿರಿಯನ್ನು ಸೇರಿದರು.

ಅವರಲ್ಲಿಯೇ ಓರ್ವ ವಾಮೋರುವು ತನ್ನ ಪತಿಯ ಕುಲವೃದ್ಧಿಗೋಸ್ಕರ ಕಂಡುಹಿಡಿದುಬಿಡುತ್ತಾರೋ ಎನ್ನುವ ಭಯದಿಂದ ತನ್ನ ಗರ್ಭವನ್ನು ತೊಡೆಯಲ್ಲಿ ಇರಿಸಿಕೊಂಡಿದ್ದಳು. ಸ್ವತೇಜಸ್ಸಿನಿಂದ ದೀಪ್ಯಮಾನಳಾಗಿದ್ದ ಆ ಬ್ರಾಹ್ಮಣಿಯನ್ನು ಕಂಡರು. ಆಗ ಆ ಗರ್ಭವು ಬ್ರಾಹ್ಮಣಿಯ ತೊಡೆಯನ್ನು ಸೀಳಿ ಮಧ್ಯಾಹ್ನದ ಭಾಸ್ಕರನಂತೆ ಕ್ಷತ್ರಿಯರ ದೃಷ್ಟಿಯನ್ನು ಕುರುಡುಮಾಡುತ್ತಾ ಹೊರಬಂದಿತು. ಕಣ್ಣು ಕುರುಡಾದ ಅವರು ಗಿರಿದುರ್ಗಗಳಲ್ಲಿ ಅಲೆಯತೊಡಗಿದರು. ತಮ್ಮ ಉದ್ದೇಶಗಳು ಪೂರೈಸದೇ ಇದ್ದುದರಿಂದ ಭಯಾರ್ತ ಕ್ಷತ್ರಿಯರ್ಷಭರು ತಮ್ಮ ದೃಷ್ಟಿಯನ್ನು ಪಡೆಯಲು ಅನಿಂದಿತೆ ಬ್ರಾಹ್ಮಣಿಯನ್ನು ಶರಣು ಹೊಕ್ಕರು. ಆರಿಹೋದ ಅಗ್ನಿಯಂತೆ ಕಣ್ಣಿನ ಜ್ಯೋತಿಯನ್ನೇ ಕಳೆದುಕೊಂಡು ವಿಚೇತಸ ಕ್ಷತ್ರಿಯರು ಆ ಮಹಾಭಾಗೆಯಲ್ಲಿ ಹೇಳಿದರು: “ನಿನ್ನ ಕರುಣೆಯಿಂದ ಕ್ಷತ್ರಿಯರಿಗೆ ದೃಷ್ಟಿಯು ಹಿಂದಿರುಗಿ ಬರಲಿ. ನಾವೆಲ್ಲರೂ ಒಟ್ಟಿಗೇ ಪಾಪಕರ್ಮಗಳನ್ನು ನಿಲ್ಲಿಸಿ ಹೊರಟು ಹೋಗುತ್ತೇವೆ. ಪುತ್ರನ ಸಹಿತ ನೀನು ನಮ್ಮೆಲ್ಲರಿಗೂ ಕರುಣೆ ತೋರಿಸಬೇಕು. ಪುನಃ ದೃಷ್ಟಿಯನ್ನಿತ್ತು ರಾಜರುಗಳನ್ನು ಉಳಿಸಬೇಕು.”

ಬ್ರಾಹ್ಮಣಿಯು ಹೇಳಿದಳು: “ನಾನೇನೂ ನಿಮ್ಮ ಕಣ್ಣುಗಳನ್ನು ತೆಗೆದುಕೊಂಡಿಲ್ಲ ಆಥವಾ ನಾನು ರೋಶಾನ್ವಿತಳೂ ಆಗಿಲ್ಲ. ನನ್ನ ತೊಡೆಯಿಂದ ಹುಟ್ಟಿದ ಈ ಭಾರ್ಗವನು ನಿಮ್ಮ ಮೇಲೆ ಕುಪಿತನಾಗಿದ್ದಾನೆ. ಅವನೇ ನಿಮ್ಮ ಕಣ್ಣುಗಳನ್ನು ತೆಗೆದುಕೊಂಡ. ಏಕೆಂದರೆ ಅವನ ಬಂಧುಗಳ ವಧೆಗೈದ ನಿಮ್ಮನ್ನು ನೆನಪಿಸಿಕೊಂಡು ಆ ಮಹಾತ್ಮನು ನಿಸ್ಸಂಶಯವಾಗಿ ನಿಮ್ಮ ಮೇಲೆ ಕುಪಿತನಾಗಿರಬಹುದು. ಗರ್ಭದಲ್ಲಿರುವ ಭೃಗು ಮಕ್ಕಳನ್ನು ನೀವು ಕೊಲ್ಲುತ್ತಿದ್ದುದರಿಂದ ನಾನು ನನ್ನ ಈ ಗರ್ಭವನ್ನು ಒಂದು ನೂರು ವರ್ಷಗಳ ಪರ್ಯಂತ ನನ್ನ ತೊಡೆಯಲ್ಲಿಯೇ ಇರಿಸಿಕೊಂಡಿದ್ದೆ. ಭವಿಷ್ಯದಲ್ಲಿ ಭೃಗುವಂಶಕ್ಕೆ ಒಳ್ಳೆಯದಾಗಲೆಂದು ಗರ್ಭಧಾರಣೆಯ ಸಮಯದಲ್ಲಿಯೇ ಷಡಂಗಸಮೇತ ಅಖಿಲ ವೇದವೂ ಇವನನ್ನು ಪ್ರವೇಶಿಸಿತ್ತು. ಪಿತೃವಧೆಗೈದವರನ್ನು ಕ್ರೋಧದಿಂದ ಕೊಲ್ಲಲ್ಲು ಬಯಸುತ್ತಿದ್ದಾನೆ ಮತ್ತು ತನ್ನ ದಿವ್ಯ ತೇಜಸ್ಸಿನಿಂದ ನಿಮ್ಮ ದೃಷ್ಟಿಗಳನ್ನು ಕುರುಡುಮಾಡಿದ್ದಾನೆ. ನನ್ನ ಸುತೋತ್ತಮ ಔರ್ವನಲ್ಲಿ ಯಾಚಿಸಿರಿ. ನೀವು ಅವನಿಗೆ ಶರಣು ಬೀಳುವುದರಿಂದ ತುಷ್ಟನಾಗಿ ನಿಮಗೆ ದೃಷ್ಟಿಯನ್ನು ನೀಡುತ್ತಾನೆ.’’

ಇದನ್ನು ಕೇಳಿದ ಸರ್ವ ರಾಜರುಗಳೂ ಆ ಊರುಜನನ್ನು ಪ್ರಸೀದ ಎಂದು ಕೇಳಿಕೊಂಡಾಗ ಅವನು ಸಂತುಷ್ಟನಾದನು. ಊರುವನ್ನು ಸೀಳಿ ಹೊರಬಂದ ಆ ವಿಪ್ರರ್ಷಿ ಸತ್ತಮನು ಔರ್ವ ಎಂಬ ಹೆಸರಿನಿಂದ ಲೋಕಗಳಲ್ಲಿ ವಿಖ್ಯಾತನಾದನು. ದೃಷ್ಟಿಯನ್ನು ಹಿಂದಕ್ಕೆ ಪಡೆದು ನೃಪರು ಹಿಂದಿರುಗಿದರು. ಆದರೆ ಆ ಭಾರ್ಗವ ಮುನಿಯು ಮಾತ್ರ ಸರ್ವ ಲೋಕಪರಾಭವದ ಕುರಿತು ಯೋಚಿಸಿದನು. ಆ ಮಹಾತ್ಮನು ಲೋಕಗಳ ವಿನಾಶಕ್ಕೆ ತೊಡಗಿದನು. ತನ್ನ ಸಂಪೂರ್ಣ ಮನಸ್ಸನ್ನೂ ಅದೊಂದಕ್ಕೇ ತೊಡಗಿಸಿದನು. ಭೃಗುಗಳಿಗೆ ಕೀರ್ತಿಯನ್ನು ತರಲೋಸುಗ ಆ ಭೃಗುಸತ್ತಮನು ಸರ್ವಲೋಕವಿನಾಶಕ್ಕಾಗಿ ಮಹಾ ತಪಸ್ಸಿನಲ್ಲಿ ತೊಡಗಿದನು. ತನ್ನ ಪಿತಾಮಹರಿಗೆ ಮಹತ್ತರ ಆನಂದವನ್ನು ತರಲು ಉಗ್ರ ತಪಸ್ಸಿನಿಂದ ದೇವಾಸುರ-ಮನುಷ್ಯರಿಂದೊಡಗೂಡಿದ ಲೋಕಗಳನ್ನು ಸುಡತೊಡಗಿದನು. ಆ ಭೃಗುಸತ್ತಮನನ್ನು ಅರ್ಥಮಾಡಿಕೊಂಡ ಅವನ ಸರ್ವ ಪಿತೃಗಳು ಪಿತೃಲೋಕದಿಂದ ಕೆಳಗಿಳಿದು ಬಂದು ಅವನಿಗೆ ಈ ಮಾತುಗಳನ್ನು ಹೇಳಿದರು: “ಔರ್ವ! ಪುತ್ರಕ! ನಿನ್ನ ಈ ಉಗ್ರ ತಪಸ್ಸಿನ ಪ್ರಭಾವವನ್ನು ನೋಡಿದ್ದೇವೆ. ಲೋಕಗಳ ಮೇಲೆ ಕರುಣೆತೋರು. ನಿನ್ನ ಸಿಟ್ಟನ್ನು ಹಿಂತೆಗೆದುಕೋ. ಭಾವಿತಾತ್ಮ ಭೃಗುಗಳಲ್ಲಿ ಶಕ್ತಿ ಇರಲಿಲ್ಲವೆಂದು ಅವರು ಕ್ಷತ್ರಿಯರಿಂದ ಸರ್ವರ ಹಿಂಸಾತ್ಮಕ ವಧೆಯನ್ನು ನಿರ್ಲಕ್ಷಿಸಲಿಲ್ಲ. ಆಯುಷ್ಯ ತುಂಬಾ ಹೆಚ್ಚಿದ್ದ ನಾವೇ ಬೇಸತ್ತು ನಾವೆಲ್ಲರೂ ಕ್ಷತ್ರಿಯರಿಂದ ಹತರಾಗಬೇಕೆಂದು ಬಯಸಿದ್ದೆವು. ಆದುದರಿಂದ ನಮ್ಮಲ್ಲಿಯೇ ಒಬ್ಬರು ಕ್ಷತ್ರಿಯರಿಗೆ ನಮ್ಮ ಮೇಲೆ ಕೋಪ ಬರಲಿ ಎನ್ನುವ ಉದ್ದೇಶದಿಂದ ಭೃಗುವಿನ ಮನೆಯಲ್ಲಿ ವಿತ್ತವನ್ನು ಹುಗಿದಿಟ್ಟಿದ್ದೆವು. ಸ್ವರ್ಗವನ್ನೇ ಬಯಸುವ ನಮಗೆ ವಿತ್ತದಲ್ಲಿ ಏನು ಆಸಕ್ತಿ? ನಮ್ಮೆಲ್ಲರನ್ನೂ ತೆಗೆದುಕೊಂಡು ಹೋಗಲು ಮೃತ್ಯುವೂ ಅಶಕ್ಯನೆಂದು ನೋಡಿ ಈ ಉಪಾಯವನ್ನು ಸಮ್ಮತಿಯಿಂದ ಮಾಡಿದೆವು. ಆತ್ಮಹತ್ಯೆ ಮಾಡಿಕೊಳ್ಳುವವನು ಶ್ರೇಷ್ಠ ಶುಭ ಲೋಕಗಳನ್ನು ಪಡೆಯುವುದಿಲ್ಲ. ಈ ಕಾರಣದಿಂದಲೇ ನಮ್ಮನ್ನು ನಾವೇ ನಾಶಪಡಿಸಿಕೊಳ್ಳಲಿಲ್ಲ. ಆದುದರಿಂದ ನೀನು ಈಗ ಮಾಡಲು ಇಚ್ಛಿಸಿರುವುದು ನಮಗೆ ಸ್ವಲ್ಪವೂ ಇಷ್ಟವಿಲ್ಲ. ಸರ್ವಲೋಕಪರಾಭವದ ಪಾಪ ಮನಸ್ಸನ್ನು ತಡೆಹಿಡಿದುಕೋ. ಕ್ಷತ್ರಿಯರಾಗಲೀ ಈ ಸಪ್ತ ಲೋಕಗಳೇ ಆಗಲಿ ನಮ್ಮ ಈ ತಪೋ ತೇಜಸ್ಸನ್ನು ದೂಷಿಸಲು ಸಾದ್ಯವಿಲ್ಲ. ನಿನ್ನಲ್ಲಿರುವ ಕ್ರೋಧವನ್ನು ಕಿತ್ತು ಹಾಕು.”

ಔರ್ವನು ಹೇಳಿದನು: “ಪಿತೃಗಳೇ! ಕ್ರೋಧದಿಂದ ಸರ್ವಲೋಕಗಳನ್ನೂ ವಿನಾಶ ಮಾಡುತ್ತೇನೆ ಎಂದು ಹೇಳಿದ ನನ್ನ ಆ ಪ್ರತಿಜ್ಞೆಯ ಮಾತುಗಳು ಮಿಥ್ಯವಾಗಲಾರದು. ವೃಥಾ ರೋಷ ಮತ್ತು ಪ್ರತಿಜ್ಞೆಗಳನ್ನು ಮಾಡುವವನ ಜೀವನವನ್ನು ಜೀವಿಸುವುದು ನನಗೆ ಇಷ್ಟವಿಲ್ಲ. ಅದನ್ನು ನಾನು ಬೇರೆಕಡೆ ತಿರುಗಿಸದಿದ್ದರೆ ಇಟ್ಟಿಗೆಯನ್ನು ಸುಡುವ ಬೆಂಕಿಯಂತೆ ಅದು ನನ್ನನ್ನೇ ಸುಟ್ಟುಬಿಡುತ್ತದೆ. ಯಾವ ಕಾರಣಕ್ಕಾಗಿ ಕ್ರೋಧವು ಹುಟ್ಟಿದೆಯೋ ಅದು ಶಾಂತವಾಗಬೇಕು. ಇಲ್ಲದಿದ್ದರೆ ಆ ಮನುಷ್ಯನು ತ್ರಿವರ್ಗಗಳನ್ನು ಸರಿಯಾಗಿ ಪರಿರಕ್ಷಿಸಲು ಸಾದ್ಯವಾಗುವುದಿಲ್ಲ. ಅಶಿಷ್ಟರನ್ನು ಶಿಕ್ಷಿಸುವುದೇ ಶಿಷ್ಟರನ್ನು ಪರಿರಕ್ಷಿಸಿದಂತೆ. ಸ್ವರ್ಗವನ್ನು ಗೆಲ್ಲ ಬಯಸುವ ನೃಪರು ತಮ್ಮ ರೋಷವನ್ನು ಸರಿಯಾದ ಕಡೆಯಲ್ಲೇ ಪ್ರಯೋಗಿಸುತ್ತಾರೆ. ನಾನಿನ್ನೂ ಹುಟ್ಟದಿದ್ದಾಗ, ತಾಯಿಯ ತೊಡೆಯಲ್ಲಿ ಗರ್ಭಶಯ್ಯಾಗತನಾಗಿದ್ದಾಗ ನಾನು ಕ್ಷತ್ರಿಯರಿಂದ ವಧೆಗೈಯಲ್ಪಟ್ಟ ಭೃಗುಗಣ ಮತ್ತು ಮಾತೃವರ್ಗದವರ ಕೂಗನ್ನು ಕೇಳಿದ್ದೆ. ಕ್ಷತ್ರಿಯಾಧಮರಿಂದ ಗರ್ಭದಲ್ಲಿರುವ ಭೃಗುಗಳ ನಾಶವಾಗುತ್ತಿರುವುದನ್ನು ಲೋಕಗಳು ಮತ್ತು ಅವುಗಳಲ್ಲಿರುವ ಅಮರರು ಪ್ರತಿಭಟಿಸದೇ ಸುಮ್ಮನೆ ಇದ್ದುದನ್ನು ನೋಡಿ ಕೋಪ ಬಂದಿತು. ತುಂಬು ಗರ್ಭಿಣಿಯರಾದ ನನ್ನ ತಾಯಂದಿರು ಮತ್ತು ತಂದೆಯರು ಭಯದಿಂದಿದ್ದಾಗ ಯಾವ ಲೋಕದ ಯಾರಿಂದಲೂ ರಕ್ಷಣೆಯು ದೊರೆಯಲಿಲ್ಲ. ಆ ಭೃಗುಗಳ ಪತ್ನಿಯರಿಗೆ ಎಲ್ಲಿಂದಲೂ ಸಹಾಯವು ದೊರೆಯದಿದ್ದುದರಿಂದ ನನ್ನ ಶುಭೆ ತಾಯಿಯು ನನ್ನನ್ನು ತನ್ನ ತೊಡೆಯಲ್ಲಿ ಇಟ್ಟುಕೊಂಡಳು. ಲೋಕಗಳಲ್ಲಿ ಪಾಪವನ್ನು ತಡೆಗಟ್ಟುವವರು ಯಾರಾದರೂ ಇದ್ದರೆ ಲೋಕಗಳಲ್ಲಿ ಪಾಪವೇ ನಡೆಯುವುದಿಲ್ಲ. ಆದರೆ ಪಾಪಿಯು ತನ್ನನ್ನು ಎದುರಿಸಿ ತಡೆಯುವವನು ಯಾರೂ ಸಿಗದಿದ್ದಾಗ ಲೋಕದಲ್ಲಿ ಬಹಳಷ್ಟು ಜನರು ಪಾಪಕರ್ಮದಲ್ಲಿ ತೊಡಗುತ್ತಾರೆ. ಅದು ಪಾಪವೆಂದು ತಿಳಿದಿದ್ದರೂ ಮತ್ತು ತಡೆಗಟ್ಟುವ ಶಕ್ತಿಯಿದ್ದರೂ ಅದನ್ನು ನಿಯಂತ್ರಿಸದೇ ಇದ್ದವನು ಈಶ್ವರನಾಗಿದ್ದರೂ ಅವನಿಗೂ ಆ ಕರ್ಮದ ಪಾಪವು ತಗಲುತ್ತದೆ. ರಾಜರು ಮತ್ತು ಈಶ್ವರರು ಸಮರ್ಥರಿದ್ದರೂ ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಎಂದು ಯೋಚಿಸಿ ನನ್ನ ತಂದೆಯರನ್ನು ಉಳಿಸಲಿಲ್ಲ ಎಂದಾಗ ನಾನು ಲೋಕಗಳ ಮತ್ತು ಅವುಗಳ ಈಶ್ವರರ ಮೇಲೆ ಕೃದ್ಧನಾಗಿದ್ದೇನೆ. ಆದರೂ ನಾನು ನಿಮ್ಮ ಮಾತುಗಳನ್ನು ಉಲ್ಲಂಘಿಸಲಾರೆ. ನಾನು ನಿಮ್ಮ ಮಾತಿನಂತೆ ನಡೆದುಕೊಳ್ಳದಿದ್ದರೆ ಪುನಃ ಲೋಕಗಳ ಕಷ್ಟವನ್ನು ತಿಳಿದೂ ಸಮರ್ಥನಾಗಿದ್ದರೂ ಉಪೇಕ್ಷೆಮಾಡಿದುದರ ಪಾಪವು ನನಗೆ ಬರುತ್ತದೆ. ಲೋಕವನ್ನೇ ಸುಡಲು ಹೊರಟಿರುವ ನನ್ನ ಸಿಟ್ಟಿನಿಂದ ಹುಟ್ಟಿದ ಈ ಅಗ್ನಿಯನ್ನು ನಾನು ನಿಗ್ರಹಿಸಿದೆನೆಂದಾದರೆ ನನ್ನನ್ನೇ ತನ್ನ ತೇಜಸ್ಸಿನಿಂದ ಸುಟ್ಟುಬಿಡುತ್ತದೆ. ನೀವೆಲ್ಲರೂ ಸರ್ವಲೋಕಹಿತಾಕಾಂಕ್ಷಿಗಳೆಂದು ತಿಳಿದಿದ್ದೇನೆ. ಆದುದರಿಂದ ನನಗೂ ಲೋಕಗಳಿಗೂ ಒಳ್ಳೆಯದಾಗುವಂಥಹ ಉಪಾಯವನ್ನು ಹೇಳಿ.”

ಪಿತೃಗಳು ಹೇಳಿದರು: “ಲೋಕಗಳನ್ನು ಸುಡಲು ಇಚ್ಛಿಸುವ ನಿನ್ನ ಸಿಟ್ಟಿನಿಂದ ಹುಟ್ಟಿದ ಅಗ್ನಿಯನ್ನು ನೀರಿನಲ್ಲಿ ಬಿಟ್ಟು ಬಿಡು. ಲೋಕಗಳು ನೀರಿನ ಮೇಲೆಯೇ ನಿಂತಿವೆ. ನಿನಗೆ ಮಂಗಳವಾಗಲಿ. ಸರ್ವ ರಸಗಳೂ ಆಪೋಮಯ ಮತ್ತು ಸರ್ವ ಜಗತ್ತೂ ಆಪೋಮಯ. ಆದುದರಿಂದ ನಿನ್ನ ಈ ಕ್ರೋಧಾಗ್ನಿಯನ್ನು ನೀರಿನಲ್ಲಿಯೇ ಬಿಟ್ಟುಬಿಡು. ಈ ರೀತಿ ನಿನ್ನ ಪ್ರತಿಜ್ಞೆಯೂ ಸತ್ಯವಾಗುತ್ತದೆ ಮತ್ತು ಅಮರರಿಂದ ಕೂಡಿದ ಲೋಕಗಳು ಪರಾಭವಹೊಂದುವುದಿಲ್ಲ.”

ನಂತರ ಔರ್ವನು ಕ್ರೋಧದಿಂದ ಜನಿಸಿದ ಆ ಅಗ್ನಿಯನ್ನು ವರುಣಾಲಯದಲ್ಲಿ ವಿಸರ್ಜಿಸಿದನು. ಅದು ಒಂದು ಮಹಾ ಹಯಶಿರವಾಗಿ ಅದರ ಬಾಯಿಯಿಂದ ಅಗ್ನಿಯನ್ನು ಉಗುಳುತ್ತಾ ಮಹೋದಧಿಯ ನೀರನ್ನು ಕುಡಿಯುತ್ತದೆ ಎಂದು ವೇದವಿದರು ತಿಳಿದಿದ್ದಾರೆ.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *