ಕಿರಾತಾರ್ಜುನೀಯ: ಅರ್ಜುನನಿಗೆ ದಿವ್ಯಾಸ್ತ್ರಗಳ ಪ್ರದಾನ
ಭೀಮಸೇನ-ಯುಧಿಷ್ಠಿರರಿಬ್ಬರೂ ಹೀಗೆ ಪರಸ್ಪರ ಮಾತನಾಡಿಕೊಳ್ಳುತ್ತಿರುವಾಗ ಅಲ್ಲಿಗೆ ಸತ್ಯವತೀ ಸುತ, ಮಹಾಯೋಗಿ ವ್ಯಾಸನು ಆಗಮಿಸಿದನು. ಅವನು ಬರುತ್ತಿದ್ದಂತೇ ಪಾಂಡವರು ಅವನನ್ನು ಯಥಾನ್ಯಾಯವಾಗಿ ಪೂಜಿಸಿದರು. ಅನಂತರ ಆ ಮಾತನಾಡುವರಲ್ಲಿ ಶ್ರೇಷ್ಠನು ಯುಧಿಷ್ಠಿರನಿಗೆ ಈ ಮಾತುಗಳನ್ನಾಡಿದನು:
“ಯುಧಿಷ್ಠಿರ! ನಿನ್ನ ಮನಸ್ಸು-ಹೃದಯಗಳಲ್ಲಿರುವ ವಿಷಯವನ್ನು ತಿಳಿದಿದ್ದೇನೆ. ಆದುದರಿಂದಲೇ ನಾನು ಬೇಗನೇ ಇಲ್ಲಿಗೆ ಬಂದಿದ್ದೇನೆ. ಭೀಷ್ಮ, ದ್ರೋಣ, ಕೃಪ, ಕರ್ಣ, ಮತ್ತು ದ್ರೋಣಪುತ್ರರ ಕುರಿತು ನಿನ್ನ ಹೃದಯದವನ್ನು ಆವರಿಸಿರುವ ಭಯವನ್ನು ನಾನು ವಿಧಿಯ ದೃಷ್ಟಿಯನ್ನು ಕಾರಣವನ್ನಾಗಿಟ್ಟುಕೊಂಡು ನಾಶಪಡಿಸುತ್ತೇನೆ. ಇದನ್ನು ಕೇಳಿ ನಿನ್ನ ಧೃತಿಯನ್ನು ಹಿಂದೆ ಪಡೆ ಮತ್ತು ಇದನ್ನು ಕಾರ್ಯಗತಗೊಳಿಸು.”
ಆಗ ಆ ವಾಕ್ಯವಿಶಾರದ ಪಾರಾಶರ್ಯನು ಯುಧಿಷ್ಠಿರನನ್ನು ಏಕಾಂತದಲ್ಲಿ ಕರೆದು ಅತಿ ಪ್ರಮುಖವಾದ ಈ ಮಾತುಗಳನ್ನು ಹೇಳಿದನು:
“ಭರತಸತ್ತಮ! ಪಾರ್ಥ ಧನಂಜಯನು ಮುಂದೆ ರಣದಲ್ಲಿ ಶತ್ರುಗಳನ್ನು ಹಿಂದಾಗಿಸಿದಾಗ ನಿನಗೆ ಶ್ರೇಯಸ್ಸಾಗುವ ಕಾಲವು ಪ್ರಾಪ್ತವಾಗುತ್ತದೆ. ಈಗ ನಾನು ಸಿದ್ಧಿಯೇ ಮೂರ್ತಿಮತ್ತಾಗಿರುವ ಪ್ರತಿಸ್ಮೃತಿ ಎಂಬ ಹೆಸರಿನ ವಿದ್ಯೆಯನ್ನು ಶರಣು ಬಂದಿರುವ ನಿನಗೆ ಹೇಳಿಕೊಡುತ್ತೇನೆ. ಸ್ವೀಕರಿಸು. ನಿನ್ನಿಂದ ಇದನ್ನು ಪಡೆದು ಮಹಾಬಾಹು ಅರ್ಜುನನು ಸಾಧಿಸುತ್ತಾನೆ. ಅಸ್ತ್ರಗಳಿಗಾಗಿ ಅವನು ಮಹೇಂದ್ರ, ರುದ್ರ, ವರುಣ, ಧನೇಶ ಕುಬೇರ ಮತ್ತು ಧರ್ಮರಾಜ ಯಮರಲ್ಲಿಗೆ ಹೋಗಬೇಕು. ತನ್ನ ತಪಸ್ಸು-ವಿಕ್ರಮಗಳಿಂದ ಮತ್ತು ಇದರಿಂದ ಅವನು ಸುರರನ್ನು ನೋಡಲು ಶಕ್ತನಾಗುತ್ತಾನೆ. ಇವನು ಮಹಾತೇಜಸ್ವಿ. ನಾರಾಯಣನ ಸಹಾಯಕ. ಪುರಾತನ. ಸನಾತನ. ಶಾಶ್ವತ. ವಿಷ್ಣುವಿನ ಅಂಶದ ದೇವ ಮತ್ತು ಋಷಿ. ಇಂದ್ರ, ರುದ್ರ ಮತ್ತು ಲೋಕಪಾಲಕರಿಂದ ಅಸ್ತ್ರಗಳನ್ನು ಪಡೆದು ಈ ಮಹಾಬಾಹುವು ಮಹಾಕಾರ್ಯವನ್ನು ಎಸಗುತ್ತಾನೆ. ಈ ವನವನ್ನು ಬಿಟ್ಟು ನಿನಗೆ ನಿವಾಸಕ್ಕೆ ಯೋಗ್ಯವಾದ ಬೇರೆ ಯಾವುದಾದರೂ ವನಕ್ಕೆ ಹೋಗುವ ಯೋಚನೆಮಾಡು. ಒಂದೇ ಜಾಗದಲ್ಲಿ ತುಂಬಾ ಸಮಯ ಇರುವುದರಿಂದ ಸಂತೋಷವಾಗುವುದಿಲ್ಲ. ಮತ್ತು ಇದರಿಂದ ತಾಪಸಿಗಳ ಶಾಂತತೆಗೆ ಭಂಗಮಾಡಿದಹಾಗೂ ಆಗುತ್ತದೆ. ನೀವು ಬಹಳಷ್ಟು ವೇದವೇದಾಂಗಪಾರಂಗತ ವಿಪ್ರರನ್ನು ಪಾಲಿಸುತ್ತಿರುವುದರಿಂದ ಮೃಗಗಳನ್ನು ಬೇಟೆಯಾಡಿ ಕಡಿಮೆಮಾಡುತ್ತೀರಿ. ಸಸ್ಯಗಳು ಮತ್ತು ಔಷಧಿಗಳು ಕಡಿಮೆಯಾಗುತ್ತವೆ.”
ತನಗೆ ಶರಣುಬಂದಿದ್ದ ಶುಚನಿಗೆ ಹೀಗೆ ಹೇಳಿ ಭಗವಾನ್ ಪ್ರಭು ಯೋಗತತ್ವಜ್ಞ ಸತ್ಯವತೀಸುತ ವ್ಯಾಸನು ಆ ಅನುತ್ತಮ ಯೋಗವಿದ್ಯೆಯನ್ನು ಧೀಮಂತ ಧರ್ಮರಾಜನಿಗೆ ಹೇಳಿಕೊಟ್ಟನು. ಕೌಂತೇಯನಿಗೆ ಅಪ್ಪಣೆಯನ್ನಿತ್ತು ಅಲ್ಲಿಯೇ ಅಂತರ್ಧಾನನಾದನು.
ಧರ್ಮತ್ಮ ಮೇಧಾವೀ ಯುಧಿಷ್ಠಿರನಾದರೋ ಪುನಃ ಪುನಃ ಅಭ್ಯಾಸಮಾಡಿ ಆ ಬ್ರಹ್ಮನನ್ನು ತನ್ನ ಮನಸ್ಸಿನಲ್ಲಿ ಇಟ್ಟುಕೊಂಡನು. ವ್ಯಾಸನ ಮಾತಿನಿಂದ ಸಂತೋಷಗೊಂಡ ಅವನು ದ್ವೈತವನವನ್ನು ಬಿಟ್ಟು ಸರಸ್ವತೀ ತೀರದಲ್ಲಿರುವ ಕಾಮ್ಯಕ ಎನ್ನುವ ಕಾನನಕ್ಕೆ ಹೋದನು. ಋಷಿಗಳು ದೇವೇಂದ್ರನನ್ನು ಹಿಂಬಾಲಿಸುವಂತೆ ಶಿಕ್ಷಾಕ್ಷರವಿದರಾದ ಬ್ರಾಹ್ಮಣರೂ ತಪಸ್ವಿಗಳು ಸೇರಿಕೊಂಡು ಅವನನ್ನು ಹಿಂಬಾಲಿಸಿದರು. ಕಾಮ್ಯಕವನವನ್ನು ಪುನಃ ಸೇರಿ ಆ ಮಹಾತ್ಮ ಭರತರ್ಷಭರು ಅಮಾತ್ಯರು ಮತ್ತು ಅನುಚರರೊಂದಿಗೆ ವಾಸಿಸತೊಡಗಿದರು. ಆ ಮನಸ್ವಿ ವೀರರು ಧನುರ್ವೇದಪರರಾಗಿ ಮತ್ತು ಉತ್ತಮ ವೇದಗಳನ್ನು ಕೇಳುತ್ತಾ ಅಲ್ಲಿ ಸ್ವಲ್ಪ ಕಾಲ ನೆಲೆಸಿದರು. ನಿತ್ಯವೂ ಅವರು ಶುದ್ಧ ಬಾಣಗಳಿಂದ (ವಿಷದಿಂದ ಲೇಪಿತವಾಗಿರದ) ಮೃಗಗಳನ್ನು ಹುಡುಕುತ್ತಾ ಬೇಟೆಗೆ ಹೋಗುತ್ತಿದ್ದರು ಮತ್ತು ಯಥಾವಿಧಿಯಾಗಿ ಪಿತೃ, ದೇವತೆಗಳು ಮತ್ತು ಬ್ರಾಹ್ಮಣರಿಗೆ ನಿವೇದಿಸುತ್ತಿದ್ದರು.
ಸ್ವಲ್ಪ ಸಮಯದ ನಂತರ ಧರ್ಮರಾಜ ಯುಧಿಷ್ಠಿರನು ಮುನಿಯ ಸಂದೇಶವನ್ನು ಸ್ಮರಿಸಿಕೊಂಡು ಏಕಾಂತದಲ್ಲಿ ವಿದಿತಪ್ರಜ್ಞ ಭರತರ್ಷಭ ಅರ್ಜುನನಿಗೆ ಮುಗುಳ್ನಗುತ್ತಾ, ಕೈಯಿಂದ ಅವನ ಮೈ ಸವರುತ್ತಾ ಸಾಂತ್ವಪೂರ್ವಕ ಈ ಮಾತುಗಳನ್ನಾಡಿದನು. ವನವಾಸದ ಕುರಿತು ಸ್ವಲ್ಪ ಯೋಚಿಸಿ ಆ ಅರಿಂದಮ ಧರ್ಮರಾಜನು ಧನಂಜಯನಿಗೆ ರಹಸ್ಯದಲ್ಲಿ ಹೇಳಿದನು:
“ಭಾರತ! ನಾಲ್ಕೂ ಧನುರ್ವೇದ ಮತ್ತು ಅದರ ನಾಲ್ಕು ಪಾದಗಳು ಈಗ ಭೀಷ್ಮ, ದ್ರೋಣ, ಕೃಪ, ಕರ್ಣ ಮತ್ತು ದ್ರೋಣಪುತ್ರ ಇವರಲ್ಲಿ ಮಾತ್ರ ಇವೆ. ಬ್ರಾಹ್ಮ, ದೇವ ಮತ್ತು ಅಸುರ ಎಲ್ಲ ಅಸ್ತ್ರಗಳ ಸರಿಯಾದ ಪ್ರಯೋಗ ಮತ್ತು ಉಪಶಮನಗಳನ್ನು ಸಂಪೂರ್ಣವಾಗಿ ಇವರು ತಿಳಿದಿದ್ದಾರೆ. ಧೃತರಾಷ್ಟ್ರನ ಮಗನು ಇವರೆಲ್ಲರ ಹತ್ತಿರವಿದ್ದು ಉಡುಗರೆಗಳನ್ನಿತ್ತು ತೃಪ್ತಿಪಡಿಸುತ್ತಾ ಗುರುಗಳಂತೆ ನಡೆದುಕೊಳ್ಳುತ್ತಿದ್ದಾನೆ. ಅವನು ಈ ಎಲ್ಲ ಯೋದ್ಧರೊಂದಿಗೆ ಒಳ್ಳೆಯದಾಗಿಯೇ ನಡೆದುಕೊಳ್ಳುತ್ತಿದ್ದಾನೆ. ಪ್ರತಿಪೂಜಿತರಾದ ಅವರು ಸಮಯಬಂದಾಗ ತಮ್ಮ ಶಕ್ತಿಯನ್ನು ಅವನಿಗೆ ಕೊಡದೇ ಇರುವುದಿಲ್ಲ. ಈಗ ಇಡೀ ಭೂಮಿಯೇ ದುರ್ಯೋಧನನ ವಶದಲ್ಲಿದೆ. ನಮಗೆ ನೀನೇ ಆಶ್ರಯ ಮತ್ತು ಭಾರವೆಲ್ಲವೂ ನಿನ್ನ ಮೇಲೆಯೇ ಇದೆ. ಇಂಥಹ ಸನ್ನಿವೇಶದಲ್ಲಿ ನೀನು ಮಾಡಬೇಕಾದ ಕಾರ್ಯದ ಸಮಯವು ಬಂದೊದಗಿದೆಯೆಂದು ನನಗನ್ನಿಸುತ್ತದೆ. ಕೃಷ್ಣದ್ವೈಪಾಯನನಿಂದ ನಾನು ಈ ವಿದ್ಯೆಯನ್ನು ಪಡೆದುಕೊಂಡೆನು. ಇದನ್ನು ನೀನು ಬಳಸಿದರೆ ಸರ್ವ ಜಗತ್ತೂ ಸಂಪೂರ್ಣವಾಗಿ ಕಾಣಿಸಿಕೊಳ್ಳುತ್ತದೆ. ಈ ಬ್ರಹ್ಮಜ್ಞಾನವನ್ನು ಪಡೆದು ನೀನು ಯಥಾಕಾಲದಲ್ಲಿ ದೇವತೆಗಳ ಅನುಗ್ರಹಕ್ಕೆ ಪಾತ್ರನಾಗುವೆ. ಸಾರಸಮನ್ವಿತ ಮುನಿಯಂತೆ ಧನುಸ್ಸು, ಕವಚ ಮತ್ತು ಖಡ್ಗಗಳನ್ನು ಧರಿಸಿ ನಿನ್ನನ್ನು ಉಗ್ರ ತಪಸ್ಸಿನಲ್ಲಿ ತೊಡಗಿಸಿಕೋ. ನಂತರ ಯಾರೂ ನಿನ್ನನ್ನು ದಾಟದ ರೀತಿಯಲ್ಲಿ ಉತ್ತರ ದಿಕ್ಕಿನ ಮಾರ್ಗದಲ್ಲಿ ಹೋಗು. ಇಂದ್ರನಲ್ಲಿ ಸಮಸ್ತ ದಿವ್ಯಾಸ್ತ್ರಗಳೂ ಇವೆ. ವೃತ್ರನ ಭಯದಿಂದಾಗಿ ಹಿಂದೆ ದೇವತೆಗಳು ತಮ್ಮ ಶಕ್ತಿಗಳನ್ನು ಇಂದ್ರನಿಗೆ ಸಮರ್ಪಿಸಿದ್ದರು. ಒಂದೆಡೆಯಲ್ಲಿ ಅವೆಲ್ಲರೂ ಇರುವುದನ್ನು ನೀನು ನೋಡುವೆ. ಶಕ್ರನನ್ನೇ ಮೊರೆಹೋಗು. ಅವನೇ ನಿನಗೆ ಅಸ್ತ್ರಗಳನ್ನು ಕೊಡುತ್ತಾನೆ. ಇಂದೇ ದೀಕ್ಷೆಯನ್ನು ಪಡೆದು ದೇವ ಪುರಂದರನನ್ನು ಕಾಣಲು ಹೋಗು.”
ಹೀಗೆ ಹೇಳಿ ಪ್ರಭುವು ಅವನು ಮಾತು, ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ ನಿಗ್ರಹಿಸಲು ವಿಧಿವತ್ತಾಗಿ ಮಂತ್ರಗಳನ್ನು ಉಪದೇಶಿಸಿ ದೀಕ್ಷೆಯನ್ನಿತ್ತನು. ಅನಂತರ ಆ ಹಿರಿಯಣ್ಣನು ವೀರ ತಮ್ಮನಿಗೆ ಅನುಜ್ಞೆಯನ್ನಿತ್ತನು. ಧರ್ಮರಾಜನ ನಿರ್ದೇಶನದಂತೆ ದೇವ ಪುರಂದರನನ್ನು ಕಾಣಲು ಗಾಂಡೀವ ಧನುಸ್ಸು ಮತ್ತು ಅಕ್ಷಯ ಭತ್ತಳಿಕೆಗಳೆರಡನ್ನೂ ತೆಗೆದುಕೊಂಡು, ಕವಚ. ಕೈ ಮತ್ತು ಅಂಗುಲರಕ್ಷೆಗಳನ್ನು ಧರಿಸಿ, ಬ್ರಾಹ್ಮಣರು ಚಿನ್ನದ ನಾಣ್ಯಗಳೊಂದಿಗೆ ಸ್ವಸ್ತಿವಾಚನ ಮಾಡುತ್ತಿರಲು ಅಗ್ನಿಯಲ್ಲಿ ಆಹುತಿಗಳನ್ನಿತ್ತು, ಧನುಸ್ಸನ್ನು ಹಿಡಿದು ಮೇಲೆ ನೋಡಿ ನಿಟ್ಟುಸಿರು ಬಿಡುತ್ತಾ, ಧಾರ್ತರಾಷ್ಟ್ರರ ವಧೆಗಾಗಿ ಆ ಮಹಾಭುಜ ಮಹಾಬಾಹುವು ಹೊರಟನು. ಧನುಸ್ಸನ್ನು ಹಿಡಿದಿದ್ದ ಕೌಂತೇಯನನ್ನು ನೋಡಿ ಅಲ್ಲಿದ್ದ ಬ್ರಾಹ್ಮಣರು, ಸಿದ್ಧರು ಮತ್ತು ಅದೃಶ್ಯ ಭೂತಗಣಗಳು
“ಕೌಂತೇಯ! ನಿನ್ನ ಮನಸ್ಸಿನಲ್ಲಿ ಏನನ್ನು ಬಯಸಿದ್ದೀಯೋ ಅದನ್ನು ಶೀಘ್ರದಲ್ಲಿಯೇ ಪಡೆಯುತ್ತೀಯೆ!”
ಎಂದವು. ಸಿಂಹದಂತೆ ಹೋಗುತ್ತಿರುವ ಆ ಶಾಲವೃಕ್ಷದಂಥ ತೊಡೆಗಳ ಅರ್ಜುನನನ್ನು ಸಂಪೂರ್ಣವಾಗಿ ಮನಸಾರೆ ನೋಡಿ ಕೃಷ್ಣೆಯು ಹೇಳಿದಳು:
“ಮಹಾಬಾಹು ಧನಂಜಯ! ನೀನು ಹುಟ್ಟುವಾಗ ಕುಂತಿಯು ನಿನಗೆ ಏನೆಲ್ಲ ಬಯಸಿದ್ದಳೋ ಮತ್ತು ನೀನು ನಿನಗಾಗಿ ಏನನ್ನು ಬಯಸಿದ್ದೀಯೋ ಅದು ನೆರವೇರಲಿ! ನಾವು ಮುಂದೆ ಎಂದೂ ಕ್ಷತ್ರಿಯ ಕುಲದಲ್ಲಿ ಜನ್ಮತಾಳದೇ ಇರಲಿ. ಯುದ್ಧವನ್ನವಲಂಬಿಸಿ ಜೀವಿಸಬೇಕಾಗದೇ ಇರುವ ಬ್ರಾಹ್ಮಣರಿಗೆ ನನ್ನ ನಮಸ್ಕಾರಗಳು! ನಿನ್ನ ಸಹೋದರರೆಲ್ಲರೂ ಅವರ ಎಚ್ಚರದ ಸಮಯದಲ್ಲಿ ನಿನ್ನ ಕುರಿತೇ ಮಾತನಾಡುತ್ತಾ, ಪುನಃ ಪುನಃ ನಿನ್ನ ವೀರಕೃತ್ಯಗಳ ಕುರಿತು ಮಾತನಾಡಿಕೊಳ್ಳುತ್ತಾ ಆನಂದವನ್ನು ಪಡೆಯುವರು. ಆದರೂ ನೀನು ತುಂಬಾ ಸಮಯ ಪ್ರಯಾಣ ಮಾಡಿದರೆ ನಮ್ಮ ಭೋಗ, ಧನ ಮತ್ತು ಜೀವನದಲ್ಲಿಯೇ ತೃಪ್ತಿ ದೊರೆಯುವುದಿಲ್ಲ. ನಮ್ಮೆಲ್ಲರ ಸುಖ, ದುಃಖ, ಜೀವ, ಮರಣ, ರಾಜ್ಯ, ಐಶ್ವರ್ಯ ಎಲ್ಲವೂ ನಿನ್ನ ಮೇಲೆ ಅವಲಂಬಿಸಿವೆ. ನಿನ್ನನ್ನು ನಾನು ಬೀಳ್ಕುಡುತ್ತಿದ್ದೇನೆ. ನಿನಗೆ ಮಂಗಳವಾಗಲಿ! ಧಾತ್ರ-ವಿಧಾತ್ರರಿಗೆ ನಮಸ್ಕಾರಗಳು! ನಿನ್ನ ಮಾರ್ಗವು ಮಂಗಳಕರ ಮತ್ತು ಸುರಕ್ಷವಾಗಿರಲಿ! ಅಂತರಿಕ್ಷ, ಭೂಮಿ ಮತ್ತು ನಿನ್ನ ಮಾರ್ಗದಲ್ಲಿ ಬರುವ ಎಲ್ಲ ದಿವ್ಯ ಭೂತಗಳಿಂದಲೂ ನಿನಗೆ ರಕ್ಷಣೆಯಿರಲಿ!”
ಅನಂತರ ಆ ಮಹಾಬಾಹು ಪಾಂಡವನು ಧೌಮ್ಯ ಮತ್ತು ಅಣ್ಣಂದಿರನ್ನು ಪ್ರದಕ್ಷಿಣೆ ಮಾಡಿ ಸುಂದರ ಧನುಸ್ಸನ್ನು ಹಿಡಿದು ಹೊರಟನು. ಇಂದ್ರನ ಯೋಗದಿಂದ ಅವನು ನಡೆದ ಮಾರ್ಗದಲ್ಲಿದ್ದ ಎಲ್ಲ ಜೀವಿಗಳೂ - ದೊಡ್ಡ ಮತ್ತು ಸಣ್ಣ ಜೀವಿಗಳೂ - ಅವನಿಗೆ ದಾರಿಬಿಟ್ಟವು. ಯೋಗಯುಕ್ತನಾಗಿ ವಾಯುವಿನಂತೆ ಮನೋವೇಗವನ್ನು ಪಡೆದಿದ್ದ ಆ ಮಹಾಮನಸ್ಕನು ಒಂದೇ ಹಗಲಿನಲ್ಲಿ ಪುಣ್ಯ ಪರ್ವತ (ಹಿಮವತ್ಪರ್ವತ) ವನ್ನು ತಲುಪಿದನು. ಅವನು ದಿನರಾತ್ರಿ ಆಯಾಸಗೊಳ್ಳದೇ ಹಿಮವಂತ ಮತ್ತು ಗಂಧಮಾದನ ಪರ್ವತಗಳ ಕಣಿವೆಗಳನ್ನು ದಾಟಿದನು. ಇಂದ್ರಕೀಲವನ್ನು ತಲುಪಿದೊಡನೆಯೇ ಅಂತರಿಕ್ಷದಿಂದ ‘ನಿಲ್ಲು!’ ಎನ್ನುವ ಮಾತನ್ನು ಕೇಳಿ ಧನಂಜಯನು ನಿಂತನು. ಆಗ ಆ ಸವ್ಯಸಾಚಿಯು ಮರದ ಬುಡದಲ್ಲಿ ಬ್ರಹ್ಮಜ್ಞಾನ, ಮತ್ತು ಕಳೆಯಿಂದ ಬೆಳಗುತ್ತಿದ್ದ ಹಳದಿ ಬಣ್ಣದ, ಜಟಾಧಾರಿ, ಕೃಶನಾಗಿದ್ದ ತಪಸ್ವಿಯನ್ನು ಕಂಡನು. ಆ ಮಹಾತಪಸ್ವಿಯು ಅರ್ಜುನನು ನಿಂತಿದ್ದುದನ್ನು ನೋಡಿ
“ಧನುಸ್ಸು, ಕವಚ, ಖಡ್ಗ-ಬಾಣಗಳನ್ನು ಮತ್ತು ಕೈರಕ್ಷೆಗಳನ್ನು ಧರಿಸಿ ಇಲ್ಲಿಗೆ ಬಂದಿರುವ ಕ್ಷತ್ರಿಯಧರ್ಮವನ್ನು ಅನುಸರಿಸುವ ಮಗೂ ನೀನು ಯಾರು?”
ಎಂದು ಕೇಳಿದನು.
“ಸಿಟ್ಟು-ಸಂತೋಷಗಳನ್ನು ನಿಯಂತ್ರಿಸಿದ ಬ್ರಾಹ್ಮಣ ತಪಸ್ವಿಯರ ಶಾಂತತೆಯಿಂದ ತುಂಬಿರುವ ಇಲ್ಲಿ ಶಸ್ತ್ರಗಳ ಕೆಲಸವೇನೂ ಇಲ್ಲ! ಇಲ್ಲಿ ಧನುಸ್ಸಿಗೆ ಯಾವ ಕೆಲಸವೂ ಇಲ್ಲ ಮತ್ತು ಸಂಗ್ರಾಮದ ಅವಶ್ಯಕತೆಯೂ ಇಲ್ಲ. ಮಗೂ! ಧನುಸ್ಸನ್ನು ಇಲ್ಲಿಯೇ ಕೆಳಗೆ ಹಾಕು. ಉತ್ತಮ ಗತಿಯನ್ನು ಹೊಂದುತ್ತೀಯೆ!”
ಹೀಗೆ ಆ ಬ್ರಾಹ್ಮಣನು ಅನಂತತೇಜಸ್ವಿ ವೀರ ಅರ್ಜುನನು ಬೇರೆ ಯಾರೋ ಇರಬಹುದೆಂಬಂತೆ ಪುನಃ ಪುನಃ ಹೇಳಿದನು. ಆದರೂ ಆ ಸುದೃಢನಿಶ್ಚಯಿಯ ನಿಲುವನ್ನು ಬದಲು ಮಾಡಲಿಕ್ಕಾಗಲಿಲ್ಲ. ನಂತರ ಸಂತೋಷಗೊಂಡು ಆ ದ್ವಿಜನು ಅವನಿಗೆ ನಗುತ್ತಾ ಹೇಳಿದನು:
“ಅರಿಸೂದನ! ನಾನು ಶಕ್ರ! ನಿನಗೆ ಮಂಗಳವಾಗಲಿ! ವರವನ್ನು ಕೇಳಿಕೋ!”
ಹೀಗೆ ಹೇಳಿದ ಸಹಸ್ರಾಕ್ಷನಿಗೆ ಕುರುಕುಲೋದ್ವಹ ಶೂರ ಧನಂಜಯನು ಕೈಮುಗಿದು ನಮಸ್ಕರಿಸಿ ಉತ್ತರಸಿದನು:
“ಭಗವನ್! ಇಂದು ನಿನ್ನಲ್ಲಿರುವ ಅಸ್ತ್ರಗಳನ್ನೆಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತೇನೆ. ಇದನ್ನೇ ನಾನು ಬಯಸುವ ಆಸೆ. ಇದೇ ವರವನ್ನು ನನಗೆ ಕರುಣಿಸು.”
ಅವನಿಗೆ ಮಹೇಂದ್ರನು ಸಂತೋಷದಿಂದ ನಗುತ್ತಾ ಉತ್ತರಿಸಿದನು:
“ಧನಂಜಯ! ಅಸ್ತ್ರಗಳನ್ನು ಪಡೆಯುವುದರಿಂದ ನಿನಗೇನು ಸಾಧನೆಯಾದಂತಾಗುತ್ತದೆ? ಕಾಮ ಲೋಕಗಳನ್ನು ಬೇಡು! ಪರಮ ಗತಿಯನ್ನು ಪಡೆಯುತ್ತೀಯೆ!”
ಸಹಸ್ರಾಕ್ಷನು ಹೀಗೆ ಹೇಳಲು ಧನಂಜಯನು ಉತ್ತರಿಸಿದನು:
“ಲೋಕಗಳೂ ಬೇಡ. ಕಾಮಗಳೂ ಬೇಡ. ದೇವತ್ವದಿಂದಲೂ ಸುಖವೆಲ್ಲಿದೆ? ತ್ರಿದಶಾಧಿಪ! ಸರ್ವೈಶ್ವರ್ಯಗಳನ್ನೂ ಬಯಸುವುದಿಲ್ಲ. ವೈರಿಗಳೊಂದಿಗೆ ಸೇಡನ್ನು ತೀರಿಸಿಕೊಳ್ಳದೇ ಸಹೋದರರನ್ನು ಕಾಡಿನಲ್ಲಿಯೇ ತ್ಯಜಿಸಿಬಂದರೆ ನನಗೆ ಸರ್ವಲೋಕಗಳಲ್ಲಿಯೂ ಶಾಶ್ವತವಾಗಿ ಅಕೀರ್ತಿಯು ಬರುತ್ತದೆ.”
ಈ ಮಾತನಾಡಿದ ಪಾಂಡುನಂದನನಿಗೆ ಸರ್ವಲೋಕ ನಮಸ್ಕೃತ ವೃತ್ರಹನು ಮೃದು ಮಾತುಗಳಿಂದ ಸಂತವಿಸುತ್ತಾ ಉತ್ತರಿಸಿದನು:
“ಮಗೂ! ಭೂತೇಶ, ತ್ರಕ್ಷ್ಯ, ಶೂಲಧರ, ಶಿವನನ್ನು ನೀನು ಯಾವಾಗ ಕಾಣುತ್ತೀಯೋ ಆಗ ನಿನಗೆ ಸರ್ವ ದಿವ್ಯಾಸ್ತ್ರಗಳನ್ನೂ ಇತರ ಅಸ್ತ್ರಗಳನ್ನೂ ಕೊಡುತ್ತೇನೆ. ಪರಮೇಷ್ಠಿ ದೇವನನ್ನು ಕಾಣಲು ಪ್ರಯತ್ನ ಮಾಡಬೇಕು. ಅವನ ದರ್ಶನ ಪಡೆದ ನಂತರ ಸ್ವರ್ಗಕ್ಕೆ ಬರಲು ಸಿದ್ಧನಾಗುವೆ.”
ಫಾಲ್ಗುನನಿಗೆ ಹೀಗೆ ಹೇಳಿ ಶಕ್ರನು ಅಂತರ್ಧಾನನಾದನು. ಆಗ ಅರ್ಜುನನು ಅಲ್ಲಿಯೇ ಯೋಗಸಮನ್ವಿತನಾಗಿ ನಿಂತುಕೊಂಡನು.
ಅರ್ಜುನನ ಉಗ್ರ ತಪಸ್ಸು
ಯುಧಿಷ್ಠಿರನ ನಿಯೋಗದಂತೆ ಆ ಅಮಿತವಿಕ್ರಮನು ಸುರೇಶ್ವರ ಶಕ್ರ ಮತ್ತು ದೇವದೇವ ಶಂಕರನನ್ನು ಕಾಣಲು ಹೋದನು. ಆ ಪುರುಷರ್ಷಭ, ಮಹಾಬಾಹು, ಮಹಾಬಲ, ಇಂದ್ರನ ಮಗ, ಸರ್ವಲೋಕದಲ್ಲಿಯೇ ಮಹಾರಥಿ ಅರ್ಜುನನು ಕಾರ್ಯಸಿದ್ಧಿಯಾಗಲೆಂದು ದಿವ್ಯ ಧನುಸ್ಸು ಮತ್ತು ಖಡ್ಗವನ್ನು ಹಿಡಿದು ಉತ್ತರದಿಕ್ಕಿನಲ್ಲಿ ಹಿಮಾಲಯ ಪರ್ವತದ ಕಡೆ ಹೊರಟನು. ಅತ್ಯಂತ ವೇಗವಾಗಿ, ತಪ್ಪಸ್ಸಿನಲ್ಲಿಯೇ ಮನಸ್ಸನ್ನಿಟ್ಟು, ಧೃತನಿಶ್ಚಯನಾಗಿ ಅವನು ಒಂದು ಘೋರ, ಮುಳ್ಳುಗಳಿಂದ ಕೂಡಿದ, ನಾನಾ ಪುಷ್ಪಫಲಗಳಿಂದ ಕೂಡಿದ, ನಾನಾ ಪಕ್ಷಿಗಳಿಂದ ಕೂಡಿದ, ನಾನಾ ಮೃಗಗಣಗಳಿಂದ ಕೂಡಿದ, ಸಿದ್ಧಚಾರಣರಿಂದ ಸೇವಿಸಲ್ಪಟ್ಟ ವನವನ್ನು ಪ್ರವೇಶಿಸಿದನು. ಮಾನುಷರಿಗೆ ವರ್ಜಿತವಾದ ಆ ವನವನ್ನು ಕೌಂತೇಯನು ಪ್ರವೇಶಿಸುತ್ತಿದ್ದಂತೆಯೇ ಸ್ವರ್ಗದಲ್ಲಿ ಶಂಖ ಮತ್ತು ಪಟ್ಟಹಗಳ ಶಬ್ಧವು ಕೇಳಿಬಂದವು. ಭೂಮಿಯ ಮೇಲೆ ಜೋರಾಗಿ ಪುಷ್ಪವೃಷ್ಟಿಯಾಯಿತು ಮತ್ತು ಅವನನ್ನು ಎಲ್ಲ ಕಡೆಯಿಂದಲೂ ದಪ್ಪ ಮೋಡಗಳ ಜಾಲವು ಮುಚ್ಚಿಕೊಂಡಿತು. ಆ ಮಹಾಗಿರಿಯ ತಪ್ಪಲಿನಲ್ಲಿ ವನದುರ್ಗಗಳನ್ನು ದಾಟಿ ಶುಭ ಅರ್ಜುನನು ಹಿಮವತ್ಪರ್ವತದ ಶಿಖರದ ಮೇಲೆ ವಾಸಿಸತೊಡಗಿದನು. ಅವನು ಅಲ್ಲಿ ಹಕ್ಕಿಗಳ ಮಧುರ ಚಿಲಿಪಿಲಿಯಿಂದೊಡಗೂಡಿದ್ದ ಚಿಗುರೊಡೆಯುತ್ತಿರುವ ಮರಗಳನ್ನು ನೋಡಿದನು. ಮತ್ತು ಬಹು ಸುಳಿಗಳನ್ನು ಹೊಂದಿದ್ದ, ನೀಲ ವೈಢೂರ್ಯವರ್ಣದ, ಹಂಸಬಾತುಕೋಳಿಗಳ ನಾದದಿಂದ ಕೂಡಿದ, ಸಾರಸಪಕ್ಷಿಗಳ ಕೂಗಿನಿಂದ ಪ್ರತಿಧ್ವನಿಸುತ್ತಿದ್ದ, ಕೋಗಿಲೆಗಳ ಕೂಗು, ಮತ್ತು ನವಿಲುಗಳ ದೊಡ್ಡ ಕೂಗುಗಳಿಂದ ಕೂಡಿದ್ದ ನದಿಗಳನ್ನು ನೋಡಿದನು. ಆ ಮನೋಹರ ವನವನ್ನು ಮತ್ತು ಅದರಲ್ಲಿರುವ ಪುಣ್ಯ ಶೀತಲ ಶುದ್ಧ ನದಿಗಳನ್ನು ನೋಡಿ ಅತಿರಥ ಅರ್ಜುನನು ಸಂತೋಷಗೊಂಡನು. ರಮಣೀಯ ವನಪ್ರದೇಶದಲ್ಲಿ ಸಂತೋಷಪಡುತ್ತಾ ಆ ಉಗ್ರತೇಜಸ್ವಿ ಮಹಾತ್ಮ ಅರ್ಜುನನು ಉಗ್ರ ತಪಸ್ಸಿನಲ್ಲಿ ತೊಡಗಿದನು. ದರ್ಭೆಯ ಚಾಪೆಯಮೇಲೆ ದಂಡ ಮತ್ತು ಜಿನಧಾರಿಯಾಗಿ ನಾಲ್ಕು ರಾತ್ರಿಗಳಿಗೊಮ್ಮೆ ಹಣ್ಣುಗಳನ್ನು ತಿನ್ನುತ್ತಾ ಒಂದು ತಿಂಗಳನ್ನು ಕಳೆದನು. ಎರಡನೇ ತಿಂಗಳಿನಲ್ಲಿ ಅವನು ಎಂಟು ರಾತ್ರಿಗಳಿಗೊಮ್ಮೆ ಆಹಾರ ಸೇವಿಸುತ್ತಿದ್ದನು. ಮೂರನೆಯ ತಿಂಗಳನ್ನು ಹದಿನೈದು ದಿನಗಳಿಗೊಮ್ಮೆ ಭೂಮಿಯ ಮೇಲೆ ಒಣಗಿ ಸತ್ತು ಬಿದ್ದಿರುವ ತರಗೆಲೆಗಳನ್ನು ತಿನ್ನುತ್ತಾ ಕಳೆದನು. ನಾಲ್ಕನೆಯ ತಿಂಗಳಿನ ಹುಣ್ಣಿಮೆಯು ಬಂದಾಗ ಮಹಾಬಾಹು ಪಾಂಡುನಂದನನು ಎರಡೂ ಕೈಗಳನ್ನು ಮೇಲೆತ್ತಿ, ಯಾವ ಬೆಂಬಲವೂ ಇಲ್ಲದೆ ಕೇವಲ ಕಾಲಿನ ಅಂಗುಷ್ಟದ ಮೇಲೆ ನಿಂದು ಕೇವಲ ಗಾಳಿಯನ್ನು ಸೇವಿಸುತ್ತಾ ತಪಸ್ಸು ಮಾಡಿದನು.
ಆಗ ಎಲ್ಲ ಮಹರ್ಷಿಗಳು ದೇವ ಪಿನಾಕಿಯಲ್ಲಿಗೆ ಹೋದರು ಮತ್ತು ಆ ಶಿತಿಕಂಠ ಮಹಾಭಾಗನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಅವನ ದಯೆಯನ್ನು ಕೋರಿದರು. ಫಲ್ಗುನನ ಕೆಲಸದ ಕುರಿತು ಅವರೆಲ್ಲರೂ ನಿವೇದಿಸಿದರು:
“ಈ ಮಹಾತೇಜಸ್ವಿ ಪಾರ್ಥನು ಹಿಮವತ್ಪರ್ವತದ ತುದಿಯಲ್ಲಿ ನಿಂತು ಉಗ್ರ ದುಷ್ಕರ ತಪಸ್ಸನ್ನು ಮಾಡುತ್ತಾ ಎಲ್ಲ ದಿಕ್ಕುಗಳನ್ನೂ ಹೊಗೆಯಿಂದ ತುಂಬಿಸಿದ್ದಾನೆ. ದೇವೇಶ! ನಮ್ಮಲ್ಲಿ ಯಾರಿಗೂ ಅವನು ಏನನ್ನು ಬಯಸುತ್ತಿದ್ದಾನೆನ್ನುವುದು ತಿಳಿಯುತ್ತಿಲ್ಲ. ಎಲ್ಲರನ್ನೂ ಸಂತಾಪಿಸುತ್ತಿದ್ದಾನೆ. ಅವನನ್ನು ತಡೆಗಟ್ಟುವುದು ಒಳ್ಳೆಯದು.”
ಮಹೇಶ್ವರನು ಹೇಳಿದನು:
“ಸಂಹೃಷ್ಟರಾಗಿ ಏನೂ ಚಿಂತೆಮಾಡದೇ ನೀವು ಎಲ್ಲಿಂದ ಬಂದಿದ್ದೀರೋ ಅಲ್ಲಿಗೆ ತೆರಳಿ. ಅವನ ಮನಸ್ಸಿನಲ್ಲಿರುವ ಸಂಕಲ್ಪವನ್ನು ನಾನು ತಿಳಿದಿದ್ದೇನೆ. ಅವನು ಸ್ವರ್ಗವನ್ನೂ ಬಯಸುತ್ತಿಲ್ಲ. ಈಶ್ವರತ್ವವನ್ನೂ ಬಯಸುತ್ತಿಲ್ಲ. ಅಮರತ್ವವನ್ನೂ ಬಯಸುತ್ತಿಲ್ಲ. ಇಂದೇ ನಾನು ಅವನ ಮನಸ್ಸಿನ ಬಯಕೆಯನ್ನು ಈಡೇರಿಸಿಕೊಡುತ್ತೇನೆ.”
ಶರ್ವನ ಆ ವಚನವನ್ನು ಕೇಳಿದ ಸತ್ಯವಾದಿ ಋಷಿಗಳು ಸಂತೋಷಗೊಂಡು ಪುನಃ ತಮ್ಮ ತಮ್ಮ ಆಶ್ರಮಗಳಿಗೆ ಹಿಂದಿರುಗಿದರು.
ಕಿರಾತ-ಅರ್ಜುನರೊಡನೆ ಯುದ್ಧ
ಆ ಮಹಾತ್ಮ ತಪಸ್ವಿಗಳೆಲ್ಲರೂ ಹೊರಟು ಹೋಗಲು, ಸರ್ವಪಾಪಹರ ಪಿನಾಕಪಾಣಿ ಭಗವಾನ್ ಹರನು ಕಾಂಚನ ವೃಕ್ಷದಂತೆ ಕಾಂತಿಯುಕ್ತನಾಗಿ, ಗಿರಿಗಳಲ್ಲಿ ಇನ್ನೊಂದು ಮೇರು ಪರ್ವತದಂತೆ ಹೊಳೆಯುತ್ತಾ ಕಿರಾತನ ವೇಷವನ್ನು ಪಡೆದನು. ವಿಷಭರಿತ ಸರ್ಪಗಳಂತಿದ್ದ ಶ್ರೀಮಂತ ಧನುಸ್ಸು ಮತ್ತು ಶರಗಳನ್ನು ಹಿಡಿದು, ಸಾಗರದ ಒಡಲನ್ನು ಸುಡುವ ಅಗ್ನಿಯಂತೆ ಬೆಳಗುತ್ತಾ ಕೆಳಗಿಳಿದನು. ಆ ಶ್ರೀಮಾನ್ ದೇವನು ಅದೇ ವೇಷವನ್ನು ಧರಿಸಿ, ಹಾಗೆಯೇ ನಡೆದುಕೊಳ್ಳುತ್ತಿದ್ದ ದೇವಿ ಉಮೆಯೊಡನೆ ಮತ್ತು ವೇಷಗಳನ್ನು ಧರಿಸಿ ಸಂತೋಷದಿಂದ ಕುಣಿದಾಡುತ್ತಿದ್ದ ನಾನಾ ಭೂತಗಳೊಡನಿದ್ದನು. ಕಿರಾತವೇಷವನ್ನು ಧರಿಸಿದ್ದ ಸಹಸ್ರಾರು ಸ್ತ್ರೀಯರೊಂದಿಗಿದ್ದ ದೇವನು ಅತೀವ ಸುಂದರನಾಗಿ ಕಾಣುತ್ತಿದ್ದನು. ಕ್ಷಣದಲ್ಲಿಯೇ ಆ ವನ ಸರ್ವವೂ ನಿಃಶಬ್ಧವಾಯಿತು ಮತ್ತು ಝರಿ-ಪಕ್ಷಿಗಳ ನಿನಾದಗಳು ನಿಂತವು.
ಅವನು ಅಕ್ಲಿಷ್ಟಕರ್ಮಿ ಪಾರ್ಥನ ಬಳಿ ಬರುತ್ತಿದ್ದಂತೆ ಅದ್ಭುತವಾಗಿ ತೋರುತ್ತಿದ್ದ ಮೂಕ ಎಂಬ ಹೆಸರಿನ ದಿತಿಯ ಪರಮ ದುಷ್ಟಾತ್ಮ ಮಗನು ಹಂದಿಯ ರೂಪವನ್ನು ತಾಳಿ ಅರ್ಜುನನನ್ನು ಕೊಲ್ಲುವ ಯೋಚನೆಯಲ್ಲಿದ್ದುದನ್ನು ಕಂಡನು. ಆಗ ಫಲ್ಗುನನು ಗಾಂಡೀವ ಧನುಸ್ಸು ಮತ್ತು ವಿಷಕ್ಕೆ ಸಮಾನ ಬಾಣಗಳನ್ನು ಎತ್ತಿ, ಆ ಶ್ರೇಷ್ಠ ದನುಸ್ಸನ್ನು ಬಿಗಿದು, ಠೇಂಕಾರವನ್ನು ಮೊಳಗಿಸಿ ಹೇಳಿದನು: “ಏನೂ ಪಾಪಗಳನ್ನೆಸಗದೇ ಇಲ್ಲಿಗೆ ಬಂದಿರುವ ನನ್ನನ್ನು ಕೊಲ್ಲಲು ಬಯಸುತ್ತಿರುವೆಯಾದುದರಿಂದ ಅದಕ್ಕೆ ಮೊದಲೇ ನಾನು ನಿನ್ನನ್ನು ಯಮಸಾದನಕ್ಕೆ ಕಳುಹಿಸುತ್ತೇನೆ!” ದೃಢಧನ್ವಿ ಫಲ್ಗುನನು ಅವನನ್ನು ಹೊಡೆಯುತ್ತಿರುವುದನ್ನು ನೋಡಿದ ಕಿರಾತರೂಪಿ ಶಂಕರನು ತಕ್ಷಣವೇ ಅವನನ್ನು ತಡೆದನು: “ಕಪ್ಪು ಮೋಡದಂತಿರುವ ಇವನಿಗೆ ಮೊದಲು ಗುರಿಯಿಟ್ಟವನು ನಾನು!” ಆದರೆ ಅವನ ಮಾತನ್ನು ಅನಾದರಿಸಿ ಫಲ್ಗುನನು ಆ ಪ್ರಾಣಿಯನ್ನು ಹೊಡೆದನು. ಮಹಾದ್ಯುತಿ ಕಿರಾತನೂ ಕೂಡ ಏಕಕಾಲದಲ್ಲಿ ಅಗ್ನಿಶಿಖೆಗೆ ಸಮಾನ ಅಥವಾ ಮಿಂಚಿನಂತಿರುವ ಶರವನ್ನು ಅದಕ್ಕೇ ಗುರಿಯನ್ನಿಟ್ಟು ಹೊಡೆದನು. ಅವರಿಬ್ಬರೂ ಬಿಟ್ಟ ಬಾಣಗಳು ಒಂದೇ ಕಾಲದಲ್ಲಿ ಪರ್ವತದಷ್ಟು ದೊಡ್ಡದಾಗಿದ್ದ ಮೂಕನ ದೇಹದ ಮೇಲೆ ಬಿದ್ದವು. ಪರ್ವತದ ಮೇಲೆ ಮಿಂಚು ಮತ್ತು ಸಿಡಿಲು ಬೀಳುವಂತೆ ಆ ಎರಡು ಬಾಣಗಳೂ ಅವನ ಮೇಲೆ ಬಿದ್ದವು. ಉರಿಯುತ್ತಿರುವ ಬಾಯಿಯ ಸರ್ಪಗಳಂತಿರುವ ಆ ಎರಡು ಬಾಣಗಳ ಹೊಡೆತದಿಂದ ಆ ರಾಕ್ಷಸನು ಸತ್ತು, ತನ್ನ ವಿಭೀಷಣ ರೂಪವನ್ನು ಹೊಂದಿ ಬಿದ್ದನು.
ಅಮಿತ್ರಹ ಕೌಂತೇಯ ಜಿಷ್ಣುವು ಕಾಂಚನಪ್ರಭೆಯ, ಕಿರಾತವೇಷದಲ್ಲಿದ್ದ, ಸ್ತ್ರೀಯರ ಜೊತೆಗೂಡಿದ್ದ ಪುರುಷನನ್ನು ನೋಡಿ ಸಂತೋಷದಿಂದ ನಗುತ್ತಾ ಹೇಳಿದನು:
“ಈ ಶೂನ್ಯ ವನದಲ್ಲಿ ಸ್ತ್ರೀಗಣಗಳಿಂದ ಸುತ್ತುವರೆದು ತಿರುಗಾಡುತ್ತಿರುವ ನೀನು ಯಾರು? ಕನಕಪ್ರಭ! ಈ ಘೋರ ವನದಲ್ಲಿ ನಿನಗೆ ಭಯವಾಗುವುದಿಲ್ಲವೇ? ನನ್ನದಾಗಿದ್ದ ಈ ಮೃಗವನ್ನು ನೀನು ಏಕೆ ಹೊಡೆದೆ? ಇಲ್ಲಿಗೆ ಬಂದಿದ್ದ ಈ ರಾಕ್ಷಸನನ್ನು ಮೊದಲು ನೋಡಿದ್ದುದು ನಾನು. ಬೇಕೆಂತಲೇ ನೀನು ಇದನ್ನು ಮಾಡಿರಬಹುದು ಅಥವಾ ತಪ್ಪೆಂದು ತಿಳಿಯದೇ ಮಾಡಿರಬಹುದು. ಆದರೆ ನೀನು ಮಾತ್ರ ಜೀವಂತನಾಗಿ ನನ್ನಿಂದ ತಪ್ಪಿಸಕೊಳ್ಳಲಾರೆ! ಇಂದು ನೀನು ನನ್ನೊಡನೆ ನಡೆದುಕೊಂಡಿದ್ದುದು ಬೇಟೆಯಾಡುವವನ ಧರ್ಮವಲ್ಲ. ಪರ್ವತವಾಸಿಯೇ! ನಾನು ನಿನ್ನಿಂದ ನಿನ್ನ ಜೀವವನ್ನು ತೆಗೆಯುತ್ತೇನೆ.”
ಪಾಂಡವನು ಹೀಗೆ ಹೇಳಲು ಕಿರಾತನು ನಗುತ್ತಾ ಆ ಸವ್ಯಸಾಚಿ ಪಾಂಡವನಿಗೆ ಮೃದುಧ್ವನಿಯಲ್ಲಿ ಹೇಳಿದನು:
“ಅದಕ್ಕೆ ನಾನೇ ಮೊದಲು ಗುರಿಯಿಟ್ಟಿದ್ದೆಯಾದುದರಿಂದ ಅದು ನನಗೇ ಸೇರಿದ್ದು. ಮತ್ತು ನನ್ನ ಬಾಣದ ಹೊಡೆತದಿಂದಲೇ ಅವನು ಸತ್ತಿದ್ದು. ನಿನ್ನಲ್ಲಿದ್ದ ದೋಷವನ್ನು ಇನ್ನೊಬ್ಬರ ಮೇಲೆ ಹಾಕುವಷ್ಟು ನಿನ್ನ ಬಲದ ಕುರಿತು ಗರ್ವ ಪಡಬೇಡ. ಮೂಢ! ನೀನು ನನ್ನನ್ನು ಅವಹೇಳಿಸಿದುದಕ್ಕೆ ನನ್ನಿಂದ ನೀನು ಜೀವಂತ ತಪ್ಪಿಸಿಕೊಳ್ಳಲಾರೆ! ಸ್ಥಿರನಾಗು. ಸಿಡಿಲಿನಂತಿರುವ ಬಾಣಗಳನ್ನು ಬಿಡುತ್ತೇನೆ. ನೀನೂ ಕೂಡ ನಿನಗೆ ಎಷ್ಟು ಸಾದ್ಯವೋ ಅಷ್ಟು ಬಾಣಗಳನ್ನು ಬಿಡು!”
ಪುನಃ ಪುನಃ ಘರ್ಜಿಸುತ್ತಾ ಅವರಿಬ್ಬರೂ ಸರ್ಪಗಳಂತಿರುವ ವಿಷಕಾರೀ ಬಾಣಗಳಿಂದ ಪರಸ್ಪರರನ್ನು ಚುಚ್ಚಿದರು. ಆಗ ಅರ್ಜುನನು ಬಾಣಗಳ ಮಳೆಯನ್ನೇ ಕಿರಾತನ ಮೇಲೆ ಸುರಿಸಿದನು. ಅದನ್ನು ಶಂಕರನು ಪ್ರಸನ್ನ ಮನಸ್ಸಿನಿಂದ ಸ್ವೀಕರಿಸಿದನು. ಪಿನಾಕಧಾರಿಯು ಒಂದು ಕ್ಷಣ ಆ ಶರವರ್ಷವನ್ನು ತಡೆದುಕೊಂಡು ಶರೀರದಲ್ಲಿ ಗಾಯಗೊಳ್ಳದೇ ಪರ್ವತದಂತೆ ಅಚಲವಾಗಿ ನಿಂತುಕೊಂಡನು. ತನ್ನ ಬಾಣಗಳ ಮಳೆಯು ನಿರರ್ಥಕವಾದುದನ್ನು ನೋಡಿ ಧನಂಜಯನು ಪರಮ ವಿಸ್ಮಿತನಾಗಿ “ಸಾಧು! ಸಾಧು!” ಎಂದು ಹೇಳತೊಡಗಿದನು.
“ಆಹಾ! ಈ ಹಿಮಾಲಯ ಶಿಖರದ ಮೇಲೆ ವಾಸಿಸುವ, ಸುಕುಮಾರಾಂಗನು ವಿಹ್ವಲನಾಗದೇ ಗಾಂಡೀವದಿಂದ ಬಿಡಲ್ಪಟ್ಟ ಈ ಲೋಹದ ಬಾಣಗಳನ್ನು ತಡೆದುಕೊಳ್ಳುತ್ತಿದ್ದಾನಲ್ಲ! ಇವನು ಯಾರಿರಬಹುದು? ದೇವನೋ, ಸಾಕ್ಷಾತ್ ರುದ್ರನೋ, ಯಕ್ಷನೋ, ಇಂದ್ರನೋ ಇರಬಹುದೇ? ಈ ಶ್ರೇಷ್ಠ ಪರ್ವತದ ಮೇಲೆ ಮೂವತ್ತು ದೇವರುಗಳು ಒಟ್ಟುಗೂಡುತ್ತಾರೆ ಎಂದು ತಿಳಿದುಕೊಂಡಿದ್ದೇನೆ. ದೇವ ಪಿನಾಕಿಯನ್ನು ಬಿಟ್ಟು ಬೇರೆ ಯಾರಿಗೂ ನನ್ನಿಂದ ಬಿಡಲ್ಪಟ್ಟ ಸಹಸ್ರಾರು ಬಾಣಗಳ ಮಳೆಯ ಹೊಡೆತವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ! ದೇವತೆಯಾಗಿರಬಹುದು ಅಥವಾ ಯಕ್ಷನಾಗಿರಬಹುದು. ರುದ್ರನಲ್ಲದೇ ಬೇರೆ ಯಾರೇ ಇಲ್ಲಿಗೆ ಬಂದಿರಲಿ, ಅವನನ್ನು ನನ್ನ ಈ ತೀಕ್ಷ್ಣ ಬಾಣಗಳಿಂದ ಯಮಸಾದನಕ್ಕೆ ಕಳುಹಿಸುತ್ತೇನೆ.”
ಆಗ ಸಂತೋಷದಿಂದ ಜಿಷ್ಣುವು ಭಾಸ್ಕರನು ತನ್ನ ಕಿರಣಗಳನ್ನು ಪಸರಿಸುವಂತೆ ನೂರಾರು ಮರ್ಮಭೇದಿ ಬಾಣಗಳನ್ನು ಬಿಟ್ಟನು. ಲೋಕಭಾವನ ಭಗವಾನ್ ಶೂಲಪಾಣಿಯು ಮಳೆಯಡಿಯಲ್ಲಿ ಅಚಲವಾಗಿ ನಿಲ್ಲುವ ಪರ್ವತದಂತೆ ಪ್ರಸನ್ನ ಮನಸ್ಸಿನಿಂದಲೇ ಆ ಬಾಣಗಳನ್ನು ಸ್ವೀಕರಿಸಿದನು. ಸ್ವಲ್ಪ ಸಮಯದಲ್ಲಿಯೇ ಫಲ್ಗುನನ ಬಾಣಗಳು ಮುಗಿದುಹೋದವು. ತನ್ನ ಬಾಣಗಳು ಇಲ್ಲವಾದುದನ್ನು ನೋಡಿ ಅವನು ಅಲ್ಲಿಯೇ ತತ್ತರಿಸಿ ನಿಂತನು. ಆಗ ಜಿಷ್ಣುವು ಹಿಂದೆ ಖಾಂಡವವನದಲ್ಲಿ ಭಗವಂತ ಅಗ್ನಿಯು ಕೊಟ್ಟಿದ್ದ ಎರಡು ಅಕ್ಷಯ ಬತ್ತಳಿಕೆಗಳ ಕುರಿತು ಯೋಚಿಸಿದನು:
“ಬಾಣಗಳು ಮುಗಿದು ಹೋದವಲ್ಲ! ಈಗ ನಾನು ನನ್ನ ಧನುಸ್ಸಿನಿಂದ ಏನನ್ನು ಪ್ರಯೋಗಿಸಲಿ? ಎಲ್ಲ ಬಾಣಗಳನ್ನೂ ಕಬಳಿಸುವ ಈ ಪುರುಷನಾದರೂ ಯಾರು? ಆನೆಯನ್ನು ಈಟಿಯ ಕೊನೆಯಿಂದ ಹೊಡೆಯುವಂತೆ ನಾನು ಇವನನ್ನು ಧನುಸ್ಸಿನ ತುದಿಯಿಂದ ಹೊಡೆದು ದಂಡಧಾರಿ ಯಮನ ಸದನಕ್ಕೆ ಕಳುಹಿಸುತ್ತೇನೆ!”
ಪರವೀರಹ ಕೌಂತೇಯನು ಧನುಸ್ಸಿನ ತುದಿಯಿಂದ ಹೊಡೆಯಲು ಆ ಗಿರಿಗೋಚರನು ಅವನ ಆ ದಿವ್ಯ ಧನುಸ್ಸನ್ನೂ ಕಸಿದುಕೊಂಡನು. ತನ್ನ ಧನುಸ್ಸನ್ನು ಕಳೆದುಕೊಂಡ ಅರ್ಜುನನು ಖಡ್ಗವನ್ನು ಹಿಡಿದು ನಿಂತು ಯುದ್ಧವನ್ನು ಕೊನೆಗೊಳಿಸಲು ಇಚ್ಛಿಸಿ, ಅವನನ್ನು ಅದರಿಂದ ವೇಗವಾಗಿ ಆಕ್ರಮಣಿಸಿದನು. ಪರ್ವತದ ಮೇಲೆ ಹೊಡೆದರೂ ಮೊಡ್ಡಾಗದಂತಿದ್ದ ಆ ಹರಿತ ಖಡ್ಗವನ್ನು ಕುರುನಂದನನು ಧೈರ್ಯದಿಂದ ತನ್ನ ಭುಜ ಬಲದಿಂದ ಬೀಸಿ ಎಸೆಯಲು, ಅವನ ತಲೆಯನ್ನು ಹೊಡೆದ ಖಡ್ಗವು ಚೂರುಚೂರಾಗಿ ಬಿದ್ದಿತು. ಆಗ ಫಲ್ಗುನನು ಮರಗಳು ಮತ್ತು ಕಲ್ಲುಬಂಡೆಗಳಿಂದ ಯುದ್ಧಮಾಡತೊಡಗಿದನು ಮತ್ತು ಆ ಮಹಾಕಾಯನು ಮರಗಳನ್ನೂ ಕಲ್ಲು ಬಂಡೆಗಳನ್ನೂ ಸಹಿಸಿಕೊಂಡನು. ಆಗ ಮಹಾಬಲಿ ಪಾರ್ಥನು ಬಾಯಿಯಿಂದ ಹೊಗೆಯನ್ನು ಕಾರುತ್ತಾ ಆ ಕಿರಾತರೂಪಿ ಭಗವಂತನ ಮೇಲೆ ಮಿಂಚಿನಂತಿದ್ದ ತನ್ನ ಮುಷ್ಟಿಯಿಂದ ಗುದ್ದಿದನು. ಕಿರಾತನಂತೆ ತೋರುತ್ತಿದ್ದ ಆ ಕಿರಾತರೂಪಿಯು ಇಂದ್ರನ ವಜ್ರಾಯುಧದಂತಿದ್ದ ತನ್ನ ಮುಷ್ಟಿಯಿಂದ ಫಲ್ಗುನನನ್ನು ಗುದ್ದಿ ಅವನಿಗೆ ನೋವುಂಟುಮಾಡಿದನು. ಆಗ ಅಲ್ಲಿ ಘೋರ ಯುದ್ಧವು ನಡೆಯಿತು. ಪಾಂಡವ ಮತ್ತು ಕಿರಾತನ ಮುಷ್ಟಿಯುದ್ಧದಿಂದ ಚಟಚಟ ಶಬ್ಧವು ಕೇಳಿ ಬರುತ್ತಿತ್ತು. ಭುಜಗಳಿಂದ ಹೊಡೆದಾಡುತ್ತಿದ್ದ ಆ ಮೈ ನವಿರೇಳಿಸುವ ಯುದ್ಧವು ಸ್ವಲ್ಪ ಸಮಯ ವೃತ್ರ ಮತ್ತು ಇಂದ್ರನ ನಡುವೆ ನಡೆದ ಯುದ್ಧದಂತೆ ತೋರುತ್ತಿತ್ತು. ಆಗ ಬಲಶಾಲಿ ಜಿಷ್ಣುವು ಕಿರಾತನ ಎದೆಯನ್ನು ಬಿಗಿಯಾಗಿ ಹಿಡಿಯಲು ಕಿರಾತನು ಬಲದಿಂದ ಪಾಂಡವನನ್ನು ಮೂರ್ಛೆಗೊಳಿಸುವಂತೆ ಹೊಡೆದನು. ಅವರ ತೋಳುಗಳ ಪೆಟ್ಟಿನಿಂದ ಮತ್ತು ಅವರ ಎದೆಗಳ ಸಂಘರ್ಷದಿಂದ ಅವರ ದೇಹಗಳಿಂದ ಕಿಡಿ ಮತ್ತು ಹೊಗೆಯುಕ್ತ ಬೆಂಕಿಯು ಹುಟ್ಟಿತು. ಆಗ ಮಹಾದೇವನು ಅವನ ದೇಹವನ್ನು ಬಿಗಿಯಾಗಿ ಹಿಡಿದು ರೋಷದಿಂದ ಜೋರಾಗಿ ಹೊಡೆದು ಅವನನ್ನು ಮೂರ್ಛೆಗೊಳಿಸಿದನು. ದೇವದೇವನ ಹಿಡಿತಕ್ಕೆ ಸಿಲುಕಿ ಮೈ ಮದ್ದೆಯಾಗಲು ಫಲ್ಗುನನು ತನ್ನ ದೇಹದ ನಿಯಂತ್ರಣವನ್ನು ಕಳೆದುಕೊಂಡನು. ಮಹಾತ್ಮನಿಂದ ಸೋಲಲ್ಪಟ್ಟು, ಉಸಿರಾಡುವುದನ್ನೂ ನಿಲ್ಲಿಸಿ ಮೂರ್ಛೆಗೊಂಡು ಬಿದ್ದನು. ಆಗ ಭವನು ಸಂತುಷ್ಟನಾದನು. ಭಗವಂತನು ಹೇಳಿದನು:
“ಓ ಫಲ್ಗುನ! ನಿನ್ನ ಅಪ್ರತಿಮ ಕರ್ಮ, ಶೌರ್ಯ ಮತ್ತು ಸ್ಥಿರತೆಗಳಿಂದ ಸಂತುಷ್ಟನಾಗಿದ್ದೇನೆ. ನಿನ್ನ ಸರಿಸಮನಾದ ಕ್ಷತ್ರಿಯನಿಲ್ಲ! ಇಂದು ನಿನ್ನ ತೇಜಸ್ಸು ಮತ್ತು ವೀರ್ಯವು ನನ್ನ ಸರಿಸಾಟಿಯಾಗಿತ್ತು. ನಿನ್ನ ಮೇಲೆ ಪ್ರೀತನಾಗಿದ್ದೇನೆ. ನನ್ನನ್ನು ನೋಡು! ವಿಶಾಲಾಕ್ಷ! ನಿನಗೆ ನಾನು ಕಣ್ಣುಗಳನ್ನು ಕೊಡುತ್ತೇನೆ. ಹಿಂದೆ ನೀನು ಋಷಿಯಾಗಿದ್ದೆ. ದೇವತೆಗಳಾಗಿದ್ದರೂ ನೀನು ರಣದಲ್ಲಿ ನಿನ್ನ ಶತ್ರುಗಳನ್ನು ಜಯಿಸುತ್ತೀಯೆ.”
ಅನಂತರ ಫಲ್ಗುನನು ಶೂಲಪಾಣಿ ಮಹಾದ್ಯುತಿ ಮಹಾದೇವ ದೇವ ಗಿರೀಶನನ್ನು ದೇವಿಯ ಸಹಿತ ನೋಡಿದನು. ತನ್ನ ಮೊಳಕಾಲುಗಳನ್ನೂರಿ ನೆಲಕ್ಕೆ ಮುಟ್ಟುವಂತೆ ತಲೆಬಾಗಿ ನಮಸ್ಕರಿಸಿ ಪರಪುರಂಜಯ ಪಾರ್ಥನು ಹರನನ್ನು ಮೆಚ್ಚಿಸಿದನು:
“ಕಪರ್ದಿನೇ! ಸರ್ವಭೂತೇಶ! ಭಗನೇತ್ರನಿಪಾತಿನೇ! ಶಂಕರ! ಭಗವನ್! ನನ್ನ ತಪ್ಪನ್ನು ಕ್ಷಮಿಸು! ದೇವೇಶ! ನಿನ್ನನ್ನು ಕಾಣಲೋಸುಗವೇ ನಾನು ನಿನ್ನ ಅಚ್ಚುಮೆಚ್ಚಿನ, ತಾಪಸರಿಗೆ ಉತ್ತಮವಾದ ಈ ಮಹಾಗಿರಿಗೆ ಬಂದು ತಲುಪಿದ್ದೇನೆ. ಭಗವನ್! ಸರ್ವಭೂತನಮಸ್ಕೃತ! ಮಹಾದೇವ! ನನ್ನ ಈ ಅತಿಸಾಹಸವು ಅಪರಾಧವಾಗದಿರಲಿ! ಶಂಕರ! ನಿನಗೆ ಶರಣು ಬಂದು ನನ್ನನ್ನು ನಿನಗೆ ಅರ್ಪಿಸುತ್ತಿದ್ದೇನೆ. ತಿಳಿಯದೇ ನಿನ್ನೊಂದಿಗೆ ಹೋರಾಡಿದ ನನ್ನ ಈ ತಪ್ಪನ್ನು ಕ್ಷಮಿಸು!”
ಮಹಾತೇಜಸ್ವಿ ವೃಷಭಧ್ವಜನು ಫಲ್ಗುನನ ಸುಂದರ ಬಾಹುಗಳನ್ನು ಹಿಡಿದು, ನಕ್ಕು ಅವನಿಗೆ “ಕ್ಷಮಿಸಿದ್ದೇನೆ!” ಎಂದು ಹೇಳಿದನು.
ಪಾಶುಪತ ಪ್ರದಾನ
ಭಗವಂತನು ಹೇಳಿದನು:
“ನೀನು ಹಿಂದಿನ ದೇಹದಲ್ಲಿ ನಾರಾಯಣನ ಸಹಾಯಕ ನರನಾಗಿದ್ದೆ ಮತ್ತು ಬದರಿಯಲ್ಲಿ ಬಹಳಷ್ಟು ಸಾವಿರ ವರ್ಷಗಳ ಉಗ್ರ ತಪಸ್ಸನ್ನು ತಪಿಸಿದ್ದೆ. ಪುರುಷೋತ್ತಮ ವಿಷ್ಣುವಿನಲ್ಲಿರುವ ಪರಮ ತೇಜಸ್ಸು ನಿನ್ನಲ್ಲಿಯೂ ಇದೆ. ನೀವಿಬ್ಬರು ಪುರುಷವ್ಯಾಘ್ರರ ತೇಜಸ್ಸೇ ಈ ಜಗತ್ತನ್ನು ಪಾಲಿಸುತ್ತಿದೆ. ಶಕ್ರನ ಅಭಿಷೇಕದಲ್ಲಿ ನೀನು ಮತ್ತು ಕೃಷ್ಣನು ಮೋಡಗಳಂತೆ ಧ್ವನಿಸುವ ಮಹಾ ಧನುಸ್ಸನ್ನು ಹಿಡಿದು ದಾನವರನ್ನು ನಿಯಂತ್ರಿಸಿದ್ದಿರಿ. ಪಾರ್ಥ! ಅದೇ ಗಾಂಡೀವವನ್ನು ನಿನ್ನ ಕೈಯಿಂದ ನನ್ನ ಮಾಯೆಯನ್ನು ಬಳಸಿ ನಾನು ಕಸಿದುಕೊಂಡೆ. ನಿನಗೆ ಉಚಿತವಾದ ಆ ಎರಡು ಅಕ್ಷಯ ಭತ್ತಳಿಕೆಗಳನ್ನು ಹಿಂದೆ ಪಡೆದುಕೋ. ನಿನ್ನ ಸತ್ಯಪರಾಕ್ರಮವನ್ನು ಮೆಚ್ಚಿದ್ದೇನೆ. ನಿನಗೆ ಏನು ಬೇಕೋ ಆ ವರವನ್ನು ಪಡೆದುಕೋ. ನಿನ್ನ ಸರಿಸಮನಾದ ಪುರುಷನು ಮಾನವರಲ್ಲಿ ಅಥವಾ ದೇವಲೋಕದಲ್ಲಿ ಯಾರೂ ಇಲ್ಲ. ಕ್ಷತ್ರಿಯರಲ್ಲಿ ನೀನೇ ಪ್ರಧಾನನಾದವನು.”
ಅರ್ಜುನನು ಹೇಳಿದನು:
“ಭಗವನ್! ವೃಷಧ್ವಜ! ಪ್ರಭೋ! ನನಗೆ ಬೇಕಾದುದನ್ನು ಕೊಡಲು ಇಚ್ಛಿಸುವೆಯಾದರೆ ದಿವ್ಯಾಸ್ತ್ರವಾದ ಬ್ರಹ್ಮಶಿರ ಎನ್ನುವ ಹೆಸರಿನಿಂದ ಯಾವುದು ಕರೆಯಲ್ಪಡುತ್ತದೆಯೋ ಆ ಘೋರ, ರೌದ್ರ, ಭೀಮಪರಾಕ್ರಮ, ದಾರುಣ ಯುಗಾಂತವು ಪ್ರಾಪ್ತವಾದಾಗ ಜಗತ್ತನ್ನು ಪೂರ್ತಿ ಸಂಹರಿಸುವ, ಪಾಶುಪತವನ್ನು ಬಯಸುತ್ತೇನೆ. ಅದರಿಂದ ಸಂಗ್ರಾಮದಲ್ಲಿ ದಾನವರನ್ನೂ ರಾಕ್ಷಸರನ್ನೂ ಭೂತ, ಪಿಶಾಚಿ, ಗಂಧರ್ವ ಮತ್ತು ಪನ್ನಗರನ್ನೂ ದಹಿಸಬಹುದು. ಅದನ್ನು ಅನುಮಂತ್ರಿಸಿದಾಗ ಅದರಿಂದ ಸಹಸ್ರಾರು ಶೂಲಗಳು ಮತ್ತು ಉಗ್ರವಾಗಿ ಕಾಣುವ ಗದೆಗಳು, ವಿಷಕಾರುವ ಬಾಣಗಳು ಹುಟ್ಟುತ್ತವೆ. ಇದರಿಂದ ರಣದಲ್ಲಿ ಭೀಷ್ಮ, ದ್ರೋಣ, ಕೃಪ, ಯಾವಾಗಲೂ ಕಟುಕಾಗಿ ಮಾತನಾಡುವ ಸೂತಪುತ್ರನೊಡನೆ ಯುದ್ಧಮಾಡಬಲ್ಲೆ. ಭಗವನ್! ಭಗನೇತ್ರಹ! ಇದು ನನ್ನ ಮೊಟ್ಟಮೊದಲಿನ ಬಯಕೆ. ನಿನ್ನ ಪ್ರಸಾದದಿಂದ ನಾನು ಸಮರ್ಥನಾಗಿ ಹಿಂದಿರುಗಬಹುದು.”
ಭಗವಂತನು ಹೇಳಿದನು:
“ಆ ಮಹಾ ಪಾಶುಪತ ಅಸ್ತ್ರವನ್ನು ನಿನಗೆ ಕೊಡುತ್ತೇನೆ. ಪಾಂಡವ! ಅದನ್ನು ಧಾರಣಮಾಡಬಲ್ಲೆ, ಪ್ರಯೋಗಮಾಡಬಲ್ಲೆ ಮತ್ತು ಅದರಿಂದ ಸಂಹಾರಮಾಡಬಲ್ಲೆ. ಇದನ್ನು ಮಹೇಂದ್ರನೂ, ಯಮನೂ, ಯಕ್ಷರಾಜನೂ, ವರುಣನೂ ಅಥವಾ ವಾಯುವೂ ತಿಳಿದಿಲ್ಲ. ಇನ್ನು ಮನುಷ್ಯರಲ್ಲಿ ಯಾರಿಗೆ ತಿಳಿದಿರಬೇಕು? ಆದರೆ, ನೀನು ಇದನ್ನು ಯಾವಾಗಲೂ ಸಾಹಸದಿಂದ ಮನುಷ್ಯನ ಮೇಲೆ ಪ್ರಯೋಗಿಸಬಾರದು. ಏಕೆಂದರೆ ಅಲ್ಪತೇಜಸ್ಸಿನವನ ಮೇಲೆ ಇದು ಬಿದ್ದರೆ ಇಡೀ ಜಗತ್ತನ್ನೇ ಸುಟ್ಟುಹಾಕಿಬಿಡುತ್ತದೆ. ಮೂರೂ ಲೋಕಗಳಲ್ಲಿಯೂ ಇದಕ್ಕೆ ಅವಧ್ಯ ಎನ್ನುವವರು ಯಾವ ಚರಾಚರರೂ ಇಲ್ಲ. ಮತ್ತು ಇದನ್ನು ಮನಸ್ಸಿನಿಂದ, ನೋಟದಿಂದ, ಮಾತಿನಿಂದ ಅಥವಾ ಧನುಸ್ಸಿನಿಂದ ಪ್ರಯೋಗಿಸಬಹುದು.”
ಇದನ್ನು ಕೇಳಿ ಬೇಗನೇ ಪಾರ್ಥನು ಶುಚಿರ್ಭೂತನಾಗಿ ದಿಟ್ಟನಾಗಿ ವಿಶ್ವೇಶ್ವರನ ಪಾದಗಳನ್ನು ಹಿಡಿಯಲು ಅವನು “ಇದನ್ನು ಕಲಿತುಕೋ!” ಎಂದು ಹೇಳಿದನು. ನಂತರ ಅವನು ಪಾಂಡವಶ್ರೇಷ್ಠನಿಗೆ ಅಂತಕನ ಮೂರ್ತಿವತ್ತಾಗಿದ್ದ ಆ ಅಸ್ತ್ರವನ್ನು ಹೇಗೆ ಪ್ರಯೋಗಿಸಬೇಕು ಮತ್ತು ಹೇಗೆ ಹಿಂತೆಗೆದುಕೊಳ್ಳಬೇಕು ಎನ್ನುವುದನ್ನು ಹೇಳಿಕೊಟ್ಟನು. ಮೂರುಕಣ್ಣಿನವನೊಡನೆ ಹೇಗೋ ಹಾಗೆ ಅದು ಆ ಮಹಾತ್ಮನ ಬಳಿಬಂದಿತು ಮತ್ತು ಅರ್ಜುನನು ಅದನ್ನು ಸ್ವೀಕರಿಸಿದನು. ಆಗ ಪೃಥ್ವಿಯು - ಅದರ ಪರ್ವತ, ವನ, ಮರಗಳು, ಸಾಗರ. ವನಪ್ರದೇಶಗಳು, ಮತ್ತು ಗ್ರಾಮನಗರಗಳೊಡನೆ - ಕಂಪಿಸಿತು. ಆದೇ ಸಮಯದಲ್ಲಿ ಸಹಸ್ರಾರು ಶಂಖ, ದುಂದುಭಿ, ಮತ್ತು ಭೇರಿಗಳ ಘೋಷವು ಕೇಳಿಬಂದಿತು ಮತ್ತು ಮಹಾ ಭೂಕಂಪವಾಯಿತು. ಆ ಜಾಜ್ವಲ್ಯಮಾನ ಘೋರ ಅಸ್ತ್ರವು ಅಮಿತೌಜಸ ಪಾಂಡವನ ಪಕ್ಕದಲ್ಲಿ ಮೂರ್ತಿವತ್ತಾಗಿ ನಿಂತಿದ್ದುದನ್ನು ದೇವದಾನವರು ವೀಕ್ಷಿಸಿದರು. ತ್ರ್ಯಂಬಕನು ಅಮಿತೌಜಸ ಫಲ್ಗುನನನ್ನು ಮುಟ್ಟಲು ಅವನ ದೇಹದಲ್ಲಿ ಏನೇನು ಅಶುಭಗಳಿದ್ದವೋ ಅವೆಲ್ಲವೂ ನಾಶವಾದವು. ಶಿರಬಾಗಿ ಅಂಜಲೀ ಬದ್ಧನಾಗಿ ಪಾರ್ಥನು ನಮಸ್ಕರಿಸಲು ಸ್ವರ್ಗಕ್ಕೆ ಹೋಗು ಎಂದು ತ್ರ್ಯಂಬಕನು ಅರ್ಜುನನಿಗೆ ಅನುಜ್ಞೆಯನ್ನಿತ್ತನು. ಆಗ ದೇವತೆಗಳ ಪ್ರಭು, ಮಹಾಮತಿ, ಗಿರೀಶ, ಉಮಾಪತಿ ಶಿವ ಭವನು ದೈತ್ಯರು ಮತ್ತು ಪಿಶಾಚರನ್ನು ಕೊಲ್ಲಬಲ್ಲ ಮಹಾಧನುಸ್ಸು ಗಾಂಡೀವವನ್ನು ಪುರುಷಶ್ರೇಷ್ಠನಿಗೆ ಕೊಟ್ಟನು. ಅನಂತರ ಅರ್ಜುನನು ನೋಡುತ್ತಿದ್ದಂತೆಯೇ ಆ ಶುಭ, ಈಶ್ವರನು ಉಮೆಯೊಂದಿಗೆ ಆ ಗಿರಿ, ತಟಾಕ, ಮತ್ತು ಕಣಿವೆಗಳಿಂದೊಡಗೂಡಿದ, ಪಕ್ಷಿಗಳು ಮತ್ತು ಮಹರ್ಷಿಗಳಿಂದ ಸೇವಿತ ಗಿರಿಶ್ರೇಷ್ಠವನ್ನು ಬಿಟ್ಟು ಆಕಾಶವನ್ನೇರಿದನು.
ಅವನು ನೋಡುತ್ತಿದ್ದಂತೆಯೇ ಸೂರ್ಯನು ಲೋಕದಿಂದ ಅಸ್ತನಾಗುವಂತೆ ಪಿನಾಕೀ ವೃಷಭಧ್ವಜನು ಅಲ್ಲಿಯೇ ಅದೃಶ್ಯನಾದನು. ಪರವೀರಹ ಅರ್ಜುನನು “ನಾನು ಸಾಕ್ಷಾತ್ ಮಹಾದೇವನನ್ನು ನೋಡಿದೆ!” ಎಂದು ಪರಮ ವಿಸ್ಮಿತನಾದನು:
“ತ್ರ್ಯಂಬಕ ಹರ ಪಿನಾಕೀ ವರದ ಸುಂದರನನ್ನು ನಾನು ನೋಡಿ ಮತ್ತು ಅವನು ತನ್ನ ಕೈಗಳಿಂದ ನನ್ನನ್ನು ಮುಟ್ಟಿ ನಾನು ಧನ್ಯನಾದೆ! ಅನುಗೃಹೀತನಾದೆ! ನನ್ನನ್ನು ನಾನೇ ಮೀರಿ ಕೃತಾರ್ಥನಾಗಿ ಹಿಂದಿರುಗುತ್ತಿದ್ದೇನೆ. ಹಿಂದಿರುಗಿ ಶತ್ರುಗಳೆಲ್ಲರನ್ನೂ ಗೆಲ್ಲುವುದಕ್ಕೆ ಇದನ್ನು ಬಳಸುತ್ತೇನೆ.”
ಲೋಕಪಾಲಕರಿಂದ ಆಯುಧಗಳ ಪ್ರದಾನ
ಆಗ ವೈಡೂರ್ಯವರ್ಣದಿಂದ ಹೊಳೆಯುತ್ತಿದ್ದ ಎಲ್ಲ ದಿಕ್ಕುಗಳನ್ನೂ ಬೆಳಗುತ್ತಾ ಜಲಚರಗಣಗಳಿಂದ, ನಾಗಗಳು, ನದನದಿಗಳು, ದೈತ್ಯರು, ಸಾಧ್ಯರು, ಮತ್ತು ದೇವತೆಗಳಿಂದ ಸುತ್ತುವರೆದು, ಜಲವಾಸಿಗಳ ಒಡೆಯ ಶ್ರೀಮಾನ್ ಜಲೇಶ್ವರ ವರುಣನು ಆ ಪ್ರದೇಶಕ್ಕೆ ಆಗಮಿಸಿದನು. ಅದೇ ಸಮಯದಲ್ಲಿ ಬಂಗಾರದ ಬಣ್ಣದ, ಸುಂದರ ವಿಮಾನವನ್ನೇರಿ, ಯಕ್ಷರಿಂದ ಅನುಸರಿಸಲ್ಪಟ್ಟ ಪ್ರಭು ಕುಬೇರನು ಅಲ್ಲಿಗೆ ಬಂದನು. ಇಡೀ ಆಕಾಶವನ್ನೇ ಬೆಳಗಿಸುತ್ತಾ ನೋಡಲು ಅದ್ಭುತನಾಗಿ ಕಾಣುತ್ತಿದ್ದ ಶ್ರೀಮಾನ್ ಕುಬೇರನು ಅರ್ಜುನನನ್ನು ಕಾಣಲು ಬಂದನು. ಹಾಗೆಯೇ ಲೋಕಾಂತಕ ಪ್ರತಾಪಿ, ದಂಡಪಾಣಿ, ಅಚಿಂತ್ಯಾತ್ಮ, ಸರ್ವಭೂತಗಳನ್ನು ವಿನಾಶಮಾಡುವ, ವೈವಸ್ವತ, ಧರ್ಮರಾಜ ಶ್ರೀಮಾನ್ ಸಾಕ್ಷಾತ್ ಯಮನು ಮೂರ್ತಿವಂತ ಮತ್ತು ಅಮೂರ್ತಿವಂತ ಲೋಕಭಾವನ ಪಿತೃಗಳೊಡನೆ ತನ್ನ ವಿಮಾನದ ಪ್ರಭೆಯನ್ನು ಗುಹ್ಯಕ-ಗಂಧರ್ವ-ಪನ್ನಗ ಈ ಮೂರೂ ಲೋಕಗಳನ್ನೂ ಬೆಳಗಿಸುತ್ತಾ, ಯುಗಾಂತದಲ್ಲಿ ಕಂಡುಬರುವ ಎರಡನೆಯ ಸೂರ್ಯನೋ ಎನ್ನುವಂತೆ ತೋರುತ್ತಾ ಆಗಮಿಸಿದನು. ಮಹಾಗಿರಿಯ ಶಿಖರಗಳನ್ನು ವಿಚಿತ್ರ ಕಾಂತಿಯಿಂದ ಬೆಳಗಿಸುತ್ತಾ ಅಲ್ಲಿಗೆ ಬಂದು ತಪಸ್ಸಿನಲ್ಲಿ ತೊಡಗಿದ್ದ ಅರ್ಜುನನನ್ನು ನೋಡಿದರು. ಸ್ವಲ್ಪವೇ ಸಮಯದಲ್ಲಿ ಭಗವಾನ್ ಶಕ್ರನು ಐರಾವತವನ್ನೇರಿ, ಸುರಗಣಗಳಿಂದ ಸುತ್ತುವರೆದು, ಇಂದ್ರಾಣಿಯೊಡನೆ ಅಲ್ಲಿಗೆ ಆಗಮಿಸಿದನು. ಅವನ ತಲೆಯ ಮೇಲೆ ಹಿಡಿದಿದ್ದ ಬಿಳೀಬಣ್ಣದ ಛತ್ರದಿಂದ ಅವನು ಬಿಳಿಯ ಮೋಡಗಳ ಮರೆಯಲ್ಲಿದ್ದ ಚಂದ್ರನಂತೆ ಶೋಭಿಸಿದನು. ಗಂಧರ್ವರು ಮತ್ತು ತಪೋಧನ ಋಷಿಗಳು ಅವನನ್ನು ಸಂಸ್ತುತಿಸುತ್ತಿರಲು ಅವನು ಗಿರಿಶೃಂಗವನ್ನು ಸೇರಿ ಉದಯಿಸುತ್ತಿರುವ ಸೂರ್ಯನಂತೆ ನಿಂತುಕೊಂಡನು. ಆಗ ಮೋಡಗಳ ಧ್ವನಿಯನ್ನು ಹೊಂದಿದ್ದ ಧೀಮಂತ, ಪರಮಧರ್ಮಜ್ಞ, ದಕ್ಷಿಣದಿಕ್ಕಿನಲ್ಲಿರುವ ಯಮನು ಶುಭಧ್ವನಿಯಲ್ಲಿ ಹೇಳಿದನು:
“ಅರ್ಜುನ! ಅರ್ಜುನ! ಇಲ್ಲಿ ಸೇರಿರುವ ಲೋಕಪಾಲಕರಾದ ನಮ್ಮನ್ನು ನೋಡು. ನಮ್ಮನ್ನು ನೋಡಲು ಅರ್ಹನಾದ ನಿನಗೆ ದೃಷ್ಟಿಯನ್ನು ನೀಡುತ್ತಿದ್ದೇವೆ. ನೀನು ಪೂರ್ವದಲ್ಲಿ ಅಮಿತಾತ್ಮ ಮಹಾಬಲಿ ನರ ಎಂಬ ಹೆಸರಿನ ಋಷಿಯಾಗಿದ್ದೆ. ಬ್ರಹ್ಮನ ಆದೇಶದಂತೆ ನೀನು ಮಹಾವೀರ್ಯ ಪರಾಕ್ರಮಿ ಇಂದ್ರನಿಗೆ ಹುಟ್ಟಿ ಮನುಷ್ಯರಲ್ಲಿ ಬಂದಿರುವೆ. ಮುಟ್ಟಲು ಅಗ್ನಿಯಂತಿರುವ, ಭಾರದ್ವಾಜನಿಂದ ರಕ್ಷಿತ ಕ್ಷತ್ರಿಯರನ್ನು, ಮನುಷ್ಯರಾಗಿ ಜನ್ಮತಳೆದ ಮಹಾವೀರ ದಾನವರು, ಮತ್ತು ನಿವಾತಕವಚರನ್ನೂ ನೀನು ನಿಯಂತ್ರಿಸಬೇಕಾಗಿದೆ. ಸರ್ವಲೋಕತಾಪಿನಿ ನನ್ನ ತಂದೆ ದೇವನ ಅಂಶವಾಗಿರುವ ಮಹಾವೀರ ಕರ್ಣನನ್ನು ನೀನು ವಧಿಸುತ್ತೀಯೆ. ಭೂಮಿಯ ಮೇಲೆ ಬಂದಿರುವ ದೇವ-ಗಂಧರ್ವ-ರಾಕ್ಷಸರ ಅಂಶಗಳನ್ನು ನೀನು ಯುದ್ಧದಲ್ಲಿ ಉರುಳಿಸಿದ ನಂತರ ತಮ್ಮ ತಮ್ಮ ಕರ್ಮಫಲಗಳಿಗನುಗುಣವಾಗಿ ಗತಿಯನ್ನು ಹೊಂದುತ್ತಾರೆ. ಲೋಕದಲ್ಲಿ ನಿನ್ನ ಕೀರ್ತಿಯು ಅಕ್ಷಯವಾಗಿರುತ್ತದೆ. ನೀನು ಸಾಕ್ಷಾತ್ ಮಹಾದೇವನನ್ನು ಮಹಾಯುದ್ಧದಲ್ಲಿ ಮೆಚ್ಚಿಸಿದ್ದೀಯೆ. ವಿಷ್ಣುವಿನ ಜೊತೆಗೂಡಿ ನೀನು ಭೂಮಿಯ ಭಾರವನ್ನು ಕಡಿಮೆಮಾಡುತ್ತೀಯೆ. ತಡೆಯಲು ಅಸಾದ್ಯವಾದ ಈ ದಂಡಾಸ್ತ್ರವನ್ನು ಸ್ವೀಕರಿಸು. ಈ ಅಸ್ತ್ರದಿಂದ ನೀನು ಮಹಾಕರ್ಮಗಳನ್ನು ಎಸಗಬಲ್ಲೆ. ಇದನ್ನು ವಿಧಿವತ್ತಾಗಿ ಮಂತ್ರ, ಉಪಚಾರ, ಮೋಕ್ಷ ಮತ್ತು ಹಿಂತೆಗೆದುಕೊಳ್ಳುವದರ ಜೊತೆ ಸ್ವೀಕರಿಸು.”
ಆಗ ಜಲಧರ, ಶ್ಯಾಮವರ್ಣಿ, ಜಲವಾಸಿಗಳ ಒಡೆಯ, ಪಶ್ಚಿಮ ದಿಕ್ಕಿನಲ್ಲಿ ಸ್ಥಿತ, ಪ್ರಭು ವರುಣನು ಈ ಮಾತುಗಳನ್ನಾಡಿದನು:
“ಪಾರ್ಥ! ಕ್ಷತ್ರಧರ್ಮವನ್ನು ಪರಿಪಾಲಿಸುತ್ತಿರುವ ಕ್ಷತ್ರಿಯರಲ್ಲಿ ನೀನು ಮುಖ್ಯ. ತಾಮ್ರವರ್ಣದ ವಿಶಾಲ ಕಣ್ಣುಗಳಿಂದ ನನ್ನನ್ನು ನೋಡು. ನಾನು ಜಲೇಶ್ವರ ವರುಣ. ಎದುರಿಸಲಸಾಧ್ಯ ವಾರುಣ ಪಾಶಗಳನ್ನು ನಿನಗೆ ನೀಡುತ್ತಿದ್ದೇನೆ. ಅದನ್ನು ಹಿಂದೆ ತೆಗೆದುಕೊಳ್ಳುವ ರಹಸ್ಯದೊಂದಿಗೆ ಸ್ವೀಕರಿಸು. ಇದರಿಂದ ನಾನು ತಾರಕಾಸುರನೊಡನೆ ಸಂಗ್ರಾಮದ ಸಮಯದಲ್ಲಿ ಸಹಸ್ರಾರು ವೀರ ಮಹಾತ್ಮ ದೈತ್ಯರನ್ನು ಬಂಧಿಸಿ ಸೋಲಿಸಿದ್ದೆ. ಪ್ರಸಾದವಾಗಿ ನಿನಗೆ ಕೊಡುತ್ತಿರುವ ಇವುಗಳನ್ನು ನನ್ನಿಂದ ಸ್ವೀಕರಿಸು. ಇದನ್ನು ನೀನು ಪ್ರಯೋಗಿಸಿದಾಗ ಅಂತಕನೂ ಕೂಡ ನಿನ್ನಿಂದ ಉಳಿಯಲಾರ. ಈ ಅಸ್ತ್ರದೊಂದಿಗೆ ನೀನು ಸಂಗ್ರಾಮಕ್ಕೆ ಹೋದಾಗ ಭೂಮಿಯು ಕ್ಷತ್ರಿಯರಿಲ್ಲದಂತಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”
ವರುಣ ಮತ್ತು ಯಮರು ದಿವ್ಯಾಸ್ತ್ರಗಳನ್ನು ನೀಡಿದ ನಂತರ ಕೈಲಾಸವಾಸಿ, ಧನಾಧ್ಯಕ್ಷನು ಮಾತನಾಡಿದನು.
“ಸವ್ಯಸಾಚಿ! ಸನಾತನ ಪೂರ್ವದೇವ! ಹಿಂದಿನ ಕಲ್ಪಗಳಲ್ಲಿ ನಿತ್ಯವೂ ನೀನು ನಮ್ಮ ಸಹಾಯಕ್ಕೆಂದು ಶ್ರಮಿಸಿದೆ. ನನ್ನಿಂದಲೂ ಕೂಡ ನನಗೆ ಪ್ರಿಯವಾದ, ಶತ್ರುಗಳ ಓಜಸ್ಸು, ತೇಜಸ್ಸು ಮತ್ತು ದ್ಯುತಿಗಳನ್ನು ಕಸಿದು, ಮೂರ್ಛೆಗೊಳಿಸುವ ಅಂತರ್ಧಾನ ಅಸ್ತ್ರವನ್ನು ಸ್ವೀಕರಿಸು.”
ಆಗ ಕುರುನಂದನ ಮಹಾಬಾಹು ಅರ್ಜುನನು ವಿಧಿವತ್ತಾಗಿ ಕುಬೇರನ ಮಹಾಬಲ ದಿವ್ಯ ಅಸ್ತ್ರವನ್ನೂ ಸ್ವೀಕರಿಸಿದನು. ಆಗ ದೇವರಾಜನು ಅಕ್ಲಿಷ್ಟಕರ್ಮಿ ಪಾರ್ಥನಿಗೆ ಸಂತವಿಸುತ್ತಾ ಮೃದುವಾದ ಮೋಡಗಳ ಗುಡುಗಿನ ಸ್ವರದಲ್ಲಿ ಹೇಳಿದನು:
“ಕುಂತಿಯ ಮಗ ಮಹಾಬಾಹೋ! ಹಿಂದೆ ನೀನು ಈಶನಾಗಿದ್ದೆ ಮತ್ತು ಉತ್ತಮ ಸಿದ್ಧಿಯನ್ನು ಹೊಂದಿ ಸಾಕ್ಷಾತ್ ದೇವಲೋಕಕ್ಕೆ ಹೋಗಿದ್ದೆ. ಮಹತ್ತರವಾದ ದೇವಕಾರ್ಯವೇ ನಿನ್ನ ಕಾರ್ಯ. ನೀನು ಸ್ವರ್ಗವನ್ನು ಏರಬೇಕಾಗಿದೆ. ಸಿದ್ಧನಾಗಿರು! ನಿನಗೋಸ್ಕರವಾಗಿ ಮಾತಲಿಯು ನಡೆಸುವ ನನ್ನ ರಥವು ಭೂಮಿಗೆ ಬರುತ್ತದೆ. ಅಲ್ಲಿ ನಾನು ನಿನಗೆ ಇತರ ದಿವ್ಯಾಸ್ತ್ರಗಳನ್ನು ಕೊಡುತ್ತೇನೆ.”
ಗಿರಿಯ ಮೇಲೆ ಸೇರಿದ್ದ ಆ ಲೋಕಪಾಲಕರನ್ನು ನೋಡಿ ಧೀಮಂತ ಕುಂತಿಪುತ್ರ ಧನಂಜಯನು ವಿಸ್ಮಿತನಾದನು. ಆಗ ಮಹಾತೇಜಸ್ವಿ ಅರ್ಜುನನು ಸೇರಿದ್ದ ಲೋಕಪಾಲಕರನ್ನು ವಿಧಿವತ್ತಾಗಿ ಮಾತು-ಫಲಗಳಿಂದ ಪೂಜಿಸಿದನು. ಪ್ರತಿಯಾಗಿ ಧನಂಜಯನನ್ನು ಸತ್ಕರಿಸಿ ಮನಸ್ಸಿಗೆ ಬಂದಲ್ಲಿಗೆ ಮನೋವೇಗದಲ್ಲಿ ಹೋಗಬಲ್ಲ ವಿಬುಧ ಸರ್ವ ದೇವತೆಗಳೂ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು. ಪುರುಷರ್ಷಭ ಅರ್ಜುನನು ಅಸ್ತ್ರಗಳನ್ನು ಪಡೆದು, ಕೃತಾರ್ಥನಾದೆ ಮತ್ತು ಮನಸ್ಸಿನಲ್ಲಿರುವ ಎಲ್ಲವನ್ನೂ ಸಂಪೂರ್ಣವಾಗಿ ಪಡೆದಿದ್ದೇನೆ ಎಂದು ತಿಳಿದು ತುಂಬಾ ಸಂತೋಷಗೊಂಡನು.