ಯಯಾತಿ
ರಾಜಾ ಯಯಾತಿಯ ಈ ಕಥೆಯು ವ್ಯಾಸ ಮಹಾಭಾರತದ ಆದಿಪರ್ವದ ಸಂಭವ ಪರ್ವ (ಅಧ್ಯಾಯ ೭೧-೮೦) ದಲ್ಲಿ ಬರುತ್ತದೆ. ಈ ಕಥೆಯನ್ನು ಮುನಿ ವೈಶಂಪಾಯನನು ಜನಮೇಜಯನಿಗೆ ಹಸ್ತಿನಾಪುರದಲ್ಲಿ ಸರ್ಪಸತ್ರದಲ್ಲಿ ಹೇಳಿದನು.
ಸಚರಾಚರ ತ್ರೈಲೋಕ್ಯದ ಐಶ್ವರ್ಯಕ್ಕಾಗಿ ಸುರಾಸುರರ ನಡುವೆ ಅತೀ ದೊಡ್ಡ ಹೋರಾಟ ನಡೆಯಿತು. ವಿಜಯಪ್ರಾಪ್ತಿಗಾಗಿ ದೇವತೆಗಳು ಮುನಿ ಅಂಗಿರಸ ಪುತ್ರನನ್ನು ಮತ್ತು ಪರಪಕ್ಷದವರು ಉಶಾನಸ ಕಾವ್ಯನನ್ನು ಯಜ್ಞಾದಿಗಳ ಪುರೋಹಿತರನ್ನಾಗಿ ನಿಯೋಜಿಸಿದನು. ಆ ಈರ್ವರು ಬ್ರಾಹ್ಮಣರೂ ಸದಾ ಪರಸ್ಪರರ ಕಡು ಸ್ಪರ್ಧಿಗಳಾಗಿದ್ದರು. ಯುದ್ಧದಲ್ಲಿ ಸೇರಿದ್ದ ದಾನವರನ್ನು ದೇವತೆಗಳು ಸಂಹರಿಸುತ್ತಿದ್ದರು. ಆದರೆ ಕಾವ್ಯನು ತನ್ನ ವಿದ್ಯಾಬಲದಿಂದ ಅವರನ್ನು ಪುನರ್ಜೀವಿಸುತ್ತಿದ್ದನು, ಮತ್ತು ಅವರು ಪುನಃ ಸುರರೊಂದಿಗೆ ಯುದ್ಧಕ್ಕೆ ತೊಡಗುತ್ತಿದ್ದರು. ಸಮರ ಮಧ್ಯದಲ್ಲಿ ಅಸುರರು ಬಹಳಷ್ಟು ಸುರರನ್ನು ಸಂಹರಿಸುತ್ತಿದ್ದರು. ಆದರೆ ಬೃಹಸ್ಪತಿಯು ಅವರನ್ನು ಪುನಃ ಬದುಕಿಸಲು ಅಸಮರ್ಥನಾಗಿದ್ದನು. ವೀರ್ಯವಂತ ಶುಕ್ರನು ತಿಳಿದಿದ್ದ ಸಂಜೀವಿನೀ ವಿದ್ಯೆಯು ಅವನಿಗೆ ತಿಳಿದಿರಲಿಲ್ಲ. ಇದರಿಂದಾಗಿ ದೇವತೆಗಳು ಪರಮ ದುಃಖವನ್ನು ಅನುಭವಿಸಿದರು. ಉಶಾನಸ ಕಾವ್ಯನಿಂದ ಭಯೋದ್ವಿಗ್ನರಾದ ದೇವತೆಗಳು ಬೃಹಸ್ಪತಿಯ ಜ್ಯೇಷ್ಠ ಪುತ್ರ ಕಚನ ಬಳಿ ಬಂದು ಕೇಳಿಕೊಂಡರು: “ಭಜಿಸಿತ್ತಿರುವ ನಮ್ಮನ್ನು ರಕ್ಷಿಸು ಮತ್ತು ನಮಗೆ ನೆರವನ್ನು ನೀಡು. ಅಮಿತತೇಜಸ್ವಿ ಬ್ರಾಹ್ಮಣ ಶುಕ್ರನಲ್ಲಿರುವ ವಿಧ್ಯೆಯನ್ನು ಕ್ಷಿಪ್ರವಾಗಿ ಪಡೆದು ತಾ. ನಮ್ಮ ಯಜ್ಞಭಾಗಗಳ ಭಾಗಿಯಾಗುತ್ತೀಯೆ. ಆ ದ್ವಿಜನನ್ನು ನೀನು ವೃಷಪರ್ವನ ಬಳಿ ಕಾಣಬಲ್ಲೆ. ಅಲ್ಲಿ ಅವನು ದಾನವರನ್ನು ರಕ್ಷಿಸುತ್ತಾನೆ. ಅದಾನವರ್ಯಾರನ್ನೂ ಅವನು ರಕ್ಷಿಸುವುದಿಲ್ಲ. ವಯಸ್ಸಿನಲ್ಲಿ ನೀನು ಇನ್ನೂ ಚಿಕ್ಕವನು, ಆದುದರಿಂದ ನೀನು ಆ ಮಹಾತ್ಮ ಕವಿಯನ್ನು ಮತ್ತು ಅವನ ಪ್ರಿಯ ಸುತೆ ದೇವಯಾನಿಯನ್ನೂ ಆರಾಧಿಸಬಲ್ಲೆ. ನೀನು ಮಾತ್ರ ಅವನನ್ನು ಆರಾಧಿಸಬಲ್ಲೆ, ಬೇರೆ ಯಾರೂ ಇಲ್ಲ. ನಿನ್ನ ಶೀಲ, ದಾಕ್ಷಿಣ್ಯ, ಮಾಧುರ್ಯ, ನಡವಳಿಕೆ, ಮತ್ತು ದಮಗಳಿಂದ ನೀನು ದೇವಯಾನಿಯನ್ನು ತೃಪ್ತಿಗೊಳಿಸಬಲ್ಲೆ ಮತ್ತು ಖಂಡಿತವಾಗಿಯೂ ಆ ವಿಧ್ಯೆಯನ್ನು ಪ್ರಾಪ್ತಗೊಳಿಸಬಲ್ಲೆ.” “ಹಾಗೆಯೇ ಆಗಲಿ” ಎಂದು ಉತ್ತರಿಸಿದ ಬೃಹಸ್ಪತಿಸುತ ಕಚನು ದೇವತೆಗಳಿಂದ ಗೌರವಿಸಲ್ಪಟ್ಟು ವೃಷಪರ್ವನ ಬಳಿ ಹೋದನು.
ಈ ರೀತಿ ದೇವತೆಗಳಿಂದ ಕಳುಹಿಸಲ್ಪಟ್ಟ ಕಚನು ಸಮಯ ವ್ಯರ್ಥ ಮಾಡದೇ ಅಸುರೇಂದ್ರನ ಪುರವನ್ನು ತಲುಪಿ ಅಲ್ಲಿ ಶುಕ್ರನನ್ನು ಕಂಡು ಹೇಳಿದನು: “ಭಗವನ್! ನನ್ನನ್ನು ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ. ನಾನು ಅಂಗಿರಸನ ಮೊಮ್ಮಗ ಸಾಕ್ಷಾತ್ ಬೃಹಸ್ಪತಿಯ ಪುತ್ರ. ನನ್ನನ್ನು ಕಚ ಎಂಬ ಹೆಸರಿನಿಂದ ಕರೆಯುತ್ತಾರೆ. ನಿಮ್ಮನ್ನು ನನ್ನ ಪರಮ ಗುರುವೆಂದು ಸ್ವೀಕರಿಸಿ ನಾನು ಸಾವಿರ ವರ್ಷಗಳ ಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸುತ್ತೇನೆ. ನನಗೆ ಅನುಮತಿಯನ್ನು ನೀಡಿ.”
ಶುಕ್ರನು ಹೇಳಿದನು: “ಕಚ! ನಿನಗೆ ಸುಸ್ವಾಗತ. ನಿನ್ನ ಮಾತುಗಳನ್ನು ನಾನು ಸ್ವೀಕರಿಸುತ್ತೇನೆ. ಗೌರವಕ್ಕೆ ಅರ್ಹನಾದ ನಿನ್ನನ್ನು ನಾನು ಗೌರವಿಸುತ್ತೇನೆ. ಇದರಿಂದ ಬೃಹಸ್ಪತಿಯನ್ನೂ ಗೌರವಿಸಿದಂತಾಗುತ್ತದೆ.”
“ಹಾಗೆಯೇ ಆಗಲಿ” ಎಂದು ಹೇಳಿದ ಕಚನು ಸ್ವಯಂ ಕವಿಪುತ್ರ ಶುಕ್ರ ಉಶನಸನ ಆದೇಶದಂತೆ ವ್ರತದೀಕ್ಷೆಯನ್ನು ಪಡೆದನು. ಹೇಳಿಕೆಯ ಪ್ರಕಾರ ಸರಿಯಾದ ವ್ರತಕಾಲದಲ್ಲಿ ವ್ರತವನ್ನು ಪ್ರಾರಂಭಿಸಿದ ಅವನು ತನ್ನ ಉಪಾಧ್ಯಾಯ ಮತ್ತು ದೇವಯಾನಿಯನ್ನು ಆರಾಧಿಸತೊಡಗಿದನು. ಆ ಯುವಕನು ಯುವತಿ ದೇವಯಾನಿಯನ್ನು ಗಾನ, ನೃತ್ಯ ಮತ್ತು ವಾದ್ಯಗಳಿಂದ ನಿತ್ಯವೂ ಸಂತುಷ್ಟಗೊಳಿಸುತ್ತಿದ್ದನು. ಯೌವನವನ್ನು ಪಡೆದಿದ್ದ ಕನ್ಯೆ ದೇವಯಾನಿಯನ್ನು ಪುಷ್ಪ ಮತ್ತು ಫಲಗಳನ್ನು ನೀಡುತ್ತಾ, ಅವಳೊಡನೆ ಪ್ರೀತಿಪೂರ್ವಕ ನಡೆನುಡಿಯುತ್ತಾ ಸಂತೃಪ್ತಿಗೊಳಿಸಿದನು. ದೇವಯಾನಿಯೂ ಕೂಡ ಆ ನಿಯಮ ವ್ರತಚಾರಿಣಿ ವಿಪ್ರನೊಡನೆ ಏಕಾಂತದಲ್ಲಿ ಹಾಡುತ್ತಿದ್ದಳು, ಮತ್ತು ಅವನ ಸುತ್ತ ಸಂತೋಷದಿಂದ ಸುಳಿದಾಡುತ್ತಿದ್ದಳು.
ಹೀಗೆ ಕಚನ ವ್ರತದ ಐದು ನೂರು ವರ್ಷಗಳು ಕಳೆಯುತ್ತಾ ಬಂದಾಗ ದಾನವರು ಕಚನ ಉದ್ದೇಶವನ್ನು ತಿಳಿದುಕೊಂಡರು. ವನದಲ್ಲಿ ಗೋವುಗಳನ್ನು ಕಾಯುತ್ತಿದ್ದ ಒಂಟಿ ಕಚನನ್ನು ಕಂಡ ಅವರು ಬೃಹಸ್ಪತಿಯೊಡನಿದ್ದ ದ್ವೇಶದಿಂದ ಮತ್ತು ಆ ವಿದ್ಯೆಯನ್ನು ರಕ್ಷಿಸಲೋಸುಗ ಅವನನ್ನು ಕೊಂದು, ಸಾಸಿವೆಕಾಳಿನ ಗಾತ್ರದಲ್ಲಿ ತುಂಡು ತುಂಡುಮಾಡಿ ಅಲ್ಲಿರುವ ತೋಳಗಳಿಗೆ ತಿನ್ನಿಸಿದರು. ಗೋವುಗಳು ಗೋಪನಿಲ್ಲದೇ ತಾವೇ ತಮ್ಮ ನಿವೇಶನಕ್ಕೆ ಹಿಂದಿರುಗಿದವು. ಕಚನ ಜೊತೆಯಿಲ್ಲದೇ ಗೋವುಗಳು ಹಿಂದಿರುಗಿದುದನ್ನು ನೋಡಿದ ದೇವಯಾನಿಯು ತನ್ನ ತಂದೆಗೆ ಇಂತೆಂದಳು: “ಪ್ರಭು! ಅಗ್ನಿಹೋತ್ರವನ್ನು ಉರಿಸಿಯಾಗಿದೆ, ಸೂರ್ಯಾಸ್ತವೂ ಆಗಿದೆ. ಗೋಪನಿಲ್ಲದೇ ಗೋವುಗಳು ಹಿಂದಿರುಗಿವೆ. ಅಪ್ಪಾ! ಅದರೆ ಕಚನು ಇನ್ನೂ ಕಾಣುತ್ತಿಲ್ಲ. ಕಚನು ಸತ್ತಿರಬಹುದು ಅಥವಾ ಅವನನ್ನು ಕೊಂದಿರಬಹುದು. ಅವನಿಲ್ಲದೇ ನಾನು ನಿಜವಾಗಿಯೂ ಬದುಕಲಾರೆ.”
ಶುಕ್ರನು ಹೇಳಿದನು: “ಇಲ್ಲಿ ಬಾ ಎಂದು ಹೇಳಿ ಮೃತನನ್ನು ಬದುಕಿಸುತ್ತೇನೆ.” ನಂತರ ಸಂಜೀವಿನೀ ವಿಧ್ಯೆಯಿಂದ ಕಚನನ್ನು ಆಹ್ವಾನಿಸಿದನು. ಹಾಗೆ ಕರೆಯಲ್ಪಟ್ಟಾಗ, ಕಚನು ಸಂತೋಷದಿಂದ ಕಾಣಿಸಿಕೊಂಡನು. “ನನ್ನನ್ನು ಕೊಲೆಮಾಡಲಾಗಿತ್ತು” ಎಂದು ಬ್ರಾಹ್ಮಣ ಕನ್ಯೆಯ ಪ್ರಶ್ನೆಗಳಿಗೆ ಉತ್ತರಿಸಿದನು.
ಪುನಃ ಇನ್ನೊಂದು ದಿನ ದೇವಯಾನಿಗೆ ಪುಷ್ಪಗಳನ್ನು ತೆಗೆದುಕೊಂಡು ಬರಲು ಕಚನು ವನಕ್ಕೆ ಹೋದಾಗ ದಾನವರು ಆ ವಿಪ್ರನನ್ನು ನೋಡಿದರು. ಎರಡನೆಯ ಬಾರಿ ಅವರು ಅವನನ್ನು ಕೊಂದು, ಸುಟ್ಟು, ಭಸ್ಮದ ಚೂರ್ಣವನ್ನು ಮಾಡಿ, ಮದ್ಯದಲ್ಲಿ ಸೇರಿಸಿ ಬ್ರಾಹ್ಮಣನಿಗೆ ಕುಡಿಯಲು ಕೊಟ್ಟರು. ಪುನಃ ದೇವಯಾನಿಯು ತನ್ನ ತಂದೆಯಲ್ಲಿ ಹೇಳಿಕೊಂಡಳು: “ಪುಷ್ಪಗಳನ್ನು ತರಲೆಂದು ಹೋದ ಕಚನು ಕಾಣುತ್ತಿಲ್ಲ.”
ಶುಕ್ರನು ಹೇಳಿದನು: “ಪುತ್ರಿ! ಬೃಹಸ್ಪತಿಯ ಸುತ ಕಚನು ಪ್ರೇತಲೋಕವನ್ನು ಸೇರಿದ್ದಾನೆ. ನನ್ನ ವಿದ್ಯೆಯಿಂದ ಅವನನ್ನು ಬದುಕಿಸಿದರೂ ಪುನಃ ಅವನನ್ನು ಕೊಂದು ಹಾಕಿದ್ದಾರೆ. ನಾನೇನು ಮಾಡಲಿ? ಅವನಿಗಾಗಿ ಶೋಕಿಸಬೇಡ, ರೋದಿಸಬೇಡ. ನಿನ್ನಂಥವರು ಮಾನವನಿಗಾಗಿ ಅಳುವುದಿಲ್ಲ. ನಡೆಯುವ ಬದಲಾವಣೆಗಳಿಗೆ ಸುರರೂ ವಿಶ್ವವೂ ಜಗತ್ತೂ ಮತ್ತು ಸರ್ವವೂ ತಲೆಬಾಗಿಸಲೇಬೇಕು.”
ದೇವಯಾನಿಯು ಹೇಳಿದಳು: “ಯಾರ ಪಿತಾಮಹನು ವೃದ್ಧ ಅಂಗಿರಸನೋ, ಯಾರ ತಂದೆಯು ತಪೋಧನ ಬೃಹಸ್ಪತಿಯೋ, ಯಾರು ಋಷಿಯ ಪುತ್ರನೂ ಪೌತ್ರನೂ ಆಗಿದ್ದಾನೋ ಅಂಥವನ ಕುರಿತು ನಾನು ಹೇಗೆ ಶೋಕಿಸದಿರಲಿ ಅಥವಾ ರೋದಿಸದೇ ಇರಲಿ? ಸ್ವಯಂ ಬ್ರಹ್ಮಚಾರಿಯೂ ತಪೋಧನನೂ ಆದ, ಕೆಲಸಗಳಲ್ಲಿ ಸದಾ ದಕ್ಷ ಆ ಕಚನ ದಾರಿಯಲ್ಲಿಯೇ ನಾನೂ ಹೋಗುತ್ತೇನೆ ತಂದೆ! ನನಗೆ ಊಟವೂ ಬೇಡ. ಸುಂದರ ಕಚನು ನನ್ನ ಪ್ರಿಯಕರ.”
ಶುಕ್ರನು ಹೇಳಿದನು: “ನನ್ನ ಜೊತೆಯಲ್ಲಿಯೇ ವಾಸಿಸುವ ನನ್ನ ಶಿಷ್ಯನನ್ನು ಕೊಂದು ಅಸುರರು ನನಗೆ ಕೆಟ್ಟದ್ದನ್ನೇ ಮಾಡಿದ್ದಾರೆ. ಬ್ರಾಹ್ಮಣ ಹತ್ಯೆಯಲ್ಲಿ ನನ್ನನ್ನೂ ಸೇರಿಸಿ ನನ್ನನ್ನು ಅಬ್ರಾಹ್ಮಣನನ್ನಾಗಿ ಮಾಡಲು ಈ ಅಸುರರು ಪ್ರಯತ್ನಿಸುತ್ತಿದ್ದಾರೆ. ಈ ಪಾಪದ ಅಂತ್ಯವು ಈಗಲೇ ಆಗಲಿ. ಯಾಕೆಂದರೆ ಬ್ರಹ್ಮಹತ್ಯೆಯು ಇಂದ್ರನನ್ನು ಸುಡುವುದಿಲ್ಲವೇ?”
ದೇವಯಾನಿಯ ಒತ್ತಾಯದಂತೆ ಮಹರ್ಷಿ ಕಾವ್ಯನು ಪುನಃ ಬೃಹಸ್ಪತಿಸುತ ಕಚನನ್ನು ಜೋರಾಗಿ ಕೂಗಿ ಕರೆದನು. ವಿದ್ಯೆಯಿಂದ ಕರೆಯಲ್ಪಟ್ಟಾಗ, ಗುರುವಿಗೆ ಹೆದರಿ ಅವನ ಹೊಟ್ಟೆಯ ಒಳಗಿಂದಲೇ ಸಣ್ಣಸ್ವರದಲ್ಲಿ ಉತ್ತರಿಸಿದನು. ಆಗ ಮುನಿಯು ಅವನನ್ನು ಕೇಳಿದನು: “ವಿಪ್ರ! ನೀನು ಯಾವ ಮಾರ್ಗದಿಂದ ನನ್ನ ಹೊಟ್ಟೆಯನ್ನು ಸೇರಿದ್ದೀಯೆ ಹೇಳು!”
ಕಚನು ಹೇಳಿದನು: “ನಿಮ್ಮ ಅನುಗ್ರಹದಿಂದ ನನ್ನ ನೆನಪು ಉಳಿದಿದೆ. ನನಗೆ ಆದ ಪ್ರತಿಯೊಂದು ವಿಷಯವೂ ಯಥಾವತ್ತಾಗಿ ನೆನಪಿದೆ. ನನ್ನ ತಪಸ್ಸಿನ ಶಕ್ತಿಯನ್ನೂ ಕಳೆದುಕೊಂಡಿಲ್ಲ. ಇದರಿಂದಾಗಿ ನಾನು ಈ ಘೋರ ಕ್ಲೇಶವನ್ನು ಸಹಿಸಬಲ್ಲವನಾಗಿದ್ದೇನೆ. ಕಾವ್ಯ! ಅಸುರರು ನನ್ನನ್ನು ಕೊಂದು, ಸುಟ್ಟು, ಚೂರ್ಣವನ್ನಾಗಿ ಮಾಡಿ ಮದ್ಯದಲ್ಲಿ ಸೇರಿಸಿ ನಿನಗೆ ಕೊಟ್ಟರು. ಆದರೆ ಬ್ರಾಹ್ಮೀ ಮಾಯೆಯನ್ನು ಹೊಂದಿರುವ ನೀನಿರುವಾಗ ಅಸುರೀ ಮಾಯೆಯು ಏನು ತಾನೇ ಮಾಡಬಲ್ಲದು?”
ಶುಕ್ರನು ಹೇಳಿದನು: “ವತ್ಸೆ! ಈಗ ನಾನು ಹೇಗೆ ತಾನೆ ನೀನು ಕೇಳಿದ್ದುದನ್ನು ಮಾಡಬಲ್ಲೆ? ನನ್ನ ಮರಣದಿಂದಲೇ ಕಚನು ಜೀವಿತನಾಗಬಲ್ಲ. ನನ್ನ ಹೊಟ್ಟೆಯನ್ನು ಸೀಳಿ ಹೊರಬರುವುದರ ಹೊರತು ಬೇರೆ ಯಾವ ಮಾರ್ಗವೂ ಕಚನಿಗೆ ತೋರುವುದಿಲ್ಲ.”
ದೇವಯಾನಿಯು ಹೇಳಿದಳು: “ಇವೆರಡು ಶೋಕಗಳೂ ನನ್ನನ್ನು ಅಗ್ನಿಯಂತೆ ಸುಡುತ್ತವೆ. ಕಚನ ಮತ್ತು ನಿನ್ನ ನಾಶ ಇವೆರಡು ನನಗೆ ಒಂದೇ. ಕಚನ ನಾಶದಿಂದ ನನಗೆ ಎಲ್ಲಿಯೂ ನೆರಳಿಲ್ಲ; ನೀನಿಲ್ಲದೇ ನಾನು ಜೀವಿಸುವಿದೇ ಅಶಕ್ಯ.”
ಶುಕ್ರನು ಹೇಳಿದನು: “ಬೃಹಸ್ಪತಿಯ ಮಗನೇ! ದೇವಯಾನಿಯ ಪ್ರೀತಿ ಪಾತ್ರನಾದ ನೀನು ಸಂಸಿದ್ಧರೂಪನಾಗಿದ್ದೀಯೆ. ನೀನು ಕಚರೂಪದಲ್ಲಿದ್ದ ಇಂದ್ರನಲ್ಲದಿದ್ದರೆ ನಾನು ನಿನಗೆ ಈಗ ಸಂಜೀವಿನೀ ವಿಧ್ಯೆಯನ್ನು ನೀಡುತ್ತೇನೆ. ನನ್ನ ಉದರದಿಂದ ಬೇರೆ ಯಾರೂ ಜೀವಂತ ಹೊರಗೆ ಬರಲು ಸಾಧ್ಯವಿಲ್ಲ. ಆದರೆ ಬ್ರಾಹ್ಮಣನನ್ನು ಎಂದೂ ಕೊಲ್ಲಬಾರದು. ಆದ್ದರಿಂದ ನಾನು ನಿನಗೆ ಹೇಳಿಕೊಡುವ ಈ ವಿಧ್ಯೆಯನ್ನು ಸ್ವೀಕರಿಸು. ನೀನು ನನ್ನ ಪುತ್ರನಾಗಿ ಈ ದೇಹದಿಂದ ಹೊರಗೆ ಬಾ. ಗುರುವಿನಿಂದ ಈ ಸವಿಧ್ಯೆಯನ್ನು ಪಡೆದ ನೀನು ಈ ವಿಧ್ಯೆಯನ್ನು ಜಾಗರೂಕತೆಯಿಂದ, ಧರ್ಮಪ್ರಕಾರವಾಗಿ ಬಳಸು.”
ಗುರುವಿನ ಸಾಕ್ಷಾತ್ಕಾರದಲ್ಲಿ ವಿಧ್ಯೆಯನ್ನು ಪಡೆದ ವಿಪ್ರನು ಅವನ ಹೊಟ್ಟೆಯನ್ನು ಸೀಳಿ ಹೊರಬಂದನು. ಶುಕ್ಲಪಕ್ಷದ ಪೂರ್ಣಿಮೆಯಂದು ಚಂದ್ರನು ಹೊರಬರುವಂತೆ ಸುಂದರ ಕಚನು ಬ್ರಾಹ್ಮಣನ ಬಲಭಾಗದಿಂದ ಹೊರಬಂದನು. ಕೆಳಗೆ ಬಿದ್ದಿದ್ದ ಆ ಬ್ರಹ್ಮರಾಶಿಯನ್ನು ನೋಡಿ ಕಚನು ತಾನು ಆಗಲೇ ಪಡೆದಿದ್ದ ವಿದ್ಯಸಿದ್ಧಿಯನ್ನು ಬಳಸಿ ಮೃತನನ್ನು ಪುನಃ ಎಬ್ಬಿಸಿದನು. ಆಗ ಕಚನು ಗುರುವನ್ನು ನಮಸ್ಕರಿಸಿ ಹೇಳಿದನು: “ಅನುತ್ತಮ ಜ್ಞಾನವನ್ನು ನೀಡುವ, ಚತುರಾನ್ವಯ ನಿಧಿಗಳ ನಿದಿ, ಅರ್ಚನೀಯ ಗುರುವನ್ನು ನಿಂದಿಸುವವನು ನಿಜವಾಗಿಯೂ ಪಾಪಲೋಕವನ್ನು ಪಡೆಯುತ್ತಾನೆ.”
ಸುರಾಪಾನದಿಂದ ವಂಚಿತನಾದ, ಅದರಿಂದಾದ ಘೋರ ಪರಿಣಾಮಗಳನ್ನೂ ಪ್ರಜ್ಞಾಹರಣವನ್ನೂ ನೋಡಿದ, ತನ್ನ ಸುಂದರ ದೇಹವನ್ನು ಹೊತ್ತು ಹೊರಬಂದ ಕಚನನ್ನು ನೋಡಿ, ಅವನನ್ನು ಮದ್ಯದ ನಶೆಯಲ್ಲಿ ತಿಳಿಯದೇ ಕುಡಿದಿದ್ದುದನ್ನು ನೋಡಿ, ಆ ಮಹಾನುಭಾವನು ಕೋಪಗೊಂಡು, ವಿಪ್ರರ ಹಿತಕ್ಕಾಗಿ ಸ್ವಯಂ ಕಾವ್ಯನು ಜಗತ್ತಿಗೇ ಸುರಾಪಾನದ ವಿರುದ್ಧ ಉದ್ಗರಿಸಿ ಹೇಳಿದನು: “ಇಂದಿನಿಂದ ಯಾವ ಬ್ರಾಹ್ಮಣನು ಆಸೆಯಿಂದ ಬುದ್ಧಿಯಿಲ್ಲದೇ ಮದ್ಯವನ್ನು ಸೇವಿಸುತ್ತಾನೋ ಬ್ರಹ್ಮಹತ್ಯೆಯ ಪಾಪವನ್ನು ಪಡೆದು ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ತಿರಸ್ಕರಿಸಲ್ಪಡುತ್ತಾನೆ. ಈ ರೀತಿ ನಾನು ವಿಪ್ರಧರ್ಮದ ಸೀಮಾರೇಖೆಯನ್ನು ಎಳೆಯುತ್ತಿದ್ದೇನೆ. ಈ ಮರ್ಯಾದೆಯು ಸರ್ವಲೋಕದಲ್ಲಿಯೂ ಸ್ಥಾಪಿತಗೊಳ್ಳಲಿ. ಸಂತ ಬ್ರಾಹ್ಮಣರು, ಗುರುಗಳ ಸೇವೆಮಾಡುವವರು, ದೇವತೆಗಳು ಮತ್ತು ಲೋಕದಲ್ಲಿ ಎಲ್ಲರೂ ಇದನ್ನು ಕೇಳಲಿ.”
ಈ ರೀತಿ ಹೇಳಿದ ಆ ತಪೋನಿಧಿಗಳ ಅಪ್ರಮೇಯ ನಿಧಿ ಮಹಾನುಭಾವನು ದೈವಕಾರಣದಿಂದ ವಿಮೂಢರಾಗಿದ್ದ ದಾನವರನ್ನು ತನ್ನಲ್ಲಿಗೆ ಕರೆಯಿಸಿ ಈ ಮಾತುಗಳನ್ನಾಡಿದನು: “ಬಾಲಿಶರಾಗಿ ನಿಂತಿರುವ ದಾನವರೇ! ಕೇಳಿ. ಕಚನು ನನ್ನ ಮಗನಾಗಿ ನನ್ನ ಬಳಿಯಲ್ಲಿಯೇ ಇರುವುದು ಸಿದ್ಧ. ನನ್ನಿಂದ ಸಂಜೀವಿನೀ ವಿಧ್ಯೆಯನ್ನು ಪಡೆದು ಈ ಬ್ರಾಹ್ಮಣನು ತನ್ನ ಪ್ರಭಾವದಲ್ಲಿ ಬ್ರಹ್ಮನ ಸರಿಸಾಟಿಯಾಗಿದ್ದಾನೆ.”
ಒಂದು ಸಾವಿರ ವರುಷಗಳ ಕಾಲ ತನ್ನ ಗುರುವಿನಲ್ಲಿಯೇ ಇದ್ದ ಕಚನು ಗುರುವಿನ ಅನುಜ್ಞೆಯನ್ನು ಪಡೆದು ಸ್ವರ್ಗಲೋಕಕ್ಕೆ ಹೋಗಲು ತಯಾರಿ ನಡೆಸಿದನು. ವ್ರತದ ಅವಧಿಯು ಮುಗಿದು, ಗುರುವಿನಿಂದ ಅಪ್ಪಣೆಯನ್ನು ಪಡೆದು ಅವನು ಸ್ವರ್ಗಲೋಕಕ್ಕೆ ಹೊರಡುವಾಗ ದೇವಯಾನಿಯು ಹೇಳಿದಳು: “ಋಷಿ ಅಂಗಿರಸನ ಮೊಮ್ಮಗನೇ! ನೀನು ನಿನ್ನ ನಡವಳಿಕೆಯಲ್ಲಿ, ವಿದ್ಯೆಯಲ್ಲಿ, ತಪಸ್ಸಿನಲ್ಲಿ, ದಮದಲ್ಲಿ ಎಲ್ಲರಿಗಿಂತ ಹೆಚ್ಚು ಬೆಳಗುತ್ತಿದ್ದೀಯೆ. ನನ್ನ ತಂದೆಯು ಮಹಾಯಶ ಋಷಿ ಅಂಗಿರಸನನ್ನು ಹೇಗೆ ಗೌರವಿಸುತ್ತಾನೋ ಹಾಗೆ ನಾನೂ ಕೂಡ ಬೃಹಸ್ಪತಿಯನ್ನು ಗೌರವಿಸುತ್ತೇನೆ ಮತ್ತು ಪೂಜಿಸುತ್ತೇನೆ. ಇದನ್ನು ತಿಳಿದ ನೀನು ನಾನು ಈಗ ಹೇಳುವುದನ್ನು ಕೇಳು. ನೀನು ವ್ರತನಿಯಮಗಳಲ್ಲಿರುವಾಗ ನಾನು ನಿನ್ನೊಂದಿಗೆ ಹೇಗೆ ವರ್ತಿಸುತ್ತಿದ್ದೆ ಎನ್ನುವುದು ನಿನಗೆ ತಿಳಿದೇ ಇದೆ. ಈಗ ನಿನ್ನ ಕಲಿಕೆಯು ಮುಗಿದಿದೆ. ಆದರಿಂದ ನಾನು ನಿನ್ನನ್ನು ಪ್ರೀತಿಸುವ ಹಾಗೆ ನೀನೂ ನನ್ನನ್ನು ಪ್ರೀತಿಸು. ಮಂತ್ರ ಪುರಸ್ಕರವಾಗಿ ವಿಧಿವತ್ತಾಗಿ ನನ್ನ ಪಾಣಿಗ್ರಹಣ ಮಾಡು.”
ಕಚನು ಹೇಳಿದನು: “ನಿನ್ನ ತಂದೆಯು ಹೇಗೋ ಹಾಗೆ ನೀನೂ ಕೂಡ ನನ್ನ ಪೂಜೆ ಮತ್ತು ಗೌರವಕ್ಕೆ ಪಾತ್ರಳು. ಅನವದ್ಯಾಂಗೀ! ನೀನು ನನಗೆ ಇನ್ನೂ ಹೆಚ್ಚು ಪೂಜನೀಯಳಾಗಿದ್ದೀಯೆ. ನೀನು ಮಹಾತ್ಮ ಭಾರ್ಗವನಿಗೆ ಅವನ ಪ್ರಾಣಕ್ಕಿಂತಲೂ ಪ್ರಿಯೆಯಾಗಿದ್ದೀಯೆ. ಧರ್ಮದ ಪ್ರಕಾರ ನಾನು ಗುರುಪುತ್ರಿಯಾದ ನಿನ್ನನ್ನು ಸದಾ ಪೂಜಿಸಬೇಕು. ನಿನ್ನ ತಂದೆ ಮತ್ತು ನನ್ನ ಗುರು ಶುಕ್ರನನ್ನು ನಾನು ಹೇಗೆ ನಿತ್ಯವೂ ಗೌರವಿಸುತ್ತೇನೋ ಅದೇರೀತಿ ನೀನೂ ಇರುವೆ. ಆದ್ದರಿಂದ, ದೇವಯಾನಿ! ಈ ತರಹದ ಮಾತುಗಳನ್ನು ನೀನು ನನ್ನಲ್ಲಿ ಹೇಳುವುದು ಸರಿಯಲ್ಲ.”
ದೇವಯಾನಿಯು ಹೇಳಿದಳು: “ನೀನು ನನ್ನ ತಂದೆಯ ಗುರುಪುತ್ರನ ಮಗನೇ ಹೊರತು ಅವನ ಮಗನಲ್ಲ. ಹೀಗಾಗಿ, ದ್ವಿಜೋತ್ತಮ! ನಾನೂ ಕೂಡ ನಿನ್ನನ್ನು ಗೌರವಿಸಬೇಕು, ಪೂಜಿಸಬೇಕು. ನಿನ್ನನ್ನು ದಾನವರು ಪುನಃ ಪುನಃ ಕೊಲ್ಲುತ್ತಿದ್ದಾಗ ನಿನ್ನಮೇಲೆ ನಾನು ತೋರಿಸಿದ ಮತ್ತು ಎಂದೂ ತೋರಿಸುತ್ತಿದ್ದ ಪ್ರೀತಿಯನ್ನು ನೆನಪಿಸಿಕೋ. ಸೌಹಾರ್ದತೆಯಿಂದ, ಅನುರಾಗದಿಂದ ಅನುತ್ತಮ ಭಕ್ತಿಯಿಂದ ನಿನ್ನನ್ನು ಪ್ರೀತಿಸುವ ನನ್ನನ್ನು ತ್ಯಜಿಸುವುದು ಸರಿಯಲ್ಲ.”
ಕಚನು ಹೇಳಿದನು: “ಶುಭವ್ರತೇ! ಒತ್ತಾಯ ಮಾಡಬಾರದುದಕ್ಕೆ ಒತ್ತಾಯ ಪಡಿಸಬೇಡ. ಕರುಣೆ ತೋರು. ನೀನು ನನಗೆ ನನ್ನ ಗುರುವಿಗಿಂತಲೂ ಹೆಚ್ಚು. ನೀನು ವಾಸಿಸುತ್ತಿದ್ದ ಕಾವ್ಯನ ಹೊಟ್ಟೆಯಲ್ಲಿ ನಾನೂ ಕೂಡ ವಾಸಿಸಿದ್ದೆ. ಧಾರ್ಮಿಕವಾಗಿ ನೀನು ನನ್ನ ಸಹೋದರಿ. ಈ ರೀತಿ ಹೇಳಬೇಡ. ನಾನು ಇಲ್ಲಿ ಸಂತೋಷದಿಂದ ಉಳಿದೆ. ಇಲ್ಲಿ ನಾನು ಸಮಯವನ್ನು ಅತ್ಯಂತ ಸುಖದಿಂದ ಕಳೆದೆ. ನನಗೆ ನಿನ್ನಲ್ಲಿ ಯಾವುದೇ ರೀತಿ ಮನಸ್ತಾಪವಿಲ್ಲ. ನನ್ನ ದಾರಿಯು ಮಂಗಳಕರವಾಗಿರಲಿ ಎಂದು ನಿನ್ನಿಂದ ಬೀಳ್ಕೊಡುಗೆಯನ್ನು ಕೇಳುತ್ತಿದ್ದೇನೆ. ಧರ್ಮಕ್ಕೆ ಚ್ಯುತಿ ಬಾರದ ಹಾಗೆ ನಡೆದುಕೊಂಡ ನನ್ನನ್ನು ಯಾವಾಗಲಾದರೊಮ್ಮೆ ನೆನಪಿಸಿಕೊಳ್ಳುತ್ತಿರು. ನಿತ್ಯವೂ ನನ್ನ ಗುರುವನ್ನು ಆರಾಧಿಸುತ್ತಿರು.”
ದೇವಯಾನಿಯು ಹೇಳಿದಳು: “ನಾನು ಕೇಳಿಕೊಂಡಂತೆ ನೀನು ನನ್ನನ್ನು ನಿನ್ನ ಭಾರ್ಯೆಯನ್ನಾಗಿ ಮಾಡಿಕೊಳ್ಳದಿದ್ದರೆ ಕಚ! ನಿನಗೆ ಈ ವಿಧ್ಯೆಯು ಸಿದ್ಧಿಯಾಗಲಾರದು!”
ಕಚನು ಹೇಳಿದನು: “ನೀನು ಗುರುಪುತ್ರಿಯೆಂದು ಮಾತ್ರ ನಾನು ನಿನ್ನ ಬೇಡಿಕೆಯನ್ನು ಪೂರೈಸುತ್ತಿಲ್ಲ. ನಿನ್ನಲ್ಲಿದ್ದ ಯಾವ ದೋಷದ ಕಾರಣದಿಂದಲ್ಲ. ಗುರುವಿನಿಂದಲೂ ನನಗೆ ಈ ರೀತಿಯ ಅನುಜ್ಞೆಯಾಗಲಿಲ್ಲ. ನಿನಗೆ ಬೇಕೆನಿಸಿದರೆ ನನ್ನನ್ನು ಶಪಿಸು. ದೇವಯಾನಿ! ನೀನು ಋಷಿಧರ್ಮವನ್ನು ಪಾಲಿಸಬೇಕೆಂದು ನಾನು ನಿನಗೆ ಹೇಳಿದ್ದೇನೆ. ನಿನ್ನ ಈ ಶಾಪಕ್ಕೆ ನಾನು ಅರ್ಹನಲ್ಲ. ನೀನು ಧರ್ಮದಿಂದಲ್ಲ, ಕಾಮದಿಂದ ನನಗೆ ಶಾಪವನ್ನಿತ್ತಿದ್ದೀಯೆ. ಆದರೆ ನಿನ್ನ ಈ ಆಸೆಯು ಎಂದೂ ಪೂರೈಸುವುದಿಲ್ಲ. ಯಾವ ಋಷಿಪುತ್ರನೂ ನಿನ್ನ ಪಾಣಿಗ್ರಹಣ ಮಾಡಿಕೊಳ್ಳುವುದಿಲ್ಲ. ನೀನು ಹೇಳಿದಹಾಗೆ ನನ್ನ ಈ ವಿಧ್ಯೆಯು ಫಲಿಸದೇ ಇರಬಹುದು. ಆದರೆ ನಾನು ಇದನ್ನು ಹೇಳಿಕೊಟ್ಟವನಲ್ಲಿಯಾದರೂ ಇದು ಫಲಿಸುತ್ತದೆ.”
ಈ ರೀತಿ ದೇವಯಾನಿಗೆ ಹೇಳಿ ದ್ವಿಜಶ್ರೇಷ್ಠ ದ್ವಿಜಸತ್ತಮ ಕಚನು ಶೀಘ್ರವಾಗಿ ದೇವಲೋಕವನ್ನು ಸೇರಿದನು. ಅವನು ಬಂದಿರುವುದನ್ನು ಕಂಡ ಇಂದ್ರನೇ ಮೊದಲಾದ ದೇವತೆಗಳು ಸಂತೋಷದಿಂದ ಬೃಹಸ್ಪತಿಯನ್ನು ನೋಡುತ್ತಾ ಕಚನಿಗೆ ಹೇಳಿದರು: “ನಮಗೆ ಅತ್ಯಂತ ಉತ್ತಮ ಪರಮಾದ್ಭುತ ಕಾರ್ಯವನ್ನು ಮಾಡಿದ್ದೀಯೆ. ನಿನ್ನ ಕೀರ್ತಿಯು ಎಂದೂ ಅಳಿಯುವುದಿಲ್ಲ. ನಮ್ಮ ಹವಿಸ್ಸುಗಳ ಪಾಲುದಾರನಾಗುತ್ತೀಯೆ.” ವಿಧ್ಯೆಯನ್ನು ಕಲಿತು ಬಂದ ಕಚನನ್ನು ಪಡೆದು ದಿವೌಕಸರು ಬಹಳ ಸಂತಸಗೊಂಡರು. ಕಚನಿಂದ ಆ ವಿಧ್ಯೆಯನ್ನು ಪಡೆದು ಕೃತಾರ್ಥರಾದರು. ಸರ್ವರೂ ಸೇರಿ ಶತಕ್ರತುವಿಗೆ ಹೇಳಿದರು: “ಪುರಂದರ! ಶತ್ರುಗಳನ್ನು ಸಂಹರಿಸಿ ನಿನ್ನ ವಿಕ್ರಮವನ್ನು ಅವರಿಗೆ ತೋರಿಸುವ ಕಾಲ ಬಂದಿದೆ.”
“ಹಾಗೆಯೇ ಆಗಲಿ” ಎಂದು ಹೇಳಿದ ಮಘವತನು ತ್ರಿದಶರೆಲ್ಲರನ್ನೂ ಸೇರಿಕೊಂಡು ಹೊರಟನು. ಅವರು ವನದಲ್ಲಿ ಸ್ತ್ರೀಯರನ್ನು ಕಂಡರು. ಚೈತ್ರರಥನಂತಿರುವ ವನದಲ್ಲಿ ಕನ್ಯೆಯರು ಜಲಕ್ರೀಡೆಯಾಡುತ್ತಿದ್ದರು. ಆಗ ಅವನು ವಾಯು ರೂಪವನ್ನು ತಾಳಿ ಅವರ ವಸ್ತ್ರಗಳನ್ನೆಲ್ಲಾ ಅದಲು ಬದಲು ಮಾಡಿದನು. ಎಲ್ಲರೂ ಒಟ್ಟಿಗೇ ನೀರಿನಿಂದ ಹೊರಬಂದ ಕನ್ಯೆಯರು ಅದಲು ಬದಲಾದ ವಸ್ತ್ರಗಳಲ್ಲಿ ತಮಗೆ ಸಿಕ್ಕ ವಸ್ತ್ರಗಳನ್ನು ಧರಿಸಿಕೊಂಡರು. ದೇವಯಾನಿಯ ವಸ್ತ್ರವನ್ನು ವೃಷಪರ್ವಣನ ಮಗಳು ಶರ್ಮಿಷ್ಠೆಯು ಅದು ತನ್ನದಲ್ಲ ಎಂದು ತಿಳಿಯದೇ ಧರಿಸಿಕೊಂಡಳು. ಈ ರೀತಿ ದೇವಯಾನಿ ಮತ್ತು ಶರ್ಮಿಷ್ಠೆಯರಲ್ಲಿ ಇದೇ ವಿಷಯದ ಕುರಿತು ಮನಸ್ತಾಪ ಮತ್ತು ತಪ್ಪು ತಿಳುವಳಿಕೆಗಳು ಉಂಟಾದವು.
ದೇವಯಾನಿಯು ಹೇಳಿದಳು: “ನನ್ನ ಶಿಷ್ಯೆ ಅಸುರಿ ನೀನು ಹೇಗೆ ನನ್ನ ವಸ್ತ್ರವನ್ನು ಧರಿಸಿದ್ದೀಯೆ? ಒಳ್ಳೆಯ ನಡತೆಯನ್ನು ಕಳೆದುಕೊಂಡ ನಿನಗೆ ಎಂದೂ ಶ್ರೇಯಸ್ಸು ಉಂಟಾಗಲಾರದು.”
ಶರ್ಮಿಷ್ಠೆಯು ಹೇಳಿದಳು: “ನನ್ನ ತಂದೆಯು ಕುಳಿತಿರಲಿ ಅಥವಾ ಮಲಗಿರಲಿ, ನಿನ್ನ ತಂದೆಯು ಅವನಿಗಿಂಥ ಕೆಳ ಸ್ಥಾನದಲ್ಲಿ ನಿಂತು ವಿನೀತನಾಗಿ ಶ್ಲಾಘನೀಯವಾಗಿ ಸ್ತುತಿಸುತ್ತಾನೆ. ಸ್ತುತಿಸುವ, ಸ್ವೀಕರಿಸುವ, ಬೇಡುವವನ ಮಗಳು ನೀನು. ನಾನು ಸ್ತುತಿಸಲ್ಪಡುವ, ಕೊಡುವ ಮತ್ತು ಏನನ್ನೂ ಸ್ವೀಕರಿಸದೇ ಇರುವವನ ಮಗಳು. ಭಿಕ್ಷುಕೀ! ಅನಾಯುಧಳಾದ ಮತ್ತು ಯಾರ ಬೆಂಬಲವೂ ಇಲ್ಲದ ನೀನು ನನ್ನ ಮುಂದೆ ಥರಥರಿಸುತ್ತೀಯೆ. ನಿನ್ನ ಸರಿಸಾಟಿಯಾದವಳನ್ನು ಹುಡಿಕಿಕೋ. ನಾನು ನಿನ್ನನ್ನು ನನ್ನ ಸರಿಸಾಟಿಯೆಂದು ಪರಿಗಣಿಸುವುದಿಲ್ಲ.”
ಸಿಟ್ಟಿನಿಂದ ದೇವಯಾನಿಯು ತನ್ನ ಬಟ್ಟೆಗಳನ್ನು ಹರಿಯತೊಡಗಿದಳು. ಶರ್ಮಿಷ್ಠೆಯು ಅವಳನ್ನು ಒಂದು ಬಾವಿಯಲ್ಲಿ ದೂಡಿ ತನ್ನ ನಗರಕ್ಕೆ ತೆರಳಿದಳು. ಪಾಪನಿಶ್ಚಯೆ ಶರ್ಮಿಷ್ಠೆಯು ಅವಳು ತೀರಿಕೊಂಡಳೆಂದು ಯೋಚಿಸುತ್ತಾ, ಕ್ರೋಧವಶಾತ್ ಬಾವಿಯಲ್ಲಿ ಇಣುಕಿ ನೋಡದೇ, ತನ್ನ ಮನೆಗೆ ಹೊರಟು ಹೋದಳು.
ಇದೇ ಸಮಯದಲ್ಲಿ ನಹುಷಾತ್ಮಜ ಯಯಾತಿಯು ಜಿಂಕೆಯೊಂದನ್ನು ಅರಸುತ್ತಾ ಅಲ್ಲಿಗೆ ಬಂದನು. ಅವನ ಸಾರಥಿಯು ಬಳಲಿದ್ದನು, ಕುದುರೆಗಳು ಬಳಲಿದ್ದವು ಮತ್ತು ಅವನೂ ಕೂಡ ಬಹಳಷ್ಟು ಬಾಯಾರಿದ್ದನು. ನಾಹುಷನು ಬತ್ತಿಹೋಗಿದ್ದ ಆ ಬಾವಿಯಲ್ಲಿ ಇಣುಕಿದಾಗ ಅಲ್ಲಿ ಆ ಅಗ್ನಿಶಿಖೆಯಂತೆ ತೇಜೋಮಯ ಕನ್ಯೆಯನ್ನು ನೋಡಿದನು. ಆ ದೇವಕನ್ಯೆಯಂಥಹ ರೂಪವತಿಯನ್ನು ನೋಡಿದ ನೃಪಶ್ರೇಷ್ಠನು ಸಂತಯಿಸುತ್ತಾ, ಅತ್ಯಂತ ಮೃದು ಮಾತುಗಳಿಂದ ಕೇಳಿದನು: “ತಾಮ್ರಬಣ್ಣದ ಉಗುರುಗಳು, ಸುಂದರ ಮಣಿಕುಂಡಲಗಳನ್ನು ಹೊಂದಿರುವ ಶ್ಯಾಮ ಸುಂದರಿ ನೀನು ಯಾರು? ಯಾವ ಕಾರಣದಿಂದಾಗಿ ನೀನು ಈ ರೀತಿ ನಿಟ್ಟುಸಿರು ಬಿಡುತ್ತಾ ವ್ಯಾಕುಲಳಾಗಿದ್ದೀಯೆ? ಹುಲ್ಲು ಗಿಡಗಂಟಿಗಳಿಂದ ತುಂಬಿದ ಈ ಬಾವಿಯಲ್ಲಿ ಹೇಗೆ ಬಿದ್ದೆ? ಸುಮದ್ಯಮೇ! ನೀನು ಯಾರ ಮಗಳು? ಎಲ್ಲವನ್ನೂ ಸವಿಸ್ತಾರವಾಗಿ ಹೇಳು.”
ದೇವಯಾನಿಯು ಹೇಳಿದಳು: “ದೇವತೆಗಳಿಂದ ಹತರಾಗಿ ಬಿದ್ದ ದೈತ್ಯರನ್ನು ತನ್ನ ವಿದ್ಯೆಯಿಂದ ಮೇಲೆಬ್ಬಿಸುವ ಶುಕ್ರನ ಮಗಳು ನಾನು. ಆದರೆ ಅವನಿಗೆ ನಾನು ಈ ಸ್ಥಿತಿಯಲ್ಲಿರುವುದು ತಿಳಿದಿಲ್ಲ. ರಾಜನ್! ತಾಮ್ರನಖಾಂಗುಲಿಗಳನ್ನು ಹೊಂದಿದ ಈ ನನ್ನ ಬಲಗೈಯನ್ನು ಹಿಡಿದು ನನ್ನನ್ನು ಮೇಲೆತ್ತು. ನೀನು ಒಳ್ಳೆಯ ಕುಲದವನು ಎಂದು ನನಗೆ ತೋರುತ್ತಿದೆ. ನೀನು ಶಾಂತಸ್ವಭಾವದವನೂ, ವೀರವಂತನೂ, ಯಶಸ್ವಿಯೂ ಎಂದು ತಿಳಿಯುತ್ತೇನೆ. ಈ ಬಾವಿಯಲ್ಲಿ ಬಿದ್ದಿರುವ ನನ್ನನ್ನು ನೀನು ಮೇಲೆತ್ತಬೇಕು.”
ಅವಳು ಬ್ರಾಹ್ಮಣ ಸ್ತ್ರೀಯೆಂದು ತಿಳಿದ ನಹುಷಾತ್ಮಜನು ಅವಳ ಬಲಗೈಯನ್ನು ಹಿಡಿದು ಅವಳನ್ನು ಆ ಬಾವಿಯಿಂದ ಮೇಲೆತ್ತಿದನು. ಬೇಗನೆ ಅವಳನ್ನು ಆ ಬಾವಿಯಿಂದ ಮೇಲಕ್ಕೆಳದ ನರಾಧಿಪ ಯಯಾತಿಯು ಆ ಸುಶ್ರೋಣಿಯಿಂದ ಬೀಳ್ಕೊಂಡು ತನ್ನ ನಗರಕ್ಕೆ ತೆರಳಿದನು.
ದೇವಯಾನಿಯು ಹೇಳಿದಳು: “ಘೂರ್ಣಿಕೇ! ಬೇಗನೆ ಹೋಗಿ ನನ್ನ ತಂದೆಗೆ ನಡೆದುದೆಲ್ಲವನ್ನೂ ವರದಿಮಾಡು. ಇಂದಿನಿಂದ ನಾನು ವೃಷಪರ್ವನ ನಗರವನ್ನು ಪ್ರವೇಶಿಸಲು ನಿರಾಕರಿಸುತ್ತೇನೆ.”
ಘೂರ್ಣಿಕೆಯು ತ್ವರಿತದಲ್ಲಿಯೇ ಅಸುರಮಂದಿರವನ್ನು ಪ್ರವೇಶಿಸಿ, ಅಲ್ಲಿ ಕಾವ್ಯನನ್ನು ಕಂಡು, ದುಗುಡದಿಂದ ಈ ರೀತಿ ಹೇಳಿದಳು: “ಮಹಾಪ್ರಾಜ್ನ! ನಾನು ಹೇಳುವುದನ್ನು ಕೇಳು. ವೃಷಪರ್ವನ ಮಗಳು ಶರ್ಮಿಷ್ಠೆಯು ವನದಲ್ಲಿ ದೇವಯಾನಿಯನ್ನು ಹೊಡೆದಳು.”
ತನ್ನ ಮಗಳನ್ನು ಶರ್ಮಿಷ್ಠೆಯು ಹೊಡೆದಳು ಎಂದು ಕೇಳಿ ದುಃಖಿತನಾದ ಕಾವ್ಯನು ತಕ್ಷಣವೇ ಮಗಳನ್ನು ಹುಡುಕುತ್ತಾ ವನಕ್ಕೆ ಹೋದನು. ವನದಲ್ಲಿ ಮಗಳು ದೇವಯಾನಿಯನ್ನು ಕಂಡ ಕಾವ್ಯನು ತನ್ನ ಬಾಹುಗಳಿಂದ ಅವಳನ್ನು ಬಿಗಿದಪ್ಪಿ, ದುಃಖಭರಿತನಾಗಿ ಈ ಮಾತುಗಳನ್ನಾಡಿದನು: “ತಾವೇ ಮಾಡಿದ ತಪ್ಪುಗಳಿಂದಾಗಿ ಜನರು ಸುಖ-ದುಃಖಗಳೆಲ್ಲವನ್ನೂ ಅನುಭವಿಸುತ್ತಾರೆ. ಈ ಅವಸ್ಥೆಯನ್ನು ಪಡೆದಿರುವ ನೀನೂ ಕೂಡ ಯಾವುದೋ ಪಾಪವನ್ನು ಮಾಡಿರಬೇಕು ಎಂದು ನನಗನ್ನಿಸುತ್ತದೆ.”
ದೇವಯಾನಿಯು ಹೇಳಿದಳು: “ನನ್ನ ತಪ್ಪಿರಬಹುದು ಅಥವಾ ಇಲ್ಲದಿರಬಹುದು. ನಾನು ಹೇಳುವುದನ್ನು ಗಮನವಿಟ್ಟು ಕೇಳು. ವೃಷಪರ್ವನ ಮಗಳು ಶರ್ಮಿಷ್ಠೆಯು ಸತ್ಯವನ್ನೇ ನುಡಿದಿರಬಹುದು. ನೀನು ದೈತ್ಯರ ಹೊಗಳು ಭಟ್ಟನೆಂದು ಅವಳು ಹೇಳಿದಳು. ವೃಷಪರ್ವಣಿ ಶರ್ಮಿಷ್ಠೆಯು ಕಣ್ಣುಗಳನ್ನು ಕೆಂಪುಮಾಡಿ ಕ್ರೋಧದಿಂದ ಈ ರೀತಿಯ ಹರಿತವಾದ ನೋಯಿಸುವ ಮಾತುಗಳನ್ನಾಡಿದಳು. ‘ಬೇಡುವ ಮತ್ತು ತೆಗೆದುಕೊಳ್ಳುವ ಹೊಗಳು ಭಟ್ಟನ ಮಗಳು ನೀನು. ನಾನಾದರೂ ಹೊಗಳಿಸಿಕೊಳ್ಳುವವನ, ಕೊಡುವವನ ಮತ್ತು ಬೇರೆಯವರಿಂದ ಏನನ್ನೂ ಸ್ವೀಕರಿಸದೇ ಇರುವವನ ಮಗಳು.’ ವೃಷಪರ್ವನ ಮಗಳು ಶರ್ಮಿಷ್ಠೆಯು ಸಿಟ್ಟಿನಿಂದ ಕಣ್ಣನು ಕೆಂಪುಮಾಡಿಕೊಂಡು ಸೊಕ್ಕಿನಿಂದ ಉಬ್ಬಿ ಮೇಲಿಂದ ಮೇಲೆ ಇದೇ ಮಾತುಗಳನ್ನಾಡಿದಳು. ಒಂದುವೇಳೆ ನಾನು ಹೊಗಳುಭಟ್ಟನ, ಬೇಡುವವನ ಮತ್ತು ತೆಗೆದುಕೊಳ್ಳುವನ ಮಗಳೇ ಆಗಿದ್ದರೆ ನಾನು ಅವಳಿಗಿಷ್ಟವಾದುದನ್ನು ಮಾಡುತ್ತೇನೆಂದು ನನ್ನ ಸಖಿ ಶರ್ಮಿಷ್ಠೆಗೆ ಹೇಳಿದ್ದೇನೆ.”
ಶುಕ್ರನು ಹೇಳಿದನು: “ಭದ್ರೇ ದೇವಯಾನಿ! ನೀನು ಹೊಗಳು ಭಟ್ಟನ ಮಗಳಲ್ಲ, ಬೇಡುವವನ ಮತ್ತು ತೆಗೆದುಕೊಳ್ಳುವವನ ಮಗಳೂ ಅಲ್ಲ. ಎಲ್ಲರಿಂದ ಸ್ತುತಿಸಲ್ಪಡುವ ಯಾರ ಸ್ತುತಿಯನ್ನೂ ಮಾಡದವನ ಮಗಳು ನೀನು. ಅಚಿಂತ್ಯನೂ ನಿರ್ದ್ವಂದ್ಯನೂ ಆದ ಈಶ್ವರ ಬ್ರಹ್ಮನೇ ನನ್ನ ಬಲವೆಂದು ವೃಷಪರ್ವನೂ ಇಂದ್ರನೂ ರಾಜ ನಹುಷನೂ ಅರಿತುಕೊಂಡಿದ್ದಾರೆ.”
ಶುಕ್ರನು ಹೇಳಿದನು: “ಇನ್ನೊಬ್ಬರ ನಿಂದನೆಯ ಮಾತುಗಳನ್ನು ಸಹಿಸಿಕೊಳ್ಳುವವನು ಸರ್ವವನ್ನೂ ಜಯಿಸಿದಂತೆ ಎನ್ನುವುದನ್ನು ತಿಳಿದುಕೋ, ದೇವಯಾನಿ! ಏರುತ್ತಿರುವ ಕೋಪವನ್ನು ಹಗ್ಗಗಳನ್ನು ಹಿಡೆದೆಳೆದು ಕುದುರೆಗಳನ್ನು ಹೇಗೋ ಹಾಗೆ ಹಿಡಿತದಲ್ಲಿ ತೆಗೆದುಕೊಳ್ಳುವವನೇ ನಿಜವಾದ ಸಾರಥಿ. ಕ್ರೋಧವನ್ನು ಅಕ್ರೋಧದಿಂದ ಶಾಂತಗೊಳಿಸವವನು ಸರ್ವವನ್ನೂ ಗೆದ್ದವನು ಎಂದು ತಿಳಿ. ಏರುತ್ತಿರುವ ಕ್ರೋಧವನ್ನು ಕ್ಷಮೆಯಿಂದ ಯಾರು ಶಾಂತಗೊಳಿಸುತ್ತಾರೋ ಅಂಥಹ ಪುರುಷರನ್ನು ಪೊರೆಬಿಡುವ ಹಾವಿಗೆ ಹೋಲಿಸುತ್ತಾರೆ. ಸಿಟ್ಟನ್ನು ಹಿಡಿತದಲ್ಲಿಟ್ಟುಕೊಂಡು, ನಿಂದನೆಯ ಮಾತುಗಳನ್ನು ಸಹಿಸಿ, ತಾನು ನೊಂದರೂ ಇತರರನ್ನು ನೋಯಿಸದವನು ನಿಶ್ಚಯವಾಗಿಯೂ ಸಂಪತ್ತಿನ ಕೊಪ್ಪರಿಗೆಯೇ. ಒಂದು ನೂರು ವರುಷಗಳ ವರೆಗೆ ತಿಂಗಳು ತಿಂಗಳೂ ಯಜ್ಞಮಾಡುವವನು ಮತ್ತು ಯಾರ ಮೇಲೂ ಸಿಟ್ಟಾಗದೇ ಇರುವವನು ಈ ಈರ್ವರಲ್ಲಿ ಸಿಟ್ಟಾಗದೇ ಇರುವವನೇ ಶ್ರೇಷ್ಠನು. ಬುದ್ಧಿಯಿಲ್ಲದ ಮಕ್ಕಳು ಮಕ್ಕಳಲ್ಲೇ ಜಗಳವಾಗುತ್ತದೆ. ಆದರೆ ಅದನ್ನು ಪ್ರಾಜ್ಞರು ಅನುಸರಿಸುವುದಿಲ್ಲ. ಯಾಕೆಂದರೆ ಅವರಿಗೆ ಬಲ ಮತ್ತು ದುರ್ಬಲಗಳೇನು ಎಂದು ತಿಳಿದಿರುವುದಿಲ್ಲ.”
ದೇವಯಾನಿಯು ಹೇಳಿದಳು: “ತಂದೇ! ಬಾಲಕಿಯಾದರೂ ನಾನು ಧರ್ಮಗಳ ಕುರಿತು ತಿಳಿದಿದ್ದೇನೆ. ಕ್ರೋಧ-ಅಕ್ರೋಧಗಳ ಅಂತರವನ್ನೂ ತಿಳಿದಿದ್ದೇನೆ. ಬಲಾಬಲಗಳನ್ನು ಅರಿತಿದ್ದೇನೆ. ಆದರೆ ಯಾವ ಗುರುವೂ ಅಶಿಷ್ಯರಾಗಿ ವರ್ತಿಸುವ ತಮ್ಮ ಶಿಷ್ಯರನ್ನು ಕ್ಷಮಿಸಬಾರದು. ಕೆಟ್ಟದಾಗಿ ನಡೆದುಕೊಂಡಿರುವವರ ಮಧ್ಯೆ ವಾಸಿಸಲು ನನಗಿಷ್ಟವಿಲ್ಲ. ಶ್ರೇಯೋರ್ಥಿಯಾದ ಯಾರೂ ತನ್ನ ಕುಲ ಮತ್ತು ನಡತೆಯನ್ನು ನಿಂದಿಸುವ ಪಾಪಬುದ್ಧಿಗಳೊಡನೆ ವಾಸಿಸಬಾರದು. ಉತ್ತಮ ಕುಲ ಮತ್ತು ನಡತೆಯನ್ನು ತಿಳಿದು ಗೌರವಿಸುವವರ ಜೊತೆ ವಾಸಿಸುವುದು ಶ್ರೇಷ್ಠವೆಂದು ಹೇಳುತ್ತಾರೆ. ಅಂಥವರಲ್ಲಿಯೇ ನಾವು ವಾಸಿಸೋಣ. ವೃಷಪರ್ವನ ಮಗಳ ಮಹಾ ಘೋರ ಮತ್ತು ಕ್ರೂರ ಮಾತುಗಳಷ್ಟು ದುಷ್ಕರತರವಾದದ್ದು ಈ ಮೂರೂ ಲೋಕಗಳಲ್ಲಿಯೇ ಇಲ್ಲವೆಂದು ನನ್ನ ಅನಿಸಿಕೆ. ತನ್ನ ಪ್ರತಿದ್ವಂದಿಯ ಬೆಳಗುತ್ತಿರುವ ಕೀರ್ತಿಯನ್ನು ನೋಡಿ ಸಂತೋಷಪಡುವವನು ಸೋತವನೇ ಸರಿ.”
ಆಗ ಭೃಗುಶ್ರೇಷ್ಠ ಕಾವ್ಯನು ಕೋಪಗೊಂಡು ಆಸೀನನಾಗಿದ್ದ ವೃಷಪರ್ವನಲ್ಲಿಗೆ ಬಂದು ಏನನ್ನೂ ವಿಚಾರಮಾಡದೆಯೇ ಹೇಳಿದನು: “ರಾಜನ್! ಅಧರ್ಮದ ನಡವಳಿಕೆಯು ಭೂಮಿಯಂತೆ ತಕ್ಷಣವೇ ಫಲವನ್ನೀಡುವುದಿಲ್ಲ. ಅದರ ಫಲವು ಕ್ರಮೇಣವಾಗಿ ತನ್ನಲ್ಲಿ, ಅಥವಾ ಪುತ್ರನಲ್ಲಿ ಅಥವಾ ಮೊಮ್ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತವೆ. ಒಳ್ಳೆಯದಾಗಿ ತಿಂದ ಊಟವನ್ನು ಹೊಟ್ಟೆಯು ಹೇಗೆ ಜೀರ್ಣಿಸಿಕೊಳ್ಳುತ್ತದೆಯೋ ಹಾಗೆ ಪಾಪದ ಫಲವನ್ನೂ ನಿಶ್ವಯವಾಗಿ ಜೀರ್ಣಿಸಿಕೊಳ್ಳಬೇಕಾಗುತ್ತದೆ. ನನ್ನ ಮನೆಯಲ್ಲಿದ್ದು ನನ್ನ ಶುಷ್ರೂಶೆಯಲ್ಲಿ ನಿರತನಾದ ಅಪಾಪಶೀಲ ಧರ್ಮಜ್ಞ ವಿಪ್ರ ಆಂಗೀರಸ ಕಚನನ್ನು ನೀನು ಕೊಲ್ಲಿಸಿದೆ. ವಧಾರ್ಹನಲ್ಲದವನ ವಧೆಗೈದುದಕ್ಕಾಗಿ ಮತ್ತು ನನ್ನ ಮಗಳನ್ನು ನೋಯಿಸಿದುದಕ್ಕಾಗಿ ನಿನ್ನನ್ನು ಮತ್ತು ನಿನ್ನ ಬಂಧುಗಳನ್ನು ನಾನು ತ್ಯಜಿಸುತ್ತೇನೆ. ಇನ್ನು ನಿನ್ನ ಈ ರಾಜ್ಯದಲ್ಲಿ ಇರಲಾರೆ. ನಾನು ಸುಳ್ಳು ಪ್ರಲಾಪನೆಮಾಡುತ್ತಿದ್ದೇನೆಂದು ತಿಳಿಯಬೇಡ. ನಿನ್ನ ತಪ್ಪುಗಳನ್ನು ತಡೆ ಹಿಡಿಯುವುದರ ಬದಲು ಮುಂದುವರಿಸಿಕೊಂಡು ಹೋಗುತ್ತಿದ್ದೀಯೆ.”
ವೃಷಪರ್ವನು ಹೇಳಿದನು: “ಭಾರ್ಗವ! ನೀನು ಎಂದೂ ಅಧರ್ಮದ ಮತ್ತು ಸುಳ್ಳಿನ ಮಾತನಾಡಿದ್ದುದು ನನಗೆ ಗೊತ್ತಿಲ್ಲ. ನಿನ್ನಲ್ಲಿ ಧರ್ಮ ಮತ್ತು ಸತ್ಯ ಇವೆರಡೂ ಇವೆ. ನನ್ನ ಮೇಲೆ ಕರುಣೆತೋರು. ನಿಜವಾಗಿಯೂ ನೀನು ನಮ್ಮನ್ನು ಬಿಟ್ಟು ಹೋದರೆ ನಮಗೆ ಸಮುದ್ರದ ಅಡಿಯನ್ನು ಸೇರುವುದರ ಹೊರತಾದ ಬೇರೆ ಮಾರ್ಗವೇ ಇಲ್ಲ.”
ಶುಕ್ರನು ಹೇಳಿದನು: “ಅಸುರರೇ! ಸಮುದ್ರದಲ್ಲಾದರೂ ಮುಳುಗಿ ಅಥವಾ ದಿಕ್ಕಾಪಾಲಾಗಿ ಓಡಿಹೋಗಿ. ನನ್ನ ಪ್ರೀತಿಯ ಮಗಳಿಗಾದ ನಿಂದನೆಯನ್ನು ನನಗೆ ಸಹಿಸಲಾಗುತ್ತಿಲ್ಲ. ದೇವಯಾನಿಯನ್ನು ಸಂತೋಷದಿಂದಿಡುವುದರ ಮೇಲೆಯೇ ನನ್ನ ಜೀವನವು ನಿಂತಿದೆ. ಬೃಹಸ್ಪತಿಯು ಇಂದ್ರನ ಯೋಗಕ್ಷೇಮವನ್ನು ಹೇಗೆ ನೋಡಿಕೊಳ್ಳುತ್ತಾನೋ ಹಾಗೆ ನಾನು ಸದಾ ನನ್ನ ಮಗಳ ಯೋಗಕ್ಷೇಮವನ್ನು ಬಯಸುತ್ತೇನೆ.”
ವೃಷಪರ್ವನು ಹೇಳಿದನು: “ಭಾರ್ಗವ! ಈ ಅಸುರೇಂದ್ರರ ಎಲ್ಲ ಸಂಪತ್ತಿಗೂ - ನನ್ನನ್ನೂ ಸೇರಿ ಈ ಭೂಮಿ, ಆನೆಗಳು, ಕುದುರೆಗಳು, ಗೋವುಗಳೂ - ಎಲ್ಲಕ್ಕೂ ನೀನೇ ಒಡೆಯ.”
ಶುಕ್ರನು ಹೇಳಿದನು: “ಮಹಾಸುರ! ದೈತ್ಯೇಂದ್ರರ ಎಲ್ಲ ಸಂಪತ್ತಿಗೂ ನಾನು ಒಡೆಯನೆಂದಾದರೆ, ದೇವಯಾನಿಯನ್ನು ನೀನು ಸಂತುಷ್ಟಗೊಳಿಸಬೇಕು.”
ದೇವಯಾನಿಯು ಹೇಳಿದಳು: “ಭಾರ್ಗವ! ತಂದೇ! ಒಂದುವೇಳೆ ನೀನೇ ರಾಜನ ಮತ್ತು ಅವನ ಸರ್ವಸ್ವದ ಒಡೆಯನೆಂದಾದರೆ ಅದನ್ನು ಸ್ವಯಂ ರಾಜನೇ ನನ್ನ ಮುಂದೆ ಬಂದು ಹೇಳಲಿ.”
ವೃಶಪರ್ವನು ಹೇಳಿದನು: “ದೇವಯಾನೀ! ನೀನು ಬಯಸಿದ ಎಲ್ಲ ಬಯಕೆಗಳನ್ನೂ ಅದೆಷ್ಟೇ ದುರ್ಲಭವಾಗಿದ್ದರೂ ನಾನು ಪೂರೈಸುತ್ತೇನೆ.”
ದೇವಯಾನಿಯು ಹೇಳಿದಳು: “ಒಂದು ಸಾವಿರ ದಾಸಿಯರೊಂದಿಗೆ ಶರ್ಮಿಷ್ಠೆಯೂ ನನ್ನ ದಾಸಿಯಾಗಲೆಂದು ಬಯಸುತ್ತೇನೆ. ನನ್ನ ತಂದೆಯು ನನ್ನನ್ನು ಕೊಟ್ಟಲ್ಲಿಗೂ ಅವಳು ನನ್ನನ್ನು ಅನುಸರಿಸಬೇಕು.”
ವೃಷಪರ್ವನು ಹೇಳಿದನು: “ಸಂಗ್ರಹೀತ್ರಿ! ಎದ್ದು ಹೋಗಿ ಶರ್ಮಿಷ್ಠೆಯನ್ನು ಬೇಗನೆ ಕರೆದು ತಾ. ದೇವಯಾನಿಯು ಬಯಸಿದಂತೆ ಅವಳು ನಡೆದುಕೊಳ್ಳಲಿ.”
ಆಗ ಆ ಧಾತ್ರಿಯು ಶರ್ಮಿಷ್ಠೆಯಲ್ಲಿ ಹೋಗಿ ಹೇಳಿದಳು: “ಭದ್ರೇ ಶರ್ಮಿಷ್ಠೇ! ಎದ್ದೇಳು. ನಿನ್ನವರಿಗೆ ಒಳಿತನ್ನು ಮಾಡು. ದೇವಯಾನಿಯಿಂದ ಪ್ರಚೋದಿತ ಬ್ರಾಹ್ಮಣನು ತನ್ನ ಶಿಷ್ಯರನ್ನು ಬಿಟ್ಟು ಹೋಗುವುದರಲ್ಲಿದ್ದಾನೆ. ನೀನು ಅವಳು ಬಯಸಿದ ಹಾಗೆ ನಡೆದುಕೊಳ್ಳಬೇಕಾಗಿದೆ.”
ಶರ್ಮಿಷ್ಠೆಯು ಹೇಳಿದಳು: “ಇಂದು ಅವಳು ಏನನ್ನೇ ಬಯಸಿದರೂ ಅದರಂತೆ ನಡೆದುಕೊಳ್ಳಲು ಸಿದ್ಧಳಿದ್ದೇನೆ. ನನ್ನ ಕಾರಣದಿಂದಾಗಿ ಶುಕ್ರ ಮತ್ತು ದೇವಯಾನಿಯರು ಹೊರಟು ಹೋಗಬಾರದು.” ತಕ್ಷಣವೇ ಅವಳು ತನ್ನ ತಂದೆಯ ಆಜ್ಞೆಯಂತೆ ಸಹಸ್ರ ದಾಸಿಕನ್ಯೆಯರೊಡಗೊಂಡು ಆ ಉತ್ತಮ ಅರಮನೆಯನ್ನು ಬಿಟ್ಟು ಬಂದಳು.
ಶರ್ಮಿಷ್ಠೆಯು ಹೇಳಿದಳು: “ಈ ಸಹಸ್ರ ದಾಸಿಕನ್ಯೆರೊಡನೆ ನಾನು ನಿನ್ನ ಪರಿಚಾರಿಕೆಯಾಗಿ ನಿನ್ನ ತಂದೆಯು ನಿನ್ನನ್ನು ಎಲ್ಲಿಗೆ ಕೊಡುತ್ತಾರೋ ಅಲ್ಲಿಗೂ ಹಿಂಬಾಲಿಸುತ್ತೇನೆ.”
ದೇವಯಾನಿಯು ಹೇಳಿದಳು: “ಬೇಡುವ, ಸ್ತುತಿಸುವ ಬಂಡಿಯ ಮಗಳು ನಾನು. ಸ್ತುತಿಸಲ್ಪಡುವವನ ಮಗಳಾದ ನೀನು ಹೇಗೆ ನನ್ನ ದಾಸಿಯಾಗಬಲ್ಲೆ?”
ಶರ್ಮಿಷ್ಠೆಯು ಹೇಳಿದಳು: “ಏನಾದರೂ ಮಾಡಿ ಆರ್ತರಾದ ನನ್ನವರಿಗೆ ಸುಖವನ್ನು ತರಲು ಬಯಸುತ್ತೇನೆ. ಆದುದರಿಂದ ನಿನ್ನ ತಂದೆಯು ನಿನ್ನನ್ನು ಎಲ್ಲಿಗೆ ಕೊಡುತ್ತಾರೋ ಅಲ್ಲಿಗೆ ನಾನು ಅನುಸರಿಸುವೆ.”
ಈ ರೀತಿ ವೃಷಪರ್ವನ ಮಗಳು ತನ್ನ ದಾಸಿಯಾದ ನಂತರ ದೇವಯಾನಿಯು ತನ್ನ ತಂದೆಗೆ ಹೇಳಿದಳು: “ತಂದೆ ದ್ವಿಜಸತ್ತಮ! ನಾನು ಸಂತುಷ್ಠಳಾಗಿ ಪುರವನ್ನು ಪ್ರವೇಶಿಸುತ್ತಿದ್ದೇನೆ. ನಿನ್ನ ವಿದ್ಯಾಬಲ ಮತ್ತು ವಿಜ್ಞಾನವು ಅಮೋಘವೆಂದು ಈಗ ನನಗೆ ತಿಳಿಯಿತು.” ಮಗಳ ಈ ಮಾತುಗಳನ್ನು ಕೇಳಿ ಸಂತುಷ್ಠನಾದ ಮಹಾಯಶಸ್ವಿ ದ್ವಿಜಶ್ರೇಷ್ಠನು ತನ್ನ ಪುತ್ರಿಯೊಂದಿಗೆ ಸರ್ವ ದಾನವರಿಂದ ಆದರಗೊಂಡು ಪುರವನ್ನು ಪ್ರವೇಶಿಸಿದನು.
ದೀರ್ಘಕಾಲದ ನಂತರ ವರವರ್ಣಿನಿ ದೇವಯಾನಿಯು ಕ್ರೀಡಾರ್ಥವಾಗಿ ವನವನ್ನು ಸೇರಿದಳು. ಶರ್ಮಿಷ್ಠೆಯನ್ನೂ ಒಳಗೊಂಡ ತನ್ನ ಸಾವಿರ ದಾಸಿಯರೊಂದಿಗೆ ಅದೇ ಸ್ಥಳವನ್ನು ಸೇರಿ ಅಲ್ಲಿ ತನಗಿಷ್ಟವಾದ ರೀತಿಯಲ್ಲಿ ತಿರುಗಾಡಿದಳು. ಸರ್ವ ಸಖಿಯರಿಂದ ಸೇವಿಸಲ್ಪಟ್ಟ ಅವಳು ಅತೀವ ಸಂತೋಷದಿಂದಿದ್ದಳು. ಹೂವಿನ ಮಕರಂದವನ್ನು ಸವಿಯುತ್ತಾ, ಹಣ್ಣುಗಳನ್ನು ಕಚ್ಚಿ ತಿನ್ನುತ್ತಾ, ವಿವಿಧ ಭಕ್ಷ್ಯಗಳನ್ನು ಸೇವಿಸುತ್ತಾ ಅವರೆಲ್ಲರೂ ಆಡುತ್ತಿದ್ದರು.
ಪುನಃ ಬೇಟೆಯಾಡಲು ಜಿಂಕೆಗಳನ್ನು ಅರಸುತ್ತಿದ್ದ ರಾಜ ನಾಹುಷನು ಆಯಾಸಗೊಂಡು ಬಾಯಾರಿ ನೀರನ್ನು ಹುಡುಕುತ್ತಾ ಅದೇ ಸ್ಥಳಕ್ಕೆ ಬಂದನು. ಅಲ್ಲಿ ಅವನು ಕುಡಿದು ಆಡುತ್ತಿದ್ದ ದಿವ್ಯಾಭರಣಭೂಷಿತೆ ದೇವಯಾನಿ-ಶರ್ಮಿಷ್ಠೆಯರನ್ನೂ, ಇತರ ಸ್ತ್ರೀಯರನ್ನೂ ಕಂಡನು. ಆ ಎಲ್ಲ ವರಾಂಗನೆ ಸ್ತ್ರೀಯರ ಮಧ್ಯದಲ್ಲಿ, ಶರ್ಮಿಷ್ಠೆಯಿಂದ ಕಾಲುಗಳನ್ನು ಒತ್ತಿಸಿ ಸೇವೆ ಮಾಡಿಸಿಕೊಳ್ಳುತ್ತಾ ಕುಳಿತಿದ್ದ ಅಪ್ರತಿಮ ರೂಪಿಣಿ ಶುಚಿಸ್ಮಿತೆ ದೇವಯಾನಿಯನ್ನು ಕಂಡನು.
ಯಯಾತಿಯು ಹೇಳಿದನು: “ಎರಡು ಸಾವಿರ ಕನ್ಯೆಯರಿಂದ ಸುತ್ತುವರೆಯಲ್ಪಟ್ಟಿರುವ ನೀವಿಬ್ಬರು ಕನ್ಯೆಯರ ಗೋತ್ರ ಮತ್ತು ಹೆಸರುಗಳೇನೆಂದು ಕೇಳಬಹುದೇ?”
ದೇವಯಾನಿಯು ಹೇಳಿದಳು: “ನರಾಧಿಪ! ನಾನು ಹೇಳುವ ಮಾತುಗಳನ್ನು ಕೇಳು. ನಾನು ಶುಕ್ರ ಎಂಬ ಹೆಸರಿನ ಅಸುರಗುರುವಿನ ಮಗಳು. ನಾನೆಲ್ಲಿದ್ದರೂ ಅಲ್ಲಿಗೆ ಬರುವ ಈ ಸಖಿಯು ನನ್ನ ದಾಸಿ; ದಾನವೇಂದ್ರ ವೃಷಪರ್ವನ ಮಗಳು ಶರ್ಮಿಷ್ಠಾ.”
ಯಯಾತಿಯು ಹೇಳಿದನು: “ಅಸುರೇಂದ್ರನ ಮಗಳು, ಸುಂದರ ಹುಬ್ಬಿನ ವರವರ್ಣಿನಿ ಈ ಕನ್ಯೆಯು ನಿನಗೆ ಸಖೀ ದಾಸಿ ಹೇಗಾದಳು ಎನ್ನುವುದೇ ನನಗೆ ಪರಮ ಕುತೂಹಲವೆನಿಸುತ್ತದೆ.”
ದೇವಯಾನಿಯು ಹೇಳಿದಳು: “ನರವ್ಯಾಘ್ರ! ಸರ್ವವೂ ವಿಧಿಯನ್ನು ಅನುಸರಿಸಿಯೇ ನಡೆಯುತ್ತದೆ. ಇದೂ ಕೂಡ ವಿಧಿವಿಹಿತವೆಂದು ಸ್ವೀಕರಿಸಿ, ವಿಚಿತ್ರ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸು. ರೂಪವೇಷದಲ್ಲಿ ನೀನು ರಾಜನಂತಿದ್ದೀಯೆ; ನಿನ್ನ ಮಾತುಗಳು ವೇದವಾಖ್ಯಗಳಂತಿವೆ. ನಿನ್ನ ಹೆಸರೇನು, ನೀನು ಎಲ್ಲಿಯವನು ಮತ್ತು ಯಾರ ಮಗನೆಂದು ಹೇಳು.”
ಯಯಾತಿಯು ಹೇಳಿದನು: “ಬ್ರಹ್ಮಚರ್ಯದ ದಿನಗಳಲ್ಲಿ ವೇದವು ನನ್ನ ಕಿವಿಗಳನ್ನು ಹೊಕ್ಕವು. ರಾಜಪುತ್ರನಾದ ನಾನೊಬ್ಬ ರಾಜ. ಯಾಯಾತಿಯೆಂದು ಕರೆಯುತ್ತಾರೆ.”
ದೇವಯಾನಿಯು ಹೇಳಿದಳು: “ನೃಪ! ನೀನು ಯಾವ ಕಾರಣಕ್ಕಾಗಿ ಈ ಸ್ಥಳಕ್ಕೆ ಬಂದಿದ್ದೀಯೆ - ಕಮಲಗಳನ್ನು ಕೊಯ್ಯಲೋ ಅಥವಾ ಮೃಗಗಳ ಬೇಟೆಗೆಂದೋ?”
ಯಯಾತಿಯು ಹೇಳಿದನು: “ಭದ್ರೇ! ಬೇಟೆಯಾಡಲು ಬಂದ ನಾನು ಕುಡಿಯುವ ನೀರಿಗಾಗಿ ಇಲ್ಲಿಗೆ ಬಂದಿದ್ದೇನೆ. ನೀನು ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದೀಯೆ. ನನಗೆ ಹಿಂದಿರುಗಲು ಅಪ್ಪಣೆ ಕೊಡು.”
ದೇವಯಾನಿಯು ಹೇಳಿದಳು: “ಈ ನನ್ನ ದಾಸಿ ಶರ್ಮಿಷ್ಠೆ ಮತ್ತು ಈ ಸಹಸ್ರ ಕನ್ಯೆಯರೊಡನೆ ನಾನೂ ಕೂಡ ನಿನ್ನ ಅಧೀನಳಾಗಿದ್ದೇನೆ. ನಿನಗೆ ಮಂಗಳವಾಗಲಿ. ನನ್ನ ಸಖ ಮತ್ತು ಪತಿಯಾಗು.”
ಯಯಾತಿಯು ಹೇಳಿದನು: “ಉಶನನ ಮಗಳು ಭಾಮಿನೀ! ನಿನಗೆ ಮಂಗಳವಾಗಲಿ. ನಾನು ನಿನ್ನ ಅರ್ಹನಲ್ಲ. ದೇವಯಾನಿ! ನಿನ್ನ ತಂದೆಯು ನಿನ್ನನ್ನು ರಾಜನಿಗೆ ವಿವಾಹ ಮಾಡಿಸುವುದಿಲ್ಲ.”
ದೇವಯಾನಿಯು ಹೇಳಿದಳು: “ಈ ಮೊದಲೂ ಕೂಡ ಬ್ರಾಹ್ಮಣರು ಕ್ಷತ್ರಿಯರನ್ನೂ ಕ್ರತ್ರಿಯರು ಬ್ರಾಹ್ಮಣರನ್ನೂ ಸೇರಿದ್ದಿದೆ. ಋಷಿಪುತ್ರನಾದ ನೀನೂ ಕೂಡ ಓರ್ವ ಋಷಿಯೇ. ನಾಹುಷ! ನನ್ನನ್ನು ವರಿಸು.”
ಯಯಾತಿಯು ಹೇಳಿದನು: “ವರಾಂಗನೇ! ನಾಲ್ಕು ವರ್ಣಗಳೂ ಒಂದೇ ದೇಹದಿಂದ ಉದ್ಭವವಾಗಿದ್ದರೂ ಅವರ ಧರ್ಮಗಳು ಬೇರೆ ಮತ್ತು ಅವರ ಶುದ್ಧತೆ ಬೇರೆ. ಅವರೆಲ್ಲರಲ್ಲಿ ಬ್ರಾಹ್ಮಣನೇ ಶ್ರೇಷ್ಠ.”
ದೇವಯಾನಿಯು ಹೇಳಿದಳು: “ನಾಹುಷ! ಈ ನನ್ನ ಕೈಗಳನ್ನು ಮೊದಲು ಬೇರೆ ಯಾರೂ ಮುಟ್ಟಿರಲಿಲ್ಲ. ಮೊದಲಬಾರಿ ನನ್ನ ಕೈ ಹಿಡಿದವನು ನೀನೇ. ಆದುದರಿಂದ ನಿನ್ನನ್ನು ನಾನು ವರಿಸುತ್ತೇನೆ. ಋಷಿಪುತ್ರನೂ ಸ್ವಯಂ ಋಷಿಯೂ ಆದ ನೀನು ಹಿಡಿದ ಈ ಕೈಯನ್ನು ಬೇರೆಯವರು ಹಿಡಿಯುವುದನ್ನು ಸ್ವಾಭಿಮಾನಿಯಾದ ನಾನು ಹೇಗೆ ತಾನೆ ಸಹಿಸಲಿ?”
ಯಯಾತಿಯು ಹೇಳಿದನು: “ಘೋರವಿಷ ಸರ್ಪ ಮತ್ತು ಎಲ್ಲಕಡೆ ಉರಿಯುತ್ತಿರುವ ಬೆಂಕಿಗಿಂತಲೂ ಬ್ರಾಹ್ಮಣರಿಂದ ದೂರವಿರುವುದು ಹೆಚ್ಚು ಒಳ್ಳೆಯದು ಎಂದು ತಿಳಿದವರು ಹೇಳುತ್ತಾರೆ.”
ದೇವಯಾನಿಯು ಹೇಳಿದಳು: “ಪುರುಷರ್ಷಭ! ವಿಷಸರ್ಪ ಮತ್ತು ಸರ್ವತೋಮುಖ ಅಗ್ನಿಗಿಂತ ವಿಪ್ರರಿಂದ ದೂರವಿರುವುದು ಒಳ್ಳೆಯದೆಂದು ಯಾಕೆ ಹೇಳುತ್ತಿದ್ದೀಯೆ?”
ಯಯಾತಿಯು ಹೇಳಿದನು: “ವಿಷಸರ್ಪವೂ ಒಬ್ಬನನ್ನೇ ಕೊಲ್ಲುತ್ತದೆ, ಖಡ್ಗವೂ ಒಬ್ಬನನ್ನೇ ಕೊಲ್ಲುತ್ತದೆ. ಆದರೆ ಕೋಪಿತ ಬ್ರಾಹ್ಮಣನು ಇಡೀ ರಾಷ್ಟ್ರ ಅಥವಾ ಪುರವನ್ನೇ ನಾಶಪಡಿಸಬಲ್ಲ. ಆದುದರಿಂದ ಸುಂದರಿ! ವಿಪ್ರನನ್ನು ಎದುರಿಸುವುದು ಬಹಳ ಕಷ್ಟವೆಂದು ನನ್ನ ಅನಿಸಿಕೆ. ನಿನ್ನ ತಂದೆಯು ನಿನ್ನನ್ನು ನನಗೆ ಕೊಡದೇ ನಾನು ನಿನ್ನನ್ನು ಮದುವೆಯಾಗಲಾರೆ.”
ದೇವಯಾನಿಯು ಹೇಳಿದಳು: “ತಂದೆಯು ನನ್ನನ್ನು ನಿನಗೆ ಕೊಟ್ಟಾಗಲೇ ವರಿಸು. ರಾಜನ್! ನಾನು ಈಗಾಗಲೇ ನಿನ್ನನ್ನು ವರಿಸಿಯಾಗಿದೆ. ಕೇಳದೇ ಇದ್ದುದನ್ನು ಕೊಟ್ಟಾಗ ಸ್ವೀಕರಿಸುವುದರಲ್ಲಿ ಯಾವ ಭಯವೂ ಇಲ್ಲ.”
ತಕ್ಷಣವೇ ದೇವಯಾನಿಯು ತನ್ನ ತಂದೆಗೆ ವಿಷಯವನ್ನು ಹೇಳಿ ಕಳುಹಿಸಿದಳು. ವಿಷಯ ತಿಳಿದ ಭಾರ್ಗವನು ರಾಜನನ್ನು ಕಾಣಲು ಬಂದನು. ಪೃಥಿವೀಪತಿ ಯಯಾತಿಯು ಆಗಮಿಸಿದ ಬ್ರಾಹ್ಮಣ ಕಾವ್ಯ ಶುಕ್ರನನ್ನು ಕಂಡು ಅಂಜಲೀ ಬದ್ಧನಾಗಿ ನಮಸ್ಕರಿಸಿ, ಪ್ರಣೀತನಾಗಿ ನಿಂತುಕೊಂಡನು.
ದೇವಯಾನಿಯು ಹೇಳಿದಳು: “ತಂದೇ! ನಾನು ದುಃಖದಲ್ಲಿದ್ದಾಗ ನನ್ನ ಕೈಹಿಡಿದ ಇವನು ರಾಜ ನಹುಷನ ಪುತ್ರ. ಇವನಿಗೇ ನನ್ನನ್ನು ಕೊಡು. ಈ ಲೋಕಗಳಲ್ಲಿ ಬೇರೆ ಯಾರನ್ನೂ ನನ್ನ ಪತಿಯನ್ನಾಗಿ ವರಿಸುವುದಿಲ್ಲ.”
ಶುಕ್ರನು ಹೇಳಿದನು: “ವೀರ! ನನ್ನ ಪ್ರೀತಿಯ ಮಗಳು ನಿನ್ನನ್ನು ಪತಿಯನ್ನಾಗಿ ವರಿಸಿದ್ದಾಳೆ. ನಾನು ನಿನಗೆ ನೀಡುತ್ತಿರುವ ಇವಳನ್ನು ನಿನ್ನ ರಾಣಿಯನ್ನಾಗಿ ಸ್ವೀಕರಿಸು.”
ಯಯಾತಿಯು ಹೇಳಿದನು: “ಭಾರ್ಗವ! ವರ್ಣಸಂಕರ ಪಾಪವು ನನ್ನನ್ನು ಮುಟ್ಟದಿರಲಿ ಎನ್ನುವ ವರವನ್ನು ನನಗೆ ಅನುಗ್ರಹಿಸು.”
ಶುಕ್ರನು ಹೇಳಿದನು: “ಅಧರ್ಮದಿಂದ ನಿನ್ನನ್ನು ವಿಮೋಚಿಸುತ್ತೇನೆ. ನಿನಗಿಷ್ಟವಾದಂತೆ ಅವಳನ್ನು ವರಿಸು. ಈ ವಿವಾಹದಿಂದ ಹಿಂಜರಿಯಬೇಡ. ನಿನ್ನನ್ನು ಪಾಪಗಳಿಂದ ವಿಮುಕ್ತನನ್ನಾಗಿ ಮಾಡುತ್ತೇನೆ. ನಿನ್ನ ಹೆಂಡತಿ ಸುಮಧ್ಯಮೆ ದೇವಯಾನಿಯನ್ನು ಧರ್ಮದಿಂದ ನೋಡಿಕೋ. ಇವಳ ಜೊತೆಗೂಡಿ ನೀನು ಅತುಲ ಸಂತೋಷವನ್ನು ಹೊಂದುತ್ತೀಯೆ. ರಾಜನ್! ವಾರ್ಷವಪರ್ವಣಿ ಕುಮಾರಿ ಶರ್ಮಿಷ್ಠೆಯನ್ನೂ ಗೌರವದಿಂದ ಸತತ ಕಾಣು. ಅವಳನ್ನು ಎಂದೂ ನಿನ್ನ ಹಾಸಿಗೆಯ ಮೇಲೆ ಕರೆದುಕೊಳ್ಳಬೇಡ.” ಇದನ್ನು ಕೇಳಿದ ಯಯಾತಿಯು ಮಹಾತ್ಮ ಶುಕ್ರನಿಗೆ ಪ್ರದಕ್ಷಿಣೆ ಮಾಡಿ, ಅಪ್ಪಣೆಯನ್ನು ಪಡೆದು ಸಂತೋಷದಿಂದ ತನ್ನ ಪುರಕ್ಕೆ ತೆರಳಿದನು.
ಯಯಾತಿಯು ಮಹೇಂದ್ರಪುರಸನ್ನಿಭ ತನ್ನ ಪುರವನ್ನು ಸೇರಿ ಅಂತಃಪುರವನ್ನು ಪ್ರವೇಶಿಸಿ ಅಲ್ಲಿ ದೇವಯಾನಿಯನ್ನಿರಿಸಿದನು. ದೇವಯಾನಿಯ ಹೇಳಿಕೆಯಂತೆ ವೃಷಪರ್ವನ ಮಗಳನ್ನು ಅಶೋಕವನದ ಬಳಿ ಒಂದು ಮನೆಯನ್ನು ನಿರ್ಮಿಸಿ ಅಲ್ಲಿ ಇರಿಸಿದನು. ಸಹಸ್ರ ದಾಸಿಯರಿಂದ ಆವೃತಳಾದ ಅಸುರಾಯಿಣೀ ಶರ್ಮಿಷ್ಠೆಗೆ ಸುಸಜ್ಜಿತ ಅನ್ನ, ಪಾನೀಯ ಮತ್ತು ವಸ್ತ್ರಗಳ ವ್ಯವಸ್ಥೆಯನ್ನು ಮಾಡಿದನು. ಆ ನೃಪ ನಹುಷಾತ್ಮಜನು ದೇವಯಾನಿಯ ಸಹಿತ ದೇವತೆಯಂತೆ ಬಹಳ ವರ್ಷಗಳ ಕಾಲ ವಿಹರಿಸುತ್ತಾ ಅತ್ಯಂತ ಸಂತೋಷವನ್ನು ಹೊಂದಿದನು. ಋತುಕಾಲ ಸಂಪ್ರಾಪ್ತವಾದಾಗ ವರಾಂಗನೆ ದೇವಯಾನಿಯು ಗರ್ಭವನ್ನು ಧರಿಸಿ ಮೊದಲನೆಯ ಕುಮಾರನಿಗೆ ಜನ್ಮವಿತ್ತಳು.
ಈ ರೀತಿ ಒಂದು ಸಾವಿರ ವರ್ಷಗಳು ಕಳೆಯುತ್ತಿದ್ದಂತೆ ವಾರ್ಷಪರ್ವಣೀ ಶರ್ಮಿಷ್ಠೆಯು ಯೌವನವನ್ನು ಹೊಂದಿ ತನ್ನ ಋತುವು ಪ್ರಯೋಜನಕ್ಕೆ ಬಾರದೆ ಇರುವುದನ್ನು ಕಂಡು ಯೋಚಿಸತೊಡಗಿದಳು: “ಋತುಕಾಲವನ್ನು ಪಡೆದಿದ್ದೇನೆ. ಆದರೆ ಇದೂವರೆಗೂ ನಾನು ಯಾರನ್ನೂ ಪತಿಯನ್ನಾಗಿ ವರಿಸಿಲ್ಲ. ಇದೇನಾಯಿತು? ಏನು ಮಾಡಲಿ? ಆಗಬೇಕಾದುದನ್ನು ಹೇಗೆ ಮಾಡಲಿ? ದೇವಯಾನಿಯು ಮಕ್ಕಳಿಗೆ ಜನ್ಮವಿತ್ತಿದ್ದಾಳೆ. ನನ್ನ ಯೌವನವು ವ್ಯರ್ಥವಾಗುತ್ತಿದೆ. ಅವಳು ಯಾರನ್ನು ತನ್ನ ಪತಿಯನ್ನಾಗಿ ವರಿಸಿದ್ದಾಳೆಯೋ ಅವನನ್ನೇ ನನ್ನ ಪತಿಯನ್ನಾಗಿ ವರಿಸುತ್ತೇನೆ. ರಾಜನು ನನಗೆ ಪುತ್ರಫಲ ನೀಡಬೇಕೆಂದು ನನ್ನ ಬುದ್ಧಿ ನಿಶ್ಚಯಿಸಿದೆ. ಆದರೆ ಆ ಧರ್ಮಾತ್ಮನು ಇಲ್ಲಿ ನನಗೆ ಏಕಾಂತದಲ್ಲಿ ಕಾಣಲು ದೊರಕುತ್ತಾನೆಯೇ?”
ಅದೇ ವೇಳೆಯಲ್ಲಿ ರಾಜನು ಹಾಗೆಯೇ ಹೊರಬಂದು ಅಶೋಕವನದ ಬಳಿ ಶರ್ಮಿಷ್ಠೆಯನ್ನು ಕಂಡು ಅವಳ ಎದುರೇ ನಿಂತನು. ಅವನೊಬ್ಬನೇ ಇರುವುದನ್ನು ನೋಡಿದ ಚಾರುಹಾಸಿನಿ ಶರ್ಮಿಷ್ಠೆಯು ಕೈಜೋಡಿಸಿ ವಂದಿಸಿ ರಾಜನಲ್ಲಿ ಕೇಳಿಕೊಂಡಳು: “ನಾಹುಷ! ಸೋಮ, ಇಂದ್ರ, ವಿಷ್ಣು, ಯಮ, ವರುಣ ಮತ್ತು ನಿನ್ನ ಮನೆಯಲ್ಲಿರುವ ಸ್ತ್ರೀಯರನ್ನು ಯಾರುತಾನೆ ಮುಟ್ಟಲು ಪ್ರಯತ್ನಿಸುತ್ತಾರೆ? ನೀನು ನನ್ನ ರೂಪ, ಜನ್ಮ ಮತ್ತು ನಡತೆಯ ಕುರಿತು ಸದಾ ತಿಳಿದಿದ್ದೇಯೆ. ಆದುದರಿಂದ ನನ್ನ ಈ ಋತುವು ನಿಷ್ಫಲವಾಗದಂತೆ ಅನುಗ್ರಹಿಸು ಎಂದು ನಿನ್ನಲ್ಲಿ ಕೇಳಿಕೊಳ್ಳುತ್ತೇನೆ.”
ಯಯಾತಿಯು ಹೇಳಿದನು: “ನೀನು ಶೀಲಸಂಪನ್ನಳೂ, ಅನಿಂದಿತೆಯೂ ಆದ ದೈತ್ಯಕನ್ಯೆಯೆಂದು ನನಗೆ ತಿಳಿದಿದೆ. ನಿನ್ನ ರೂಪದಲ್ಲಿ ಒಂದು ಸೂಜಿಯ ಮೊನೆಯಷ್ಟು ದೋಷವನ್ನೂ ನಾನು ಕಾಣುತ್ತಿಲ್ಲ. ಆದರೆ ದೇವಯಾನಿಯನ್ನು ವಿವಾಹವಾದ ಸಮಯದಲ್ಲಿ ಉಶನ ಕಾವ್ಯನು ವಾರ್ಷಪರ್ವಣಿಯನ್ನು ನಿನ್ನ ಹಾಸಿಗೆಯ ಮೇಲೆ ಕರೆದುಕೊಳ್ಳಬೇಡ ಎಂಬ ನಿಯಮವನ್ನು ಹಾಕಿದ್ದಾನೆ.”
ಶರ್ಮಿಷ್ಠೆಯು ಹೇಳಿದಳು: “ರಾಜನ್! ಐದು ಪರಿಸ್ಥಿತಿಗಳಲ್ಲಿ - ಹಾಸ್ಯ, ಸ್ತ್ರೀ, ವಿವಾಹಕಾಲ, ಪ್ರಾಣಾಪತ್ತು ಮತ್ತು ಸರ್ವ ಧನವನ್ನೂ ಕಳೆದುಕೊಂಡ ಸಮಯ - ಹೇಳಿದ ಸುಳ್ಳು ಪಾಪವಲ್ಲ. ಸಾಕ್ಷಿಯನ್ನು ಕೇಳಿದಾಗ ಸುಳ್ಳುಹೇಳುವವನನ್ನು ನಿಜವಾದ ಸುಳ್ಳುಗಾರನೆಂದು ಹೇಳುತ್ತಾರೆ. ಒಂದೇ ಉದ್ದೇಶವನ್ನು ನೆರವೇರಿಸಲೋಸುಗ ಹೇಳುವ ಸುಳ್ಳು ನಿಜವಾದ ಸುಳ್ಳು.”
ಯಯಾತಿಯು ಹೇಳಿದನು: “ರಾಜನು ಪ್ರಜೆಗಳಿಗೆ ಪ್ರಮಾಣವಿದ್ದಂತೆ. ಅವನೇ ಸುಳ್ಳು ಹೇಳಿದರೆ ಎಲ್ಲವನ್ನೂ ಕಳೆದುಕೊಂಡಹಾಗೆ. ಬಹಳಷ್ಟು ಅನಿಷ್ಟವಾಗುತ್ತದೆ ಎಂದಾದರೂ ನಾನು ಸುಳ್ಳನ್ನು ಹೇಳ ಬಯಸುವುದಿಲ್ಲ.”
ಶರ್ಮಿಷ್ಠೆಯು ಹೇಳಿದಳು: “ಸಖಿಯ ಪತಿ ಮತ್ತು ತನ್ನ ಪತಿ ಇವರೀರ್ವರಿಗೂ ಗಾಢ ಸಂಬಂಧವಿದೆ ಎಂದು ಹೇಳುತ್ತಾರೆ. ಸಖಿಯ ವಿವಾಹವೂ ತನ್ನ ವಿವಾಹವಿದ್ದಂತೆ ಎಂದೂ ಹೇಳುತ್ತಾರೆ. ನನ್ನ ಸಖಿಯ ಪತಿ ನಿನ್ನನ್ನು ನನ್ನ ಪತಿಯನ್ನಾಗಿ ವರಿಸಿದ್ದೇನೆ.”
ಯಯಾತಿಯು ಹೇಳಿದನು: “ಯಾಚಿಸಿದ್ದುದನ್ನು ಕೊಟ್ಟುಬಿಡಬೇಕು ಎನ್ನುವುದು ನಾನು ಪಾಲಿಸಿಕೊಂಡು ಬಂದ ವ್ರತ. ನನ್ನ ಪ್ರೀತಿಯನ್ನು ನೀನು ಯಾಚಿಸುತ್ತಿದ್ದೀಯೆ. ನಾನೇನು ಮಾಡಲಿ ಹೇಳು.”
ಶರ್ಮಿಷ್ಠೆಯು ಹೇಳಿದಳು: “ರಾಜನ್! ಅಧರ್ಮದಿಂದ ನನ್ನನ್ನು ಉದ್ಧರಿಸು ಮತ್ತು ಧರ್ಮದಲ್ಲಿ ನಡೆಯುವಹಾಗೆ ಮಾಡು. ನಿನ್ನಿಂದ ಒಂದು ಮಗುವಿನ ತಾಯಿಯಾದರೆ ನಾನು ಈ ಲೋಕದಲ್ಲಿ ಉತ್ತಮ ಧರ್ಮವನ್ನು ಪರಿಪಾಲಿಸಿದಂತಾಗುತ್ತದೆ. ಭಾರ್ಯೆ, ದಾಸಿ ಮತ್ತು ಸುತ ಈ ಮೂವರೂ ಅಧನರೆಂದು ಹೇಳಬಹುದು. ಅವರು ಗಳಿಸಿದ ಸಂಪತ್ತೆಲ್ಲವೂ ಅವರ ಒಡೆಯನಿಗೇ ಸೇರುತ್ತವೆ. ನಾನು ದೇವಯಾನಿಯ ದಾಸಿಯಾದರೆ ಭಾರ್ಗವಿಯು ನಿನ್ನ ವಶದಲ್ಲಿದ್ದಾಳೆ. ಅವಳು ಮತ್ತು ನಾನು ಇಬ್ಬರೂ ನಿನ್ನನ್ನೇ ಅವಲಂಬಿಸಿದ್ದೇವೆ. ನನ್ನನ್ನು ತೃಪ್ತಿಗೊಳಿಸು.”
ಅವಳು ಹೀಗೆ ಹೇಳಿದಾಗ ರಾಜನು ಅವಳಲ್ಲಿರುವ ಸತ್ಯವನ್ನು ತಿಳಿದನು. ಶರ್ಮಿಷ್ಠೆಯನ್ನು ಗೌರವದಿಂದ ಸ್ವೀಕರಿಸಿ, ಅವಳಿಗೆ ಧರ್ಮ ಮಾರ್ಗವನ್ನು ತೋರಿಸಿದನು. ಶರ್ಮಿಷ್ಠೆಯನ್ನು ಒಂದುಗೂಡಿ ಸುಖವನ್ನು ಪಡೆದನು. ನಂತರ ಪರಸ್ಪರರನ್ನು ಬೀಳ್ಕೊಂಡು ತಮ್ಮ ತಮ್ಮ ದಾರಿಯನ್ನು ಕೂಡಿದರು. ಆ ಸಮಾಗಮದಿಂದ ಸುಭ್ರು, ಚಾರುಹಾಸಿನಿ ಶರ್ಮಿಷ್ಠೆಯು ನೃಪತಿ ಸತ್ತಮನಿಂದ ಪ್ರಥಮ ಗರ್ಭವನ್ನು ಧರಿಸಿದಳು. ಕಾಲಪ್ರಾಪ್ತವಾದಾಗ ಆ ರಾಜೀವಲೋಚನೆಯು ದೇವಗರ್ಭ ಕಾಂತಿಯನ್ನು ಹೊಂದಿದ ರಾಜೀವಲೋಚನ ಕುಮಾರನಿಗೆ ಜನ್ಮವಿತ್ತಳು.
ಕುಮಾರನ ಜನನದ ಕುರಿತು ಕೇಳಿದ ಶುಚಿಸ್ಮಿತೆ ದೇವಯಾನಿಯು ದುಃಖಾರ್ತಳಾಗಿ ಶರ್ಮಿಷ್ಠೆಯ ಕುರಿತು ಚಿಂತಿಸತೊಡಗಿದಳು. ಶರ್ಮಿಷ್ಠೆಯ ಬಳಿಹೋಗಿ ದೇವಯಾನಿಯು ಕೇಳಿದಳು: “ಸುಂದರ ಹುಬ್ಬಿನವಳೇ! ಕಾಮಲುಬ್ಧಳಾಗಿ ಇದೇನು ಮಾಡಿಬಿಟ್ಟೆ?”
ಶರ್ಮಿಷ್ಠೆಯು ಹೇಳಿದಳು: “ಧರ್ಮಾತ್ಮನೂ ವೇದಪಾರಂಗತನೂ ಆದ ಓರ್ವ ಋಷಿಯು ಬಂದಾಗ ಧರ್ಮಸಂಹಿತವಾಗಿ ಕೇಳಿಕೊಂಡಾಗ ಅವನು ನನಗೆ ನನ್ನ ಆಸೆಯನ್ನು ನೆರವೇರಿಸಿಕೊಟ್ಟನು. ನಾನು ಅನ್ಯಾಯದಿಂದ ಕಾಮವನ್ನು ಆಚರಿಸಲಿಲ್ಲ. ಸತ್ಯವನ್ನು ಹೇಳುತ್ತಿದ್ದೇನೆ. ಆ ಋಷಿಯಿಂದಲೇ ನಾನು ಈ ಮಗುವನ್ನು ಪಡೆದಿದ್ದೇನೆ.”
ದೇವಯಾನಿಯು ಹೇಳಿದಳು: “ಸುಂದರಿ! ಇದು ಸತ್ಯವೆಂದಾದರೆ ನಾನೇನೂ ಹೇಳಲಾರೆ. ನಿನಗೆ ಆ ದ್ವಿಜನ ಕುರಿತು ತಿಳಿದಿರಬಹುದು. ಆ ದ್ವಿಜನ ಗೋತ್ರ ಮತ್ತು ಹೆಸರನ್ನು ತಿಳಿಯ ಬಯಸುತ್ತೇನೆ.”
ಶರ್ಮಿಷ್ಠೆಯು ಹೇಳಿದಳು: “ಶುಚಿಸ್ಮಿತೇ! ಓಜಸ್ಸು ಮತ್ತು ತೇಜಸ್ಸಿನಲ್ಲಿ ರವಿಯಂತೆ ಬೆಳಗುತ್ತಿದ್ದ ಅವನನ್ನು ನೋಡಿದ ನನಗೆ ಇದನ್ನೆಲ್ಲಾ ಕೇಳಿ ತಿಳಿಯುವ ಶಕ್ತಿಯೇ ಇರಲಿಲ್ಲ.”
ದೇವಯಾನಿಯು ಹೇಳಿದಳು: “ಶರ್ಮಿಷ್ಠೇ! ಸತ್ಯವಾಗಿ ನಿನ್ನ ಮಗುವನ್ನು ಜ್ಯೇಷ್ಠ ಮತ್ತು ಶ್ರೇಷ್ಠ ದ್ವಿಜನೋರ್ವನಿಂದ ಪಡೆದಿದ್ದೀಯೆ ಎಂದಾದರೆ ನಾನು ಸಿಟ್ಟಿಗೇಳುವ ಕಾರಣವೇ ಇಲ್ಲ.”
ಈ ರೀತಿ ಅನ್ಯೋನ್ಯರಲ್ಲಿ ಮಾತನಾಡಿ, ಹಾಸ್ಯಗೇಲಿಯಲ್ಲಿ ನಕ್ಕರು. ತಾನು ಕೇಳಿದ ಸುಳ್ಳನ್ನು ಸತ್ಯವೆಂದೇ ನಂಬಿ, ಭಾರ್ಗವಿಯು ತನ್ನ ಮನೆ ಸೇರಿದಳು. ನೃಪ ಯಯಾತಿಯು ದೇವಯಾನಿಯಲ್ಲಿ ಇಂದ್ರ-ವಿಷ್ಣುವಿನಂತಿರುವ ಯದು ಮತ್ತು ತುರ್ವಸುವೆಂಬ ಇನ್ನೂ ಎರಡು ಪುತ್ರರನ್ನು ಪಡೆದನು. ಅದೇ ರಾಜರ್ಷಿಯಲ್ಲಿ ವಾರ್ಷಪರ್ವಣೀ ಶರ್ಮಿಷ್ಠೆಯು ದ್ರುಹ್ಯು, ಅನು ಮತ್ತು ಪುರು ಎನ್ನುವ ಮೂರು ಕುಮಾರರಿಗೆ ಜನ್ಮವಿತ್ತಳು.
ಒಮ್ಮೆ ಶುಚಿಸ್ಮಿತೆ ದೇವಯಾನಿಯು ರಾಜ ಯಯಾತಿಯ ಸಹಿತ ಆ ಮಹಾವನಕ್ಕೆ ಬಂದಳು. ಅಲ್ಲಿ ಸ್ವಚ್ಛಂದವಾಗಿ ಆಡುತ್ತಿರುವ ಮೂರು ದೇವರೂಪಿ ಕುಮಾರರನ್ನು ಕಂಡು ಕೇಳಿದಳು: “ರಾಜನ್! ದೇವಪುತ್ರರಂತಿರುವ ಈ ಸುಂದರ ಮಕ್ಕಳು ಯಾರದ್ದಿರಬಹುದು? ವರ್ಚಸ್ಸು ಮತ್ತು ರೂಪದಲ್ಲಿ ನಿನ್ನ ಹಾಗೆಯೇ ಇದ್ದಾರೆಂದು ನನಗನ್ನಿಸುತ್ತ್ತಿದೆ.” ಈ ರೀತಿ ರಾಜನನ್ನು ಪ್ರಶ್ನಿಸಿದ ಅವಳು ಪುನಃ ಕುಮಾರರನ್ನೇ ಕೇಳಿದಳು: “ಮಕ್ಕಳೇ! ನಿಮ್ಮ ಬ್ರಾಹ್ಮಣ ತಂದೆಯ ಹೆಸರು ಮತ್ತು ಗೋತ್ರವೇನು? ತಿಳಿಯ ಬಯಸುವ ನನಗೆ ನಿಜವನ್ನು ಹೇಳಿ.” ಆ ಮಕ್ಕಳು ತಮ್ಮ ಕೈಬೆರಳಿನಿಂದ ಅದೇ ನೃಪಸತ್ತಮನನ್ನು ತೋರಿಸಿ, ತಾಯಿಯು ಶರ್ಮಿಷ್ಠೆಯೆಂದು ಹೇಳಿದರು. ಹೀಗೆ ಹೇಳಿ ಅವರೆಲ್ಲರೂ ರಾಜನೆಡೆಗೆ ಹೋದರು. ಆದರೆ ರಾಜನು ಹತ್ತಿರದಲ್ಲಿದ್ದ ದೇವಯಾನಿಯನ್ನು ನೋಡಿ ಅವರನ್ನು ಅಭಿನಂದಿಸಲಿಲ್ಲ. ಆಗ ಆ ಬಾಲಕರು ಅಳುತ್ತಾ ಶರ್ಮಿಷ್ಠೆಯಿದ್ದಲ್ಲಿಗೆ ಹೋದರು.
ಆ ಬಾಲಕರು ರಾಜನೊಂದಿಗೆ ಈ ರೀತಿ ಪ್ರೀತಿಯಲ್ಲಿ ವರ್ತಿಸಿದ್ದುದನ್ನು ನೋಡಿದ ಆ ದೇವಿಯು ಸತ್ಯವೇನೆಂದು ಊಹಿಸಿ, ಶರ್ಮಿಷ್ಠೆಯನ್ನು ಉದ್ದೇಶಿಸಿ ಹೇಳಿದಳು: “ನನ್ನ ಅಧೀನಳಾಗಿದ್ದುಕೊಂಡು ನನ್ನನ್ನೇ ಕಡೆಮಾಡುವ ಸಾಹಸವನ್ನು ಹೇಗೆ ಮಾಡಿದೆ? ಈ ರೀತಿ ನಿನ್ನ ಅಸುರಧರ್ಮಕ್ಕೇ ಹಿಂದಿರುಗಿದ್ದೀಯೆ. ಭಯವೇ ಆಗಲಿಲ್ಲವೇ ನಿನಗೆ?”
ಶರ್ಮಿಷ್ಠೆಯು ಹೇಳಿದಳು: “ಚಾರುಹಾಸಿನೀ! ಅವನು ಓರ್ವ ಋಶಷಿಯೆಂದು ಹೇಳಿದಾಗ ನಾನು ನಿನಗೆ ಸತ್ಯವನ್ನೇ ಹೇಳಿದೆ. ನ್ಯಾಯ ಮತ್ತು ಧರ್ಮಕ್ಕನುಗುಣವಾಗಿಯೇ ನಡೆದುಕೊಂಡಿದ್ದೇನೆ. ಆದುದರಿಂದ ನನಗೆ ನಿನ್ನ ಮೇಲಿನ ಭಯವಾದರೂ ಏಕೆ? ಎಂದು ನೀನು ರಾಜನನ್ನು ವರಿಸಿದೆಯೋ ಅಂದೇ ನಾನೂ ಕೂಡ ಅವನನ್ನು ವರಿಸಿದೆ. ಧರ್ಮದ ಪ್ರಕಾರ, ಸಖಿಯ ಪತಿಯು ನಿನ್ನ ಪತಿಯೂ ಆಗಬಲ್ಲ. ನನ್ನ ಜ್ಯೇಷ್ಠ ಮತ್ತು ಶ್ರೇಷ್ಠ ಬ್ರಾಹ್ಮಣಿ! ನೀನು ನನ್ನ ಪೂಜನೀಯಳು. ಆದರೆ ನನಗೆ ಈ ರಾಜರ್ಷಿಯು ನಿನಗಿಂತ ಹೆಚ್ಚು ಪೂಜನೀಯ ಎಂದು ನಿನಗನಿಸುವುದಿಲ್ಲವೇ?”
ಈ ಮಾತುಗಳನ್ನು ಕೇಳಿದ ದೇವಯಾನಿಯು ಹೇಳಿದಳು: “ರಾಜನ್! ನೀನು ನನ್ನ ಮೇಲೆ ತಪ್ಪನ್ನೆಸಗಿದ್ದೀಯೆ. ಇಂದಿನಿಂದ ನಾನು ಇಲ್ಲಿ ಇರಲಾರೆ.” ಹೀಗೆ ಹೇಳಿ ತಕ್ಷಣವೇ ಕಣ್ಣಿನಲ್ಲಿ ನೀರು ತುಂಬಿಸಿಕೊಂಡು ಕಾವ್ಯನ ಬಳಿ ಹೋಗಲು ಮೇಲೆದ್ದ ಅವಳನ್ನು ನೋಡಿ ರಾಜನು ದುಃಖಿತನಾದನು. ಸಂಭ್ರಾಂತ ನೃಪನು ಅವಳ ಹಿಂದೆಯೇ ಹೋಗಿ ಅವಳನ್ನು ತಡೆಹಿಡಿದು ಸಂತವಿಸಲು ಪ್ರಯತ್ನಿಸಿದನು. ಆದರೆ ಕ್ರೋಧದಿಂದ ರಕ್ತಲೋಚನಳಾದ ಅವಳು ಹಿಂದಿರುಗಲಿಲ್ಲ. ಆ ಚಾರುಲೋಚನಳು ರಾಜನಿಗೆ ಏನನ್ನೂ ಹೇಳದೇ ತಕ್ಷಣವೇ ಕಾವ್ಯ ಉಶನಸನ ಬಳಿ ತಲುಪಿದಳು. ತಂದೆಯನ್ನು ನೋಡಿದಾಕ್ಷಣವೇ ಅವಳು ಅವನಿಗೆ ನಮಸ್ಕರಿಸಿ ಎದುರು ನಿಂತುಕೊಂಡಳು. ಅನಂತರ ಯಯಾತಿಯೂ ಅಲ್ಲಿಗೆ ಬಂದು ಭಾರ್ಗವನಿಗೆ ನಮಸ್ಕರಿಸಿದನು.
ದೇವಯಾನಿಯು ಹೇಳಿದಳು: “ಧರ್ಮದ ಮೇಲೆ ಅಧರ್ಮದ ವಿಜಯವಾಯಿತು. ಎಲ್ಲವೂ ತಲೆಕೆಳಗಾದವು. ವೃಷಪರ್ವನ ಮಗಳು ಶರ್ಮಿಷ್ಠೆಯು ನನ್ನನ್ನು ಹಿಂದೆ ಹಾಕಿದಳು. ರಾಜ ಯಯಾತಿಯಿಂದ ದುರ್ಭಾಗ್ಯಳಾದ ಅವಳಲ್ಲಿ ಮೂರು ಪುತ್ರರು ಜನಿಸಿದ್ದಾರೆ. ಆದರೆ ನನ್ನಲ್ಲಿ ಎರಡೇ ಪುತ್ರರು ಜನಿಸಿದ್ದಾರೆ. ಕಾವ್ಯ! ಧರ್ಮಜ್ಞನೆಂದು ವಿಖ್ಯಾತ ಈ ರಾಜನು ಎಲ್ಲ ಮರ್ಯಾದೆಗಳನ್ನೂ ಅತಿಕ್ರಮಿಸಿದ್ದಾನೆ ಎಂದು ನಾನು ಹೇಳುತ್ತಿದ್ದೇನೆ.”
ಶುಕ್ರನು ಹೇಳಿದನು: “ಮಹಾರಾಜ! ಧರ್ಮಜ್ಞನಾಗಿದ್ದರೂ ಕಾಮಕ್ಕಾಗಿ ಅಧರ್ಮವನ್ನೆಸಗಿದುದಕ್ಕಾಗಿ ಜಯಿಸಲಸಾದ್ಯ ವೃದ್ಧಾಪ್ಯವು ಈ ಕ್ಷಣದಲ್ಲಿಯೇ ನಿನ್ನನ್ನು ಕಾಡುತ್ತದೆ.”
ಯಯಾತಿಯು ಹೇಳಿದನು: “ಭಗವನ್! ದಾನವೇಂದ್ರನ ಈ ಅಚೇತಸ ಮಗಳು ತನ್ನ ಋತುವಿಗೋಸ್ಕರ ನನ್ನನ್ನು ಯಾಚಿಸಿದಾಗ ಅದು ಧರ್ಮವೆಂದೇ ತಿಳಿದು ನಾನು ಈ ರೀತಿ ಮಾಡಿದೆ. ಋತುಕಾಲದಲ್ಲಿದ್ದವಳು ವರಿಸಿ ಯಾಚಿಸಿದಾಗ ತನ್ನನ್ನು ತಾನು ಅವಳಿಗೆ ಸಮರ್ಪಿಸದಿದ್ದರೆ ಅಂಥವನನ್ನು ಭ್ರೂಣಹತ್ಯೆ ಮಾಡಿದವನು ಎಂದು ಬ್ರಹ್ಮವಾದಿಗಳು ಹೇಳುತ್ತಾರೆ. ಅಭಿಕಾಮಿ ಸ್ತ್ರೀಯು ರಹಸ್ಯದಲ್ಲಿ ಅವನನ್ನು ಕರೆದಾಗ ಧರ್ಮದ ಪ್ರಕಾರ ಅವಳೊಡನೆ ಮಲಗದೇ ಇದ್ದವನನ್ನು ಭ್ರೂಣಹತ್ಯೆ ಮಾಡಿದವನು ಎಂದು ತಿಳಿದವರು ಕರೆಯುತ್ತಾರೆ. ಈ ಎಲ್ಲ ಕಾರಣಗಳನ್ನೂ ಸಮೀಕ್ಷಿಸಿ, ಅಧರ್ಮದ ಭಯಸಂವಿಗ್ನನಾಗಿ ಶರ್ಮಿಷ್ಠೆಯೊಡನೆ ಕೂಡಿದೆನು.”
ಶುಕ್ರನು ಹೇಳಿದನು: “ಪಾರ್ಥಿವ! ನೀನು ನನ್ನ ಸಲಹೆಯನ್ನು ಕೇಳಬಹುದಾಗಿತ್ತು. ಧರ್ಮದ ಹೆಸರಿನಲ್ಲಿ ಮಿಥ್ಯಾಚಾರವನ್ನೆಸಗಿದ ನೀನು ಕಳ್ಳತನವನ್ನು ಮಾಡಿದ್ದೀಯೆ.”
ಈ ರೀತಿ ನಾಹುಷ ಯಯಾತಿಯು ಕೃದ್ಧ ಉಶನನಿಂದ ಶಪಿಸಲ್ಪಟ್ಟು ಕ್ಷಣಮಾತ್ರದಲ್ಲಿ ತನ್ನ ಹಿಂದಿನ ಯೌವನವನ್ನು ಕಳೆದುಕೊಂಡು ವೃದ್ಧಾಪ್ಯವನ್ನು ಹೊಂದಿದನು.
ಯಯಾತಿಯು ಹೇಳಿದನು: “ಭೃಗುದ್ವಹ! ಇನ್ನೂ ಕೂಡ ನಾನು ದೇವಯಾನಿಯೊಂದಿಗೆ ಯೌವನ ಸುಖದಲ್ಲಿ ಅತೃಪ್ತನಾಗಿದ್ದೇನೆ. ಈ ವೃದ್ಧಾಪ್ಯವು ನನ್ನನ್ನು ಆವರಿಸದಹಾಗೆ ಕರುಣಿಸು.”
ಶುಕ್ರನು ಹೇಳಿದನು: “ಭೂಮಿಪ! ನಾನು ಈ ಮಾತುಗಳನ್ನು ಸುಮ್ಮನೇ ಹೇಳಿಲ್ಲ. ವೃದ್ಧಾಪ್ಯವು ನಿನ್ನನ್ನು ಹಿಡಿದಿದೆ. ಆದರೆ, ನೀನು ಇಚ್ಛಿಸಿದರೆ ನಿನ್ನ ಈ ವೃದ್ಧಾಪ್ಯವನ್ನು ಇನ್ನೊಬ್ಬನಿಗೆ ಕೊಡಬಹುದು.”
ಯಯಾತಿಯು ಹೇಳಿದನು: “ಬ್ರಾಹ್ಮಣ! ತನ್ನ ಯೌವನವನ್ನು ನನಗೆ ಕೊಡುವ ಮಗನು ನನ್ನ ರಾಜ್ಯ, ಪುಣ್ಯ ಮತ್ತು ಕೀರ್ತಿಗಳಿಗೆ ಪಾತ್ರನಾಗಲಿ ಎಂದು ಅನುಮತಿಯನ್ನು ನೀಡು.”
ಶುಕ್ರನು ಹೇಳಿದನು: “ನಹುಷಾತ್ಮಜ! ನೀನು ನನ್ನನ್ನು ಮನಸ್ಸಿನಲ್ಲಿ ನೆನೆಸಿಕೊಂಡು ನಿನಗಿಷ್ಟವಿದ್ದವನಿಗೆ ನಿನ್ನ ವೃದ್ಧಾಪ್ಯವನ್ನು ಕೊಡಬಲ್ಲೆ. ಈ ರೀತಿ ನೀನು ಯಾವ ಪಾಪವನ್ನೂ ಹೊಂದುವುದಿಲ್ಲ. ತನ್ನ ಯೌವನವನ್ನು ನಿನಗಿತ್ತ ಮಗನು ರಾಜನಾಗುತ್ತಾನೆ, ಆಯುಷ್ಮಂತನಾಗುತ್ತಾನೆ, ಕೀರ್ತಿವಂತನಾಗುತ್ತಾನೆ, ಮತ್ತು ಬಹಳ ಪುತ್ರರನ್ನು ಪಡೆಯುತ್ತಾನೆ.”
ವೃದ್ಧಾಪ್ಯವನ್ನು ಪಡೆದ ಯಯಾತಿಯು ತನ್ನ ನಗರವನ್ನು ಸೇರಿ ಜ್ಯೇಷ್ಠನೂ ವರಿಷ್ಠನೂ ಆದ ಯದುವನ್ನು ಕರೆದು ಹೇಳಿದನು: “ಮಗನೇ! ಉಶನಸ ಕಾವ್ಯನ ಶಾಪದಿಂದ ವೃದ್ಧಾಪ್ಯವು ನನ್ನನ್ನು ಆವರಿಸಿಬಿಟ್ಟಿದೆ - ಕೂದಲು ನೆರೆತಿದೆ ಮತ್ತು ಚರ್ಮ ನೆರೆಕಟ್ಟಿದೆ. ಆದರೆ ಯೌವನದ ಸುಖಗಳಿಂದ ನಾನಿನ್ನೂ ತೃಪ್ತನಾಗಿಲ್ಲ. ಯದು! ನೀನು ನನ್ನ ಪಾಪದ ಜೊತೆ ಈ ವೃದ್ಧಾಪ್ಯವನ್ನು ಸ್ವೀಕರಿಸು. ನಿನ್ನ ಈ ಯೌವನದಿಂದ ನಾನು ವಿಷಯಸುಖವನ್ನು ಅನುಭವಿಸುತ್ತೇನೆ. ಒಂದು ಸಹಸ್ರ ವರ್ಷಗಳು ತುಂಬಿದ ನಂತರ ನಿನ್ನ ಯೌವನವನ್ನು ನಿನಗೆ ಹಿಂದಿರುಗಿಸಿ, ನನ್ನ ಪಾಪ-ವೃದ್ಧಾಪ್ಯಗಳನ್ನು ಹಿಂದೆ ತೆಗೆದುಕೊಳ್ಳುತ್ತೇನೆ.”
ಯದುವು ಹೇಳಿದನು: “ಗಡ್ಡತಲೆಕೂದಲುಗಳು ಬಿಳಿಯಾಗಿ, ದೀನನಾಗಿ, ವೃದ್ಧಾಪ್ಯದಿಂದ ಶಿಥಿಲೀಕೃತನಾಗಿ, ದೇಹವು ನೆರೆಹಿಡಿದು, ದುರ್ದಶ, ದುರ್ಬಲ ಮತ್ತು ಕೃಷನಾಗಿ, ಯಾವ ಕೆಲಸವನ್ನು ಮಾಡಲೂ ಅಶಕ್ತನಾದವನನ್ನು ಯುವಕರು ಮತ್ತು ಸಹೋಪಜೀವಿಗಳು ಯಾರೂ ಗೌರವಿಸುವುದಿಲ್ಲ. ಅಂಥಹ ವೃದ್ಧಾಪ್ಯವನ್ನು ನಾನು ಬಯಸುವುದಿಲ್ಲ.”
ಯಯಾತಿಯು ಹೇಳಿದನು: “ನನ್ನ ಹೃದಯದಿಂದ ಜನಿಸಿದೆಯಾದರೂ ನೀನು ನಿನ್ನ ಯೌವನವನ್ನು ನನಗೆ ಕೊಡುತ್ತಿಲ್ಲ. ಆದುದರಿಂದ, ಮಗನೇ! ನಿನ್ನ ಸಂತತಿಯು ರಾಜ್ಯವಿಹೀನವಾಗುತ್ತದೆ. ತುರ್ವಸು! ಈ ವೃದ್ಧಾಪ್ಯದ ಜೊತೆ ನನ್ನ ಪಾಪವನ್ನೂ ಸ್ವೀಕರಿಸು. ನಿನ್ನ ಯೌವನದಿಂದ ನಾನು ವಿಷಯಸುಖವನ್ನು ಅನುಭವಿಸುತ್ತೇನೆ. ಒಂದು ಸಹಸ್ರ ವರ್ಷಗಳು ತುಂಬಿದ ನಂತರ ನಿನ್ನ ಯೌವನವನ್ನು ನಿನಗೆ ಹಿಂದಿರುಗಿಸಿ, ನನ್ನ ಪಾಪ-ವೃದ್ಧಾಪ್ಯಗಳನ್ನು ಹಿಂದೆ ತೆಗೆದುಕೊಳ್ಳುತ್ತೇನೆ.”
ತುರ್ವಸುವು ಹೇಳಿದನು: “ಕಾಮಭೋಗಗಳನ್ನು ನಾಶಪಡಿಸುವ, ಬಲ ಮತ್ತು ರೂಪವನ್ನು ಅಂತ್ಯಗೊಳಿಸುವ, ಬುದ್ಧಿಪ್ರಾಣಗಳನ್ನು ವಿನಾಶಮಾಡುವ ವೃದ್ಧಾಪ್ಯವು ನನಗೆ ಬೇಡ ತಂದೇ!”
ಯಯಾತಿಯು ಹೇಳಿದನು: “ನನ್ನ ಹೃದಯದಿಂದ ಜನಿಸಿದೆಯಾದರೂ ನೀನು ನಿನ್ನ ಯೌವನವನ್ನು ನನಗೆ ಕೊಡುತ್ತಿಲ್ಲ. ಆದುದರಿಂದ, ತುರ್ವಸು, ನಿನ್ನ ಸಂತಾನವು ಕ್ಷೀಣವಾಗುತ್ತದೆ. ನೀನು ಸಂಕೀರ್ಣ ಆಚಾರಧರ್ಮಗಳನ್ನುಳ್ಳ, ಶಿಷ್ಟಾಚಾರಗಳನ್ನು ಬಿಟ್ಟ, ಮಾಂಸವನ್ನೇ ತಿನ್ನುವ ಕೀಳು ಜನಾಂಗದ ರಾಜನಾಗುತ್ತೀಯೆ. ನೀನು ಆಳುವ ಮ್ಲೇಚ್ಛರು ಗುರುಪತ್ನಿಯರಲ್ಲಿ ಆಸಕ್ತರಾಗಿರುತ್ತಾರೆ, ಅತ್ಯಂತ ಕೀಳು ಯೋನಿಗಳೊಡನೆ ಸಂಭೋಗಿಸುತ್ತಾರೆ, ಪಶುಧರ್ಮಿಗಳಾಗಿದ್ದು ಪಾಪಕೃತ್ಯಗಳಲ್ಲಿ ತೊಡಗಿರುತ್ತಾರೆ.”
ತನ್ನದೇ ಮಗ ತುರ್ವಸುವಿಗೆ ಯಯಾತಿಯು ಈ ರೀತಿಯಾಗಿ ಶಪಿಸಿ, ಶರ್ಮಿಷ್ಠೆಯ ಮಗ ದ್ರುಹ್ಯುವನ್ನು ಕರೆದು ಹೇಳಿದನು: “ದ್ರುಹ್ಯು! ಬಣ್ಣ ಮತ್ತು ರೂಪಗಳನ್ನು ನಾಶಪಡಿಸುವ ನನ್ನ ಈ ವೃದ್ಧಾಪ್ಯವನ್ನು ಒಂದು ಸಾವಿರ ವರ್ಷಗಳವರೆಗೆ ತೆಗೆದುಕೊಂಡು, ನನಗೆ ನಿನ್ನ ಯೌವನವನ್ನು ಕೊಡು. ಒಂದು ಸಾವಿರ ವರ್ಷಗಳು ತುಂಬಿದ ನಂತರ ಯೌವನವನ್ನು ಹಿಂದಿರುಗಿಸುತ್ತೇನೆ, ಮತ್ತು ನನ್ನ ಈ ಪಾಪದ ಜೊತೆಗೆ ವೃದ್ಧಾಪ್ಯವನ್ನೂ ಹಿಂದೆ ತೆಗೆದುಕೊಳ್ಳುತ್ತೇನೆ.”
ದ್ರುಹ್ಯುವು ಹೇಳಿದನು: “ವೃದ್ಧನು ಗಜ, ರಥ, ಅಶ್ವ, ಆಹಾರ, ಮತ್ತು ಸ್ತ್ರೀಯರನ್ನು ಅನುಭವಿಸಲು ಶಕ್ಯನಾಗಿರುವುದಿಲ್ಲ ಮತ್ತು ಸರಿಯಾಗಿ ಮಾತನಾಡಲೂ ಆಗುವುದಿಲ್ಲ. ಅಂಥಹ ವೃದ್ಧಾಪ್ಯವು ನನಗೆ ಬೇಡ.”
ಯಯಾತಿಯು ಹೇಳಿದನು: “ನನ್ನ ಹೃದಯದಿಂದ ಜನಿಸಿದೆಯಾದರೂ ನೀನು ನಿನ್ನ ಯೌವನವನ್ನು ನನಗೆ ಕೊಡುತ್ತಿಲ್ಲ. ಆದುದರಿಂದ ನಿನ್ನ ಪ್ರಿಯ ಆಸೆಯು ಎಂದೂ ಪೂರೈಸಲ್ಪಡುವುದಿಲ್ಲ. ಎಲ್ಲಿ ದೋಣಿ ತೆಪ್ಪಗಳನ್ನು ಮಾತ್ರ ಬಳಸಿ ತಿರುಗಾಡಬಹುದೋ ಅಂತಹ ಸ್ಥಳದಲ್ಲಿ ವಾಸಿಸಿ, ಭೋಜನೆಂದೂ ರಾಜನೆಂದೂ ಕರೆಯಿಸಿ ಕೊಳ್ಳುವುದಿಲ್ಲ. ಅನು! ನೀನು ನನ್ನ ಪಾಪದ ಜೊತೆಗೆ ಈ ವೃದ್ಧಾಪ್ಯವನ್ನೂ ಸ್ವೀಕರಿಸು. ಒಂದು ಸಾವಿರವರ್ಷಗಳ ಪರ್ಯಂತ ನಾನು ನಿನ್ನ ಯೌವನವನ್ನು ಜೀವಿಸುತ್ತೇನೆ.”
ಅನುವು ಹೇಳಿದನು: “ವೃದ್ಧನು ಒಂದು ಮಗುವಿನಂತೆ ದಿನದ ಯಾವ ಸಮಯದಲ್ಲಿಯೂ ಜೊಲ್ಲುಸುರಿಸುತ್ತಾ, ಸ್ವಚ್ಛವಾಗಿರದೇ, ತಿನ್ನುತ್ತಾನೆ. ಮತ್ತು ಅವನು ಎಂದೂ ಸಕಾಲದಲ್ಲಿ ಅಗ್ನಿಕಾರ್ಯವನ್ನು ಮಾಡಲಾರ. ಅಂತಹ ವೃದ್ಧಾಪ್ಯವು ನನಗೆ ಬೇಡ.”
ಯಯಾತಿಯು ಹೇಳಿದನು: “ನನ್ನ ಹೃದಯದಿಂದ ಜನಿಸಿದೆಯಾದರೂ ನೀನು ನಿನ್ನ ಯೌವನವನ್ನು ನನಗೆ ಕೊಡುತ್ತಿಲ್ಲ. ಆದುದರಿಂದ ನೀನು ಹೇಳಿದ ವೃದ್ಧಾಪ್ಯದ ದೋಷಗಳನ್ನು ನೀನೇ ಪಡೆಯುತ್ತೀಯೆ. ನಿನ್ನ ಜೊತೆ ನಿನ್ನ ಸಂತಾನವೂ ಯೌವನ ಪ್ರಾಪ್ತಿಯಾಗುತ್ತಿದ್ದಂತೇ ವಿನಾಶವನ್ನು ಹೊಂದುತ್ತದೆ. ನೀನೇ ಅಗ್ನಿಕಾರ್ಯವನ್ನು ಸರಿಯಾದ ರೀತಿಯಲ್ಲಿ ಮಾಡದವನಾಗುತ್ತೀಯೆ. ಪುರು! ನೀನು ನನ್ನ ಪ್ರೀತಿಯ ಮಗ. ನೀನು ಶ್ರೇಷ್ಠ. ಮಗನೇ! ಉಶನಸ ಕಾವ್ಯನ ಶಾಪದಿಂದ ವೃದ್ಧಾಪ್ಯವು ನನ್ನನ್ನು ಆವರಿಸಿಬಿಟ್ಟಿದೆ - ಕೂದಲು ನೆರೆತಿದೆ ಮತ್ತು ಚರ್ಮ ನೆರೆಕಟ್ಟಿದೆ. ಆದರೆ ಯೌವನದ ಸುಖಗಳಿಂದ ನಾನಿನ್ನೂ ತೃಪ್ತನಾಗಿಲ್ಲ. ಪುರು! ನನ್ನ ಈ ಪಾಪದ ಜೊತೆ ವೃದ್ಧಾಪ್ಯವನ್ನೂ ಸ್ವೀಕರಿಸು. ನಿನ್ನ ಯೌವನವನ್ನು ಪಡೆದು ಕೆಲವು ಕಾಲ ನಾನು ವಿಷಯಸುಖವನ್ನು ಅನುಭವಿಸುತ್ತೇನೆ. ಒಂದು ಸಹಸ್ರ ವರ್ಷಗಳು ತುಂಬಿದ ನಂತರ ನಿನ್ನ ಯೌವನವನ್ನು ನಿನಗೆ ಹಿಂದಿರುಗಿಸಿ, ನನ್ನ ಪಾಪ ಮತ್ತು ವೃದ್ಧಾಪ್ಯವನ್ನು ಹಿಂದೆ ತೆಗೆದುಕೊಳ್ಳುತ್ತೇನೆ.”
ತಂದೆಯ ಈ ಮಾತುಗಳಿಗೆ ತಕ್ಷಣವೇ ಪುರುವು ಉತ್ತರಿಸಿದನು: “ಮಹಾರಾಜ! ನೀನು ಹೇಳಿದಂತೆಯೇ ಮಾಡುತ್ತೇನೆ. ವೃದ್ಧಾಪ್ಯದ ಜೊತೆ ನಿನ್ನ ಪಾಪವನ್ನೂ ಸ್ವೀಕರಿಸುತ್ತೇನೆ. ನನ್ನ ಈ ಯೌವನವನ್ನು ಪಡೆದು ಯಥೇಚ್ಛವಾಗಿ ನಿನ್ನ ಆಸೆಗಳನ್ನು ಪೂರೈಸಿಕೋ. ನಿನ್ನ ವಯೋರೂಪವನ್ನು ತಾಳಿ ವೃದ್ಧಾಪ್ಯವನ್ನು ಹೊದ್ದುಕೊಳ್ಳುತ್ತೇನೆ. ನನ್ನ ಯೌವನವನ್ನು ನಿನಗಿತ್ತು ನೀನು ಹೇಳಿದಹಾಗೆ ಜೀವಿಸುತ್ತೇನೆ.”
ಯಯಾತಿಯು ಹೇಳಿದನು: “ಪುರು! ನನ್ನ ಮಗನೇ! ನಿನ್ನಿಂದ ನಾನು ಬಹಳ ಪ್ರೀತನಾಗಿದ್ದೇನೆ. ಪ್ರೀತಿಯಿಂದ ನಿನಗೆ ಇದನ್ನು ಕೊಡುತ್ತಿದ್ದೇನೆ. ನಿನ್ನ ಸಂತತಿಯು ಸರ್ವಕಾಮಗಳಲ್ಲಿ ಸಮೃದ್ಧರಾಗಿ ರಾಜ್ಯವನ್ನಾಳುತ್ತಾರೆ.”
ನೃಪಶ್ರೇಷ್ಠ ನಹುಷಾತ್ಮಜ ಯಯಾತಿಯು ಪೌರವನ ಯೌವನದ ಮೂಲಕ ತನಗೆ ಇಷ್ಟವಾದಂತೆ, ಉತ್ಸಾಹವಿದ್ದಷ್ಟು, ಸಮಯವಿದ್ದಷ್ಟೂ, ಸುಖವೆನಿಸುವಷ್ಟು, ಧರ್ಮಕ್ಕೆ ವಿರುದ್ಧವಾಗದ ರೀತಿಯಲ್ಲಿ, ಅವನಿಗೆ ತಕ್ಕುದಾದ ರೀತಿಯಲ್ಲಿ, ಕಾಮನಿರತನಾಗಿ ವಿಷಯ ಸುಖವನ್ನು ಅನುಭವಿಸಿದನು. ದೇವತೆಗಳನ್ನು ಯಜ್ಞಗಳಿಂದಲೂ, ಪಿತೃಗಳನ್ನು ಶ್ರಾದ್ಧಗಳಿಂದಲೂ, ದೀನರನ್ನು ಅವರಿಗಿಷ್ಟವಾದುದನ್ನು ನೀಡುವುದರಿಂದಲೂ, ದ್ವಿಜಸತ್ತಮರನ್ನು ಉಡುಗೊರೆಗಳಿಂದಲೂ, ಅತಿಥಿಗಳನ್ನು ಅನ್ನ-ಪಾನೀಯಗಳಿಂದಲೂ, ಪ್ರಜೆಗಳನ್ನು ಪರಿಪಾಲನೆಯಿಂದಲೂ, ಶೂದ್ರರನ್ನು ಅನುಕಂಪದಿಂದಲೂ, ದಸ್ಯುಗಳನ್ನು ನಿಗ್ರಹದಿಂದಲೂ ತೃಪ್ತಿಪಡಿಸಿದನು. ಸಾಕ್ಷಾತ್ ಇನ್ನೊಬ್ಬ ಇಂದ್ರನೋ ಎಂಬಂತೆ ಯಯಾತಿಯು ಸರ್ವ ಪ್ರಜೆಗಳನ್ನೂ ಧರ್ಮದಿಂದ ಅನುರಂಜಿಸುತ್ತಾ ಪಾಲಿಸಿದನು. ಆ ಸಿಂಹವಿಕ್ರಾಂತ ಯುವರಾಜನು ವಿಷಯಗೋಚರನಾಗಿದ್ದು ಧರ್ಮಕ್ಕೆ ವಿರೋಧಬಾರದಂತೆ ಉತ್ತಮ ಸುಖವನ್ನು ಹೊಂದಿದನು. ಎಲ್ಲ ಕಾಮಸುಖಗಳನ್ನೂ ಹೊಂದಿ ತೃಪ್ತನಾದ ಪಾರ್ಥಿವ ಮನುಜಾಧಿಪನು ಒಂದು ಸಾವಿರ ವರ್ಷಗಳ ಅವಧಿಯು ಮುಗಿದಿದ್ದುದನ್ನು ನೆನಪಿಸಿಕೊಂಡು ಖಿನ್ನನಾದನು. ದಿನಗಳು ಮತ್ತು ಘಂಟೆಗಳನ್ನು ಲೆಕ್ಕಹಾಕುತ್ತಾ ಬಂದಿದ್ಡ ಆ ಕಾಲಜ್ಞ ವೀರನು ತನ್ನ ಸಮಯವು ಮುಗಿಯಿತೆಂದು ತಿಳಿದು ಪುತ್ರ ಪುರುವನ್ನು ಕರೆದು ಹೇಳಿದನು: “ಅರಿಂದಮ! ನಿನ್ನ ಈ ಯೌವನದಿಂದ ನಾನು ಯಥೇಚ್ಛವಾಗಿ, ಉತ್ಸಾಹವಿದ್ದಷ್ಟು, ಸಮಯ ಸಿಕ್ಕಿದಷ್ಟು, ವಿಷಯ ಸುಖವನ್ನು ಸೇವಿಸಿದೆ. ಪುರು! ನಿನಗೆ ಮಂಗಳವಾಗಲಿ. ನಾನು ನಿನ್ನಿಂದ ಬಹಳ ಸಂತೋಷಗೊಂಡಿದ್ದೇನೆ. ನಿನ್ನ ಯೌವನವನ್ನು ಹಿಂತೆಗೆದುಕೋ. ನನಗೆ ಪ್ರಿಯವಾದುದನ್ನೆಸಗಿದ ಮಗನಾದ ನೀನು ಈ ರಾಜ್ಯವನ್ನೂ ತೆಗೆದುಕೋ.”
ನಾಹುಷ ಯಯಾತಿ ರಾಜನು ವೃದ್ಧಾಪ್ಯವನ್ನು ಹಿಂತೆಗೆದುಕೊಂಡನು ಮತ್ತು ಪುರುವು ತನ್ನ ಯೌವನವನ್ನು ಪುನಃ ಹಿಂತೆಗೆದುಕೊಂಡನು. ನೃಪತಿಯು ತನ್ನ ಕಿರಿಯ ಮಗ ಪುರುವಿಗೆ ರಾಜ್ಯಾಭಿಷೇಕವನ್ನು ಮಾಡಲು ಬಯಸಿದನು. ಆದರೆ, ಬ್ರಾಹ್ಮಣರ ನಾಯಕತ್ವದಲ್ಲಿ ನಾಲ್ಕೂ ವರ್ಣದವರೂ ಬಂದು ಈ ಮಾತುಗಳನ್ನು ಹೇಳಿದರು: “ಪ್ರಭೋ! ಶುಕ್ರನ ಮೊಮ್ಮಗನೂ ದೇವಯಾನಿಯ ಮಗನೂ ನಿನ್ನ ಜ್ಯೇಷ್ಠ ಪುತ್ರನೂ ಆದ ಯದುವನ್ನು ಬಿಟ್ಟು ಪುರುವಿಗೆ ಏಕೆ ರಾಜ್ಯವನ್ನು ಕೊಡುತ್ತಿರುವೆ? ಯದು ನಿನ್ನ ಜ್ಯೇಷ್ಠ ಪುತ್ರ. ನಂತರ ಹುಟ್ಟಿದವನು ತುರ್ವಸು. ಶರ್ಮಿಷ್ಠೆಯ ಮಕ್ಕಳಲ್ಲಿ ದ್ರುಹು, ನಂತರ ಅನು ಮತ್ತು ಕೊನೆಯವನು ಪುರು. ಹಿರಿಯವನನ್ನು ಅತಿಕ್ರಮಿಸಿ ಕಿರಿಯವನು ಹೇಗೆ ರಾಜ್ಯಕ್ಕೆ ಹಕ್ಕುದಾರನಾಗುತ್ತಾನೆ? ಇದನ್ನು ನೀನು ಸಂಬೋಧಿಸಬೇಕು. ಧರ್ಮವನ್ನು ಅನುಸರಿಸಬೇಕು.”
ಯಯಾತಿಯು ಹೇಳಿದನು: “ಬ್ರಾಹ್ಮಣರನ್ನು ಮುಂದಿಟ್ಟುಕೊಂಡು ಬಂದ ಸರ್ವ ವರ್ಣದವರೇ! ನಾನು ಏಕೆ ಜ್ಯೇಷ್ಠ ಪುತ್ರನಿಗೆ ರಾಜ್ಯವನ್ನು ಕೊಡುವುದಿಲ್ಲ ಎನ್ನುವುದಕ್ಕೆ ನನ್ನ ಮಾತುಗಳನ್ನು ಕೇಳಿ. ನನ್ನ ಜ್ಯೇಷ್ಠ ಪುತ್ರ ಯದುವು ನನ್ನ ನಿಯೋಗವನ್ನು ಪರಿಪಾಲಿಸಲಿಲ್ಲ. ತಂದೆಯ ಪ್ರತಿಕೂಲನಾದವನನ್ನು ಪುತ್ರನೆಂದು ಸಂತರು ಪರಿಗಣಿಸುವುದಿಲ್ಲ. ತಂದೆ ತಾಯಿಗಳ ಮಾತಿನಂತೆ ಯಾರು ನಡೆಯುತ್ತಾನೋ ಅವನೇ ಮಗನೆನಿಸಿಕೊಳ್ಳುತ್ತಾನೆ. ತಂದೆ ತಾಯಿಗಳ ಒಳಿತು ಯಾರ ಹೃದಯದಲ್ಲಿರುತ್ತದೆಯೋ ಅವನೇ ಪುತ್ರನೆನಿಸಿಕೊಳ್ಳುತ್ತಾನೆ. ಯದುವು ನನ್ನನ್ನು ಕಡೆಗಣಿಸಿದನು. ಹಾಗೆಯೇ ತುರ್ವಸು, ದ್ರುಹ್ಯು, ಮತ್ತು ಅನು ಎಲ್ಲರೂ ನನ್ನ ಕುರಿತು ಅತೀವ ತಿರಸ್ಕಾರವನ್ನು ತೋರಿಸಿದರು. ನನ್ನ ಮಾತನ್ನು ಪರಿಪಾಲಿಸಿದ ಪುರುವು ಕಿರಿಯವನಾಗಿದ್ದರೂ ನನ್ನ ವಿಶೇಷಗೌರವವನ್ನು ಹೊಂದಿದ್ದಾನೆ. ಆ ನನ್ನ ಮಗ ಪುರುವು ನನ್ನ ವೃದ್ಧಾಪ್ಯವನ್ನು ಧರಿಸಿ ನಿಜವಾದ ಪುತ್ರನಂತೆ ನನ್ನ ಆಸೆಯನ್ನು ನೆರವೇರಿಸಿಕೊಟ್ಟನು. ಇದೂ ಅಲ್ಲದೇ ಸ್ವಯಂ ಕಾವ್ಯ ಉಸನಸ ಶುಕ್ರನೇ ಇತ್ತ ವರದಂತೆ ನನಗೆ ವಿಧೇಯನಾದ ಮಗನು ರಾಜ ಪೃಥ್ವೀಪತಿಯಾಗುತ್ತಾನೆ. ಆದುದರಿಂದ ಪುರುವಿಗೆ ರಾಜ್ಯಾಭಿಷೇಕವನ್ನು ಮಾಡುತ್ತಿದ್ದೇನೆ.”
ಪ್ರಜೆಗಳು ಹೇಳಿದರು: “ಪ್ರಭೋ! ಯಾವ ಮಗನು ಗುಣಸಂಪನ್ನನಾಗಿದ್ದು ತಂದೆ ತಾಯಿಗಳ ಹಿತವನ್ನು ಸದಾ ಯೋಚಿಸುತ್ತಿರುತ್ತಾನೋ ಅವನು ಕಿರಿಯವನಾಗಿದ್ದರೂ ಒಳ್ಳೆಯದೆಲ್ಲವುದಕ್ಕೂ ಅರ್ಹನಾಗುತ್ತಾನೆ. ನಿನಗೆ ಪ್ರಿಯವಾದುದನ್ನು ಮಾಡಿದ ಸುತ ಪುರುವು ಈ ರಾಜ್ಯಕ್ಕೆ ಅರ್ಹನಾಗಿದ್ದಾನೆ. ಶುಕ್ರನಿಂದಲೂ ಈ ರೀತಿಯ ವರದಾನವಾಗಿದೆಯೆಂದರೆ ಇನ್ನು ಮುಂದೆ ಹೇಳುವುದಕ್ಕೇ ಸಾಧ್ಯವಿಲ್ಲ.”
ಪೌರಜನ ಪದಜನರು ಈ ರೀತಿ ಹೇಳಿದ ನಂತರ ನಾಹುಷನು ತನ್ನ ಸುತ ಪುರುವಿಗೆ ಸ್ವಯಂ ಅಭೀಷೇಕವನ್ನು ಮಾಡಿದನು. ರಾಜ್ಯವನ್ನು ಪುರುವಿಗಿತ್ತು, ವನವಾಸ ದೀಕ್ಷೆಯನ್ನು ಕೈಗೊಂಡು, ಬ್ರಾಹ್ಮಣ- ತಾಪಸರನ್ನೊಡಗೂಡಿ ಪುರದಿಂದ ಹೊರ ಹೊರಟನು. ಯದುವಿನಿಂದ ಯಾದವರು ಹುಟ್ಟಿದರು. ತುರ್ವಾಸುವಿನ ಮಕ್ಕಳು ಯವನರು. ದ್ರುಹ್ಯುವಿನ ಮಕ್ಕಳು ಭೋಜರು. ಮತ್ತು ಅನುವಿನ ಮಕ್ಕಳು ಮ್ಲೇಚ್ಛರು. ಪುರುವಿನ ವಂಶದಲ್ಲಿ ಹುಟ್ಟಿದ ಪೌರವರು ಸಹಸ್ರಾರು ವರ್ಷಗಳು ಈ ರಾಜ್ಯವನ್ನು ಆಳಿದರು.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ